ಹೆತ್ತವರೇ—ನಿಮ್ಮ ಮಕ್ಕಳನ್ನು ಕಾಪಾಡಿರಿ!
ನೈಜೀರಿಯದಲ್ಲಿರುವ ಒಂದು ಪ್ರೌಢಶಾಲೆಯಲ್ಲಿ, ಲೈಂಗಿಕ ಅನೈತಿಕತೆಗೆ ಕುಖ್ಯಾತಳಾಗಿದ್ದ ಒಬ್ಬ ಹುಡುಗಿಯು ಸೆಕ್ಸ್ನ ಕುರಿತಾಗಿ ಜೊತೆ ವಿದ್ಯಾರ್ಥಿನಿಯರಿಗೆ ಸಲಹೆನೀಡುವುದರಲ್ಲಿ ಆನಂದಿಸುತ್ತಿದ್ದಳು. ಗರ್ಭಪಾತಕ್ಕಾಗಿ ಅವಳು ಸೂಚಿಸಿದ ಔಷಧಗಳಲ್ಲಿ ಒಂದು, ಹೊಗೆಸೊಪ್ಪು ಪದಾರ್ಥವಿದ್ದ ತೀಕ್ಷ್ಣವೂ ಕಹಿಯೂ ಆದ ಬಿಯರ್ ಆಗಿತ್ತು. ವಿಷಯಲಂಪಟ ಸಾಹಿತ್ಯದಿಂದ ಆರಿಸಲ್ಪಟ್ಟ ಅವಳ ಕಥೆಗಳು, ಅವಳ ಜೊತೆ ವಿದ್ಯಾರ್ಥಿನಿಯರಲ್ಲಿ ಅನೇಕರನ್ನು ಮರುಳುಗೊಳಿಸಿತು. ಕೆಲವರು ಸೆಕ್ಸ್ ಅನ್ನು ಪ್ರಯೋಗಿಸಿ ನೋಡಲು ಶುರುಮಾಡಿದರು ಮತ್ತು ಅವರಲ್ಲಿ ಒಬ್ಬಳು ಗರ್ಭವತಿಯಾದಳು. ಗರ್ಭಪಾತಮಾಡಿಕೊಳ್ಳಲು, ಅವಳು ತೀಕ್ಷ್ಣವೂ ಕಹಿಯೂ ಆದ ಹೊಗೆಸೊಪ್ಪು ಬೆರೆಸಿದ ಪೇಯವನ್ನು ಕುಡಿದಳು. ಕೆಲವೇ ತಾಸುಗಳೊಳಗೆ ಅವಳು ರಕ್ತ ವಾಂತಿಮಾಡಲು ಪ್ರಾರಂಭಿಸಿದಳು. ಕೆಲವು ದಿವಸಗಳ ಅನಂತರ, ಅವಳು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಳು.
ಇಂದಿನ ಲೋಕದಲ್ಲಿ, ಸುಲಭವಾಗಿ ನಂಬಿಬಿಡುವ ಕೇಳುಗರಿಗೆ ಕೇಡನ್ನು ಉಂಟುಮಾಡುತ್ತಾ, ಅನೇಕ ಯುವ ಜನರು ನಿರಂತರವಾಗಿ ಸೆಕ್ಸ್ನ ಕುರಿತಾಗಿ ಮಾತಾಡುತ್ತಾರೆ. ಎಳೆಯರು ತಮ್ಮನ್ನು ಕಾಪಾಡುವ ಸೂಕ್ಷ್ಮಪರಿಜ್ಞಾನವನ್ನು ಕಂಡುಕೊಳ್ಳಲು ಯಾರ ಕಡೆಗೆ ತಿರುಗಬೇಕು? ಮಕ್ಕಳನ್ನು “ಯೆಹೋವನ ಶಿಸ್ತು ಮತ್ತು ಮಾನಸಿಕ ಕ್ರಮಪಡಿಸುವಿಕೆ”ಯಲ್ಲಿ (NW) ಬೆಳೆಸಲು ಜವಾಬ್ದಾರಿಯನ್ನು ಹೊಂದಿರುವ, ತಮ್ಮ ದೈವಿಕ ಹೆತ್ತವರ ಸಹಾಯವನ್ನು ಪಡೆದುಕೊಳ್ಳುವುದು ಎಷ್ಟು ಉತ್ತಮವಾಗಿರುವುದು.—ಎಫೆಸ 6:4.
ಸೆಕ್ಸ್ ಶಿಕ್ಷಣದ ಕಡೆಗಿರುವ ಆಫ್ರಿಕನ್ ಮನೋಭಾವಗಳು
ಲೋಕದಾದ್ಯಂತ, ಅನೇಕ ಹೆತ್ತವರು ಸೆಕ್ಸ್ನ ಕುರಿತಾದ ವಿಷಯಗಳನ್ನು ತಮ್ಮ ಮಕ್ಕಳೊಂದಿಗೆ ಚರ್ಚಿಸುವುದನ್ನು ಕಷ್ಟಕರವಾಗಿ ಕಂಡುಕೊಳ್ಳುತ್ತಾರೆ. ಇದು ವಿಶೇಷವಾಗಿ ಆಫ್ರಿಕದಲ್ಲಿ ನಿಜವಾಗಿದೆ. ಸೀಎರ ಲಿಯೋನ್ನಲ್ಲಿರುವ ಒಬ್ಬ ತಂದೆಯಾದ ಡಾನಲ್ಡ್ ಹೇಳಿದ್ದು: “ಯಾವತ್ತೂ ಆ ರೀತಿಯ ವಿಷಯಗಳನ್ನು ಮಕ್ಕಳೊಂದಿಗೆ ಮಾತಾಡಲಾಗುವುದಿಲ್ಲ. ಹಾಗೇ ಮಾತಾಡುವುದು ಆಫ್ರಿಕನ್ ಸಂಸ್ಕೃತಿಯ ಭಾಗವೇ ಅಲ್ಲ.” ಕಾನ್ಫಡಂಟ್ ಎಂಬ ಹೆಸರಿನ ಒಬ್ಬ ನೈಜೀರಿಯನ್ ಮಹಿಳೆಯು ಸಮ್ಮತಿಸುವುದು: “ನನ್ನ ಹೆತ್ತವರು ಸೆಕ್ಸ್ ಅನ್ನು, ಬಹಿರಂಗವಾಗಿ ಮಾತಾಡಬಾರದಾದ ಒಂದು ವಿಷಯದಂತೆ ನೋಡುತ್ತಾರೆ; ಅದು ಸಂಸ್ಕೃತಿಗನುಸಾರವಾಗಿ ನಿಷಿದ್ಧವಾಗಿದೆ.”
ಕೆಲವು ಆಫ್ರಿಕನ್ ಸಂಸ್ಕೃತಿಗಳಲ್ಲಿ, ಶಿಶ್ನ, ವೀರ್ಯ, ಅಥವಾ ಮುಟ್ಟು ಎಂಬಂಥ ಸೆಕ್ಸ್ ಸಂಬಂಧಿತ ಪದಗಳನ್ನು ಹೇಳುವುದು ಅಶ್ಲೀಲವಾಗಿ ಪರಿಗಣಿಸಲ್ಪಡುತ್ತದೆ. ಒಬ್ಬ ಕ್ರೈಸ್ತ ತಾಯಿ ತನ್ನ ಮಗಳಿಗೆ ಅವಳು “ಸೆಕ್ಸ್” ಎಂಬ ಪದವನ್ನು ಉಪಯೋಗಿಸಬಾರದೆಂದು ಸಹ ಹೇಳಿದಳು. ಆದರೆ “ಜಾರತ್ವ” ಎಂಬ ಪದವನ್ನು ಮಗಳು ಉಪಯೋಗಿಸಬಹುದೆಂದು ಹೇಳಿದಳು. ಇದಕ್ಕೆ ವ್ಯತಿರಿಕ್ತವಾಗಿ, ದೇವರ ವಾಕ್ಯವಾದ ಬೈಬಲು ಸೆಕ್ಸ್ ಮತ್ತು ಸೆಕ್ಸ್ ಸಂಬಂಧಿತ ಅಂಗಗಳ ಕುರಿತಾಗಿ ಮುಚ್ಚುಮರೆಯಿಲ್ಲದೆ ಮಾತಾಡುತ್ತದೆ. (ಆದಿಕಾಂಡ 17:11; 18:11; 30:16, 17; ಯಾಜಕಕಾಂಡ 15:2) ಇದರ ಉದ್ದೇಶವು, ದಿಗಿಲುಗೊಳಿಸಲು ಅಥವಾ ಉದ್ರೇಕಗೊಳಿಸಲು ಅಲ್ಲ ಬದಲಿಗೆ ದೇವರ ಜನರನ್ನು ಕಾಪಾಡಲು ಮತ್ತು ಬೋಧಿಸಲಿಕ್ಕಾಗಿದೆ.—2 ತಿಮೊಥೆಯ 3:16.
ಸಾಂಸ್ಕೃತಿಕ ನಿಷಿದ್ಧಗಳನ್ನು ಹೊರತುಪಡಿಸಿ, ಕೆಲವು ಹೆತ್ತವರು ಈ ವಿಷಯಗಳನ್ನು ಮಾತಾಡುವುದರಿಂದ ದೂರವಿರುವುದು ಏಕೆಂಬುದಕ್ಕೆ ಮತ್ತೊಂದು ಕಾರಣವನ್ನು ಒಬ್ಬ ನೈಜೀರಿಯನ್ ತಂದೆಯು ಹೇಳಿದನು: “ನಾನು ನನ್ನ ಮಕ್ಕಳೊಂದಿಗೆ ಸೆಕ್ಸ್ ಕುರಿತಾಗಿ ಮಾತಾಡಿದರೆ, ಅದು ಅವರನ್ನು ಲೈಂಗಿಕ ಅನೈತಿಕತೆಯನ್ನು ಮಾಡುವಂತೆ ಉತ್ತೇಜಿಸಸಾಧ್ಯವಿದೆ.” ಆದರೆ ಸೆಕ್ಸ್ ಕುರಿತ ಗೌರವಭರಿತ, ಬೈಬಲ್ ಆಧಾರಿತ ಮಾಹಿತಿಯು ಮಕ್ಕಳನ್ನು ಹಿಂದೆಮುಂದೆ ನೋಡದೆ, ಪ್ರಯೋಗ ಮಾಡಿನೋಡುವಂತೆ ಉತ್ತೇಜಿಸುತ್ತದೋ? ಇಲ್ಲ, ಅದು ಉತ್ತೇಜಿಸುವುದಿಲ್ಲ. ವಾಸ್ತವದಲ್ಲಿ, ಯುವ ವ್ಯಕ್ತಿಗಳಿಗೆ ಎಷ್ಟು ಕಡಿಮೆ ಜ್ಞಾನವಿರುತ್ತದೋ, ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಳ್ಳುವ ಸಂಭವನೀಯತೆಯು ಅಷ್ಟೇ ಹೆಚ್ಚು ಎಂಬುದು ಸಮಂಜಸವಾದ ಕಾರಣವಾಗಿದೆ. “[ನಿಷ್ಕೃಷ್ಟ ಜ್ಞಾನದ ಮೇಲಾಧಾರಿತ] ವಿವೇಕವು ರಕ್ಷಣೆಗಾಗಿದೆ” (NW) ಎಂದು ಬೈಬಲು ಹೇಳುತ್ತದೆ.—ಪ್ರಸಂಗಿ 7:12.
ಯೇಸುವಿನ ದೃಷ್ಟಾಂತದಲ್ಲಿ, ಒಬ್ಬ ವಿವೇಕಿ ಮನುಷ್ಯನು ಭಾವೀ ಬಿರುಗಾಳಿಯ ಸಂಭವನೀಯತೆಯನ್ನು ಮುಂಗಾಣುತ್ತಾ, ತನ್ನ ಮನೆಯನ್ನು ಒಂದು ಬಂಡೆಯ ಮೇಲೆ ಕಟ್ಟಿದನು. ಒಬ್ಬ ಮೂರ್ಖ ಮನುಷ್ಯನಾದರೋ ಮರಳಿನ ಮೇಲೆ ಮನೆ ಕಟ್ಟಿ, ವಿಪತ್ತನ್ನು ಅನುಭವಿಸಿದನು. (ಮತ್ತಾಯ 7:24-27) ತದ್ರೀತಿಯಲ್ಲಿ, ವಿವೇಕಿ ಕ್ರೈಸ್ತ ಹೆತ್ತವರು, ತಮ್ಮ ಮಕ್ಕಳು ಲೋಕದ ಸಡಿಲು ಲೈಂಗಿಕ ಮಟ್ಟಗಳಿಗೆ ತಕ್ಕಂತೆ ಇರಲಿಕ್ಕಾಗಿ ಬಿರುಗಾಳಿಯಂಥ ಒತ್ತಡಗಳನ್ನು ಎದುರಿಸುವರು ಎಂಬುದನ್ನು ಅರಿತವರಾಗಿ, ದೃಢರಾಗಿ ಉಳಿಯುವಂತೆ ಅವರಿಗೆ ಸಹಾಯಮಾಡುವ ಸೂಕ್ಷ್ಮಪರಿಜ್ಞಾನ ಹಾಗೂ ತಿಳಿವಳಿಕೆಯಿಂದ ತಮ್ಮ ಮಕ್ಕಳನ್ನು ಬಲಪಡಿಸುತ್ತಾರೆ.
ಅನೇಕ ಹೆತ್ತವರು ತಮ್ಮ ಮಕ್ಕಳೊಂದಿಗೆ ಸೆಕ್ಸ್ ಬಗ್ಗೆ ಏಕೆ ಚರ್ಚಿಸುವುದಿಲ್ಲವೆಂಬುದಕ್ಕೆ ಮತ್ತೊಂದು ಕಾರಣವನ್ನು ಒಬ್ಬ ಆಫ್ರಿಕನ್ ಮಹಿಳೆಯು ಹೇಳಿದಳು: “ನಾನು ಯುವತಿಯಾಗಿದ್ದಾಗ, ನನ್ನ ಸಾಕ್ಷಿ ಹೆತ್ತವರು ನನ್ನೊಂದಿಗೆ ಸೆಕ್ಸ್ ಕುರಿತಾದ ವಿಷಯಗಳನ್ನು ಚರ್ಚಿಸಲಿಲ್ಲ, ಆದುದರಿಂದ ನಾನು ನನ್ನ ಮಕ್ಕಳೊಂದಿಗೆ ಈ ಕುರಿತಾದ ವಿಷಯಗಳನ್ನು ಚರ್ಚಿಸುವ ಆಲೋಚನೆಯು ನನ್ನ ಮನಸ್ಸಿಗೆ ಬಂದಿಲ್ಲ.” ಆದರೆ, 10 ಅಥವಾ 20 ವರ್ಷಗಳ ಹಿಂದೆ ಯುವ ಜನರ ಮೇಲೆ ಇದ್ದಂಥ ಒತ್ತಡಗಳಿಗಿಂತ ಈಗಿನ ಯುವ ಜನರ ಮೇಲೆ ಅತ್ಯಧಿಕ ಒತ್ತಡಗಳಿವೆ. ಇದು ಆಶ್ಚರ್ಯಕರವಾದ ಸಂಗತಿಯಲ್ಲ. “ಕಡೇ ದಿವಸಗಳಲ್ಲಿ . . . , ದುಷ್ಟರೂ ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ, ಹೆಚ್ಚಾದ ಕೆಟ್ಟತನಕ್ಕೆ ಹೋಗುವರು” ಎಂಬುದನ್ನು ದೇವರ ವಾಕ್ಯವು ಮುಂತಿಳಿಸಿತು.—2 ತಿಮೊಥೆಯ 3:1, 13.
ಅನೇಕ ಮಕ್ಕಳು ತಮ್ಮ ಹೆತ್ತವರಲ್ಲಿ ಅಂತರಂಗವನ್ನು ತೋಡಿಕೊಳ್ಳುವುದಕ್ಕೆ ಹಿಂದೇಟುಹಾಕುವುದು ಅಥವಾ ಅಶಕ್ತರಾಗಿರುವ ವಾಸ್ತವಾಂಶವು ಸಮಸ್ಯೆಗೆ ಕೂಡಿಸುತ್ತದೆ. ಅಲ್ಪ ವಿಷಯಗಳಲ್ಲಿ ಕೂಡ ಇದ್ದಾರಿಯ ಸಂವಾದವು ತೀರ ಕಡಿಮೆಯಾಗಿರುತ್ತದೆ. 19 ವರ್ಷ ಪ್ರಾಯದ ಒಬ್ಬ ಯುವಕನು ವ್ಯಥೆಪಟ್ಟದ್ದು: “ನಾನು ನನ್ನ ಹೆತ್ತವರೊಂದಿಗೆ ವಿಷಯಗಳನ್ನು ಚರ್ಚಿಸುವುದಿಲ್ಲ. ನನ್ನ ಮತ್ತು ನನ್ನ ತಂದೆಯ ಮಧ್ಯೆ ಒಂದು ಒಳ್ಳೆಯ ಸಂವಾದವು ಇಲ್ಲ. ಅವರು ಗಮನ ಕೊಡುವುದಿಲ್ಲ.”
ಲೈಂಗಿಕ ವಿಷಯಗಳ ಕುರಿತ ಪ್ರಶ್ನೆಗಳನ್ನು ಕೇಳುವುದು ಕೆಟ್ಟ ಪರಿಣಾಮಗಳನ್ನು ತರುವುದೆಂಬುದಾಗಿ ಸಹ ಯುವ ವ್ಯಕ್ತಿಗಳು ಭಯಪಡುತ್ತಾರೆ. ಒಬ್ಬ 16 ವರ್ಷ ಪ್ರಾಯದ ಹುಡುಗಿಯು ಹೇಳಿದ್ದು: “ಸೆಕ್ಸ್ ಸಂಬಂಧಿತ ಸಮಸ್ಯೆಗಳಿಗೆ ನನ್ನ ಹೆತ್ತವರು ಪ್ರತಿಕ್ರಿಯಿಸುವ ರೀತಿಯಿಂದಾಗಿ ನಾನು ಅವರೊಂದಿಗೆ ಇಂಥ ವಿಷಯಗಳನ್ನು ಚರ್ಚಿಸುವುದಿಲ್ಲ. ಕೆಲವು ಸಮಯದ ಹಿಂದೆ ನನ್ನ ಅಕ್ಕ ಸೆಕ್ಸ್ಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳನ್ನು ತಾಯಿಯ ಹತ್ತಿರ ಕೇಳಿದಳು. ತಾಯಿಯು ಅವಳ ಸಮಸ್ಯೆಯೊಂದಿಗೆ ಅವಳಿಗೆ ಸಹಾಯಮಾಡುವುದರ ಬದಲು, ಅವಳ ಉದ್ದೇಶಗಳ ಕುರಿತು ಸಂಶಯಪಟ್ಟರು. ತಾಯಿಯು ಆಗಾಗ್ಗೆ ನನ್ನನ್ನು ಕರೆದು, ನನ್ನ ಅಕ್ಕನ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದರು, ಕೆಲವೊಮ್ಮೆ ಅವಳ ಶೀಲದ ಬಗ್ಗೆ ಶಂಕಿಸುತ್ತಿದ್ದರು. ನಾನು ನನ್ನ ಅಮ್ಮನ ಪ್ರೀತಿಯನ್ನು ಕಳೆದುಕೊಳ್ಳುವ ಸಾಹಸಕ್ಕೆ ಕೈಹಾಕಲು ಬಯಸುವುದಿಲ್ಲ, ಆದುದರಿಂದ ನಾನು ನನ್ನ ಸಮಸ್ಯೆಗಳನ್ನು ಅವರಿಗೆ ಹೇಳುವುದಿಲ್ಲ.”
ಬೋಧಿಸಬೇಕು ಏಕೆ?
ಲೈಂಗಿಕ ವಿಷಯಗಳಲ್ಲಿ ಸಾಕಷ್ಟು ಮಟ್ಟಿಗೆ ನಮ್ಮ ಮಕ್ಕಳಿಗೆ ಬೋಧಿಸುವುದು ಕೇವಲ ಸರಿಯಾದ ಸಂಗತಿಯಾಗಿದೆ ಮಾತ್ರವಲ್ಲ ದಯಾಪರವಾದದ್ದೂ ಆಗಿದೆ. ಹೆತ್ತವರು ತಮ್ಮ ಮಕ್ಕಳಿಗೆ ಸೆಕ್ಸ್ನ ಕುರಿತಾದ ವಿಷಯಗಳನ್ನು ಕಲಿಸದಿರುವಲ್ಲಿ, ಸಾಮಾನ್ಯವಾಗಿ ಹೆತ್ತವರು ನಿರೀಕ್ಷಿಸುವ ಮೊದಲೇ ಬಹಳ ಬೇಗನೇ ಮತ್ತು ಬಹುಮಟ್ಟಿಗೆ ಎಂದೂ ದೈವಿಕ ತತ್ತ್ವಗಳಿಗನುಸಾರವಲ್ಲದ ರೀತಿಯಲ್ಲಿ ಬೇರೆಯವರು ಕಲಿಸುವರು. ಒಬ್ಬ 13 ವರ್ಷ ಪ್ರಾಯದ ಹುಡುಗಿಯು ಜಾರತ್ವವನ್ನು ಮಾಡಿದಳು. ಏಕೆಂದರೆ ಅವಳು ತನ್ನ ಕನ್ಯತ್ವವನ್ನು ಕಳೆದುಕೊಳ್ಳದಿದ್ದರೆ ಮುಂದೆ ಭಯಂಕರ ನೋವನ್ನು ಅನುಭವಿಸುವಳೆಂದು ಅವಳ ಶಾಲಾಸಹಪಾಠಿಯೊಬ್ಬಳು ಅವಳಿಗೆ ಹೇಳಿದಳು. ಅವಳಿಗೆ ಹೀಗೆ ಹೇಳಲಾಯಿತು: “ಅವರು ನಿನ್ನ ಯೋನಿಪೊರೆಯನ್ನು ಕತ್ತರಿಯಿಂದ ಕತ್ತರಿಸುವರು.” ಅವಳು ಏನನ್ನು ಕೇಳಿಸಿಕೊಂಡಿದ್ದಳೋ ಅದನ್ನು ತನ್ನ ಕ್ರೈಸ್ತ ತಾಯಿಗೆ ಏಕೆ ಹೇಳಲಿಲ್ಲವೆಂಬುದನ್ನು ಅನಂತರ ಅವಳಿಗೆ ಕೇಳಿದಾಗ, ಅಂಥ ವಿಷಯಗಳು ವಯಸ್ಕರೊಂದಿಗೆ ಎಂದೂ ಚರ್ಚಿಸಲ್ಪಡುತ್ತಿರಲಿಲ್ಲ ಎಂದು ಆ ಹುಡುಗಿಯು ಉತ್ತರಿಸಿದಳು.
ಒಬ್ಬ ನೈಜೀರಿಯನ್ ಹುಡುಗಿಯು ಹೇಳಿದ್ದು: “ಸೆಕ್ಸ್, ಎಲ್ಲ ಸಹಜ ಮಾನವ ಜೀವಿಗಳು ಪಾಲು ತೆಗೆದುಕೊಳ್ಳಬೇಕಾಗಿರುವ ಒಂದು ವಿಷಯವಾಗಿದೆಯೆಂದು ನನಗೆ ಮನದಟ್ಟುಮಾಡಲು ನನ್ನ ಶಾಲಾ ಸ್ನೇಹಿತರು ಪ್ರಯತ್ನಿಸಿದರು. ಈಗ ನಾನು ಸೆಕ್ಸ್ನಲ್ಲಿ ಪಾಲು ತೆಗೆದುಕೊಳ್ಳದಿದ್ದರೆ, ನಾನು 21ನೇ ಪ್ರಾಯವನ್ನು ಮುಟ್ಟಿದಾಗ, ನನ್ನ ಸ್ತ್ರೀತ್ವದ ಮೇಲೆ ಒಂದು ವಿನಾಶಕರ ಪರಿಣಾಮವಿರುವ ಒಂದು ಕಾಯಿಲೆಯನ್ನು ಅನುಭವಿಸಲು ಪ್ರಾರಂಭಿಸುವೆನೆಂದು ಅವರು ನನಗೆ ಹೇಳಿದರು. ಆದಕಾರಣ, ಅಂಥ ಒಂದು ಭೀಕರ ಅಪಾಯವನ್ನು ತಪ್ಪಿಸುವುದಕ್ಕಾಗಿ, ವಿವಾಹಕ್ಕಿಂತ ಮುಂಚೆ ಲೈಂಗಿಕ ಸಂಭೋಗಗಳನ್ನು ಅನುಭವಿಸುವುದು ಒಳ್ಳೆಯದು ಎಂದು ಅವರು ಹೇಳಿದರು.”
ಅವಳಿಗೆ ತನ್ನ ಹೆತ್ತವರೊಂದಿಗೆ ಒಂದು ಒಳ್ಳೆಯ ಸಂವಾದವಿದ್ದದ್ದರಿಂದ, ಅವಳು ಮನೆಯಲ್ಲಿ ಕಲಿತಿದ್ದಂಥ ವಿಚಾರಕ್ಕೆ ವಿರುದ್ಧವಾಗಿರುವ ವಿಷಯವನ್ನು ತತ್ಕ್ಷಣವೇ ಗ್ರಹಿಸಿದಳು. “ಎಂದಿನಂತೆ, ನಾನು ಮನೆಗೆ ಹೋಗಿ, ಅವರು ಶಾಲೆಯಲ್ಲಿ ನನಗೆ ಹೇಳಿದ ವಿಷಯವನ್ನು ನಾನು ನನ್ನ ತಾಯಿಗೆ ಹೇಳಿದೆ.” ಅವಳ ತಾಯಿಯು ಆ ಮಾಹಿತಿಯನ್ನು ತಪ್ಪೆಂದು ನಿರೂಪಿಸಶಕ್ತಳಾದಳು.—ಜ್ಞಾನೋಕ್ತಿ 14:15ನ್ನು ಹೋಲಿಸಿರಿ.
ಸೆಕ್ಸ್ ವಿಷಯಗಳಲ್ಲಿ ದೈವಿಕ ವಿವೇಕವನ್ನು ಪಡೆದುಕೊಳ್ಳುವಂತೆ ಮಕ್ಕಳಿಗೆ ಸಹಾಯಮಾಡಲಿಕ್ಕಾಗಿ ಬೇಕಾಗಿರುವ ಜ್ಞಾನವನ್ನು ಹೆತ್ತವರು ಕೊಡುವ ಮೂಲಕ, ಅಪಾಯಕರ ಸನ್ನಿವೇಶಗಳನ್ನು ವಿವೇಚಿಸಿ, ತಮ್ಮನ್ನು ಸ್ವಪ್ರಯೋಜನಕ್ಕೆ ಉಪಯೋಗಿಸಿಕೊಳ್ಳಲು ಇಚ್ಛಿಸುವ ಜನರನ್ನು ಗುರುತಿಸುವುದಕ್ಕೆ ಅವರನ್ನು ಅಣಿಗೊಳಿಸುತ್ತಾರೆ. ಇದು ರತಿ ರವಾನಿತ ರೋಗಗಳ ಹಾಗೂ ಅನಪೇಕ್ಷಿತ ಗರ್ಭಧಾರಣೆಯ ಮನೋವ್ಯಥೆಯ ವಿರುದ್ಧವಾಗಿ ಅವರನ್ನು ಸಂರಕ್ಷಿಸಲು ಸಹಾಯಮಾಡುತ್ತದೆ. ಇದು ಅವರ ಸ್ವಗೌರವ ಹಾಗೂ ಇತರರಿಂದ ಅವರು ಗಳಿಸುವ ಗೌರವಕ್ಕೆ ನೆರವನ್ನು ನೀಡುತ್ತದೆ. ಇದು ಅವರನ್ನು ತಪ್ಪುಕಲ್ಪನೆಗಳು ಹಾಗೂ ವ್ಯಾಕುಲತೆಯಿಂದ ಬಿಡುಗಡೆಗೊಳಿಸುತ್ತದೆ. ಇದು ಯೋಗ್ಯವಾದ ಸೆಕ್ಸ್ನ ಕಡೆಗೆ ಒಂದು ಸ್ವಸ್ಥ, ಸಕಾರಾತ್ಮಕ ಮನೋಭಾವವನ್ನು ಬೆಳೆಸುತ್ತಾ, ಅವರು ಮುಂದೆ ವಿವಾಹವಾಗುವಲ್ಲಿ ಸಂತೋಷಕ್ಕೆ ನೆರವನ್ನೀಡುವುದು. ಇದು ದೇವರೊಂದಿಗೆ ಒಂದು ಮೆಚ್ಚುಗೆಯ ನಿಲುವನ್ನು ಕಾಪಾಡಿಕೊಳ್ಳುವಂತೆ ಅವರಿಗೆ ಸಹಾಯಮಾಡಬಲ್ಲದು. ಮತ್ತು ತಮಗೆ ತೋರಿಸಲ್ಪಡುತ್ತಿರುವ ಪ್ರೀತಿಪೂರ್ವಕ ಕಾಳಜಿಯನ್ನು ಮಕ್ಕಳು ನೋಡಿದಂತೆ, ಇದು ತಮ್ಮ ಹೆತ್ತವರನ್ನು ಇನ್ನೂ ಹೆಚ್ಚಾಗಿ ಗೌರವಿಸಲು ಮತ್ತು ಪ್ರೀತಿಸಲು ಅವರನ್ನು ಪ್ರಚೋದಿಸಬಲ್ಲದು.
ಒಳ್ಳೆಯ ಸಂವಾದ
ಹೆತ್ತವರು ತಮ್ಮ ಮಕ್ಕಳ ಅಗತ್ಯಗಳಿಗನುಸಾರ ಸಲಹೆಯನ್ನು ಅನುಗೊಳಿಸಲಿಕ್ಕಾಗಿ, ಅವರ ಮಧ್ಯೆ ಇದ್ದಾರಿಯ ಸಂವಾದವಿರಬೇಕು. ತಮ್ಮ ಮಕ್ಕಳ ಹೃದಮನಗಳಲ್ಲಿ ಏನಿದೆಯೆಂಬುದು ಹೆತ್ತವರಿಗೆ ಗೊತ್ತಾಗುವ ಹೊರತು, ಸ್ವಸ್ಥ ಸಲಹೆಯು ಕೂಡ ಪ್ರಯೋಜನಕರವಾಗಿರಲಿಕ್ಕಿಲ್ಲ. ಇದು ಒಬ್ಬ ವೈದ್ಯನು ರೋಗಿಯ ಅಸ್ವಸ್ಥತೆಯ ಲಕ್ಷಣವೇನೆಂಬುದನ್ನು ತಿಳಿಯದೆ ಔಷಧಿಯನ್ನು ಕೊಡಲು ಪ್ರಯತ್ನಿಸಿದಂತೆ ಇರುವುದು. ಪರಿಣಾಮಕಾರಿ ಸಲಹೆಗಾರರಾಗಿರಲಿಕ್ಕಾಗಿ, ತಮ್ಮ ಮಕ್ಕಳು ನಿಜವಾಗಿಯೂ ಏನನ್ನು ಯೋಚಿಸುತ್ತಾರೆ ಮತ್ತು ಭಾವಿಸುತ್ತಾರೆ ಎಂಬುದನ್ನು ಹೆತ್ತವರು ತಿಳಿಯತಕ್ಕದ್ದು. ಅವರು ತಮ್ಮ ಮಕ್ಕಳು ಎದುರಿಸುತ್ತಿರುವ ಒತ್ತಡಗಳು ಹಾಗೂ ಸಮಸ್ಯೆಗಳು ಮತ್ತು ಅವರನ್ನು ಕಾಡುತ್ತಿರುವ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. “ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ” ಇರಬೇಕಾದರೆ, ಮಕ್ಕಳು ಹೇಳುವಂಥ ವಿಷಯಗಳಿಗೆ ಜಾಗರೂಕವಾಗಿ ಕಿವಿಗೊಡುವುದು ಪ್ರಾಮುಖ್ಯ.—ಯಾಕೋಬ 1:19; ಜ್ಞಾನೋಕ್ತಿ 12:18; ಪ್ರಸಂಗಿ 7:8.
ತಮ್ಮ ಮಕ್ಕಳೊಂದಿಗೆ ಒಂದು ನಿಕಟ ಸಂಬಂಧವನ್ನು—ಅವರು ತಮ್ಮ ಆಂತರಿಕ ಭಾವನೆಗಳನ್ನು ಬಹಿರಂಗಪಡಿಸಲು ಹಿಂದೆಮುಂದೆ ನೋಡದ ಒಂದು ಸಂಬಂಧವನ್ನು—ವಿಕಸಿಸಲು ಹಾಗೂ ಕಾಪಾಡಿಕೊಂಡುಹೋಗಲಿಕ್ಕಾಗಿ ಹೆತ್ತವರ ವತಿಯಿಂದ ಸಮಯ, ಸಹನೆ, ಹಾಗೂ ಪ್ರಯತ್ನವು ಬೇಕಾಗಿದೆ. ಆದರೆ ಅಂಥ ಒಂದು ಸಂಬಂಧವನ್ನು ಸಾಧಿಸುವುದು ಎಷ್ಟು ಹಿತಕರವಾಗಿರುತ್ತದೆ! ಐದು ಮಕ್ಕಳಿರುವ ಒಬ್ಬ ಪಶ್ಚಿಮ ಆಫ್ರಿಕನ್ ತಂದೆಯು ಹೇಳುವುದು: “ನಾನು ತಂದೆಯೂ ಆಪ್ತಸ್ನೇಹಿತನೂ ಆಗಿದ್ದೇನೆ. ಮಕ್ಕಳು ಎಲ್ಲ ವಿಷಯಗಳನ್ನು, ಸೆಕ್ಸ್ ವಿಷಯವನ್ನು ಕೂಡ, ನನ್ನೊಂದಿಗೆ ಮುಚ್ಚುಮರೆಯಿಲ್ಲದೆ ಚರ್ಚಿಸುತ್ತಾರೆ. ಹುಡುಗಿಯರು ಕೂಡ ನನ್ನೊಂದಿಗೆ ತಮ್ಮ ಅಂತರಂಗವನ್ನು ತೋಡಿಕೊಳ್ಳುತ್ತಾರೆ. ಅವರ ಸಮಸ್ಯೆಗಳ ಕುರಿತು ಚರ್ಚಿಸಲು ನಾವು ಸಮಯವನ್ನು ತೆಗೆದುಕೊಳ್ಳುತ್ತೇವೆ. ಅವರು ತಮ್ಮ ಆನಂದಗಳನ್ನು ಸಹ ನನ್ನೊಂದಿಗೆ ಹಂಚಿಕೊಳ್ಳುತ್ತಾರೆ.”
ಅವನ ಪುತ್ರಿಯರಲ್ಲಿ ಒಬ್ಬಳಾದ ಬೋಲಾ ಹೇಳುವುದು: “ನನ್ನ ತಂದೆಯಿಂದ ನಾನು ಯಾವುದೇ ಸಂಗತಿಯನ್ನು ಮುಚ್ಚಿಡುವುದಿಲ್ಲ. ತಂದೆಯು ದಾಕ್ಷಿಣ್ಯಪರರೂ ಸಹಾನುಭೂತಿಯುಳ್ಳವರೂ ಆಗಿದ್ದಾರೆ. ನಾವು ತಪ್ಪನ್ನು ಮಾಡಿರುವಾಗಲೂ, ಅವರು ನಮ್ಮನ್ನು ಹೆದರಿಸುವುದಿಲ್ಲ ಇಲ್ಲವೇ ನಮ್ಮೊಂದಿಗೆ ಒರಟಾಗಿ ನಡೆದುಕೊಳ್ಳುವುದಿಲ್ಲ. ಕೋಪಪಡುವುದಕ್ಕೆ ಬದಲಾಗಿ, ಅವರು ವಿಷಯವನ್ನು ಪರೀಕ್ಷಿಸಿ, ನಾವು ಏನನ್ನು ಮಾಡಬೇಕೆಂಬುದನ್ನು ಇಲ್ಲವೇ ನಾವು ಏನನ್ನು ಮಾಡಬಾರದಿತ್ತು ಎಂಬುದನ್ನು ತೋರಿಸುತ್ತಾರೆ. ಅವರು ಆಗಾಗ್ಗೆ ಯೂತ್ ಪುಸ್ತಕ ಮತ್ತು ಕುಟುಂಬ ಸಂತೋಷ ಪುಸ್ತಕಗಳಿಂದ ವಿಷಯವನ್ನು ಸೂಚಿಸಿ ಮಾತಾಡುತ್ತಾರೆ.”a
ಸಾಧ್ಯವಾದಾಗಲೆಲ್ಲ, ಹೆತ್ತವರು ತಮ್ಮ ಮಕ್ಕಳು ತೀರ ಎಳೆಯವರಾಗಿರುವಾಗ ಸೆಕ್ಸ್ನ ಕುರಿತಾದ ವಿಷಯಗಳನ್ನು ಅವರೊಂದಿಗೆ ಮಾತಾಡಲು ಪ್ರಾರಂಭಿಸುವುದು ಒಳ್ಳೆಯದಾಗಿರುವುದು. ಇದು ಕಷ್ಟಕರ ಹದಿವಯಸ್ಕ ವರ್ಷಗಳಲ್ಲಿ ಮುಂದುವರಿಯುತ್ತಾ ಹೋಗುವ ಚರ್ಚೆಗಳಿಗಾಗಿ ಒಂದು ತಳಹದಿಯನ್ನು ಹಾಕುತ್ತದೆ. ಮುಂಚಿತವಾಗಿಯೇ ಚರ್ಚೆಗಳು ಪ್ರಾರಂಭಿಸಲ್ಪಡದಿರುವಲ್ಲಿ, ತದನಂತರ ಚರ್ಚೆಗಳನ್ನು ಆರಂಭಿಸುವುದು ಕೆಲವೊಮ್ಮೆ ಕಷ್ಟಕರವಾಗಿರುತ್ತದಾದರೂ ಅದು ಮಾಡಲ್ಪಡಸಾಧ್ಯವಿದೆ. ಐದು ಮಕ್ಕಳಿರುವ ಒಬ್ಬ ತಾಯಿಯು ಹೇಳಿದ್ದು: “ನಾನು ಅದರ ಕುರಿತಾಗಿ ಮಾತಾಡಲು ನನ್ನನ್ನು ನಿರ್ಬಂಧಕ್ಕೊಳಪಡಿಸಿದೆ. ಕೊನೆಗೆ ನನಗೆ ಇಲ್ಲವೆ ನನ್ನ ಮಗುವಿಗೆ ಸಂಕೋಚದ ಅನಿಸಿಕೆ ಆಗಲಿಲ್ಲ.” ನಿಮ್ಮ ಮಗುವಿನ ಒಳಿತು ಗಂಡಾಂತರದಲ್ಲಿರುವಾಗ, ಇಂಥ ಪ್ರಯತ್ನಗಳು ಖಂಡಿತವಾಗಿಯೂ ಸಾರ್ಥಕವಾಗಿವೆ.
ಸುರಕ್ಷಿತರು ಮತ್ತು ಸಂತೋಷಿತರು
ತಮ್ಮನ್ನು ಕಾಪಾಡುವಂಥ ಜ್ಞಾನದಿಂದ ಪ್ರೀತಿಪರವಾಗಿ ಅಣಿಗೊಳಿಸುವ ಹೆತ್ತವರನ್ನು ಮಕ್ಕಳು ಮಾನ್ಯಮಾಡುತ್ತಾರೆ. ಕೆಲವು ಆಫ್ರಿಕನ್ ಯೆಹೋವನ ಸಾಕ್ಷಿಗಳಿಂದ ತಿಳಿಸಲ್ಪಟ್ಟಿರುವ ಹೇಳಿಕೆಗಳನ್ನು ಪರಿಗಣಿಸಿರಿ:
24 ವರ್ಷ ಪ್ರಾಯದ ಮೋಜೀಸೋಲಾ ಹೇಳಿದ್ದು: “ನಾನು ನನ್ನ ತಾಯಿಗೆ ಯಾವಾಗಲೂ ಆಭಾರಿಯಾಗಿರುವೆ. ಅವರು ನನಗೆ ತಕ್ಕ ಸಮಯದಲ್ಲಿ ಸೆಕ್ಸ್ನ ಕುರಿತಾದ ಅಗತ್ಯ ಶಿಕ್ಷಣವನ್ನು ಕೊಟ್ಟರು. ನಾನು ಎಳೆಯವಳಾಗಿದ್ದಾಗ ಆ ವಿಷಯಗಳನ್ನು ಅವರು ನನ್ನೊಟ್ಟಿಗೆ ಚರ್ಚಿಸುತ್ತಿದ್ದಾಗ ನನಗೆ ಮುಜುಗರದ ಅನಿಸಿಕೆಯಾದರೂ, ಈಗ ನಾನು ನನ್ನ ತಾಯಿ ನನಗಾಗಿ ಮಾಡಿದ ವಿಷಯಗಳಲ್ಲಿ ಪ್ರಯೋಜನಕಾರಿಯಾದ ಸಂಗತಿಗಳನ್ನು ನೋಡುತ್ತೇನೆ.”
ಇನೀಓಬಾಂಗ್ ಕೂಡಿಸಿದ್ದು: “ಸೆಕ್ಸ್ನ ಕುರಿತಾದ ಸಾಕಷ್ಟು ತರಬೇತನ್ನು ನನಗೆ ನೀಡುವ ಮೂಲಕ ನನಗಾಗಿ ಅಮ್ಮ ಏನನ್ನು ಮಾಡಿದರೋ ಆ ವಿಚಾರದ ಬಗ್ಗೆ ಹಿನ್ನೋಟ ಬೀರಿ, ಯೋಚಿಸುವಾಗ ನಾನು ಯಾವಾಗಲೂ ಸಂತೋಷಿಸುತ್ತೇನೆ. ಇದು ಸ್ತ್ರೀತ್ವದೊಳಗೆ ನನ್ನನ್ನು ಮಾರ್ಗದರ್ಶಿಸುವುದರಲ್ಲಿ ಒಂದು ಅತಿ ಪ್ರಾಮುಖ್ಯವಾದ ಸಹಾಯಕವಾಗಿದ್ದಿರುತ್ತದೆ. ನನ್ನ ಭಾವಿ ಮಕ್ಕಳಿಗಾಗಿ ನಾನು ಅದನ್ನೇ ಮಾಡುವೆನೆಂದು ದೃಢವಾಗಿ ಹೇಳುತ್ತೇನೆ.”
ಹತ್ತೊಂಬತ್ತು ವರ್ಷ ಪ್ರಾಯದ ಕೂನ್ಲೆ ಹೇಳಿದ್ದು: “ಸ್ವೇಚ್ಛಾಚಾರದ ಸೆಕ್ಸ್ಗಾಗಿ ಲೌಕಿಕ ಸ್ತ್ರೀಯರಿಂದ ಬರುವ ಒತ್ತಡಗಳನ್ನು ಎದುರಿಸಿ ನಿಲ್ಲಲು ನನಗೆ ನನ್ನ ಹೆತ್ತವರು ಸಹಾಯಮಾಡಿದ್ದಾರೆ. ಅವರು ನನಗೆ ತರಬೇತು ಕೊಟ್ಟಿರದಿದ್ದರೆ, ನಾನು ಪಾಪಮಾಡಿಬಿಡುತ್ತಿದ್ದೆ. ಅವರು ಏನು ಮಾಡಿದ್ದಾರೋ ಅದಕ್ಕಾಗಿ ನಾನು ಯಾವಾಗಲೂ ಗಣ್ಯತೆಯನ್ನು ತೋರಿಸುವೆ.”
ಕ್ರಿಸ್ಟೀಯಾನಾ ಹೇಳಿದ್ದು: “ಸೆಕ್ಸ್ ಸಂಬಂಧವಾಗಿ ನನ್ನ ತಾಯಿಯೊಂದಿಗೆ ಮಾತಾಡುವ ಕಾರಣ ನಾನು ತುಂಬ ಪ್ರಯೋಜನಗಳನ್ನು ಪಡೆದುಕೊಳ್ಳುತ್ತೇನೆ. ನಾನು ಮಾರಕ ರೋಗಗಳು ಹಾಗೂ ಅನಪೇಕ್ಷಿತ ಗರ್ಭಧಾರಣೆಯಿಂದ ರಕ್ಷಿಸಲ್ಪಟ್ಟಿದ್ದೇನೆ ಹಾಗೂ ನನ್ನ ತಮ್ಮತಂಗಿಯರು ಅನುಸರಿಸುವಂತೆ ಒಂದು ಒಳ್ಳೆಯ ಮಾದರಿಯನ್ನಿಡಲು ಶಕ್ತಳಾಗಿದ್ದೇನೆ. ನಾನು ಜನರಿಂದಲೂ ಗೌರವವನ್ನು ಸಂಪಾದಿಸಿಕೊಂಡಿದ್ದೇನೆ ಹಾಗೂ ನನ್ನ ಭಾವಿ ಪತಿಯು ಸಹ ನನ್ನನ್ನು ಗೌರವಿಸುವರು. ಹೆಚ್ಚು ಪ್ರಾಮುಖ್ಯವಾಗಿ, ಯೆಹೋವ ದೇವರ ಆಜ್ಞೆಯನ್ನು ಪಾಲಿಸುತ್ತಿರುವ ಕಾರಣ ನನಗೆ ಆತನೊಂದಿಗೆ ಒಂದು ಒಳ್ಳೆಯ ಸಂಬಂಧವಿದೆ.”
ಈ ಹಿಂದೆ ಉಲ್ಲೇಖಿಸಿದ ಬೋಲಾ ಹೇಳಿದ್ದು: “ವಿವಾಹಕ್ಕೆ ಕಟ್ಟುಬೀಳದೆ ಅನುಭವಿಸಲ್ಪಡಬೇಕಾದ ವಿಷಯವು ಸೆಕ್ಸ್ ಆಗಿದೆ ಎಂದು ಹೇಳುತ್ತಿದ್ದ ಒಬ್ಬ ಸಹಪಾಠಿಯು ನನಗಿದ್ದಳು. ಅವಳಿಗೆ ಅದು ಒಂದು ವಿನೋದಕರವಾದ ವಿಷಯವಾಗಿತ್ತು. ಆದರೆ, ಅವಳು ಗರ್ಭವತಿಯಾಗಿ, ನಮ್ಮೊಟ್ಟಿಗೆ ಪ್ರೌಢ ಶಾಲೆಯ ಪರೀಕ್ಷೆಯನ್ನು ಬರೆಯಲು ಸಾಧ್ಯವಾಗದಾಗ, ಅದು ವಿನೋದಕರವಲ್ಲವೆಂಬುದನ್ನು ಕಂಡುಕೊಂಡಳು. ನನ್ನನ್ನು ಮಾರ್ಗದರ್ಶಿಸಲು ಒಬ್ಬ ಒಳ್ಳೆಯ ತಂದೆಯು ನನಗಿದ್ದಿರದಿದ್ದರೆ, ನಾನು ಅವಳಂತೆ ಕಷ್ಟಕರ ಅನುಭವಗಳಿಂದ ಪಾಠವನ್ನು ಕಲಿತುಕೊಳ್ಳುತ್ತಿದ್ದೆನೇನೋ.”
ಈ ಸೆಕ್ಸ್-ಉನ್ಮಾದಿತ ಲೋಕದಲ್ಲಿ ಮಕ್ಕಳು, “ರಕ್ಷಣೆಗಾಗಿ ವಿವೇಕಿ”ಗಳಾಗುವಂತೆ (NW) ಕ್ರೈಸ್ತ ಹೆತ್ತವರು ಸಹಾಯಮಾಡುವಾಗ ಅದೆಂಥ ಒಂದು ಆಶೀರ್ವಾದ! (2 ತಿಮೊಥೆಯ 3:15) ಅವರ ಬೈಬಲಾಧಾರಿತ ಬೋಧನೆಯು, ದೇವರ ದೃಷ್ಟಿಯಲ್ಲಿ ಮಕ್ಕಳನ್ನು ಅಲಂಕರಿಸುವ ಹಾಗೂ ರಮ್ಯಗೊಳಿಸುವ ಒಂದು ಬಹುಮೂಲ್ಯ ಕಂಠಹಾರದಂತಿದೆ. (ಜ್ಞಾನೋಕ್ತಿ 1:8, 9) ಮಕ್ಕಳಿಗೆ ಸುರಕ್ಷಿತರೆಂಬ ಭಾವನೆ ಬರುತ್ತದೆ ಹಾಗೂ ಹೆತ್ತವರು ಆಳವಾದ ತೃಪ್ತಿಯನ್ನು ಹೊಂದುತ್ತಾರೆ. ತನ್ನ ಯುವ ಮಕ್ಕಳೊಟ್ಟಿಗೆ ಮುಚ್ಚುಮರೆಯಿಲ್ಲದ ಸಂವಾದವನ್ನು ಇಟ್ಟುಕೊಳ್ಳಲು ಯಾವಾಗಲೂ ಪ್ರಯತ್ನಿಸುವ ಒಬ್ಬ ಆಫ್ರಿಕನ್ ತಂದೆಯು ಹೇಳಿದ್ದು: “ನಮ್ಮ ಮನಸ್ಸಿಗೆ ನೆಮ್ಮದಿಯಿದೆ. ಯೆಹೋವನಿಗೆ ಯಾವುದು ಮೆಚ್ಚಿಕೆಯಾದದ್ದಾಗಿದೆ ಎಂಬುದು ನಮ್ಮ ಮಕ್ಕಳಿಗೆ ಗೊತ್ತಿದೆ ಮತ್ತು ಅವರು ಹೊರಗಿನ ಜನರಿಂದ ದಾರಿತಪ್ಪಿಸಲ್ಪಡಸಾಧ್ಯವಿಲ್ಲ ಎಂಬ ಭರವಸೆ ನಮಗಿದೆ. ಕುಟುಂಬಕ್ಕೆ ನೋವನ್ನುಂಟುಮಾಡುವ ವಿಷಯಗಳನ್ನು ಅವರು ಮಾಡುವುದಿಲ್ಲವೆಂಬ ಭರವಸೆ ನಮಗಿದೆ. ನಮ್ಮ ಭರವಸೆಯು ತಪ್ಪಲ್ಲವೆಂದು ಅವರು ತೋರಿಸಿರುವುದರಿಂದ ನಾನು ಯೆಹೋವನಿಗೆ ಉಪಕಾರವನ್ನು ಹೇಳುತ್ತೇನೆ.”
[ಪಾದಟಿಪ್ಪಣಿ]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.
[ಪುಟ 10 ರಲ್ಲಿರುವ ಚಿತ್ರ]
ಹೆತ್ತವರಿಂದ ಬೈಬಲಾಧಾರಿತ ಮಾಹಿತಿಯನ್ನು ಪಡೆದುಕೊಳ್ಳುವ ಕ್ರೈಸ್ತ ಯುವ ವ್ಯಕ್ತಿಗಳು ಇತರ ಯುವ ವ್ಯಕ್ತಿಗಳು ಹೇಳುವ ಅಪಾರ್ಥ ಕಟ್ಟುಕಥೆಗಳನ್ನು ತಿರಸ್ಕರಿಸಬಲ್ಲರು