ನಿಮ್ಮ ಸಹೋದರ ಪ್ರೀತಿಯು ಮುಂದುವರಿಯಲಿ!
“ನಿಮ್ಮ ಸಹೋದರ ಪ್ರೀತಿಯು ಮುಂದುವರಿಯಲಿ.”—ಇಬ್ರಿಯ 13:1, NW.
1. ತಣ್ಣನೆಯ ರಾತ್ರಿಯಂದು ಬೆಂಕಿಯನ್ನು ಉರಿಸುತ್ತಾ ಇರುವ ಸಲುವಾಗಿ ನೀವು ಏನು ಮಾಡುವಿರಿ, ಮತ್ತು ಯಾವ ತದ್ರೀತಿಯ ಜವಾಬ್ದಾರಿ ನಮಗೆಲ್ಲರಿಗೆ ಇದೆ?
ಹೊರಗೆ ಅಪಾಯಕರವಾಗಿ ತಣ್ಣಗಿನ ವಾತಾವರಣವಿದೆ, ಮತ್ತು ತಾಪಮಾನವು ತೀಕ್ಷ್ಣವಾಗಿ ಕೆಳಗಿಳಿಯುತ್ತಿದೆ. ನಿಮ್ಮ ಮನೆಯಲ್ಲಿರುವ ಶಾಖದ ಏಕೈಕ ಮೂಲವು, ಬೆಂಕಿಗೂಡಿನಲ್ಲಿ ಚಟಚಟ ಸದ್ದುಮಾಡುತ್ತಿರುವ ಬೆಂಕಿಯಾಗಿದೆ. ನೀವು ಆ ಬೆಂಕಿಯನ್ನು ಸುಸ್ಥಿತಿಯಲ್ಲಿಡುವುದರ ಮೇಲೆ ಜೀವಗಳು ಅವಲಂಬಿಸಿವೆ. ಜ್ವಾಲೆಗಳು ನಂದಿಹೋಗಿ, ಕಲ್ಲಿದ್ದಲುಗಳ ಕೆಂಪು ಹೊಳಪು, ಮಬ್ಬಾದ, ಜೀವರಹಿತ ಬೂದು ಬಣ್ಣಕ್ಕೆ ತಿರುಗಿದಂತೆ, ನೀವು ಸುಮ್ಮನೆ ಕುಳಿತು ನೋಡುವಿರೊ? ನಿಶ್ಚಯವಾಗಿಯೂ ಇಲ್ಲ. ಅದನ್ನು ಸಜೀವವಾಗಿಡಲು, ನೀವು ದಣಿಯದೆ ಅದಕ್ಕೆ ಉರುವಲನ್ನು ಹಾಕುತ್ತೀರಿ. ಒಂದರ್ಥದಲ್ಲಿ, ಬಹಳ ಹೆಚ್ಚು ಪ್ರಾಮುಖ್ಯವಾದ “ಬೆಂಕಿ”—ನಮ್ಮ ಹೃದಯಗಳಲ್ಲಿ ಉರಿಯಬೇಕಾದಂತಹ—ಪ್ರೀತಿಯ ವಿಷಯದಲ್ಲಿ, ನಮ್ಮಲ್ಲಿ ಪ್ರತಿಯೊಬ್ಬರಿಗೂ ತದ್ರೀತಿಯ ಒಂದು ಕೆಲಸವಿದೆ.
2. (ಎ) ಈ ಕಡೇ ದಿವಸಗಳಲ್ಲಿ ಪ್ರೀತಿಯು ತಣ್ಣಗಾಗಿದೆ ಎಂದು ಏಕೆ ಹೇಳಬಹುದು? (ಬಿ) ನಿಜ ಕ್ರೈಸ್ತರಿಗೆ ಪ್ರೀತಿಯು ಎಷ್ಟು ಪ್ರಾಮುಖ್ಯವಾಗಿದೆ?
2 ಯೇಸು ಬಹಳ ಹಿಂದೆಯೇ ಮುಂತಿಳಿಸಿದಂತೆ, ಲೋಕದ ಸುತ್ತಲೂ ಇರುವ, ಕ್ರೈಸ್ತರೆಂದು ಹೇಳಿಕೊಂಡವರ ನಡುವೆ ಪ್ರೀತಿಯು ತಣ್ಣಗಾಗಿ ಹೋಗುತ್ತಿರುವ ಒಂದು ಸಮಯದಲ್ಲಿ ನಾವು ಜೀವಿಸುತ್ತೇವೆ. (ಮತ್ತಾಯ 24:12) ಯೇಸು, ಪ್ರೀತಿಯ ಅತ್ಯಂತ ಪ್ರಾಮುಖ್ಯವಾದ ವಿಧಕ್ಕೆ ಸೂಚಿಸುತ್ತಿದ್ದನು—ಯೆಹೋವ ದೇವರು ಮತ್ತು ಆತನ ವಾಕ್ಯವಾದ ಬೈಬಲಿಗಾಗಿರುವ ಪ್ರೀತಿ. ಪ್ರೀತಿಯ ಇತರ ಪ್ರಕಾರಗಳೂ ಕ್ಷೀಣವಾಗುತ್ತಿವೆ. “ಕಡೇ ದಿವಸಗಳಲ್ಲಿ” ಅನೇಕರು “ಮಮತೆಯಿಲ್ಲ”ದವರಾಗಿರುವರೆಂದು ಬೈಬಲ್ ಮುಂತಿಳಿಸಿತು. (2 ತಿಮೊಥೆಯ 3:1-5) ಇದು ಎಷ್ಟೊಂದು ನಿಜವಾಗಿದೆ! ಕುಟುಂಬವು ಮಮತೆಯ ನೆಲೆಯಾಗಿರಬೇಕು, ಆದರೆ ಅಲ್ಲಿಯು ಸಹ, ಹಿಂಸಾಚಾರ ಮತ್ತು ಅಪಪ್ರಯೋಗಗಳು—ಕೆಲವೊಮ್ಮೆ ದಿಗಿಲುಪಡಿಸುವಷ್ಟು ಕ್ರೂರವಾಗಿ—ಸಾಮಾನ್ಯ ವಿಷಯಗಳಾಗಿವೆ. ಆದರೂ, ಈ ಲೋಕದ ಭಾವಶೂನ್ಯ ವಾತಾವರಣದಲ್ಲಿ ಕ್ರೈಸ್ತರು, ಪರಸ್ಪರ ಪ್ರೀತಿಯನ್ನು ಹೊಂದಿರುವಂತೆ ಮಾತ್ರವಲ್ಲ, ಸ್ವತ್ಯಾಗದ ಪ್ರೀತಿಯನ್ನು ಹೊಂದಿರುವಂತೆ, ತಮಗಿಂತಲೂ ಇತರರನ್ನು ಪ್ರಥಮವಾಗಿಡುವಂತೆ ಆಜ್ಞಾಪಿಸಲ್ಪಟ್ಟಿದ್ದಾರೆ. ಈ ಪ್ರೀತಿಯನ್ನು ನಾವು ಎಷ್ಟು ಸ್ಪಷ್ಟವಾಗಿ ಪ್ರದರ್ಶಿಸಬೇಕೆಂದರೆ, ಅದು ಸತ್ಯ ಕ್ರೈಸ್ತ ಸಭೆಯ ಗುರುತಿಸುವ ಚಿಹ್ನೆಯಾಗಿ ಪರಿಣಮಿಸುತ್ತಾ, ಎಲ್ಲರಿಗೂ ಗೋಚರವಾಗಬೇಕು.—ಯೋಹಾನ 13:34, 35.
3. ಸಹೋದರ ಪ್ರೀತಿಯು ಏನಾಗಿದೆ, ಮತ್ತು ಅದನ್ನು ಮುಂದುವರಿಸುವುದರ ಅರ್ಥವೇನು?
3 ಅಪೊಸ್ತಲ ಪೌಲನು ಹೀಗೆ ಆಜ್ಞಾಪಿಸುವಂತೆ ಪ್ರೇರಿಸಲ್ಪಟ್ಟನು: “ನಿಮ್ಮ ಸಹೋದರ ಪ್ರೀತಿಯು ಮುಂದುವರಿಯಲಿ.” (ಇಬ್ರಿಯ 13:1, NW) ಒಂದು ಪಾಂಡಿತ್ಯಪೂರ್ಣ ಪ್ರಕಾಶನಕ್ಕನುಸಾರ, “ಸಹೋದರ ಪ್ರೀತಿ” ಎಂಬುದಾಗಿ ಇಲ್ಲಿ ಭಾಷಾಂತರಿಸಲ್ಪಟ್ಟ ಗ್ರೀಕ್ ಪದವಾದ (ಫಿಲಡೆಲ್ಫಿಯ), “ಮಮತೆಯ ಪ್ರೀತಿಗೆ, ದಯೆಯನ್ನು, ಸಹಾನುಭೂತಿಯನ್ನು ತೋರಿಸುವುದಕ್ಕೆ, ಸಹಾಯವನ್ನು ನೀಡುವುದಕ್ಕೆ ಸೂಚಿಸುತ್ತದೆ.” ಮತ್ತು ಇಂತಹ ಪ್ರೀತಿಯು ಮುಂದುವರಿಯುವಂತೆ ನಾವು ಬಿಡಬೇಕೆಂದು ಪೌಲನು ಹೇಳಿದಾಗ, ಅವನು ಏನನ್ನು ಅರ್ಥೈಸಿದನು? ಅದೇ ಪ್ರಕಾಶನವು ಹೇಳುವುದು, “ಅದು ಎಂದಿಗೂ ತಣ್ಣಗಾಗಬಾರದು.” ಆದುದರಿಂದ ನಮ್ಮ ಸಹೋದರರಿಗಾಗಿ ಸಹಾನುಭೂತಿ ಇದ್ದರೆ ಮಾತ್ರ ಸಾಲದು, ಅದನ್ನು ನಾವು ಪ್ರದರ್ಶಿಸಬೇಕು. ಇನ್ನೂ ಹೆಚ್ಚಾಗಿ, ಈ ಪ್ರೀತಿಯು ತಣ್ಣಗಾಗುವಂತೆ ಎಂದಿಗೂ ಬಿಡದೆ, ಅದು ಶಾಶ್ವತವಾಗಿರುವಂತೆ ನಾವು ಮಾಡಬೇಕು. ಪಂಥಾಹ್ವಾನದಾಯಕವೊ? ಹೌದು, ಆದರೆ ಯೆಹೋವನ ಆತ್ಮವು, ಸಹೋದರ ಮಮತೆಯನ್ನು ಬೆಳೆಸಿಕೊಳ್ಳುವಂತೆ ಮತ್ತು ಅದನ್ನು ಕಾಪಾಡಿಕೊಳ್ಳುವಂತೆ ನಮಗೆ ಸಹಾಯ ಮಾಡಬಲ್ಲದು. ನಮ್ಮ ಹೃದಯಗಳಲ್ಲಿ ಈ ಪ್ರೀತಿಯ ಬೆಂಕಿಗೆ ಉರುವಲನ್ನು ಹಾಕುವ ಮೂರು ವಿಧಾನಗಳನ್ನು ನಾವು ಪರಿಗಣಿಸೋಣ.
ಸಹಾನುಭೂತಿ ತೋರಿಸಿರಿ
4. ಸಹಾನುಭೂತಿ ಎಂದರೇನು?
4 ನಿಮ್ಮ ಕ್ರೈಸ್ತ ಸಹೋದರ ಸಹೋದರಿಯರಿಗಾಗಿ ನಿಮ್ಮಲ್ಲಿ ಅಧಿಕ ಪ್ರೀತಿಯು ಇರುವಂತೆ ನೀವು ಬಯಸುವುದಾದರೆ, ನೀವು ಮೊದಲು ಅವರಿಗಾಗಿ ಅನುಕಂಪ, ಅವರು ಜೀವನದಲ್ಲಿ ಎದುರಿಸುವ ಪರೀಕ್ಷೆಗಳು ಹಾಗೂ ಸವಾಲುಗಳಲ್ಲಿ ಅವರಿಗೆ ಅನುಭೂತಿ ತೋರಿಸಬೇಕಾಗಬಹುದು. ಅಪೊಸ್ತಲ ಪೇತ್ರನು ಹೀಗೆ ಬರೆದಾಗ ಇದನ್ನು ಸೂಚಿಸಿದನು: “ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ; ಪರರ ಸುಖದುಃಖಗಳಲ್ಲಿ ಸೇರುವವರಾಗಿರಿ [“ಸಹಾನುಭೂತಿ ತೋರಿಸುವವರಾಗಿರಿ,” NW]; ಅಣ್ಣತಮ್ಮಂದಿರಂತೆ ಒಬ್ಬರನ್ನೊಬ್ಬರು ಪ್ರೀತಿಸಿರಿ; ಕರುಣೆಯೂ ದೀನಭಾವವೂ ಉಳ್ಳವರಾಗಿರಿ.” (1 ಪೇತ್ರ 3:8) “ಸಹಾನುಭೂತಿ” ತೋರಿಸುವುದು ಎಂಬುದಕ್ಕಾಗಿ ಇಲ್ಲಿ ಉಪಯೋಗಿಸಲ್ಪಟ್ಟ ಗ್ರೀಕ್ ಪದವು, “ಅವರೊಂದಿಗೆ ಕಷ್ಟಾನುಭವಿಸುವು”ದನ್ನು ಸೂಚಿಸುತ್ತದೆ. ಬೈಬಲ್ ಸಂಬಂಧಿತ ಗ್ರೀಕ್ನ ಕುರಿತಾದ ಒಂದು ಗ್ರಂಥವು ಈ ಪದದ ಬಗ್ಗೆ ಹೇಳುವುದು: “ನಾವು ಇತರರ ಅನಿಸಿಕೆಗಳನ್ನು, ಅವು ನಮ್ಮ ಸ್ವಂತ ಅನಿಸಿಕೆಗಳಾಗಿವೆಯೊ ಎಂಬಂತೆ ಹಂಚಿಕೊಳ್ಳುವಾಗ, ಅಸ್ತಿತ್ವದಲ್ಲಿರುವ ಮನಸ್ಸಿನ ಸ್ಥಿತಿಯನ್ನು ಅದು ವರ್ಣಿಸುತ್ತದೆ.” ಆದಕಾರಣ, ಅನುಭೂತಿಯು ಆವಶ್ಯಕವಾಗಿದೆ. ಯೆಹೋವನ ಒಬ್ಬ ನಂಬಿಗಸ್ತ, ವೃದ್ಧ ಸೇವಕನು ಒಮ್ಮೆ ಹೇಳಿದ್ದು: “ನನ್ನ ಹೃದಯದಲ್ಲಿ ನಿಮ್ಮ ವೇದನೆಯ ಅನಿಸಿಕೆಯಾಗುವುದೇ ಅನುಭೂತಿಯಾಗಿದೆ.”
5. ಯೆಹೋವನಿಗೆ ಸಹಾನುಭೂತಿ ಇದೆಯೆಂದು ನಮಗೆ ಹೇಗೆ ಗೊತ್ತು?
5 ಯೆಹೋವನಿಗೆ ಇಂತಹ ಸಹಾನುಭೂತಿ ಇದೆಯೊ? ಖಂಡಿತವಾಗಿಯೂ ಇದೆ. ದೃಷ್ಟಾಂತಕ್ಕಾಗಿ, ತನ್ನ ಜನರಾದ ಇಸ್ರಾಯೇಲ್ಯರ ಕಷ್ಟಾನುಭವಗಳ ಕುರಿತಾಗಿ ನಾವು ಓದುವುದು: “ಅವರು ಶ್ರಮೆಪಡುತ್ತಿರುವಾಗೆಲ್ಲಾ ಆತನೂ ಶ್ರಮೆಪಟ್ಟನು.” (ಯೆಶಾಯ 63:9) ಯೆಹೋವನು ಕೇವಲ ಅವರ ತೊಂದರೆಗಳನ್ನು ನೋಡಲಿಲ್ಲ, ಆ ಜನರಿಗಾಗಿ ಆತನಲ್ಲಿ ಅನುಕಂಪವಿತ್ತು. ಯೆಹೋವನಿಗೆ ಎಷ್ಟೊಂದು ತೀಕ್ಷ್ಣವಾದ ಅನಿಸಿಕೆಯಾಗುತ್ತದೆ ಎಂಬುದು, ತನ್ನ ಜನರಿಗೆ ನುಡಿದ ಆತನ ಸ್ವಂತ ಮಾತುಗಳಿಂದ ದೃಷ್ಟಾಂತಿಸಲ್ಪಟ್ಟಿದೆ. ಇದು ಜೆಕರ್ಯ 2:8ರಲ್ಲಿ ದಾಖಲಿಸಲ್ಪಟ್ಟಿದೆ: “ನಿಮ್ಮನ್ನು ತಾಕುವವನು ಯೆಹೋವನ ಕಣ್ಣುಗುಡ್ಡನ್ನು ತಾಕುವವನಾಗಿದ್ದಾನೆ.”a ಈ ವಚನದ ಕುರಿತು ಒಬ್ಬ ವ್ಯಾಖ್ಯಾನಕಾರನು ಗಮನಿಸುವುದು: “ಮಾನವ ಮೈಕಟ್ಟಿನಲ್ಲಿ, ಕಣ್ಣು ಅತ್ಯಂತ ಸಂಕೀರ್ಣವಾದ ಹಾಗೂ ಸೂಕ್ಷ್ಮವಾದ ರಚನೆಗಳಲ್ಲಿ ಒಂದಾಗಿದೆ. ಕಣ್ಣುಗುಡ್ಡೆಯು—ದೃಷ್ಟಿಯ ಉದ್ದೇಶಗಳಿಗಾಗಿ ಆಕಾಶದ ಬೆಳಕು ಒಳಪ್ರವೇಶಿಸುವ ರಂಧ್ರ—ಆ ರಚನೆಯ ಅತ್ಯಂತ ಸೂಕ್ಷ್ಮವಾದ, ಹಾಗೂ ಪ್ರಾಮುಖ್ಯವಾದ ಭಾಗವಾಗಿದೆ. ತನ್ನ ಪ್ರೀತಿಪಾತ್ರ ವ್ಯಕ್ತಿಗಳಿಗಾಗಿರುವ ಯೆಹೋವನ ಅತ್ಯುತ್ಕೃಷ್ಟವಾದ ಕೋಮಲ ಪರಾಮರಿಕೆಯ ವಿಚಾರವನ್ನು ಬೇರೆ ಯಾವ ವಿಷಯವೂ ಹೆಚ್ಚು ಉತ್ತಮವಾಗಿ ತಿಳಿಯಪಡಿಸಲಾರದು.”
6. ಯೇಸು ಕ್ರಿಸ್ತನು ಸಹಾನುಭೂತಿಯನ್ನು ಹೇಗೆ ತೋರಿಸಿದ್ದಾನೆ?
6 ಯೇಸು ಸಹ ಯಾವಾಗಲೂ ಗಾಢವಾದ ಸಹಾನುಭೂತಿಯನ್ನು ತೋರಿಸಿದ್ದಾನೆ. ರೋಗಗ್ರಸ್ಥರಾಗಿದ್ದ ಇಲ್ಲವೆ ತೊಂದರೆಗೊಳಗಾಗಿದ್ದ ತನ್ನ ಜೊತೆ ಮಾನವರ ಅವಸ್ಥೆಯ ವಿಷಯದಲ್ಲಿ ಅವನು ಸತತವಾಗಿ “ಕನಿಕರ”ಪಟ್ಟನು. (ಮಾರ್ಕ 1:41; 6:34) ಯಾವನಾದರೂ ತನ್ನ ಅಭಿಷಿಕ್ತ ಹಿಂಬಾಲಕರನ್ನು ದಯಾಪರವಾಗಿ ಉಪಚರಿಸಲು ತಪ್ಪಿಹೋದರೆ, ಸ್ವತಃ ತಾನು ಆ ರೀತಿಯ ಉಪಚಾರವನ್ನು ಪಡೆದುಕೊಳ್ಳುತ್ತಿದ್ದೇನೊ ಎಂಬಂತೆ ತನಗೆ ಅನಿಸುತ್ತದೆ ಎಂದು ಅವನು ಸೂಚಿಸಿದನು. (ಮತ್ತಾಯ 25:41-46) ಮತ್ತು ಇಂದು ನಮ್ಮ ಸ್ವರ್ಗೀಯ “ಮಹಾ ಯಾಜಕ”ನಂತೆ ಅವನು, “ನಮ್ಮ ನಿರ್ಬಲಾವಸ್ಥೆಯನ್ನು ಕುರಿತು ಅನುತಾಪ” ತೋರಿಸಬಲ್ಲವನಾಗಿದ್ದಾನೆ.—ಇಬ್ರಿಯ 4:15.
7. ಒಬ್ಬ ಸಹೋದರನು ಇಲ್ಲವೆ ಒಬ್ಬ ಸಹೋದರಿಯು ನಮಗೆ ಕಿರಿಕಿರಿಯನ್ನು ಉಂಟುಮಾಡುವಾಗ, ಸಹಾನುಭೂತಿಯು ನಮಗೆ ಹೇಗೆ ಸಹಾಯ ಮಾಡಬಹುದು?
7 “ನಮ್ಮ ನಿರ್ಬಲಾವಸ್ಥೆಯನ್ನು ಕುರಿತು ಅನುತಾಪ” ತೋರಿಸುವುದು—ಅದೊಂದು ಸಾಂತ್ವನದಾಯಕ ವಿಚಾರವಾಗಿಲ್ಲವೊ? ಹಾಗಾದರೆ, ಖಂಡಿತವಾಗಿಯೂ ನಾವು ಒಬ್ಬರಿಗೊಬ್ಬರು ಅದನ್ನೇ ಮಾಡಬಯಸುತ್ತೇವೆ. ನಿಶ್ಚಯವಾಗಿಯೂ, ಮತ್ತೊಬ್ಬರ ಬಲಹೀನತೆಗಳಿಗಾಗಿ ಹುಡುಕುವುದು ಬಹಳ ಸುಲಭ. (ಮತ್ತಾಯ 7:3-5) ಆದರೆ ಮುಂದಿನ ಬಾರಿ, ಒಬ್ಬ ಸಹೋದರನು ಇಲ್ಲವೆ ಒಬ್ಬ ಸಹೋದರಿಯು ನಿಮಗೆ ಕಿರಿಕಿರಿಯನ್ನು ಉಂಟುಮಾಡುವಾಗ, ಇದನ್ನು ಏಕೆ ಪ್ರಯತ್ನಿಸಿನೋಡಬಾರದು? ನಿಮ್ಮನ್ನು ಆ ವ್ಯಕ್ತಿಯ ಪರಿಸ್ಥಿತಿಗಳಲ್ಲಿ, ಆ ಹಿನ್ನೆಲೆ, ಆ ವ್ಯಕ್ತಿತ್ವ, ಹೆಣಗಾಡಲಿಕ್ಕಾಗಿರುವ ಕೆಲವೊಂದು ವೈಯಕ್ತಿಕ ದೋಷಗಳೊಂದಿಗೆ ಊಹಿಸಿಕೊಳ್ಳಿರಿ. ನೀವು ಅವೇ ತಪ್ಪುಗಳನ್ನು—ಅಥವಾ ಬಹುಶಃ ಇನ್ನೂ ಕೀಳಾದವುಗಳನ್ನು—ಮಾಡಲಾರಿರಿ ಎಂಬ ವಿಷಯದಲ್ಲಿ ನೀವು ಖಚಿತರಾಗಿರಬಲ್ಲಿರೊ? ಇತರರಿಂದ ಬಹಳಷ್ಟನ್ನು ನಿರೀಕ್ಷಿಸುವ ಬದಲಿಗೆ, ನಾವು ಸಹಾನುಭೂತಿಯನ್ನು ತೋರಿಸಬೇಕು. ಇದು, ‘ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುವ’ ಯೆಹೋವನಂತೆ ವಿವೇಚನೆಯುಳ್ಳವರಾಗಿರಲು ನಮಗೆ ಸಹಾಯ ಮಾಡುವುದು. (ಕೀರ್ತನೆ 103:14; ಯಾಕೋಬ 3:17) ಆತನಿಗೆ ನಮ್ಮ ಇತಿಮಿತಿಗಳು ಗೊತ್ತಿವೆ. ನಾವು ಯೋಗ್ಯವಾಗಿ ಮಾಡಸಾಧ್ಯವಿರುವುದಕ್ಕಿಂತಲೂ ಹೆಚ್ಚನ್ನು ಆತನೆಂದಿಗೂ ನಮ್ಮಿಂದ ನಿರೀಕ್ಷಿಸುವುದಿಲ್ಲ. (1 ಅರಸುಗಳು 19:5-7ನ್ನು ಹೋಲಿಸಿರಿ.) ನಾವೆಲ್ಲರೂ ಇತರರ ಕಡೆಗೆ ಇಂತಹ ಸಹಾನುಭೂತಿಯನ್ನು ಬೆಳೆಸೋಣ.
8. ಒಬ್ಬ ಸಹೋದರನು ಇಲ್ಲವೆ ಒಬ್ಬ ಸಹೋದರಿಯು ಯಾವುದೊ ತೊಂದರೆಯನ್ನು ಅನುಭವಿಸುತ್ತಿರುವಾಗ, ನಾವು ಹೇಗೆ ಪ್ರತಿಕ್ರಿಯಿಸಬೇಕು?
8 ಸಭೆಯು, ಐಕ್ಯವಾಗಿ ಒಟ್ಟಿಗೆ ಕೆಲಸಮಾಡಬೇಕಾದ ಭಿನ್ನವಾದ ಅಂಗಗಳುಳ್ಳ ಒಂದು ದೇಹದಂತಿದೆ ಎಂದು ಪೌಲನು ಬರೆದನು. ಅವನು ಕೂಡಿಸಿದ್ದು: “ಒಂದು ಅಂಗಕ್ಕೆ ನೋವಾದರೆ ಎಲ್ಲಾ ಅಂಗಗಳಿಗೂ ನೋವಾಗುತ್ತದೆ.” (1 ಕೊರಿಂಥ 12:12-26) ಯಾವುದೊ ಉಗ್ರವಾದ ಪರೀಕ್ಷೆಯನ್ನು ಅನುಭವಿಸುತ್ತಿರುವವರ ಜೊತೆಗೆ ನಾವು ನೋವನ್ನು ಅನುಭವಿಸಬೇಕು, ಇಲ್ಲವೆ ಅವರಿಗೆ ಅನುಭೂತಿ ತೋರಿಸಬೇಕು. ಇದನ್ನು ಮಾಡುವುದರಲ್ಲಿ ಹಿರಿಯರು ನಾಯಕತ್ವವನ್ನು ವಹಿಸುತ್ತಾರೆ. ಪೌಲನು ಹೀಗೂ ಬರೆದನು: “ಯಾವನಾದರೂ ಬಲವಿಲ್ಲದವನಾದರೆ ನಾನು ಅವನೊಂದಿಗೆ ಬಲವಿಲ್ಲದವನಾಗದೆ ಇರುವೆನೋ? ಯಾವನಾದರೂ ಪಾಪದಲ್ಲಿ ಸಿಕ್ಕಿಕೊಂಡರೆ ನಾನು ತಾಪಪಡುವದಿಲ್ಲವೋ?” (2 ಕೊರಿಂಥ 11:29) ಹಿರಿಯರು ಮತ್ತು ಸಂಚರಣ ಮೇಲ್ವಿಚಾರಕರು ಈ ಸಂಬಂಧದಲ್ಲಿ ಪೌಲನನ್ನು ಅನುಕರಿಸುತ್ತಾರೆ. ತಮ್ಮ ಭಾಷಣಗಳಲ್ಲಿ, ತಮ್ಮ ಕುರಿಪಾಲನೆಯ ಕೆಲಸದಲ್ಲಿ, ಮತ್ತು ನ್ಯಾಯನಿರ್ಣಾಯಕ ವಿಷಯಗಳನ್ನು ನಿರ್ವಹಿಸುವ ವಿಚಾರದಲ್ಲೂ ಸಹಾನುಭೂತಿಯನ್ನು ತೋರಿಸಲು ಅವರು ಪ್ರಯತ್ನಿಸುತ್ತಾರೆ. ಪೌಲನು ಶಿಫಾರಸ್ಸುಮಾಡಿದ್ದು: “ಅಳುವವರ ಸಂಗಡ ಅಳಿರಿ.” (ರೋಮಾಪುರ 12:15) ಕುರುಬರಿಗೆ ನಿಜವಾಗಿಯೂ ತಮಗಾಗಿ ಅನುಭೂತಿಯಿದೆ, ತಮ್ಮ ಇತಿಮತಿಗಳನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ, ಮತ್ತು ತಾವು ಎದುರಿಸುವ ತೊಂದರೆಗಳೊಂದಿಗೆ ಅವರು ಕನಿಕರಪಡುತ್ತಾರೆಂದು ಕುರಿಗಳು ಗ್ರಹಿಸುವಾಗ, ಸಾಮಾನ್ಯವಾಗಿ ಅವರು ಸಲಹೆ, ನಿರ್ದೇಶನ, ಮತ್ತು ಶಿಸ್ತನ್ನು ಸ್ವೀಕರಿಸಿಕೊಳ್ಳಲು ಹೆಚ್ಚು ಸಿದ್ಧರಾಗಿರುತ್ತಾರೆ. ‘ತಮ್ಮ ಆತ್ಮಗಳಿಗೆ ವಿಶ್ರಾಂತಿ’ಯನ್ನು ಅಲ್ಲಿ ತಾವು ಕಂಡುಕೊಳ್ಳುವೆವೆಂಬ ಭರವಸೆಯಿಂದ, ಅವರು ಉತ್ಸಾಹದಿಂದ ಕೂಟಗಳಿಗೆ ಹಾಜರಾಗುತ್ತಾರೆ.—ಮತ್ತಾಯ 11:29.
ಗಣ್ಯತೆಯನ್ನು ತೋರಿಸುವುದು
9. ನಮ್ಮಲ್ಲಿರುವ ಒಳಿತನ್ನು ತಾನು ಗಣ್ಯಮಾಡುತ್ತೇನೆಂದು ಯೆಹೋವನು ಹೇಗೆ ತೋರಿಸುತ್ತಾನೆ?
9 ಸಹೋದರ ಪ್ರೀತಿಗೆ ಉರುವಲನ್ನು ಹಾಕುವ ಎರಡನೆಯ ವಿಧಾನವು, ಗಣ್ಯತೆಯ ಮೂಲಕವೇ. ಇತರರನ್ನು ಗಣ್ಯಮಾಡಲು, ನಾವು ಅವರ ಒಳ್ಳೆಯ ಗುಣಗಳು ಹಾಗೂ ಪ್ರಯತ್ನಗಳ ಮೇಲೆ ಕೇಂದ್ರೀಕರಿಸಬೇಕು ಮತ್ತು ಅವುಗಳನ್ನು ಅಮೂಲ್ಯವೆಂದೆಣಿಸಬೇಕು. ನಾವು ಹಾಗೆ ಮಾಡುವಾಗ, ಸ್ವತಃ ಯೆಹೋವನನ್ನೇ ನಾವು ಅನುಕರಿಸುತ್ತೇವೆ. (ಎಫೆಸ 5:1) ಪ್ರತಿದಿನ ನಮ್ಮ ಅನೇಕ ಚಿಕ್ಕಪುಟ್ಟ ಪಾಪಗಳನ್ನು ಆತನು ಕ್ಷಮಿಸುತ್ತಾನೆ. ಪ್ರಾಮಾಣಿಕ ಪಶ್ಚಾತ್ತಾಪವಿರುವ ತನಕ ಆತನು ಗಂಭೀರ ಪಾಪಗಳನ್ನೂ ಕ್ಷಮಿಸುತ್ತಾನೆ. ಒಮ್ಮೆ ನಮ್ಮ ಪಾಪಗಳನ್ನು ಆತನು ಕ್ಷಮಿಸಿದ ಮೇಲೆ, ಅವುಗಳ ಕುರಿತು ಆತನು ಯೋಚಿಸುವುದಿಲ್ಲ. (ಯೆಹೆಜ್ಕೇಲ 33:14-16) ಕೀರ್ತನೆಗಾರನು ಕೇಳಿದ್ದು: “ಕರ್ತನೇ, ಯಾಹುವೇ, ನೀನು ಪಾಪಗಳನ್ನು ಎಣಿಸುವದಾದರೆ ನಿನ್ನ ಮುಂದೆ ಯಾರು ನಿಂತಾರು?” (ಕೀರ್ತನೆ 130:3) ಯೆಹೋವನು, ನಾವು ಆತನ ಸೇವೆಯಲ್ಲಿ ಮಾಡುವ ಒಳ್ಳೆಯ ವಿಷಯಗಳ ಮೇಲೆಯೇ ಕೇಂದ್ರೀಕರಿಸುತ್ತಾನೆ.—ಇಬ್ರಿಯ 6:10.
10. (ಎ) ವಿವಾಹದ ಸಂಗಾತಿಗಳು ಪರಸ್ಪರರಿಗಾಗಿ ಗಣ್ಯತೆಯನ್ನು ಕಳೆದುಕೊಳ್ಳುವುದು ಅಪಾಯಕರವಾಗಿದೆ ಏಕೆ? (ಬಿ) ವಿವಾಹದ ಸಂಗಾತಿಗಾಗಿ ಗಣ್ಯತೆಯನ್ನು ಕಳೆದುಕೊಳ್ಳುತ್ತಿರುವ ಒಬ್ಬನು ಏನು ಮಾಡಬೇಕು?
10 ಕುಟುಂಬದಲ್ಲಿ ಈ ಮಾದರಿಯನ್ನು ಅನುಸರಿಸುವುದು ವಿಶೇಷವಾಗಿ ಪ್ರಾಮುಖ್ಯವಾಗಿದೆ. ಹೆತ್ತವರು ತಾವು ಒಬ್ಬರನ್ನೊಬ್ಬರು ಗಣ್ಯಮಾಡುತ್ತೇವೆಂದು ತೋರಿಸುವಾಗ, ಕುಟುಂಬಕ್ಕಾಗಿ ಒಂದು ನಮೂನೆಯನ್ನು ಅವರು ಸ್ಥಾಪಿಸುತ್ತಾರೆ. ಕ್ರಮಬದ್ಧವಿಲ್ಲದ ವಿವಾಹಗಳ ಈ ಶಕದಲ್ಲಿ, ವಿವಾಹ ಸಂಗಾತಿಯ ವಿಷಯದಲ್ಲಿ ಉದಾಸೀನರಾಗಿರುವುದು ಮತ್ತು ದೋಷಗಳನ್ನು ಉತ್ಪ್ರೇಕ್ಷಿಸಿ, ಒಳ್ಳೆಯ ಲಕ್ಷಣಗಳನ್ನು ಕಡೆಗಣಿಸುವುದು ತೀರ ಸುಲಭ. ಇಂತಹ ನಕಾರಾತ್ಮಕ ಆಲೋಚನೆಯು, ವಿವಾಹವನ್ನು ಒಂದು ಆನಂದರಹಿತ ಹೊರೆಯನ್ನಾಗಿ ಮಾಡುತ್ತಾ, ಅದನ್ನು ಸವೆದುಹಾಕುತ್ತದೆ. ನಿಮ್ಮ ಸಂಗಾತಿಗಾಗಿರುವ ನಿಮ್ಮ ಗಣ್ಯತೆಯು ಕ್ಷೀಣಿಸುತ್ತಿರುವುದಾದರೆ, ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ, ‘ನನ್ನ ಸಂಗಾತಿಯಲ್ಲಿ ನಿಜವಾಗಿಯೂ ಒಳ್ಳೆಯ ಗುಣಗಳಿಲ್ಲವೊ?’ ನೀವು ಪ್ರೀತಿಮಾಡಿ ವಿವಾಹವಾದ ಕಾರಣಗಳನ್ನು ಜ್ಞಾಪಿಸಿಕೊಳ್ಳಿ. ಈ ಅಪೂರ್ವ ವ್ಯಕ್ತಿಯನ್ನು ಪ್ರೀತಿಸಿದುದಕ್ಕಾಗಿದ್ದ ಆ ಎಲ್ಲ ಕಾರಣಗಳು ನಿಜವಾಗಿಯೂ ಮಾಯವಾಗಿವೆಯೊ? ಖಂಡಿತವಾಗಿಯೂ ಇಲ್ಲ; ಆದುದರಿಂದ ನಿಮ್ಮ ಸಂಗಾತಿಯಲ್ಲಿರುವ ಒಳಿತನ್ನು ಗಣ್ಯಮಾಡಲು ಕಷ್ಟಪಟ್ಟು ಕೆಲಸಮಾಡಿರಿ ಮತ್ತು ಮಾತುಗಳಲ್ಲಿ ನಿಮ್ಮ ಗಣ್ಯತೆಯನ್ನು ವ್ಯಕ್ತಪಡಿಸಿರಿ.—ಜ್ಞಾನೋಕ್ತಿ 31:28.
11. ವೈವಾಹಿಕ ಪ್ರೀತಿಯು ಕಪಟರಹಿತವಾಗಿರಬೇಕಾಗಿದ್ದಲ್ಲಿ, ಯಾವ ಆಚರಣೆಗಳನ್ನು ದೂರವಿರಿಸಬೇಕು?
11 ಗಣ್ಯತೆಯು, ವಿವಾಹ ಸಂಗಾತಿಗಳಿಗೆ, ತಮ್ಮ ಪ್ರೀತಿಯನ್ನು ಕಪಟರಹಿತವಾಗಿಡಲು ಸಹ ಸಹಾಯ ಮಾಡುತ್ತದೆ. (ಹೋಲಿಸಿ 2 ಕೊರಿಂಥ 6:6; 1 ಪೇತ್ರ 1:22.) ಹೃತ್ಪೂರ್ವಕ ಗಣ್ಯತೆಯಿಂದ ಉತ್ತೇಜನಗೊಂಡ ಇಂತಹ ಪ್ರೀತಿಯು, ಮುಚ್ಚಿದ ಕದಗಳ ಮರೆಯಲ್ಲಿ ಕ್ರೂರತೆಗೆ, ಮನನೋಯಿಸುವ ಮತ್ತು ಅವಮಾನಗೊಳಿಸುವ ಮಾತುಗಳಿಗೆ, ತಾತ್ಸಾರದ ಉಪಚಾರಕ್ಕೆ—ಎಲ್ಲಿ ಒಂದೂ ದಯಾಪರ ಇಲ್ಲವೆ ನಯವಾದ ಮಾತು ಆಡಲ್ಪಡದೆ ದಿನಗಳು ಗತಿಸಿಹೋಗಬಹುದೊ—ಮತ್ತು ಖಂಡಿತವಾಗಿಯೂ ಶಾರೀರಿಕ ಹಿಂಸಾಚಾರಕ್ಕೆ ಯಾವ ಅವಕಾಶವನ್ನೂ ಕೊಡುವುದಿಲ್ಲ. (ಎಫೆಸ 5:28, 29) ಒಬ್ಬರನ್ನೊಬ್ಬರು ನಿಜವಾಗಿಯೂ ಗಣ್ಯಮಾಡುವ ಗಂಡಹೆಂಡಿರು ಪರಸ್ಪರರನ್ನು ಘನಪಡಿಸುತ್ತಾರೆ. ಅವರು ಸಾರ್ವಜನಿಕ ಸ್ಥಳದಲ್ಲಿದ್ದಾಗ ಮಾತ್ರ ಹಾಗೆ ಮಾಡುವುದಿಲ್ಲ, ಬದಲಿಗೆ ಅವರು ಯೆಹೋವನ ದೃಷ್ಟಿಯಲ್ಲಿರುವಾಗಲೆಲ್ಲ—ಬೇರೆ ಮಾತುಗಳಲ್ಲಿ, ಎಲ್ಲ ಸಮಯ—ಹಾಗೆ ಮಾಡುತ್ತಾರೆ.—ಜ್ಞಾನೋಕ್ತಿ 5:21.
12. ತಮ್ಮ ಮಕ್ಕಳಲ್ಲಿರುವ ಒಳ್ಳೆಯ ವಿಷಯಗಳಿಗಾಗಿ ಹೆತ್ತವರು ಗಣ್ಯತೆಯನ್ನು ಏಕೆ ವ್ಯಕ್ತಪಡಿಸಬೇಕು?
12 ತಾವು ಗಣ್ಯಮಾಡಲ್ಪಡುತ್ತೇವೆಂಬ ಅನಿಸಿಕೆ ಮಕ್ಕಳಿಗೂ ಆಗುವ ಅಗತ್ಯವಿದೆ. ಹೆತ್ತವರು ಅವರ ಮೇಲೆ ಅರ್ಥವಿಲ್ಲದ ಹೊಗಳಿಕೆಯ ಸುರಿಮಳೆಯನ್ನು ಸುರಿಸಬೇಕೆಂದಲ್ಲ, ಬದಲಿಗೆ ತಮ್ಮ ಮಕ್ಕಳ ಸ್ತುತಿಯೋಗ್ಯ ಗುಣಗಳನ್ನು ಮತ್ತು ಅವರು ಮಾಡುವ ಯಥಾರ್ಥವಾದ ಒಳಿತನ್ನು ಅವರು ಪ್ರಶಂಸಿಸಬೇಕು. ಯೇಸುವಿನ ವಿಷಯದಲ್ಲಿ ತನ್ನ ಸಮ್ಮತಿಯನ್ನು ವ್ಯಕ್ತಪಡಿಸುವುದರಲ್ಲಿ ಯೆಹೋವನ ಮಾದರಿಯನ್ನು ಜ್ಞಾಪಿಸಿಕೊಳ್ಳಿರಿ. (ಮಾರ್ಕ 1:11) ಸಾಮ್ಯವೊಂದರಲ್ಲಿ “ಯಜಮಾನ”ನೋಪಾದಿ ಯೇಸುವಿನ ಮಾದರಿಯನ್ನು ಸಹ ಜ್ಞಾಪಿಸಿಕೊಳ್ಳಿರಿ. ಇಬ್ಬರು ‘ನಂಬಿಗಸ್ತರಾದ ಒಳ್ಳೇ ಆಳು’ಗಳನ್ನು ಅವನು ಸಮವಾಗಿ ಪ್ರಶಂಸಿಸಿದನು. ಅವರಲ್ಲಿ ಪ್ರತಿಯೊಬ್ಬನಿಗೆ ಕೊಡಲ್ಪಟ್ಟದ್ದರಲ್ಲಿ ಒಂದು ಭಿನ್ನತೆ ಹಾಗೂ ಪ್ರತಿಯೊಬ್ಬನು ಉತ್ಪಾದಿಸಿದುದರಲ್ಲಿ ಒಂದು ಅನುರೂಪವಾದ ಭಿನ್ನತೆಯಿದ್ದರೂ ಅವನು ಹಾಗೆ ಮಾಡಿದನು. (ಮತ್ತಾಯ 25:20-23; ಹೋಲಿಸಿ ಮತ್ತಾಯ 13:23.) ತದ್ರೀತಿಯಲ್ಲಿ ವಿವೇಕಿ ಹೆತ್ತವರು, ಪ್ರತಿಯೊಂದು ಮಗುವಿನ ಅಪೂರ್ವವಾದ ಗುಣಗಳು, ಸಾಮರ್ಥ್ಯಗಳು, ಮತ್ತು ಸಾಧನೆಗಳಿಗಾಗಿ ಗಣ್ಯತೆಯನ್ನು ವ್ಯಕ್ತಪಡಿಸಲು ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಅದೇ ಸಮಯದಲ್ಲಿ, ಇತರರನ್ನು ಅತಿಶಯಿಸುವ ಅನಿಸಿಕೆ ತಮ್ಮ ಮಕ್ಕಳನ್ನು ಸತತವಾಗಿ ಕಾಡಿಸದಿರುವಂತೆ, ಅವರು ಸಾಧನೆಗಳ ಮೇಲೆ ಬಹಳಷ್ಟು ಒತ್ತನ್ನು ನೀಡಲು ಪ್ರಯತ್ನಿಸುವುದಿಲ್ಲ. ತಮ್ಮ ಮಕ್ಕಳು ಉದ್ರೇಕಿತರಾಗಿ ಇಲ್ಲವೆ ಎದೆಗುಂದಿದವರಾಗಿ ಬೆಳೆಯಬೇಕೆಂದು ಅವರು ಬಯಸುವುದಿಲ್ಲ.—ಎಫೆಸ 6:4; ಕೊಲೊಸ್ಸೆ 3:21.
13. ಸಭೆಯ ಪ್ರತಿಯೊಬ್ಬ ಸದಸ್ಯನಿಗಾಗಿ ಗಣ್ಯತೆಯನ್ನು ತೋರಿಸುವುದರಲ್ಲಿ ಯಾರು ನಾಯಕತ್ವವನ್ನು ವಹಿಸುತ್ತಾರೆ?
13 ಕ್ರೈಸ್ತ ಸಭೆಯಲ್ಲಿ, ದೇವರ ಮಂದೆಯ ಪ್ರತಿಯೊಬ್ಬ ವ್ಯಕ್ತಿಗೆ ಗಣ್ಯತೆಯನ್ನು ತೋರಿಸುವುದರಲ್ಲಿ ಹಿರಿಯರು ಮತ್ತು ಸಂಚರಣ ಮೇಲ್ವಿಚಾರಕರು ನಾಯಕತ್ವವನ್ನು ವಹಿಸುತ್ತಾರೆ. ಅವರದು ಒಂದು ಕಷ್ಟಕರವಾದ ಸ್ಥಾನವಾಗಿದೆ, ಏಕೆಂದರೆ, ನೀತಿಯಲ್ಲಿ ಶಿಸ್ತು ನೀಡುವ, ತಪ್ಪುಮಾಡುವವರನ್ನು ದೀನ ಮನೋಭಾವದಿಂದ ತಿದ್ದುವ, ಮತ್ತು ಅದರ ಅಗತ್ಯವಿರುವವರಿಗೆ ಬಲವಾದ ಸಲಹೆಯನ್ನು ನೀಡುವ ಭಾರಿ ಜವಾಬ್ದಾರಿಯನ್ನೂ ಅವರು ವಹಿಸಿಕೊಳ್ಳುತ್ತಾರೆ. ಈ ವಿಭಿನ್ನ ಜವಾಬ್ದಾರಿಗಳ ನಡುವೆ ಅವರು ಸಮತೂಕವನ್ನು ಹೇಗೆ ಕಾಪಾಡಿಕೊಳ್ಳುತ್ತಾರೆ?—ಗಲಾತ್ಯ 6:1: 2 ತಿಮೊಥೆಯ 3:16.
14, 15. (ಎ) ಬಲವಾದ ಸಲಹೆಯನ್ನು ಕೊಡುವ ವಿಷಯದಲ್ಲಿ ಪೌಲನು ಸಮತೂಕತೆಯನ್ನು ಹೇಗೆ ತೋರಿಸಿದನು? (ಬಿ) ತಪ್ಪುಗಳನ್ನು ತಿದ್ದುವ ಅಗತ್ಯದೊಂದಿಗೆ ಪ್ರಶಂಸೆಯನ್ನು ನೀಡುವ ಅಗತ್ಯವನ್ನು ಕ್ರೈಸ್ತ ಮೇಲ್ವಿಚಾರಕರು ಹೇಗೆ ಸರಿದೂಗಿಸಬಲ್ಲರು? ದೃಷ್ಟಾಂತಿಸಿರಿ.
14 ಪೌಲನ ಮಾದರಿಯು ಮಹತ್ತರವಾದ ನೆರವನ್ನು ನೀಡುವಂತಹದ್ದಾಗಿದೆ. ಅವನೊಬ್ಬ ಎದ್ದುಕಾಣುವ ಶಿಕ್ಷಕ, ಹಿರಿಯ, ಮತ್ತು ಕುರುಬನಾಗಿದ್ದನು. ತೀವ್ರವಾದ ಸಮಸ್ಯೆಗಳಿದ್ದ ಸಭೆಯೊಂದಿಗೆ ಅವನು ವ್ಯವಹರಿಸಬೇಕಿತ್ತು, ಮತ್ತು ಬಲವಾದ ಸಲಹೆಯ ಅಗತ್ಯವಿದ್ದಾಗ ಅದನ್ನು ನೀಡುವುದರಿಂದ ಅವನು ಭಯಭೀತನಾಗಿ ಹಿಮ್ಮೆಟ್ಟಲಿಲ್ಲ. (2 ಕೊರಿಂಥ 7:8-11) ಪೌಲನ ಶುಶ್ರೂಷೆಯ ಒಂದು ವಿಮರ್ಶೆಯು ಸೂಚಿಸುವುದೇನೆಂದರೆ, ಅವನು ಗದರಿಕೆಯನ್ನು ಮಿತವಾಗಿ—ಸನ್ನಿವೇಶವು ಅದನ್ನು ಅನಿವಾರ್ಯವಾಗಿ ಇಲ್ಲವೆ ಉಚಿತವಾದದ್ದಾಗಿ ಮಾಡಿದಾಗ ಮಾತ್ರ—ಉಪಯೋಗಿಸಿದನು. ಇದರಲ್ಲಿ ಅವನು ದೈವಿಕ ವಿವೇಕವನ್ನು ತೋರ್ಪಡಿಸಿದನು.
15 ಸಭೆಯ ಮುಂದೆ ಹಿರಿಯನೊಬ್ಬನ ಶುಶ್ರೂಷೆಯು ಒಂದು ಸಂಗೀತದ ಕೃತಿಗೆ ಹೋಲಿಸಲ್ಪಟ್ಟಲ್ಲಿ, ಗದರಿಕೆ ಮತ್ತು ಆಕ್ಷೇಪಣೆಯು, ಇಡೀ ಸಂಗೀತ ಕೃತಿಯೊಳಗೆ ಹೊಂದಿಕೊಳ್ಳುವ ಏಕೈಕ ಸ್ವರದಂತಿರುವುದು. ಆ ಸ್ವರವು ಅದರ ಸ್ಥಾನದಲ್ಲಿ ಯೋಗ್ಯವಾಗಿದೆ. (ಲೂಕ 17:3; 2 ತಿಮೊಥೆಯ 4:2) ಮತ್ತೆ ಮತ್ತೆ ಪುನರಾವರ್ತಿಸುವ, ಆ ಒಂದೇ ಸ್ವರವಿರುವ ಗೀತೆಯನ್ನು ಊಹಿಸಿಕೊಳ್ಳಿರಿ. ಅದು ಬೇಗನೆ ತಲೆಚಿಟ್ಟು ಹಿಡಿಸುವಂತಹದ್ದಾಗಿರುವುದು. ತದ್ರೀತಿಯಲ್ಲಿ, ಕ್ರೈಸ್ತ ಹಿರಿಯರು ತಮ್ಮ ಬೋಧನೆಯನ್ನು ಸಂಪೂರ್ಣಗೊಳಿಸಲು ಮತ್ತು ವೈವಿಧ್ಯತೆಯಿಂದ ಅದನ್ನು ವೃದ್ಧಿಪಡಿಸಲು ಪ್ರಯತ್ನಿಸುತ್ತಾರೆ. ತಮ್ಮ ಬೋಧನೆಯನ್ನು ಸಮಸ್ಯೆಗಳ ತಿದ್ದುಪಡಿಗೆ ಅವರು ಸೀಮಿತಗೊಳಿಸುವುದಿಲ್ಲ. ಬದಲಿಗೆ, ಅದರ ಒಟ್ಟು ಸ್ವರೂಪವು ಸಕಾರಾತ್ಮಕವಾಗಿದೆ. ಯೇಸು ಕ್ರಿಸ್ತನಂತೆ, ಪ್ರೀತಿಪೂರ್ಣ ಹಿರಿಯರು ಟೀಕಿಸಲು ದೋಷವನ್ನಲ್ಲ, ಪ್ರಶಂಸಿಸಲು ಒಳ್ಳೆಯದನ್ನು ಪ್ರಥಮವಾಗಿ ನೋಡುತ್ತಾರೆ. ತಮ್ಮ ಜೊತೆ ಕ್ರೈಸ್ತರು ಮಾಡುತ್ತಿರುವ ಕಠಿನ ಕೆಲಸವನ್ನು ಅವರು ಗಣ್ಯಮಾಡುತ್ತಾರೆ. ಒಟ್ಟು ನೋಟದಲ್ಲಿ, ಪ್ರತಿಯೊಬ್ಬನು ಯೆಹೋವನನ್ನು ಸೇವಿಸಲು ತನ್ನಿಂದಾದುದನ್ನು ಮಾಡುತ್ತಿದ್ದಾನೆಂಬ ಭರವಸೆ ಅವರಿಗಿದೆ. ಮತ್ತು ಹಿರಿಯರು ಆ ಅನಿಸಿಕೆಯನ್ನು ಮಾತುಗಳಲ್ಲಿ ಮನಃಪೂರ್ವಕವಾಗಿ ವ್ಯಕ್ತಪಡಿಸುತ್ತಾರೆ.—2 ಥೆಸಲೊನೀಕ 3:4ನ್ನು ಹೋಲಿಸಿರಿ.
16. ಪೌಲನ ಗುಣಗ್ರಾಹಿ ಹಾಗೂ ಅನುಭೂತಿಯುಳ್ಳ ಮನೋಭಾವವು ಅವನ ಜೊತೆ ಕ್ರೈಸ್ತರ ಮೇಲೆ ಯಾವ ಪರಿಣಾಮವನ್ನು ಬೀರಿತು?
16 ಯಾರ ಶುಶ್ರೂಷೆಯನ್ನು ಪೌಲನು ಮಾಡಿದನೊ ಆ ಕ್ರೈಸ್ತರಲ್ಲಿ ಹೆಚ್ಚಿನವರು, ಅವನು ತಮ್ಮನ್ನು ಗಣ್ಯಮಾಡಿದನೆಂದು ಮತ್ತು ತಮಗಾಗಿ ಅವನಲ್ಲಿ ಸಹಾನುಭೂತಿಯಿತ್ತೆಂಬುದನ್ನು ನಿಸ್ಸಂದೇಹವಾಗಿ ಗ್ರಹಿಸಿದರು. ಇದು ನಮಗೆ ಹೇಗೆ ಗೊತ್ತು? ಪೌಲನ ಬಗ್ಗೆ ಅವರಿಗೆ ಹೇಗನಿಸಿತೆಂಬುದನ್ನು ನೋಡಿರಿ. ಅವನಿಗೆ ಮಹಾ ಅಧಿಕಾರವಿದ್ದರೂ, ಅವರು ಅವನಿಗೆ ಹೆದರಲಿಲ್ಲ. ಇಲ್ಲ, ಅವನು ಕಟ್ಟಕ್ಕರೆಯುಳ್ಳವನೂ ಸಮೀಪಿಸಬಹುದಾದ ವ್ಯಕ್ತಿಯೂ ಆಗಿದ್ದನು. ಅಷ್ಟೇಕೆ, ಒಂದು ಕ್ಷೇತ್ರವನ್ನು ಅವನು ಬಿಟ್ಟುಬಂದಾಗ, ಹಿರಿಯರು ‘ಅವನ ಕೊರಳನ್ನು ತಬ್ಬಿಕೊಂಡು ಅವನಿಗೆ ಮುದ್ದಿಟ್ಟರು’! (ಅ. ಕೃತ್ಯಗಳು 20:17, 37) ನಮಗೆ ಉತ್ಸಾಹದಿಂದ ಅನುಕರಿಸಲು ಪೌಲನ ಮಾದರಿ ಇರುವುದರಿಂದ, ಹಿರಿಯರು—ಮತ್ತು ನಾವೆಲ್ಲರೂ—ಎಷ್ಟು ಕೃತಜ್ಞರಾಗಿರಬೇಕು! ಹೌದು, ನಾವು ಒಬ್ಬರಿಗೊಬ್ಬರು ಗಣ್ಯತೆಯನ್ನು ತೋರಿಸೋಣ.
ಪ್ರೀತಿದಯೆಯ ಕೃತ್ಯಗಳು
17. ಸಭೆಯಲ್ಲಿ ದಯೆಯ ಕೃತ್ಯಗಳಿಂದ ಪರಿಣಮಿಸುವ ಕೆಲವು ಒಳ್ಳೆಯ ಪರಿಣಾಮಗಳಾವುವು?
17 ಸಹೋದರ ಪ್ರೀತಿಗಾಗಿರುವ ಅತ್ಯಂತ ವೀರ್ಯವತ್ತಾದ ಉರುವಲುಗಳಲ್ಲಿ ಒಂದು, ದಯೆಯ ಒಂದು ಸರಳವಾದ ಕೃತ್ಯವಾಗಿದೆ. ಯೇಸು ಹೇಳಿದಂತೆ, “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ.” (ಅ. ಕೃತ್ಯಗಳು 20:35) ನಾವು ಆತ್ಮಿಕವಾಗಿಯಾಗಲಿ, ಭೌತಿಕವಾಗಿಯಾಗಲಿ, ಇಲ್ಲವೆ ನಮ್ಮ ಸಮಯ ಮತ್ತು ಶಕ್ತಿಯನ್ನಾಗಲಿ ಕೊಡುವುದಾದರೆ, ನಾವು ಇತರರನ್ನು ಮಾತ್ರವಲ್ಲ ಸ್ವತಃ ನಮ್ಮನ್ನೇ ಸಂತೋಷಪಡಿಸಿಕೊಳ್ಳುತ್ತೇವೆ. ಸಭೆಯಲ್ಲಿ, ದಯೆಯು ಸಾಂಕ್ರಾಮಿಕವಾಗಿದೆ. ಒಂದು ದಯಾಪರ ಕೃತ್ಯವು, ಅನುಕ್ರಮವಾಗಿ ತದ್ರೀಯ ಕೃತ್ಯಗಳನ್ನು ಉತ್ಪಾದಿಸುತ್ತದೆ. ಬೇಗನೆ, ಸಹೋದರ ಮಮತೆಯು ಏಳಿಗೆ ಹೊಂದುತ್ತದೆ!—ಲೂಕ 6:38.
18. ಮೀಕ 6:8ರಲ್ಲಿ ಮಾತಾಡಲ್ಪಟ್ಟಿರುವ “ದಯೆ”ಯ ಅರ್ಥವೇನು?
18 ದಯೆಯನ್ನು ಪ್ರದರ್ಶಿಸುವಂತೆ ತನ್ನ ಜನಾಂಗವಾದ ಇಸ್ರಾಯೇಲನ್ನು ಯೆಹೋವನು ಪ್ರೇರಿಸಿದನು. ಮೀಕ 6:8ರಲ್ಲಿ ನಾವು ಓದುವುದು: “ಮನುಷ್ಯನೇ, ಒಳ್ಳೆಯದು ಇಂಥದೇ ಎಂದು ಯೆಹೋವನು ನಿನಗೆ ತೋರಿಸಿದ್ದಾನಷ್ಟೆ; ನ್ಯಾಯವನ್ನು ಆಚರಿಸುವದು, ಕರುಣೆಯಲ್ಲಿ ಆಸಕ್ತನಾಗಿರುವದು [“ದಯೆಯನ್ನು ಪ್ರೀತಿಸುವುದು,” NW], ನಿನ್ನ ದೇವರಿಗೆ ನಮ್ರವಾಗಿ ನಡೆದುಕೊಳ್ಳುವದು, ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು?” “ದಯೆಯನ್ನು ಪ್ರೀತಿಸು”ವುದೆಂದರೆ ಏನು? “ದಯೆ”ಗಾಗಿ ಇಲ್ಲಿ ಉಪಯೋಗಿಸಲ್ಪಟ್ಟ ಹೀಬ್ರು ಪದ (ಚೇಸೆಧ್), ಇಂಗ್ಲಿಷ್ ಭಾಷೆಯಲ್ಲಿ “ಕರುಣೆ” ಎಂಬುದಾಗಿಯೂ ಭಾಷಾಂತರಿಸಲ್ಪಟ್ಟಿದೆ. ದ ಸೊನ್ಸಿನೊ ಬುಕ್ಸ್ ಆಫ್ ದ ಬೈಬಲ್ಗನುಸಾರ, ಈ ಪದವು, “ಇಂಗ್ಲಿಷಿನ ಕರುಣೆ ಎಂಬ ಅಮೂರ್ತ ಪದಕ್ಕಿಂತಲೂ ಹೆಚ್ಚು ಸಕ್ರಿಯವಾದ ಏನನ್ನೊ ಸೂಚಿಸುತ್ತದೆ. ಅದು, ‘ಕೃತ್ಯಗಳಾಗಿ ಪರಿವರ್ತಿಸಲ್ಪಟ್ಟ ಕರುಣೆ’ಯನ್ನು, ಬಡವರು ಮತ್ತು ಅಗತ್ಯದಲ್ಲಿರುವವರಿಗೆ ಮಾತ್ರವಲ್ಲ, ಒಬ್ಬನ ಎಲ್ಲ ಜೊತೆಮಾನವರಿಗೆ, ಪ್ರೀತಿದಯೆಯ ವೈಯಕ್ತಿಕ ಕೃತ್ಯಗಳನ್ನು ಮಾಡುವುದನ್ನು ಅರ್ಥೈಸುತ್ತದೆ.” ಆದುದರಿಂದ ಮತ್ತೊಬ್ಬ ಪಂಡಿತನು ಹೇಳುವುದೇನೆಂದರೆ, ಚೇಸೆಧ್ “ಕ್ರಿಯೆಯಾಗಿ ಪರಿವರ್ತಿಸಲ್ಪಟ್ಟ ಪ್ರೀತಿ”ಯನ್ನು ಅರ್ಥೈಸುತ್ತದೆ.
19. (ಎ) ಯಾವ ವಿಧಗಳಲ್ಲಿ ನಾವು ಸಭೆಯಲ್ಲಿರುವ ಇತರರಿಗೆ ದಯೆಯನ್ನು ತೋರಿಸಲು ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳಬಹುದು? (ಬಿ) ನಿಮಗೆ ಸಹೋದರ ಪ್ರೀತಿಯು ತೋರಿಸಲ್ಪಟ್ಟಿರುವ ಒಂದು ಉದಾಹರಣೆಯನ್ನು ಕೊಡಿರಿ.
19 ನಮ್ಮ ಸಹೋದರ ಪ್ರೀತಿಯು, ತಾತ್ವಿಕವೂ ಅಲ್ಲ ಅಮೂರ್ತವೂ ಅಲ್ಲ. ಅದೊಂದು ನೈಜತೆಯಾಗಿದೆ. ಆದಕಾರಣ, ನಿಮ್ಮ ಸಹೋದರ ಸಹೋದರಿಯರಿಗಾಗಿ ದಯಾಪರ ಕೃತ್ಯಗಳನ್ನು ಮಾಡುವ ಮಾರ್ಗಗಳನ್ನು ಹುಡುಕಿರಿ. ಯೇಸುವಿನಂತಿರಿ, ಸಹಾಯವನ್ನು ಕೇಳಲಿಕ್ಕಾಗಿ ಜನರು ಅವನನ್ನು ಸಮೀಪಿಸುವಂತೆ ಅವನು ಯಾವಾಗಲೂ ಕಾಯಲಿಲ್ಲ, ಬದಲಿಗೆ ಸ್ವತಃ ಆರಂಭದ ಹೆಜ್ಜೆಯನ್ನು ತೆಗೆದುಕೊಂಡನು. (ಲೂಕ 7:12-16) ಅತ್ಯಂತ ಅಗತ್ಯದಲ್ಲಿರುವವರ ಕುರಿತು ವಿಶೇಷವಾಗಿ ಯೋಚಿಸಿರಿ. ಒಬ್ಬ ವಯಸ್ಸಾದ ಅಥವಾ ದುರ್ಬಲನಾದ ವ್ಯಕ್ತಿಗೆ, ಒಂದು ಭೇಟಿಯ ಇಲ್ಲವೆ ಹೊರಗಿನ ಕೆಲಸಗಳೊಂದಿಗೆ ಬಹುಶಃ ಒಂದಿಷ್ಟು ಸಹಾಯದ ಅಗತ್ಯವಿದೆಯೊ? ‘ತಂದೆಯಿಲ್ಲದ ಮಗು’ವಿಗೆ ಸ್ವಲ್ಪ ಸಮಯ ಮತ್ತು ಗಮನದ ಅಗತ್ಯವಿದೆಯೊ? ಖಿನ್ನವಾದ ಆತ್ಮಕ್ಕೆ ಆಲಿಸುವ ಕಿವಿ ಅಥವಾ ಸಮಾಧಾನಪಡಿಸುವ ಒಂದಿಷ್ಟು ಮಾತುಗಳ ಅಗತ್ಯವಿದೆಯೊ? ನಾವು ಶಕ್ತರಾಗಿರುವಂತೆ, ಇಂತಹ ದಯೆಯ ಕೃತ್ಯಗಳಿಗಾಗಿ ಸಮಯವನ್ನು ಬದಿಗಿರಿಸೋಣ. (ಯೋಬ 29:12; 1 ಥೆಸಲೊನೀಕ 5:14; ಯಾಕೋಬ 1:27) ಅಪರಿಪೂರ್ಣ ಜನರಿಂದ ತುಂಬಿರುವ ಒಂದು ಸಭೆಯಲ್ಲಿ, ದಯೆಯ ಅತ್ಯಂತ ಪ್ರಾಮುಖ್ಯವಾದ ಕೃತ್ಯಗಳಲ್ಲಿ ಕ್ಷಮಾಪಣೆ—ಆಪಾದನೆಗೆ ನ್ಯಾಯಬದ್ಧವಾದ ಕಾರಣ ಇರುವಾಗಲೂ, ಅಸಮಾಧಾನವನ್ನು ಮುಕ್ತವಾಗಿ ತ್ಯಜಿಸಿಬಿಡುವುದು—ಒಂದಾಗಿದೆ. (ಕೊಲೊಸ್ಸೆ 3:13) ಕ್ಷಮಿಸಲು ಸಿದ್ಧರಾಗಿರುವುದು, ಸಭೆಯನ್ನು ವಿಭಜನೆಗಳು, ಹಗೆತನಗಳು, ಮತ್ತು ಜಗಳಗಳಿಂದ ಮುಕ್ತವಾಗಿಡಲು ಸಹಾಯ ಮಾಡುತ್ತದೆ. ಈ ವಿಷಯಗಳು, ಸಹೋದರ ಪ್ರೀತಿಯ ಬೆಂಕಿಯನ್ನು ನಂದಿಸಿಬಿಡುವ, ಉತ್ಸಾಹ ಭಂಜಕಗಳಂತಿವೆ.
20. ನಾವೆಲ್ಲರೂ ಹೇಗೆ ನಮ್ಮನ್ನು ಪರಿಶೀಲಿಸಿಕೊಳ್ಳುವುದನ್ನು ಮುಂದುವರಿಸಬೇಕು?
20 ಪ್ರೀತಿಯ ಈ ಅತ್ಯಾವಶ್ಯಕ ಬೆಂಕಿಯು ನಮ್ಮ ಹೃದಯಗಳಲ್ಲಿ ಉರಿಯುತ್ತಾ ಇರುವಂತೆ ಮಾಡಲು, ನಾವೆಲ್ಲರೂ ನಿಶ್ಚಯಿಸಿಕೊಳ್ಳೋಣ. ನಾವು ನಮ್ಮನ್ನೇ ಪರಿಶೀಲಿಸಿಕೊಳ್ಳುತ್ತಾ ಇರೋಣ. ನಾವು ಇತರರಿಗಾಗಿ ಸಹಾನುಭೂತಿ ತೋರಿಸುತ್ತೇವೊ? ನಾವು ಇತರರಿಗಾಗಿ ಗಣ್ಯತೆಯನ್ನು ತೋರಿಸುತ್ತೇವೊ? ಇತರರ ಕಡೆಗೆ ನಾವು ದಯಾಪರ ಕೃತ್ಯಗಳನ್ನು ನಡೆಸುತ್ತೇವೊ? ನಾವು ಹಾಗೆ ಮಾಡುವ ತನಕ, ಈ ಲೋಕವು ಎಷ್ಟೇ ತಣ್ಣಗಾಗಿಯೂ ಕಠಿನವಾಗಿಯೂ ಪರಿಣಮಿಸಲಿ, ಪ್ರೀತಿಯ ಬೆಂಕಿಯು ನಮ್ಮ ಸಹೋದರತ್ವವನ್ನು ಬೆಚ್ಚಗಾಗಿರಿಸುವುದು. ಹಾಗಾದರೆ, ಏನೇ ಆಗಲಿ, “ನಿಮ್ಮ ಸಹೋದರ ಪ್ರೀತಿಯು ಮುಂದುವರಿಯಲಿ”—ಈಗಲೂ ಎಂದೆಂದಿಗೂ!—ಇಬ್ರಿಯ 13:1, NW.
[ಅಧ್ಯಯನ ಪ್ರಶ್ನೆಗಳು]
a ಕೆಲವು ಭಾಷಾಂತರಗಳು ಇಲ್ಲಿ ಸೂಚಿಸುವುದೇನೆಂದರೆ, ದೇವಜನರನ್ನು ತಾಕುತ್ತಿರುವವನು, ದೇವರನ್ನಲ್ಲ, ಬದಲಿಗೆ ಇಸ್ರಾಯೇಲ್ನ ಕಣ್ಣನ್ನು ಅಥವಾ ತನ್ನ ಸ್ವಂತ ಕಣ್ಣನ್ನೂ ತಾಕುತ್ತಿದ್ದಾನೆ. ಈ ದೋಷವು ಮಧ್ಯಯುಗದ ಕೆಲವು ಶಾಸ್ತ್ರಿಗಳಿಂದ ಬಂತು. ಅವರು, ಯಾವುದನ್ನು ಪೂಜ್ಯಭಾವವಿಲ್ಲದ ವಿಷಯವೆಂದು ವೀಕ್ಷಿಸಿದರೊ ಅಂತಹವುಗಳನ್ನು ತಿದ್ದುವ ತಮ್ಮ ಅನುಚಿತ ಪ್ರಯತ್ನಗಳಲ್ಲಿ, ಈ ವಚನವನ್ನು ಬದಲಾಯಿಸಿದರು. ಹೀಗೆ ಅವರು ಯೆಹೋವನ ವೈಯಕ್ತಿಕ ಅನುಭೂತಿಯ ತೀಕ್ಷ್ಣತೆಯನ್ನು ಅಸ್ಪಷ್ಟಗೊಳಿಸಿದರು.
ನೀವು ಏನು ನೆನಸುತ್ತೀರಿ?
◻ ಸಹೋದರ ಪ್ರೀತಿಯು ಏನಾಗಿದೆ, ಮತ್ತು ಅದು ಮುಂದುವರಿಯುವಂತೆ ನಾವು ಏಕೆ ಬಿಡಬೇಕು?
◻ ಸಹಾನುಭೂತಿಯಿರುವುದು ನಮ್ಮ ಸಹೋದರ ಪ್ರೀತಿಯನ್ನು ಕಾಪಾಡಿಕೊಳ್ಳುವಂತೆ ನಮಗೆ ಹೇಗೆ ಸಹಾಯ ಮಾಡುತ್ತದೆ?
◻ ಸಹೋದರ ಪ್ರೀತಿಯಲ್ಲಿ ಗಣ್ಯತೆಯು ಯಾವ ಪಾತ್ರವನ್ನು ವಹಿಸುತ್ತದೆ?
◻ ಕ್ರೈಸ್ತ ಸಭೆಯಲ್ಲಿ ಸಹೋದರ ಪ್ರೀತಿಯು ಏಳಿಗೆ ಹೊಂದುವಂತೆ ದಯೆಯ ಕೃತ್ಯಗಳು ಹೇಗೆ ಕಾರ್ಯನಡಿಸುತ್ತವೆ?
[ಪುಟ 16 ರಲ್ಲಿರುವ ಚೌಕ]
ಕ್ರಿಯೆಯಲ್ಲಿ ತೋರಿಸಲ್ಪಟ್ಟ ಪ್ರೀತಿ
ಕೆಲವು ವರ್ಷಗಳ ಹಿಂದೆ, ಯೆಹೋವನ ಸಾಕ್ಷಿಗಳೊಂದಿಗೆ ಸ್ವಲ್ಪ ಸಮಯದ ವರೆಗೆ ಬೈಬಲನ್ನು ಅಭ್ಯಾಸಿಸಿದ್ದ ಒಬ್ಬ ವ್ಯಕ್ತಿಯು, ಸಹೋದರ ಪ್ರೀತಿಯ ಬಗ್ಗೆ ಇನ್ನೂ ಕೊಂಚಮಟ್ಟಿಗೆ ಅನಿಶ್ಚಿತನಾಗಿದ್ದನು. “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು” ಎಂಬುದಾಗಿ ಯೇಸು ಹೇಳಿದ್ದನೆಂದು ಅವನಿಗೆ ಗೊತ್ತಿತ್ತು. (ಯೋಹಾನ 13:35) ಆದರೆ ಇದನ್ನು ನಂಬುವುದು ಕಷ್ಟಕರವೆಂದು ಅವನು ಕಂಡುಕೊಂಡನು. ಒಂದು ದಿನ ಕ್ರೈಸ್ತ ಪ್ರೀತಿಯನ್ನು ಕ್ರಿಯೆಯಲ್ಲಿ ನೋಡುವ ಅವಕಾಶ ಅವನಿಗೆ ಸಿಕ್ಕಿತು.
ಈ ವ್ಯಕ್ತಿಯು ಒಂದು ಗಾಲಿ ಕುರ್ಚಿಗೆ ನಿರ್ಬಂಧಿತನಾಗಿದ್ದರೂ, ಅವನು ಮನೆಯಿಂದ ದೂರದ ಸ್ಥಳಕ್ಕೆ ಪ್ರಯಾಣಿಸುತ್ತಿದ್ದನು. ಇಸ್ರಾಯೇಲ್ನ ಬೆತ್ಲೆಹೇಮ್ನಲ್ಲಿ, ಅವನೊಂದು ಸಭಾ ಕೂಟಕ್ಕೆ ಹಾಜರಾದನು. ಅಲ್ಲಿ ಒಬ್ಬ ಅರಬ್ಬಿ ಸಾಕ್ಷಿಯು, ಮತ್ತೊಬ್ಬ ಪ್ರವಾಸಿ ಸಾಕ್ಷಿಯನ್ನು ಮತ್ತು ಈ ಬೈಬಲ್ ವಿದ್ಯಾರ್ಥಿಯನ್ನು, ರಾತ್ರಿ ತನ್ನ ಕುಟುಂಬದೊಂದಿಗೆ ತಂಗುವಂತೆ ಒತ್ತಾಯಿಸಿದನು. ಮಲಗುವ ಮೊದಲು, ತಾನು ಬೆಳಗ್ಗೆ ಸೂರ್ಯೋದಯವನ್ನು ವೀಕ್ಷಿಸಲಿಕ್ಕಾಗಿ ಮೊಗಸಾಲೆಗೆ ಹೋಗಲು, ಆ ವಿದ್ಯಾರ್ಥಿಯು ತನ್ನ ಆತಿಥೇಯನ ಅನುಮತಿಯನ್ನು ಕೇಳಿದನು. ಅವನು ಹಾಗೆ ಮಾಡಬಾರದೆಂದು ಅವನ ಆತಿಥೇಯನು ನಿರ್ದಾಕ್ಷಿಣ್ಯವಾಗಿ ಎಚ್ಚರಿಸಿದನು. ಮರುದಿನ ಈ ಅರಬ್ಬಿ ಸಹೋದರನು ಕಾರಣವನ್ನು ವಿವರಿಸಿದನು. ಒಬ್ಬ ಭಾಷಾಂತರಕಾರನ ಮೂಲಕ ಅವನು ಹೇಳಿದ್ದೇನೆಂದರೆ, ತನ್ನಲ್ಲಿ ಯೆಹೂದಿ ಹಿನ್ನೆಲೆಯ ಅತಿಥಿಗಳು—ಬೈಬಲ್ ವಿದ್ಯಾರ್ಥಿಯ ವಿಷಯದಲ್ಲಿ ಇದು ಸತ್ಯವಾಗಿತ್ತು—ಇದ್ದರೆಂದು ತನ್ನ ನೆರೆಯವರಿಗೆ ಗೊತ್ತಾದರೆ, ಅವರು ಅವನ ಕುಟುಂಬ ಸಮೇತ ಅವನ ಮನೆಯನ್ನು ಸುಟ್ಟುಹಾಕುವರು. ಗಲಿಬಿಲಿಗೊಂಡ ಬೈಬಲ್ ವಿದ್ಯಾರ್ಥಿಯು ಅವನನ್ನು ಕೇಳಿದ್ದು: “ಹಾಗಾದರೆ, ಇಂತಹ ಒಂದು ಗಂಡಾಂತರಕ್ಕೆ ನೀನು ಏಕೆ ಈಡಾದೆ?” ಭಾಷಾಂತರಕಾರನಿಲ್ಲದೆ, ಆ ಅರಬ್ಬಿ ಸಹೋದರನು ಅವನನ್ನು ನೇರವಾಗಿ ನೋಡಿ, ಸರಳವಾಗಿ ಹೇಳಿದ್ದು, “ಯೋಹಾನ 13:35.”
ಆ ಬೈಬಲ್ ವಿದ್ಯಾರ್ಥಿಯು ಸಹೋದರ ಪ್ರೀತಿಯ ವಾಸ್ತವಿಕತೆಯಿಂದ ಆಳವಾಗಿ ಪ್ರಭಾವಿಸಲ್ಪಟ್ಟನು. ಇದಾದ ಸ್ವಲ್ಪದರಲ್ಲೇ ಅವನು ದೀಕ್ಷಾಸ್ನಾನ ಪಡೆದುಕೊಂಡನು.
[ಪುಟ 18 ರಲ್ಲಿರುವ ಚಿತ್ರ]
ಅಪೊಸ್ತಲ ಪೌಲನ ಸ್ನೇಹಪರ ಹಾಗೂ ಗುಣಗ್ರಾಹಿ ಸ್ವಭಾವವು, ಅವನನ್ನು ಸುಲಭಗಮ್ಯನನ್ನಾಗಿ ಮಾಡಿತು