ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w97 11/1 ಪು. 8-13
  • ಕ್ರೈಸ್ತರೂ ಮಾನವ ಲೋಕವೂ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕ್ರೈಸ್ತರೂ ಮಾನವ ಲೋಕವೂ
  • ಕಾವಲಿನಬುರುಜು—1997
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯೇಸುವಿನ ಮಾದರಿ
  • “ಹೊರಗಿನ” ಜನರ ಕಡೆಗೆ ಪೌಲನ ಮನೋಭಾವ
  • ಯೆಹೂದ್ಯೇತರ ವಿಶ್ವಾಸಿಗಳಿಗೆ ಸಹಾಯಮಾಡುವುದು
  • “ಅವಿಶ್ವಾಸಿಗಳ” ಮಧ್ಯೆ ಸಾರುವುದು
  • ಇಂದು “ಎಲ್ಲ ರೀತಿಯ ಜನ”ರನ್ನು ರಕ್ಷಿಸಲು ಯತ್ನಿಸುವುದು
  • ಜಗತ್ತನ್ನೇ ಬದಲಾಯಿಸಿದ ಒಂದು ಬೈಬಲ್‌ ಭಾಷಾಂತರ
    ಕಾವಲಿನಬುರುಜು—1998
  • ಪೌಲನ ಮಾದರಿಯನ್ನು ಅನುಸರಿಸಿ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ಹೊಲ ಕೊಯ್ಲಿಗೆ ಸಿದ್ಧವಾಗಿರೋದು ಕಾಣಿಸ್ತಿದೆಯಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • ಯೆಹೋವನ ವಾಕ್ಯವು ಪ್ರಬಲವಾಗುತ್ತದೆ !
    ಕಾವಲಿನಬುರುಜು—1991
ಇನ್ನಷ್ಟು
ಕಾವಲಿನಬುರುಜು—1997
w97 11/1 ಪು. 8-13

ಕ್ರೈಸ್ತರೂ ಮಾನವ ಲೋಕವೂ

“ಹೊರಗಿನವರ ಮುಂದೆ ಜ್ಞಾನ [“ವಿವೇಕ,” NW]ವುಳ್ಳವರಾಗಿ ನಡೆದುಕೊಳ್ಳಿರಿ.”—ಕೊಲೊಸ್ಸೆ 4:5.

1. ತನ್ನ ಹಿಂಬಾಲಕರ ಮತ್ತು ಲೋಕದ ಸಂಬಂಧದಲ್ಲಿ ಯೇಸು ಏನು ಹೇಳಿದನು?

ತನ್ನ ಸ್ವರ್ಗೀಯ ಪಿತನಿಗೆ ಮಾಡಿದ ಪ್ರಾರ್ಥನೆಯೊಂದರಲ್ಲಿ ಯೇಸು ತನ್ನ ಶಿಷ್ಯರ ಕುರಿತು ಹೇಳಿದ್ದು: “ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರೂ ಲೋಕದವರಲ್ಲ; ಆದಕಾರಣ ಲೋಕವು ಇವರ ಮೇಲೆ ದ್ವೇಷ ಮಾಡಿ ಅದೆ.” ಬಳಿಕ ಅವನು ಕೂಡಿಸಿ ಹೇಳಿದ್ದು: “ಇವರನ್ನು ಲೋಕದೊಳಗಿಂದ ತೆಗೆದುಕೊಂಡು ಹೋಗಬೇಕೆಂದು ನಾನು ಕೇಳಿಕೊಳ್ಳುವದಿಲ್ಲ; ಕೆಡುಕನಿಂದ ತಪ್ಪಿಸಿ ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ.” (ಯೋಹಾನ 17:14, 15) ದೃಷ್ಟಾಂತಕ್ಕೆ, ಕ್ರೈಸ್ತರನ್ನು ಲೋಕದಿಂದ ಶಾರೀರಿಕವಾಗಿ, ಸಂನ್ಯಾಸಿ ಮಠಗಳಲ್ಲಿ ಬೇರ್ಪಡಿಸುತ್ತ, ಪ್ರತ್ಯೇಕಿಸಬಾರದಿತ್ತು. ಬದಲಿಗೆ, ಕ್ರಿಸ್ತನು “ಇವರನ್ನು ಲೋಕಕ್ಕೆ,” “ಭೂಲೋಕದ ಕಟ್ಟಕಡೆಯ ವರೆಗೂ” ತನ್ನ ಸಾಕ್ಷಿಗಳಾಗಿರಲಿಕ್ಕಾಗಿ “ಕಳುಹಿಸಿ”ಕೊಟ್ಟನು. (ಯೋಹಾನ 17:18; ಅ. ಕೃತ್ಯಗಳು 1:8) ಆದರೂ, ಅವರನ್ನು ಕಾಯುವಂತೆ ಅವನು ದೇವರನ್ನು ಕೇಳಿಕೊಂಡನು, ಏಕೆಂದರೆ “ಇಹಲೋಕಾಧಿಪತಿ”ಯಾದ ಸೈತಾನನು ಅವರ ವಿರುದ್ಧ ಕ್ರಿಸ್ತನ ಹೆಸರಿನ ನಿಮಿತ್ತವಾಗಿ ದ್ವೇಷವನ್ನು ಹುಟ್ಟಿಸಲಿದ್ದನು.—ಯೋಹಾನ 12:31; ಮತ್ತಾಯ 24:9.

2. (ಎ) ಬೈಬಲು “ಲೋಕ” ಎಂಬ ಪದವನ್ನು ಹೇಗೆ ಉಪಯೋಗಿಸುತ್ತದೆ? (ಬಿ) ಯೆಹೋವನು ಲೋಕದ ಕಡೆಗೆ ಸಮತೆಯ ಯಾವ ಮನೋಭಾವವನ್ನು ತೋರಿಸುತ್ತಾನೆ?

2 ಬೈಬಲಿನಲ್ಲಿ “ಲೋಕ” (ಗ್ರೀಕ್‌, ಕಾಸ್ಮೋಸ್‌) ಎಂಬ ಪದವು ಅನೇಕ ವೇಳೆ, ‘ಕೆಡುಕನ ವಶದಲ್ಲಿ ಬಿದ್ದಿರುವ’ ಅನೀತಿಯ ಮಾನವ ಸಮಾಜವನ್ನು ಗುರುತಿಸುತ್ತದೆ. (1 ಯೋಹಾನ 5:19) ಕ್ರೈಸ್ತರು ಯೆಹೋವನ ಮಟ್ಟಗಳನ್ನು ಒಪ್ಪಿಕೊಳ್ಳುವುದರಿಂದ ಮತ್ತು ಲೋಕಕ್ಕೆ ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಆಜ್ಞೆಗೆ ಲಕ್ಷ್ಯಕೊಡುವುದರಿಂದಲೂ, ಕೆಲವು ವೇಳೆ ಅವರ ಮಧ್ಯೆ ಮತ್ತು ಲೋಕದ ಮಧ್ಯೆ ಕಷ್ಟಕರವಾದ ಸಂಬಂಧವು ಅಸ್ತಿತ್ವದಲ್ಲಿದೆ. (2 ತಿಮೊಥೆಯ 3:12; 1 ಯೋಹಾನ 3:1, 13) ಆದರೆ ಶಾಸ್ತ್ರದಲ್ಲಿ ಕಾಸ್ಮೋಸ್‌, ಸಾಮಾನ್ಯತಃ ಮಾನವ ಕುಟುಂಬವನ್ನು ಸೂಚಿಸಲು ಸಹ ಬಳಸಲ್ಪಡುತ್ತದೆ. ಆ ಶಬ್ದದ ಕುರಿತಾಗಿ ಈ ಅರ್ಥದಲ್ಲಿ ಮಾತನಾಡುತ್ತ ಯೇಸು ಹೇಳಿದ್ದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು. ದೇವರು ತನ್ನ ಮಗನ ಮುಖಾಂತರ ಲೋಕಕ್ಕೆ ರಕ್ಷಣೆಯಾಗಬೇಕೆಂದು ಆತನನ್ನು ಕಳುಹಿಸಿಕೊಟ್ಟನೇ ಹೊರತು ತೀರ್ಪುಮಾಡುವದಕ್ಕಾಗಿ ಕಳುಹಿಸಲಿಲ್ಲ.” (ಯೋಹಾನ 3:16, 17; 2 ಕೊರಿಂಥ 5:19; 1 ಯೋಹಾನ 4:14) ಹೀಗೆ, ಸೈತಾನನ ದುಷ್ಟ ವ್ಯವಸ್ಥೆಯನ್ನು ವಿಶಿಷ್ಟೀಕರಿಸುವ ವಿಷಯಗಳನ್ನು ದ್ವೇಷಿಸುವಾಗ, “ತನ್ನ ಕಡೆಗೆ ತಿರುಗಿಕೊಳ್ಳು”ವ ಸರ್ವರನ್ನೂ ರಕ್ಷಿಸಲು ತನ್ನ ಪುತ್ರನನ್ನು ಕಳುಹಿಸುವ ಮೂಲಕ, ಯೆಹೋವನು ಮಾನವಕುಲಕ್ಕೆ ಪ್ರೀತಿಯನ್ನು ತೋರಿಸಿದನು. (2 ಪೇತ್ರ 3:9; ಜ್ಞಾನೋಕ್ತಿ 6:16-19) ಲೋಕದ ಕಡೆಗೆ ಯೆಹೋವನು ತೋರಿಸಿದ ಸಮತೆಯ ಮನೋಭಾವವು ಆತನ ಆರಾಧಕರನ್ನು ಮಾರ್ಗದರ್ಶಿಸಬೇಕು.

ಯೇಸುವಿನ ಮಾದರಿ

3, 4. (ಎ) ರಾಜ್ಯಾಧಿಕಾರದ ಸಂಬಂಧದಲ್ಲಿ ಯೇಸು ಯಾವ ಸ್ಥಾನವನ್ನು ಆಯ್ದುಕೊಂಡನು? (ಬಿ) ಯೇಸು ಮಾನವಲೋಕವನ್ನು ಹೇಗೆ ವೀಕ್ಷಿಸಿದನು?

3 ತನ್ನ ಮರಣಕ್ಕೆ ತುಸು ಮುಂಚಿತವಾಗಿ, ಯೇಸು ಪೊಂತ್ಯ ಪಿಲಾತನಿಗೆ ಹೇಳಿದ್ದು: “ನನ್ನ ರಾಜ್ಯವು ಈ ಲೋಕದ್ದಲ್ಲ.” (ಯೋಹಾನ 18:36) ಈ ಮಾತುಗಳಿಗೆ ಹೊಂದಿಕೆಯಲ್ಲಿ, ಯೇಸು ಈ ಮೊದಲೇ, ಲೋಕದ ರಾಜ್ಯಗಳ ಅಧಿಕಾರವು ತನಗೆ ಸೈತಾನನಿಂದ ಕೊಡಲ್ಪಡುವುದನ್ನು ನಿರಾಕರಿಸಿದ್ದನು, ಮತ್ತು ಯೆಹೂದ್ಯರು ತನ್ನನ್ನು ರಾಜನನ್ನಾಗಿ ಮಾಡುವಂತೆಯೂ ಬಿಡಲಿಲ್ಲ. (ಲೂಕ 4:5-8; ಯೋಹಾನ 6:14, 15) ಆದರೂ, ಯೇಸು ಮಾನವಲೋಕಕ್ಕೆ ಮಹಾ ಪ್ರೀತಿಯನ್ನು ತೋರಿಸಿದನು. ಇದರ ಒಂದು ದೃಷ್ಟಾಂತವು, ಅಪೊಸ್ತಲ ಮತ್ತಾಯನಿಂದ ವರದಿಮಾಡಲ್ಪಟ್ಟಿತು: “ಆದರೆ ಜನರ ಗುಂಪುಗಳನ್ನು ನೋಡಿ ಅವರು ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದಾರಲ್ಲ ಎಂದು ಅವರ ಮೇಲೆ ಕನಿಕರಪಟ್ಟನು.” ಪ್ರೀತಿಯಿಂದಾಗಿ, ಅವನು ಜನರಿಗೆ ಅವರವರ ಪಟ್ಟಣ ಮತ್ತು ಹಳ್ಳಿಗಳಲ್ಲಿ ಸಾರಿದನು. ಅವನು ಅವರಿಗೆ ಕಲಿಸಿದನು ಹಾಗೂ ಅವರ ಅಸ್ವಸ್ಥತೆಗಳನ್ನು ಗುಣಪಡಿಸಿದನು. (ಮತ್ತಾಯ 9:36) ತನ್ನಿಂದ ಕಲಿಯಲಿಕ್ಕಾಗಿ ತನ್ನ ಬಳಿಗೆ ಬಂದವರ ಶಾರೀರಿಕ ಆವಶ್ಯಕತೆಗಳ ಪ್ರಜ್ಞೆಯೂ ಅವನಿಗಿತ್ತು. ನಾವು ಓದುವುದು: “ಯೇಸು ತನ್ನ ಶಿಷ್ಯರನ್ನು ಹತ್ತರಕ್ಕೆ ಕರೆದು ಅವರಿಗೆ—ಈ ಜನರನ್ನು ನೋಡಿ ಕನಿಕರಪಡುತ್ತೇನೆ; ಅವರು ನನ್ನ ಬಳಿಗೆ ಬಂದು ಈಗ ಮೂರು ದಿನವಾಯಿತು; ಅವರಿಗೆ ಊಟಕ್ಕೆ ಏನೂ ಇಲ್ಲ; ಅವರನ್ನು ಉಪವಾಸವಾಗಿ ಕಳುಹಿಸಿಬಿಡುವದಕ್ಕೆ ನನಗೆ ಮನಸ್ಸಿಲ್ಲ; ದಾರಿಯಲ್ಲಿ ಬಳಲಿಹೋದಾರು ಎಂದು ಹೇಳಿದನು.” (ಮತ್ತಾಯ 15:32) ಎಷ್ಟು ಪ್ರೀತಿಪೂರ್ವಕವಾದ ಚಿಂತೆ!

4 ಯೆಹೂದ್ಯರು ಸಮಾರ್ಯದವರ ವಿಷಯದಲ್ಲಿ ಬಲವಾದ ಪೂರ್ವಕಲ್ಪಿತ ಅಭಿಪ್ರಾಯವುಳ್ಳವರಾಗಿದ್ದರು. ಆದರೆ ಯೇಸು ಸಮಾರ್ಯದ ಒಬ್ಬಾಕೆ ಸ್ತ್ರೀಯೊಂದಿಗೆ ದೀರ್ಘ ಸಮಯ ಮಾತಾಡಿದನು ಮತ್ತು ಸಮಾರ್ಯ ಪಟ್ಟಣದಲ್ಲಿ ಸವಿವರವಾದ ಸಾಕ್ಷಿಯನ್ನು ಕೊಡುತ್ತ ಎರಡು ದಿನಗಳನ್ನು ಕಳೆದನು. (ಯೋಹಾನ 4:5-42) ದೇವರು ಅವನನ್ನು “ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರಾಯೇಲನ ಮನೆತನ”ಕ್ಕೆ ಕಳುಹಿಸಿದರೂ, ಯೇಸು ಕೆಲವು ಬಾರಿ ಇತರ ಯೆಹೂದ್ಯೇತರರ ನಂಬಿಕೆಯ ಅಭಿವ್ಯಕ್ತಿಗಳಿಗೂ ಪ್ರತಿಕ್ರಿಯೆ ತೋರಿಸಿದನು. (ಮತ್ತಾಯ 8:5-13; 15:21-28) ಹೌದು, ತಾನು ‘ಈ ಲೋಕದ ಭಾಗವಲ್ಲ’ ಎಂದು ತೋರಿಸಿದ ಸಮಯದಲ್ಲಿಯೇ, ಮಾನವಕುಲದ ಲೋಕಕ್ಕೆ, ಅಂದರೆ ಜನರಿಗಾಗಿ ಪ್ರೀತಿ ತೋರಿಸಸಾಧ್ಯವಿದೆ ಎಂಬುದನ್ನು ಯೇಸು ತೋರ್ಪಡಿಸಿದನು. ನಾವು ಜೀವಿಸುವಲ್ಲಿ, ಕೆಲಸ ಮಾಡುವಲ್ಲಿ ಅಥವಾ ಸಾಮಾನು ಕೊಳ್ಳುವ ಸ್ಥಳದಲ್ಲಿ, ಅಂತೆಯೇ ಜನರಿಗೆ ಕನಿಕರ ತೋರಿಸುತ್ತೇವೊ? ಅವರ ಹಿತಕ್ಕಾಗಿ, ಸಹಾಯಮಾಡಲು ನಮಗಿರುವ ನ್ಯಾಯಸಮ್ಮತವಾದ ಶಕ್ತಿಗನುಸಾರ, ಅಂದರೆ ಅವರ ಆತ್ಮಿಕಾವಶ್ಯಕತೆಗಳಿಗೆ ಮಾತ್ರವಲ್ಲ, ಬೇರೆ ಆವಶ್ಯಕತೆಗಳನ್ನು ಸಹ ಒದಗಿಸುತ್ತ ಚಿಂತೆಯನ್ನು ತೋರಿಸುತ್ತೇವೊ? ಯೇಸು ತೋರಿಸಿದನು, ಮತ್ತು ಹಾಗೆ ಮಾಡುತ್ತ ಅವನು ಜನರಿಗೆ ರಾಜ್ಯದ ಕುರಿತು ಕಲಿಸಲು ದಾರಿಯನ್ನು ತೆರೆದನು. ನಿಜ, ಯೇಸು ಮಾಡಿದಂತೆ ಅಕ್ಷರಾರ್ಥದ ಅದ್ಭುತಗಳನ್ನು ನಾವು ಮಾಡಲು ಸಾಧ್ಯವಿಲ್ಲ. ಆದರೆ ಒಂದು ದಯೆಯ ವರ್ತನೆಯು ಅನೇಕ ವೇಳೆ, ಪೂರ್ವಕಲ್ಪಿತ ಅಭಿಪ್ರಾಯಗಳನ್ನು ಇಲ್ಲವಾಗಿಸುವ ಅದ್ಭುತವನ್ನು ಮಾಡುತ್ತದೆ.

“ಹೊರಗಿನ” ಜನರ ಕಡೆಗೆ ಪೌಲನ ಮನೋಭಾವ

5, 6. ಅಪೊಸ್ತಲ ಪೌಲನು “ಹೊರಗಿನವರು” ಆಗಿದ್ದ ಯೆಹೂದ್ಯರೊಂದಿಗೆ ಹೇಗೆ ವ್ಯವಹರಿಸಿದನು?

5 ಅಪೊಸ್ತಲ ಪೌಲನು ತನ್ನ ಅನೇಕ ಪತ್ರಗಳಲ್ಲಿ “ಹೊರಗಿನ” ಅಥವಾ “ಹೊರಗಿನವರ,” ಅಂದರೆ, ಯೆಹೂದ್ಯರು ಅಥವಾ ಅನ್ಯರು ಆಗಿದ್ದ ಕ್ರೈಸ್ತ್ಯೇತರರನ್ನು ಸೂಚಿಸಿ ಮಾತಾಡುತ್ತಾನೆ. (1 ಕೊರಿಂಥ 5:12; 1 ಥೆಸಲೊನೀಕ 4:12; 1 ತಿಮೊಥೆಯ 3:7) ಅವನು ಅಂಥವರೊಂದಿಗೆ ಹೇಗೆ ವ್ಯವಹರಿಸಿದನು? ಅವನು “ಕೆಲವರನ್ನು ಅವಶ್ಯವಾಗಿ ರಕ್ಷಿಸಲಾಗುವಂತೆ ಸಕಲ ವಿಧಗಳ ಜನರಿಗೆ ಸರ್ವಸಂಗತಿಗಳೂ ಆದನು” (NW). (1 ಕೊರಿಂಥ 9:20-22) ಅವನು ಒಂದು ನಗರಕ್ಕೆ ಬಂದು ಮುಟ್ಟಿದಾಗ, ಮೊದಲಾಗಿ ಅಲ್ಲಿ ನೆಲೆಸಿದ್ದ ಯೆಹೂದ್ಯರ ಬಳಿ ಹೋಗುವುದು ಅವನ ಸಾರುವ ನಮೂನೆಯಾಗಿತ್ತು. ಅವನ ಸಮೀಪಿಸುವಿಕೆ ಯಾವ ರೀತಿಯದ್ದಾಗಿತ್ತು? ಮೆಸ್ಸೀಯನು ಬಂದು, ಯಜ್ಞಾರ್ಪಿತವಾಗಿ ಮರಣಪಟ್ಟು, ಪುನರುತ್ಥಾನಗೊಳಿಸಲ್ಪಟ್ಟಿದ್ದನೆಂಬುದಕ್ಕೆ, ಮನದಟ್ಟುಮಾಡುವ ಬೈಬಲ್‌ ರುಜುವಾತುಗಳನ್ನು ಅವನು ಜಾಣ್ಮೆಯಿಂದಲೂ ಗೌರವಪೂರ್ವಕವಾಗಿಯೂ ಸಾದರಪಡಿಸಿದನು.—ಅ. ಕೃತ್ಯಗಳು 13:5, 14-16, 43; 17:1-3, 10.

6 ಹೀಗೆ, ಮೆಸ್ಸೀಯನ ಮತ್ತು ದೇವರ ರಾಜ್ಯದ ಕುರಿತು ಕಲಿಸಲಿಕ್ಕಾಗಿ, ಪೌಲನು ಯೆಹೂದ್ಯರಿಗಿದ್ದ ಧರ್ಮಶಾಸ್ತ್ರದ ಮತ್ತು ಪ್ರವಾದಿಗಳ ಜ್ಞಾನವನ್ನು ಆಧಾರಮಾಡಿಕೊಂಡನು. ಮತ್ತು ಕೆಲವರಿಗೆ ಮನಗಾಣಿಸುವುದರಲ್ಲಿ ಅವನು ಸಫಲನಾದನು. (ಅ. ಕೃತ್ಯಗಳು 14:1; 17:4) ಯೆಹೂದಿ ನಾಯಕರ ವಿರೋಧದ ಎದುರಿನಲ್ಲಿಯೂ, ಜೊತೆ ಯೆಹೂದ್ಯರಿಗೆ ಹೀಗೆ ಬರೆದಾಗ ಪೌಲನು ಹೃದಯೋಲ್ಲಾಸದ ಅನಿಸಿಕೆಯನ್ನು ತೋರಿಸಿದನು: “ಸಹೋದರರೇ, ಇಸ್ರಾಯೇಲ್ಯರು ರಕ್ಷಣೆಹೊಂದಬೇಕೆಂಬದೇ ನನ್ನ ಮನೋಭಿಲಾಷೆಯೂ ದೇವರಿಗೆ ನಾನು ಮಾಡುವ ವಿಜ್ಞಾಪನೆಯೂ ಆಗಿದೆ. ದೇವರಲ್ಲಿ ಆಸಕ್ತರಾಗಿದ್ದಾರೆಂದು ನಾನು ಅವರ ವಿಷಯದಲ್ಲಿ ಸಾಕ್ಷಿಕೊಡುತ್ತೇನೆ; ಆದರೂ ಅವರ ಆಸಕ್ತಿ ಜ್ಞಾನಾನುಸಾರವಾದದ್ದಲ್ಲ.”—ರೋಮಾಪುರ 10:1, 2.

ಯೆಹೂದ್ಯೇತರ ವಿಶ್ವಾಸಿಗಳಿಗೆ ಸಹಾಯಮಾಡುವುದು

7. ಪೌಲನು ಸಾರಿದ ಸುವಾರ್ತೆಗೆ ಅನೇಕ ಮಂದಿ ಯೆಹೂದಿ ಮತಾವಲಂಬಿಗಳು ಹೇಗೆ ಪ್ರತಿವರ್ತಿಸಿದರು?

7 ಯೆಹೂದಿ ಮತದ ಸುನ್ನತಿ ಹೊಂದಿದ ಆಚಾರವಂತರಾಗಿ ಪರಿಣಮಿಸಿದ್ದ ಯೆಹೂದ್ಯೇತರರೇ ಯೆಹೂದಿ ಮತಾವಲಂಬಿಗಳು. ರೋಮ್‌ನಲ್ಲಿ, ಸಿರಿಯದ ಅಂತಿಯೋಕ್ಯದಲ್ಲಿ, ಇಥಿಯೋಪ್ಯ ಮತ್ತು ಪಿಸಿದ್ಯದ ಅಂತಿಯೋಕ್ಯದಲ್ಲಿ, ಹೀಗೆ, ಯೆಹೂದ್ಯರು ಚದರಿದ್ದ ಸ್ಥಳಗಳಲ್ಲೆಲ್ಲ ಈ ಯೆಹೂದಿ ಮತಾವಲಂಬಿಗಳಿದ್ದರೆಂಬುದು ವ್ಯಕ್ತ. (ಅ. ಕೃತ್ಯಗಳು 2:8-10; 6:5; 8:27; 13:14, 43; ಹೋಲಿಸಿ ಮತ್ತಾಯ 23:15.) ಅನೇಕ ಯೆಹೂದಿ ಅಧಿಕಾರಿಗಳಿಗೆ ಅಸದೃಶವಾಗಿ, ಮತಾವಲಂಬಿಗಳು ಪ್ರಾಯಶಃ ಅಹಂಕಾರಿಗಳಾಗಿರಲಿಲ್ಲ. ಅವರು ಹೆಮ್ಮೆಯಿಂದ ತಾವು ಅಬ್ರಹಾಮನ ವಂಶಸ್ಥರೆಂದು ಜಂಬಕೊಚ್ಚಿಕೊಳ್ಳಸಾಧ್ಯವಿರಲಿಲ್ಲ. (ಮತ್ತಾಯ 3:9; ಯೋಹಾನ 8:33) ಬದಲಿಗೆ, ಅವರು ವಿಧರ್ಮಿ ದೇವತೆಗಳನ್ನು ತ್ಯಜಿಸಿ, ಯೆಹೋವನ ಕಡೆಗೆ ದೈನ್ಯಭಾವದಿಂದ ತಿರುಗಿ, ಆತನ ಮತ್ತು ಆತನ ನಿಯಮಗಳ ಕುರಿತಾಗಿ ತುಸು ಜ್ಞಾನವನ್ನು ಪಡೆದಿದ್ದರು. ಮತ್ತು ಅವರು ಬರಲಿದ್ದ ಮೆಸ್ಸೀಯನ ಕುರಿತ ಯೆಹೂದಿ ನಿರೀಕ್ಷೆಯಲ್ಲಿ ಪಾಲಿಗರಾಗಿದ್ದರು. ಸತ್ಯಾನ್ವೇಷಣೆಯ ಸಂಬಂಧದಲ್ಲಿ ಬದಲಾವಣೆಯ ಮನಸ್ಸನ್ನು ಆಗಲೇ ತೋರಿಸಿದ್ದ ಅವರಲ್ಲಿ ಅನೇಕರು, ಇನ್ನೂ ಹೆಚ್ಚಿನ ಬದಲಾವಣೆಗಳನ್ನು ಮಾಡಿ, ಅಪೊಸ್ತಲ ಪೌಲನ ಸಾರುವಿಕೆಗೆ ಪ್ರತಿವರ್ತನೆ ತೋರಿಸಲು ಸಿದ್ಧರಾಗಿದ್ದರು. (ಅ. ಕೃತ್ಯಗಳು 13:42, 43) ಒಂದೊಮ್ಮೆ ವಿಧರ್ಮಿ ದೇವತೆಗಳನ್ನು ಆರಾಧಿಸಿದ್ದ ಒಬ್ಬ ಮತಾವಲಂಬಿಯು ಕ್ರೈಸ್ತತ್ವಕ್ಕೆ ಪರಿವರ್ತನೆ ಹೊಂದಿದಾಗ, ಅವನು ಇನ್ನೂ ಅವೇ ದೇವತೆಗಳನ್ನು ಆರಾಧಿಸುತ್ತಿದ್ದ ಇತರ ಅನ್ಯರಿಗೆ ಸಾಕ್ಷಿನೀಡಲು ಅಸಾಧಾರಣವಾಗಿ ಸಜ್ಜಾಗಿದ್ದನು.

8, 9. (ಎ) ಮತಾವಲಂಬಿಗಳಲ್ಲದೆ, ಅನ್ಯರ ಇನ್ನಾವ ವರ್ಗವು ಯೆಹೂದಿ ಧರ್ಮಕ್ಕೆ ಆಕರ್ಷಿಸಲ್ಪಟ್ಟಿತು? (ಬಿ) ಸುನ್ನತಿ ಹೊಂದಿರದ ಅನೇಕ ದೇವಭಯವುಳ್ಳವರು ಸುವಾರ್ತೆಗೆ ಹೇಗೆ ಪ್ರತಿವರ್ತನೆ ತೋರಿಸಿದರು?

8 ಸುನ್ನತಿ ಹೊಂದಿದ ಮತಾವಲಂಬಿಗಳಲ್ಲದೆ, ಬೇರೆ ಯೆಹೂದ್ಯೇತರರು ಯೆಹೂದಿ ಧರ್ಮಕ್ಕೆ ಆಕರ್ಷಿಸಲ್ಪಟ್ಟಿದ್ದರು. ಇವರಲ್ಲಿ ಪ್ರಥಮವಾಗಿ ಕ್ರೈಸ್ತನಾದವನು ಕೊರ್ನೇಲ್ಯನು. ಇವನು ಮತಾವಲಂಬಿಯಾಗಿರದಿದ್ದರೂ, “ಭಕ್ತನೂ . . . ದೇವರಿಗೆ ಭಯಪಡುವವನೂ” ಆಗಿದ್ದನು. (ಅ. ಕೃತ್ಯಗಳು 10:2) ಪ್ರೊಫೆಸರ್‌ ಎಫ್‌. ಎಫ್‌. ಬ್ರೂಸ್‌, ಅಪೊಸ್ತಲರ ಕೃತ್ಯಗಳ ಮೇಲಿನ ತನ್ನ ವ್ಯಾಖ್ಯಾನದಲ್ಲಿ ಬರೆದುದು: “ಇಂತಹ ಅನ್ಯರನ್ನು ಸಾಮಾನ್ಯವಾಗಿ ‘ದೇವಭಯವುಳ್ಳವರು’ ಎಂದು ಕರೆಯಲಾಗುತ್ತಿತ್ತು; ಇದೊಂದು ಪಾರಿಭಾಷಿಕ ಪದವಲ್ಲದಿದ್ದರೂ, ಉಪಯೋಗಿಸಲು ಅನುಕೂಲವಾದ ಪದವಾಗಿದೆ. ಆ ದಿನಗಳ ಅನೇಕ ಅನ್ಯರು, ಯೆಹೂದ ಮತಕ್ಕೆ ಪೂರ್ತಿಯಾಗಿ ಪರಿವರ್ತನೆ ಹೊಂದಲು ಸಿದ್ಧರಾಗಿರದಿದ್ದರೂ (ಸುನ್ನತಿಯ ಆವಶ್ಯಕತೆಯು ಪುರುಷರಿಗೆ ವಿಶೇಷವಾದ ಅಡಚಣೆಯಾಗಿತ್ತು), ಯೆಹೂದಿ ಸಭಾಮಂದಿರದ ಆರಾಧನೆಯ ಸರಳವಾದ ಏಕದೇವವಾದ ಮತ್ತು ಯೆಹೂದಿ ಜೀವನರೀತಿಯ ನೈತಿಕ ಮಟ್ಟದಿಂದ ಅವರು ಆಕರ್ಷಿಸಲ್ಪಟ್ಟಿದ್ದರು. ಅವರಲ್ಲಿ ಕೆಲವರು ಸಭಾಮಂದಿರಗಳಿಗೆ ಹಾಜರಾಗಿ, ಪ್ರಾರ್ಥನೆಗಳನ್ನು ಮತ್ತು ಗ್ರೀಕ್‌ ಭಾಷಾಂತರದಲ್ಲಿ ಓದುವುದನ್ನು ಕೇಳಿದ ಶಾಸ್ತ್ರಪಾಠಗಳನ್ನು ಕೊಂಚಮಟ್ಟಿಗೆ ತಿಳಿದವರಾದರು.”

9 ಏಷಿಯ ಮೈನರ್‌ ಮತ್ತು ಗ್ರೀಸ್‌ನಲ್ಲಿನ ಸಭಾಮಂದಿರಗಳಲ್ಲಿ ಸಾರುತ್ತಿದ್ದಾಗ, ಅಪೊಸ್ತಲ ಪೌಲನು ಅನೇಕ ಮಂದಿ ದೇವಭಯವುಳ್ಳವರನ್ನು ಭೇಟಿಯಾದನು. ಪಿಸಿದ್ಯದ ಅಂತಿಯೋಕ್ಯದ ಸಭಾಮಂದಿರದಲ್ಲಿ ಕೂಡಿಬಂದಿದ್ದವರನ್ನು, “ಇಸ್ರಾಯೇಲ್‌ ಜನರೇ ಮತ್ತು ಯೆಹೂದ್ಯ ಮತಾವಲಂಬಿಗಳೇ [“ದೇವರಿಗೆ ಭಯಪಡುವ ಇತರರೇ,” NW],” ಎಂದು ಸಂಬೋಧಿಸಿದನು. (ಅ. ಕೃತ್ಯಗಳು 13:16, 26) ಪೌಲನು ಥೆಸಲೊನೀಕದ ಸಭಾಮಂದಿರದಲ್ಲಿ ಮೂರು ಸಬ್ಬತ್‌ ದಿನಗಳಲ್ಲಿ ಸಾರಿದ ಬಳಿಕ, “ಅವರಲ್ಲಿ [ಯೆಹೂದ್ಯರಲ್ಲಿ] ಕೆಲವರೂ ದೇವಭಕ್ತರಾದ ಗ್ರೀಕರಲ್ಲಿ ದೊಡ್ಡಗುಂಪೂ ಪ್ರಮುಖ ಸ್ತ್ರೀಯರಲ್ಲಿ ಅನೇಕರೂ ಒಡಂಬಟ್ಟು ಪೌಲ ಸೀಲರನ್ನು ಸೇರಿಕೊಂಡರು [“ವಿಶ್ವಾಸಿ ಕ್ರೈಸ್ತರಾಗಿ ಪರಿಣಮಿಸಿದರು,” NW],” ಎಂದು ಲೂಕನು ಬರೆಯುತ್ತಾನೆ. (ಅ. ಕೃತ್ಯಗಳು 17:4) ಗ್ರೀಕರಲ್ಲಿ ಕೆಲವರು ಸುನ್ನತಿ ಹೊಂದಿರದ ದೇವಭಯವುಳ್ಳವರಾಗಿದ್ದದ್ದು ಸಂಭವನೀಯ. ಇಂತಹ ಅನೇಕ ಅನ್ಯರು ಯೆಹೂದಿ ಸಮುದಾಯಗಳೊಂದಿಗೆ ಸೇರಿಕೊಂಡರೆಂಬುದಕ್ಕೆ ರುಜುವಾತಿದೆ.

“ಅವಿಶ್ವಾಸಿಗಳ” ಮಧ್ಯೆ ಸಾರುವುದು

10. ಪೌಲನು ಶಾಸ್ತ್ರದ ಹಿನ್ನೆಲೆಯಿಲ್ಲದ ಅನ್ಯರಿಗೆ ಹೇಗೆ ಸಾರಿದನು, ಮತ್ತು ಪರಿಣಾಮವೇನಾಯಿತು?

10 ಕ್ರೈಸ್ತ ಗ್ರೀಕ್‌ ಶಾಸ್ತ್ರಗಳಲ್ಲಿ, “ಅವಿಧೇಯರು [“ಅವಿಶ್ವಾಸಿಗಳು,” NW]” ಎಂಬ ಪದವು, ಕ್ರೈಸ್ತ ಸಭೆಯ ಹೊರಗಿನ ಸಾಮಾನ್ಯ ಜನರಿಗೆ ಅನ್ವಯಿಸಬಲ್ಲದು. ಅನೇಕಾವರ್ತಿ ಇದು ವಿಧರ್ಮಿಗಳಿಗೆ ಸೂಚಿತವಾಗಿದೆ. (ರೋಮಾಪುರ 15:31; 1 ಕೊರಿಂಥ 14:22, 23; 2 ಕೊರಿಂಥ 4:4; 6:14) ಆ್ಯಥೆನ್ಸ್‌ನಲ್ಲಿ ಅನೇಕ ಅವಿಶ್ವಾಸಿಗಳು ಗ್ರೀಕ್‌ ತತ್ತ್ವಜ್ಞಾನವನ್ನು ಕಲಿತವರಾಗಿದ್ದರು, ಆದರೆ ಶಾಸ್ತ್ರಗಳ ಹಿನ್ನೆಲೆಯೇ ಅವರಿಗಿರಲಿಲ್ಲ. ಇದು ಪೌಲನನ್ನು ಅವರಿಗೆ ಸಾಕ್ಷಿನೀಡುವುದರಿಂದ ಎದೆಗುಂದಿಸಿತೊ? ಇಲ್ಲ. ಆದರೂ ಅವನು ತನ್ನ ಸಮೀಪಿಸುವಿಕೆಯನ್ನು ಹೊಂದಿಸಿಕೊಂಡನು. ಆ್ಯಥೆನ್ಸ್‌ನವರಿಗೆ ಅಜ್ಞಾತವಾಗಿದ್ದ ಹೀಬ್ರು ಶಾಸ್ತ್ರದಿಂದ ನೇರವಾಗಿ ಉಲ್ಲೇಖಿಸದೆ, ಅವನು ಕೌಶಲದಿಂದ ಬೈಬಲಿನ ವಿಚಾರಗಳನ್ನು ಪ್ರಸ್ತಾಪಿಸಿದನು. ಬೈಬಲಿನ ಸತ್ಯಕ್ಕೂ ಪುರಾತನದ ಸ್ಟಾಯಿಕ್‌ ಕವಿಗಳು ಹೇಳಿದ ಕೆಲವು ವಿಚಾರಗಳಿಗೂ ಇರುವ ಹೋಲಿಕೆಗಳನ್ನು ಅವನು ನಿಪುಣತೆಯಿಂದ ತೋರಿಸಿದನು. ಸಕಲ ಮಾನವಕುಲಕ್ಕಿರುವ ಒಬ್ಬನೇ ಸತ್ಯದೇವರ ಕುರಿತಾದ, ಸತ್ತು ಪುನರುತ್ಥಾನಹೊಂದಿದ ಪುರುಷನೊಬ್ಬನ ಮೂಲಕ ನೀತಿಯಿಂದ ನ್ಯಾಯತೀರಿಸುವ ದೇವರ ಕುರಿತಾದ ಸಾಮಾನ್ಯ ಜ್ಞಾನವನ್ನು ಅವನು ನೀಡಿದನು. ಹೀಗೆ, ಪೌಲನು ಆ್ಯಥೆನ್ಸ್‌ನವರಿಗೆ ಕ್ರಿಸ್ತನ ಕುರಿತು ಸಮಯೋಚಿತ ನಯದಿಂದ ಸಾರಿದನು. ಪರಿಣಾಮವೇನು? ಅಧಿಕಾಂಶ ಜನರು ಅವನನ್ನು ಕೇವಲ ಅಪಹಾಸ್ಯಮಾಡಿದರೂ ಅಥವಾ ಸಂದೇಹ ವ್ಯಕ್ತಪಡಿಸಿದರೂ, “ಕೆಲವರು ಅವನನ್ನು ಅಂಟಿಕೊಂಡು ನಂಬಿದರು; ನಂಬಿದವರಲ್ಲಿ ಅರಿಯೋಪಾಗದ ಸಭೆಯವನಾದ ದಿಯೊನುಸ್ಯನೂ ದಾಮರಿಯೆಂಬಾಕೆಯೂ ಇನ್ನು ಕೆಲವರೂ ಇದ್ದರು.”—ಅ. ಕೃತ್ಯಗಳು 17:18, 21-34.

11. ಕೊರಿಂಥವು ಯಾವ ರೀತಿಯ ನಗರವಾಗಿತ್ತು, ಮತ್ತು ಅಲ್ಲಿ ಪೌಲನ ಸಾರುವ ಚಟುವಟಿಕೆಯ ಫಲಿತಾಂಶವೇನಾಗಿತ್ತು?

11 ಕೊರಿಂಥದಲ್ಲಿ ಯೆಹೂದ್ಯರ ದೊಡ್ಡ ಗಾತ್ರದ ಒಂದು ಸಮುದಾಯವಿತ್ತು. ಆದಕಾರಣ, ಸಭಾಮಂದಿರದಲ್ಲಿ ಸಾರುತ್ತ ಪೌಲನು ತನ್ನ ಶುಶ್ರೂಷೆಯನ್ನು ಆರಂಭಿಸಿದನು. ಆದರೆ ಯೆಹೂದ್ಯರು ವಿರೋಧಿಸುವವರಾಗಿ ಪರಿಣಮಿಸಿದಾಗ, ಪೌಲನು ಅನ್ಯಜನರ ಬಳಿಗೆ ಹೋದನು. (ಅ. ಕೃತ್ಯಗಳು 18:1-6) ಅವರು ಎಂತಹ ಜನರಾಗಿದ್ದರು! ಕೊರಿಂಥವು ತುಂಬ ಚಟುವಟಿಕೆಯ, ಸರ್ವದೇಶೀಯರ, ವಾಣಿಜ್ಯ ನಗರವಾಗಿದ್ದು, ಗ್ರೀಕೋರೋಮನ್‌ ಲೋಕದಲ್ಲೆಲ್ಲ ಅನೈತಿಕತೆಗೆ ಕುಪ್ರಸಿದ್ಧವಾಗಿತ್ತು. ಹೌದು “ಕೊರಿಂಥೀಕರಿಸುವುದು” ಎಂದರೆ ದುರಾಚಾರದಿಂದ ವರ್ತಿಸುವುದಾಗಿತ್ತು. ಆದರೂ, ಯೆಹೂದ್ಯರು ಪೌಲನ ಸಾರುವಿಕೆಯನ್ನು ತಿರಸ್ಕರಿಸಿದ ಮೇಲೆ ಕ್ರಿಸ್ತನು ಅವನಿಗೆ ಕಾಣಿಸಿಕೊಂಡು, “ನೀನು ಹೆದರಬೇಡ; ಸುಮ್ಮನಿರದೆ ಮಾತಾಡುತ್ತಲೇ ಇರು, . . . ಈ ಪಟ್ಟಣದಲ್ಲಿ ನನಗೆ ಬಹಳ ಮಂದಿ ಇದ್ದಾರೆ” ಎಂದು ಹೇಳಿದನು. (ಅ. ಕೃತ್ಯಗಳು 18:9, 10) ಕ್ರಿಸ್ತನು ಹೇಳಿದಂತೆಯೇ ಆಯಿತು. ಸಭೆಯ ಕೆಲವು ಮಂದಿ ಸದಸ್ಯರು ಹಿಂದೆ “ಕೊರಿಂಥದ” ಜೀವನಶೈಲಿಯನ್ನು ನಡೆಸಿದ್ದರೂ, ಪೌಲನು ಕೊರಿಂಥದಲ್ಲಿ ಒಂದು ಸಭೆಯನ್ನು ಸ್ಥಾಪಿಸಿದನು.—1 ಕೊರಿಂಥ 6:9-11.

ಇಂದು “ಎಲ್ಲ ರೀತಿಯ ಜನ”ರನ್ನು ರಕ್ಷಿಸಲು ಯತ್ನಿಸುವುದು

12, 13. (ಎ) ಇಂದು ನಮ್ಮ ಪ್ರದೇಶವು ಪೌಲನ ದಿನದ್ದಕ್ಕೆ ಹೇಗೆ ಸಮಾನರೂಪದ್ದಾಗಿದೆ? (ಬಿ) ಕ್ರೈಸ್ತಪ್ರಪಂಚದ ಧರ್ಮಗಳು ದೀರ್ಘಕಾಲದಿಂದ ಸ್ಥಾಪಿತವಾಗಿರುವ ಪ್ರದೇಶಗಳಲ್ಲಿ ಅಥವಾ ಸಂಘಟಿತ ಧರ್ಮದಲ್ಲಿ ಬೇಸತ್ತಿರುವ ಅನೇಕರ ಕಡೆಗೆ ನಾವು ಯಾವ ಮನೋಭಾವವನ್ನು ತೋರಿಸುತ್ತೇವೆ?

12 ಒಂದನೆಯ ಶತಮಾನದಂತೆ, ಇಂದೂ “ದೇವರ ಅಪಾತ್ರ ಕೃಪೆಯು, . . . ಎಲ್ಲ ರೀತಿಯ ಜನರಿಗೆ ರಕ್ಷಣೆಯನ್ನು ತರುತ್ತದೆ.” (ತೀತ 2:11, NW) ಸುವಾರ್ತೆಯನ್ನು ಸಾರಲಿಕ್ಕಾಗಿರುವ ಪ್ರದೇಶವು, ಸಕಲ ಭೂಖಂಡಗಳನ್ನೂ ಹೆಚ್ಚಿನ ಸಮುದ್ರದ್ವೀಪಗಳನ್ನೂ ಆವರಿಸುವಷ್ಟು ವಿಸ್ತೃತವಾಗಿದೆ. ಮತ್ತು ಪೌಲನ ದಿನದಂತೆಯೇ, “ಎಲ್ಲ ರೀತಿಯ ಜನರು” ನಿಜವಾಗಿಯೂ ಭೇಟಿಮಾಡಲ್ಪಡುತ್ತಾರೆ. ಉದಾಹರಣೆಗೆ, ನಮ್ಮಲ್ಲಿ ಕೆಲವರು, ಕ್ರೈಸ್ತಪ್ರಪಂಚದ ಚರ್ಚುಗಳು ಅನೇಕ ಶತಮಾನಗಳಿಂದ ಸ್ಥಾಪಿಸಲ್ಪಟ್ಟಿರುವ ದೇಶಗಳಲ್ಲಿ ಸಾರುತ್ತೇವೆ. ಒಂದನೆಯ ಶತಮಾನದ ಯೆಹೂದ್ಯರಂತೆ, ಅವುಗಳ ಸದಸ್ಯರು ಧಾರ್ಮಿಕ ಸಂಪ್ರದಾಯಗಳಿಂದ ಬಲವಾಗಿ ಬಿಗಿಯಲ್ಪಟ್ಟಿರುವವರಾಗಿರಬಹುದು. ಆದರೂ, ಸಹೃದಯ ಸ್ಥಿತಿಯಲ್ಲಿರುವವರನ್ನು ಹುಡುಕಿ, ಅವರಲ್ಲಿರುವ ಯಾವುದೇ ಬೈಬಲ್‌ ಜ್ಞಾನವನ್ನು ವರ್ಧಿಸಲು ನಾವು ಸಂತೋಷಿಸುತ್ತೇವೆ. ಅವರ ಧಾರ್ಮಿಕ ನಾಯಕರು ಕೆಲವು ಬಾರಿ ನಮ್ಮನ್ನು ವಿರೋಧಿಸಿ, ಹಿಂಸಿಸಿದರೂ ನಾವು ಅವರನ್ನು ಧಿಕ್ಕರಿಸಿಯಾಗಲಿ, ಕಡೆಗಣಿಸಿಯಾಗಲಿ ಮಾತಾಡುವುದಿಲ್ಲ. ಬದಲಿಗೆ, ಅವರಲ್ಲಿ ಕೆಲವರು ನಿಷ್ಕೃಷ್ಟ ಜ್ಞಾನದ ಕೊರತೆಯುಳ್ಳವರಾಗಿದ್ದರೂ, “ದೇವರಲ್ಲಿ ಆಸಕ್ತ”ರಾಗಿರಬಹುದೆಂಬುದನ್ನು ನಾವು ಗ್ರಹಿಸುತ್ತೇವೆ. ಯೇಸು ಮತ್ತು ಪೌಲರಂತೆಯೇ, ನಾವು ಜನರಿಗೆ ನಿಜ ಪ್ರೀತಿಯನ್ನು ತೋರಿಸುತ್ತೇವೆ ಮತ್ತು ಅವರು ರಕ್ಷಿಸಲ್ಪಡಬೇಕೆಂಬ ಉತ್ಸಾಹಪೂರಿತ ಬಯಕೆ ನಮಗಿದೆ.—ರೋಮಾಪುರ 10:2.

13 ಸಾರುತ್ತಿರುವಾಗ, ನಮ್ಮಲ್ಲಿ ಅನೇಕರು ಸಂಘಟಿತ ಧರ್ಮಗಳಿಂದ ಬೇಸತ್ತಿರುವ ವ್ಯಕ್ತಿಗಳನ್ನು ಭೇಟಿಯಾಗುತ್ತೇವೆ. ಆದರೂ, ಅವರು ಇನ್ನೂ, ಸ್ವಲ್ಪ ಮಟ್ಟಿಗೆ ದೇವರಲ್ಲಿ ನಂಬಿಕೆಯಿಟ್ಟು, ಪ್ರಾಮಾಣಿಕವಾದ ಜೀವನವನ್ನು ನಡೆಸಿ, ದೇವಭಯವುಳ್ಳವರಾಗಿರಬಹುದು. ಈ ವಕ್ರವಾದ ಮತ್ತು ಹೆಚ್ಚು ಭಕ್ತಿಹೀನವಾಗುತ್ತಿರುವ ಸಂತತಿಯಲ್ಲಿ, ದೇವರಲ್ಲಿ ಸ್ವಲ್ಪ ನಂಬಿಕೆಯಾದರೂ ಇರುವ ಜನರನ್ನು ಭೇಟಿಯಾಗಲು ನಾವು ಸಂತೋಷಿಸಬಾರದೊ? ಮತ್ತು ಕಪಟಾಚಾರ ಮತ್ತು ಸುಳ್ಳಿನಿಂದ ಗುರುತಿಸಲ್ಪಡದ ಒಂದು ಆರಾಧನಾ ವಿಧಕ್ಕೆ ಅವರನ್ನು ನಡೆಸಲು ನಾವು ಕಾತುರರಾಗಿರುವುದಿಲ್ಲವೊ?—ಫಿಲಿಪ್ಪಿ 2:15.

14, 15. ಸುವಾರ್ತೆ ಸಾರಲು ಒಂದು ದೊಡ್ಡ ಕ್ಷೇತ್ರವು ದೊರಕಿರುವುದು ಹೇಗೆ?

14 ಎಳೆಬಲೆಯ ತನ್ನ ದೃಷ್ಟಾಂತದಲ್ಲಿ, ಸಾರುವ ಕಾರ್ಯಕ್ಕೆ ವಿಶಾಲವಾದ ಪ್ರದೇಶವೊಂದಿರುವುದೆಂದು ಯೇಸು ಮುಂತಿಳಿಸಿದನು. (ಮತ್ತಾಯ 13:47-49) ಈ ದೃಷ್ಟಾಂತವನ್ನು ವಿವರಿಸುತ್ತ, ಸೆಪ್ಟೆಂಬರ್‌ 15, 1992ರ ಕಾವಲಿನಬುರುಜು ಪತ್ರಿಕೆಯು 20ನೆಯ ಪುಟದಲ್ಲಿ ಹೇಳಿದ್ದು: “ಕ್ರೈಸ್ತಪ್ರಪಂಚದ ಸದಸ್ಯರು, ದೇವರ ವಾಕ್ಯದ ಭಾಷಾಂತರದಲ್ಲಿ, ನಕಲು ಮಾಡುವಿಕೆಯಲ್ಲಿ ಮತ್ತು ಹಂಚುವಿಕೆಯಲ್ಲಿ ಶತಮಾನಗಳಿಂದ ಒಂದು ಮುಖ್ಯ ಪಾತ್ರವನ್ನು ವಹಿಸಿದ್ದರು. ಚರ್ಚುಗಳು ಅನಂತರ, ದೂರ ದೂರದ ದೇಶಗಳ ಭಾಷೆಗೆ ಬೈಬಲನ್ನು ಭಾಷಾಂತರಿಸಿದ ಬೈಬಲ್‌ ಸೊಸೈಟಿಗಳನ್ನು ರಚಿಸಿದವು ಮತ್ತು ಬೆಂಬಲಿಸಿದವು. ಅನ್ನ ಕ್ರೈಸ್ತರನ್ನು ಮಾಡಿದ ವೈದ್ಯಕೀಯ ಮಿಷನೆರಿಗಳನ್ನು ಮತ್ತು ಶಿಕ್ಷಕರನ್ನು ಸಹ ಅವರು ಕಳುಹಿಸಿಕೊಟ್ಟರು. ಇದು ದೇವರ ಪ್ರಸನ್ನತೆ ಇಲ್ಲದ ಕೆಟ್ಟ ಮೀನುಗಳನ್ನು ಬಹುಸಂಖ್ಯೆಯಲ್ಲಿ ಒಟ್ಟುಗೂಡಿಸಿತು. ಕೆಟ್ಟದಾಗಿದ್ದರೂ, ಅದು ಕಡಿಮೆಪಕ್ಷ ಲಕ್ಷಾಂತರ ಅಕ್ರೈಸ್ತ ಜನರನ್ನು ಬೈಬಲಿನ ಕಡೆಗೆ ಮತ್ತು ಒಂದು ಕ್ರೈಸ್ತ ಪದ್ಧತಿಗೆ ಹೊರಗೆಡಹಿತು.”

15 ಕ್ರೈಸ್ತಪ್ರಪಂಚವು ಮತಪರಿವರ್ತನೆಯಲ್ಲಿ ದಕ್ಷಿಣ ಅಮೆರಿಕ, ಆಫ್ರಿಕ ಮತ್ತು ಕೆಲವು ಸಮುದ್ರ ದ್ವೀಪಗಳಲ್ಲಿ ವಿಶೇಷವಾಗಿ ಪರಿಣಾಮಕಾರಿಯಾಗಿದೆ. ನಮ್ಮ ದಿನದಲ್ಲಿ, ಈ ಪ್ರದೇಶಗಳಲ್ಲಿ ಅನೇಕ ಮಂದಿ ನಮ್ರರು ಕಂಡುಹಿಡಿಯಲ್ಪಟ್ಟಿದ್ದಾರೆ, ಮತ್ತು ಇಂತಹ ದೀನರ ಕಡೆಗೆ, ಪೌಲನಿಗೆ ಯೆಹೂದಿ ಮತಾವಲಂಬಿಗಳ ಕಡೆಗೆ ಇದ್ದಂತೆಯೇ, ಸಕಾರಾತ್ಮಕವಾದ, ಪ್ರೀತಿಭರಿತವಾದ ಮನೋಭಾವವು ನಮಗಿರುವಲ್ಲಿ, ನಾವು ಹೆಚ್ಚು ಒಳ್ಳೆಯದನ್ನು ಮಾಡುತ್ತ ಮುಂದುವರಿಯಸಾಧ್ಯವಿದೆ. ನಮ್ಮ ಸಹಾಯವು ಅಗತ್ಯವಿರುವವರಲ್ಲಿ, ಯೆಹೋವನ ಸಾಕ್ಷಿಗಳ ಕಡೆಗೆ “ಸಹಾನುಭೂತಿಯುಳ್ಳವರು” ಎಂದು ಹೇಳಬಹುದಾದ ಲಕ್ಷಾಂತರ ಮಂದಿ ಜನರೂ ಇದ್ದಾರೆ. ನಾವು ಅವರನ್ನು ಭೇಟಿಮಾಡುವಾಗ, ಅವರು ಯಾವಾಗಲೂ ನಮ್ಮನ್ನು ನೋಡಲು ಇಷ್ಟಪಡುತ್ತಾರೆ. ಕೆಲವರು ನಮ್ಮೊಂದಿಗೆ ಬೈಬಲ್‌ ಅಧ್ಯಯನ ಮಾಡಿ, ಕೂಟಗಳಿಗೆ, ವಿಶೇಷವಾಗಿ ಕ್ರಿಸ್ತನ ಮರಣದ ವಾರ್ಷಿಕ ಜ್ಞಾಪಕಾಚರಣೆಗೆ ಹಾಜರಾಗಿದ್ದಾರೆ. ಇಂತಹವರು, ರಾಜ್ಯದ ಸುವಾರ್ತೆಯನ್ನು ಸಾರಲಿಕ್ಕಾಗಿ ಇರುವ ದೊಡ್ಡದಾಗಿರುವ ಒಂದು ಕ್ಷೇತ್ರವನ್ನು ಪ್ರತಿನಿಧೀಕರಿಸುವುದಿಲ್ಲವೊ?

16, 17. (ಎ) ಯಾವ ರೀತಿಯ ಜನರನ್ನು ನಾವು ಸುವಾರ್ತೆಯೊಂದಿಗೆ ಸಮೀಪಿಸುತ್ತೇವೆ? (ಬಿ) ವಿವಿಧ ರೀತಿಯ ಜನರಿಗೆ ಸಾರುವಾಗ ನಾವು ಪೌಲನನ್ನು ಹೇಗೆ ಅನುಕರಿಸುತ್ತೇವೆ?

16 ಅಲ್ಲದೆ, ಕ್ರೈಸ್ತಪ್ರಪಂಚದ ಹೊರಗಣ ಸಂಸ್ಕೃತಿಗಳಿಂದ ಬರುವವರ—ನಾವು ಅವರನ್ನು ಅವರ ಸ್ವದೇಶಗಳಲ್ಲಿ ಭೇಟಿಯಾಗಲಿ ಅಥವಾ ಅವರು ಪಾಶ್ಚಾತ್ಯ ದೇಶಗಳಿಗೆ ವಲಸೆ ಬಂದವರಾಗಿರಲಿ—ಕುರಿತೇನು? ಮತ್ತು ಧರ್ಮಕ್ಕೆ ಬೆನ್ನುಹಾಕಿ, ನಾಸ್ತಿಕರೊ, ಆಜ್ಞೇಯತಾ ವಾದಿಗಳೊ ಆಗಿರುವ ಕೋಟಿಗಟ್ಟಲೆ ಜನರ ಕುರಿತೇನು? ಅಲ್ಲದೆ, ಪುಸ್ತಕ ಭಂಡಾರಗಳಲ್ಲಿ ದೊರೆಯುವ ಅನೇಕಾನೇಕ ಸ್ವಸಹಾಯ ಪುಸ್ತಕಗಳಲ್ಲಿ ಪ್ರಕಟವಾಗುತ್ತಿರುವ, ಆಧುನಿಕ ತತ್ತ್ವಜ್ಞಾನ ಅಥವಾ ಜನಪ್ರಿಯ ಮನಶ್ಶಾಸ್ತ್ರಗಳಿಗೆ ಧಾರ್ಮಿಕ ಶ್ರದ್ಧೆಯಿಂದ ಕಿವಿಗೊಡುವವರ ವಿಷಯದಲ್ಲೇನು? ಇಂತಹ ಜನರನ್ನು, ಅವರು ರಕ್ಷಣಾತೀತರೆಂದು ಪರಿಗಣಿಸಿ, ಅಸಡ್ಡೆಮಾಡಬೇಕೊ? ಅಪೊಸ್ತಲ ಪೌಲನನ್ನು ನಾವು ಅನುಕರಿಸುವಲ್ಲಿ, ನಾವು ಅಸಡ್ಡೆಮಾಡಬಾರದು.

17 ಆ್ಯಥೆನ್ಸ್‌ನಲ್ಲಿ ಸಾರುತ್ತಿದ್ದಾಗ, ತನ್ನ ಕೇಳುಗರೊಂದಿಗೆ ತತ್ತ್ವಜ್ಞಾನವನ್ನು ಚರ್ಚಿಸುವ ಬಲೆಯೊಳಗೆ ಪೌಲನು ಬೀಳಲಿಲ್ಲ. ಆದರೂ, ಅವನು ತನ್ನ ತರ್ಕವನ್ನು ತಾನು ಮಾತಾಡುತ್ತಿದ್ದ ಜನರಿಗೆ ಹೊಂದಿಸಿಕೊಂಡು, ಬೈಬಲ್‌ ಸತ್ಯಗಳನ್ನು ಸ್ಪಷ್ಟವೂ ನ್ಯಾಯಸಮ್ಮತವೂ ಆದ ರೀತಿಯಲ್ಲಿ ಸಾದರಪಡಿಸಿದನು. ತದ್ರೀತಿ, ಸಾರುವ ಜನರ ಧರ್ಮಗಳ ಅಥವಾ ತತ್ತ್ವಜ್ಞಾನಗಳ ವಿಷಯದಲ್ಲಿ ನಾವು ಪರಿಣತರಾಗಿರಬೇಕೆಂದಿಲ್ಲ. ಆದರೂ, ನಮ್ಮ ಸಾಕ್ಷಿಯು ಪರಿಣಾಮಕಾರಿಯಾಗಿದ್ದು, ನಾವು ಹೀಗೆ “ಸಕಲ ವಿಧಗಳ ಜನರಿಗೆ ಸರ್ವಸಂಗತಿಗಳೂ” ಆಗುವಂತೆ ನಮ್ಮ ಸಮೀಪಿಸುವಿಕೆಯನ್ನು ಹೊಂದಿಸಿಕೊಳ್ಳುತ್ತೇವೆ. (1 ಕೊರಿಂಥ 9:22, NW) ಕೊಲೊಸ್ಸೆಯ ಕ್ರೈಸ್ತರಿಗೆ ಬರೆಯುತ್ತ, ಪೌಲನು ಹೇಳಿದ್ದು: “ಸಮಯವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿ ಹೊರಗಿನವರ ಮುಂದೆ ಜ್ಞಾನವುಳ್ಳವರಾಗಿ ನಡೆದುಕೊಳ್ಳಿರಿ. ನಿಮ್ಮ ಸಂಭಾಷಣೆ ಯಾವಾಗಲೂ ಇಂಪಾಗಿಯೂ ರಸವತ್ತಾಗಿಯೂ ಇರಲಿ; ಹೀಗೆ ನೀವು ಯಾರಾರಿಗೆ ಯಾವಾವ ರೀತಿಯಲ್ಲಿ ಉತ್ತರಹೇಳಬೇಕೋ ಅದನ್ನು ತಿಳುಕೊಳ್ಳುವಿರಿ.” (ಓರೆಅಕ್ಷರಗಳು ನಮ್ಮವು.)—ಕೊಲೊಸ್ಸೆ 4:5, 6.

18. ನಮಗೆ ಯಾವ ಜವಾಬ್ದಾರಿಯಿದೆ, ಮತ್ತು ನಾವು ಏನನ್ನು ಎಂದಿಗೂ ಮರೆಯಬಾರದು?

18 ಯೇಸುವಿನಂತೆ ಮತ್ತು ಅಪೊಸ್ತಲ ಪೌಲನಂತೆ, ನಾವು ಸಕಲ ವಿಧಗಳ ಜನರಿಗೆ ಪ್ರೀತಿಯನ್ನು ತೋರಿಸೋಣ. ವಿಶೇಷವಾಗಿ, ರಾಜ್ಯದ ಸುವಾರ್ತೆಯಲ್ಲಿ ಇತರರೊಂದಿಗೆ ಪಾಲಿಗರಾಗಲು ನಮ್ಮನ್ನು ಶ್ರಮಿಸಿಕೊಳ್ಳೋಣ. ಇನ್ನೊಂದು ಕಡೆಯಲ್ಲಿ, “ಇವರು ಲೋಕದವರಲ್ಲ,” ಎಂದು ಯೇಸು ತನ್ನ ಶಿಷ್ಯರ ಕುರಿತಾಗಿ ಹೇಳಿರುವುದನ್ನು ಎಂದಿಗೂ ಮರೆಯದಿರಿ. (ಯೋಹಾನ 17:16) ಇದು ನಮಗೆ ಏನನ್ನು ಅರ್ಥೈಸುತ್ತದೆಂಬುದನ್ನು ಮುಂದಿನ ಲೇಖನದಲ್ಲಿ ಇನ್ನೂ ಹೆಚ್ಚು ಪರಿಗಣಿಸಲಾಗುವುದು.

ಪುನರ್ವಿಮರ್ಶೆಯ ವಿಧದಲ್ಲಿ

◻ ಲೋಕದ ಕಡೆಗೆ ಯೇಸುವಿಗಿದ್ದ ಸಮತೆಯ ಮನೋಭಾವವನ್ನು ವರ್ಣಿಸಿರಿ.

◻ ಅಪೊಸ್ತಲ ಪೌಲನು ಯೆಹೂದ್ಯರಿಗೂ ಯೆಹೂದಿ ಮತಾವಲಂಬಿಗಳಿಗೂ ಹೇಗೆ ಸಾರಿದನು?

◻ ಪೌಲನು ದೇವಭಯವುಳ್ಳವರನ್ನೂ ಅವಿಶ್ವಾಸಿಗಳನ್ನೂ ಹೇಗೆ ಸಮೀಪಿಸಿದನು?

◻ ನಮ್ಮ ಸಾರುವ ಚಟುವಟಿಕೆಯಲ್ಲಿ ನಾವು ಹೇಗೆ, “ಸಕಲ ವಿಧದ ಜನರಿಗೆ ಸರ್ವಸಂಗತಿಗಳೂ” ಆಗಿರಬಲ್ಲೆವು?

[ಪುಟ 10 ರಲ್ಲಿರುವ ಚಿತ್ರ]

ತಮ್ಮ ನೆರೆಯವರಿಗೆ ದಯಾಭಾವದ ಕೃತ್ಯಗಳನ್ನು ಮಾಡುವುದರಿಂದ, ಕ್ರೈಸ್ತರು ಅನೇಕ ವೇಳೆ ಪೂರ್ವಕಲ್ಪಿತ ಅಭಿಪ್ರಾಯಗಳನ್ನು ಇಲ್ಲವಾಗಿಸಬಲ್ಲರು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ