ಆರಂಭದ ಕ್ರೈಸ್ತತ್ವ ಮತ್ತು ರಾಜ್ಯ
ತನ್ನ ಮರಣದ ಹಿಂದಿನ ದಿನ, ಯೇಸು ತನ್ನ ಶಿಷ್ಯರಿಗೆ ಹೇಳಿದ್ದು: “ನೀವು ಲೋಕದ ಕಡೆಯವರಲ್ಲದೆ [“ಭಾಗವಾಗಿರದೆ,” NW] ಇರುವದರಿಂದಲೂ ನಾನು ನಿಮ್ಮನ್ನು ಲೋಕದೊಳಗಿಂದ ಆರಿಸಿ ತೆಗೆದುಕೊಂಡಿರುವದರಿಂದಲೂ ಲೋಕವು ನಿಮ್ಮ ಮೇಲೆ ದ್ವೇಷಮಾಡುತ್ತದೆ.” (ಯೋಹಾನ 15:19) ಹಾಗಿದ್ದರೂ ಕ್ರೈಸ್ತರು ಈ ಲೋಕದ ಅಧಿಕಾರಿಗಳ ಕಡೆಗೆ ಒಂದು ವೈರತ್ವದ ಮನೋಭಾವವನ್ನು ತಾಳುವರೆಂದು ಇದರ ಅರ್ಥವೊ?
ಲೌಕಿಕರಲ್ಲವಾದರೂ ವೈರಮನಸ್ಸಿನವರಲ್ಲ
ರೋಮ್ನಲ್ಲಿ ಜೀವಿಸುತ್ತಿದ್ದ ಕ್ರೈಸ್ತರಿಗೆ ಅಪೊಸ್ತಲ ಪೌಲನು ಹೇಳಿದ್ದು: “ಪ್ರತಿ ಮನುಷ್ಯನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ.” (ರೋಮಾಪುರ 13:1) ತದ್ರೀತಿಯಲ್ಲಿ ಅಪೊಸ್ತಲ ಪೇತ್ರನು ಬರೆದುದು: “ಮನುಷ್ಯರು ನೇಮಿಸಿರುವ ಯಾವ ಅಧಿಕಾರಕ್ಕಾದರೂ ಕರ್ತನ ನಿಮಿತ್ತ ಅಧೀನರಾಗಿರಿ. ಅರಸನು ಸರ್ವಾಧಿಕಾರಿ ಎಂತಲೂ ಬೇರೆ ಅಧಿಪತಿಗಳು ಕೆಟ್ಟ ನಡತೆಯುಳ್ಳವರನ್ನು ದಂಡಿಸುವದಕ್ಕೂ ಒಳ್ಳೇ ನಡತೆಯುಳ್ಳವರನ್ನು ಪ್ರೋತ್ಸಾಹಪಡಿಸುವದಕ್ಕೂ ಅರಸನಿಂದ ಕಳುಹಿಸಲ್ಪಟ್ಟವರೆಂತಲೂ ತಿಳಿದು ಅವರಿಗೆ ಅಧೀನರಾಗಿರಿ.” (1 ಪೇತ್ರ 2:13, 14) ರಾಜ್ಯಕ್ಕೂ ಯೋಗ್ಯವಾಗಿ ನೇಮಿತರಾದ ಅದರ ಪ್ರತಿನಿಧಿಗಳಿಗೂ ತೋರಿಸುವ ಅಧೀನತೆಯು, ಆರಂಭದ ಕ್ರೈಸ್ತರಲ್ಲಿ ಸ್ಪಷ್ಟವಾಗಿ ಸ್ವೀಕರಿಸಲ್ಪಟ್ಟ ಒಂದು ಮೂಲತತ್ತ್ವವಾಗಿತ್ತು. ಅವರು ನಿಯಮಪಾಲಕ ನಾಗರಿಕರಾಗಿರಲು ಮತ್ತು ಎಲ್ಲ ಮನುಷ್ಯರೊಂದಿಗೂ ಶಾಂತಿಯಿಂದ ಜೀವಿಸಲು ಪ್ರಯತ್ನಿಸಿದರು.—ರೋಮಾಪುರ 12:18.
“ಚರ್ಚ್ ಮತ್ತು ರಾಜ್ಯ” ಎಂಬ ವಿಷಯದ ಕೆಳಗೆ, ದ ಎನ್ಸೈಕ್ಲೊಪೀಡಿಯ ಆಫ್ ರಿಲಿಜನ್ ಘೋಷಿಸುವುದು: “ಕ್ರಿಸ್ತ ಶಕದ ಪ್ರಥಮ ಮೂರು ಶತಮಾನಗಳಲ್ಲಿ ಕ್ರೈಸ್ತ ಚರ್ಚು ಅಧಿಕೃತ ರೋಮನ್ ಸಮಾಜದಿಂದ ಬಹುಮಟ್ಟಿಗೆ ಪ್ರತ್ಯೇಕವಾಗಿತ್ತು . . . ಆದರೂ, ಕ್ರೈಸ್ತ ಮುಂದಾಳುಗಳು . . . ಕ್ರೈಸ್ತ ನಂಬಿಕೆಯಿಂದ ಇಡಲ್ಪಟ್ಟ ಸೀಮೆಗಳೊಳಗೆ ರೋಮನ್ ನಿಯಮಕ್ಕೆ ವಿಧೇಯತೆ ಮತ್ತು ಸಾಮ್ರಾಟನಿಗೆ ನಿಷ್ಠೆಯನ್ನು ಕಲಿಸಿದರು.”
ಮಾನ, ಆರಾಧನೆಯಲ್ಲ
ಕ್ರೈಸ್ತರು ರೋಮನ್ ಸಾಮ್ರಾಟನ ಕಡೆಗೆ ವೈರಮನಸ್ಸಿನವರಾಗಿರಲಿಲ್ಲ. ಅವರು ಅವನ ಅಧಿಕಾರವನ್ನು ಗೌರವಿಸಿದರು ಮತ್ತು ಅವನ ಪದವಿಗೆ ಅರ್ಹವಾಗಿದ್ದ ಸನ್ಮಾನವನ್ನು ಅವನಿಗೆ ಸಲ್ಲಿಸಿದರು. ಸಾಮ್ರಾಟ ನೀರೋವಿನ ಆಳಿಕೆಯ ಸಮಯದಲ್ಲಿ, ರೋಮನ್ ಸಾಮ್ರಾಜ್ಯದ ವಿವಿಧ ಭಾಗಗಳಲ್ಲಿ ಜೀವಿಸುತ್ತಿದ್ದ ಕ್ರೈಸ್ತರಿಗೆ, ಅಪೊಸ್ತಲ ಪೇತ್ರನು ಬರೆದುದು: “ಎಲ್ಲರನ್ನೂ ಸನ್ಮಾನಿಸಿರಿ. . . . ಅರಸನನ್ನು ಸನ್ಮಾನಿಸಿರಿ.” (1 ಪೇತ್ರ 2:17) “ಅರಸ” ಎಂಬ ಶಬ್ದವು, ಗ್ರೀಕ್ ಭಾಷೆಯನ್ನು ಮಾತಾಡುವ ಜಗತ್ತಿನಲ್ಲಿ ಕೇವಲ ಸ್ಥಳೀಯ ಅರಸರಿಗೆ ಮಾತ್ರವಲ್ಲ, ರೋಮನ್ ಸಾಮ್ರಾಟನಿಗೂ ಉಪಯೋಗಿಸಲ್ಪಟ್ಟಿತ್ತು. ರೋಮನ್ ಸಾಮ್ರಾಜ್ಯದ ರಾಜಧಾನಿಯಲ್ಲಿ ಜೀವಿಸುತ್ತಿದ್ದ ಕ್ರೈಸ್ತರಿಗೆ ಅಪೊಸ್ತಲ ಪೌಲನು ಸಲಹೆಯನ್ನಿತ್ತದ್ದು: “ಅವರವರಿಗೆ ಸಲ್ಲಿಸತಕ್ಕದ್ದನ್ನು ಸಲ್ಲಿಸಿರಿ; . . . ಯಾರಿಗೆ ಮರ್ಯಾದೆಯೋ ಅವರಿಗೆ ಮರ್ಯಾದೆಯನ್ನು ಸಲ್ಲಿಸಿರಿ.” (ರೋಮಾಪುರ 13:7) ರೋಮನ್ ಸಾಮ್ರಾಟನಿಗೆ ಅತಿ ನಿಶ್ಚಯವಾಗಿಯೂ ಸನ್ಮಾನವು ಕೊಡಲ್ಪಡಬೇಕಿತ್ತು. ಸಮಯಾನಂತರ, ಅವನು ಆರಾಧನೆಗಾಗಿಯೂ ಕೇಳಿಕೊಂಡನು. ಇಲ್ಲಿಯಾದರೋ ಆರಂಭದ ಕ್ರೈಸ್ತರು ಮಿತಿಹಾಕಿದರು.
ಸಾ.ಶ. ಎರಡನೆಯ ಶತಮಾನದಲ್ಲಿ, ಒಬ್ಬ ರೋಮನ್ ಪ್ರಾಂತಾಧಿಪತಿಯ ಮುಂದಿನ ತನ್ನ ವಿಚಾರಣೆಯಲ್ಲಿ, ಪೋಲಿಕಾರ್ಪ್ ಹೀಗೆ ಘೋಷಿಸಿದನೆಂದು ಹೇಳಲಾಗಿದೆ: “ನಾನೊಬ್ಬ ಕ್ರೈಸ್ತನು. . . . ದೇವರಿಂದ ನೇಮಿಸಲ್ಪಟ್ಟಿರುವ ಪ್ರಭುತ್ವಗಳು ಮತ್ತು ಅಧಿಕಾರಿಗಳಿಗೆ . . . ಸಲ್ಲತಕ್ಕ ಎಲ್ಲಾ ಮಾನವನ್ನು ಸಲ್ಲಿಸುವಂತೆ ನಮಗೆ ಕಲಿಸಲಾಗುತ್ತದೆ.” ಆದಾಗಲೂ, ಪೋಲಿಕಾರ್ಪನು, ಸಾಮ್ರಾಟನನ್ನು ಆರಾಧಿಸುವುದಕ್ಕಿಂತ ಸಾಯುವದನ್ನು ಆರಿಸಿಕೊಂಡನು. ಎರಡನೆಯ ಶತಮಾನದ ಸಮರ್ಥಕನಾದ ಅಂತಿಯೋಕ್ಯದ ತೀಯಫೆಲಸನು ಬರೆದುದು: “ನಾನು ಸಾಮ್ರಾಟನಿಗೆ ಮಾನವನ್ನು ಸಲ್ಲಿಸುವೆನು, ಅವನನ್ನು ಖಂಡಿತವಾಗಿಯೂ ಆರಾಧಿಸೆನು, ಆದರೆ ಅವನಿಗಾಗಿ ಪ್ರಾರ್ಥಿಸುವೆನು. ಆದರೆ ದೇವರನ್ನು, ಜೀವಿಸುವ ಮತ್ತು ಸತ್ಯ ದೇವರನ್ನು ನಾನು ಆರಾಧಿಸುತ್ತೇನೆ.”
ಸಾಮ್ರಾಟನ ಕುರಿತಾದ ಸೂಕ್ತ ಪ್ರಾರ್ಥನೆಗಳು ಯಾವುದೇ ರೀತಿಯಲ್ಲಿ ಸಾಮ್ರಾಟನ ಆರಾಧನೆ ಅಥವಾ ರಾಷ್ಟ್ರೀಯವಾದದೊಂದಿಗೆ ಸಂಬಂಧಿಸಲ್ಪಟ್ಟಿರಲಿಲ್ಲ. ಅಪೊಸ್ತಲ ಪೌಲನು ಅವುಗಳ ಉದ್ದೇಶವನ್ನು ವಿವರಿಸಿದನು: “ಎಲ್ಲಾದಕ್ಕಿಂತ ಮೊದಲು ಮನುಷ್ಯರೆಲ್ಲರಿಗೋಸ್ಕರ ದೇವರಿಗೆ ವಿಜ್ಞಾಪನೆಗಳನ್ನೂ ಪ್ರಾರ್ಥನೆಗಳನ್ನೂ ಮನವೆಗಳನ್ನೂ ಕೃತಜ್ಞತಾಸ್ತುತಿಗಳನ್ನೂ ಮಾಡಬೇಕೆಂದು ಬೋಧಿಸುತ್ತೇನೆ. ನಮಗೆ ಸುಖಸಮಾಧಾನಗಳು ಉಂಟಾಗಿ ನಾವು ಪೂರ್ಣಭಕ್ತಿಯಿಂದಲೂ ಗೌರವದಿಂದಲೂ ಕಾಲಕ್ಷೇಪಮಾಡುವಂತೆ ಅರಸುಗಳಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ವಿಜ್ಞಾಪನೆಗಳನ್ನು ಮಾಡಬೇಕು.”—1 ತಿಮೊಥೆಯ 2:1, 2.
“ಸಮಾಜದ ಅಂಚಿನಲ್ಲಿ”
ಆರಂಭದ ಕ್ರೈಸ್ತರ ವತಿಯಿಂದ ಈ ಗೌರವಪೂರ್ಣವಾದ ನಡತೆಯು, ಅವರಿಗೆ ತಾವು ಜೀವಿಸುತ್ತಿದ್ದ ಲೋಕದ ಸ್ನೇಹವನ್ನು ತರಿಸಲಿಲ್ಲ. ಫ್ರೆಂಚ್ ಇತಿಹಾಸಕಾರನಾದ ಎ. ಹಾಮ್ಮನ್ ತಿಳಿಸುವುದೇನಂದರೆ, ಆರಂಭದ ಕ್ರೈಸ್ತರು “ಸಮಾಜದ ಅಂಚಿನಲ್ಲಿ ಜೀವಿಸಿದರು.” ಅವರು ವಾಸ್ತವವಾಗಿ—ಯೆಹೂದಿ ಮತ್ತು ರೋಮನ್—ಎರಡು ಸಮಾಜಗಳ ಅಂಚಿನಲ್ಲಿ ಜೀವಿಸಿದರು. ಇವೆರಡರಿಂದಲೂ ಅವರು ತುಂಬಾ ಪೂರ್ವಾಗ್ರಹ ಮತ್ತು ವೈಮನಸ್ಯವನ್ನು ಎದುರಿಸಿದರು.
ಉದಾಹರಣೆಗಾಗಿ, ಯೆಹೂದಿ ಮುಖಂಡರಿಂದ ಅಪೊಸ್ತಲ ಪೌಲನು ತಪ್ಪಾಗಿ ಆಪಾದಿಸಲ್ಪಟ್ಟಾಗ, ರೋಮನ್ ಪ್ರಾಂತಾಧಿಪತಿಯ ಮುಂದೆ ತನ್ನ ಸಮರ್ಥನೆಯಲ್ಲಿ ಅವನು ಹೇಳಿದ್ದು: “ಯೆಹೂದ್ಯರ ಧರ್ಮಶಾಸ್ತ್ರದ ವಿಷಯದಲ್ಲಾಗಲಿ ದೇವಾಲಯದ ವಿಷಯದಲ್ಲಾಗಲಿ ಚಕ್ರವರ್ತಿಯ ವಿಷಯದಲ್ಲಾಗಲಿ ನಾನು ಯಾವ ತಪ್ಪನ್ನೂ ಮಾಡಲಿಲ್ಲ . . . ನಾನು ಚಕ್ರವರ್ತಿಯ ಎದುರಿನಲ್ಲಿ ಹೇಳಿಕೊಳ್ಳುತ್ತೇನೆ.” (ಅ. ಕೃತ್ಯಗಳು 25:8, 11) ಯೆಹೂದ್ಯರು ತನ್ನನ್ನು ಕೊಲ್ಲಲು ಸಂಚು ಹೂಡುತ್ತಿರುವುದರ ಪ್ರಜ್ಞೆಯುಳ್ಳವನಾಗಿ, ರೋಮನ್ ಸಾಮ್ರಾಟನ ಅಧಿಕಾರವನ್ನು ಹೀಗೆ ಅಂಗೀಕರಿಸುತ್ತಾ ಪೌಲನು ನೀರೋವಿಗೆ ಅಪೀಲು ಮಾಡಿದನು. ಫಲಸ್ವರೂಪವಾಗಿ, ರೋಮ್ನಲ್ಲಿನ ತನ್ನ ಪ್ರಥಮ ವಿಚಾರಣೆಯಲ್ಲಿ ಪೌಲನು ಬಿಡಿಸಲ್ಪಟ್ಟನೆಂದು ತೋರುತ್ತದೆ. ಆದರೆ ತದನಂತರ, ಅವನು ಪುನಃ ಒಮ್ಮೆ ಸೆರೆಮನೆಗೆ ಹಾಕಲ್ಪಟ್ಟನು, ಮತ್ತು ಸಂಪ್ರದಾಯಕ್ಕನುಸಾರ ನೀರೋವಿನ ಅಪ್ಪಣೆಗನುಗುಣವಾಗಿ ಅವನು ಹತಿಸಲ್ಪಟ್ಟನು.
ರೋಮನ್ ಸಮಾಜದಲ್ಲಿದ್ದ ಆರಂಭದ ಕ್ರೈಸ್ತರ ಕಷ್ಟಕರ ಸ್ಥಾನದ ಕುರಿತಾಗಿ, ಸಮಾಜಶಾಸ್ತ್ರಜ್ಞನೂ ದೇವತಾಶಾಸ್ತ್ರಜ್ಞನೂ ಆಗಿದ್ದ ಅರ್ನ್ಸ್ಟ್ ಟ್ರೋಎಲ್ಟಕ್ ಬರೆದುದು: “ವಿಗ್ರಹಾರಾಧನೆಯೊಂದಿಗೆ ಅಥವಾ ಸಾಮ್ರಾಟನ ಆರಾಧನೆಯೊಂದಿಗೆ ಯಾವುದೇ ಸಂಬಂಧವಿದ್ದ, ಅಥವಾ ರಕ್ತಪಾತ ಅಥವಾ ಮರಣದಂಡನೆಯೊಂದಿಗೆ ಯಾವುದೇ ಸಂಬಂಧವಿದ್ದ, ಅಥವಾ ವಿಧರ್ಮಿ ಅನೈತಿಕತೆಯೊಂದಿಗೆ ಕ್ರೈಸ್ತರನ್ನು ಸಂಪರ್ಕಕ್ಕೆ ತರುವಂತಹ ಎಲ್ಲಾ ಸ್ಥಾನಗಳು ಮತ್ತು ಬೆನ್ನಟ್ಟುವಿಕೆಗಳು ಪ್ರತಿಬಂಧಿಸಲ್ಪಟ್ಟವು.” ಈ ನಿಲುವು, ಕ್ರೈಸ್ತರ ಮತ್ತು ರಾಜ್ಯದ ನಡುವೆ ಒಂದು ಶಾಂತಿಯುಕ್ತ ಮತ್ತು ಪರಸ್ಪರ ಗೌರವಪೂರ್ಣ ಸಂಬಂಧಕ್ಕಾಗಿ ಯಾವುದೇ ಎಡೆಯನ್ನು ಕೊಡಲಿಲ್ಲವೊ?
ಕೈಸರನಿಗೆ ಅವನಿಗೆ “ಸಲ್ಲಿಸತಕ್ಕದ್ದನ್ನು” ಸಲ್ಲಿಸುವುದು
ರೋಮನ್ ರಾಜ್ಯ ಅಥವಾ ಬೇರೆ ಯಾವುದೇ ಸರಕಾರದ ಕಡೆಗೆ ಕ್ರೈಸ್ತ ನಡತೆಯನ್ನು ನಿಗ್ರಹಿಸಲಿದ್ದ ಒಂದು ಸೂತ್ರವನ್ನು, ಯೇಸು ಹೀಗೆ ಘೋಷಿಸಿದಾಗ ಒದಗಿಸಿದನು: “ಕೈಸರನದನ್ನು ಕೈಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ.” (ಮತ್ತಾಯ 22:21) ಯೇಸುವಿನ ಹಿಂಬಾಲಕರಿಗೆ ಕೊಡಲ್ಪಟ್ಟ ಈ ಸಲಹೆಯು, ರೋಮನ್ ಆಧಿಪತ್ಯದ ಕುರಿತಾಗಿ ಅಸಮಾಧಾನಪಟ್ಟು, ಒಂದು ವಿದೇಶೀ ಪ್ರಭುತ್ವಕ್ಕೆ ತೆರಿಗೆಗಳನ್ನು ಸಲ್ಲಿಸುವ ಕಾನೂನುಬದ್ಧತೆಯನ್ನು ವಿರೋಧಿಸಿದ ಅನೇಕ ರಾಷ್ಟ್ರೀಯವಾದಿ ಯೆಹೂದ್ಯರ ಮನೋಭಾವದೊಂದಿಗೆ ತೀರ ವ್ಯತಿರಿಕ್ತವಾಗಿತ್ತು.
ಅನಂತರ, ಪೌಲನು ರೋಮ್ನಲ್ಲಿ ಜೀವಿಸುತ್ತಿದ್ದ ಕ್ರೈಸ್ತರಿಗೆ ಹೇಳಿದ್ದು: “ಆದಕಾರಣ ದಂಡನೆಯಾದೀತೆಂದು ಮಾತ್ರವಲ್ಲದೆ ಮನಸ್ಸಿಗೆ ನ್ಯಾಯವಾಗಿ ತೋರುವದರಿಂದಲೂ ಅವನಿಗೆ ಅಧೀನನಾಗುವದು ಅವಶ್ಯ. ಈ ಕಾರಣದಿಂದಲೇ ನೀವು ಕಂದಾಯವನ್ನು ಕೂಡ ಕೊಡುತ್ತೀರಿ. ಯಾಕಂದರೆ ಕಂದಾಯ ಎತ್ತುವವರು [ಸರಕಾರಿ “ಮೇಲಧಿಕಾರಿಗಳು (NW)”] ದೇವರ ಉದ್ಯೋಗಿಗಳಾಗಿದ್ದು ಆ ಕೆಲಸದಲ್ಲಿಯೇ ನಿರತರಾಗಿರುತ್ತಾರೆ. ಅವರವರಿಗೆ ಸಲ್ಲಿಸತಕ್ಕದ್ದನ್ನು ಸಲ್ಲಿಸಿರಿ; ಯಾರಿಗೆ ಕಂದಾಯವೋ ಅವರಿಗೆ ಕಂದಾಯವನ್ನು, . . . ಯಾರಿಗೆ ಮರ್ಯಾದೆಯೋ ಅವರಿಗೆ ಮರ್ಯಾದೆಯನ್ನು ಸಲ್ಲಿಸಿರಿ.” (ರೋಮಾಪುರ 13:5-7) ಕ್ರೈಸ್ತರು ಲೋಕದ ಭಾಗವಾಗಿಲ್ಲದಿರುವಾಗ, ನೀಡಲ್ಪಡುವ ಸೇವೆಗಳಿಗಾಗಿ ರಾಜ್ಯಕ್ಕೆ ಪಾವತಿಮಾಡುತ್ತಾ, ಅವರು ಪ್ರಾಮಾಣಿಕರಾದ, ತೆರಿಗೆಯನ್ನು ಸಲ್ಲಿಸುವ ನಾಗರಿಕರಾಗಿರಲು ಹಂಗಿಗರಾಗಿದ್ದರು.—ಯೋಹಾನ 17:16.
ಆದರೆ ಯೇಸುವಿನ ಮಾತುಗಳು ತೆರಿಗೆಗಳನ್ನು ಸಲ್ಲಿಸುವುದಕ್ಕೆ ಮಾತ್ರ ಸೀಮಿತವಾಗಿವೆಯೊ? ಕೈಸರನದ್ದು ಯಾವುದು ಮತ್ತು ದೇವರದ್ದು ಯಾವುದೆಂದು ಯೇಸು ನಿಷ್ಕೃಷ್ಟವಾಗಿ ಅರ್ಥನಿರೂಪಿಸಲಿಲ್ಲವಾದ್ದರಿಂದ, ಪೂರ್ವಾಪರಕ್ಕನುಸಾರ ಅಥವಾ ಇಡೀ ಬೈಬಲಿನ ನಮ್ಮ ತಿಳಿವಳಿಕೆಗನುಸಾರ ನಿರ್ಣಯಿಸಲ್ಪಡಬೇಕಾದ, ಗಡಿರೇಖೆಯ ವಿದ್ಯಮಾನಗಳಿವೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಕ್ರೈಸ್ತನೊಬ್ಬನು ಕೈಸರನಿಗೆ ಸಲ್ಲಿಸಸಾಧ್ಯವಿರುವ ವಿಷಯಗಳನ್ನು ನಿರ್ಣಯಿಸುವುದು, ಕೆಲವೊಮ್ಮೆ ಬೈಬಲ್ ಸೂತ್ರಗಳಿಂದ ಪ್ರಬೋಧಿಸಲ್ಪಟ್ಟ ಕ್ರೈಸ್ತ ಮನಸ್ಸಾಕ್ಷಿಯನ್ನು ಒಳಗೂಡಸಾಧ್ಯವಿದೆ.
ಸ್ಪರ್ಧಿಸುವ ಎರಡು ಕೋರಿಕೆಗಳ ನಡುವೆ ಒಂದು ಜಾಗರೂಕವಾದ ಸಮತೂಕ
ಕೈಸರನ ಸಂಗತಿಗಳು ಅವನಿಗೆ ಹಿಂದೆ ತೆರಲ್ಪಡಬೇಕೆಂದು ತಿಳಿಸಿದ ನಂತರ, ಯೇಸು “ದೇವರದನ್ನು ದೇವರಿಗೆ ಕೊಡಿರಿ” ಎಂಬುದನ್ನು ಕೂಡಿಸಿರುವುದನ್ನು ಅನೇಕ ಜನರು ಮರೆತುಬಿಡುವ ಪ್ರವೃತ್ತಿಯುಳ್ಳವರಾಗಿರುತ್ತಾರೆ. ಕ್ರೈಸ್ತರಿಗೆ ಪ್ರಾಧಾನ್ಯತೆ ಯಾವುದೆಂದು ಅಪೊಸ್ತಲ ಪೇತ್ರನು ತೋರಿಸಿದನು. “ಅರಸ”ನು ಅಥವಾ ಸಾಮ್ರಾಟನು, ಮತ್ತು ಅವನ “ಅಧಿಪತಿಗಳಿ”ಗೆ ಅಧೀನತೆಯ ಕುರಿತಾಗಿ ಸಲಹೆ ನೀಡಿದ ಬಳಿಕ, ಕೂಡಲೇ ಪೇತ್ರನು ಬರೆದುದು: “ಸ್ವತಂತ್ರರಂತೆ ನಡೆದುಕೊಳ್ಳಿರಿ; ಆದರೆ ಕೆಟ್ಟತನವನ್ನು ಮರೆಮಾಜುವದಕ್ಕೆ ನಿಮ್ಮ ಸ್ವಾತಂತ್ರ್ಯವನ್ನು ಉಪಯೋಗಿಸಬೇಡಿರಿ; ನೀವು ದೇವರ ದಾಸರಾಗಿದ್ದೀರಲ್ಲಾ. ಎಲ್ಲರನ್ನೂ ಸನ್ಮಾನಿಸಿರಿ. ಸಹೋದರರನ್ನು ಪ್ರೀತಿಸಿರಿ. ದೇವರಿಗೆ ಭಯಪಡಿರಿ. ಅರಸನನ್ನು ಸನ್ಮಾನಿಸಿರಿ.” (1 ಪೇತ್ರ 2:16, 17) ಕ್ರೈಸ್ತರು, ಒಬ್ಬ ಮಾನವ ಅಧಿಪತಿಯ ದಾಸರಲ್ಲ, ದೇವರ ದಾಸರಾಗಿದ್ದಾರೆಂಬುದನ್ನು ಅಪೊಸ್ತಲನು ತೋರಿಸಿದನು. ರಾಜ್ಯದ ಪ್ರತಿನಿಧಿಗಳಿಗಾಗಿ ಅವರು ಯೋಗ್ಯವಾದ ಮಾನ ಮತ್ತು ಗೌರವವನ್ನು ತೋರಿಸಬೇಕಾಗಿರುವಾಗ, ಅವರು ಇದನ್ನು ಯಾರ ನಿಯಮಗಳು ಪರಮಪ್ರಧಾನವಾಗಿಯೋ ಆ ದೇವರ ಭಯದಲ್ಲಿ ಮಾಡತಕ್ಕದ್ದು.
ಕೆಲವು ವರ್ಷಗಳ ಮುಂಚೆ ಪೇತ್ರನು, ಮನುಷ್ಯನ ನಿಯಮಕ್ಕಿಂತ ದೇವರ ನಿಯಮದ ಸರ್ವೋತ್ಕೃಷ್ಟತೆಯ ವಿಷಯವನ್ನು ಖಚಿತಗೊಳಿಸಿದನು. ಯಾವುದಕ್ಕೆ ರೋಮನರು ಪೌರ ಹಾಗೂ ಧಾರ್ಮಿಕ ಅಧಿಕಾರವನ್ನು ಕೊಟ್ಟಿದ್ದರೊ ಆ ಯೆಹೂದಿ ಸನ್ಹೇದ್ರಿನ್, ಒಂದು ಆಡಳಿತ ಮಂಡಳಿಯಾಗಿತ್ತು. ಕ್ರಿಸ್ತನ ಹೆಸರಿನಲ್ಲಿ ಕಲಿಸುವುದನ್ನು ನಿಲ್ಲಿಸಲು ಅದು ಯೇಸುವಿನ ಹಿಂಬಾಲಕರಿಗೆ ಆಜ್ಞಾಪಿಸಿದಾಗ, ಪೇತ್ರನು ಮತ್ತು ಇತರ ಅಪೊಸ್ತಲರು ಗೌರವಯುತವಾಗಿ, ಆದರೆ ದೃಢವಾಗಿ ಉತ್ತರಿಸಿದ್ದು: “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ.” (ಅ. ಕೃತ್ಯಗಳು 5:29) ಸ್ಪಷ್ಟವಾಗಿ, ಆರಂಭದ ಕ್ರೈಸ್ತರು ದೇವರಿಗೆ ವಿಧೇಯತೆ ಮತ್ತು ಮಾನವ ಅಧಿಕಾರಿಗಳಿಗೆ ಯೋಗ್ಯ ಅಧೀನತೆಯ ನಡುವೆ ಒಂದು ಜಾಗರೂಕವಾದ ಸಮತೂಕವನ್ನು ಕಾಪಾಡಿಕೊಳ್ಳಬೇಕಾಗಿತ್ತು. ಸಾ.ಶ. ಮೂರನೆಯ ಶತಮಾನದಲ್ಲಿ ಟೆರ್ಟುಲ್ಯನನು ಅದನ್ನು ಈ ರೀತಿಯಲ್ಲಿ ವ್ಯಕ್ತಪಡಿಸಿದನು: “ಎಲ್ಲವೂ ಕೈಸರನದ್ದಾಗಿರುವಲ್ಲಿ, ದೇವರಿಗಾಗಿ ಏನು ಉಳಿದಿರುವುದು?”
ರಾಜ್ಯದೊಂದಿಗೆ ಸಂಧಾನ
ಸಮಯವು ಗತಿಸಿದಂತೆ, ರಾಜ್ಯದ ಸಂಬಂಧದಲ್ಲಿ ಪ್ರಥಮ ಶತಮಾನದ ಕ್ರೈಸ್ತರು ಸ್ವೀಕರಿಸಿದ ಸ್ಥಾನವು ಕ್ರಮೇಣವಾಗಿ ದುರ್ಬಲಗೊಂಡಿತು. ಯೇಸು ಮತ್ತು ಅಪೊಸ್ತಲರಿಂದ ಮುಂತಿಳಿಸಲ್ಪಟ್ಟಿದ್ದ ಧರ್ಮಭ್ರಷ್ಟತೆಯು, ಸಾ.ಶ. ಎರಡನೆಯ ಮತ್ತು ಮೂರನೆಯ ಶತಮಾನಗಳಲ್ಲಿ ಅರಳಿತು. (ಮತ್ತಾಯ 13:37, 38; ಅ. ಕೃತ್ಯಗಳು 20:29, 30; 2 ಥೆಸಲೊನೀಕ 2:3-12; 2 ಪೇತ್ರ 2:1-3) ಧರ್ಮಭ್ರಷ್ಟ ಕ್ರೈಸ್ತತ್ವವು ರೋಮನ್ ಜಗತ್ತಿನೊಂದಿಗೆ ಸಂಧಾನಗಳನ್ನು ಮಾಡಿಕೊಂಡಿತು, ಅದರ ವಿಧರ್ಮಿ ಹಬ್ಬಗಳನ್ನು ಮತ್ತು ಅದರ ತತ್ತ್ವಜ್ಞಾನವನ್ನು ದತ್ತುಸ್ವೀಕರಿಸಿತು, ಮತ್ತು ಪೌರ ಸೇವೆಯನ್ನು ಮಾತ್ರವಲ್ಲ, ಮಿಲಿಟರಿ ಸೇವೆಯನ್ನೂ ಸ್ವೀಕರಿಸಿತು.
ಪ್ರೊಫೆಸರ್ ಟ್ರೋಎಲ್ಟಕ್ ಬರೆದುದು: “ಮೂರನೆಯ ಶತಮಾನದಂದಿನಿಂದ ಪರಿಸ್ಥಿತಿಯು ಹೆಚ್ಚು ಕಷ್ಟಕರವಾಗತೊಡಗಿತು, ಯಾಕಂದರೆ ಕ್ರೈಸ್ತರು ಸಮಾಜದ ಉಚ್ಚ ಸ್ಥಾನಗಳಲ್ಲಿ ಮತ್ತು ಹೆಚ್ಚು ಪ್ರಖ್ಯಾತ ವೃತ್ತಿಗಳಲ್ಲಿ, ಸೈನ್ಯದಲ್ಲಿ ಮತ್ತು ಅಧಿಕೃತ ವೃತ್ತಗಳಲ್ಲಿ ಹೆಚ್ಚು ಬಹುಸಂಖ್ಯಾಕರಾದರು. [ಬೈಬಲೇತರ] ಕ್ರೈಸ್ತ ಬರವಣಿಗೆಗಳಲ್ಲಿನ ಅನೇಕ ಭಾಗಗಳಲ್ಲಿ ಇಂತಹ ವಿಷಯಗಳಲ್ಲಿ ಭಾಗವಹಿಸುವುದರ ವಿರುದ್ಧ ಕೋಪದ ಪ್ರತಿಭಟಿಸುವಿಕೆಗಳಿವೆ; ಇನ್ನೊಂದು ಕಡೆಯಲ್ಲಿ, ಸಂಧಾನ ಮಾಡುವ ಪ್ರಯತ್ನಗಳನ್ನೂ ನಾವು ಕಂಡುಕೊಳ್ಳುತ್ತೇವೆ—ಅಶಾಂತ ಮನಸ್ಸಾಕ್ಷಿಗಳನ್ನು ಶಮನಗೊಳಿಸಲು ರಚಿಸಲ್ಪಟ್ಟ ವಾದಗಳು . . . ಕಾನ್ಸ್ಟಂಟೀನನ ಸಮಯದಂದಿನಿಂದ ಈ ಕಷ್ಟಗಳು ಕಾಣೆಯಾದವು; ಕ್ರೈಸ್ತರ ಮತ್ತು ವಿಧರ್ಮಿಗಳ ನಡುವಿನ ಘರ್ಷಣೆಯು ನಿಂತಿತು, ಮತ್ತು ರಾಜ್ಯದಲ್ಲಿರುವ ಎಲ್ಲಾ ಹುದ್ದೆಗಳು ಕ್ರೈಸ್ತರೆಂದು ಹೇಳಿಕೊಳ್ಳುವವರಿಗಾಗಿ ಲಭ್ಯಗೊಳಿಸಲ್ಪಟ್ಟವು.”
ಸಾ.ಶ. ನಾಲ್ಕನೆಯ ಶತಮಾನದ ಅಂತ್ಯದಷ್ಟಕ್ಕೆ, ಕ್ರೈಸ್ತತ್ವದ ಈ ಬೆರಕೆ ಮಾಡಲ್ಪಟ್ಟ, ಸಂಧಾನ ಮಾಡುವ ರೂಪವು, ರೋಮನ್ ಸಾಮ್ರಾಜ್ಯದ ರಾಜ್ಯ ಧರ್ಮವಾಯಿತು.
ಅದರ ಇತಿಹಾಸದಾದ್ಯಂತ—ಕ್ಯಾಥೊಲಿಕ್, ಆರ್ತೊಡಾಕ್ಸ್, ಮತ್ತು ಪ್ರಾಟೆಸ್ಟೆಂಟ್ ಚರ್ಚುಗಳಿಂದ ಪ್ರತಿನಿಧಿಸಲ್ಪಟ್ಟ—ಕ್ರೈಸ್ತಪ್ರಪಂಚವು, ರಾಜ್ಯದೊಂದಿಗೆ ಅದರ ರಾಜಕೀಯದಲ್ಲಿ ಆಳವಾಗಿ ಒಳಗೂಡುತ್ತಾ, ಅದರ ಯುದ್ಧಗಳಲ್ಲಿ ಅದನ್ನು ಬೆಂಬಲಿಸುತ್ತಾ, ಸಂಧಾನಮಾಡುವುದನ್ನು ಮುಂದುವರಿಸಿದೆ. ಇದರಿಂದ ದಿಗಿಲುಗೊಂಡಿರುವ ಅನೇಕ ಪ್ರಾಮಾಣಿಕ ಚರ್ಚ್ ಸದಸ್ಯರು ಇದನ್ನು ತಿಳಿಯಲು ಸಂತೋಷಪಡುವರು ಏನಂದರೆ, ರಾಜ್ಯದೊಂದಿಗಿನ ತಮ್ಮ ಸಂಬಂಧದಲ್ಲಿ, ಪ್ರಥಮ ಶತಮಾನದ ಕ್ರೈಸ್ತರ ನಿಲುವನ್ನು ಹೊಂದಿರುವ ಕ್ರೈಸ್ತರು ಇಂದು ಇದ್ದಾರೆ. ಮುಂದಿನ ಎರಡು ಲೇಖನಗಳು ಈ ವಿಷಯವನ್ನು ಸವಿಸ್ತಾರವಾಗಿ ಚರ್ಚಿಸುವವು.
[ಪುಟ 5 ರಲ್ಲಿರುವ ಚಿತ್ರ]
“ಅರಸನನ್ನು ಸನ್ಮಾನಿಸಿರಿ” ಎಂದು ಯಾರ ಕುರಿತಾಗಿ ಪೇತ್ರನು ಬರೆದನೋ ಆ ಕೈಸರನಾದ ನೀರೋ
[ಕೃಪೆ]
Musei Capitolini, Roma
[ಪುಟ 6 ರಲ್ಲಿರುವ ಚಿತ್ರ]
ಪೋಲಿಕಾರ್ಪನು, ಸಾಮ್ರಾಟನನ್ನು ಆರಾಧಿಸುವುದಕ್ಕಿಂತ ಸಾಯುವದನ್ನು ಆರಿಸಿಕೊಂಡನು
[ಪುಟ 7 ರಲ್ಲಿರುವ ಚಿತ್ರ]
ಆರಂಭದ ಕ್ರೈಸ್ತರು ಶಾಂತಭರಿತರೂ, ಪ್ರಾಮಾಣಿಕರೂ, ತೆರಿಗೆಯನ್ನು ಸಲ್ಲಿಸುವವರೂ ಆದ ನಾಗರಿಕರಾಗಿದ್ದರು