ನನ್ನ ಯೌವನದಿಂದ ಯೆಹೋವನಿಗೆ ತಾಳ್ಮೆಯಿಂದ ಸೇವೆಮಾಡುವುದು
ರೂಡಾಲ್ಫ್ ಗ್ರೈಕನ್ ಹೇಳಿರುವಂತೆ
ನಾನು ಕೇವಲ 12 ವರ್ಷ ಪ್ರಾಯದವನಾಗಿದ್ದಾಗ, ದುರಂತವು ಸಿಡಿಲು ಹೊಡೆದಂತೆ ನನ್ನ ಕುಟುಂಬಕ್ಕೆ ಬಡಿಯಿತು. ಪ್ರಥಮವಾಗಿ, ನನ್ನ ತಂದೆ ಸೆರೆಮನೆಗೆ ಎಸೆಯಲ್ಪಟ್ಟರು. ಬಳಿಕ ನಾನೂ ನನ್ನ ಅವಳಿ ಸೋದರಿಯೂ ಮನೆಯಿಂದ ಬಲಾತ್ಕಾರವಾಗಿ ಒಯ್ಯಲ್ಪಟ್ಟು ಅಪರಿಚಿತರೊಂದಿಗೆ ಜೀವಿಸುವಂತೆ ಕಳುಹಿಸಲ್ಪಟ್ಟೆವು. ತರುವಾಯ, ಗೆಸ್ಟಾಪೊ ನನ್ನನ್ನೂ ನನ್ನ ತಾಯಿಯನ್ನೂ ದಸ್ತಗಿರಿ ಮಾಡಿದರು. ನಾನು ಸೆರೆಮನೆಗೆ ಹೋದೆ ಮತ್ತು ತಾಯಿ ಸೆರೆಶಿಬಿರಕ್ಕೆ ಹೋದರು.
ಆಘಟನೆಗಳ ಶ್ರೇಣಿಯು ನನ್ನ ಯೌವನದಲ್ಲಿ ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿ ಅನುಭವಿಸಿದ ವೇದನಾಮಯ ಹಿಂಸೆಯ ಅವಧಿಯ ಪ್ರಾರಂಭವನ್ನು ಮಾತ್ರ ಗುರುತಿಸಿತು. ಕುಪ್ರಸಿದ್ಧ ನಾಸಿ ಗೆಸ್ಟಾಪೊ ಮತ್ತು ಆ ಬಳಿಕ ಪೂರ್ವ ಜರ್ಮನಿಯ ಷ್ಟಾಸೀ ದೇವರ ಕಡೆಗೆ ನನಗಿದ್ದ ಸಮಗ್ರತೆಯನ್ನು ಮುರಿಯಲು ಪ್ರಯತ್ನಿಸಿದರು. ಈಗ, ಆತನಿಗೆ ಮಾಡಿದ 50 ವರ್ಷಗಳ ಸಮರ್ಪಿತ ಸೇವೆಯ ಬಳಿಕ, ನಾನು ಕೀರ್ತನೆಗಾರನಂದಂತೆ ಹೇಳಬಲ್ಲೆ: “ನಾವು ಯೌವನಾರಭ್ಯ ಎಷ್ಟೋ ಸಾರಿ ಬಾಧೆಹೊಂದಿದರೂ ಅವರು ನಮ್ಮನ್ನು ಜಯಿಸಲಿಲ್ಲ.” (ಕೀರ್ತನೆ 129:2) ಯೆಹೋವನಿಗೆ ನಾನೆಷ್ಟು ಕೃತಜ್ಞನು!
ನಾನು, ಜೂನ್ 2, 1925ರಲ್ಲಿ ಜರ್ಮನಿಯ ಲೈಪ್ಸಿಗ್ನ ಹತ್ತಿರದ ಲುಕಾದಲ್ಲಿ ಜನಿಸಿದೆ. ನಾನು ಹುಟ್ಟುವ ಮೊದಲೇ, ನನ್ನ ಹೆತ್ತವರಾದ ಆಲ್ಫ್ರೇಟ್ ಮತ್ತು ಟೆರೇಸಾ, ಬೈಬಲ್ ವಿದ್ಯಾರ್ಥಿಗಳೆಂದು ಆಗ ಜ್ಞಾತರಾಗಿದ್ದ ಯೆಹೋವನ ಸಾಕ್ಷಿಗಳ ಪ್ರಕಾಶನಗಳಲ್ಲಿ ಬೈಬಲ್ ಸತ್ಯದ ನಾದವನ್ನು ಗುರುತಿಸಿದರು. ನಮ್ಮ ಮನೆಯ ಗೋಡೆಗಳಲ್ಲಿ ತೂಗುಹಾಕಿದ್ದ ಬೈಬಲ್ ದೃಶ್ಯಗಳ ಚಿತ್ರಗಳನ್ನು ಪ್ರತಿದಿನ ನೋಡುತ್ತಿದ್ದದ್ದನ್ನು ನಾನು ಜ್ಞಾಪಿಸಿಕೊಳ್ಳುತ್ತೇನೆ. ಒಂದು ಚಿತ್ರವು ತೋಳ ಮತ್ತು ಕುರಿಮರಿ, ಮೇಕೆಮರಿ ಮತ್ತು ಚಿರತೆ, ಕರು ಮತ್ತು ಸಿಂಹ—ಎಲ್ಲವೂ ಶಾಂತಿಯಿಂದ ಒಬ್ಬ ಚಿಕ್ಕ ಹುಡುಗನಿಂದ ನಡೆಸಲ್ಪಡುವುದನ್ನು ತೋರಿಸಿತು. (ಯೆಶಾಯ 11:6-9) ಇಂತಹ ಚಿತ್ರಗಳು ನನ್ನ ಮೇಲೆ ಬಾಳಿಕೆ ಬರುವ ಪರಿಣಾಮವನ್ನುಂಟುಮಾಡಿದವು.
ಸಾಧ್ಯವಾದಾಗೆಲ್ಲ, ಹೆತ್ತವರು ನನ್ನನ್ನು ಸಭಾ ಚಟುವಟಿಕೆಗಳಲ್ಲಿ ಸೇರಿಸಿಕೊಂಡರು. ಉದಾಹರಣೆಗೆ, ಫೆಬ್ರವರಿ 1933ರಲ್ಲಿ, ಹಿಟ್ಲರನು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ನಮ್ಮ ಚಿಕ್ಕ ಪಟ್ಟಣದಲ್ಲಿ, ಜಾರುಚಿತ್ರಗಳು, ಚಲನಚಿತ್ರಗಳು ಮತ್ತು ಧ್ವನಿಮುದ್ರಿತ ಕಥನಗಳಿದ್ದ, “ಫೋಟೋ-ಡ್ರಾಮ ಆಫ್ ಕ್ರಿಯೇಷನ್”ಅನ್ನು ತೋರಿಸಲಾಯಿತು. ಆಗ ಕೇವಲ ಏಳು ವರ್ಷ ಪ್ರಾಯದವನಾಗಿದ್ದ ನಾನು, ತೆರೆದ ವಾಹನವೊಂದರಲ್ಲಿ “ಫೋಟೋ-ಡ್ರಾಮ” ಜಾಹೀರಾತಿನ ನಡಗೆಯ ಭಾಗವಾಗಿ ಪಟ್ಟಣದಲ್ಲಿ ಸವಾರಿಮಾಡುವಾಗ ಎಷ್ಟು ಪುಳಕಿತನಾಗಿದ್ದೆ! ಈ ಮತ್ತು ಬೇರೆ ಸಂದರ್ಭಗಳಲ್ಲಿ, ನನ್ನ ಎಳೆಯ ಪ್ರಾಯದ ಹೊರತೂ ಸಹೋದರರು ನಾನು ಸಭೆಯ ಉಪಯುಕ್ತ ಸದಸ್ಯನೆಂದೆಣಿಸುವಂತೆ ಮಾಡಿದರು. ಹೀಗೆ ಅತಿ ಚಿಕ್ಕ ಪ್ರಾಯದಿಂದಲೇ, ನಾನು ಯೆಹೋವನಿಂದ ಕಲಿಸಲ್ಪಟ್ಟು ಆತನ ವಾಕ್ಯದಿಂದ ಪ್ರಭಾವಿತನಾದೆ.
ಯೆಹೋವನಲ್ಲಿ ಭರವಸೆಯಿಡಲು ತರಬೇತುಗೊಳಿಸಲ್ಪಟ್ಟದ್ದು
ಕಟ್ಟುನಿಟ್ಟಾದ ಕ್ರೈಸ್ತ ತಾಟಸ್ಥ್ಯದ ಕಾರಣ, ಯೆಹೋವನ ಸಾಕ್ಷಿಗಳು ನಾಸಿ ರಾಜಕಾರಣದಲ್ಲಿ ಸೇರಿಕೊಳ್ಳಲಿಲ್ಲ. ಇದರ ಪರಿಣಾಮವಾಗಿ, 1933ರಲ್ಲಿ ನಾಸಿಗಳು ಸಾರುವುದನ್ನು, ಕೂಟವನ್ನು ಮತ್ತು ನಮ್ಮ ಸ್ವಂತ ಬೈಬಲ್ ಸಾಹಿತ್ಯಗಳನ್ನು ಓದುವುದನ್ನೂ ನಿಷೇಧಿಸಿದ ಕಟ್ಟಳೆಗಳನ್ನು ಹೊರಡಿಸಿದರು. ಸೆಪ್ಟೆಂಬರ್ 1937ರಲ್ಲಿ ನನ್ನ ತಂದೆಯನ್ನು ಸೇರಿಸಿ, ನಮ್ಮ ಸಭೆಯ ಎಲ್ಲ ಸಹೋದರರನ್ನು ಗೆಸ್ಟಾಪೊ ದಸ್ತಗಿರಿ ಮಾಡಿದರು. ಅದು ನನ್ನನ್ನು ದುಃಖಕ್ಕೊಳಪಡಿಸಿತು. ನನ್ನ ತಂದೆಗೆ ಐದು ವರ್ಷಗಳ ಸೆರೆವಾಸಕ್ಕೆ ತೀರ್ಪಾಯಿತು.
ಮನೆಯಲ್ಲಿ ನಮ್ಮ ಪರಿಸ್ಥಿತಿಗಳು ತುಂಬ ಕಷ್ಟಕರವಾಗಿ ಪರಿಣಮಿಸಿದವು. ಆದರೆ ನಾವು ಯೆಹೋವನಲ್ಲಿ ಭರವಸೆಯಿಡಲು ಬೇಗನೆ ಕಲಿತೆವು. ಒಂದು ದಿನ, ನಾನು ಶಾಲೆಯಿಂದ ಮನೆಗೆ ಬಂದಾಗ, ನನ್ನ ತಾಯಿ ಕಾವಲಿನಬುರುಜು ಪತ್ರಿಕೆಯನ್ನು ಓದುತ್ತಿದ್ದರು. ನನಗೆ ಬೇಗನೆ ಒಂದು ಸಾದಾ ಊಟವನ್ನು ತಯಾರಿಸುವರೆ ಬಯಸಿ, ಅವರು ಆ ಪತ್ರಿಕೆಯನ್ನು ಒಂದು ಸಣ್ಣ ಅಲಮಾರಿನ ಮೇಲೆ ಇಟ್ಟರು. ಊಟ ಮುಗಿದು ನಾವು ಪಾತ್ರೆಗಳನ್ನು ಎತ್ತಿಡುತ್ತಿದ್ದಾಗ, ಗಟ್ಟಿಯಾಗಿ ಬಾಗಿಲು ತಟ್ಟುವ ಸದ್ದಾಯಿತು. ಬೈಬಲ್ ಸಾಹಿತ್ಯಕ್ಕಾಗಿ ನಮ್ಮ ಮನೆಯನ್ನು ಝಡತಿ ಮಾಡುವ ಉದ್ದೇಶದಿಂದ ಒಬ್ಬ ಪೊಲೀಸನು ಬಂದಿದ್ದ. ನನಗೆ ತೀರ ಭಯವಾಯಿತು.
ಆ ದಿನ ಅಸಾಧಾರಣವಾಗಿ ಉಷ್ಣತೆಯಿದ್ದ ದಿನವಾಗಿತ್ತು. ಆದುದರಿಂದ ಆ ಪೊಲೀಸನು ಮಾಡಿದ ಪ್ರಥಮ ವಿಷಯವು ತನ್ನ ತಲೆಕಾಪನ್ನು ತೆಗೆದು ಒಂದು ಮೇಜಿನ ಮೇಲಿಟ್ಟದ್ದೇ. ಬಳಿಕ ಅವನು ಹುಡುಕತೊಡಗಿದನು. ಅವನು ಮೇಜಿನಡಿ ನೋಡುತ್ತಿದ್ದಾಗ, ಅವನ ತಲೆಕಾಪು ಜಾರಿ ಬೀಳತೊಡಗಿತು. ಆಗ ನನ್ನ ತಾಯಿ ಅದನ್ನು ಫಕ್ಕನೆ ಹಿಡಿದು ಅಲೆಮಾರಿನ ಮೇಲಿದ್ದ ಕಾವಲಿನಬುರುಜುವಿನ ಮೇಲಿಟ್ಟರು! ಪೊಲೀಸನು ನಮ್ಮ ಮನೆಯನ್ನು ಸಾದ್ಯಂತವಾಗಿ ಹುಡುಕಿದರೂ ಯಾವುದೇ ಸಾಹಿತ್ಯ ಅವನಿಗೆ ದೊರೆಯಲಿಲ್ಲ. ತನ್ನ ತಲೆಕಾಪಿನ ಅಡಿಯನ್ನು ಪರೀಕ್ಷಿಸುವುದನ್ನು ಅವನು ಯೋಚಿಸಲೇ ಇಲ್ಲವೆಂಬುದು ನಿಶ್ಚಯ. ಅವನು ಹೊರಡಲು ಸಿದ್ಧನಾಗಿ ನನ್ನ ತಾಯಿಯಿಂದ ಕ್ಷಮೆಯಾಚಿಸುತ್ತ, ಹಿಂದೆ ಕೈಹಾಕಿ ತನ್ನ ತಲೆಕಾಪನ್ನು ಎತ್ತಿದನು. ಎಂತಹ ನೆಮ್ಮದಿ ನನಗನಿಸಿತು!
ಅಂತಹ ಅನುಭವಗಳು ನನ್ನನ್ನು ಇನ್ನೂ ಹೆಚ್ಚು ಕಷ್ಟಕರವಾದ ಪರೀಕ್ಷೆಗಳಿಗೆ ತಯಾರಿಸಿದವು. ಉದಾಹರಣೆಗೆ, ಶಾಲೆಯಲ್ಲಿ ಹಿಟ್ಲರ್ ಯುವ ಸಂಸ್ಥೆಗೆ ಸೇರುವಂತೆ ನನ್ನನ್ನು ಒತ್ತಾಯಪಡಿಸಲಾಯಿತು. ಇದರಲ್ಲಿ ಮಕ್ಕಳಿಗೆ ಮಿಲಿಟರಿ ಶಿಸ್ತಿನ ತರಬೇತೂ ನಾಸಿ ತತ್ತ್ವಜ್ಞಾನದ ಉಪದೇಶವೂ ಕೊಡಲಾಗುತ್ತಿತ್ತು. ಕೆಲವು ಅಧ್ಯಾಪಕರಿಗೆ 100 ಪ್ರತಿಶತ ವಿದ್ಯಾರ್ಥಿ ಭಾಗವಹಿಸುವಿಕೆಯ ವೈಯಕ್ತಿಕ ಗುರಿಗಳಿದ್ದವು. ನನ್ನ ಅಧ್ಯಾಪಕ, ಶ್ರೀ ಶ್ನೈಡರ್, ತಾನು ಪೂರ್ತಿ ವಿಫಲಗೊಂಡೆನೆಂದು ಎಣಿಸಿದ್ದಿರಬೇಕು. ಏಕೆಂದರೆ, ನನ್ನ ಶಾಲೆಯ ಬೇರೆ ಅಧ್ಯಾಪಕರಿಗೆ ಅಸದೃಶವಾಗಿ ಅವರ 100 ಪ್ರತಿಶತ ಭಾಗವಹಿಸುವಿಕೆಗೆ ಒಬ್ಬ ವಿದ್ಯಾರ್ಥಿ ಕಡಮೆಯಾಗಿದ್ದ. ನಾನೇ ಆ ವಿದ್ಯಾರ್ಥಿಯಾಗಿದ್ದೆನು.
ಒಂದು ದಿನ ಶ್ರೀ ಶ್ನೈಡರ್, ಇಡೀ ಕ್ಲಾಸಿಗೆ ಹೇಳಿದ್ದು: “ಹುಡುಗರೇ, ನಾಳೆ ನಾವು ನಮ್ಮ ಕ್ಲಾಸಿನ ಸಂತೋಷ ಸಂಚಾರಕ್ಕೆ ಹೋಗಲಿದ್ದೇವೆ.” ಆ ವಿಚಾರವನ್ನು ಕೇಳಿ ಎಲ್ಲರೂ ಇಷ್ಟಪಟ್ಟರು. ಬಳಿಕ ಅವರು ಕೂಡಿಸಿ ಹೇಳಿದ್ದು: “ನೀವೆಲ್ಲ ಹಿಟ್ಲರ್ ಯೂತ್ ಸಮವಸ್ತ್ರಗಳನ್ನು ಧರಿಸಬೇಕು. ನಾವೆಲ್ಲ ರಸ್ತೆಯಲ್ಲಿ ಶಿಸ್ತಿನ ನಡಗೆ ಮಾಡುವಾಗ, ನೀವೆಲ್ಲ ಒಳ್ಳೆಯ ಹಿಟ್ಲರ್ ಹುಡುಗರೆಂದು ಎಲ್ಲರಿಗೂ ನೋಡಸಾಧ್ಯವಾಗುತ್ತದೆ.” ಮರುದಿನ ಬೆಳಗ್ಗೆ ನನ್ನನ್ನು ಬಿಟ್ಟು, ಬೇರೆಲ್ಲ ಹುಡುಗರು ಸಮವಸ್ತ್ರ ಧರಿಸಿಕೊಂಡು ಬಂದರು. ಅಧ್ಯಾಪಕರು ನನ್ನನ್ನು ಕ್ಲಾಸಿನ ಮುಂದೆ ಕರೆದು, “ತಿರುಗಿ ಇತರ ಹುಡುಗರನ್ನು ನೋಡಿ ಆಮೇಲೆ ನಿನ್ನನ್ನು ನೋಡಿಕೊ,” ಎಂದರು. ಅವರು ಕೂಡಿಸಿದ್ದು: “ನಿನ್ನ ಹೆತ್ತವರು ಬಡವರೆಂದೂ ಸಮವಸ್ತ್ರ ಕೊಳ್ಳಲು ಅಶಕ್ತರೆಂದೂ ನನಗೆ ಗೊತ್ತು, ಆದರೆ ನಾನು ನಿನಗೊಂದು ವಿಷಯ ತೋರಿಸುತ್ತೇನೆ.” ಅವರು ನನ್ನನ್ನು ತಮ್ಮ ಡೆಸ್ಕಿಗೆ ಕರೆತಂದು, ಅದರ ಡ್ರಾವರನ್ನು ತೆರೆದು ಹೇಳಿದ್ದು: “ಈ ಹೊಚ್ಚ ಹೊಸ ಸಮವಸ್ತ್ರ ನಿನಗೆ ಕೊಡಬಯಸುತ್ತೇನೆ. ಇದು ಸುಂದರವಾಗಿಲ್ಲವಾ?”
ಆ ನಾಸಿ ಸಮವಸ್ತ್ರ ಧರಿಸುವುದಕ್ಕಿಂತ ನನಗೆ ಸಾವು ಲೇಸಾಗಿತ್ತು. ನನಗೆ ಅದನ್ನು ಧರಿಸುವ ಇಂಗಿತವೇ ಇಲ್ಲದಿದ್ದುದನ್ನು ಅಧ್ಯಾಪಕರು ನೋಡಿ, ಸಿಟ್ಟಿಗೆದ್ದಾಗ ಇಡೀ ಕ್ಲಾಸು ನನಗೆ ಅಪಹಾಸ್ಯಮಾಡಿತು. ಆ ಬಳಿಕ ಅವರು ನಮ್ಮನ್ನು ಸಂತೋಷ ಸಂಚಾರಕ್ಕೆ ಕರೆದೊಯ್ದರೂ, ಎಲ್ಲ ಸಮವಸ್ತ್ರವಿದ್ದ ಇತರ ಹುಡುಗರ ಮಧ್ಯೆ ನಡೆಯುವಂತೆ ಮಾಡುವ ಮೂಲಕ ನನ್ನನ್ನು ಅಡಗಿಸಿಡಲು ಪ್ರಯತ್ನಿಸಿದರು. ಆದರೂ, ನಾನು ನನ್ನ ಸಹಪಾಠಿಗಳ ಮಧ್ಯೆ ಎದ್ದು ಕಂಡುಬಂದ ಕಾರಣ, ಪಟ್ಟಣದ ಅನೇಕರಿಗೆ ನನ್ನನ್ನು ನೋಡಸಾಧ್ಯವಾಗಿತ್ತು. ನನ್ನ ಹೆತ್ತವರೂ ನಾನೂ ಯೆಹೋವನ ಸಾಕ್ಷಿಗಳೆಂಬುದು ಎಲ್ಲರಿಗೂ ಗೊತ್ತಿತ್ತು. ನಾನು ಚಿಕ್ಕವನಾಗಿದ್ದಾಗ ನನಗೆ ಬೇಕಾಗಿದ್ದ ಆತ್ಮಿಕ ಶಕ್ತಿಯನ್ನು ಕೊಟ್ಟದ್ದಕ್ಕಾಗಿ ನಾನು ಯೆಹೋವನಿಗೆ ಕೃತಜ್ಞನು.
ಹಿಂಸೆ ತೀಕ್ಷ್ಣವಾಗುತ್ತದೆ
ಒಂದು ದಿನ, 1938ರ ಆರಂಭ ಭಾಗದಲ್ಲಿ, ನನ್ನ ಸೋದರಿಯನ್ನೂ ನನ್ನನ್ನೂ ಶಾಲೆಯಿಂದ ಪೊಲೀಸ್ ಕಾರ್ನಲ್ಲಿ 80 ಕಿಲೊಮೀಟರ್ಗಳಷ್ಟು ದೂರದಲ್ಲಿದ್ದ ಷ್ಟಾಟ್ರೋಡ ಪಟ್ಟಣದ ಒಂದು ಸುಧಾರಣಾ ಶಾಲೆಗೆ ಒಯ್ಯಲಾಯಿತು. ಏಕೆ? ನಮ್ಮನ್ನು ನಮ್ಮ ಹೆತ್ತವರ ಪ್ರಭಾವದಿಂದ ತೊಲಗಿಸಿ ನಾಸಿ ಮಕ್ಕಳಾಗಿ ಪರಿವರ್ತಿಸಲು ಕೋರ್ಟುಗಳು ನಿರ್ಧರಿಸಿದ್ದವು. ಸುಧಾರಣಾ ಶಾಲೆಯ ಮೇಲ್ವಿಚಾರಣೆ ಮಾಡುತ್ತಿದ್ದ ಸಿಬಂದಿಗಳು ಬೇಗನೆ, ನನ್ನ ಸೋದರಿಯೂ ನಾನೂ ಕ್ರೈಸ್ತ ತಾಟಸ್ಥ್ಯದಲ್ಲಿ ಸ್ಥಿರರಾಗಿದ್ದರೂ ಗೌರವಭಾವದವರೂ ವಿಧೇಯರೂ ಆಗಿದ್ದೆವೆಂದು ಗಮನಿಸಿದರು. ಡೈರೆಕ್ಟರರು ಎಷ್ಟು ಪ್ರಭಾವಿತರಾದರೆಂದರೆ, ಅವರು ನನ್ನ ತಾಯಿಯನ್ನು ಖುದ್ದಾಗಿ ಸಂಧಿಸಲು ಬಯಸಿದರು. ವಿನಾಯಿತಿ ಮಾಡಲ್ಪಟ್ಟಿತು ಮತ್ತು ನನ್ನ ತಾಯಿಗೆ ನಮ್ಮನ್ನು ಭೇಟಿಮಾಡುವರೆ ಅನುಮತಿಸಲಾಯಿತು. ಪರಸ್ಪರ ಪ್ರೋತ್ಸಾಹನೆಗಾಗಿ ಇಡೀ ದಿನ ಜೊತೆಗಿರುವ ಈ ಸಂದರ್ಭವನ್ನು ಕೊಟ್ಟದ್ದಕ್ಕಾಗಿ ನನ್ನ ಸೋದರಿ, ನನ್ನ ತಾಯಿ ಮತ್ತು ನಾನು ಎಷ್ಟೋ ಸಂತೋಷಿತರೂ ಯೆಹೋವನಿಗೆ ಕೃತಜ್ಞರೂ ಆಗಿದ್ದೆವು. ನಮಗೆ ಅದರ ಅಗತ್ಯವು ವಾಸ್ತವವಾಗಿಯೂ ಇತ್ತು.
ನಾವು ಸುಮಾರು ನಾಲ್ಕು ತಿಂಗಳುಗಳ ಕಾಲ ಆ ಸುಧಾರಣಾ ಶಾಲೆಯಲ್ಲಿದ್ದೆವು. ಬಳಿಕ ಪಾನಾದಲ್ಲಿ ಒಂದು ಕುಟುಂಬದೊಂದಿಗೆ ಜೀವಿಸಲು ನಮ್ಮನ್ನು ಕಳುಹಿಸಲಾಯಿತು. ನಮ್ಮನ್ನು ನಮ್ಮ ಸಂಬಂಧಿಗಳಿಂದ ದೂರವಿಡಬೇಕೆಂದು ಅವರಿಗೆ ತಿಳಿಸಲಾಯಿತು. ನನ್ನ ತಾಯಿಗೆ ಭೇಟಿಮಾಡಲೂ ಅನುಮತಿಯಿರಲಿಲ್ಲ. ಆದರೂ, ಕೆಲವು ಸಂದರ್ಭಗಳಲ್ಲಿ ತಾಯಿ ನಮ್ಮನ್ನು ಸಂಪರ್ಕಿಸುವ ದಾರಿಯನ್ನು ಕಂಡುಹಿಡಿದರು. ಈ ವಿರಳ ಸಂದರ್ಭಗಳನ್ನು ಉಪಯೋಗಿಸಿಕೊಳ್ಳುತ್ತಾ, ನಾವು ಯೆಹೋವನಿಗೆ, ಆತನು ಯಾವುದೇ ಪರೀಕ್ಷೆಗಳನ್ನು ಅಥವಾ ಪರಿಸ್ಥಿತಿಗಳನ್ನು ಅನುಮತಿಸಲಿ, ನಂಬಿಗಸ್ತರಾಗಿರುವ ದೃಢತೆಯನ್ನು ನಮ್ಮಲ್ಲಿ ತುಂಬಿಸಲು ನನ್ನ ತಾಯಿ ಸಾಧ್ಯವಿರುವಷ್ಟು ಪ್ರಯತ್ನಿಸಿದರು.—1 ಕೊರಿಂಥ 10:13.
ಪರೀಕ್ಷೆಗಳಾದರೊ ಬಂದೇ ಬಂದವು. ಡಿಸೆಂಬರ್ 15, 1942ರಲ್ಲಿ ನಾನು ಕೇವಲ 17 ವಯಸ್ಸಿನವನಾಗಿದ್ದಾಗ, ಗೆಸ್ಟಾಪೊ ನನ್ನನ್ನು ಹಿಡಿದು ಗೇರ ಬಂಧನ ಕೇಂದ್ರದಲ್ಲಿ ಹಾಕಿದರು. ಸುಮಾರು ಒಂದು ವಾರ ಕಳೆಯಲಾಗಿ, ನನ್ನ ತಾಯಿಯೂ ದಸ್ತಗಿರಿ ಮಾಡಲ್ಪಟ್ಟು ಅದೇ ಬಂಧನ ಗೃಹದಲ್ಲಿ ನನ್ನ ಜೊತೆ ಸೇರಿದರು. ನಾನಿನ್ನೂ ಅಪ್ರಾಪ್ತ ವಯಸ್ಕನಾಗಿದ್ದುದರಿಂದ, ಕೋರ್ಟುಗಳಿಗೆ ನನ್ನ ನ್ಯಾಯವಿಚಾರಣೆ ಮಾಡಲು ಸಾಧ್ಯವಿರಲಿಲ್ಲ. ಹೀಗೆ, ಕೋರ್ಟುಗಳು ನನ್ನ 18ನೆಯ ಹುಟ್ಟುದಿನಕ್ಕಾಗಿ ಕಾಯುತ್ತಿದ್ದಾಗ, ನಾನೂ ನನ್ನ ತಾಯಿಯೂ ಆರು ತಿಂಗಳುಗಳನ್ನು ಬಂಧನದಲ್ಲಿ ಕಳೆದೆವು. ನಾನು 18 ವಯಸ್ಸಿನವನಾದ ದಿನವೇ, ನನ್ನ ತಾಯಿಯನ್ನೂ ನನ್ನನ್ನೂ ವಿಚಾರಣೆಗೊಳಪಡಿಸಲಾಯಿತು.
ಏನಾಗುತ್ತಿದೆಯೆಂದು ನಾನು ಅರ್ಥಮಾಡಿಕೊಳ್ಳುವಷ್ಟರಲ್ಲಿ, ಎಲ್ಲವೂ ಮುಗಿದುಹೋಗಿತ್ತು. ನಾನು ನನ್ನ ತಾಯಿಯನ್ನು ಇನ್ನು ಮುಂದೆ ನೋಡಲಾರೆನೆಂದು ನಾನು ಗ್ರಹಿಸಿಯೇ ಇರಲಿಲ್ಲ. ನನ್ನ ಪಕ್ಕದಲ್ಲಿ ಒಂದು ಮರದ ಕಪ್ಪು ಬೆಂಚಿನ ಮೇಲೆ ಕೋರ್ಟಿನಲ್ಲಿ ಅವರು ಕುಳಿತಿದ್ದುದನ್ನು ನೋಡಿದ್ದು ಅವರ ವಿಷಯದಲ್ಲಿ ನನ್ನ ಕೊನೆಯ ಜ್ಞಾಪಕವಾಗಿತ್ತು. ನಮ್ಮಿಬ್ಬರನ್ನೂ ಅಪರಾಧಿಗಳೆಂದು ತೀರ್ಮಾನಿಸಲಾಯಿತು. ನನಗೆ ನಾಲ್ಕು ವರ್ಷಗಳ ಸೆರೆವಾಸ, ತಾಯಿಗೆ ಒಂದೂವರೆ ವರ್ಷಗಳ ಸೆರೆವಾಸ ವಿಧಿಸಲ್ಪಟ್ಟಿತು.
ಆ ದಿನಗಳಲ್ಲಿ ಸೆರೆಮನೆಗಳಲ್ಲಿ ಮತ್ತು ಸೆರೆಶಿಬಿರಗಳಲ್ಲಿ ಸಾವಿರಾರು ಮಂದಿ ಯೆಹೋವನ ಸಾಕ್ಷಿಗಳಿದ್ದರು. ಆದರೂ, ನನ್ನನ್ನು ಷ್ಟಾಲ್ಬರ್ಗಿನ ಒಂದು ಸೆರೆಮನೆಗೆ ಕಳುಹಿಸಲಾಯಿತು. ಅಲ್ಲಿದ್ದ ಒಬ್ಬನೇ ಸಾಕ್ಷಿ ನಾನಾಗಿದ್ದೆ. ನಾನು ಅಲ್ಲಿ ಏಕಾಂತಸೆರೆಯನ್ನು ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದರೂ, ಯೆಹೋವನು ನನ್ನೊಂದಿಗಿದ್ದನು. ನನ್ನ ಯೌವನದಲ್ಲಿ ನಾನು ಆತನಿಗಾಗಿ ಬೆಳೆಸಿಕೊಂಡಿದ್ದ ಪ್ರೀತಿ, ನನ್ನ ಆತ್ಮಿಕ ಪಾರಾಗುವಿಕೆಗೆ ಕೀಲಿ ಕೈಯಾಗಿತ್ತು.
ಮೇ 9, 1945ರಂದು, ನಾನು ಸೆರೆಯಲ್ಲಿ ಎರಡೂವರೆ ವರ್ಷಗಳಿದ್ದ ಬಳಿಕ, ನಮಗೆ ಸುವಾರ್ತೆ ಸಿಕ್ಕಿತು—ಯುದ್ಧ ಮುಕ್ತಾಯಗೊಂಡಿತ್ತು! ಆ ದಿನ ನನಗೆ ಬಿಡುಗಡೆಯಾಯಿತು. 110 ಕಿಲೊಮೀಟರ್ಗಳಷ್ಟು ದೂರ ನಡೆದು, ದಣಿವು ಮತ್ತು ಹಸಿವಿನಿಂದ ಪದಶಃ ಕಾಯಿಲೆ ಬಿದ್ದವನಾಗಿ ನಾನು ಮನೆಗೆ ಬಂದು ಮುಟ್ಟಿದೆ. ನನ್ನ ಆರೋಗ್ಯವನ್ನು ಮರಳಿ ಪಡೆಯಲು ನನಗೆ ಅನೇಕ ತಿಂಗಳುಗಳು ಹಿಡಿದವು.
ನಾನು ಬಂದು ಮುಟ್ಟಿದೊಡನೆ ನನಗೆ ಹೆಚ್ಚು ಸಂಕಟಕರವಾದ ಸುದ್ದಿ ಸಿಕ್ಕಿತು. ಮೊದಲನೆಯದಾಗಿ ನನ್ನ ತಾಯಿಯ ಕುರಿತು. ಅವರು ಒಂದೂವರೆ ವರ್ಷಕಾಲ ಸೆರೆಮನೆಯಲ್ಲಿದ್ದ ಬಳಿಕ, ಯೆಹೋವನಲ್ಲಿ ತನಗಿದ್ದ ನಂಬಿಕೆಯನ್ನು ತ್ಯಜಿಸುತ್ತೇನೆನ್ನುವ ಒಂದು ಪ್ರಮಾಣಪತ್ರಕ್ಕೆ ಅವರು ಸಹಿಹಾಕುವಂತೆ ನಾಸಿಗಳು ಅವರನ್ನು ಕೇಳಿಕೊಂಡರು. ಅವರು ನಿರಾಕರಿಸಿದರು. ಆಗ ಗೆಸ್ಟಾಪೊ ಅವರನ್ನು ರಾವನ್ಸ್ಬ್ರೂಅಕ್ನಲ್ಲಿದ್ದ ಹೆಂಗಸರ ಸೆರೆಶಿಬಿರಕ್ಕೆ ಕೊಂಡುಹೋದರು. ಅಲ್ಲಿ ಅವರು ಟೈಫಸ್ ಜ್ವರದಿಂದ, ಯುದ್ಧ ಮುಕ್ತಾಯಗೊಳ್ಳುವುದಕ್ಕೆ ತುಸು ಮೊದಲು ತೀರಿಕೊಂಡರು. ಅವರು ಅತಿ ಧೈರ್ಯವಂತೆಯಾದ ಕ್ರೈಸ್ತರು—ಎಂದಿಗೂ ಬಿಟ್ಟುಕೊಡದ ಕಠಿನ ಹೋರಾಟಗಾರರು ಆಗಿದ್ದರು. ಯೆಹೋವನು ಅವರನ್ನು ದಯೆಯಿಂದ ಜ್ಞಾಪಿಸಿಕೊಳ್ಳಲಿ.
ಯೆಹೋವನಿಗೆ ಸಮರ್ಪಣೆಯನ್ನೇ ಮಾಡದೆ ಇದ್ದ ನನ್ನ ಅಣ್ಣ ವರ್ನರ್ನ ಸುದ್ದಿಯೂ ಬಂತು. ಅವನು ಜರ್ಮನ್ ಸೈನ್ಯಕ್ಕೆ ಸೇರಿ ರಷ್ಯದಲ್ಲಿ ಕೊಲ್ಲಲ್ಪಟ್ಟಿದ್ದನು. ನನ್ನ ತಂದೆಯೊ? ಅವರು ಮನೆಗೇನೊ ಬಂದರು, ಆದರೆ ದುಃಖಕರವಾಗಿ, ತಮ್ಮ ನಂಬಿಕೆಯನ್ನು ತ್ಯಜಿಸುತ್ತೇವೆಂದು ಹೇಳಿದ ಆ ಕುಪ್ರಸಿದ್ಧ ಪ್ರಮಾಣಪತ್ರಕ್ಕೆ ಸಹಿ ಹಾಕಿದ ಕೇವಲ ಕೆಲವೇ ಸಾಕ್ಷಿಗಳಲ್ಲಿ ಅವರು ಒಬ್ಬರಾಗಿದ್ದರು. ನಾನು ಅವರನ್ನು ಭೇಟಿಯಾದಾಗ, ಅವರು ಖಿನ್ನರೂ ಮಾನಸಿಕವಾಗಿ ಶಾಂತಿಭಂಗಗೊಂಡವರೂ ಆಗಿದ್ದರು.—2 ಪೇತ್ರ 2:20.
ಅಲ್ಪಕಾಲಿಕವಾಗಿದ್ದ ಹುರುಪಿನ ಆತ್ಮಿಕ ಚಟುವಟಿಕೆ
ನಾನು ಮಾರ್ಚ್ 10, 1946ರಲ್ಲಿ, ಲೈಪ್ಸಿಗ್ನಲ್ಲಿ, ಯುದ್ಧಾನಂತರದ ನನ್ನ ಪ್ರಥಮ ಸಮ್ಮೇಳನಕ್ಕೆ ಹಾಜರಾದೆ. ಅದೇ ದಿನ ಒಂದು ದೀಕ್ಷಾಸ್ನಾನ ಸಮಾರಂಭವಿರುವುದೆಂದು ಪ್ರಕಟಿಸಲ್ಪಟ್ಟಾಗ ಅದೆಂತಹ ರೋಮಾಂಚಕವಾದ ಸಂದರ್ಭವಾಗಿತ್ತು! ನಾನು ಅನೇಕ ವರ್ಷಗಳ ಹಿಂದೆ ನನ್ನ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಂಡಿದ್ದೆನಾದರೂ, ದೀಕ್ಷಾಸ್ನಾನ ಹೊಂದಲು ಇದು ನನಗಿದ್ದ ಪ್ರಥಮ ಸಂದರ್ಭವಾಗಿತ್ತು. ಆ ದಿನವನ್ನು ನಾನೆಂದೂ ಮರೆಯಲಾರೆ.
ಮಾರ್ಚ್ 1, 1947ರಲ್ಲಿ, ಒಂದು ತಿಂಗಳು ಪಯನೀಯರ್ ಸೇವೆ ಮಾಡಿದ ಬಳಿಕ ನನ್ನನ್ನು ಮಾಗ್ಡಬುರ್ಗ್ನ ಬೆತೆಲ್ಗೆ ಆಮಂತ್ರಿಸಲಾಯಿತು. ಸೊಸೈಟಿಯ ಆಫೀಸುಗಳು ಬಾಂಬ್ ದಾಳಿಯಿಂದಾಗಿ ತೀರ ಹಾನಿಗೊಂಡಿದ್ದವು. ದುರಸ್ತಿಯ ಕೆಲಸದಲ್ಲಿ ಸಹಾಯಮಾಡುವುದು ಎಂತಹ ಸಯೋಗವಾಗಿತ್ತು! ಆ ಬೇಸಗೆಯ ಅನಂತರ ನನ್ನನ್ನು ಸ್ಪೆಷಲ್ ಪಯನೀಯರನಾಗಿ ವಿಟನ್ಬರ್ಗ ನಗರಕ್ಕೆ ನೇಮಿಸಲಾಯಿತು. ಕೆಲವು ತಿಂಗಳುಗಳಲ್ಲಿ ನಾನು ದೇವರ ರಾಜ್ಯದ ಕುರಿತು ಇತರರಿಗೆ ಸಾರುವುದರಲ್ಲಿ 200ಕ್ಕೂ ಹೆಚ್ಚು ತಾಸುಗಳನ್ನು ಕಳೆದೆ. ಯುದ್ಧ, ಹಿಂಸೆ, ಸೆರೆಮನೆಗಳಿಲ್ಲದೆ ಸ್ವತಂತ್ರನಾಗಿರಲು ನಾನು ಎಷ್ಟೊಂದು ಸಂತೋಷಪಟ್ಟೆ!
ಆದರೆ ವಿಷಾದಕರವಾಗಿ, ಆ ಸ್ವಾತಂತ್ರ್ಯ ಹೆಚ್ಚುಕಾಲ ಬಾಳಲಿಲ್ಲ. ಯುದ್ಧಾನಂತರ, ಜರ್ಮನಿಯು ವಿಭಾಗಗೊಂಡು, ನಾನು ಜೀವಿಸುತ್ತಿದ್ದ ಪ್ರದೇಶವು ಕಮ್ಯೂನಿಸ್ಟರ ವಶವಾಯಿತು. ಸೆಪ್ಟೆಂಬರ್ 1950ರಲ್ಲಿ ಪೂರ್ವ ಜರ್ಮನಿಯ ಷ್ಟಾಸೀ ಎಂದು ಕರೆಯಲ್ಪಡುವ ಗುಪ್ತ ಪೊಲೀಸರು ಸಹೋದರರನ್ನು ಕ್ರಮಬದ್ಧವಾಗಿ ದಸ್ತಗಿರಿ ಮಾಡಲಾರಂಭಿಸಿದರು. ನನ್ನ ಮೇಲಿನ ಆರೋಪ ಹಾಸ್ಯಾಸ್ಪದವಾಗಿತ್ತು. ಅಮೆರಿಕನ್ ಸರಕಾರದ ಗೂಢಚಾರನೆಂದು ನನ್ನ ಮೇಲೆ ಅಪವಾದ ಹೊರಿಸಲಾಗಿತ್ತು. ಅವರು ನನ್ನನ್ನು ದೇಶದಲ್ಲಿ ಅತಿ ಕೆಟ್ಟದ್ದಾಗಿದ್ದ, ಬ್ರಾಂಡನ್ಬುರ್ಗ್ನ ಷ್ಟಾಸೀ ಸೆರೆಮನೆಗೆ ಕಳುಹಿಸಿದರು.
ನನ್ನ ಆತ್ಮಿಕ ಸಹೋದರರಿಂದ ಬೆಂಬಲ
ಅಲ್ಲಿ ಷ್ಟಾಸೀ, ಹಗಲಿನಲ್ಲಿ ನನಗೆ ನಿದ್ದೆಮಾಡಲು ಬಿಡಲಿಲ್ಲ. ಬಳಿಕ ಇಡೀ ರಾತ್ರಿ ನನ್ನನ್ನು ಪ್ರಶ್ನಿಸುತ್ತಿದ್ದರು. ಕೆಲವು ದಿನಗಳಲ್ಲಿ ನಾನು ಈ ಯಾತನೆಗೊಳಪಟ್ಟಮೇಲೆ, ವಿಷಯಗಳು ಹೆಚ್ಚು ಕೆಟ್ಟುಹೋದವು. ಒಂದು ದಿನ ಬೆಳಗ್ಗೆ, ನನ್ನನ್ನು ಕೋಣೆಗೆ ಹಿಂದಿರುಗಿಸುವ ಬದಲಾಗಿ ಅವರು ನನ್ನನ್ನು ಅವರ ಕುಖ್ಯಾತ ಯೂ-ಬೋಟ್ ಟ್ಸೆಲನ್ (ನೆಲಮಾಳಿಗೆಯಡಿಯಲ್ಲಿದ್ದುದರಿಂದ ಜಲಾಂತರ್ಗಾಮಿ ಕೋಣೆಗಳೆಂದು ಜ್ಞಾತವಾಗಿದ್ದವು)ಗಳಲ್ಲಿ ಒಂದಕ್ಕೆ ಒಯ್ದರು. ಒಂದು ಹಳೆಯ, ತುಕ್ಕುಹಿಡಿದಿದ್ದ ಬಾಗಿಲನ್ನು ಅವರು ತೆರೆದು ಒಳಗೆ ಹೋಗುವಂತೆ ಕೇಳಿಕೊಂಡರು. ಎತ್ತರದ ಹೊಸ್ತಿಲನ್ನು ನಾನು ದಾಟಿಹೋಗಬೇಕಾಗಿತ್ತು. ನಾನು ಪಾದಗಳನ್ನು ಕೆಳಗಿಟ್ಟಾಗ, ನೆಲವು ಪೂರ್ತಿಯಾಗಿ ನೀರಿನಿಂದ ತುಂಬಿತ್ತೆಂದು ನನಗೆ ತಿಳಿದು ಬಂತು. ಬಾಗಿಲು ಭಯಂಕರ ಚೀರಾಟದೊಡನೆ ಧಡಾರನೆ ಮುಚ್ಚಲ್ಪಟ್ಟಿತು. ಅಲ್ಲಿ ಬೆಳಕಾಗಲಿ ಕಿಟಕಿಯಾಗಲಿ ಇರಲಿಲ್ಲ. ಅಲ್ಲಿ ಕಗ್ಗತ್ತಲಿತ್ತು.
ನೆಲದಲ್ಲಿ ಅನೇಕ ಇಂಚುಗಳಷ್ಟು ನೀರಿದ್ದುದರಿಂದ ನನಗೆ ಕುಳಿತುಕೊಳ್ಳಲಿಕ್ಕಾಗಲಿ, ಮಲಗಲಿಕ್ಕಾಗಲಿ, ನಿದ್ದೆಹೋಗಲಿಕ್ಕಾಗಲಿ ಆಗಲಿಲ್ಲ. ಅನಂತವೊ ಎಂಬಂತೆ ತೋರಿದಷ್ಟು ಕಾಲ ಕಾದ ಬಳಿಕ, ನನ್ನನ್ನು ಇನ್ನೂ ಹೆಚ್ಚಿನ ವಿಚಾರಣೆಗಾಗಿ—ಅತಿ ಪ್ರಕಾಶವುಳ್ಳ ಬೆಳಕುಗಳಡಿಯಲ್ಲಿ—ಕೊಂಡೊಯ್ಯಲಾಯಿತು. ಇವುಗಳಲ್ಲಿ ಯಾವುದು ಹೆಚ್ಚು ಕೆಟ್ಟದ್ದೆಂದು ನನಗೆ ತಿಳಿಯದು—ಹೆಚ್ಚುಕಡಮೆ ಪೂರ್ತಿ ಕತ್ತಲೆಯಲ್ಲಿ ದಿನವಿಡೀ ನೀರಿನಲ್ಲಿ ನಿಂತುಕೊಳ್ಳುವುದೊ, ನನ್ನ ಕಡೆಗೆ ನೇರವಾಗಿ ನಿರ್ದೇಶಿಸಲ್ಪಟ್ಟ ವೇದನೆಕೊಡುವ ಉಜ್ವಲವಾದ ಪರಿಪ್ರದೀಪಗಳನ್ನು ರಾತ್ರಿಯಿಡೀ ಸಹಿಸಿಕೊಳ್ಳುವುದೊ.
ಅನೇಕ ಸಂದರ್ಭಗಳಲ್ಲಿ ಅವರು ನನ್ನನ್ನು ಗುಂಡಿಕ್ಕಿಕೊಲ್ಲುವ ಬೆದರಿಕೆ ಹಾಕಿದರು. ಕೆಲವು ರಾತ್ರಿಗಳಲ್ಲಿ ಸೂಕ್ಷ್ಮವಾಗಿ ಪ್ರಶ್ನಿಸಿ ವಿಚಾರಿಸಿದ ಮೇಲೆ, ಒಂದು ದಿನ ಬೆಳಗ್ಗೆ, ಒಬ್ಬ ಉಚ್ಚ ರಷ್ಯನ್ ಮಿಲಿಟರಿ ಅಧಿಕಾರಿ ನನಗೆ ಭೇಟಿಯಿತ್ತರು. ನಾಸಿ ಗೆಸ್ಟಾಪೊಗಳಿಗಿಂತ ಜರ್ಮನ್ ಷ್ಟಾಸೀ ನನ್ನನ್ನು ಹೆಚ್ಚು ಕೆಟ್ಟದಾಗಿ ಉಪಚರಿಸುತ್ತಿದ್ದಾರೆಂದು ಅವರಿಗೆ ಹೇಳುವ ಸಂದರ್ಭ ನನಗೆ ದೊರಕಿತು. ಯೆಹೋವನ ಸಾಕ್ಷಿಗಳು ನಾಸಿ ಸರಕಾರದಡಿಯಲ್ಲಿ ತಟಸ್ಥರಾಗಿದ್ದರೆಂದೂ, ಅದೇ ರೀತಿ ಕಮ್ಯೂನಿಸ್ಟ್ ಸರಕಾರದಡಿಯಲ್ಲೂ ತಟಸ್ಥರೆಂದೂ, ನಾವು ಲೋಕದಲ್ಲೆಲ್ಲಿಯೂ ರಾಜಕಾರಣದಲ್ಲಿ ತಲೆಹಾಕುವುದಿಲ್ಲವೆಂದೂ ನಾನು ಅವರಿಗೆ ಹೇಳಿದೆ. ವ್ಯತಿರಿಕ್ತವಾಗಿ, ಈಗ ಷ್ಟಾಸೀ ಆಫೀಸರ್ಗಳಾಗಿರುವ ಅನೇಕರು, ಒಮ್ಮೆ ಹಿಟ್ಲರ್ ಯೂತ್ ಸಂಸ್ಥೆಯ ಸದಸ್ಯರಾಗಿದ್ದರೆಂದೂ ನಿರಪರಾಧಿಗಳನ್ನು ಕ್ರೂರವಾಗಿ ಹಿಂಸಿಸುವ ವಿಧವನ್ನು ಅವರು ಅಲ್ಲಿ ಕಲಿತಿದ್ದಿರಬಹುದೆಂದೂ ನಾನು ಹೇಳಿದೆ. ನಾನು ಮಾತಾಡುತ್ತಿದ್ದಾಗ, ಚಳಿ, ಹಸಿವು ಮತ್ತು ಬಳಲಿಕೆಯಿಂದ ನನ್ನ ದೇಹ ಕಂಪಿಸುತ್ತಿತ್ತು.
ಆಶ್ಚರ್ಯಕರವಾಗಿ, ಆ ರಷ್ಯನ್ ಅಧಿಕಾರಿ ನನ್ನ ಮೇಲೆ ಕೋಪಿಸಿಕೊಳ್ಳಲಿಲ್ಲ. ವ್ಯತಿರಿಕ್ತವಾಗಿ, ಅವರು ನನ್ನ ಮೇಲೆ ಒಂದು ಕಂಬಳಿಯನ್ನು ಹಾಕಿ ದಯಾಭಾವದಿಂದ ಉಪಚರಿಸಿದರು. ಅವರ ಭೇಟಿಯಾಗಿ ಸ್ವಲ್ಪದರಲ್ಲಿ, ನಾನು ಹೆಚ್ಚು ಅನುಕೂಲಕರವಾದ ಒಂದು ಕೋಣೆಯಲ್ಲಿ ಹಾಕಲ್ಪಟ್ಟೆ. ಕೆಲವು ದಿನಗಳ ತರುವಾಯ, ನನ್ನನ್ನು ಜರ್ಮನ್ ಕೋರ್ಟುಗಳ ವಶಕ್ಕೆ ಒಪ್ಪಿಸಲಾಯಿತು. ನನ್ನ ಮೊಕದ್ದಮೆ ತೀರ್ಮಾನಕ್ಕಾಗಿ ಇನ್ನೂ ಕಾದಿದ್ದಾಗ, ಐದು ಮಂದಿ ಇತರ ಸಾಕ್ಷಿಗಳೊಂದಿಗೆ ಒಂದು ಕೋಣೆಯಲ್ಲಿ ಸಹಭಾಗಿಯಾಗುವ ಸುಸಂಧಿಯನ್ನು ನಾನು ಅನುಭವಿಸಿದೆ. ಬಹಳ ಕ್ರೂರ ಅನುಪಚಾರವನ್ನು ತಾಳಿಕೊಂಡ ಮೇಲೆ, ನನ್ನ ಆತ್ಮಿಕ ಸಹೋದರರ ಒಡನಾಟವನ್ನು ನಾನು ಎಷ್ಟು ಚೈತನ್ಯದಾಯಕವಾದುದಾಗಿ ಕಂಡುಕೊಂಡೆ!—ಕೀರ್ತನೆ 133:1.
ಕೋರ್ಟಿನಲ್ಲಿ ನಾನು ಬೇಹುಗಾರಿಕೆಯ ಅಪರಾಧಿಯೆಂದು ನಿರ್ಣಯಿಸಲ್ಪಟ್ಟು ನನಗೆ ನಾಲ್ಕು ವರ್ಷಗಳ ಕಾರಾಗೃಹವಾಸದ ಸಜೆಯಾಯಿತು. ಅದನ್ನು ಲಘು ಶಿಕ್ಷೆಯೆಂದು ಎಣಿಸಲಾಗುತ್ತಿತ್ತು. ಸಹೋದರರಲ್ಲಿ ಕೆಲವರಿಗೆ ಹತ್ತು ವರ್ಷಗಳಿಗೂ ಹೆಚ್ಚಿನ ಸಜೆ ದೊರೆಯಿತು. ನಾನು ಗರಿಷ್ಠ ಭದ್ರತೆಯ ಕಾರಾಗೃಹಕ್ಕೆ ಕಳುಹಿಸಲ್ಪಟ್ಟೆ. ಆ ಸೆರೆಮನೆಯಿಂದ ಒಂದು ಇಲಿಯೂ ಒಳಗೆ ಅಥವಾ ಹೊರಗೆ ಚಲಿಸುವಂತಿರಲಿಲ್ಲವೆಂಬುದು ನನ್ನ ಭಾವನೆ—ಭದ್ರತೆ ಅಷ್ಟು ಬಿಗಿಯಾಗಿತ್ತು. ಆದರೂ, ಯೆಹೋವನ ಸಹಾಯದಿಂದ ಕೆಲವು ಧೀರ ಸಹೋದರರು ಒಂದು ಇಡೀ ಬೈಬಲನ್ನು ಗುಪ್ತವಾಗಿ ಒಳತರಶಕ್ತರಾಗಿದ್ದರು. ಅದನ್ನು ಬೇರ್ಪಡಿಸಿ, ಒಂದೊಂದು ಪುಸ್ತಕವನ್ನು ಪ್ರತ್ಯೇಕಿಸಿ ಬಂದಿಗಳಾಗಿದ್ದ ಸಹೋದರರ ಮಧ್ಯೆ ಹಂಚಲಾಯಿತು.
ನಾವದನ್ನು ಹೇಗೆ ಮಾಡಿದೆವು? ವಿಷಯವು ಅತಿ ಕಷ್ಟಕರವಾಗಿತ್ತು. ನಾವು ಒಬ್ಬರು ಇನ್ನೊಬ್ಬರ ಸಂಪರ್ಕಕ್ಕೆ ಬರುತ್ತಿದ್ದ ಒಂದೇ ಸಮಯವು, ಎರಡು ವಾರಗಳಿಗೊಮ್ಮೆ ನಮ್ಮನ್ನು ಸ್ನಾನಕ್ಕೆ ಕರೆದೊಯ್ಯುತ್ತಿದ್ದಾಗಲೇ. ಒಮ್ಮೆ, ನಾನು ಸ್ನಾನ ಮಾಡುತ್ತಿದ್ದಾಗ, ಒಬ್ಬ ಸಹೋದರನು, ತಾನು ತನ್ನ ಟವೆಲಿನಲ್ಲಿ ಕೆಲವು ಬೈಬಲ್ ಪುಟಗಳನ್ನು ಅಡಗಿಸಿಟ್ಟಿದ್ದೇನೆಂದು ನನ್ನ ಕಿವಿಯಲ್ಲಿ ಪಿಸುಗುಟ್ಟಿದನು. ನನ್ನ ಸ್ನಾನದ ಬಳಿಕ ನಾನು ನನ್ನ ಟವೆಲಿನ ಬದಲು ಅವನದ್ದನ್ನು ಒಯ್ಯಬೇಕಾಗಿತ್ತು.
ಆ ಸಹೋದರನು ನನ್ನಲ್ಲಿ ಪಿಸುಗುಟ್ಟುವುದನ್ನು ನೋಡಿದ ಕಾವಲುಗಾರರಲ್ಲಿ ಒಬ್ಬನು ಲಾಠಿಯಿಂದ ಅವನಿಗೆ ಚೆನ್ನಾಗಿ ಹೊಡೆದನು. ನಾನು ಬೇಗನೆ ಆ ಟವೆಲನ್ನು ಹಿಡಿದುಕೊಂಡು ಇತರ ಕೈದಿಗಳ ಮಧ್ಯೆ ಬೆರೆತುಕೊಂಡೆ. ನನ್ನನ್ನು ಬೈಬಲ್ ಪುಟಗಳೊಂದಿಗೆ ಹಿಡಿಯದೆ ಇದ್ದದ್ದು ಕೃತಜ್ಞತೆಯ ವಿಷಯವಾಗಿತ್ತು. ಇಲ್ಲದಿರುತ್ತಿದ್ದರೆ ನಮ್ಮ ಆತ್ಮಿಕ ಪೋಷಣಾ ಕಾರ್ಯಕ್ರಮವು ಅಪಾಯಕ್ಕೊಳಗಾಗುತ್ತಿತ್ತು. ಇಂತಹ ಅನೇಕ ಅನುಭವಗಳು ನಮಗಾದವು. ನಮ್ಮ ಬೈಬಲ್ ವಾಚನವು ಸದಾ ರಹಸ್ಯವಾಗಿ ಮತ್ತು ಮಹಾ ಅಪಾಯ ಸಂಭವವುಳ್ಳದ್ದಾಗಿ ನಡೆಯುತ್ತಿತ್ತು. “ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ,” ಎಂಬ ಅಪೊಸ್ತಲ ಪೇತ್ರನ ಮಾತುಗಳು ನಿಶ್ಚಯವಾಗಿ ತೀರ ಸಮಂಜಸವಾಗಿದ್ದವು.—1 ಪೇತ್ರ 5:8.
ಯಾವುದೋ ಕಾರಣಕ್ಕಾಗಿ, ಅಧಿಕಾರಿಗಳು ನಮ್ಮಲ್ಲಿ ಕೆಲವರನ್ನು ಒಂದು ಕಾರಾಗೃಹದಿಂದ ಇನ್ನೊಂದಕ್ಕೆ ಪದೇ ಪದೇ ಸ್ಥಳಾಂತರಿಸಲು ನಿರ್ಣಯಿಸಿದರು. ನಾಲ್ಕು ವರ್ಷಗಳಲ್ಲಿ, ನಾನು ಸುಮಾರು ಹತ್ತು ವಿಭಿನ್ನ ಕಾರಾಗೃಹಗಳಿಗೆ ಸ್ಥಳಾಂತರಿಸಲ್ಪಟ್ಟೆ. ಆದರೂ, ನಾನು ಸಹೋದರರನ್ನು ಕಂಡುಹಿಡಿಯಲು ಸದಾ ಶಕ್ತನಾದೆ. ನಾನು ಈ ಸಹೋದರರನ್ನೆಲ್ಲ ಗಾಢವಾಗಿ ಪ್ರೀತಿಸಲು ಕಲಿತೆ ಮತ್ತು ನಾನು ಪ್ರತಿ ಬಾರಿ ಸ್ಥಳಾಂತರಿಸಲ್ಪಟ್ಟಾಗ ಅವರನ್ನು ಬಿಟ್ಟುಹೋದದ್ದು ನನ್ನ ಹೃದಯದಲ್ಲಿ ದುಃಖವಿದ್ದವನಾಗಿಯೆ.
ಅಂತಿಮವಾಗಿ ನನ್ನನ್ನು ಲೈಪ್ಸಿಗ್ಗೆ ಕಳುಹಿಸಲಾಗಿ, ಅಲ್ಲಿ ಸೆರೆಮನೆಯಿಂದ ನಾನು ಬಿಡುಗಡೆಹೊಂದಿದೆ. ನನ್ನನ್ನು ಬಿಡುಗಡೆಮಾಡಿದ ಕಾವಲುಗಾರನು ನನಗೆ ವಿದಾಯ ಹೇಳದೆ, “ನಾವು ಪುನಃ ಬೇಗನೆ ನಿನ್ನನ್ನು ನೋಡುವೆವು,” ಎಂದು ಹೇಳಿದ. ಅವನ ದುರ್ಮನಸ್ಸು, ನಾನು ಪುನಃ ಸೆರೆಮನೆಗೆ ಹೋಗಲು ಬಯಸಿತು. ನಾನು ಯಾವಾಗಲೂ, ಕೀರ್ತನೆ 124:2, 3ನ್ನು ನೆನಸುತ್ತೇನೆ. ಅಲ್ಲಿ ಹೇಳುವುದು: “ನರರು ನಮಗೆ ವಿರೋಧವಾಗಿ ಎದ್ದಾಗ ಯೆಹೋವನು ನಮಗಿಲ್ಲದಿದ್ದರೆ ನಿಶ್ಚಯವಾಗಿ ಅವರು ಕೋಪದಿಂದ ಉರಿಗೊಂಡು ನಮ್ಮನ್ನು ಜೀವಸಹಿತ ನುಂಗಿಬಿಡುತ್ತಿದ್ದರು.”
ಯೆಹೋವನು ತನ್ನ ನಿಷ್ಠ ಸೇವಕರನ್ನು ವಿಮೋಚಿಸುತ್ತಾನೆ
ಈಗ ನಾನು ಪುನಃ ಸ್ವತಂತ್ರನಾದೆ. ನನ್ನ ಅವಳಿ ಸೋದರಿ ರೂತ್ ಮತ್ತು ಸಹೋದರಿ ಹೆರ್ಟ ಶ್ಲೆನ್ಸೋಗ್ ಗೇಟಿನಲ್ಲಿ ನನಗಾಗಿ ಕಾಯುತ್ತಿದ್ದರು. ಆ ಸೆರೆಮನೆಯ ವರುಷಗಳಲ್ಲೆಲ್ಲ, ಹೆರ್ಟ ಪ್ರತಿ ತಿಂಗಳು ನನಗೊಂದು ಚಿಕ್ಕ ಆಹಾರ ತಿಂಡಿಗಳಿದ್ದ ಕಟ್ಟನ್ನು ಕಳುಹಿಸುತ್ತಿದ್ದರು. ಆ ಚಿಕ್ಕ ಕಟ್ಟುಗಳಿಲ್ಲದಿರುತ್ತಿದ್ದರೆ, ನಾನು ಸೆರೆಮನೆಯಲ್ಲಿ ಸಾಯುತ್ತಿದ್ದೆನೆಂದು ನಾನು ನಿಜವಾಗಿಯೂ ನಂಬುತ್ತೇನೆ. ಯೆಹೋವನು ಅವರನ್ನು ದಯಾಭಾವದಿಂದ ನೆನಪಿಸಿಕೊಳ್ಳಲಿ.
ನನ್ನ ಬಿಡುಗಡೆ ಮೊದಲ್ಗೊಂಡು, ಯೆಹೋವನು ಅನೇಕ ಸೇವಾ ಸುಯೋಗಗಳಿಂದ ನನ್ನನ್ನು ಆಶೀರ್ವದಿಸಿದ್ದಾನೆ. ನಾನು ಜರ್ಮನಿಯ ಗ್ರೋನಾವ್ನಲ್ಲಿ ಸ್ಪೆಷಲ್ ಪಯನೀಯರನಾಗಿ ಪುನಃ ಸೇವೆಮಾಡಿದೆ. ಜರ್ಮನ್ ಆಲ್ಪ್ಸ್ ಪ್ರದೇಶದಲ್ಲಿ ಸರ್ಕಿಟ್ ಮೇಲ್ವಿಚಾರಕನಾದೆ. ತರುವಾಯ ಮಿಷನೆರಿಗಳಿಗಾಗಿರುವ ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ 31ನೆಯ ಕ್ಲಾಸಿನಲ್ಲಿ ಸೇರಿಕೊಳ್ಳಲು ನನಗೆ ಕರೆ ಬಂತು. ನಮ್ಮ ಪದವಿಪ್ರದಾನವು 1958ರಲ್ಲಿ ಯಾಂಕಿ ಸ್ಟೇಡಿಯಮ್ನಲ್ಲಿ ನಡೆದ ಯೆಹೋವನ ಸಾಕ್ಷಿಗಳ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಾಯಿತು. ಸಹೋದರ ಸಹೋದರಿಯರ ದೊಡ್ಡ ಸಮೂಹವೊಂದನ್ನು ಸಂಬೋಧಿಸಿ, ನನಗಾದ ಕೆಲವು ಅನುಭವಗಳನ್ನು ಹೇಳುವ ಸುಯೋಗ ನನಗೆ ದೊರೆಯಿತು.
ಪದವಿಪ್ರದಾನದ ಅನಂತರ ನಾನು ಮಿಷನೆರಿಯಾಗಿ ಸೇವೆಮಾಡಲು ಚಿಲಿ ದೇಶಕ್ಕೆ ಪ್ರಯಾಣಿಸಿದೆ. ಅಲ್ಲಿ, ಚಿಲಿಯ ಅತಿ ದಕ್ಷಿಣ ಭಾಗದಲ್ಲಿ, ನಾನು ಪುನಃ ಸರ್ಕಿಟ್ ಮೇಲ್ವಿಚಾರಕನಾಗಿ ಸೇವೆಸಲ್ಲಿಸಿದೆ. ಹೀಗೆ ನನ್ನನ್ನು ಅಕ್ಷರಾರ್ಥವಾಗಿ ಭೂಮಿಯ ಕಟ್ಟಕಡೆಗೆ ಕಳುಹಿಸಲಾಯಿತು. 1962ರಲ್ಲಿ ನಾನು, ಅಮೆರಿಕದ ಟೆಕ್ಸಸ್ನ ಸ್ಯಾನ್ ಅಂಟೋನಿಯೊದ ಪ್ಯಾಟ್ಸೀ ಬೈಟ್ನಾಗ ಎಂಬ ಸುಂದರಿಯಾದ ಮಿಷನೆರಿಯನ್ನು ವಿವಾಹವಾದೆ. ಆಕೆಯೊಂದಿಗೆ ನಾನು ಯೆಹೋವನಿಗೆ ಅನೇಕ ವರ್ಷಗಳ ಆಶ್ಚರ್ಯಕರವಾದ ಸೇವೆಯಲ್ಲಿ ಸಂತೋಷಪಟ್ಟೆ.
ನನ್ನ 70ಕ್ಕೂ ಹೆಚ್ಚು ವರ್ಷಗಳ ಜೀವಮಾನದಲ್ಲಿ, ನಾನು ಅನೇಕ ಸಂತೋಷಕರವಾದ ಕ್ಷಣಗಳನ್ನೂ ಅನೇಕ ವಿಪತ್ತುಗಳನ್ನೂ ಅನುಭವಿಸಿದ್ದೇನೆ. ಕೀರ್ತನೆಗಾರನು ಹೇಳಿದ್ದು: “ನೀತಿವಂತನಿಗೆ ಸಂಭವಿಸುವ ಕಷ್ಟಗಳು ಅನೇಕವಿದ್ದರೂ ಯೆಹೋವನು ಅವೆಲ್ಲವುಗಳಿಂದ ಅವನನ್ನು ಬಿಡಿಸುತ್ತಾನೆ.” (ಕೀರ್ತನೆ 34:19) ನಾವಿನ್ನೂ ಚಿಲಿಯಲ್ಲಿದ್ದಾಗ, 1963ರಲ್ಲಿ, ಪ್ಯಾಟ್ಸೀ ಮತ್ತು ನಾನು ನಮ್ಮ ಹೆಣ್ಣು ಮಗುವಿನ ಮರಣದ ದುರಂತವನ್ನು ಅನುಭವಿಸಿದೆವು. ಆಬಳಿಕ, ಪ್ಯಾಟ್ಸೀ ತೀರ ಕಾಯಿಲೆ ಬಿದ್ದಾಗ, ನಾವು ಟೆಕ್ಸಸ್ಗೆ ಸ್ಥಳಾಂತರಿಸಿದೆವು. ಆಕೆ ಕೇವಲ 43 ವರ್ಷ ಪ್ರಾಯದವಳಾಗಿದ್ದಾಗ, ಆಕೆಯೂ ದುರಂತಕರವಾದ ಪರಿಸ್ಥಿತಿಗಳಲ್ಲಿ ತೀರಿಕೊಂಡಳು. ಯೆಹೋವನು ನನ್ನ ಪ್ರಿಯ ಪತ್ನಿಯನ್ನು ದಯೆಯಿಂದ ಜ್ಞಾಪಿಸಿಕೊಳ್ಳಲಿ ಎಂದು ನಾನು ಅನೇಕ ವೇಳೆ ಪ್ರಾರ್ಥಿಸುತ್ತೇನೆ.
ಈಗ, ಅನಾರೋಗ್ಯ ಮತ್ತು ವೃದ್ಧಾಪ್ಯದಿಂದ ಬಳಲಿದರೂ ನಾನು ಟೆಕ್ಸಸ್ನ ಬ್ರೇಡೀ ಸಭೆಯಲ್ಲಿ ಕ್ರಮದ ಪಯನೀಯರನೂ ಹಿರಿಯನೂ ಆಗಿ ಸೇವೆಮಾಡುತ್ತಿರುವ ಸುಯೋಗದಲ್ಲಿ ನಾನು ಆನಂದಿಸುತ್ತೇನೆ. ನನ್ನ ಜೀವನ ಸದಾ ಸುಲಭವಾಗಿರಲಿಲ್ಲವೆಂಬುದು ನಿಜ ಮತ್ತು ಎದುರಿಸಲು ಇತರ ಪರೀಕ್ಷೆಗಳು ಇನ್ನೂ ನನಗಿರಬಹುದು. ಆದರೂ, ಕೀರ್ತನೆಗಾರನಂತೆ ನಾನು ಹೀಗೆ ಹೇಳಬಲ್ಲೆ: “ದೇವರೇ, ನೀನು ಬಾಲ್ಯಾರಭ್ಯ ನನ್ನನ್ನು ಉಪದೇಶಿಸುತ್ತಾ ಬಂದಿದ್ದೀ; ನಾನು ನಿನ್ನ ಅದ್ಭುತಕೃತ್ಯಗಳನ್ನು ಇಂದಿನ ವರೆಗೂ ಪ್ರಚುರಪಡಿಸುತ್ತಿದ್ದೇನೆ.”—ಕೀರ್ತನೆ 71:17.
[ಪುಟ 23 ರಲ್ಲಿರುವ ಚಿತ್ರ]
(1) ಇಂದು ಒಬ್ಬ ಹಿರಿಯನೂ ಪಯನೀಯರನೂ ಆಗಿ ಸೇವೆಮಾಡುತ್ತಿರುವುದು, (2) ನಮ್ಮ ವಿವಾಹಕ್ಕೆ ತುಸು ಮೊದಲು, ಪ್ಯಾಟ್ಸೀಯೊಂದಿಗೆ, (3) ಶ್ರೀ. ಶ್ನೈಡರ್ ಅವರ ತರಗತಿಕೋಣೆಯಲ್ಲಿ, (4) ರಾವನ್ಸ್ಬ್ರೂಅಕ್ನಲ್ಲಿ ತೀರಿಕೊಂಡ ನನ್ನ ತಾಯಿ, ಟೆರೇಸಾ