ನಿಜವಾಗಿಯೂ ಚಿಂತೆ ತೋರಿಸುವವನೊಬ್ಬನು ಇದ್ದಾನೆ
ತಾವು ನಿಜವಾಗಿಯೂ ಕಾಳಜಿವಹಿಸುತ್ತೇವೆಂದು ತೋರಿಸುವ ಸಾವಿರಾರು ಜನರು ಈಗಲೂ ಇದ್ದಾರೆ. ಇತರರ ಸಮಸ್ಯೆಗಳು ತಮಗೆ ಸಂಬಂಧಿಸಿದ ವಿಷಯವಲ್ಲವೆಂಬ ನಿರ್ದಯಿ, ಸ್ವಾರ್ಥಪರ ದೃಷ್ಟಿಕೋನ ಅವರಿಗಿಲ್ಲ. ಅದಕ್ಕೆ ಬದಲಾಗಿ, ಅವರು ಕೆಲವೊಮ್ಮೆ ತಮ್ಮ ಜೀವವನ್ನೂ ಅಪಾಯಕ್ಕೊಡ್ಡಿ, ಇತರರ ಕಷ್ಟವನ್ನು ದೂರಮಾಡಲು ತಮ್ಮಿಂದಾದುದೆಲ್ಲವನ್ನೂ ಮಾಡುತ್ತಾರೆ. ಇದನ್ನು ಮಾಡುವುದು ಅವರ ನಿಯಂತ್ರಣಕ್ಕೆ ನಿಲುಕದಂತಹ ಪ್ರಭಾವಶಾಲಿ ಶಕ್ತಿಗಳಿಂದ ಜಟಿಲಗೊಳಿಸಲ್ಪಟ್ಟಿರುವ ಒಂದು ದೊಡ್ಡ ಕೆಲಸವಾಗಿದೆ.
ಲೋಭ, ರಾಜಕೀಯ ಒಳಸಂಚು, ಯುದ್ಧಗಳು, ಮತ್ತು ನೈಸರ್ಗಿಕ ವಿಪತ್ತುಗಳು, “ಹಸಿವನ್ನು ನಿರ್ಮೂಲಗೊಳಿಸಲು ಮಾಡಲ್ಪಡುವ ಅತ್ಯಂತ ಸಂಕೀರ್ಣ ಮತ್ತು ದೃಢಸಂಕಲ್ಪದ ಪ್ರಯತ್ನಗಳನ್ನು” ಸಹ ಭಂಗಗೊಳಿಸಬಲ್ಲವು ಎಂದು ಸಹಾಯ ನೀಡುವ ಒಬ್ಬ ಕಾರ್ಯಕರ್ತನು ಹೇಳುತ್ತಾನೆ. ಇತರರ ಕುರಿತು ಚಿಂತೆ ತೋರಿಸುವ ಜನರ ಮುಂದಿರುವ ಸಮಸ್ಯೆಗಳಲ್ಲಿ, ಹಸಿವನ್ನು ನಿರ್ಮೂಲಗೊಳಿಸುವುದು ಕೇವಲ ಒಂದು ಸಮಸ್ಯೆಯಾಗಿದೆ. ಅದರೊಂದಿಗೆ ಅವರು ರೋಗ, ಬಡತನ, ಅನ್ಯಾಯ ಮತ್ತು ಯುದ್ಧದಿಂದ ಉಂಟಾಗುವ ಅಪಾರವಾದ ಕಷ್ಟಾನುಭವದಂತಹ ಸಮಸ್ಯೆಗಳ ವಿರುದ್ಧವೂ ಹೋರಾಡುತ್ತಾರೆ. ಆದರೆ ಅವರು ವಿಜಯಿಗಳಾಗುತ್ತಿದ್ದಾರೊ?
ಹಸಿವು ಮತ್ತು ನೋವನ್ನು ತೊಡೆದುಹಾಕಲು ಅಂತಹ “ಸಂಕೀರ್ಣ ಮತ್ತು ದೃಢಸಂಕಲ್ಪದ ಪ್ರಯತ್ನಗಳನ್ನು” ಮಾಡುವವರು, ಯೇಸು ಕ್ರಿಸ್ತನ ದೃಷ್ಟಾಂತದಲ್ಲಿನ ಕರುಣಾಮಯಿ ಸಮಾರ್ಯದವನಂತಿದ್ದಾರೆ ಎಂದು, ನೆರವನ್ನು ನೀಡುವ ಒಂದು ಏಜೆನ್ಸಿಯ ಮುಖ್ಯ ಕಾರ್ಯನಿರ್ವಾಹಕನು ಹೇಳಿದನು. (ಲೂಕ 10:29-37) ಆದರೆ ಅವರು ಏನೇ ಮಾಡಿದರೂ, ಬಲಿಯಾಗುವ ಜನರ ಸಂಖ್ಯೆ ಸ್ವಲ್ಪವೂ ಕಡಿಮೆಯಾಗದೆ ಹೆಚ್ಚುತ್ತಾ ಹೋಗುತ್ತದೆ ಎಂದು ಅವನು ಹೇಳಿದನು. ಆದುದರಿಂದ ಅವನು ಕೇಳಿದ್ದು: “ಸ್ನೇಹಪರ ಸಮಾರ್ಯದವನು, ಹಲವಾರು ವರ್ಷಗಳ ವರೆಗೆ ಪ್ರತಿದಿನ ಅದೇ ಮಾರ್ಗದಲ್ಲಿ ಹೋಗುತ್ತಿರುವಾಗ, ಪ್ರತಿ ವಾರ ರಸ್ತೆಬದಿಯಲ್ಲಿ ಕಳ್ಳರ ಆಕ್ರಮಣಕ್ಕೆ ಗುರಿಯಾಗಿರುವ ಒಬ್ಬ ವ್ಯಕ್ತಿಯನ್ನು ಕಾಣುವಲ್ಲಿ ಅವನೇನು ಮಾಡಬೇಕು?”
‘ಸಹಾಯ ಮಾಡಿ ಮಾಡಿ ದಣಿದುಹೋಗುವ ಮಾರಕ ಕಾಯಿಲೆ’ ಎಂದು ವರ್ಣಿಸಲ್ಪಟ್ಟಿರುವ ಸ್ಥಿತಿಗೆ ತುತ್ತಾಗಿ, ನಿರಾಶೆಯಿಂದ ಬಿಟ್ಟುಕೊಡುವುದು ತುಂಬ ಸುಲಭ. ಮೆಚ್ಚತಕ್ಕ ವಿಷಯವೇನಂದರೆ, ನಿಜವಾಗಿ ಚಿಂತೆವಹಿಸುವವರು ಎಂದೂ ಬಿಟ್ಟುಕೊಡುವುದಿಲ್ಲ. (ಗಲಾತ್ಯ 6:9, 10) ಉದಾಹರಣೆಗಾಗಿ, ಬ್ರಿಟನಿನ ಜ್ಯೂವಿಷ್ ಟೆಲಿಗ್ರಾಫ್ ವಾರ್ತಾಪತ್ರಿಕೆಗೆ ಪತ್ರ ಬರೆಯುತ್ತಾ, ಒಬ್ಬ ವ್ಯಕ್ತಿಯು ನಾಸಿ ಜರ್ಮನಿಯ ಸಮಯದಲ್ಲಿದ್ದ ಯೆಹೋವನ ಸಾಕ್ಷಿಗಳನ್ನು ಶ್ಲಾಘಿಸಿದನು. “ಅವರು, ಸಾವಿರಾರು ಯೆಹೂದ್ಯರಿಗೆ ಔಷ್ವಿಟ್ಸ್ ಶಿಬಿರಗಳಲ್ಲಿನ ಸಂಕಷ್ಟಗಳಿಂದ ಬದುಕಿ ಉಳಿಯಲು ಸಹಾಯಮಾಡಿದರು.” ಆ ಲೇಖಕನು ಮತ್ತೂ ಹೇಳಿದ್ದು: “ಆಹಾರದ ಕೊರತೆಯ ಸಮಯದಲ್ಲಿಯೂ, ಅವರು ತಮ್ಮ ರೊಟ್ಟಿಯನ್ನು ನಮ್ಮ [ಯೆಹೂದಿ] ಸಹೋದರ ಸಹೋದರಿಯರೊಂದಿಗೆ ಹಂಚಿಕೊಂಡರು!” ಆ ಸಾಕ್ಷಿಗಳು ತಮ್ಮ ಬಳಿ ಇದ್ದ ವಸ್ತುಗಳಿಂದಲೇ ತಮ್ಮಿಂದ ಸಾಧ್ಯವಾಗುವಷ್ಟರ ಮಟ್ಟಿಗೆ ಸಹಾಯವನ್ನು ಮಾಡಿದರು.
ಆದರೆ ಎಷ್ಟೇ ರೊಟ್ಟಿಯು ಹಂಚಲ್ಪಡಲಿ ಅದು ಮಾನವನ ಕಷ್ಟಾನುಭವವನ್ನು ಅಂತ್ಯಗೊಳಿಸಲಾರದು ಎಂಬುದು ನಿಜ ಸಂಗತಿಯಾಗಿದೆ. ಹೀಗೆ ಹೇಳುವುದರಿಂದ, ನಾವು ಕರುಣಾಮಯಿ ವ್ಯಕ್ತಿಗಳ ಕೆಲಸವನ್ನು ತುಚ್ಛೀಕರಿಸುತ್ತಿಲ್ಲ. ಕಷ್ಟಾನುಭವವನ್ನು ಯೋಗ್ಯ ರೀತಿಯಲ್ಲಿ ಕಡಿಮೆಗೊಳಿಸುವ ಯಾವುದೇ ಕೆಲಸವು ಪ್ರಯೋಜನಕರವಾಗಿದೆ. ಈ ಮುಂಚೆ ತಿಳಿಸಲ್ಪಟ್ಟಿರುವ ಸಾಕ್ಷಿಗಳು ತಮ್ಮ ಜೊತೆ ಸೆರೆವಾಸಿಗಳ ದುಃಖವನ್ನು ಸ್ವಲ್ಪಮಟ್ಟಿಗೆ ಕಡಿಮೆಗೊಳಿಸಿದರು ಮತ್ತು ಕೊನೆಯಲ್ಲಿ ನಾಸಿ ಆಳ್ವಿಕೆಯೇ ನಾಶವಾಯಿತು. ಆದರೆ, ಅಂತಹದ್ದೇ ದಬ್ಬಾಳಿಕೆಯನ್ನು ಮುಂದುವರಿಸುವ ಲೋಕ ವ್ಯವಸ್ಥೆಯು ಇನ್ನೂ ಅಸ್ತಿತ್ವದಲ್ಲಿದೆ ಮತ್ತು ಇತರರ ಕುರಿತು ಸ್ವಲ್ಪವೂ ಚಿಂತಿಸದ ಜನರು ಈಗಲೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಖಂಡಿತವಾಗಿಯೂ, ‘ಖಡ್ಗದಂತಿರುವ ಹಲ್ಲುಗಳೂ ಕತ್ತಿಯಂತಿರುವ ಕೋರೆಗಳೂ ಉಳ್ಳವರಾಗಿ ಭೂಮಿಯೊಳಗಿಂದ ಬಡವರನ್ನೂ ಮನುಷ್ಯರ ಮಧ್ಯದೊಳಗಿಂದ ದಿಕ್ಕಿಲ್ಲದವರನ್ನೂ ಅಗಿದು ನುಂಗಿಬಿಡುವ ಮತ್ತೊಂದು ತರದವರು’ ಇನ್ನೂ ಇದ್ದಾರೆ. (ಜ್ಞಾನೋಕ್ತಿ 30:14) ಇಂತಹ ಪರಿಸ್ಥಿತಿಯು ಏಕೆ ಅಸ್ತಿತ್ವದಲ್ಲಿದೆಯೆಂದು ನೀವು ಕೂಡ ಯೋಚಿಸುತ್ತಿರಬಹುದು.
ಬಡತನ ಮತ್ತು ದಬ್ಬಾಳಿಕೆ ಏಕೆ ಅಸ್ತಿತ್ವದಲ್ಲಿದೆ?
ಯೇಸು ಕ್ರಿಸ್ತನು ಒಮ್ಮೆ ಹೀಗೆ ಹೇಳಿದನು: “ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ; ನಿಮಗೆ ಮನಸ್ಸು ಬಂದಾಗ ಅವರಿಗೆ ಉಪಕಾರಮಾಡಬಹುದು.” (ಮಾರ್ಕ 14:7) ಬಡತನ ಮತ್ತು ದಬ್ಬಾಳಿಕೆ ಎಂದಿಗೂ ಅಂತ್ಯವಾಗುವುದಿಲ್ಲ ಎಂಬುದು ಯೇಸುವಿನ ಅರ್ಥವಾಗಿತ್ತೊ? ಕೆಲವು ಜನರು ನಂಬುವಂತೆ, ಕರುಣಾಮಯಿಗಳಾದ ಜನರು ಎಷ್ಟು ಚಿಂತೆವಹಿಸುತ್ತಾರೆಂಬುದನ್ನು ತೋರಿಸಲು ಅವಕಾಶವನ್ನು ಕೊಡಲಿಕ್ಕಾಗಿ ಅಂತಹ ಕಷ್ಟಾನುಭವವು ದೇವರ ಯೋಜನೆಯ ಒಂದು ಭಾಗವಾಗಿದೆಯೆಂದು ಅವನು ನಂಬಿದನೊ? ಇಲ್ಲ! ಯೇಸು ಹಾಗೆ ನಂಬಲಿಲ್ಲ. ಈ ವಿಷಯಗಳ ವ್ಯವಸ್ಥೆಯು ಎಷ್ಟರ ವರೆಗೆ ಅಸ್ತಿತ್ವದಲ್ಲಿರುವುದೊ ಅಷ್ಟರ ವರೆಗೆ ಬಡತನವು ಜೀವನದ ಒಂದು ಭಾಗವಾಗಿರುವುದು ಎಂಬ ವಿಷಯವನ್ನು ಮನದಟ್ಟುಮಾಡುವುದೇ ಅವನ ಉದ್ದೇಶವಾಗಿತ್ತು. ಆದರೆ ಯೇಸುವಿಗೆ ಇದು ಸಹ ತಿಳಿದಿತ್ತು: ಭೂಮಿಯ ಮೇಲೆ ಇಂತಹ ಪರಿಸ್ಥಿತಿಗಳಿರುವುದು ತನ್ನ ಸ್ವರ್ಗೀಯ ತಂದೆಯ ಮೂಲ ಉದ್ದೇಶವಾಗಿರಲಿಲ್ಲ.
ಈ ಭೂಮಿಯು ಬಡತನ, ಅನ್ಯಾಯ, ಮತ್ತು ದಬ್ಬಾಳಿಕೆ ಪೀಡಿತ ಸ್ಥಳವಾಗಿರದೆ, ಒಂದು ಪ್ರಮೋದವನವಾಗಿರುವಂತೆ ಯೆಹೋವ ದೇವರು ಅದನ್ನು ಸೃಷ್ಟಿಸಿದನು. ಜೀವನದ ಆನಂದಕ್ಕೆ ಹೆಚ್ಚನ್ನು ಕೂಡಿಸುವ ಅದ್ಭುತಕರವಾದ ಒದಗಿಸುವಿಕೆಗಳನ್ನು ಮಾಡುವ ಮೂಲಕ, ತಾನು ಮಾನವ ಕುಟುಂಬದ ಕುರಿತು ಎಷ್ಟು ಚಿಂತಿಸುತ್ತೇನೆಂಬುದನ್ನು ಆತನು ತೋರಿಸಿದನು. ನಮ್ಮ ಪ್ರಥಮ ಹೆತ್ತವರಾದ ಆದಾಮಹವ್ವರನ್ನು ಇರಿಸಲಾಗಿದ್ದ ತೋಟದ ಹೆಸರಿನ ಕುರಿತಾಗಿಯೇ ಸ್ವಲ್ಪ ಯೋಚಿಸಿರಿ! ಅದನ್ನು ಏದೆನ್ ಎಂದು ಕರೆಯಲಾಗಿತ್ತು. ಇದರರ್ಥ “ಆಹ್ಲಾದ” ಎಂದಾಗಿದೆ. (ಆದಿಕಾಂಡ 2:8, 9) ದೇವರು ಮಾನವರಿಗೆ ಒಂದು ನೀರಸವಾದ, ಖಿನ್ನಗೊಳಿಸುವಂತಹ ಪರಿಸರದಲ್ಲಿ ಬದುಕಿ ಉಳಿಯಲಿಕ್ಕಾಗಿ ಬೇಕಾಗಿರುವ ಆವಶ್ಯಕ ವಿಷಯಗಳನ್ನಷ್ಟೇ ಕೊಡಲಿಲ್ಲ. ತನ್ನ ಸೃಷ್ಟಿ ಕೆಲಸದ ಸಮಾಪ್ತಿಯಲ್ಲಿ, ಯೆಹೋವನು ತಾನು ಮಾಡಿದ ಎಲ್ಲ ಕೆಲಸದ ಮೇಲೆ ದೃಷ್ಟಿ ಹಾಯಿಸಿ, ಅದು ‘ಒಳ್ಳೇದಾಗಿದೆ’ ಎಂದು ಘೋಷಿಸಿದನು.—ಆದಿಕಾಂಡ 1:31.
ಹಾಗಿರುವಲ್ಲಿ ಇಂದು ಬಡತನ, ದಬ್ಬಾಳಿಕೆ, ಮತ್ತು ಕಷ್ಟಾನುಭವದ ಇನ್ನಿತರ ಕಾರಣಗಳು ಏಕೆ ಭೂವ್ಯಾಪಕವಾಗಿ ಹಬ್ಬಿಕೊಂಡಿವೆ? ನಮ್ಮ ಆರಂಭದ ಹೆತ್ತವರು ದೇವರ ವಿರುದ್ಧ ದಂಗೆಯೇಳುವ ಆಯ್ಕೆಯನ್ನು ಮಾಡಿಕೊಂಡಿದ್ದರಿಂದಲೇ ಈ ಸದ್ಯದ ದುಷ್ಟ ವಿಷಯಗಳ ವ್ಯವಸ್ಥೆಯು ಅಸ್ತಿತ್ವಕ್ಕೆ ಬಂತು. (ಆದಿಕಾಂಡ 3:1-5) ಅವರ ದಂಗೆಯು, ದೇವರು ತನ್ನ ಸೃಷ್ಟಿಜೀವಿಗಳಿಂದ ವಿಧೇಯತೆಯನ್ನು ಕೇಳಿಕೊಳ್ಳುವುದು ಸರಿಯೊ ಇಲ್ಲವೊ ಎಂಬ ಪ್ರಶ್ನೆಯನ್ನು ಎಬ್ಬಿಸಿತು. ಆದುದರಿಂದ ಯೆಹೋವನು ಆದಾಮನ ಸಂತತಿಗೆ, ಪರಿಮಿತಿಯಿರುವ ಸ್ವಾತಂತ್ರ್ಯದ ಅವಧಿಯನ್ನು ಅನುಮತಿಸಿದ್ದಾನೆ. ಆದರೆ ದೇವರಿಗೆ ಆಗಲೂ, ಮಾನವ ಕುಟುಂಬಕ್ಕೆ ಏನಾಗುವುದು ಎಂಬುದರ ಕುರಿತು ಚಿಂತೆಯಿತ್ತು. ತನ್ನ ವಿರುದ್ಧ ನಡೆಸಲ್ಪಟ್ಟ ಆ ದಂಗೆಯಿಂದ ಪರಿಣಮಿಸಲಿದ್ದ ಎಲ್ಲ ಹಾನಿಯನ್ನು ಇಲ್ಲವಾಗಿಸಲು ಆತನು ಏರ್ಪಾಡನ್ನು ಮಾಡಿದನು. ಮತ್ತು ಇನ್ನು ಸ್ವಲ್ಪ ಸಮಯದಲ್ಲೇ ಯೆಹೋವನು ಬಡತನ ಮತ್ತು ದಬ್ಬಾಳಿಕೆ, ವಾಸ್ತವದಲ್ಲಿ ಎಲ್ಲ ರೀತಿಯ ಕಷ್ಟಾನುಭವವನ್ನು ಅಂತ್ಯಗೊಳಿಸುವನು.—ಎಫೆಸ 1:8-10.
ಮನುಷ್ಯನು ಬಗೆಹರಿಸಲಾಗದ ಒಂದು ಸಮಸ್ಯೆ
ಮಾನವ ಸೃಷ್ಟಿಯಾದಂದಿನಿಂದ ಗತಿಸಿರುವ ಶತಮಾನಗಳಲ್ಲಿ, ಮಾನವಕುಲವು ನಿರಂತರವಾಗಿ ಯೆಹೋವನ ಮಟ್ಟಗಳಿಂದ ದೂರ ಸರಿದಿದೆ. (ಧರ್ಮೋಪದೇಶಕಾಂಡ 32:4, 5) ದೇವರ ನಿಯಮಗಳನ್ನು ಮತ್ತು ಮಟ್ಟಗಳನ್ನು ಸತತವಾಗಿ ತಿರಸ್ಕರಿಸುತ್ತಾ, ಮನುಷ್ಯರು ಪರಸ್ಪರ ಕಾದಾಡಿದ್ದಾರೆ ಮತ್ತು ‘ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟುಮಾಡಿದ್ದಾನೆ.’ (ಪ್ರಸಂಗಿ 8:9) ನರಳುತ್ತಿರುವ ಜನಸ್ತೋಮಗಳನ್ನು ಪೀಡಿಸುತ್ತಿರುವ ಎಲ್ಲ ವಿಷಯಗಳಿಂದ ಮುಕ್ತವಾಗಿರುವ, ನಿಜವಾಗಿಯೂ ನ್ಯಾಯಯುತವಾದ ಒಂದು ಸಮಾಜವನ್ನು ತರಲಿಕ್ಕಾಗಿ ಮಾಡಲಾಗುವ ಎಲ್ಲ ಪ್ರಯತ್ನಗಳು, ದೇವರ ಪರಮಾಧಿಕಾರಕ್ಕೆ ಅಧೀನರಾಗುವ ಬದಲಿಗೆ ತಮ್ಮದೇ ಆದ ರೀತಿಯಲ್ಲಿ ವಿಷಯಗಳನ್ನು ಮಾಡಬಯಸುವವರ ಸ್ವಾರ್ಥದಿಂದಾಗಿ ಕೆಡಿಸಲ್ಪಟ್ಟಿವೆ.
ಇನ್ನೊಂದು ಸಮಸ್ಯೆಯೂ ಇದೆ. ಇದನ್ನು ಅನೇಕರು ಮೂಢನಂಬಿಕೆಯ ಹುಚ್ಚುಮಾತೆಂದು ಕಡೆಗಣಿಸಬಹುದು. ದೇವರ ವಿರುದ್ಧ ದಂಗೆಯನ್ನು ಚಿತಾಯಿಸಿದವನು, ಈಗಲೂ ಜನರು ಕೆಟ್ಟತನವನ್ನು ನಡಿಸಲು ಮತ್ತು ಸ್ವಾರ್ಥತೆಯನ್ನು ಪ್ರದರ್ಶಿಸಲು ಚಿತಾಯಿಸುತ್ತಿದ್ದಾನೆ. ಇವನು ಪಿಶಾಚನಾದ ಸೈತಾನನೇ. ಯೇಸು ಕ್ರಿಸ್ತನು ಅವನನ್ನು “ಇಹಲೋಕಾಧಿಪತಿ” ಎಂದು ಕರೆದನು. (ಯೋಹಾನ 12:31; 14:30; 2 ಕೊರಿಂಥ 4:4; 1 ಯೋಹಾನ 5:19) ಅಪೊಸ್ತಲ ಯೋಹಾನನಿಗೆ ಕೊಡಲ್ಪಟ್ಟಿರುವ ಪ್ರಕಟನೆಯಲ್ಲಿ, ದುರ್ಗತಿಗೆ ಮೂಲ ಕಾರಣನು ಮತ್ತು “ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ”ದಕ್ಕೆ ಮುಖ್ಯವಾಗಿ ಜವಾಬ್ದಾರನಾಗಿರುವವನು ಸೈತಾನನೆಂದು ಗುರುತಿಸಲಾಗಿದೆ.—ಪ್ರಕಟನೆ 12:9-12.
ಕೆಲವು ಜನರು ತಮ್ಮ ಜೊತೆ ಮಾನವರ ಕುರಿತಾಗಿ ಎಷ್ಟೇ ಚಿಂತೆವಹಿಸಲಿ, ಅವರು ಎಂದಿಗೂ ಪಿಶಾಚನಾದ ಸೈತಾನನನ್ನು ತೆಗೆದುಹಾಕಲಾರರು ಅಥವಾ ಹೆಚ್ಚೆಚ್ಚು ಸಂಖ್ಯೆಯಲ್ಲಿ ಕಷ್ಟಗಳಿಗೆ ಬಲಿಬೀಳುವ ಜನರಿರುವ ಈ ವ್ಯವಸ್ಥೆಯನ್ನು ಬದಲಾಯಿಸಲಾರರು. ಹಾಗಾದರೆ, ಮಾನವಕುಲದ ಸಮಸ್ಯೆಗಳನ್ನು ಬಗೆಹರಿಸಲು ಏನು ಆವಶ್ಯಕ? ಕೇವಲ ಚಿಂತೆ ತೋರಿಸುವವನು ಈ ಸಮಸ್ಯೆಯನ್ನು ಬಗೆಹರಿಸಲಾರನು. ಸೈತಾನನನ್ನು ಮತ್ತು ಅವನ ಇಡೀ ಅನ್ಯಾಯಭರಿತ ವ್ಯವಸ್ಥೆಯನ್ನು ತೆಗೆದುಹಾಕಲು ಬೇಕಾಗಿರುವ ಮನಸ್ಸು ಮತ್ತು ಶಕ್ತಿಯನ್ನೂ ಹೊಂದಿರುವ ಒಬ್ಬ ವ್ಯಕ್ತಿಯ ಅಗತ್ಯವಿದೆ.
“ನಿನ್ನ ಚಿತ್ತವು . . . ಭೂಲೋಕದಲ್ಲಿಯೂ ನೆರವೇರಲಿ”
ಈ ದುಷ್ಟ ವಿಷಯಗಳ ವ್ಯವಸ್ಥೆಯನ್ನು ತಾನು ನಾಶಮಾಡುವೆನೆಂದು ದೇವರು ವಾಗ್ದಾನಿಸಿದ್ದಾನೆ. ಅದನ್ನು ಮಾಡಲು ಬೇಕಾಗಿರುವ ಮನಸ್ಸು ಮತ್ತು ಶಕ್ತಿಯೂ ಆತನ ಬಳಿ ಇದೆ. (ಕೀರ್ತನೆ 147:5, 6; ಯೆಶಾಯ 40:25-31) ಬೈಬಲಿನ ದಾನಿಯೇಲ ಎಂಬ ಪ್ರವಾದನಾತ್ಮಕ ಪುಸ್ತಕದಲ್ಲಿ, ಹೀಗೆ ಮುಂತಿಳಿಸಲ್ಪಟ್ಟಿದೆ: “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ,” ಅಂದರೆ ಸದಾಕಾಲಕ್ಕೂ “ನಿಲ್ಲುವದು.” (ದಾನಿಯೇಲ 2:44) “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ” ಎಂದು ದೇವರಿಗೆ ಪ್ರಾರ್ಥಿಸುವಂತೆ ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಕಲಿಸಿದಾಗ, ಶಾಶ್ವತವಾಗಿರುವ ಮತ್ತು ಒಳ್ಳೆಯದನ್ನು ಮಾಡಲು ಬಯಸುವ ಈ ಸರಕಾರವೇ ಅವನ ಮನಸ್ಸಿನಲ್ಲಿತ್ತು.—ಮತ್ತಾಯ 6:9, 10.
ಯೆಹೋವನು ಮಾನವ ಕುಟುಂಬದ ಕುರಿತಾಗಿ ನಿಜವಾಗಿಯೂ ಚಿಂತಿಸುವುದರಿಂದ, ಆತನು ಅಂತಹ ಪ್ರಾರ್ಥನೆಗಳಿಗೆ ಉತ್ತರವನ್ನು ಕೊಡುವನು. ಕೀರ್ತನೆ 72ನೆಯ ಅಧ್ಯಾಯದಲ್ಲಿನ ಪ್ರವಾದನಾತ್ಮಕ ಮಾತುಗಳಿಗನುಸಾರ, ತನ್ನ ಪುತ್ರನಾದ ಯೇಸು ಕ್ರಿಸ್ತನ ಆಳ್ವಿಕೆಯನ್ನು ಬೆಂಬಲಿಸುವ ಬಡವರಿಗೆ, ಸಂಕಟದಲ್ಲಿರುವವರಿಗೆ, ಮತ್ತು ಪೀಡಿತ ಜನರಿಗೆ ಶಾಶ್ವತವಾದ ಪರಿಹಾರವನ್ನು ಕೊಡಲು ಯೆಹೋವನು ಅವನಿಗೆ ಅಧಿಕಾರವನ್ನು ಕೊಡುವನು. ಹೀಗಿರುವುದರಿಂದ, ಪ್ರೇರಿತ ಕೀರ್ತನೆಗಾರನು ಹಾಡಿದ್ದು: “ಅವನು [ದೇವರ ಮೆಸ್ಸೀಯ ರಾಜನು] ಬಡವರ ನ್ಯಾಯವನ್ನು ಸ್ಥಾಪಿಸಲಿ; ದೀನರ ಮಕ್ಕಳನ್ನು ಉದ್ಧರಿಸಲಿ; ಪ್ರಜಾಹಿಂಸಕರನ್ನು ಖಂಡಿಸಿಬಿಡಲಿ. ಯಾಕಂದರೆ ಅವನು ಮೊರೆಯಿಡುವ ಬಡವರನ್ನೂ ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು. ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು. ಕುಯುಕ್ತಿಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು; ಅವರ ಜೀವವು ಅವನ ದೃಷ್ಟಿಯಲ್ಲಿ ಅಮೂಲ್ಯವಾಗಿರುವದು.”—ಕೀರ್ತನೆ 72:4, 12-14.
ನಮ್ಮ ದಿನದ ಕುರಿತಾಗಿ ಒಂದು ದರ್ಶನದಲ್ಲಿ ಅಪೊಸ್ತಲ ಯೋಹಾನನು, ದೇವರಿಂದ ಸ್ಥಾಪಿಸಲ್ಪಟ್ಟು ಪೂರ್ಣವಾಗಿ ಹೊಸತಾಗಿರುವ ವಿಷಯಗಳ ವ್ಯವಸ್ಥೆಯನ್ನು, ಅಂದರೆ “ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ” ಕಂಡನು. ನರಳಾಡುತ್ತಿರುವ ಮಾನವಕುಲಕ್ಕಾಗಿ ಅದು ಎಂಥ ಆಶೀರ್ವಾದವಾಗಿರುವುದು! ಯೆಹೋವನು ಮಾಡಲಿರುವ ಕೆಲಸವನ್ನು ಮುಂತಿಳಿಸುತ್ತಾ, ಯೋಹಾನನು ಬರೆದುದು: “ಇದಲ್ಲದೆ ಸಿಂಹಾಸನದೊಳಗಿಂದ ಬಂದ ಮಹಾ ಶಬ್ದವು ನನಗೆ ಕೇಳಿಸಿತು. ಅದು—ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು ಅವರೊಡನೆ ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು ಎಂದು ಹೇಳಿತು. ಆಗ ಸಿಂಹಾಸನದ ಮೇಲೆ ಕೂತಿದ್ದವನು—ಇಗೋ, ಎಲ್ಲವನ್ನು ಹೊಸದುಮಾಡುತ್ತೇನೆ ಅಂದನು. ಮತ್ತು ಒಬ್ಬನು ನನಗೆ—ಇದನ್ನು ಬರೆ; ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ ಎಂದು ಹೇಳಿದನು.”—ಪ್ರಕಟನೆ 21:1-5.
ಹೌದು, ನಾವು ಈ ಮಾತುಗಳನ್ನು ನಂಬಸಾಧ್ಯವಿದೆ, ಯಾಕಂದರೆ ಅವು ನಂಬತಕ್ಕವುಗಳು ಮತ್ತು ಸತ್ಯವಾದವುಗಳಾಗಿವೆ. ಯೆಹೋವನು ಬಲು ಬೇಗನೆ ಈ ಭೂಮಿಯಿಂದ ಬಡತನ, ಹಸಿವು, ದಬ್ಬಾಳಿಕೆ, ರೋಗ, ಮತ್ತು ಎಲ್ಲ ಅನ್ಯಾಯವನ್ನು ತೆಗೆದುಹಾಕುವನು. ಈ ಪತ್ರಿಕೆಯು ಅನೇಕ ಬಾರಿ ಶಾಸ್ತ್ರವಚನಗಳಿಂದ ತೋರಿಸಿರುವಂತೆ, ಈ ವಾಗ್ದಾನಗಳು ನೆರವೇರಲಿರುವಂತಹ ಸಮಯದಲ್ಲಿ ನಾವು ಜೀವಿಸುತ್ತಿದ್ದೇವೆಂದು ತೋರಿಸುವ ಹೇರಳವಾದ ರುಜುವಾತಿದೆ. ಹೌದು, ದೇವರ ವಾಗ್ದತ್ತ ಹೊಸ ಲೋಕವು ಸಮೀಪದಲ್ಲಿದೆ! (2 ಪೇತ್ರ 3:13) ಬೇಗನೆ ಯೆಹೋವನು “ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು” ಮತ್ತು “ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು.”—ಯೆಶಾಯ 25:8.
ಇದೆಲ್ಲವೂ ನಡೆಯುವ ಸಮಯದ ವರೆಗೆ, ನಿಜವಾಗಿ ಚಿಂತೆ ತೋರಿಸುವ ಜನರು ಇಂದು ಸಹ ಇದ್ದಾರೆಂಬುದಕ್ಕಾಗಿ ನಾವು ಸಂತೋಷಿಸಬಹುದು. ಸ್ವತಃ ಯೆಹೋವ ದೇವರೇ ಕಾಳಜಿವಹಿಸುತ್ತಾನೆಂಬುದು ಹರ್ಷಿಸಲಿಕ್ಕಾಗಿ ಇನ್ನಷ್ಟು ಮಹತ್ತಾದ ಕಾರಣವನ್ನು ಕೊಡುತ್ತದೆ. ಆತನು ಬೇಗನೆ ಎಲ್ಲ ದಬ್ಬಾಳಿಕೆ ಮತ್ತು ಕಷ್ಟಾನುಭವವನ್ನು ತೆಗೆದುಹಾಕುವನು.
ಯೆಹೋವನ ವಾಗ್ದಾನಗಳಲ್ಲಿ ನೀವು ಸಂಪೂರ್ಣ ಭರವಸೆಯನ್ನಿಡಸಾಧ್ಯವಿದೆ. ಆತನ ಸೇವಕನಾದ ಯೆಹೋಶುವನು ಅದನ್ನೇ ಮಾಡಿದನು. ಯಾವುದೇ ಹಿಂಜರಿಕೆಯಿಲ್ಲದೆ, ಅವನು ದೇವರ ಪ್ರಾಚೀನ ಜನರಿಗೆ ಹೀಗೆ ಹೇಳಿದನು: “ಭೂಲೋಕದವರೆಲ್ಲರೂ ಹೋಗುವ ಮಾರ್ಗವನ್ನು ನಾನೂ ಈಗ ಅನುಸರಿಸಬೇಕು. ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ; ಎಲ್ಲವೂ ತಪ್ಪದೆ ನೆರವೇರಿದವೆಂಬದು ನಿಮಗೆ ಮಂದಟ್ಟಾಯಿತಲ್ಲಾ.” (ಯೆಹೋಶುವ 23:14) ಆದುದರಿಂದ, ಸದ್ಯದ ವಿಷಯಗಳ ವ್ಯವಸ್ಥೆಯು ಇರುವಷ್ಟು ಸಮಯ, ನೀವು ಎದುರಿಸಬೇಕಾದ ಸಂಕಷ್ಟಗಳಿಂದಾಗಿ ಚಿಂತಾಭರಿತರಾಗಿ ಕುಳಿತುಕೊಳ್ಳಬೇಡಿ. ನಿಮ್ಮ ಚಿಂತೆಯನ್ನೆಲ್ಲ ಯೆಹೋವನ ಮೇಲೆ ಹಾಕಿರಿ, ಯಾಕಂದರೆ ಆತನು ನಮ್ಮ ಕುರಿತಾಗಿ ನಿಜವಾಗಿಯೂ ಚಿಂತೆ ತೋರಿಸುತ್ತಾನೆ.—1 ಪೇತ್ರ 5:7.
[ಪುಟ 7 ರಲ್ಲಿರುವ ಚಿತ್ರಗಳು]
ದೇವರ ವಾಗ್ದತ್ತ ಹೊಸ ಲೋಕದಲ್ಲಿ, ಭೂಮಿಯು ಬಡತನ, ದಬ್ಬಾಳಿಕೆ, ರೋಗ ಮತ್ತು ಅನ್ಯಾಯದಿಂದ ಮುಕ್ತವಾಗಿರುವುದು