ನಿಜ ಭದ್ರತೆ ಹಿಡಿತಕ್ಕೆ ಸಿಕ್ಕದ ಒಂದು ಗುರಿ
ಆರ್ನಾಲ್ಡ್, ತುರುಕಿ ಉಬ್ಬಿಸಿರುವ ತನ್ನ ಆಟಿಕೆ ಹುಲಿಯನ್ನು ಪ್ರೀತಿಸುತ್ತಿದ್ದ ಒಬ್ಬ ಮಗುವಾಗಿದ್ದನು. ಅವನು ಹೋದಲ್ಲೆಲ್ಲಾ, ಅದನ್ನು ತನ್ನೊಂದಿಗೆ ಎಳೆದೊಯ್ಯುತ್ತಿದ್ದನು—ಆಟಕ್ಕೆ, ಊಟದ ಮೇಜಿಗೆ, ತನ್ನ ಹಾಸಿಗೆಗೆ. ಅವನಿಗೆ, ಆ ಹುಲಿಯು ಸಾಂತ್ವನವನ್ನು, ಭದ್ರತೆಯನ್ನು ಒದಗಿಸಿತು. ಒಂದು ದಿನ, ಒಂದು ಬಿಕ್ಕಟ್ಟು ಎದ್ದಿತು. ಹುಲಿಯು ಕಾಣೆಯಾಗಿತ್ತು!
ಆರ್ನಾಲ್ಡ್ ಅಳುತ್ತಾ ಇದ್ದಾಗ, ಅವನ ತಾಯಿ, ತಂದೆ, ಮತ್ತು ಮೂವರು ಅಣ್ಣಂದಿರು ಆ ಹುಲಿಯನ್ನು ಕಂಡುಹಿಡಿಯಲು ತಮ್ಮ ದೊಡ್ಡ ಮನೆಯನ್ನು ಶೋಧಿಸಿದರು. ಅವರಲ್ಲಿ ಒಬ್ಬರು ಕೊನೆಗೆ ಅದನ್ನು ಒಂದು ಡ್ರಾಯರಿನಲ್ಲಿ ಕಂಡುಹಿಡಿದರು. ಆರ್ನಾಲ್ಡ್ ಅದನ್ನು ಅಲ್ಲಿ ಹಾಕಿ, ಅದು ಎಲ್ಲಿದೆಯೆಂಬುದನ್ನು ಕೂಡಲೇ ಮರೆತಿದ್ದನೆಂಬುದು ವ್ಯಕ್ತ. ಹುಲಿಯನ್ನು ಹಿಂದಿರುಗಿಸಲಾಯಿತು ಮತ್ತು ಆರ್ನಾಲ್ಡ್ ತನ್ನ ಕಣ್ಣೀರನ್ನು ಒರಸಿಕೊಂಡನು. ಅವನು ಪುನಃ ಒಮ್ಮೆ ಸಂತೋಷಿತನಾಗಿ ಭದ್ರತೆಯ ಅನಿಸಿಕೆಯನ್ನು ಪಡೆದನು.
ಎಲ್ಲಾ ಸಮಸ್ಯೆಗಳನ್ನು ಅಷ್ಟೇ ಸುಲಭವಾಗಿ—ಒಂದು ಡ್ರಾಯರಿನಲ್ಲಿ ಒಂದು ಆಟಿಕೆ ಹುಲಿಯನ್ನು ಕಂಡುಹಿಡಿಯುವಷ್ಟು ಸರಳವಾಗಿ—ಬಗೆಹರಿಸಲು ಸಾಧ್ಯವಿರುತ್ತಿದ್ದಲ್ಲಿ ಎಷ್ಟು ಉತ್ತಮವಾಗಿರುತ್ತಿತ್ತು! ಹೆಚ್ಚಿನ ಜನರಿಗಾದರೋ, ಭದ್ರತೆಯ ಕುರಿತಾದ ಪ್ರಶ್ನೆಗಳು ಅದಕ್ಕಿಂತಲೂ ಹೆಚ್ಚು ಗಂಭೀರ ಮತ್ತು ಸಂಕ್ಲಿಷ್ಟಕರವಾಗಿವೆ. ‘ನಾನು ಪಾತಕ ಅಥವಾ ಹಿಂಸಾಚಾರಕ್ಕೆ ಬಲಿಯಾಗುವೆನೋ? ನಾನು ನನ್ನ ಉದ್ಯೋಗವನ್ನು ಕಳೆದುಕೊಳ್ಳುವ ಅಪಾಯದಲ್ಲಿದ್ದೇನೊ? ನನ್ನ ಕುಟುಂಬಕ್ಕೆ ಸಾಕಷ್ಟು ಆಹಾರ ಇರುವುದು ನಿಶ್ಚಿತವೊ? ನನ್ನ ಧರ್ಮ ಅಥವಾ ನನ್ನ ಕುಲ ಸಂಬಂಧಿತ ಹಿನ್ನೆಲೆಯ ಕಾರಣದಿಂದ ಇತರರು ನನ್ನನ್ನು ದೂರವಿರಿಸುವರೊ?’ ಎಂದು ಬಹುಮಟ್ಟಿಗೆ ಎಲ್ಲೆಡೆಯೂ ಇರುವ ಜನರು ಸೋಜಿಗಪಡುತ್ತಾರೆ.
ಭದ್ರತೆಯ ಕೊರತೆಯನ್ನು ಅನುಭವಿಸುವ ಜನರ ಸಂಖ್ಯೆಯು ಅಪಾರವಾಗಿದೆ. ವಿಶ್ವ ಸಂಸ್ಥೆಗನುಸಾರ, ಬಹುಮಟ್ಟಿಗೆ 300 ಕೋಟಿ ಜನರಿಗೆ, ಸಾಮಾನ್ಯ ರೋಗಗಳ ಚಿಕಿತ್ಸೆ ಮಾತ್ರವಲ್ಲ, ಅತ್ಯಾವಶ್ಯಕ ಔಷಧಗಳೂ ದೊರೆಯುವುದಿಲ್ಲ. 100 ಕೋಟಿಗಿಂತಲೂ ಹೆಚ್ಚು ಜನರು ಕಡು ಬಡತನದಲ್ಲಿ ಕ್ಷಯಿಸುತ್ತಿದ್ದಾರೆ. ಬಹುಮಟ್ಟಿಗೆ 100 ಕೋಟಿ ಮಂದಿ, ಕೆಲಸ ಮಾಡಲು ಶಕ್ತರಾಗಿರುವುದಾದರೂ, ಉತ್ಪನ್ನಕರವಾದ ರೀತಿಯ ಕೆಲಸಕ್ಕೆ ಉಪಯೋಗಿಸಲ್ಪಟ್ಟಿಲ್ಲ. ನಿರಾಶ್ರಿತರ ಸಂಖ್ಯೆಯು ವೃದ್ಧಿಯಾಗುತ್ತಿದೆ. 1994ರ ಅಂತ್ಯದಷ್ಟಕ್ಕೆ, ಭೂಮಿಯ ಮೇಲಿರುವ ಪ್ರತಿ 115 ಜನರಲ್ಲಿ ಸುಮಾರು ಒಬ್ಬರು ತಮ್ಮ ಮನೆಗಳಿಂದ ಓಡಿಹೋಗುವಂತೆ ಬಲಾತ್ಕರಿಸಲ್ಪಟ್ಟರು. ಪಾತಕ ಮತ್ತು ಹಿಂಸಾಚಾರದ ಅಸಂಖ್ಯಾತ ಕೃತ್ಯಗಳನ್ನು ಹುಟ್ಟಿಸುವ, ಒಂದು ವರ್ಷಕ್ಕೆ 50,000 ಕೋಟಿ ಡಾಲರುಗಳನ್ನು ಮಾಡುವ ನಾರ್ಕಾಟಿಕ್ ಉದ್ಯಮದ ಪರಿಣಾಮವಾಗಿ ಕೋಟಿಗಟ್ಟಲೆ ಜೀವಗಳು ನಾಶಗೊಳಿಸಲ್ಪಡುತ್ತವೆ. ಯುದ್ಧವು ಕೋಟಿಗಟ್ಟಲೆ ಜೀವಗಳನ್ನು ಧ್ವಂಸಗೊಳಿಸುತ್ತದೆ. 1993ರರೊಂದರಲ್ಲೇ, 42 ದೇಶಗಳು ಪ್ರಧಾನ ಸಂಘರ್ಷಗಳಲ್ಲಿ ಒಳಗೂಡಿದವು, ಮತ್ತು ಇತರ 37 ದೇಶಗಳು ರಾಜಕೀಯ ಹಿಂಸಾಚಾರವನ್ನು ಅನುಭವಿಸಿದವು.
ಯುದ್ಧ, ಬಡತನ, ಪಾತಕ, ಮತ್ತು ಮಾನವ ಭದ್ರತೆಗೆ ಇನ್ನಿತರ ಬೆದರಿಕೆಗಳು ಪರಸ್ಪರ ಸಂಬಂಧಿತವಾಗಿವೆ, ಮತ್ತು ಅವು ಸಂಖ್ಯೆಯಲ್ಲಿ ಬೆಳೆಯುತ್ತಿವೆ. ಅಂತಹ ಸಮಸ್ಯೆಗಳಿಗೆ ಸುಲಭವಾದ ಪರಿಹಾರಗಳಿಲ್ಲ. ವಾಸ್ತವದಲ್ಲಿ, ಮಾನವರು ಅವುಗಳನ್ನು ಎಂದೂ ಬಗೆಹರಿಸರು.
“ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನವನನ್ನು ನೆಚ್ಚಬೇಡಿರಿ, ಅವನು ಸಹಾಯ ಮಾಡ ಶಕ್ತನಲ್ಲ,” ಎಂದು ದೇವರ ವಾಕ್ಯವಾದ ಬೈಬಲ್ ಎಚ್ಚರಿಸುತ್ತದೆ. ಹಾಗಾದರೆ, ನಾವು ಯಾರಲ್ಲಿ ಭರವಸೆಯನ್ನಿಡಬಲ್ಲೆವು? ಈ ವಚನವು ಮುಂದುವರಿಸುವುದು: “ಯಾವನಿಗೆ ಯಾಕೋಬನ ದೇವರು ಸಹಾಯಕನೋ ಯಾವನು ತನ್ನ ದೇವರಾದ ಯೆಹೋವನನ್ನು ನಂಬಿರುತ್ತಾನೋ ಅವನೇ ಧನ್ಯನು. ಭೂಮಿ, ಆಕಾಶ, ಸಾಗರ ಚರಾಚರ ಇವುಗಳನ್ನು ನಿರ್ಮಿಸಿದವನೂ.”—ಕೀರ್ತನೆ 146:3-6.
ಈ ಭೂಮಿಗೆ ಭದ್ರತೆಯನ್ನು ತರುವಂತೆ ನಾವು ಯೆಹೋವನಲ್ಲಿ ಏಕೆ ಭರವಸೆಯನ್ನಿಡಸಾಧ್ಯವಿದೆ? ಭದ್ರವಾದ, ಸಂತೋಷಕರ ಜೀವಿತಗಳನ್ನು ಈಗ ಅನುಭವಿಸುವುದು ಸಾಧ್ಯವೊ? ಮಾನವ ಭದ್ರತೆಗಿರುವ ಅಡ್ಡಿಗಳನ್ನು ದೇವರು ಹೇಗೆ ತೆಗೆದುಹಾಕುವನು?