ದೇವರ ಆಲಯದ ‘ಮೇಲೆ ನಿಮ್ಮ ಮನಸ್ಸನ್ನಿಡಿರಿ!’
“ನರಪುತ್ರನೇ, . . . ನಾನು ನಿನಗೆ ತೋರಿಸುವದನ್ನೆಲ್ಲಾ ಮನಸ್ಸಿಟ್ಟು ತಿಳಿದುಕೋ; . . . ನೀನು ನೋಡುವದನ್ನೆಲ್ಲಾ ಇಸ್ರಾಯೇಲ್ ವಂಶದವರಿಗೆ ಪ್ರಕಟಿಸು.”—ಯೆಹೆಜ್ಕೇಲ 40:4.
1. ಸಾ.ಶ.ಪೂ. 593ರಲ್ಲಿ ದೇವರ ಆಯ್ದುಕೊಂಡ ಜನರು ಯಾವ ಸ್ಥಿತಿಯಲ್ಲಿದ್ದರು?
ಇಸವಿಯು ಸಾ.ಶ.ಪೂ. 593 ಆಗಿದ್ದು, ಅದು ಇಸ್ರಾಯೇಲ್ಯರ ದೇಶಭ್ರಷ್ಟತೆಯ 14ನೆಯ ವರುಷವಾಗಿತ್ತು. ಬಾಬೆಲಿನಲ್ಲಿ ವಾಸಿಸುತ್ತಿದ್ದ ಯೆಹೂದ್ಯರಿಗೆ, ಅವರ ಅಚ್ಚುಮೆಚ್ಚಿನ ಸ್ವದೇಶವು ನಿಶ್ಚಯವಾಗಿಯೂ ತುಂಬ ದೂರವಿರುವಂತೆ ಕಂಡಿದ್ದಿರಬೇಕು. ಅವರಲ್ಲಿ ಹೆಚ್ಚಿನವರು ಕಡೆಯ ಬಾರಿ ಯೆರೂಸಲೇಮನ್ನು ಕಂಡಾಗ, ಅದು ಹೊತ್ತಿಕೊಂಡು ಉರಿಯುತ್ತಿತ್ತು, ಅದರ ಪ್ರಚಂಡ ಗೋಡೆಯು ಪುಡಿಪುಡಿಯಾಗಿತ್ತು, ಅದರ ವೈಭವಯುಕ್ತ ಕಟ್ಟಡಗಳು ಧ್ವಂಸಗೊಂಡಿದ್ದವು. ಒಂದು ಸಮಯದಲ್ಲಿ, ನಗರದ ಅತ್ಯುತ್ಕೃಷ್ಟ ವೈಭವವಾಗಿದ್ದು, ಭೂಮಿಯಲ್ಲೆಲ್ಲ ಸತ್ಯಾರಾಧನೆಯ ಏಕೈಕ ಕೇಂದ್ರವಾಗಿದ್ದ ಯೆಹೋವನ ದೇವಾಲಯವು, ಒಡ್ಡೊಡ್ಡಾದ ಕಲ್ಲುಗಳಾಗಿ ಶಿಥಿಲಗೊಂಡಿತ್ತು. ಇಸ್ರಾಯೇಲಿನ ದೇಶಭ್ರಷ್ಟತೆಯು ಈಗಲೂ ತುಂಬ ಸಮಯದ ವರೆಗೆ ಮುಂದುವರಿಯಲಿತ್ತು. ವಾಗ್ದತ್ತ ಬಿಡುಗಡೆಗೆ ಇನ್ನೂ 56 ವರುಷಗಳು ಇದ್ದವು.—ಯೆರೆಮೀಯ 29:10.
2. ಯೆರೂಸಲೇಮಿನಲ್ಲಿನ ದೇವರ ಆಲಯದ ನೆನಪುಗಳು ಯೆಹೆಜ್ಕೇಲನನ್ನು ಏಕೆ ದುಃಖಪಡಿಸಿರಬೇಕು?
2 ನೂರಾರು ಮೈಲುಗಳಷ್ಟು ದೂರದಲ್ಲಿ, ಕಾಡು ಪ್ರಾಣಿಗಳು ಸುಳಿದಾಡುವ ಪಾಳಾಗಿ, ಧ್ವಂಸವಾಗಿ ಬಿದ್ದಿದ್ದ ದೇವರ ಆಲಯದ ಕುರಿತು ಯೋಚಿಸುವಾಗಲೆಲ್ಲ ನಂಬಿಗಸ್ತ ಪ್ರವಾದಿಯಾದ ಯೆಹೆಜ್ಕೇಲನಿಗೆ ತುಂಬ ದುಃಖವಾಗುತ್ತಿದ್ದಿರಬೇಕು. (ಯೆರೆಮೀಯ 9:11) ಅವನ ಸ್ವಂತ ತಂದೆಯಾದ ಬೂಜಿಯು ಆ ಆಲಯದಲ್ಲಿ ಯಾಜಕನಾಗಿ ಸೇವೆಸಲ್ಲಿಸಿದ್ದನು. (ಯೆಹೆಜ್ಕೇಲ 1:3) ಯೆಹೆಜ್ಕೇಲನೂ ಅದೇ ಸುಯೋಗವನ್ನು ಪಡೆಯಲಿದ್ದನು, ಆದರೆ ಅವನು ಇನ್ನೂ ಚಿಕ್ಕವನಾಗಿದ್ದಾಗಲೇ, ಸಾ.ಶ.ಪೂ. 617ರಲ್ಲಿ, ಯೆರೂಸಲೇಮಿನ ಕುಲೀನರೊಂದಿಗೆ ಅವನನ್ನು ಗಡೀಪಾರು ಮಾಡಲಾಯಿತು. ಈಗ ಸುಮಾರು 50 ವರ್ಷ ಪ್ರಾಯದವನಾಗಿದ್ದ ಯೆಹೆಜ್ಕೇಲನಿಗೆ, ತಾನು ಪುನಃ ಯೆರೂಸಲೇಮನ್ನು ನೋಡುವಷ್ಟು ಸಮಯ ಬದುಕಲಿಕ್ಕಿಲ್ಲ, ಅದರ ಆಲಯವನ್ನು ಪುನಃ ಕಟ್ಟುವುದರಲ್ಲಿ ಪಾಲ್ಗೊಳ್ಳಸಾಧ್ಯವಿಲ್ಲ ಎಂದು ಗೊತ್ತಿದ್ದಿರಬಹುದು. ಆದುದರಿಂದ ಒಂದು ಮಹಿಮಾಭರಿತ ದೇವಾಲಯದ ದರ್ಶನವನ್ನು ಪಡೆಯುವುದು ಯೆಹೆಜ್ಕೇಲನಿಗೆ ಎಷ್ಟೊಂದು ಮಹತ್ತಾದ ವಿಷಯವಾಗಿದ್ದಿರಬೇಕು ಎಂಬುದನ್ನು ತುಸು ಊಹಿಸಿಕೊಳ್ಳಿರಿ!
3. (ಎ) ಯೆಹೆಜ್ಕೇಲನಿಗೆ ಆಲಯದ ದರ್ಶನವು ಕೊಡಲ್ಪಟ್ಟಿರುವ ಉದ್ದೇಶವೇನು? (ಬಿ) ದರ್ಶನದ ನಾಲ್ಕು ಮುಖ್ಯ ವಿಭಾಗಗಳು ಯಾವುವು?
3 ಯೆಹೆಜ್ಕೇಲ ಪುಸ್ತಕದ ಒಂಬತ್ತು ಅಧ್ಯಾಯಗಳಲ್ಲಿರುವ ಈ ವಿಸ್ತಾರವಾದ ದರ್ಶನವು, ದೇಶಭ್ರಷ್ಟ ಯೆಹೂದ್ಯರಿಗೆ ನಂಬಿಕೆಯನ್ನು ಬಲಪಡಿಸುವ ವಾಗ್ದಾನವನ್ನು ಒದಗಿಸಿತು. ಶುದ್ಧಾರಾಧನೆಯು ಪುನರ್ಸ್ಥಾಪಿಸಲ್ಪಡಲಿತ್ತು! ಅಂದಿನಿಂದ ಗತಿಸಿರುವ ಶತಮಾನಗಳಲ್ಲಿ, ನಮ್ಮ ದಿನಗಳ ವರೆಗೂ, ಈ ದರ್ಶನವು ಯೆಹೋವನನ್ನು ಪ್ರೀತಿಸುವವರಿಗೆ ಉತ್ತೇಜನದ ಒಂದು ಮೂಲವಾಗಿದೆ. ಅದು ಹೇಗೆ? ಯೆಹೆಜ್ಕೇಲನ ಪ್ರವಾದನಾತ್ಮಕ ದರ್ಶನವು ದೇಶಭ್ರಷ್ಟರಾಗಿದ್ದ ಆ ಯೆಹೂದ್ಯರಿಗೆ ಯಾವ ಅರ್ಥದಲ್ಲಿತ್ತೆಂಬುದನ್ನು ನಾವು ಪರೀಕ್ಷಿಸೋಣ. ಅದರಲ್ಲಿ ನಾಲ್ಕು ಮುಖ್ಯ ವಿಭಾಗಗಳಿವೆ: ದೇವಾಲಯ, ಯಾಜಕತ್ವ, ಪ್ರಭು, ಮತ್ತು ಪುನರ್ಸ್ಥಾಪಿತ ದೇಶ.
ಪುನರ್ಸ್ಥಾಪಿತ ಆಲಯ
4. ದರ್ಶನದ ಆರಂಭದಲ್ಲಿ ಯೆಹೆಜ್ಕೇಲನನ್ನು ಎಲ್ಲಿಗೆ ಕೊಂಡೊಯ್ಯಲಾಗುತ್ತದೆ, ಅವನು ಅಲ್ಲಿ ಏನನ್ನು ನೋಡುತ್ತಾನೆ, ಮತ್ತು ಯಾರು ಅವನನ್ನು ಪೂರ್ಣ ಸಂಚಾರಕ್ಕೆ ಒಯ್ಯುತ್ತಾನೆ?
4 ಪ್ರಥಮವಾಗಿ, ಯೆಹೆಜ್ಕೇಲನನ್ನು ಒಂದು “ಅತ್ಯುನ್ನತ ಪರ್ವತ”ಕ್ಕೆ ತರಲಾಗುತ್ತದೆ. ಪರ್ವತದ ದಕ್ಷಿಣದಿಕ್ಕಿನಲ್ಲಿ, ಗೋಡೆಗಳಿರುವ ಒಂದು ನಗರದಂತೆ ಒಂದು ದೊಡ್ಡ ಆಲಯವಿದೆ. “ತಾಮ್ರದಂತೆ ಹೊಳೆಯುವ” ದೇವದೂತನೊಬ್ಬನು ಪ್ರವಾದಿಯನ್ನು ಆ ಕಟ್ಟಡದ ಪೂರ್ಣ ಸಂಚಾರಕ್ಕೆ ಒಯ್ಯುತ್ತಾನೆ. (ಯೆಹೆಜ್ಕೇಲ 40:2, 3) ದರ್ಶನವು ಮುಂದುವರಿದಂತೆ, ದೇವದೂತನು ಆಲಯದ ಮೂರು ಸರಿಸಮವಾದ ಹೆಬ್ಬಾಗಿಲುಗಳನ್ನು ಅವುಗಳ ಗೋಡೆ ಕೋಣೆಗಳೊಂದಿಗೆ, ಹೊರಗಣ ಪ್ರಾಕಾರ, ಒಳಗಣ ಪ್ರಾಕಾರ, ಊಟದ ಕೋಣೆಗಳು, ಯಜ್ಞವೇದಿ, ಮತ್ತು ಪರಿಶುದ್ಧ ಸ್ಥಳ ಹಾಗೂ ಮಹಾಪರಿಶುದ್ಧ ಸ್ಥಳವಿರುವ ದೇವಾಲಯದ ಪವಿತ್ರಸ್ಥಾನವನ್ನು ಸೂಕ್ಷ್ಮವಾಗಿ ಅಳತೆ ಮಾಡುವುದನ್ನು ಯೆಹೆಜ್ಕೇಲನು ಕಾಣುತ್ತಾನೆ.
5. (ಎ) ಯೆಹೋವನು ಯೆಹೆಜ್ಕೇಲನಿಗೆ ಯಾವ ಆಶ್ವಾಸನೆಯನ್ನು ಕೊಡುತ್ತಾನೆ? (ಬಿ) ದೇವಾಲಯದಿಂದ ತೆಗೆಯಲ್ಪಡಬೇಕಾದ ‘ಅರಸರ ಶವಗಳು’ ಏನಾಗಿದ್ದವು, ಮತ್ತು ಅದು ಏಕೆ ಮಹತ್ವಪೂರ್ಣವಾಗಿತ್ತು?
5 ಅನಂತರ, ಯೆಹೋವನು ತಾನೇ ಆ ದರ್ಶನದಲ್ಲಿ ಕಾಣಿಸಿಕೊಳ್ಳುತ್ತಾನೆ. ತಾನು ಆಲಯವನ್ನು ಪ್ರವೇಶಿಸಿ ಅಲ್ಲಿ ವಾಸಮಾಡುವೆನು ಎಂದು ಆತನು ಯೆಹೆಜ್ಕೇಲನಿಗೆ ಆಶ್ವಾಸನೆ ಕೊಡುತ್ತಾನೆ. ಆದರೆ ಯೆಹೋವನು ತನ್ನ ಮನೆಯ ಶುದ್ಧೀಕರಣಕ್ಕಾಗಿ ಕರೆಕೊಡುತ್ತಾ, ಹೀಗನ್ನುತ್ತಾನೆ: “ಈಗಲಾದರೂ ತಮ್ಮ ದೇವದ್ರೋಹ [“ಜಾರತ್ವ,” NW]ವನ್ನು ಮತ್ತು ಅರಸರ ಶವಗಳನ್ನು ನನಗೆ ದೂರಮಾಡಲಿ; ಆಗ ನಾನು ಅವರ ಮಧ್ಯೆ ಸದಾ ವಾಸಿಸುವೆನು.” (ಯೆಹೆಜ್ಕೇಲ 43:2-4, 7, 9) ಈ “ಅರಸರ ಶವಗಳು” ವಿಗ್ರಹಗಳಿಗೆ ಸೂಚಿಸಿದವು ಎಂಬುದು ಸ್ಪಷ್ಟ. ಯೆರೂಸಲೇಮಿನ ದಂಗೆಕೋರ ಅರಸರು ಮತ್ತು ಜನರು ದೇವರ ಆಲಯವನ್ನು ವಿಗ್ರಹಗಳಿಂದ ಹೊಲೆಗೆಡಿಸಿದ್ದರು ಮತ್ತು ಅವುಗಳನ್ನು ಕಾರ್ಯತಃ ಅರಸರುಗಳಾಗಿ ಮಾಡಿದ್ದರು. (ಆಮೋಸ 5:26ನ್ನು ಹೋಲಿಸಿ.) ಜೀವಂತ ದೇವರುಗಳು ಅಥವಾ ಅರಸರುಗಳಾಗಿರುವ ಬದಲಿಗೆ, ಅವು ನಿರ್ಜೀವವೂ ಯೆಹೋವನ ದೃಷ್ಟಿಯಲ್ಲಿ ಅಸಹ್ಯ ವಸ್ತುಗಳೂ ಆಗಿದ್ದವು. ಅವುಗಳನ್ನು ತೊಲಗಿಸಲೇಬೇಕಾಗಿತ್ತು.—ಯಾಜಕಕಾಂಡ 26:30; ಯೆರೆಮೀಯ 16:18.
6. ಆಲಯದ ಅಳತೆಮಾಡುವಿಕೆಯು ಏನನ್ನು ಸೂಚಿಸಿತು?
6 ದರ್ಶನದ ಈ ಭಾಗದ ಉದ್ದೇಶವೇನಾಗಿತ್ತು? ದೇವರ ಆಲಯದಲ್ಲಿ ಶುದ್ಧಾರಾಧನೆಯ ಸಂಪೂರ್ಣ ಪುನರ್ಸ್ಥಾಪನೆಯ ಆಶ್ವಾಸನೆಯನ್ನು ಅದು ದೇಶಭ್ರಷ್ಟರಿಗೆ ಕೊಟ್ಟಿತು. ಅದಲ್ಲದೆ, ಆಲಯದ ಅಳತೆಮಾಡುವಿಕೆಯು, ದರ್ಶನವು ಖಂಡಿತವಾಗಿಯೂ ನೆರವೇರುವುದೆಂಬುದಕ್ಕೆ ದೈವಿಕ ಖಾತರಿಯನ್ನಿತ್ತಿತು. (ಯೆರೆಮೀಯ 31:39, 40ನ್ನು ಹೋಲಿಸಿರಿ; ಜೆಕರ್ಯ 2:2-8.) ಎಲ್ಲ ವಿಗ್ರಹಾರಾಧನೆಯು ತೆಗೆದುಹಾಕಲ್ಪಟ್ಟು, ಶುದ್ಧಮಾಡಲ್ಪಡುವುದು. ಯೆಹೋವನು ಪುನಃ ಒಮ್ಮೆ ತನ್ನ ಆಲಯದ ಮೇಲೆ ಆಶೀರ್ವಾದವನ್ನು ಸುರಿಸಲಿದ್ದನು.
ಯಾಜಕತ್ವ ಮತ್ತು ಪ್ರಭು
7. ಲೇವಿಯರ ಮತ್ತು ಯಾಜಕರ ಕುರಿತಾಗಿ ಯಾವ ಮಾಹಿತಿಯು ಕೊಡಲ್ಪಡುತ್ತದೆ?
7 ಯಾಜಕತ್ವವು ಸಹ ಒಂದು ಶುದ್ಧೀಕರಣದ ಅಥವಾ ಪರಿಶುದ್ಧಗೊಳಿಸುವಿಕೆಯ ಕಾರ್ಯವಿಧಾನಕ್ಕೆ ಒಳಗಾಗಲಿತ್ತು. ವಿಗ್ರಹಾರಾಧನೆಗೆ ಬಲಿಬಿದ್ದುದಕ್ಕಾಗಿ ಲೇವಿಯರು ಗದರಿಸಲ್ಪಡಲಿದ್ದರೂ, ಚಾದೋಕನ ಯಾಜಕ ಪುತ್ರರು ಶುದ್ಧರಾಗಿ ಉಳಿದುದಕ್ಕಾಗಿ ಅವರು ಪ್ರಶಂಸಿಸಲ್ಪಟ್ಟು, ಬಹುಮಾನಿಸಲ್ಪಡಲಿದ್ದರು.a ಆದರೂ ಆ ಎರಡು ಗುಂಪುಗಳಿಗೂ, ನಿಸ್ಸಂದೇಹವಾಗಿ ಅವರ ವ್ಯಕ್ತಿಗತ ನಂಬಿಗಸ್ತಿಕೆಯ ಮೇಲೆ ಆಧಾರಿಸಿ, ದೇವರ ಪುನರ್ಸ್ಥಾಪಿತ ಆಲಯದಲ್ಲಿ ಸೇವಾಸ್ಥಾನಗಳು ದೊರೆಯಲಿದ್ದವು. ಅದಕ್ಕೆ ಕೂಡಿಸಿ, ಯೆಹೋವನು ವಿಧಿಸಿದ್ದು: “ಮೀಸಲಾದದ್ದಕ್ಕೂ ಮೀಸಲಲ್ಲದ್ದಕ್ಕೂ ಭೇದವನ್ನು ನನ್ನ ಜನರಿಗೆ ತೋರಿಸಿ ಶುದ್ಧಾಶುದ್ಧ ವಿವೇಚನೆಯನ್ನು ಅವರಿಗೆ ಬೋಧಿಸಲಿ.” (ಯೆಹೆಜ್ಕೇಲ 44:10-16, 23) ಹೀಗೆ, ಯಾಜಕತ್ವವು ಪುನರ್ಸ್ಥಾಪಿಸಲ್ಪಡಲಿತ್ತು ಮತ್ತು ಯಾಜಕರ ನಂಬಿಗಸ್ತ ತಾಳ್ಮೆಗೆ ಪ್ರತಿಫಲವು ದೊರೆಯಲಿತ್ತು.
8. (ಎ) ಪ್ರಾಚೀನ ಇಸ್ರಾಯೇಲಿನ ಪ್ರಭುಗಳು ಯಾರಾಗಿದ್ದರು? (ಬಿ) ಯೆಹೆಜ್ಕೇಲನ ದರ್ಶನದಲ್ಲಿನ ಪ್ರಭು ಯಾವ ವಿಧಗಳಲ್ಲಿ ಶುದ್ಧಾರಾಧನೆಯಲ್ಲಿ ಸಕ್ರಿಯನಾಗಿದ್ದನು?
8 ದರ್ಶನವು, ಪ್ರಭು ಎಂದು ಕರೆಯಲ್ಪಡುವ ಒಬ್ಬನನ್ನು ಸಹ ಪರಿಚಯಿಸುತ್ತದೆ. ಮೋಶೆಯ ದಿನಗಳಂದಿನಿಂದಲೂ, ಆ ಜನಾಂಗದಲ್ಲಿ ಪ್ರಭುಗಳು ಇದ್ದರು. “ಪ್ರಭು” ಎಂಬುದರ ಹೀಬ್ರು ಶಬ್ದವು ನಸೀ. ಇದು ತಂದೆಯ ಕಡೆಯ ಕುಟುಂಬದ ತಲೆಗೆ, ಒಂದು ಗೋತ್ರಕ್ಕೆ ಅಥವಾ ಒಂದು ಜನಾಂಗಕ್ಕೂ ಸೂಚಿಸಬಲ್ಲದು. ಯೆಹೆಜ್ಕೇಲನ ದರ್ಶನದಲ್ಲಿ, ಇಸ್ರಾಯೇಲ್ಯ ಪ್ರಭುಗಳು ಒಂದು ವರ್ಗದೋಪಾದಿ ಜನರನ್ನು ದಬ್ಬಾಳಿಕೆಗೆ ಒಳಪಡಿಸಿದ್ದಕ್ಕಾಗಿ ಗದರಿಸಲ್ಪಟ್ಟರು ಮತ್ತು ನೀತಿನ್ಯಾಯದಿಂದ ಆಳುವಂತೆ ಪ್ರಬೋಧಿಸಲ್ಪಟ್ಟರು. ಆದರೂ ಪ್ರಭುವು, ಯಾಜಕಯೋಗ್ಯ ವರ್ಗದವನಾಗಿರದಿದ್ದರೂ, ಶುದ್ಧಾರಾಧನೆಯಲ್ಲಿ ಒಂದು ಪ್ರಮುಖ ರೀತಿಯಲ್ಲಿ ಕ್ರಿಯಾಶೀಲನಾಗಿದ್ದಾನೆ. ಅವನು ಯಾಜಕರಲ್ಲದ ಕುಲಗಳೊಂದಿಗೆ ಹೊರಗಣ ಪ್ರಾಕಾರವನ್ನು ಪ್ರವೇಶಿಸುತ್ತಾನೆ ಮತ್ತು ಹೊರಟುಹೋಗುತ್ತಾನೆ, ಮೂಡಣ ಹೆಬ್ಬಾಗಿಲ ಕೈಸಾಲೆಯಲ್ಲಿ ಕುಳಿತುಕೊಳ್ಳುತ್ತಾನೆ, ಅರ್ಪಣೆಗಾಗಿ ಜನರಿಗೆ ಕೆಲವು ಯಜ್ಞ ವಸ್ತುಗಳನ್ನೂ ಒದಗಿಸುತ್ತಾನೆ. (ಯೆಹೆಜ್ಕೇಲ 44:2, 3; 45:8-12, 17) ಹೀಗೆ ಆ ದರ್ಶನವು ಪುನರ್ಸ್ಥಾಪಿತ ಜನಾಂಗಕ್ಕೆ ಆದರ್ಶಪ್ರಾಯ ಮುಖಂಡರು ಇರುವರೆಂಬ ಆಶೀರ್ವದಿತ ಆಶ್ವಾಸನೆಯನ್ನು ಯೆಹೆಜ್ಕೇಲನ ಜನರಿಗೆ ನೀಡಿತು. ಅವರು ದೇವಜನರನ್ನು ಸಂಘಟಿಸುವುದರಲ್ಲಿ, ಯಾಜಕತ್ವವನ್ನು ಬೆಂಬಲಿಸುವವರೂ ಆತ್ಮಿಕ ವಿಷಯಗಳಲ್ಲಿ ಉತ್ತಮ ಮಾದರಿಗಳೂ ಆಗಿರುವ ಪುರುಷರಾಗಿರುವರು.
ಆ ದೇಶ
9. (ಎ) ದೇಶವು ಹೇಗೆ ವಿಭಾಗಿಸಲ್ಪಡಲಿತ್ತು, ಆದರೆ ಯಾರಿಗೆ ಸ್ವಾಸ್ತ್ಯವು ದೊರೆಯಲಿಲ್ಲ? (ಬಿ) ಪವಿತ್ರ ಕಾಣಿಕೆ ಏನಾಗಿತ್ತು, ಮತ್ತು ಅದರಲ್ಲಿ ಏನು ಸೇರಿತ್ತು?
9 ಕೊನೆಯದಾಗಿ, ಯೆಹೆಜ್ಕೇಲನ ದರ್ಶನದಲ್ಲಿ ಇಸ್ರಾಯೇಲ್ ದೇಶದ ಒಂದು ಮೇಲ್ನೋಟವು ಒಳಗೂಡಿತ್ತು. ಅದು ವಿಭಾಗಿಸಲ್ಪಟ್ಟು, ಪ್ರತಿಯೊಂದು ಕುಲಕ್ಕೆ ಒಂದೊಂದು ಭಾಗವು ಹಂಚಲ್ಪಡಲಿಕ್ಕಿತ್ತು. ಪ್ರಭುವಿಗೂ ಒಂದು ಸ್ವಾಸ್ತ್ಯವು ದೊರೆಯಲಿತ್ತು. ಆದರೆ ಯಾಜಕರಿಗೆ ಅದು ದೊರೆಯುತ್ತಿರಲಿಲ್ಲ, ಏಕೆಂದರೆ “ನಾನೇ ಅವರ ಸ್ವಾಸ್ತ್ಯ” ಎಂದು ಯೆಹೋವನು ಹೇಳಿದನು. (ಯೆಹೆಜ್ಕೇಲ 44:10, 28; ಅರಣ್ಯಕಾಂಡ 18:20) ಪ್ರಭುವಿನ ಸ್ವಾಸ್ತ್ಯದ ಭಾಗವು, ಪವಿತ್ರ ಕಾಣಿಕೆಯೆಂದು ಕರೆಯಲ್ಪಟ್ಟ ವಿಶೇಷ ಕ್ಷೇತ್ರದ ಉಭಯ ಪಾರ್ಶ್ವಗಳಲ್ಲಿರುವುದೆಂದು ಆ ದರ್ಶನವು ತೋರಿಸಿತು. ಇದು ಮೂರು ಭಾಗಗಳಾಗಿ ವಿಭಾಗಿಸಲ್ಪಟ್ಟ ಒಂದು ಚಚ್ಚೌಕ ಭೂಭಾಗವಾಗಿತ್ತು. ಮೇಲಿನ ಭಾಗ ಪಶ್ಚಾತ್ತಾಪಪಟ್ಟ ಲೇವಿಯರಿಗಾಗಿ, ನಡುವಣ ಭಾಗ ಯಾಜಕರಿಗಾಗಿ, ಮತ್ತು ಕೆಳಗಿನ ಭಾಗ ನಗರ ಹಾಗೂ ಅದರ ಫಲವತ್ತಾದ ಪ್ರದೇಶಕ್ಕಾಗಿತ್ತು. ಯೆಹೋವನ ದೇವಾಲಯವು, ಚಚ್ಚೌಕ ಕ್ಷೇತ್ರದ ಮಧ್ಯದಲ್ಲಿ ಯಾಜಕರ ಭೂಭಾಗದಲ್ಲಿರಲಿತ್ತು.—ಯೆಹೆಜ್ಕೇಲ 45:1-7.
10. ದೇಶದ ವಿಭಾಗಿಸುವಿಕೆಯ ಕುರಿತಾದ ಪ್ರವಾದನೆಯು, ಗಡೀಪಾರುಮಾಡಲ್ಪಟ್ಟಿದ್ದ ನಂಬಿಗಸ್ತ ಯೆಹೂದ್ಯರಿಗೆ ಏನನ್ನು ಅರ್ಥೈಸಿತು?
10 ಇವೆಲ್ಲವು ಆ ದೇಶಭ್ರಷ್ಟರನ್ನು ಎಷ್ಟು ಪ್ರೋತ್ಸಾಹಿಸಿದ್ದಿರಬೇಕು! ದೇಶದ ಸ್ವಾಸ್ತ್ಯದ ಆಶ್ವಾಸನೆಯು ಪ್ರತಿಯೊಂದು ಕುಟುಂಬಕ್ಕೆ ಕೊಡಲ್ಪಟ್ಟಿತ್ತು. (ಹೋಲಿಸಿರಿ ಮೀಕ 4:4.) ಅಲ್ಲಿ ಶುದ್ಧಾರಾಧನೆಯು ಒಂದು ಉನ್ನತವಾದ, ಕೇಂದ್ರಸ್ಥಾನವನ್ನು ಹೊಂದಲಿತ್ತು. ಮತ್ತು ಪ್ರಭುವು, ಆ ಯಾಜಕರಂತೆ, ಜನರಿಂದ ಕಾಣಿಕೆಯಾಗಿ ಅರ್ಪಿಸಲ್ಪಟ್ಟ ಭೂಮಿಯಲ್ಲಿ ಜೀವಿಸಲಿದ್ದನೆಂಬುದನ್ನು ಯೆಹೆಜ್ಕೇಲನ ದರ್ಶನದಲ್ಲಿ ಗಮನಿಸಿರಿ. (ಯೆಹೆಜ್ಕೇಲ 45:16) ಆದುದರಿಂದ ಪುನರ್ಸ್ಥಾಪಿತ ದೇಶದಲ್ಲಿ, ಯೆಹೋವನು ಯಾರನ್ನು ತಮ್ಮ ಮುಂದಾಳುಗಳಾಗಿ ನೇಮಿಸಿದನೋ ಅವರ ಕೆಲಸಕ್ಕೆ ಜನರು ನೆರವನ್ನು ನೀಡಿ, ಅವರ ಮಾರ್ಗದರ್ಶನದೊಂದಿಗೆ ಸಹಕರಿಸುತ್ತಾ ಅವರನ್ನು ಬೆಂಬಲಿಸಬೇಕಿತ್ತು. ಒಟ್ಟಿನಲ್ಲಿ ಈ ದೇಶವು, ಸಂಘಟನೆ, ಸಹಕಾರ ಮತ್ತು ಸುರಕ್ಷೆಯೇ ಮೂರ್ತಿವೆತ್ತಂತೆ ಕಂಡುಬಂತು.
11, 12. (ಎ) ಯೆಹೋವನು ತನ್ನ ಜನರ ಪುನಸ್ಸ್ಥಾಪಿತ ಸ್ವದೇಶವನ್ನು ಆಶೀರ್ವದಿಸುವೆನೆಂದು ಪ್ರವಾದನಾತ್ಮಕವಾಗಿ ಹೇಗೆ ಆಶ್ವಾಸನೆಕೊಡುತ್ತಾನೆ? (ಬಿ) ನದಿಯ ದಡಗಳಲ್ಲಿದ್ದ ವೃಕ್ಷಗಳು ಏನನ್ನು ಚಿತ್ರಿಸಿದವು?
11 ಯೆಹೋವನು ಅವರ ದೇಶವನ್ನು ಆಶೀರ್ವದಿಸಲಿದ್ದನೋ? ಪ್ರವಾದನೆಯು ಈ ಪ್ರಶ್ನೆಯನ್ನು ಹೃತ್ಪೂರ್ವಕವಾದ ವರ್ಣನೆಯೊಂದಿಗೆ ಉತ್ತರಿಸುತ್ತದೆ. ದೇವಾಲಯದಿಂದ ಒಂದು ಪ್ರವಾಹವು ಹೊರಡುತ್ತದೆ, ಹರಿದುಹೋದಂತೆ ಅಗಲವಾಗುತ್ತಾ ಬಂದು, ಮೃತ ಸಮುದ್ರವನ್ನು ಸೇರುವಷ್ಟರೊಳಗೆ ಒಂದು ತೊರೆಯಾಗಿ ಬಿಡುತ್ತದೆ. ಅಲ್ಲಿ ಅದು ನಿರ್ಜೀವ ನೀರುಗಳನ್ನು ಪುನರುಜ್ಜೀವಿಸುತ್ತದೆ, ಮತ್ತು ದಡದ ಉದ್ದಕ್ಕೂ ಮೀನುಗಾರಿಕೆಯು ಸಮೃದ್ಧವಾಗುತ್ತದೆ. ನದಿಯ ದಡಗಳಲ್ಲಿ ಅನೇಕಾನೇಕ ವೃಕ್ಷಗಳು ವರ್ಷವಿಡೀ ಫಲ ಕೊಡುತ್ತಾ, ಪೋಷಣೆಯನ್ನೂ ಗುಣಪಡಿಸುವಿಕೆಯನ್ನೂ ಒದಗಿಸುತ್ತವೆ.—ಯೆಹೆಜ್ಕೇಲ 47:1-12.
12 ದೇಶಭ್ರಷ್ಟರಿಗಾದರೊ ಈ ವಾಗ್ದಾನವು, ಅವರ ಅಚ್ಚುಮೆಚ್ಚಿನ ಆರಂಭದ ಪುನರ್ಸ್ಥಾಪನಾ ಪ್ರವಾದನೆಗಳನ್ನು ಪ್ರತಿಧ್ವನಿಸಿ, ಅವುಗಳನ್ನು ದೃಢೀಕರಿಸಿತು. ಇಸ್ರಾಯೇಲು ಪ್ರಮೋದವನ್ಯ ಪರಿಸ್ಥಿತಿಗಳಲ್ಲಿ ಪುನರ್ಸ್ಥಾಪಿಸಲ್ಪಟ್ಟು, ಪುನಃ ಜನವಸತಿಯಿಂದ ತುಂಬುವುದೆಂದು ಯೆಹೋವನ ಪ್ರೇರಿತ ಪ್ರವಾದಿಗಳು ಒಂದಕ್ಕಿಂತ ಹೆಚ್ಚು ಬಾರಿ ವರ್ಣಿಸಿದ್ದರು. ಬರಡು ಪ್ರದೇಶಗಳು ಸಜೀವಭರಿತವಾಗುವವು ಎಂಬುದು ಪದೇ ಪದೇ ಸೂಚಿಸಲ್ಪಡುತ್ತಿದ್ದ ಪ್ರವಾದನಾ ಮುಖ್ಯ ವಿಷಯವಾಗಿತ್ತು. (ಯೆಶಾಯ 35:1, 6, 7; 51:3; ಯೆಹೆಜ್ಕೇಲ 36:35; 37:1-14) ಆದುದರಿಂದ, ಯೆಹೋವನ ಜೀವದಾಯಕ ಆಶೀರ್ವಾದಗಳು ಪುನರ್ಸ್ಥಾಪಿತ ದೇವಾಲಯದಿಂದ ಒಂದು ನದಿಯೋಪಾದಿ ಹರಿಯುವುದನ್ನು ಜನರು ನಿರೀಕ್ಷಿಸಸಾಧ್ಯವಿತ್ತು. ಪರಿಣಾಮವಾಗಿ, ಆತ್ಮಿಕವಾಗಿ ಮೃತಗೊಂಡ ಒಂದು ಜನಾಂಗವು ಪುನರುಜ್ಜೀವನ ಹೊಂದಲಿತ್ತು. ಪುನರ್ಸ್ಥಾಪಿತ ಜನರು ಎದ್ದುಕಾಣುವ ಆತ್ಮಿಕ ಪುರುಷರಿಂದ ಆಶೀರ್ವದಿಸಲ್ಪಡಲಿದ್ದರು. ಆ ಪುರುಷರು, ದಾರ್ಶನಿಕ ನದೀದಡಗಳ ಉದ್ದಕ್ಕೂ ಇದ್ದ ವೃಕ್ಷಗಳಂತೆ ನೀತಿವಂತರೂ ದೃಢತೆಯುಳ್ಳವರೂ, ಧ್ವಂಸಗೊಂಡ ದೇಶವನ್ನು ಪುನಃ ಕಟ್ಟುವುದರಲ್ಲಿ ನಾಯಕತ್ವವನ್ನು ವಹಿಸುವವರೂ ಆಗಿರಲಿದ್ದರು. ಯೆಶಾಯನು ಸಹ, “ಪುರಾತನಕಾಲದಲ್ಲಿ ಹಾಳಾದ ನಿವೇಶನಗಳನ್ನು ತಿರುಗಿ ಕಟ್ಟುವ” “ನೀತಿ ವೃಕ್ಷಗಳ” ಕುರಿತು ಬರೆದಿದ್ದನು.—ಯೆಶಾಯ 61:3, 4.
ದರ್ಶನವು ಯಾವಾಗ ನೆರವೇರುತ್ತದೆ?
13. (ಎ) ಯೆಹೋವನು ತನ್ನ ಪುನಸ್ಥಾಪಿತ ಜನರನ್ನು ‘ನೀತಿವೃಕ್ಷಗಳೊಂದಿಗೆ’ ಆಶೀರ್ವದಿಸಿದ್ದು ಯಾವ ಅರ್ಥದಲ್ಲಿ? (ಬಿ) ಮೃತ ಸಮುದ್ರದ ಕುರಿತಾದ ಪ್ರವಾದನೆಯು ಹೇಗೆ ನೆರವೇರಿಸಲ್ಪಟ್ಟಿತು?
13 ಸ್ವದೇಶಕ್ಕೆ ಹಿಂದಿರುಗಿ ಬಂದ ದೇಶಭ್ರಷ್ಟ ಜನರು ನಿರಾಶರಾದರೋ? ಖಂಡಿತವಾಗಿಯೂ ಇಲ್ಲ! ಪುನರ್ಸ್ಥಾಪಿತ ಉಳಿಕೆಯವರು ಸಾ.ಶ.ಪೂ. 537ರಲ್ಲಿ ತಮ್ಮ ಅಚ್ಚುಮೆಚ್ಚಿನ ಸ್ವದೇಶಕ್ಕೆ ಹಿಂದಿರುಗಿ ಬಂದರು. ಸಕಾಲದಲ್ಲಿ, ಶಾಸ್ತ್ರಿಯಾದ ಎಜ್ರ, ಪ್ರವಾದಿಗಳಾದ ಹಗ್ಗಾಯ ಹಾಗೂ ಜೆಕರ್ಯ, ಮತ್ತು ಮಹಾಯಾಜಕ ಯೆಹೋಶುವರಂತಹ “ನೀತಿವೃಕ್ಷಗಳ” ಮಾರ್ಗದರ್ಶನದ ಕೆಳಗೆ ದೀರ್ಘ ಸಮಯದಿಂದ ಹಾಳುಬಿದ್ದಿದ್ದ ನಿವೇಶನಗಳು ಪುನಃ ಕಟ್ಟಲ್ಪಟ್ಟವು. ದೃಷ್ಟಾಂತಕ್ಕಾಗಿ, ಪ್ರಭುಗಳಾದ ನೆಹೆಮೀಯ ಮತ್ತು ಯೆರುಬ್ಬಾಬೆಲರು, ದೇಶವನ್ನು ನೀತಿನ್ಯಾಯಗಳಿಂದ ಆಳಿದರು. ಯೆಹೋವನ ಆಲಯವು ಪುನರ್ಸ್ಥಾಪಿಸಲ್ಪಟ್ಟಿತು, ಮತ್ತು ಜೀವಕ್ಕಾಗಿರುವ ಆತನ ಒದಗಿಸುವಿಕೆಗಳು—ಆತನ ಒಡಂಬಡಿಕೆಗನುಸಾರ ಜೀವಿಸುವುದರಿಂದ ಬರುವ ಆಶೀರ್ವಾದಗಳು—ಪುನಃ ಪ್ರವಹಿಸತೊಡಗಿದವು. (ಧರ್ಮೋಪದೇಶಕಾಂಡ 30:19; ಯೆಶಾಯ 48:17-20) ಒಂದು ಆಶೀರ್ವಾದವು ಜ್ಞಾನವಾಗಿತ್ತು. ಯಾಜಕತ್ವವು ಸೇವೆಗೆ ಪುನರ್ಸ್ಥಾಪಿಸಲ್ಪಟ್ಟಿತು, ಮತ್ತು ಯಾಜಕರು ಜನರಿಗೆ ಧರ್ಮಶಾಸ್ತ್ರವನ್ನು ಬೋಧಿಸಿದರು. (ಮಲಾಕಿಯ 2:7) ಫಲಿತಾಂಶವಾಗಿ, ಜನರು ಆತ್ಮಿಕ ಚೈತನ್ಯವನ್ನು ಪಡೆದುಕೊಂಡರು ಮತ್ತು ಪುನಃ ಯೆಹೋವನ ಫಲಪ್ರದ ಸೇವಕರಾದರು. ಇದು ಮೃತ ಸಮುದ್ರವು ವಾಸಿಯಾಗಿ ಒಂದು ಫಲದಾಯಕ ಮೀನುಗಾರಿಕೆಯನ್ನು ಉತ್ಪಾದಿಸಿದ ವಿಷಯದಿಂದ ಚಿತ್ರಿಸಲ್ಪಟ್ಟಿದೆ.
14. ಬಬಿಲೋನಿನಿಂದ ಯೆಹೂದ್ಯರು ಹಿಂದಿರುಗಿದ ನಂತರ ಏನು ಸಂಭವಿಸಿತೊ ಅದನ್ನೂ ಮೀರಿಸಿದಂತಹ ನೆರವೇರಿಕೆಯನ್ನು ಯೆಹೆಜ್ಕೇಲನ ಪ್ರವಾದನೆಯು ಪಡೆಯಲಿತ್ತು ಏಕೆ?
14 ಈ ಘಟನೆಗಳು ಯೆಹೆಜ್ಕೇಲನ ದರ್ಶನದ ಏಕಮಾತ್ರ ನೆರವೇರಿಕೆಯಾಗಿದ್ದವೊ? ಇಲ್ಲ, ಎಷ್ಟೋ ಮಹತ್ತಾದ ಒಂದು ವಿಷಯವು ಸೂಚಿಸಲ್ಪಟ್ಟಿದೆ. ಇದನ್ನು ಪರಿಗಣಿಸಿರಿ: ಯೆಹೆಜ್ಕೇಲನು ಕಂಡ ಆ ದೇವಾಲಯವು, ದರ್ಶನದಲ್ಲಿ ವರ್ಣಿಸಲ್ಪಟ್ಟ ಪ್ರಕಾರವೇ ನಿಜವಾಗಿ ಕಟ್ಟಲು ಸಾಧ್ಯವಿರಲಿಲ್ಲ. ಯೆಹೂದ್ಯರು ಆ ದರ್ಶನವನ್ನು ಗಂಭೀರವಾಗಿ ತೆಗೆದುಕೊಂಡು, ಅವುಗಳಲ್ಲಿ ಕೆಲವೊಂದು ವಿವರಗಳನ್ನು ಅಕ್ಷರಶಃವಾಗಿ ಅನ್ವಯಿಸಿಕೊಂಡದ್ದು ನಿಜ.b ಆದರೆ ಆ ದಾರ್ಶನಿಕ ಆಲಯವು ಎಷ್ಟು ದೊಡ್ಡದ್ದಾಗಿತ್ತೆಂದರೆ, ಹಿಂದಿನ ಆಲಯದ ನಿವೇಶನವಾದ ಮೊರೀಯ ಬೆಟ್ಟದಲ್ಲಿನ ಸ್ಥಳವು ಅದಕ್ಕೆ ತೀರ ಚಿಕ್ಕದಾಗುತ್ತಿತ್ತು. ಅಷ್ಟುಮಾತ್ರವಲ್ಲದೆ, ಯೆಹೆಜ್ಕೇಲನ ಆಲಯವು ಆ ನಗರದಲ್ಲಿರದೆ, ಅಲ್ಲಿಂದ ಸ್ವಲ್ಪ ದೂರದ ಒಂದು ಪ್ರತ್ಯೇಕ ಬಯಲಿನಲ್ಲಿತ್ತು. ಆದರೆ ಎರಡನೆಯ ದೇವಾಲಯವಾದರೋ ಹಿಂದಿನ ದೇವಾಲಯವು ನಿಂತಿದ್ದ ಸ್ಥಳದಲ್ಲೇ, ಯೆರೂಸಲೇಮಿನ ನಗರದಲ್ಲೇ ನಿರ್ಮಿಸಲ್ಪಟ್ಟಿತ್ತು. (ಎಜ್ರ 1:1, 2) ಅದಲ್ಲದೆ, ಅಕ್ಷರಶಃ ಯಾವ ನದಿಯಾದರೂ ಎಂದೂ ಯೆರೂಸಲೇಮಿನ ಆಲಯದಿಂದ ಹೊರಗೆ ಪ್ರವಹಿಸಿರಲಿಲ್ಲ. ಹೀಗೆ, ಪುರಾತನ ಇಸ್ರಾಯೇಲ್ಯರು ಯೆಹೆಜ್ಕೇಲನ ಪ್ರವಾದನೆಯ ಕೇವಲ ನಾಮಮಾತ್ರದ ನೆರವೇರಿಕೆಯನ್ನು ಕಂಡರು. ಆದುದರಿಂದ, ಹೆಚ್ಚು ಶ್ರೇಷ್ಠವಾದ, ಆತ್ಮಿಕ ನೆರವೇರಿಕೆ ಈ ದರ್ಶನಕ್ಕಿದೆ ಎಂಬುದು ಗೊತ್ತಾಗುತ್ತದೆ.
15. (ಎ) ಯೆಹೋವನ ಆತ್ಮಿಕ ಆಲಯವು ಯಾವಾಗ ಕಾರ್ಯರೂಪಕ್ಕೆ ಬಂತು? (ಬಿ) ಯೆಹೆಜ್ಕೇಲನ ದರ್ಶನವು, ಭೂಮಿಯ ಮೇಲೆ ಕ್ರಿಸ್ತನ ಜೀವಮಾನದಲ್ಲಿ ನೆರವೇರಲಿಲ್ಲವೆಂಬುದನ್ನು ಯಾವುದು ಸೂಚಿಸುತ್ತದೆ?
15 ಸ್ಪಷ್ಟವಾಗಿ, ಯೆಹೆಜ್ಕೇಲನ ದರ್ಶನದ ಮುಖ್ಯ ನೆರವೇರಿಕೆಯನ್ನು, ನಾವು ಯೆಹೋವನ ಮಹಾ ಆತ್ಮಿಕ ಆಲಯದಲ್ಲಿ ನೋಡಬೇಕಾಗಿದೆ. ಅದನ್ನು, ಇಬ್ರಿಯರಿಗೆ ಬರೆದ ಪುಸ್ತಕದಲ್ಲಿ ಪೌಲನು ಸವಿಸ್ತಾರವಾಗಿ ಚರ್ಚಿಸುತ್ತಾನೆ. ಆ ಆಲಯವು, ಸಾ.ಶ. 29ರಲ್ಲಿ ಯೇಸು ಕ್ರಿಸ್ತನು ಅದರ ಮಹಾ ಯಾಜಕನಾಗಿ ಅಭಿಷೇಕಿಸಲ್ಪಟ್ಟಾಗ ಕಾರ್ಯರೂಪಕ್ಕೆ ಬಂತು. ಆದರೆ ಯೆಹೆಜ್ಕೇಲನ ದರ್ಶನವು ಯೇಸುವಿನ ದಿನಗಳಲ್ಲಿ ನೆರವೇರಿತೊ? ಇಲ್ಲವೆಂಬುದು ಸ್ಪಷ್ಟ. ಮಹಾ ಯಾಜಕನೋಪಾದಿ ಯೇಸುವು, ಪ್ರಾಯಶ್ಚಿತ್ತ ದಿನದ ಪ್ರವಾದನಾ ಇಂಗಿತವನ್ನು, ತನ್ನ ದೀಕ್ಷಾಸ್ನಾನ, ತನ್ನ ಯಜ್ಞಾರ್ಪಿತ ಮರಣ, ಮತ್ತು ಅತಿ ಪರಿಶುದ್ಧ ಸ್ಥಾನವಾದ ಸ್ವರ್ಗವನ್ನು ಪ್ರವೇಶಿಸುವ ಮೂಲಕ ನೆರವೇರಿಸಿದನು. (ಇಬ್ರಿಯ 9:24) ಆದರೆ ಆಸಕ್ತಿಕರವಾಗಿ, ಯೆಹೆಜ್ಕೇಲನ ದರ್ಶನದಲ್ಲಿ ಮಹಾಯಾಜಕನ ಕುರಿತಾಗಲಿ ಪ್ರಾಯಶ್ಚಿತ್ತ ದಿನದ ಕುರಿತಾಗಲಿ ಒಂದೇ ಒಂದು ಹೇಳಿಕೆಯು ಕೊಡಲ್ಪಟ್ಟಿಲ್ಲ. ಹೀಗೆ ಈ ದರ್ಶನವು, ಸಾ.ಶ. ಒಂದನೆಯ ಶತಕದ ಕಡೆಗೆ ಕೈತೋರಿಸುತ್ತಿರಲಿಲ್ಲವೆಂದು ತೋರುತ್ತದೆ. ಹಾಗಾದರೆ ಅದು ಯಾವ ಕಾಲಾವಧಿಗೆ ಅನ್ವಯಿಸುತ್ತದೆ?
16. ಯೆಹೆಜ್ಕೇಲನ ದರ್ಶನದ ಹಿನ್ನೆಲೆಯು ನಮಗೆ ಇನ್ಯಾವ ಪ್ರವಾದನೆಯನ್ನು ನೆನಪಿಗೆ ತರುತ್ತದೆ, ಮತ್ತು ಯೆಹೆಜ್ಕೇಲನ ದರ್ಶನದ ಮುಖ್ಯ ನೆರವೇರಿಕೆಯ ಸಮಯವನ್ನು ವಿವೇಚಿಸುವಂತೆ ಇದು ನಮಗೆ ಹೇಗೆ ಸಹಾಯಮಾಡುತ್ತದೆ?
16 ಉತ್ತರಕ್ಕಾಗಿ ನಾವು ಆ ದರ್ಶನಕ್ಕೇ ಹಿಂತಿರುಗೋಣ. ಯೆಹೆಜ್ಕೇಲನು ಬರೆದುದು: “ಆತನು [ದೇವರು] ನನ್ನನ್ನು ಇಸ್ರಾಯೇಲ್ ದೇಶಕ್ಕೆ ತಂದು ಅತ್ಯುನ್ನತ ಪರ್ವತದ ಮೇಲೆ ಇಳಿಸಿದನೆಂದು ದೇವರ ದರ್ಶನದಲ್ಲಿ ನನಗೆ ಕಂಡುಬಂತು. ತೆಂಕಲಕಡೆಯಲ್ಲಿ ಆ ಪರ್ವತದ ಮೇಲೆ ಪಟ್ಟಣದಂತಿರುವ ಒಂದು ಕಟ್ಟಡವು ಕಾಣಿಸಿತು.” (ಯೆಹೆಜ್ಕೇಲ 40:2) ಈ ದರ್ಶನದ ಹಿನ್ನೆಲೆಯಾದ “ಅತ್ಯುನ್ನತ ಪರ್ವತವು” ಮೀಕ 4:1ನ್ನು ನಮ್ಮ ಜ್ಞಾಪಕಕ್ಕೆ ತರುತ್ತದೆ: “ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು ಎಲ್ಲಾ ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವದು; ಆಗ ಜನಾಂಗಗಳು ಅದರ ಕಡೆಗೆ ಪ್ರವಾಹಗಳಂತೆ ಬರುವವು.” ಈ ಪ್ರವಾದನೆಯು ಯಾವಾಗ ನೆರವೇರುತ್ತದೆ? ಜನಾಂಗಗಳು ಇನ್ನೂ ಸುಳ್ಳು ದೇವತೆಗಳನ್ನು ಆರಾಧಿಸುತ್ತಿರುವಾಗಲೇ ಇದು ಆರಂಭಗೊಳ್ಳುತ್ತದೆಂದು ಮೀಕ 4:5 ತೋರಿಸುತ್ತದೆ. ವಾಸ್ತವದಲ್ಲಿ ನಮ್ಮ ಸ್ವಂತ ಸಮಯದಲ್ಲಿಯೇ, ಈ “ಅಂತ್ಯಕಾಲದಲ್ಲಿ”ಯೇ ಶುದ್ಧಾರಾಧನೆಯು ಉನ್ನತೋನ್ನತವಾಗಿ ಬೆಳೆದು, ದೇವರ ಸೇವಕರ ಜೀವಿತಗಳಲ್ಲಿ ಅದರ ಯೋಗ್ಯ ಸ್ಥಾನಕ್ಕೆ ಪುನರ್ಸ್ಥಾಪಿಸಲ್ಪಟ್ಟಿದೆ.
17. ಮಲಾಕಿಯ 3:1-5ರಲ್ಲಿರುವ ಪ್ರವಾದನೆಯು, ಯೆಹೆಜ್ಕೇಲನ ದರ್ಶನದಲ್ಲಿನ ಆಲಯವು ಯಾವಾಗ ಶುದ್ಧೀಕರಿಸಲ್ಪಟ್ಟಿತ್ತೆಂಬುದನ್ನು ನಿರ್ಧರಿಸಲು ಹೇಗೆ ಸಹಾಯಮಾಡುತ್ತದೆ?
17 ಈ ಪುನರ್ಸ್ಥಾಪನೆಯನ್ನು ಯಾವುದು ಸಾಧ್ಯಮಾಡಿತು? ಯೆಹೆಜ್ಕೇಲನ ದರ್ಶನದ ಅತ್ಯಂತ ಗಮನಾರ್ಹ ಘಟನೆಯಲ್ಲಿ, ಯೆಹೋವನು ಆಲಯಕ್ಕೆ ಬಂದು ತನ್ನ ಆಲಯವನ್ನು ವಿಗ್ರಹಾರಾಧನೆಯಿಂದ ಶುದ್ಧೀಕರಿಸಬೇಕೆಂದು ಪಟ್ಟುಹಿಡಿಯುವುದನ್ನು ಜ್ಞಾಪಿಸಿಕೊಳ್ಳಿರಿ. ದೇವರ ಆತ್ಮಿಕ ಆಲಯವು ಯಾವಾಗ ಶುದ್ಧೀಕರಿಸಲ್ಪಟ್ಟಿತ್ತು? ಮಲಾಕಿಯ 3:1-5ರಲ್ಲಿ ದಾಖಲೆಯಾದ ಮಾತುಗಳಲ್ಲಿ, ತನ್ನ “ಒಡಂಬಡಿಕೆಯ ದೂತ”ನಾದ ಯೇಸು ಕ್ರಿಸ್ತನೊಂದಿಗೆ ತಾನು “ತನ್ನ ಆಲಯಕ್ಕೆ ಬರುವ” ಒಂದು ಸಮಯದ ಕುರಿತು ಯೆಹೋವನು ಮುಂತಿಳಿಸುತ್ತಾನೆ. ಯಾವ ಉದ್ದೇಶಕ್ಕಾಗಿ? “ಆತನು ಅಕ್ಕಸಾಲಿಗನ ಬೆಂಕಿಗೂ ಅಗಸನ ಚೌಳಿಗೂ ಸಮಾನನಾಗಿದ್ದಾನೆ.” ಈ ಶುದ್ಧೀಕರಣವು ಮೊದಲನೆಯ ಲೋಕ ಯುದ್ಧದ ಸಮಯದಲ್ಲಿ ಆರಂಭಿಸಿತು. ಇದರ ಫಲಿತಾಂಶವೇನು? ಯೆಹೋವನು ತನ್ನ ಆಲಯದಲ್ಲಿ ನಿವಾಸಿಸಿದ್ದಾನೆ ಮತ್ತು 1919ರಂದಿನಿಂದ ಮುಂದಕ್ಕೆ ತನ್ನ ಜನರ ಆತ್ಮಿಕ ದೇಶವನ್ನು ಆಶೀರ್ವದಿಸಿದ್ದಾನೆ. (ಯೆಶಾಯ 66:8) ಹೀಗಿರಲಾಗಿ ಯೆಹೆಜ್ಕೇಲನ ಆಲಯದ ಪ್ರವಾದನೆಯು, ಈ ಕಡೆಯ ದಿವಸಗಳಲ್ಲಿ ಒಂದು ಮಹತ್ವದ ನೆರವೇರಿಕೆಯನ್ನು ಕಾಣುತ್ತದೆಂದು ನಾವು ತೀರ್ಮಾನಿಸಬಲ್ಲೆವು.
18. ಆಲಯದ ದರ್ಶನವು ಯಾವಾಗ ತನ್ನ ಕೊನೆಯ ನೆರವೇರಿಕೆಯನ್ನು ಪಡೆಯುವುದು?
18 ಪುನರ್ಸ್ಥಾಪನೆಯ ಕುರಿತಾದ ಬೇರೆ ಪ್ರವಾದನೆಗಳಂತೆ, ಯೆಹೆಜ್ಕೇಲನ ದರ್ಶನದ ಇನ್ನೊಂದು ಕೊನೆಯ ನೆರವೇರಿಕೆಯು ಪ್ರಮೋದವನದಲ್ಲಿ ಆಗಲಿದೆ. ಆ ಸಮಯದಲ್ಲಿ ಮಾತ್ರ ಸಹೃದಯದ ಮಾನವಕುಲವು ದೇವರ ಆಲಯದ ಏರ್ಪಾಡಿನ ಪೂರ್ಣ ಪ್ರಯೋಜನಗಳನ್ನು ಪಡೆದುಕೊಳ್ಳುವುದು. ಆಗ ಕ್ರಿಸ್ತನು ತನ್ನ 1,44,000 ಮಂದಿ ಸ್ವರ್ಗೀಯ ಯಾಜಕರ ಜೊತೆಯಲ್ಲಿ, ತನ್ನ ಪ್ರಾಯಶ್ಚಿತ್ತ ಯಜ್ಞದ ಬೆಲೆಯನ್ನು ಕಾರ್ಯರೂಪಕ್ಕೆ ತರುವನು. ಕ್ರಿಸ್ತನ ಆಳ್ವಿಕೆಯ ವಿಧೇಯ ಮಾನವ ಪ್ರಜೆಗಳೆಲ್ಲರೂ ಪರಿಪೂರ್ಣತೆಯನ್ನು ಪಡೆಯುವರು. (ಪ್ರಕಟನೆ 20:5, 6) ಆದರೂ ಪ್ರಮೋದವನವು ಯೆಹೆಜ್ಕೇಲನ ದರ್ಶನದ ನೆರವೇರಿಕೆಯ ಪ್ರಧಾನ ಸಮಯವಾಗಿರಲಾರದು. ಏಕೆ ಸಾಧ್ಯವಿಲ್ಲ?
ದರ್ಶನವು ನಮ್ಮ ದಿನದ ಮೇಲೆಯೇ ಕೇಂದ್ರೀಕರಿಸುತ್ತದೆ
19, 20. ದರ್ಶನದ ಮುಖ್ಯ ನೆರವೇರಿಕೆಯು, ಪ್ರಮೋದವನದಲ್ಲಿ ಆಗದೆ ಇಂದು ಏಕೆ ಸಂಭವಿಸಬೇಕು?
19 ವಿಗ್ರಹಾರಾಧನೆ ಮತ್ತು ಆತ್ಮಿಕ ಜಾರತ್ವದಿಂದ ಶುದ್ಧೀಕರಿಸಲ್ಪಡಬೇಕಾಗಿದ್ದ ಒಂದು ಆಲಯವನ್ನು ಯೆಹೆಜ್ಕೇಲನು ಕಂಡನು. (ಯೆಹೆಜ್ಕೇಲ 43:7-9) ನಿಶ್ಚಯವಾಗಿಯೂ ಇದು ಪ್ರಮೋದವನದಲ್ಲಿನ ಯೆಹೋವನ ಆರಾಧನೆಗೆ ಅನ್ವಯವಾಗುವುದಿಲ್ಲ. ಅಷ್ಟುಮಾತ್ರವಲ್ಲದೆ ದರ್ಶನದ ಯಾಜಕರು, ಅಭಿಷಿಕ್ತ ಯಾಜಕಯೋಗ್ಯ ವರ್ಗವು ಇನ್ನೂ ಭೂಮಿಯ ಮೇಲಿರುವಾಗಲೇ ಚಿತ್ರಿಸುತ್ತಾರೆ ಹೊರತು ಅವರು ಸ್ವರ್ಗಕ್ಕೆ ಪುನರುತ್ಥಾನವಾದ ಬಳಿಕ ಅಥವಾ ಸಹಸ್ರ ವರ್ಷದಾಳಿಕೆಯ ಸಮಯದಲ್ಲಿ ಚಿತ್ರಿಸುವುದಿಲ್ಲ. ಯಾಕೆ? ಯಾಜಕರು ಒಳಗಣ ಪ್ರಾಕಾರದಲ್ಲಿ ಸೇವೆಮಾಡುತ್ತಿರುವುದಾಗಿ ಚಿತ್ರಿಸಲ್ಪಟ್ಟಿರುವುದನ್ನು ಗಮನಿಸಿರಿ. ಕಾವಲಿನಬುರುಜು ಪತ್ರಿಕೆಯ ಹಿಂದಿನ ಸಂಚಿಕೆಗಳು ತೋರಿಸಿರುವುದೇನೆಂದರೆ, ಈ ಪ್ರಾಕಾರವು ಕ್ರಿಸ್ತನ ಉಪಯಾಜಕರು ಇನ್ನೂ ಭೂಮಿಯಲ್ಲಿರುವಾಗಲೇ ಅವರಿಗಿರುವ ಅಸದೃಶ ಆತ್ಮಿಕ ನಿಲುವನ್ನು ಚಿತ್ರಿಸುತ್ತದೆ.c ದರ್ಶನವು ಯಾಜಕರ ಅಪರಿಪೂರ್ಣತೆಗಳನ್ನು ಸಹ ಒತ್ತಿಹೇಳುತ್ತದೆಂಬುದನ್ನು ಗಮನಿಸಿರಿ. ಅವರು ತಮ್ಮ ಸ್ವಂತ ಪಾಪಗಳಿಗಾಗಿ ಯಜ್ಞಗಳನ್ನು ಅರ್ಪಿಸುವಂತೆ ಕೇಳಿಕೊಳ್ಳಲ್ಪಟ್ಟಿದ್ದಾರೆ. ಆತ್ಮಿಕವಾಗಿ ಮತ್ತು ನೈತಿಕವಾಗಿ ಅಶುದ್ಧರಾಗಿ ಪರಿಣಮಿಸುವ ಅಪಾಯದ ಕುರಿತೂ ಅವರು ಎಚ್ಚರಿಸಲ್ಪಟ್ಟಿದ್ದಾರೆ. ಆದುದರಿಂದ, “ತುತೂರಿಯು ಊದಲಾಗಿ ಸತ್ತವರು ನಿರ್ಲಯರಾಗಿ ಎಬ್ಬಿಸಲ್ಪಡುವರು” ಎಂದು ಅಪೊಸ್ತಲ ಪೌಲನು ಯಾರ ಕುರಿತಾಗಿ ಬರೆದನೊ ಆ ಪುನರುತ್ಥಿತ ಅಭಿಷಿಕ್ತರನ್ನು ಅವರು ಚಿತ್ರಿಸುವುದಿಲ್ಲ. (1 ಕೊರಿಂಥ 15:52, ಓರೆಅಕ್ಷರಗಳು ನಮ್ಮವು; ಯೆಹೆಜ್ಕೇಲ 44:21, 22, 25, 27) ಆ ದರ್ಶನದಲ್ಲಿನ ಯಾಜಕರು ಜನರೊಂದಿಗೆ ಬೆರೆಯುತ್ತಾ ಅವರಿಗೆ ನೇರವಾಗಿ ಸೇವೆಸಲ್ಲಿಸುತ್ತಾರೆ. ಆದರೆ ಪ್ರಮೋದವನದಲ್ಲಿ ಹಾಗಿರಲು ಸಾಧ್ಯವಿಲ್ಲ, ಯಾಕಂದರೆ ಆಗ ಯಾಜಕವರ್ಗದವರು ಸ್ವರ್ಗದಲ್ಲಿರುವರು. ಹೀಗಿರುವುದರಿಂದ ದರ್ಶನವು, ಅಭಿಷಿಕ್ತರು ಇಂದು ಭೂಮಿಯಲ್ಲಿರುವ “ಮಹಾಸಮೂಹ”ದೊಂದಿಗೆ ನಿಕಟವಾಗಿ ಕೆಲಸಮಾಡುವ ವಿಧಾನದ ಒಂದು ಉತ್ತಮ ಚಿತ್ರವನ್ನು ಒದಗಿಸುತ್ತದೆ.—ಪ್ರಕಟನೆ 7:9; ಯೆಹೆಜ್ಕೇಲ 42:14.
20 ಹೀಗೆ, ಯೆಹೆಜ್ಕೇಲನ ಆಲಯದ ದರ್ಶನವು, ಇಂದು ನೆರವೇರಿಕೆಯನ್ನು ಪಡೆಯುತ್ತಿರುವ ಆತ್ಮಿಕ ಶುದ್ಧೀಕರಣದ ಹಿತಕರವಾದ ಪರಿಣಾಮಗಳ ಮುನ್ಸೂಚನೆಯನ್ನು ಕೊಡುತ್ತದೆ. ಆದರೆ ಅದು ನಿಮಗೆ ಯಾವ ಅರ್ಥದಲ್ಲಿದೆ? ಇದು ಕೇವಲ ಒಂದು ಭಾವನಾರೂಪದ ದೇವತಾಶಾಸ್ತ್ರದ ಒಗಟಲ್ಲ. ಏಕಮಾತ್ರ ಸತ್ಯ ದೇವರಾದ ಯೆಹೋವನಿಗೆ ನೀವು ಸಲ್ಲಿಸುವ ದಿನನಿತ್ಯದ ಆರಾಧನೆಗೆ ಅದು ಬಹಳವಾಗಿ ಸಂಬಂಧಿಸುತ್ತದೆ. ಅದು ಹೇಗೆಂಬುದನ್ನು ನಮ್ಮ ಮುಂದಿನ ಲೇಖನದಲ್ಲಿ ನಾವು ನೋಡುವೆವು.
[ಅಧ್ಯಯನ ಪ್ರಶ್ನೆಗಳು]
a ಇದು ಯೆಹೆಜ್ಕೇಲನ ಮನಸ್ಸನ್ನು ವೈಯಕ್ತಿಕವಾಗಿ ಸ್ಪರ್ಶಿಸಿದ್ದಿರಬಹುದು ಏಕಂದರೆ ಅವನೇ ಚಾದೋಕನ ಯಾಜಕಯೋಗ್ಯ ಕುಟುಂಬದವನೆಂದು ಹೇಳಲಾಗಿದೆ.
b ಉದಾಹರಣೆಗಾಗಿ, ಪ್ರಾಚೀನ ಮಿಷ್ನ ಸೂಚಿಸುವುದೇನೆಂದರೆ, ಪುನಸ್ಥಾಪಿಸಲ್ಪಟ್ಟ ಆಲಯದಲ್ಲಿನ ವೇದಿ, ಆಲಯದ ದ್ವಿಬಾಗಿಲಿನ ಕದಗಳು, ಮತ್ತು ಅಡಿಗೆಮಾಡುವ ಸ್ಥಳಗಳು ಯೆಹೆಜ್ಕೇಲನ ದರ್ಶನಕ್ಕೆ ಹೊಂದಿಕೆಯಾಗುವ ರೀತಿಯಲ್ಲಿ ಕಟ್ಟಲ್ಪಟ್ಟವು.
ನಿಮಗೆ ನೆನಪಿದೆಯೊ?
◻ ಆಲಯ ಮತ್ತು ಅದರ ಯಾಜಕತ್ವದ ಕುರಿತಾದ ಯೆಹೆಜ್ಕೇಲನ ದರ್ಶನದ ಆರಂಭದ ನೆರವೇರಿಕೆಯು ಯಾವುದಾಗಿತ್ತು?
◻ ದೇಶದ ಹಂಚುವಿಕೆಯ ಕುರಿತಾದ ಯೆಹೆಜ್ಕೇಲನ ದರ್ಶನದ ಆರಂಭದ ನೆರವೇರಿಕೆ ಹೇಗಿತ್ತು?
◻ ಪ್ರಾಚೀನ ಇಸ್ರಾಯೇಲಿನ ಪುನರ್ಸ್ಥಾಪನೆಯಾದಾಗ, ಯಾರು ನಂಬಿಗಸ್ತ ಪ್ರಭುಗಳಾಗಿದ್ದರು, ಮತ್ತು ‘ನೀತಿವೃಕ್ಷಗಳು’ ಯಾರಾಗಿದ್ದರು?
◻ ಯೆಹೆಜ್ಕೇಲನ ಆಲಯ ದರ್ಶನವು, ಕಡೇ ದಿವಸಗಳಲ್ಲಿ ತನ್ನ ಮುಖ್ಯ ನೆರವೇರಿಕೆಯನ್ನು ಹೇಗೆ ಪಡೆಯುವುದು?