ವಾಚಕರಿಂದ ಪ್ರಶ್ನೆಗಳು
ಆಗಸ್ಟ್ 15, 1996ರ “ಕಾವಲಿನಬುರುಜು” ಹೇಳಿದ್ದು: “ಸಂಕಟದ ಅಂತಿಮ ಭಾಗದಲ್ಲಿ, ಯೆಹೋವನ ಪಕ್ಷಕ್ಕೆ ಪಲಾಯನ ಮಾಡಿರುವ ‘ನರಜೀವಿಗಳು’ ರಕ್ಷಿಸಲ್ಪಡುವರು.” ಮಹಾ ಸಂಕಟದ ಪ್ರಥಮ ಭಾಗದ ಅನಂತರ, ಅನೇಕ ಹೊಸ ವ್ಯಕ್ತಿಗಳು ದೇವರ ಕಡೆಗೆ ಪಕ್ಷಾಂತರಿಸುವರೆಂಬುದನ್ನು ಅದು ಸೂಚಿಸುತ್ತಿದೆಯೋ?
ಸಾದರಪಡಿಸಲ್ಪಟ್ಟ ವಿವರವು ಅದಾಗಿರಲಿಲ್ಲ.
ಮತ್ತಾಯ 24:22ರಲ್ಲಿ ಕಂಡುಬರುವ ಯೇಸುವಿನ ಮಾತುಗಳು, ಬರಲಿರುವ ಮಹಾ ಸಂಕಟದ ಪ್ರಥಮ ಭಾಗ—ಧರ್ಮದ ಮೇಲಿನ ಆಕ್ರಮಣ—ದೊಂದಿಗೆ ಆಗುವ ರಕ್ಷಣೆಯ ಮೂಲಕ ಭವಿಷ್ಯತ್ತಿನಲ್ಲಿ ನೆರವೇರುವುವು. ಆ ಲೇಖನವು ಹೇಳಿದ್ದು: “ಅಭಿಷಿಕ್ತ ಉಳಿಕೆಯವರು ಮತ್ತು ‘ಮಹಾ ಸಮೂಹ’ದವರಾದ ‘ನರಜೀವಿಗಳು,’ ಈಗಾಗಲೇ ಸಂಕಟದ ಪ್ರಥಮ ಭಾಗದಲ್ಲಿ, ಬಾಬೆಲು ಕ್ಷಿಪ್ರವಾಗಿ ಮತ್ತು ಪೂರ್ತಿಯಾಗಿ ನಾಶವಾಗುವಾಗ ರಕ್ಷಿಸಲ್ಪಟ್ಟಿರುವರೆಂಬುದನ್ನು ಜ್ಞಾಪಿಸಿಕೊಳ್ಳಿರಿ.”
ಸಂಕಟದ ಅಂತಿಮ ಭಾಗದಲ್ಲಿ, ಯೇಸು ಹಾಗೂ ಅವನ ಸ್ವರ್ಗೀಯ ಸೇನೆಯು ಕ್ರಿಯೆಗೈಯುವಾಗ, ಅಂಥ ನಂಬಿಗಸ್ತ ಜನರು ಅಪಾಯದಲ್ಲಿರುವುದಿಲ್ಲ. ಆದರೆ ಸಂಕಟದ ಆ ಭಾಗವನ್ನು ಯಾರು ಪಾರಾಗುವರು? ಭೌಮಿಕ ನಿರೀಕ್ಷೆಯುಳ್ಳ ಮಹಾ ಸಮೂಹವು ಪಾರಾಗುವುದೆಂದು ಪ್ರಕಟನೆ 7:9, 14 ತೋರಿಸುತ್ತದೆ. ಆತ್ಮಾಭಿಷಿಕ್ತ ಕ್ರೈಸ್ತರ ಕುರಿತೇನು? ಆಗಸ್ಟ್ 15, 1990ರ ವಾಚ್‌ಟವರ್ ಪತ್ರಿಕೆಯಲ್ಲಿರುವ “ವಾಚಕರಿಂದ ಪ್ರಶ್ನೆಗಳು,” ಅಭಿಷಿಕ್ತ ಉಳಿಕೆಯವರು ಯಾವಾಗ ಪರಲೋಕಕ್ಕೆ ಕರೆದೊಯ್ಯಲ್ಪಡುವರು ಎಂಬುದರ ಕುರಿತಾಗಿ ನಾವು ಏಕೆ ನಿಶ್ಚಿತರಾಗಿರಸಾಧ್ಯವಿಲ್ಲ ಎಂಬುದನ್ನು ಚರ್ಚಿಸಿತು. ಆದುದರಿಂದ ಇತ್ತೀಚಿನ ಲೇಖನವು (ಆಗಸ್ಟ್ 15, 1996), ಈ ರೀತಿಯ ಸಾಮಾನ್ಯ ಹೇಳಿಕೆಯನ್ನು ಮಾಡುತ್ತಾ, ವಿಷಯವನ್ನು ಅನಿರ್ದಿಷ್ಟ ಸ್ಥಿತಿಯಲ್ಲಿ ಬಿಟ್ಟಿತು: “ತದ್ರೀತಿ ಸಂಕಟದ ಅಂತಿಮ ಭಾಗದಲ್ಲಿ, ಯೆಹೋವನ ಪಕ್ಷಕ್ಕೆ ಪಲಾಯನ ಮಾಡಿರುವ ‘ನರಜೀವಿಗಳು’ ರಕ್ಷಿಸಲ್ಪಡುವರು.”
ಮಹಾ ಸಂಕಟವು ಆರಂಭವಾದ ಬಳಿಕ, ಹೊಸಬರೇನಾದರೂ ಸತ್ಯವನ್ನು ಕಲಿತು, ದೇವರ ಕಡೆಗೆ ಪಕ್ಷಾಂತರಿಸಸಾಧ್ಯವಿದೆಯೋ ಇಲ್ಲವೋ ಎಂಬುದರ ಕುರಿತಾಗಿ, ಮತ್ತಾಯ 24:29-31ರಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಮಾತುಗಳನ್ನು ಗಮನಿಸಿರಿ. ಸಂಕಟದ ತಲೆದೋರುವಿಕೆಯ ಅನಂತರ, ಮನುಷ್ಯ ಕುಮಾರನ ಚಿಹ್ನೆಯು ತೋರಿಬರುವುದು. ಭೂಮಿಯ ಸಕಲ ಕುಲದವರು ಎದೆಬಡಿದುಕೊಳ್ಳುತ್ತಾ, ಗೋಳಾಡುವರೆಂದು ಯೇಸು ಹೇಳಿದನು. ಜನರು ಸನ್ನಿವೇಶಕ್ಕೆ ಎಚ್ಚರಗೊಂಡು, ಪಶ್ಚಾತ್ತಾಪಪಟ್ಟು, ದೇವರ ಪಕ್ಷದಲ್ಲಿ ತಮ್ಮ ನಿಲುವನ್ನು ತೆಗೆದುಕೊಂಡು, ನಿಜ ಹಿಂಬಾಲಕರಾಗುವುದರ ಕುರಿತಾಗಿ ಅವನು ಏನನ್ನೂ ಹೇಳಲಿಲ್ಲ.
ತದ್ರೀತಿಯಲ್ಲಿ, ಕುರಿ ಹಾಗೂ ಆಡುಗಳ ದೃಷ್ಟಾಂತದಲ್ಲಿ, ಮನುಷ್ಯ ಕುಮಾರನು ಪ್ರತ್ಯಕ್ಷನಾಗಿ, ಜನರು ಗತಕಾಲದಲ್ಲಿ ಏನು ಮಾಡಿದ್ದರೋ ಅಥವಾ ಮಾಡಿರಲಿಲ್ಲವೋ ಎಂಬ ವಿಷಯದ ಆಧಾರದ ಮೇಲೆ ಅವರನ್ನು ನ್ಯಾಯನಿರ್ಣಾಯಕವಾಗಿ ಪ್ರತ್ಯೇಕಿಸುತ್ತಾನೆ. ದೀರ್ಘಕಾಲದಿಂದ ಆಡುಸದೃಶ ಗುಣಗಳನ್ನು ತೋರಿಸಿರುವ ಜನರು, ಹಠಾತ್ತನೆ ಪರಿವರ್ತನೆಹೊಂದಿ, ಕುರಿಗಳಂತಾಗುವುದರ ಕುರಿತಾಗಿ ಯಾವ ವಿಷಯವನ್ನೂ ಯೇಸು ಹೇಳಲಿಲ್ಲ. ಜನರು ಈಗಾಗಲೇ ಪರಿಣಮಿಸಿರುವ ಆಧಾರದ ಮೇಲೆ ನ್ಯಾಯತೀರಿಸಲಿಕ್ಕಾಗಿ ಅವನು ಬರುತ್ತಾನೆ.—ಮತ್ತಾಯ 25:31-46.
ಆದರೂ, ಪುನಃ ಈ ಅಂಶದ ಕುರಿತಾಗಿ ನಿಶ್ಚಿತರಾಗಿರಲು ಯಾವುದೇ ಕಾರಣವಿಲ್ಲ. ದೇವರ ಜನರಿಗೆ, ಅಭಿಷಿಕ್ತರಿಗೂ ಮಹಾ ಸಮೂಹದವರಿಗೂ ಈಗ ತಾವು ಏನು ಮಾಡಬೇಕೆಂಬುದು ತಿಳಿದಿದೆ—ಸಾರಿ, ಶಿಷ್ಯರನ್ನಾಗಿ ಮಾಡುವುದೇ. (ಮತ್ತಾಯ 28:19, 20; ಮಾರ್ಕ 13:10) “ನಾವು ಆತನೊಂದಿಗೆ ಕೆಲಸನಡಿಸುವವರಾಗಿದ್ದು—ನೀವು ಹೊಂದಿದ ದೇವರ ಕೃಪೆಯನ್ನು ವ್ಯರ್ಥಮಾಡಿಕೊಳ್ಳಬೇಡಿರೆಂದು ಎಚ್ಚರಿಸುತ್ತೇವೆ. ಪ್ರಸನ್ನತೆಯಕಾಲದಲ್ಲಿ ನಿನ್ನ ಮನವೆಯನ್ನು ಕೇಳಿದೆನು, ರಕ್ಷಣೆಯ ದಿನದಲ್ಲಿ ನಿನಗೆ ಸಹಾಯಮಾಡಿದೆನು ಎಂದು ದೇವರು ಹೇಳುತ್ತಾನಲ್ಲಾ. ಈಗಲೇ ಆ ಸುಪ್ರಸನ್ನತೆಯಕಾಲ; ಇದೇ ಆ ರಕ್ಷಣೆಯ ದಿನ” ಎಂಬ ಬುದ್ಧಿವಾದವನ್ನು ನಾವು ಹೃದಯಕ್ಕೆ ತೆಗೆದುಕೊಳ್ಳುವ ಸಮಯವು ಇದೇ ಆಗಿದೆ.—2 ಕೊರಿಂಥ 6:1, 2.