ಸತ್ಯಕ್ಕಾಗಿ ಏಕೆ ಅನ್ವೇಷಿಸಬೇಕು?
ಅನೇಕ ಧಾರ್ಮಿಕ ಸಂಸ್ಥೆಗಳು ಸತ್ಯವನ್ನು ಹೊಂದಿರುವುದಾಗಿ ವಾದಿಸುತ್ತವೆ, ಮತ್ತು ಅವು ಅದನ್ನು ಇತರರಿಗೆ ಆತುರತೆಯಿಂದ ನೀಡುತ್ತವೆ. ಆದಾಗಲೂ, ತಮ್ಮೊಳಗೆ ಅವರು “ಸತ್ಯಗಳ” ಒಂದು ದಿಗ್ಭಮ್ರೆಗೊಳಿಸುವ ವಿಪುಲತೆಯನ್ನು ನೀಡುತ್ತಾರೆ. ಎಲ್ಲಾ ಸತ್ಯಗಳು ಸಂಬಂಧಕ, ಸಂಪೂರ್ಣ ಸತ್ಯಗಳೇ ಇಲ್ಲವೆಂಬದಕ್ಕೆ ಇದು ಕೇವಲ ಇನ್ನೊಂದು ಪುರಾವೆಯಾಗಿದೆಯೋ? ಇಲ್ಲ.
ದಿ ಆರ್ಟ್ ಆಫ್ ತಿಂಕಿಂಗ್ ಎಂಬ ತನ್ನ ಪುಸ್ತಕದಲ್ಲಿ, ಪ್ರೊಫೆಸರ್ ವಿ. ಆರ್. ರೂಜೆರೋ, ಬುದ್ಧಿವಂತ ಜನರು ಸಹ ಕೆಲವೊಮ್ಮೆ ಸತ್ಯವು ಸಂಬಂಧಕವೆಂದು ಹೇಳುತ್ತಿರುವದಕ್ಕೆ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಾರೆ. ಅವರು ತರ್ಕಿಸುವುದು: “ಪ್ರತಿಯೊಬ್ಬನು ತನ್ನ ಸ್ವಂತ ಸತ್ಯವನ್ನು ನಿರ್ಧರಿಸುವಲ್ಲಿ, ಆಗ ಯಾವ ವ್ಯಕ್ತಿಯ ಆಲೋಚನೆಯೂ ಇನ್ನೊಬ್ಬನದ್ದಕ್ಕಿಂತ ಉತ್ತಮವಾಗಿರಲಾರದು. ಎಲ್ಲವೂ ಸಮಾನವಾಗಿರಬೇಕು. ಮತ್ತು ಎಲ್ಲಾ ವಿಚಾರಗಳು ಸಮಾನವಾಗಿರುವಲ್ಲಿ, ಯಾವುದೇ ವಿಷಯವನ್ನು ಸಂಶೋಧಿಸುವದಕ್ಕಾಗಿ ಕಾರಣವೇನಿದೆ? ಪ್ರಾಚೀನ ಶೋಧನಾ ಶಾಸ್ತ್ರದ ಪ್ರಶ್ನೆಗಳ ಉತ್ತರಗಳಿಗಾಗಿ ಭೂಮಿಯನ್ನು ಅಗೆಯುವುದೇಕೆ? ಮಧ್ಯ ಪೂರ್ವದಲ್ಲಿನ ಬಿಗುಪಿನ ಕಾರಣಗಳನ್ನು ಶೋಧಿಸುವುದೇಕೆ? ಕ್ಯಾನ್ಸರ್ ವಾಸಿಗಾಗಿ ಔಷಧವನ್ನು ಅನ್ವೇಷಿಸುವುದೇಕೆ? ಆಕಾಶಗಂಗೆಯನ್ನು ಪರಿಶೋಧಿಸುವುದೇಕೆ? ಸತ್ಯವು, ವ್ಯಕ್ತಿಪರ ಯಥಾದೃಷ್ಟಿಗಳಿಂದ ಪ್ರತ್ಯೇಕ ಮತ್ತು ಪ್ರಭಾವಿಸಲ್ಪಟ್ಟಿರದ್ದಾಗಿರುವಲ್ಲಿ, ಕೆಲವು ಉತ್ತರಗಳು ಬೇರೆಯವುಗಳಿಗಿಂತ ಉತ್ತಮವಾಗಿರುವುದಾದರೆ ಮಾತ್ರ, ಈ ಚಟುವಟಿಕೆಗಳು ಸಮಂಜಸವಾಗಿವೆ.”
ವಾಸ್ತವದಲ್ಲಿ, ಯಾವುದೇ ಸತ್ಯವಿಲ್ಲವೆಂಬದನ್ನು ಯಾರೂ ನಿಜವಾಗಿ ನಂಬುವುದಿಲ್ಲ. ಔಷಧ, ಗಣಿತ, ಅಥವಾ ಭೌತಶಾಸ್ತ್ರದ ನಿಯಮಗಳಂತಹ ಭೌತಿಕ ನಿಜತ್ವಗಳಿಗೆ ಬರುವಾಗ ಅತಿ ನಿಷ್ಠೆಯ ಸಂಬಂಧ ವಾದಿಯು ಸಹ ಕೆಲವು ವಿಷಯಗಳು ಸತ್ಯವೆಂಬದನ್ನು ನಂಬುವನು. ವಾಯುಚಲನ ವಿಜ್ಞಾನದ ನಿಯಮಗಳು ಸಂಪೂರ್ಣ ಸತ್ಯಗಳಾಗಿವೆಯೆಂಬದನ್ನು ನಾವು ನೆನಸಿರದಿದ್ದಲ್ಲಿ ನಮ್ಮಲ್ಲಿ ಯಾವನು ಒಂದು ವಿಮಾನದಲ್ಲಿ ಪ್ರಯಾಣಿಸಲು ಧೈರ್ಯಮಾಡಾನು? ರುಜುಪಡಿಸಬಹುದಾದ ಸತ್ಯಗಳು ಅಸ್ತಿತ್ವದಲ್ಲಿವೆ; ಅವು ನಮ್ಮನ್ನು ಸುತ್ತುವರಿಯುತ್ತವೆ, ಮತ್ತು ನಾವು ನಮ್ಮ ಜೀವಗಳನ್ನು ಅವುಗಳ ಮೇಲೆ ಪಣವೊಡ್ಡುತ್ತೇವೆ.
ಸಂಬಂಧ ವಾದದ ಬೆಲೆ
ಆದಾಗಲೂ ಸಂಬಂಧ ವಾದದ ದೋಷಗಳು ಹೆಚ್ಚು ವ್ಯಕ್ತವಾಗುವಂತಹದ್ದು ನೈತಿಕ ಕ್ಷೇತ್ರದಲ್ಲಿ, ಯಾಕಂದರೆ ಅಂತಹ ಆಲೋಚನೆಯು ಹೆಚ್ಚಿನ ಹಾನಿಯನ್ನು ಮಾಡಿರುವುದು ಇಲ್ಲಿಯೇ. ದ ಎನ್ಸೈಕ್ಲೊಪೀಡಿಯ ಅಮೆರಿಕಾನಾ ಈ ವಿಷಯವನ್ನು ಎತ್ತಿ ತೋರಿಸುತ್ತದೆ: “ಜ್ಞಾನ ಅಥವಾ ತಿಳಿದಿರುವ ಸತ್ಯವು ಮಾನವೀಯವಾಗಿ ಪ್ರಾಪ್ಯವೊ ಎಂಬುದು ಗಂಭೀರವಾಗಿ ಸಂದೇಹಿಸಲ್ಪಟ್ಟಿರುತ್ತದೆ . . . ಆದಾಗಲೂ, ಸತ್ಯ ಮತ್ತು ಜ್ಞಾನದ ಅವಳಿ ಆದರ್ಶಗಳು ಕಾಲ್ಪನಿಕ ಅಥವಾ ಹಾನಿಕರವೆಂದು ತಿರಸ್ಕರಿಸಲ್ಪಟ್ಟಾಗಲೆಲ್ಲಾ, ಮಾನವ ಸಮಾಜವು ಕೆಡುತ್ತದೆ ಎಂಬುದು ನಿಶ್ಚಯ.”
ನೀವು ಪ್ರಾಯಶಃ ಅಂತಹ ಕೆಡುವಿಕೆಯನ್ನು ಗಮನಿಸಿದ್ದೀರಿ. ಉದಾಹರಣೆಗಾಗಿ, ಲೈಂಗಿಕ ಅನೈತಿಕತೆಯು ತಪ್ಪೆಂದು ಸ್ಪಷ್ಟವಾಗಿಗಿ ಹೇಳುವ ಬೈಬಲಿನ ನೈತಿಕ ಬೋಧನೆಗಳು, ಇನ್ನು ಮುಂದೆ ಸತ್ಯಗಳೆಂದು ಪರಿಗಣಿಸಲ್ಪಡುವುದು ಕೇವಲ ವಿರಳ. ಪರಿಸ್ಥಿತಿಗನುಗುಣವಾದ ನೀತಿಶಾಸ್ತ್ರಗಳು—“ನಿಮಗೆ ಏನು ಸರಿಯಾಗಿದೆಯೋ ಅದನ್ನು ನಿರ್ಣಯಿಸಿರಿ”—ಪ್ರಚಲಿತ ಅಭಿಪ್ರಾಯವಾಗಿದೆ. ಈ ಸಂಬಂಧವಾದಿ ಹೊರನೋಟದಿಂದ ಸಾಮಾಜಿಕ ಕೆಡುವಿಕೆಯು ಪರಿಣಮಿ ಸಿಲ್ಲ ಎಂದು ಯಾರಾದರೂ ವಾದಿಸಬಲ್ಲರೊ? ನಿಶ್ಚಯವಾಗಿಯೂ, ರತಿರವಾನಿತ ರೋಗಗಳ ಲೋಕವ್ಯಾಪಕ ವ್ಯಾಧಿಗಳು, ಒಡೆದ ಸಂಸಾರಗಳು, ಮತ್ತು ಹದಿವಯಸ್ಕ ಗರ್ಭಧಾರಣೆಗಳು ನೈತಿಕ ಕೆಡುವಿಕೆಯ ಸಾಕಷ್ಟು ಪುರಾವೆಯನ್ನು ನೀಡುತ್ತವೆ.
ಸತ್ಯವು ಏನಾಗಿದೆ?
ಆದುದರಿಂದ ನಾವು ಸಂಬಂಧ ವಾದದ ಕತ್ತಲೆಗವಿದ ನೀರುಗಳನ್ನು ಬಿಟ್ಟು, ಸತ್ಯದ ಶುದ್ಧವಾದ ನೀರುಗಳಾಗಿ ಬೈಬಲ್ ಯಾವುದನ್ನು ವರ್ಣಿಸುತ್ತದೆಂಬದನ್ನು ಸಂಕ್ಷಿಪ್ತವಾಗಿ ಪರೀಕ್ಷಿಸೋಣ. (ಯೋಹಾನ 4:14; ಪ್ರಕಟನೆ 22:17) ಬೈಬಲಿನಲ್ಲಿ “ಸತ್ಯವು,” ತತ್ವಜ್ಞಾನಿಗಳು ಯಾವುದರ ಮೇಲೆ ವಾಗ್ವಾದ ನಡಿಸುತ್ತಾರೋ ಆ ಅಮೂರ್ತ, ಗ್ರಹಿಸಲಾಗದಂತಹ ಚಿಂತನಾರೂಪದಂತೆ ಇರುವುದಿಲ್ಲ.
ಜೀವಿತದಲ್ಲಿ ತನ್ನ ಸಂಪೂರ್ಣ ಉದ್ದೇಶವು ಸತ್ಯದ ಕುರಿತಾಗಿ ಮಾತಾಡುವುದಾಗಿದೆಯೆಂದು ಯೇಸು ಹೇಳಿದಾಗ, ಶತಮಾನಗಳಿಂದಲೂ ನಂಬಿಗಸ್ತ ಯೆಹೂದ್ಯರು ಬೆಲೆಯುಳ್ಳದ್ದೆಂದು ಎಣಿಸಿದಂತಹ ಒಂದು ವಿಷಯದ ಕುರಿತಾಗಿ ಅವನು ಮಾತಾಡುತ್ತಿದ್ದನು. ತಮ್ಮ ಪವಿತ್ರ ಬರೆವಣಿಗೆಗಳಲ್ಲಿ, ಯೆಹೂದ್ಯರು “ಸತ್ಯ” ಒಂದು ತಾತ್ತಿಕ್ವ ವಿಷಯವಾಗಿಯಲ್ಲ ಬದಲಾಗಿ ವಾಸ್ತವಿಕವಾಗಿರುವ ಸಂಗತಿ ಎಂದು ಬಹು ಕಾಲದಿಂದ ಓದಿದ್ದರು. ದೃಢ, ಭದ್ರ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪ್ರಾಯಶಃ ಭರವಸಾರ್ಹ ಎಂದು ಸೂಚಿಸುವ “ಇಮೆತ್” ಎಂಬ ಹೀಬ್ರು ಪದವು ಬೈಬಲಿನಲ್ಲಿ “ಸತ್ಯ” ವೆಂದು ಭಾಷಾಂತರಿಸಲ್ಪಟ್ಟಿದೆ.
ಸತ್ಯವನ್ನು ಆ ರೀತಿಯಲ್ಲಿ ವೀಕ್ಷಿಸಲು ಯೆಹೂದ್ಯರಿಗೆ ಸಕಾರಣವಿತ್ತು. ಅವರು ತಮ್ಮ ದೇವರಾದ ಯೆಹೋವನನ್ನು “ಸತ್ಯದ ದೇವರು” ಎಂದು ಕರೆದರು. (ಕೀರ್ತನೆ 31:5) ಇದು ಯಾಕಂದರೆ ಯೆಹೋವನು ತಾನು ಮಾಡುವೆನೆಂದು ಹೇಳಿದ್ದೆಲ್ಲವನ್ನೂ ಅವನು ಮಾಡಿದನು. ಅವನು ವಾಗ್ದಾನಗಳನ್ನು ಮಾಡಿದಾಗ, ಅವುಗಳನ್ನು ಪಾಲಿಸಿದನು. ಅವನು ಪ್ರವಾದನೆಗಳನ್ನು ಪ್ರೇರಿಸಿದಾಗ, ಅವು ನೆರವೇರಿಸಲ್ಪಟ್ಟವು. ಅವನು ಅಂತಿಮ ತೀರ್ಪುಗಳನ್ನು ಉಚ್ಚರಿಸಿದಾಗ, ಅವು ನಿರ್ವಹಿಸಲ್ಪಡುತ್ತಿದ್ದವು. ಲಕ್ಷಾಂತರ ಇಸ್ರಾಯೇಲ್ಯರು ಈ ವಾಸ್ತವಿಕತೆಗಳ ಪ್ರತ್ಯಕ್ಷಸಾಕ್ಷಿಗಳಾಗಿದ್ದರು. ಬೈಬಲಿನ ಪ್ರೇರಿತ ಬರಹಗಾರರು ಅವುಗಳನ್ನು ಇತಿಹಾಸದ ನಿರ್ವಿವಾದದ ವಾಸ್ತವಾಂಶಗಳಾಗಿ ದಾಖಲಿಸಿದರು. ಪವಿತ್ರವೆಂದು ವೀಕ್ಷಿಸಲ್ಪಡುವ ಇತರ ಪುಸ್ತಕಗಳಂತೆ, ಬೈಬಲ್ ಮಿಥ್ಯೆ ಅಥವಾ ಪುರಾಣ ಕಥೆಗಳ ಒಂದು ಹಿನ್ನೆಲೆಯೊಂದಿಗೆ ಬರೆಯಲ್ಪಟ್ಟಿಲ್ಲ. ಅದು ರುಜುಪಡಿಸಬಹುದಾದ ವಾಸ್ತವಾಂಶಗಳು—ಐತಿಹಾಸಿಕ, ಪ್ರಾಚೀನ ಶೋಧನಾಶಾಸ್ತ್ರೀಯ, ವೈಜ್ಞಾನಿಕ ಮತ್ತು ಸಮಾಜಶಾಸ್ತ್ರೀಯ ನಿಜತ್ವಗಳಲ್ಲಿ ದೃಢವಾಗಿ ನೆಲೆಯೂರಿವೆ. ಕೀರ್ತನೆಗಾರನು ಯೆಹೋವನ ಕುರಿತಾಗಿ ಹೀಗೆ ಹೇಳಿದ್ದು ಆಶ್ಚರ್ಯಕರವಲ್ಲ: “ನಿನ್ನ ಧರ್ಮಶಾಸ್ತ್ರವು ಸತ್ಯವಾಗಿದೆ. . . . ನಿನ್ನ ಆಜ್ಞೆಗಳೆಲ್ಲಾ ಯಥಾರ್ಥವಾಗಿವೆ (ಸತ್ಯವಾಗಿವೆ, NW). . . . ನಿನ್ನ ವಾಕ್ಯದ ಸಾರಾಂಶವು ಸತ್ಯವೇ”!—ಕೀರ್ತನೆ 119:142, 151, 160.
ಯೆಹೋವನಿಗೆ ಪ್ರಾರ್ಥನೆಯಲ್ಲಿ ಹೀಗಂದಾಗ ಯೇಸು ಕ್ರಿಸ್ತನು ಆ ಕೀರ್ತನೆಯ ಮಾತುಗಳನ್ನು ಪ್ರತಿಧ್ವನಿಸಿದನು: “ನಿನ್ನ ವಾಕ್ಯವೇ ಸತ್ಯವು.” (ಯೋಹಾನ 17:17) ತನ್ನ ತಂದೆಯು ಮಾತಾಡಿದ ಎಲ್ಲವೂ ಸಂಪೂರ್ಣವಾಗಿ ದೃಢ ಮತ್ತು ಭರವಸಾರ್ಹವಾಗಿತ್ತೆಂದು ಯೇಸುವಿಗೆ ತಿಳಿದಿತ್ತು. ತದ್ರೀತಿಯಲ್ಲಿ, ಯೇಸು “ಸತ್ಯದಿಂದ ತುಂಬಿದ” ವನಾಗಿದ್ದನು. (ಯೋಹಾನ 1:14) ಪ್ರತ್ಯಕ್ಷಸಾಕ್ಷಿಗಳಾಗಿ ಅವನ ಹಿಂಬಾಲಕರು, ಅವನು ಹೇಳಿದ್ದೆಲ್ಲವು ಭರವಸಾರ್ಹ, ಸತ್ಯವಾಗಿತ್ತೆಂದು ಕಲಿತರು ಮತ್ತು ಮುಂದಿನ ಎಲ್ಲಾ ಸಂತತಿಗಳಿಗಾಗಿ ದಾಖಲೆಮಾಡಿದರು.a
ಆದಾಗಲೂ, ಸತ್ಯವನ್ನು ಮಾತಾಡಲಿಕ್ಕಾಗಿ ತಾನು ಭೂಮಿಗೆ ಬಂದಿದ್ದೇನೆಂದು ಯೇಸು ಪಿಲಾತನಿಗೆ ಹೇಳಿದಾಗ, ಅವನ ಮನಸ್ಸಿನಲ್ಲಿ ಒಂದು ನಿರ್ದಿಷ್ಟ ಸತ್ಯವಿತ್ತು. “ನೀನು ಅರಸನು ಹೌದಲ್ಲವೇ” ಎಂಬ ಪಿಲಾತನ ಪ್ರಶ್ನೆಗೆ ಪ್ರತಿಕ್ರಿಯೆಯಲ್ಲಿ ಯೇಸು ಆ ಹೇಳಿಕೆಯನ್ನಿತ್ತನು. (ಯೋಹಾನ 18:37) ದೇವರ ರಾಜ್ಯ, ಮತ್ತು ಅದರ ರಾಜನಾಗಿ ಯೇಸುವಿನ ಸ್ವಂತ ಪಾತ್ರ, ಆತನು ಭೂಮಿಯಲ್ಲಿದ್ದಾಗ ಯೇಸುವಿನ ಬೋಧನೆಯ ಮುಖ್ಯವಿಷಯ, ಅದರ ತಿರುಳು ಆಗಿತ್ತು. (ಲೂಕ 4:43) ಈ ರಾಜ್ಯವು ಯೆಹೋವನ ನಾಮವನ್ನು ಪವಿತ್ರೀಕರಿಸುವುದು, ಆತನ ಸಾರ್ವಭೌಮತೆಯನ್ನು ಮಹಿಮೆಪಡಿಸುವುದು, ಮತ್ತು ನಂಬಿಗಸ್ತ ಮಾನವಕುಲವನ್ನು ನಿತ್ಯ ಮತ್ತು ಸಂತೋಷದ ಜೀವಿತಕ್ಕೆ ಪುನಃಸ್ಥಾಪಿಸುವುದೆಂಬದು, ಎಲ್ಲಾ ಯಥಾರ್ಥ ಕ್ರೈಸ್ತರು ಯಾವುದರಲ್ಲಿ ನಿರೀಕ್ಷಿಸುತ್ತಾರೋ ಆ “ಸತ್ಯ”ವಾಗಿದೆ. ದೇವರ ಎಲ್ಲಾ ವಾಗ್ದಾನಗಳ ನೆರವೇರಿಕೆಯಲ್ಲಿ ಯೇಸುವಿನ ಪಾತ್ರವು ಅಷ್ಟು ಪ್ರಮುಖವಾಗಿರುವದರಿಂದ, ಮತ್ತು ದೇವರ ಎಲ್ಲಾ ಪ್ರವಾದನೆಗಳು ಅವನಿಂದಾಗಿ “ಆಮೆನ್” ಅಥವಾ ಸತ್ಯವಾಗುವದರಿಂದ, ಯೇಸು ಹೀಗೆ ಹೇಳಶಕ್ತನಾಗಿದ್ದನು: “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ.”—ಯೋಹಾನ 14:6; 2 ಕೊರಿಂಥ 1:20; ಪ್ರಕಟನೆ 3:14.
ಈ ಸತ್ಯವನ್ನು ಪೂರ್ಣವಾಗಿ ಭರವಸಾರ್ಹವೆಂದು ಅಂಗೀಕರಿಸುವುದು ಇಂದು ಕ್ರೈಸ್ತರಿಗೆ ತುಂಬ ಅರ್ಥಪೂರ್ಣವಾಗಿದೆ. ದೇವರಲ್ಲಿ ಅವರ ನಂಬಿಕೆ ಮತ್ತು ಆತನ ವಾಗ್ದಾನಗಳಲ್ಲಿ ಅವರ ನಿರೀಕ್ಷೆಯು ವಾಸ್ತವಾಂಶಗಳ ಮೇಲೆ, ನೈಜತೆಗಳ ಮೇಲೆ ಆಧರಿಸಿದೆಯೆಂದು ಇದರ ಅರ್ಥವಾಗಿರುತ್ತದೆ.
ಕಾರ್ಯಪ್ರವೃತ್ತ ಸತ್ಯ
ಆಶ್ಚರ್ಯವಿಲ್ಲದೇ, ಬೈಬಲ್, ಸತ್ಯವನ್ನು ಕ್ರಿಯೆಯೊಂದಿಗೆ ಜೋಡಿಸುತ್ತದೆ. (1 ಸಮುವೇಲ 12:24; 1 ಯೋಹಾನ 3:18) ದೇವಭೀರುಗಳಾದ ಯೆಹೂದ್ಯರಿಗೆ, ಸತ್ಯವು ತತ್ತವ್ವಿಚಾರ ಮಾಡುವ ಒಂದು ವಿಷಯವಸ್ತುವಾಗಿರಲಿಲ್ಲ; ಅದು ಒಂದು ಜೀವನ ರೀತಿಯಾಗಿತ್ತು. “ಸತ್ಯ” ಕ್ಕಾಗಿರುವ ಹೀಬ್ರು ಪದವು “ನಂಬಿಗಸ್ತಿಕೆ” ಯನ್ನು ಸಹ ಅರ್ಥೈಸಸಾಧ್ಯವಿತ್ತು ಮತ್ತು ತನ್ನ ಮಾತಿಗನುಸಾರ ಕ್ರಿಯೆಗೈಯುವವನೊಬ್ಬನನ್ನು ವರ್ಣಿಸಲು ಉಪಯೋಗಿಸಲ್ಪಟ್ಟಿತ್ತು. ತನ್ನ ದೃಷ್ಟಿಕೋನದಿಂದಲೇ ಸತ್ಯವನ್ನು ವೀಕ್ಷಿಸುವಂತೆ ಯೇಸು ತನ್ನ ಹಿಂಬಾಲಕರಿಗೆ ಕಲಿಸಿದನು. ಅವನು ಭಾವೋದ್ರೇಕದಿಂದ ಫರಿಸಾಯರ ಕಪಟತನವನ್ನು, ಅವರ ಸ್ವ-ನೀತಿಯ ಮಾತುಗಳು ಮತ್ತು ಅವರ ಅನೀತಿಯ ಕೃತ್ಯಗಳ ನಡುವಿನ ವಿಸ್ತಾರವಾದ ಅಂತರವನ್ನು ತೆಗಳಿದನು. ಮತ್ತು ಅವನು ಕಲಿಸಿದ ಸತ್ಯಗಳ ಪ್ರಕಾರ ಜೀವಿಸುವದರಲ್ಲಿ ಅವನು ಮಾದರಿಯನ್ನಿಟ್ಟನು.
ಕ್ರಿಸ್ತನ ಹಿಂಬಾಲಕರೆಲ್ಲರೂ ಅಂತೆಯೇ ಇರಬೇಕು. ಅವರಿಗೆ, ದೇವರ ವಾಕ್ಯದ ಸತ್ಯವು, ಯೇಸು ಕ್ರಿಸ್ತನ ಆಳಿಕೆಯ ಕೆಳಗೆ ದೇವರ ರಾಜ್ಯದ ಕುರಿತಾದ ಹುರಿದುಂಬಿಸುವ ಸುವಾರ್ತೆಯು, ಬರೇ ಮಾಹಿತಿಗಿಂತ ಹೆಚ್ಚಿನದ್ದು, ಅತಿ ಹೆಚ್ಚಿನದ್ದಾಗಿದೆ. ಆ ಸತ್ಯವು ಅವರನ್ನು ಕ್ರಿಯೆಗೆ ನಡಿಸುತ್ತದೆ, ಅದರಂತೆ ಜೀವಿಸಲು ಮತ್ತು ಅದನ್ನು ಇತರರಿಗೆ ಹಂಚಲು ಅವರನ್ನು ಬಲವಂತಪಡಿಸುತ್ತದೆ. (ಯೆರೆಮೀಯ 20:9ನ್ನು ಹೋಲಿಸಿರಿ.) ಪ್ರಥಮ ಶತಮಾನದ ಕ್ರೈಸ್ತ ಸಭೆಗೆ, ಕ್ರೈಸ್ತನ ಹಿಂಬಾಲಕರೋಪಾದಿ ಅವರು ಸ್ವೀಕರಿಸಿದ ಜೀವನ ರೀತಿಯು ಕೆಲವೊಮ್ಮೆ ಕೇವಲ “ಸತ್ಯ” ಅಥವಾ “ಸತ್ಯಮಾರ್ಗ” ವೆಂದು ಪ್ರಸಿದ್ಧವಾಗಿತ್ತು.—2 ಯೋಹಾನ 4; 3 ಯೋಹಾನ 4, 8; 2 ಪೇತ್ರ 2:2.
ಯಾವುದೇ ಬೆಲೆಗೆ ಅರ್ಹವಾಗಿರುವ ಒಂದು ನಿಧಿ
ದೇವರ ವಾಕ್ಯದ ಸತ್ಯಗಳನ್ನು ಸ್ವೀಕರಿಸುವದು ಒಂದು ಬೆಲೆಯನ್ನು ಒತ್ತಯಾಪಡಿಸುತ್ತದೆಂಬದು ನಿಜ. ಪ್ರಥಮವಾಗಿ, ಸತ್ಯವನ್ನು ಕೇವಲ ಕಲಿಯುವುದು ಒಂದು ಜರ್ಜರಿತಗೊಳಿಸುವ ಅನುಭವವಾಗಿರಬಲ್ಲದು. ದ ಎನ್ಸೈಕ್ಲೊಪೀಡಿಯ ಅಮೆರಿಕಾನಾ ಅವಲೋಕಿಸುವುದು: “ಸತ್ಯವು ಹೆಚ್ಚಾಗಿ ಅಪ್ರಿಯವಾಗಿರುತ್ತದೆ ಯಾಕಂದರೆ ಅದು ಪೂರ್ವಾಗ್ರಹ ಅಥವಾ ಮಿಥ್ಯೆಯನ್ನು ಬೆಂಬಲಿಸಲು ತಪ್ಪುತ್ತದೆ.” ನಮ್ಮ ನಂಬಿಕೆಗಳು, ವಿಶೇಷವಾಗಿ ನಾವು ವಿಶ್ವಾಸಪಾತ್ರ ಧಾರ್ಮಿಕ ಮುಖಂಡರಿಂದ ಕಲಿಸಲ್ಪಟ್ಟಲ್ಲಿ, ಅಸತ್ಯವೆಂದು ಬಯಲುಗೊಳಿಸಲ್ಪಡುವುದನ್ನು ಕಾಣುವುದು ಭ್ರಾಂತಿನಿವಾರಕವಾಗಿರಬಲ್ಲದು. ಕೆಲವರು ಆ ಅನುಭವವನ್ನು, ವಿಶ್ವಾಸಪಾತ್ರರಾದ ಹೆತ್ತವರು ವಾಸ್ತವದಲ್ಲಿ ಗುಪ್ತ ಪಾತಕಿಗಳಾಗಿದ್ದಾರೆಂಬದನ್ನು ಕಂಡುಹಿಡಿಯುವುದಕ್ಕೆ ಸರಿಹೋಲಿಸಬಹುದು. ಆದರೆ ಮೋಸದಲ್ಲಿ ಜೀವಿಸುವದಕ್ಕಿಂತ ಧಾರ್ಮಿಕ ಸತ್ಯವನ್ನು ಕಂಡುಹಿಡಿಯುವುದು ಉತ್ತಮವಲ್ಲವೋ? ಸುಳ್ಳುಗಳಿಂದ ನಡಿಸಲ್ಪಡುವದಕ್ಕಿಂತ ವಾಸ್ತವಾಂಶಗಳನ್ನು ತಿಳಿಯುವುದು ಉತ್ತಮವಲ್ಲವೊ?b—ಹೋಲಿಸಿರಿ ಯೋಹಾನ 8:32; ರೋಮಾಪುರ 3:4.
ಎರಡನೆಯದಾಗಿ, ಧಾರ್ಮಿಕ ಸತ್ಯಕ್ಕನುಗುಣವಾಗಿ ಜೀವಿಸುವುದು, ಹಿಂದೆ ನಮ್ಮ ಸ್ನೇಹಿತರಾಗಿದ್ದವರಲ್ಲಿ ಕೆಲವರ ಸ್ವೀಕಾರ ನಷ್ಟವನ್ನು ನಮಗೆ ತರಬಹುದು. ಅನೇಕರು “ಸತ್ಯದೇವರನ್ನು ಬಿಟ್ಟು, ಅಸಹ್ಯವಾದದ್ದನ್ನು ಹಿಡಿದು” ಕೊಂಡಿರುವ ಲೋಕವೊಂದರಲ್ಲಿ, ದೇವರ ವಾಕ್ಯದ ಸತ್ಯಕ್ಕೆ ದೃಢರಾಗಿ ಅಂಟಿಕೊಳ್ಳುವವರು ವಿಚಿತ್ರವಾಗಿ ತೋರುತ್ತಾರೆ ಮತ್ತು ಕೆಲವೊಮ್ಮೆ ದೂರವಾಗಿರಿಸಲ್ಪಡುತ್ತಾರೆ ಮತ್ತು ತಪ್ಪಾಗಿ ತಿಳಿಯಲ್ಪಡುತ್ತಾರೆ.—ರೋಮಾಪುರ 1:25; 1 ಪೇತ್ರ 4:4.
ಆದರೆ ಸತ್ಯವು ಈ ಇಮ್ಮಡಿ ಬೆಲೆಗೆ ಅರ್ಹವಾಗಿದೆ. ಸತ್ಯವನ್ನು ತಿಳಿದಿರುವುದು ನಮ್ಮನ್ನು ಸುಳ್ಳುಗಳು, ಮೋಸಗಳು ಮತ್ತು ಮೂಢನಂಬಿಕೆಗಳಿಂದ ಮುಕ್ತಗೊಳಿಸುತ್ತದೆ. ಮತ್ತು ನಾವು ಅದರ ಪ್ರಕಾರ ಜೀವಿಸುವಾಗ, ಕಷ್ಟಗಳನ್ನು ತಾಳಿಕೊಳ್ಳಲು ಸತ್ಯವು ನಮ್ಮನ್ನು ಬಲಪಡಿಸುತ್ತದೆ. ದೇವರ ಸತ್ಯವು ಎಷ್ಟು ಭರವಸಾರ್ಹ ಮತ್ತು ಸಾಧಾರವುಳ್ಳದ್ದಾಗಿದೆಯೆಂದರೆ ಮತ್ತು ಅದು ಎಷ್ಟು ನಿರೀಕ್ಷೆಯಿಂದ ನಮ್ಮನ್ನು ಪ್ರೇರಿಸುತ್ತದೆಂದರೆ, ಯಾವುದೇ ಪರೀಕ್ಷೆಯ ಕೆಳಗೆ ಸ್ಥಿರರಾಗಿ ನಿಲ್ಲುವಂತೆ ಅದು ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ. ಅಪೊಸ್ತಲ ಪೌಲನು ಸತ್ಯವನ್ನು, ಕಾಳಗದಲ್ಲಿ ಸೈನಿಕರು ಧರಿಸುತ್ತಿದ್ದ ಅಗಲವಾದ ಗಟ್ಟಿಮುಟ್ಟಾದ ಚರ್ಮದ ನಡುಕಟ್ಟು, ಅಥವಾ ನಡುಪಟ್ಟಿಗೆ ಹೋಲಿಸಿದ್ದು ಅಶ್ಚರ್ಯವೇನೂ ಅಲ್ಲ!—ಎಫೆಸ 6:13, 14.
ಬೈಬಲ್ ಜ್ಞಾನೋಕ್ತಿಯು ಹೇಳುವುದು: “ಸತ್ಯವನ್ನು ಎಂದರೆ ಜ್ಞಾನ ಸುಶಿಕ್ಷೆ ವಿವೇಕಗಳನ್ನು ಕೊಂಡುಕೋ; ಮಾರಿ ಬಿಡಬೇಡ.” (ಜ್ಞಾನೋಕ್ತಿ 23:23) ಸತ್ಯವನ್ನು ಸಂಬಂಧಕ ಅಥವಾ ಅಸ್ತಿತ್ವದಲ್ಲಿಲ್ಲದ್ದೆಂದು ವಿಸರ್ಜಿಸುವುದು, ಜೀವಿತವು ನೀಡುವ ಅತ್ಯಂತ ರೋಮಾಂಚನೀಯ ಮತ್ತು ಕೈಗೂಡಿಸುವ ಅನ್ವೇಷಣೆಯಿಂದ ವಂಚಿಸಲ್ಪಡುವುದಾಗಿದೆ. ಅದನ್ನು ಕಂಡುಹಿಡಿಯುವುದು ನಿರೀಕ್ಷೆಯನ್ನು ಕಂಡುಹಿಡಿಯುವುದಾಗಿದೆ; ಅದನ್ನು ತಿಳಿದು ಪ್ರೀತಿಸುವುದು ವಿಶ್ವದ ಸೃಷ್ಟಿಕರ್ತನನ್ನು ಮತ್ತು ಆತನ ಏಕಜಾತ ಪುತ್ರನನ್ನು ತಿಳಿಯುವುದು ಮತ್ತು ಪ್ರೀತಿಸುವುದಾಗಿದೆ; ಅದರ ಪ್ರಕಾರ ಜೀವಿಸುವುದು, ಈಗಲೂ ಸದಾಕಾಲಕ್ಕೂ ಉದ್ದೇಶದೊಂದಿಗೆ ಮತ್ತು ಮನಶ್ಶಾಂತಿಯೊಂದಿಗೆ ಜೀವಿಸುವುದಾಗಿದೆ.—ಜ್ಞಾನೋಕ್ತಿ 2:1-5; ಜೆಕರ್ಯ 8:19; ಯೋಹಾನ 17:3.
[ಅಧ್ಯಯನ ಪ್ರಶ್ನೆಗಳು]
a ತನ್ನ ಮಾತುಗಳ ಸತ್ಯತೆಯನ್ನು ಒತ್ತಿ ಹೇಳಲು ಯೇಸು ಒಂದು ಅಪೂರ್ವ ಅಭಿವ್ಯಕ್ತಿಯನ್ನು ಬಳಸಿದನೆಂದು ದಾಖಲಿಸಲ್ಪಟ್ಟಿರುವ 70 ಕ್ಕಿಂತ ಹೆಚ್ಚಿನ ಸ್ಥಳಗಳು ಸುವಾರ್ತಾ ದಾಖಲೆಗಳಲ್ಲಿವೆ. ಒಂದು ವಾಕ್ಯವನ್ನು ಪ್ರಸ್ತಾಪಿಸಲು ಅವನು ಹೆಚ್ಚಾಗಿ “ಆಮೆನ್” (“ನಿಜವಾಗಿಯೂ,” NW)ಎಂದು ಹೇಳುತ್ತಿದ್ದನು. ಇದಕ್ಕೆ ಸರಿಹೊಂದುವ ಹೀಬ್ರು ಪದಕ್ಕೆ “ನಿಶ್ಚಿತ, ಸತ್ಯ” ಎಂಬ ಅರ್ಥವಿದೆ. ದ ನ್ಯೂ ಇಂಟರ್ನ್ಯಾಷನಲ್ ಡಿಕ್ಷನರಿ ಆಫ್ ನ್ಯೂ ಟೆಸ್ಟಮೆಂಟ್ ತಿಯಾಲೊಜಿ ಗಮನಿಸುವುದು: “ತನ್ನ ಮಾತುಗಳನ್ನು ಆಮೆನ್ನೊಂದಿಗೆ ಪ್ರಸ್ತಾಪಿಸುವ ಮೂಲಕ, ಯೇಸು ಅವುಗಳನ್ನು ನಿಶ್ಚಿತ ಮತ್ತು ಭರವಸಾರ್ಹವೆಂದು ಗುರುತಿಸಿದನು. ಅವನು ಅವುಗಳಂತೆ ನಡೆದನು ಮತ್ತು ತನ್ನನ್ನು ಮತ್ತು ತನ್ನ ಕೇಳುಗರನ್ನು ಅವಕ್ಕೆ ಬದ್ಧಪಡಿಸಿದನು. ಅವು ಅವನ ಘನತೆ ಮತ್ತು ಅಧಿಕಾರದ ಒಂದು ವ್ಯಕ್ತಪಡಿಸುವಿಕೆಯಾಗಿವೆ.”
b ಸತ್ಯಕ್ಕಾಗಿರುವ ಗ್ರೀಕ್ ಶಬ್ದ “ಆಲೇತೀಯ,” “ಬಚ್ಚಿಡಲ್ಪಡದಿರುವುದು” ಎಂಬ ಅರ್ಥವಿರುವ ಶಬ್ದದಿಂದ ಉದ್ಭವಿಸುತ್ತದೆ, ಆದುದರಿಂದ ಸತ್ಯವು ಅನೇಕ ಸಲ ಹಿಂದೆ ಮುಚ್ಚಿಡಲ್ಪಟ್ಟಂತಹದ್ದರ ಪ್ರಕಟಪಡಿಸುವಿಕೆಯನ್ನು ಒಳಗೊಳ್ಳುತ್ತದೆ.—ಲೂಕ 12:2ನ್ನು ಹೋಲಿಸಿರಿ.
[ಪುಟ 6 ರಲ್ಲಿರುವ ಚೌಕ]
ಸತ್ಯವು ಎಂದಾದರೂ ಬದಲಾಗುತ್ತದೋ?
ಆ ಆಸಕ್ತಿಕರ ಪ್ರಶ್ನೆಯು ದಿ ಆರ್ಟ್ ಆಫ್ ತಿಂಕಿಂಗ್ ಎಂಬ ತನ್ನ ಪುಸ್ತಕದಲ್ಲಿ ವಿ. ಆರ್. ರೂಜೆರೋ ಅವರಿಂದ ಎಬ್ಬಿಸಲ್ಪಟ್ಟಿತ್ತು. ಅವರ ಉತ್ತರವು ಇಲ್ಲವೆಂದಾಗಿದೆ. ಅವರು ವಿವರಣೆ ಮಾಡುವುದು: “ಅದು ಕೆಲವೊಮ್ಮೆ ಬದಲಾಗುವಂತೆ ತೋರಬಹುದು, ಆದರೆ ಹೆಚ್ಚು ನಿಕಟವಾದ ಪರೀಕ್ಷಿಸುವಿಕೆಯಿಂದ ಅದು ಹಾಗಲ್ಲವೆಂದು ಕಂಡುಬರುವುದು.”
ಅವರು ಹೇಳುವುದು: “ಬೈಬಲಿನ ಪ್ರಥಮ ಪುಸ್ತಕವಾದ, ಆದಿಕಾಂಡ ಪುಸ್ತಕದ ಕರ್ತೃತ್ವದ ಕುರಿತಾದ ವಿದ್ಯಮಾನವನ್ನು ಪರಿಗಣಿಸಿರಿ. ಆ ಪುಸ್ತಕಕ್ಕೆ ಒಬ್ಬನೇ ಕರ್ತೃವಿದನ್ದೆಂದು ಹಲವಾರು ಶತಮಾನಗಳ ವರೆಗೆ ಕ್ರೈಸ್ತರು ಮತ್ತು ಯೆಹೂದ್ಯರು ಒಂದೇ ರೀತಿಯಲ್ಲಿ ನಂಬುತ್ತಿದ್ದರು. ಸಮಯಾನಂತರ ಈ ನೋಟವು ಪ್ರಶ್ನಿಸಲ್ಪಟ್ಟಿತು, ಮತ್ತು ಐದರಷ್ಟು ಕರ್ತೃಗಳು ಆದಿಕಾಂಡದ ರಚನೆಗೆ ನೆರವು ನೀಡಿದರೆಂಬ ನಂಬಿಕೆಯೊಂದಿಗೆ ಕೊನೆಗೆ ಸ್ಥಾನಪಲ್ಲಟಗೊಳಿಸಲ್ಪಟ್ಟಿತು. ಅನಂತರ, 1981 ರಲ್ಲಿ ಆದಿಕಾಂಡದ 5 ವರ್ಷದ ಭಾಷಾ ಸಂಬಂಧವಾದ ವಿಶ್ಲೇಷಣೆಯು ಪ್ರಕಾಶಿಸಲ್ಪಟ್ಟಿತು, ಇದು ಆರಂಭದಲ್ಲಿ ಎಣಿಸಲ್ಪಟ್ಟಂತೆ ಒಂದೇ ಕರ್ತೃತ್ವದ 82 ಶೇಕಡ ಸಂಭವನೀಯತೆಯನ್ನು ತಿಳಿಸಿತು.
“ಆದಿಕಾಂಡದ ಕರ್ತೃತ್ವದ ಕುರಿತಾದ ಸತ್ಯವು ಬದಲಾಗಿದೆಯೋ? ಇಲ್ಲ. ಕೇವಲ ನಮ್ಮ ನಂಬಿಕೆಯು ಬದಲಾಗಿದೆ. . . . ನಮ್ಮ ಜ್ಞಾನ ಅಥವಾ ನಮ್ಮ ಅಜ್ಞಾನದಿಂದಾಗಿ ಸತ್ಯವು ಬದಲಾಯಿಸಲ್ಪಡುವುದಿಲ್ಲ.”
[ಪುಟ 7 ರಲ್ಲಿರುವ ಚೌಕ]
ಸತ್ಯಕ್ಕಾಗಿ ಪೂಜ್ಯಭಾವನೆ
“ಸತ್ಯಕ್ಕಾಗಿ ಪೂಜ್ಯಭಾವನೆಯು, ಯಾರೊಬ್ಬರೂ ಮತ್ತು ಯಾವುದೂ ಸತ್ಯವನ್ನು ಹೊಂದಿರುವುದಾಗಿ ವಾದಿಸಲಾರನೆಂಬ ನಂಬಿಕೆಯಿಂದ ಎಲ್ಲವನ್ನು ‘ಬಯಲುಗೊಳಿಸಲು’ ಪ್ರಯತ್ನಿಸುವ ನಮ್ಮ ಸ್ವಂತ ಯುಗದ ತೋರಿಕೆಯ ಸಿನಿಕಭಾವ ಮಾತ್ರ ಆಗಿರುವುದಿಲ್ಲ. ಸತ್ಯವು ಖಂಡಿತವಾಗಿಯೂ ಕಂಡುಹಿಡಿಯಲ್ಪಡಬಲ್ಲದು ಎಂಬ ಆನಂದಕರ ಭರವಸೆಯೊಂದಿಗೆ, ಸತ್ಯವು ಯಾವದೇ ಸಮಯದಲ್ಲಿ ಮತ್ತು ಎಲ್ಲಿಯೇ ತೋರಿಬರಲಿ ಅದಕ್ಕೆ ಒಂದು ನಮ್ರ ಅಧೀನತೆಯನ್ನು ಸೇರಿಸುವ ಮನೋಭಾವನೆಯಾಗಿದೆ. ಇಂತಹ ಬಿಚ್ಚು ಮನಸ್ಸು ಸತ್ಯದ ದೇವರ ಆರಾಧಕನಿಂದ ಅಪೇಕ್ಷಿಸಲ್ಪಡುತ್ತದೆ. ಈ ಕಾರಣದಿಂದ, ಸತ್ಯಕ್ಕಾಗಿರುವ ಯೋಗ್ಯ ಪೂಜ್ಯಭಾವವು ಒಬ್ಬ ಮನುಷ್ಯನು ತನ್ನ ನೆರೆಯವನೊಂದಿಗೆ ಮಾಡುವ ವ್ಯವಹಾರದಲ್ಲಿ, ನುಡಿಯಲ್ಲಿಯೂ ಕ್ರಿಯೆಯಲ್ಲಿಯೂ ಪ್ರಾಮಾಣಿಕತೆಯ ಭಾವನೆಯನ್ನು ಕೊಡುತ್ತದೆ. ಹ[ಳೆಯ] ಒ[ಡಂಬಡಿಕೆ] ಮತ್ತು ಹೊ[ಸ] ಒ[ಡಂಬಡಿಕೆ] ಇವೆರಡೂ, ಸಾಕ್ಷಿಯನ್ನು ಕೊಡುವ ಈ ಮನೋಭಾವನೆಯನ್ನು ನಾವು ನೋಡಿದ್ದೇವೆ.”—ದ ನ್ಯೂ ಇಂಟರ್ನ್ಯಾಷನಲ್ ಡಿಕ್ಷನರಿ ಆಫ್ ನ್ಯೂ ಟೆಸ್ಟಮೆಂಟ್ ತಿಯಾಲೊಜಿ, ಸಂಪುಟ 3, ಪುಟ 901.
[ಪುಟ 7 ರಲ್ಲಿರುವ ಚಿತ್ರಗಳು]
ವೈಜ್ಞಾನಿಕ ಪ್ರಗತಿಯು ವೈಜ್ಞಾನಿಕ ಸತ್ಯಗಳ ಅನಾವರಣಗೊಳಿಸುವಿಕೆಯ ಮೇಲೆ ಆಧರಿತವಾಗಿದೆ
[ಪುಟ 8 ರಲ್ಲಿರುವ ಚಿತ್ರ]
ಸತ್ಯವು ರಾಜ್ಯ ಮತ್ತು ಅದರ ಆಶೀರ್ವಾದಗಳನ್ನು ಒಳಗೊಳ್ಳುತ್ತದೆ