ದೇವರ ಮಕ್ಕಳಿಗೆ ಬೇಗನೆ ಮಹಿಮಾಭರಿತ ಬಿಡುಗಡೆ
“ಜಗತ್ತು ವ್ಯರ್ಥತ್ವಕ್ಕೆ ಒಳಗಾಯಿತು; . . . ಆದರೂ ಅದಕ್ಕೊಂದು ನಿರೀಕ್ಷೆಯುಂಟು; ಏನಂದರೆ ಆ ಜಗತ್ತು ಕೂಡ ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆ [“ಮಹಿಮಾಭರಿತ ಬಿಡುಗಡೆ,” NW]ಯಲ್ಲಿ ಪಾಲುಹೊಂದುವದೇ.”—ರೋಮಾಪುರ 8:20, 21.
1. ಯೇಸುವಿನ ಯಜ್ಞವು ದೋಷಪರಿಹಾರಕ ದಿನದಂದು ಹೇಗೆ ಮುನ್ಸೂಚಿಸಲ್ಪಟ್ಟಿತು?
ಯೆಹೋವನು ತನ್ನ ಏಕಜಾತ ಪುತ್ರನನ್ನು ಪ್ರಾಯಶ್ಚಿತ್ತ ಯಜ್ಞದೋಪಾದಿ ನೀಡಿದನು. ಆ ಯಜ್ಞವು, 1,44,000 ಮಂದಿಗೆ ಸ್ವರ್ಗೀಯ ಜೀವಿತಕ್ಕಾಗಿ ಮತ್ತು ಮಾನವಕುಲದಲ್ಲಿ ಉಳಿದವರಿಗಾಗಿ ಅನಂತ ಭೌಮಿಕ ಪ್ರತೀಕ್ಷೆಗಳಿಗಾಗಿ ಮಾರ್ಗವನ್ನು ತೆರೆಯಿತು. (1 ಯೋಹಾನ 2:1, 2) ಹಿಂದಿನ ಲೇಖನದಲ್ಲಿ ಗಮನಿಸಿದಂತೆ, ಆತ್ಮಜನಿತ ಕ್ರೈಸ್ತರಿಗಾಗಿ ಯೇಸುವಿನ ಯಜ್ಞವು, ವಾರ್ಷಿಕ ದೋಷಪರಿಹಾರಕ ದಿನದಂದು ಇಸ್ರಾಯೇಲಿನ ಮಹಾ ಯಾಜಕನು ತನಗಾಗಿ, ತನ್ನ ಮನೆವಾರ್ತೆಗಾಗಿ ಮತ್ತು ಲೇವಿಯ ಕುಲಕ್ಕಾಗಿ ಪಾಪಬಲಿಯಂತೆ ಒಂದು ಹೋರಿಯನ್ನು ಅರ್ಪಿಸಿದಾಗ ಮುನ್ಸೂಚಿಸಲ್ಪಟ್ಟಿತ್ತು. ಸಾಮಾನ್ಯ ಮಾನವಕುಲಕ್ಕೆ ಕ್ರಿಸ್ತನ ಯಜ್ಞವು ಪ್ರಯೋಜನ ತರುವಂತೆಯೇ, ಅದೇ ದಿನದಂದು ಇತರ ಎಲ್ಲ ಇಸ್ರಾಯೇಲ್ಯರಿಗಾಗಿ ಅವನು ಹೋತವೊಂದನ್ನು ಪಾಪಬಲಿಯಾಗಿ ಅರ್ಪಿಸಿದನು. ಒಂದು ಜೀವಂತ ಹೋತವು, ಜನರ ಹಿಂದಿನ ವರ್ಷದ ಸಾಮೂಹಿಕ ಪಾಪಗಳನ್ನು ಸಾಂಕೇತಿಕವಾಗಿ ಹೊತ್ತುಕೊಂಡು, ಅರಣ್ಯದಲ್ಲಿ ಕಣ್ಮರೆಯಾಯಿತು.a—ಯಾಜಕಕಾಂಡ 16:7-15, 20-22, 26.
2, 3. ರೋಮಾಪುರ 8:20, 21ರಲ್ಲಿ ದಾಖಲಿಸಲ್ಪಟ್ಟ ಪೌಲನ ಹೇಳಿಕೆಯ ಅರ್ಥವೇನು?
2 ಸ್ವರ್ಗೀಯ “ದೇವಪುತ್ರ”ರಾಗಲಿದ್ದ ಮಾನವರ ನಿರೀಕ್ಷೆಯನ್ನು ರೇಖಿಸುತ್ತಾ, ಅಪೊಸ್ತಲ ಪೌಲನು ಹೇಳಿದ್ದು: “ದೇವಪುತ್ರರ ಮಹಿಮೆಯು ಯಾವಾಗ ಪ್ರತ್ಯಕ್ಷವಾದೀತೆಂದು ಜಗತ್ತು ಬಹು ಲವಲವಿಕೆಯಿಂದ ಎದುರುನೋಡುತ್ತಿರುವದು. ಜಗತ್ತು ವ್ಯರ್ಥತ್ವಕ್ಕೆ ಒಳಗಾಯಿತು; ಹೀಗೆ ಒಳಗಾದದ್ದು ಸ್ವೇಚ್ಛೆಯಿಂದಲ್ಲ, ಅದನ್ನು ಒಳಪಡಿಸಿದವನ ಸಂಕಲ್ಪದಿಂದಲೇ. ಆದರೂ ಅದಕ್ಕೊಂದು ನಿರೀಕ್ಷೆಯುಂಟು; ಏನಂದರೆ ಆ ಜಗತ್ತು ಕೂಡ ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆ [“ಮಹಿಮಾಭರಿತ ಬಿಡುಗಡೆ,” NW]ಯಲ್ಲಿ ಪಾಲುಹೊಂದುವದೇ.” (ರೋಮಾಪುರ 8:14, 17, 19-21) ಈ ಹೇಳಿಕೆಯ ಅರ್ಥವೇನು?
3 ನಮ್ಮ ಪೂರ್ವಜನಾದ ಆದಾಮನು ಪರಿಪೂರ್ಣ ಮಾನವನೋಪಾದಿ ಸೃಷ್ಟಿಸಲ್ಪಟ್ಟಾಗ, ಅವನು “ದೇವರ ಮಗನು [ಇಲ್ಲವೆ, ಮಗು]” ಆಗಿದ್ದನು. (ಲೂಕ 3:38) ಪಾಪಗೈದ ಕಾರಣ, ಅವನು “ನಾಶದ ವಶ”ಕ್ಕೆ ಒಳಗಾಗಿ, ಈ ಸ್ಥಿತಿಯನ್ನು ಮಾನವಕುಲಕ್ಕೆ ದಾಟಿಸಿದನು. (ರೋಮಾಪುರ 5:12) ತಮ್ಮ ಪಿತ್ರಾರ್ಜಿತ ಅಪರಿಪೂರ್ಣತೆಯ ಕಾರಣ, ಮಾನವರು “ವ್ಯರ್ಥತ್ವ”ವನ್ನು ಎದುರಿಸುತ್ತಿರುವವರಾಗಿ ಜನಿಸುವಂತೆ ದೇವರು ಅನುಮತಿಸಿದನಾದರೂ, “ಸಂತಾನ”ವಾದ ಯೇಸು ಕ್ರಿಸ್ತನ ಮೂಲಕ ಆತನು ನಿರೀಕ್ಷೆಯನ್ನು ನೀಡಿದನು. (ಆದಿಕಾಂಡ 3:15; 22:18; ಗಲಾತ್ಯ 3:16) ಪ್ರಕಟನೆ 21:1-4, ‘ಇನ್ನು ಮರಣ, ದುಃಖ, ಗೋಳಾಟ, ಕಷ್ಟ ಇರದ’ ಒಂದು ಸಮಯಕ್ಕೆ ಸೂಚಿಸುತ್ತದೆ. ಇದು, “ಮಾನವಕುಲ” (NW)ಕ್ಕಿರುವ ವಾಗ್ದಾನವಾಗಿರುವುದರಿಂದ, ರಾಜ್ಯದಾಳಿಕೆಯ ಕೆಳಗೆ ಜೀವಿಸುವ ಮಾನವರ ಹೊಸ ಭೂಸಮಾಜವು, ಪೂರ್ಣ ಸ್ವಾಸ್ಥ್ಯಕ್ಕೆ ಮನಸ್ಸು ಮತ್ತು ದೇಹದ ಪುನಸ್ಸ್ಥಾಪನೆಯನ್ನು ಮತ್ತು “ದೇವರ” ಭೌಮಿಕ ‘ಮಕ್ಕಳೋಪಾದಿ’ ನಿತ್ಯಜೀವವನ್ನು ಅನುಭವಿಸುವುದೆಂದು ಅದು ನಮಗೆ ಆಶ್ವಾಸನೆಯನ್ನು ನೀಡುತ್ತದೆ. ಕ್ರಿಸ್ತನ ಸಾವಿರ ವರ್ಷದ ಆಳಿಕೆಯ ಸಮಯದಲ್ಲಿ, ವಿಧೇಯ ಮಾನವರು “ನಾಶದ ವಶದಿಂದ ಬಿಡುಗಡೆ” ಹೊಂದುವರು. ಅಂತಿಮ ಪರೀಕ್ಷೆಯಲ್ಲಿ ಯೆಹೋವನಿಗೆ ನಿಷ್ಠಾವಂತರಾಗಿ ರುಜುಪಡಿಸಿಕೊಂಡ ಬಳಿಕ, ಅವರು ಪಿತ್ರಾರ್ಜಿತ ಪಾಪ ಮತ್ತು ಮರಣದಿಂದ ಸಂಪೂರ್ಣವಾಗಿ ಮುಕ್ತರಾಗುವರು. (ಪ್ರಕಟನೆ 20:7-10) ಆಗ ಭೂಮಿಯಲ್ಲಿರುವವರು “ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆ [“ಮಹಿಮಾಭರಿತ ಬಿಡುಗಡೆ,” NW]”ಯನ್ನು ಅನುಭವಿಸುವರು.
ಅವರು “ಬಾ” ಅನ್ನುತ್ತಿದ್ದಾರೆ
4. “ಜೀವಜಲವನ್ನು ಕ್ರಯವಿಲ್ಲದೆ ತೆಗೆದು”ಕೊಳ್ಳುವುದರ ಅರ್ಥವೇನು?
4 ಮಾನವಕುಲದ ಮುಂದೆ ಎಂತಹ ಒಂದು ಅದ್ಭುತಕರ ನಿರೀಕ್ಷೆಯು ಇಡಲ್ಪಟ್ಟಿದೆ! ಭೂಮಿಯ ಮೇಲೆ ಇನ್ನೂ ಉಳಿದಿರುವ ಆತ್ಮಜನಿತ ಕ್ರೈಸ್ತರು ಅದರ ಕುರಿತು ಇತರರಿಗೆ ಹೇಳುವುದರಲ್ಲಿ ಹುರುಪಿನಿಂದ ನಾಯಕತ್ವ ವಹಿಸುತ್ತಿರುವುದು ಆಶ್ಚರ್ಯಕರವೇನೂ ಅಲ್ಲ! ಮಹಿಮಾನ್ವಿತ ಕುರಿಮರಿಯಾದ ಯೇಸು ಕ್ರಿಸ್ತನ “ಮದಲಗಿತ್ತಿ”ಯ ಭಾಗವಾಗುವವರೋಪಾದಿ, ಅಭಿಷಿಕ್ತ ಉಳಿಕೆಯವರು ಈ ಮುಂದಿನ ಪ್ರವಾದನಾತ್ಮಕ ಮಾತುಗಳ ನೆರವೇರಿಕೆಯಲ್ಲಿ ಒಳಗೊಂಡಿದ್ದಾರೆ: “ಆತ್ಮನೂ ಮದಲಗಿತ್ತಿಯೂ—ಬಾ ಅನ್ನುತ್ತಾರೆ. ಕೇಳುವವನು—ಬಾ ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.” (ಪ್ರಕಟನೆ 21:2, 9; 22:1, 2, 17) ಇಲ್ಲ, ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಪ್ರಯೋಜನಗಳು 1,44,000 ಅಭಿಷಿಕ್ತರಿಗೆ ಮಾತ್ರ ಸೀಮಿತವಾಗಿಲ್ಲ. “ಬಾ” ಅನ್ನುವುದರಲ್ಲಿ ದೇವರ ಆತ್ಮವು, ಭೂಮಿಯ ಮೇಲಿರುವ ಮದಲಗಿತ್ತಿ ವರ್ಗದ ಉಳಿಕೆಯವರ ಮುಖಾಂತರ ಕೆಲಸಮಾಡುತ್ತಾ ಇರುತ್ತದೆ. ನೀತಿಗಾಗಿ ಬಾಯಾರಿದ ಯಾವನೇ ವ್ಯಕ್ತಿಯು, ಆಮಂತ್ರಣಗಳನ್ನು ಕೇಳಿಸಿಕೊಂಡವನಾಗಿ, ರಕ್ಷಣೆಗಾಗಿರುವ ಯೆಹೋವನ ಹೇರಳವಾದ ಒದಗಿಸುವಿಕೆಯನ್ನು ತನಗಾಗಿ ಲಭ್ಯಗೊಳಿಸಿಕೊಳ್ಳುತ್ತಾ, “ಬಾ” ಅನ್ನಲು ಆಮಂತ್ರಿಸಲ್ಪಟ್ಟಿದ್ದಾನೆ.
5. ಯೆಹೋವನ ಸಾಕ್ಷಿಗಳು ತಮ್ಮ ಮಧ್ಯದಲ್ಲಿ ಯಾರನ್ನು ಪಡೆದಿರಲು ಸಂತೋಷಿಸುತ್ತಾರೆ?
5 ಯೇಸು ಕ್ರಿಸ್ತನ ಮೂಲಕ ಜೀವಕ್ಕಾಗಿರುವ ದೇವರ ಒದಗಿಸುವಿಕೆಯಲ್ಲಿ ಯೆಹೋವನ ಸಾಕ್ಷಿಗಳಿಗೆ ನಂಬಿಕೆಯಿದೆ. (ಅ. ಕೃತ್ಯಗಳು 4:12) ತಮ್ಮ ಮಧ್ಯದಲ್ಲಿ, ದೇವರ ಉದ್ದೇಶಗಳ ಕುರಿತು ಕಲಿತುಕೊಳ್ಳಲು ಮತ್ತು ಆತನ ಚಿತ್ತವನ್ನು ಮಾಡಲು ಬಯಸುವ ಪ್ರಾಮಾಣಿಕ ಹೃದಯವಂತರು ಇರುವುದಕ್ಕಾಗಿ ಅವರು ಸಂತೋಷಿಸುತ್ತಾರೆ. ಈ “ಅಂತ್ಯಕಾಲದಲ್ಲಿ” ‘ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲು’ ಬಯಸುವ ಎಲ್ಲರಿಗೆ ಅವರ ರಾಜ್ಯ ಸಭಾಗೃಹಗಳು ತೆರೆದಿರುತ್ತವೆ.—ದಾನಿಯೇಲ 12:4.
ಸಮಯದ ಗತಿಸುವಿಕೆಯೊಂದಿಗೆ ಬಂದ ಬದಲಾವಣೆಗಳು
6. ವಿವಿಧ ಸಮಯಾವಧಿಗಳಲ್ಲಿ ದೇವರ ಆತ್ಮವು ಯೆಹೋವನ ಸೇವಕರ ಮೇಲೆ ಹೇಗೆ ಕಾರ್ಯನಡೆಸಿದೆ?
6 ದೇವರಿಗೆ ತನ್ನ ಉದ್ದೇಶಗಳನ್ನು ನೆರವೇರಿಸಲು ಒಂದು ಸಮಯವಿದೆ, ಮತ್ತು ಇದು ಮಾನವರೊಂದಿಗಿನ ಆತನ ವ್ಯವಹಾರಗಳನ್ನು ಬಾಧಿಸುತ್ತದೆ. (ಪ್ರಸಂಗಿ 3:1; ಅ. ಕೃತ್ಯಗಳು 1:7) ದೇವರ ಆತ್ಮವು, ಕ್ರೈಸ್ತಪೂರ್ವ ಸಮಯಗಳಲ್ಲಿದ್ದ ಆತನ ಸೇವಕರ ಮೇಲೆ ಬಂದರೂ, ಅವರು ಆತನ ಆತ್ಮಿಕ ಪುತ್ರರೋಪಾದಿ ಜನಿಸಲಿಲ್ಲ. ಆದರೆ, ಯೇಸುವಿನಿಂದ ಆರಂಭಿಸುತ್ತಾ, ಸ್ವರ್ಗೀಯ ಬಾಧ್ಯತೆಗಾಗಿ ಸಮರ್ಪಿತ ಸ್ತ್ರೀಪುರುಷರಿಗೆ ಜನ್ಮಕೊಡಲು ಪವಿತ್ರಾತ್ಮವನ್ನು ಉಪಯೋಗಿಸುವ ಯೆಹೋವನ ಸಮಯವು ಬಂದಿತ್ತು. ನಮ್ಮ ದಿನದ ಕುರಿತೇನು? ಅದೇ ಆತ್ಮವು ಯೇಸುವಿನ “ಬೇರೆ ಕುರಿಗಳ” ಮೇಲೆ ಕಾರ್ಯನಡಿಸುತ್ತಿದೆ, ಆದರೆ ಅದು ಅವರಲ್ಲಿ ಸ್ವರ್ಗೀಯ ಜೀವಿತದ ನಿರೀಕ್ಷೆ ಹಾಗೂ ಬಯಕೆಯನ್ನು ಕೆರಳಿಸುತ್ತಿಲ್ಲ. (ಯೋಹಾನ 10:16) ಪ್ರಮೋದವನ ಭೂಮಿಯ ಮೇಲೆ ಅನಂತ ಜೀವನದ ತಮ್ಮ ದೇವದತ್ತ ನಿರೀಕ್ಷೆಯೊಂದಿಗೆ, ಹಳೆಯ ಲೋಕದಿಂದ ದೇವರ ನೀತಿಯ ಹೊಸ ಲೋಕಕ್ಕೆ ನಡೆಸುವ ಈ ಮಧ್ಯಕಾಲದಲ್ಲಿ, ಸಾಕ್ಷಿನೀಡುವುದರಲ್ಲಿ ಅವರು ಅಭಿಷಿಕ್ತ ಉಳಿಕೆಯವರಿಗೆ ಆನಂದದಿಂದ ಬೆಂಬಲ ನೀಡುತ್ತಾರೆ.—2 ಪೇತ್ರ 3:5-13.
7. ಯಾವ ಕೊಯ್ಲಿನ ಕೆಲಸದಲ್ಲಿ ಬೈಬಲ್ ವಿದ್ಯಾರ್ಥಿಗಳು ಪಾಲ್ಗೊಂಡರು, ಆದರೆ ಪ್ರಮೋದವನದ ಕುರಿತು ಅವರಿಗೆ ಏನು ಗೊತ್ತಿತ್ತು?
7 ಸಾ.ಶ. 33ರ ಪಂಚಾಶತ್ತಮದ ದಿನದಂದು ಪವಿತ್ರಾತ್ಮದ ಸುರಿಸುವಿಕೆಯೊಂದಿಗೆ ದೇವರು ‘ಅನೇಕ ಪುತ್ರರನ್ನು ಮಹಿಮೆಗೆ ತರಲು’ ಆರಂಭಿಸಿದನು, ಮತ್ತು 1,44,000ದ ಒಟ್ಟುಸಂಖ್ಯೆಯುಳ್ಳ ಆತ್ಮಿಕ “ದೇವರ ಇಸ್ರಾಯೇಲ”ನ್ನು ಪೂರ್ಣಗೊಳಿಸುವುದಕ್ಕಾಗಿ ಆತನೊಂದು ಸಮಯವನ್ನು ನಿಗದಿಪಡಿಸಿದನೆಂಬುದು ಸ್ಪಷ್ಟ. (ಇಬ್ರಿಯ 2:10; ಗಲಾತ್ಯ 6:16; ಪ್ರಕಟನೆ 7:1-8) 1879ರಲ್ಲಿ ಆರಂಭಿಸುತ್ತಾ, ಅಭಿಷಿಕ್ತ ಕ್ರೈಸ್ತರನ್ನೊಳಗೊಂಡ ಕೊಯ್ಲಿನ ಕೆಲಸವು ಅನೇಕ ವೇಳೆ ಈ ಪತ್ರಿಕೆಯಲ್ಲಿ ಉಲ್ಲೇಖಿಸಲ್ಪಟ್ಟಿತು. ಆದರೆ ಬೈಬಲ್ ವಿದ್ಯಾರ್ಥಿಗಳಿಗೆ (ಈಗ ಯೆಹೋವನ ಸಾಕ್ಷಿಗಳೆಂದು ಕರೆಯಲ್ಪಡುವವರು), ಪ್ರಮೋದವನ ಭೂಮಿಯ ಮೇಲೆ ಅನಂತ ಜೀವನದ ನಿರೀಕ್ಷೆಯನ್ನು ಶಾಸ್ತ್ರಗಳು ಎತ್ತಿಹಿಡಿಯುತ್ತವೆಂಬುದೂ ಗೊತ್ತಿತ್ತು. ಉದಾಹರಣೆಗೆ, ವಾಚ್ ಟವರ್ ಪತ್ರಿಕೆಯ, 1883ರ ಜುಲೈ ತಿಂಗಳಿನ ಸಂಚಿಕೆಯು ಹೇಳಿದ್ದು: “ಯೇಸು ತನ್ನ ರಾಜ್ಯವನ್ನು ಸ್ಥಾಪಿಸಿ, ದುಷ್ಟತನವನ್ನು ನಾಶಪಡಿಸಿ, ಇತ್ಯಾದಿಯನ್ನು ಮಾಡುವಾಗ, ಈ ಭೂಮಿಯು ಒಂದು ಪ್ರಮೋದವನವಾಗುವುದು, . . . ಮತ್ತು ತಮ್ಮ ಸಮಾಧಿಗಳಲ್ಲಿರುವವರೆಲ್ಲರು ಪ್ರಮೋದವನದೊಳಗೆ ಬರುವರು. ಮತ್ತು ಅದರ ನಿಯಮಗಳಿಗೆ ವಿಧೇಯರಾಗುವ ಮೂಲಕ, ಅವರು ಅದರಲ್ಲಿ ಸದಾಕಾಲ ಜೀವಿಸಬಹುದು.” ಸಮಯವು ಗತಿಸಿದಂತೆ, ಅಭಿಷಿಕ್ತರ ಒಟ್ಟುಗೂಡಿಸುವಿಕೆ ಕಡಿಮೆಯಾಯಿತು, ಮತ್ತು ಕ್ರಮೇಣವಾಗಿ ಸ್ವರ್ಗೀಯ ನಿರೀಕ್ಷೆಯಿಲ್ಲದ ವ್ಯಕ್ತಿಗಳು ಯೆಹೋವನ ಸಂಸ್ಥೆಯೊಳಗೆ ಒಟ್ಟುಗೂಡಿಸಲ್ಪಟ್ಟರು. ಈ ಮಧ್ಯೆ, ದೇವರು ತನ್ನ ಅಭಿಷಿಕ್ತ ಸೇವಕರಿಗೆ, ಪುನಃ ಹುಟ್ಟಿದ ಕ್ರೈಸ್ತರಿಗೆ ಗಮನಾರ್ಹವಾದ ಒಳನೋಟವನ್ನು ದಯಪಾಲಿಸಿದನು.—ದಾನಿಯೇಲ 12:3; ಫಿಲಿಪ್ಪಿ 2:15; ಪ್ರಕಟನೆ 14:15, 16.
8. ಭೌಮಿಕ ನಿರೀಕ್ಷೆಯ ಕುರಿತಾದ ತಿಳಿವಳಿಕೆಯು 1930ಗಳ ಆದಿಭಾಗದಲ್ಲಿ ಹೇಗೆ ವಿಕಸಿಸಿತು?
8 ವಿಶೇಷವಾಗಿ 1931ರಂದಿನಿಂದ ಭೂನಿರೀಕ್ಷೆಯುಳ್ಳವರು ಕ್ರೈಸ್ತ ಸಭೆಯೊಂದಿಗೆ ಸಹವಸಿಸುತ್ತಿದ್ದಾರೆ. ಯಾರು ದೇವರ ಹೊಸ ಲೋಕದೊಳಕ್ಕೆ ಪಾರಾಗಿ ಉಳಿಯಲಿಕ್ಕಾಗಿ ಗುರುತಿಸಲ್ಪಟ್ಟಿರುತ್ತಾರೊ ಆ ಭೌಮಿಕ ವರ್ಗಕ್ಕೆ ಯೆಹೆಜ್ಕೇಲ 9ನೆಯ ಅಧ್ಯಾಯವು ಸೂಚಿಸುತ್ತದೆಂಬುದನ್ನು ಆತ್ಮಜನಿತ ಕ್ರೈಸ್ತರಲ್ಲಿ ಉಳಿಕೆಯವರು ನೋಡುವಂತೆ ಯೆಹೋವನು ಆ ವರ್ಷದಲ್ಲಿ ಜ್ಞಾನೋದಯಗೊಳಿಸಿದನು. ಇಂತಹ ಪ್ರಚಲಿತ ದಿನದ ಕುರಿಸದೃಶರು ಯೇಹುವಿನ ಸಹಚರನಾದ ಯೋನಾದಾಬ (ಯೆಹೋನಾದಾಬ)ನಿಂದ ಮುನ್ಸೂಚಿಸಲ್ಪಟ್ಟರೆಂದು 1932ರಲ್ಲಿ ತೀರ್ಮಾನಿಸಲಾಯಿತು. (2 ಅರಸುಗಳು 10:15-17) “ಯೋನಾದಾಬ”ರು ತಮ್ಮನ್ನು ದೇವರಿಗೆ “ಮೀಸಲಿಡ”ಬೇಕು ಇಲ್ಲವೆ ಸಮರ್ಪಿಸಿಕೊಳ್ಳಬೇಕೆಂದು 1934ರಲ್ಲಿ ಸ್ಪಷ್ಟಪಡಿಸಲಾಯಿತು. 1935ರಲ್ಲಿ, ಈ “ಮಹಾ ಜನಸಮೂಹ” ಇಲ್ಲವೆ “ಮಹಾ ಸಮೂಹ”ವನ್ನು—ಈ ಮೊದಲು, ಸ್ವರ್ಗದಲ್ಲಿ ಕ್ರಿಸ್ತನ ಮದಲಗಿತ್ತಿಯ “ಸಖಿ”ಯರಾಗಲಿದ್ದ, ಎರಡನೆಯ ಆತ್ಮಿಕ ವರ್ಗದವರೆಂದೆಣಿಸಲ್ಪಟ್ಟವರು—ಭೂನಿರೀಕ್ಷೆಯುಳ್ಳ ಬೇರೆ ಕುರಿಗಳೋಪಾದಿ ಗುರುತಿಸಲಾಯಿತು. (ಪ್ರಕಟನೆ 7:4-15; 21:2, 9; ಕೀರ್ತನೆ 45:14, 15) ಮತ್ತು ವಿಶೇಷವಾಗಿ 1935ರಂದಿನಿಂದ ಅಭಿಷಿಕ್ತರು, ಪ್ರಮೋದವನ ಭೂಮಿಯ ಮೇಲೆ ಸದಾಕಾಲ ಜೀವಿಸಲು ಹಾತೊರೆಯುವ ಪ್ರಾಮಾಣಿಕ ಜನರ ಅನ್ವೇಷಣೆಯಲ್ಲಿ ನುಗ್ಗುಮೊನೆಯಾಗಿದ್ದಾರೆ.
9. 1935ರ ಬಳಿಕ, ಕೆಲವು ಕ್ರೈಸ್ತರು ಕರ್ತನ ಸಂಧ್ಯಾ ಭೋಜನದ ಸಮಯದಲ್ಲಿ ಕುರುಹುಗಳಲ್ಲಿ ಪಾಲ್ಗೊಳ್ಳುವುದನ್ನು ನಿಲ್ಲಿಸಿದ್ದೇಕೆ?
9 1935ರ ತರುವಾಯ, ಕರ್ತನ ಸಂಧ್ಯಾ ಭೋಜನದಲ್ಲಿ ರೊಟ್ಟಿ ಮತ್ತು ದ್ರಾಕ್ಷಾಮದ್ಯದಲ್ಲಿ ಪಾಲ್ಗೊಳ್ಳುತ್ತಿದ್ದ ಕೆಲವು ಕ್ರೈಸ್ತರು ಪಾಲ್ಗೊಳ್ಳುವುದನ್ನು ನಿಲ್ಲಿಸಿದರು. ಏಕೆ? ಏಕೆಂದರೆ ತಮ್ಮ ನಿರೀಕ್ಷೆ ಸ್ವರ್ಗೀಯವಲ್ಲ ಭೌಮಿಕವೆಂದು ಅವರು ಗ್ರಹಿಸಿದರು. 1930ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡ ಒಬ್ಬ ಸ್ತ್ರೀಯು ಹೇಳಿದ್ದು: “[ಪಾಲ್ಗೊಳ್ಳುವುದು]—ವಿಶೇಷವಾಗಿ ಹುರುಪಿನ ಪೂರ್ಣ ಸಮಯದ ಶುಶ್ರೂಷಕರು ಮಾಡಬೇಕಾದ ಸರಿಯಾದ ಸಂಗತಿಯೆಂದು ಪರಿಗಣಿಸಲ್ಪಟ್ಟಿದ್ದರೂ, ನನಗೊಂದು ಸ್ವರ್ಗೀಯ ನಿರೀಕ್ಷೆಯಿದೆ ಎಂಬ ವಿಷಯದಲ್ಲಿ ನಾನೆಂದೂ ಮನಗಾಣಿಸಲ್ಪಡಲಿಲ್ಲ. ತದನಂತರ, 1935ರಲ್ಲಿ, ಭೂಮಿಯ ಮೇಲೆ ಸದಾಕಾಲ ಜೀವಿಸುವ ನಿರೀಕ್ಷೆಯುಳ್ಳ ಒಂದು ಮಹಾ ಸಮೂಹವು ಒಟ್ಟುಗೂಡಿಸಲ್ಪಡುತ್ತಾ ಇದೆಯೆಂದು ನಮಗೆ ಸ್ಪಷ್ಟಗೊಳಿಸಲಾಯಿತು. ನಾವು ಮಹಾ ಸಮೂಹದ ಭಾಗವಾಗಿದ್ದೇವೆಂಬುದನ್ನು ತಿಳಿದು, ನಮ್ಮಲ್ಲಿ ಅನೇಕರು ಹರ್ಷಿಸಿದೆವು, ಮತ್ತು ಕುರುಹುಗಳಲ್ಲಿ ಪಾಲ್ಗೊಳ್ಳುವುದನ್ನು ನಾವು ನಿಲ್ಲಿಸಿದೆವು.” ಕ್ರೈಸ್ತ ಪ್ರಕಾಶನಗಳೂ ಸ್ವರೂಪದಲ್ಲಿ ಬದಲಾದವು. ಮುಂಚಿನ ವರ್ಷಗಳ ಪ್ರಕಾಶನಗಳು ಪ್ರಥಮವಾಗಿ ಯೇಸುವಿನ ಆತ್ಮಜನಿತ ಹಿಂಬಾಲಕರಿಗಾಗಿ ರಚಿಸಲ್ಪಟ್ಟಿದ್ದರೂ, 1935ರಂದಿನಿಂದ ದ ವಾಚ್ಟವರ್ ಮತ್ತು ‘ನಂಬಿಗಸ್ತ ಆಳಿನ’ ಇತರ ಸಾಹಿತ್ಯವು, ಅಭಿಷಿಕ್ತರ ಹಾಗೂ ಭೂನಿರೀಕ್ಷೆಯುಳ್ಳ ಅವರ ಸಂಗಾತಿಗಳ ಅಗತ್ಯಗಳಿಗೆ ತಕ್ಕದಾದ ಆತ್ಮಿಕ ಆಹಾರವನ್ನು ಒದಗಿಸಿತು.—ಮತ್ತಾಯ 24:45-47.
10. ಒಬ್ಬ ಅಪನಂಬಿಗಸ್ತ ಅಭಿಷಿಕ್ತನ ಸ್ಥಾನಭರ್ತಿಯಾಗುವುದು ಹೇಗೆ?
10 ಒಬ್ಬ ಅಭಿಷಿಕ್ತನು ಅಪನಂಬಿಗಸ್ತನಾದನೆಂದು ಭಾವಿಸಿಕೊಳ್ಳಿರಿ. ಮತ್ತೊಬ್ಬ ವ್ಯಕ್ತಿಯು ಆ ಸ್ಥಾನಕ್ಕೆ ಭರ್ತಿಯಾಗುವನೊ? ಸಾಂಕೇತಿಕ ಆಲಿವ್ ಮರದ ತನ್ನ ಚರ್ಚೆಯಲ್ಲಿ ಪೌಲನು ಅದನ್ನು ಸೂಚಿಸಿದನು. (ರೋಮಾಪುರ 11:11-32) ಒಬ್ಬ ಆತ್ಮಜನಿತನ ಸ್ಥಾನಭರ್ತಿಮಾಡುವ ಅಗತ್ಯವಿದ್ದಲ್ಲಿ, ಅನೇಕ ವರ್ಷಗಳಿಂದ ದೇವರಿಗೆ ಪವಿತ್ರ ಸೇವೆ ಸಲ್ಲಿಸುವುದರಲ್ಲಿ ಯಾರ ನಂಬಿಕೆಯು ಆದರ್ಶಪ್ರಾಯವಾಗಿತ್ತೊ ಅಂತಹ ಒಬ್ಬನಿಗೆ ದೇವರು ಬಹುಶಃ ಸ್ವರ್ಗೀಯ ಕರೆಯನ್ನು ಕೊಡುವನು.—ಹೋಲಿಸಿ ಲೂಕ 22:28, 29; 1 ಪೇತ್ರ 1:6, 7.
ಕೃತಜ್ಞತೆಗೆ ಅನೇಕ ಕಾರಣಗಳು
11. ನಮ್ಮ ನಿರೀಕ್ಷೆಯ ಸ್ವರೂಪವು ಏನೇ ಆಗಿರಲಿ, ಯಾಕೋಬ 1:17 ನಮಗೆ ಯಾವ ಆಶ್ವಾಸನೆಯನ್ನು ನೀಡುತ್ತದೆ?
11 ಯೆಹೋವನನ್ನು ನಾವು ನಂಬಿಗಸ್ತಿಕೆಯಿಂದ ಎಲ್ಲೇ ಸೇವಿಸುತ್ತಿರಲಿ, ಆತನು ನಮ್ಮ ಅಗತ್ಯಗಳು ಮತ್ತು ಪ್ರಾಮಾಣಿಕ ಬಯಕೆಗಳನ್ನು ಈಡೇರಿಸುವನು. (ಕೀರ್ತನೆ 145:16; ಲೂಕ 1:67-74) ನಾವು ಒಂದು ಯಥಾರ್ಥವಾದ ಸ್ವರ್ಗೀಯ ನಿರೀಕ್ಷೆಯನ್ನೇ ಪಡೆದಿರಲಿ ಇಲ್ಲವೆ ನಮ್ಮ ಪ್ರತೀಕ್ಷೆಯು ಭೌಮಿಕವಾಗಿರಲಿ, ದೇವರಿಗೆ ಕೃತಜ್ಞರಾಗಿರಲು ನಮ್ಮಲ್ಲಿ ಅನೇಕ ಸಕಾರಣಗಳಿವೆ. ಯಾರು ಆತನನ್ನು ಪ್ರೀತಿಸುತ್ತಾರೊ ಅವರ ಹಿತಾಸಕ್ತಿಗಳಿಗಾಗಿರುವ ವಿಷಯಗಳನ್ನೇ ಆತನು ಯಾವಾಗಲೂ ಮಾಡುತ್ತಾನೆ. ಶಿಷ್ಯನಾದ ಯಾಕೋಬನು ಹೇಳಿದ್ದೇನೆಂದರೆ, “ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳೂ ಮೇಲಣಿಂದ ಸಕಲವಿಧವಾದ ಬೆಳಕಿಗೂ ಮೂಲಕಾರಣನಾದ,” ಯೆಹೋವ ದೇವರಿಂದ “ಇಳಿದುಬರುತ್ತವೆ.” (ಯಾಕೋಬ 1:17) ಈ ದಾನಗಳು ಮತ್ತು ಆಶೀರ್ವಾದಗಳಲ್ಲಿ ಕೆಲವೊಂದರ ಕಡೆಗೆ ನಾವು ಗಮನ ಕೊಡೋಣ.
12. ಯೆಹೋವನು ತನ್ನ ನಂಬಿಗಸ್ತ ಸೇವಕರಲ್ಲಿ ಪ್ರತಿಯೊಬ್ಬರಿಗೆ ಒಂದು ಅದ್ಭುತಕರವಾದ ನಿರೀಕ್ಷೆಯನ್ನು ಕೊಟ್ಟಿದ್ದಾನೆಂದು ನಾವು ಏಕೆ ಹೇಳಸಾಧ್ಯವಿದೆ?
12 ಯೆಹೋವನು ತನ್ನ ನಂಬಿಗಸ್ತ ಸೇವಕರಲ್ಲಿ ಪ್ರತಿಯೊಬ್ಬನಿಗೆ ಒಂದು ಅದ್ಭುತಕರವಾದ ನಿರೀಕ್ಷೆಯನ್ನು ನೀಡಿದ್ದಾನೆ. ಕೆಲವರನ್ನು ಆತನು ಸ್ವರ್ಗೀಯ ಜೀವಿತಕ್ಕೆ ಕರೆದಿದ್ದಾನೆ. ತನ್ನ ಕ್ರೈಸ್ತಪೂರ್ವ ಸಾಕ್ಷಿಗಳಿಗೆ ಯೆಹೋವನು, ಭೂಮಿಯ ಮೇಲೆ ಸದಾಕಾಲದ ಜೀವಿತಕ್ಕೆ ಪುನರುತ್ಥಿತರಾಗುವ ಅತ್ಯುತ್ಕೃಷ್ಟವಾದ ನಿರೀಕ್ಷೆಯನ್ನು ಕೊಟ್ಟನು. ದೃಷ್ಟಾಂತಕ್ಕೆ, ಅಬ್ರಹಾಮನಿಗೆ ಪುನರುತ್ಥಾನದಲ್ಲಿ ನಂಬಿಕೆಯಿತ್ತು ಮತ್ತು “ಶಾಶ್ವತವಾದ ಅಸ್ತಿವಾರಗಳುಳ್ಳ ಪಟ್ಟಣ”ಕ್ಕಾಗಿ—ಯಾವುದರ ಕೆಳಗೆ ಭೌಮಿಕ ಜೀವಿತಕ್ಕಾಗಿ ಅವನು ಪುನರುತ್ಥಿತನಾಗಲಿದ್ದನೊ ಆ ಸ್ವರ್ಗೀಯ ರಾಜ್ಯ—ಅವನು ಕಾದನು. (ಇಬ್ರಿಯ 11:10, 17-19) ಮತ್ತೊಮ್ಮೆ, ಅಂತ್ಯದ ಈ ಸಮಯದಲ್ಲಿ, ಲಕ್ಷಾಂತರ ಜನರಿಗೆ ಪ್ರಮೋದವನ ಭೂಮಿಯ ಮೇಲೆ ನಿತ್ಯಜೀವದ ನಿರೀಕ್ಷೆಯನ್ನು ದೇವರು ದಯಪಾಲಿಸುತ್ತಿದ್ದಾನೆ. (ಲೂಕ 23:43; ಯೋಹಾನ 17:3) ನಿಶ್ಚಯವಾಗಿಯೂ, ಯಾರಿಗೆ ಯೆಹೋವನು ಅಂತಹ ಒಂದು ಮಹಾನ್ ನಿರೀಕ್ಷೆಯನ್ನು ನೀಡಿದ್ದಾನೊ, ಅಂತಹವರು ಅದಕ್ಕಾಗಿ ಬಹಳವಾಗಿ ಕೃತಜ್ಞರಾಗಿರತಕ್ಕದ್ದು.
13. ದೇವರ ಪವಿತ್ರಾತ್ಮವು ಆತನ ಜನರ ಮೇಲೆ ಹೇಗೆ ಕಾರ್ಯನಡೆಸಿದೆ?
13 ಯೆಹೋವನು ತನ್ನ ಜನರಿಗೆ ಪವಿತ್ರಾತ್ಮವನ್ನು ಒಂದು ಕೊಡುಗೆಯಾಗಿ ಕೊಡುತ್ತಾನೆ. ಸ್ವರ್ಗೀಯ ನಿರೀಕ್ಷೆಯು ಕೊಡಲ್ಪಟ್ಟ ಕ್ರೈಸ್ತರು, ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟಿದ್ದಾರೆ. (1 ಯೋಹಾನ 2:20; 5:1-4, 18) ಆದರೂ, ಭೌಮಿಕ ಪ್ರತೀಕ್ಷೆಗಳುಳ್ಳ ದೇವರ ಸೇವಕರಿಗೆ ಆತ್ಮದ ಸಹಾಯ ಮತ್ತು ಮಾರ್ಗದರ್ಶನವಿದೆ. ಇವರಲ್ಲಿ ಮೋಶೆಯು ಒಬ್ಬನಾಗಿದ್ದನು. ಅವನಲ್ಲಿ ಮತ್ತು ಅವನಿಗೆ ನೆರವು ನೀಡಲು ನೇಮಿಸಲ್ಪಟ್ಟಿದ್ದ 70 ಮಂದಿ ಪುರುಷರಲ್ಲಿ ಯೆಹೋವನ ಆತ್ಮವಿತ್ತು. (ಅರಣ್ಯಕಾಂಡ 11:24, 25) ಪವಿತ್ರಾತ್ಮದ ಪ್ರಭಾವದ ಕೆಳಗೆ, ಬೆಚಲೇಲನು ಇಸ್ರಾಯೇಲಿನ ಗುಡಾರದ ಸಂಬಂಧದಲ್ಲಿ ಒಬ್ಬ ನಿಪುಣ ಕುಶಲಕರ್ಮಿಯಂತೆ ಸೇವೆಸಲ್ಲಿಸಿದನು. (ವಿಮೋಚನಕಾಂಡ 31:1-11) ದೇವರ ಆತ್ಮವು ಗಿದ್ಯೋನ, ಯೆಪ್ತಾಹ, ಸಂಸೋನ, ದಾವೀದ, ಎಲೀಯ, ಎಲೀಷ, ಮತ್ತು ಇತರರ ಮೇಲೆ ಬಂತು. ಪ್ರಾಚೀನ ಸಮಯಗಳ ಈ ವ್ಯಕ್ತಿಗಳು ಸ್ವರ್ಗೀಯ ಮಹಿಮೆಗೆ ಎಂದಿಗೂ ತರಲ್ಪಡದಿದ್ದರೂ, ಇಂದು ಯೇಸುವಿನ ಬೇರೆ ಕುರಿಗಳು ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟು ಸಹಾಯಿಸಲ್ಪಡುವಂತೆಯೇ, ಅವರಿಗೂ ಸಹಾಯವು ನೀಡಲ್ಪಟ್ಟಿತು. ಹಾಗಾದರೆ, ದೇವರ ಆತ್ಮವುಳ್ಳವರಾಗಿರುವುದು, ನಾವು ಸ್ವರ್ಗೀಯ ಕರೆಯನ್ನು ಪಡೆದಿರಲೇಬೇಕೆಂಬುದನ್ನು ಅರ್ಥೈಸುವುದಿಲ್ಲ. ಆದರೂ, ಯೆಹೋವನ ಆತ್ಮವು ಮಾರ್ಗದರ್ಶನವನ್ನು ಒದಗಿಸುತ್ತದೆ, ಸಾರುವಂತೆ ಮತ್ತು ಇತರ ದೇವದತ್ತ ನೇಮಕಗಳನ್ನು ಪೂರೈಸುವಂತೆ ನಮಗೆ ಸಹಾಯಮಾಡುತ್ತದೆ, ಸಾಧಾರಣವಾದುದಕ್ಕಿಂತಲೂ ಮಿಗಿಲಾದ ಶಕ್ತಿಯನ್ನು ನಮಗೆ ಕೊಡುತ್ತದೆ, ಮತ್ತು ನಮ್ಮಲ್ಲಿ ಅದರ ಫಲವಾದ, ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, ಉಪಕಾರ, ನಂಬಿಕೆ, ಸಾಧುತ್ವ, ಮತ್ತು ಶಮೆದಮೆಯನ್ನು ಉತ್ಪಾದಿಸುತ್ತದೆ. (ಯೋಹಾನ 16:13; ಅ. ಕೃತ್ಯಗಳು 1:8; 2 ಕೊರಿಂಥ 4:7-10; ಗಲಾತ್ಯ 5:22, 23) ದೇವರಿಂದ ಬಂದ ಈ ಹಿತಕರವಾದ ಕೊಡುಗೆಗೆ ನಾವು ಕೃತಜ್ಞರಾಗಿರಬಾರದೊ?
14. ಜ್ಞಾನ ಮತ್ತು ವಿವೇಕವೆಂಬ ದೇವರ ಕೊಡುಗೆಗಳಿಂದ ನಾವು ಹೇಗೆ ಪ್ರಯೋಜನಪಡೆಯುತ್ತೇವೆ?
14 ನಮ್ಮ ನಿರೀಕ್ಷೆಯು ಸ್ವರ್ಗೀಯವಾಗಿರಲಿ ಭೌಮಿಕವಾಗಿರಲಿ, ನಾವು ಯಾವುದಕ್ಕಾಗಿ ಕೃತಜ್ಞರಾಗಿರಬೇಕೊ ಆ ಜ್ಞಾನ ಮತ್ತು ವಿವೇಕ ದೇವರಿಂದ ಬಂದ ಕೊಡುಗೆಗಳಾಗಿವೆ. ಯೆಹೋವನ ಕುರಿತಾದ ನಿಷ್ಕೃಷ್ಟ ಜ್ಞಾನವು, “ಹೆಚ್ಚು ಪ್ರಾಮುಖ್ಯವಾದ ವಿಷಯಗಳನ್ನು ಖಚಿತಮಾಡಿಕೊಳ್ಳಲು” (NW) ಮತ್ತು “ಆತನಿಗೆ ಯೋಗ್ಯರಾಗಿ ನಡೆದು ಎಲ್ಲಾ ವಿಧದಲ್ಲಿ ಆತನನ್ನು ಸಂತೋಷಪಡಿಸುವವರಾಗಿ”ರಲು ನಮಗೆ ಸಹಾಯ ಮಾಡುತ್ತದೆ. (ಫಿಲಿಪ್ಪಿ 1:9-11; ಕೊಲೊಸ್ಸೆ 1:9, 10) ದೈವಿಕ ವಿವೇಕವು ಒಂದು ಸಂರಕ್ಷಣೆ ಹಾಗೂ ಜೀವಿತದಲ್ಲಿ ಒಂದು ಮಾರ್ಗದರ್ಶಿಯಾಗಿ ಕಾರ್ಯಸಲ್ಲಿಸುತ್ತದೆ. (ಜ್ಞಾನೋಕ್ತಿ 4:5-7; ಪ್ರಸಂಗಿ 7:12) ನಿಜ ಜ್ಞಾನ ಮತ್ತು ವಿವೇಕವು ದೇವರ ವಾಕ್ಯದ ಮೇಲೆ ಆಧರಿಸಿವೆ, ಮತ್ತು ಉಳಿದಿರುವ ಕೊಂಚವೇ ಅಭಿಷಿಕ್ತರು, ಅದು ಅವರ ಸ್ವರ್ಗೀಯ ನಿರೀಕ್ಷೆಯ ಕುರಿತು ಏನನ್ನು ಹೇಳುತ್ತದೊ ಅದರ ಕಡೆಗೆ ವಿಶೇಷವಾಗಿ ಆಕರ್ಷಿತರಾಗುತ್ತಾರೆ. ಹಾಗಿದ್ದರೂ, ದೇವರ ವಾಕ್ಯಕ್ಕಾಗಿರುವ ಪ್ರೀತಿ ಮತ್ತು ಅದರ ಅತ್ಯುತ್ತಮ ತಿಳಿವಳಿಕೆಯು, ನಾವು ಸ್ವರ್ಗೀಯ ಜೀವಿತಕ್ಕೆ ಕರೆಯಲ್ಪಟ್ಟಿದ್ದೇವೆಂದು ಸೂಚಿಸುವ ದೇವರ ವಿಧವಲ್ಲ. ಮೋಶೆ ಮತ್ತು ದಾನಿಯೇಲರಂತಹ ಪುರುಷರು, ಬೈಬಲಿನ ಕೆಲವೊಂದು ಭಾಗಗಳನ್ನೂ ಬರೆದರಾದರೂ, ಅವರು ಭೂಮಿಯ ಮೇಲಿನ ಜೀವಿತಕ್ಕೆ ಪುನರುತ್ಥಾನಗೊಳಿಸಲ್ಪಡುವರು. ನಮ್ಮ ನಿರೀಕ್ಷೆಯು ಸ್ವರ್ಗೀಯವಾಗಿರಲಿ ಭೌಮಿಕವಾಗಿರಲಿ, ನಮ್ಮಲ್ಲಿ ಎಲ್ಲರೂ ಯೆಹೋವನ ಒಪ್ಪಿಗೆ ಪಡೆದ ‘ನಂಬಿಗಸ್ತನೂ ವಿವೇಕಿಯೂ ಆದ ಆಳಿನ’ ಮೂಲಕ ಆತ್ಮಿಕ ಆಹಾರವನ್ನು ಪಡೆದುಕೊಳ್ಳುತ್ತೇವೆ. (ಮತ್ತಾಯ 24:45-47) ಹೀಗೆ ಸಂಪಾದಿಸಲ್ಪಟ್ಟ ಜ್ಞಾನಕ್ಕಾಗಿ ನಾವೆಲ್ಲರೂ ಎಷ್ಟೊಂದು ಕೃತಜ್ಞರಾಗಿದ್ದೇವೆ!
15. ದೇವರ ಮಹಾನ್ ಕೊಡುಗೆಗಳಲ್ಲಿ ಒಂದು ಯಾವುದು, ಮತ್ತು ನೀವು ಅದನ್ನು ಹೇಗೆ ವೀಕ್ಷಿಸುತ್ತೀರಿ?
15 ದೇವರ ಅತ್ಯಂತ ಮಹಾನ್ ಕೊಡುಗೆಗಳಲ್ಲಿ ಒಂದು, ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಪ್ರೀತಿಪೂರ್ಣ ಒದಗಿಸುವಿಕೆಯಾಗಿದೆ. ಇದು ನಮಗೆ ಸ್ವರ್ಗೀಯ ಪ್ರತೀಕ್ಷೆಯಿರಲಿ ಇಲ್ಲವೆ ಭೌಮಿಕ ನಿರೀಕ್ಷೆಯಿರಲಿ, ಪ್ರಯೋಜನವನ್ನು ತರುತ್ತದೆ. ದೇವರು ಮಾನವಕುಲದ ಲೋಕದ ಮೇಲೆ “ಎಷ್ಟೋ” ಪ್ರೀತಿಯನ್ನಿಟ್ಟನೆಂದರೆ, “ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ಮತ್ತು ಯೇಸುವಿನ ಪ್ರೀತಿಯು, ‘ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವಂತೆ’ ಅವನನ್ನು ಪ್ರಚೋದಿಸಿತು. (ಮತ್ತಾಯ 20:28) ಅಪೊಸ್ತಲ ಯೋಹಾನನು ವಿವರಿಸಿದಂತೆ, ಯೇಸು ಕ್ರಿಸ್ತನು “ನಮ್ಮ [ಅಭಿಷಿಕ್ತರ] ಪಾಪಗಳನ್ನು ನಿವಾರಣಮಾಡುವ ಯಜ್ಞವಾಗಿದ್ದಾನೆ; ನಮ್ಮ ಪಾಪಗಳನ್ನು ಮಾತ್ರವಲ್ಲದೆ, ಸಮಸ್ತ ಲೋಕದ ಪಾಪಗಳನ್ನು ಸಹ ನಿವಾರಣಮಾಡುತ್ತಾನೆ.” (1 ಯೋಹಾನ 2:1, 2) ಆದಕಾರಣ, ಅನಂತ ಜೀವನಕ್ಕೆ ನಡೆಸುವ ರಕ್ಷಣೆಯ ಈ ಪ್ರೀತಿಪರ ಒದಗಿಸುವಿಕೆಗಾಗಿ ನಮ್ಮಲ್ಲಿ ಎಲ್ಲರೂ ಬಹಳವಾಗಿ ಕೃತಜ್ಞರಾಗಿರತಕ್ಕದ್ದು.b
ನೀವು ಉಪಸ್ಥಿತರಿರುವಿರೊ?
16. 1998, ಏಪ್ರಿಲ್ 11ರಂದು ಸೂರ್ಯಾಸ್ತಮಾನದ ತರುವಾಯ ಯಾವ ಗಮನಾರ್ಹವಾದ ಘಟನೆಯು ಆಚರಿಸಲ್ಪಡುವುದು, ಮತ್ತು ಯಾರು ಉಪಸ್ಥಿತರಿರಬೇಕು?
16 ತನ್ನ ಮಗನ ಮುಖಾಂತರ ದೇವರಿಂದ ಒದಗಿಸಲ್ಪಟ್ಟ ಪ್ರಾಯಶ್ಚಿತ್ತಕ್ಕಾಗಿ ಕೃತಜ್ಞತೆಯು, ಕ್ರಿಸ್ತನ ಮರಣವನ್ನು ಜ್ಞಾಪಿಸಿಕೊಳ್ಳಲು, 1998, ಏಪ್ರಿಲ್ 11ರಂದು ಸೂರ್ಯಾಸ್ತಮಾನದ ಬಳಿಕ ಯೆಹೋವನ ಸಾಕ್ಷಿಗಳು ಒಟ್ಟುಗೂಡುವ ರಾಜ್ಯ ಸಭಾಗೃಹಗಳು ಇಲ್ಲವೆ ಇತರ ಸ್ಥಳಗಳಲ್ಲಿ ಉಪಸ್ಥಿತರಾಗಿರುವಂತೆ ನಮ್ಮನ್ನು ಪ್ರಚೋದಿಸಬೇಕು. ತನ್ನ ಭೌಮಿಕ ಜೀವಿತದ ಕೊನೆಯ ರಾತ್ರಿಯಂದು ಅವನು ತನ್ನ ನಂಬಿಗಸ್ತ ಅಪೊಸ್ತಲರೊಂದಿಗೆ ಈ ಆಚರಣೆಯನ್ನು ಸ್ಥಾಪಿಸಿದಾಗ, ಯೇಸು ಹೇಳಿದ್ದು: “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ.” (ಲೂಕ 22:19, 20; ಮತ್ತಾಯ 26:26-30) ಉಳಿದಿರುವ ಕೊಂಚವೇ ಅಭಿಷಿಕ್ತರು, ಯೇಸುವಿನ ಪಾಪರಹಿತ ಮಾನವ ದೇಹವನ್ನು ಸೂಚಿಸುವ ಹುಳಿಯಿಲ್ಲದ ರೊಟ್ಟಿಯನ್ನು, ಮತ್ತು ಯಜ್ಞವಾಗಿ ಸುರಿಸಲ್ಪಟ್ಟ ಅವನ ರಕ್ತವನ್ನು ಪ್ರತಿನಿಧಿಸುವ, ಸಾದಾ ಕೆಂಪು ದ್ರಾಕ್ಷಾಮದ್ಯದಲ್ಲಿ ಪಾಲ್ಗೊಳ್ಳುವರು. ಆತ್ಮಜನಿತ ಕ್ರೈಸ್ತರು ಮಾತ್ರ ಅದರಲ್ಲಿ ಪಾಲ್ಗೊಳ್ಳಬೇಕು, ಏಕೆಂದರೆ ಅವರು ಮಾತ್ರ ಹೊಸ ಒಡಂಬಡಿಕೆಯಲ್ಲಿ ಮತ್ತು ರಾಜ್ಯದ ಒಡಂಬಡಿಕೆಯಲ್ಲಿದ್ದು, ತಮ್ಮದು ಸ್ವರ್ಗೀಯ ನಿರೀಕ್ಷೆಯಾಗಿದೆಯೆಂಬ ವಿಷಯದಲ್ಲಿ, ದೇವರ ಪವಿತ್ರಾತ್ಮದ ಸ್ಪಷ್ಟವಾದ ಸಾಕ್ಷ್ಯವನ್ನು ಪಡೆದಿರುತ್ತಾರೆ. ಅನಂತ ಜೀವನವನ್ನು ಸಾಧ್ಯವನ್ನಾಗಿ ಮಾಡುವ ಯೇಸುವಿನ ಯಜ್ಞದ ಸಂಬಂಧದಲ್ಲಿ, ದೇವರು ಮತ್ತು ಕ್ರಿಸ್ತನ ಮೂಲಕ ತೋರಿಸಲ್ಪಟ್ಟ ಪ್ರೀತಿಗಾಗಿ ಕೃತಜ್ಞರಾಗಿರುವ, ಗೌರವವುಳ್ಳ ವೀಕ್ಷಕರೋಪಾದಿ ಇತರ ಲಕ್ಷಾಂತರ ಜನರು ಉಪಸ್ಥಿತರಿರುವರು.—ರೋಮಾಪುರ 6:23.
17. ಆತ್ಮಾಭಿಷೇಕದ ಸಂಬಂಧದಲ್ಲಿ ನಾವು ಏನನ್ನು ನೆನಪಿನಲ್ಲಿಟ್ಟುಕೊಳ್ಳಬೇಕು?
17 ಹಿಂದಿನ ಧಾರ್ಮಿಕ ನಂಬಿಕೆಗಳು, ಒಬ್ಬ ಪ್ರಿಯ ವ್ಯಕ್ತಿಯ ಮರಣದಿಂದ ಉಂಟಾಗುವ ಗಾಢವಾದ ಅನಿಸಿಕೆಗಳು, ಭೌಮಿಕ ಜೀವಿತದೊಂದಿಗೆ ಸಂಬಂಧಿಸಿರುವ ಈಗಿನ ತೊಂದರೆಗಳು, ಅಥವಾ ಯೆಹೋವನಿಂದ ಯಾವುದೊ ವಿಶೇಷವಾದ ಆಶೀರ್ವಾದವನ್ನು ಪಡೆದಿರುವ ಅನಿಸಿಕೆಯು, ಸ್ವರ್ಗೀಯ ಜೀವಿತವು ತಮಗಾಗಿದೆ ಎಂದು ಕೆಲವರು ತಪ್ಪಾಗಿ ಊಹಿಸಿಕೊಳ್ಳುವಂತೆ ನಡೆಸಬಹುದು. ಆದರೆ ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞಕ್ಕಾಗಿ ನಮ್ಮ ಕೃತಜ್ಞತೆಯನ್ನು ತೋರಿಸಲು, ನಾವು ಜ್ಞಾಪಕದ ಕುರುಹುಗಳಲ್ಲಿ ಪಾಲ್ಗೊಳ್ಳಬೇಕೆಂದು ಶಾಸ್ತ್ರಗಳು ನಮಗೆ ಆಜ್ಞೆನೀಡುವುದಿಲ್ಲವೆಂಬುದನ್ನು ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು. ಅಲ್ಲದೆ, ಆತ್ಮಾಭಿಷೇಕವು ‘ಇಚ್ಛಿಸುವವನ ಮೇಲಾಗಲಿ ಪ್ರಯತ್ನಿಸುವವನ ಮೇಲಾಗಲಿ ಅವಲಂಬಿಸದೆ, ದೇವರ ಮೇಲೆ ಅವಲಂಬಿಸುತ್ತದೆ’ (NW). ಆತನು ಯೇಸುವಿಗೆ ಒಬ್ಬ ಆತ್ಮಿಕ ಪುತ್ರನೋಪಾದಿ ಜನ್ಮಕೊಟ್ಟು, ಕೇವಲ 1,44,000 ಮಂದಿ ಇತರ ಪುತ್ರರನ್ನು ಮಹಿಮೆಗೆ ತರುವಾತನಾಗಿದ್ದಾನೆ.—ರೋಮಾಪುರ 9:16; ಯೆಶಾಯ 64:8.
18. ಇಂದು ಯೆಹೋವನನ್ನು ಸೇವಿಸುತ್ತಿರುವ ಹೆಚ್ಚಿನವರಿಗೆ, ಯಾವ ಆಶೀರ್ವಾದಗಳು ಮುಂದೆ ಕಾದಿವೆ?
18 ಈ ಕಡೇ ದಿವಸಗಳಲ್ಲಿ ಯೆಹೋವನನ್ನು ಸೇವಿಸುತ್ತಿರುವ ಅತ್ಯಧಿಕ ಮಾನವರ ದೇವದತ್ತ ನಿರೀಕ್ಷೆಯು, ಪ್ರಮೋದವನ ಭೂಮಿಯ ಮೇಲೆ ನಿತ್ಯಜೀವವಾಗಿದೆ. (2 ತಿಮೊಥೆಯ 3:1-5) ಬೇಗನೆ, ಅವರು ಈ ಅದ್ಭುತಕರವಾದ ಪ್ರಮೋದವನದಲ್ಲಿ ಆನಂದಿಸುವರು. ಆಗ ಸ್ವರ್ಗೀಯ ಆಳ್ವಿಕೆಯ ಕೆಳಗೆ, ಪ್ರಭುಗಳು ಭೌಮಿಕ ಕಾರ್ಯಕಲಾಪಗಳನ್ನು ನೋಡಿಕೊಳ್ಳುವರು. (ಕೀರ್ತನೆ 45:16) ಭೂನಿವಾಸಿಗಳು ದೇವರ ನಿಯಮಗಳೊಂದಿಗೆ ಅನುವರ್ತಿಸಿ, ಯೆಹೋವನ ಮಾರ್ಗಗಳ ಕುರಿತು ಹೆಚ್ಚನ್ನು ಕಲಿತಂತೆ ಶಾಂತಿಭರಿತ ಪರಿಸ್ಥಿತಿಗಳು ಅಸ್ತಿತ್ವದಲ್ಲಿರುವವು. (ಯೆಶಾಯ 9:6, 7; ಪ್ರಕಟನೆ 20:12) ಮನೆಗಳನ್ನು ಕಟ್ಟುತ್ತಾ, ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಾ, ಮಾಡಲು ಬಹಳಷ್ಟು ಕೆಲಸವಿರುವುದು. (ಯೆಶಾಯ 65:17-25) ಮತ್ತು ಮೃತರು ಜೀವಿತಕ್ಕೆ ಹಿಂದಿರುಗಿದಂತೆ, ಸಂತೋಷಭರಿತ ಕುಟುಂಬ ಪುನರ್ಮಿಲನಗಳ ಕುರಿತು ಯೋಚಿಸಿರಿ! (ಯೋಹಾನ 5:28, 29) ಅಂತಿಮ ಪರೀಕ್ಷೆಯ ಬಳಿಕ, ಎಲ್ಲ ದುಷ್ಟತನವೂ ಇಲ್ಲದೆಹೋಗುವುದು. (ಪ್ರಕಟನೆ 20:7-10) ಇದಾದ ಬಳಿಕ ಸದಾಕಾಲಕ್ಕೂ ಭೂಮಿಯು, ‘ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮಾಭರಿತ ಬಿಡುಗಡೆಯಲ್ಲಿ ಪಾಲುಹೊಂದಿರುವ’ ಪರಿಪೂರ್ಣ ಮಾನವರಿಂದ ತುಂಬಿಕೊಂಡಿರುವುದು.
[ಅಧ್ಯಯನ ಪ್ರಶ್ನೆಗಳು]
a ಶಾಸ್ತ್ರಗಳ ಒಳನೋಟ (ಇಂಗ್ಲಿಷ್), ಸಂಪುಟ 1, 225-6ನೆಯ ಪುಟಗಳನ್ನು ನೋಡಿರಿ.
b 1991, ಮಾರ್ಚ್ 15ರ ಕಾವಲಿನಬುರುಜು (ಇಂಗ್ಲಿಷ್), 19-22ನೆಯ ಪುಟಗಳನ್ನು ನೋಡಿರಿ.
ನೀವು ಹೇಗೆ ಉತ್ತರಿಸುವಿರಿ?
◻ “ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳು”ವುದರ ಅರ್ಥವೇನು?
◻ ನಮ್ಮ ನಿರೀಕ್ಷೆಯು ಸ್ವರ್ಗೀಯವಾಗಿರಲಿ ಭೌಮಿಕವಾಗಿರಲಿ, ದೇವರಿಗೆ ಕೃತಜ್ಞರಾಗಿರಲು ನಮ್ಮಲ್ಲಿ ಯಾವ ಕಾರಣಗಳಿವೆ?
◻ ಯಾವ ವಾರ್ಷಿಕ ಆಚರಣೆಗೆ ನಾವೆಲ್ಲರೂ ಹಾಜರಾಗಬೇಕು?
◻ ಯೆಹೋವನ ಜನರಲ್ಲಿ ಹೆಚ್ಚಿನವರಿಗೆ, ಭವಿಷ್ಯತ್ತು ಏನನ್ನು ಕಾದಿರಿಸಿದೆ?
[ಪುಟ 18 ರಲ್ಲಿರುವ ಚಿತ್ರ]
ಲಕ್ಷಾಂತರ ಜನರು ‘ಜೀವಜಲವನ್ನು ಕ್ರಯವಿಲ್ಲದೆ ತೆಗೆದು’ಕೊಳ್ಳಲು ತೊಡಗಿದ್ದಾರೆ. ನೀವು ಅವರಲ್ಲಿ ಒಬ್ಬರೊ?