ಯೆಹೋವನು ನಿಮ್ಮ ಪೂರ್ಣಪ್ರಾಣದ ಸೇವೆಯನ್ನು ಆದರದಿಂದ ಕಾಣುತ್ತಾನೆ
“ನೀವು ಏನು ಮಾಡುತ್ತಿರುವುದಾದರೂ, ಅದನ್ನು ಮನುಷ್ಯರಿಗಲ್ಲ, ಯೆಹೋವನಿಗೆ ಎಂಬಂತೆ ಪೂರ್ಣಪ್ರಾಣದಿಂದ ಮಾಡಿರಿ.”—ಕೊಲೊಸ್ಸೆ 3:23, NW.
1, 2. (ಎ) ನಮಗೆ ಇರಸಾಧ್ಯವಿರುವುದರಲ್ಲಿ ಅತ್ಯಂತ ಮಹಾ ಸುಯೋಗವು ಯಾವುದು? (ಬಿ) ದೇವರನ್ನು ಸೇವಿಸುವುದರಲ್ಲಿ ಮಾಡಬಯಸುವುದನ್ನೆಲ್ಲ ಕೆಲವೊಮ್ಮೆ ನಾವು ಏಕೆ ಮಾಡಶಕ್ತರಾಗದಿರಬಹುದು?
ಯೆಹೋವನನ್ನು ಸೇವಿಸುವುದು, ನಮಗೆ ಇರಸಾಧ್ಯವಿರುವುದರಲ್ಲೇ ಅತ್ಯಂತ ಮಹಾ ಸುಯೋಗವಾಗಿದೆ. ಸಕಾರಣದಿಂದಲೇ, ಈ ಪತ್ರಿಕೆಯು ದೀರ್ಘಕಾಲದಿಂದ ಕ್ರೈಸ್ತರು ಶುಶ್ರೂಷೆಯಲ್ಲಿ ತಮ್ಮನ್ನು ಮಗ್ನರಾಗಿಸಿಕೊಳ್ಳಬೇಕೆಂದು, ಸಾಧ್ಯವಿರುವಲ್ಲಿ “ಹೆಚ್ಚು ಪೂರ್ಣವಾಗಿ” (NW) ಸೇವಿಸಬೇಕೆಂದೂ ಪ್ರೋತ್ಸಾಹಿಸಿದೆ. (1 ಥೆಸಲೊನೀಕ 4:1) ಆದರೂ, ದೇವರನ್ನು ಸೇವಿಸುವುದರಲ್ಲಿ ನಮ್ಮ ಹೃದಯವು ಹಾತೊರೆಯುವುದನ್ನೆಲ್ಲ ನಾವು ಯಾವಾಗಲೂ ಮಾಡಲು ಸಮರ್ಥರಾಗುವುದಿಲ್ಲ. ಸುಮಾರು 40 ವರ್ಷಗಳ ಹಿಂದೆ ದೀಕ್ಷಾಸ್ನಾನ ಪಡೆದುಕೊಂಡ ಒಬ್ಬ ಅವಿವಾಹಿತೆ ಸಹೋದರಿ ವಿವರಿಸುವುದು: “ಪೂರ್ಣ ಸಮಯ ಉದ್ಯೋಗದಲ್ಲಿರಬೇಕಾದ ಪರಿಸ್ಥಿತಿಗಳು ನನ್ನವಾಗಿವೆ. . . . ಹೀಗೆ ಕೆಲಸ ಮಾಡುವುದರ ಕಾರಣವು, ಆಕರ್ಷಕ ಉಡುಪುಗಳನ್ನು ಕೊಳ್ಳಲಿಕ್ಕಾಗಲಿ, ದುಬಾರಿ ವೆಚ್ಚದ ನೌಕಾಯಾನಗಳಲ್ಲಿ ರಜಾದಿನಗಳನ್ನು ಕಳೆಯಲಿಕ್ಕಾಗಲಿ ಅಲ್ಲ, ಬದಲಾಗಿ ವೈದ್ಯಕೀಯ ಹಾಗೂ ದಂತಸಂಬಂಧವಾದ ಖರ್ಚುಗಳು ಕೂಡಿರುವ ಅಗತ್ಯ ವಿಷಯಗಳನ್ನು ನಿಭಾಯಿಸಲಿಕ್ಕಾಗಿಯೇ. ನಾನು ಮಿಕ್ಕಿ ಉಳಿದುದನ್ನು ಯೆಹೋವನಿಗೆ ಕೊಡುತ್ತಿದ್ದೇನೋ ಎಂಬ ಅನಿಸಿಕೆ ನನಗಾಗುತ್ತದೆ.”
2 ದೇವರಿಗಾಗಿ ನಮಗಿರುವ ಪ್ರೀತಿ, ಸಾರುವ ಕಾರ್ಯದಲ್ಲಿ ನಮಗೆ ಸಾಧ್ಯವಾಗುವಷ್ಟನ್ನು ಮಾಡುವರೆ ನಮ್ಮನ್ನು ಪ್ರೇರಿಸುತ್ತದೆ. ಆದರೆ ಜೀವನದ ಸನ್ನಿವೇಶಗಳು ಅನೇಕ ವೇಳೆ ನಾವು ಮಾಡಸಾಧ್ಯವಿರುವುದನ್ನು ಪರಿಮಿತಗೊಳಿಸುತ್ತವೆ. ಕೌಟುಂಬಿಕ ಹಂಗುಗಳೂ ಸೇರಿ, ಇತರ ಶಾಸ್ತ್ರೀಯ ಜವಾಬ್ದಾರಿಗಳನ್ನು ನೋಡಿಕೊಳ್ಳುವುದು, ನಮ್ಮ ಸಮಯ ಮತ್ತು ಶಕ್ತಿಯಲ್ಲಿ ಹೆಚ್ಚಿನದ್ದನ್ನು ಬಳಸಿಕೊಳ್ಳಬಹುದು. (1 ತಿಮೊಥೆಯ 5:4, 8) ಈ “ನಿಭಾಯಿಸಲು ಕಷ್ಟಕರವಾದ ಕಠಿನ ಕಾಲ”ಗಳಲ್ಲಿ (NW) ಜೀವನವು ಇನ್ನೂ ಹೆಚ್ಚು ಪಂಥಾಹ್ವಾನದಾಯಕವಾಗಿದೆ. (2 ತಿಮೊಥೆಯ 3:1) ನಾವು ಶುಶ್ರೂಷೆಯಲ್ಲಿ ಮಾಡಲು ಇಷ್ಟಪಡುವುದೆಲ್ಲವನ್ನೂ ಮಾಡಲು ಅಶಕ್ತರಾಗಿರುವಾಗ, ನಮ್ಮ ಹೃದಯವು ಸ್ವಲ್ಪ ಮಟ್ಟಿಗೆ ನಮ್ಮನ್ನು ಬಾಧಿಸಬಹುದು. ದೇವರು ನಮ್ಮ ಆರಾಧನೆಯನ್ನು ಮೆಚ್ಚುತ್ತಾನೊ ಇಲ್ಲವೊ ಎಂದು ನಾವು ಕುತೂಹಲಪಡಬಹುದು.
ಪೂರ್ಣಪ್ರಾಣದ ಸೇವೆಯ ಸೊಬಗು
3. ಯೆಹೋವನು ನಮ್ಮೆಲ್ಲರಿಂದ ಏನನ್ನು ಅಪೇಕ್ಷಿಸುತ್ತಾನೆ?
3 ಕೀರ್ತನೆ 103:14ರಲ್ಲಿ, ಯೆಹೋವನು “ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪು ಮಾಡಿಕೊಳ್ಳುತ್ತಾನೆ,” ಎಂದು ಬೈಬಲು ಹಾರ್ದಿಕವಾಗಿ ಆಶ್ವಾಸನೆ ನೀಡುತ್ತದೆ. ಬೇರೆ ಯಾರಿಗಿಂತಲೂ ಹೆಚ್ಚಾಗಿ ಆತನು ನಮ್ಮ ಪರಿಮಿತಿಗಳನ್ನು ಅರ್ಥಮಾಡಿಕೊಳ್ಳುತ್ತಾನೆ. ನಮಗೆ ಕೊಡಸಾಧ್ಯವಿರುವುದಕ್ಕಿಂತ ಹೆಚ್ಚಿನದ್ದನ್ನು ಆತನು ನಮ್ಮಿಂದ ಅಪೇಕ್ಷಿಸುವುದಿಲ್ಲ. ಆತನು ಏನನ್ನು ಅಪೇಕ್ಷಿಸುತ್ತಾನೆ? ತನ್ನ ಜೀವನದ ಸ್ಥಿತಿಗತಿ ಏನೇ ಇರಲಿ, ಪ್ರತಿಯೊಬ್ಬನಿಗೆ ಏನು ಕೊಡಸಾಧ್ಯವಿದೆಯೊ ಅದನ್ನೇ: “ನೀವು ಏನು ಮಾಡುತ್ತಿರುವುದಾದರೂ, ಅದನ್ನು ಮನುಷ್ಯರಿಗಲ್ಲ, ಯೆಹೋವನಿಗೆ ಎಂಬಂತೆ ಪೂರ್ಣಪ್ರಾಣದಿಂದ ಮಾಡಿರಿ.” (ಕೊಲೊಸ್ಸೆ 3:23, NW) ಹೌದು ನಾವು—ನಾವೆಲ್ಲರೂ—ಆತನನ್ನು ಪೂರ್ಣಪ್ರಾಣದಿಂದ ಸೇವಿಸಬೇಕೆಂದು ಯೆಹೋವನು ಅಪೇಕ್ಷಿಸುತ್ತಾನೆ.
4. ಪೂರ್ಣಪ್ರಾಣದಿಂದ ಯೆಹೋವನನ್ನು ಸೇವಿಸುವುದರ ಅರ್ಥವೇನು?
4 ಯೆಹೋವನನ್ನು ಪೂರ್ಣಪ್ರಾಣದಿಂದ ಸೇವಿಸುವುದರ ಅರ್ಥವೇನು? “ಪೂರ್ಣಪ್ರಾಣ”ವೆಂದು ಭಾಷಾಂತರಿಸಲಾಗಿರುವ ಗ್ರೀಕ್ ಪದ ಅಕ್ಷರಶಃ “ಪ್ರಾಣದಿಂದ” ಎಂಬ ಅರ್ಥವನ್ನು ಕೊಡುತ್ತದೆ. ಒಬ್ಬನ ಶಾರೀರಿಕ ಮತ್ತು ಮಾನಸಿಕ ಸಾಮರ್ಥ್ಯಗಳೊಂದಿಗೆ, ಒಬ್ಬ ಇಡೀ ವ್ಯಕ್ತಿಯನ್ನು “ಪ್ರಾಣವು” ಸೂಚಿಸುತ್ತದೆ. ಹೀಗೆ ಪೂರ್ಣಪ್ರಾಣದಿಂದ ಸೇವಿಸುವುದರ ಅರ್ಥವು, ನಮ್ಮ ಮನಶ್ಶಕ್ತಿಯನ್ನೆಲ್ಲ ಉಪಯೋಗಿಸಿ, ದೇವರ ಸೇವೆಯಲ್ಲಿ ನಮ್ಮ ಶಕ್ತಿಗಳನ್ನು ಸಾಧ್ಯವಿರುವಷ್ಟರ ಮಟ್ಟಿಗೆ ನಿರ್ದೇಶಿಸುತ್ತ ನಮ್ಮನ್ನು ಕೊಟ್ಟುಕೊಳ್ಳುವುದೇ ಆಗಿದೆ. ಸರಳವಾಗಿ ಹೇಳುವಲ್ಲಿ, ನಮ್ಮ ಪ್ರಾಣಕ್ಕೆ ಮಾಡಸಾಧ್ಯವಿರುವುದನ್ನೆಲ್ಲ ಮಾಡುವುದು ಎಂದು ಇದರ ಅರ್ಥ.—ಮಾರ್ಕ 12:29, 30.
5. ಶುಶ್ರೂಷೆಯಲ್ಲಿ ಎಲ್ಲರೂ ಒಂದೇ ಪ್ರಮಾಣದಲ್ಲಿ ಮಾಡುವುದಿಲ್ಲವೆಂದು ಅಪೊಸ್ತಲರ ಮಾದರಿ ಹೇಗೆ ತೋರಿಸುತ್ತದೆ?
5 ಪೂರ್ಣಪ್ರಾಣದವರಾಗಿರುವುದೆಂದರೆ, ಶುಶ್ರೂಷೆಯಲ್ಲಿ ಎಲ್ಲರೂ ಒಂದೇ ಮೊತ್ತವನ್ನು ಮಾಡಬೇಕೆಂಬ ಅರ್ಥವೊ? ಅದು ಹೆಚ್ಚುಕಡಮೆ ಅಸಂಭವ, ಏಕೆಂದರೆ ಪರಿಸ್ಥಿತಿಗಳೂ ಸಾಮರ್ಥ್ಯಗಳೂ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ. ಯೇಸುವಿನ ನಂಬಿಗಸ್ತ ಅಪೊಸ್ತಲರನ್ನು ಪರ್ಯಾಲೋಚಿಸಿರಿ. ಅವರೆಲ್ಲರೂ ಒಂದೇ ಮೊತ್ತದ ಕೆಲಸವನ್ನು ಮಾಡಶಕ್ತರಾಗಿರಲಿಲ್ಲ. ಉದಾಹರಣೆಗೆ, ಮತಾಭಿಮಾನಿ ಸೀಮೋನ ಮತ್ತು ಅಲ್ಫಾಯನ ಮಗನಾದ ಯಾಕೋಬನಂತಹ ಕೆಲವು ಮಂದಿ ಅಪೊಸ್ತಲರ ಕುರಿತು ನಮಗೆ ಕೊಂಚವೇ ತಿಳಿದದೆ. ಪ್ರಾಯಶಃ, ಅಪೊಸ್ತಲರೋಪಾದಿ ಅವರ ಚಟುವಟಿಕೆಗಳು ತುಸು ಸೀಮಿತವಾಗಿದ್ದವು. (ಮತ್ತಾಯ 10:2-4) ವ್ಯತಿರಿಕ್ತವಾಗಿ, ಪೇತ್ರನಿಗೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಲು ಸಾಧ್ಯವಾಯಿತು—ಅಷ್ಟೇಕೆ, ಯೇಸು ಅವನಿಗೆ “ಪರಲೋಕರಾಜ್ಯದ ಬೀಗದ ಕೈಗಳನ್ನು” ಸಹ ಕೊಟ್ಟನು! (ಮತ್ತಾಯ 16:19) ಆದರೂ, ಪೇತ್ರನು ಇತರರಿಗಿಂತ ಶ್ರೇಷ್ಠಸ್ಥಾನಕ್ಕೆ ಎತ್ತಲ್ಪಡಲಿಲ್ಲ. (ಸುಮಾರು ಸಾ.ಶ. 96) ಪ್ರಕಟನೆಯಲ್ಲಿ ಯೋಹಾನನು ನೂತನ ಯೆರೂಸಲೇಮಿನ ದರ್ಶನವನ್ನು ಪಡೆದಾಗ, ಅವನು 12 ಅಸ್ತಿವಾರದ ಕಲ್ಲುಗಳನ್ನು ಮತ್ತು ಅವುಗಳ ಮೇಲೆ “ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳು” ಕೆತ್ತಲ್ಪಟ್ಟಿರುವುದನ್ನು ಕಂಡನು.a (ಪ್ರಕಟನೆ 21:14) ಯೆಹೋವನು ಎಲ್ಲ ಅಪೊಸ್ತಲರ ಸೇವೆಯನ್ನು—ಕೆಲವರು ಇತರರಿಗಿಂತ ಹೆಚ್ಚು ಮಾಡಶಕ್ತರಾಗಿದ್ದರೆಂದು ವ್ಯಕ್ತವಾಗುತ್ತದಾದರೂ—ಅಮೂಲ್ಯವೆಂದೆಣಿಸಿದನು.
6. ಬಿತ್ತುವವನ ಕುರಿತ ಯೇಸುವಿನ ದೃಷ್ಟಾಂತದಲ್ಲಿ, “ಒಳ್ಳೇ ನೆಲ”ದ ಮೇಲೆ ಬಿತ್ತಿದ ಬೀಜಕ್ಕೆ ಏನು ಸಂಭವಿಸುತ್ತದೆ, ಮತ್ತು ಯಾವ ಪ್ರಶ್ನೆಗಳೇಳುತ್ತವೆ?
6 ತದ್ರೀತಿಯಲ್ಲಿ, ಯೆಹೋವನು ನಮ್ಮೆಲ್ಲರಿಂದ ಒಂದೇ ಮೊತ್ತದ ಸಾರುವಿಕೆಯನ್ನು ಅವಶ್ಯವಾಗಿ ಕೇಳುವುದಿಲ್ಲ. ಸಾರುವ ಕಾರ್ಯವನ್ನು ಬೀಜ ಬಿತ್ತುವುದಕ್ಕೆ ಹೋಲಿಸಿದ ಬಿತ್ತುವವನ ದೃಷ್ಟಾಂತದಲ್ಲಿ ಯೇಸು ಇದನ್ನು ಸೂಚಿಸಿದನು. ಬೀಜವು ವಿವಿಧ ರೀತಿಗಳ ಮಣ್ಣಿನ ಮೇಲೆ ಬಿತ್ತು. ಸಂದೇಶವನ್ನು ಕೇಳುವವರು ತೋರಿಸುವ ವಿವಿಧ ವಿಧಗಳ ಹೃದಯ ಸ್ಥಿತಿಗಳನ್ನು ಇದು ಚಿತ್ರಿಸಿತು. ಯೇಸು ವಿವರಿಸಿದ್ದು: “ಒಬ್ಬನು ವಾಕ್ಯವನ್ನು ಕೇಳಿ ತಿಳುಕೊಂಡು ಫಲವಂತನಾಗಿ ನೂರರಷ್ಟಾಗಲಿ ಅರವತ್ತರಷ್ಟಾಗಲಿ ಮೂವತ್ತರಷ್ಟಾಗಲಿ ಫಲವನ್ನು ಕೊಡುತ್ತಾನೆ; ಇವನೇ ಒಳ್ಳೆಯ ನೆಲವಾಗಿರುವವನು.” (ಮತ್ತಾಯ 13:3-8, 18-23) ಈ ಫಲವೇನು ಮತ್ತು ಅದು ವಿವಿಧ ಮೊತ್ತಗಳಲ್ಲಿ ಉತ್ಪಾದಿಸಲ್ಪಡುತ್ತದೆ ಏಕೆ?
7. ಬಿತ್ತಿದ ಬೀಜದ ಫಲವು ಏನು, ಮತ್ತು ಅದು ವಿವಿಧ ಮೊತ್ತಗಳಲ್ಲಿ ಏಕೆ ಉತ್ಪಾದಿಸಲ್ಪಡುತ್ತದೆ?
7 ಬಿತ್ತುವ ಜೀಜವು “ಪರಲೋಕರಾಜ್ಯದ ವಾಕ್ಯ”ವಾಗಿರುವುದರಿಂದ, ಫಲ ಬಿಡುವಿಕೆಯು ಆ ವಾಕ್ಯವನ್ನು ಹಬ್ಬಿಸುವುದನ್ನು, ಅದನ್ನು ಇತರರಿಗೆ ಹೇಳುವುದನ್ನು ಸೂಚಿಸುತ್ತದೆ. (ಮತ್ತಾಯ 13:19) ಬಿಡುವ ಫಲದ ಮೊತ್ತವು ಮೂವತ್ತರಷ್ಟರಿಂದ ನೂರರಷ್ಟರ ತನಕ ವ್ಯತ್ಯಾಸವುಳ್ಳದ್ದಾಗಿದೆ. ಏಕೆಂದರೆ ಜೀವನದಲ್ಲಿನ ಸಾಮರ್ಥ್ಯಗಳೂ ಪರಿಸ್ಥಿತಿಗಳೂ ವ್ಯತ್ಯಾಸವುಳ್ಳವುಗಳಾಗಿವೆ. ಒಳ್ಳೆಯ ಆರೋಗ್ಯ ಮತ್ತು ಶಾರೀರಿಕ ಶಕ್ತಿಯಿರುವ ಒಬ್ಬ ವ್ಯಕ್ತಿಗೆ, ಅಸ್ಥಿಗತ ಅನಾರೋಗ್ಯದ ಅಥವಾ ವೃದ್ಧಾಪ್ಯದಿಂದ ಶಕ್ತಿಯನ್ನು ಕಳೆದುಕೊಂಡ ಒಬ್ಬನಿಗಿಂತ ಸಾರುವ ಕೆಲಸದಲ್ಲಿ ಹೆಚ್ಚು ಸಮಯವನ್ನು ವ್ಯಯಿಸಲು ಸಾಧ್ಯವಾದೀತು. ಕುಟುಂಬ ಜವಾಬ್ದಾರಿಗಳಿಲ್ಲದ ಒಬ್ಬ ಯುವ ಅವಿವಾಹಿತನು, ಕುಟುಂಬಕ್ಕೆ ಒದಗಿಸಲಿಕ್ಕಾಗಿ ಪೂರ್ಣ ಸಮಯ ಕೆಲಸಮಾಡಬೇಕಾಗಿರುವ ಒಬ್ಬನಿಗಿಂತ ಹೆಚ್ಚು ಕೆಲಸ ಮಾಡಬಹುದು.—ಜ್ಞಾನೋಕ್ತಿ 20:29ನ್ನು ಹೋಲಿಸಿ.
8. ತಮ್ಮ ಪ್ರಾಣಕ್ಕೆ ಕೊಡಸಾಧ್ಯವಿರುವುದರಲ್ಲಿ ಅತ್ಯುತ್ತಮವಾದುದನ್ನು ಕೊಡುವವರನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೆ?
8 ದೇವರ ದೃಷ್ಟಿಯಲ್ಲಿ, ಮೂವತ್ತರಷ್ಟು ಫಲಕೊಡುವ ಪೂರ್ಣಪ್ರಾಣದ ವ್ಯಕ್ತಿಯು, ನೂರರಷ್ಟು ಫಲಕೊಡುವವನಿಗಿಂತ ಕಡಮೆ ನಂಬಿಗಸ್ತನೊ? ನಿಶ್ಚಯವಾಗಿಯೂ ಇಲ್ಲ! ಕೊಡುವ ಫಲದ ಮೊತ್ತದಲ್ಲಿ ವ್ಯತ್ಯಾಸವಿದ್ದೀತು, ಆದರೆ ಕೊಡಲ್ಪಡುವ ಸೇವೆಯು, ನಮ್ಮ ಪ್ರಾಣವು ಕೊಡಸಾಧ್ಯವಿರುವುದರಲ್ಲಿ ಅತ್ಯುತ್ತಮವಾಗಿರುವಲ್ಲಿ ಯೆಹೋವನು ಮೆಚ್ಚುತ್ತಾನೆ. ಫಲದಲ್ಲಿನ ವಿವಿಧ ಮೊತ್ತಗಳೆಲ್ಲ “ಒಳ್ಳೆಯ ನೆಲ”ವಾದ ಹೃದಯಗಳಿಂದ ಬರುತ್ತವೆಂಬುದನ್ನು ನೆನಪಿನಲ್ಲಿಡಿರಿ. “ಒಳ್ಳೆಯ” ಎಂದು ಭಾಷಾಂತರಗೊಂಡಿರುವ ಗ್ರೀಕ್ ಪದ (ಕಾಲೊಸ್), “ಸೊಬಗು” ಆಗಿರುವ ಮತ್ತು “ಹೃದಯವನ್ನು ಹರ್ಷಿಸಿ ಕಣ್ಣುಗಳಿಗೆ ಆನಂದವನ್ನು ಕೊಡುವ” ವಿಷಯವನ್ನು ವರ್ಣಿಸುತ್ತದೆ. ನಾವು ನಮ್ಮ ಅತ್ಯುತ್ತಮವಾದುದನ್ನು ಮಾಡುವಾಗ, ದೇವರ ದೃಷ್ಟಿಯಲ್ಲಿ ನಮ್ಮ ಹೃದಯವು ಸೊಬಗುಳ್ಳದ್ದಾಗಿದೆಯೆಂದು ತಿಳಿಯುವುದು ಅದೆಷ್ಟು ಸಾಂತ್ವನದಾಯಕ!
ಒಬ್ಬರೊಂದಿಗೊಬ್ಬರು ಹೋಲಿಸಲ್ಪಡುವುದಿಲ್ಲ
9, 10. (ಎ) ನಮ್ಮ ಹೃದಯವು ನಮ್ಮನ್ನು ಯಾವ ನಕಾರಾತ್ಮಕ ತರ್ಕಕ್ಕೆ ನಡೆಸಬಹುದು? (ಬಿ) ನಾವು ಏನು ಮಾಡುತ್ತೇವೊ ಅದರಲ್ಲಿ ಯೆಹೋವನು ನಮ್ಮನ್ನು ಇತರರಿಗೆ ಹೋಲಿಸುವುದಿಲ್ಲವೆಂಬುದನ್ನು 1 ಕೊರಿಂಥ 12:14-26 ಹೇಗೆ ತೋರಿಸುತ್ತದೆ?
9 ಆದರೂ, ನಮ್ಮ ಅಪರಿಪೂರ್ಣ ಹೃದಯವು ವಿಷಯಗಳನ್ನು ಭಿನ್ನವಾಗಿ ಅಂದಾಜುಮಾಡಬಹುದು. ಅದು ನಮ್ಮ ಸೇವೆಯನ್ನು ಇತರರ ಸೇವೆಯೊಂದಿಗೆ ಹೋಲಿಸಬಹುದು. ‘ಇತರರು ಶುಶ್ರೂಷೆಯಲ್ಲಿ ನನಗಿಂತ ಎಷ್ಟೋ ಹೆಚ್ಚನ್ನು ಮಾಡುತ್ತಾರೆ. ಯೆಹೋವನು ನನ್ನ ಸೇವೆಯನ್ನು ಮೆಚ್ಚಸಾಧ್ಯವಿರುವುದಾದರೂ ಹೇಗೆ?’ ಎಂದು ಅದು ತರ್ಕಿಸಬಹುದು.—ಹೋಲಿಸಿ 1 ಯೋಹಾನ 3:19, 20.
10 ಯೆಹೋವನ ಆಲೋಚನೆಗಳೂ ಮಾರ್ಗಗಳೂ ನಮ್ಮ ಸ್ವಂತದ್ದಕ್ಕಿಂತ ಎಷ್ಟೋ ಹೆಚ್ಚು ಉನ್ನತವಾಗಿವೆ. (ಯೆಶಾಯ 55:9) ಯೆಹೋವನು ನಮ್ಮ ವೈಯಕ್ತಿಕ ಪ್ರಯತ್ನಗಳನ್ನು ಹೇಗೆ ವೀಕ್ಷಿಸುತ್ತಾನೆಂಬುದರ ತುಸು ಒಳನೋಟವನ್ನು ನಾವು 1 ಕೊರಿಂಥ 12:14-26ರಲ್ಲಿ ಪಡೆಯುತ್ತೇವೆ. ಅಲ್ಲಿ ಸಭೆಯು, ಅನೇಕ ಅಂಗಗಳು—ಕಣ್ಣುಗಳು, ಕೈಗಳು, ಪಾದಗಳು, ಕಿವಿಗಳು, ಇತ್ಯಾದಿ—ಇರುವ ಶರೀರವೊಂದಕ್ಕೆ ಹೋಲಿಸಲ್ಪಡುತ್ತದೆ. ಒಂದು ಕ್ಷಣ, ಒಂದು ಅಕ್ಷರಶಃ ದೇಹದ ಕುರಿತು ಪರ್ಯಾಲೋಚಿಸಿರಿ. ನಿಮ್ಮ ಕಣ್ಣುಗಳನ್ನು ಕೈಗಳೊಂದಿಗೆ ಅಥವಾ ಪಾದಗಳನ್ನು ಕಿವಿಗಳೊಂದಿಗೆ ಸರಿಹೋಲಿಸುವುದು ಎಷ್ಟು ಹಾಸ್ಯಾಸ್ಪದ! ಪ್ರತಿಯೊಂದು ಅಂಗವು ವಿಭಿನ್ನ ಕಾರ್ಯವನ್ನು ಮಾಡುತ್ತದಾದರೂ ಎಲ್ಲ ಅಂಗಗಳೂ ಉಪಯುಕ್ತವಾಗಿದ್ದು, ಬೆಲೆಯುಳ್ಳವುಗಳಾಗಿವೆ. ತದ್ರೀತಿ, ಯೆಹೋವನು ನಿಮ್ಮ ಪೂರ್ಣಪ್ರಾಣದ ಸೇವೆಯನ್ನು—ಇತರರು ಹೆಚ್ಚನ್ನೇ ಮಾಡುತ್ತಿರಲಿ ಅಥವಾ ಕಡಮೆಯನ್ನೇ ಮಾಡುತ್ತಿರಲಿ—ಆದರದಿಂದ ಕಾಣುತ್ತಾನೆ.—ಗಲಾತ್ಯ 6:4.
11, 12. (ಎ) ತಾವು “ಅಲ್ಪಬಲವುಳ್ಳ”ವರು ಅಥವಾ “ಅಲ್ಪಮಾನವುಳ್ಳ”ವರು ಎಂದು ಕೆಲವರಿಗೆ ಏಕೆ ಅನಿಸಬಹುದು? (ಬಿ) ಯೆಹೋವನು ನಮ್ಮ ಸೇವೆಯನ್ನು ಹೇಗೆ ವೀಕ್ಷಿಸುತ್ತಾನೆ?
11 ನ್ಯೂನಾರೋಗ್ಯ, ವೃದ್ಧಾಪ್ಯ ಅಥವಾ ಇತರ ಪರಿಸ್ಥಿತಿಗಳು ಹಾಕುವ ಮಿತಿಗಳಿಂದಾಗಿ, ಕೆಲವೊಮ್ಮೆ ನಮ್ಮಲ್ಲಿ ಕೆಲವರು ತಾವು “ಅಲ್ಪಬಲವುಳ್ಳ” ಅಥವಾ “ಅಲ್ಪಮಾನವುಳ್ಳ” ವ್ಯಕ್ತಿಗಳೆಂದು ಎಣಿಸಬಹುದು. ಆದರೆ ಯೆಹೋವನು ವಿಷಯಗಳನ್ನು ಹಾಗೆ ವೀಕ್ಷಿಸುವುದಿಲ್ಲ. ಬೈಬಲು ನಮಗನ್ನುವುದು: “ದೇಹದಲ್ಲಿ ಅಲ್ಪಬಲವುಳ್ಳವುಗಳಾಗಿ ಕಾಣುವ ಅಂಗಗಳನ್ನು ಅತ್ಯವಶ್ಯವೆಂದು ತಿಳಿಯಬೇಕಲ್ಲವೋ? ಮತ್ತು ನಾವು ದೇಹದಲ್ಲಿ ಅಲ್ಪಮಾನವುಳ್ಳವುಗಳೆಂದೆಣಿಸುವ ಭಾಗಗಳಿಗೆ ಉಡಿಗೆಯಿಂದ ಹೆಚ್ಚಾದ ಮಾನವನ್ನು ಕೊಡುವದುಂಟಲ್ಲಾ; . . . ದೇವರು ಕೊರತೆಯಳ್ಳದ್ದಕ್ಕೆ ಹೆಚ್ಚಾದ ಮಾನವನ್ನು ಕೊಟ್ಟು ದೇಹವನ್ನು ಹದವಾಗಿ ಕೂಡಿಸಿದ್ದಾನೆ.” (1 ಕೊರಿಂಥ 12:22-24) ಹೀಗೆ ಪ್ರತಿಯೊಬ್ಬ ವ್ಯಕ್ತಿ ಯೆಹೋವನಿಗೆ ಪ್ರಿಯನಾಗಿರಸಾಧ್ಯವಿದೆ. ನಮ್ಮ ಪರಿಮಿತಿಗಳೊಳಗೆ ಆತನು ನಮ್ಮ ಸೇವೆಯನ್ನು ಅಮೂಲ್ಯವೆಂದೆಣಿಸುತ್ತಾನೆ. ಇಂತಹ ಗ್ರಹಿಕೆಯ ಮತ್ತು ಪ್ರೀತಿಸುವ ದೇವರನ್ನು ಸೇವಿಸುವುದರಲ್ಲಿ ನಿಮಗೆ ಸಾಧ್ಯವಿರುವುದನ್ನೆಲ್ಲ ಮಾಡುವಂತೆ ನಿಮ್ಮ ಹೃದಯವು ನಿಮ್ಮನ್ನು ಪ್ರೇರಿಸುವುದಿಲ್ಲವೊ?
12 ಹಾಗಾದರೆ, ಯೆಹೋವನಿಗೆ ಪ್ರಾಮುಖ್ಯವಾಗಿರುವ ವಿಷಯವು, ನೀವು ಬೇರೊಬ್ಬನಷ್ಟೇ ಸೇವೆ ಮಾಡುತ್ತೀರೊ ಇಲ್ಲವೊ ಎಂಬುದಲ್ಲ, ನೀವು—ನಿಮ್ಮ ಪ್ರಾಣ—ಖುದ್ದಾಗಿ ಮಾಡಸಾಧ್ಯವಿರುವುದನ್ನು ನೀವು ಮಾಡುತ್ತೀರೊ ಇಲ್ಲವೊ ಎಂಬುದಾಗಿದೆ. ನಮ್ಮ ವೈಯಕ್ತಿಕ ಪ್ರಯತ್ನಗಳನ್ನು ಯೆಹೋವನು ಬೆಲೆಯುಳ್ಳದ್ದಾಗಿ ಕಾಣುತ್ತಾನೆಂಬುದು, ಯೇಸು ತನ್ನ ಭೂಜೀವಿತದ ಕೊನೆಯ ದಿನಗಳಲ್ಲಿ, ತೀರ ಭಿನ್ನರಾಗಿದ್ದ ಇಬ್ಬರು ಸ್ತ್ರೀಯರೊಂದಿಗೆ ವ್ಯವಹರಿಸಿದುದರಲ್ಲಿ ತೀರ ಹೃದಯಸ್ಪರ್ಶಿಸುವ ರೀತಿಯಲ್ಲಿ ಪ್ರದರ್ಶಿಸಲ್ಪಟ್ಟಿತು.
ಕೃತಜ್ಞ ಸ್ತ್ರೀಯೊಬ್ಬಳಿಂದ “ಬಹು ಬೆಲೆ”ಯುಳ್ಳ ಕೊಡುಗೆ
13. (ಎ) ಮರಿಯಳು ಯೇಸುವಿನ ತಲೆ ಮತ್ತು ಪಾದಗಳ ಮೇಲೆ ಸುಗಂಧ ತೈಲವನ್ನು ಹಚ್ಚಿದಾಗ, ಸುತ್ತಲಿನ ಸನ್ನಿವೇಶಗಳೇನಾಗಿದ್ದವು? (ಬಿ) ಮರಿಯಳ ತೈಲದ ಲೌಕಿಕ ಬೆಲೆಯೇನಾಗಿತ್ತು?
13 ನೈಸಾನ್ 8ನೆಯ ಶುಕ್ರವಾರ ಸಂಜೆ ಯೇಸು ಬೇಥಾನ್ಯಕ್ಕೆ ಬಂದನು. ಈ ಚಿಕ್ಕ ಹಳ್ಳಿಯು ಎಣ್ಣೆಯ ಮರಗಳ ಗುಡ್ಡದ ಪೂರ್ವ ತಪ್ಪಲಲ್ಲಿ, ಯೆರೂಸಲೇಮಿನಿಂದ ಸುಮಾರು ಮೂರು ಕಿಲೊಮೀಟರುಗಳಷ್ಟು ದೂರದಲ್ಲಿತ್ತು. ಯೇಸುವಿಗೆ ಈ ಪಟ್ಟಣದಲ್ಲಿ ಪ್ರಿಯ ಮಿತ್ರರು—ಮರಿಯ, ಮಾರ್ಥ ಮತ್ತು ಅವರ ಸೋದರ ಲಾಜರ—ಇದ್ದರು. ಯೇಸು ಅವರ ಮನೆಯಲ್ಲಿ ಪ್ರಾಯಶಃ ಪದೇ ಪದೇ ಅತಿಥಿಯಾಗಿದ್ದನು. ಆದರೆ ಶನಿವಾರ ಸಂಜೆ ಯೇಸು ಮತ್ತು ಅವನ ಮಿತ್ರರು, ಹಿಂದೆ ಕುಷ್ಠರೋಗಿಯಾಗಿದ್ದು ಪ್ರಾಯಶಃ ಯೇಸುವಿನಿಂದ ಗುಣಹೊಂದಿದ್ದ ಸೀಮೋನನ ಮನೆಯಲ್ಲಿ ಊಟಮಾಡಿದರು. ಅವನು ಮೇಜಿಗೆ ಒರಗಿಕೊಂಡಿದ್ದಾಗ, ಮರಿಯಳು ತನ್ನ ಸೋದರನನ್ನು ಪುನರುತ್ಥಾನಗೊಳಿಸಿದ್ದ ಮನುಷ್ಯನಿಗೆ ತನ್ನ ಗಾಢವಾದ ಪ್ರೀತಿಯನ್ನು ತೋರಿಸಿದ ಒಂದು ವಿನೀತ ಭಾವಾಭಿನಯವನ್ನು ಪ್ರದರ್ಶಿಸಿದಳು. “ಬಹು ಬೆಲೆಯುಳ್ಳ” ಸುಗಂಧ ತೈಲವಿದ್ದ ಭರಣಿಯೊಂದನ್ನು ಆಕೆ ಒಡೆದು ತೆರೆದಳು. ಖಂಡಿತವಾಗಿಯೂ ಬಹಳ ಬೆಲೆಯುಳ್ಳದ್ದಾಗಿತ್ತು! ಅದರ ಬೆಲೆ ಒಂದು ವರ್ಷದ ಸಂಬಳಕ್ಕೆ ಸಮಾನವಾಗಿದ್ದ 300 ದಿನಾರುಗಳಾಗಿತ್ತು. ಆಕೆ ಈ ಸುಗಂಧ ತೈಲವನ್ನು ಯೇಸುವಿನ ತಲೆ ಮತ್ತು ಪಾದಗಳ ಮೇಲೆ ಸುರಿದಳು. ತನ್ನ ಕೇಶದಿಂದ ಅವನ ಪಾದಗಳನ್ನು ಸಹ ಒರಸಿದಳು.—ಮಾರ್ಕ 14:3; ಲೂಕ 10:38-42; ಯೋಹಾನ 11:38-44; 12:1-3.
14. (ಎ) ಮರಿಯಳ ಭಾವಾಭಿನಯಕ್ಕೆ ಶಿಷ್ಯರು ಹೇಗೆ ಪ್ರತಿವರ್ತಿಸಿದರು? (ಬಿ) ಯೇಸು ಮರಿಯಳ ಸಹಾಯಕ್ಕೆ ಹೇಗೆ ಬಂದನು?
14 ಶಿಷ್ಯರು ಸಿಟ್ಟಿಗೆದ್ದರು! ‘ಈ ಅಪವ್ಯಯವೇಕೆ?’ ಎಂದರವರು. ತನ್ನ ಕದಿಯುವ ಹೇತುವನ್ನು ಬಡವರಿಗೆ ಮಾಡುವ ಸಹಾಯದ ಸೂಚನೆಯ ಹಿಂದೆ ಮರೆಮಾಡುತ್ತ ಯೂದನು, “ಇದನ್ನು ಮುನ್ನೂರು ಹಣಕ್ಕಿಂತ ಹೆಚ್ಚು ಬೆಲೆಗೆ ಮಾರಿ ಬಡವರಿಗೆ ಕೊಡಬಹುದಾಗಿತ್ತಲ್ಲಾ” ಎಂದು ಹೇಳಿದನು. ಮರಿಯಳಾದರೊ ಸುಮ್ಮನಿದ್ದಳು. ಆದರೆ ಯೇಸು ಶಿಷ್ಯರಿಗೆ ಹೇಳಿದ್ದು: “ಈಕೆಯನ್ನು ಬಿಡಿರಿ. ಈಕೆಗೆ ಯಾಕೆ ತೊಂದರೆಕೊಡುತ್ತೀರಿ? ಈಕೆ ನನಗೆ ಒಳ್ಳೆಯ [ಕಾಲೋಸ್ನ ಒಂದು ರೂಪ] ಕಾರ್ಯವನ್ನು ಮಾಡಿದ್ದಾಳೆ. . . . ಈಕೆಯು ತನ್ನ ಕೈಲಾಗುವಷ್ಟು ಮಾಡಿದ್ದಾಳೆ; ಈಕೆಯು ಮುಂದಾಗಿ ನನ್ನ ಉತ್ತರಕ್ರಿಯೆಗೋಸ್ಕರ ನನ್ನ ದೇಹಕ್ಕೆ ಈ ತೈಲವನ್ನು ಹಚ್ಚಿದ್ದಾಳೆ. ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲೆಲ್ಲಿ ಸಾರಲಾಗುವದೋ ಅಲ್ಲಲ್ಲಿ ಈಕೆ ಮಾಡಿದ್ದನ್ನು ಸಹ ಈಕೆಯ ನೆನಪಿಗಾಗಿ ಹೇಳುವರೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.” ಯೇಸುವಿನ ಮಾತುಗಳ ಹಾರ್ದಿಕತೆಯು ಮರಿಯಳ ಹೃದಯವನ್ನು ಎಷ್ಟು ಶಾಂತಗೊಳಿಸಿದ್ದಿರಬೇಕು!—ಮಾರ್ಕ 14:4-9; ಯೋಹಾನ 12:4-8.
15. ಮರಿಯಳು ಮಾಡಿದ್ದ ವಿಷಯದಿಂದ ಯೇಸು ಅಷ್ಟು ಮನತಟ್ಟಿದವನಾದದ್ದೇಕೆ, ಮತ್ತು ಇದರಿಂದ ನಾವು ಪೂರ್ಣಪ್ರಾಣದ ಸೇವೆಯ ಕುರಿತು ಏನನ್ನು ಕಲಿಯುತ್ತೇವೆ?
15 ಮರಿಯಳು ಮಾಡಿದ್ದ ವಿಷಯದಿಂದ ಯೇಸು ಗಾಢವಾಗಿ ಮನತಟ್ಟಿದವನಾದನು. ಅವನ ಅಂದಾಜಿನಲ್ಲಿ, ಆಕೆ ಸ್ತುತ್ಯಾರ್ಹವಾದ ಒಂದು ಕಾರ್ಯವನ್ನು ಮಾಡಿದ್ದಳು. ಆ ಕೊಡುಗೆಯ ಪ್ರಾಪಂಚಿಕ ಬೆಲೆ ಯೇಸುವಿಗೆ ಪ್ರಾಮುಖ್ಯವಾಗಿರಲಿಲ್ಲ, “ಈಕೆಯು ತನ್ನ ಕೈಲಾಗುವಷ್ಟು ಮಾಡಿದ್ದಾಳೆ” ಎಂಬ ನಿಜತ್ವವು ಪ್ರಾಮುಖ್ಯವಾಗಿತ್ತು. ಆಕೆ ಆ ಸುಯೋಗದ ಪ್ರಯೋಜನವನ್ನು ಪಡೆದುಕೊಂಡು, ತನಗೆ ಸಾಮರ್ಥ್ಯವಿದ್ದುದನ್ನು ಕೊಟ್ಟಳು. ಇತರ ಭಾಷಾಂತರಗಳು ಈ ಮಾತುಗಳನ್ನು, “ತನ್ನಿಂದ ಸಾಧ್ಯವಿರುವುದನ್ನೆಲ್ಲ ಆಕೆ ಮಾಡಿದ್ದಾಳೆ,” ಅಥವಾ “ಆಕೆಯ ಶಕ್ತಿಯಲ್ಲಿದ್ದುದನ್ನು ಆಕೆ ಮಾಡಿದ್ದಾಳೆ.” (ಆ್ಯನ್ ಅಮೆರಿಕನ್ ಟ್ರಾನ್ಸ್ಲೇಶನ್; ದ ಜೆರೂಸಲೆಮ್ ಬೈಬಲ್) ಮರಿಯಳು ತನ್ನ ಅತ್ಯುತ್ತಮವಾದುದನ್ನು ಕೊಟ್ಟದ್ದರಿಂದ, ಆಕೆಯ ಕೊಡುವಿಕೆಯು ಪೂರ್ಣಪ್ರಾಣದ್ದಾಗಿತ್ತು. ಪೂರ್ಣಪ್ರಾಣದ ಸೇವೆಯ ಅರ್ಥವು ಅದೇ ಆಗಿದೆ.
ಒಬ್ಬ ವಿಧವೆಯ “ಎರಡು ಕಾಸು”
16. (ಎ) ಬಡ ವಿಧವೆಯೊಬ್ಬಳ ವಂತಿಗೆಯನ್ನು ಯೇಸು ಗಮನಿಸುವಂತಾದದ್ದು ಹೇಗೆ? (ಬಿ) ವಿಧವೆಯ ನಾಣ್ಯಗಳ ಬೆಲೆಯೇನಾಗಿತ್ತು?
16 ಇನ್ನೆರಡು ದಿನಗಳ ಬಳಿಕ, ನೈಸಾನ್ 11ರಂದು, ಯೇಸು ದೇವಾಲಯದಲ್ಲಿ ಹೆಚ್ಚು ಸಮಯವನ್ನು ಕಳೆದನು. ಅಲ್ಲಿ ಅವನ ಅಧಿಕಾರವು ವಿವಾದಕ್ಕೊಳಗಾಯಿತು ಮತ್ತು ತೆರಿಗೆಗಳು, ಪುನರುತ್ಥಾನ ಮತ್ತು ಇತರ ವಿಷಯಗಳ ಕುರಿತಾದ ಸಂದಿಗ್ಧ ಪ್ರಶ್ನೆಗಳಿಗೆ ಅವನು ಉತ್ತರಕೊಟ್ಟನು. ಬೇರೆ ವಿಷಯಗಳೊಂದಿಗೆ, “ವಿಧವೆಯರ ಮನೆಗಳನ್ನು” ನುಂಗುತ್ತಿರುವುದಕ್ಕಾಗಿ ಅವನು ಶಾಸ್ತ್ರಿಗಳನ್ನೂ ಫರಿಸಾಯರನ್ನೂ ಖಂಡಿಸಿದನು. (ಮಾರ್ಕ 12:40) ಬಳಿಕ ಯೇಸು ಪ್ರಾಯಶಃ ಸ್ತ್ರೀಯರ ಅಂಗಣದಲ್ಲಿ ಮಂಡಿಸಿದನು. ಯೆಹೂದಿ ಸಂಪ್ರದಾಯಕ್ಕನುಸಾರ, ಅಲ್ಲಿ 13 ನಿಧಿ ಪೆಟ್ಟಿಗೆಗಳಿದ್ದವು. ಜನರು ತಮ್ಮ ವಂತಿಗೆಗಳನ್ನು ಹಾಕಿದಾಗ, ಅದನ್ನು ಜಾಗರೂಕತೆಯಿಂದ ಪ್ರೇಕ್ಷಿಸುತ್ತ ಅವನು ತುಸು ಹೊತ್ತು ಕುಳಿತುಕೊಂಡನು. ಅನೇಕ ಐಶ್ವರ್ಯವಂತರು ಬಂದರು—ಕೆಲವರು ಪ್ರಾಯಶಃ ಸ್ವನೀತಿಯ ತೋರಿಕೆಯವರಾಗಿ, ಡಾಂಭಿಕ ಪ್ರದರ್ಶನವುಳ್ಳವರಾಗಿ ಸಹ ಬಂದರು. (ಹೋಲಿಸಿ ಮತ್ತಾಯ 6:2.) ಯೇಸು ಪ್ರತ್ಯೇಕವಾಗಿ ಒಬ್ಬಾಕೆ ಸ್ತ್ರೀಯನ್ನು ದಿಟ್ಟಿಸಿ ನೋಡಿದನು. ಸಾಮಾನ್ಯ ವ್ಯಕ್ತಿಯು, ಆಕೆಯ ವಿಷಯದಲ್ಲಿ ಅಥವಾ ಆಕೆಯ ಕೊಡುಗೆಯ ವಿಷಯದಲ್ಲಿ ಗಮನಾರ್ಹವಾದದ್ದೇನನ್ನೂ ಗಮನಿಸಿರಲಿಕ್ಕಿಲ್ಲ. ಆದರೆ ಇತರರ ಹೃದಯವನ್ನು ಬಲ್ಲ ಯೇಸುವಿಗೆ ಆಕೆ “ಬಡ ವಿಧವೆ”ಯೆಂಬುದು ಗೊತ್ತಿತ್ತು. ಆಕೆಯ ಕೊಡುಗೆಯ ನಿಷ್ಕೃಷ್ಟ ಮೊತ್ತವು “ಎರಡು ಕಾಸು”ಗಳೆಂಬುದೂ ಅವನಿಗೆ ತಿಳಿದಿತ್ತು.b—ಮಾರ್ಕ 12:41, 42.
17. ವಿಧವೆಯ ವಂತಿಗೆಯನ್ನು ಯೇಸು ಹೇಗೆ ಗಣ್ಯಮಾಡಿದನು, ಮತ್ತು ಇದರಿಂದ, ದೇವರಿಗೆ ಕೊಡುವ ವಿಷಯದಲ್ಲಿ ನಾವೇನನ್ನು ಕಲಿಯುತ್ತೇವೆ?
17 ಯೇಸು ತನ್ನ ಶಿಷ್ಯರನ್ನು ತನ್ನ ಬಳಿಗೆ ಕರೆದನು. ಏಕೆಂದರೆ ತಾನು ಕಲಿಸಲಿದ್ದ ಪಾಠವನ್ನು ಅವರು ಸಾಕ್ಷಾತ್ತಾಗಿ ನೋಡಬೇಕೆಂದು ಅವನು ಅಪೇಕ್ಷಿಸಿದನು. “ಬೊಕ್ಕಸದಲ್ಲಿ ಹಾಕಿದವರೆಲ್ಲರಲ್ಲಿ ಈ ವಿಧವೆ ಹೆಚ್ಚು ಹಾಕಿದ್ದಾಳೆ,” ಎಂದು ಯೇಸು ಹೇಳಿದನು. ಯೇಸುವಿನ ಅಂದಾಜಿನಲ್ಲಿ, ಇತರರೆಲ್ಲರೂ ಸೇರಿ ಹಾಕಿದುದಕ್ಕಿಂತ ಹೆಚ್ಚನ್ನು ಈಕೆ ಹಾಕಿದಳು. ಅವಳು “ತನಗಿದ್ದದ್ದನ್ನೆಲ್ಲಾ”—ತನ್ನ ಹಣದಲ್ಲಿ ಕೊನೆಯ ಅಂಶವನ್ನು ಹಾಕಿದಳು. ಹೀಗೆ ಮಾಡುವುದರ ಮೂಲಕ ಆಕೆ ತನ್ನನ್ನು ಯೆಹೋವನ ಪರಾಮರಿಕೆಯ ಹಸ್ತಗಳಲ್ಲಿ ಇರಿಸಿಕೊಂಡಳು. ದೇವರಿಗೆ ಕೊಡುವುದರಲ್ಲಿ ಮಾದರಿಯೆಂದು ಪ್ರತ್ಯೇಕಿಸಲ್ಪಟ್ಟ ಆ ವ್ಯಕ್ತಿಯು, ಪ್ರಾಪಂಚಿಕ ಬೆಲೆಯಲ್ಲಿ ಬಹುಮಟ್ಟಿಗೆ ಬೆಲೆಯೇ ಇಲ್ಲದಿರುವುದನ್ನು ಕೊಟ್ಟವಳಾಗಿದ್ದಾಳೆ. ದೇವರ ದೃಷ್ಟಿಯಲ್ಲಾದರೊ, ಅದು ಅಮೂಲ್ಯವಾಗಿತ್ತು!—ಮಾರ್ಕ 12:43, 44; ಯಾಕೋಬ 1:27.
ಪೂರ್ಣಪ್ರಾಣದ ಸೇವೆಯ ಕುರಿತ ಯೆಹೋವನ ವೀಕ್ಷಣದಿಂದ ಕಲಿಯುವುದು
18. ಆ ಇಬ್ಬರು ಸ್ತ್ರೀಯರೊಂದಿಗಿನ ಯೇಸುವಿನ ವ್ಯವಹಾರಗಳಿಂದ ನಾವೇನನ್ನು ಕಲಿಯುತ್ತೇವೆ?
18 ಈ ಇಬ್ಬರು ಸ್ತ್ರೀಯರೊಂದಿಗಿನ ಯೇಸುವಿನ ವ್ಯವಹಾರಗಳಿಂದ, ಯೆಹೋವನು ಪೂರ್ಣಪ್ರಾಣದ ಸೇವೆಯನ್ನು ಹೇಗೆ ವೀಕ್ಷಿಸುತ್ತಾನೆಂಬುದರ ಕುರಿತು ಕೆಲವು ಹೃದಯೋಲ್ಲಾಸಗೊಳಿಸುವ ಪಾಠಗಳನ್ನು ನಾವು ಕಲಿಯುತ್ತೇವೆ. (ಯೋಹಾನ 5:19) ಯೇಸು ಆ ವಿಧವೆಯನ್ನು ಮರಿಯಳೊಂದಿಗೆ ಹೋಲಿಸಲಿಲ್ಲ. ಅವನು ಆ ವಿಧವೆಯ ನಾಣ್ಯಗಳನ್ನು ಮರಿಯಳ “ಬಹು ಬೆಲೆ”ಯುಳ್ಳ ತೈಲದಷ್ಟೇ ಬೆಲೆಯುಳ್ಳದ್ದಾಗಿ ಕಂಡನು. ಪ್ರತಿಯೊಬ್ಬ ಸ್ತ್ರೀ ತನ್ನ ಅತ್ಯುತ್ತಮವಾದುದನ್ನು ಕೊಟ್ಟ ಕಾರಣ, ದೇವರ ದೃಷ್ಟಿಯಲ್ಲಿ ಅವರ ಕೊಡುಗೆಗಳು ಬೆಲೆಬಾಳುವಂತಹವುಗಳಾಗಿದ್ದವು. ಆದುದರಿಂದ, ದೇವರನ್ನು ಸೇವಿಸುವುದರಲ್ಲಿ ನೀವು ಬಯಸುವುದೆಲ್ಲವನ್ನು ಮಾಡಲು ಅಸಮರ್ಥರು ಎಂಬ ಕಾರಣದಿಂದ ಅಯೋಗ್ಯರು ಎಂಬ ಅನಿಸಿಕೆಗಳು ನಿಮ್ಮಲ್ಲಿ ಏಳುವುದಾದರೆ, ಹತಾಶರಾಗಬೇಡಿ. ನಿಮಗೆ ಕೊಡಸಾಧ್ಯವಿರುವ ಅತ್ಯುತ್ತಮವಾದುದನ್ನು ಅಂಗೀಕರಿಸಲು ಯೆಹೋವನು ಇಷ್ಟಪಡುತ್ತಾನೆ. ಯೆಹೋವನು “ಹೃದಯವನ್ನೇ ನೋಡುವವನು” ಆಗಿರುವುದರಿಂದ, ನಿಮ್ಮ ಹೃದಯದ ಹಾತೊರೆಯುವಿಕೆಗಳನ್ನು ಆತನು ಪೂರ್ತಿಯಾಗಿ ಬಲ್ಲನೆಂಬುದನ್ನು ನೆನಪಿನಲ್ಲಿಡಿ.—1 ಸಮುವೇಲ 16:7.
19. ದೇವರನ್ನು ಸೇವಿಸುವುದರಲ್ಲಿ ಇತರರು ಏನು ಮಾಡುತ್ತಿದ್ದಾರೊ ಅದರ ಕುರಿತು ನಾವು ಏಕೆ ತೀರ್ಪುಮಾಡುವವರಾಗಿರಬಾರದು?
19 ಪೂರ್ಣಪ್ರಾಣದ ಸೇವೆಯ ವಿಷಯದಲ್ಲಿ ಯೆಹೋವನ ವೀಕ್ಷಣವು, ನಾವು ಒಬ್ಬರು ಇನ್ನೊಬ್ಬರನ್ನು ವೀಕ್ಷಿಸಿ, ಉಪಚರಿಸುವ ವಿಧವನ್ನು ಪ್ರಭಾವಿಸಬೇಕು. ಇತರರ ಪ್ರಯತ್ನಗಳನ್ನು ಟೀಕಿಸುವುದು ಇಲ್ಲವೆ ಒಬ್ಬ ವ್ಯಕ್ತಿಯ ಸೇವೆಯನ್ನು ಇನ್ನೊಬ್ಬನದರೊಂದಿಗೆ ಹೋಲಿಸುವುದು ಎಷ್ಟು ಪ್ರೀತಿರಹಿತವಾಗಿರುವುದು! ದುಃಖಕರವಾಗಿ, ಕ್ರೈಸ್ತಳೊಬ್ಬಳು ಬರೆದುದು: “ಕೆಲವೊಮ್ಮೆ ಕೆಲವರು ನೀವು ಒಂದೊ ಪಯನೀಯರರು ಇಲ್ಲವೆ ಪ್ರಯೋಜನವಿಲ್ಲದವರು ಎಂಬ ಅಭಿಪ್ರಾಯವನ್ನು ಕೊಡುತ್ತಾರೆ. ಕ್ರಮದ ರಾಜ್ಯ ಪ್ರಚಾರಕರಾಗಿ ‘ಮಾತ್ರ’ ಮುಂದುವರಿಯಲು ಹೋರಾಡುತ್ತಿರುವ ನಾವೂ ಮೆಚ್ಚಲ್ಪಡುತ್ತೇವೆಂಬ ಅನಿಸಿಕೆ ನಮಗಿರುವುದು ಅಗತ್ಯ.” ಜೊತೆಕ್ರೈಸ್ತನು ಮಾಡುವ ಪೂರ್ಣಪ್ರಾಣದ ಸೇವೆಯಲ್ಲಿ ಯಾವುದು ಒಳಗೊಂಡಿರಬೇಕೆಂದು ತೀರ್ಮಾನಿಸುವ ಅಧಿಕಾರ ನಮಗಿರುವುದಿಲ್ಲವೆಂಬುದನ್ನು ನಾವು ಜ್ಞಾಪಕದಲ್ಲಿಡೋಣ. (ರೋಮಾಪುರ 14:10-12) ಲಕ್ಷಾಂತರ ಮಂದಿ ನಂಬಿಗಸ್ತ ರಾಜ್ಯ ಪ್ರಚಾರಕರಲ್ಲಿ ಪ್ರತಿಯೊಬ್ಬನ ಪೂರ್ಣಪ್ರಾಣದ ಸೇವೆಯನ್ನು ಯೆಹೋವನು ಆದರದಿಂದ ಕಾಣುತ್ತಾನೆ ಮತ್ತು ನಾವೂ ಹಾಗೆ ಕಾಣಬೇಕು.
20. ನಮ್ಮ ಜೊತೆ ಆರಾಧಕರ ಕುರಿತು ಏನನ್ನು ಭಾವಿಸುವುದು ಅತ್ಯುತ್ತಮ?
20 ಆದರೆ ಕೆಲವರು ಶುಶ್ರೂಷೆಯಲ್ಲಿ ಮಾಡಸಾಧ್ಯವಿರುವುದಕ್ಕಿಂತ ಕಡಮೆ ಪ್ರಮಾಣದಲ್ಲಿ ಮಾಡುತ್ತಿದ್ದಾರೆಂದು ತೋರಿಬರುವುದಾದರೆ, ಆಗೇನು? ಜೊತೆವಿಶ್ವಾಸಿಯ ಚಟುವಟಿಕೆಯಲ್ಲಿನ ಇಳಿತವು, ಚಿಂತಿತ ಹಿರಿಯರಿಗೆ, ಸಹಾಯ ಅಥವಾ ಪ್ರೋತ್ಸಾಹವನ್ನು ಕೊಡುವ ಆವಶ್ಯಕತೆಯನ್ನು ಸೂಚಿಸೀತು. ಅದೇ ಸಮಯದಲ್ಲಿ ಕೆಲವರಿಗೆ, ಪೂರ್ಣಪ್ರಾಣದ ಸೇವೆಯು ಮರಿಯಳ ಬೆಲೆಬಾಳುವ ತೈಲಕ್ಕಿಂತ ವಿಧವೆಯ ಚಿಕ್ಕ ನಾಣ್ಯಗಳನ್ನು ಹೆಚ್ಚು ಹತ್ತಿರವಾಗಿ ಹೋಲಬಹುದೆಂಬುದನ್ನು ನಾವು ಮರೆಯಬಾರದು. ಸಾಮಾನ್ಯವಾಗಿ, ನಮ್ಮ ಸೋದರ ಸೋದರಿಯರು ಯೆಹೋವನನ್ನು ಪ್ರೀತಿಸುತ್ತಾರೆಂದೂ ಮತ್ತು ಅಂತಹ ಪ್ರೀತಿ ಅವರನ್ನು ಆದಷ್ಟು ಹೆಚ್ಚು—ಆದಷ್ಟು ಕಡಮೆಯಲ್ಲ—ಕೆಲಸವನ್ನು ಮಾಡುವಂತೆ ಪ್ರೇರಿಸುವುದೆಂದು ಭಾವಿಸುವುದು ಅತ್ಯುತ್ತಮ. ಯೆಹೋವನ ಶುದ್ಧಾಂತಃಕರಣದ ಯಾವ ಸೇವಕನೂ ದೇವರನ್ನು ಸೇವಿಸುವುದರಲ್ಲಿ ಕಡಮೆಯನ್ನು ಮಾಡಲು ಆರಿಸಿಕೊಳ್ಳನೆಂಬುದು ನಿಶ್ಚಯ!.—1 ಕೊರಿಂಥ 13:4, 7.
21. ಯಾವ ಪ್ರತಿಫಲದಾಯಕ ಜೀವನರೀತಿಯನ್ನು ಅನೇಕರು ಬೆನ್ನಟ್ಟುತ್ತಿದ್ದಾರೆ, ಮತ್ತು ಯಾವ ಪ್ರಶ್ನೆಗಳು ಏಳುತ್ತವೆ?
21 ಆದರೂ ದೇವರ ಜನರಲ್ಲಿ ಅನೇಕರಿಗೆ, ಪೂರ್ಣಪ್ರಾಣದ ಸೇವೆಯು ತೀರ ಪ್ರತಿಫಲದಾಯಕವಾದ ವೃತ್ತಿ—ಪಯನೀಯರ್ ಶುಶ್ರೂಷೆ—ಯನ್ನು ಅರ್ಥೈಸುತ್ತದೆ. ಅವರು ಯಾವ ಆಶೀರ್ವಾದಗಳನ್ನು ಪಡೆದುಕೊಳ್ಳುತ್ತಾರೆ? ಮತ್ತು ಇನ್ನೂ ಪಯನೀಯರರಾಗಲು ಅಶಕ್ತರಾಗಿರುವ ನಮ್ಮ ಕುರಿತಾಗಿ ಏನು—ಪಯನೀಯರ್ ಮನೋಭಾವವನ್ನು ನಾವು ಹೇಗೆ ತೋರಿಸಬಲ್ಲೆವು? ಈ ಪ್ರಶ್ನೆಗಳು ಮುಂದಿನ ಲೇಖನದಲ್ಲಿ ಚರ್ಚಿಸಲ್ಪಡುವುವು.
[ಅಧ್ಯಯನ ಪ್ರಶ್ನೆಗಳು]
a ಅಪೊಸ್ತಲನಾಗಿದ್ದ ಯೂದನ ಸ್ಥಳವನ್ನು ಮತ್ತೀಯನು ಭರ್ತಿಮಾಡಿದುದರಿಂದ, ಮತ್ತೀಯನ—ಪೌಲನದ್ದಲ್ಲ—ಹೆಸರು ಆ ಹನ್ನೆರಡು ಅಸ್ತಿವಾರಗಳಲ್ಲಿ ಒಂದರ ಮೇಲೆ ಕಂಡುಬಂದಿರಬೇಕು. ಪೌಲನು ಅಪೊಸ್ತಲನಾಗಿದ್ದರೂ 12 ಮಂದಿಯಲ್ಲಿ ಒಬ್ಬನಾಗಿರಲಿಲ್ಲ.
b ಈ ನಾಣ್ಯಗಳಲ್ಲಿ ಪ್ರತಿಯೊಂದು, ಆ ಸಮಯದಲ್ಲಿ ಚಲಾವಣೆಯಲ್ಲಿದ್ದ ಯೆಹೂದಿ ನಾಣ್ಯಗಳಲ್ಲಿ ಅತಿ ಚಿಕ್ಕದಾಗಿದ್ದ ಲೆಪ್ಟನ್ ಆಗಿತ್ತು. ಎರಡು ಲೆಪ್ಟಗಳು ಒಂದು ದಿನದ ಸಂಬಳದ 1/64ನೆಯ ಅಂಶಕ್ಕೆ ಸಮಾನವಾಗಿದ್ದವು. ಮತ್ತಾಯ 10:29ಕ್ಕನುಸಾರ, ಒಂದು ಅಸಾರಿಯನ್ ನಾಣ್ಯ (ಎಂಟು ಲೆಪ್ಟಗಳಿಗೆ ಸಮಾನ)ಕ್ಕೆ ಒಬ್ಬ ವ್ಯಕ್ತಿ ಎರಡು ಗುಬ್ಬಿಗಳನ್ನು ಕೊಳ್ಳಸಾಧ್ಯವಿತ್ತು. ಬಡವರು ಆಹಾರಕ್ಕಾಗಿ ಉಪಯೋಗಿಸುತ್ತಿದ್ದ ಅತಿ ಅಗ್ಗದ ಪಕ್ಷಿಗಳಲ್ಲಿ ಒಂದು ಈ ಗುಬ್ಬಿಯಾಗಿತ್ತು. ಹೀಗೆ, ಈ ವಿಧವೆ ನಿಜವಾಗಿಯೂ ಬಡವಳಾಗಿದ್ದಳು, ಏಕೆಂದರೆ ಒಂದೇ ಒಂದು ಗುಬ್ಬಿಯನ್ನು ಕೊಳ್ಳಲು ಬೇಕಾಗಿದ್ದ ಹಣದ ಮೊತ್ತದಲ್ಲಿ ಅರ್ಧಾಂಶ ಮಾತ್ರ ಅವಳಲ್ಲಿತ್ತು. ಅದು ಒಂದು ಹೊತ್ತಿನ ಊಟಕ್ಕೂ ಸಾಕಾಗುತ್ತಿರಲಿಲ್ಲ.
ನೀವು ಹೇಗೆ ಉತ್ತರಿಸುವಿರಿ?
◻ ಯೆಹೋವನನ್ನು ಪೂರ್ಣಪ್ರಾಣದಿಂದ ಸೇವಿಸುವುದರ ಅರ್ಥವೇನು?
◻ ಯೆಹೋವನು ನಮ್ಮನ್ನು ಇತರರಿಗೆ ಹೋಲಿಸುವುದಿಲ್ಲವೆಂದು 1 ಕೊರಿಂಥ 12:14-26ರ ದೃಷ್ಟಾಂತವು ಹೇಗೆ ತೋರಿಸುತ್ತದೆ?
◻ ಮರಿಯಳ ಬೆಲೆಬಾಳುವ ತೈಲ ಮತ್ತು ವಿಧವೆಯ ಎರಡು ಚಿಕ್ಕ ನಾಣ್ಯಗಳ ಕುರಿತ ಯೇಸುವಿನ ಹೇಳಿಕೆಗಳಿಂದ ಪೂರ್ಣಪ್ರಾಣದ ಕೊಡುವಿಕೆಯ ಕುರಿತು ನಾವೇನನ್ನು ಕಲಿಯುತ್ತೇವೆ?
◻ ಪೂರ್ಣಪ್ರಾಣದ ಸೇವೆಯನ್ನು ಯೆಹೋವನು ವೀಕ್ಷಿಸುವ ವಿಧವು, ನಾವು ಒಬ್ಬರನ್ನೊಬ್ಬರು ವೀಕ್ಷಿಸುವ ವಿಧವನ್ನು ಹೇಗೆ ಪ್ರಭಾವಿಸಬೇಕು?
[ಪುಟ 15 ರಲ್ಲಿರುವ ಚಿತ್ರ]
ಯೇಸುವಿನ ದೇಹವನ್ನು “ಬಹು ಬೆಲೆ”ಯುಳ್ಳ ಸುಗಂಧ ತೈಲದಿಂದ ಪರಿಮಳಗೊಳಿಸುವ ಮೂಲಕ, ಮರಿಯಳು ತನ್ನಲ್ಲಿದ್ದ ಅತ್ಯುತ್ತಮವಾದುದನ್ನು ಕೊಟ್ಟಳು
[ಪುಟ 16 ರಲ್ಲಿರುವ ಚಿತ್ರ]
ವಿಧವೆಯ ಕಾಸುಗಳು, ಭೌತಿಕ ಮೌಲ್ಯದಲ್ಲಿ ಬಹುಮಟ್ಟಿಗೆ ನಿಷ್ಪ್ರಯೋಜಕವಾಗಿದ್ದವಾದರೂ, ಯೆಹೋವನ ದೃಷ್ಟಿಯಲ್ಲಿ ಅಮೂಲ್ಯವಾಗಿದ್ದವು