ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w01 2/15 ಪು. 28-29
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಅನುರೂಪ ಮಾಹಿತಿ
  • ಕಂಪ್ಯೂಟರ್‌ ತಂತ್ರಜ್ಞಾನದ ಒಂದು ಸಮತೂಕದ ನೋಟವನ್ನು ಕಾಪಾಡಿಕೊಳ್ಳುವುದು
    1996 ನಮ್ಮ ರಾಜ್ಯದ ಸೇವೆ
  • ಪುಟ್ಟನಿಗೆ ಈಗ ಕಂಪ್ಯೂಟರಿನ ಆವಶ್ಯಕತೆ ಇದೆಯೋ?
    ಎಚ್ಚರ!—1990
  • ನಿಮಗೆ ನೆನಪಿದೆಯೇ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಉಪಯುಕ್ತವಾದ ಭಾಷಾಂತರ ಸಹಾಯಕ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
w01 2/15 ಪು. 28-29

ವಾಚಕರಿಂದ ಪ್ರಶ್ನೆಗಳು

ಕಂಪ್ಯೂಟರ್‌ಗಳ ಕಮರ್ಷಲ್‌ (ವ್ಯಾಪಾರೀ) ಸಾಫ್ಟ್‌ವೇರ್‌ ಪ್ರೋಗ್ರಾಮ್‌ಗಳ ಪ್ರತಿಗಳನ್ನು ಮಾಡಿ ಇತರರಿಗೆ ಕೊಡುವಂತಹ ಸಾಮಾನ್ಯ ರೂಢಿಯನ್ನು ಕ್ರೈಸ್ತರು ಹೇಗೆ ಪರಿಗಣಿಸತಕ್ಕದ್ದು?

“ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ” ಎಂಬ ಯೇಸುವಿನ ಮಾತುಗಳಿಗೆ ಸೂಚಿಸುತ್ತಾ, ಇಂತಹ ಪ್ರೋಗ್ರಾಮ್‌ಗಳ ಪ್ರತಿಗಳನ್ನು ಮಾಡಿ ಇತರರಿಗೆ ಕೊಡುವುದು ತಪ್ಪಲ್ಲ ಎಂದು ಕೆಲವರು ತಪ್ಪಾಗಿ ನೆನಸಬಹುದು. ಕಾಪಿರೈಟ್‌ (ಗ್ರಂಥಸ್ವಾಮ್ಯ) ಇರುವಂತಹ ಸಾಹಿತ್ಯದ ಪ್ರತಿಗಳನ್ನು ಅಥವಾ ಕಂಪ್ಯೂಟರ್‌ ಪ್ರೋಗ್ರಾಮ್‌ಗಳ (ಸಾಫ್ಟ್‌ವೇರ್‌) ಉಚಿತ ಪ್ರತಿಗಳನ್ನು ಇತರರಿಗೆ ಕೊಡುವಂತಹ ವಿಷಯಕ್ಕೆ ಯೇಸು ಸೂಚಿಸುತ್ತಿರಲಿಲ್ಲ ಎಂಬುದು ನಿಶ್ಚಯ. ಏಕೆಂದರೆ ಈ ವಸ್ತುಗಳ ಉಪಯೋಗವು ಕಾನೂನಿನಿಂದ ನಿಯಂತ್ರಿಸಲ್ಪಟ್ಟಿದೆ. ಈ ವಚನದಲ್ಲಿ ಯೇಸು ಶುಶ್ರೂಷೆಯ ವಿಷಯದಲ್ಲಿ ಮಾತಾಡಿದನು. ಬೇರೆ ಬೇರೆ ಊರುಗಳಿಗೆ ಮತ್ತು ಹಳ್ಳಿಗಳಿಗೆ ಹೋಗಲು ಹೊರಟಿದ್ದ ತನ್ನ ಅಪೊಸ್ತಲರಿಗೆ ಯೇಸು ಹೇಳಿದ್ದೇನೆಂದರೆ, ಅವರು ರಾಜ್ಯದ ಸುವಾರ್ತೆಯನ್ನು ಸಾರಿ, ಅಲ್ಲಿನ ಅಸ್ವಸ್ಥರನ್ನು ವಾಸಿಮಾಡಿ, ದೆವ್ವಗಳನ್ನು ಬಿಡಿಸುವರು. ಈ ಕೆಲಸಗಳನ್ನು ಮಾಡಿದಾಗ ಅಪೊಸ್ತಲರು ಹಣವನ್ನು ತೆಗೆದುಕೊಳ್ಳುವುದಕ್ಕೆ ಬದಲಾಗಿ, ‘ಉಚಿತವಾಗಿ’ ಮಾಡಬೇಕಾಗಿತ್ತು.​—ಮತ್ತಾಯ 10:​7, 8.

ವೈಯಕ್ತಿಕ ಹಾಗೂ ಕಮರ್ಷಲ್‌ ಕಂಪ್ಯೂಟರ್‌ಗಳ ಸಂಖ್ಯೆಯು ಹೆಚ್ಚುತ್ತಿರುವುದರಿಂದ, ಅನೇಕ ಜನರಿಗೆ ಸಾಫ್ಟ್‌ವೇರ್‌ನ ಆವಶ್ಯಕತೆಯುಂಟಾಗಿದೆ. ಸಾಮಾನ್ಯವಾಗಿ ಇದನ್ನು ಖರೀದಿಸಬೇಕು. ಆದರೆ, ಕೆಲವು ವ್ಯಕ್ತಿಗಳು ಪ್ರೋಗ್ರಾಮ್‌ಗಳನ್ನು ತಯಾರಿಸಿ ಇತರರಿಗೆ ಉಚಿತವಾಗಿ ಕೊಡುತ್ತಾರೆ ಮತ್ತು ಅವುಗಳ ಪ್ರತಿ ಮಾಡಿ ಇನ್ನೂ ಇತರರಿಗೆ ಕೊಡಸಾಧ್ಯವಿದೆ ಎಂದು ಹೇಳುವವರಿದ್ದಾರೆ ನಿಜ. ಆದರೂ, ಅನೇಕ ಕಂಪ್ಯೂಟರ್‌ ಸಾಫ್ಟ್‌ವೇರ್‌ಗಳು ವ್ಯಾಪಾರೀ ರೀತಿಯಲ್ಲಿ ಮಾರಲ್ಪಡುತ್ತವೆ. ಮನೆಯಲ್ಲಿ ತಮ್ಮ ವೈಯಕ್ತಿಕ ಉಪಯೋಗಕ್ಕಾಗಲಿ ಅಥವಾ ವ್ಯಾಪಾರದ ಉಪಯೋಗಕ್ಕಾಗಲಿ, ಸಾಫ್ಟ್‌ವೇರ್‌ ಅನ್ನು ಉಪಯೋಗಿಸುವವರು ಅದನ್ನು ಖರೀದಿಸುವಂತೆ, ಅಥವಾ ಅದಕ್ಕೆ ಹಣವನ್ನು ತೆರುವಂತೆ ನಿರೀಕ್ಷಿಸಲಾಗುತ್ತದೆ. ಹಣವನ್ನು ಕೊಡದೆ ಸಾಫ್ಟ್‌ವೇರ್‌ ಪ್ಯಾಕೇಜನ್ನು ತೆಗೆದುಕೊಳ್ಳುವುದು ಅಥವಾ ಅದರ ಪ್ರತಿಮಾಡುವುದು ಕಾನೂನಿಗೆ ವಿರುದ್ಧವಾಗಿದೆ. ಇದು, ಕಾಪಿರೈಟ್‌ ಇರುವಂತಹ ಅನೇಕ ಪುಸ್ತಕಗಳ ಫೋಟೋಕಾಪಿ ಮಾಡಿ, ಅವುಗಳನ್ನು ಉಚಿತವಾಗಿ ಕೊಡುವುದಕ್ಕೆ ಸಮಾನವಾಗಿದೆ, ಅಂದರೆ ಕಾನೂನುಬಾಹಿರವಾಗಿದೆ.

ಅಧಿಕಾಂಶ ಕಂಪ್ಯೂಟರ್‌ ಪ್ರೋಗ್ರಾಮ್‌ಗಳಿಗೆ (ಕಂಪ್ಯೂಟರ್‌ ಗೇಮ್ಸ್‌ ಸಹ) ಲೈಸನ್ಸ್‌ ಕೊಡಲ್ಪಟ್ಟಿರುತ್ತದೆ; ಇದರ ಒಡೆಯನು/ಇದನ್ನು ಉಪಯೋಗಿಸುವವನು ಇದರ ನಿರ್ದಿಷ್ಟ ಏರ್ಪಾಡುಗಳು ಹಾಗೂ ಪರಿಮಿತಿಗಳಿಗೆ ಅನುಸಾರವಾಗಿ ಇದನ್ನು ಉಪಯೋಗಿಸುವಂತೆ ಕೇಳಿಕೊಳ್ಳಲಾಗುತ್ತದೆ. ಒಬ್ಬ ವ್ಯಕ್ತಿಯು ಮಾತ್ರ ಈ ಪ್ರೋಗ್ರಾಮ್‌ ಅನ್ನು ಇನ್‌ಸ್ಟಾಲ್‌ ಮಾಡಬಹುದು ಮತ್ತು ಉಪಯೋಗಿಸಬಹುದು ಎಂದು ಇಂತಹ ಲೈಸನ್ಸ್‌ಗಳಲ್ಲಿ ತಿಳಿಸಲಾಗಿರುತ್ತದೆ. ಪ್ರೋಗ್ರಾಮ್‌ ಅನ್ನು ಸಾಮಾನ್ಯವಾಗಿ ಒಂದೇ ಒಂದು ಕಂಪ್ಯೂಟರ್‌ನಲ್ಲಿ, ಅಂದರೆ ಮನೆಯ ಕಂಪ್ಯೂಟರ್‌ನಲ್ಲಿ ಅಥವಾ ಕಮರ್ಷಲ್‌ ಕಂಪ್ಯೂಟರ್‌ನಲ್ಲಿ ಇಲ್ಲವೆ ಶಾಲೆಯ ಕಂಪ್ಯೂಟರ್‌ನಲ್ಲಿ ಮಾತ್ರ ಇನ್‌ಸ್ಟಾಲ್‌ ಮಾಡಸಾಧ್ಯವಿದೆ. ಈ ಪ್ರೋಗ್ರಾಮನ್ನು ಉಪಯೋಗಿಸುವವನು ತನಗಾಗಿ ಬ್ಯಾಕಪ್‌ ಪ್ರತಿಯನ್ನು ಮಾಡಿಕೊಳ್ಳಬಹುದು, ಆದರೆ ಬೇರೆಯವರಿಗೋಸ್ಕರ ಅದರ ಪ್ರತಿಗಳನ್ನು ಮಾಡಬಾರದು ಎಂದು ಕೆಲವು ಲೈಸನ್ಸ್‌ಗಳಲ್ಲಿ ತಿಳಿಸಲಾಗಿರುತ್ತದೆ. ಒಂದುವೇಳೆ ಒಡೆಯನು ತನ್ನ ಇಡೀ ಪ್ರೋಗ್ರಾಮ್‌ ಅನ್ನು (ಲೈಸನ್ಸ್‌ ಹಾಗೂ ಡಾಕ್ಯುಮೆಂಟೇಷನನ್ನೂ ಸೇರಿಸಿ) ಬೇರೆಯವರಿಗೆ ಕೊಡಲು ಬಯಸುವಲ್ಲಿ, ಅವನು ಅದನ್ನು ಕೊಟ್ಟುಬಿಡಬಹುದು. ಆದರೆ, ಹೀಗೆ ಕೊಟ್ಟಾಗ, ಅದನ್ನು ಉಪಯೋಗಿಸುವ ತನ್ನ ಸ್ವಂತ ಹಕ್ಕನ್ನು ಅವನು ಕಳೆದುಕೊಳ್ಳುತ್ತಾನೆ. ಲೈಸನ್ಸ್‌ಗಳು ಭಿನ್ನಭಿನ್ನವಾಗಿರುತ್ತವೆ; ಆದುದರಿಂದ, ಒಂದು ಪ್ರೋಗ್ರಾಮನ್ನು ಖರೀದಿಸುವ ಅಥವಾ ಒಂದು ಪ್ರೋಗ್ರಾಮ್‌ ನೀಡಲಾಗಿರುವ ಒಬ್ಬ ವ್ಯಕ್ತಿಯು, ನಿರ್ದಿಷ್ಟ ಲೈಸನ್ಸ್‌ನಲ್ಲಿ ಯಾವ ಷರತ್ತುಗಳು ಹಾಕಲ್ಪಟ್ಟಿವೆ ಎಂಬುದನ್ನು ತಿಳಿದುಕೊಳ್ಳುವ ಅಗತ್ಯವಿದೆ.

ಅನೇಕ ದೇಶಗಳು ಕಾಪಿರೈಟ್‌ ಒಪ್ಪಂದಗಳನ್ನು ಮಾಡಿಕೊಂಡಿದ್ದು, ಕಂಪ್ಯೂಟರ್‌ ಪ್ರೋಗ್ರಾಮ್‌ಗಳಂತಹ “ಬೌದ್ಧಿಕ ಸ್ವತ್ತನ್ನು (intellectual property)” ಸಂರಕ್ಷಿಸುತ್ತವೆ ಮತ್ತು ಕಾಪಿರೈಟ್‌ ನಿಯಮಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತವೆ. ಉದಾಹರಣೆಗಾಗಿ, 2000 ಇಸವಿಯ ಜನವರಿ 14ರ ದ ನ್ಯೂ ಯಾರ್ಕ್‌ ಟೈಮ್ಸ್‌ ವಾರ್ತಾಪತ್ರಿಕೆಯು ವರದಿಸಿದ್ದೇನೆಂದರೆ, “ಪ್ರಮುಖ ಸಾಫ್ಟ್‌ವೇರ್‌-ಪೈರಸಿ (software-piracy) ಗುಂಪು ಎಂದು ವರ್ಣಿಸಲ್ಪಟ್ಟ ಒಂದು ಗುಂಪಿನ ಸದಸ್ಯರನ್ನು ಜರ್ಮನ್‌ ಹಾಗೂ ಡೆನ್‌ಮಾರ್ಕಿನ ಪೊಲೀಸ್‌ ಅಧಿಕಾರಿಗಳು ಬಂಧಿಸಿದರು.” ಏಕೆಂದರೆ, ಈ ಗುಂಪಿನ ಸದಸ್ಯರು ಕಂಪ್ಯೂಟರ್‌ ಪ್ರೋಗ್ರಾಮ್‌ಗಳನ್ನು ಹಾಗೂ ಆಟಗಳನ್ನು ನಕಲುಮಾಡಿ ಇತರರಿಗೆ ಹಂಚುತ್ತಿದ್ದರು ಮಾತ್ರವಲ್ಲ, ಇವುಗಳಲ್ಲಿ ಕೆಲವನ್ನು ಇಂಟರ್‌ನೆಟ್‌ ಮೂಲಕವೂ ಮಾರುತ್ತಿದ್ದರು.

ಈ ವಿಷಯದಲ್ಲಿ ಕ್ರೈಸ್ತ ಸಭೆಯ ನಿಲುವು ಏನಾಗಿರಬೇಕು? ಯೇಸು ಹೇಳಿದ್ದು: “ಕೈಸರನದನ್ನು ಕೈಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ.” (ಮಾರ್ಕ 12:17) ಇದು, ದೇವರ ನಿಯಮಕ್ಕೆ ವಿರುದ್ಧವಾಗಿರದಂತಹ ದೇಶದ ನಿಯಮಗಳಿಗೆ ಕ್ರೈಸ್ತರು ವಿಧೇಯರಾಗುವುದನ್ನು ಕೇಳಿಕೊಳ್ಳುತ್ತದೆ. ಸರಕಾರಗಳ ವಿಷಯದಲ್ಲಿ ಅಪೊಸ್ತಲ ಪೌಲನು ಬರೆದುದು: “ಪ್ರತಿ ಮನುಷ್ಯನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ . . . ಇರುವ ಅಧಿಕಾರಿಗಳು ದೇವರಿಂದ ನೇಮಿಸಲ್ಪಟ್ಟವರು. ಆದದರಿಂದ ಅಧಿಕಾರಕ್ಕೆ ಎದುರುಬೀಳುವವನು ದೇವರ ನೇಮಕವನ್ನು ಎದುರಿಸುತ್ತಾನೆ; ಎದುರಿಸುವವರು ಶಿಕ್ಷೆಗೊಳಗಾಗುವರು.”​—ರೋಮಾಪುರ 13:​1, 2.

ಕಾಪಿರೈಟ್‌ ನಿಯಮಗಳನ್ನು ವಿವರಿಸಲು ಹಾಗೂ ಜಾರಿಗೆ ತರಲು ತಮಗೆ ಅಧಿಕಾರವಿದೆಯೋ ಎಂಬಂತೆ, ಕ್ರೈಸ್ತ ಸಭೆಯಲ್ಲಿರುವ ಹಿರಿಯರು ಇತರರ ಕಂಪ್ಯೂಟರ್‌ಗಳನ್ನು ಪರೀಕ್ಷಿಸಲು ಜವಾಬ್ದಾರರಾಗಿಲ್ಲ. ಆದರೆ ಕ್ರೈಸ್ತರು ತಮ್ಮದಲ್ಲದ ವಸ್ತುವನ್ನು ತೆಗೆದುಕೊಳ್ಳಬಾರದು ಮತ್ತು ನಿಯಮವನ್ನು ಪಾಲಿಸುವವರಾಗಿರಲು ಪ್ರಯತ್ನಿಸಬೇಕೆಂದು ಅವರು ನಂಬುತ್ತಾರೆ. ಇದು, ಕಾನೂನನ್ನು ಉಲ್ಲಂಘಿಸುವವರೋಪಾದಿ ಶಿಕ್ಷೆಗೊಳಗಾಗುವುದರಿಂದ ಕ್ರೈಸ್ತರನ್ನು ಸಂರಕ್ಷಿಸುತ್ತದೆ. ಅಷ್ಟುಮಾತ್ರವಲ್ಲ, ದೇವರ ಮುಂದೆ ಒಳ್ಳೆಯ ಮನಸ್ಸಾಕ್ಷಿಯನ್ನು ಕಾಪಾಡಿಕೊಳ್ಳಲು ಸಹ ಅವರಿಗೆ ಸಹಾಯಮಾಡುತ್ತದೆ. ಪೌಲನು ಬರೆದುದು: “ಆದಕಾರಣ ದಂಡನೆಯಾದೀತೆಂದು ಮಾತ್ರವಲ್ಲದೆ ಮನಸ್ಸಿಗೆ ನ್ಯಾಯವಾಗಿ ತೋರುವದರಿಂದಲೂ ಅವನಿಗೆ ಅಧೀನನಾಗುವದು ಅವಶ್ಯ.” (ರೋಮಾಪುರ 13:5) ತದ್ರೀತಿಯಲ್ಲಿ, ಈ ಮಾತುಗಳಲ್ಲಿ ಪೌಲನು ನಿಜ ಕ್ರೈಸ್ತರ ಬಯಕೆಯನ್ನು ವ್ಯಕ್ತಪಡಿಸಿದನು: “ನಾವು ಎಲ್ಲಾ ವಿಷಯಗಳಲ್ಲಿ ಸಜ್ಜನರಾಗಿ ನಡೆದುಕೊಳ್ಳಬೇಕೆಂದು ಅಪೇಕ್ಷಿಸುವವರಾಗಿದ್ದು ನಮ್ಮ ಮನಸ್ಸಿನಿಂದ ಒಳ್ಳೇ ಸಾಕ್ಷಿ ಹೊಂದಿದ್ದೇವೆಂದು ನಿಶ್ಚಯಿಸಿಕೊಂಡಿದ್ದೇವೆ.”​—ಇಬ್ರಿಯ 13:18.

[ಪುಟ 29ರಲ್ಲಿರುವ ಚೌಕ]

ಕೆಲವು ವ್ಯಾಪಾರಿ ಸಂಸ್ಥೆಗಳು ಹಾಗೂ ಶಾಲೆಗಳು ಅನೇಕರು ಉಪಯೋಗಿಸುವಂತಹ (ಮಲ್ಟಿಪಲ್‌-ಯೂಸರ್‌) ಲೈಸನ್ಸ್‌ಗಳನ್ನು ಖರೀದಿಸುತ್ತವೆ. ಈ ಲೈಸನ್ಸ್‌ಗಳಲ್ಲಿ ಗರಿಷ್ಠ ಸಂಖ್ಯೆಯ ಜನರು ಆ ಪ್ರೋಗ್ರಾಮ್‌ ಅನ್ನು ಉಪಯೋಗಿಸಲು ಅನುಮತಿ ನೀಡಲಾಗಿರುತ್ತದೆ. 1995ರಲ್ಲಿ, ಯೆಹೋವನ ಸಾಕ್ಷಿಗಳ ಸಭೆಗಳು ಈ ಕೆಳಗಿನ ಸಲಹೆಯನ್ನು ಒಳಗೊಂಡಂಥ ಒಂದು ಲೇಖನವನ್ನು ಚರ್ಚಿಸಿದವು:

“ಕಂಪ್ಯೂಟರ್‌ ಪ್ರೋಗ್ರಾಮ್‌ಗಳನ್ನು ಸಿದ್ಧಪಡಿಸಿ ಮಾರಾಟಮಾಡುವ ಅನೇಕ ಕಂಪೆನಿಗಳು, ಇವುಗಳ ಕಾಪಿರೈಟ್‌ ಮಾಡುತ್ತವೆ ಮತ್ತು ಈ ಪ್ರೋಗ್ರಾಮ್‌ಗಳನ್ನು ಕಾನೂನುಬದ್ಧವಾಗಿ ಹೇಗೆ ಉಪಯೋಗಿಸುವುದು ಎಂಬುದನ್ನು ತಿಳಿಯಪಡಿಸುವಂತಹ ಒಂದು ಲೈಸನ್ಸ್‌ ಅನ್ನು ಸಹ ಒದಗಿಸುತ್ತವೆ. ಈ ಪ್ರೋಗ್ರಾಮ್‌ನ ಒಡೆಯನು ಇದರ ಪ್ರತಿಗಳನ್ನು ಇತರರಿಗೆ ಕೊಡಸಾಧ್ಯವಿಲ್ಲ ಎಂದು ಸಾಮಾನ್ಯವಾಗಿ ಆ ಲೈಸನ್ಸ್‌ನಲ್ಲಿ ತಿಳಿಸಲಾಗಿರುತ್ತದೆ; ವಾಸ್ತವದಲ್ಲಿ, ಈ ರೀತಿ ಪ್ರತಿಗಳನ್ನು ಮಾಡಿಕೊಡುವುದು ಕಾನೂನು ವಿರುದ್ಧವಾದದ್ದಾಗಿದೆ ಎಂದು ಅಂತಾರಾಷ್ಟ್ರೀಯ ಕಾಪಿರೈಟ್‌ ನಿಯಮವು ಹೇಳುತ್ತದೆ. . . . ದೊಡ್ಡ ಕಂಪೆನಿಗಳಲ್ಲಿ ಕೆಲವು, ಮುಂಚಿತವಾಗಿಯೇ ಇನ್‌ಸ್ಟಾಲ್‌ಮಾಡಲ್ಪಟ್ಟಿರುವ ಹಾಗೂ ಲೈಸನ್ಸ್‌ ನೀಡಲ್ಪಟ್ಟಿರುವ ಪ್ರೋಗ್ರಾಮ್‌ಗಳನ್ನು ಒಳಗೊಂಡಿರುವ ಕಂಪ್ಯೂಟರ್‌ಗಳನ್ನು ಮಾರುತ್ತವೆ. ಆದರೂ, ಕೆಲವು ಕಂಪ್ಯೂಟರ್‌ ಅಂಗಡಿಗಳು ಲೈಸನ್ಸ್‌ಗಳನ್ನು ಕೊಡುವುದಿಲ್ಲ. ಏಕೆಂದರೆ ಅವರು ಮುಂಚಿತವಾಗಿಯೇ ಇನ್‌ಸ್ಟಾಲ್‌ಮಾಡಿರುವ ಪ್ರೋಗ್ರಾಮ್‌ಗಳು ಕಾನೂನುಬಾಹಿರ ಪ್ರತಿಗಳಾಗಿವೆ, ಮತ್ತು ಇದರರ್ಥ ಈ ಪ್ರೋಗ್ರಾಮ್‌ಗಳನ್ನು ಉಪಯೋಗಿಸುವ ಮೂಲಕ ಕಂಪ್ಯೂಟರ್‌ ಖರೀದಿಸಿದವನು ನಿಯಮವನ್ನು ಉಲ್ಲಂಘಿಸುತ್ತಾನೆ. ಇದರ ಸಂಬಂಧದಲ್ಲಿ, ಕಾಪಿರೈಟ್‌ ಇರುವಂತಹ (ಸೊಸೈಟಿಯ ಪ್ರಕಾಶನಗಳಂತೆ) ಹಾಗೂ ಅದರ ಒಡೆಯರಿಂದ ಕಾನೂನುಬದ್ಧ ಅನುಮತಿಯನ್ನು ಪಡೆಯದೆ ನಕಲು ಮಾಡಲ್ಪಟ್ಟಿರುವಂತಹ ವಿಷಯವನ್ನು ಕ್ರೈಸ್ತರು ಇಲೆಕ್ಟ್ರಾನಿಕ್‌ ಬುಲೆಟಿನ್‌ ಬೋರ್ಡ್‌ಗಳ ಮೇಲೆ ಹಾಕುವುದರಿಂದ ಅಥವಾ ಅದರಿಂದ ಯಾವುದೇ ವಿಷಯವನ್ನು ಡೌನ್‌ಲೋಡ್‌ ಮಾಡುವುದರಿಂದ ದೂರವಿರಬೇಕು.”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ