ಹನೋಕ—ಸಕಲ ಪ್ರತಿಕೂಲಗಳ ಎದುರಿನಲ್ಲೂ ನಿರ್ಭಯನು
ಒಬ್ಬ ಒಳ್ಳೆಯ ಮನುಷ್ಯನಿಗೆ ಅದು ಸಮಯಗಳಲ್ಲೇ ಅತ್ಯಂತ ಕೆಟ್ಟ ಸಮಯವಾಗಿತ್ತು. ಭಕ್ತಿಹೀನತೆಯು ಭೂಮಿಯನ್ನು ಪೂರ್ತಿ ತುಂಬಿತು. ಮಾನವಕುಲದ ನೈತಿಕ ಸ್ಥಿತಿಯಲ್ಲಿ ಒಂದೇಸಮನಾದ ಅವನತಿಯಿತ್ತು. ವಾಸ್ತವವಾಗಿ, ಅದು ಬೇಗನೆ ಹೀಗೆ ಹೇಳಲ್ಪಡಲಿತ್ತು: “ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿರುವದನ್ನೂ ಅವರು ಹೃದಯದಲ್ಲಿ ಯೋಚಿಸುವದೆಲ್ಲವು ಯಾವಾಗಲೂ ಬರೀ ಕೆಟ್ಟದ್ದಾಗಿರುವದನ್ನೂ ಯೆಹೋವನು ನೋಡಿ”ದನು.—ಆದಿಕಾಂಡ 6:5.
ಆದಾಮನಿಂದ ಬಂದ ವಂಶಾವಳಿಯಲ್ಲಿ ಏಳನೆಯ ಮನುಷ್ಯನಾದ ಹನೋಕನಿಗೆ ಭಿನ್ನನಾಗಿರಲು ಧೈರ್ಯವಿತ್ತು. ಪರಿಣಾಮಗಳು ಏನೇ ಆಗಿರಲಿ ಅವನು ನೀತಿಗಾಗಿ ದೃಢವಾಗಿ ನಿಂತನು. ಹನೋಕನ ಸಂದೇಶವು ಭಕ್ತಿಹೀನ ಪಾಪಿಗಳಿಗೆ ಎಷ್ಟೊಂದು ಕಿರಿಕಿರಿಮಾಡುವಂತಿತ್ತೆಂದರೆ, ಅವನು ಕೊಲೆ ಮಾಡಲ್ಪಡುವುದಕ್ಕಾಗಿ ಗುರುತಿಸಲ್ಪಟ್ಟನು. ಯೆಹೋವನು ಮಾತ್ರವೇ ಅವನಿಗೆ ಸಹಾಯಮಾಡಸಾಧ್ಯವಿತ್ತು.—ಯೂದ 14, 15.
ಹನೋಕ ಮತ್ತು ಸಾರ್ವತ್ರಿಕ ವಿವಾದಾಂಶ
ಹನೋಕನ ಜನನದ ಬಹಳ ಹಿಂದೆಯೇ, ಸಾರ್ವತ್ರಿಕ ಸಾರ್ವಭೌಮತೆಯ ವಿವಾದಾಂಶವು ಎಬ್ಬಿಸಲ್ಪಟ್ಟಿತು. ಆಳ್ವಿಕೆ ನಡೆಸಲು ದೇವರಿಗೆ ಹಕ್ಕಿತ್ತೋ? ಕಾರ್ಯತಃ ಪಿಶಾಚನಾದ ಸೈತಾನನು ಇಲ್ಲವೆಂದು ಹೇಳಿದನು. ಬುದ್ಧಿಶಕ್ತಿಯುಳ್ಳ ಜೀವಿಗಳು ದೇವರ ಮಾರ್ಗದರ್ಶನದಿಂದ ಸ್ವತಂತ್ರರಾಗಿರುವಲ್ಲಿ ಅವರು ಉತ್ತಮವಾಗಿ ಕಾರ್ಯನಡಿಸುವರೆಂದು ಅವನು ಸಮರ್ಥಿಸಿದನು. ಮಾನವರನ್ನು ತನ್ನ ಕಡೆಗೆ ಮೋಸದಿಂದ ಸೆಳೆದುಕೊಳ್ಳಲು ಸಂಚು ಹೂಡುವ ಮೂಲಕ ಸೈತಾನನು, ಯೆಹೋವ ದೇವರ ವಿರುದ್ಧವಾದ ತನ್ನ ಸಾಕ್ಷ್ಯವನ್ನು ನೆಲೆಗೊಳಿಸಲು ಪ್ರಯತ್ನಿಸಿದನು. ದೈವಾಳಿಕೆಗೆ ಬದಲು ಸ್ವಆಳಿಕೆಯನ್ನು ಆಯ್ಕೆಮಾಡಿಕೊಳ್ಳುವ ಮೂಲಕ ಸೈತಾನನ ಪಕ್ಷವಹಿಸಿದುದಕ್ಕಾಗಿ, ಆದಾಮ, ಅವನ ಪತ್ನಿಯಾದ ಹವ್ವ, ಹಾಗೂ ಅವರ ಜೇಷ್ಠ ಪುತ್ರನಾದ ಕಾಯಿನ ಕುಖ್ಯಾತರಾಗಿದ್ದಾರೆ. ಪ್ರಥಮ ಮಾನವ ಜೋಡಿಯು, ದೇವರು ನಿಷೇಧಿಸಿದ್ದ ಹಣ್ಣನ್ನು ತಿನ್ನುವುದರ ಮೂಲಕ ಮತ್ತು ಅಂತೆಯೇ ಕಾಯಿನನು ತನ್ನ ನೀತಿವಂತ ಸಹೋದರನಾದ ಹೇಬೆಲನನ್ನು ಉದ್ದೇಶಪೂರ್ವಕವಾಗಿ ಕೊಲೆಮಾಡುವ ಮೂಲಕ ಸೈತಾನನ ಪಕ್ಷವಹಿಸಿದರು.—ಆದಿಕಾಂಡ 3:4-6; 4:8.
ಹೇಬೆಲನು ಯೆಹೋವನ ಪಕ್ಷದಲ್ಲಿ ಧೈರ್ಯವಾಗಿ ನೆಲೆನಿಂತಿದ್ದನು. ಹೇಬೆಲನ ಸಮಗ್ರತೆಯು ಶುದ್ಧ ಆರಾಧನೆಯನ್ನು ಪ್ರವರ್ಧಿಸಿದ್ದರಿಂದ, ಕಾಯಿನನು ಮಾರಕ ಕೋಪಾವೇಶವನ್ನು ಅವನ ಮೇಲೆ ಕಾರುವುದನ್ನು ನೋಡಲು ಸೈತಾನನು ನಿಸ್ಸಂದೇಹವಾಗಿ ಸಂತೋಷಿಸಿದನು. ಆ ಸಮಯದಿಂದ ಸೈತಾನನು ಭಯಹುಟ್ಟಿಸುವ ಶಸ್ತ್ರದೋಪಾದಿ “ಮರಣಭಯ”ವನ್ನು ಚಲಾಯಿಸಿದ್ದಾನೆ. ಸತ್ಯ ದೇವರನ್ನು ಆರಾಧಿಸಲಿಕ್ಕೆ ಒಲವಿರುವ ಯಾರ ಹೃದಯದಲ್ಲಿಯಾದರೂ ಅವನು ಭಯವನ್ನು ಬಲವಾಗಿ ತಾಕಿಸಲು ಬಯಸುತ್ತಾನೆ.—ಇಬ್ರಿಯ 2:14, 15; ಯೋಹಾನ 8:44; 1 ಯೋಹಾನ 3:12.
ಹನೋಕನ ಜನನದ ಸಮಯದಷ್ಟಕ್ಕೆ, ಮಾನವರು ಯೆಹೋವನ ಸಾರ್ವಭೌಮತೆಯನ್ನು ಎತ್ತಿಹಿಡಿಯಲಾರರೆಂಬ ಸೈತಾನನ ದೃಷ್ಟಿಕೋನವು ಹೆಚ್ಚು ಬೆಂಬಲಿಸಲ್ಪಟ್ಟಂತೆ ತೋರಿದ್ದಿರಬಹುದು. ಹೇಬೆಲನು ಸತ್ತುಹೋಗಿದ್ದನು, ಮತ್ತು ಅವನ ನಂಬಿಗಸ್ತ ಮಾದರಿಯು ಅನುಸರಿಸಲ್ಪಡುತ್ತಿರಲಿಲ್ಲ. ಆದರೂ, ಹನೋಕನು ವಿಭಿನ್ನ ವ್ಯಕ್ತಿಯಾಗಿ ತನ್ನನ್ನು ರುಜುಪಡಿಸಿಕೊಂಡನು. ನಂಬಿಕೆಗಾಗಿ ಅವನಲ್ಲಿ ಒಂದು ಅಚಲವಾದ ಆಧಾರವಿತ್ತು. ಏಕೆಂದರೆ ಏದೆನ್ ತೋಟದಲ್ಲಿ ಸಂಭವಿಸಿದ ಘಟನೆಗಳ ಕುರಿತು ಅವನು ಚಿರಪರಿಚಿತನಾಗಿದ್ದನು.a ಸೈತಾನನಿಗೆ ಮತ್ತು ಅವನ ಯೋಜನೆಗಳಿಗೆ ಅಂತ್ಯವನ್ನು ವಾಗ್ದತ್ತ ಸಂತಾನವು ತರುವುದೆಂಬುದನ್ನು ಸೂಚಿಸುವ ಯೆಹೋವನ ಪ್ರವಾದನೆಯನ್ನು ಅವನು ಎಷ್ಟೊಂದು ಪ್ರೀತಿಸಿದ್ದಿರಬೇಕು!—ಆದಿಕಾಂಡ 3:15.
ಸದಾ ತನ್ನ ಮುಂದಿದ್ದ ಈ ನಿರೀಕ್ಷೆಯಿಂದಾಗಿ, ಇತಿಹಾಸದಲ್ಲೇ ಪ್ರಸಿದ್ಧವಾದ, ಹೇಬೆಲನ ಪಿಶಾಚ ಪ್ರೇರಿತ ಕೊಲೆಯಿಂದಾಗಿ ಹನೋಕನು ಭಯಗೊಳ್ಳಲಿಲ್ಲ. ಅದಕ್ಕೆ ಬದಲಾಗಿ, ಅವನು ನೀತಿಯುಕ್ತತೆಯ ಒಂದು ಜೀವಮಾನದುದ್ದದ ಪಥವನ್ನು ಬೆನ್ನಟ್ಟುತ್ತಾ, ಯೆಹೋವನೊಂದಿಗೆ ನಡೆಯುತ್ತಾ ಇದ್ದನು. ಹನೋಕನು ಲೋಕದ ಸ್ವತಂತ್ರ ಆತ್ಮವನ್ನು ತ್ಯಜಿಸಿ, ತನ್ನನ್ನು ಪ್ರತ್ಯೇಕವಾಗಿರಿಸಿಕೊಂಡನು.—ಆದಿಕಾಂಡ 5:23, 24.
ಅದೂ ಅಲ್ಲದೆ, ಪಿಶಾಚನ ದುಷ್ಟ ಕಾರ್ಯಗಳು ವಿಫಲಗೊಳ್ಳುವವೆಂಬುದನ್ನು ಹನೋಕನು ಧೈರ್ಯವಾಗಿ ಹೇಳಿ, ಅದನ್ನು ಸ್ಪಷ್ಟೀಕರಿಸಿದನು. ದೇವರ ಪವಿತ್ರಾತ್ಮ ಅಥವಾ ಕಾರ್ಯಕಾರಿ ಶಕ್ತಿಯ ಪ್ರಭಾವದ ಕೆಳಗೆ, ದುಷ್ಟರ ಸಂಬಂಧದಲ್ಲಿ ಹನೋಕನು ಪ್ರವಾದಿಸಿದ್ದು: “ಇಗೋ ಕರ್ತ [“ಯೆಹೋವ,” NW]ನು ಲಕ್ಷಾಂತರ ಪರಿಶುದ್ಧದೂತರನ್ನು ಕೂಡಿಕೊಂಡು ಎಲ್ಲರಿಗೆ ನ್ಯಾಯತೀರಿಸುವದಕ್ಕೂ ಭಕ್ತಿಹೀನರೆಲ್ಲರು ಮಾಡಿದ ಭಕ್ತಿಯಿಲ್ಲದ ಎಲ್ಲಾ ಕೃತ್ಯಗಳ ವಿಷಯವಾಗಿ ಮತ್ತು ಭಕ್ತಿಯಿಲ್ಲದ ಪಾಪಿಷ್ಠರು ತನ್ನ ಮೇಲೆ ಹೇಳಿದ ಎಲ್ಲಾ ಕಠಿನವಾದ ಮಾತುಗಳ ವಿಷಯವಾಗಿ ಅವರನ್ನು ಖಂಡಿಸುವದಕ್ಕೂ ಬಂದನು.”—ಯೂದ 14, 15.
ಹನೋಕನ ನಿರ್ಭಯ ಘೋಷಣೆಗಳ ಕಾರಣ, ಅಪೊಸ್ತಲ ಪೌಲನು ಇಬ್ರಿಯ ಕ್ರೈಸ್ತರಿಗೆ ಪತ್ರವನ್ನು ಬರೆಯುವಾಗ ಅವನನ್ನು, ನಂಬಿಕೆಯನ್ನು ಕ್ರಿಯೆಯಲ್ಲಿ ತೋರಿಸಿದ್ದರ ಕುರಿತು ಅತ್ಯುತ್ತಮ ಮಾದರಿಯನ್ನಿಟ್ಟಂತಹ ಮಹಾ “ಸಾಕ್ಷಿಗಳ ಮೇಘ”ದಲ್ಲಿ ಒಳಗೂಡಿಸುತ್ತಾನೆ.b (ಇಬ್ರಿಯ 11:5; 12:1, NW) ನಂಬಿಕೆಯ ಒಬ್ಬ ಮನುಷ್ಯನೋಪಾದಿ, ಹನೋಕನು 300ಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ ಸಮಗ್ರತೆಯ ಒಂದು ಪಥದಲ್ಲಿ ಪಟ್ಟುಬಿಡದೆ ಸಾಗಿದನು. (ಆದಿಕಾಂಡ 5:22) ಹನೋಕನ ನಂಬಿಗಸ್ತಿಕೆಯು, ಪರಲೋಕದಲ್ಲಿಯೂ ಭೂಮಿಯಲ್ಲಿಯೂ ಇದ್ದ ದೇವರ ಶತ್ರುಗಳಿಗೆ ಎಷ್ಟೊಂದು ಕಿರಿಕಿರಿಯನ್ನು ಉಂಟುಮಾಡಿದ್ದಿರಬೇಕು! ಹನೋಕನ ಚುಚ್ಚುವ ಪ್ರವಾದನೆಯು ಸೈತಾನನ ದ್ವೇಷವನ್ನು ಹೊರತೆಗೆಯಿತಾದರೂ ಅದು ಯೆಹೋವನ ಸಂರಕ್ಷಣೆಯನ್ನು ತಂದಿತು.
ಹನೋಕನನ್ನು ದೇವರು ಕರೆದುಕೊಂಡನು—ಹೇಗೆ?
ಸೈತಾನನು ಇಲ್ಲವೇ ಅವನ ಭೌಮಿಕ ಸೇವಕರು ಹನೋಕನನ್ನು ಕೊಲ್ಲುವಂತೆ ಯೆಹೋವನು ಅನುಮತಿಸಲಿಲ್ಲ. ಅದಕ್ಕೆ ಬದಲಾಗಿ, ಪ್ರೇರಿತ ದಾಖಲೆಯು ಹೇಳುವುದು: ‘ದೇವರು ಅವನನ್ನು ಕರೆದುಕೊಂಡನು.’ (ಆದಿಕಾಂಡ 5:24) ವಿಷಯಗಳನ್ನು ಅಪೊಸ್ತಲ ಪೌಲನು ಈ ರೀತಿಯಾಗಿ ವರ್ಣಿಸುತ್ತಾನೆ: “ಹನೋಕನು ನಂಬಿಕೆಯಿಂದಲೇ ಮರಣವನ್ನು ನೋಡದಿರುವಂತೆ ಸ್ಥಳಾಂತರಿಸಲ್ಪಟ್ಟನು, ಮತ್ತು ದೇವರು ಅವನನ್ನು ಸ್ಥಳಾಂತರಿಸಿದ್ದರಿಂದ ಅವನು ಎಲ್ಲೂ ಕಾಣಸಿಗಲಿಲ್ಲ; ಏಕೆಂದರೆ ಅವನು ತನ್ನ ಸ್ಥಳಾಂತರಕ್ಕೆ ಮುನ್ನ ದೇವರನ್ನು ಬಹಳ ಪ್ರಸನ್ನಗೊಳಿಸಿದ್ದನೆಂಬ ಸಾಕ್ಷಿಯನ್ನು ಪಡೆದಿದ್ದನು.”—ಇಬ್ರಿಯ 11:5, NW.
ಹನೋಕನು ಹೇಗೆ “ಮರಣವನ್ನು ನೋಡದಿರುವಂತೆ ಸ್ಥಳಾಂತರಿಸಲ್ಪಟ್ಟನು”? ಅಥವಾ ಆರ್. ಏ. ನಾಕ್ಸ್ರವರ ಭಾಷಾಂತರದಲ್ಲಿ ಸೂಚಿಸಲ್ಪಟ್ಟಂತೆ, ಹನೋಕನು ಹೇಗೆ “ಮರಣದ ಅನುಭವವಿಲ್ಲದೆ ಕರೆದೊಯ್ಯಲ್ಪಟ್ಟನು”? ದೇವರು ಹನೋಕನ ಜೀವಿತವನ್ನು ಶಾಂತಿಪೂರ್ಣವಾಗಿ ಕೊನೆಗಾಣಿಸಿದನು. ದೇವರು ಅವನನ್ನು ಅಸ್ವಸ್ಥತೆ ಇಲ್ಲವೇ ಅವನ ಶತ್ರುಗಳ ಕೈಯಿಂದಾಗುವ ಹಿಂಸೆಯಿಂದ ಮೃತ್ಯುವಿನ ಯಾತನೆಗಳನ್ನು ಅನುಭವಿಸುವುದರಿಂದ ತಪ್ಪಿಸಿದನು. ಹೌದು, ಯೆಹೋವನು ಹನೋಕನ ಜೀವಿತವನ್ನು 365 ವರ್ಷಗಳ ಪ್ರಾಯದಲ್ಲಿ—ಅವನ ಸಮಕಾಲೀನರೊಂದಿಗೆ ಹೋಲಿಸುವಾಗ ಸಂಬಂಧಸೂಚಕವಾಗಿ ಒಬ್ಬ ಯುವ ವ್ಯಕ್ತಿ—ಕೊನೆಗೊಳಿಸಿದನು.
ಹನೋಕನು “ದೇವರನ್ನು ಬಹಳ ಪ್ರಸನ್ನಗೊಳಿಸಿದ್ದನೆಂಬ ಸಾಕ್ಷಿ”ಯನ್ನು ಪಡೆದುದು ಹೇಗೆ? ಅವನು ಯಾವ ಪುರಾವೆಯನ್ನು ಹೊಂದಿದ್ದನು? ಕ್ರೈಸ್ತ ಸಭೆಯ ಭಾವೀ ಆತ್ಮಿಕ ಪ್ರಮೋದವನದ ಒಂದು ದರ್ಶನವನ್ನು ಸುವ್ಯಕ್ತವಾಗಿ ಪಡೆದುಕೊಳ್ಳುತ್ತಾ, ಅಪೊಸ್ತಲ ಪೌಲನು ಕೂಡ “ಒಯ್ಯಲ್ಪಟ್ಟ” ಅಥವಾ ಸ್ಥಳಾಂತರಿಸಲ್ಪಟ್ಟ ಹಾಗೆ, ಬಹುಶಃ ದೇವರು ಹನೋಕನನ್ನು ಒಂದು ಪರವಶತೆಯೊಳಗೆ ಹಾಕಿದನು. (2 ಕೊರಿಂಥ 12:3, 4) ಹನೋಕನು ದೇವರನ್ನು ಪ್ರಸನ್ನಗೊಳಿಸಿದ್ದನೆಂಬುದರಲ್ಲಿನ ಸಾಕ್ಷಿ ಅಥವಾ ಪುರಾವೆಯು, ಯಾವುದರಲ್ಲಿ ಜೀವಿತರೆಲ್ಲರೂ ದೇವರ ಪರಮಾಧಿಕಾರವನ್ನು ಸಮರ್ಥಿಸುವರೋ ಆ ಭಾವೀ ಭೂಪ್ರಮೋದವನದ ಒಂದು ದಾರ್ಶನಿಕ ನಸುನೋಟವನ್ನು ಒಳಗೊಂಡಿರಸಾಧ್ಯವಿತ್ತು. ಹನೋಕನು ಹೀಗೆ ಭಾವಪರವಶ ದರ್ಶನವನ್ನು ಅನುಭವಿಸುತ್ತಿದ್ದಾಗಲೇ, ದೇವರು ಅವನನ್ನು ಅವನ ಪುನರುತ್ಥಾನದ ದಿನದ ತನಕ ನಿದ್ರಿಸುವಂತೆ ನೋವುರಹಿತ ಮೃತ್ಯುವಿನಲ್ಲಿ ತೆಗೆದುಕೊಂಡಿದ್ದಿರಲೂಬಹುದು. “ಅವನು ಎಲ್ಲೂ ಕಾಣಸಿಗ”ಲಿಲ್ಲವಾದುದರಿಂದ, ಮೋಶೆಯ ವಿದ್ಯಮಾನದಲ್ಲಿ ಮಾಡಿದಂತೆಯೇ, ಯೆಹೋವನು ಹನೋಕನ ದೇಹವನ್ನು ತೊಲಗಿಸಿದನೆಂದು ತೋರುತ್ತದೆ.—ಇಬ್ರಿಯ 11:5; ಧರ್ಮೋಪದೇಶಕಾಂಡ 34:5, 6; ಯೂದ 9.
ಪ್ರವಾದನೆಯು ನೆರವೇರಿದ್ದು
ಇಂದು, ಯೆಹೋವನ ಸಾಕ್ಷಿಗಳು ಹನೋಕನ ಪ್ರವಾದನೆಯ ಸಾರವನ್ನು ಪ್ರಕಟಿಸುತ್ತಾರೆ. ದೇವರು ಸನ್ನಿಹಿತ ಭವಿಷ್ಯತ್ತಿನಲ್ಲಿ ಭಕ್ತಿಹೀನ ಜನರನ್ನು ನಾಶಮಾಡುವಾಗ ಅದು ಹೇಗೆ ನೆರವೇರಿಸಲ್ಪಡುವುದು ಎಂಬುದನ್ನು ಅವರು ಶಾಸ್ತ್ರಗಳಿಂದ ತೋರಿಸುತ್ತಾರೆ. (2 ಥೆಸಲೊನೀಕ 1:6-10) ಅವರ ಸಂದೇಶವು ಅವರನ್ನು ಜನಪ್ರಿಯರಲ್ಲದವರನ್ನಾಗಿ ಮಾಡುತ್ತದೆ, ಏಕೆಂದರೆ ಅದು ಈ ಲೋಕದ ದೃಷ್ಟಿಕೋನಗಳು ಹಾಗೂ ಗುರಿಗಳಿಂದ ಬಹಳ ಭಿನ್ನವಾಗಿರುತ್ತದೆ. ಅವರು ಎದುರಿಸುವ ವಿರೋಧವು ಅವರನ್ನು ಆಶ್ಚರ್ಯಗೊಳಿಸುವುದಿಲ್ಲ, ಏಕೆಂದರೆ ಯೇಸು ತನ್ನ ಹಿಂಬಾಲಕರಿಗೆ ಎಚ್ಚರಿಸಿದ್ದು: “ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲರೂ ಹಗೆಮಾಡುವರು.”—ಮತ್ತಾಯ 10:22; ಯೋಹಾನ 17:14.
ಆದರೂ, ಹನೋಕನಂತೆ ತಮ್ಮ ಶತ್ರುಗಳಿಂದ ಅಂತಿಮ ಮುಕ್ತಿಯನ್ನು ಪಡೆಯುವರೆಂಬ ಆಶ್ವಾಸನೆಯು ಪ್ರಸ್ತುತ ದಿನದ ಕ್ರೈಸ್ತರಿಗೆ ನೀಡಲ್ಪಟ್ಟಿದೆ. ಅಪೊಸ್ತಲ ಪೇತ್ರನು ಬರೆದುದು: “ಕರ್ತ [“ಯೆಹೋವ,” NW]ನು ಭಕ್ತರನ್ನು ಕಷ್ಟಗಳೊಳಗಿಂದ ತಪ್ಪಿಸುವದಕ್ಕೂ ದುರ್ಮಾರ್ಗಿಗಳನ್ನು ನ್ಯಾಯತೀರ್ಪಿನ ದಿನದ ತನಕ ಶಿಕ್ಷಾನುಭವದಲ್ಲಿ ಇಡುವದಕ್ಕೂ ಬಲ್ಲವನಾಗಿದ್ದಾನೆ.” (2 ಪೇತ್ರ 2:9) ದೇವರು ಒಂದು ಸಮಸ್ಯೆಯನ್ನು ಅಥವಾ ಅತ್ಯಂತ ಸಂಕಷ್ಟಕರ ಪರಿಸ್ಥಿತಿಯನ್ನು ತೆಗೆದುಹಾಕುವುದು ಉಚಿತವಾದದ್ದೆಂದು ಕಾಣಬಹುದು. ಹಿಂಸೆಯು ಅಂತ್ಯಗೊಳ್ಳಬಹುದು. ಇಲ್ಲವೇ ತನ್ನ ಜನರು ತಮ್ಮ ಪರೀಕ್ಷೆಗಳನ್ನು ಯಶಸ್ವಿಕರವಾಗಿ ಸಹಿಸಿಕೊಳ್ಳಸಾಧ್ಯವಾಗುವಂತೆ “ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡು”ವುದು ಹೇಗೆಂಬುದು ಆತನಿಗೆ ಗೊತ್ತಿದೆ. ಅಗತ್ಯವಿದ್ದಾಗ “ಸಾಧಾರಣವಾಗಿರುವುದಕ್ಕಿಂತಲೂ ಅತೀತವಾದ ಶಕ್ತಿ”ಯನ್ನೂ ಯೆಹೋವನು ನೀಡುತ್ತಾನೆ.—1 ಕೊರಿಂಥ 10:13; 2 ಕೊರಿಂಥ 4:7, NW.
“ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡು”ವವನಾಗಿ ಯೆಹೋವನು, ತನ್ನ ನಂಬಿಗಸ್ತ ಸೇವಕರನ್ನು ನಿತ್ಯಜೀವದಿಂದಲೂ ಆಶೀರ್ವದಿಸುವನು. (ಇಬ್ರಿಯ 11:6) ಅವರಲ್ಲಿ ಹೆಚ್ಚಿನ ಜನರಿಗಾದರೋ, ಇದು ಭೌಮಿಕ ಪ್ರಮೋದವನವೊಂದರಲ್ಲಿನ ಅನಂತ ಜೀವನವಾಗಿರುವುದು. ಹೀಗೆ ಹನೋಕನಂತೆ, ನಾವು ದೇವರ ಸಂದೇಶವನ್ನು ನಿರ್ಭಯವಾಗಿ ಘೋಷಿಸುವಂತಾಗಲಿ. ನಂಬಿಕೆಯಿಂದ ನಾವು ಇದನ್ನು ಸಕಲ ಪ್ರತಿಕೂಲಗಳ ಎದುರಿನಲ್ಲೂ ಮಾಡೋಣ.
[ಅಧ್ಯಯನ ಪ್ರಶ್ನೆಗಳು]
a ಹನೋಕನು ಜನಿಸಿದಾಗ ಆದಾಮನು 622 ವರ್ಷ ಪ್ರಾಯದವನಾಗಿದ್ದನು. ಆದಾಮನ ಮೃತ್ಯುವಿನ ಅನಂತರ ಸುಮಾರು 57 ವರ್ಷಗಳ ತನಕ ಹನೋಕನು ಜೀವಿಸಿದನು. ಆದುದರಿಂದ ಅವರ ಜೀವಿತಾವಧಿಗಳು ಗಮನಾರ್ಹ ಸಮಯದ ವರೆಗೆ ಮೇಲುಸೇರುವೆಯಾದವು.
b ಇಬ್ರಿಯ 12:1ರಲ್ಲಿ ನಿರೂಪಿಸಲ್ಪಟ್ಟಿರುವ “ಸಾಕ್ಷಿಗಳು,” ಮಾರ್ಟಸ್ ಎಂಬ ಗ್ರೀಕ್ ಪದದಿಂದ ಬರುತ್ತದೆ. ವ್ಯೂಯೆಸ್ಟ್ಸ್ ವರ್ಡ್ ಸ್ಟಡೀಸ್ ಫ್ರಮ್ ದ ಗ್ರೀಕ್ ನ್ಯೂ ಟೆಸ್ಟಮೆಂಟ್ಗನುಸಾರವಾಗಿ, ಈ ಪದವು “ತಾನು ನೋಡಿರುವ ಅಥವಾ ಕೇಳಿರುವ ಇಲ್ಲವೇ ಇತರ ಯಾವುದೇ ಮಾಧ್ಯಮದಿಂದ ತಿಳಿದಿರುವ ವಿಷಯವನ್ನು ರುಜುಪಡಿಸುವವನು, ಅಥವಾ ರುಜುಪಡಿಸಬಲ್ಲವನು” ಎಂಬುದನ್ನು ಸೂಚಿಸುತ್ತದೆ. ನೈಜಲ್ ಟರ್ನರ್ ಅವರಿಂದ ಬರೆಯಲ್ಪಟ್ಟ ಕ್ರಿಸ್ಟಿಯನ್ ವರ್ಡ್ಸ್ ಹೇಳುವುದೇನೆಂದರೆ, ಆ ಪದವು “ಸತ್ಯಗಳ ಹಾಗೂ ದೃಷ್ಟಿಕೋನಗಳ ಕುರಿತಾಗಿ” ಒಬ್ಬನು “ವೈಯಕ್ತಿಕ ಅನುಭವದಿಂದ . . . , ಮತ್ತು ಮನಗಾಣಿಕೆಯಿಂದ” ಮಾತಾಡುವುದನ್ನು ಅರ್ಥೈಸುತ್ತದೆ.
[ಪುಟ 30 ರಲ್ಲಿರುವ ಚೌಕ]
ದೇವರ ಹೆಸರು ಅಪವಿತ್ರಗೊಳಿಸಲ್ಪಟ್ಟದ್ದು
ಹನೋಕನಿಗಿಂತಲೂ ಸುಮಾರು ನಾಲ್ಕು ಶತಮಾನಗಳ ಮುಂಚೆ, ಆದಾಮನ ಮೊಮ್ಮಗನಾದ ಎನೋಷ್ ಜನಿಸಿದನು. “ಆ ಸಮಯದಲ್ಲಿ ಯೆಹೋವನ ಹೆಸರನ್ನು ಕರೆಯುವುದು ಪ್ರಾರಂಭವಾಯಿತು” ಎಂದು ಆದಿಕಾಂಡ 4:26 (Nw) ಹೇಳುತ್ತದೆ. ಕೆಲವು ಹೀಬ್ರು ಭಾಷಾ ವಿದ್ವಾಂಸರು, ಈ ವಚನವು ದೇವರ ಹೆಸರನ್ನು ಕರೆಯಲು “ಅಪವಿತ್ರವಾಗಿ ಆರಂಭ” ಎಂದು ಅಥವಾ “ಆಗ ಅಪವಿತ್ರಗೊಳಿಸುವಿಕೆಯ ಆರಂಭ”ವಾಯಿತೆಂದು ಓದಲ್ಪಡಬೇಕೆಂದು ನಂಬುತ್ತಾರೆ. ಇತಿಹಾಸದಲ್ಲಿನ ಆ ಅವಧಿಯ ಸಂಬಂಧದಲ್ಲಿ ಜೆರೂಸಲೇಮ್ ಟಾರ್ಗಮ್ ಹೇಳುವುದು: “ಯಾರ ದಿನಗಳಲ್ಲಿ ಅವರು ತಪ್ಪುಮಾಡಲು ಮತ್ತು ತಮಗಾಗಿ ವಿಗ್ರಹಗಳನ್ನು ಮಾಡಿಕೊಳ್ಳಲು, ಹಾಗೂ ಕರ್ತನ ವಾಕ್ಯದ ಹೆಸರಿನಿಂದ ತಮ್ಮ ವಿಗ್ರಹಗಳಿಗೆ ಉಪನಾಮಕೊಡಲು ಪ್ರಾರಂಭಿಸಿದರೋ ಆ ಸಂತತಿಯೇ ಅದಾಗಿತ್ತು.”
ಎನೋಷನ ಸಮಯವು ಯೆಹೋವನ ಹೆಸರಿನ ವ್ಯಾಪಕ ದುರುಪಯೋಗವನ್ನು ನೋಡಿತು. ಜನರು ಆ ದೈವಿಕ ಹೆಸರನ್ನು ತಮಗೆ ಅಥವಾ ತಾವು ಯೆಹೋವ ದೇವರನ್ನು ಆರಾಧನೆಯಲ್ಲಿ ಸಮೀಪಿಸಿದೆವೆಂದು ನೆನಸಿದ ನಿರ್ದಿಷ್ಟ ಜನರಿಗೆ ಅನ್ವಯಿಸಿದ್ದಿರಸಾಧ್ಯವಿದೆ. ಅಥವಾ ಅವರು ಆ ದೈವಿಕ ಹೆಸರನ್ನು ವಿಗ್ರಹಗಳಿಗೆ ಅನ್ವಯಿಸಿದ್ದಿರಬಹುದು. ಏನೇ ಆಗಲಿ, ಪಿಶಾಚನಾದ ಸೈತಾನನು ಮಾನವಕುಲವನ್ನು ವಿಗ್ರಹಾರಾಧನೆಯ ಪಾಶದಲ್ಲಿ ಭದ್ರವಾಗಿ ತೊಡರಿಸಿದ್ದನು. ಹನೋಕನ ಜನನದ ಸಮಯದಷ್ಟಕ್ಕೆ, ಸತ್ಯ ಆರಾಧನೆಯು ವಿರಳವಾಗಿತ್ತು. ಹನೋಕನಂತೆ ಸತ್ಯಕ್ಕನುಸಾರ ಜೀವಿಸಿ, ಅದನ್ನು ಪ್ರಚಾರಮಾಡಿದ ಯಾರೇ ಆದರೂ ಜನಪ್ರಿಯರಾಗಿರಲಿಲ್ಲ ಮತ್ತು ಹೀಗೆ ಹಿಂಸೆಗೆ ಗುರಿಯಾಗಿದ್ದರು.—ಮತ್ತಾಯ 5:11, 12ನ್ನು ಹೋಲಿಸಿರಿ.
[ಪುಟ 31 ರಲ್ಲಿರುವ ಚೌಕ]
ಹನೋಕನು ಸ್ವರ್ಗಕ್ಕೆ ಹೋದನೋ?
“ನಂಬಿಕೆಯಿಂದಲೇ ಹನೋಕನು ಮರಣವನ್ನು ನೋಡದಿರುವಂತೆ ಸ್ಥಳಾಂತರಿಸಲ್ಪಟ್ಟನು.” ಇಬ್ರಿಯ 11:5 (Nw)ರ ಈ ಭಾಗದ ತಮ್ಮ ಅರ್ಥನಿರೂಪಣೆಯಲ್ಲಿ, ಕೆಲವು ಬೈಬಲ್ ಭಾಷಾಂತರಗಳು ಹನೋಕನು ನಿಜವಾಗಿಯೂ ಸಾಯಲಿಲ್ಲವೆಂಬುದನ್ನು ಸೂಚಿಸುತ್ತವೆ. ಉದಾಹರಣೆಗೆ, ಜೇಮ್ಸ್ ಮೊಫಾಟ್ರವರಿಂದ ಬರೆಯಲ್ಪಟ್ಟ, ಏ ನ್ಯೂ ಟ್ರಾನ್ಸ್ಲೇಶನ್ ಆಫ್ ದ ಬೈಬಲ್ ಹೇಳುವುದು: “ಹನೋಕನು ನಂಬಿಕೆಯಿಂದಲೇ ಸ್ವರ್ಗಕ್ಕೆ ಕರೆದೊಯ್ಯಲ್ಪಟ್ಟನು. ಹೀಗೆ ಅವನು ಎಂದೂ ಸಾಯಲಿಲ್ಲ.”
ಆದರೂ, ಹನೋಕನ ದಿನದ ಸುಮಾರು 3,000 ವರ್ಷಗಳ ಬಳಿಕ ಯೇಸು ಕ್ರಿಸ್ತನು ಹೇಳಿದ್ದು: “ಪರಲೋಕದಿಂದ ಇಳಿದುಬಂದವನೇ ಅಂದರೆ ಮನುಷ್ಯಕುಮಾರನೇ ಹೊರತು ಮತ್ತಾರೂ ಪರಲೋಕಕ್ಕೆ ಏರಿಹೋದವನಲ್ಲ.” (ಯೋಹಾನ 3:13) ದ ನ್ಯೂ ಇಂಗ್ಲಿಷ್ ಬೈಬಲ್ ಓದುವುದು: “ಸ್ವರ್ಗದಿಂದ ಇಳಿದು ಬಂದ ಮನುಷ್ಯ ಕುಮಾರನೊಬ್ಬನ ಹೊರತು ಇನ್ಯಾರೂ ಎಂದೂ ಸ್ವರ್ಗಕ್ಕೆ ಹೋಗಲಿಲ್ಲ.” ಯೇಸು ಆ ಹೇಳಿಕೆಯನ್ನು ನುಡಿದಾಗ, ಅವನು ಕೂಡ ಸ್ವರ್ಗಕ್ಕೆ ಏರಿಹೋಗಿರಲಿಲ್ಲ.—ಲೂಕ 7:28ನ್ನು ಹೋಲಿಸಿರಿ.
ಹನೋಕನೂ ಕ್ರೈಸ್ತ ಪೂರ್ವ ಸಾಕ್ಷಿಗಳ ಮಹಾ ಮೇಘವನ್ನು ರಚಿಸಿದ್ದ ‘ಎಲ್ಲರೂ ಮೃತರಾದರು’ ಮತ್ತು “ವಾಗ್ದಾನದ ಫಲವನ್ನು ಹೊಂದ”ಲಿಲ್ಲ ಎಂದು ಅಪೊಸ್ತಲ ಪೌಲನು ಹೇಳುತ್ತಾನೆ. (ಇಬ್ರಿಯ 11:13, 39) ಏಕೆ? ಏಕೆಂದರೆ ಹನೋಕನನ್ನು ಒಳಗೊಂಡು, ಎಲ್ಲ ಮಾನವರು ಆದಾಮನಿಂದ ಪಾಪವನ್ನು ಬಾಧ್ಯತೆಯಾಗಿ ಪಡೆದುಕೊಂಡಿದ್ದಾರೆ. (ಕೀರ್ತನೆ 51:5; ರೋಮಾಪುರ 5:12) ರಕ್ಷಣೆಯ ಏಕಮಾತ್ರ ಮಾಧ್ಯಮವು, ಕ್ರಿಸ್ತ ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಮುಖಾಂತರವೇ. (ಅ. ಕೃತ್ಯಗಳು 4:12; 1 ಯೋಹಾನ 2:1, 2) ಹನೋಕನ ದಿನದಲ್ಲಿ ಆ ಪ್ರಾಯಶ್ಚಿತ್ತವು ಇನ್ನೂ ತೆರಲ್ಪಟ್ಟಿರಲಿಲ್ಲ. ಆದುದರಿಂದ, ಹನೋಕನು ಸ್ವರ್ಗಕ್ಕೆ ಹೋಗಲಿಲ್ಲ, ಬದಲಾಗಿ ಅವನು ಭೂಮಿಯ ಮೇಲಿನ ಪುನರುತ್ಥಾನವನ್ನು ಎದುರುನೋಡುತ್ತಾ ಮರಣದ ಗಾಢನಿದ್ರೆಯಲ್ಲಿದ್ದಾನೆ.—ಯೋಹಾನ 5:28, 29.
[ಪುಟ 29 ರಲ್ಲಿರುವ ಚಿತ್ರ ಕೃಪೆ]
Illustrirte Pracht - Bibel/Heilige Schrift des Alten und Neuen Testaments, nach der deutschen Uebersetzung D. Martin Luther’s ಇದರಿಂದ ಪುನರ್ಮುದ್ರಿಸಲ್ಪಟ್ಟದ್ದು