ಕ್ರೈಸ್ತ ಸ್ತ್ರೀಯರು ಮಾನ ಮತ್ತು ಮರ್ಯಾದೆಗೆ ಪಾತ್ರರು
“ಗಂಡಂದಿರೇ, . . . ಅವರೊಂದಿಗೆ ಜ್ಞಾನಾನುಸಾರವಾಗಿ ಜೀವಿಸುತ್ತಾ ಹೋಗಿರಿ . . . ಅವರಿಗೆ ಅಬಲೆಯಾದ ಸ್ತ್ರೀಯಂತೆ ಮಾನವನ್ನು ಸಲ್ಲಿಸಿರಿ.”—1 ಪೇತ್ರ 3:7, NW.
1, 2. (ಎ) ಸಮಾರ್ಯದ ಸ್ತ್ರೀಯೊಂದಿಗಿನ ಬಾವಿಯ ಬಳಿಯ ಯೇಸುವಿನ ಸಂಭಾಷಣೆಯು ಯಾವ ಚಿಂತೆಯನ್ನು ಪ್ರಚೋದಿಸಿತು, ಮತ್ತು ಏಕೆ? (ಪಾದಟಿಪ್ಪಣಿಯನ್ನೂ ನೋಡಿ.) (ಬಿ) ಸಮಾರ್ಯದ ಸ್ತ್ರೀಗೆ ಸಾರುವ ಮೂಲಕ ಯೇಸು ಏನನ್ನು ಪ್ರದರ್ಶಿಸಿದನು?
ಸ್ತ್ರೀಯರನ್ನು ಹೇಗೆ ಉಪಚರಿಸಬೇಕೆಂಬ ತನ್ನ ಭಾವನೆಯನ್ನು ಸಾ.ಶ. 30ರ ಅಂತ್ಯದ ಸುಮಾರಿಗೆ ಸುಖರೆಂಬ ಊರಿನ ಪುರಾತನ ಬಾವಿಯ ಬಳಿ ಒಂದು ನಡು ಮಧ್ಯಾಹ್ನ ಯೇಸು ಪ್ರಕಟಿಸಿದನು. ಸಮಾರ್ಯದ ಗುಡ್ಡ ಪ್ರದೇಶವನ್ನು ದಾಟಿಕೊಂಡು ಪಯಣಿಸುವುದರಲ್ಲಿ ಅವನು ಬೆಳಗ್ಗಿನ ಸಮಯವನ್ನು ಕಳೆದಿದ್ದನು ಮತ್ತು ಬಳಲಿದವನೂ ಹಸಿದವನೂ ಬಾಯಾರಿದವನೂ ಆಗಿ ಬಾವಿಯ ಬಳಿಗೆ ಬಂದನು. ಬಾವಿಯ ಬಳಿಯಲ್ಲಿ ಅವನು ಕುಳಿತುಕೊಂಡಾಗ, ಒಬ್ಬ ಸಮಾರ್ಯದ ಹೆಂಗಸು ಸ್ವಲ್ಪ ನೀರು ಸೇದುವುದಕ್ಕಾಗಿ ಬಂದಳು. “ನೀರು ಕುಡಿಯುವದಕ್ಕೆ ಕೊಡು” ಎಂದು ಯೇಸು ಅವಳಿಗೆ ಹೇಳಿದನು. ಆ ಸ್ತ್ರೀಯು ಅಚ್ಚರಿಯಿಂದ ಅವನೆಡೆಗೆ ನೋಡಿರಬೇಕು. ಅವಳು ಕೇಳುವುದು: “ಯೆಹೂದ್ಯನಾದ ನೀನು ಸಮಾರ್ಯದವಳಾದ ನನ್ನನ್ನು ನೀರು ಬೇಡುವದು ಹೇಗೆ?” ತದನಂತರ, ಆಹಾರವಸ್ತುಗಳನ್ನು ಕೊಳ್ಳಲು ಹೋಗಿದ್ದ ಅವನ ಶಿಷ್ಯರು ಹಿಂದೆಬಂದಾಗ, ಯೇಸು “ಹೆಂಗಸಿನ ಸಂಗಡ ಮಾತಾಡುತ್ತಿರುವದನ್ನು” ಕಂಡು ಆಶ್ಚರ್ಯಪಟ್ಟರು.—ಯೋಹಾನ 4:4-9, 27.
2 ಈ ಸ್ತ್ರೀಯ ಪ್ರಶ್ನೆಯನ್ನು ಮತ್ತು ಶಿಷ್ಯರ ಚಿಂತೆಯನ್ನು ಯಾವುದು ಪ್ರಚೋದಿಸಿತು? ಅವಳು ಒಬ್ಬ ಸಮಾರ್ಯದವಳಾಗಿದ್ದಳು ಮತ್ತು ಯೆಹೂದ್ಯರಿಗೆ ಸಮಾರ್ಯದವರೊಂದಿಗೆ ಯಾವ ವ್ಯವಹಾರವೂ ಇರಲಿಲ್ಲ. (ಯೋಹಾನ 8:48) ಆದರೆ ಚಿಂತಿತರಾಗಲು ಇನ್ನೊಂದು ಕಾರಣ ಸಹ ಇತ್ತೆಂಬುದು ವ್ಯಕ್ತ. ಆ ಸಮಯದಲ್ಲಿ, ಸ್ತ್ರೀಯರೊಂದಿಗೆ ಸಾರ್ವಜನಿಕವಾಗಿ ಮಾತಾಡುವುದನ್ನು ರಬ್ಬಿಗಳ ಸಂಪ್ರದಾಯವು ನಿರುತ್ತೇಜನಗೊಳಿಸಿತ್ತು.a ಆದರೂ, ಯೇಸು ಬಹಿರಂಗವಾಗಿ ಈ ಪ್ರಾಮಾಣಿಕ ಸ್ತ್ರೀಗೆ ಸಾರಿದನು, ತಾನು ಮೆಸ್ಸೀಯನೆಂಬುದಾಗಿ ಅವಳಿಗೆ ಪ್ರಕಟಪಡಿಸಿದನು ಕೂಡ. (ಯೋಹಾನ 4:25, 26) ಸ್ತ್ರೀಯರನ್ನು ಅವಹೇಳನ ಮಾಡುವವುಗಳೂ ಸೇರಿರುವ, ಅಶಾಸ್ತ್ರೀಯ ಸಂಪ್ರದಾಯಗಳಿಗೆ ತಾನು ಕಟ್ಟುಬೀಳವವನಲ್ಲವೆಂದು ಯೇಸು ಆ ಮೂಲಕ ತೋರಿಸಿಕೊಟ್ಟನು. (ಮಾರ್ಕ 7:9-13) ಇದಕ್ಕೆ ಪ್ರತಿಯಾಗಿ, ಸ್ತ್ರೀಯರನ್ನು ಮಾನ ಮರ್ಯಾದೆಯಿಂದ ಉಪಚರಿಸಬೇಕೆಂದು ಯೇಸು ತಾನು ಮಾಡಿದ ಮತ್ತು ಕಲಿಸಿದ ವಿಷಯಗಳಿಂದ ಪ್ರದರ್ಶಿಸಿದನು.
ಯೇಸು ಸ್ತ್ರೀಯರನ್ನು ಉಪಚರಿಸಿದ ವಿಧ
3, 4. (ಎ) ತನ್ನ ಉಡುಪನ್ನು ಮುಟ್ಟಿದ ಸ್ತ್ರೀಗೆ ಯೇಸು ಹೇಗೆ ಪ್ರತಿಕ್ರಿಯೆ ತೋರಿಸಿದನು? (ಬಿ) ಕ್ರೈಸ್ತ ಪುರುಷರಿಗೆ, ವಿಶೇಷವಾಗಿ ಮೇಲ್ವಿಚಾರಕರಿಗೆ ಯೇಸು ಒಳ್ಳೇ ಮಾದರಿಯನ್ನಿಟ್ಟದ್ದು ಹೇಗೆ?
3 ಸ್ತ್ರೀಯರೊಂದಿಗೆ ಅವನು ವ್ಯವಹರಿಸಿದ ರೀತಿಯಲ್ಲಿ ಜನರೆಡೆಗಿನ ಯೇಸುವಿನ ಕೋಮಲ ಕರುಣೆಯು ಪ್ರತಿಬಿಂಬಿಸಿತು. ಒಮ್ಮೆ 12 ವರ್ಷಗಳಿಂದ ರಕ್ತಸ್ರಾವ ರೋಗದಿಂದ ಬಳಲುತ್ತಿದ್ದ ಒಬ್ಬ ಸ್ತ್ರೀಯು ಗುಂಪಿನಲ್ಲಿ ಯೇಸುವಿಗಾಗಿ ಹುಡುಕಿದಳು. ಅವಳ ಪರಿಸ್ಥಿತಿಯು ಅವಳನ್ನು ವಿಧಿರೂಪವಾಗಿ ಅಶುದ್ಧಳನ್ನಾಗಿ ಮಾಡಿತ್ತಾದುದರಿಂದ, ಅವಳು ಅಲ್ಲಿ ಇರಬಾರದಿತ್ತು. (ಯಾಜಕಕಾಂಡ 15:25-27) ಆದರೆ ಆಕೆ ಎಷ್ಟು ಹತಾಶಳಾಗಿದ್ದಳೆಂದರೆ ಹಿಂದಿನಿಂದ ಯೇಸುವನ್ನು ಹತ್ತರಿಸಿದಳು. ಅವಳು ಅವನ ಉಡುಪನ್ನು ಮುಟ್ಟಿದಾಗ, ಕೂಡಲೆ ಆಕೆಗೆ ವಾಸಿಯಾಯಿತು! ಯಾರ ಮಗಳು ವಿಷಮ ಕಾಯಿಲೆಯಲ್ಲಿದ್ದಳೊ, ಆ ಯಾಯಿರನ ಮನೆಗೆ ಯೇಸು ಹೋಗುವುದರಲ್ಲಿದ್ದರೂ, ಅವನು ನಿಂತುಬಿಟ್ಟನು. ತನ್ನಿಂದ ಶಕ್ತಿಯು ಹೊರಹೊರಟ ಅನಿಸಿಕೆ ಅವನಿಗಾದುದರಿಂದ ತನ್ನನ್ನು ಮುಟ್ಟಿದವರಿಗಾಗಿ ಸುತ್ತಲೂ ನೋಡಿದನು. ಕೊನೆಗೆ, ಆ ಹೆಂಗಸು ನಡುಗುತ್ತಾ ಬಂದು ಅವನ ಮುಂದೆ ಅಡಬ್ಡಿದಳ್ದು. ಗುಂಪಿನ ನಡುವೆ ಬಂದದಕ್ಕಾಗಿ ಅಥವಾ ತನ್ನ ಅಪ್ಪಣೆಯಿಲ್ಲದೆ ತನ್ನ ವಸ್ತ್ರವನ್ನು ಮುಟ್ಟಿದುದಕ್ಕಾಗಿ ಯೇಸು ಅವಳನ್ನು ಗದರಿಸಿದನೊ? ಅದಕ್ಕೆ ಪ್ರತಿಯಾಗಿ, ಆತನನ್ನು ಅತಿ ಮಮತೆಯೂ ದಯೆಯೂ ಉಳ್ಳವನಾಗಿ ಆಕೆ ಕಂಡಳು. “ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು” ಎಂದನವನು. ಒಬ್ಬ ಹೆಂಗಸನ್ನು ನೇರವಾಗಿ “ಮಗಳೇ” ಎಂದು ಯೇಸು ಕರೆದದ್ದು ಇದೊಂದೇ ಸಲ. ಆ ಶಬ್ದವು ಅವಳ ಮನಸ್ಸನ್ನು ಎಷ್ಟು ಸಾಂತ್ವನಗೊಳಿಸಿರಬೇಕು!—ಮತ್ತಾಯ 9:18-22; ಮಾರ್ಕ 5:21-34.
4 ಯೇಸು ನಿಯಮದ ಶಬ್ದಾರ್ಥಕ್ಕೆ ಕಟ್ಟುಬೀಳಲಿಲ್ಲ. ಅದರ ಹಿಂದಿದ್ದ ನಿಜಾರ್ಥವನ್ನು ಮತ್ತು ಕರುಣೆ ಮತ್ತು ಕನಿಕರದ ಅಗತ್ಯವನ್ನು ಅವನು ಕಂಡನು. (ಮತ್ತಾಯ 23:23ನ್ನು ಹೋಲಿಸಿ.) ರೋಗಿ ಸ್ತ್ರೀಯ ಹತಾಶೆಯ ಸನ್ನಿವೇಶಗಳನ್ನು ಯೇಸು ಗಮನಿಸಿದನು ಮತ್ತು ಆಕೆ ನಂಬಿಕೆಯಿಂದ ಪ್ರಚೋದಿತಳಾಗಿದ್ದಳೆಂಬುದನ್ನು ಪರಿಗಣನೆಗೆ ತೆಗೆದುಕೊಂಡನು. ಆ ಮೂಲಕ ಅವನು ಕ್ರೈಸ್ತ ಪುರುಷರಿಗೆ, ವಿಶೇಷವಾಗಿ ಮೇಲ್ವಿಚಾರಕರಿಗೆ ಒಂದು ಒಳ್ಳೇ ಮಾದರಿಯನ್ನಿಟ್ಟನು. ಒಬ್ಬ ಕ್ರೈಸ್ತ ಸಹೋದರಿಯು ವೈಯಕ್ತಿಕ ಸಮಸ್ಯೆಗಳನ್ನು ಅಥವಾ ವಿಶೇಷವಾಗಿ ಕಷ್ಟಕರವಾದ ಅಥವಾ ಸಂಕಟಮಯ ಸನ್ನಿವೇಶವನ್ನು ಎದುರಿಸುತ್ತಿರುವಲ್ಲಿ, ತತ್ಕ್ಷಣದ ನುಡಿಗಳ ಅಥವಾ ನಡೆಗಳ ಹಿಂದಿರುವ ಭಾವನೆಯನ್ನು ಗ್ರಹಿಸಿಕೊಳ್ಳಲು ಹಿರಿಯರು ಪ್ರಯತ್ನಿಸಬೇಕು ಮತ್ತು ಸನ್ನಿವೇಶಗಳನ್ನೂ ಹೇತುಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಅಂತಹ ಒಳನೋಟವು ಸೂಚನೆ ಮತ್ತು ತಿದ್ದುಪಾಟಿನ ಬದಲಿಗೆ ತಾಳ್ಮೆ, ತಿಳಿವಳಿಕೆ, ಮತ್ತು ಕನಿಕರದ ಅಗತ್ಯವನ್ನು ಸೂಚಿಸೀತು.—ಜ್ಞಾನೋಕ್ತಿ 10:19; 16:23; 19:11.
5. (ಎ) ರಬ್ಬಿಗಳ ಬೋಧನೆಗಳಿಂದ ಸ್ತ್ರೀಯರು ಯಾವ ರೀತಿಯಲ್ಲಿ ನಿರ್ಬಂಧಿಸಲ್ಪಟ್ಟಿದ್ದರು? (ಪಾದಟಿಪ್ಪಣಿ ನೋಡಿ.) (ಬಿ) ಪುನರುತಿತ್ಥ ಯೇಸುವನ್ನು ಪ್ರತ್ಯಕ್ಷ ಕಂಡವರಲ್ಲಿ ಮತ್ತು ಸಾಕ್ಷಿಕೊಟ್ಟವರಲ್ಲಿ ಮೊದಲಿಗರು ಯಾರು?
5 ಯೇಸು ಭೂಮಿಯಲ್ಲಿದ್ದ ಕಾಲದಲ್ಲಿ ಜೀವಿಸಿದ ಸ್ತ್ರೀಯರು, ರಬ್ಬಿಗಳ ಸಂಪ್ರದಾಯಗಳಿಂದ ಬಂಧಿತರಾಗಿ, ನ್ಯಾಯಾಂಗ ಸಾಕ್ಷಿಗಳಾಗಿರುವುದರಿಂದ ನಿರ್ಬಂಧಿಸಲ್ಪಟ್ಟಿದ್ದರು.b ಸಾ.ಶ. 33ರ ನೈಸಾನ್ 16 ನೆಯ ಬೆಳಗ್ಗೆ ಯೇಸು ಸತ್ತವರೊಳಗಿಂದ ಎಬ್ಬಿಸಲ್ಪಟ್ಟ ಸ್ವಲ್ಪ ಹೊತ್ತಿನ ಬಳಿಕ ಏನಾಯಿತೆಂಬುದನ್ನು ಗಮನಿಸಿರಿ. ಪುನುರುತಿತ್ಥ ಯೇಸುವನ್ನು ಮೊದಲಾಗಿ ಕಂಡವರೂ ಮತ್ತು ತಮ್ಮ ಕರ್ತನು ಎಬ್ಬಿಸಲ್ಪಟ್ಟಿದ್ದಾನೆಂದು ಬೇರೆ ಶಿಷ್ಯರಿಗೆ ಸಾಕ್ಷಿಕೊಟ್ಟವರೂ ಯಾರು? ಶೂಲಕ್ಕೇರಿಸಿದ ವಠಾರದಲ್ಲಿ ಆತನು ಸಾಯುವ ವರೆಗೆ ಕಾದು ಉಳಿದಿದ್ದ ಆ ಸ್ತ್ರೀಯರೇ ಅವರಾಗಿದ್ದರು.—ಮತ್ತಾಯ 27:55, 56, 61.
6, 7. (ಎ) ಸಮಾಧಿಗೆ ಬಂದ ಸ್ತ್ರೀಯರಿಗೆ ಯೇಸು ಏನು ಹೇಳಿದನು? (ಬಿ) ಸ್ತ್ರೀಯರ ಸಾಕ್ಷಿಗೆ ಯೇಸುವಿನ ಪುರುಷ ಶಿಷ್ಯರು ಮೊದಲಾಗಿ ಹೇಗೆ ಪ್ರತಿಕ್ರಿಯಿಸಿದರು, ಮತ್ತು ಇದರಿಂದ ಏನನ್ನು ಕಲಿಯಲು ಸಾಧ್ಯವಿದೆ?
6 ವಾರದ ಮೊದಲನೆಯ ದಿನ ಮುಂಜಾನೆ ಮಗಲ್ದದ ಮರಿಯಳು ಮತ್ತು ಇತರ ಸ್ತ್ರೀಯರು ಯೇಸುವಿನ ದೇಹಕ್ಕೆ ಲೇಪಿಸಲು ಸುಗಂಧದ್ರವ್ಯಗಳೊಂದಿಗೆ ಸಮಾಧಿಗೆ ಹೋದರು. ಸಮಾಧಿಯು ಬರಿದಾಗಿರುವುದನ್ನು ಕಂಡು ಮರಿಯಳು ಪೇತ್ರ ಮತ್ತು ಯೋಹಾನರಿಗೆ ತಿಳಿಸಲು ಓಡಿದಳು. ಬೇರೆ ಸ್ತ್ರೀಯರು ಅಲ್ಲಿ ಉಳಿದರು. ಆಗ ಒಬ್ಬ ದೇವದೂತನು ಅವರಿಗೆ ಪ್ರತ್ಯಕ್ಷನಾಗಿ ಯೇಸು ಎಬ್ಬಿಸಲ್ಪಟ್ಟಿದ್ದಾನೆಂದು ಅವರಿಗೆ ಹೇಳಿದನು. “ಬೇಗ ಹೋಗಿ ಆತನ ಶಿಷ್ಯರಿಗೆ ತಿಳಿಸಿರಿ” ಎಂದು ದೇವದೂತನು ಸೂಚಿಸಿದನು. ಸುದ್ದಿಯನ್ನು ತಿಳಿಸಲು ಈ ಸ್ತ್ರೀಯರು ಅವಸರದಿಂದ ಹೋಗುತ್ತಿದ್ದಾಗ ಯೇಸು ತಾನೆ ಅವರಿಗೆ ಗೋಚರಿಸಿದನು. “ನನ್ನ ಸಹೋದರರ ಬಳಿಗೆ ಹೋಗಿ ಹೇಳಿರಿ” ಎಂದು ಅವನು ಅವರಿಗಂದನು. (ಮತ್ತಾಯ 28:1-10; ಮಾರ್ಕ 16:1, 2; ಯೋಹಾನ 20:1, 2) ದೂತನ ದರ್ಶನದ ಅರಿವಿಲ್ಲದೆ, ಶೋಕಪೀಡಿತಳಾಗಿ ಮಗಲ್ದದ ಮರಿಯಳು ಬರಿದಾದ ಸಮಾಧಿಗೆ ಹಿಂದಿರುಗಿ ಬಂದಳು. ಅಲ್ಲಿ ಯೇಸು ಅವಳಿಗೆ ಗೋಚರವಾದನು, ಮತ್ತು ಕೊನೆಗೆ ಅವಳು ಅವನನ್ನು ಗುರುತಿಸಿದಾಗ, ಅವನಂದದ್ದು: “ನೀನು ನನ್ನ ಸಹೋದರರ ಬಳಿಗೆ ಹೋಗಿ—ನಾನು ನನ್ನ ತಂದೆಯೂ ನಿಮ್ಮ ತಂದೆಯೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನ ಬಳಿಗೆ ಏರಿಹೋಗುತ್ತೇನೆ ಎಂದು ಅವರಿಗೆ ಹೇಳು.”—ಯೋಹಾನ 20:11-18; ಹೋಲಿಸಿ ಮತ್ತಾಯ 28:9, 10.
7 ಯೇಸು ಮೊದಲಾಗಿ ಪೇತ್ರನಿಗೆ, ಯೋಹಾನನಿಗೆ ಅಥವಾ ಇತರ ಪುರುಷ ಶಿಷ್ಯರಲ್ಲಿ ಒಬ್ಬರಿಗೆ ಗೋಚರಿಸಬಹುದಿತ್ತು. ಬದಲಿಗೆ, ಈ ಸ್ತ್ರೀಯರನ್ನು ತನ್ನ ಪುನರುತ್ಥಾನಕ್ಕೆ ಪ್ರತ್ಯಕ್ಷ ಸಾಕ್ಷಿಗಳಾಗಿ ಮಾಡುವ ಮೂಲಕ ಮತ್ತು ಅದರ ಕುರಿತು ತನ್ನ ಪುರುಷ ಶಿಷ್ಯರಿಗೆ ಸಾಕ್ಷಿಕೊಡುವಂತೆ ಆದೇಶಕೊಟ್ಟ ಮೂಲಕ ಅವರಿಗೆ ಕೃಪೆ ತೋರಿಸಲು ಅವನು ಆಯ್ದುಕೊಂಡನು. ಪುರುಷರ ಆರಂಭಿಕವಾಗಿ ಹೇಗೆ ಪ್ರತಿವರ್ತಿಸಿದರು? ದಾಖಲೆ ಅನ್ನುವುದು: “ಅವರು ನಂಬಲಿಲ್ಲ. ಆ ಮಾತುಗಳು ಅವರಿಗೆ ಬರೀ ಹರಟೆಯಾಗಿ ತೋರಿದವು.” (ಲೂಕ 24:11) ಆ ಸಾಕ್ಷಿಯನ್ನು ನಂಬಲು ಅವರಿಗೆ ಕಷ್ಟವಾಗಿ ಕಂಡದ್ದು ಅದು ಸ್ತ್ರೀಯರಿಂದ ಬಂದ ಕಾರಣದಿಂದಿರಬಹುದೊ? ಹಾಗಿದ್ದಲ್ಲಿ, ಸಕಾಲದಲ್ಲಿ ಅವರು ಯೇಸು ಸತ್ತವರೊಳಗಿಂದ ಎಬ್ಬಿಸಲ್ಪಟ್ಟಿದ್ದಾನೆಂಬ ಹೇರಳವಾದ ಪುರಾವೆಯನ್ನು ಪಡೆದರು. (ಲೂಕ 24:13-46; 1 ಕೊರಿಂಥ 15:3-8) ಇಂದು ತಮ್ಮ ಆತ್ಮಿಕ ಸಹೋದರಿಯರ ಅವಲೋಕನಗಳನ್ನು ಅವರು ಗಣನೆಗೆ ತೆಗೆದುಕೊಳ್ಳುವಾಗ, ಕ್ರೈಸ್ತ ಪುರುಷರು ವಿವೇಕಯುತವಾಗಿ ಕ್ರಿಯೆಗೈಯುತ್ತಾರೆ.—ಹೋಲಿಸಿ ಆದಿಕಾಂಡ 21:12.
8. ಯೇಸು ಸ್ತ್ರೀಯರೊಂದಿಗೆ ವ್ಯವಹರಿಸಿದ ರೀತಿಯಿಂದ ಅವನು ಏನನ್ನು ಪ್ರಕಟಪಡಿಸಿದನು?
8 ಯೇಸು ಸ್ತ್ರೀಯರೊಂದಿಗೆ ವ್ಯವಹರಿಸಿದ ವಿಧವನ್ನು ಗಮನಿಸುವುದು ನಿಜವಾಗಿಯೂ ಹೃದಯಪ್ರೇರಕವು. ಸ್ತ್ರೀಯರೊಂದಿಗೆ ವ್ಯವಹರಿಸುವಲ್ಲಿ ಸದಾ ಕರುಣಾಳುವೂ ಪೂರ್ಣ ಸಮತೆಯುಳ್ಳವನೂ ಆದ ಆತನು ಅವರನ್ನೆಂದೂ ಘನತೆಗೇರಿಸಲಿಲ್ಲ ಅಥವಾ ತೃಣೀಕರಿಸಲಿಲ್ಲ. (ಯೋಹಾನ 2:3-5) ಅವರ ಗೌರವವನ್ನು ಕಳಚಿಹಾಕಿದ ಮತ್ತು ದೇವರ ವಾಕ್ಯವನ್ನು ನಿರರ್ಥಕಗೊಳಿಸಿದ ರಬ್ಬಿಗಳ ಸಂಪ್ರದಾಯಗಳನ್ನು ಅವನು ತಿರಸ್ಕರಿಸಿದನು. (ಹೋಲಿಸಿ ಮತ್ತಾಯ 15:3-9.) ಸ್ತ್ರೀಯರನ್ನು ಸನ್ಮಾನ ಮತ್ತು ಮರ್ಯಾದೆಯಿಂದ ಉಪಚರಿಸುವ ಮೂಲಕ, ಅವರ ಉಪಚರಿಸಲ್ಪಡುವಿಕೆಯ ವಿಷಯವಾಗಿ ಯೆಹೋವ ದೇವರ ಭಾವನೆಯನ್ನು ಯೇಸು ಸಾಕ್ಷಾತ್ತಾಗಿ ಪ್ರಕಟಿಸಿದನು. (ಯೋಹಾನ 5:19) ಕ್ರೈಸ್ತ ಪುರುಷರಿಗೆ ಅನುಸರಿಸಲು ಒಂದು ಅತ್ಯುತ್ತಮ ಮಾದರಿಯನ್ನು ಸಹ ಯೇಸು ಇಟ್ಟನು.—1 ಪೇತ್ರ 2:21.
ಸ್ತ್ರೀಯರ ವಿಷಯದ ಕುರಿತಾಗಿ ಯೇಸುವಿನ ಬೋಧನೆಗಳು
9, 10. ಸ್ತ್ರೀಯ ಸಂಬಂಧವಾದ ರಬ್ಬಿಗಳ ಸಂಪ್ರದಾಯವನ್ನು ಯೇಸು ಹೇಗೆ ವಾದದಿಂದ ಖಂಡಿಸಿದನು, ವಿವಾಹ ವಿಚ್ಛೇದದ ಕುರಿತು ಫರಿಸಾಯರು ಪ್ರಶ್ನೆಯೊಂದನ್ನು ಎಬ್ಬಿಸಿದ ಬಳಿಕ ಆತನು ಅಂದದ್ದೇನು?
9 ಯೇಸು ರಬ್ಬಿಗಳ ಸಂಪ್ರದಾಯಗಳನ್ನು ತಪ್ಪೆಂದು ಖಂಡಿಸಿ, ಸ್ತ್ರೀಯರನ್ನು ತನ್ನ ಕ್ರಿಯೆಗಳಿಂದ ಮಾತ್ರವಲ್ಲ ತನ್ನ ಬೋಧನೆಗಳಿಂದ ಸಹ ಘನಪಡಿಸಿದನು. ಉದಾಹರಣೆಗೆ, ವಿವಾಹ ವಿಚ್ಛೇದ ಮತ್ತು ವ್ಯಭಿಚಾರದ ಕುರಿತು ಅವನೇನನ್ನು ಕಲಿಸಿದನೆಂಬುದನ್ನು ಗಮನಿಸಿರಿ.
10 ವಿವಾಹ ವಿಚ್ಛೇದದ ಕುರಿತು, ಯೇಸುವಿಗೆ ಈ ಪ್ರಶ್ನೆಯನ್ನು ಕೇಳಲಾಯಿತು: “ಒಬ್ಬನು ಯಾವದಾದರೂ ಒಂದು ಕಾರಣದಿಂದ ತನ್ನ ಹೆಂಡತಿಯನ್ನು ಬಿಟ್ಟುಬಿಡುವದು ಧರ್ಮವೋ ಹೇಗೆ?” ಮಾರ್ಕನ ವೃತ್ತಾಂತಕ್ಕೆ ಅನುಸಾರವಾಗಿ, ಯೇಸು ಅಂದದ್ದು: “[ವ್ಯಭಿಚಾರದ ಕಾರಣದಿಂದಲ್ಲದೆ] ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ತನ್ನ ಹೆಂಡತಿಗೆ ದ್ರೋಹಿಯಾಗಿ [ವಿರುದ್ಧವಾಗಿ, NW] ವ್ಯಭಿಚಾರ ಮಾಡಿದವನಾಗಿದ್ದಾನೆ; ಮತ್ತು ಹೆಂಡತಿಯು ತನ್ನ ಗಂಡನನ್ನು ಬಿಟ್ಟು [ವಿಚ್ಛೇದ ಮಾಡಿದ ಮೇಲೆ, NW] ಬೇರೊಬ್ಬನನ್ನು ಮದುವೆಮಾಡಿಕೊಂಡರೆ ಅವಳು ವ್ಯಭಿಚಾರ ಮಾಡಿದವಳಾಗಿದ್ದಾಳೆ.” (ಮಾರ್ಕ 10:10-12; ಮತ್ತಾಯ 19:3, 9) ಸರಳವಾಗಿ ನುಡಿದ ಆ ಮಾತುಗಳು ಸ್ತ್ರೀಯರ ಘನತೆಗಾಗಿ ಗೌರವವನ್ನು ತೋರಿಸಿದವು. ಅದು ಹೇಗೆ?
11. “ಹಾದರದ ಕಾರಣದಿಂದಲ್ಲದೆ” ಎಂಬ ಯೇಸುವಿನ ಮಾತುಗಳು ವಿವಾಹ ಬಂಧದ ಕುರಿತು ಏನನ್ನು ಸೂಚಿಸುತ್ತವೆ?
11 ಮೊದಲನೆಯದಾಗಿ, (ಮತ್ತಾಯನ ಸುವಾರ್ತೆಯಲ್ಲಿ ಕಂಡುಬರುವ), “ಹಾದರದ ಕಾರಣದಿಂದಲ್ಲದೆ” ಎಂಬ ಮಾತುಗಳಿಂದ ಮದುವೆಯ ಬಂಧವು ಹಗುರವಾಗಿ ವೀಕ್ಷಿಸುವಂತಹದಲ್ಲ ಯಾ ಸುಲಭವಾಗಿ ಮುರಿಯುವಂತಹದಲ್ಲವೆಂದು ಯೇಸು ಸೂಚಿಸಿದನು. ಆಗ ಜಾರಿಯಲ್ಲಿದ್ದ ರಬ್ಬಿಗಳ ಬೋಧನೆಯು, ಪತ್ನಿಯು ಒಂದು ಊಟವನ್ನು ಕೆಡಿಸಿದಂಥ ಯಾ ಅಪರಿಚಿತನೊಬ್ಬನೊಂದಿಗೆ ಮಾತಾಡಿದಂಥ ಅಲ್ಪ ಕಾರಣಗಳಿಗಾಗಿ ವಿಚ್ಛೇದವನ್ನು ಅನುಮತಿಸಿತ್ತು. ಅಷ್ಟೇಕೆ, ಒಬ್ಬ ಗಂಡನ ದೃಷ್ಟಿಯಲ್ಲಿ ಇನ್ನೊಬ್ಬ ಸ್ತ್ರೀಯು ಹೆಚ್ಚು ಸುಂದರಿಯಾಗಿ ಕಂಡರೂ ಕೂಡ ವಿಚ್ಛೇದಕ್ಕೆ ಅನುಮತಿಯಿತ್ತು! ಒಬ್ಬ ಬೈಬಲ್ ವಿದ್ವಾಂಸನು ಗಮನಿಸುವುದು: “ಯೇಸು ಹಾಗೆ ಮಾತಾಡಿ . . . ವಿವಾಹವನ್ನು ಅದು ಇರಬೇಕಾಗಿದ್ದ ಸ್ಥಾನಕ್ಕೆ ಪುನಃಸ್ಥಾಪಿಸಲು ಪ್ರಯತ್ನಿಸುವ ಮೂಲಕ ಸ್ತ್ರೀಯರಿಗೆ ಬೆಂಬಲವನ್ನು ಕೊಟ್ಟನು.” ಯಾವುದರಲ್ಲಿ ಸ್ತ್ರೀಯು ಭದ್ರತೆಯನ್ನು ಅನುಭವಿಸಬಲ್ಲಳೊ, ಆ ವಿವಾಹವು ಒಂದು ಶಾಶ್ವತ ಬಂಧವಾಗಿರಲೇಬೇಕೆಂಬುದು ನಿಶ್ಚಯ.—ಮಾರ್ಕ 10:6-9.
12. “ಹೆಂಡತಿಯ ವಿರುದ್ಧ ವ್ಯಭಿಚಾರ” ಎಂಬ ಮಾತುಗಳಿಂದ ಯಾವ ಹೊಸ ವಿಚಾರವನ್ನು ಯೇಸು ಮುಂತಂದನು?
12 ಎರಡನೆಯದಾಗಿ, “ಹೆಂಡತಿಯ ವಿರುದ್ಧ ವ್ಯಭಿಚಾರ” ಎಂಬ ಅಭಿವ್ಯಕ್ತಿಯ ಮೂಲಕ ಯೇಸು ರಬ್ಬಿಗಳ ನ್ಯಾಯಸ್ಥಾನಗಳಿಂದ ಗ್ರಹಿಸಲ್ಪಡದ ಒಂದು ನೋಟವನ್ನು—ತನ್ನ ಹೆಂಡತಿಯ ವಿರುದ್ಧವಾಗಿ ಗಂಡನು ವ್ಯಭಿಚಾರಗೈಯುವ ವಿಚಾರವನ್ನು ಮುಂತಂದನು. ದಿ ಎಕ್ಸ್ಪೊಸಿಟರ್ಸ್ ಬೈಬಲ್ ಕಾಮೆಂಟ್ರಿ ವಿವರಿಸುವುದು: “ರಬ್ಬಿಗಳ ಯೆಹೂದ್ಯ ಧರ್ಮದಲ್ಲಿ ಒಬ್ಬ ಸ್ತ್ರೀಯು ದಾಂಪತ್ಯ ದ್ರೋಹದ ಮೂಲಕ, ತನ್ನ ಗಂಡನ ವಿರುದ್ಧ ವ್ಯಭಿಚಾರ ಮಾಡಿದವಳಾಗುತ್ತಾಳೆ; ಮತ್ತು ಒಬ್ಬ ಪುರುಷನು ಇನ್ನೊಬ್ಬ ಪುರುಷನ ಹೆಂಡತಿಯೊಡನೆ ಲೈಂಗಿಕ ಸಂಬಂಧವನ್ನು ಹೊಂದಿರುವ ಮೂಲಕ ತನ್ನ ವಿರುದ್ಧವಾಗಿ ವ್ಯಭಿಚಾರ ಮಾಡಿದವನಾಗುತ್ತಾನೆ. ಆದರೆ ಪುರುಷನು ಏನೇ ಮಾಡಲಿ, ಅವನು ತನ್ನ ಹೆಂಡತಿಯ ವಿರುದ್ಧ ಎಂದೂ ವ್ಯಭಿಚಾರ ಮಾಡಿದವನಾಗುವುದಿಲ್ಲ. ಯೇಸು, ಗಂಡನನ್ನು ಹೆಂಡತಿಯ ಹಾಗೆ ಅದೇ ನೈತಿಕ ಹಂಗಿನ ಕೆಳಗೆ ಹಾಕುವ ಮೂಲಕ ಸ್ತ್ರೀಯರ ಗಣ್ಯತೆ ಮತ್ತು ಗೌರವವನ್ನು ಹೆಚ್ಚಿಸಿದನು.”
13. ಕ್ರೈಸ್ತ ವ್ಯವಸ್ಥೆಯ ಕೆಳಗೆ, ಪುರುಷ ಮತ್ತು ಸ್ತ್ರೀ ಇವರಿಬ್ಬರಿಗೂ ವಿವಾಹ ವಿಚ್ಛೇದದ ವಿಷಯದಲ್ಲಿ ಒಂದೇ ಮಟ್ಟವಿರುವುದೆಂದು ಯೇಸು ತೋರಿಸಿದ್ದು ಹೇಗೆ?
13 ಮೂರನೆಯದಾಗಿ, “ಹೆಂಡತಿಯು ತನ್ನ ಗಂಡನನ್ನು ವಿಚ್ಛೇದ ಮಾಡಿದ ಮೇಲೆ” ಎಂಬ ವಾಕ್ಸರಣಿಯಿಂದ ಒಬ್ಬ ದಾಂಪತ್ಯ ದ್ರೋಹಿ ಗಂಡನನ್ನು ವಿಚ್ಛೇದ ಮಾಡಲು ಒಬ್ಬ ಸ್ತ್ರೀಗೆ ಇರುವ ಹಕ್ಕನ್ನು ಯೇಸು ಗ್ರಹಿಸಿದನು. ಈ ಪದ್ಧತಿಯು ಜ್ಞಾತವೆಂದು ವ್ಯಕ್ತವಾದರೂ, ಆ ದಿನದಲ್ಲಿ ಯೆಹೂದ್ಯ ನಿಯಮದ ಕೆಳಗೆ ರೂಢಿಯಲ್ಲಿರಲಿಲ್ಲ.c “ಒಬ್ಬ ಸ್ತ್ರೀಯನ್ನು ಅವಳಿಗೆ ಇಷ್ಟವಿರಲಿ, ಇಲ್ಲದಿರಲಿ, ವಿಚ್ಛೇದ ಮಾಡಬಹುದು, ಆದರೆ ಪುರುಷನನ್ನು ಅವನ ಇಷ್ಟದ ಮೇರೆಗೆ ಮಾತ್ರ.” ಆದಾಗಲೂ ಯೇಸುವಿಗನುಸಾರ, ಕ್ರೈಸ್ತ ವ್ಯವಸ್ಥೆಯಲ್ಲಿ ಪುರುಷನಿಗೆ ಮತ್ತು ಸ್ತ್ರೀಗೆ ಇಬ್ಬರಿಗೂ ಒಂದೇ ಮಟ್ಟವು ಅನ್ವಯಿಸಲ್ಪಡುವುದು.
14. ತನ್ನ ಬೋಧನೆಗಳ ಮೂಲಕ ಯೇಸು ಏನನ್ನು ಪ್ರತಿಬಿಂಬಿಸಿದನು?
14 ಯೇಸುವಿನ ಬೋಧನೆಗಳು ಸ್ತ್ರೀಯರ ಕಲ್ಯಾಣಕ್ಕಾಗಿ ಆಳವಾದ ಚಿಂತೆಯನ್ನು ಸ್ಪಷ್ಟವಾಗಿಗಿ ಪ್ರಕಟಪಡಿಸುತ್ತವೆ. ಆದುದರಿಂದ, ಕೆಲವು ಸ್ತ್ರೀಯರು ತಮ್ಮ ಸ್ವಂತ ಸ್ವತ್ತುಗಳಿಂದ ಯೇಸುವಿನ ಅಗತ್ಯವನ್ನು ಉಪಚರಿಸುವಷ್ಟು ಆಳವಾದ ಪ್ರೀತಿಯನ್ನೇಕೆ ಅವನಿಗೆ ತೋರಿಸಿದರೆಂದು ತಿಳಿದುಕೊಳ್ಳಲು ಕಷ್ಟವಿಲ್ಲ. (ಲೂಕ 8:1-3) “ನಾನು ಹೇಳುವ ಬೋಧನೆಯು ನನ್ನದಲ್ಲ” ಎಂದು ಯೇಸು ಹೇಳಿದನು, “ನನ್ನನ್ನು ಕಳುಹಿಸಿದಾತನದು.” (ಯೋಹಾನ 7:16) ಆತನು ಏನು ಕಲಿಸಿದನೊ ಅದರಿಂದ ಯೇಸು ಸ್ತ್ರೀಯರಿಗಾಗಿ ಯೆಹೋವನ ಸ್ವಂತ ಕೋಮಲ ಪರಿಗಣನೆಯನ್ನು ಪ್ರತಿಬಿಂಬಿಸಿದನು.
“ಅವರಿಗೆ ಮರ್ಯಾದೆಯನ್ನು ಕೊಡಿರಿ”
15. ಗಂಡಂದಿರು ತಮ್ಮ ಪತ್ನಿಯರನ್ನು ಉಪಚರಿಸಬೇಕಾದ ರೀತಿಯ ಕುರಿತು ಅಪೊಸ್ತಲ ಪೇತ್ರನು ಬರೆದದ್ದೇನು?
15 ಯೇಸು ಸ್ತ್ರೀಯರೊಂದಿಗೆ ವ್ಯವಹರಿಸಿದ ರೀತಿಯನ್ನು ಅಪೊಸ್ತಲ ಪೇತ್ರನು ನೇರವಾಗಿ ವೀಕ್ಷಿಸಿದನು. ಸುಮಾರು 30 ವರ್ಷಗಳ ತರುವಾಯ, ಪೇತ್ರನು ಪತ್ನಿಯರಿಗೆ ಪ್ರೀತಿಯ ಬುದ್ಧಿವಾದವನ್ನು ನೀಡಿ ಆಮೇಲೆ ಬರೆದದ್ದು: “ಗಂಡಂದಿರೇ, . . . ಅವರೊಂದಿಗೆ ಜ್ಞಾನಾನುಸಾರವಾಗಿ ಜೀವಿಸುತ್ತಾ ಹೋಗಿರಿ, ಅವರು ಜೀವವರಕ್ಕೆ ನಿಮ್ಮೊಂದಿಗೆ ಬಾಧ್ಯರಾಗಿದ್ದಾರೆಂದು ತಿಳಿದು ಅವರಿಗೆ ಅಬಲೆಯಾದ ಸ್ತ್ರೀಯಂತೆ ಮಾನವನ್ನು ಸಲ್ಲಿಸಿರಿ. ಹೀಗೆ ನಡೆದರೆ ನಿಮ್ಮ ಪ್ರಾರ್ಥನೆಗಳಿಗೆ ಅಡ್ಡಿಯಿರುವುದಿಲ್ಲ.” (1 ಪೇತ್ರ 3:7, NW) “ಅವರಿಗೆ ಮಾನವನ್ನು ಸಲ್ಲಿಸಿರಿ” ಎಂಬ ಮಾತುಗಳಿಂದ ಪೇತ್ರನು ಅರ್ಥೈಸಿದ್ದೇನು?
16. (ಎ) “ಮರ್ಯಾದೆ” ಎಂಬುದಾಗಿ ತರ್ಜುಮೆಯಾದ ಗ್ರೀಕ್ ನಾಮಪದದ ಅರ್ಥವೇನು? (ಬಿ) ರೂಪಾಂತರದ ಸಮಯದಲ್ಲಿ ಯೆಹೋವನು ಯೇಸುವಿಗೆ ಹೇಗೆ ಮರ್ಯಾದೆ ತೋರಿಸಿದನು, ಮತ್ತು ಇದರಿಂದ ನಾವೇನನ್ನು ಕಲಿಯುತ್ತೇವೆ?
16 ಒಬ್ಬ ನಿಘಂಟುಕಾರನಿಗೆ ಅನುಸಾರವಾಗಿ, “ಮಾನ” (ಟಿಮೆ) ಎಂದು ತರ್ಜುಮೆಯಾದ ಗ್ರೀಕ್ ನಾಮಪದದ ಅರ್ಥ “ಬೆಲೆ, ಮೌಲ್ಯ, ಮರ್ಯಾದೆ, ಗೌರವ.” ಈ ಗ್ರೀಕ್ ಪದರೂಪಗಳು “ಕೊಡುಗೆಗಳು” ಮತ್ತು “ಅಮೂಲ್ಯ” ಎಂದು ತರ್ಜುಮೆಯಾಗಿವೆ. (ಅ. ಕೃತ್ಯಗಳು 28:10; 1 ಪೇತ್ರ 2:7) ಅದೇ ಶಬ್ದದ ಒಂದು ಪದರೂಪವನ್ನು 2 ಪೇತ್ರ 1:17 ರಲ್ಲಿ ನಾವು ಪರೀಕ್ಷಿಸುವಲ್ಲಿ, ಒಬ್ಬನನ್ನು ಸನ್ಮಾನಿಸುವುದರ ಅರ್ಥವೇನೆಂಬ ಒಳನೋಟವು ನಮಗೆ ಸಿಗುತ್ತದೆ. ಅಲ್ಲಿ ಯೇಸುವಿನ ರೂಪಾಂತರದ ಸಂಬಂಧದಲ್ಲಿ ಅವನು ಹೇಳಿದ್ದು: “ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ಮೆಚ್ಚಿದ್ದೇನೆ ಎಂಬಂಥ ವಾಣಿಯು ಸವೋತ್ಕೃಷ್ಟಪ್ರಭಾವದಿಂದ ಆತನಿಗೆ ಉಂಟಾದದರ್ದಲ್ಲಿ ಆತನು ತಂದೆಯಾದ [ಯೆಹೋವ] ದೇವರಿಂದ ಘನಮಾನಗಳನ್ನು ಹೊಂದಿದನಲ್ಲವೇ.” ಯೇಸುವಿನ ರೂಪಾಂತರದಲ್ಲಿ, ಯೆಹೋವನು ಯೇಸುವಿಗೆ ಮೆಚ್ಚಿಕೆಯನ್ನು ವ್ಯಕ್ತಪಡಿಸುವ ಮೂಲಕ ತನ್ನ ಮಗನಿಗೆ ಮರ್ಯಾದೆ ತೋರಿಸಿದನು, ಮತ್ತು ಬೇರೆಯವರಿಗೆ ಕೇಳಿಸುವಂತೆ ದೇವರು ಹಾಗೆ ಮಾಡಿದನು. (ಮತ್ತಾಯ 17:1-5) ಹೀಗಿರಲಾಗಿ, ತನ್ನ ಪತ್ನಿಗೆ ಮರ್ಯಾದೆಕೊಡುವ ಪುರುಷನು ಅವಳನ್ನು ಅಪಮಾನಪಡಿಸುವುದಿಲ್ಲ ಯಾ ತೃಣೀಕರಿಸುವುದಿಲ್ಲ. ಬದಲಿಗೆ, ತಾನು ಅವಳಿಗೆ ಮರ್ಯಾದೆ ತೋರಿಸುತ್ತೇನೆಂದು—ಖಾಸಗಿಯಾಗಿ ಮತ್ತು ಬಹಿರಂಗವಾಗಿ—ತನ್ನ ನುಡಿಗಳಿಂದಲೂ ನಡೆಗಳಿಂದಲೂ ಪ್ರದರ್ಶಿಸುತ್ತಾನೆ.—ಜ್ಞಾನೋಕ್ತಿ 31:28-30.
17. (ಎ) ಕ್ರೈಸ್ತ ಪತ್ನಿಗೆ ಮಾನವು ಸಲ್ಲತಕ್ಕದ್ದೇಕೆ? (ಬಿ) ಒಬ್ಬ ಪುರುಷನು ಸ್ತ್ರೀಗಿಂತ ತನಗೆ ದೇವರ ದೃಷ್ಟಿಯಲ್ಲಿ ಹೆಚ್ಚು ಅಮೂಲ್ಯ ಸ್ಥಾನವಿದೆಯೆಂದು ಏಕೆ ಭಾವಿಸಬಾರದು?
17 ಕ್ರೈಸ್ತ ಪತಿಗಳಿಂದ ತಮ್ಮ ಪತ್ನಿಯರಿಗೆ ಈ ಮರ್ಯಾದೆಯು ‘ಸಲ್ಲಿಸ’ ಲ್ಪಡಬೇಕು ಎಂದು ಪೇತ್ರನು ಹೇಳುತ್ತಾನೆ. ಅದು ಬರಿಯ ಅನುಗ್ರಹವಾಗಿ ಅಲ್ಲ, ಪತ್ನಿಯರ ನ್ಯಾಯಬದ್ಧ ಸಲಿಕ್ಲೆಯಾಗಿ ಕೊಡಲ್ಪಡಬೇಕಾಗಿದೆ. ಪತ್ನಿಯರು ಅಂತಹ ಮಾನಕ್ಕೆ ಪಾತ್ರರೇಕೆ? ಯಾಕಂದರೆ “ನೀವು ಸಹ ಅವರೊಂದಿಗೆ ಅಪಾತ್ರ ಜೀವಾನುಗ್ರಹದಲ್ಲಿ ಬಾಧ್ಯಸ್ಥರು” ಎಂದು ಪೇತ್ರನು ವಿವರಿಸುತ್ತಾನೆ. ಸಾ.ಶ. ಒಂದನೆಯ ಶತಮಾನದಲ್ಲಿ, ಪೇತ್ರನ ಪತ್ರಿಕೆಯನ್ನು ಪಡೆದ ಪುರುಷರು ಮತ್ತು ಸ್ತ್ರೀಯರು ಎಲ್ಲರೂ ಕ್ರಿಸ್ತನ ಸಹಬಾಧ್ಯರಾಗಿರಲು ಕರೆಯಲ್ಪಟ್ಟರು. (ರೋಮಾಪುರ 8:16, 17; ಗಲಾತ್ಯ 3:28) ಸಭೆಯಲ್ಲಿ ಅವರಿಗೆ ಒಂದೇ ವಿಧದ ಜವಾಬ್ದಾರಿಗಳಿರಲಿಲ್ಲವಾದರೂ, ಕಟ್ಟಕಡೆಗೆ ಅವರು ಪರಲೋಕದಲ್ಲಿ ಕ್ರಿಸ್ತನೊಂದಿಗೆ ಆಳುವುದರಲ್ಲಿ ಪಾಲಿಗರಾಗಲಿದ್ದರು. (ಪ್ರಕಟನೆ 20:6) ಇಂದು ಸಹ, ದೇವಜನರಲ್ಲಿ ಹೆಚ್ಚಿನವರಿಗೆ ಒಂದು ಐಹಿಕ ನಿರೀಕ್ಷೆಯಿರುವಾಗ, ಯಾವನೇ ಕ್ರೈಸ್ತ ಪುರುಷನು ಸಭೆಯಲ್ಲಿ ತನಗಿರುವ ಸುಯೋಗಗಳ ಕಾರಣ, ತನಗೆ ದೇವರ ದೃಷ್ಟಿಯಲ್ಲಿ ಸ್ತ್ರೀಯರಿಗಿಂತ ಹೆಚ್ಚು ಬೆಲೆಯಿದೆ ಎಂದು ಭಾವಿಸುವುದು ಗಂಭೀರವಾದ ತಪ್ಪಾಗಿರುವುದು. (ಹೋಲಿಸಿ ಲೂಕ 17:10.) ಪುರುಷರಿಗೂ ಸ್ತ್ರೀಯರಿಗೂ ದೇವರ ಮುಂದೆ ಸಮಾನವಾದ ಆತ್ಮಿಕ ನಿಲುವು ಇದೆ, ಯಾಕಂದರೆ ಯೇಸುವಿನ ಯಜ್ಞಾರ್ಪಣೆಯ ಮರಣವು, ಪುರುಷರಿಗೆ ಮತ್ತು ಸ್ತ್ರೀಯರಿಗೆ ಇವರಿಬ್ಬರಿಗೂ ಒಂದೇ ಸದವಕಾಶವನ್ನು—ಅಂದರೆ ನಿತ್ಯಜೀವದ ನೋಟದೊಂದಿಗೆ ಪಾಪ ಮತ್ತು ಮರಣದ ಶಾಪದಿಂದ ಮುಕ್ತರಾಗಿ ಮಾಡಲ್ಪಡುವುದನ್ನು—ತೆರೆದಿದೆ.—ರೋಮಾಪುರ 6:23.
18. ಒಬ್ಬ ಗಂಡನು ತನ್ನ ಹೆಂಡತಿಗೆ ಮರ್ಯಾದೆಕೊಡಲು ಯಾವ ಒತ್ತಯಾಪಡಿಸುವ ಕಾರಣವನ್ನು ಪೇತ್ರನ್ನು ಕೊಡುತ್ತಾನೆ?
18 “[ಅವನ] ಪ್ರಾರ್ಥನೆಗಳು ತಡೆಯಲ್ಪಡದಂತೆ,” ಒಬ್ಬ ಗಂಡನು ತನ್ನ ಪತ್ನಿಗೆ ಮಾನ ಸಲ್ಲಿಸಬೇಕೆಂಬದಕ್ಕೆ ಇನ್ನೊಂದು ಒತ್ತಯಾಪಡಿಸುವ ಕಾರಣವನ್ನು ಪೇತ್ರನು ಕೊಡುತ್ತಾನೆ. “ತಡೆಯಲ್ಪಡದಂತೆ” ಎಂಬ ಅಭಿವ್ಯಕ್ತಿಯು “ನಡುವೆ ಛೇದಿಸು” ಎಂಬ ಅಕ್ಷರಶಃ ಅರ್ಥವಿರುವ ಗ್ರೀಕ್ ಕ್ರಿಯಾಪದ (ಎನ್ಕಾಪ್ಟೊ) ದಿಂದ ಬರುತ್ತದೆ. ವೈನ್ಸ್ ಎಕ್ಸ್ಪೊಸಿಟರಿ ಡಿಕ್ಷನರಿ ಆಫ್ ದ ನ್ಯೂ ಟೆಸ್ಟಮೆಂಟ್ ವರ್ಡ್ಸ್ಗೆ ಅನುಸಾರವಾಗಿ, ಅದು “ಹಾದಿಯನ್ನು ನಾಶಮಾಡುವ ಮೂಲಕ ಅಥವಾ ದಾರಿಯಲ್ಲಿ ನೇರವಾಗಿ ಅಡಚಣೆಯನ್ನು ಹಾಕುವ ಮೂಲಕ ಜನರನ್ನು ತಡೆಯುವುದಕ್ಕೆ” ಬಳಸಲ್ಪಟ್ಟಿದೆ. ಆದುದರಿಂದ, ಯಾವ ಗಂಡನು ತನ್ನ ಪತ್ನಿಗೆ ಮಾನವನ್ನು ಸಲ್ಲಿಸಲು ತಪ್ಪುತ್ತಾನೊ, ಅವನು ತನ್ನ ಪ್ರಾರ್ಥನೆಗಳ ಮತ್ತು ದೇವರ ಆಲೈಸುವಿಕೆಯ ನಡುವೆ ಒಂದು ತಡೆಗಟ್ಟನ್ನು ಕಂಡಾನು. ದೇವರನ್ನು ಸಮೀಪಿಸಲು ತಾನು ಅಯೋಗ್ಯನು ಅಥವಾ ಯೆಹೋವನು ಕಿವಿಗೊಡದಿರುವ ಪ್ರವೃತ್ತಿ ತೋರಿಸ್ಯಾನು ಎಂದು ಒಬ್ಬ ಮನುಷ್ಯನು ಭಾವಿಸಬಹುದು. ಪುರುಷರು ಸ್ತ್ರೀಯರನ್ನು ಉಪಚರಿಸುವ ವಿಧಾನದ ಕುರಿತು ಯೆಹೋವನು ಮಹತ್ತಾಗಿ ಚಿಂತಿಸುತ್ತಾನೆಂಬುದು ಸುಸ್ಪಷ್ಟ.—ಹೋಲಿಸಿ ಪ್ರಲಾಪಗಳು 3:44.
19. ಪುರುಷರು ಮತ್ತು ಸ್ತ್ರೀಯರು ಸಭೆಯಲ್ಲಿ ಪರಸ್ಪರ ಸನ್ಮಾನದಿಂದ ಒಂದುಗೂಡಿ ಹೇಗೆ ಸೇವೆಮಾಡಬಹುದು?
19 ಮರ್ಯಾದೆಯನ್ನು ತೋರಿಸುವ ಜವಾಬ್ದಾರಿ ಕೇವಲ ಗಂಡಂದಿರದ್ದಾಗಿರುವುದಿಲ್ಲ. ಅವಳನ್ನು ಪ್ರೀತಿಯಿಂದ ಮತ್ತು ಗೌರವದಿಂದ ಉಪಚರಿಸುವ ಮೂಲಕ ಗಂಡನು ತನ್ನ ಹೆಂಡತಿಗೆ ಮರ್ಯಾದೆಯನ್ನು ತೋರಿಸಬೇಕಾದರೂ, ಹೆಂಡತಿಯು ಗಂಡನಿಗೆ ಅಧೀನಳಾಗಿರುವ ಮೂಲಕ ಮತ್ತು ಆಳವಾದ ಗೌರವವನ್ನು ತೋರಿಸುವ ಮೂಲಕ ಗಂಡನಿಗೆ ಮರ್ಯಾದೆಯನ್ನು ಕೊಡಬೇಕು. (1 ಪೇತ್ರ 3:1-6) ಅದಲ್ಲದೆ, ‘ಒಬ್ಬರಿಗೊಬ್ಬರು ಮಾನವನ್ನು’ ತೋರಿಸಲು, ಪೌಲನು ಕ್ರೈಸ್ತರಿಗೆ ಪ್ರಬೋಧಿಸಿದನು. (ರೋಮಾಪುರ 12:10) ಇದು ಸಭೆಯಲ್ಲಿನ ಪುರುಷರಿಗೆ ಮತ್ತು ಸ್ತ್ರೀಯರಿಗೆ ಪರಸ್ಪರ ಗೌರವದಿಂದ ಒಂದುಗೂಡಿ ಸೇವೆಮಾಡಲು ಕೊಡಲಾದ ಕರೆಯಾಗಿದೆ. ಅಂತಹ ಮನೋಭಾವವು ನೆಲೆಸುವಾಗ, ನಾಯಕತ್ವವನ್ನು ವಹಿಸುವವರ ಅಧಿಕಾರವನ್ನು ಕಡೆಗಣಿಸುವ ರೀತಿಯಲ್ಲಿ ಸ್ತ್ರೀಯರು ಮಾತಾಡರು. ಬದಲಿಗೆ ಅವರು ಹಿರಿಯರನ್ನು ಬೆಂಬಲಿಸಿ ಅವರೊಂದಿಗೆ ಸಹಕರಿಸುವರು. (1 ಕೊರಿಂಥ 14:34, 35; ಇಬ್ರಿಯ 13:17) ಕ್ರೈಸ್ತ ಮೇಲ್ವಿಚಾರಕರಾದರೊ ತಮ್ಮ ವಿಷಯದಲ್ಲಿ, “ವೃದ್ಧಸ್ತ್ರೀಯರನ್ನು ತಾಯಿಗಳೆಂದೂ ಯೌವನಸ್ತ್ರೀಯರನ್ನು ಪೂರ್ಣಶುದ್ಧಭಾವದಿಂದ ಅಕ್ಕತಂಗಿಯರೆಂದೂ ಎಣಿಸಿ” ಉಪಚರಿಸುವರು. (1 ತಿಮೊಥೆಯ 5:1, 2) ಹಿರಿಯರು ಸುಜ್ಞಾನದಿಂದ ತಮ್ಮ ಕ್ರೈಸ್ತ ಸಹೋದರಿಯರ ಸರ್ವಕ್ಕೆ ದಯೆಯುಳ್ಳ ಪರಿಗಣನೆಯನ್ನು ಕೊಡುವರು. ಹೀಗೆ, ದೇವಪ್ರಭುತ್ವ ತಲೆತನಕ್ಕಾಗಿ ತನ್ನ ಗಣ್ಯತೆಯನ್ನು ಸಹೋದರಿಯೊಬ್ಬಳು ತೋರಿಸುವಾಗ, ಮತ್ತು ಗೌರವಪೂರ್ವಕವಾಗಿ ಒಂದು ಪ್ರಶ್ನೆಯನ್ನು ಕೇಳುವಾಗ ಅಥವಾ ಗಮನವನ್ನು ಕೇಳಿಕೊಳ್ಳುವ ಯಾವುದಾದರೂ ವಿಷಯವನ್ನು ಎತ್ತಿಹೇಳುವಾಗಲೂ, ಹಿರಿಯರು ಅವಳ ಸಮಸ್ಯೆಗೆ ಅಥವಾ ಪ್ರಶ್ನೆಗೆ ಸಂತೋಷಕರವಾಗಿ ಪರಿಗಣನೆಯನ್ನು ಕೊಡುವರು.
20. ಪವಿತ್ರ ಶಾಸ್ತ್ರೀಯ ದಾಖಲೆಗನುಸಾರ, ಸ್ತ್ರೀಯರು ಹೇಗೆ ಉಪಚರಿಸಲ್ಪಡಬೇಕು?
20 ಏದೆನಿನಲ್ಲಿ ಪಾಪದ ಪ್ರವೇಶವಾದಂದಿನಿಂದ, ಅನೇಕ ಸಂಸ್ಕೃತಿಗಳ ಸ್ತ್ರೀಯರು ಅವಮಾನದ ಸ್ಥಾನಕ್ಕೆ ತಳ್ಳಲ್ಪಟ್ಟಿರುತ್ತಾರೆ. ಆದರೆ ಯೆಹೋವನು ಮೂಲತಃ ಅವರಿಗಾಗಿ ಅನುಭವಿಸಲು ಉದ್ದೇಶಿಸಿದ್ದ ಉಪಚಾರವು ಆ ರೀತಿಯದಲ್ಲ. ಸ್ತ್ರೀಯರೆಡೆಗೆ ಯಾವ ಸಾಂಸ್ಕೃತಿಕ ನೋಟವೆ ನೆಲೆಸಿರಲಿ, ದೇವಭಕ್ತೆಯರಾದ ಸ್ತ್ರೀಯರು ಮಾನಮರ್ಯಾದೆಯಿಂದ ಉಪಚರಿಸಲ್ಪಡಬೇಕೆಂದು ಹೀಬ್ರು ಮತ್ತು ಕ್ರೈಸ್ತ ಗ್ರೀಕ್ ಶಾಸ್ತ್ರ ಇವೆರಡೂ ಸ್ಪಷ್ಟವಾಗಿಗಿ ತೋರಿಸುತ್ತವೆ. ಅದು ಅವರ ದೇವದತ್ತ ಸಲಿಕ್ಲೆ.
[ಅಧ್ಯಯನ ಪ್ರಶ್ನೆಗಳು]
a ದ ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ ಬೈಬಲ್ ಎನ್ಸೈಕ್ಲೊಪೀಡಿಯ ವಿವರಿಸುವುದು: “ಪುರುಷ ಅತಿಥಿಗಳೊಂದಿಗೆ ಸ್ತ್ರೀಯರು ಊಟಮಾಡಲಿಲ್ಲ, ಮತ್ತು ಪುರುಷರು ಸ್ತ್ರೀಯರೊಂದಿಗೆ ಮಾತಾಡುವುದರಿಂದ ನಿರುತ್ತೇಜನಗೊಳಿಸಲ್ಪಟ್ಟಿದ್ದರು. . . . ಒಂದು ಸಾರ್ವಜನಿಕ ಸ್ಥಳದಲ್ಲಿ ಸ್ತ್ರೀಯೊಂದಿಗಿನ ಸಂಭಾಷಣೆಯು ವಿಶೇಷವಾಗಿ ಅಶ್ಲೀಲವಾಗಿತ್ತು.” ರಬ್ಬಿಗಳ ಬೋಧನೆಗಳ ಒಂದು ಸಂಗ್ರಹವಾದ ದ ಜ್ಯೂವಿಷ್ ಮಿಷ್ನ ಸಲಹೆ ನೀಡಿದ್ದು: “ಸ್ತ್ರೀಜಾತಿಯೊಂದಿಗೆ ಹೆಚ್ಚು ಮಾತಾಡಬೇಡ. . . . ಯಾರು ಸ್ತ್ರೀಜಾತಿಯೊಂದಿಗೆ ಹೆಚ್ಚು ಮಾತಾಡುತ್ತಾನೊ ಅವನು ತನ್ನ ಮೇಲೆ ಕೆಡುಕನ್ನು ತಂದುಕೊಳ್ಳುತ್ತಾನೆ ಮತ್ತು ನಿಯಮದ ಅಧ್ಯಯನವನ್ನು ಅಲಕ್ಷಿಸುತ್ತಾನೆ ಮತ್ತು ಕೊನೆಗೆ ಗೆಹೆನಕ್ಕೆ ಬಾಧ್ಯನಾಗುವನು.”—ಎಬೊತ್ 1:5.
b ಕ್ರಿಸ್ತನ ಕಾಲದಲ್ಲಿ ಪಲೆಸ್ತೀನ (ಇಂಗ್ಲಿಷ್) ಎಂಬ ಪುಸ್ತಕವು ಹೇಳುವುದು: “ಕೆಲವು ವಿದ್ಯಮಾನಗಳಲ್ಲಿ, ಸ್ತ್ರೀಯು ಬಹುಮಟ್ಟಿಗೆ ದಾಸನ ಮಟ್ಟದಲ್ಲಿ ಹಾಕಲ್ಪಡುತ್ತಿದ್ದಳು. ಉದಾಹರಣೆಗೆ, ತನ್ನ ಗಂಡನ ಮರಣವು ನಿಜವೆಂದು ಬರೇ ದೃಢೀಕರಿಸಿ ಹೇಳುವ ಹೊರತು, ನ್ಯಾಯಾಲಯದಲ್ಲಿ ಸಾಕ್ಷಿಕೊಡಲು ಅವಳು ಶಕ್ತಳಾಗಿರಲಿಲ್ಲ.” ಯಾಜಕಕಾಂಡ 5:1ಕ್ಕೆ ಸೂಚಿಸುತ್ತಾ ದ ಮಿಷ್ನ ವಿವರಿಸುವುದು: “‘ಪ್ರಮಾಣಮಾಡಿ ಸಾಕ್ಷಿಕೊಡುವ’ [ಕುರಿತ ನಿಯಮ] ಪುರುಷರಿಗೆ ಅನ್ವಯಿಸುತ್ತದೆ, ಸ್ತ್ರೀಯರಿಗಲ್ಲ.”—ಶಿಬೌತ್ 4:1.
c ಒಂದನೆಯ ಶತಮಾನದ ಯೆಹೂದಿ ಇತಿಹಾಸಗಾರ ಜೊಸೀಫಸ್ ವರದಿಸುವುದೇನಂದರೆ, ಅರಸ ಹೆರೋದನ ಸೋದರಿ ಸಲೋಮಿ ತನ್ನ ಗಂಡನಿಗೆ “ಅವರ ವಿವಾಹವನ್ನು ವಿಚ್ಛೇದಿಸುವ ದಸ್ತೈವಜನ್ನು ಕಳುಹಿಸಿದಳು. ಇದು ಯೆಹೂದ್ಯ ನಿಯಮಕ್ಕೆ ಹೊಂದಿಕೆಯಲ್ಲಿರಲಿಲ್ಲ ಯಾಕಂದರೆ ಇದನ್ನು ಮಾಡಲು ಪುರುಷನು (ಮಾತ್ರ) ನಮ್ಮಿಂದ ಪರವಾನಗಿ ಪಡೆಯುತ್ತಾನೆ.”—ಜ್ಯೂವಿಷ್ ಆ್ಯಂಟಿಕಿಟ್ವೀಸ್, XV, 259 [vii, 10].
ನಿಮ್ಮ ಉತ್ತರವೇನು?
◻ ಯೇಸು ಸ್ತ್ರೀಯರನ್ನು ಮಾನ ಮತ್ತು ಮರ್ಯಾದೆಯಿಂದ ಉಪಚರಿಸಿದನೆಂದು ಯಾವ ಉದಾಹರಣೆಗಳು ತೋರಿಸುತ್ತವೆ?
◻ ಯೇಸುವಿನ ಬೋಧನೆಗಳು ಸ್ತ್ರೀಯರ ಘನತೆಗಾಗಿ ಗೌರವವನ್ನು ಹೇಗೆ ತೋರಿಸಿದವು?
◻ ಒಬ್ಬ ಗಂಡನು ತನ್ನ ಕ್ರೈಸ್ತ ಪತ್ನಿಗೆ ಮರ್ಯಾದೆಯನ್ನು ಸಲ್ಲಿಸಬೇಕು ಏಕೆ?
◻ ಮರ್ಯಾದೆ ತೋರಿಸುವ ಯಾವ ಹಂಗು ಕ್ರೈಸ್ತರೆಲ್ಲರಿಗೆ ಇದೆ?
[ಪುಟ 17 ರಲ್ಲಿರುವ ಚಿತ್ರ]
ಅವರಿಗೆ ಹರ್ಷವಾಗುವಂತೆ, ತನ್ನ ಸಹೋದರರಿಗೆ ಅವರು ಸಾಕ್ಷಿಕೊಡುವಂತೆ ಮಾಡಿದ, ಪುನರುತಿತ್ಥ ಯೇಸುವನ್ನು ನೋಡಿದವರಲ್ಲಿ ದೇವಭಕ್ತೆಯರಾದ ಸ್ತ್ರೀಯರು ಮೊದಲಿಗರಾಗಿದ್ದರು