ದೇವರ ವಾಗ್ದಾನಗಳಲ್ಲಿ ನಂಬಿಕೆಯನ್ನಿಡುತ್ತಾ ಜೀವಿಸುವುದು
“ನಾನೇ ದೇವರು, ನನಗೆ ಸರಿಸಮಾನರಿಲ್ಲ. ಆರಂಭದಲ್ಲಿಯೇ ಅಂತ್ಯವನ್ನು ತಿಳಿಸಿದ್ದೇನೆ; ನನ್ನ ಸಂಕಲ್ಪವು ನಿಲ್ಲುವದು, ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸುವೆನು ಎಂದು ಹೇಳಿ ಇನ್ನೂ ನಡೆಯದಿರುವ ಕಾರ್ಯಗಳನ್ನು ಪುರಾತನ ಕಾಲದಲ್ಲಿಯೇ ಅರುಹಿದ್ದೇನೆ.”—ಯೆಶಾಯ 46:9, 10.
1, 2. ದೇವರು ಭೂಮಿಯ ಕಾರ್ಯಕಲಾಪಗಳಲ್ಲಿ ಕೈಹಾಕುವ ವಿಷಯದಲ್ಲಿ ಜನರಿಗೆ ಯಾವ ಭಿನ್ನ ಅಭಿಪ್ರಾಯಗಳಿವೆ?
ದೇವರು ಭೂಮಿಯ ಕಾರ್ಯಕಲಾಪಗಳಲ್ಲಿ ಎಷ್ಟರ ಮಟ್ಟಿಗೆ ಕೈಹಾಕುತ್ತಾನೆ? ಇದರ ಕುರಿತು ಜನರಿಗೆ ಬೇರೆ ಬೇರೆ ಅಭಿಪ್ರಾಯಗಳಿವೆ. ಒಂದು ಅಭಿಪ್ರಾಯವೇನೆಂದರೆ, ಆತನು ಯಾವುದರಲ್ಲೂ ಕೈಹಾಕುವುದೇ ಇಲ್ಲ. ಸೃಷ್ಟಿಯ ಮೂಲಕ ಕಾರ್ಯಗತಿಯನ್ನು ಆರಂಭಿಸಿದ ಆತನಿಗೆ ನಮ್ಮ ಪರವಾಗಿ ಒಂದೊ ಕ್ರಿಯೆಗೈಯಲು ಮನಸ್ಸಿಲ್ಲ ಇಲ್ಲವೆ ಆತನು ಅಶಕ್ತನಾಗಿದ್ದಾನೆ. ಈ ಅಭಿಪ್ರಾಯಕ್ಕನುಸಾರ ದೇವರು, ತನ್ನ ಮಗನನ್ನು ಒಂದು ಹೊಸ ಸೈಕಲಿನ ಮೇಲೆ ಕುಳ್ಳಿರಿಸಿ, ಅದನ್ನು ಅಲ್ಲಾಡದಂತೆ ಹಿಡಿದು, ಅನಂತರ ಸೈಕಲು ಮುಂದೆ ಸಾಗುವಂತೆ ಅದನ್ನು ಹಿಂದಿನಿಂದ ತಳ್ಳುವ ತಂದೆಯಂತಿದ್ದಾನೆ. ಆಮೇಲೆ, ತಂದೆಯು ಅಲ್ಲಿಂದ ಹೋಗಿಬಿಡುತ್ತಾನೆ. ಈಗ ಆ ಮಗನು ಒಂಟಿಯಾಗಿ ಮುಂದೆ ಸಾಗುತ್ತಾನೆ. ಅವನು ಕೆಳಗೆ ಬೀಳಲೂಬಹುದು, ಬೀಳದೆಯೂ ಇರಬಹುದು. ಏನೇ ಆಗಲಿ, ತಂದೆಯು ಇದರ ಬಗ್ಗೆ ಚಿಂತಿಸುವುದಿಲ್ಲ.
2 ಇನ್ನೊಂದು ಅಭಿಪ್ರಾಯವೇನೆಂದರೆ, ದೇವರು ನಮ್ಮ ಜೀವಿತದಲ್ಲಿ ನಡೆಯುವ ಪ್ರತಿಯೊಂದೂ ವಿಷಯವನ್ನು ಕ್ರಿಯಾಶೀಲವಾಗಿ ನಿರ್ದೇಶಿಸುತ್ತಾನೆ ಮತ್ತು ತನ್ನ ಸೃಷ್ಟಿಯಲ್ಲಿ ನಡೆಯುವ ಪ್ರತಿಯೊಂದು ಘಟನೆಯಲ್ಲಿಯೂ ನೇರವಾಗಿ ಒಳಗೂಡಿದ್ದಾನೆ. ಆದರೆ ಈ ಅಭಿಪ್ರಾಯವು ಸರಿಯಾಗಿರುವಲ್ಲಿ, ಸಂಭವಿಸುವಂತಹ ಒಳ್ಳೆಯ ಸಂಗತಿಗಳಿಗೆ ಮಾತ್ರವಲ್ಲ, ಮಾನವಕುಲವನ್ನು ಬಾಧಿಸುತ್ತಿರುವ ಪಾತಕ ಮತ್ತು ದುರಂತಕ್ಕೂ ದೇವರೇ ಕಾರಣನಾಗಿದ್ದಾನೆಂದು ಕೆಲವರು ತೀರ್ಮಾನಿಸಬಹುದು. ದೇವರು ವ್ಯವಹರಿಸುವಂತಹ ರೀತಿಗಳ ಕುರಿತಾದ ಸತ್ಯವನ್ನು ಅರಿಯುವುದು, ನಾವು ಆತನಿಂದ ಏನನ್ನು ನಿರೀಕ್ಷಿಸಬಹುದು ಎಂಬುದನ್ನು ತಿಳಿದುಕೊಳ್ಳಲು ನಮಗೆ ಸಹಾಯಮಾಡುವುದು. ಆತನ ವಾಗ್ದಾನಗಳು ಖಂಡಿತವಾಗಿಯೂ ನೆರವೇರುವವು ಎಂಬ ನಮ್ಮ ನಂಬಿಕೆಯನ್ನು ಸಹ ಅದು ಬಲಪಡಿಸುವುದು.—ಇಬ್ರಿಯ 11:1.
3. (ಎ) ಯೆಹೋವನು ಉದ್ದೇಶದ ದೇವರೆಂದು ನಮಗೆ ಹೇಗೆ ಗೊತ್ತಿದೆ? (ಬಿ) ಯೆಹೋವನು ತನ್ನ ಉದ್ದೇಶವನ್ನು ‘ರೂಪಿಸುತ್ತಾನೆ’ ಅಥವಾ ಅದಕ್ಕೆ ಆಕಾರಕೊಡುತ್ತಾನೆ ಎಂದು ಏಕೆ ಹೇಳಲಾಗುತ್ತದೆ?
3 ಮನುಷ್ಯರ ಕಾರ್ಯಕಲಾಪಗಳಲ್ಲಿ ದೇವರು ಒಳಗೂಡುತ್ತಾನೊ ಇಲ್ಲವೋ ಎಂಬ ಪ್ರಶ್ನೆಗೆ, ಯೆಹೋವನು ಉದ್ದೇಶದ ದೇವರಾಗಿದ್ದಾನೆ ಎಂಬ ವಾಸ್ತವಾಂಶವು ಪ್ರಧಾನ ವಿಷಯವಾಗಿದೆ. ಇದು ಆತನ ಹೆಸರಿನಲ್ಲೇ ಸುಸ್ಪಷ್ಟವಾಗಿ ತಿಳಿದುಬರುತ್ತದೆ. “ಯೆಹೋವ” ಎಂಬ ಹೆಸರಿನ ಅರ್ಥ “ಆತನು ಆಗಿಸುತ್ತಾನೆ” ಎಂದಾಗಿದೆ. ಪ್ರಗತಿಪರವಾಗಿ ಕ್ರಿಯೆಗೈಯುತ್ತಾ, ಯೆಹೋವನು ತನ್ನ ಎಲ್ಲ ವಾಗ್ದಾನಗಳನ್ನು ನೆರವೇರಿಸುವವನಾಗಿ ಆಗಿಸಿಕೊಳ್ಳುತ್ತಾನೆ. ಈ ಕಾರಣದಿಂದಾಗಿ, ಭವಿಷ್ಯತ್ತಿನ ಘಟನೆಗಳು ಅಥವಾ ಕ್ರಿಯೆಗಳ ಸಂಬಂಧದಲ್ಲಿ ಯೆಹೋವನು ತನ್ನ ಉದ್ದೇಶವನ್ನು ‘ರೂಪಿಸುತ್ತಾನೆ’ ಅಥವಾ ಅದಕ್ಕೆ ಆಕಾರಕೊಡುತ್ತಾನೆ ಎಂದು ಕೆಲವೊಂದು ಬೈಬಲ್ಗಳಲ್ಲಿ ಹೇಳಲಾಗುತ್ತದೆ. (2 ಅರಸುಗಳು 19:25; ಯೆಶಾಯ 46:11) ಈ ಪದಗಳು, “ಕುಂಬಾರ” ಎಂಬ ಅರ್ಥವುಳ್ಳ ಶಬ್ದದೊಂದಿಗೆ ಸಂಬಂಧವಿರುವ ಯಾಟ್ಸಾರ್ ಎಂಬ ಹೀಬ್ರೂ ಪದದಿಂದ ಬಂದಿವೆ. (ಯೆರೆಮೀಯ 18:4) ಒಬ್ಬ ನಿಪುಣ ಕುಂಬಾರನು, ಮಣ್ಣಿನ ಮುದ್ದೆಗೆ ಆಕಾರಕೊಟ್ಟು ಒಂದು ಸುಂದರವಾದ ಹೂದಾನಿಯನ್ನು ತಯಾರಿಸಲು ಶಕ್ತನಾಗಿರುವಂತೆಯೇ, ಯೆಹೋವನು ತನ್ನ ಚಿತ್ತವನ್ನು ಪೂರೈಸಲಿಕ್ಕಾಗಿ ಘಟನೆಗಳಿಗೆ ಆಕಾರಕೊಡಬಲ್ಲನು ಅಥವಾ ಅವುಗಳನ್ನು ಕೌಶಲ್ಯದಿಂದ ನಿರ್ವಹಿಸಬಲ್ಲನು.—ಎಫೆಸ 1:11.
4. ಮಾನವ ನಿವಾಸಕ್ಕಾಗಿ ದೇವರು ಭೂಮಿಯನ್ನು ಹೇಗೆ ತಯಾರಿಸಿದನು?
4 ಉದಾಹರಣೆಗೆ, ಈ ಭೂಮಿಯು ಅತಿ ಮನೋಹರವಾದ ಸ್ಥಳವಾಗಿದ್ದು ಅದರಲ್ಲಿ ಪರಿಪೂರ್ಣ, ವಿಧೇಯ ಮಾನವರು ನಿವಾಸಿಸಬೇಕೆಂದು ದೇವರು ಉದ್ದೇಶಿಸಿದನು. (ಯೆಶಾಯ 45:18) ಯೆಹೋವನು ಪ್ರಥಮ ಪುರುಷ ಮತ್ತು ಸ್ತ್ರೀಯನ್ನು ಸೃಷ್ಟಿಸುವ ಬಹಳ ಸಮಯದ ಮುಂಚೆಯೇ, ಪ್ರೀತಿಯಿಂದ ಅವರಿಗಾಗಿ ಸಿದ್ಧತೆಗಳನ್ನು ಮಾಡಿದನು. ಯೆಹೋವನು ಹಗಲು ಮತ್ತು ರಾತ್ರಿ, ನೆಲ ಹಾಗೂ ಸಮುದ್ರವನ್ನು ಉಂಟುಮಾಡಿದ ರೀತಿಯನ್ನು, ಆದಿಕಾಂಡ ಪುಸ್ತಕದ ಆರಂಭದ ಅಧ್ಯಾಯಗಳು ತಿಳಿಸುತ್ತವೆ. ಅನಂತರ ಆತನು ಸಸ್ಯ ಮತ್ತು ಪ್ರಾಣಿ ಜೀವವನ್ನು ಸೃಷ್ಟಿಸಿದನು. ಮಾನವರ ನಿವಾಸಕ್ಕಾಗಿ ಭೂಮಿಯನ್ನು ಈ ರೀತಿಯಲ್ಲಿ ತಯಾರಿಸಲಿಕ್ಕಾಗಿ ಸಾವಿರಾರು ವರ್ಷಗಳು ಹಿಡಿದವು. ಆ ಯೋಜನೆಯು ಸಫಲವಾಗಿ ಪೂರ್ಣಗೊಳಿಸಲ್ಪಟ್ಟಿತು. ಪ್ರಥಮ ಪುರುಷ ಮತ್ತು ಸ್ತ್ರೀಯು ಏದೆನ್ ತೋಟದಲ್ಲಿ ತಮ್ಮ ಜೀವನವನ್ನು ಆರಂಭಿಸಿದರು. ಆ ತೋಟವು ಒಂದು ಸುಂದರವಾದ ಪ್ರಮೋದವನವಾಗಿದ್ದು, ಅವರಿಗೆ ಜೀವನದಲ್ಲಿ ಆನಂದಿಸಲಿಕ್ಕಾಗಿ ಬೇಕಾಗಿರುವಂತಹ ಎಲ್ಲ ವಿಷಯಗಳಿಂದ ಅದು ಸುಸಜ್ಜಿತವಾಗಿತ್ತು. (ಆದಿಕಾಂಡ 1:31) ಹೀಗೆ, ಯೆಹೋವನು ಭೂಮಿಯ ಕಾರ್ಯಕಲಾಪಗಳಲ್ಲಿ ನೇರವಾಗಿ ಒಳಗೂಡಿದ್ದು, ತನ್ನ ಉನ್ನತವಾದ ಉದ್ದೇಶಕ್ಕನುಗುಣವಾಗಿ ತನ್ನ ಕೆಲಸಗಳಿಗೆ ಪ್ರಗತಿಪರವಾಗಿ ಆಕಾರಕೊಡುತ್ತಿದ್ದನು. ಆದರೆ ಮಾನವ ಕುಟುಂಬವು ದೊಡ್ಡದಾಗುತ್ತಾ ಹೋದಂತೆ, ಆತನ ಈ ಒಳಗೂಡುವಿಕೆಯಲ್ಲಿ ಏನಾದರೂ ಬದಲಾವಣೆಯಾಯಿತೊ?
ಮನುಷ್ಯರೊಂದಿಗಿನ ತನ್ನ ವ್ಯವಹಾರಗಳನ್ನು ಯೆಹೋವನು ಸೀಮಿತಗೊಳಿಸುತ್ತಾನೆ
5, 6. ಮಾನವರೊಂದಿಗಿನ ತನ್ನ ವ್ಯವಹಾರಗಳನ್ನು ದೇವರು ಏಕೆ ಮಿತಗೊಳಿಸುತ್ತಾನೆ?
5 ಮನುಷ್ಯನ ಪ್ರತಿಯೊಂದು ಕೆಲಸವನ್ನು ನಿರ್ದೇಶಿಸಿ, ನಿಯಂತ್ರಿಸುವ ಶಕ್ತಿ ಯೆಹೋವನಿಗಿರುವುದಾದರೂ, ಆತನು ಹಾಗೆ ಮಾಡುವುದಿಲ್ಲ. ಇದಕ್ಕೆ ಕಾರಣಗಳಿವೆ. ಮನುಷ್ಯರು ದೇವರ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟಿದ್ದು, ಅವರಿಗೆ ಇಚ್ಛಾ ಸ್ವಾತಂತ್ರ್ಯವಿರುವುದು ಮತ್ತು ಅವರು ಸ್ವತಂತ್ರ ನೈತಿಕ ವ್ಯಕ್ತಿಗಳಾಗಿರುವುದು ಇದಕ್ಕಿರುವ ಒಂದು ಕಾರಣ. ನಾವು ಆತನ ಆಜ್ಞೆಗಳಿಗನುಸಾರ ನಡೆಯಲೇಬೇಕೆಂದು ಯೆಹೋವನು ನಮ್ಮನ್ನು ಒತ್ತಾಯಿಸುವುದೂ ಇಲ್ಲ, ಮತ್ತು ನಾವು ಆತನ ಕೈಗೊಂಬೆಗಳೂ ಆಗಿರುವುದಿಲ್ಲ. (ಧರ್ಮೋಪದೇಶಕಾಂಡ 30:19, 20; ಯೆಹೋಶುವ 24:15) ನಾವು ಏನನ್ನು ಮಾಡುತ್ತೇವೊ ಅದಕ್ಕೆ ನಾವು ಆತನಿಗೆ ಲೆಕ್ಕ ಒಪ್ಪಿಸಬೇಕಾಗಿರುವುದಾದರೂ, ನಮ್ಮ ಜೀವಿತಗಳನ್ನು ಹೇಗೆ ನಡೆಸುವೆವು ಎಂಬುದನ್ನು ಸ್ವತಃ ನಿರ್ಣಯಿಸುವಷ್ಟು ಮಟ್ಟಿಗಿನ ಸ್ವಾತಂತ್ರ್ಯವನ್ನು ಆತನು ನಮಗೆ ಕೊಟ್ಟಿದ್ದಾನೆ.—ರೋಮಾಪುರ 14:12; ಇಬ್ರಿಯ 4:13.
6 ಸಂಭವಿಸುವಂತಹ ಪ್ರತಿಯೊಂದು ಘಟನೆಯನ್ನು ದೇವರು ನಿರ್ದೇಶಿಸದೇ ಇರುವ ಇನ್ನೊಂದು ಕಾರಣವು, ಸೈತಾನನು ಏದೆನಿನಲ್ಲಿ ಎಬ್ಬಿಸಿದಂತಹ ವಾದಾಂಶದೊಂದಿಗೆ ಸಂಬಂಧಿಸುತ್ತದೆ. ಸೈತಾನನು ದೇವರ ಪರಮಾಧಿಕಾರಕ್ಕೆ ಸವಾಲನ್ನೊಡ್ಡಿದನು. ಸ್ವಾತಂತ್ರ್ಯವನ್ನು ಪಡೆಯಲಿಕ್ಕಾಗಿರುವ ಒಂದು ಸಂದರ್ಭವೆಂಬಂತೆ ತೋರಿದ ಒಂದು ಅವಕಾಶವನ್ನು ಅವನು ಹವ್ವಳಿಗೆ ನೀಡಿದನು. ಈ ನೀಡಿಕೆಯನ್ನು ಹವ್ವಳು ಮತ್ತು ಅನಂತರ ಅವಳ ಗಂಡನಾದ ಆದಾಮನು ಸ್ವೀಕರಿಸಿದರು. (ಆದಿಕಾಂಡ 3:1-6) ಇದಕ್ಕೆ ಪ್ರತಿಕ್ರಿಯೆಯಲ್ಲಿ, ಸೈತಾನನ ಈ ಸವಾಲು ನ್ಯಾಯಯುಕ್ತವೊ ಇಲ್ಲವೊ ಎಂಬುದನ್ನು ಸಾಬೀತುಪಡಿಸಲಿಕ್ಕಾಗಿ ದೇವರು ಮಾನವರಿಗೆ, ತಾವೇ ಆಳುವಂತೆ ಸಮಯವನ್ನು ಕೊಟ್ಟಿದ್ದಾನೆ. ಆದುದರಿಂದ, ಇಂದು ಜನರು ನಡಿಸುತ್ತಿರುವ ಕೆಟ್ಟ ಸಂಗತಿಗಳಿಗೆ ದೇವರನ್ನು ದೂಷಿಸಸಾಧ್ಯವಿಲ್ಲ. ದಂಗೆಕೋರ ಜನರ ಕುರಿತಾಗಿ ಮೋಶೆಯು ಬರೆದುದು: “ಆದರೆ ಅವರು ದ್ರೋಹಿಗಳೇ, [ದೇವರ] ಮಕ್ಕಳಲ್ಲ; ಇದು ಅವರ ದೋಷವು.”—ಧರ್ಮೋಪದೇಶಕಾಂಡ 32:5.
7. ಭೂಮಿ ಮತ್ತು ಮಾನವಕುಲಕ್ಕಾಗಿ ಯೆಹೋವನ ಉದ್ದೇಶವೇನಾಗಿದೆ?
7 ಸ್ವತಂತ್ರ ಆಯ್ಕೆಯನ್ನು ಮಾಡಲು ಮತ್ತು ಸ್ವತಂತ್ರವಾದ ಆಳ್ವಿಕೆಯಲ್ಲಿ ಪ್ರಯೋಗಗಳನ್ನು ನಡಿಸುವಂತೆ ಯೆಹೋವನು ಅನುಮತಿ ನೀಡಿದ್ದಾನೆಂಬುದು ನಿಜ. ಆದರೆ ಅದೇ ಸಮಯದಲ್ಲಿ ಆತನು ಭೂಮಿಯ ಕಾರ್ಯಕಲಾಪಗಳ ಕುರಿತಾಗಿ ಯಾವುದೇ ಆಸಕ್ತಿ ತೋರಿಸದೆ ಕೈಕಟ್ಟಿಕೊಂಡು ಕುಳಿತುಕೊಂಡಿಲ್ಲ. ಆತನು ಹೀಗೆ ಮಾಡುತ್ತಿದ್ದಲ್ಲಿ, ಆತನು ತನ್ನ ವಾಗ್ದಾನಗಳನ್ನು ನೆರವೇರಿಸುವನೆಂಬ ಯಾವುದೇ ಆಸೆಯು ನಮಗಿರಸಾಧ್ಯವಿರುತ್ತಿರಲಿಲ್ಲ. ಆದಾಮ ಹವ್ವರು ದೇವರ ಪರಮಾಧಿಕಾರದ ವಿರುದ್ಧ ದಂಗೆಯೆದ್ದರೂ, ಭೂಮಿ ಮತ್ತು ಮಾನವಕುಲಕ್ಕಾಗಿ ತನಗಿದ್ದ ಪ್ರೀತಿಪರ ಉದ್ದೇಶವನ್ನು ಯೆಹೋವನು ಬದಲಾಯಿಸಲಿಲ್ಲ. ಆತನು ಖಂಡಿತವಾಗಿಯೂ ಈ ಭೂಮಿಯನ್ನು ಪರಿಪೂರ್ಣ, ವಿಧೇಯ ಮತ್ತು ಸಂತೋಷಭರಿತ ಜನರಿಂದ ತುಂಬಿರುವ ಒಂದು ಪ್ರಮೋದವನವನ್ನಾಗಿ ಮಾರ್ಪಡಿಸುವನು. (ಲೂಕ 23:42, 43) ಆ ಗುರಿಯನ್ನು ಸಾಧಿಸಲಿಕ್ಕಾಗಿ ಯೆಹೋವನು ಪ್ರಗತಿಪರವಾಗಿ ಹೇಗೆ ಕೆಲಸಮಾಡುತ್ತಿದ್ದಾನೆಂಬುದನ್ನು ಆದಿಕಾಂಡದಿಂದ ಪ್ರಕಟನೆಯ ವರೆಗಿನ ಬೈಬಲ್ ದಾಖಲೆಯು ವರ್ಣಿಸುತ್ತದೆ.
ತನ್ನ ಚಿತ್ತವನ್ನು ಪೂರೈಸಲಿಕ್ಕಾಗಿ ದೇವರು ಕ್ರಿಯೆಗೈಯುತ್ತಾನೆ
8. ಇಸ್ರಾಯೇಲ್ಯರನ್ನು ವಾಗ್ದತ್ತ ದೇಶಕ್ಕೆ ತರುವುದರಲ್ಲಿ ಏನು ಒಳಗೂಡಿತ್ತು?
8 ಇಸ್ರಾಯೇಲ್ ಜನರೊಂದಿಗೆ ದೇವರು ವ್ಯವಹರಿಸಿದ ರೀತಿಯಿಂದ, ಆತನು ತನ್ನ ಉದ್ದೇಶವನ್ನು ಖಂಡಿತವಾಗಿಯೂ ನೆರವೇರಿಸುವನೆಂಬುದನ್ನು ದೇವರು ಪ್ರದರ್ಶಿಸಿದನು. ಉದಾಹರಣೆಗೆ, ಇಸ್ರಾಯೇಲ್ಯರನ್ನು ಐಗುಪ್ತದಿಂದ ಬಿಡಿಸಿ, ಅವರನ್ನು ಹಾಲೂ ಜೇನೂ ಹರಿಯುತ್ತಿರುವ ಒಂದು ದೇಶ, ಅಂದರೆ ವಾಗ್ದತ್ತ ದೇಶದೊಳಗೆ ತರುವೆನೆಂದು ಯೆಹೋವನು ಮೋಶೆಗೆ ಆಶ್ವಾಸನೆಯನ್ನು ಕೊಟ್ಟನು. (ವಿಮೋಚನಕಾಂಡ 3:8) ಇದು ಒಂದು ಬಹು ಮುಖ್ಯವಾದ ಹಾಗೂ ಪುನರಾಶ್ವಾಸನೆಯ ಘೋಷಣೆಯಾಗಿತ್ತು. ಇದರಲ್ಲಿ, ಆ ಇಸ್ರಾಯೇಲ್ಯರು ಹಾಗೂ ಅವರ ಸಂಗಡಿಗರನ್ನು ಅಂದರೆ ಸುಮಾರು 30 ಲಕ್ಷ ಜನರನ್ನು ಬಿಡುಗಡೆ ಮಾಡುವುದಕ್ಕೆ ತೀವ್ರವಾದ ವಿರೋಧವನ್ನು ತೋರಿಸುತ್ತಿದ್ದ ಪ್ರಬಲವಾದೊಂದು ರಾಷ್ಟ್ರದಿಂದ ಅವರನ್ನು ಬಿಡಿಸುವುದು ಸೇರಿತ್ತು. (ವಿಮೋಚನಕಾಂಡ 3:19) ಅವರು ಯಾವ ದೇಶಕ್ಕೆ ಆಗಮಿಸಲಿದ್ದರೋ, ಅಲ್ಲಿ ಬಹಳ ಶಕ್ತಿಶಾಲಿಗಳಾದ ಜನಾಂಗಗಳು ವಾಸಿಸುತ್ತಿದ್ದವು, ಮತ್ತು ಇಸ್ರಾಯೇಲ್ಯರ ಆಗಮನವನ್ನು ಅವು ಖಂಡಿತವಾಗಿಯೂ ತಡೆಯಲಿದ್ದವು. (ಧರ್ಮೋಪದೇಶಕಾಂಡ 7:1) ಅಲ್ಲಿಗೆ ಹೋಗುವ ಮಾರ್ಗದಲ್ಲಿ ಒಂದು ಅರಣ್ಯವೂ ಇತ್ತು. ಮತ್ತು ಅಲ್ಲಿ ಇಸ್ರಾಯೇಲ್ಯರಿಗೆ ಆಹಾರ ಮತ್ತು ನೀರಿನ ಅಗತ್ಯವಿತ್ತು. ಈ ಸನ್ನಿವೇಶವು, ಯೆಹೋವನು ತನ್ನ ಮಹಾನ್ ಶಕ್ತಿ ಮತ್ತು ದೇವತ್ವವನ್ನು ಪ್ರದರ್ಶಿಸುವಂತೆ ಅನುಮತಿಸಿತು.—ಯಾಜಕಕಾಂಡ 25:38.
9, 10. (ಎ) ದೇವರ ವಾಗ್ದಾನಗಳು ಭರವಸಾರ್ಹವಾಗಿವೆ ಎಂದು ಯೆಹೋಶುವನು ಏಕೆ ಸಾಕ್ಷ್ಯ ಕೊಡಲು ಶಕ್ತನಾಗಿದ್ದನು? (ಬಿ) ತನ್ನ ನಂಬಿಗಸ್ತರಿಗೆ ದೇವರು ಪ್ರತಿಫಲವನ್ನು ಕೊಡುವ ಸಾಮರ್ಥ್ಯದಲ್ಲಿ ನಮಗೆ ದೃಢಭರವಸೆಯಿರುವುದು ಎಷ್ಟು ಪ್ರಾಮುಖ್ಯವಾಗಿದೆ?
9 ಅನೇಕ ಮಹತ್ಕಾರ್ಯಗಳ ಮೂಲಕ ದೇವರು ಇಸ್ರಾಯೇಲ್ಯರನ್ನು ಐಗುಪ್ತದಿಂದ ಹೊರತಂದನು. ಪ್ರಥಮವಾಗಿ ಆತನು ಐಗುಪ್ತ ರಾಷ್ಟ್ರದ ಮೇಲೆ ಹತ್ತು ವಿನಾಶಕಾರಿ ಬಾಧೆಗಳನ್ನು ಬರಮಾಡಿದನು. ಮುಂದೆ ಆತನು ಕೆಂಪು ಸಮುದ್ರವನ್ನು ವಿಭಾಗಿಸಿ, ಇಸ್ರಾಯೇಲ್ಯರಿಗೆ ಪಲಾಯನಗೈಯುವಂತೆ ಸಹಾಯಮಾಡಿದನು. ಆದರೆ ಅದೇ ಸಮಯದಲ್ಲಿ ಬೆನ್ನಟ್ಟಿಕೊಂಡು ಬರುತ್ತಿದ್ದ ಐಗುಪ್ತ ಸೈನ್ಯವು ಆ ಸಮುದ್ರದಲ್ಲಿ ಮುಳುಗಿ ನಾಶವಾಯಿತು. (ಕೀರ್ತನೆ 78:12, 13, 43-51) ಬಳಿಕ ಆತನು 40 ವರ್ಷಗಳ ವರೆಗೆ ಇಸ್ರಾಯೇಲ್ಯರನ್ನು ಅರಣ್ಯದಲ್ಲಿ ಪರಾಮರಿಸಿದನು. ಆತನು ಅವರಿಗೆ ತಿನ್ನಲು ಮನ್ನವನ್ನು, ಕುಡಿಯಲು ನೀರನ್ನು ಒದಗಿಸಿ, ಅವರ ಉಡುಪು ಸಹ ಸವೆದು ಹೋಗದಂತೆ ಮತ್ತು ಅವರ ಕಾಲುಗಳು ಬಾತುಹೋಗದಂತೆಯೂ ನೋಡಿಕೊಂಡನು. (ಧರ್ಮೋಪದೇಶಕಾಂಡ 8:3, 4) ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸಿದ ನಂತರ, ತಮ್ಮ ಶತ್ರುಗಳ ಮೇಲೆ ವಿಜಯವನ್ನು ಸಾಧಿಸುವಂತೆ ಯೆಹೋವನು ಅವರಿಗೆ ಸಹಾಯಮಾಡಿದನು. ಯೆಹೋವನ ವಾಗ್ದಾನಗಳಲ್ಲಿ ಬಲವಾದ ನಂಬಿಕೆಯನ್ನಿಟ್ಟಿದ್ದ ಯೆಹೋಶುವನು, ಈ ಎಲ್ಲ ವಿಷಯಗಳಿಗೆ ಪ್ರತ್ಯಕ್ಷಸಾಕ್ಷಿಯಾಗಿದ್ದನು. ಆದುದರಿಂದ ಅವನ ಸಮಯದಲ್ಲಿದ್ದ ಹಿರಿಯ ಪುರುಷರಿಗೆ ಅವನು ಭರವಸೆಯಿಂದ ಹೀಗೆ ಹೇಳಲು ಶಕ್ತನಾದನು: “ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ; ಎಲ್ಲವೂ ತಪ್ಪದೆ ನೆರವೇರಿದವೆಂಬದು ನಿಮಗೆ ಮಂದಟ್ಟಾಯಿತಲ್ಲಾ.”—ಯೆಹೋಶುವ 23:14.
10 ತನ್ನನ್ನು ಸೇವಿಸುವವರ ಪರವಾಗಿ ದೇವರು ಕ್ರಿಯೆಗೈಯಲು ಮನಸ್ಸುಳ್ಳವನಾಗಿದ್ದಾನೆ ಮತ್ತು ಶಕ್ತನಾಗಿದ್ದಾನೆಂದು, ಪುರಾತನಕಾಲದ ಯೆಹೋಶುವನಂತೆ ಇಂದು ಕ್ರೈಸ್ತರಿಗೆ ಪೂರ್ಣ ಭರವಸೆಯಿದೆ. ಈ ದೃಢಭರವಸೆಯು ನಮ್ಮ ನಂಬಿಕೆಯ ಒಂದು ಆವಶ್ಯಕ ಭಾಗವಾಗಿದೆ. ಅಪೊಸ್ತಲ ಪೌಲನು ಬರೆದುದು: “ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ; ದೇವರ ಬಳಿಗೆ ಬರುವವನು ದೇವರು . . . ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ.”—ಇಬ್ರಿಯ 11:6.
ದೇವರು ಭವಿಷ್ಯತ್ತನ್ನು ಮುಂಗಾಣುತ್ತಾನೆ
11. ದೇವರು ತನ್ನ ವಾಗ್ದಾನಗಳನ್ನು ಪೂರೈಸುವಂತೆ ಯಾವ ಅಂಶಗಳು ಶಕ್ತಗೊಳಿಸುತ್ತವೆ?
11 ದೇವರು ಇಚ್ಛಾ ಸ್ವಾತಂತ್ರ್ಯ ಮತ್ತು ಸ್ವತಂತ್ರ ಮಾನವ ಆಳ್ವಿಕೆಯನ್ನು ಅನುಮತಿಸುತ್ತಾನಾದರೂ, ತನ್ನ ಉದ್ದೇಶವನ್ನು ಪೂರೈಸಲಿಕ್ಕಾಗಿ ಕ್ರಿಯೆಗೈಯಲು ಬೇಕಾಗಿರುವ ಶಕ್ತಿ ಮಾತ್ರವಲ್ಲ, ಮನಸ್ಸೂ ಆತನಿಗಿದೆ ಎಂಬುದನ್ನು ನಾವು ಇಲ್ಲಿಯ ತನಕ ನೋಡಿದ್ದೇವೆ. ಆದರೂ, ದೇವರ ವಾಗ್ದಾನಗಳು ಖಂಡಿತವಾಗಿಯೂ ಪೂರೈಸಲ್ಪಡುವಂತೆ ನೆರವು ನೀಡುವ ಇನ್ನೊಂದು ಅಂಶ ಸಹ ಇದೆ. (ಯೆಶಾಯ 42:9) ತನ್ನ ಪ್ರವಾದಿಯ ಮೂಲಕ ದೇವರು ಹೇಳಿದ್ದು: “ಪುರಾತನದ ಹಳೇ ಸಂಗತಿಗಳನ್ನು ಜ್ಞಾಪಿಸಿಕೊಳ್ಳಿರಿ; ನಾನೇ ದೇವರು, ನನಗೆ ಸರಿಸಮಾನರಿಲ್ಲ. ಆರಂಭದಲ್ಲಿಯೇ ಅಂತ್ಯವನ್ನು ತಿಳಿಸಿದ್ದೇನೆ; ನನ್ನ ಸಂಕಲ್ಪವು ನಿಲ್ಲುವದು, ನನ್ನ ಇಷ್ಟಾರ್ಥವನ್ನೆಲ್ಲಾ ನೆರವೇರಿಸುವೆನು ಎಂದು ಹೇಳಿ ಇನ್ನೂ ನಡೆಯದಿರುವ ಕಾರ್ಯಗಳನ್ನು ಪುರಾತನ ಕಾಲದಲ್ಲಿಯೇ ಅರುಹಿದ್ದೇನೆ.” (ಯೆಶಾಯ 46:9, 10) ಒಬ್ಬ ಅನುಭವಸ್ಥ ರೈತನಿಗೆ ಯಾವಾಗ ಮತ್ತು ಎಲ್ಲಿ ಬೀಜಗಳನ್ನು ಬಿತ್ತಬೇಕೆಂಬುದು ತಿಳಿದಿರುತ್ತದೆ. ಆದರೆ ಮುಂದೆ ಏನಾಗಬಹುದೆಂಬುದರ ಕುರಿತಾಗಿ ಅವನಿಗೆ ಇನ್ನೂ ಸ್ವಲ್ಪ ಅನಿಶ್ಚಿತತೆ ಇರಬಹುದು. ಆದರೆ, “ಸರ್ವಯುಗಗಳ ಅರಸನು” ತನ್ನ ಉದ್ದೇಶವನ್ನು ನೆರವೇರಿಸಲು ತಾನು ಯಾವಾಗ ಮತ್ತು ಎಲ್ಲಿ ಕ್ರಿಯೆಗೈಯಬೇಕೆಂಬುದನ್ನು ನಿಖರವಾಗಿ ಮುನ್ನೋಡಲಿಕ್ಕಾಗಿ ನಿಷ್ಕೃಷ್ಟವಾದ ಜ್ಞಾನವನ್ನು ಹೊಂದಿರುತ್ತಾನೆ.—1 ತಿಮೊಥೆಯ 1:17.
12. ನೋಹನ ದಿನಗಳಲ್ಲಿ ಯೆಹೋವನು ಮುನ್ನರಿವನ್ನು ಉಪಯೋಗಿಸಿದ್ದು ಹೇಗೆ?
12 ನೋಹನ ದಿನಗಳಲ್ಲಿ ದೇವರು ತನ್ನ ಮುನ್ನರಿವನ್ನು ಬಳಸಿದ ರೀತಿಯನ್ನು ಪರಿಗಣಿಸಿರಿ. ಭೂಮಿಯಲ್ಲಿ ವ್ಯಾಪಕವಾಗಿದ್ದ ಕೆಟ್ಟತನದಿಂದಾಗಿ, ದೇವರು ಅವಿಧೇಯ ಮಾನವಕುಲವನ್ನು ನಾಶಮಾಡಲು ನಿರ್ಣಯಿಸಿದನು. ಇದನ್ನು ಮಾಡಲಿಕ್ಕಾಗಿ ಆತನು ಒಂದು ಸಮಯವನ್ನು ಗೊತ್ತುಪಡಿಸಿದನು. ಅದು 120 ವರ್ಷಗಳ ಬಳಿಕ ನಡೆಯಲಿತ್ತು. (ಆದಿಕಾಂಡ 6:3) ಆ ನಿರ್ದಿಷ್ಟವಾದ ಅವಧಿಯನ್ನು ಗೊತ್ತುಪಡಿಸುವಾಗ, ಯೆಹೋವನು ಕೇವಲ ದುಷ್ಟರ ನಾಶನದ ಕುರಿತು ಯೋಚಿಸಲಿಲ್ಲ. ಯಾಕಂದರೆ ಅದನ್ನು ಆತನು ಯಾವುದೇ ಸಮಯದಲ್ಲಿ ಮಾಡಬಹುದಿತ್ತು. ಯೆಹೋವನು ತನ್ನ ವೇಳಾಪಟ್ಟಿಯಲ್ಲಿ, ನೀತಿವಂತರ ಸಂರಕ್ಷಣೆಗಾಗಿಯೂ ಸಮಯದ ಏರ್ಪಾಡನ್ನು ಮಾಡಿದನು. (ಆದಿಕಾಂಡ 5:29ನ್ನು ಹೋಲಿಸಿರಿ.) ಆತನಿಗಿರುವ ವಿವೇಕದಿಂದಾಗಿ, ಆ ಉದ್ದೇಶವನ್ನು ಪೂರೈಸುವ ಕೆಲಸವನ್ನು ಯಾವ ಸಮಯದಲ್ಲಿ ನೇಮಿಸಬೇಕೆಂಬುದು ದೇವರಿಗೆ ಮುಂಚಿತವಾಗಿ ತಿಳಿದಿತ್ತು. ಆತನು ನೋಹನಿಗೆ ಬೇಕಾಗಿರುವಷ್ಟು ವಿವರವುಳ್ಳ ಮಾಹಿತಿಯನ್ನು ಕೊಟ್ಟನು. ನೋಹನು “ತನ್ನ ಮನೆಯವರ ಸಂರಕ್ಷಣೆಗೋಸ್ಕರ” ಒಂದು ನಾವೆಯನ್ನು ಕಟ್ಟಬೇಕಾಗಿತ್ತು, ಮತ್ತು ದುಷ್ಟರು ಭೌಗೋಲಿಕ ಜಲಪ್ರಳಯದಲ್ಲಿ ನಾಶಗೊಳಿಸಲ್ಪಡಲಿದ್ದರು.—ಇಬ್ರಿಯ 11:7; ಆದಿಕಾಂಡ 6:13, 14, 18, 19.
ಬೃಹತ್ ಪ್ರಮಾಣದ ನಿರ್ಮಾಣ ಯೋಜನೆ
13, 14. ನಾವೆಯನ್ನು ಕಟ್ಟುವ ನೇಮಕವು ಒಂದು ಪಂಥಾಹ್ವಾನವಾಗಿತ್ತು ಏಕೆ?
13 ಈ ನೇಮಕವನ್ನು ನೋಹನ ದೃಷ್ಟಿಕೋನದಿಂದ ಪರಿಗಣಿಸಿರಿ. ನೋಹನು ಒಬ್ಬ ದೇವಪುರುಷನಾಗಿದ್ದುದ್ದರಿಂದ, ಯೆಹೋವನು ಭಕ್ತಿರಹಿತ ಜನರನ್ನು ನಾಶಮಾಡಬಲ್ಲನು ಎಂಬುದು ಅವನಿಗೆ ತಿಳಿದಿತ್ತು. ಆದರೆ ಆ ನಾಶನ ಬರುವ ಮುಂಚೆ, ನಂಬಿಕೆಯನ್ನು ಅಗತ್ಯಪಡಿಸುವ ಒಂದು ಕೆಲಸವನ್ನು ಅವನಿಗೆ ಮಾಡಲಿಕ್ಕಿತ್ತು. ನಾವೆಯನ್ನು ಕಟ್ಟುವುದು ಒಂದು ಬೃಹತ್ ಪ್ರಮಾಣದ ಯೋಜನೆಯಾಗಿತ್ತು. ದೇವರು ಆ ನಾವೆಯ ಅಳತೆಗಳನ್ನು ಕೊಟ್ಟಿದ್ದನು. ಅದು ಇಂದಿನ ಕೆಲವೊಂದು ಆಟದ ಮೈದಾನಗಳಿಗಿಂತಲೂ ಹೆಚ್ಚು ಉದ್ದವಾಗಿದ್ದು, ಐದು ಮಳಿಗೆಯ ಕಟ್ಟಡಕ್ಕಿಂತಲೂ ಎತ್ತರವಾಗಿರಲಿತ್ತು. (ಆದಿಕಾಂಡ 6:15) ಅದನ್ನು ಕಟ್ಟಲಿದ್ದವರು ಅನುಭವವಿಲ್ಲದವರೂ ಕೆಲವೇ ಮಂದಿಯೂ ಆಗಿದ್ದರು. ಇಂದು ಲಭ್ಯವಿರುವ ಅತ್ಯಾಧುನಿಕ ಉಪಕರಣ ಮತ್ತು ಸಾಧನಗಳೂ ಅವರ ಬಳಿ ಇರಲಿಲ್ಲ. ಇದಲ್ಲದೆ ನೋಹನಿಗೆ, ಯೆಹೋವನಂತೆ ಭವಿಷ್ಯತ್ತನ್ನು ಮುಂಗಾಣುವ ಸಾಮರ್ಥ್ಯವಿಲ್ಲದಿದ್ದುದ್ದರಿಂದ ವರ್ಷಗಳು ದಾಟಿದಂತೆ ಆ ನಿರ್ಮಾಣ ಯೋಜನೆಗೆ ಒಂದೊ ಸಹಾಯಮಾಡುವ ಇಲ್ಲವೆ ಅಡ್ಡಿಪಡಿಸಬಹುದಾದ ಯಾವ ಸನ್ನಿವೇಶಗಳು ಏಳುವವು ಎಂಬುದನ್ನು ತಿಳಿಯಲು ಯಾವ ಮಾರ್ಗವೂ ಇರಲಿಲ್ಲ. ನೋಹನು ಅನೇಕ ಸಂಗತಿಗಳ ಕುರಿತಾಗಿ ಗಾಢವಾಗಿ ಆಲೋಚಿಸಿದ್ದಿರಬಹುದು. ಕಟ್ಟಲಿಕ್ಕಾಗಿ ಬೇಕಾಗಿರುವ ಸಾಮಗ್ರಿಗಳನ್ನು ಹೇಗೆ ಶೇಖರಿಸುವುದು? ಪ್ರಾಣಿಗಳನ್ನು ಹೇಗೆ ಒಟ್ಟುಗೂಡಿಸುವುದು? ಯಾವ ರೀತಿಯ ಮತ್ತು ಎಷ್ಟು ಪ್ರಮಾಣದ ಆಹಾರವು ಬೇಕಾಗುವುದು? ಮುಂತಿಳಿಸಲ್ಪಟ್ಟಿರುವ ಜಲಪ್ರಳಯವು ಸಂಭವಿಸುವುದಾದರೂ ಯಾವಾಗ?
14 ಆ ಸಮಯದಲ್ಲಿನ ಸಾಮಾಜಿಕ ಪರಿಸ್ಥಿತಿಗಳನ್ನೂ ಪರಿಗಣಿಸಿರಿ. ದುಷ್ಟತನವು ತುಂಬಿತುಳುಕುತ್ತಿತ್ತು. ದುಷ್ಟ ದೇವದೂತರು ಮತ್ತು ಸ್ತ್ರೀಯರ ಮಿಶ್ರಜಾತಿಯ ಸಂತಾನವಾಗಿದ್ದ ಬಲಿಷ್ಟ ನೆಫೀಲಿಯರು, ಭೂಮಿಯನ್ನು ಹಿಂಸಾಚಾರದಿಂದ ತುಂಬಿಸಿಬಿಟ್ಟಿದ್ದರು. (ಆದಿಕಾಂಡ 6:1-4, 13) ಅಷ್ಟುಮಾತ್ರವಲ್ಲದೆ, ನಾವೆಯನ್ನು ಕಟ್ಟುವ ಕೆಲಸವು, ಗುಪ್ತವಾಗಿ ನಡೆಸಬಹುದಾದ ಒಂದು ಕೆಲಸವಾಗಿರಲಿಲ್ಲ. ನೋಹನು ಏನು ಮಾಡುತ್ತಿದ್ದಾನೆಂದು ಜನರು ಕೇಳಲಿದ್ದರು ಮತ್ತು ಅವನು ಅವರಿಗೆ ಉತ್ತರವನ್ನು ಹೇಳಬೇಕಿತ್ತು. (2 ಪೇತ್ರ 2:5) ಅವರು ಅದನ್ನು ಮೆಚ್ಚುವರೆಂದು ನಿರೀಕ್ಷಿಸಸಾಧ್ಯವಿತ್ತೊ? ಖಂಡಿತವಾಗಿಯೂ ಇಲ್ಲ! ಕೆಲವೊಂದು ವರ್ಷಗಳ ಹಿಂದೆ, ನಂಬಿಗಸ್ತನಾದ ಹನೋಕನೂ ದುಷ್ಟರ ನಾಶನದ ಕುರಿತಾಗಿ ಘೋಷಿಸಿದ್ದನು. ಹನೋಕನ ಸಂದೇಶವು ಜನರಿಗೆ ಎಷ್ಟು ಅಪ್ರಿಯವೆನಿಸಿತೆಂದರೆ, ದೇವರು ಅವನನ್ನು ‘ತೆಗೆದುಕೊಂಡು’ಹೋದನು ಅಥವಾ ಅವನ ಜೀವನವನ್ನು ಅಂತ್ಯಗೊಳಿಸಿದನು. ಅವನ ಶತ್ರುಗಳು ಅವನನ್ನು ಹತಿಸದಂತೆ ದೇವರು ಹೀಗೆ ಮಾಡಿರಬಹುದೆಂದು ತೋರುತ್ತದೆ. (ಆದಿಕಾಂಡ 5:24; ಇಬ್ರಿಯ 11:5; ಯೂದ 14, 15) ನೋಹನು ಸಹ ತದ್ರೀತಿಯಲ್ಲೇ ಜನರಿಗೆ ಇಷ್ಟವಾಗದಂತಹ ಒಂದು ಸಂದೇಶವನ್ನು ಘೋಷಿಸಬೇಕಿತ್ತು ಮಾತ್ರವಲ್ಲ, ಅವನು ಒಂದು ನಾವೆಯನ್ನೂ ಕಟ್ಟಬೇಕಾಗಿತ್ತು. ಆ ನಾವೆಯು ಕಟ್ಟಲ್ಪಡುತ್ತಿದ್ದಂತೆ, ನೋಹನು ತನ್ನ ದುಷ್ಟ ಸಮಕಾಲೀನರ ಎದುರಿನಲ್ಲಿ ತೋರಿಸಿದ ನಂಬಿಕೆಗೆ ಅದು ಒಂದು ಪ್ರಬಲವಾದ ಮರುಜ್ಞಾಪನವಾಗಿರಲಿತ್ತು!
15. ನೋಹನಿಗೆ ತನ್ನ ನೇಮಕವನ್ನು ತಾನು ಪೂರ್ಣಗೊಳಿಸುವೆನೆಂಬ ದೃಢಭರವಸೆಯಿದ್ದದ್ದೇಕೆ?
15 ಆ ಯೋಜನೆಗೆ ಸರ್ವಶಕ್ತ ದೇವರ ಬೆಂಬಲ ಮತ್ತು ಆಶೀರ್ವಾದವಿದೆಯೆಂದು ನೋಹನಿಗೆ ತಿಳಿದಿತ್ತು. ಯಾಕಂದರೆ ಯೆಹೋವನು ತಾನೇ ಅವನಿಗೆ ಆ ಕೆಲಸವನ್ನು ನೇಮಿಸಿದ್ದನಲ್ಲವೊ? ನಾವೆಯು ಪೂರ್ಣಗೊಳಿಸಲ್ಪಟ್ಟ ನಂತರ, ನೋಹ ಮತ್ತು ಅವನ ಕುಟುಂಬದವರು ಅದರೊಳಗೆ ಪ್ರವೇಶಿಸಿ, ಭೌಗೋಲಿಕ ಜಲಪ್ರಲಯದಿಂದ ಸಂರಕ್ಷಿಸಲ್ಪಡುವರೆಂದು ಯೆಹೋವನು ಅವನಿಗೆ ಆಶ್ವಾಸನೆಯನ್ನು ಕೊಟ್ಟಿದ್ದನು. ಇದು ಖಂಡಿತವಾಗಿಯೂ ನಡೆಯುವುದೆಂಬುದನ್ನು, ಒಂದು ಗಂಭೀರವಾದ ಒಪ್ಪಂದವನ್ನು ಮಾಡುವ ಮೂಲಕ ದೇವರು ಒತ್ತಿಹೇಳಿದನು. (ಆದಿಕಾಂಡ 6:18, 19) ಆ ನೇಮಕವನ್ನು ಕೊಡುವ ಮುಂಚೆಯೇ ಅದರಲ್ಲಿ ಒಳಗೂಡಿರುವ ಎಲ್ಲ ಸಂಗತಿಗಳನ್ನು ಯೆಹೋವನು ಮುಂಭಾವಿಸಿ, ಲೆಕ್ಕಹಾಕಿದ್ದನೆಂದು ನೋಹನು ಗ್ರಹಿಸಿದ್ದಿರಬಹುದು. ಅಲ್ಲದೆ, ಅಗತ್ಯವಿರುವಾಗಲೆಲ್ಲ ಮಧ್ಯೆಪ್ರವೇಶಿಸಿ ತನಗೆ ಸಹಾಯಮಾಡುವಂತಹ ಶಕ್ತಿ ಯೆಹೋವನಿಗೆ ಇದೆಯೆಂಬುದು ನೋಹನಿಗೆ ತಿಳಿದಿತ್ತು. ಆದುದರಿಂದ ನೋಹನ ನಂಬಿಕೆಯೇ ಅವನನ್ನು ಕ್ರಿಯೆಗೈಯುವಂತೆ ಪ್ರಚೋದಿಸಿತು. ನೋಹನಿಗೆ, ತನ್ನ ವಂಶಜನಾದ ಅಬ್ರಹಾಮನಂತೆಯೇ, ‘[ದೇವರು] ತನ್ನ ವಾಗ್ದಾನವನ್ನು ನೆರವೇರಿಸುವದಕ್ಕೆ ಸಮರ್ಥನೆಂಬ ಪೂರಾ ಭರವಸೆ’ ಇತ್ತು.—ರೋಮಾಪುರ 4:21.
16. ನಾವೆಯನ್ನು ಕಟ್ಟುವ ಕೆಲಸವು ಮುಂದುವರಿದಂತೆ, ನೋಹನ ನಂಬಿಕೆಯು ಹೇಗೆ ಬಲಗೊಂಡಿತು?
16 ವರ್ಷಗಳು ದಾಟಿದಂತೆ ಮತ್ತು ನಾವೆಯು ರೂಪತಾಳುತ್ತಿದ್ದಂತೆ, ನೋಹನ ನಂಬಿಕೆಯು ಬಲಗೊಳಿಸಲ್ಪಟ್ಟಿತು. ನಿರ್ಮಾಣ ಮತ್ತು ವ್ಯವಸ್ಥಾಪನೆಯ ಸಮಸ್ಯೆಗಳು ಬಗೆಹರಿಸಲ್ಪಟ್ಟವು. ತೊಂದರೆಗಳನ್ನು ಜಯಿಸಲಾಯಿತು. ಯಾವುದೇ ರೀತಿಯ ವಿರೋಧವು ಕೆಲಸವನ್ನು ನಿಲ್ಲಿಸಲು ಸಾಧ್ಯವಿರಲಿಲ್ಲ. ನೋಹನ ಕುಟುಂಬವು ಯೆಹೋವನ ಬೆಂಬಲ ಮತ್ತು ಸಂರಕ್ಷಣೆಯನ್ನು ಅನುಭವಿಸಿತು. ನೋಹನು ಮುಂದೊತ್ತಿದಂತೆ, ‘ಅವನ ನಂಬಿಕೆಯ ಪರೀಕ್ಷಿತ ಗುಣಮಟ್ಟವು ತಾಳ್ಮೆಯನ್ನು ಉಂಟುಮಾಡಿತು.’ (ಯಾಕೋಬ 1:2-4, NW) ಕಟ್ಟಕಡೆಗೆ, ನಾವೆಯು ಪೂರ್ಣಗೊಳಿಸಲ್ಪಟ್ಟಿತು, ಜಲಪ್ರಳಯವು ಬಂತು, ಮತ್ತು ನೋಹ ಹಾಗೂ ಅವನ ಕುಟುಂಬವು ಪಾರಾಗಿ ಉಳಿಯಿತು. ಯೆಹೋಶುವನು ತದನಂತರ ಅನುಭವಿಸಿದಂತೆ, ದೇವರ ವಾಗ್ದಾನಗಳು ಪೂರೈಸಲ್ಪಡುವುದನ್ನು ನೋಹನು ನೋಡಿದನು. ನೋಹನ ನಂಬಿಕೆಗೆ ಪ್ರತಿಫಲವು ಸಿಕ್ಕಿತು.
ಯೆಹೋವನು ಕೆಲಸವನ್ನು ಬೆಂಬಲಿಸುತ್ತಾನೆ
17. ನಮ್ಮ ಸಮಯವು ಯಾವ ರೀತಿಗಳಲ್ಲಿ ನೋಹನ ದಿನಗಳಿಗೆ ಹೋಲುತ್ತದೆ?
17 ನಮ್ಮ ದಿನವು ನೋಹನ ದಿನಗಳಿಗೆ ಸಮಾಂತರವಾಗಿರುವುದು ಎಂದು ಯೇಸು ಮುಂತಿಳಿಸಿದ್ದನು. ದುಷ್ಟರನ್ನು ನಾಶಗೊಳಿಸಲು ದೇವರು ಪುನಃ ನಿರ್ಧರಿಸಿದ್ದಾನೆ, ಮತ್ತು ಇದೆಲ್ಲವೂ ಸಂಭವಿಸುವಂತೆ ಸಮಯವನ್ನು ಗೊತ್ತುಪಡಿಸಿದ್ದಾನೆ. (ಮತ್ತಾಯ 24:36-39) ನೀತಿವಂತರ ಸಂರಕ್ಷಣೆಗಾಗಿಯೂ ಆತನು ತಯಾರಿಯನ್ನು ಮಾಡಿದ್ದಾನೆ. ನೋಹನಿಗೆ ನಾವೆಯನ್ನು ಕಟ್ಟುವ ಕೆಲಸವಿತ್ತು. ಆದರೆ ಇಂದು ದೇವರ ಸೇವಕರಿಗೆ, ಯೆಹೋವನ ಉದ್ದೇಶಗಳನ್ನು ಘೋಷಿಸುವ, ಆತನ ವಾಕ್ಯವನ್ನು ಕಲಿಸುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸವಿದೆ.—ಮತ್ತಾಯ 28:19.
18, 19. ಸುವಾರ್ತೆಯನ್ನು ಸಾರುವ ಕೆಲಸಕ್ಕೆ ಯೆಹೋವನ ಬೆಂಬಲವಿದೆಯೆಂದು ನಮಗೆ ಹೇಗೆ ತಿಳಿದಿದೆ?
18 ಯೆಹೋವನು ನೋಹನಿಗೆ ಬೆಂಬಲ ನೀಡುತ್ತಾ, ಅವನನ್ನು ಪೋಷಿಸದೇ ಇರುತ್ತಿದ್ದಲ್ಲಿ, ನಾವೆಯನ್ನು ಕಟ್ಟುವ ಕೆಲಸವು ಪೂರ್ಣಗೊಳ್ಳುತ್ತಿರಲಿಲ್ಲ. (ಕೀರ್ತನೆ 127:1ನ್ನು ಹೋಲಿಸಿರಿ.) ಅದೇ ರೀತಿಯಲ್ಲಿ, ಯೆಹೋವನ ಬೆಂಬಲವು ಇರದೇ ಹೋಗುತ್ತಿದ್ದಲ್ಲಿ, ನಿಜ ಕ್ರೈಸ್ತತ್ವವು ಏಳಿಗೆ ಹೊಂದುವ ಮಾತನ್ನಂತೂ ಬಿಡಿ, ಅದು ಇಂದಿನ ವರೆಗೆ ಪಾರಾಗಲೂ ಸಾಧ್ಯವಿರುತ್ತಿರಲಿಲ್ಲ. ಈ ಸಂಗತಿಯನ್ನು, ಪ್ರಥಮ ಶತಮಾನದಲ್ಲಿ ಒಬ್ಬ ಮಾನ್ಯ ಫರಿಸಾಯನೂ ಧರ್ಮಶಾಸ್ತ್ರದ ಶಿಕ್ಷಕನೂ ಆಗಿದ್ದ ಗಮಲೀಯೇಲನು ಒಪ್ಪಿಕೊಂಡನು. ಯೆಹೂದಿ ಸನ್ಹೇದ್ರಿನ್ ಈ ಅಪೊಸ್ತಲರನ್ನು ಕೊಲ್ಲಲು ಬಯಸಿದಾಗ, ಅವನು ಆ ನ್ಯಾಯಸಭೆಯನ್ನು ಎಚ್ಚರಿಸಿದ್ದು: “ನೀವು ಆ ಮನುಷ್ಯರ ಗೊಡವೆಗೆ ಹೋಗಬೇಡಿರಿ, ಅವರನ್ನು ಬಿಡಿರಿ; ಯಾಕಂದರೆ ಈ ಯೋಚನೆಯು ಅಥವಾ ಈ ಕೆಲಸವು ಮನುಷ್ಯರಿಂದಾಗಿದ್ದರೆ ತಾನೇ ಕೆಡುವದು; ಅದು ದೇವರಿಂದಾಗಿದ್ದರೆ ಅದನ್ನು ಕೆಡಿಸುವದಕ್ಕೆ ನಿಮ್ಮಿಂದ ಆಗುವದಿಲ್ಲ. ನೀವು ಒಂದು ವೇಳೆ ದೇವರ ಮೇಲೆ ಯುದ್ಧಮಾಡುವವರಾಗಿ ಕಾಣಿಸಿಕೊಂಡೀರಿ.”—ಅ. ಕೃತ್ಯಗಳು 5:38, 39.
19 ಪ್ರಥಮ ಶತಮಾನದಲ್ಲಿ ಮತ್ತು ಇಂದು ಕೂಡ ಸಾರುವ ಚಟುವಟಿಕೆಯಲ್ಲಿ ಲಭಿಸಿರುವ ಯಶಸ್ಸು, ಅದು ಮನುಷ್ಯರ ಕೆಲಸವಲ್ಲ ಬದಲಾಗಿ ದೇವರ ಕೆಲಸವಾಗಿದೆ ಎಂಬುದನ್ನು ರುಜುಪಡಿಸಿದೆ. ಈ ಕೆಲಸವು ಇಷ್ಟೊಂದು ವ್ಯಾಪಕವಾಗಿ ಸಫಲವಾಗುವಂತೆ ಸಹಾಯಮಾಡಿರುವ ರೋಚಕ ಪರಿಸ್ಥಿತಿಗಳು ಮತ್ತು ವಿಕಸನಗಳನ್ನು ಮುಂದಿನ ಲೇಖನವು ಚರ್ಚಿಸುವುದು.
ಎಂದೂ ಬಿಟ್ಟುಕೊಡದಿರಿ!
20. ನಾವು ಸುವಾರ್ತೆಯನ್ನು ಸಾರುವಾಗ, ನಮ್ಮನ್ನು ಯಾರು ಬೆಂಬಲಿಸುತ್ತಾರೆ?
20 ನಾವು ‘ಕಠಿನಕಾಲಗಳಲ್ಲಿ’ ಜೀವಿಸುತ್ತಿರುವುದಾದರೂ, ಎಲ್ಲವೂ ಯೆಹೋವನ ಹತೋಟಿಯೊಳಗೆ ಇದೆಯೆಂಬುದರ ಖಾತ್ರಿ ನಮಗಿರಸಾಧ್ಯವಿದೆ. ಈ ದುಷ್ಟ ವಿಷಯಗಳ ವ್ಯವಸ್ಥೆಯನ್ನು ಅಂತ್ಯಗೊಳಿಸಲು ದೇವರ ನೇಮಿತ ಸಮಯವು ಬರುವ ಮುಂಚೆ ಸುವಾರ್ತೆಯನ್ನು ಸಾರುವ ಕೆಲಸವನ್ನು ದೇವರ ಜನರು ಪೂರೈಸುತ್ತಿರುವಾಗ, ಆತನು ಅವರನ್ನು ಬೆಂಬಲಿಸಿ ಪೋಷಿಸುತ್ತಿದ್ದಾನೆ. (2 ತಿಮೊಥೆಯ 3:1; ಮತ್ತಾಯ 24:14) ನಾವು ಆತನೊಂದಿಗೆ “ಜೊತೆಕೆಲಸದವರು” ಆಗಿರುವಂತೆ ಯೆಹೋವನು ಆಮಂತ್ರಿಸುತ್ತಾನೆ. (1 ಕೊರಿಂಥ 3:9) ಈ ಕೆಲಸದಲ್ಲಿ ಯೇಸು ಕ್ರಿಸ್ತನೂ ನಮ್ಮೊಂದಿಗಿದ್ದಾನೆ ಮತ್ತು ನಾವು ದೇವದೂತರ ಬೆಂಬಲ ಮತ್ತು ನಿರ್ದೇಶನದ ಮೇಲೆ ಆತುಕೊಳ್ಳಸಾಧ್ಯವಿದೆ ಎಂದು ನಮಗೆ ಆಶ್ವಾಸನೆಯನ್ನು ನೀಡಲಾಗಿದೆ.—ಮತ್ತಾಯ 28:20; ಪ್ರಕಟನೆ 14:6.
21. ನಾವು ಯಾವ ದೃಢನಂಬಿಕೆಯನ್ನು ಎಂದಿಗೂ ಬಿಟ್ಟುಕೊಡಬಾರದು?
21 ನೋಹ ಮತ್ತು ಅವನ ಕುಟುಂಬವು ಯೆಹೋವನ ವಾಗ್ದಾನಗಳಲ್ಲಿ ನಂಬಿಕೆಯನ್ನಿಟ್ಟದ್ದರಿಂದ, ಅವರು ಜಲಪ್ರಳಯವನ್ನು ಪಾರಾದರು. ಇಂದು ಅದೇ ರೀತಿಯ ನಂಬಿಕೆಯನ್ನು ತೋರಿಸುವವರು, ಬರಲಿರುವ “ಮಹಾ ಸಂಕಟ”ದಿಂದ ರಕ್ಷಿಸಲ್ಪಡುವರು. (ಪ್ರಕಟನೆ 7:14, NW) ನಾವು ನಿಜವಾಗಿಯೂ ರೋಮಾಂಚಕಾರಿಯಾದ ಸಮಯಗಳಲ್ಲಿ ಜೀವಿಸುತ್ತಿದ್ದೇವೆ. ಬಹು ಮುಖ್ಯವಾದ ಘಟನೆಗಳು ಮುಂದೆ ನಡೆಯಲಿವೆ! ಶೀಘ್ರದಲ್ಲೇ ದೇವರು ಮಹಿಮಾಯುತವಾದ ನೂತನಾಕಾಶವನ್ನೂ ನೂತನಭೂಮಂಡಲವನ್ನೂ ಬರಮಾಡುವನು ಮತ್ತು ಅದರಲ್ಲಿ ನೀತಿಯು ವಾಸಿಸುವುದು. (2 ಪೇತ್ರ 3:13) ದೇವರು ಏನನ್ನು ಹೇಳುತ್ತಾನೊ, ಅದನ್ನು ಆತನು ಮಾಡಲೂ ಶಕ್ತನಾಗಿದ್ದಾನೆಂಬ ನಿಮ್ಮ ಗಾಢನಂಬಿಕೆಯನ್ನು ಎಂದಿಗೂ ಬಿಟ್ಟುಕೊಡದಿರಿ.—ರೋಮಾಪುರ 4:21.
ಜ್ಞಾಪಿಸಿಕೊಳ್ಳಬೇಕಾದ ಅಂಶಗಳು
◻ ಯೆಹೋವನು ಮನುಷ್ಯರ ಪ್ರತಿಯೊಂದು ಕೆಲಸವನ್ನೂ ನಿಯಂತ್ರಿಸುವುದಿಲ್ಲವೇಕೆ?
◻ ಯೆಹೋವನಿಗೆ ತನ್ನ ಉದ್ದೇಶವನ್ನು ಪೂರೈಸುವ ಸಾಮರ್ಥ್ಯ ಇದೆಯೆಂಬುದು, ಇಸ್ರಾಯೇಲ್ಯರೊಂದಿಗೆ ಆತನು ವ್ಯವಹರಿಸಿದಂತಹ ರೀತಿಯಿಂದ ಹೇಗೆ ತೋರಿಬರುತ್ತದೆ?
◻ ಭವಿಷ್ಯತ್ತನ್ನು ಮುಂಗಾಣುವ ಸಾಮರ್ಥ್ಯವು, ನೋಹನ ದಿನಗಳಲ್ಲಿ ಹೇಗೆ ಪ್ರದರ್ಶಿಸಲ್ಪಟ್ಟಿತು?
◻ ದೇವರ ವಾಗ್ದಾನಗಳಲ್ಲಿ ನಮಗೆ ಯಾವ ದೃಢಭರವಸೆ ಇರಸಾಧ್ಯವಿದೆ?