ಕ್ರಿಸ್ತನ ಪ್ರಾಯಶ್ಚಿತ್ತ ದೇವರ ರಕ್ಷಣಾಮಾರ್ಗ
“ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.”—ಯೋಹಾನ 3:16.
ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದಿದ್ದಲ್ಲಿ ಖಂಡಿತವಾಗಿಯೂ ಮರಣಹೊಂದುವ ಒಂದು ರೋಗದಿಂದ ನೀವು ಕಷ್ಟಾನುಭವಿಸುತ್ತಿದ್ದೀರೆಂದು ಭಾವಿಸಿಕೊಳ್ಳಿರಿ. ಶಸ್ತ್ರಚಿಕಿತ್ಸೆಯ ವೆಚ್ಚವು ನಿಮ್ಮ ಕೈಗೆ ನಿಲುಕದಷ್ಟಾಗಿದ್ದರೆ, ನಿಮಗೆ ಹೇಗನಿಸುವುದು? ನಿಮ್ಮ ಕುಟುಂಬ ಹಾಗೂ ಮಿತ್ರರ ಹಣವನ್ನೆಲ್ಲ ಕೂಡಿಸಿದರೂ ಅದರ ಬೆಲೆಯನ್ನು ತೆರಸಾಧ್ಯವಾಗದಿದ್ದರೆ ಆಗೇನು? ಜೀವವನ್ನು ಬೆದರಿಸುವ ಇಂತಹ ಇಕ್ಕಟ್ಟಿನಲ್ಲಿ ಸಿಲುಕಿಕೊಳ್ಳುವುದು ಎಷ್ಟೊಂದು ನಿರಾಶಾದಾಯಕವು!
1, 2. ಮಾನವಕುಲದ ಸಂಬಂಧದಲ್ಲಿ ವಿಕಸಿಸಿಕೊಂಡಿರುವ ಸನ್ನಿವೇಶವನ್ನು ವರ್ಣಿಸಿರಿ.
2 ಮಾನವಕುಲದ ಸಂಬಂಧದಲ್ಲಿ ಇದೇ ರೀತಿಯ ಸನ್ನಿವೇಶವು ಉದ್ಭವಿಸಿದೆ. ನಮ್ಮ ಪ್ರಥಮ ಹೆತ್ತವರಾದ ಆದಾಮಹವ್ವರು ಪರಿಪೂರ್ಣ ಜೀವಿಗಳಾಗಿದ್ದರು. (ಧರ್ಮೋಪದೇಶಕಾಂಡ 32:4) ಅವರಿಗೆ ಸದಾಕಾಲ ಜೀವಿಸುವ ಮತ್ತು “ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ” ಎಂಬ ದೇವರ ಉದ್ದೇಶವನ್ನು ನೆರವೇರಿಸುವ ಪ್ರತೀಕ್ಷೆಯಿತ್ತು. (ಆದಿಕಾಂಡ 1:28) ಹಾಗಿದ್ದರೂ, ಆದಾಮಹವ್ವರು ತಮ್ಮ ಸೃಷ್ಟಿಕರ್ತನ ವಿರುದ್ಧ ದಂಗೆಯೆದ್ದರು. (ಆದಿಕಾಂಡ 3:1-6) ಆದಾಮಹವ್ವರ ಅವಿಧೇಯತೆಯು ಅವರನ್ನು ಮಾತ್ರವಲ್ಲ, ಅವರ ಅಜನಿತ ಸಂತಾನವನ್ನೂ ಪಾಪಕ್ಕೆ ತಳ್ಳಿತು. ನಂಬಿಗಸ್ತ ಮನುಷ್ಯನಾದ ಯೋಬನು ತರುವಾಯ ಹೇಳಿದಂತೆ: “ಅಶುದ್ಧದಿಂದ ಶುದ್ಧವು ಉಂಟಾದೀತೇ? ಎಂದಿಗೂ ಇಲ್ಲ.”—ಯೋಬ 14:4.
3. ಯಾವ ರೀತಿಯಲ್ಲಿ ಮರಣವು ಎಲ್ಲರಲ್ಲಿ ವ್ಯಾಪಿಸಿತು?
3 “ಎಲ್ಲರೂ ಪಾಪಮಾಡಿ”ದ್ದಾರೆಂದು ಬೈಬಲ್ ಹೇಳುವುದರಿಂದ, ಪಾಪವು ಒಂದು ರೋಗದಂತೆ ನಮ್ಮೆಲ್ಲರನ್ನೂ ಸೋಂಕಿಸಿದೆ. ಈ ಅವಸ್ಥೆಯು ಜೀವವನ್ನು ಬೆದರಿಸುವಂತಹ ಪರಿಣಾಮಗಳನ್ನು ತಂದಿದೆ. ನಿಶ್ಚಯವಾಗಿಯೂ, “ಪಾಪವು ಕೊಡುವ ಸಂಬಳ ಮರಣ”ವಾಗಿದೆ. (ರೋಮಾಪುರ 3:23; 6:23) ಯಾರೊಬ್ಬರೂ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲ ಮಾನವರು ಪಾಪಮಾಡುವುದರಿಂದ, ಎಲ್ಲರೂ ಸಾಯುತ್ತಾರೆ. ಆದಾಮನ ಸಂತತಿಯವರಾದ ನಾವು, ಇಂತಹ ಸ್ಥಿತಿಯಲ್ಲೇ ಜನಿಸಿರುತ್ತೇವೆ. (ಕೀರ್ತನೆ 51:5) ಪೌಲನು ಬರೆದುದು: “ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.” (ರೋಮಾಪುರ 5:12) ಹೀಗಿದ್ದರೂ, ನಾವು ರಕ್ಷಣೆಯ ನಿರೀಕ್ಷೆಯಿಲ್ಲದ ಜನರೆಂಬುದನ್ನು ಇದು ಅರ್ಥೈಸುವುದಿಲ್ಲ.
ಪಾಪಮರಣಗಳನ್ನು ನಿರ್ಮೂಲಮಾಡುವುದು
4. ಮಾನವರು ತಾವಾಗಿಯೇ ಏಕೆ ಅನಾರೋಗ್ಯ ಹಾಗೂ ಮರಣವನ್ನು ನಿರ್ಮೂಲಮಾಡಸಾಧ್ಯವಿಲ್ಲ?
4 ಪಾಪ ಮತ್ತು ಅದರ ಫಲವಾದ ಮರಣವನ್ನು ನಿರ್ಮೂಲ ಮಾಡಲು ಯಾವುದರ ಅಗತ್ಯವಿದೆ? ಅದು ಯಾವ ಮಾನವನೂ ಒದಗಿಸಲಾರದಂತಹ ವಿಷಯವಾಗಿದೆ ಎಂಬುದು ಸ್ಪಷ್ಟ. ಕೀರ್ತನೆಗಾರನು ಪ್ರಲಾಪಿಸಿದ್ದು: “ಯಾವನಾದರೂ ತನ್ನ ಸಹೋದರನು ಸಮಾಧಿಯಲ್ಲಿ ಸೇರದೆ ಶಾಶ್ವತವಾಗಿ ಬದುಕಿರುವದಕ್ಕಾಗಿ ದೇವರಿಗೆ ಈಡನ್ನು ಕೊಟ್ಟು ಅವನ ಪ್ರಾಣವನ್ನು ಬಿಡಿಸಲಾರನು.” (ಕೀರ್ತನೆ 49:7, 8) ಆರೋಗ್ಯಕರವಾದ ಪಥ್ಯ ಮತ್ತು ವೈದ್ಯಕೀಯ ಆರೈಕೆಯ ಮೂಲಕ ಸ್ವಲ್ಪ ಹೆಚ್ಚಿನ ಕಾಲ ನಾವು ಬದುಕಬಹುದಾದರೂ, ಪಿತ್ರಾರ್ಜಿತವಾಗಿ ಪಡೆದುಕೊಂಡಿರುವ ಪಾಪಪೂರ್ಣ ಸ್ಥಿತಿಯನ್ನು ಗುಣಪಡಿಸಲು ನಮ್ಮಲ್ಲಿ ಯಾರಿಗೂ ಸಾಧ್ಯವಿಲ್ಲ. ವೃದ್ಧರಾಗುವ ಪ್ರಕ್ರಿಯೆಯ ಜರ್ಜರಿತ ಪರಿಣಾಮಗಳನ್ನು ಬದಲಾಯಿಸಿ, ದೇವರು ಆದಿಯಲ್ಲಿ ಉದ್ದೇಶಿಸಿದಂತಹ ಪರಿಪೂರ್ಣತೆಗೆ ನಮ್ಮ ದೇಹವನ್ನು ಪುನಸ್ಸ್ಥಾಪಿಸಲು ಯಾರಿಂದಲೂ ಸಾಧ್ಯವಿಲ್ಲ. ಆದಾಮನ ಪಾಪದಿಂದಾಗಿ ಮಾನವ ಸೃಷ್ಟಿಯು “ವ್ಯರ್ಥತ್ವಕ್ಕೆ ಒಳಗಾಯಿತು,” ಇಲ್ಲವೆ ದ ಜೆರೂಸಲೇಮ್ ಬೈಬಲ್ ಭಾಷಾಂತರಿಸುವಂತೆ, ಅದಕ್ಕೆ “ತನ್ನ ಉದ್ದೇಶವನ್ನು ಪೂರೈಸಲು ಸಾಧ್ಯವಾಗಲಿಲ್ಲ” ಎಂಬುದಾಗಿ ಪೌಲನು ಬರೆದಾಗ, ನಿಶ್ಚಯವಾಗಿಯೂ ಈ ಸಂಗತಿಯನ್ನು ಅತಿಶಯಿಸಿ ಹೇಳುತ್ತಿರಲಿಲ್ಲ. (ರೋಮಾಪುರ 8:20) ಆದರೆ ಸಂತೋಷದ ಸಂಗತಿ ಏನೆಂದರೆ, ಸೃಷ್ಟಿಕರ್ತನು ನಮ್ಮನ್ನು ತೊರೆದುಬಿಟ್ಟಿಲ್ಲ. ಪಾಪಮರಣಗಳನ್ನು ಒಮ್ಮೆಗೇ ಅಳಿಸಿಬಿಡುವ ಏರ್ಪಾಡನ್ನು ಆತನು ಮಾಡಿದ್ದಾನೆ. ಹೇಗೆ?
5. ಇಸ್ರಾಯೇಲ್ಯರಿಗೆ ಕೊಟ್ಟ ಧರ್ಮಶಾಸ್ತ್ರವು, ನ್ಯಾಯಕ್ಕೆ ಹೆಚ್ಚಿನ ಗಣ್ಯತೆಯನ್ನು ಹೇಗೆ ಪ್ರದರ್ಶಿಸಿತು?
5 ಯೆಹೋವನು “ನೀತಿನ್ಯಾಯಗಳನ್ನು ಪ್ರೀತಿ ಸುವವ”ನಾಗಿದ್ದಾನೆ. (ಕೀರ್ತನೆ 33:5) ಇಸ್ರಾಯೇಲ್ಯರಿಗೆ ಕೊಡಲ್ಪಟ್ಟ ನಿಯಮಾವಳಿಯು, ಸಮತೂಕ ಹಾಗೂ ನಿಷ್ಪಕ್ಷಪಾತ ನ್ಯಾಯಕ್ಕಿರುವ ಉಚ್ಚಮಟ್ಟವನ್ನು ಪ್ರತಿಫಲಿಸುತ್ತದೆ. ಉದಾಹರಣೆಗೆ, ಈ ನಿಯಮಾವಳಿಯಲ್ಲಿ, ‘ಜೀವಕ್ಕೆ ಪ್ರತಿಯಾಗಿ ಜೀವವನ್ನು ಕೊಡಬೇಕೆಂದು’ ನಾವು ಓದುತ್ತೇವೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಒಬ್ಬ ಇಸ್ರಾಯೇಲ್ಯನು ಯಾರನ್ನಾದರೂ ಕೊಲ್ಲುವುದಾದರೆ, ತಾನು ತೆಗೆದ ಜೀವಕ್ಕೆ ಪ್ರತಿಯಾಗಿ ತನ್ನ ಸ್ವಂತ ಜೀವವನ್ನು ತೆರಬೇಕಾಗಿತ್ತು. (ವಿಮೋಚನಕಾಂಡ 21:23; ಅರಣ್ಯಕಾಂಡ 35:21) ಹೀಗೆ ದೈವಿಕ ನ್ಯಾಯದ ತಕ್ಕಡಿಗಳು ಸರಿದೂಗಿಸಲ್ಪಡುವವು.—ವಿಮೋಚನಕಾಂಡ 21:30ನ್ನು ಹೋಲಿಸಿರಿ.
6. (ಎ) ಯಾವ ಅರ್ಥದಲ್ಲಿ ಆದಾಮನನ್ನು ಕೊಲೆಗಡುಕನೆಂದು ಕರೆಯಸಾಧ್ಯವಿತ್ತು? (ಬಿ) ಯಾವ ರೀತಿಯ ಜೀವಿತವನ್ನು ಆದಾಮನು ಕಳೆದುಕೊಂಡನು, ಮತ್ತು ನ್ಯಾಯದ ತಕ್ಕಡಿಗಳನ್ನು ಸರಿದೂಗಿಸಲು ಯಾವ ರೀತಿಯ ಯಜ್ಞವು ಬೇಕಾಗಿತ್ತು?
6 ಆದಾಮನು ಪಾಪಮಾಡಿದಾಗ ಅವನೊಬ್ಬ ಕೊಲೆಗಾರನಾದನು. ಯಾವ ಅರ್ಥದಲ್ಲಿ? ತನ್ನ ಪಾಪಪೂರ್ಣ ಅವಸ್ಥೆಯನ್ನು, ಮತ್ತು ಹೀಗೆ ಮರಣವನ್ನು ತನ್ನ ಸಂತತಿಯವರಿಗೆಲ್ಲ ದಾಟಿಸುವ ಅರ್ಥದಲ್ಲೇ. ಆದಾಮನ ಅವಿಧೇಯತೆಯಿಂದಲೇ, ಈ ಗಳಿಗೆಯಲ್ಲೂ ನಮ್ಮ ದೇಹಗಳು ದಿನವೂ ಕ್ಷಯಿಸುತ್ತಾ, ನಿಧಾನವಾಗಿ ಗತಿಸಿಹೋಗುತ್ತವೆ. (ಕೀರ್ತನೆ 90:10) ಆದಾಮನು ಮಾಡಿದ ಪಾಪಕ್ಕೆ ಇನ್ನೂ ಗಂಭೀರವಾದ ಅರ್ಥವೂ ಇದೆ. ಆದಾಮನು ಮತ್ತು ಅವನ ಸಂತಾನವು ಕಳೆದುಕೊಂಡದ್ದು 70 ಇಲ್ಲವೆ 80 ವರ್ಷಗಳ ಸಾಧಾರಣ ಜೀವನವಾಗಿರಲಿಲ್ಲ ಎಂಬುದನ್ನು ಜ್ಞಾಪಕದಲ್ಲಿಡಿ. ಅವನು ಪರಿಪೂರ್ಣ ಜೀವನವನ್ನು, ಅಂದರೆ ನಿತ್ಯಜೀವವನ್ನು ಕಳೆದುಕೊಂಡನು. ಹೀಗೆ, ‘ಜೀವಕ್ಕೆ ಪ್ರತಿಯಾಗಿ ಜೀವವನ್ನು ಕೊಡಬೇಕಾದರೆ,’ ಈ ವಿದ್ಯಮಾನದಲ್ಲಿ ನ್ಯಾಯವನ್ನು ಪೂರೈಸಲು ಯಾವ ರೀತಿಯ ಜೀವವನ್ನು ಕೊಡಬೇಕಾಗಿರುವುದು? ತರ್ಕಬದ್ಧವಾಗಿಯೇ, ಪರಿಪೂರ್ಣ ಮಾನವ ಸಂತಾನವನ್ನು ಉಂಟುಮಾಡುವ ಶಕ್ತಿಯುಳ್ಳ ಆದಾಮನಂತಹ ಪರಿಪೂರ್ಣ ಮಾನವ ಜೀವವಾಗಿರಬೇಕು. ಪರಿಪೂರ್ಣ ಮಾನವ ಜೀವವನ್ನು ಒಂದು ಬಲಿಯಾಗಿ ಅರ್ಪಿಸುವಾಗ, ಅದು ನ್ಯಾಯದ ತಕ್ಕಡಿಗಳನ್ನು ಸರಿದೂಗಿಸುವುದು ಮಾತ್ರವಲ್ಲ, ಪಾಪ ಮತ್ತು ಅದರ ಫಲವಾದ ಮರಣವನ್ನು ಸಂಪೂರ್ಣವಾಗಿ ನಿರ್ಮೂಲ ಮಾಡುವುದರಲ್ಲಿ ನೆರವು ನೀಡುವುದು.
ಪಾಪದ ವೆಚ್ಚವನ್ನು ಭರ್ತಿಮಾಡುವುದು
7. “ಪ್ರಾಯಶ್ಚಿತ್ತ” ಎಂಬ ಪದದ ಅರ್ಥವನ್ನು ವರ್ಣಿಸಿರಿ.
7 ನಮ್ಮನ್ನು ಪಾಪದಿಂದ ಬಿಡಿಸಲು ಸಲ್ಲಿಸಬೇಕಾಗಿರುವ ಬೆಲೆಯನ್ನು ಬೈಬಲಿನಲ್ಲಿ “ಪ್ರಾಯಶ್ಚಿತ್ತ”ವೆಂದು ಸೂಚಿಸಲಾಗಿದೆ. (ಕೀರ್ತನೆ 49:7, NW) ಇಂಗ್ಲಿಷ್ ಭಾಷೆಯಲ್ಲಿ ರ್ಯಾನ್ಸಮ್ ಎಂಬ ಈ ಪದವು, ತಾನು ಅಪಹರಿಸಿರುವ ವ್ಯಕ್ತಿಯ ಬಿಡುಗಡೆಗಾಗಿ, ಅಪಹರಣ ಮಾಡಿದವನು ಕೇಳಿಕೊಳ್ಳುವ ಮೊತ್ತವನ್ನು ಸೂಚಿಸುತ್ತದೆ. ಆದರೆ, ಯೆಹೋವನು ಒದಗಿಸಿರುವ ಪ್ರಾಯಶ್ಚಿತ್ತದಲ್ಲಿ ಅಂತಹ ಯಾವ ಅಪಹರಣವೂ ಸೇರಿರುವುದಿಲ್ಲ. ಹಾಗಿದ್ದರೂ, ಬೆಲೆ ತೆರುವ ಕಲ್ಪನೆಯಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲ. “ಪ್ರಾಯಶ್ಚಿತ್ತ” ಎಂಬುದಾಗಿ ಭಾಷಾಂತರಿಸಲ್ಪಟ್ಟ ಹೀಬ್ರೂ ಪದದ ಕ್ರಿಯಾಪದದ ಅಕ್ಷರಶಃ ಅರ್ಥವು “ಭರ್ತಿಮಾಡು” ಎಂದಾಗಿದೆ. ಪಾಪಪರಿಹಾರಕ್ಕಾಗಿ, ಪ್ರಾಯಶ್ಚಿತ್ತವು ಆದಾಮನ ಪರಿಪೂರ್ಣ ಮಾನವ ಜೀವನವನ್ನು ಭರ್ತಿಮಾಡುವ ಉದ್ದೇಶಕ್ಕೆ ನಿರ್ದಿಷ್ಟವಾಗಿ ಹೊಂದಿಕೊಳ್ಳಬೇಕು.
8. (ಎ) ಈಡುಕೊಡುವ ತತ್ವವನ್ನು ವರ್ಣಿಸಿರಿ. (ಬಿ) ಪಾಪಿಗಳೋಪಾದಿ ಈಡುಕೊಡುವ ತತ್ವವು ನಮಗೆ ಹೇಗೆ ಸಂಬಂಧಿಸುತ್ತದೆ?
8 ಇದು ಮೋಶೆಯ ಧರ್ಮಶಾಸ್ತ್ರದಲ್ಲಿರುವ, ಈಡುಕೊಟ್ಟು ಬಿಡಿಸುವ ತತ್ವಕ್ಕೆ ಹೊಂದಿಕೆಯಲ್ಲಿದೆ. ಇಸ್ರಾಯೇಲ್ಯನೊಬ್ಬನು ಬಡತನದಲ್ಲಿ ಸಿಲುಕಿಕೊಂಡು, ತನ್ನನ್ನು ಇಸ್ರಾಯೇಲ್ಯನಲ್ಲದವನಿಗೆ ದಾಸನಾಗಿಸುವುದಾದರೆ, ದಾಸನಿಗೆ ಸಮಾನವಾದ ಹಣವನ್ನು ತೆರುವ ಮೂಲಕ ಸಂಬಂಧಿಕನೊಬ್ಬನು ಅವನನ್ನು ದಾಸತ್ವದಿಂದ ಬಿಡಿಸಬಹುದಿತ್ತು (ಇಲ್ಲವೆ, ಈಡುಕೊಡಬಹುದಿತ್ತು). (ಯಾಜಕಕಾಂಡ 25:47-49) ಅಪರಿಪೂರ್ಣ ಮಾನವರೋಪಾದಿ ನಾವು ‘ಪಾಪಕ್ಕೆ ಆಳಾಗಿ’ದ್ದೇವೆಂದು ಬೈಬಲು ಹೇಳುತ್ತದೆ. (ರೋಮಾಪುರ 6:6; 7:14, 25) ನಮ್ಮನ್ನು ಬಿಡಿಸಲು ಯಾವುದರ ಅಗತ್ಯವಿತ್ತು? ನಾವು ಈಗಾಗಲೇ ನೋಡಿರುವಂತೆ ಪರಿಪೂರ್ಣ ಮಾನವ ಜೀವದ ನಷ್ಟವು, ಆ ಜೀವಕ್ಕಿಂತಲೂ ಹೆಚ್ಚೂ ಅಲ್ಲದ ಕಡಿಮೆಯೂ ಇಲ್ಲದ ಪರಿಪೂರ್ಣ ಮಾನವ ಜೀವದ ಮೊತ್ತವನ್ನೇ ಕೇಳಿಕೊಳ್ಳುವುದು.
9. ಪಾಪವನ್ನು ಆವರಿಸಲು ಯೆಹೋವನು ಯಾವ ಏರ್ಪಾಡನ್ನು ಮಾಡಿದ್ದಾನೆ?
9 ಮಾನವರು ಅಪರಿಪೂರ್ಣರಾಗಿ ಜನಿಸುತ್ತಾರೆ. ನಮ್ಮಲ್ಲಿ ಯಾರೊಬ್ಬರೂ ಆದಾಮನಿಗೆ ಸರಿಸಮಾನರಾಗಿರುವುದಿಲ್ಲ. ಆದಕಾರಣ, ನ್ಯಾಯವು ಕೇಳಿಕೊಳ್ಳುವ ಪ್ರಾಯಶ್ಚಿತ್ತ ಮೊತ್ತವನ್ನು ನಮ್ಮಲ್ಲಿ ಯಾರೂ ತೆರಸಾಧ್ಯವಿಲ್ಲ. ಆರಂಭದಲ್ಲಿ ಉಲ್ಲೇಖಿಸಲ್ಪಟ್ಟಂತೆ, ಜೀವವನ್ನು ಬೆದರಿಸುವಂತಹ ರೋಗದಿಂದ ನಾವು ನರಳುತ್ತಿದ್ದು, ಅದನ್ನು ಗುಣಪಡಿಸಲಿಕ್ಕಾಗಿ ಶಸ್ತ್ರಚಿಕಿತ್ಸೆಗೆ ಬೇಕಾದ ಹಣ ಒದಗಿಸಲು ಸಾಧ್ಯವಿಲ್ಲವೊ ಎಂಬಂತೆ ಇದು ಇದೆ. ಇಂತಹ ಸನ್ನಿವೇಶದಲ್ಲಿ, ಯಾರೋ ಒಬ್ಬರು ನಮ್ಮ ಪರವಾಗಿ ಮಧ್ಯಸ್ಥಿಕೆ ವಹಿಸಿ ಹಣಪಾವತಿ ಮಾಡುವುದಾದರೆ, ನಾವು ಅವರಿಗೆ ಕೃತಜ್ಞರಾಗಿರಲಾರೆವೊ? ಯೆಹೋವನು ಇದನ್ನೇ ಮಾಡಿದ್ದಾನೆ! ಆತನು ನಿಶ್ಚಯಪೂರ್ವಕವಾಗಿ ನಮ್ಮನ್ನು ಪಾಪದಿಂದ ಬಿಡಿಸುವ ಏರ್ಪಾಡನ್ನು ಮಾಡಿದ್ದಾನೆ. ಹೌದು, ನಮ್ಮಿಂದ ಎಂದಿಗೂ ಸಾಧ್ಯವಾಗಿರದಂತಹದ್ದನ್ನು ನಮಗೆ ನೀಡಲು ಆತನು ಇಚ್ಛೆಯುಳ್ಳವನಾಗಿದ್ದಾನೆ. ಹೇಗೆ? ಪೌಲನು ಬರೆದುದು: “ದೇವರ ಉಚಿತಾರ್ಥವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ.” (ರೋಮಾಪುರ 6:23) ಯೋಹಾನನು ಯೇಸುವನ್ನು “[ಯಜ್ಞಕ್ಕೆ] ದೇವರು ನೇಮಿಸಿದ ಕುರಿ, ಲೋಕದ ಪಾಪವನ್ನು ನಿವಾರಣೆ ಮಾಡುವವನು” ಎಂದು ವರ್ಣಿಸಿದನು. (ಯೋಹಾನ 1:29) ಪ್ರಾಯಶ್ಚಿತ್ತ ಬೆಲೆಯನ್ನು ತೆರಲು ಯೆಹೋವನು ತನ್ನ ಪ್ರಿಯ ಪುತ್ರನನ್ನು ಹೇಗೆ ಉಪಯೋಗಿಸಿದನೆಂಬುದನ್ನು ನಾವು ನೋಡೋಣ.
“ಅನುರೂಪವಾದ ಪ್ರಾಯಶ್ಚಿತ್ತ”
10. “ಸಂತಾನ”ದ ಕುರಿತಾದ ಪ್ರವಾದನೆಗಳು, ಯೋಸೇಫ ಮತ್ತು ಮರಿಯರ ಮೇಲೆ ಹೇಗೆ ಕೇಂದ್ರೀಕೃತವಾದವು?
10 ಏದೆನಿನಲ್ಲಾದ ದಂಗೆಯ ತರುವಾಯ, ಮಾನವಕುಲವನ್ನು ಪಾಪದಿಂದ ಬಿಡಿಸುವ “ಸಂತಾನ” ಇಲ್ಲವೆ ಸಂತತಿಯನ್ನು ಉಂಟುಮಾಡಲು ತಾನು ಉದ್ದೇಶಿಸಿರುವುದಾಗಿ ಯೆಹೋವನು ಪ್ರಕಟಪಡಿಸಿದನು. (ಆದಿಕಾಂಡ 3:15) ಹಲವಾರು ದೈವಿಕ ಪ್ರಕಟನೆಗಳ ಮೂಲಕ, ಈ ಸಂತಾನವು ಬರಲಿರುವ ವಂಶಾವಳಿಯನ್ನು ಯೆಹೋವನು ಗುರುತಿಸಿದನು. ಸಕಾಲದಲ್ಲಿ ಈ ಪ್ರಕಟನೆಗಳು, ಪ್ಯಾಲಸ್ಟೀನ್ನಲ್ಲಿ ವಾಸಿಸುತ್ತಿದ್ದ, ಯೋಸೇಫ ಮತ್ತು ಮರಿಯರೆಂಬ ನಿಶ್ಚಿತಾರ್ಥವಾದ ಒಂದು ಜೋಡಿಯ ಮೇಲೆ ಕೇಂದ್ರೀಕರಿಸಿದವು. ಮರಿಯಳು ಪವಿತ್ರಾತ್ಮನಿಂದ ಗರ್ಭವತಿಯಾಗಿದ್ದಾಳೆಂದು ಮತ್ತು “ಒಬ್ಬ ಮಗನನ್ನು ಹಡೆಯುವಳು; ನೀನು ಆತನಿಗೆ ಯೇಸು ಎಂದು ಹೆಸರಿಡಬೇಕು; ಯಾಕಂದರೆ ಆತನೇ ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿಕಾಯುವನು” ಎಂದು ಯೋಸೇಫನಿಗೆ ಒಂದು ಕನಸಿನಲ್ಲಿ ಹೇಳಲಾಯಿತು.—ಮತ್ತಾಯ 1:20, 21.
11. (ಎ) ತನ್ನ ಪುತ್ರನು ಪರಿಪೂರ್ಣ ಮಾನವನೋಪಾದಿ ಜನಿಸುವಂತೆ ಯೆಹೋವನು ಹೇಗೆ ಏರ್ಪಡಿಸಿದನು? (ಬಿ) ಯೇಸು “ಅನುರೂಪವಾದ ಪ್ರಾಯಶ್ಚಿತ್ತ”ವನ್ನು ಒದಗಿಸಲು ಏಕೆ ಶಕ್ತನಾಗಿದ್ದನು?
11 ಇದೊಂದು ಸಾಧಾರಣ ಗರ್ಭಧಾರಣೆಯಾಗಿರಲಿಲ್ಲ, ಏಕೆಂದರೆ ಯೇಸುವಿಗೆ ಸ್ವರ್ಗದಲ್ಲಿ ಒಂದು ಮಾನವಪೂರ್ವ ಅಸ್ತಿತ್ವವಿತ್ತು. (ಜ್ಞಾನೋಕ್ತಿ 8:22-31; ಕೊಲೊಸ್ಸೆ 1:15) ಯೆಹೋವನ ಅದ್ಭುತಕರ ಶಕ್ತಿಯಿಂದಾಗಿ ಯೇಸುವಿನ ಜೀವವು ಮರಿಯಳ ಗರ್ಭಕ್ಕೆ ಸ್ಥಳಾಂತರಗೊಂಡ ಕಾರಣ, ದೇವರ ಪ್ರಿಯ ಪುತ್ರನು ಮಾನವನಾಗಿ ಜನಿಸಲು ಸಾಧ್ಯವಾಯಿತು. (ಯೋಹಾನ 1:1-3, 14; ಫಿಲಿಪ್ಪಿ 2:6, 7) ಯೇಸು ಆದಾಮನ ಪಾಪದಿಂದ ಕಳಂಕಿತನಾಗದಂತೆ ಯೆಹೋವನು ವಿಷಯಗಳನ್ನು ಯೋಗ್ಯವಾಗಿ ನಿರ್ವಹಿಸಿದನು. ಆದುದರಿಂದ ಯೇಸು ಪರಿಪೂರ್ಣನಾಗಿ ಜನಿಸಿದನು. ಹೀಗೆ, ಆದಾಮನು ಕಳೆದುಕೊಂಡ ಪರಿಪೂರ್ಣ ಮಾನವ ಜೀವವು ಅವನಲ್ಲಿತ್ತು. ಪಾಪದ ಬೆಲೆಯನ್ನು ತೆರಸಾಧ್ಯವಿದ್ದ ಮನುಷ್ಯನು ಇಲ್ಲಿದ್ದನು! ಮತ್ತು ಇದನ್ನೇ ಯೇಸು ಸಾ.ಶ. 33ರ ನೈಸಾನ್ 14ರಂದು ಮಾಡಿದನು. ಆ ಐತಿಹಾಸಿಕ ದಿನದಂದು, “ಒಂದು ಅನುರೂಪವಾದ ಪ್ರಾಯಶ್ಚಿತ್ತ”ವನ್ನು (NW) ಒದಗಿಸುತ್ತಾ, ಯೇಸು ತನ್ನ ವಿರೋಧಿಗಳ ಕೈಯಲ್ಲಿ ಮರಣವನ್ನು ಅನುಭವಿಸಿದನು.—1 ತಿಮೊಥೆಯ 2:6.
ಪರಿಪೂರ್ಣ ಮಾನವ ಜೀವದ ಮೌಲ್ಯ
12. (ಎ) ಯೇಸುವಿನ ಮರಣ ಹಾಗೂ ಆದಾಮನ ಮರಣದಲ್ಲಿರುವ ನಿರ್ಣಾಯಕ ವ್ಯತ್ಯಾಸವನ್ನು ವರ್ಣಿಸಿರಿ. (ಬಿ) ಯೇಸು ವಿಧೇಯ ಮಾನವರಿಗೆ “ನಿತ್ಯನಾದ ತಂದೆ” ಆಗಿರುವುದು ಹೇಗೆ?
12 ಯೇಸುವಿನ ಮರಣಕ್ಕೂ ಆದಾಮನ ಮರಣಕ್ಕೂ ಒಂದು ವ್ಯತ್ಯಾಸವಿದೆ. ಇದು ಪ್ರಾಯಶ್ಚಿತ್ತದ ಮಹತ್ವವನ್ನು ಎತ್ತಿತೋರಿಸುವಂತಹ ಒಂದು ವ್ಯತ್ಯಾಸವಾಗಿದೆ. ಆದಾಮನು ಉದ್ದೇಶಪೂರ್ವಕವಾಗಿಯೇ ತನ್ನ ಸೃಷ್ಟಿಕರ್ತನಿಗೆ ಅವಿಧೇಯನಾದ ಕಾರಣ, ಮರಣವನ್ನು ಅನುಭವಿಸಲು ಅವನು ಅರ್ಹನಾಗಿದ್ದನು. (ಆದಿಕಾಂಡ 2:16, 17) ಇದಕ್ಕೆ ತದ್ವಿರುದ್ಧವಾಗಿ, ಯೇಸುವು “ಯಾವ ಪಾಪವನ್ನೂ ಮಾಡ”ದಿದ್ದ ಕಾರಣ, ಅವನು ಮರಣವನ್ನು ಅನುಭವಿಸಲು ಅನರ್ಹನಾಗಿದ್ದನು. (1 ಪೇತ್ರ 2:22) ಆದಕಾರಣ, ಪಾಪಿಯಾದ ಆದಾಮನು ಮೃತಪಟ್ಟಾಗ ಅವನಲ್ಲಿರದ ಯಾವುದೊ ಮಹತ್ತರವಾದ ಬೆಲೆಯುಳ್ಳ ವಿಷಯವನ್ನು, ಅಂದರೆ ಪರಿಪೂರ್ಣ ಮಾನವ ಜೀವಿತದ ಹಕ್ಕನ್ನು ಯೇಸು ತನ್ನ ಮೃತ್ಯುವಿನಲ್ಲಿ ಕಂಡುಕೊಂಡನು. ಹೀಗೆ, ಯೇಸುವಿನ ಮರಣಕ್ಕೆ ಯಜ್ಞಾರ್ಥಕ ಮೌಲ್ಯವಿತ್ತು. ಅವನು ಒಬ್ಬ ಆತ್ಮ ವ್ಯಕ್ತಿಯಾಗಿ ಸ್ವರ್ಗಕ್ಕೆ ಏರಿಹೋದಾಗ, ತನ್ನ ಬಲಿಯ ಮೌಲ್ಯವನ್ನು ಯೆಹೋವನಿಗೆ ಅರ್ಪಿಸಿದನು. (ಇಬ್ರಿಯ 9:24) ಹೀಗೆ ಮಾಡುವ ಮೂಲಕ, ಯೇಸುವು ಪಾಪಪೂರ್ಣ ಮಾನವಕುಲವನ್ನು ಖರೀದಿಸಿ, ಆದಾಮನ ಬದಲು ಮಾನವಕುಲದ ಹೊಸ ಪಿತನಾದನು. (1 ಕೊರಿಂಥ 15:45) ಸಕಾರಣದಿಂದಲೇ ಯೇಸುವು “ನಿತ್ಯನಾದ ತಂದೆ” ಎಂದು ಕರೆಯಲ್ಪಟ್ಟಿದ್ದಾನೆ. (ಯೆಶಾಯ 9:6) ಇದು ಏನನ್ನು ಅರ್ಥೈಸುತ್ತದೆ ಎಂಬುದನ್ನು ಯೋಚಿಸಿ ನೋಡಿರಿ! ಪಾಪಪೂರ್ಣ ತಂದೆಯಾದ ಆದಾಮನು, ತನ್ನೆಲ್ಲ ವಂಶಸ್ಥರಿಗೆ ಮರಣವನ್ನು ಬಳುವಳಿಯಾಗಿ ಕೊಟ್ಟನು. ಆದರೆ ಪರಿಪೂರ್ಣ ತಂದೆಯಾದ ಯೇಸು, ವಿಧೇಯ ಮಾನವರಿಗೆ ಅನಂತ ಜೀವವನ್ನು ದಯಪಾಲಿಸಲು ತನ್ನ ಯಜ್ಞಾರ್ಪಣೆಯ ಮೌಲ್ಯವನ್ನು ಉಪಯೋಗಿಸಿಕೊಳ್ಳುತ್ತಾನೆ.
13. (ಎ) ಆದಾಮನು ಮಾಡಿದ ಸಾಲವನ್ನು ಯೇಸು ತೀರಿಸಿದ ವಿಧವನ್ನು ದೃಷ್ಟಾಂತಿಸಿರಿ. (ಬಿ) ಯೇಸುವಿನ ಯಜ್ಞಾರ್ಪಣೆಯು ನಮ್ಮ ಪ್ರಥಮ ಹೆತ್ತವರ ಪಾಪವನ್ನು ಆವರಿಸುವುದಿಲ್ಲ ಏಕೆ?
13 ಹಾಗಿದ್ದರೆ, ಕೇವಲ ಒಬ್ಬ ಮನುಷ್ಯನ ಮರಣವು ಅನೇಕರ ಪಾಪಗಳನ್ನು ಹೇಗೆ ಮರೆಮಾಡಸಾಧ್ಯವಿತ್ತು? (ಮತ್ತಾಯ 20:28) ಕೆಲವು ವರ್ಷಗಳ ಹಿಂದೆ, ನಾವು ಪ್ರಾಯಶ್ಚಿತ್ತವನ್ನು ಒಂದು ಲೇಖನದಲ್ಲಿ ಹೀಗೆ ದೃಷ್ಟಾಂತಿಸಿದೆವು: “ನೂರಾರು ಕಾರ್ಮಿಕರಿರುವ ಒಂದು ದೊಡ್ಡ ಕಾರ್ಖಾನೆಯನ್ನು ಊಹಿಸಿಕೊಳ್ಳಿರಿ. ಮೋಸಗಾರನಾದ ಒಬ್ಬ ಮ್ಯಾನೆಜರ್ ವ್ಯಾಪಾರದಲ್ಲಿ ಮೋಸಮಾಡಿದ ಕಾರಣ, ಕಾರ್ಖಾನೆಯನ್ನು ಮುಚ್ಚಲಾಗುತ್ತದೆ. ನೂರಾರು ಕಾರ್ಮಿಕರು ಕೆಲಸವನ್ನು ಕಳೆದುಕೊಂಡ ಕಾರಣ, ತಾವು ಖರೀದಿ ಮಾಡಿದ ವಸ್ತುಗಳಿಗೆ ಹಣಪಾವತಿ ಮಾಡಲು ಈಗ ಅಶಕ್ತರಾಗಿದ್ದಾರೆ. ಒಬ್ಬ ಮನುಷ್ಯನ ಭ್ರಷ್ಟಾಚಾರದಿಂದಾಗಿ, ಕಾರ್ಮಿಕರ ಪತ್ನಿಯರು, ಮಕ್ಕಳು ಮತ್ತು ಸಾಲಕೊಟ್ಟವರು ಕಷ್ಟಾನುಭವಿಸುತ್ತಾರೆ. ಆ ಸಮಯದಲ್ಲಿ ಒಬ್ಬ ಶ್ರೀಮಂತ ದಾತನು ದೃಶ್ಯವನ್ನು ಪ್ರವೇಶಿಸುತ್ತಾ ಕಂಪನಿಯ ಸಾಲವನ್ನು ತೀರಿಸಿ, ಕಾರ್ಖಾನೆಯನ್ನು ಪುನಃ ಆರಂಭಿಸುತ್ತಾನೆ. ಆ ಒಂದು ಸಾಲವನ್ನು ತೀರಿಸುವ ಮೂಲಕ, ಅನೇಕ ಕಾರ್ಮಿಕರಿಗೆ, ಅವರ ಕುಟುಂಬಗಳಿಗೆ, ಮತ್ತು ಸಾಲಕೊಟ್ಟವರಿಗೆ ಸಂಪೂರ್ಣ ಉಪಶಮನವು ದೊರೆಯುತ್ತದೆ. ಆದರೆ, ಈ ಹೊಸ ಅಭಿವೃದ್ಧಿಯಲ್ಲಿ ಆ ಮೊದಲಿನ ಮ್ಯಾನೆಜರ್ ಭಾಗಿಯಾಗುತ್ತಾನೊ? ಇಲ್ಲ, ಅವನು ಈಗ ಸೆರೆಮನೆಯಲ್ಲಿದ್ದಾನೆ, ಅಂದರೆ, ತನ್ನ ಕೆಲಸದಿಂದ ಸಂಪೂರ್ಣವಾಗಿ ಹೊರಹಾಕಲ್ಪಟ್ಟಿದ್ದಾನೆ! ತದ್ರೀತಿಯಲ್ಲಿ, ಆದಾಮನು ಮಾಡಿದ ಸಾಲವನ್ನು ತೀರಿಸುವ ಮೂಲಕ, ಆದಾಮನಿಗಲ್ಲ, ಅವನ ಸಂತತಿಯ ಕೋಟಿಗಟ್ಟಲೆ ಜನರಿಗೆ ಪ್ರಯೋಜನವಾಗುತ್ತದೆ.”
14, 15. ಆದಾಮಹವ್ವರು ಬೇಕುಬೇಕೆಂದೇ ಪಾಪಮಾಡಿದವರೆಂದು ಏಕೆ ಹೇಳಸಾಧ್ಯವಿದೆ, ಮತ್ತು ನಮ್ಮ ಹಾಗೂ ಅವರ ಸನ್ನಿವೇಶದಲ್ಲಿರುವ ವ್ಯತ್ಯಾಸವೇನು?
14 ಇದು ನ್ಯಾಯಯುತವಾದ ಸಂಗತಿಯಾಗಿದೆ. ಆದಾಮಹವ್ವರು ಉದ್ದೇಶಪೂರ್ವಕವಾಗಿಯೇ ಪಾಪಮಾಡಿದವರಾಗಿದ್ದರು. ದೇವರಿಗೆ ಅವಿಧೇಯರಾಗಲು ಅವರು ಸ್ವತಃ ಆರಿಸಿಕೊಂಡರು. ಇದಕ್ಕೆ ತದ್ವಿರುದ್ಧವಾಗಿ, ನಾವು ಪಾಪದಲ್ಲಿ ಜನಿಸಿದವರಾಗಿದ್ದೇವೆ. ನಮಗೆ ಬೇರೆ ಯಾವ ದಾರಿಯೂ ಇಲ್ಲ. ನಾವು ಎಷ್ಟೇ ಕಠಿನವಾಗಿ ಪ್ರಯತ್ನಿಸಿದರೂ, ಪಾಪಮಾಡುವುದರಿಂದ ನಾವು ಸಂಪೂರ್ಣವಾಗಿ ದೂರವಿರಸಾಧ್ಯವಿಲ್ಲ. (1 ಯೋಹಾನ 1:8) ಕೆಲವೊಮ್ಮೆ ಪೌಲನಿಗೆ ಅನಿಸಿದ ರೀತಿಯಲ್ಲಿ ನಮಗನಿಸಬಹುದು. ಅವನು ಬರೆದುದು: “ಒಳ್ಳೇದನ್ನು ಮಾಡಬೇಕೆಂದಿರುವ ನನಗೆ ಕೆಟ್ಟದ್ದೇ ಸಿದ್ಧವಾಗಿದೆಯೆಂಬ ನಿಯಮ ನನಗೆ ಕಾಣಬರುತ್ತದೆ. ಅಂತರಾತ್ಮದೊಳಗೆ ದೇವರ ನಿಯಮದಲ್ಲಿ ಆನಂದಪಡುವವನಾಗಿದ್ದೇನೆ. ಆದರೆ ನನ್ನ ಅಂಗಗಳಲ್ಲಿ ಬೇರೊಂದು ನಿಯಮ ಉಂಟೆಂದು ನೋಡುತ್ತೇನೆ. ಅದು ನನ್ನ ಮನಸ್ಸಿನಲ್ಲಿರುವ ನಿಯಮಕ್ಕೆ ವಿರುದ್ಧವಾಗಿ ಕಾದಾಡಿ ನನ್ನನ್ನು ಸೆರೆಹಿಡಿದು ನನ್ನ ಅಂಗಗಳಲ್ಲಿರುವ ಪಾಪದ ನಿಯಮಕ್ಕೆ ವಶಮಾಡುವಂಥದಾಗಿದೆ. ಅಯ್ಯೋ, ನಾನು ಎಂಥ ದುರವಸ್ಥೆಯಲ್ಲಿ ಬಿದ್ದ ಮನುಷ್ಯನು!”—ರೋಮಾಪುರ 7:21-24.
15 ಹಾಗಿದ್ದರೂ, ಪ್ರಾಯಶ್ಚಿತ್ತದ ಕಾರಣ ನಮಗೆ ನಿರೀಕ್ಷೆಯಿದೆ! ದೇವರು ವಾಗ್ದಾನಿಸಿದಂತೆ, ಯಾರ ಮೂಲಕ “ಭೂಮಿಯ ಎಲ್ಲಾ ಜನಾಂಗಗಳಿಗೂ . . . ಆಶೀರ್ವಾದವುಂಟಾಗು”ವದೊ, ಆ ಸಂತಾನವು ಯೇಸುವೇ ಆಗಿದ್ದಾನೆ. (ಆದಿಕಾಂಡ 22:18; ರೋಮಾಪುರ 8:20) ಯೇಸುವಿನಲ್ಲಿ ನಂಬಿಕೆಯಿಡುವವರಿಗೆ ಅವನ ಯಜ್ಞಾರ್ಪಣೆಯು ಅದ್ಭುತಕರವಾದ ಅವಕಾಶಗಳನ್ನು ತೆರೆಯುತ್ತದೆ. ಇವುಗಳಲ್ಲಿ ಕೆಲವನ್ನು ನಾವು ಪರಿಗಣಿಸೋಣ.
ಕ್ರಿಸ್ತನ ಪ್ರಾಯಶ್ಚಿತ್ತದಿಂದ ಪ್ರಯೋಜನ ಪಡೆದುಕೊಳ್ಳುವುದು
16. ನಮ್ಮ ಪಾಪಪೂರ್ಣ ಸ್ಥಿತಿಯ ಎದುರಿನಲ್ಲೂ, ನಾವು ಯೇಸುವಿನ ಪ್ರಾಯಶ್ಚಿತ್ತದಿಂದ ಯಾವ ಪ್ರಯೋಜನಗಳನ್ನು ಈಗಲೂ ಅನುಭವಿಸಬಲ್ಲೆವು?
16 “ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು” ಎಂಬುದಾಗಿ ಬೈಬಲ್ ಬರಹಗಾರನಾದ ಯಾಕೋಬನು ಅಂಗೀಕರಿಸಿದನು. (ಯಾಕೋಬ 3:2) ಹಾಗಿದ್ದರೂ, ಕ್ರಿಸ್ತನ ಪ್ರಾಯಶ್ಚಿತ್ತದ ಕಾರಣ, ನಮ್ಮ ತಪ್ಪುಗಳು ಮನ್ನಿಸಲ್ಪಡಬಲ್ಲವು. ಯೋಹಾನನು ಬರೆಯುವುದು: “ಯಾವನಾದರೂ ಪಾಪಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ. ಆತನು ನಮ್ಮ ಪಾಪಗಳನ್ನು ನಿವಾರಣಮಾಡುವ ಯಜ್ಞವಾಗಿದ್ದಾನೆ.” (1 ಯೋಹಾನ 2:1, 2) ಹೀಗಿರುವಾಗ, ನಾವು ಪಾಪವನ್ನು ಎಣಿಸಬಾರದು. (ಯೂದ 4; ಹೋಲಿಸಿ 1 ಕೊರಿಂಥ 9:27.) ನಾವು ತಪ್ಪು ಮಾಡುವುದಾದರೂ, ಯೆಹೋವನು ‘ಕ್ಷಮಿಸಲು ಸಿದ್ಧನಾಗಿದ್ದಾನೆ’ ಎಂಬ ಭರವಸೆಯಿಂದ ಆತನ ಮುಂದೆ ನಮ್ಮ ಹೃದಯವನ್ನು ಬಿಚ್ಚಿಡಬಹುದು. (ಕೀರ್ತನೆ 86:5; 130:3, 4; ಯೆಶಾಯ 1:18; 55:7; ಅ. ಕೃತ್ಯಗಳು 3:19) ಹೀಗೆ, ಶುದ್ಧವಾದ ಮನಸ್ಸಾಕ್ಷಿಯೊಂದಿಗೆ ದೇವರಿಗೆ ಸೇವೆಸಲ್ಲಿಸಲು ಮತ್ತು ಯೇಸು ಕ್ರಿಸ್ತನ ನಾಮದ ಮುಖಾಂತರ ಆತನನ್ನು ಪ್ರಾರ್ಥನೆಯಲ್ಲಿ ಸಮೀಪಿಸಲು ಪ್ರಾಯಶ್ಚಿತ್ತವು ಸಾಧ್ಯಗೊಳಿಸುತ್ತದೆ.—ಯೋಹಾನ 14:13, 14; ಇಬ್ರಿಯ 9:14.
17. ಪ್ರಾಯಶ್ಚಿತ್ತದ ಕಾರಣ, ಯಾವ ಭಾವೀ ಆಶೀರ್ವಾದಗಳು ಸಾಧ್ಯವಾಗಿವೆ?
17 ವಿಧೇಯ ಮಾನವರು ಸದಾಕಾಲ ಭೂಮಿಯ ಮೇಲೆ ಪ್ರಮೋದವನದಲ್ಲಿ ಜೀವಿಸಬೇಕೆಂಬ ದೇವರ ಉದ್ದೇಶವು ನೆರವೇರುವಂತೆ ಕ್ರಿಸ್ತನ ಪ್ರಾಯಶ್ಚಿತ್ತವು ಸಾಧ್ಯಮಾಡುತ್ತದೆ. (ಕೀರ್ತನೆ 37:29) ಪೌಲನು ಬರೆದುದು: “ನಿಶ್ಚಯವಾಗಿ ದೇವರ ವಾಗ್ದಾನಗಳು ಎಷ್ಟಿದ್ದರೂ ಕ್ರಿಸ್ತನಲ್ಲೇ ದೃಢವಾಗುತ್ತವೆ.” (2 ಕೊರಿಂಥ 1:20) ನಿಜ, ಮರಣವು “ರಾಜನಾಗಿ ಆಳಿದೆ.” (ರೋಮಾಪುರ 5:17, NW) ಆದರೆ ಈ “ಕಡೇ ಶತ್ರು”ವನ್ನು ತೊಡೆದುಹಾಕಲು, ಪ್ರಾಯಶ್ಚಿತ್ತವು ದೇವರಿಗೆ ಒಂದು ಆಧಾರವನ್ನು ಒದಗಿಸುತ್ತದೆ. (1 ಕೊರಿಂಥ 15:26; ಪ್ರಕಟನೆ 21:4) ಮೃತಪಟ್ಟವರಿಗೂ ಯೇಸುವಿನ ಪ್ರಾಯಶ್ಚಿತ್ತವು ಪ್ರಯೋಜನಕಾರಿಯಾಗಿದೆ. ಯೇಸು ಹೇಳಿದ್ದು: “ಸಮಾಧಿಗಳಲ್ಲಿರುವವರೆಲ್ಲರು ಆತನ [ಯೇಸುವಿನ] ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.”—ಯೋಹಾನ 5:28, 29; 1 ಕೊರಿಂಥ 15:20-22.
18. ಮಾನವರ ಮೇಲೆ ಪಾಪವು ಯಾವ ದುರಂತಕರ ಪರಿಣಾಮವನ್ನು ಬೀರಿದೆ, ಮತ್ತು ಇದು ದೇವರ ನೂತನ ಲೋಕದಲ್ಲಿ ಹೇಗೆ ಬದಲಾಯಿಸಲ್ಪಡುವುದು?
18 ಇಂದು ನಮ್ಮನ್ನು ಜರ್ಜರಿತಗೊಳಿಸುವ ಆತಂಕಗಳಿಂದ ಮುಕ್ತವಾಗಿರುವ ಜೀವನವನ್ನು ಅನುಭವಿಸುವುದು ಎಷ್ಟು ಉಲ್ಲಾಸಕರವಾಗಿರುವುದೆಂದು ಯೋಚಿಸಿರಿ! ಜೀವಿತವು ಹೀಗೇ ಇರಬೇಕೆಂದು ಉದ್ದೇಶಿಸಲಾಗಿತ್ತು. ನಾವು ದೇವರೊಂದಿಗೆ ಮಾತ್ರವಲ್ಲ, ನಮ್ಮ ಸ್ವಂತ ಮನಸ್ಸು, ಹೃದಯ, ಮತ್ತು ದೇಹದೊಂದಿಗೆ ಅಸಂಬದ್ಧವಾಗಿರುವಂತೆ ಪಾಪವು ಕಾರಣವಾಯಿತು. ಆದರೆ, ದೇವರ ನೂತನ ಲೋಕದಲ್ಲಿ, “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು” ಎಂಬುದಾಗಿ ಬೈಬಲು ವಾಗ್ದಾನಿಸುತ್ತದೆ. ಹೌದು, ಶಾರೀರಿಕ ಹಾಗೂ ಭಾವನಾತ್ಮಕ ಅನಾರೋಗ್ಯಗಳು ಇನ್ನು ಮುಂದೆ ಮಾನವಕುಲವನ್ನು ಬಾಧಿಸಲಾರವು. ಏಕೆ? ಯೆಶಾಯನು ಉತ್ತರಿಸುವುದು: “ಅಲ್ಲಿಯ ಜನರ ಪಾಪವು ಪರಿಹಾರವಾಗುವದು.”—ಯೆಶಾಯ 33:24.
ಪ್ರಾಯಶ್ಚಿತ್ತ—ಪ್ರೀತಿಯ ಅಭಿವ್ಯಕ್ತಿ
19. ನಾವು ವ್ಯಕ್ತಿಗತವಾಗಿ ಕ್ರಿಸ್ತನ ಪ್ರಾಯಶ್ಚಿತ್ತಕ್ಕೆ ಹೇಗೆ ಪ್ರತಿಕ್ರಿಯಿಸಬೇಕು?
19 ಪ್ರೀತಿಯಿಂದ ಪ್ರಚೋದಿತನಾಗಿಯೇ ಯೆಹೋವನು ತನ್ನ ಪ್ರಿಯ ಪುತ್ರನನ್ನು ಭೂಮಿಗೆ ಕಳುಹಿಸಿದನು. (ರೋಮಾಪುರ 5:8; 1 ಯೋಹಾನ 4:9) ಫಲಸ್ವರೂಪವಾಗಿ, ಯೇಸು “ಎಲ್ಲರಿಗೋಸ್ಕರ ಮರಣವನ್ನು ಅನುಭವಿ”ಸುವಂತೆ ಪ್ರೀತಿಯಿಂದ ಪ್ರೇರೇಪಿಸಲ್ಪಟ್ಟನು. (ಇಬ್ರಿಯ 2:9; ಯೋಹಾನ 15:13) ಸಕಾರಣದಿಂದಲೇ, ಪೌಲನು ಬರೆದುದು: “ಕ್ರಿಸ್ತನ ಪ್ರೀತಿಯು ನಮಗೆ ಒತ್ತಾಯಮಾಡುತ್ತದೆ; . . . ಜೀವಿಸುವವರು ಇನ್ನು ಮೇಲೆ ತಮಗಾಗಿ ಜೀವಿಸದೆ ತಮಗೋಸ್ಕರ ಸತ್ತು ಎದ್ದು ಬಂದಾತನಿಗಾಗಿ ಜೀವಿಸಬೇಕೆಂತಲೇ ಆತನು ಎಲ್ಲರಿಗೋಸ್ಕರ ಸತ್ತನು.” (2 ಕೊರಿಂಥ 5:14, 15) ಯೇಸು ನಮಗಾಗಿ ಮಾಡಿದಂತಹದ್ದನ್ನು ನಾವು ನಿಜವಾಗಿಯೂ ಗಣ್ಯಮಾಡುವುದಾದರೆ, ನಾವು ಅದಕ್ಕೆ ಪ್ರತಿಕ್ರಿಯಿಸುವೆವು. ಎಷ್ಟೆಂದರೂ, ಪ್ರಾಯಶ್ಚಿತ್ತದ ಮೂಲಕವೇ ನಾವು ಮರಣದಿಂದ ಬಿಡುಗಡೆ ಹೊಂದಲಿರುವೆವಲ್ಲವೆ! ನಮ್ಮ ಕ್ರಿಯೆಗಳ ಮೂಲಕ ನಾವು ಯೇಸುವಿನ ಯಜ್ಞವನ್ನು ಸಾಧಾರಣ ಸಂಗತಿಯೆಂಬಂತೆ ಸೂಚಿಸಲು ನಿಶ್ಚಯವಾಗಿಯೂ ಬಯಸಲಾರೆವು.—ಇಬ್ರಿಯ 10:29.
20. ನಾವು ಯೇಸುವಿನ ‘ಮಾತಿಗೆ’ ವಿಧೇಯರಾಗುವ ವಿಧಗಳಲ್ಲಿ ಕೆಲವು ಯಾವುವು?
20 ನಾವು ಪ್ರಾಯಶ್ಚಿತ್ತಕ್ಕಾಗಿ ಹೃತ್ಪೂರ್ವಕ ಗಣ್ಯತೆಯನ್ನು ಹೇಗೆ ಪ್ರದರ್ಶಿಸಬಲ್ಲೆವು? ತನ್ನ ದಸ್ತಗಿರಿಯ ತುಸು ಮೊದಲು, ಯೇಸು ಹೇಳಿದ್ದು: “ಯಾರಾದರೂ ನನ್ನನ್ನು ಪ್ರೀತಿಸುವವನಾದರೆ ನನ್ನ ಮಾತನ್ನು ಕೈಕೊಂಡು ನಡೆಯುವನು.” (ಯೋಹಾನ 14:23) ಯೇಸುವಿನ ‘ಮಾತಿನಲ್ಲಿ,’ “ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿ . . . ದೀಕ್ಷಾಸ್ನಾನಮಾಡಿಸಿ” ಎಂಬ ಆದೇಶವನ್ನು ಪೂರೈಸಲು ಹುರುಪಿನಿಂದ ಭಾಗವಹಿಸಬೇಕೆಂಬ ಅವನ ಆಜ್ಞೆಯೂ ಸೇರಿಕೊಂಡಿದೆ. (ಮತ್ತಾಯ 28:19) ಯೇಸುವಿಗೆ ವಿಧೇಯರಾಗುವುದರಲ್ಲಿ, ನಮ್ಮ ಸಹೋದರರಿಗೆ ಪ್ರೀತಿಯನ್ನು ತೋರಿಸಬೇಕೆಂಬ ಸಂಗತಿಯೂ ಸೇರಿದೆ.—ಯೋಹಾನ 13:34, 35.
21. 1999ರ ಏಪ್ರಿಲ್ 1ರಂದು ಜರುಗಲಿರುವ ಜ್ಞಾಪಕಾಚರಣೆಗೆ ನಾವು ಏಕೆ ಹಾಜರಿರಬೇಕು?
21 ನಾವು ಪ್ರಾಯಶ್ಚಿತ್ತಕ್ಕೆ ಗಣ್ಯತೆಯನ್ನು ತೋರಿಸಸಾಧ್ಯವಿರುವ ಉತ್ತಮವಾದ ವಿಧಗಳಲ್ಲೊಂದು, ಈ ವರ್ಷ ಏಪ್ರಿಲ್ 1ರಂದು ಜರುಗಲಿರುವ ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ ಹಾಜರಾಗುವುದೇ ಆಗಿದೆ.a ಇದು ಕೂಡ ಯೇಸುವಿನ ‘ಮಾತಿನ’ ಒಂದು ಭಾಗವಾಗಿದೆ. ಏಕೆಂದರೆ ಈ ಆಚರಣೆಯನ್ನು ಸ್ಥಾಪಿಸುವಾಗ, ಯೇಸು ತನ್ನ ಹಿಂಬಾಲಕರಿಗೆ ಆಜ್ಞೆಯಿತ್ತದ್ದು: “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ.” (ಲೂಕ 22:19) ಈ ಅತ್ಯಂತ ಪ್ರಾಮುಖ್ಯವಾದ ಸಂದರ್ಭಕ್ಕೆ ಹಾಜರಿರುವ ಮೂಲಕ ಮತ್ತು ಕ್ರಿಸ್ತನು ಆಜ್ಞಾಪಿಸಿರುವ ಎಲ್ಲ ವಿಷಯಗಳಿಗೆ ಆಳವಾಗಿ ಲಕ್ಷ್ಯಕೊಡುವ ಮೂಲಕ, ಯೇಸುವಿನ ಪ್ರಾಯಶ್ಚಿತ್ತವು ದೇವರ ರಕ್ಷಣಾಮಾರ್ಗವಾಗಿದೆ ಎಂಬ ನಮ್ಮ ದೃಢ ವಿಶ್ವಾಸವನ್ನು ನಾವು ಪ್ರದರ್ಶಿಸುವೆವು. ನಿಜವಾಗಿಯೂ, “ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ.”—ಅ. ಕೃತ್ಯಗಳು 4:12.
[ಪಾದಟಿಪ್ಪಣಿ]
a ಯೇಸು ಮರಣಹೊಂದಿದ, ಸಾ.ಶ. 33ರ ನೈಸಾನ್ 14ಕ್ಕೆ ಈ ವರ್ಷದ ಏಪ್ರಿಲ್ 1ನೆಯ ತಾರೀಖು ಅನುರೂಪವಾಗಿದೆ. ಜ್ಞಾಪಕಾಚರಣೆಯ ಸಮಯ ಹಾಗೂ ಸ್ಥಳಕ್ಕಾಗಿ, ಸ್ಥಳೀಯ ಯೆಹೋವನ ಸಾಕ್ಷಿಗಳಲ್ಲಿ ವಿಚಾರಿಸಿರಿ.
ನೀವು ಜ್ಞಾಪಿಸಿಕೊಳ್ಳಬಲ್ಲಿರೊ?
◻ ಮಾನವರು ತಮ್ಮ ಪಾಪಪೂರ್ಣ ಸ್ಥಿತಿಗಾಗಿ ಪರಿಹಾರವನ್ನು ಏಕೆ ನೀಡಿಕೊಳ್ಳಲು ಸಾಧ್ಯವಿಲ್ಲ?
◻ ಯಾವ ವಿಧದಲ್ಲಿ ಯೇಸು “ಅನುರೂಪವಾದ ಪ್ರಾಯಶ್ಚಿತ್ತ”ವಾಗಿದ್ದಾನೆ?
◻ ಯೇಸು ಪರಿಪೂರ್ಣ ಮಾನವ ಜೀವಿತಕ್ಕಾಗಿ ತನ್ನಲ್ಲಿದ್ದ ಹಕ್ಕನ್ನು ನಮ್ಮ ಪ್ರಯೋಜನಕ್ಕಾಗಿ ಹೇಗೆ ಉಪಯೋಗಿಸಿದನು?
◻ ಕ್ರಿಸ್ತನ ಪ್ರಾಯಶ್ಚಿತ್ತದ ಮೂಲಕ ಮಾನವಕುಲವು ಯಾವ ಆಶೀರ್ವಾದಗಳಲ್ಲಿ ಆನಂದಿಸುತ್ತದೆ?
[ಪುಟ 15 ರಲ್ಲಿರುವ ಚಿತ್ರ]
ಆದಾಮನಿಗೆ ಸರಿಸಮನಾದ ಪರಿಪೂರ್ಣ ಮಾನವನು ಮಾತ್ರ, ನ್ಯಾಯದ ತಕ್ಕಡಿಗಳನ್ನು ಸರಿದೂಗಿಸಬಹುದಿತ್ತು
[ಪುಟ 16 ರಲ್ಲಿರುವ ಚಿತ್ರ]
ಯೇಸು ಪರಿಪೂರ್ಣ ಮಾನವ ಜೀವದ ಹಕ್ಕನ್ನು ಪಡೆದಿದ್ದ ಕಾರಣ, ಅವನ ಮೃತ್ಯುವಿಗೆ ಯಜ್ಞಾರ್ಥಕ ಮೌಲ್ಯವಿತ್ತು