ಸ್ಥಳಿಕ ಪದ್ಧತಿಗಳು ಹಾಗೂ ಕ್ರೈಸ್ತ ಮೂಲತತ್ವಗಳು—ಸಹಮತದಲ್ಲಿವೆಯೊ?
ಉತ್ತರ ಯೂರೋಪಿನ ಸ್ಟೀವನ್ ಎಂಬ ಸಾಕ್ಷಿಯೊಬ್ಬನು, ಆಫ್ರಿಕದ ಒಂದು ದೇಶಕ್ಕೆ ಒಬ್ಬ ಮಿಷನೆರಿಯಾಗಿ ನೇಮಿಸಲ್ಪಟ್ಟನು. ಅಲ್ಲಿ ಪಟ್ಟಣದಲ್ಲಿ ಒಬ್ಬ ಸ್ಥಳಿಕ ಸಹೋದರನೊಂದಿಗೆ ಹೋಗುತ್ತಿದ್ದಾಗ, ಆ ಮಿಷನೆರಿಯ ಕೈಯನ್ನು ಆ ಸಹೋದರನು ಹಿಡಿದುಕೊಂಡಾಗ, ಆ ಮಿಷನೆರಿಯು ಬೆಚ್ಚಿಬಿದ್ದನು.
ತುಂಬ ಜನರು ಓಡಾಡುತ್ತಿರುವ ಒಂದು ರಸ್ತೆಯಲ್ಲಿ ಇನ್ನೊಬ್ಬ ಪುರುಷನೊಂದಿಗೆ ಕೈಹಿಡಿದು ನಡೆಯುವ ಆಲೋಚನೆಯೇ ಸ್ಟೀವನನಿಗೆ ಆಶ್ಚರ್ಯವನ್ನು ಉಂಟುಮಾಡಿತ್ತು. ಅವನ ಸಂಸ್ಕೃತಿಯಲ್ಲಿ ಅಂತಹ ಒಂದು ಸಂಪ್ರದಾಯವು ಸಲಿಂಗೀಕಾಮವನ್ನು ಸೂಚಿಸುತ್ತದೆ. (ರೋಮಾಪುರ 1:27) ಆದರೂ, ಈ ಆಫ್ರಿಕನ್ ಸಹೋದರನಿಗೆ, ಕೈಹಿಡಿದುಕೊಂಡು ನಡೆಯುವುದು ಕೇವಲ ಮಿತ್ರಭಾವವನ್ನು ತೋರಿಸುವುದಾಗಿತ್ತು. ಮಿಷನೆರಿಯು ಅವನ ಕೈಯನ್ನು ಹಿಡಿದುಕೊಳ್ಳಲು ನಿರಾಕರಿಸುವಲ್ಲಿ, ಅವನು ಆ ಸಹೋದರನ ಗೆಳೆತನವನ್ನು ನಿರಾಕರಿಸುತ್ತಿದ್ದಾನೆ ಎಂಬುದನ್ನು ಅದು ಅರ್ಥೈಸುವುದು.
ಪದ್ಧತಿಗಳಲ್ಲಿನ ಭಿನ್ನತೆಯು ನಮಗೆ ಹೇಗೆ ಸಂಬಂಧಿಸಿದೆ? ಮೊದಲನೆಯ ಕಾರಣವೇನೆಂದರೆ, “ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡ”ಲಿಕ್ಕಾಗಿರುವ ತಮ್ಮ ದೈವಿಕ ನೇಮಕವನ್ನು ಪೂರೈಸಲು ಯೆಹೋವನ ಜನರು ತುಂಬ ಆಸಕ್ತಿಯುಳ್ಳವರಾಗಿದ್ದಾರೆ. (ಮತ್ತಾಯ 28:19) ಈ ಕೆಲಸವನ್ನು ಪೂರೈಸಲಿಕ್ಕಾಗಿ, ಎಲ್ಲಿ ಶುಶ್ರೂಷಕರ ಆವಶ್ಯಕತೆಯು ಹೆಚ್ಚಾಗಿದೆಯೋ, ಆ ಸ್ಥಳಗಳಿಗೆ ಕೆಲವರು ಸ್ಥಳಾಂತರಿಸಿದ್ದಾರೆ. ತಮ್ಮ ಹೊಸ ಸ್ಥಳಗಳಲ್ಲಿ ಯಶಸ್ಸನ್ನು ಪಡೆಯಲಿಕ್ಕಾಗಿ, ತಾವು ಎದುರಿಸುವ ಭಿನ್ನವಾದ ಪದ್ಧತಿಗಳನ್ನು ಅವರು ಅರ್ಥಮಾಡಿಕೊಳ್ಳಬೇಕು ಮತ್ತು ಅದಕ್ಕೆ ಹೊಂದಿಕೊಳ್ಳಬೇಕು. ಆಗಲೇ ಅವರು ತಮ್ಮ ಜೊತೆ ಸಹೋದರ ಸಹೋದರಿಯರೊಂದಿಗೆ ಹೊಂದಿಕೆಯಲ್ಲಿ ಕೆಲಸಮಾಡಲು ಶಕ್ತರಾಗಿರುವರು, ಮತ್ತು ಅದೇ ಸಮಯದಲ್ಲಿ ಸಾರ್ವಜನಿಕ ಶುಶ್ರೂಷೆಯಲ್ಲಿಯೂ ಅವರು ಹೆಚ್ಚು ಪರಿಣಾಮಕಾರಿಯಾಗಿರುವರು.
ಇದಲ್ಲದೆ, ಗಲಭೆಯಿಂದ ತುಂಬಿರುವ ಈ ಲೋಕದಲ್ಲಿ, ರಾಜಕೀಯ ಅಥವಾ ಆರ್ಥಿಕ ಕಾರಣಗಳಿಂದಾಗಿ ಅನೇಕ ಜನರು ತೊಂದರೆಭರಿತ ಸ್ವದೇಶಗಳನ್ನು ಬಿಟ್ಟು ಪಲಾಯನಗೈದಿದ್ದಾರೆ ಮತ್ತು ಇನ್ನಿತರ ದೇಶಗಳಲ್ಲಿ ಹೋಗಿ ನೆಲೆಸಿದ್ದಾರೆ. ಆದುದರಿಂದ, ಈ ಹೊಸ ನೆರೆಯವರಿಗೆ ಸಾರುತ್ತಿರುವಾಗ, ಹೊಸ ಪದ್ಧತಿಗಳನ್ನು ಎದುರಿಸುತ್ತೇವೆ ಎಂಬುದನ್ನು ನಾವು ಕಂಡುಕೊಳ್ಳಸಾಧ್ಯವಿದೆ. (ಮತ್ತಾಯ 22:39) ನಾವು ಈ ಹೊಸ ಪದ್ಧತಿಯನ್ನು ಪ್ರಥಮ ಬಾರಿಗೆ ನೋಡುವಾಗ, ಅದು ನಮ್ಮನ್ನು ಗೊಂದಲಕ್ಕೀಡುಮಾಡಬಹುದು.
ಸ್ಪಷ್ಟವಾಗಿ ವಿವರಿಸಲ್ಪಟ್ಟಿರುವ ವಿಷಯಗಳು
ಪದ್ಧತಿಯು, ಮಾನವ ಸಮಾಜದ ಅತಿ ಪ್ರಬಲವಾದ ಭಾಗವಾಗಿದೆ. ಆದುದರಿಂದ, “ಧರ್ಮವನ್ನು ಅತಿಯಾಗಿ ಆಚರಿ”ಸುವವರಾಗಿ ಪರಿಣಮಿಸುವುದು, ಹಾಗೂ ಪ್ರತಿಯೊಂದು ಚಿಕ್ಕಪುಟ್ಟ ಪದ್ಧತಿಯು ಬೈಬಲ್ ತತ್ವಗಳೊಂದಿಗೆ ಹೊಂದಿಕೆಯಲ್ಲಿದೆಯೋ ಇಲ್ಲವೋ ಎಂಬುದನ್ನು ಶೋಧಿಸಿನೋಡುವುದು ನಿಷ್ಪ್ರಯೋಜಕವಾಗಿದೆ!—ಪ್ರಸಂಗಿ 7:16.
ಇನ್ನೊಂದು ಕಡೆಯಲ್ಲಿ, ದೈವಿಕ ಮೂಲತತ್ವಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುವಂತಹ ಸ್ಥಳಿಕ ಪದ್ಧತಿಗಳನ್ನು ಗುರುತಿಸುವ ಅಗತ್ಯವಿದೆ. ಆದರೂ, ಸಾಮಾನ್ಯವಾಗಿ ಹಾಗೆ ಮಾಡುವುದು ಕಷ್ಟಕರವೇನಲ್ಲ, ಏಕೆಂದರೆ ‘ವಿಷಯಗಳನ್ನು ಸರಿಪಡಿಸಲು’ (NW) ದೇವರ ವಾಕ್ಯವು ನಮಗೆ ಸಹಾಯ ಮಾಡುತ್ತದೆ. (2 ತಿಮೊಥೆಯ 3:16) ಉದಾಹರಣೆಗಾಗಿ, ಕೆಲವು ದೇಶಗಳಲ್ಲಿ ಅನೇಕ ಪತ್ನಿಯರನ್ನು ಹೊಂದಿರುವುದು ಸಾಂಪ್ರದಾಯಿಕವಾಗಿದೆ, ಆದರೆ ಒಬ್ಬ ಪುರುಷನಿಗೆ ಒಬ್ಬಳೇ ಜೀವಂತ ಪತ್ನಿಯಿರಬೇಕು ಎಂಬುದು ನಿಜ ಕ್ರೈಸ್ತರಿಗಿರುವ ಶಾಸ್ತ್ರೀಯ ಮಟ್ಟವಾಗಿದೆ.—ಆದಿಕಾಂಡ 2:24; 1 ತಿಮೊಥೆಯ 3:2.
ತದ್ರೀತಿಯಲ್ಲಿ, ದುಷ್ಟಾತ್ಮಗಳನ್ನು ದೂರವಿರಿಸಲು ರೂಪಿಸಲ್ಪಟ್ಟಿರುವ ಕೆಲವು ಶವಸಂಸ್ಕಾರದ ಪದ್ಧತಿಗಳು, ಅಥವಾ ಅಮರ ಆತ್ಮದಲ್ಲಿನ ನಂಬಿಕೆಯ ಆಧಾರದ ಮೇಲೆ ರೂಪಿಸಲ್ಪಟ್ಟಿರುವ ಪದ್ಧತಿಗಳು, ನಿಜ ಕ್ರೈಸ್ತರಿಗೆ ಸ್ವೀಕಾರಯೋಗ್ಯವಾಗಿರುವುದಿಲ್ಲ. ದುರಾತ್ಮಗಳನ್ನು ದೂರವಿಡಲಿಕ್ಕಾಗಿ ಕೆಲವು ಜನರು ಮೃತರಿಗೆ ಧೂಪಹಾಕುತ್ತಾರೆ ಅಥವಾ ಪ್ರಾರ್ಥನೆಗಳನ್ನು ಮಾಡುತ್ತಾರೆ. ಮೃತರನ್ನು ‘ಮುಂದಿನ ಜೀವಿತಕ್ಕಾಗಿ’ ಸಿದ್ಧಗೊಳಿಸುವುದರಲ್ಲಿ ಸಹಾಯ ಮಾಡುವ ಉದ್ದೇಶದಿಂದ, ಇನ್ನಿತರರು ಜಾಗರಣೆಮಾಡುತ್ತಾರೆ ಅಥವಾ ಎರಡನೆಯ ಹೂಳುವಿಕೆಯನ್ನು ಸಹ ಆಚರಿಸುತ್ತಾರೆ. ಆದರೆ ಒಬ್ಬ ವ್ಯಕ್ತಿಯು ಮೃತಪಟ್ಟಾಗ, ಅವನಿಗೆ “ಯಾವ ತಿಳುವಳಿಕೆಯೂ” ಇರುವುದಿಲ್ಲ, ಮತ್ತು ಅವನು ಯಾರಿಗೂ ಒಳ್ಳೆಯದನ್ನು ಅಥವಾ ಕೆಡುಕನ್ನು ಮಾಡಸಾಧ್ಯವಿಲ್ಲ ಎಂದು ಬೈಬಲು ಕಲಿಸುತ್ತದೆ.—ಪ್ರಸಂಗಿ 9:5; ಕೀರ್ತನೆ 146:4.
ಆದರೆ, ದೇವರ ವಾಕ್ಯದೊಂದಿಗೆ ಸಹಮತದಲ್ಲಿರುವ ಅನೇಕ ಪದ್ಧತಿಗಳು ನಿಶ್ಚಯವಾಗಿಯೂ ಇವೆ. ಅತಿಥಿಸತ್ಕಾರದ ಮನೋಭಾವವು ಇನ್ನೂ ಅಸ್ತಿತ್ವದಲ್ಲಿರುವ, ಒಬ್ಬ ಅಪರಿಚಿತನಿಗೆ ಸಹ ಆದರಣೀಯ ಸ್ವಾಗತವನ್ನು ನೀಡುವಂತಹ, ಮತ್ತು ಕೆಲವೊಮ್ಮೆ ಅಪರಿಚಿತನನ್ನು ಅತಿಥಿಯೋಪಾದಿ ಸ್ವಾಗತಿಸುವಂತೆ ಕೇಳಿಕೊಳ್ಳುವಂತಹ ಪದ್ಧತಿಗಳನ್ನು ನೀವು ನೋಡುವಾಗ, ಅದು ಎಷ್ಟು ಚೈತನ್ಯದಾಯಕವಾದದ್ದಾಗಿದೆ! ಸ್ವತಃ ನೀವೇ ಈ ಉಪಚಾರವನ್ನು ವೈಯಕ್ತಿಕವಾಗಿ ಅನುಭವಿಸುವಾಗ, ಆ ಮಾದರಿಯನ್ನು ಅನುಸರಿಸುವಂತೆ ನೀವು ಪ್ರಚೋದಿಸಲ್ಪಡುವುದಿಲ್ಲವೊ? ಹಾಗೆ ಮಾಡುವಲ್ಲಿ, ಖಂಡಿತವಾಗಿಯೂ ಅದು ನಿಮ್ಮ ಕ್ರೈಸ್ತ ವ್ಯಕ್ತಿತ್ವವನ್ನು ಉತ್ತಮಗೊಳಿಸುವುದು.—ಇಬ್ರಿಯ 13:1, 2.
ಕಾಯುವುದನ್ನು ನಮ್ಮಲ್ಲಿ ಯಾರಾದರೂ ಇಷ್ಟಪಡುತ್ತೇವೊ? ಕೆಲವು ದೇಶಗಳಲ್ಲಿ ಇದು ಸಂಭವಿಸುವುದೇ ಇಲ್ಲ, ಏಕೆಂದರೆ ಅಲ್ಲಿ ಕಾಲನಿಷ್ಠೆಯು ಪ್ರಾಮುಖ್ಯವಾದದ್ದಾಗಿ ಪರಿಗಣಿಸಲ್ಪಡುತ್ತದೆ. ದೇವರು ಸುವ್ಯವಸ್ಥೆಯ ದೇವರಾಗಿದ್ದಾನೆ ಎಂದು ಬೈಬಲು ನಮಗೆ ಹೇಳುತ್ತದೆ. (1 ಕೊರಿಂಥ 14:33) ಈ ಕಾರಣದಿಂದ, ದುಷ್ಟತನದ ಅಂತ್ಯಕ್ಕೆ ಆತನು ‘ದಿನವನ್ನೂ ಗಳಿಗೆಯನ್ನೂ’ ನಿಗದಿಪಡಿಸಿದ್ದಾನೆ, ಮತ್ತು ಈ ಘಟನೆಯು “ತಾಮಸ”ವಾಗುವುದಿಲ್ಲ ಎಂಬ ಆಶ್ವಾಸನೆಯನ್ನು ಆತನು ಕೊಡುತ್ತಾನೆ. (ಮತ್ತಾಯ 24:36; ಹಬಕ್ಕೂಕ 2:3) ಕಾಲನಿಷ್ಠೆಯನ್ನು ಉತ್ತೇಜಿಸುವ ಪದ್ಧತಿಗಳು, ನಾವು ಕ್ರಮಬದ್ಧರಾಗಿರಲು ಹಾಗೂ ಬೇರೆ ಜನರಿಗಾಗಿ ಹಾಗೂ ಅವರ ಸಮಯಕ್ಕಾಗಿ ಸೂಕ್ತವಾದ ಗೌರವವನ್ನು ತೋರಿಸಲು ನಮಗೆ ಸಹಾಯ ಮಾಡುತ್ತವೆ. ಖಂಡಿತವಾಗಿಯೂ ಇದು ಶಾಸ್ತ್ರೀಯ ಮೂಲತತ್ವಗಳಿಗೆ ಹೊಂದಿಕೆಯಲ್ಲಿದೆ.—1 ಕೊರಿಂಥ 14:40; ಫಿಲಿಪ್ಪಿ 2:4.
ಹಾನಿರಹಿತ ಪದ್ಧತಿಗಳ ಕುರಿತಾಗಿ ಏನು?
ಕೆಲವು ಪದ್ಧತಿಗಳು ಕ್ರೈಸ್ತ ಜೀವನ ರೀತಿಯೊಂದಿಗೆ ಸಹಮತದಲ್ಲಿವೆಯಾದರೂ, ಇನ್ನಿತರ ಪದ್ಧತಿಗಳು ಸಹಮತದಲ್ಲಿಲ್ಲ. ಆದರೆ ಸರಿಯಾದ ಅಥವಾ ತಪ್ಪಾದ ಪದ್ಧತಿ ಎಂದು ನಾವು ಹೇಳಲು ಅಸಾಧ್ಯವಾಗಿರುವಂತಹ ಪದ್ಧತಿಗಳ ಕುರಿತಾಗಿ ಏನು? ಅನೇಕ ಪದ್ಧತಿಗಳು ಹಾನಿರಹಿತವಾಗಿವೆ, ಮತ್ತು ಅವುಗಳ ಕಡೆಗಿನ ನಮ್ಮ ಮನೋಭಾವವು ನಮ್ಮ ಆತ್ಮಿಕ ಸಮತೂಕತೆಯನ್ನು ತೋರಿಸಸಾಧ್ಯವಿದೆ.
ಉದಾಹರಣೆಗಾಗಿ, ಬೇರೆ ಬೇರೆ ರೀತಿಯಲ್ಲಿ ಅಭಿವಂದಿಸಬಹುದು—ಹಸ್ತಲಾಘವ, ತಲೆಬಾಗುವಿಕೆ, ಮುತ್ತಿಡುವುದು, ಅಥವಾ ಆಲಿಂಗಿಸಿಕೊಳ್ಳುವುದು. ತದ್ರೀತಿಯಲ್ಲಿ, ಊಟಕ್ಕೆ ಕುಳಿತುಕೊಳ್ಳುವಾಗ ಅನುಸರಿಸಬೇಕಾದ ಶಿಷ್ಟಾಚಾರಗಳು ಬಹಳಷ್ಟಿವೆ. ಕೆಲವು ದೇಶಗಳಲ್ಲಿ, ಒಂದೇ ತಟ್ಟೆಯಲ್ಲಿ ಅನೇಕರು ಊಟಮಾಡುತ್ತಾರೆ. ಕೆಲವು ದೇಶಗಳಲ್ಲಿ ತೇಗುವುದನ್ನು ಗಣ್ಯತೆಯ ಅಭಿವ್ಯಕ್ತಿಯೋಪಾದಿ ಅಂಗೀಕರಿಸಲಾಗುತ್ತದೆ ಮತ್ತು ಅಪೇಕ್ಷಿಸಲಾಗುತ್ತದೆ. ಆದರೆ ಇನ್ನಿತರ ದೇಶಗಳಲ್ಲಿ ಅದನ್ನು ಅನಂಗೀಕೃತವಾಗಿ ಮತ್ತು ತುಂಬ ಅಸಭ್ಯ ವರ್ತನೆಯಾಗಿ ಪರಿಗಣಿಸಲಾಗುತ್ತದೆ.
ಈ ಹಾನಿರಹಿತ ಪದ್ಧತಿಗಳಲ್ಲಿ ನೀವು ಯಾವುದನ್ನು ಇಷ್ಟಪಡುತ್ತೀರಿ ಅಥವಾ ಯಾವುದನ್ನು ಇಷ್ಟಪಡುವುದಿಲ್ಲ ಎಂಬುದನ್ನು ನಿರ್ಧರಿಸುವ ಬದಲು, ಅವುಗಳ ಕಡೆಗೆ ಯೋಗ್ಯವಾದ ಮನೋಭಾವವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಿರಿ. ಬೈಬಲಿನ ಅನಂತ ಸಲಹೆಯು ಶಿಫಾರಸ್ಸು ಮಾಡುವುದೇನೆಂದರೆ, ‘ಪಕ್ಷಪಾತದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವದನ್ನೂ ಮಾಡದೆ ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ.’ (ಫಿಲಿಪ್ಪಿ 2:3) ತದ್ರೀತಿಯಲ್ಲಿ, ದಿಸ್ ವೇ, ಪ್ಲೀಸ್—ಎ ಬುಕ್ ಆಫ್ ಮ್ಯಾನರ್ಸ್ ಎಂಬ ತಮ್ಮ ಪುಸ್ತಕದಲ್ಲಿ, ಇಲೆನರ್ ಬಾಯ್ಕಿನ್ ಹೇಳುವುದು: “ಮೊತ್ತಮೊದಲಾಗಿ ನಿಮಗೆ ಬೇಕಾಗಿರುವುದು ದಯಾಪರ ಮನಸ್ಸು.”
ಈ ದೀನ ಮನೋಭಾವವು, ಇತರರ ಪದ್ಧತಿಗಳನ್ನು ಕೀಳಾಗಿ ಕಾಣುವುದರಿಂದ ನಮ್ಮನ್ನು ತಡೆಗಟ್ಟುತ್ತದೆ. ನಮಗೆ ಭಿನ್ನವಾಗಿ ಕಂಡುಬರುವ ಎಲ್ಲವನ್ನೂ ಸಂದೇಹಾಸ್ಪದವಾಗಿ ಕಾಣುವುದಕ್ಕೆ ಬದಲಾಗಿ, ನಾವೇ ಮುನ್ನೆಜ್ಜೆಯನ್ನು ತೆಗೆದುಕೊಂಡು, ಬೇರೆ ಜನರು ಹೇಗೆ ಜೀವಿಸುತ್ತಾರೆ ಎಂಬುದನ್ನು ಕಲಿಯುವಂತೆ, ಅವರ ಪದ್ಧತಿಗಳಲ್ಲಿ ಪಾಲ್ಗೊಳ್ಳುವಂತೆ, ಮತ್ತು ಅವರ ಆಹಾರಗಳ ರುಚಿನೋಡುವಂತೆ ನಾವು ಪ್ರಚೋದಿಸಲ್ಪಡುವೆವು. ವಿಶಾಲ ಮನೋಭಾವದವರಾಗಿರುವ ಮೂಲಕ ಹಾಗೂ ಹೊಸ ವಿಧಾನಗಳನ್ನು ಪ್ರಯೋಗಿಸಿ ನೋಡಲು ಮನಸ್ಸುಮಾಡುವ ಮೂಲಕ, ವಿದೇಶಿಯರ ಅಥವಾ ನಮ್ಮ ಆತಿಥೇಯರ ಪದ್ಧತಿಯನ್ನು ನಾವು ಗಣ್ಯಮಾಡುತ್ತೇವೆ. ನಮ್ಮ ಹೃದಯಗಳನ್ನು ಹಾಗೂ ನಮ್ಮ ಅನುಭವಗಳ ವ್ಯಾಪ್ತಿಯನ್ನು ‘ವಿಶಾಲಗೊಳಿಸುವ’ ಮೂಲಕ ಸಹ, ನಾವು ಪ್ರಯೋಜನವನ್ನು ಪಡೆದುಕೊಳ್ಳುವೆವು.—2 ಕೊರಿಂಥ 6:13.
ಪದ್ಧತಿಯು ನಮ್ಮ ಆತ್ಮಿಕ ಪ್ರಗತಿಯನ್ನು ತಡೆಗಟ್ಟುವುದಾದರೆ
ಕೆಲವು ಪದ್ಧತಿಗಳು ಅಶಾಸ್ತ್ರೀಯವಾಗಿರುವುದಿಲ್ಲ, ಆದರೆ ಅವು ಆತ್ಮಿಕ ಪ್ರಗತಿಗೆ ಸಹಾಯಕರವಾಗಿರುವುದಿಲ್ಲ—ಅಂತಹ ಪದ್ಧತಿಗಳನ್ನು ನಾವು ಎದುರಿಸುವುದಾದರೆ ಆಗೇನು? ಉದಾಹರಣೆಗೆ, ಕೆಲವು ದೇಶಗಳಲ್ಲಿ ಜನರು ತುಂಬ ಕಾಲಹರಣಮಾಡುವ ಪ್ರವೃತ್ತಿಯುಳ್ಳವರಾಗಿರಬಹುದು. ಇಂತಹ ಸೋಮಾರಿತನದ ಜೀವನವು, ಒತ್ತಡವನ್ನು ಕಡಿಮೆಮಾಡಸಾಧ್ಯವಿದೆಯಾದರೂ, ಶುಶ್ರೂಷೆಯನ್ನು ನಾವು “ಪೂರ್ಣವಾಗಿ” (NW) ನೆರವೇರಿಸುವುದನ್ನು ಹೆಚ್ಚು ಕಷ್ಟಕರವಾದದ್ದಾಗಿ ಅದು ಮಾಡುವುದು.—2 ತಿಮೊಥೆಯ 4:5.
ಪ್ರಮುಖ ವಿಚಾರಗಳನ್ನು “ನಾಳೆಯ” ವರೆಗೆ ಮುಂದೂಡುವುದನ್ನು ದೂರಮಾಡಲು, ನಾವು ಇತರರಿಗೆ ಹೇಗೆ ಉತ್ತೇಜನ ನೀಡಸಾಧ್ಯವಿದೆ? “ಮೊತ್ತಮೊದಲಾಗಿ ನಿಮಗೆ ಬೇಕಾಗಿರುವುದು ದಯಾಪರ ಮನಸ್ಸು” ಎಂಬುದನ್ನು ನೆನಪಿನಲ್ಲಿಡಿರಿ. ಪ್ರೀತಿಯಿಂದ ಪ್ರಚೋದಿತರಾಗಿ, ನಾವು ಮಾದರಿಯನ್ನು ಇಡಸಾಧ್ಯವಿದೆ, ಮತ್ತು ಇಂದು ಮಾಡಬೇಕಾದ ಕೆಲಸವನ್ನು ನಾಳೆಯ ವರೆಗೆ ಮಾಡಲು ಕಾಯದೆ ಇರುವುದರ ಪ್ರಯೋಜನಗಳನ್ನು ದಯಾಭಾವದಿಂದ ವಿವರಿಸಸಾಧ್ಯವಿದೆ. (ಪ್ರಸಂಗಿ 11:4) ಅದೇ ಸಮಯದಲ್ಲಿ, ಕೆಲಸವನ್ನು ಮಾಡಿಮುಗಿಸಿಬಿಡುವ ಕಾರಣದಿಂದ, ನಾವು ಒಬ್ಬರು ಇನ್ನೊಬ್ಬರ ಮೇಲೆ ಇಟ್ಟಿರುವ ಭರವಸೆ ಹಾಗೂ ವಿಶ್ವಾಸವನ್ನು ತ್ಯಾಗಮಾಡದಂತೆ ಜಾಗರೂಕರಾಗಿರಬೇಕು. ಇತರರು ನಮ್ಮ ಸಲಹೆಗಳನ್ನು ಆ ಕೂಡಲೆ ಸ್ವೀಕರಿಸದಿದ್ದರೆ, ನಾವು ಅವರ ಮೇಲೆ ಅಧಿಕಾರ ಚಲಾಯಿಸಬಾರದು ಅಥವಾ ಅವರ ಮೇಲೆ ನಮ್ಮ ಆಶಾಭಂಗವನ್ನು ತೀರಿಸಿಕೊಳ್ಳಬಾರದು. ಕಾರ್ಯಸಮರ್ಥತೆಗಿಂತಲೂ ಪ್ರೀತಿಯನ್ನು ಹೆಚ್ಚು ಪ್ರಾಮುಖ್ಯವಾದದ್ದಾಗಿ ಪರಿಗಣಿಸಬೇಕು.—1 ಪೇತ್ರ 4:8; 5:3.
ಸ್ಥಳಿಕ ಅಭಿರುಚಿಗಳನ್ನು ಪರಿಗಣಿಸುವುದು
ನಾವು ನೀಡುವ ಯಾವುದೇ ಸಲಹೆಯು ಸಮಂಜಸವಾದದ್ದಾಗಿದೆ, ಮತ್ತು ಅದು ನಮ್ಮ ವೈಯಕ್ತಿಕ ಅಭಿರುಚಿಗಳನ್ನು ಇತರರ ಮೇಲೆ ಹೊರಿಸುವ ಪ್ರಯತ್ನದಿಂದಾಗಿಲ್ಲ ಎಂಬ ವಿಷಯದಲ್ಲಿ ನಮಗೆ ಖಾತ್ರಿಯಿರಬೇಕು. ಉದಾಹರಣೆಗಾಗಿ, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಉಡುಪನ್ನು ಧರಿಸುತ್ತಾರೆ. ಅನೇಕ ಸ್ಥಳಗಳಲ್ಲಿ ಸುವಾರ್ತೆಯನ್ನು ಸಾರುವಾಗ, ನೆಕ್ ಟೈಯನ್ನು ಹಾಕಿಕೊಳ್ಳುವುದು ಒಬ್ಬ ಪುರುಷನಿಗೆ ಸೂಕ್ತವಾದದ್ದಾಗಿದೆ. ಆದರೆ ಉಷ್ಣವಲಯದ ಕೆಲವು ದೇಶಗಳಲ್ಲಿ, ಅದನ್ನು ತೀರ ಔಪಚಾರಿಕವಾದ ಉಡುಪಾಗಿ ವೀಕ್ಷಿಸಬಹುದು. ಸಾರ್ವಜನಿಕರೊಂದಿಗೆ ವ್ಯವಹರಿಸುವ ವೃತ್ತಿಪರ ವ್ಯಕ್ತಿಯೊಬ್ಬನಿಗೆ ಯಾವುದು ಯೋಗ್ಯವಾದ ಉಡುಪಾಗಿದೆ ಎಂಬ ವಿಷಯದಲ್ಲಿ ಸ್ಥಳಿಕ ಅಭಿರುಚಿಯನ್ನು ಪರಿಗಣಿಸುವುದು, ಅನೇಕವೇಳೆ ಒಂದು ಸಹಾಯಕರ ಮಾರ್ಗದರ್ಶನವಾಗಿರುವುದು. ಉಡುಪು ಧರಿಸುವಿಕೆಯ ಕುರಿತಾದ ಸೂಕ್ಷ್ಮ ವಿಚಾರದೊಂದಿಗೆ ವ್ಯವಹರಿಸುವಾಗ, “‘ಸ್ವಸ್ಥಚಿತ್ತ”ವು (NW) ಆವಶ್ಯಕವಾದದ್ದಾಗಿದೆ.—1 ತಿಮೊಥೆಯ 2:9, 10.
ಒಂದು ಪದ್ಧತಿಯು ನಮಗೆ ಇಷ್ಟವಾಗದಿದ್ದಲ್ಲಿ ಆಗೇನು? ನಾವು ಅದನ್ನು ತತ್ಕ್ಷಣವೇ ತಿರಸ್ಕರಿಸಬೇಕೊ? ಖಂಡಿತವಾಗಿಯೂ ಇಲ್ಲ. ಈ ಮುಂಚೆ ತಿಳಿಸಲ್ಪಟ್ಟ, ಪುರುಷರು ಕೈಗಳನ್ನು ಹಿಡಿದುಕೊಳ್ಳುವ ಪದ್ಧತಿಯು, ನಿರ್ದಿಷ್ಟವಾಗಿ ಆ ಆಫ್ರಿಕನ್ ಸಮುದಾಯದಲ್ಲಿ ಸಂಪೂರ್ಣವಾಗಿ ಅಂಗೀಕೃತವಾಗಿತ್ತು. ಇತರ ಪುರುಷರು ಪರಸ್ಪರ ಕೈಗಳನ್ನು ಹಿಡಿದುಕೊಂಡು ಓಡಾಡುತ್ತಿರುವುದನ್ನು ಆ ಮಿಷನೆರಿಯು ಗಮನಿಸಿದಾಗ, ಅವನಿಗೂ ನಿರಾತಂಕ ಅನಿಸಿಕೆಯಾಯಿತು.
ತನ್ನ ವ್ಯಾಪಕವಾದ ಮಿಷನೆರಿ ಪ್ರಯಾಣಗಳಲ್ಲಿ ಅಪೊಸ್ತಲ ಪೌಲನು, ಬೇರೆ ಬೇರೆ ಹಿನ್ನೆಲೆಗಳಿಂದ ಬಂದಿದ್ದ ಸದಸ್ಯರಿರುವ ಸಭೆಗಳನ್ನು ಸಂದರ್ಶಿಸಿದನು. ಪದ್ಧತಿಗಳ ಕುರಿತು ಅಲ್ಲಿ ಅನೇಕ ಘರ್ಷಣೆಗಳಿದ್ದವು ಎಂಬುದು ಖಂಡಿತ. ಹೀಗೆ, ಪೌಲನು ತನ್ನಿಂದ ಸಾಧ್ಯವಿರುವ ಎಲ್ಲ ಪದ್ಧತಿಗಳಿಗೆ ಹೊಂದಿಕೊಂಡನು. ಆದರೆ ಅದೇ ಸಮಯದಲ್ಲಿ, ಅವನು ಬೈಬಲ್ ಮೂಲತತ್ವಗಳಿಗೆ ದೃಢವಾಗಿ ಅಂಟಿಕೊಂಡನು. “ಯಾವ ವಿಧದಲ್ಲಿಯಾದರೂ ಕೆಲವರನ್ನು ರಕ್ಷಿಸಬೇಕೆಂದು ಯಾರಾರಿಗೆ ಎಂಥೆಂಥವನಾಗಬೇಕೋ ಅಂಥಂಥವನಾಗಿದ್ದೇನೆ” ಎಂದು ಅವನು ಹೇಳಿದನು.—1 ಕೊರಿಂಥ 9:22, 23; ಅ. ಕೃತ್ಯಗಳು 16:3.
ಯೋಗ್ಯವಾದ ಕೆಲವೊಂದು ಪ್ರಶ್ನೆಗಳು, ನಾವು ಹೊಸ ಪದ್ಧತಿಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ನಿರ್ಧರಿಸಲು ನಮಗೆ ಸಹಾಯ ಮಾಡಬಹುದು. ಕೆಲವೊಂದು ಪದ್ಧತಿಗೆ ನಾವು ಹೊಂದಿಕೊಳ್ಳುವ ಮೂಲಕ—ಅಥವಾ ಹಾಗೆ ಮಾಡಲು ನಿರಾಕರಿಸುವ ಮೂಲಕ—ನಾವು ನಮ್ಮನ್ನು ಗಮನಿಸುವವರಿಗೆ ಯಾವ ಅಭಿಪ್ರಾಯವನ್ನು ಕೊಡುತ್ತಿದ್ದೇವೆ? ನಾವು ಅವರ ಪದ್ಧತಿಗಳನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದೇವೆ ಎಂಬುದನ್ನು ನೋಡಸಾಧ್ಯವಿರುವುದರಿಂದ ಅವರು ನಮ್ಮ ರಾಜ್ಯ ಸಂದೇಶಕ್ಕೆ ಆಕರ್ಷಿತರಾಗುವರೋ? ಇನ್ನೊಂದು ಕಡೆಯಲ್ಲಿ, ನಾವು ಒಂದು ಸ್ಥಳಿಕ ಪದ್ಧತಿಗೆ ಹೊಂದಿಕೊಳ್ಳುವಲ್ಲಿ, ನಮ್ಮ ಶುಶ್ರೂಷೆಯು, ‘ನಿಂದೆಗೆ ಅವಕಾಶವನ್ನು ಕೊಡದಂತಹ’ ರೀತಿಯಲ್ಲಿ ಇರಸಾಧ್ಯವಿದೆಯೊ?—2 ಕೊರಿಂಥ 6:3.
‘ಯಾರಾರಿಗೆ ಎಂಥೆಂಥವರಾಗಬೇಕೋ ಅಂಥಂಥ’ವರಾಗಿರಲು ನಾವು ಬಯಸುವಲ್ಲಿ, ಯಾವುದು ಸೂಕ್ತವಾದದ್ದಾಗಿದೆ ಮತ್ತು ಯಾವುದು ಸೂಕ್ತವಾದದ್ದಾಗಿಲ್ಲ ಎಂಬ ವಿಷಯದಲ್ಲಿ ಆಳವಾಗಿ ಬೇರೂರಿರುವ ಕೆಲವು ದೃಷ್ಟಿಕೋನಗಳನ್ನು ನಾವು ಬದಲಾಯಿಸಬೇಕಾಗಿರಬಹುದು. ಅನೇಕವೇಳೆ ಕೆಲವೊಂದು ವಿಷಯಗಳನ್ನು ನಡಿಸುವ “ಸರಿ”ಯಾದ ಹಾಗೂ “ತಪ್ಪಾ”ದ ವಿಧಗಳು, ನಾವು ಎಲ್ಲಿ ಜೀವಿಸುತ್ತೇವೋ ಆ ಪರಿಸರದ ಮೇಲೆ ಹೊಂದಿಕೊಂಡಿರುತ್ತದೆ. ಹೀಗೆ, ಒಂದು ದೇಶದಲ್ಲಿ ಪುರುಷರು ಕೈಯನ್ನು ಹಿಡಿದುಕೊಳ್ಳುವುದು ಗೆಳೆತನದ ತೋರ್ಪಡಿಸುವಿಕೆಯಾಗಿರುವಾಗ, ಇನ್ನಿತರ ದೇಶಗಳಲ್ಲಿ ಅದು ರಾಜ್ಯ ಸಂದೇಶದಿಂದ ಕೆಲವರನ್ನು ಅಪಕರ್ಷಿಸುತ್ತದೆ ಎಂಬುದು ಖಂಡಿತ.
ಇದಲ್ಲದೆ, ಬೇರೆ ಬೇರೆ ಸ್ಥಳಗಳಲ್ಲಿ ಅಂಗೀಕೃತವಾಗಿರುವ ಇನ್ನಿತರ ಪದ್ಧತಿಗಳು ಇವೆ ಮತ್ತು ಅವು ಕ್ರೈಸ್ತರಿಗೆ ಯೋಗ್ಯವಾಗಿರಬಹುದು; ಆದರೂ ನಾವು ಜಾಗರೂಕರಾಗಿರಬೇಕು.
ಎಲ್ಲೆಯನ್ನು ಮೀರದಂತೆ ಎಚ್ಚರಿಕೆಯಿಂದಿರಿ!
ತನ್ನ ಶಿಷ್ಯರನ್ನು ಲೋಕದಿಂದ ಬೇರ್ಪಡಿಸುವುದು ಸಾಧ್ಯವಿಲ್ಲ, ಆದರೂ ಅವರು “ಲೋಕದ ಭಾಗವಾಗಿ” ಇರಬಾರದು ಎಂದು ಯೇಸು ಕ್ರಿಸ್ತನು ಹೇಳಿದನು. (ಯೋಹಾನ 17:15, 16) ಆದರೂ ಕೆಲವೊಮ್ಮೆ, ಯಾವುದು ಸೈತಾನನ ಲೋಕದ ಅವಿಭಾಜ್ಯ ಅಂಗವಾಗಿದೆ ಮತ್ತು ಯಾವುದು ಪದ್ಧತಿಯಾಗಿದೆ ಎಂಬುದನ್ನು ಕಂಡುಕೊಳ್ಳುವುದು ಅಷ್ಟೊಂದು ಸುಲಭವಲ್ಲ. ಉದಾಹರಣೆಗಾಗಿ, ಬಹುಮಟ್ಟಿಗೆ ಪ್ರತಿಯೊಂದು ಪದ್ಧತಿಯಲ್ಲಿ ಸಂಗೀತ ಹಾಗೂ ನೃತ್ಯಗಳು ವ್ಯಾಪಕವಾಗಿವೆಯಾದರೂ, ಕೆಲವು ದೇಶಗಳಲ್ಲಿ ಅವುಗಳಿಗೆ ಹೆಚ್ಚಿನ ಮಹತ್ವವು ಕೊಡಲ್ಪಡುತ್ತದೆ.
ನಾವು ಸುದೃಢವಾದ ಶಾಸ್ತ್ರೀಯ ಆಧಾರದ ಮೇಲಲ್ಲ, ಬದಲಾಗಿ ನಮ್ಮ ಹಿನ್ನೆಲೆಯ ಮೇಲೆ ಆಧಾರಿಸಿ, ಸುಲಭವಾದ ಒಂದು ನಿರ್ಣಯವನ್ನು ಮಾಡಬಹುದು. ಒಬ್ಬ ಜರ್ಮನ್ ಸಹೋದರನಾದ ಆಲೆಕ್ಸ್, ಸ್ಪೆಯ್ನ್ಗೆ ಹೋಗುವ ನೇಮಕವನ್ನು ಪಡೆದನು. ನರ್ತಿಸುವುದು ಅವನ ಹಿಂದಿನ ಸ್ಥಳದಲ್ಲಿ ಹೆಚ್ಚು ಜನಪ್ರಿಯವಾಗಿರಲಿಲ್ಲ, ಆದರೆ ಸ್ಪೆಯ್ನ್ನಲ್ಲಿ ಅದು ಅವರ ಪದ್ಧತಿಯ ಒಂದು ಭಾಗವಾಗಿತ್ತು. ಒಬ್ಬ ಸಹೋದರನೂ ಒಬ್ಬ ಸಹೋದರಿಯೂ, ಉಲ್ಲಾಸಕರವಾದ ರೀತಿಯಲ್ಲಿ ಸ್ಥಳಿಕ ನೃತ್ಯವನ್ನು ಮಾಡುವುದನ್ನು ಅವನು ಮೊತ್ತಮೊದಲ ಬಾರಿಗೆ ನೋಡಿದಾಗ, ಅವನ ಮನಸ್ಸು ಗೊಂದಲಕ್ಕೊಳಗಾಗಿತ್ತು. ಈ ನೃತ್ಯವು ತಪ್ಪಾಗಿತ್ತೊ, ಅಥವಾ ಲೌಕಿಕವಾಗಿತ್ತೊ? ಈ ಪದ್ಧತಿಯನ್ನು ಅಂಗೀಕರಿಸಿದಲ್ಲಿ, ಅವನು ತನ್ನ ಕ್ರಿಸ್ತೀಯ ಮಟ್ಟಗಳನ್ನು ಕೆಳಗಿಳಿಸುತ್ತಿದ್ದನೊ? ಈ ಸಂಗೀತ ಹಾಗೂ ನೃತ್ಯವು ಜರ್ಮನಿಯ ಸಂಗೀತ ಹಾಗೂ ನೃತ್ಯಕ್ಕಿಂತ ಭಿನ್ನವಾಗಿತ್ತಾದರೂ, ತನ್ನ ಸ್ಪ್ಯಾನಿಷ್ ಸಹೋದರ ಸಹೋದರಿಯರು ತಮ್ಮ ಕ್ರಿಸ್ತೀಯ ಮಟ್ಟಗಳನ್ನು ಕೆಳಗಿಳಿಸುತ್ತಿದ್ದರೆಂದು ಅರ್ಥೈಸಲು ಯಾವ ಕಾರಣವೂ ಇರಲಿಲ್ಲ ಎಂಬುದನ್ನು ಆಲೆಕ್ಸ್ ತಿಳಿದುಕೊಂಡನು. ಪದ್ಧತಿಗಳಲ್ಲಿ ಭಿನ್ನತೆಯಿದ್ದುದರಿಂದ ಅವನಲ್ಲಿ ಗೊಂದಲವು ಉಂಟಾಗಿತ್ತು.
ಆದರೂ, ಒಬ್ಬ ಸಾಂಪ್ರದಾಯಿಕ ಸ್ಪ್ಯಾನಿಷ್ ಡ್ಯಾನ್ಸರ್ ಆಗಿರುವ ಸಹೋದರನಾದ ಏಮೀಲ್ಯೊ, ಅಂತಹ ನೃತ್ಯದಲ್ಲಿ ಅಪಾಯವಿದೆ ಎಂಬುದನ್ನು ಗುರುತಿಸುತ್ತಾನೆ. “ಅನೇಕ ನೃತ್ಯಗಳಲ್ಲಿ, ವಿರುದ್ಧ ಲಿಂಗಜಾತಿಯ ಇಬ್ಬರು ವ್ಯಕ್ತಿಗಳ ನಿಕಟ ಸಂಪರ್ಕವು ಅತ್ಯಗತ್ಯವಾಗಿರುವುದನ್ನು ನಾನು ಗಮನಿಸಿದ್ದೇನೆ” ಎಂದು ಅವನು ವಿವರಿಸುತ್ತಾನೆ. “ಒಬ್ಬ ಅವಿವಾಹಿತ ವ್ಯಕ್ತಿಯೋಪಾದಿ, ಇದು ನಮ್ಮಿಬ್ಬರಲ್ಲಿ ಕಡಿಮೆಪಕ್ಷ ಒಬ್ಬರ ಭಾವನೆಗಳ ಮೇಲೆ ಪ್ರಭಾವಬೀರಸಾಧ್ಯವಿದೆ ಎಂಬುದು ನನ್ನ ಅನಿಸಿಕೆ. ಕೆಲವೊಮ್ಮೆ, ನೀವು ಯಾರೊಂದಿಗೆ ಆಕರ್ಷಿತರಾಗುತ್ತೀರೋ ಅಂತಹ ಯಾರಿಗಾದರೂ ಪ್ರೀತಿಯನ್ನು ತೋರಿಸಲಿಕ್ಕಾಗಿ, ನೃತ್ಯವನ್ನು ಒಂದು ಅವಕಾಶವಾಗಿ ಉಪಯೋಗಿಸಸಾಧ್ಯವಿದೆ. ಸಂಗೀತವು ಹಿತಕರವಾಗಿದೆ ಮತ್ತು ದೈಹಿಕ ಸಂಪರ್ಕವು ಮಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು, ಒಂದು ಸಂರಕ್ಷಣೆಯೋಪಾದಿ ಕಾರ್ಯನಡಿಸಬಲ್ಲದು. ಆದರೂ, ಅವಿವಾಹಿತ ಯುವ ಸಹೋದರರು ಹಾಗೂ ಸಹೋದರಿಯರ ಒಂದು ಗುಂಪು ಒಟ್ಟಿಗೆ ಡ್ಯಾನ್ಸ್ಮಾಡುವಲ್ಲಿ, ಒಂದು ದೇವಪ್ರಭುತ್ವ ವಾತಾವರಣವನ್ನು ಕಾಪಾಡಿಕೊಳ್ಳುವುದು ತುಂಬ ಕಷ್ಟಕರ ಎಂಬುದನ್ನು ನಾನು ಒಪ್ಪಿಕೊಳ್ಳಲೇಬೇಕು.”
ನಿಶ್ಚಯವಾಗಿಯೂ, ನಮ್ಮ ಪದ್ಧತಿಯನ್ನು ಲೌಕಿಕ ನಡತೆಯಲ್ಲಿ ಒಳಗೂಡಲಿಕ್ಕಾಗಿರುವ ಒಂದು ನೆವನದೋಪಾದಿ ಉಪಯೋಗಿಸಲು ನಾವು ಬಯಸುವುದಿಲ್ಲ. ಇಸ್ರಾಯೇಲ್ಯ ಪದ್ಧತಿಯಲ್ಲಿ, ಹಾಡುವುದು ಹಾಗೂ ನರ್ತಿಸುವುದಕ್ಕೆ ಅವಕಾಶವಿತ್ತು, ಮತ್ತು ಐಗುಪ್ತದಲ್ಲಿ ಕೆಂಪು ಸಮುದ್ರದ ಬಳಿ ಇಸ್ರಾಯೇಲ್ಯರು ಬಿಡುಗಡೆಗೊಳಿಸಲ್ಪಟ್ಟಾಗ, ಆ ಬಿಡುಗಡೆಯ ಆಚರಣೆಯಲ್ಲಿ ಹಾಡು ಹಾಗೂ ನರ್ತನಗಳು ಒಳಗೂಡಿದ್ದವು. (ವಿಮೋಚನಕಾಂಡ 15:1, 20) ಹಾಗಿದ್ದರೂ, ಅವರ ವಿಶಿಷ್ಟ ರೀತಿಯ ಸಂಗೀತ ಹಾಗೂ ನರ್ತನಗಳು, ಅವರ ಸುತ್ತಲೂ ಇದ್ದ ವಿಧರ್ಮಿ ಲೋಕದವುಗಳಿಗಿಂತ ಭಿನ್ನವಾಗಿದ್ದವು.
ವಿಷಾದಕರವಾಗಿ, ಸೀನಾಯಿ ಪರ್ವತದಿಂದ ಮೋಶೆಯ ಹಿಂದಿರುಗುವಿಕೆಗಾಗಿ ಕಾಯುತ್ತಿರುವಾಗ, ಇಸ್ರಾಯೇಲ್ಯರು ತಾಳ್ಮೆಯನ್ನು ಕಳೆದುಕೊಂಡರು. ಅವರು ಒಂದು ಚಿನ್ನದ ಬಸವನ ಮೂರ್ತಿಯನ್ನು ಮಾಡಿ, ತಿಂದು ಕುಡಿದು, “ಆ ಮೇಲೆ ಎದ್ದು ಕುಣಿದಾಡಿದರು.” (ವಿಮೋಚನಕಾಂಡ 32:1-6) ಅವರು ಹಾಡುತ್ತಿರುವ ಧ್ವನಿಯನ್ನು ಮೋಶೆ ಹಾಗೂ ಯೆಹೋಶುವರು ಕೇಳಿಸಿಕೊಂಡಾಗ, ಆ ಕೂಡಲೆ ಅವರು ಅಸಮಾಧಾನಗೊಂಡರು. (ವಿಮೋಚನಕಾಂಡ 32:17, 18) ಇಸ್ರಾಯೇಲ್ಯರು ಆ “ಎಲ್ಲೆ”ಯನ್ನು ಮೀರಿಹೋಗಿದ್ದರು, ಮತ್ತು ಅವರು ಹಾಡುತ್ತಿದ್ದ ಹಾಗೂ ನರ್ತಿಸುತ್ತಿದ್ದ ರೀತಿಯು, ಈಗ ತಮ್ಮ ಸುತ್ತಲಿದ್ದ ವಿಧರ್ಮಿ ಲೋಕವನ್ನು ಪ್ರತಿಬಿಂಬಿಸಿತ್ತು.
ತದ್ರೀತಿಯಲ್ಲಿ ಇಂದು, ನಮ್ಮ ಸ್ಥಳದಲ್ಲಿ ಸಂಗೀತ ಹಾಗೂ ಡ್ಯಾನ್ಸ್ಗಳು ಸಾಮಾನ್ಯವಾಗಿ ಅಂಗೀಕಾರಾರ್ಹವಾಗಿರಬಹುದು ಮತ್ತು ಅದು ಇತರರ ಮನಸ್ಸಾಕ್ಷಿಗೆ ಅಸಂತೋಷವನ್ನು ಉಂಟುಮಾಡದಿರಬಹುದು. ಆದರೆ ಲೈಟ್ಗಳನ್ನು ಡಿಮ್ಮಾಡಿ, ಫ್ಲ್ಯಾಶ್ ಲೈಟ್ಗಳನ್ನು ಉಪಯೋಗಿಸುವಲ್ಲಿ, ಅಥವಾ ಭಿನ್ನವಾದ ತಾಳವಿರುವ ಸಂಗೀತವನ್ನು ನುಡಿಸುವಲ್ಲಿ, ಈ ಹಿಂದೆ ಯಾವುದು ಅಂಗೀಕಾರಾರ್ಹವಾಗಿತ್ತೋ ಅದು ಈಗ ಲೋಕದ ಆತ್ಮವನ್ನು ಪ್ರತಿಫಲಿಸಬಹುದು. “ಅದು ನಮ್ಮ ಪದ್ಧತಿಯಾಗಿದೆ” ಎಂದು ನಾವು ವಾದಿಸಸಾಧ್ಯವಿದೆ. ಆರೋನನು ವಿಧರ್ಮಿ ರೀತಿಯ ಮನೋರಂಜನೆ ಹಾಗೂ ಆರಾಧನೆಗಳಿಗೆ ಅನುಮತಿಯನ್ನು ಕೊಟ್ಟು, ಅವುಗಳು “ಯೆಹೋವನಿಗೆ ಉತ್ಸವ”ಗಳಾಗಿವೆಯೆಂದು ತಪ್ಪಾಗಿ ವರ್ಣಿಸಿದಾಗ, ಅವನು ಸಹ ತದ್ರೀತಿಯ ನೆವವನ್ನು ಉಪಯೋಗಿಸಿದನು. ಈ ಕುಂಟು ನೆಪವು ಅಸಮಂಜಸವಾಗಿತ್ತು. ಅಷ್ಟುಮಾತ್ರವಲ್ಲದೆ, ಅವರ ನಡತೆಯಿಂದ “ವಿರೋಧಿಗಳು ಅಪಹಾಸ್ಯಮಾಡುವದಕ್ಕೆ ಆಸ್ಪದವಾಯಿತು.”—ವಿಮೋಚನಕಾಂಡ 32:5, 25.
ಪದ್ಧತಿಗೂ ಒಂದು ಸ್ಥಾನವಿದೆ
ಭಿನ್ನವಾದ ಪದ್ಧತಿಗಳು ಮೊದಮೊದಲು ನಮಗೆ ಆಶ್ಚರ್ಯವನ್ನು ಉಂಟುಮಾಡಬಹುದು, ಆದರೆ ಅವುಗಳಲ್ಲಿ ಎಲ್ಲವೂ ಅನಂಗೀಕಾರಾರ್ಹವಾಗಿರುವುದಿಲ್ಲ. ನಮ್ಮ “ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿ”ಕೊಂಡಿರುವುದರಿಂದ, ಯಾವ ಪದ್ಧತಿಗಳು ಕ್ರೈಸ್ತ ಮೂಲತತ್ವಗಳೊಂದಿಗೆ ಸಹಮತದಲ್ಲಿವೆ ಹಾಗೂ ಯಾವುವು ಸಹಮತದಲ್ಲಿಲ್ಲ ಎಂಬುದನ್ನು ನಾವು ನಿರ್ಧರಿಸಸಾಧ್ಯವಿದೆ. (ಇಬ್ರಿಯ 5:14) ನಮ್ಮ ಜೊತೆ ಮಾನವರಿಗಾಗಿ ಪ್ರೀತಿಯಿಂದ ತುಂಬಿರುವ ದಯಾಪರ ಭಾವವನ್ನು ನಾವು ತೋರಿಸುವಾಗ, ಹಾನಿರಹಿತ ಪದ್ಧತಿಗಳ ಎದುರಿನಲ್ಲಿ ನಾವು ಯೋಗ್ಯವಾದ ನಿರ್ಧಾರವನ್ನು ತೆಗೆದುಕೊಳ್ಳುವೆವು.
ನಮ್ಮ ಸ್ಥಳಿಕ ಕ್ಷೇತ್ರದಲ್ಲಿರುವ ಅಥವಾ ಬೇರೆ ಬೇರೆ ದೇಶಗಳಲ್ಲಿರುವ ಜನರಿಗೆ ನಾವು ರಾಜ್ಯದ ಸುವಾರ್ತೆಯನ್ನು ಸಾರುವಾಗ, ಪದ್ಧತಿಗಳ ಭಿನ್ನತೆಯ ಕಡೆಗೆ ಸಮತೂಕವಾದ ಹೆಜ್ಜೆಯನ್ನು ತೆಗೆದುಕೊಳ್ಳುವುದು, ‘ಯಾರಾರಿಗೆ ಎಂಥೆಂಥವರಾಗಬೇಕೋ ಅಂಥಂಥವರಾಗಲು’ ಶಕ್ತರನ್ನಾಗಿ ಮಾಡುವುದು. ಮತ್ತು ನಾವು ಬೇರೆ ಬೇರೆ ಪದ್ಧತಿಗಳನ್ನು ಕಲಿತುಕೊಳ್ಳುವಾಗ, ನಿಸ್ಸಂದೇಹವಾಗಿಯೂ ನಾವು ಅರ್ಥಭರಿತವಾದ, ಆಸಕ್ತಿಕರವಾದ, ಹಾಗೂ ಆಕರ್ಷಣೀಯ ಜೀವಿತವನ್ನು ನಡೆಸಲು ಅವು ಸಹಾಯ ಮಾಡುವವು ಎಂಬ ಅನಿಸಿಕೆ ನಮಗಾಗುವುದು.
[ಪುಟ 20 ರಲ್ಲಿರುವ ಚಿತ್ರ]
ಕ್ರೈಸ್ತ ಅಭಿವಂದನೆಗಳನ್ನು ಅನೇಕ ವಿಧಗಳಲ್ಲಿ ಯೋಗ್ಯವಾಗಿ ವ್ಯಕ್ತಪಡಿಸಸಾಧ್ಯವಿದೆ
[ಪುಟ 23 ರಲ್ಲಿರುವ ಚಿತ್ರ]
ಬೇರೆ ಬೇರೆ ಪದ್ಧತಿಗಳ ಕುರಿತಾದ ಸಮತೂಕ ನೋಟವು, ಅರ್ಥಭರಿತವಾದ, ಆಸಕ್ತಿಕರವಾದ ಜೀವಿತಕ್ಕೆ ನಡಿಸಸಾಧ್ಯವಿದೆ