ಯೆಹೋವನ ಪ್ರೀತಿಯ ಹಸ್ತದಡಿಯಲ್ಲಿ ಸೇವೆಸಲ್ಲಿಸುವುದು
ಲಾಂಪ್ರೊಸ್ ಜುಂಪೊಸ್ ಹೇಳಿದಂತೆ
ನಾನು ಒಂದು ನಿರ್ಧಾರಕ ಆಯ್ಕೆಯನ್ನು ಎದುರಿಸಿದೆ: ನನ್ನ ಐಶ್ವರ್ಯವಂತ ಚಿಕ್ಕಪ್ಪನ ವಿಸ್ತೃತ ಸ್ಥಿರಾಸ್ತಿ ಹಿಡುವಳಿಗಳ ಮ್ಯಾನೇಜರ್ ಆಗುವ ನೀಡಿಕೆಯನ್ನು ಸ್ವೀಕರಿಸುವುದು—ಹೀಗೆ ನನ್ನ ಕುಟುಂಬದ ಹಣಕಾಸಿನ ಸಮಸ್ಯೆಗಳನ್ನು ಬಗೆಹರಿಸುವುದು—ಅಥವಾ ಯೆಹೋವ ದೇವರ ಒಬ್ಬ ಪೂರ್ಣ ಸಮಯದ ಶುಶ್ರೂಷಕನಾಗುವುದು. ನಾನು ಅಂತಿಮವಾಗಿ ಮಾಡಿದಂತಹ ನಿರ್ಣಯವನ್ನು ಪ್ರಭಾವಿಸಿದಂತಹ ಅಂಶಗಳನ್ನು ವಿವರಿಸುವಂತೆ ನನ್ನನ್ನು ಅನುಮತಿಸಿರಿ.
ನಾನು 1919ರಲ್ಲಿ, ಗ್ರೀಸ್ನ ವೊಲೊಸ್ ಎಂಬ ಪಟ್ಟಣದಲ್ಲಿ ಜನಿಸಿದೆ. ನನ್ನ ತಂದೆ ಪುರುಷರ ತೊಡುಗೆಯನ್ನು ಮಾರುತ್ತಿದ್ದರು, ಮತ್ತು ನಾವು ಭೌತಿಕ ಸಮೃದ್ಧಿಯನ್ನು ಅನುಭವಿಸಿದೆವು. ಆದರೆ 1920ಗಳ ಕೊನೆ ಭಾಗದಲ್ಲಿನ ಆರ್ಥಿಕ ಕುಸಿತದ ಫಲಿತಾಂಶವಾಗಿ, ತಂದೆಯವರು ದಿವಾಳಿತನಕ್ಕೆ ಒತ್ತಾಯಿಸಲ್ಪಟ್ಟು ತಮ್ಮ ಅಂಗಡಿಯನ್ನು ಕಳೆದುಕೊಂಡರು. ನನ್ನ ತಂದೆಯ ಮುಖದ ಮೇಲಿನ ಹತಾಶೆಯ ನೋಟವನ್ನು ನಾನು ನೋಡಿದಾಗಲೆಲ್ಲಾ ನನಗೆ ದುಃಖವಾಗುತ್ತಿತ್ತು.
ಸ್ಪಲ್ಪ ಸಮಯದ ವರೆಗೆ ನನ್ನ ಕುಟುಂಬವು ಕಡು ಬಡತನದಲ್ಲಿ ಜೀವಿಸಿತು. ಆಹಾರದ ಪಡಿತರಗಳಿಗಾಗಿ ಸಾಲಿನಲ್ಲಿ ನಿಲ್ಲಲು, ಪ್ರತಿ ದಿನ ನಾನು ಶಾಲೆಯಿಂದ ಒಂದು ತಾಸು ಮುಂಚೆಯೇ ಹೊರಡುತ್ತಿದ್ದೆ. ಆದರೂ, ನಮ್ಮ ಬಡತನದ ಹೊರತೂ ನಾವು ಪ್ರಶಾಂತವಾದೊಂದು ಕುಟುಂಬ ಜೀವಿತವನ್ನು ಆನಂದಿಸಿದೆವು. ಒಬ್ಬ ವೈದ್ಯನಾಗುವುದು ನನ್ನ ಕನಸಾಗಿತ್ತು, ಆದರೆ ನನ್ನ ನಡು ಹದಿವಯಸ್ಸಿನಲ್ಲಿ ನಾನು ಶಾಲೆಯನ್ನು ಬಿಟ್ಟು, ನನ್ನ ಕುಟುಂಬವು ಬದುಕುಳಿಯುವಂತೆ ಸಹಾಯ ಮಾಡಲಿಕ್ಕಾಗಿ ಕೆಲಸ ಮಾಡಲು ಆರಂಭಿಸಬೇಕಾಯಿತು.
ಅನಂತರ, IIನೇ ಜಾಗತಿಕ ಯುದ್ಧದ ಸಮಯದಲ್ಲಿ, ಜರ್ಮನರು ಮತ್ತು ಇಟಾಲಿಯನರು ಗ್ರೀಸ್ ಅನ್ನು ಆಕ್ರಮಿಸಿದರು, ಮತ್ತು ತೀವ್ರ ಕ್ಷಾಮವು ಬಂತು. ಅನೇಕ ಸಲ ನಾನು, ಸ್ನೇಹಿತರು ಮತ್ತು ಪರಿಚಯಸ್ಥರು ಬೀದಿಗಳಲ್ಲಿ ಹಸಿವಿನಿಂದ ಸಾಯುತ್ತಿರುವುದನ್ನು ಕಂಡೆ—ನಾನು ಎಂದಿಗೂ ಮರೆಯಲಾರದ ಒಂದು ಘೋರ ದೃಶ್ಯ! ಒಮ್ಮೆ, ನಮ್ಮ ಕುಟುಂಬವು, ಗ್ರೀಸ್ನಲ್ಲಿ ಪ್ರಧಾನ ಆಹಾರವಾಗಿರುವ, ರೊಟ್ಟಿಯಿಲ್ಲದೆ 40 ದಿನಗಳನ್ನು ಕಳೆಯಿತು. ಬದುಕುಳಿಯಲು ನನ್ನ ಅಣ್ಣ ಮತ್ತು ನಾನು ಹತ್ತಿರದಲ್ಲಿದ್ದ ಹಳ್ಳಿಗಳಿಗೆ ಹೋಗಿ ಸ್ನೇಹಿತರು ಮತ್ತು ಸಂಬಂಧಿಕರಿಂದ ಆಲೂಗಡ್ಡೆಗಳನ್ನು ಪಡೆದೆವು.
ಅಸ್ವಸ್ಥತೆಯು ಒಂದು ಆಶೀರ್ವಾದವಾಗಿ ಪರಿಣಮಿಸುತ್ತದೆ
1944ರ ಆದಿ ಭಾಗದಲ್ಲಿ, ಒಂದು ರೀತಿಯ ಶ್ವಾಸಕೋಶಾವರಣದ ಊರಿಯೂತದಿಂದಾಗಿ ನಾನು ತುಂಬ ಅಸ್ವಸ್ಥನಾದೆ. ಆಸ್ಪತ್ರೆಯಲ್ಲಿ ನನ್ನ ಮೂರು ತಿಂಗಳ ತಂಗುವಿಕೆಯ ಸಮಯದಲ್ಲಿ, ಒಬ್ಬ ಸೋದರಬಂಧುವು ನನಗೆ ಎರಡು ಪುಸ್ತಿಕೆಗಳನ್ನು ತಂದು ಹೇಳಿದ್ದು: “ಇವುಗಳನ್ನು ಓದು; ನಿನಗೆ ಅವು ಇಷ್ಟವಾಗುವವು ಎಂದು ನನಗೆ ನಿಶ್ಚಯವಿದೆ.” ದೇವರು ಯಾರು? ಮತ್ತು ಸಂರಕ್ಷಣೆ (ಇಂಗ್ಲಿಷ್) ಎಂಬ ಆ ಪುಸ್ತಿಕೆಗಳು, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿದ್ದವು. ಅವುಗಳನ್ನು ಓದಿದ ನಂತರ, ನಾನು ಅದರ ಒಳವಿಷಯಗಳನ್ನು ಜೊತೆ ರೋಗಿಗಳೊಂದಿಗೆ ಹಂಚಿಕೊಂಡೆ.
ಆಸ್ಪತ್ರೆಯನ್ನು ಬಿಟ್ಟ ನಂತರ, ನಾನು ಯೆಹೋವನ ಸಾಕ್ಷಿಗಳ ವೊಲೊಸ್ ಸಭೆಯೊಂದಿಗೆ ಸಹವಾಸಿಸಲು ಆರಂಭಿಸಿದೆ. ಆದಾಗಲೂ, ಒಂದು ತಿಂಗಳ ವರೆಗೆ ನಾನು ನನ್ನ ಮನೆಯಲ್ಲಿ ಒಬ್ಬ ಹೊರರೋಗಿಯಾಗಿ ನಿರ್ಬಂಧಿಸಲ್ಪಟ್ಟಿದ್ದೆ ಮತ್ತು ಒಂದು ದಿನದಲ್ಲಿ ನಾನು ಆರರಿಂದ ಎಂಟು ತಾಸುಗಳ ವರೆಗೆ ದ ವಾಚ್ಟವರ್ ಪತ್ರಿಕೆಯ ಹಳೆಯ ಸಂಚಿಕೆಗಳನ್ನು ಹಾಗೂ ವಾಚ್ ಟವರ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಂತಹ ಇತರ ಪ್ರಕಾಶನಗಳನ್ನು ಓದುತ್ತಿದ್ದೆ. ಫಲಸ್ವರೂಪವಾಗಿ, ನನ್ನ ಆತ್ಮಿಕ ಬೆಳವಣಿಗೆಯು ತೀರ ಕ್ಷಿಪ್ರವಾಗಿತ್ತು.
ಅಪಾಯದಂಚಿನ ಪಾರಾಗುವಿಕೆಗಳು
1944ರ ಮಧ್ಯ ಭಾಗದಲ್ಲಿ ಒಂದು ದಿನ, ನಾನು ವೊಲೊಸ್ನಲ್ಲಿನ ಒಂದು ಉದ್ಯಾನವನದ ಬೆಂಚಿನ ಮೇಲೆ ಕುಳಿತುಕೊಂಡಿದ್ದೆ. ಒಮ್ಮೆಲೇ, ಜರ್ಮನ್ ಆಕ್ರಮಣ ಸೈನ್ಯವನ್ನು ಬೆಂಬಲಿಸುತ್ತಿದ್ದ ಒಂದು ಪಾರಾಮಿಲಿಟರಿ ಗುಂಪು ಆ ಸ್ಥಳವನ್ನು ಸುತ್ತುವರಿಯಿತು ಮತ್ತು ಉಪಸ್ಥಿತರಿದ್ದವರೆಲ್ಲರನ್ನು ದಸ್ತಗಿರಿ ಮಾಡಿತು. ತಂಬಾಕು ಶೇಖರಿಸುವ ಒಂದು ಮನೆಯಲ್ಲಿ ಇದ್ದಂತಹ ಗೆಸ್ಟಾಪೊ ಮುಖ್ಯಕಾರ್ಯಾಲಯಕ್ಕೆ ನಮ್ಮಲ್ಲಿ ಸುಮಾರು ಎರಡು ಡಸನ್ ಮಂದಿ ಬೀದಿಗಳ ಮೂಲಕ ನಡೆಸಲ್ಪಟ್ಟೆವು.
ಕೆಲವು ನಿಮಿಷಗಳ ಬಳಿಕ, ಯಾರೋ ಒಬ್ಬರು ನನ್ನ ಹೆಸರನ್ನು ಮತ್ತು ಉದ್ಯಾನವನದಲ್ಲಿ ನಾನು ಯಾರೊಂದಿಗೆ ಮಾತಾಡುತ್ತಿದ್ದೆನೋ ಆ ವ್ಯಕ್ತಿಯ ಹೆಸರನ್ನು ಕರೆಯುತ್ತಿರುವುದನ್ನು ನಾನು ಕೇಳಿಸಿಕೊಂಡೆ. ಒಬ್ಬ ಗ್ರೀಕ್ ಸೈನ್ಯಾಧಿಕಾರಿಯು ನಮ್ಮನ್ನು ಕರೆದನು ಮತ್ತು ನಾವು ಸೈನಿಕರೊಂದಿಗೆ ನಡೆಸಲ್ಪಡುವುದನ್ನು ನನ್ನ ಸಂಬಂಧಿಕರಲ್ಲಿ ಒಬ್ಬರು ನೋಡಿದಾಗ, ನಾವು ಯೆಹೋವನ ಸಾಕ್ಷಿಗಳಾಗಿದ್ದೆವೆಂಬುದನ್ನು ಅವರು ತನಗೆ ತಿಳಿಸಿದರೆಂದು ಅವನು ನಮಗೆ ಹೇಳಿದನು. ನಾವು ಮನೆಗೆ ಹೋಗಲು ಸ್ವತಂತ್ರರಾಗಿದ್ದೇವೆಂದು ಆ ಗ್ರೀಕ್ ಅಧಿಕಾರಿಯು ಅನಂತರ ಹೇಳಿದನು ಮತ್ತು ನಾವು ಒಂದು ವೇಳೆ ಪುನಃ ದಸ್ತಗಿರಿ ಮಾಡಲ್ಪಟ್ಟಲ್ಲಿ ಉಪಯೋಗಿಸಲಿಕ್ಕಾಗಿ, ಅವನು ತನ್ನ ಅಧಿಕೃತ ಕಾರ್ಡನ್ನು ನಮಗೆ ಕೊಟ್ಟನು.
ಗ್ರೀಕ್ ಪ್ರತಿಭಟನಾ ಹೋರಾಟಗಾರರಿಂದ ಇಬ್ಬರು ಜರ್ಮನ್ ಸೈನಿಕರ ಕೊಲ್ಲುವಿಕೆಗೆ ಪ್ರತೀಕಾರವಾಗಿ, ಆ ಜರ್ಮನರು ದಸ್ತಗಿರಿ ಮಾಡಲ್ಪಟ್ಟವರಲ್ಲಿ ಹೆಚ್ಚಿನವರನ್ನು ಹತಿಸಿದ್ದರೆಂದು ಮರುದಿನ ನಮಗೆ ತಿಳಿದುಬಂತು. ಪ್ರಾಯಶಃ ಮರಣದೊಳಗಿಂದ ಬಿಡಿಸಲ್ಪಟ್ಟಿದ್ದಲ್ಲದೆ, ಆ ಸಂದರ್ಭದಲ್ಲಿ ಕ್ರೈಸ್ತ ತಾಟಸ್ಥ್ಯದ ಮೌಲ್ಯವನ್ನೂ ನಾನು ಕಲಿತೆ.
1944ರ ಮಾಗಿಕಾಲದಲ್ಲಿ, ನಾನು ನೀರಿನ ದೀಕ್ಷಾಸ್ನಾನದ ಮೂಲಕ ಯೆಹೋವನಿಗೆ ನನ್ನ ಸಮರ್ಪಣೆಯನ್ನು ಸಂಕೇತಿಸಿದೆ. ಮುಂದಿನ ಬೇಸಗೆಕಾಲದಲ್ಲಿ, ನಾನು ಎಲ್ಲಿ ನನ್ನ ಆರೋಗ್ಯವನ್ನು ಪೂರ್ಣವಾಗಿ ಪುನಃ ಗಳಿಸಸಾಧ್ಯವಿತ್ತೋ, ಆ ಪರ್ವತಗಳಲ್ಲಿದ್ದ ಸ್ಕ್ಲಿತ್ರೋ ಸಭೆಯೊಂದಿಗೆ ಸಹವಾಸಿಸಲು ಸಾಕ್ಷಿಗಳು ನನಗಾಗಿ ಏರ್ಪಾಡುಗಳನ್ನು ಮಾಡಿದರು. ಜರ್ಮನ್ ಆಕ್ರಮಣದ ಅಂತ್ಯವನ್ನು ಹಿಂಬಾಲಿಸಿದ ಆಂತರಿಕ ಕಲಹವು ಆ ಸಮಯದಲ್ಲಿ ಗ್ರೀಸ್ನಲ್ಲಿ ಅತ್ಯುಗ್ರವಾಗಿ ನಡೆಯುತ್ತಿತ್ತು. ನಾನು ಎಲ್ಲಿ ವಾಸಿಸುತ್ತಿದ್ದೆನೊ ಆ ಹಳ್ಳಿಯು ಗೆರಿಲ್ಲಾ ಪಡೆಗಳಿಗೆ ಒಂದು ರೀತಿಯ ನೆಲೆಯಾಗಿತ್ತು. ಸ್ಥಳಿಕ ಪಾದ್ರಿಯೂ ಇನ್ನೊಬ್ಬ ದುಷ್ಪ್ರವೃತ್ತಿಯ ಮನುಷ್ಯನೂ ನಾನು ಸರಕಾರಿ ಪಡೆಗಳಿಗಾಗಿ ಗೂಢಚಾರ ಕೆಲಸವನ್ನು ಮಾಡುವುದಾಗಿ ನನ್ನನ್ನು ಆಪಾದಿಸಿದರು ಮತ್ತು ಸ್ವನೇಮಿತ ಗೆರಿಲ್ಲಾ ಮಿಲಿಟರಿ ನ್ಯಾಯಾಲಯದಿಂದ ವಿಚಾರಣೆಗೊಳಗಾಗುವಂತೆ ಮಾಡಿದರು.
ವಿಕಟಾನುಕರಣದ ನ್ಯಾಯಾಲಯ ವಿಚಾರಣೆಯಲ್ಲಿ ಆ ಕ್ಷೇತ್ರದ ಗೆರಿಲ್ಲಾ ಪಡೆಗಳ ನಾಯಕನು ಉಪಸ್ಥಿತನಿದ್ದನು. ನಾನು ಆ ಹಳ್ಳಿಯಲ್ಲಿ ಜೀವಿಸುತ್ತಿದ್ದ ಕಾರಣವನ್ನು ವಿವರಿಸುವುದನ್ನು ಮತ್ತು ಒಬ್ಬ ಕ್ರೈಸ್ತನೋಪಾದಿ ನಾನು ಆಂತರಿಕ ಕಲಹದಲ್ಲಿ ಸಂಪೂರ್ಣವಾಗಿ ತಟಸ್ಥನಾಗಿರುವುದನ್ನು ತೋರಿಸಿ ಮುಗಿಸಿದ ನಂತರ, ಆ ನಾಯಕನು ಇತರರಿಗೆ ಹೇಳಿದ್ದು: “ಯಾರಾದರೊಬ್ಬರು ಈ ಮನುಷ್ಯನಿಗೆ ಹಾನಿ ಮಾಡುವಲ್ಲಿ, ಅವನಿಗೆ ನನ್ನೊಂದಿಗೆ ವ್ಯವಹರಿಸಬೇಕಾಗುವುದು!”
ಅನಂತರ ನಾನು ನನ್ನ ಶಾರೀರಿಕ ಆರೋಗ್ಯಕ್ಕಿಂತ ನನ್ನ ನಂಬಿಕೆಯಲ್ಲಿ ಹೆಚ್ಚು ಬಲವುಳ್ಳವನಾಗಿ ನನ್ನ ಹುಟ್ಟೂರಾದ ವೊಲೊಸ್ಗೆ ಹಿಂದಿರುಗಿದೆ.
ಆತ್ಮಿಕ ಪ್ರಗತಿ
ಅದರ ನಂತರ ಸ್ವಲ್ಪ ಸಮಯದಲ್ಲೇ ನಾನು ಸ್ಥಳಿಕ ಸಭೆಯಲ್ಲಿ ಅಕೌಂಟ್ಸ್ ಸೇವಕನಾಗಿ ನೇಮಿಸಲ್ಪಟ್ಟೆ. ಆಂತರಿಕ ಕಲಹದಿಂದಾಗಿ ಉಂಟುಮಾಡಲ್ಪಟ್ಟ ಕಷ್ಟಗಳ ಹೊರತೂ—ವೈದಿಕರಿಂದ ಪ್ರೇರಿತವಾದ ಮತಪರಿವರ್ತನಾ ಆರೋಪಗಳಿಂದಾದ ಅಸಂಖ್ಯಾತ ದಸ್ತಗಿರಿಗಳನ್ನೂ ಸೇರಿಸಿ—ಕ್ರೈಸ್ತ ಶುಶ್ರೂಷೆಯಲ್ಲಿ ಪಾಲಿಗರಾಗುವುದು, ನನಗೆ ಮತ್ತು ನಮ್ಮ ಸಭೆಯಲ್ಲಿ ಉಳಿದವರೆಲ್ಲರಿಗೆ ಮಹತ್ತಾದ ಆನಂದವನ್ನು ತಂದಿತು.
ಅನಂತರ, 1947ರ ಆದಿ ಭಾಗದಲ್ಲಿ, ಯೆಹೋವನ ಸಾಕ್ಷಿಗಳ ಒಬ್ಬ ಸಂಚರಣ ಮೇಲ್ವಿಚಾರಕನು ನಮಗೆ ಭೇಟಿ ಮಾಡಿದನು. IIನೇ ಜಾಗತಿಕ ಯುದ್ಧವನ್ನು ಹಿಂಬಾಲಿಸಿ ಇದು ಅಂತಹ ವಿಧದ ಪ್ರಥಮ ಭೇಟಿಯಾಗಿತ್ತು. ಆ ಸಮಯದಲ್ಲಿ ವೊಲೊಸ್ನಲ್ಲಿದ್ದ ನಮ್ಮ ಅಭಿವೃದ್ಧಿಹೊಂದುತ್ತಿದ್ದ ಸಭೆಯು, ಎರಡು ಸಭೆಗಳಾಗಿ ವಿಭಜಿಸಲ್ಪಟ್ಟಿತು, ಮತ್ತು ನಾನು ಆ ಸಭೆಗಳಲ್ಲಿ ಒಂದರ ಅಧ್ಯಕ್ಷ ಮೇಲ್ವಿಚಾರಕನಾಗಿ ನೇಮಿಸಲ್ಪಟ್ಟೆ. ಪಾರಾಮಿಲಿಟರಿ ಮತ್ತು ರಾಷ್ಟ್ರೀಯವಾದಿ ಸಂಸ್ಥೆಗಳು ಆಗ ಜನರ ನಡುವೆ ಭಯವನ್ನು ಹರಡಿಸುತ್ತಿದ್ದವು. ವೈದಿಕರು ಆ ಸನ್ನಿವೇಶದ ಲಾಭವನ್ನು ಪಡೆದುಕೊಂಡರು. ನಾವು ಕಮ್ಯೂನಿಸ್ಟರು ಅಥವಾ ತೀವ್ರಗಾಮಿ ಗುಂಪುಗಳ ಬೆಂಬಲಿಗರಾಗಿದ್ದೇವೆಂಬ ಸುಳ್ಳು ವದಂತಿಯನ್ನು ಹರಡಿಸುವ ಮೂಲಕ, ಅಧಿಕಾರಿಗಳನ್ನು ಯೆಹೋವನ ಸಾಕ್ಷಿಗಳ ವಿರುದ್ಧ ತಿರುಗಿಸಿದರು.
ದಸ್ತಗಿರಿಗಳು ಮತ್ತು ಸೆರೆಮನೆವಾಸಗಳು
1947ರ ಸಮಯದಲ್ಲಿ, ನಾನು ಸುಮಾರು ಹತ್ತು ಸಲ ದಸ್ತಗಿರಿಮಾಡಲ್ಪಟ್ಟೆ ಮತ್ತು ಮೂರು ನ್ಯಾಯಾಲಯ ವಿಚಾರಣೆಗಳನ್ನು ಹೊಂದಿದೆ. ಪ್ರತಿಸಲವೂ ನನ್ನನ್ನು ವಿಮುಕ್ತಗೊಳಿಸಲಾಯಿತು. 1948ರ ವಸಂತ ಕಾಲದಲ್ಲಿ, ನನಗೆ ಮತಪರಿವರ್ತನೆಗಾಗಿ ನಾಲ್ಕು ತಿಂಗಳುಗಳ ಸೆರೆಮನೆವಾಸದ ಶಿಕ್ಷೆಯು ವಿಧಿಸಲ್ಪಟ್ಟಿತು. ನಾನು ಆ ಶಿಕ್ಷೆಯನ್ನು ವೊಲೊಸ್ ಸೆರೆಮನೆಯಲ್ಲಿ ಅನುಭವಿಸಿದೆ. ಅಷ್ಟರಲ್ಲಿ ನಮ್ಮ ಸಭೆಯಲ್ಲಿದ್ದ ರಾಜ್ಯ ಘೋಷಕರ ಸಂಖ್ಯೆಯು ಇಮ್ಮಡಿಯಾಯಿತು ಮತ್ತು ಆನಂದ ಹಾಗೂ ಸಂತೋಷವು ಸಹೋದರರ ಹೃದಯಗಳನ್ನು ತುಂಬಿತು.
ಅಕ್ಟೋಬರ್ 1948ರಲ್ಲಿ, ನಮ್ಮ ಸಭೆಯಲ್ಲಿ ಮುಂದಾಳುತ್ವವನ್ನು ವಹಿಸುತ್ತಿದ್ದ ಇತರ ಆರು ಮಂದಿಯೊಂದಿಗೆ ನಾನು ಒಂದು ಕೂಟವನ್ನು ನಡೆಸುತ್ತಿದ್ದಾಗ, ಐವರು ಪೊಲೀಸರು ಮನೆಯೊಳಗೆ ನುಗ್ಗಿ ನಮಗೆ ಬಂದೂಕಿನ ಬೆದರಿಕೆಯೊಂದಿಗೆ ದಸ್ತಗಿರಿಮಾಡಿದರು. ದಸ್ತಗಿರಿಗಾಗಿ ಕಾರಣವನ್ನು ವಿವರಿಸದೆ ಅವರು ನಮ್ಮನ್ನು ಪೊಲೀಸ್ ಠಾಣೆಗೆ ಕರೆದೊಯ್ದರು, ಮತ್ತು ಅಲ್ಲಿ ನಮ್ಮನ್ನು ಹೊಡೆಯಲಾಯಿತು. ಮುಷ್ಟಿಮಲ್ಲನಾಗಿದ್ದ ಪೊಲೀಸನೊಬ್ಬನಿಂದ ನನಗೆ ಮುಖದ ಮೇಲೆ ಗುದ್ದಲಾಯಿತು. ಅನಂತರ ನಮ್ಮನ್ನು ಒಂದು ಕಿರುಕೊಠಡಿಯೊಳಗೆ ಎಸೆಯಲಾಯಿತು.
ತದನಂತರ, ಮೇಲ್ವಿಚಾರಣೆ ಹೊಂದಿದ್ದ ಅಧಿಕಾರಿಯು ನನ್ನನ್ನು ತನ್ನ ಆಫೀಸಿಗೆ ಕರೆಸಿದನು. ನಾನು ಬಾಗಿಲನ್ನು ತೆರೆದಾಗ, ಅವನು ಒಂದು ಮಸಿ (ಇಂಕ್) ಬಾಟಲನ್ನು ನನ್ನತ್ತ ಎಸೆದನು, ಅದು ತನ್ನ ಗುರಿಯನ್ನು ತಪ್ಪಿ ಗೋಡೆಯ ಮೇಲೆ ಒಡೆಯಿತು. ಅವನು ಇದನ್ನು ನನ್ನನ್ನು ಹೆದರಿಸಲಿಕ್ಕಾಗಿ ಪ್ರಯತ್ನಿಸಲು ಮಾಡಿದನು. ಅನಂತರ ಒಂದು ಕಾಗದದ ಚೂರು ಮತ್ತು ಒಂದು ಪೆನ್ ಅನ್ನು ಕೊಟ್ಟು ಅವನು ಆಜ್ಞಾಪಿಸಿದ್ದು: “ವೊಲೊಸ್ನಲ್ಲಿರುವ ಎಲ್ಲಾ ಯೆಹೋವನ ಸಾಕ್ಷಿಗಳ ಹೆಸರುಗಳನ್ನು ಬರೆ, ಮತ್ತು ಬೆಳಗ್ಗೆ ನನಗೆ ಪಟ್ಟಿಯನ್ನು ತಂದುಕೊಡು. ನೀನು ಪಟ್ಟಿಯನ್ನು ತರದಿದ್ದಲ್ಲಿ, ನಿನಗೆ ಏನು ಕಾದಿದೆಯೆಂದು ನಿನಗೆ ತಿಳಿದಿದೆ!”
ನಾನು ಉತ್ತರಿಸಲಿಲ್ಲ, ಆದರೆ ನಾನು ಕಿರುಕೊಠಡಿಗೆ ಹಿಂದಿರುಗಿದ ಮೇಲೆ, ಉಳಿದ ಸಹೋದರರು ಮತ್ತು ನಾನು ಯೆಹೋವನಿಗೆ ಪ್ರಾರ್ಥಿಸಿದೆವು. ನಾನು ಕಾಗದದ ಮೇಲೆ ಕೇವಲ ನನ್ನ ಸ್ವಂತ ಹೆಸರನ್ನು ಬರೆದೆ ಮತ್ತು ಕರೆಯಲ್ಪಡಲು ಕಾದೆ. ಆದರೆ ನಾನು ಆ ಅಧಿಕಾರಿಯಿಂದ ಮುಂದೆ ಏನನ್ನೂ ಕೇಳಲಿಲ್ಲ. ರಾತ್ರಿಯ ಸಮಯದಲ್ಲಿ, ವಿರೋಧಿ ಮಿಲಿಟರಿ ಪಡೆಗಳು ಬಂದಿದ್ದವು ಮತ್ತು ಅವನು ತನ್ನ ಜನರನ್ನು ಅವರ ವಿರುದ್ಧ ನಡಿಸಿದ್ದನು. ಹಿಂಬಾಲಿಸಿದಂತಹ ಹೊಡೆದಾಟದಲ್ಲಿ, ಅವನು ಗಂಭೀರವಾಗಿ ಗಾಯಗೊಂಡನು ಮತ್ತು ಅವನ ಕಾಲುಗಳಲ್ಲಿ ಒಂದು ಕತ್ತರಿಸಲ್ಪಡಬೇಕಾಯಿತು. ಕಟ್ಟಕಡೆಗೆ, ನಮ್ಮ ಮೊಕದ್ದಮೆಯು ವಿಚಾರಣೆಗೆ ಬಂತು, ಮತ್ತು ಒಂದು ಕಾನೂನುಬಾಹಿರ ಕೂಟವನ್ನು ನಡೆಸಿರುವ ಅಪವಾದವನ್ನು ನಮ್ಮ ಮೇಲೆ ಹಾಕಲಾಯಿತು. ನಮ್ಮಲ್ಲಿ ಏಳು ಮಂದಿಗೂ ಸೆರೆಮನೆಯಲ್ಲಿ ಐದು ವರ್ಷಗಳ ಸೆರೆಮನೆ ಶಿಕ್ಷೆಯು ವಿಧಿಸಲ್ಪಟ್ಟಿತು.
ಸೆರೆಮನೆಯಲ್ಲಿ ನಾನು ಸಂಡೇ ಮಾಸ್ ಅನ್ನು ಹಾಜರಾಗಲು ನಿರಾಕರಿಸಿದ್ದರಿಂದ, ನನ್ನನ್ನು ಒಂಟಿ ಸೆರೆಗೆ ಕಳುಹಿಸಲಾಯಿತು. ಮೂರನೆಯ ದಿನದಂದು, ನಾನು ಸೆರೆಮನೆಯ ನಿರ್ದೇಶಕನೊಂದಿಗೆ ಮಾತಾಡಲು ಕೇಳಿಕೊಂಡೆ. “ಯೋಗ್ಯವಾದ ಸಕಲ ಗೌರವದಿಂದ ನಾನು ಹೇಳುವುದೇನಂದರೆ, ತನ್ನ ನಂಬಿಕೆಗಾಗಿ ಸೆರೆಮನೆಯಲ್ಲಿ ಐದು ವರ್ಷಗಳನ್ನು ಕಳೆಯಲು ಸಿದ್ಧನಾಗಿರುವವನನ್ನು ಶಿಕ್ಷಿಸುವುದು ಮೂರ್ಖತನವಾಗಿ ತೋರುತ್ತದೆ” ಎಂದು ನಾನು ಅವನಿಗೆ ಹೇಳಿದೆ. ಅವನು ಅದರ ಕುರಿತಾಗಿ ಗಂಭೀರವಾಗಿ ಯೋಚಿಸಿದನು, ಮತ್ತು ಕೊನೆಗೆ ಅವನು ಹೇಳಿದ್ದು: “ನಾಳೆಯಿಂದ, ನೀನು ಇಲ್ಲಿ ನನ್ನ ಬಳಿಯಲ್ಲಿ ನನ್ನ ಆಫೀಸಿನಲ್ಲಿ ಕೆಲಸ ಮಾಡುವಿ.”
ಕಟ್ಟಕಡೆಗೆ, ನಾನು ಸೆರೆಮನೆಯಲ್ಲಿ ವೈದ್ಯರ ಸಹಾಯಕನಾಗಿ ಕೆಲಸವನ್ನು ಪಡೆದೆ. ಫಲಸ್ವರೂಪವಾಗಿ, ನಾನು ಆರೋಗ್ಯಾರೈಕೆಯ ಕುರಿತಾಗಿ ತುಂಬಾ ವಿಷಯವನ್ನು ಕಲಿತೆ, ಇದು ನಂತರದ ವರ್ಷಗಳಲ್ಲಿ ತುಂಬ ಪ್ರಯೋಜನಕರವಾಗಿ ಪರಿಣಮಿಸಿದೆ. ಸೆರೆಮನೆಯಲ್ಲಿದ್ದಾಗ, ನನಗೆ ಸಾರಲು ಅನೇಕ ಅವಕಾಶಗಳಿದ್ದವು, ಮತ್ತು ಮೂವರು ವ್ಯಕ್ತಿಗಳು ಪ್ರತಿಕ್ರಿಯಿಸಿ ಯೆಹೋವನ ಸಾಕ್ಷಿಗಳಾದರು.
ಸೆರೆಮನೆಯಲ್ಲಿ ಬಹುಮಟ್ಟಿಗೆ ನಾಲ್ಕು ವರ್ಷಗಳ ಶಿಕ್ಷೆಯನ್ನು ಅನುಭವಿಸಿದ ಬಳಿಕ, ನಾನು ಕೊನೆಗೆ 1952ರಲ್ಲಿ ಪರೀಕ್ಷಾರ್ಥಕ ಬಂಧವಿಮೋಚನೆಯ ಮೇಲೆ ಬಿಡಿಸಲ್ಪಟ್ಟೆ. ಅನಂತರ, ತಾಟಸ್ಥ್ಯದ ವಿವಾದಾಂಶದ ಕಾರಣದಿಂದ ನಾನು ಕೊರಿಂಥದ ನ್ಯಾಯಾಲಯಕ್ಕೆ ಹಾಜರಾಗಬೇಕಾಯಿತು. (ಯೆಶಾಯ 2:4) ಅಲ್ಲಿ ನಾನು ಸ್ವಲ್ಪ ಸಮಯದ ವರೆಗೆ ಒಂದು ಮಿಲಿಟರಿ ಸೆರೆಮನೆಯಲ್ಲಿ ಇರಿಸಲ್ಪಟ್ಟೆ ಮತ್ತು ಇನ್ನೊಂದು ಸುತ್ತಿನ ದುರುಪಯೋಗವು ಆರಂಭಿಸಿತು. ನಿರ್ದಿಷ್ಟ ಅಧಿಕಾರಿಗಳು ಹೀಗೆ ಹೇಳುತ್ತಾ, ತಮ್ಮ ಬೆದರಿಕೆಗಳ ವಿಷಯದಲ್ಲಿ ತೀರ ನವೀನವಾದ ವಿಧಾನಗಳನ್ನು ಉಪಯೋಗಿಸಿದರು: “ನಿನ್ನ ಹೃದಯವನ್ನು ಒಂದು ಕತ್ತಿಯಿಂದ ಚೂರುಚೂರಾಗಿ ಹೊರತೆಗೆಯುವೆನು,” ಅಥವಾ “ಕೇವಲ ಆರು ಗುಂಡುಗಳೊಂದಿಗೆ ಒಂದು ಕ್ಷಿಪ್ರ ಮರಣವನ್ನು ನಿರೀಕ್ಷಿಸಬೇಡ.”
ಒಂದು ಭಿನ್ನ ರೀತಿಯ ಪರೀಕ್ಷೆ
ಆದಾಗಲೂ, ಬೇಗನೆ ನಾನು ವೊಲೊಸ್ ಸಭೆಯೊಂದಿಗೆ ಪುನಃ ಸೇವೆ ಸಲ್ಲಿಸುತ್ತಾ ಮತ್ತು ಐಹಿಕವಾಗಿ ಅಂಶಕಾಲಿಕವಾಗಿ ಕೆಲಸ ಮಾಡುತ್ತಾ, ಮನೆಗೆ ಹಿಂದೆ ತೆರಳಿದೆ. ಎರಡು ವಾರಗಳ ತರಬೇತಿ ಮತ್ತು ಅನಂತರ ಒಬ್ಬ ಸರ್ಕಿಟ್ ಮೇಲ್ವಿಚಾರಕನಾಗಿ ಯೆಹೋವನ ಸಾಕ್ಷಿಗಳ ಸಭೆಗಳನ್ನು ಸಂದರ್ಶಿಸುವುದನ್ನು ಆರಂಭಿಸುವಂತೆ ನನ್ನನ್ನು ಆಮಂತ್ರಿಸುವ ಒಂದು ಪತ್ರವನ್ನು ನಾನು ಒಂದು ದಿನ ಅಥೆನ್ಸ್ನಲ್ಲಿರುವ ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸಿನಿಂದ ಪಡೆದೆ. ಅದೇ ಸಮಯದಲ್ಲಿ, ಮಕ್ಕಳಿಲ್ಲದ ಮತ್ತು ವಿಸ್ತೃತ ಸ್ಥಿರಾಸ್ತಿ ಹಿಡುವಳಿಗಳನ್ನು ಹೊಂದಿದ್ದ, ನನ್ನ ಚಿಕ್ಕಪ್ಪನು, ತನ್ನ ಆಸ್ತಿಯನ್ನು ನಿರ್ವಹಿಸುವಂತೆ ನನ್ನನ್ನು ಕೇಳಿಕೊಂಡನು. ನನ್ನ ಕುಟುಂಬವು ಇನ್ನೂ ಬಡತನದಲ್ಲಿ ಜೀವಿಸುತ್ತಿತ್ತು, ಮತ್ತು ಈ ಉದ್ಯೋಗವು ಅವರ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸುತ್ತಿತ್ತು.
ಅವರ ನೀಡಿಕೆಗಾಗಿ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ನನ್ನ ಚಿಕ್ಕಪ್ಪನನ್ನು ಭೇಟಿಯಾದೆ, ಆದರೆ ನಾನು ಕ್ರೈಸ್ತ ಶುಶ್ರೂಷೆಯಲ್ಲಿ ಒಂದು ವಿಶೇಷ ನೇಮಕವನ್ನು ಸ್ವೀಕರಿಸಲು ನಿರ್ಣಯಿಸಿದ್ದೇನೆಂದು ನಾನು ಅವರಿಗೆ ತಿಳಿಸಿದೆ. ಆಗ ಅವರು ಎದ್ದು ನಿಂತು, ನನ್ನನ್ನು ಗಂಭೀರವಾಗಿ ದೃಷ್ಟಿಸಿ, ಥಟ್ಟನೆ ಕೋಣೆಯಿಂದ ಹೊರಗೆಹೋದರು. ನನ್ನ ಕುಟುಂಬವನ್ನು ಕೆಲವು ತಿಂಗಳುಗಳ ವರೆಗೆ ಬೆಂಬಲಿಸಸಾಧ್ಯವಿದ್ದ, ಉದಾರ ಹಣದ ಕೊಡುಗೆಯೊಂದಿಗೆ ಅವರು ಹಿಂದಿರುಗಿದರು. ಅವರು ಹೇಳಿದ್ದು: “ಇದನ್ನು ತೆಗೆದುಕೋ, ಮತ್ತು ನಿನಗೆ ಇಷ್ಟಬಂದಂತೆ ಅದನ್ನು ಉಪಯೋಗಿಸು.” ಈ ದಿನದ ವರೆಗೆ, ಆ ಕ್ಷಣದಲ್ಲಿ ನನಗಾದ ಅನಿಸಿಕೆಗಳನ್ನು ನಾನು ವರ್ಣಿಸಸಾಧ್ಯವಿಲ್ಲ. ಅದು ಯೆಹೋವನ ವಾಣಿಯು ನನಗೆ ಹೀಗೆ ಹೇಳುತ್ತಿದ್ದಂತೆ ಇತ್ತು, ‘ನೀನು ಸರಿಯಾದ ಆಯ್ಕೆಯನ್ನು ಮಾಡಿದ್ದೀ. ನಾನು ನಿನ್ನೊಂದಿಗೆ ಇದ್ದೇನೆ.’
ನನ್ನ ಕುಟುಂಬದ ಆಶೀರ್ವಾದದೊಂದಿಗೆ, ನಾನು ಡಿಸೆಂಬರ್ 1953ರಲ್ಲಿ ಅಥೆನ್ಸ್ಗೆ ಹೊರಟೆ. ಕೇವಲ ನನ್ನ ತಾಯಿಯವರು ಒಬ್ಬ ಸಾಕ್ಷಿಯಾದರಾದರೂ, ನನ್ನ ಕುಟುಂಬದ ಇತರ ಸದಸ್ಯರು ನನ್ನ ಕ್ರೈಸ್ತ ಚಟುವಟಿಕೆಯನ್ನು ವಿರೋಧಿಸಲಿಲ್ಲ. ನಾನು ಅಥೆನ್ಸ್ನಲ್ಲಿರುವ ಬ್ರಾಂಚ್ ಆಫೀಸಿಗೆ ಹೋದಾಗ, ನನಗಾಗಿ ಇನ್ನೊಂದು ಆಶ್ಚರ್ಯವು ಕಾದಿತ್ತು. ಒಂದು ವೆಲ್ಫೆರ್ ವೇತನವನ್ನು ಪಡೆಯಲು ನಡೆಸಿದ ತಂದೆಯವರ ಎರಡು ವರ್ಷಗಳ ಹೆಣಗಾಟವು, ಆ ದಿನದಂದು ಒಂದು ಯಶಸ್ವಿ ಫಲಿತಾಂಶವನ್ನು ತಲಪಿತ್ತೆಂದು ಪ್ರಕಟಿಸುವ ಒಂದು ಟೆಲಿಗ್ರಾಮ್ ನನ್ನ ತಂಗಿಯಿಂದ ಬಂದಿತ್ತು. ನಾನು ಇನ್ನು ಹೆಚ್ಚೇನನ್ನು ಕೇಳಸಾಧ್ಯವಿತ್ತು? ಯೆಹೋವನ ಸೇವೆಯಲ್ಲಿ ಎತ್ತರಕ್ಕೇರಿ ಹಾರುವಂತೆ ಸಿದ್ಧನಾಗಿರಲು, ರೆಕ್ಕೆಗಳಿವೆಯೊ ಎಂಬಂತೆ ನನಗನಿಸಿತು!
ಮುಂಜಾಗ್ರತೆಯನ್ನು ವಹಿಸುವುದು
ಸರ್ಕಿಟ್ ಕೆಲಸದಲ್ಲಿನ ನನ್ನ ಆರಂಭದ ವರ್ಷಗಳಲ್ಲಿ ನಾನು ತುಂಬಾ ಜಾಗರೂಕನಾಗಿರಬೇಕಿತ್ತು, ಯಾಕಂದರೆ ಯೆಹೋವನ ಸಾಕ್ಷಿಗಳು ಧಾರ್ಮಿಕ ಮತ್ತು ರಾಜಕೀಯ ಅಧಿಕಾರಿಗಳಿಂದ ಕಠಿನವಾಗಿ ಹಿಂಸಿಸಲ್ಪಡುತ್ತಿದ್ದರು. ನಮ್ಮ ಕ್ರೈಸ್ತ ಸಹೋದರರನ್ನು, ವಿಶೇಷವಾಗಿ ಚಿಕ್ಕ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಜೀವಿಸುತ್ತಿರುವವರನ್ನು ಭೇಟಿಮಾಡಲು ನಾನು ಅನೇಕ ತಾಸುಗಳ ವರೆಗೆ ರಾತ್ರಿಯಲ್ಲಿ ನಡೆದೆ. ದಸ್ತಗಿರಿಯ ಗಂಡಾಂತರಕ್ಕೆ ತಮ್ಮನ್ನು ಒಳಪಡಿಸಿಕೊಂಡಿದ್ದ ಆ ಸಹೋದರರು, ಒಂದು ಮನೆಯಲ್ಲಿ ಒಟ್ಟುಗೂಡಿ ನನ್ನ ಆಗಮನಕ್ಕಾಗಿ ತಾಳ್ಮೆಯಿಂದ ಕಾಯುತ್ತಿದ್ದರು. ಆ ಭೇಟಿಗಳು ನಮಗೆಲ್ಲರಿಗೂ ಪ್ರೋತ್ಸಾಹನೆಯ ಎಂತಹ ಒಂದು ಉತ್ತಮ ವಿನಿಮಯವನ್ನು ಒದಗಿಸಿದವು!—ರೋಮಾಪುರ 1:11, 12.
ಪತ್ತೆಹಚ್ಚಲ್ಪಡುವುದನ್ನು ತೊರೆಯಲು, ನಾನು ಕೆಲವೊಮ್ಮೆ ಸೋಗುಗಳನ್ನು ಉಪಯೋಗಿಸುತ್ತಿದ್ದೆ. ಒಮ್ಮೆ ನಾನು, ಆತ್ಮಿಕ ಕುರಿಪಾಲನೆಯ ತೀವ್ರ ಅಗತ್ಯವಿದ್ದ ಸಹೋದರರ ಒಂದು ಒಟ್ಟುಗೂಡುವಿಕೆಯನ್ನು ತಲಪಲು ಇದ್ದ ಒಂದು ರಸ್ತೆತಡೆಗಟ್ಟನ್ನು ದಾಟಲು, ಒಬ್ಬ ಕುರುಬನಂತೆ ಬಟ್ಟೆಗಳನ್ನು ಧರಿಸಿದೆ. ಇನ್ನೊಂದು ಸಂದರ್ಭದಲ್ಲಿ, 1955ರಲ್ಲಿ, ಪೊಲೀಸರ ಗುಮಾನಿಯನ್ನು ಎಬ್ಬಿಸುವುದನ್ನು ತೊರೆಯಲು, ಒಬ್ಬ ಜೊತೆ ಸಾಕ್ಷಿಯು ಮತ್ತು ನಾನು ಬೆಳ್ಳುಳ್ಳಿ ಮಾರಾಟಗಾರರಂತೆ ನಟಿಸಿದೆವು. ಆರ್ಗೊಸ್ ಓರೆಸ್ಟಿಕಾನ್ನ ಚಿಕ್ಕ ಪಟ್ಟಣದಲ್ಲಿ ನಿಷ್ಕ್ರಿಯರಾಗಿ ಪರಿಣಮಿಸಿದ್ದ ಕೆಲವು ಕ್ರೈಸ್ತ ಸಹೋದರರನ್ನು ಸಂಪರ್ಕಿಸುವುದು ನಮ್ಮ ನೇಮಕವಾಗಿತ್ತು.
ನಾವು ನಮ್ಮ ಸರಕನ್ನು ಪಟ್ಟಣದ ಸಾರ್ವಜನಿಕ ಮಾರುಕಟ್ಟೆಯಲ್ಲಿ ಪ್ರದರ್ಶಿಸಿದೆವು. ಆದಾಗಲೂ, ಆ ಕ್ಷೇತ್ರದಲ್ಲಿ ಗಸ್ತು ತಿರುಗುತ್ತಿದ್ದ ಒಬ್ಬ ಯುವ ಪೊಲೀಸನು ಶಂಕಾಸ್ಪದನಾದನು ಮತ್ತು ಅವನು ನಮ್ಮನ್ನು ಪ್ರತಿ ಸಲ ದಾಟಿದಾಗ ನಮ್ಮಡೆಗೆ ಕುತೂಹಲದಿಂದ ದಿಟ್ಟಿಸಿನೋಡುತ್ತಿದ್ದನು. ಕೊನೆಗೆ ಅವನು ನನಗೆ ಹೇಳಿದ್ದು: “ನೀನು ಬೆಳ್ಳುಳ್ಳಿ ಮಾರಾಟಗಾರನಂತೆ ತೋರುವುದಿಲ್ಲ.” ಅದೇ ಕ್ಷಣದಲ್ಲಿ ಮೂವರು ಯುವ ಸ್ತ್ರೀಯರು ಸಮೀಪಿಸಿ ಸ್ವಲ್ಪ ಬೆಳ್ಳುಳ್ಳಿಯನ್ನು ಖರೀದಿಸುವುದರಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿದರು. ನನ್ನ ಸಾಮಾನುಗಳೆಡೆಗೆ ತೋರಿಸುತ್ತಾ, ನಾನು ಉದ್ಗರಿಸಿದ್ದು: “ಈ ಯುವ ಪೊಲೀಸನು ಇದರಂತಹ ಬೆಳ್ಳುಳ್ಳಿಯನ್ನು ತಿನ್ನುತ್ತಾನೆ, ನೋಡಿ ಅವನೆಷ್ಟು ಬಲಶಾಲಿ ಮತ್ತು ಸುಂದರನಾಗಿದ್ದಾನೆ!” ಆ ಸ್ತ್ರೀಯರು ಪೊಲೀಸನನ್ನು ನೋಡಿ ನಕ್ಕರು. ಅವನೂ ನಸುನಗೆ ಬೀರಿ ಅನಂತರ ಕಣ್ಮರೆಯಾದನು.
ಅವನು ಹೊರಟಾಗ ನಮ್ಮ ಆತ್ಮಿಕ ಸಹೋದರರು ದರ್ಜಿಗಳಾಗಿ ಕೆಲಸ ಮಾಡುತ್ತಿದ್ದ ಅಂಗಡಿಗೆ ಹೋಗಲು ನಾನು ಅವಕಾಶದ ಪ್ರಯೋಜನವನ್ನು ತೆಗೆದುಕೊಂಡೆ. ನನ್ನ ಜಾಕೆಟಿನಿಂದ ನಾನು ಹರಿದುಹಾಕಿದ್ದ ಒಂದು ಗುಂಡಿಯನ್ನು ಹೊಲಿಯಲು ನಾನು ಅವರಲ್ಲಿ ಒಬ್ಬರನ್ನು ಕೇಳಿಕೊಂಡೆ. ಅವನು ಇದನ್ನು ಮಾಡುತ್ತಿದ್ದಾಗ, ನಾನು ಬಾಗಿ ಪಿಸುಗುಟ್ಟಿದೆ: “ನಾನು ನಿನ್ನನ್ನು ನೋಡಲು ಬ್ರಾಂಚ್ ಆಫೀಸಿನಿಂದ ಬಂದಿದ್ದೇನೆ.” ಮೊದಲಲ್ಲಿ ಆ ಸಹೋದರರು ಹೆದರಿದರು, ಯಾಕಂದರೆ ಅವರಿಗೆ ಹಲವಾರು ವರ್ಷಗಳಿಂದ ಜೊತೆ ಸಾಕ್ಷಿಗಳೊಂದಿಗೆ ಸಂಪರ್ಕವಿರಲಿಲ್ಲ. ನಾನು ಅವರನ್ನು ನನಗೆ ಸಾಧ್ಯವಿದ್ದಷ್ಟು ಉತ್ತಮವಾಗಿ ಉತ್ತೇಜಿಸಿದೆ ಮತ್ತು ಹೆಚ್ಚು ಮಾತನಾಡಲಿಕ್ಕಾಗಿ ಪಟ್ಟಣದ ಶ್ಮಶಾನದಲ್ಲಿ ಸಂಧಿಸಲು ಏರ್ಪಾಡುಗಳನ್ನು ಮಾಡಿದೆ. ಸಂತೋಷಕರವಾಗಿ, ಭೇಟಿಯು ಉತ್ತೇಜನದಾಯಕವಾಗಿತ್ತು, ಮತ್ತು ಅವರು ಪುನಃ ಒಮ್ಮೆ ಕ್ರೈಸ್ತ ಶುಶ್ರೂಷೆಯಲ್ಲಿ ಹುರುಪುಳ್ಳವರಾದರು.
ಒಬ್ಬ ನಂಬಿಗಸ್ತ ಸಂಗಾತಿಯನ್ನು ಗಳಿಸುವುದು
1956ರಲ್ಲಿ, ಸಂಚರಣ ಕೆಲಸವನ್ನು ಆರಂಭಿಸಿದ ಮೂರು ವರ್ಷಗಳ ತರುವಾಯ, ಸಾರುವ ಕೆಲಸಕ್ಕಾಗಿ ಮಹತ್ತಾದ ಪ್ರೀತಿಯನ್ನು ಹೊಂದಿದ್ದ ಮತ್ತು ಪೂರ್ಣ ಸಮಯದ ಶುಶ್ರೂಷೆಯಲ್ಲಿ ತನ್ನ ಜೀವಿತವನ್ನು ಕಳೆಯಲು ಆಶಿಸಿದ ಒಬ್ಬ ಯುವ ಕ್ರೈಸ್ತ ಸ್ತ್ರೀಯಾದ ನಿಕ್ಕಿಯನ್ನು ನಾನು ಭೇಟಿಯಾದೆ. ನಾವು ಪರಸ್ಪರ ಅನುರಕ್ತರಾದೆವು ಮತ್ತು ಜೂನ್ 1957ರಲ್ಲಿ ಮದುವೆಯಾದೆವು. ಗ್ರೀಸ್ನಲ್ಲಿ ಆಗ ಯೆಹೋವನ ಸಾಕ್ಷಿಗಳಿಗಾಗಿ ಇದ್ದಂತಹ ಕಠಿನ ಪರಿಸ್ಥಿತಿಗಳ ಕೆಳಗೆ ಸಂಚರಣ ಕೆಲಸದ ತಗಾದೆಗಳನ್ನು ಎದುರಿಸಿ ನಿಲ್ಲಲು ನಿಕ್ಕಿ ಶಕ್ತಳಾಗಿರುವಳೊ ಎಂಬುದರ ಕುರಿತಾಗಿ ನಾನು ಸೋಜಿಗಪಡುತ್ತಿದ್ದೆ. ಯೆಹೋವನ ಸಹಾಯದೊಂದಿಗೆ ಅವಳು ನಿಭಾಯಿಸಿದಳು, ಹೀಗೆ ಗ್ರೀಸ್ನಲ್ಲಿ ಸರ್ಕಿಟ್ ಕೆಲಸದಲ್ಲಿ ತನ್ನ ಗಂಡನನ್ನು ಜೊತೆಗೂಡಿದ ಪ್ರಥಮ ಸ್ತ್ರೀಯಾಗಿ ಪರಿಣಮಿಸಿದಳು.
ಗ್ರೀಸ್ನಲ್ಲಿದ್ದ ಹೆಚ್ಚಿನ ಸಭೆಗಳಲ್ಲಿ ಸೇವೆಸಲ್ಲಿಸುತ್ತಾ, ಹತ್ತು ವರ್ಷಗಳ ವರೆಗೆ ನಾವು ಸಂಚರಣ ಕೆಲಸದಲ್ಲಿ ಜೊತೆಯಾಗಿ ಮುಂದುವರಿದೆವು. ಅನೇಕ ಸಲ ನಾವು ಸೋಗುಗಳನ್ನು ಧರಿಸಿದೆವು ಮತ್ತು ಒಂದು ಕೈಯಲ್ಲಿ ಸೂಟ್ಕೇಸಿನೊಂದಿಗೆ ಒಂದು ಸಭೆಯನ್ನು ತಲಪಲು ಕತ್ತಲಿನ ಸಮಯದಲ್ಲಿ ಅನೇಕ ತಾಸುಗಳ ವರೆಗೆ ನಡೆದೆವು. ನಾವು ಅನೇಕ ಸಲ ಎದುರಿಸಿದಂತಹ ಮಹತ್ತಾದ ವಿರೋಧದ ಹೊರತೂ, ಸಾಕ್ಷಿಗಳ ಸಂಖ್ಯೆಯಲ್ಲಿನ ಪ್ರೇಕ್ಷಣೀಯ ಬೆಳವಣಿಗೆಯನ್ನು ನೇರವಾಗಿ ನೋಡಲು ರೋಮಾಂಚಿತರಾಗಿದ್ದೆವು.
ಬೆತೆಲ್ ಸೇವೆ
ಜನವರಿ 1967ರಲ್ಲಿ, ನಿಕ್ಕಿ ಮತ್ತು ನಾನು, ಬೆತೆಲ್ನಲ್ಲಿ ಸೇವೆಸಲ್ಲಿಸಲು ಆಮಂತ್ರಿಸಲ್ಪಟ್ಟೆವು. ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸನ್ನು ಹಾಗೆ ಕರೆಯಲಾಗುತ್ತದೆ. ಆ ಆಮಂತ್ರಣವು ನಮ್ಮಿಬ್ಬರನ್ನು ಅಚ್ಚರಿಗೊಳಿಸಿತು, ಆದರೆ ಯೆಹೋವನು ವಿಷಯಗಳನ್ನು ನಿರ್ದೇಶಿಸುತ್ತಿದ್ದಾನೆಂಬ ವಿಶ್ವಾಸದೊಂದಿಗೆ ನಾವು ಅದನ್ನು ಸ್ವೀಕರಿಸಿದೆವು. ಸಮಯವು ಗತಿಸಿದಂತೆ, ದೇವಪ್ರಭುತ್ವ ಚಟುವಟಿಕೆಯ ಈ ಕೇಂದ್ರದಲ್ಲಿ ಸೇವೆಸಲ್ಲಿಸುವುದು ಎಂಥಹ ಒಂದು ಮಹಾ ಸುಯೋಗವಾಗಿದೆಯೆಂದು ನಾವು ಗಣ್ಯಮಾಡಲಾರಂಭಿಸಿದೆವು.
ನಾವು ಬೆತೆಲ್ ಸೇವೆಯನ್ನು ಪ್ರವೇಶಿಸಿದ ಮೂರು ತಿಂಗಳುಗಳ ನಂತರ, ಒಂದು ಮಿಲಿಟರಿ ಆಡಳಿತ ಸಭೆಯು ಅಧಿಕಾರಕ್ಕೆ ಬಂತು, ಮತ್ತು ಯೆಹೋವನ ಸಾಕ್ಷಿಗಳು ತಮ್ಮ ಕೆಲಸವನ್ನು ಭೂಗತ ರೀತಿಯಲ್ಲಿ ಮುಂದುವರಿಸಬೇಕಾಗಿತ್ತು. ನಾವು ಚಿಕ್ಕ ಗುಂಪುಗಳಲ್ಲಿ ಕೂಡಲಾರಂಭಿಸಿದೆವು, ನಮ್ಮ ಸಮ್ಮೇಳನಗಳನ್ನು ಕಾಡುಗಳಲ್ಲಿ ನಡೆಸಿದೆವು, ಜಾಗರೂಕತೆಯಿಂದ ಸಾರಿದೆವು ಮತ್ತು ಬೈಬಲ್ ಸಾಹಿತ್ಯವನ್ನು ಗುಪ್ತವಾಗಿ ಮುದ್ರಿಸಿ ಹಂಚಿದೆವು. ಈ ಪರಿಸ್ಥಿತಿಗಳಿಗೆ ಹೊಂದಿಕೊಂಡು ಹೋಗುವುದು ಕಷ್ಟಕರವಾಗಿರಲಿಲ್ಲ, ಯಾಕಂದರೆ ನಮ್ಮ ಚಟುವಟಿಕೆಗಳನ್ನು ಮುಂದುವರಿಸಲು ಗತ ವರ್ಷಗಳಲ್ಲಿ ನಾವು ಉಪಯೋಗಿಸಿದಂತಹ ವಿಧಾನಗಳನ್ನು ನಾವು ಪುನಃ ಬಳಕೆಗೆ ತಂದೆವು ಅಷ್ಟೇ. ನಿರ್ಬಂಧಗಳ ಹೊರತೂ, ಸಾಕ್ಷಿಗಳ ಸಂಖ್ಯೆಯು 1967ರಲ್ಲಿ 11,000ಕ್ಕಿಂತಲೂ ಕಡಿಮೆ ಸಂಖ್ಯೆಯಿಂದ 1974ರಲ್ಲಿ 17,000ಕ್ಕಿಂತಲೂ ಹೆಚ್ಚಿನ ಸಂಖ್ಯೆಗೆ ವೃದ್ಧಿಸಿತು.
ಬೆತೆಲ್ ಸೇವೆಯಲ್ಲಿ ಸುಮಾರು 30 ವರ್ಷಗಳ ನಂತರ, ನಿಕ್ಕಿ ಮತ್ತು ನಾನು, ಆರೋಗ್ಯ ಮತ್ತು ವಯಸ್ಸಿನ ಮಿತಿಗಳ ಹೊರತೂ ನಮ್ಮ ಆತ್ಮಿಕ ಆಶೀರ್ವಾದಗಳನ್ನು ಅನುಭವಿಸುತ್ತಾ ಇದ್ದೇವೆ. ಹತ್ತಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ, ಅಥೆನ್ಸ್ನಲ್ಲಿ ಕಾರ್ಟಾಲಿ ಸ್ಟ್ರೀಟ್ನಲ್ಲಿ ಇದ್ದ ಬ್ರಾಂಚ್ ಆವರಣಗಳಲ್ಲಿ ನಾವು ಜೀವಿಸಿದೆವು. 1979ರಲ್ಲಿ ಅಥೆನ್ಸ್ನ ಒಂದು ಉಪನಗರವಾದ ಮರೌಸಿಯಲ್ಲಿ ಒಂದು ಹೊಸ ಬ್ರಾಂಚ್ ಸಮರ್ಪಿಸಲ್ಪಟ್ಟಿತು. ಆದರೆ 1991ರಿಂದ ಅಥೆನ್ಸ್ನ 60 ಕಿಲೊಮೀಟರ್ ಉತ್ತರಕ್ಕಿರುವ ಇಲಿಯೋನಾದಲ್ಲಿ ವಿಸ್ತಾರವಾದ ಹೊಸ ಬ್ರಾಂಚ್ ಸೌಕರ್ಯಗಳನ್ನು ನಾವು ಅನುಭೋಗಿಸಿದ್ದೇವೆ. ಸೆರೆಮನೆಯ ವೈದ್ಯನಿಗೆ ಒಬ್ಬ ಸಹಾಯಕನಾಗಿ ನಾನು ಪಡೆದಂತಹ ತರಬೇತಿಯು ತುಂಬಾ ಪ್ರಯೋಜನಕರವಾಗಿ ರುಜುವಾಗಿರುವ ನಮ್ಮ ಬೆತೆಲ್ ಚಿಕಿತ್ಸಾಲಯದಲ್ಲಿ ನಾನು ಇಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ.
ಪೂರ್ಣ ಸಮಯದ ಶುಶ್ರೂಷೆಯಲ್ಲಿನ ನನ್ನ ನಾಲ್ಕು ದಶಕಗಳಿಗಿಂತಲೂ ಹೆಚ್ಚಿನ ಸಮಯದಿಂದ ನಾನು ಯೆರೆಮೀಯನಂತೆ ಯೆಹೋವನ ವಾಗ್ದಾನದ ಸತ್ಯವನ್ನು ಗ್ರಹಿಸಿದ್ದೇನೆ: “ಅವರು ನಿನಗೆ ವಿರುದ್ಧವಾಗಿ ಯುದ್ಧಮಾಡುವರು, ಆದರೆ ನಿನ್ನನ್ನು ಸೋಲಿಸಲಾಗುವದಿಲ್ಲ; ನಿನ್ನನ್ನುದ್ಧರಿಸಲು ನಾನೇ ನಿನ್ನೊಂದಿಗಿರುವೆನು, ಇದು ಯೆಹೋವನಾದ ನನ್ನ ಮಾತು.” (ಯೆರೆಮೀಯ 1:19) ಹೌದು, ನಿಕ್ಕಿ ಮತ್ತು ನಾನು ಯೆಹೋವನ ಆಶೀರ್ವಾದಗಳೊಂದಿಗೆ ತುಂಬಿತುಳುಕುತ್ತಿರುವ ಒಂದು ಬಟ್ಟಲನ್ನು ಅನುಭೋಗಿಸಿದ್ದೇವೆ. ಆತನ ಅಪಾರವಾದ ಪ್ರೀತಿಪರ ಚಿಂತೆ ಮತ್ತು ಅಪಾತ್ರವಾದ ದಯೆಯಲ್ಲಿ ನಾವು ಸತತವಾಗಿ ಹರ್ಷಿಸುತ್ತೇವೆ.
ಯೆಹೋವನ ಸಂಸ್ಥೆಯಲ್ಲಿರುವ ಎಳೆಯರಿಗೆ ನನ್ನ ಉತ್ತೇಜನವೇನಂದರೆ, ಪೂರ್ಣ ಸಮಯದ ಶುಶ್ರೂಷೆಯನ್ನು ಬೆನ್ನಟ್ಟಿರಿ. ಈ ರೀತಿಯಲ್ಲಿ ಅವರು, ‘ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳಹಿಡಿಯಲಾಗದಷ್ಟು ಸುವರವನ್ನು ಸುರಿಯುವೆನೋ ಇಲ್ಲವೋ’ ಎಂಬ ತನ್ನ ವಾಗ್ದಾನಕ್ಕೆ ಆತನು ನಿಜವೆಂದು ರುಜುವಾಗುವನೋ ಇಲ್ಲವೊ ಎಂಬುದನ್ನು ಪರೀಕ್ಷಿಸಲು ಯೆಹೋವನ ಆಮಂತ್ರಣವನ್ನು ಸ್ವೀಕರಿಸಸಾಧ್ಯವಿದೆ. (ಮಲಾಕಿಯ 3:10) ಹೀಗೆ, ಆತನಲ್ಲಿ ಪೂರ್ಣವಾಗಿ ಭರವಸೆಯಿಡುವ ಎಳೆಯರಾದ ನಿಮ್ಮೆಲ್ಲರನ್ನು ಯೆಹೋವನು ಖಂಡಿತವಾಗಿಯೂ ಆಶೀರ್ವದಿಸುವನೆಂದು ನಾನು ನನ್ನ ಸ್ವಂತ ಅನುಭವದಿಂದ ನಿಮಗೆ ಆಶ್ವಾಸನೆ ನೀಡಬಲ್ಲೆನು.
[ಪುಟ 26 ರಲ್ಲಿರುವ ಚಿತ್ರ]
ಲಾಂಪ್ರೊಸ್ ಜುಂಪೊಸ್ ಮತ್ತು ಅವರ ಪತ್ನಿ ನಿಕ್ಕಿ