ಕೋಪವು ನಿಮ್ಮನ್ನು ಮುಗ್ಗರಿಸದಂತೆ ಎಚ್ಚರವಹಿಸಿರಿ
“ದೀರ್ಘವಾಗಿ ಉಸಿರೆಳೆದುಕೊಳ್ಳಿ!” “ಹತ್ತರ ವರೆಗೆ ಎಣಿಸಿ!” “ನಿಮ್ಮ ತುಟಿಕಚ್ಚಿ ತಾಳಿಕೊಳ್ಳಿ!” ಈ ವಾಕ್ಸರಣಿಗಳು ನಿಮಗೆ ಚಿರಪರಿಚಿತವಾಗಿವೆಯೊ? ನಿಮ್ಮ ಆಂತರಿಕ ತಳಮಳವನ್ನು ಶಾಂತಗೊಳಿಸಲು ನಿಮಗೆ ನೀವೇ ಇವುಗಳನ್ನು ಹೇಳಿಕೊಂಡಿದ್ದಿರಬಹುದು. ಕೆಲವರು, ಕೋಪದಿಂದ ಸಿಡಿದೇಳುವ ಪರಿಸ್ಥಿತಿಯನ್ನು ತಡೆಗಟ್ಟಲು ಹೊರಗೆ ತಿರುಗಾಡಲು ಹೋಗುತ್ತಾರೆ. ಇವು ಕೋಪವನ್ನು ನಿಗ್ರಹಿಸಿ, ಇತರರೊಂದಿಗೆ ಒಳ್ಳೆಯ ಸಂಬಂಧಗಳನ್ನು ಕಾಪಾಡಿಕೊಳ್ಳಲು ಸಹಾಯಮಾಡುವ ಸರಳವಾದ ಹೆಜ್ಜೆಗಳು.
ಆದರೆ ಇತ್ತೀಚಿನ ವರ್ಷಗಳಲ್ಲಿ, ಕೋಪವನ್ನು ನಿಯಂತ್ರಿಸಿ, ಅದುಮಿಡಬೇಕೊ ಇಲ್ಲವೊ ಎಂಬ ವಿಷಯದ ಬಗ್ಗೆ ಪರಿಣತರು ನೀಡಿರುವ ತದ್ವಿರುದ್ಧವಾದ ಸಲಹೆಯಿಂದ ಅನೇಕರು ಗಲಿಬಿಲಿಗೊಂಡಿದ್ದಾರೆ. ಉದಾಹರಣೆಗೆ, ಕೋಪವು “ನಿಮ್ಮಲ್ಲಿ ಹಾಯಾದ ಅನಿಸಿಕೆಯನ್ನು ಉಂಟುಮಾಡುವಲ್ಲಿ ಅದನ್ನು” ವ್ಯಕ್ತಪಡಿಸಿರಿ ಎಂಬ ಸಿದ್ಧಾಂತವನ್ನು ಕೆಲವು ಮನೋವಿಜ್ಞಾನಿಗಳು ಪ್ರೋತ್ಸಾಹಿಸಿದ್ದಾರೆ. ಇತರರು ನೀಡುವ ಎಚ್ಚರಿಕೆಯ ಮೇರೆಗೆ, ಯಾವಾಗಲೂ ಕೋಪವನ್ನು ವ್ಯಕ್ತಪಡಿಸುವುದು, “ಧೂಮಪಾನ, ಅಧಿಕ ರಕ್ತದೊತ್ತಡ, ಮತ್ತು ಕೊಲೆಸ್ಟರಾಲ್ನಂತಹ ಅಪಾಯ ಸಂಭವಗಳಿಗಿಂತಲೂ ಹೆಚ್ಚಾಗಿ, ಅಕಾಲಿಕ ಮರಣದ ಬಲವಾದ ಮುನ್ಸೂಚಕವಾಗಿದೆ.” ದೇವರ ವಾಕ್ಯವು ಸ್ಪಷ್ಟವಾಗಿ ಹೇಳುವುದು: “ಕೋಪವನ್ನು ಅಣಗಿಸಿಕೋ; ರೋಷವನ್ನು ಬಿಡು. ಉರಿಗೊಳ್ಳಬೇಡ; ಕೆಡುಕಿಗೆ ಕಾರಣವಾದೀತು.” (ಕೀರ್ತನೆ 37:8) ಇಂತಹ ನಿರ್ದಿಷ್ಟವಾದ ಸಲಹೆಯನ್ನು ಬೈಬಲು ಏಕೆ ನೀಡುತ್ತದೆ?
ಅನಿಯಂತ್ರಿತ ಭಾವನೆಗಳು ಅನಿಯಂತ್ರಿತ ಕೃತ್ಯಗಳಿಗೆ ಎಡೆಮಾಡಿಕೊಡುತ್ತವೆ. ಇದು ಮಾನವನ ಇತಿಹಾಸದಲ್ಲಿ ಬಹಳ ಬೇಗನೆ ವ್ಯಕ್ತವಾಯಿತು. ನಾವು ಓದುವುದು: “ಇದರಿಂದ ಕಾಯಿನನು ಬಹು ಕೋಪಗೊಂಡನು; ಅವನ ಮುಖವು ಕಳೆಗುಂದಿತು.” ಇದು ಅವನನ್ನು ಯಾವುದಕ್ಕೆ ನಡೆಸಿತು? ಅವನ ಕೋಪವು ಅವನ ಮೇಲೆ ಎಷ್ಟರ ಮಟ್ಟಿಗೆ ಬಿಗಿ ಹಿಡಿತವನ್ನು ಸಾಧಿಸಿ ನಿಯಂತ್ರಿಸಿತೆಂದರೆ, ಒಳ್ಳೆಯ ಕೆಲಸವನ್ನು ಮಾಡುವಂತೆ ಯೆಹೋವನು ನೀಡಿದ ಸಲಹೆಗೆ ಕಿವಿಗೊಡದಂತೆ ಅವನ ಹೃದಯವನ್ನು ಅದು ಕಲ್ಲಾಗಿಸಿತು. ಕಾಯಿನನ ಅನಿಯಂತ್ರಿತ ಕೋಪವು, ಅವನನ್ನು ಘೋರವಾದ ಪಾಪಕ್ಕೆ, ಅಂದರೆ ತನ್ನ ತಮ್ಮನ ಕೊಲೆಗೆ ನಡೆಸಿತು.—ಆದಿಕಾಂಡ 4:3-8.
ದಾವೀದನನ್ನು ಜನರು ಬಹಳವಾಗಿ ಕೊಂಡಾಡುತ್ತಿದ್ದುದ್ದನ್ನು ಇಸ್ರಾಯೇಲಿನ ಪ್ರಥಮ ರಾಜನಾದ ಸೌಲನು ಕೇಳಿಸಿಕೊಂಡಾಗ, ಅವನೂ ತದ್ರೀತಿಯಲ್ಲಿ ಕೋಪಕ್ಕೆ ವಶವಾದನು. “ಇಸ್ರಾಯೇಲ್ಯರ ಎಲ್ಲಾ ಪಟ್ಟಣಗಳಿಂದ ಸ್ತ್ರೀಯರು ಹೊರಗೆ ಬಂದು ದಮ್ಮಡಿತಾಳಗಳನ್ನು ಹಿಡಿದು ಸಂತೋಷದಿಂದ ಹಾಡುತ್ತಾ ಕುಣಿಯುತ್ತಾ ಅರಸನಾದ ಸೌಲನನ್ನು ಎದುರುಗೊಂಡರು. ಅವರು ಪರಸ್ಪರವಾಗಿ—ಸೌಲನು ಸಾವಿರಗಟ್ಟಲೆಯಾಗಿ ಕೊಂದನು; ದಾವೀದನು ಹತ್ತುಸಾವಿರಗಟ್ಟಲೆಯಾಗಿ ಕೊಂದನು ಎಂದು ಹಾಡಿದರು. ಈ ಮಾತುಗಳ ದೆಸೆಯಿಂದ ಸೌಲನಿಗೆ ಬಹುವ್ಯಸನವೂ ಕೋಪವೂ” ಉಂಟಾಯಿತು. ಈ ಕೋಪವು ಸೌಲನ ವಿಚಾರಶಕ್ತಿಯನ್ನು ಎಷ್ಟರ ಮಟ್ಟಿಗೆ ನಿಯಂತ್ರಿಸಿತೆಂದರೆ, ದಾವೀದನ ಹತ್ಯೆಗಾಗಿ ಅವನು ಹಲವಾರು ಬಾರಿ ಪ್ರಯತ್ನಿಸಿದನು. ದಾವೀದನು ಮೈತ್ರಿಸಂಧಾನ ಮಾಡಲು ಇಷ್ಟಪಟ್ಟರೂ, ಸೌಲನು ಮನಸ್ತಾಪವನ್ನು ಪರಿಹರಿಸಿ ಸ್ನೇಹದಿಂದಿರಲು ಇಚ್ಛಿಸಲಿಲ್ಲ. ಕೊನೆಗೆ, ಅವನು ಯೆಹೋವನ ಅನುಗ್ರಹವನ್ನು ಸಂಪೂರ್ಣವಾಗಿ ಕಳೆದುಕೊಂಡನು.—1 ಸಮುವೇಲ 18:6-11; 19:9, 10; 24:1-21; ಜ್ಞಾನೋಕ್ತಿ 6:34, 35.
ಒಬ್ಬನು ಅಥವಾ ಒಬ್ಬಳು ಅನಿಯಂತ್ರಿತ ಕೋಪಕ್ಕೆ ಒಳಗಾಗುವಾಗ, ನಿರ್ದಿಷ್ಟವಾದ ಸನ್ನಿವೇಶದಲ್ಲಿ ಒಳಗೊಂಡಿರುವ ಎಲ್ಲರ ಮನಸ್ಸನ್ನು ನೋಯಿಸುವಂತಹ ವಿಷಯಗಳನ್ನು ಅವರು ಹೇಳುವರು ಇಲ್ಲವೆ ಮಾಡುವರು ಎಂಬುದರಲ್ಲಿ ಸಂದೇಹವೇ ಇಲ್ಲ. (ಜ್ಞಾನೋಕ್ತಿ 29:22) ಕಾಯಿನ ಮತ್ತು ಸೌಲರಿಬ್ಬರೂ, ಅಸೂಯೆ ಮತ್ತು ಈರ್ಷ್ಯೆಯ ಕಾರಣ ಕೋಪಗೊಂಡರು. ಆದರೆ, ಕೋಪಾವೇಶಕ್ಕೆ ಹಲವಾರು ಕಾರಣಗಳಿರಬಹುದು. ನ್ಯಾಯವಲ್ಲದ ಟೀಕೆ, ಮುಖಭಂಗಮಾಡುವ ನಡೆನುಡಿ, ಮನಸ್ತಾಪ, ಇಲ್ಲವೆ ಪಕ್ಷಪಾತವು ತಾನೇ, ಆವೇಶದ ಸ್ಫೋಟನೆಯನ್ನು ಹೊತ್ತಿಸುವ ಕಿಡಿಯಾಗಿರಬಲ್ಲದು.
ಕಾಯಿನ ಮತ್ತು ಸೌಲರಿಬ್ಬರಲ್ಲೂ ಒಂದು ಗಂಭೀರವಾದ ಕೊರತೆಯಿತ್ತೆಂಬುದನ್ನು ಅವರ ಉದಾಹರಣೆಗಳು ತೋರಿಸುತ್ತವೆ. ಕಾಯಿನನ ಬಲಿಯರ್ಪಣೆಯು ನಂಬಿಕೆಯಿಂದ ಪ್ರಚೋದಿಸಲ್ಪಟ್ಟಿರಲಿಲ್ಲ. (ಇಬ್ರಿಯ 11:4) ಯೆಹೋವನು ಸ್ಪಷ್ಟವಾಗಿ ಕೊಟ್ಟಿದ್ದ ಆಜ್ಞೆಯನ್ನು ಸೌಲನು ಉಲ್ಲಂಘಿಸಿ, ಅದಕ್ಕೆ ಆತ್ಮಸಮರ್ಥನೆಯನ್ನು ನೀಡಲು ಪ್ರಯತ್ನಿಸಿದ ಕಾರಣ, ಅವನು ದೇವರ ಅನುಗ್ರಹವನ್ನೂ ಆತ್ಮವನ್ನೂ ಕಳೆದುಕೊಂಡನು. ಹೀಗೆ, ಇವರಿಬ್ಬರಿಗೂ ಯೆಹೋವನೊಂದಿಗಿದ್ದ ಸಂಬಂಧವು ಕಡಿದುಹೋಯಿತು.
ಇಂತಹ ಮನೋಭಾವವನ್ನು ದಾವೀದನ ಮನೋಭಾವಕ್ಕೆ ಹೋಲಿಸಿ ನೋಡಿರಿ. ಸೌಲನು ತನ್ನನ್ನು ದುರುಪಚರಿಸಿದ ರೀತಿಯಿಂದ ಕೋಪಗೊಳ್ಳಲು ದಾವೀದನಿಗೆ ಸಕಾರಣವಿತ್ತು. ಆದರೂ, ದಾವೀದನು ತನ್ನ ಆವೇಶವನ್ನು ತಡೆಹಿಡಿದನು. ಏಕೆ? ಅವನಂದದ್ದು: “ಅವನು ಯೆಹೋವನಿಂದ ಅಭಿಷೇಕಿಸಲ್ಪಟ್ಟವನೂ ನನ್ನ ಒಡೆಯನೂ ಆಗಿದ್ದಾನೆ; ನಾನು . . . ಯೆಹೋವನ ಅಭಿಷಿಕ್ತನಿಗೆ ವಿರೋಧವಾಗಿ ಕೈಯೆತ್ತದಂತೆ ಯೆಹೋವನೇ ನನಗೆ ಅಡ್ಡಿಮಾಡಲಿ.” ಯೆಹೋವನೊಂದಿಗೆ ತನಗಿದ್ದ ಸಂಬಂಧವು ದಾವೀದನ ಮನಸ್ಸಿನಲ್ಲಿ ಸ್ಪಷ್ಟವಾಗಿದ್ದ ಕಾರಣ, ಅದು ಸೌಲನೊಂದಿಗೆ ಅವನು ವ್ಯವಹರಿಸಿದ ರೀತಿಯ ಮೇಲೆ ಪ್ರಭಾವವನ್ನು ಬೀರಿತು. ಅವನು ದೀನಭಾವದಿಂದ ವಿಷಯವನ್ನು ಯೆಹೋವನ ಹಸ್ತಗಳಲ್ಲಿ ಬಿಟ್ಟುಬಿಟ್ಟನು.—1 ಸಮುವೇಲ 24:6, 15.
ಅನಿಯಂತ್ರಿತ ಕೋಪದ ಪರಿಣಾಮಗಳು ಗಂಭೀರವಾದವುಗಳು ಎಂಬುದರಲ್ಲಿ ಸಂದೇಹವಿಲ್ಲ. ಅಪೊಸ್ತಲ ಪೌಲನು ಎಚ್ಚರಿಸಿದ್ದು: “ಕೋಪಮಾಡಬೇಕಾದರೂ ಪಾಪ ಮಾಡಬೇಡಿರಿ.” (ಎಫೆಸ 4:26) ನ್ಯಾಯವಾದ ಕೋಪಕ್ಕೆ ತಕ್ಕ ಸ್ಥಾನವಿರುವುದಾದರೂ, ಕೋಪವು ಒಂದು ಎಡವುಗಲ್ಲಾಗಿ ಪರಿಣಮಿಸುವ ಅಪಾಯವು ಯಾವಾಗಲೂ ಇರುತ್ತದೆ. ಆದುದರಿಂದ, ನಾವು ನಮ್ಮ ಕೋಪವನ್ನು ನಿಯಂತ್ರಿಸುವ ಸವಾಲನ್ನು ಎದುರಿಸಲೇಬೇಕೆನ್ನುವುದು ಆಶ್ಚರ್ಯಕರವಾದ ಸಂಗತಿಯಾಗಿರುವುದಿಲ್ಲ. ಅದನ್ನು ನಾವು ಹೇಗೆ ಮಾಡಬಲ್ಲೆವು?
ಒಂದು ಪ್ರಧಾನ ವಿಧವು, ಯೆಹೋವನೊಂದಿಗೆ ಒಂದು ಬಲವಾದ ಸಂಬಂಧವನ್ನು ಬೆಳೆಸಿಕೊಳ್ಳುವುದೇ ಆಗಿದೆ. ನಿಮ್ಮ ಅಂತರಂಗವನ್ನು ತನ್ನಲ್ಲಿ ತೋಡಿಕೊಳ್ಳುವಂತೆ ಆತನು ಉತ್ತೇಜಿಸುತ್ತಾನೆ. ನಿಮ್ಮ ಚಿಂತೆಗಳನ್ನು ಮತ್ತು ಆತಂಕಗಳನ್ನು ಆತನಲ್ಲಿ ಅರಿಕೆಮಾಡಿ, ಕೋಪವನ್ನು ನಿಗ್ರಹಿಸಲು ಬೇಕಾದ ಶಾಂತ ಹೃದಯಕ್ಕಾಗಿ ಬಿನ್ನಹ ಮಾಡಿರಿ. (ಜ್ಞಾನೋಕ್ತಿ 14:30) “ಕರ್ತನು ನೀತಿವಂತರನ್ನು ಕಟಾಕ್ಷಿಸುತ್ತಾನೆ, ಆತನು ಅವರ ವಿಜ್ಞಾಪನೆಗಳಿಗೆ ಕಿವಿಗೊಡುತ್ತಾನೆ” ಎಂಬ ಆಶ್ವಾಸನೆ ನಿಮಗಿರಲಿ.—1 ಪೇತ್ರ 3:12.
ಪ್ರಾರ್ಥನೆಯು ನಮ್ಮನ್ನು ರೂಪಿಸಿ, ಮಾರ್ಗದರ್ಶಿಸಬಲ್ಲದು. ಯಾವ ವಿಧದಲ್ಲಿ? ಇತರರೊಂದಿಗಿನ ನಮ್ಮ ವ್ಯವಹಾರಗಳ ಮೇಲೆ ಇದು ಭಾರಿ ಪ್ರಭಾವವನ್ನು ಬೀರಬಲ್ಲದು. ಯೆಹೋವನು ನಿಮ್ಮೊಂದಿಗೆ ವ್ಯವಹರಿಸಿರುವ ರೀತಿಯನ್ನು ಜ್ಞಾಪಿಸಿಕೊಳ್ಳಿರಿ. ಶಾಸ್ತ್ರವಚನಗಳು ಹೇಳುವಂತೆ, ಯೆಹೋವನು “ನಮ್ಮ ಪಾಪಗಳಿಗೆ ಸರಿಯಾಗಿ ನಮ್ಮನ್ನು ಶಿಕ್ಷಿಸಲಿಲ್ಲ.” (ಕೀರ್ತನೆ 103:10) “ಸೈತಾನನು ನಮ್ಮನ್ನು ವಂಚಿಸಿ ನಷ್ಟಪಡಿಸ”ದಿರಲು, ಕ್ಷಮಿಸುವ ಮನೋಭಾವವು ಅತ್ಯಾವಶ್ಯಕವಾಗಿದೆ. (2 ಕೊರಿಂಥ 2:10, 11) ಇನ್ನೂ ಹೆಚ್ಚಾಗಿ, ಪವಿತ್ರಾತ್ಮದ ಮಾರ್ಗದರ್ಶನವನ್ನು ನಿಮ್ಮ ಹೃದಯವು ಸ್ವೀಕರಿಸುವಂತೆ ಪ್ರಾರ್ಥನೆಯು ಪ್ರಚೋದಿಸುತ್ತದೆ. ಇದು ಜೀವನದಲ್ಲಿ ಬಲವಾಗಿ ಬೇರೂರಿರುವ ರೂಢಿಗಳನ್ನು ಕಿತ್ತುಹಾಕಬಲ್ಲದು. ‘ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯನ್ನು’ ಯೆಹೋವನು ಹರ್ಷದಿಂದ ನೀಡುವನು. ಅದು ಕೋಪದ ಬಿಗಿಹಿಡಿತದಿಂದ ನಿಮ್ಮನ್ನು ಬಿಡಿಸಬಲ್ಲದು.—ಫಿಲಿಪ್ಪಿ 4:7.
ಪ್ರಾರ್ಥನೆಯ ಜೊತೆಗೆ, ಶಾಸ್ತ್ರವಚನಗಳನ್ನು ಕ್ರಮವಾಗಿ ಪರಿಶೀಲಿಸಿ ನೋಡಬೇಕಾಗಿದೆ. ಇದರಿಂದ, ನಾವು “ಕರ್ತನ ಚಿತ್ತವೇನೆಂಬದನ್ನು ವಿಚಾರಿಸಿ” ತಿಳಿದುಕೊಳ್ಳಸಾಧ್ಯವಿದೆ. (ಎಫೆಸ 5:17; ಯಾಕೋಬ 3:17) ನಿಮ್ಮ ಕೋಪವನ್ನು ನಿಯಂತ್ರಿಸುವುದು ತುಂಬ ಕಷ್ಟಕರವೆಂದು ನಿಮಗೆ ಸ್ವತಃ ಅನಿಸುವಾಗ, ಆ ವಿಷಯದಲ್ಲಿ ಯೆಹೋವನ ಆಲೋಚನೆಯು ಏನೆಂಬುದನ್ನು ತಿಳಿದುಕೊಳ್ಳಿರಿ. ಕೋಪದ ನಿಯಂತ್ರಣಕ್ಕೆ ನಿರ್ದಿಷ್ಟವಾಗಿ ಸಂಬಂಧಿಸಿರುವ ಶಾಸ್ತ್ರವಚನಗಳನ್ನು ಪುನರ್ವಿಮರ್ಶಿಸಿರಿ.
ಒಂದು ಪ್ರಾಮುಖ್ಯವಾದ ಮರುಜ್ಞಾಪನವನ್ನು ಅಪೊಸ್ತಲ ಪೌಲನು ನೀಡುತ್ತಾನೆ. “ಆದದರಿಂದ ಸಮಯವಿರಲಾಗಿ ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಮಾಡೋಣ.” (ಗಲಾತ್ಯ 6:10) ನಿಮ್ಮ ಆಲೋಚನೆಗಳು ಹಾಗೂ ಕ್ರಿಯೆಗಳು ಇತರರಿಗೆ ಒಳ್ಳೆಯದನ್ನು ಮಾಡುವುದರ ಮೇಲೆಯೇ ಕೇಂದ್ರೀಕೃತವಾಗಿರಲಿ. ಇಂತಹ ಹಿತಕರವಾದ ಸಕಾರಾತ್ಮಕ ಚಟುವಟಿಕೆಯು, ಅನುಭೂತಿ ಮತ್ತು ಭರವಸೆಯನ್ನು ಮೂಡಿಸಿ, ಕೋಪವನ್ನು ಸುಲಭವಾಗಿ ಕೆರಳಿಸಬಲ್ಲ ಮನಸ್ತಾಪಗಳನ್ನು ಶಮನಗೊಳಿಸುವುದು.
ಕೀರ್ತನೆಗಾರನು ಹೇಳಿದ್ದು: “ನಿನ್ನ ನುಡಿಗನುಸಾರವಾಗಿ ನನ್ನ ಹೆಜ್ಜೆಯನ್ನು ದೃಢಪಡಿಸು; ಯಾವ ಅನ್ಯಾಯವಾದರೂ ನನ್ನನ್ನು ಆಳದಂತೆ ಮಾಡು. ನಿನ್ನ ಧರ್ಮಶಾಸ್ತ್ರವನ್ನು ಪ್ರೀತಿಸುವವರಿಗೆ ಸಂಪೂರ್ಣಸಮಾಧಾನವಿರುತ್ತದೆ; ಅಂಥವರಿಗೆ ವಿಘ್ನಕರವಾದದ್ದೇನೂ ಇರುವದಿಲ್ಲ.” (ಕೀರ್ತನೆ 119:133, 165) ನಿಮ್ಮ ವಿಷಯದಲ್ಲೂ ಇದು ಸತ್ಯವಾಗಿ ಪರಿಣಮಿಸಬಲ್ಲದು.
[ಪುಟ 9 ರಲ್ಲಿರುವ ಚೌಕ/ಚಿತ್ರಗಳು]
ಕೋಪವನ್ನು ನಿಯಂತ್ರಿಸಲು ಸಹಾಯಮಾಡುವ ಹೆಜ್ಜೆಗಳು
□ ಯೆಹೋವನಿಗೆ ಪ್ರಾರ್ಥಿಸಿರಿ.—ಕೀರ್ತನೆ 145:18.
□ ದಿನನಿತ್ಯವೂ ಶಾಸ್ತ್ರವಚನಗಳನ್ನು ಪರಿಶೀಲಿಸಿರಿ.—ಕೀರ್ತನೆ 119:133, 165.
□ ಪ್ರಯೋಜನಕಾರಿಯಾದ ಚಟುವಟಿಕೆಗಳಲ್ಲಿ ಕಾರ್ಯಮಗ್ನರಾಗಿರಿ.—ಗಲಾತ್ಯ 6:9, 10.