ಸಕಲರೂ ಯೆಹೋವನನ್ನು ಮಹಿಮೆಪಡಿಸಲಿ!
“ಬೆಳಕು ಮೂಡುವ ಕ್ಷೇತ್ರದಲ್ಲಿ ಅವರು ಯೆಹೋವನನ್ನು ಮಹಿಮೆಪಡಿಸಬೇಕು.”—ಯೆಶಾಯ 24:15, NW.
1. ಯೆಹೋವನ ಹೆಸರು ಆತನ ಪ್ರವಾದಿಗಳಿಂದ ಹೇಗೆ ಎಣಿಸಲ್ಪಡುತ್ತಿತ್ತು, ಇಂದು ಕ್ರೈಸ್ತಪ್ರಪಂಚದಲ್ಲಿರುವ ಯಾವ ಮನೋಭಾವಕ್ಕೆ ಇದು ವ್ಯತಿರಿಕ್ತವಾಗಿದೆ?
ಯೆಹೋವ—ದೇವರ ಪ್ರಖ್ಯಾತ ಹೆಸರು! ಆ ಹೆಸರನ್ನುಪಯೋಗಿಸಿ ಮಾತಾಡಲು, ಗತಕಾಲದ ನಂಬಿಗಸ್ತ ಪ್ರವಾದಿಗಳು ಎಷ್ಟೊಂದು ಹರ್ಷಿಸಿದರು! ಯಾರ ಹೆಸರು ಆತನನ್ನು ಮಹಾ ಉದ್ದೇಶಕನೋಪಾದಿ ಗುರುತಿಸುತ್ತದೊ, ಆ ಪರಮಾಧಿಕಾರಿ ಕರ್ತನಾದ ಯೆಹೋವನನ್ನು ಅವರು ಸಂಭ್ರಮದಿಂದ ಮಹಿಮೆಪಡಿಸಿದರು. (ಯೆಶಾಯ 40:5; ಯೆರೆಮೀಯ 10:6, 10; ಯೆಹೆಜ್ಕೇಲ 36:23) ಯೆಹೋವನಿಗೆ ಮಹಿಮೆ ನೀಡುವುದರಲ್ಲಿ, ಅಪ್ರಧಾನರೆಂದು ಕರೆಯಲ್ಪಡುವ ಪ್ರವಾದಿಗಳೂ ಬಹಳ ಅಭಿವ್ಯಕ್ತಾತ್ಮಕರಾಗಿದ್ದರು. ಇವರಲ್ಲಿ ಹಗ್ಗಾಯನು ಒಬ್ಬನಾಗಿದ್ದನು. ಕೇವಲ 38 ವಚನಗಳಿಂದ ರಚಿತವಾಗಿರುವ ಹಗ್ಗಾಯನ ಪುಸ್ತಕದಲ್ಲಿ, ದೇವರ ಹೆಸರನ್ನು 35 ಬಾರಿ ಉಪಯೋಗಿಸಲಾಗಿದೆ. ಕ್ರೈಸ್ತಪ್ರಪಂಚದ ನಯನಾಜೂಕಿನ ಅಪೊಸ್ತಲರು ತಮ್ಮ ಬೈಬಲ್ ಭಾಷಾಂತರಗಳಲ್ಲಿ ತರ್ಜುಮೆಮಾಡುವಂತೆ, ಯೆಹೋವ ಎಂಬ ಅಮೂಲ್ಯವಾದ ಹೆಸರನ್ನು “ಕರ್ತನು” ಎಂಬ ಬಿರುದಿನಿಂದ ಸ್ಥಾನಪಲ್ಲಟಗೊಳಿಸುವಾಗ, ಇಂತಹ ಪ್ರವಾದನೆಯು ಜೀವರಹಿತವಾಗಿ ಧ್ವನಿಸುತ್ತದೆ.—2 ಕೊರಿಂಥ 11:5ನ್ನು ಹೋಲಿಸಿರಿ.
2, 3. (ಎ) ಇಸ್ರಾಯೇಲಿನ ಪುನಸ್ಸ್ಥಾಪನೆಯ ಕುರಿತಾದ ಒಂದು ಪ್ರಧಾನ ಪ್ರವಾದನೆಯು ಹೇಗೆ ನೆರವೇರಿತು? (ಬಿ) ಯೆಹೂದಿ ಉಳಿಕೆಯವರು ಮತ್ತು ಅವರ ಸಂಗಾತಿಗಳು ಯಾವ ಆನಂದದಲ್ಲಿ ಪಾಲ್ಗೊಂಡರು?
2 ಯೆಶಾಯ 12:2ರಲ್ಲಿ, ಆ ಹೆಸರಿನ ದ್ವಿರೂಪವನ್ನು ಬಳಸಲಾಗಿದೆ.a ಆ ಪ್ರವಾದಿಯು ಪ್ರಕಟಿಸುವುದು: “ಇಗೋ ದೇವರೇ ನನಗೆ ರಕ್ಷಣೆ, ನಾನು ಹೆದರದೆ ಭರವಸಪಡುವೆನು; ನನ್ನ ಬಲವೂ ಕೀರ್ತನೆಯೂ ಯಾಹುಯೆಹೋವನಷ್ಟೆ, ಆತನೇ ನನಗೆ ರಕ್ಷಕನಾದನು.” (ಯೆಶಾಯ 26:4ನ್ನು ಸಹ ನೋಡಿರಿ.) ಹೀಗೆ, ಬಾಬೆಲಿನ ಸೆರೆಯಿಂದ ಇಸ್ರಾಯೇಲಿನ ಬಿಡುಗಡೆಗೆ ಸುಮಾರು 200 ವರ್ಷಗಳ ಮುಂಚೆಯೇ, ಯಾಹು ಯೆಹೋವನು ತನ್ನ ಪ್ರವಾದಿಯಾದ ಯೆಶಾಯನ ಮುಖಾಂತರ, ತಾನು ಅವರ ಬಲಾಢ್ಯ ರಕ್ಷಕನೆಂಬ ಆಶ್ವಾಸನೆಯನ್ನು ಕೊಡುತ್ತಿದ್ದನು. ಆ ಸೆರೆಯು ಸಾ.ಶ.ಪೂ. 607ರಿಂದ 537ರ ವರೆಗೆ ಮುಂದುವರಿಯಲಿತ್ತು. ಯೆಶಾಯನು ಹೀಗೂ ಬರೆದನು: “ನಾನೇ ಸರ್ವಕಾರ್ಯಕರ್ತನಾದ ಯೆಹೋವನು, . . . ಕೋರೆಷನ ವಿಷಯವಾಗಿ—ಅವನು ನನ್ನ ಮುಂದೆ ಕಾಯುವವನು, ಯೆರೂಸಲೇಮು ಕಟ್ಟಲ್ಪಡಲಿ, ದೇವಸ್ಥಾನದ ಅಸ್ತಿವಾರವು ಹಾಕಲ್ಪಡಲಿ ಎಂದು ಹೇಳಿ ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸತಕ್ಕವನು ಎಂಬದಾಗಿ ಮಾತಾಡುವವನಾಗಿದ್ದೇನೆ.” ಈ ಕೋರೆಷನು ಯಾರಾಗಿದ್ದನು? ಸುಸ್ಪಷ್ಟವಾಗಿಯೇ, ಅವನು ಸಾ.ಶ.ಪೂ. 539ರಲ್ಲಿ ಬಾಬೆಲನ್ನು ಜಯಿಸಿದ, ಪರ್ಷಿಯದ ರಾಜ ಕೋರೆಷನಾಗಿ ಪರಿಣಮಿಸಿದನು.—ಯೆಶಾಯ 44:24, 28.
3 ಯೆಶಾಯನ ಮೂಲಕ ದಾಖಲಿಸಲ್ಪಟ್ಟ ಯೆಹೋವನ ಮಾತುಗಳ ನೆರವೇರಿಕೆಯಲ್ಲಿ, ಕೋರೆಷನು ಸೆರೆಯಲ್ಲಿದ್ದ ಇಸ್ರಾಯೇಲಿಗೆ ಈ ಕಟ್ಟಳೆಯನ್ನು ಹೊರಡಿಸಿದನು: “ನಿಮ್ಮಲ್ಲಿ ಯಾರು ಆತನ ಪ್ರಜೆಗಳಾಗಿರುತ್ತಾರೋ ಅವರು ಯೆಹೂದದೇಶದ ಯೆರೂಸಲೇಮಿಗೆ ಹೋಗಿ ಅಲ್ಲಿ ವಾಸಿಸುತ್ತಿರುವ ಇಸ್ರಾಯೇಲ್ದೇವರಾದ ಯೆಹೋವನಿಗೋಸ್ಕರ ಆಲಯವನ್ನು ಕಟ್ಟಲಿ; ಅವರ ದೇವರು ಅವರ ಸಂಗಡ ಇರಲಿ.” ಅತಿ ಸಂತೋಷಗೊಂಡ ಯೆಹೂದಿ ಉಳಿಕೆಯವರು, ಇಸ್ರಾಯೇಲ್ಯೇತರ ನೆಥಿನಿಮ್ ಮತ್ತು ಸೊಲೊಮೋನನ ಸೇವಕರ ಪುತ್ರರೊಂದಿಗೆ ಯೆರೂಸಲೇಮಿಗೆ ಹಿಂದಿರುಗಿದರು. ಅವರು ಸಾ.ಶ.ಪೂ. 537ರಲ್ಲಿ ಪರ್ಣಶಾಲೆಗಳ ಉತ್ಸವವನ್ನು ಆಚರಿಸಲು ಹಾಗೂ ಯೆಹೋವನಿಗೆ ಆತನ ವೇದಿಯ ಮೇಲೆ ಯಜ್ಞಾರ್ಪಣೆಗಳನ್ನು ಮಾಡಲು ತಕ್ಕ ಸಮಯಕ್ಕೆ ಬಂದು ತಲಪಿದರು. ಮುಂದಿನ ವರ್ಷ, ಎರಡನೆಯ ತಿಂಗಳಿನಲ್ಲಿ ಅವರು ಆನಂದದ ಉದ್ಘೋಷ ಹಾಗೂ ಯೆಹೋವನಿಗೆ ಸ್ತುತಿಯ ಮಧ್ಯೆ ಎರಡನೆಯ ದೇವಾಲಯದ ಅಸ್ತಿವಾರವನ್ನು ಹಾಕಿದರು.—ಎಜ್ರ 1:1-4; 2:1, 2, 43, 55; 3:1-6, 8, 10-13.
4. ಯೆಶಾಯ 35 ಮತ್ತು 55ನೆಯ ಅಧ್ಯಾಯಗಳು ಒಂದು ವಾಸ್ತವಿಕತೆ ಆದದ್ದು ಹೇಗೆ?
4 ಯೆಹೋವನ ಪುನಸ್ಸ್ಥಾಪನಾ ಪ್ರವಾದನೆಯು ಇಸ್ರಾಯೇಲಿನಲ್ಲಿ ಮಹಿಮಾಭರಿತವಾಗಿ ನೆರವೇರಲಿತ್ತು: “ಅರಣ್ಯವೂ ಮರುಭೂಮಿಯೂ ಆನಂದಿಸುವವು; ಒಣನೆಲವು ಹರ್ಷಿಸಿ ತಾವರೆಯಂತೆ ಕಳಕಳಿಸುವದು. . . . ಇವೆಲ್ಲಾ ಯೆಹೋವನ ಮಹಿಮೆಯನ್ನೂ ನಮ್ಮ ದೇವರ ವೈಭವವನ್ನೂ ಕಾಣುವವು.” “ನೀವು ಆನಂದಭರಿತರಾಗಿ ಹೊರಡುವಿರಿ, ಸಮಾಧಾನದಿಂದ ಮೆರವಣಿಗೆಯಾಗಿ ಬರುವಿರಿ; ಬೆಟ್ಟಗುಡ್ಡಗಳು ನಿಮ್ಮ ಮುಂದೆ ಜಯಘೋಷಮಾಡುವವು, . . . ಆ ವನವು ಯೆಹೋವನಾಮಸ್ಮರಣೆಗೆ ಶಾಶ್ವತವಾದ ಗುರುತಾಗಿ ಎಂದಿಗೂ ಅಳಿಯದಿರುವದು.”—ಯೆಶಾಯ 35:1, 2; 55:12, 13.
5. ಇಸ್ರಾಯೇಲಿನ ಆನಂದವು ಏಕೆ ತಾತ್ಕಾಲಿಕವಾಗಿತ್ತು?
5 ಆದರೆ, ಆ ಆನಂದವು ತಾತ್ಕಾಲಿಕವಾಗಿತ್ತು. ದೇವಾಲಯವನ್ನು ಕಟ್ಟಲಿಕ್ಕಾಗಿ ನೆರೆಹೊರೆಯ ಜನರು ಮಿಶ್ರನಂಬಿಕೆಯ ಸಂಬಂಧವನ್ನು ಕೋರಿದರು. ಯೆಹೂದ್ಯರು ಮೊದಲು ಮಣಿಯಲಿಲ್ಲ. ಅವರು ಹೀಗೆ ಪ್ರಕಟಿಸಿದರು: “ನೀವು ನಮ್ಮ ದೇವರ ಆಲಯವನ್ನು ಕಟ್ಟುವದರಲ್ಲಿ ನಮ್ಮೊಡನೆ ಸೇರಲೇ ಕೂಡದು; ಪಾರಸಿಯ ರಾಜನಾದ ಕೋರೆಷನಿಂದ ನಮಗಾದ ಅಪ್ಪಣೆಯ ಮೇರೆಗೆ ನಾವೇ ಇಸ್ರಾಯೇಲ್ದೇವರಾದ ಯೆಹೋವನ ಆಲಯವನ್ನು ಕಟ್ಟುತ್ತೇವೆ.” ಆ ನೆರೆಯವರು ಈಗ ಕಟು ವಿರೋಧಿಗಳಾದರು. ಅವರು “ಯೆಹೂದ್ಯರನ್ನು ಕೈಗುಂದಿಸಿ ಕಟ್ಟದ ಹಾಗೆ ಬೆದರಿಸಿ”ದರು. ಅವರು ಕೋರೆಷನ ಉತ್ತರಾಧಿಕಾರಿಯಾದ ಅರ್ತಷಸ್ತನಲ್ಲಿ ಸನ್ನಿವೇಶವನ್ನು ತಪ್ಪಾಗಿ ನಿರೂಪಿಸಿದರು. ಅವನು ದೇವಾಲಯದ ಕಟ್ಟುವಿಕೆಯ ಮೇಲೆ ನಿಷೇಧವನ್ನು ಹೊರಡಿಸಿದನು. (ಎಜ್ರ 4:1-24) 17 ವರ್ಷಗಳ ವರೆಗೆ ಕೆಲಸವು ನಿಂತುಹೋಯಿತು. ವಿಷಾದಕರವಾಗಿ, ಯೆಹೂದ್ಯರು ಆ ಸಮಯದಲ್ಲಿ ಪ್ರಾಪಂಚಿಕ ಜೀವನ ರೀತಿಗೆ ಬಲಿಬಿದ್ದರು.
“ಸೇನಾಧೀಶ್ವರ ಯೆಹೋವನು” ಮಾತಾಡುತ್ತಾನೆ
6. (ಎ) ಇಸ್ರಾಯೇಲಿನಲ್ಲಿದ್ದ ಸನ್ನಿವೇಶಕ್ಕೆ ಯೆಹೋವನು ಹೇಗೆ ಪ್ರತಿಕ್ರಿಯಿಸಿದನು? (ಬಿ) ಹಗ್ಗಾಯನ ಹೆಸರಿನ ವ್ಯಕ್ತವಾದ ಅರ್ಥವು ಏಕೆ ಸೂಕ್ತವಾಗಿದೆ?
6 ಹಾಗಿದ್ದರೂ, ಯೆಹೂದ್ಯರನ್ನು ತಮ್ಮ ಜವಾಬ್ದಾರಿಗಳ ಕಡೆಗೆ ಎಚ್ಚರಗೊಳಿಸಲು, ಯೆಹೋವನು ಪ್ರವಾದಿಗಳನ್ನು, ಮುಖ್ಯವಾಗಿ ಹಗ್ಗಾಯ ಮತ್ತು ಜೆಕರ್ಯರನ್ನು ಕಳುಹಿಸುವ ಮೂಲಕ ಇಸ್ರಾಯೇಲಿನ ಪರವಾಗಿ ‘ತನ್ನ ಬಲ ಹಾಗೂ ತನ್ನ ಶಕ್ತಿ’ಯನ್ನು ಪ್ರದರ್ಶಿಸಿದನು. ಹಗ್ಗಾಯನ ಹೆಸರು ಉತ್ಸವಕ್ಕೆ ಸಂಬಂಧಿಸಿದೆ, ಏಕೆಂದರೆ ಅದರ ಅರ್ಥವು, “ಉತ್ಸವದಂದು ಜನಿಸಿದವ” ಎಂದಾಗಿರುವಂತೆ ತೋರುತ್ತದೆ. ಸೂಕ್ತವಾಗಿಯೇ ಅವನು ಪರ್ಣಶಾಲೆಗಳ ಉತ್ಸವದ ತಿಂಗಳಿನ ಮೊದಲನೆಯ ದಿನದಂದು ಪ್ರವಾದಿಸಲು ಆರಂಭಿಸಿದನು. ಆ ಸಮಯದಲ್ಲಿ ಯೆಹೂದ್ಯರು “ಬಹಳ ಆನಂದದಿಂದಿರ”ಬೇಕಿತ್ತು. (ಧರ್ಮೋಪದೇಶಕಾಂಡ 16:15) ಹಗ್ಗಾಯನ ಮುಖಾಂತರ, ಯೆಹೋವನು 112 ದಿನಗಳ ಅವಧಿಯೊಳಗೆ ನಾಲ್ಕು ಸಂದೇಶಗಳನ್ನು ನೀಡಿದನು.—ಹಗ್ಗಾಯ 1:1; 2:1, 10, 20.
7. ಹಗ್ಗಾಯನ ಆರಂಭಿಕ ಮಾತುಗಳು ನಮ್ಮನ್ನು ಹೇಗೆ ಉತ್ತೇಜಿಸಬೇಕು?
7 ತನ್ನ ಪ್ರವಾದನೆಯನ್ನು ಪರಿಚಯಿಸುತ್ತಾ, ಹಗ್ಗಾಯನು ಹೇಳಿದ್ದು: “ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ.” (ಹಗ್ಗಾಯ 1:2ಎ) ಆ ‘ಸೇನೆಗಳು’ ಯಾರಾಗಿರಬಹುದು? ಅವು ಬೈಬಲಿನಲ್ಲಿ ಕೆಲವೊಮ್ಮೆ ಮಿಲಿಟರಿ ದಂಡುಗಳೆಂದು ಸೂಚಿಸಲ್ಪಟ್ಟಿರುವ ಯೆಹೋವನ ದೇವದೂತ ಸಮೂಹಗಳು. (ಯೋಬ 1:6; 2:1; ಕೀರ್ತನೆ 103:20, 21; ಮತ್ತಾಯ 26:53) ಭೂಮಿಯಲ್ಲಿ ಸತ್ಯಾರಾಧನೆಯನ್ನು ಪುನಸ್ಸ್ಥಾಪಿಸುವ ನಮ್ಮ ಕೆಲಸವನ್ನು ನಿರ್ದೇಶಿಸಲು, ಪರಮಾಧಿಕಾರಿ ಕರ್ತನಾದ ಯೆಹೋವನು ತಾನೇ ಈ ಅಜೇಯ ದಿವ್ಯ ಶಕ್ತಿಗಳನ್ನು ಉಪಯೋಗಿಸುತ್ತಿದ್ದಾನೆಂಬ ವಿಷಯವು ನಮಗಿಂದು ಉತ್ತೇಜನವನ್ನು ನೀಡುವುದಿಲ್ಲವೊ?—2 ಅರಸುಗಳು 6:15-17ನ್ನು ಹೋಲಿಸಿರಿ.
8. ಯಾವ ದೃಷ್ಟಿಕೋನವು ಇಸ್ರಾಯೇಲನ್ನು ಬಾಧಿಸಿತ್ತು, ಮತ್ತು ಯಾವ ಫಲಿತಾಂಶದೊಂದಿಗೆ?
8 ಹಗ್ಗಾಯನ ಪ್ರಥಮ ಸಂದೇಶದ ಒಳವಿಷಯವು ಏನಾಗಿತ್ತು? “ಯೆಹೋವನ ಆಲಯವನ್ನು ಕಟ್ಟುವದಕ್ಕೆ ಸಮಯವು ಇನ್ನು ಬಂದಿಲ್ಲ,” ಎಂಬುದಾಗಿ ಜನರು ಹೇಳಿದ್ದರು. ದೈವಿಕ ಆರಾಧನೆಯ ಪುನಸ್ಸ್ಥಾಪನೆಯನ್ನು ಪ್ರತಿನಿಧಿಸುವ ದೇವಾಲಯದ ನಿರ್ಮಾಣವು, ಇನ್ನು ಮುಂದೆ ಅವರ ಆದ್ಯ ಚಿಂತೆಯಾಗಿರಲಿಲ್ಲ. ಅವರು ತಮಗಾಗಿ ಅರಮನೆಯಂಥ ಮನೆಗಳನ್ನು ಕಟ್ಟಿಕೊಳ್ಳುವುದರ ಕಡೆಗೆ ಗಮನಹರಿಸಿದ್ದರು. ಒಂದು ಪ್ರಾಪಂಚಿಕ ದೃಷ್ಟಿಕೋನವು, ಯೆಹೋವನ ಆರಾಧನೆಗಾಗಿದ್ದ ಅವರ ಉತ್ಸಾಹವನ್ನು ಕುಗ್ಗಿಸಿತ್ತು. ಫಲಸ್ವರೂಪವಾಗಿ ಆತನ ಆಶೀರ್ವಾದವು ಅವರ ಮೇಲಿರಲಿಲ್ಲ. ಅವರ ಹೊಲಗಳು ಇನ್ನು ಮುಂದೆ ಫಲಭರಿತವಾಗಿರಲಿಲ್ಲ ಮತ್ತು ಕಠೋರ ಚಳಿಗಾಲಕ್ಕಾಗಿ ಅವರಲ್ಲಿ ಬಟ್ಟೆಗಳಿರಲಿಲ್ಲ. ಅವರ ವರಮಾನವು ಅತ್ಯಲ್ಪವಾಗಿ ಪರಿಣಮಿಸಿತ್ತು, ಮತ್ತು ಅದು, ಅವರು ಹಣವನ್ನು ತೂತುಗಳಿಂದ ತುಂಬಿದ ಚೀಲವೊಂದರಲ್ಲಿ ಹಾಕುತ್ತಿದ್ದರೊ ಎಂಬಂತಿತ್ತು.—ಹಗ್ಗಾಯ 1:2ಬಿ-6.
9. ಯಾವ ಬಲವಾದ, ಭಕ್ತಿವೃದ್ಧಿಮಾಡುವ ಬುದ್ಧಿವಾದವನ್ನು ಯೆಹೋವನು ನೀಡಿದನು?
9 “ನಿಮ್ಮ ಗತಿ ಏನಾಗಿದೆಯೆಂದು ಮನಸ್ಸಿಗೆ ತಂದುಕೊಳ್ಳಿರಿ,” ಎಂಬ ಬಲವಾದ ಬುದ್ಧಿವಾದವನ್ನು ಯೆಹೋವನು ಎರಡು ಬಾರಿ ನೀಡಿದನು. ಸ್ಪಷ್ಟವಾಗಿಯೇ, ಯೆರೂಸಲೇಮಿನ ದೇಶಾಧಿಪತಿಯಾದ ಜೆರುಬ್ಬಾಬೆಲ್ ಮತ್ತು ಮಹಾಯಾಜಕನಾದ ಯೆಹೋಶುವb ಪ್ರತಿಕ್ರಿಯಿಸಿದರು ಮತ್ತು ಧೈರ್ಯದಿಂದ ಜನರೆಲ್ಲರಿಗೆ, ‘ಯೆಹೋವನೆಂಬ ತಮ್ಮ ದೇವರ ನುಡಿಗೂ ಯೆಹೋವನೆಂಬ ತಮ್ಮ ದೇವರ ಅಪ್ಪಣೆಯ ಪ್ರಕಾರ ಪ್ರವಾದಿಯಾದ ಹಗ್ಗಾಯನು ಹೇಳಿದ ಮಾತುಗಳಿಗೂ ಕಿವಿಗೊಡುವಂತೆ’ ಉತ್ತೇಜಿಸಿದರು ಮತ್ತು ಅವರು “ಯೆಹೋವನಲ್ಲಿ ಭಯಭಕ್ತಿಯುಳ್ಳವರಾದರು.” ಅಲ್ಲದೆ, “ಯೆಹೋವನ ದೂತನಾದ ಹಗ್ಗಾಯನು ಇದನ್ನು ನೋಡಿ ಜನರಿಗೆ—ನಿಮ್ಮೊಂದಿಗೆ ಇದ್ದೇನೆ ಎಂದು ಯೆಹೋವನು ನುಡಿಯುತ್ತಾನೆ ಎಂಬದನ್ನು ಯೆಹೋವನ ದೂತನಾಗಿಯೇ ಹೇಳಿದನು.”—ಹಗ್ಗಾಯ 1:5, 7-14.
10. ಇಸ್ರಾಯೇಲಿನ ಪರವಾಗಿ ಯೆಹೋವನು ತನ್ನ ಶಕ್ತಿಯನ್ನು ಹೇಗೆ ಉಪಯೋಗಿಸಿದನು?
10 ಹಿಂದಿನ ದೇವಾಲಯಕ್ಕೆ ಹೋಲಿಕೆಯಲ್ಲಿ, ಪುನಃ ಕಟ್ಟಲ್ಪಟ್ಟ ದೇವಾಲಯದ ಮಹಿಮೆಯು “ಏನೂ ಇಲ್ಲದಾಗಿ” ಇರುವುದೆಂದು ಯೆರೂಸಲೇಮಿನಲ್ಲಿದ್ದ ಕೆಲವು ವೃದ್ಧರು ಭಾವಿಸಿದ್ದಿರಬಹುದು. ಹಾಗಿದ್ದರೂ, ಸುಮಾರು 51 ದಿನಗಳ ತರುವಾಯ, ಎರಡನೆಯ ಸಂದೇಶವನ್ನು ಪ್ರಕಟಿಸುವಂತೆ ಯೆಹೋವನು ಹಗ್ಗಾಯನನ್ನು ಪ್ರೇರಿಸಿದನು. ಹಗ್ಗಾಯನು ಘೋಷಿಸಿದ್ದು: “ಯೆಹೋವನು ಇಂತೆನ್ನುತ್ತಾನೆ—ಜೆರುಬ್ಬಾಬೆಲನೇ, ಈಗ ಧೈರ್ಯವಾಗಿರು; ಯೆಹೋಚಾದಾಕನಿಗೆ ಹುಟ್ಟಿದ ಮಹಾಯಾಜಕನಾದ ಯೆಹೋಶುವನೇ, ಧೈರ್ಯವಾಗಿರು; ದೇಶೀಯರೇ, ನೀವೆಲ್ಲರೂ ಧೈರ್ಯಗೊಂಡು ಕೆಲಸನಡಿಸಿರಿ; ಇದು ಯೆಹೋವನ ನುಡಿ; ನಾನು ನಿಮ್ಮೊಂದಿಗೆ ಇದ್ದೇನೆಂದು ಸೇನಾಧೀಶ್ವರ ಯೆಹೋವನು ನುಡಿಯುತ್ತಾನೆ. . . . ಹೆದರಬೇಡಿರಿ.” ತಕ್ಕ ಸಮಯದಲ್ಲಿ ‘ಆಕಾಶವನ್ನೂ ಭೂಮಿಯನ್ನೂ ಅದುರಿಸಲು’ ತನ್ನ ಸರ್ವಶಕ್ತಿಯನ್ನು ಉಪಯೋಗಿಸಲಿದ್ದ ಯೆಹೋವನು, ಎಲ್ಲಾ ವಿರೋಧವು—ಚಕ್ರಾಧಿಪತ್ಯದ ನಿಷೇಧವೂ—ಜಯಿಸಲ್ಪಟ್ಟಿತ್ತೆಂಬುದನ್ನು ಖಚಿತಪಡಿಸಿಕೊಂಡನು. ಐದು ವರ್ಷಗಳೊಳಗೆ ದೇವಾಲಯದ ನಿರ್ಮಾಣವು ಯಶಸ್ವಿಯಾಗಿ ಪೂರ್ತಿಗೊಳಿಸಲ್ಪಟ್ಟಿತು.—ಹಗ್ಗಾಯ 2:3-6.
11. ದೇವರು ಎರಡನೆಯ ದೇವಾಲಯವನ್ನು ‘ಹೆಚ್ಚಿನ ಮಹಿಮೆ’ಯಿಂದ ಹೇಗೆ ತುಂಬಿಸಿದನು?
11 ವಿಶೇಷವಾದೊಂದು ವಾಗ್ದಾನವು ಆಗ ನೆರವೇರಿತು: “ಆಗ ಸಮಸ್ತಜನಾಂಗಗಳ ಇಷ್ಟವಸ್ತುಗಳು ಬಂದು ಒದಗಲು ಈ ಆಲಯವನ್ನು ವೈಭವ [“ಮಹಿಮೆ,” NW]ದಿಂದ ತುಂಬಿಸುವೆನು; ಇದು ಸೇನಾಧೀಶ್ವರ ಯೆಹೋವನ ನುಡಿ.” (ಹಗ್ಗಾಯ 2:7) ಆ “ಇಷ್ಟವಸ್ತುಗಳು”, ಆರಾಧಿಸಲು ಆ ದೇವಾಲಯಕ್ಕೆ—ಅದು ಆತನ ಮಹೋನ್ನತ ಸಾನ್ನಿಧ್ಯದ ಮಹಿಮೆಯನ್ನು ಪ್ರತಿಬಿಂಬಿಸಿದಂತೆ—ಬಂದ ಇಸ್ರಾಯೇಲ್ಯೇತರರಾಗಿದ್ದರು. ಸೊಲೊಮೋನನ ದಿನದಲ್ಲಿ ನಿರ್ಮಿಸಲ್ಪಟ್ಟಿದ್ದ ದೇವಾಲಯಕ್ಕೆ ಹೋಲಿಸುವಾಗ ಪುನಃ ಕಟ್ಟಲ್ಪಟ್ಟ ಈ ದೇವಾಲಯವು ಹೇಗಿತ್ತು? ದೇವರ ಪ್ರವಾದಿಯು ಹೀಗೆ ಪ್ರಕಟಿಸಿದನು: “ಈ ಆಲಯದ ಮುಂದಿನ ವೈಭವ [“ಮಹಿಮೆ,” NW]ವು ಹಿಂದಿನ ವೈಭವ [“ಮಹಿಮೆ,” NW]ಕ್ಕಿಂತ ವಿಶೇಷವಾಗಿರುವದು; ಇದು ಸೇನಾಧೀಶ್ವರ ಯೆಹೋವನ ನುಡಿ.” (ಹಗ್ಗಾಯ 2:9) ಪ್ರವಾದನೆಯ ಆರಂಭಿಕ ನೆರವೇರಿಕೆಯಲ್ಲಿ, ಪುನಃ ಕಟ್ಟಲ್ಪಟ್ಟ ದೇವಾಲಯವು ಮೊದಲನೆಯ ಆಲಯಕ್ಕಿಂತಲೂ ಹೆಚ್ಚು ಸಮಯ ಬಾಳಿತು. ಸಾ.ಶ. 29ರಲ್ಲಿ ಮೆಸ್ಸೀಯನು ಕಾಣಿಸಿಕೊಂಡಾಗ ಅದು ಇನ್ನೂ ಅಸ್ತಿತ್ವದಲ್ಲಿತ್ತು. ಇನ್ನೂ ಹೆಚ್ಚಾಗಿ, ಸಾ.ಶ. 33ರಲ್ಲಿ ತನ್ನ ಧರ್ಮಭ್ರಷ್ಟ ವೈರಿಗಳ ಮೂಲಕ ಕೊಲ್ಲಲ್ಪಡುವ ಮುಂಚೆ, ಮೆಸ್ಸೀಯನು ಅಲ್ಲಿ ಸತ್ಯವನ್ನು ಸಾರಿದಾಗ ಸ್ವತಃ ಆ ಆಲಯಕ್ಕೆ ಮಹಿಮೆಯನ್ನು ತಂದನು.
12. ಯಾವ ಉದ್ದೇಶವನ್ನು ಮೊದಲ ಎರಡು ದೇವಾಲಯಗಳು ಪೂರೈಸಿದವು?
12 ಯೆರೂಸಲೇಮಿನಲ್ಲಿದ್ದ ಮೊದಲನೆಯ ಹಾಗೂ ಎರಡನೆಯ ದೇವಾಲಯಗಳು, ಮೆಸ್ಸೀಯನ ಯಾಜಕಸಂಬಂಧಿತ ಸೇವೆಯ ಪ್ರಮುಖ ವೈಶಿಷ್ಟ್ಯಗಳನ್ನು ಮುಂಗಾಣಿಸುವುದರಲ್ಲಿ ಮತ್ತು ಮೆಸ್ಸೀಯನ ವಾಸ್ತವಿಕ ಕಾಣಿಸಿಕೊಳ್ಳುವಿಕೆಯ ತನಕ ಭೂಮಿಯ ಮೇಲೆ ಯೆಹೋವನ ಶುದ್ಧಾರಾಧನೆಯನ್ನು ಸಜೀವವಾಗಿಡುವುದರಲ್ಲಿ ಒಂದು ಅತ್ಯಾವಶ್ಯಕ ಉದ್ದೇಶವನ್ನು ಪೂರೈಸಿದವು.—ಇಬ್ರಿಯ 10:1.
ಮಹಿಮಾಭರಿತ ಆತ್ಮಿಕ ದೇವಾಲಯ
13. (ಎ) ಆತ್ಮಿಕ ದೇವಾಲಯದ ಸಂಬಂಧದಲ್ಲಿ ಸಾ.ಶ. 29ರಿಂದ 33ರ ವರೆಗೆ ಯಾವ ಘಟನೆಗಳು ಸಂಭವಿಸಿದವು? (ಬಿ) ಈ ವಿಕಸನಗಳಲ್ಲಿ ಯೇಸುವಿನ ಪ್ರಾಯಶ್ಚಿತ್ತ ಯಜ್ಞವು ಯಾವ ಅತ್ಯಾವಶ್ಯಕ ಪಾತ್ರವನ್ನು ವಹಿಸಿತು?
13 ಹಗ್ಗಾಯನ ಪುನಸ್ಸ್ಥಾಪನಾ ಪ್ರವಾದನೆಗೆ, ತದನಂತರದ ಸಮಯಗಳಿಗಾಗಿ ವಿಶೇಷ ಅರ್ಥವಿದೆಯೊ? ಖಂಡಿತವಾಗಿಯೂ ಇದೆ! ಯೆರೂಸಲೇಮಿನ ಪುನಃ ಕಟ್ಟಲ್ಪಟ್ಟ ದೇವಾಲಯವು, ಭೂಮಿಯ ಮೇಲಿನ ಎಲ್ಲಾ ಸತ್ಯಾರಾಧನೆಯ ಕೇಂದ್ರವಾಯಿತು. ಆದರೆ ಇನ್ನೂ ಹೆಚ್ಚು ಮಹಿಮಾಭರಿತವಾದ ಆತ್ಮಿಕ ದೇವಾಲಯವನ್ನು ಅದು ಮುಂಚಿತ್ರಿಸಿತು. ಇದು ಸಾ.ಶ. 29ರಲ್ಲಿ, ಯೊರ್ದನ್ ನದಿಯಲ್ಲಿ ಯೇಸುವಿನ ದೀಕ್ಷಾಸ್ನಾನದ ಸಮಯದಲ್ಲಿ, ಯೆಹೋವನು ಯೇಸುವನ್ನು ಮಹಾಯಾಜಕನಾಗಿ ಅಭಿಷೇಕಿಸಿ, ಪವಿತ್ರಾತ್ಮವು ಪಾರಿವಾಳದಂತೆ ಅವನ ಮೇಲೆ ಇಳಿದು ಬಂದಾಗ ಕಾರ್ಯನಡೆಸಲಾರಂಭಿಸಿತು. (ಮತ್ತಾಯ 3:16) ಯಜ್ಞಾರ್ಪಿತ ಮರಣದಲ್ಲಿ ಯೇಸು ತನ್ನ ಭೂಶುಶ್ರೂಷೆಯನ್ನು ಪೂರ್ತಿಗೊಳಿಸಿದ ಬಳಿಕ, ಅವನು ದೇವಾಲಯದ ಪರಮಪವಿತ್ರ ಸ್ಥಳದಿಂದ ಚಿತ್ರಿಸಲ್ಪಟ್ಟ ಪರಲೋಕಕ್ಕೆ ಪುನರುತ್ಥಾನಗೊಳಿಸಲ್ಪಟ್ಟನು, ಮತ್ತು ಅಲ್ಲಿ ಅವನು ಯೆಹೋವನಿಗೆ ತನ್ನ ಯಜ್ಞಾರ್ಪಣೆಯ ಮೌಲ್ಯವನ್ನು ಪ್ರಸ್ತುತಪಡಿಸಿದನು. ಇದು ಪ್ರಾಯಶ್ಚಿತ್ತವಾಗಿ ಕಾರ್ಯಮಾಡಿ, ಅವನ ಶಿಷ್ಯರ ಪಾಪಗಳನ್ನು ಮುಚ್ಚಿಬಿಟ್ಟಿತು, ಮತ್ತು ಸಾ.ಶ. 33ರ ಪಂಚಾಶತ್ತಮದ ದಿನದಂದು ಅವರನ್ನು ಯೆಹೋವನ ಆತ್ಮಿಕ ದೇವಾಲಯದಲ್ಲಿ ಸಹಯಾಜಕರಾಗಿ ಅಭಿಷೇಕಿಸುವುದಕ್ಕೆ ಮಾರ್ಗವನ್ನು ತೆರೆಯಿತು. ಭೂಮಿಯ ಮೇಲಿನ ದೇವಾಲಯದ ಅಂಗಳದಲ್ಲಿ ಮರಣದ ವರೆಗಿನ ಅವರ ನಂಬಿಗಸ್ತ ಶುಶ್ರೂಷೆಯು, ಭವಿಷ್ಯತ್ತಿನ ಸ್ವರ್ಗೀಯ ಪುನರುತ್ಥಾನಕ್ಕೆ, ಮುಂದುವರಿದ ಯಾಜಕ ಸೇವೆಗೆ ನಡೆಸಲಿತ್ತು.
14. (ಎ) ಆದಿ ಕ್ರೈಸ್ತ ಸಭೆಯ ಹುರುಪಿನ ಚಟುವಟಿಕೆಯನ್ನು ಯಾವ ಆನಂದವು ಜೊತೆಗೂಡಿತು? (ಬಿ) ಈ ಹರ್ಷವು ಏಕೆ ತಾತ್ಕಾಲಿಕವಾಗಿತ್ತು?
14 ಸಾವಿರಾರು ಪಶ್ಚಾತ್ತಾಪಿ ಯೆಹೂದ್ಯರು—ಮತ್ತು ತದನಂತರ ಅನ್ಯರು—ಆ ಕ್ರೈಸ್ತ ಸಭೆಯೊಳಗೆ ಕೂಡಿಬಂದರು ಮತ್ತು ಭೂಮಿಯ ಮೇಲೆ ಬರಲಿರುವ ದೇವರ ರಾಜ್ಯದಾಳಿಕೆಯ ಸುವಾರ್ತೆಯನ್ನು ಪ್ರಕಟಿಸುವುದರಲ್ಲಿ ಭಾಗವಹಿಸಿದರು. ಸುಮಾರು 30 ವರ್ಷಗಳ ತರುವಾಯ, ಸುವಾರ್ತೆಯು “ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ” ಸಾರಲ್ಪಟ್ಟಿತ್ತೆಂದು ಅಪೊಸ್ತಲ ಪೌಲನು ಹೇಳಸಾಧ್ಯವಿತ್ತು. (ಕೊಲೊಸ್ಸೆ 1:23) ಆದರೆ ಅಪೊಸ್ತಲರ ಮರಣದ ನಂತರ, ಮಹತ್ತರವಾದ ಧರ್ಮಭ್ರಷ್ಟತೆಯು ಒಳಪ್ರವೇಶಿಸಿತು, ಮತ್ತು ಸತ್ಯದ ಬೆಳಕು ಮಿಣುಕಲಾರಂಭಿಸಿತು. ಯಥಾರ್ಥ ಕ್ರೈಸ್ತತ್ವವು, ವಿಧರ್ಮಿ ಬೋಧನೆಗಳು ಮತ್ತು ತತ್ವಜ್ಞಾನಗಳ ಮೇಲಾಧಾರಿತ ಕ್ರೈಸ್ತಪ್ರಪಂಚದ ಪಂಥಾಭಿಮಾನದಿಂದ ಮರೆಮಾಡಲ್ಪಟ್ಟಿತು.—ಅ. ಕೃತ್ಯಗಳು 20:29, 30.
15, 16. (ಎ) 1914ರಲ್ಲಿ ಪ್ರವಾದನೆಯು ಹೇಗೆ ನೆರವೇರಿತು? (ಬಿ) 19ನೆಯ ಶತಮಾನದ ಕೊನೆಯ ಭಾಗದಲ್ಲಿ ಮತ್ತು 20ನೆಯ ಶತಮಾನದ ಆದಿಭಾಗದಲ್ಲಿ ಯಾವ ಒಟ್ಟುಗೂಡಿಸುವಿಕೆಯು ಸಂಭವಿಸಿತು?
15 ಶತಮಾನಗಳು ಉರುಳಿಹೋದವು. ಅನಂತರ 1870ಗಳಲ್ಲಿ, ಪ್ರಾಮಾಣಿಕ ಕ್ರೈಸ್ತರ ಒಂದು ಗುಂಪು ಬೈಬಲಿನ ಆಳವಾದ ಅಧ್ಯಯನದಲ್ಲಿ ತೊಡಗಿತು. ಶಾಸ್ತ್ರದಿಂದ ಅವರು 1914ನ್ನು, “ಅನ್ಯದೇಶದವರ ಸಮಯಗಳ” ಸಮಾಪ್ತಿಯನ್ನು ಗುರುತಿಸುವ ವರ್ಷವಾಗಿ ಸೂಚಿಸಲು ಶಕ್ತರಾದರು. ಕ್ರಿಸ್ತ ಯೇಸುವಿನ—ಭೂಮಿಯ ಮೆಸ್ಸೀಯ ಸಂಬಂಧಿತ ರಾಜನೋಪಾದಿ “ನ್ಯಾಯಬದ್ಧ ಹಕ್ಕು” ಉಳ್ಳವನ—ಸ್ವರ್ಗೀಯ ಸಿಂಹಾಸನಾರೋಹಣದೊಂದಿಗೆ, ಏಳು ಸಾಂಕೇತಿಕ “ಸಮಯಗಳು” (ಪಶುಸದೃಶ ಮಾನವಾಳಿಕೆಯ 2,520 ವರ್ಷಗಳು) ಅಂತ್ಯಗೊಂಡದ್ದು ಆ ಸಮಯದಲ್ಲೇ. (ಲೂಕ 21:24; ದಾನಿಯೇಲ 4:25; ಯೆಹೆಜ್ಕೇಲ 21:26, 27) ವಿಶೇಷವಾಗಿ 1919ರಂದಿನಿಂದ, ಇಂದು ಯೆಹೋವನ ಸಾಕ್ಷಿಗಳೆಂದು ಜ್ಞಾತರಾಗಿರುವ ಈ ಬೈಬಲ್ ವಿದ್ಯಾರ್ಥಿಗಳು, ಬರಲಿರುವ ರಾಜ್ಯದ ಸುವಾರ್ತೆಯನ್ನು ಭೂಮಿಯಾದ್ಯಂತ ಹುರುಪಿನಿಂದ ಹಬ್ಬಿಸುವುದರಲ್ಲಿ ತೊಡಗಿದ್ದಾರೆ. ಅಮೆರಿಕದ ಒಹಾಯೊದ ಸೀಡರ್ ಪಾಯಿಂಟ್ನಲ್ಲಿ ನಡೆದ ಅಧಿವೇಶನದಲ್ಲಿ, ಹೊರಡಿಸಲಾದ ಕ್ರಿಯೆಯ ಕರೆಗೆ ಇವರಲ್ಲಿ ಕೆಲವು ಸಾವಿರ ಸಾಕ್ಷಿಗಳು ಉತ್ತರಿಸಿದ್ದು 1919ರಲ್ಲಿಯೇ. ಅವರ ಸಂಖ್ಯೆಯು ಇಸವಿ 1935ರ ವರೆಗೆ ಹೆಚ್ಚಾಯಿತು. ಆಗ 56,153 ಜನರು ಕ್ಷೇತ್ರ ಸೇವೆಯ ವರದಿಯನ್ನು ಹಾಕಿದರು. ಆ ವರ್ಷದಲ್ಲಿ, ಯೇಸುವಿನ ಮರಣದ ವಾರ್ಷಿಕ ಜ್ಞಾಪಕಾಚರಣೆಯಲ್ಲಿ 52,465 ಮಂದಿ ರೊಟ್ಟಿ ಮತ್ತು ದ್ರಾಕ್ಷಾಮದ್ಯದ ಕುರುಹುಗಳಲ್ಲಿ ಪಾಲು ತೆಗೆದುಕೊಂಡಿದ್ದರು. ಹೀಗೆ ಅವರು, ಯೆಹೋವನ ಮಹಾ ಆತ್ಮಿಕ ದೇವಾಲಯದ ಸ್ವರ್ಗೀಯ ಭಾಗದಲ್ಲಿ, ಕ್ರಿಸ್ತ ಯೇಸುವಿನೊಂದಿಗೆ ಯಾಜಕರಾಗುವ ತಮ್ಮ ನಿರೀಕ್ಷೆಯನ್ನು ಸಂಕೇತಿಸಿದರು. ಅವರು ಅವನ ಮೆಸ್ಸೀಯ ಸಂಬಂಧಿತ ರಾಜ್ಯದಲ್ಲಿ ಅವನೊಂದಿಗೆ ಸಹರಾಜರಾಗಿಯೂ ಕಾರ್ಯಮಾಡುವರು.—ಲೂಕ 22:29, 30; ರೋಮಾಪುರ 8:15-17.
16 ಹಾಗಿದ್ದರೂ, ಪ್ರಕಟನೆ 7:4-8 ಮತ್ತು 14:1-4, ತೋರಿಸುವುದೇನೆಂದರೆ, ಈ ಅಭಿಷಿಕ್ತ ಕ್ರೈಸ್ತರ ಒಟ್ಟು ಸಂಖ್ಯೆಯು 1,44,000ಕ್ಕೆ ಸೀಮಿತವಾಗಿದೆ. ಅವರಲ್ಲಿ ಹೆಚ್ಚಿನವರು, ಮಹಾ ಧರ್ಮಭ್ರಷ್ಟತೆಯು ಒಳಪ್ರವೇಶಿಸುವ ಮೊದಲು ಪ್ರಥಮ ಶತಮಾನದಲ್ಲಿ ಒಟ್ಟುಗೂಡಿಸಲ್ಪಟ್ಟರು. 19ನೆಯ ಶತಮಾನದ ಅಂತ್ಯ ಮತ್ತು 20ನೆಯ ಶತಮಾನದ ಆರಂಭದಿಂದ, ಯೆಹೋವನು ತನ್ನ ವಾಕ್ಯದ ನೀರಿನಿಂದ ಶುದ್ಧಗೊಳಿಸಲ್ಪಟ್ಟಿರುವ, ಯೇಸುವಿನ ಪಾಪಪರಿಹಾರಕ ಯಜ್ಞದಲ್ಲಿ ನಂಬಿಕೆಯಿಡುವ ಮೂಲಕ ನೀತಿವಂತರೆಂದು ಪ್ರಕಟಿಸಲ್ಪಟ್ಟಿರುವ, ಮತ್ತು ಅಂತಿಮವಾಗಿ ಅಭಿಷಿಕ್ತ ಕ್ರೈಸ್ತರೋಪಾದಿ 1,44,000 ಮಂದಿಯ ಪೂರ್ಣ ಸಂಖ್ಯೆಯನ್ನು ರಚಿಸಲಿಕ್ಕಾಗಿ ಮುದ್ರೆಹಾಕಲ್ಪಟ್ಟಿರುವ ಈ ಗುಂಪಿನ ಒಟ್ಟುಗೂಡಿಸುವಿಕೆಯನ್ನು ಪೂರ್ತಿಗೊಳಿಸುತ್ತಿದ್ದಾನೆ.
17. (ಎ) 1930ಗಳ ಸಮಯದಂದಿನಿಂದ ಯಾವ ಒಟ್ಟುಗೂಡಿಸುವಿಕೆಯು ಮುಂದುವರಿದಿದೆ? (ಬಿ) ಈ ಸನ್ನಿವೇಶದಲ್ಲಿ ಯೋಹಾನ 3:30 ಆಸಕ್ತಿಯ ವಿಷಯವಾಗಿದೆ ಏಕೆ? (ಲೂಕ 7:28ನ್ನೂ ನೋಡಿ.)
17 ಅಭಿಷಿಕ್ತರೆಲ್ಲರೂ ಆರಿಸಲ್ಪಟ್ಟ ನಂತರ ಏನು ಸಂಭವಿಸುವುದು? 1935ರಲ್ಲಿ, ಅಮೆರಿಕದ ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆದ ಒಂದು ಮಹತ್ವದ ಅಧಿವೇಶನದಲ್ಲಿ, ಪ್ರಕಟನೆ 7:9-17ರಲ್ಲಿ ಉಲ್ಲೇಖಿಸಲ್ಪಟ್ಟ “ಮಹಾ ಸಮೂಹ”ವು, 1,44,000 ಮಂದಿಯ ‘ತರುವಾಯ’ ಗುರುತಿಸಲ್ಪಡುವ ಒಂದು ಗುಂಪಾಗಿದೆಯೆಂದು ಮತ್ತು ಅವರ ಗುರಿಯು ಪ್ರಮೋದವನ ಭೂಮಿಯಲ್ಲಿ ನಿತ್ಯಜೀವವಾಗಿದೆ ಎಂಬುದನ್ನು ತಿಳಿಯಪಡಿಸಲಾಯಿತು. ಅಭಿಷಿಕ್ತ ಯೇಸುವನ್ನು ಸ್ಪಷ್ಟವಾಗಿ ಗುರುತಿಸಿದ ನಂತರ, ‘ಬೇರೆ ಕುರಿಗಳಲ್ಲಿ’ ಒಬ್ಬನಂತೆ ಭೂಮಿಯ ಮೇಲೆ ಪುನರುತ್ಥಾನಗೊಳ್ಳಲಿರುವ ಸ್ನಾನಿಕನಾದ ಯೋಹಾನನು ಮೆಸ್ಸೀಯನ ಕುರಿತು ಹೇಳಿದ್ದು: “ಆತನು ವೃದ್ಧಿಯಾಗಬೇಕು; ನಾನು ಕಡಿಮೆಯಾಗಬೇಕು.” (ಯೋಹಾನ 1:29; 3:30; 10:16; ಮತ್ತಾಯ 11:11) ಮೆಸ್ಸೀಯನಿಗಾಗಿ ಶಿಷ್ಯರನ್ನು ತಯಾರಿಸುವ ಸ್ನಾನಿಕನಾದ ಯೋಹಾನನ ಕೆಲಸವು ಕೊನೆಗೊಳ್ಳುತ್ತಿದ್ದಂತೆ, ಯೇಸು 1,44,000 ಜನರೊಂದಿಗಿರಲಿದ್ದ ಹೆಚ್ಚಿನವರ ಆಯ್ಕೆಯನ್ನು ಮಾಡಲಾರಂಭಿಸಿದನು. 1930ಗಳಲ್ಲಿ ವ್ಯತಿರಿಕ್ತವಾದ ವಿಷಯವು ಸಂಭವಿಸಿತು. 1,44,000 ಜನರೊಂದಿಗಿರಲು ಕೊಂಚ ಜನರು ‘ಕರೆಯಲ್ಪಟ್ಟರು ಮತ್ತು ಆಯ್ದುಕೊಳ್ಳಲ್ಪಟ್ಟರು,’ ಆದರೆ “ಬೇರೆ ಕುರಿ”ಗಳ “ಮಹಾ ಸಮೂಹ”ದ ಸಂಖ್ಯೆಯಲ್ಲಿ ಪ್ರಚಂಡವಾದ ವೃದ್ಧಿಯಾಗತೊಡಗಿತು. ಲೋಕದ ದುಷ್ಟ ವ್ಯವಸ್ಥೆಯು, ಅರ್ಮಗೆದೋನಿನಲ್ಲಿ ಅದರ ಅಂತ್ಯವನ್ನು ಸಮೀಪಿಸಿದಂತೆ, ಈ ಮಹಾ ಸಮೂಹವು ಹೆಚ್ಚಾಗುತ್ತಾ ಇದೆ.—ಪ್ರಕಟನೆ 17:14ಬಿ.
18. (ಎ) “ಈಗ ಜೀವಿಸುತ್ತಿರುವ ಲಕ್ಷಾಂತರ ಜನರು ಎಂದಿಗೂ ಸಾಯರು” ಎಂಬುದಾಗಿ ನಾವು ಭರವಸೆಯಿಂದ ಏಕೆ ನಿರೀಕ್ಷಿಸಬಲ್ಲೆವು? (ಬಿ) ನಾವು ಹುರುಪಿನಿಂದ ಹಗ್ಗಾಯ 2:4ಕ್ಕೆ ಏಕೆ ಲಕ್ಷ್ಯಕೊಡಬೇಕು?
18 1920ಗಳ ಆದಿಭಾಗದಲ್ಲಿ, ಯೆಹೋವನ ಸಾಕ್ಷಿಗಳಿಂದ ಪ್ರಸ್ತುತಗೊಳಿಸಲ್ಪಟ್ಟ ಒಂದು ವಿಶಿಷ್ಟ ಬಹಿರಂಗ ಭಾಷಣವು, “ಈಗ ಜೀವಿಸುತ್ತಿರುವ ಲಕ್ಷಾಂತರ ಜನರು ಎಂದಿಗೂ ಸಾಯರು” ಎಂದಾಗಿತ್ತು. ಆ ಸಮಯದಲ್ಲಿ ಇದು ಅತಿಯಾದ ಆಶಾವಾದವನ್ನು ಪ್ರತಿಬಿಂಬಿಸಿದ್ದಿರಬಹುದು. ಆದರೆ ಇಂದು ಆ ಹೇಳಿಕೆಯನ್ನು ಸಂಪೂರ್ಣ ಭರವಸೆಯಿಂದ ಮಾಡಸಾಧ್ಯವಿದೆ. ಸೈತಾನನ ವ್ಯವಸ್ಥೆಯ ಅಂತ್ಯವು ಬಹಳ ಹತ್ತಿರವಿದೆಯೆಂದು, ಬೈಬಲ್ ಪ್ರವಾದನೆಯ ಕುರಿತಾದ ಹೆಚ್ಚುತ್ತಿರುವ ತಿಳಿವಳಿಕೆ ಮತ್ತು ಈ ಸಾಯುತ್ತಿರುವ ಲೋಕದ ಅವ್ಯವಸ್ಥೆಯು ಬಲವಾಗಿ ಸೂಚಿಸುತ್ತವೆ! 1996ಕ್ಕಾಗಿರುವ ಜ್ಞಾಪಕದ ವರದಿಯು 1,29,21,933 ಜನರು ಹಾಜರಾದರೆಂದು ತೋರಿಸುತ್ತದೆ, ಅವರಲ್ಲಿ 8,757 ಜನರು (.068 ಪ್ರತಿಶತ) ಮಾತ್ರ ಕುರುಹುಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಸ್ವರ್ಗೀಯ ನಿರೀಕ್ಷೆಯನ್ನು ವ್ಯಕ್ತಪಡಿಸಿದರು. ಸತ್ಯಾರಾಧನೆಯ ಪುನಸ್ಸ್ಥಾಪನೆಯು ಪೂರ್ತಿಗೊಳ್ಳಲಿದೆ. ಆದರೆ ಆ ಕೆಲಸದಲ್ಲಿ ನಾವೆಂದೂ ನಿಧಾನಿಸದಿರೋಣ. ಹೌದು, ಹಗ್ಗಾಯ 2:4 ತಿಳಿಸುವುದು: “ದೇಶೀಯರೇ, ನೀವೆಲ್ಲರೂ ಧೈರ್ಯಗೊಂಡು ಕೆಲಸನಡಿಸಿರಿ; ಇದು ಯೆಹೋವನ ನುಡಿ; ನಾನು ನಿಮ್ಮೊಂದಿಗೆ ಇದ್ದೇನೆಂದು ಸೇನಾಧೀಶ್ವರ ಯೆಹೋವನು ನುಡಿಯುತ್ತಾನೆ.” ಪ್ರಾಪಂಚಿಕತೆ ಅಥವಾ ಲೌಕಿಕತನದ ಯಾವುದೇ ಹೊರೆಗಳು, ಯೆಹೋವನ ಕೆಲಸಕ್ಕಾಗಿರುವ ನಮ್ಮ ಹುರುಪನ್ನು ಎಂದಿಗೂ ಕುಗ್ಗಿಸದಿರುವ ಬಗ್ಗೆ ನಾವು ನಿಶ್ಚಿತರಾಗಿರುವಂತಾಗಲಿ!—1 ಯೋಹಾನ 2:15-17.
19. ಹಗ್ಗಾಯ 2:6, 7ರ ನೆರವೇರಿಕೆಯಲ್ಲಿ ನಾವು ಹೇಗೆ ಪಾಲ್ಗೊಳ್ಳಬಹುದು?
19 ಹಗ್ಗಾಯ 2:6, 7ರ ಆಧುನಿಕ ದಿನದ ನೆರವೇರಿಕೆಯಲ್ಲಿ ಭಾಗವಹಿಸುವ ನಮ್ಮ ಸುಯೋಗವು ಆನಂದದಾಯಕವಾದದ್ದು: “ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ—ಸ್ವಲ್ಪ ಕಾಲದ ಮೇಲೆ ನಾನು ಇನ್ನೊಂದೇ ಸಾರಿ ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಒಣನೆಲವನ್ನೂ ಅದುರಿಸಿ ಸಕಲಜನಾಂಗಗಳನ್ನು ನಡುಗಿಸುವೆನು; ಆಗ ಸಮಸ್ತಜನಾಂಗಗಳ ಇಷ್ಟವಸ್ತುಗಳು ಬಂದು ಒದಗಲು ಈ ಆಲಯವನ್ನು ವೈಭವದಿಂದ ತುಂಬಿಸುವೆನು; ಇದು ಸೇನಾಧೀಶ್ವರ ಯೆಹೋವನ ನುಡಿ.” ಈ 20ನೆಯ ಶತಮಾನದ ಲೋಕದ ಆದ್ಯಂತ ಲೋಭ, ಭ್ರಷ್ಟಾಚಾರ, ಮತ್ತು ದ್ವೇಷ ವ್ಯಾಪಕವಾಗಿವೆ. ಅದು ನಿಶ್ಚಯವಾಗಿಯೂ ಅದರ ಕಡೇ ದಿವಸಗಳಲ್ಲಿದೆ, ಮತ್ತು ಯೆಹೋವನು ತನ್ನ ಸಾಕ್ಷಿಗಳ ಮೂಲಕ ‘ಆತನ ಮುಯ್ಯಿತೀರಿಸುವ ದಿನವನ್ನು . . . ಪ್ರಚುರಗೊಳಿಸುತ್ತಾ’ ಅದನ್ನು ಈಗಾಗಲೇ ‘ಅದುರಿಸಲು’ ತೊಡಗಿದ್ದಾನೆ. (ಯೆಶಾಯ 61:2) ಈ ಆರಂಭದ ಅದುರಿಸುವಿಕೆಯು ಅರ್ಮಗೆದೋನಿನಲ್ಲಿ ಲೋಕದ ನಾಶನದಲ್ಲಿ ತುತ್ತತುದಿಗೇರುವುದು, ಆದರೆ ಆ ಸಮಯಕ್ಕೆ ಮುಂಚೆ, ಯೆಹೋವನು ತನ್ನ ಸೇವೆಗಾಗಿ “ಸಮಸ್ತಜನಾಂಗಗಳ ಇಷ್ಟವಸ್ತುಗಳು”—ಭೂಮಿಯ ದೀನ, ಕುರಿಸದೃಶ ಜನರನ್ನು ಒಟ್ಟುಗೂಡಿಸುತ್ತಿದ್ದಾನೆ. (ಯೋಹಾನ 6:44) ಈ “ಮಹಾ ಸಮೂಹ”ವು ಈಗ, ಆತನ ಆರಾಧನಾಲಯದ ಭೂಅಂಗಳದಲ್ಲಿ ‘ಪವಿತ್ರ ಸೇವೆಯನ್ನು ಸಲ್ಲಿಸುತ್ತದೆ.’—ಪ್ರಕಟನೆ 7:9, 15.
20. ಅತಿ ಅಮೂಲ್ಯವಾದ ನಿಧಿಯನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ?
20 ಯೆಹೋವನ ಆತ್ಮಿಕ ದೇವಾಲಯದಲ್ಲಿನ ಸೇವೆಯು, ಯಾವುದೇ ಪ್ರಾಪಂಚಿಕ ನಿಧಿಗಿಂತಲೂ ಹೆಚ್ಚು ಅಮೂಲ್ಯವಾದ ಲಾಭವನ್ನು ತರುತ್ತದೆ. (ಜ್ಞಾನೋಕ್ತಿ 2:1-6; 3:13, 14; ಮತ್ತಾಯ 6:19-21) ಅಲ್ಲದೆ, ಹಗ್ಗಾಯ 2:9 ತಿಳಿಸುವುದು: “ಈ ಆಲಯದ ಮುಂದಿನ ವೈಭವವು ಹಿಂದಿನ ವೈಭವಕ್ಕಿಂತ ವಿಶೇಷವಾಗಿರುವದು; ಇದು ಸೇನಾಧೀಶ್ವರ ಯೆಹೋವನ ನುಡಿ; ಈ ಸ್ಥಳದಲ್ಲಿ ಸಮಾಧಾನವನ್ನು ಅನುಗ್ರಹಿಸುವೆನು, ಇದು ಸೇನಾಧೀಶ್ವರ ಯೆಹೋವನ ನುಡಿ.” ಈ ಮಾತುಗಳು ಇಂದು ನಮಗೆ ಏನನ್ನು ಅರ್ಥೈಸುತ್ತವೆ? ನಮ್ಮ ಮುಂದಿನ ಲೇಖನವು ತಿಳಿಸುವುದು.
[ಅಧ್ಯಯನ ಪ್ರಶ್ನೆಗಳು]
a “ಯಾಹುಯೆಹೋವ” ಎಂಬ ಅಭಿವ್ಯಕ್ತಿಯು, ವಿಶೇಷವಾದ ಪ್ರಾಧಾನ್ಯಕ್ಕಾಗಿ ಉಪಯೋಗಿಸಲ್ಪಟ್ಟಿದೆ. ಶಾಸ್ತ್ರಗಳ ಒಳನೋಟ (ಇಂಗ್ಲಿಷ್), ಸಂಪುಟ 1, ಪುಟ 1248ನ್ನು ನೋಡಿರಿ.
b ಎಜ್ರ ಮತ್ತು ಇತರ ಬೈಬಲ್ ಪುಸ್ತಕಗಳಲ್ಲಿ ಯೇಷೂವ.
ಪುನರ್ವಿಮರ್ಶೆಗಾಗಿ ಪ್ರಶ್ನೆಗಳು
◻ ಯೆಹೋವನ ಹೆಸರಿನ ವಿಷಯದಲ್ಲಿ, ಪ್ರವಾದಿಗಳ ಯಾವ ಮಾದರಿಯನ್ನು ನಾವು ಅನುಸರಿಸಬೇಕು?
◻ ಪುನಸ್ಸ್ಥಾಪಿತ ಇಸ್ರಾಯೇಲಿಗೆ ಯೆಹೋವನು ನೀಡಿದ ಶಕ್ತಿಶಾಲಿ ಸಂದೇಶದಿಂದ ಯಾವ ಉತ್ತೇಜನವನ್ನು ನಾವು ಪಡೆಯುತ್ತೇವೆ?
◻ ಇಂದು ಯಾವ ಮಹಿಮಾಭರಿತ ಆತ್ಮಿಕ ದೇವಾಲಯವು ಕಾರ್ಯಮಾಡುತ್ತಿದೆ?
◻ 19ನೆಯ ಹಾಗೂ 20ನೆಯ ಶತಮಾನಗಳಲ್ಲಿ ಕ್ರಮಾನುಗತವಾಗಿ ಯಾವ ಒಟ್ಟುಗೂಡಿಸುವಿಕೆಗಳು ನಡೆದಿವೆ, ಯಾವ ಭವ್ಯ ಪ್ರತೀಕ್ಷೆಯೊಂದಿಗೆ?
[ಪುಟ 7 ರಲ್ಲಿರುವ ಚಿತ್ರ]
ಯೆಹೋವನ ಸ್ವರ್ಗೀಯ ಸೇನೆಗಳು, ಭೂಮಿಯ ಮೇಲಿರುವ ಆತನ ಸಾಕ್ಷಿಗಳನ್ನು ನಿರ್ದೇಶಿಸಿ, ಪೋಷಿಸುತ್ತವೆ