ಅವರು ಯೆಹೋವನ ಚಿತ್ತವನ್ನು ಮಾಡಿದರು
ಮರಿಯಳು “ಉತ್ತಮ ಭಾಗವನ್ನು” ಆರಿಸಿಕೊಳ್ಳುತ್ತಾಳೆ
ಯೇಸುವಿನ ದಿನದಲ್ಲಿ, ಯೆಹೂದಿ ಸ್ತ್ರೀಯರು ರಬ್ಬಿ ಸಂಬಂಧಿತ ಸಂಪ್ರದಾಯಗಳಿಂದ ಬಹಳವಾಗಿ ನಿರ್ಬಂಧಿಸಲ್ಪಟ್ಟಿದ್ದರು. ಈ ಕಾರಣ, ಅವರು ಧರ್ಮಶಾಸ್ತ್ರದ ಅಧ್ಯಯನವನ್ನು ಮಾಡುವಂತಿರಲಿಲ್ಲ. ಇದರ ವಿಷಯವಾಗಿ ಮಿಷ್ನಾದಲ್ಲಿ ಉಲ್ಲೇಖಿಸಲ್ಪಟ್ಟ ಒಂದು ಅಭಿಪ್ರಾಯವು ಹೇಳಿದ್ದು: “ಯಾವನೇ ಪುರುಷನು ತನ್ನ ಮಗಳಿಗೆ ಧರ್ಮಶಾಸ್ತ್ರದ ಜ್ಞಾನವನ್ನು ನೀಡುವುದಾದರೆ, ಅದು ಅವಳಿಗೆ ಹಾದರವನ್ನು ಕಲಿಸಿದಂತಿರುತ್ತದೆ.”—ಸೋಥಾ 3:4.
ಈ ಕಾರಣದಿಂದಾಗಿ, ಪ್ರಥಮ ಶತಮಾನದ ಯೂದಾಯದಲ್ಲಿ ವಾಸಿಸುತ್ತಿದ್ದ ಅನೇಕ ಸ್ತ್ರೀಯರು ಸುಶಿಕ್ಷಿತರಾಗಿರಲಿಲ್ಲ. “ಯೇಸುವಿನ ಶುಶ್ರೂಷೆಯು ಆರಂಭಗೊಳ್ಳುವ ಮೊದಲು, ಯೆಹೂದಿ ಸ್ತ್ರೀಯರಿಗೆ ಒಬ್ಬ ಮಹಾ ಬೋಧಕನ ಶಿಷ್ಯೆಯರಾಗುವ ಅನುಮತಿ ಇರಲಿಲ್ಲ. ಹೀಗಿರುವಾಗ, ಅಂತಹ ಒಬ್ಬ ಬೋಧಕನೊಂದಿಗೆ ಸಂಚರಿಸುವ ಇಲ್ಲವೆ ಮಕ್ಕಳನ್ನು ಹೊರತುಪಡಿಸಿ ಬೇರೆ ಯಾರಿಗೂ ಉಪದೇಶ ನೀಡುವ ಸಂಗತಿಯು, ಯೋಚಿಸಲೂ ಅಸಾಧ್ಯವಾದಂತಹ ವಿಷಯವಾಗಿತ್ತು,” ಎಂದು ದಿ ಆ್ಯಂಕರ್ ಬೈಬಲ್ ಡಿಕ್ಷನೆರಿ ಹೇಳುತ್ತದೆ. ಸ್ತ್ರೀಯರನ್ನು ಮತ್ತಷ್ಟೂ ತುಚ್ಛೀಕರಿಸುತ್ತಾ, ಪುರುಷನೊಬ್ಬನು ಬಹಿರಂಗವಾಗಿ ಒಬ್ಬ ಸ್ತ್ರೀಯೊಂದಿಗೆ ಮಾತಾಡಬಾರದೆಂಬ ಕಟ್ಟಳೆಯನ್ನೂ ಕೆಲವು ಧಾರ್ಮಿಕ ಮುಖಂಡರು ವಿಧಿಸಿದರು!
ಯೇಸು ಇಂತಹ ಅತಿರೇಕ ಮನೋಭಾವಗಳನ್ನು ಕಡೆಗಣಿಸಿದನು. ಅವನು ಸ್ತ್ರೀಯರಿಗೂ ಪುರುಷರಿಗೂ ಕಲಿಸಿದನು, ಮತ್ತು ಅವನ ಹಿಂಬಾಲಕರಲ್ಲಿ ಸ್ತ್ರೀಪುರುಷರಿಬ್ಬರೂ ಸೇರಿದ್ದರು. (ಲೂಕ 8:1-3) ಒಮ್ಮೆ, ಅವನು ಮಾರ್ಥ ಮತ್ತು ಮರಿಯರೆಂಬ ಸ್ತ್ರೀಯರ ಅತಿಥಿಯಾಗಿದ್ದನು. (ಲೂಕ 10:38) ಇವರಿಬ್ಬರೂ ಲಾಜರನ ಸಹೋದರಿಯರಾಗಿದ್ದು, ಮೂವರೂ ಯೇಸುವಿನ ಶಿಷ್ಯರು ಹಾಗೂ ಒಳ್ಳೆಯ ಮಿತ್ರರು ಸಹ ಆಗಿದ್ದರು. (ಯೋಹಾನ 11:5) ಈ ಕುಟುಂಬವು ಸಾಕಷ್ಟು ಜನಪ್ರಿಯವಾಗಿದ್ದಿರಬಹುದು, ಏಕೆಂದರೆ ಲಾಜರನು ಮೃತಪಟ್ಟಾಗ ಮಾರ್ಥ ಮತ್ತು ಮರಿಯರನ್ನು ಸಂತೈಸಲು ಜನಸಮೂಹವೇ ಬಂದಿತ್ತು. ವಿಷಯವು ಏನೇ ಆಗಿರಲಿ, ಯೇಸು ಅವರ ಮನೆಯಲ್ಲಿ ಅತಿಥಿಯಾಗಿದ್ದಾಗ ಸಂಭವಿಸಿದ ಘಟನೆಯು, ಅವರಿಗೆ ಮಾತ್ರವಲ್ಲ ನಮಗೂ ಒಂದು ಅತ್ಯಮೂಲ್ಯ ಪಾಠವನ್ನು ಕಲಿಸುತ್ತದೆ.
ಯೇಸುವಿನ ಪಾದಗಳ ಬಳಿಯಲ್ಲಿ ಕುಳಿತುಕೊಂಡು ಕಲಿಯುವುದು
ಮಾರ್ಥ ಮತ್ತು ಮರಿಯರಿಬ್ಬರೂ ಯೇಸುವಿಗೆ ಮೃಷ್ಟಾನ್ನ ಭೋಜನವನ್ನು ನೀಡಲು ಕಾತುರರಾಗಿದ್ದರೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಇದು ಅವರ ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿಯೂ ಇದ್ದಿರಬಹುದು. (ಹೋಲಿಸಿ ಯೋಹಾನ 12:1-3.) ಆದರೆ, ಅವರ ಅತಿಥಿಯು ಆಗಮಿಸಿದಾಗ, ಮರಿಯಳು ‘ಸ್ವಾಮಿಯ ಪಾದಗಳ ಬಳಿಯಲ್ಲಿ ಕೂತುಕೊಂಡು ಆತನ ವಾಕ್ಯವನ್ನು ಕೇಳಲಾರಂಭಿಸಿದಳು.’ (ಲೂಕ 10:39) ಇಂತಹ ತೀವ್ರಾಸಕ್ತಿಯುಳ್ಳ ಒಬ್ಬ ಯಥಾರ್ಥವಂತಳಿಗೆ ಬೋಧಿಸುವುದರಿಂದ ಮನುಷ್ಯರ ಯಾವ ಸಂಪ್ರದಾಯವೂ ಯೇಸುವನ್ನು ತಡೆಯಲಿಲ್ಲ! ಮರಿಯಳು ಯೇಸುವಿನ ಮುಂದೆ ಕುಳಿತುಕೊಂಡು, ತನ್ನ ಬೋಧಕನು ಕಲಿಸುತ್ತಿರುವಾಗ ಅದರಲ್ಲಿ ಸಂಪೂರ್ಣವಾಗಿ ತಲ್ಲೀನಳಾಗಿರುವ ವಿದ್ಯಾರ್ಥಿನಿಯ ಸ್ಥಾನದಲ್ಲಿ ತನ್ನನ್ನು ಇರಿಸಿಕೊಂಡದ್ದನ್ನು ನಾವು ಕಲ್ಪಿಸಿಕೊಳ್ಳಸಾಧ್ಯವಿದೆ.—ಹೋಲಿಸಿ ಧರ್ಮೋಪದೇಶಕಾಂಡ 33:3; ಅ. ಕೃತ್ಯಗಳು 22:3.
ಮರಿಯಳ ಸ್ವಭಾವಕ್ಕೆ ತದ್ವಿರುದ್ಧವಾಗಿ, ಮಾರ್ಥಳು “ಅನೇಕ ಕೆಲಸಗಳ ಕಡೆಗೆ ತನ್ನ ಮನಸ್ಸನ್ನು ತಿರುಗಿಸಿದ್ದಳು.” (NW) ಭೋಜನಕ್ಕೆ ಅನೇಕ ಭಕ್ಷ್ಯಗಳನ್ನು ತಯಾರಿಸುತ್ತಾ, ಅವಳು ತನ್ನ ಕೆಲಸಗಳಲ್ಲಿ ತೀರ ಮಗ್ನಳಾಗಿದ್ದಳು. ಆದರೆ, ಅವಳ ತಂಗಿಯು ಯೇಸುವಿನ ಪಾದಗಳ ಬಳಿಯಲ್ಲಿ ಕುಳಿತುಕೊಂಡಾಗ, ಕೆಲಸದ ಪೂರಾ ಹೊರೆಯು ತನ್ನ ಮೇಲೆ ಬಿದ್ದದ್ದನ್ನು ನೋಡಿ ಮಾರ್ಥಳು ಕೋಪಗೊಂಡಳು. ಆದುದರಿಂದ, “ಸ್ವಾಮೀ, ನನ್ನ ತಂಗಿಯು ಸೇವೆಗೆ ನನ್ನೊಬ್ಬಳನ್ನೇ ಬಿಟ್ಟಿದ್ದಾಳೆ, ಇದಕ್ಕೆ ನಿನಗೆ ಚಿಂತೆಯಿಲ್ಲವೋ? ನನಗೆ ನೆರವಾಗಬೇಕೆಂದು ಆಕೆಗೆ ಹೇಳು” ಎನ್ನುತ್ತಾ ಅವಳು ಯೇಸುವಿನ ಸಂಭಾಷಣೆಯನ್ನು ತಡೆದಿರಬಹುದು.—ಲೂಕ 10:40.
ಮಾರ್ಥಳು ಈ ರೀತಿ ವಿನಂತಿಸಿದ್ದರಲ್ಲಿ ಯಾವ ತಪ್ಪೂ ಇರಲಿಲ್ಲ. ಎಷ್ಟೆಂದರೂ, ಒಂದು ಗುಂಪಿಗಾಗಿ ಊಟವನ್ನು ತಯಾರಿಸುವುದು ಕಠಿನ ಕೆಲಸವಾಗಿದೆ, ಮತ್ತು ಆ ಹೊರೆಯು ಒಬ್ಬ ವ್ಯಕ್ತಿಯ ಮೇಲೆಯೇ ಬೀಳಬಾರದು. ಆದರೆ, ಅವಳ ಹೇಳಿಕೆಯನ್ನು ಉಪಯೋಗಿಸುತ್ತಾ, ಯೇಸು ಒಂದು ಅತ್ಯಮೂಲ್ಯವಾದ ಪಾಠವನ್ನು ಕಲಿಸಲು ಬಯಸಿದನು. ಅವನಂದದ್ದು: “ಮಾರ್ಥಳೇ, ಮಾರ್ಥಳೇ, ನೀನು ಅನೇಕ ವಿಷಯವಾಗಿ ಚಿಂತೆಯಲ್ಲಿಯೂ ಗಡಿಬಿಡಿಯಲ್ಲಿಯೂ ಸಿಕ್ಕಿಕೊಂಡಿದ್ದೀ. ಕೆಲವೇ ಭಕ್ಷ್ಯಗಳು ಮಾತ್ರ ಬೇಕಾದದ್ದು, ಅಥವಾ ಒಂದೇ ಸಾಕು. ಆದರೆ, ಮರಿಯಳ ವಿಷಯದಲ್ಲಾದರೊ, ಅವಳು ಉತ್ತಮ ಭಾಗವನ್ನು ಆರಿಸಿಕೊಂಡಿದ್ದಾಳೆ; ಅದು ಆಕೆಯಿಂದ ತೆಗೆಯಲ್ಪಡುವದಿಲ್ಲ.”—ಲೂಕ 10:41, 42, NW.
ಮಾರ್ಥಳಿಗೆ ಆತ್ಮಿಕ ವಿಷಯಗಳಲ್ಲಿ ಅಭಿರುಚಿ ಇರಲಿಲ್ಲವೆಂದು ಯೇಸು ಹೇಳುತ್ತಿರಲಿಲ್ಲ. ಇದಕ್ಕೆ ತದ್ವಿರುದ್ಧವಾಗಿ, ಅವಳು ತುಂಬ ದೈವಭಕ್ತಿಯುಳ್ಳ ಸ್ತ್ರೀಯೆಂಬುದು ಅವನಿಗೆ ಗೊತ್ತಿತ್ತು.a ತನ್ನ ಭಕ್ತಿಯ ಕಾರಣದಿಂದಲೇ ಅವಳು ಯೇಸುವನ್ನು ಮನೆಗೆ ಆಮಂತ್ರಿಸಿದ್ದಳು. ಹೀಗಿರುವಾಗ, ಮಾರ್ಥಳು ಊಟವನ್ನು ತಯಾರಿಸುವುದರ ಬಗ್ಗೆಯೇ ಬಹಳವಾಗಿ ಚಿಂತಿಸುತ್ತಾ, ದೇವಪುತ್ರನಿಂದ ವೈಯಕ್ತಿಕ ಉಪದೇಶವನ್ನು ಪಡೆದುಕೊಳ್ಳುವ ಆ ಸುವರ್ಣಾವಕಾಶವನ್ನು ಕಳೆದುಕೊಳ್ಳುತ್ತಿದ್ದಳೆಂದು ಯೇಸು ನಯವಾಗಿ ಖಂಡಿಸುತ್ತಾ ಅವಳಿಗೆ ತಿಳಿಸಿದನು.
ಮನೆಗೆಲಸಗಳಲ್ಲಿ ಒಬ್ಬ ಸ್ತ್ರೀಗಿರುವ ಸಾಮರ್ಥ್ಯದಿಂದಲೇ ಅವಳ ಯೋಗ್ಯತೆಯನ್ನು ಅಳೆಯಬಹುದೆಂಬ ಅಭಿಪ್ರಾಯವು, ಆ ದಿನದ ಸಂಸ್ಕೃತಿಯಿಂದ ಸಮರ್ಥಿಸಲ್ಪಟ್ಟಿತು. ಆದರೆ ಸ್ತ್ರೀಯರು ಸಹ ಪುರುಷರಂತೆ, ದೇವಪುತ್ರನ ಪಾದಗಳ ಬಳಿಯಲ್ಲಿ ಕುಳಿತುಕೊಂಡು, ಜೀವದಾಯಕ ವಿಷಯಗಳನ್ನು ಆಲಿಸಬಹುದೆಂದು ಯೇಸುವಿನ ಮಾತುಗಳು ತೋರಿಸಿದವು. (ಯೋಹಾನ 4:7-15; ಅ. ಕೃತ್ಯಗಳು 5:14) ಇದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವಾಗ, ಮಾರ್ಥಳಿಗೆ ತನ್ನ ಸ್ವಾಮಿಯ ಪಾದಗಳ ಬಳಿಯಲ್ಲಿ ಕುಳಿತುಕೊಂಡು, ಅವನಿಂದ ಕಲಿತುಕೊಳ್ಳುವ ಸಮಯಾವಕಾಶವನ್ನು ಒದಗಿಸಸಾಧ್ಯವಾಗುವಂತೆ ಕೆಲವೇ ಭಕ್ಷ್ಯಗಳನ್ನು, ಇಲ್ಲವೆ ಒಂದೇ ಒಂದು ಭಕ್ಷ್ಯವನ್ನು ಮಾಡುವುದು ಎಷ್ಟೋ ಮೇಲಾಗಿರುತ್ತಿತ್ತು.—ಹೋಲಿಸಿ ಮತ್ತಾಯ 6:25.
ನಮಗಾಗಿರುವ ಪಾಠ
ಇಂದು, “ಜೀವಜಲವನ್ನು ಕ್ರಯವಿಲ್ಲದೆ ತೆಗೆದು”ಕೊಳ್ಳಿರಿ ಎಂಬ ಯೇಸುವಿನ ಆಮಂತ್ರಣಕ್ಕೆ ಪ್ರತಿಕ್ರಿಯಿಸುವವರಲ್ಲಿ ಸ್ತ್ರೀಪುರುಷರಿಬ್ಬರೂ ಸೇರಿದ್ದಾರೆ. (ಪ್ರಕಟನೆ 22:17) ಪ್ರೀತಿಯಿಂದ ಪ್ರಚೋದಿತರಾದ ಕೆಲವರು, ಮಾರ್ಥಳಂತೆ, ಜೊತೆ ವಿಶ್ವಾಸಿಗಳ ಅಗತ್ಯಗಳನ್ನು ಪೂರೈಸುವುದರಲ್ಲಿ ಬಹಳಷ್ಟು ಪ್ರಯಾಸಪಡುತ್ತಾರೆ. ಅವರು ವ್ಯಾವಹಾರಿಕ ಜ್ಞಾನವುಳ್ಳವರೂ ಕಾರ್ಯತತ್ಪರರೂ ಆಗಿರುವುದರಿಂದ, ಪ್ರೀತಿಯಿಂದ ಪ್ರಚೋದಿತವಾದ ಅವರ ಕ್ರಿಯೆಗಳಿಗೆ ತಕ್ಕ ಪ್ರತಿಫಲವನ್ನು ನೀಡುವ ವಾಗ್ದಾನವನ್ನು ಯೆಹೋವನು ನೀಡುತ್ತಾನೆ. (ಇಬ್ರಿಯ 6:10; 13:16) ಇತರರು, ಹೆಚ್ಚುಕಡಿಮೆ ಮರಿಯಳನ್ನು ಹೋಲುತ್ತಾರೆ. ಅವರು ಸೌಮ್ಯ ಸ್ವಭಾವದವರೂ ಆತ್ಮಿಕ ವಿಷಯಗಳ ಕಡೆಗೆ ಗಮನಹರಿಸುವವರೂ ಆಗಿದ್ದಾರೆ. ದೇವರ ವಾಕ್ಯದ ಕುರಿತು ಮನನ ಮಾಡಲು ಅವರು ತೋರಿಸುವ ತೀವ್ರಾಸಕ್ತಿಯು, ನಂಬಿಕೆಯಲ್ಲಿ ಬಲವಾಗಿ ಬೇರೂರಿರುವಂತೆ ಅವರಿಗೆ ಸಹಾಯ ಮಾಡುತ್ತದೆ.—ಎಫೆಸ 3:17-19.
ಈ ಎರಡೂ ಸ್ವಭಾವದ ವ್ಯಕ್ತಿಗಳು ಕ್ರೈಸ್ತ ಸಭೆಯಲ್ಲಿ ಒಂದು ಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ. ಆದರೆ, ಎಲ್ಲರೂ ಆತ್ಮಿಕ ವಿಷಯಗಳಿಗೆ ಪ್ರಥಮ ಸ್ಥಾನವನ್ನು ಕೊಡುತ್ತಾ, ‘ಉತ್ತಮವಾದ ಭಾಗವನ್ನು ಆರಿಸಿಕೊಳ್ಳಬೇಕಾಗಿದೆ.’ ಉತ್ತಮ ಕಾರ್ಯಗಳು ಯಾವುವೆಂದು ವಿವೇಚಿಸುವ ಮೂಲಕ, ನಾವು ಯೆಹೋವನ ಅನುಗ್ರಹವನ್ನು ಮತ್ತು ಆಶೀರ್ವಾದವನ್ನು ಪಡೆದುಕೊಳ್ಳುವೆವು.—ಫಿಲಿಪ್ಪಿ 1:9-11.
[ಅಧ್ಯಯನ ಪ್ರಶ್ನೆಗಳು]
a ಮಾರ್ಥಳು ಬಲವಾದ ನಂಬಿಕೆಯುಳ್ಳ ಆತ್ಮಿಕ ಸ್ತ್ರೀಯೆಂಬುದು, ಅವಳ ಸಹೋದರನಾದ ಲಾಜರನ ಮರಣದ ನಂತರ ಯೇಸುವಿನೊಂದಿಗೆ ನಡೆದ ಸಂಭಾಷಣೆಯಿಂದ ವ್ಯಕ್ತವಾಗುತ್ತದೆ. ಈ ಸಂದರ್ಭದಲ್ಲಿ, ತನ್ನ ಸ್ವಾಮಿಯನ್ನು ಭೇಟಿಮಾಡಲು ತೀವ್ರಾಸ್ತಕಿಯನ್ನು ತೋರಿಸಿದವಳು ಮಾರ್ಥಳೇ ಆಗಿದ್ದಳು.—ಯೋಹಾನ 11:19-29.