ಅವರು ಯೆಹೋವನ ಚಿತ್ತವನ್ನು ಮಾಡಿದರು
ಪೌಲನು ಪ್ರತಿಷ್ಠಿತರ ಮುಂದೆ ಧೈರ್ಯದಿಂದ ಸಾಕ್ಷಿನೀಡುತ್ತಾನೆ
ಆ ಇಬ್ಬರು ವ್ಯಕ್ತಿಗಳ ನಡುವಿನ ವ್ಯತ್ಯಾಸವನ್ನು ಹೆಚ್ಚು ಎದ್ದುಕಾಣುವಂತೆ ಮಾಡಸಾಧ್ಯವಿರಲಿಲ್ಲ. ಒಬ್ಬನು ಕಿರೀಟವನ್ನು ಧರಿಸಿದ್ದನು, ಮತ್ತೊಬ್ಬನು ಕೋಳಗಳಿಂದ ಬಂಧಿಸಲ್ಪಟ್ಟಿದ್ದನು. ಒಬ್ಬನು ರಾಜನಾಗಿದ್ದನು, ಮತ್ತೊಬ್ಬನು ಸೆರೆವಾಸಿಯಾಗಿದ್ದನು. ಸೆರೆಮನೆಯಲ್ಲಿ ಎರಡು ವರ್ಷಗಳನ್ನು ಕಳೆದ ಬಳಿಕ, ಅಪೊಸ್ತಲ ಪೌಲನು ಈಗ ಯೆಹೂದಿಯರ ರಾಜನಾದ, ಹೆರೋದ ಅಗ್ರಿಪ್ಪ IIನೇಯವನ ಮುಂದೆ ನಿಂತಿದ್ದನು. ಆ ರಾಜನು ಮತ್ತು ಅವನ ಸಂಗಾತಿಯಾದ ಬೆರ್ನಿಕೆಯು, “ಬಹು ಆಡಂಬರದಿಂದ ಬಂದು ಸಹಸ್ರಾಧಿಪತಿಗಳ ಮತ್ತು ಪಟ್ಟಣದ ಮುಖಂಡರ ಸಂಗಡ ಸಭಾಸ್ಥಾನದೊಳಗೆ” ಉಪಸ್ಥಿತರಿದ್ದರು. (ಅ. ಕೃತ್ಯಗಳು 25:23) ಒಂದು ಕೃತಿಯು ಹೇಳುವುದು: “ಅಲ್ಲಿ ಇನ್ನೂ ನೂರಾರು ಜನರು ಇದ್ದಿರಬಹುದು.”
ಹೊಸದಾಗಿ ಆಯೋಜಿಸಲ್ಪಟ್ಟ ಅಧಿಪತಿಯಾದ ಫೆಸ್ತನು, ಆ ಸಭೆಯನ್ನು ಏರ್ಪಡಿಸಿದ್ದನು. ಇವನಿಗಿಂತ ಮುಂಚೆ ಅಧಿಪತಿಯಾಗಿದ್ದ ಫೆಲಿಕ್ಸನು, ಪೌಲನನ್ನು ಸೆರೆಮನೆಯಲ್ಲಿ ಕೊಳೆಯುವಂತೆ ಬಿಡುವುದರಲ್ಲಿ ಸಂತುಷ್ಟನಾಗಿದ್ದನು. ಆದರೆ ಪೌಲನ ವಿರುದ್ಧವಿದ್ದ ಆಪಾದನೆಗಳ ಸಪ್ರಮಾಣತೆಯನ್ನು ಫೆಸ್ತನು ಪ್ರಶ್ನಿಸಿದನು. ಏಕೆಂದರೆ, ಪೌಲನು ತಾನು ನಿರಪರಾಧಿಯೆಂದು ಸಾಧಿಸಲು ಎಷ್ಟು ಪಟ್ಟುಹಿಡಿದಿದ್ದನೆಂದರೆ, ಅವನು ತನ್ನ ಮೊಕದ್ದಮೆಯನ್ನು ಕೈಸರನ ಮುಂದೆ ಮಂಡಿಸುವಂತೆ ಒತ್ತಾಯಿಸಿದ್ದನು! ಪೌಲನ ಮೊಕದ್ದಮೆಯು, ರಾಜ ಅಗ್ರಿಪ್ಪನ ಕುತೂಹಲವನ್ನು ಕೆರಳಿಸಿತು. “ಆ ಮನುಷ್ಯನು ಹೇಳಿಕೊಳ್ಳುವದನ್ನು ಕೇಳುವದಕ್ಕೆ ನನಗೂ ಮನಸ್ಸದೆ” ಎಂದು ಅವನು ಹೇಳಿದನು. ಈ ಅಸಾಧಾರಣವಾದ ಸೆರೆವಾಸಿಯ ಬಗ್ಗೆ ರಾಜನು ಏನು ನೆನಸುವನೋ ಎಂದು ಬಹುಶಃ ಕುತೂಹಲಪಡುತ್ತಾ, ಫೆಸ್ತನು ತಕ್ಷಣವೇ ಏರ್ಪಾಡುಗಳನ್ನು ಮಾಡಿದನು.—ಅ. ಕೃತ್ಯಗಳು 24:27–25:22.
ಮರುದಿನ, ಪೌಲನು ಪ್ರತಿಷ್ಠಿತರ ಒಂದು ದೊಡ್ಡ ಗುಂಪಿನ ಮುಂದೆ ನಿಂತುಕೊಂಡಿದ್ದನು. “ಯೆಹೂದ್ಯರು ನನ್ನ ಮೇಲೆ ಆರೋಪಿಸುವ ಎಲ್ಲಾ ದೋಷಗಳ ವಿಷಯವಾಗಿ ನಿನ್ನ ಎದುರಿನಲ್ಲಿ ನಾನು ಈಹೊತ್ತು ಪ್ರತಿವಾದ ಮಾಡಬೇಕಾಗಿರುವದರಿಂದ ನನ್ನನ್ನು ಧನ್ಯನೆಂದು ಎಣಿಸಿಕೊಳ್ಳುತ್ತೇನೆ. ಯಾಕಂದರೆ ಯೆಹೂದ್ಯರಲ್ಲಿರುವ ಎಲ್ಲಾ ಆಚಾರಗಳನ್ನೂ ವಿವಾದಗಳನ್ನೂ ನೀನು ಚೆನ್ನಾಗಿ ಬಲ್ಲವನಾಗಿರುತ್ತೀ. ನನ್ನ ಮಾತುಗಳನ್ನು ಸಹನದಿಂದ ಕೇಳಬೇಕೆಂದು ಬೇಡಿಕೊಳ್ಳುತ್ತೇನೆ” ಎಂದು ಅವನು ಅಗ್ರಿಪ್ಪನಿಗೆ ಹೇಳಿದನು.—ಅ. ಕೃತ್ಯಗಳು 26:2, 3.
ಪೌಲನ ದಿಟ್ಟತನದ ಪ್ರತಿವಾದ
ಮೊದಲಾಗಿ, ಪೌಲನು ತಾನು ಹಿಂದೆ ಕ್ರೈಸ್ತರನ್ನು ಹಿಂಸಿಸುತ್ತಿದ್ದೆನೆಂದು ಅಗ್ರಿಪ್ಪನಿಗೆ ಹೇಳಿದನು. “ಅವರನ್ನು ದಂಡಿಸಿ ಅವರಿಂದ ದೂಷಣೆಯ ಮಾತುಗಳನ್ನಾಡಿಸುವದಕ್ಕೆ ಪ್ರಯತ್ನಿಸಿದೆನು. ಇದಲ್ಲದೆ ಅವರ ಮೇಲೆ ಬಹು ಕೋಪಾವೇಶವುಳ್ಳವನಾಗಿ ಪರಪಟ್ಟಣಗಳ ತನಕ ಅವರನ್ನು ಹಿಂಸೆಪಡಿಸಿದೆನು” ಎಂದು ಅವನು ಹೇಳಿದನು. ತಾನು ಹೇಗೆ ಸ್ತಂಭೀಭೂತಗೊಳಿಸುವ ದರ್ಶನವನ್ನು ಪಡೆದುಕೊಂಡನೆಂಬುದನ್ನು ಪೌಲನು ಹೇಳುತ್ತಾ ಮುಂದುವರಿದನು. ಆಗ ಪುನರುತ್ಥಿಥ ಯೇಸು ಅವನಿಗೆ ಕೇಳಿದ್ದು: “ಸೌಲನೇ, ಸೌಲನೇ, ನನ್ನನ್ನು ಯಾಕೆ ಹಿಂಸೆಪಡಿಸುತ್ತೀ? ಮುಳ್ಳು ಗೋಲನ್ನು ಒದೆಯುವದು ನಿನಗೆ ಕಷ್ಟ.”a—ಅ. ಕೃತ್ಯಗಳು 26:4-14.
ಅನಂತರ ಯೇಸು, “ನಾನು ಈಗಲೂ ಮುಂದೆ ನಿನಗೆ ಕೊಡಲಿಕ್ಕಿರುವ ದರ್ಶನಗಳಲ್ಲಿಯೂ ನಿನಗೆ ಕಾಣಿಸಿಕೊಂಡದ್ದನ್ನು ಕುರಿತು” ಎಲ್ಲ ಜನಾಂಗಗಳ ಜನರಿಗೆ ಸಾಕ್ಷಿನೀಡಬೇಕು ಎಂದು ಸೌಲನಿಗೆ ಆಜ್ಞಾಪಿಸಿದನು. ತನಗೆ ನೀಡಲ್ಪಟ್ಟ ನೇಮಕವನ್ನು ಶ್ರದ್ಧಾಪೂರ್ವಕವಾಗಿ ಮಾಡಲು ತಾನು ಶ್ರಮಿಸಿದೆನೆಂದು ಪೌಲನು ಹೇಳಿದನು. ಆದರೆ, “ಈ ಕಾರಣದಿಂದ ಯೆಹೂದ್ಯರು ದೇವಾಲಯದಲ್ಲಿ ನನ್ನನ್ನು ಹಿಡಿದು ಕೊಲ್ಲುವದಕ್ಕೆ ಪ್ರಯತ್ನಿಸಿದರು” ಎಂದು ಅವನು ಅಗ್ರಿಪ್ಪನಿಗೆ ಹೇಳಿದನು. ಯೆಹೂದ್ಯಮತದಲ್ಲಿ ಅಗ್ರಿಪ್ಪನಿಗಿರುವ ಆಸಕ್ತಿಯನ್ನು ಮನಸ್ಸಿನಲ್ಲಿಟ್ಟುಕೊಂಡು, ತನ್ನ ಸಾಕ್ಷಿಕಾರ್ಯವು ಮೆಸ್ಸೀಯನ ಕುರಿತು ‘ಪ್ರವಾದಿಗಳೂ ಮೋಶೆಯೂ ಮುಂದೆ ಆಗುವವೆಂದು ತಿಳಿಸಿದ ಸಂಗತಿಗಳನ್ನೇ ಹೊರತು ಇನ್ನೇನನ್ನು’ ಒಳಗೊಂಡಿಲ್ಲ ಎಂಬುದನ್ನು ಪೌಲನು ಒತ್ತಿಹೇಳಿದನು.—ಅ. ಕೃತ್ಯಗಳು 26:15-23.
ಆಗ ಫೆಸ್ತನು ಮಧ್ಯೆ ಬಾಯಿಹಾಕಿದನು. “ಪೌಲನೇ, ನೀನು ಮರುಳಾಗಿದ್ದೀ; ನೀನು ಬಹಳವಾಗಿ ಮಾಡುವ ಶಾಸ್ತ್ರವಿಚಾರವು ನಿನ್ನನ್ನು ಮರುಳುಗೊಳಿಸುತ್ತದೆ” ಎಂದು ಅವನು ಹೇಳಿದನು. ಪೌಲನು ಅದಕ್ಕೆ: “ಶ್ರೀಮಾನ್ ಮಹಾ ಫೆಸ್ತನೇ, ನಾನು ಮರುಳಾಗಿಲ್ಲ; ಸ್ವಸ್ಥಬುದ್ಧಿಯುಳ್ಳವನಾಗಿ ಸತ್ಯವಾದ ಮಾತುಗಳನ್ನಾಡುತ್ತೇನೆ” ಎಂದು ಉತ್ತರಿಸಿದನು. ಪೌಲನು ಅನಂತರ ಅಗ್ರಿಪ್ಪನಿಗೆ ಹೇಳಿದ್ದು: “ರಾಜನು ಈ ಸಂಗತಿಗಳನ್ನು ತಿಳಿದವನು; ಅವನ ಮುಂದೆ ಧೈರ್ಯವಾಗಿ ಮಾತಾಡುತ್ತೇನೆ, ಇವುಗಳಲ್ಲಿ ಒಂದಾದರೂ ಅವನಿಗೆ ಮರೆಯಾದದ್ದಲ್ಲವೆಂದು ನಂಬಿದ್ದೇನೆ.”—ಅ. ಕೃತ್ಯಗಳು 26:24-26.
ಅನಂತರ ಪೌಲನು ಅಗ್ರಿಪ್ಪನನ್ನು ನೇರವಾಗಿ ಸಂಬೋಧಿಸಿದನು. “ಅಗ್ರಿಪ್ಪರಾಜನೇ, ಪ್ರವಾದಿಗಳಲ್ಲಿ ನಿನಗೆ ನಂಬಿಕೆಯುಂಟೋ?” ಆ ಪ್ರಶ್ನೆಯು ಅಗ್ರಿಪ್ಪನಿಗೆ ಪೇಚಾಟವನ್ನು ಉಂಟುಮಾಡಿತು ಎಂಬುದು ನಿಶ್ಚಯ. ಏನೇ ಆದರೂ ಅವನಿಗೆ ತನ್ನ ಸ್ವಂತ ಸ್ಥಾನಮಾನವನ್ನು ಕಾಪಾಡಿಕೊಳ್ಳಬೇಕಾಗಿತ್ತು ಮತ್ತು ಒಂದು ವೇಳೆ ಪೌಲನ ಮಾತಿಗೆ ಸಮ್ಮತಿಸುವಲ್ಲಿ, ಫೆಸ್ತನು “ಮರುಳು” ಎಂದು ಕರೆದ ವಿಷಯವನ್ನು ಒಪ್ಪಿದಂತಾಗುವುದು. ಅಗ್ರಿಪ್ಪನ ಹಿಂಜರಿಕೆಯನ್ನು ಅರ್ಥಮಾಡಿಕೊಳ್ಳುತ್ತಾ, ಪೌಲನು ತಾನೇ ತನ್ನ ಪ್ರಶ್ನೆಗೆ ಉತ್ತರಿಸಿದ್ದಿರಬೇಕು. ಅವನು ಹೇಳಿದ್ದು, “ಉಂಟೆಂದು ಬಲ್ಲೆನು.” (ಓರೆಯಕ್ಷರಗಳು ನಮ್ಮವು.) ಆಗ ಅಗ್ರಿಪ್ಪನು ಮಾತಾಡಿದನು, ಆದರೆ ತನ್ನ ನುಡಿಗಳನ್ನು ಯಾವುದೇ ಕಟ್ಟುಪಾಡಿಗೆ ಒಳಪಡಿಸದೇ ಮಾತಾಡಿದನು. ಅವನು ಪೌಲನಿಗೆ ಹೇಳಿದ್ದು: “ಅಲ್ಪಪ್ರಯತ್ನದಿಂದ ನನ್ನನ್ನು ಕ್ರೈಸ್ತನಾಗುವದಕ್ಕೆ ಒಡಂಬಡಿಸುತ್ತೀಯಾ?”—ಅ. ಕೃತ್ಯಗಳು 26:27, 28.
ಪೌಲನು, ಅಗ್ರಿಪ್ಪನ ನುಣುಚಿಕೊಳ್ಳುವ ಮಾತನ್ನು, ಬಲವಾದೊಂದು ಅಂಶವನ್ನು ಹೇಳಲಿಕ್ಕಾಗಿ ಚಾಕಚಕ್ಯತೆಯಿಂದ ಉಪಯೋಗಿಸಿದನು. “ಅಲ್ಪಪ್ರಯತ್ನದಿಂದಾಗಲಿ ಅಧಿಕಪ್ರಯತ್ನದಿಂದಾಗಲಿ ನೀನು ಮಾತ್ರವಲ್ಲದೆ ಈಹೊತ್ತು ನನ್ನ ಮಾತುಗಳನ್ನು ಕೇಳುವವರೆಲ್ಲರೂ ಈ ಬೇಡಿಗಳ ಹೊರತು ನನ್ನಂತೆ ಆಗಬೇಕೆಂದು ದೇವರನ್ನು ಪ್ರಾರ್ಥಿಸುತ್ತೇನೆ” ಎಂದು ಹೇಳಿದನು.—ಅ. ಕೃತ್ಯಗಳು 26:29.
ಪೌಲನನ್ನು ಮರಣಕ್ಕೆ ಅಥವಾ ಸೆರೆಮನೆಗೆ ಹಾಕಲು ಅರ್ಹಗೊಳಿಸುವ ಯಾವುದೇ ವಿಷಯವನ್ನು ಅಗ್ರಿಪ್ಪ ಮತ್ತು ಫೆಸ್ತರು ಕಾಣಲಿಲ್ಲ. ಆದರೂ, ತನ್ನ ಮೊಕದ್ದಮೆಯನ್ನು ಕೈಸರನ ಮುಂದೆ ಮಂಡಿಸಬೇಕೆಂಬ ಅವನ ಬಿನ್ನಹವನ್ನು ಅವರು ರದ್ದುಗೊಳಿಸಲಾಗಲಿಲ್ಲ. ಆದುದರಿಂದಲೇ, ಅಗ್ರಿಪ್ಪನು ಫೆಸ್ತನಿಗೆ ಹೇಳಿದ್ದು: “ಈ ಮನುಷ್ಯನು ಚಕ್ರವರ್ತಿಯ ಎದುರಿನಲ್ಲಿ ಹೇಳಿಕೊಳ್ಳುತ್ತೇನೆಂದು ಹೇಳದೆ ಹೋಗಿದ್ದರೆ ಇವನನ್ನು ಬಿಡಬಹುದಾಗಿತ್ತು.”—ಅ. ಕೃತ್ಯಗಳು 26:30-32.
ಇದರಿಂದ ನಮಗೆ ಪಾಠ
ಪ್ರತಿಷ್ಠಿತರ ಮುಂದೆ ಸಾಕ್ಷಿನೀಡಲಿಕ್ಕೆ ಪೌಲನು ಉಪಯೋಗಿಸಿದ ವಿಧಾನವು, ನಮಗೆ ಒಂದು ಎದ್ದುಕಾಣುವ ಮಾದರಿಯನ್ನು ಒದಗಿಸುತ್ತದೆ. ರಾಜ ಅಗ್ರಿಪ್ಪನೊಟ್ಟಿಗೆ ಮಾತಾಡುವಾಗ ಪೌಲನು ವಿವೇಚನೆಯನ್ನು ಉಪಯೋಗಿಸಿದನು. ಅಗ್ರಿಪ್ಪ ಮತ್ತು ಬೆರ್ನಿಕೆಯ ಮೇಲಿದ್ದ ಅಪನಿಂದೆಯನ್ನು ಅವನು ಅರಿತಿದ್ದನು ಎಂಬುದರಲ್ಲಿ ಸಂದೇಹವಿಲ್ಲ. ಅವರದ್ದು ತೀರ ಹತ್ತಿರಸಂಬಂಧಿಗಳ ಸಂಬಂಧವಾಗಿತ್ತು. ಏಕೆಂದರೆ ಬೆರ್ನಿಕೆಯು ವಾಸ್ತವದಲ್ಲಿ ಅಗ್ರಿಪ್ಪನ ಸಹೋದರಿಯಾಗಿದ್ದಳು. ಆದರೆ ಈ ಸಂದರ್ಭದಲ್ಲಿ ಪೌಲನು ನೈತಿಕತೆಯ ಕುರಿತಾದ ಭಾಷಣವನ್ನು ಬಿಗಿಯಲಿಲ್ಲ. ಅದಕ್ಕೆ ಬದಲಾಗಿ, ತಾನು ಮತ್ತು ಅಗ್ರಿಪ್ಪನು ಒಮ್ಮತದಲ್ಲಿದ್ದ ವಿಷಯಗಳ ಕುರಿತಾದ ಅಂಶಗಳನ್ನು ಒತ್ತಿಹೇಳಿದನು. ಇನ್ನೂ ಹೆಚ್ಚಾಗಿ, ಸುಶಿಕ್ಷಿತ ಫರಿಸಾಯನಾದ ಗಮಲಿಯೇಲನಿಂದ ಶಿಕ್ಷಿತನಾಗಿದ್ದರೂ, ಅಗ್ರಿಪ್ಪನು ಯೆಹೂದಿ ಧರ್ಮಶಾಸ್ತ್ರದಲ್ಲಿ ಪ್ರವೀಣನಾಗಿದ್ದನು ಎಂಬುದನ್ನು ಪೌಲನು ಒಪ್ಪಿಕೊಂಡನು. (ಅ. ಕೃತ್ಯಗಳು 22:3) ಅಗ್ರಿಪ್ಪನ ವೈಯಕ್ತಿಕ ಜೀವನದಲ್ಲಿನ ಕುಂದುಕೊರತೆಗಳ ಎದುರಿನಲ್ಲೂ, ಪೌಲನು ಅವನೊಂದಿಗೆ ತುಂಬ ಗೌರವದಿಂದ ಮಾತಾಡಿದನು, ಏಕೆಂದರೆ ಅಗ್ರಿಪ್ಪನು ಒಂದು ಅಧಿಕಾರದ ಸ್ಥಾನವನ್ನು ಪಡೆದುಕೊಂಡಿದ್ದನು.—ರೋಮಾಪುರ 13:7.
ನಮ್ಮ ನಂಬಿಕೆಗಳ ಕುರಿತು ನಾವು ಧೈರ್ಯವಾಗಿ ಸಾಕ್ಷಿನೀಡುವಾಗ, ನಮಗೆ ಕಿವಿಗೊಡುವವರ ಅಶುದ್ಧ ಆಚರಣೆಗಳನ್ನು ಬಯಲುಪಡಿಸುವುದು ಅಥವಾ ಖಂಡಿಸುವುದು ನಮ್ಮ ಗುರಿಯಾಗಿರುವುದಿಲ್ಲ. ಅದಕ್ಕೆ ಬದಲಾಗಿ, ಸತ್ಯವನ್ನು ಸ್ವೀಕರಿಸುವಂತೆ ಅವರಿಗೆ ಸುಲಭವನ್ನಾಗಿ ಮಾಡಲು, ನಮ್ಮಲ್ಲಿರುವ ಸರ್ವಸಾಮಾನ್ಯ ನಿರೀಕ್ಷೆಗಳನ್ನು, ಸುವಾರ್ತೆಯ ಸಕಾರಾತ್ಮಕ ಅಂಶಗಳನ್ನು ನಾವು ಒತ್ತಿಹೇಳಬೇಕು. ನಮಗಿಂತ ದೊಡ್ಡವರು ಅಥವಾ ಅಧಿಕಾರದಲ್ಲಿರುವವರ ಹತ್ತಿರ ಮಾತಾಡುವಾಗ, ನಾವು ಅವರ ಸ್ಥಾನಕ್ಕೆ ಗೌರವವನ್ನು ತೋರಿಸಬೇಕು. (ಯಾಜಕಕಾಂಡ 19:32) ಈ ರೀತಿಯಲ್ಲಿ ನಾವು ಹೀಗೆ ಹೇಳಿದಂಥ ಪೌಲನನ್ನು ಅನುಕರಿಸಬಲ್ಲೆವು: “ಯಾವ ವಿಧದಲ್ಲಿಯಾದರೂ ಕೆಲವರನ್ನು ರಕ್ಷಿಸಬೇಕೆಂದು ಯಾರಾರಿಗೆ ಎಂಥೆಂಥವನಾಗಬೇಕೋ ಅಂಥಂಥವನಾಗಿದ್ದೇನೆ.”—1 ಕೊರಿಂಥ 9:22.
[ಪಾದಟಿಪ್ಪಣಿ]
a “ಮುಳ್ಳು ಗೋಲನ್ನು ಒದೆಯುವದು” ಎಂಬ ವಾಕ್ಸರಣಿಯು, ಪ್ರಾಣಿಯನ್ನು, ಹೊಡೆದುಕೊಂಡು ಹೋಗಲು ಮತ್ತು ಮಾರ್ಗದರ್ಶಿಸಲು ರಚಿಸಲ್ಪಟ್ಟ, ಒಂದು ಮೊನಚಾದ ಕೋಲನ್ನು ಒದೆಯುವ ಮೂಲಕ ಹೋರಿಯು ತನಗೆ ತಾನೇ ಗಾಯಮಾಡಿಕೊಳ್ಳುವುದನ್ನು ವರ್ಣಿಸುತ್ತದೆ. ಅದೇ ರೀತಿಯಲ್ಲಿ, ಕ್ರೈಸ್ತರನ್ನು ಹಿಂಸಿಸುವ ಮೂಲಕ ಸೌಲನು ತನಗೆ ತಾನೇ ಹಾನಿಯನ್ನು ತಂದುಕೊಳ್ಳಲಿದ್ದನು, ಏಕೆಂದರೆ ಅವನು ದೇವರ ಬೆಂಬಲವಿದ್ದ ಜನರೊಂದಿಗೆ ಹೋರಾಡುತ್ತಿದ್ದನು.