ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w02 12/15 ಪು. 8-13
  • “ದೇವರ ಸಮೀಪಕ್ಕೆ ಬನ್ನಿರಿ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ದೇವರ ಸಮೀಪಕ್ಕೆ ಬನ್ನಿರಿ”
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ದೇವರ ‘ಜ್ಞಾನವನ್ನು ತೆಗೆದುಕೊಳ್ಳುತ್ತಾ’ ಇರಿ
  • ಯೆಹೋವನಿಗಾಗಿರುವ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿರಿ
  • ಪ್ರಾರ್ಥನೆಯ ಮೂಲಕ ಆಪ್ತತೆಯನ್ನು ಬೆಳೆಸಿಕೊಳ್ಳಿರಿ
  • ನೀವು ದೇವರ ಸಮೀಪಕ್ಕೆ ಬರಬಲ್ಲ ವಿಧ
    ನಿತ್ಯಜೀವಕ್ಕೆ ನಡೆಸುವ ಜ್ಞಾನ
  • “ಆತನು ನಿಮ್ಮ ಸಮೀಪಕ್ಕೆ ಬರುವನು”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು”
    ಯೆಹೋವನ ಸಮೀಪಕ್ಕೆ ಬನ್ನಿರಿ
  • ಯೆಹೋವನೊಟ್ಟಿಗಿನ ನಿಮ್ಮ ಸಂಬಂಧ ಎಷ್ಟು ನೈಜವಾಗಿದೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
w02 12/15 ಪು. 8-13

“ದೇವರ ಸಮೀಪಕ್ಕೆ ಬನ್ನಿರಿ”

“ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.”​—ಯಾಕೋಬ 4:8.

1, 2. (ಎ) ಜನರು ಅನೇಕವೇಳೆ ಯಾವ ವಾದವನ್ನು ಮಾಡುತ್ತಾರೆ? (ಬಿ) ಯಾಕೋಬನು ಯಾವ ಬುದ್ಧಿವಾದವನ್ನು ಕೊಟ್ಟನು, ಮತ್ತು ಅದು ಏಕೆ ಅಗತ್ಯವಾಗಿತ್ತು?

“ದೇವರು ನಮ್ಮೊಂದಿಗಿದ್ದಾನೆ.” ಈ ಮಾತುಗಳು ರಾಷ್ಟ್ರೀಯ ಚಿಹ್ನೆಗಳನ್ನು ಮತ್ತು ಸೈನಿಕರ ಸಮವಸ್ತ್ರಗಳನ್ನು ಸಹ ಅಲಂಕರಿಸಿವೆ. “ನಮ್ಮ ಭರವಸೆ ದೇವರಲ್ಲಿ” ಎಂಬ ಮಾತುಗಳು ಅಸಂಖ್ಯಾತವಾದ ಆಧುನಿಕ ನಾಣ್ಯಗಳು ಮತ್ತು ನೋಟುಗಳಲ್ಲಿ ಅಚ್ಚೊತ್ತಿಸಲ್ಪಟ್ಟಿವೆ. ದೇವರೊಂದಿಗೆ ತಮಗೆ ನಿಕಟ ಸಂಬಂಧವಿದೆಯೆಂದು ಜನರು ಹೇಳಿಕೊಳ್ಳುವುದು ಒಂದು ಸಾಮಾನ್ಯ ಸಂಗತಿಯಾಗಿದೆ. ಆದರೂ, ನಿಜವಾಗಿಯೂ ಅಂತಹ ಸಂಬಂಧವನ್ನು ಹೊಂದಿರುವುದು ಕೇವಲ ಹಾಗೆ ಮಾತಾಡುವುದಕ್ಕಿಂತ ಅಥವಾ ಅಂತಹ ಗುರಿನುಡಿಗಳನ್ನು ಪ್ರದರ್ಶಿಸುವುದಕ್ಕಿಂತ ಹೆಚ್ಚಿನದನ್ನು ಕೇಳಿಕೊಳ್ಳುತ್ತದೆ ಎಂಬುದನ್ನು ನೀವು ಒಪ್ಪುವುದಿಲ್ಲವೊ?

2 ದೇವರೊಂದಿಗೆ ಒಂದು ಸಂಬಂಧವನ್ನು ಬೆಳೆಸಿಕೊಳ್ಳಸಾಧ್ಯವಿದೆಯೆಂದು ಬೈಬಲು ತೋರಿಸುತ್ತದೆ. ಆದರೆ ಇದಕ್ಕೆ ಪ್ರಯತ್ನ ಅಗತ್ಯ. ಪ್ರಥಮ ಶತಮಾನದ ಕೆಲವು ಮಂದಿ ಅಭಿಷಿಕ್ತ ಕ್ರೈಸ್ತರಿಗೂ ಯೆಹೋವ ದೇವರೊಂದಿಗೆ ಅವರಿಗಿದ್ದ ಸಂಬಂಧವನ್ನು ಬಲಪಡಿಸುವ ಅಗತ್ಯವಿತ್ತು. ಕ್ರೈಸ್ತ ಮೇಲ್ವಿಚಾರಕನಾಗಿದ್ದ ಯಾಕೋಬನು, ಕೆಲವರಿಗಿದ್ದ ಶಾರೀರಿಕ ಪ್ರವೃತ್ತಿಗಳು ಮತ್ತು ಆತ್ಮಿಕ ಶುದ್ಧತೆಯ ನಷ್ಟದ ಕುರಿತು ಎಚ್ಚರಿಸಬೇಕಾಯಿತು. ಆ ಬುದ್ಧಿವಾದದ ಜೊತೆಯಲ್ಲಿ ಅವನು ಈ ಬಲವತ್ತಾದ ಸಲಹೆಯನ್ನು ಕೊಟ್ಟನು: “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.” (ಯಾಕೋಬ 4:1-12) “ಸಮೀಪಕ್ಕೆ ಬನ್ನಿರಿ” ಎಂದು ಯಾಕೋಬನು ಹೇಳಿದ್ದು ಯಾವ ಅರ್ಥದಲ್ಲಿ?

3, 4. (ಎ) ಯಾಕೋಬನ ಪ್ರಥಮ ಶತಮಾನದ ಕೆಲವು ವಾಚಕರಿಗೆ, “ದೇವರ ಸಮೀಪಕ್ಕೆ ಬನ್ನಿರಿ” ಎಂಬ ಮಾತುಗಳಿಂದ ಯಾವುದರ ಮರುಜ್ಞಾಪನವು ಕೊಡಲ್ಪಟ್ಟಿದ್ದಿರಬಹುದು? (ಬಿ) ದೇವರ ಸಾನಿಧ್ಯಕ್ಕೆ ಬರಸಾಧ್ಯವಿದೆ ಎಂಬ ಆಶ್ವಾಸನೆ ನಮಗೆ ಏಕೆ ಇರಬಹುದು?

3 ಯಾಕೋಬನು ತನ್ನ ವಾಚಕರಲ್ಲಿ ಅನೇಕರಿಗೆ ಪರಿಚಯವಿದ್ದ ಒಂದು ವಾಕ್ಸರಣಿಯನ್ನು ಉಪಯೋಗಿಸಿದನು. ಮೋಶೆಯ ಧರ್ಮಶಾಸ್ತ್ರವು, ಯಾಜಕರು ಯೆಹೋವನ ಜನರ ಪರವಾಗಿ ಆತನ ‘ಸನ್ನಿಧಿಗೆ ಬರುವ’ ವಿಧದ ಕುರಿತಾಗಿ ನಿರ್ದಿಷ್ಟ ಸೂಚನೆಗಳನ್ನು ಕೊಟ್ಟಿತು. (ವಿಮೋಚನಕಾಂಡ 19:22) ಹೀಗೆ, ಯಾಕೋಬನ ವಾಚಕರಿಗೆ ಯೆಹೋವನನ್ನು ಸಮೀಪಿಸುವುದು ಒಂದು ಸಾಮಾನ್ಯ ಸಂಗತಿಯಲ್ಲವೆಂಬುದರ ಮರುಜ್ಞಾಪನವು ಇದರಿಂದ ದೊರೆತಿರಬಹುದು. ಯೆಹೋವನು ಈ ವಿಶ್ವದ ಅತಿ ಗೌರವಾನ್ವಿತ ಉನ್ನತಾಧಿಕಾರಿಯಾಗಿದ್ದಾನೆ.

4 ಇನ್ನೊಂದು ಪಕ್ಕದಲ್ಲಿ, ಒಬ್ಬ ಬೈಬಲ್‌ ವಿದ್ವಾಂಸನು ಹೇಳುವಂತೆ, “[ಯಾಕೋಬ 4:8ರಲ್ಲಿರುವ] ಈ ಬುದ್ಧಿವಾದವು ಬಲವಾದ ಆಶಾವಾದವನ್ನು ಪ್ರಕಟಪಡಿಸುತ್ತದೆ.” ಯೆಹೋವನು ಅಪರಿಪೂರ್ಣ ಮಾನವರನ್ನು ತನ್ನ ಸಮೀಪಕ್ಕೆ ಬರಲು ಯಾವಾಗಲೂ ಆಮಂತ್ರಿಸಿರುತ್ತಾನೆಂದು ಯಾಕೋಬನಿಗೆ ಗೊತ್ತಿತ್ತು. (2 ಪೂರ್ವಕಾಲವೃತ್ತಾಂತ 15:2) ಯೇಸುವಿನ ಯಜ್ಞವು ಯೆಹೋವನ ಸಾನಿಧ್ಯಕ್ಕೆ ಬರುವ ದಾರಿಯನ್ನು ಹೆಚ್ಚು ಪೂರ್ಣಾರ್ಥದಲ್ಲಿ ತೆರೆಯಿತು. (ಎಫೆಸ 3:10-12) ಇಂದು ದೇವರ ಸಾನ್ನಿಧ್ಯಕ್ಕೆ ಬರುವ ದಾರಿಯು ಲಕ್ಷಾಂತರ ಜನರಿಗೆ ತೆರೆದಿದೆ! ಆದರೆ ನಾವು ಈ ಅದ್ಭುತಕರವಾದ ಸದವಕಾಶದ ಪ್ರಯೋಜನವನ್ನು ಹೇಗೆ ಪಡೆಯಬಲ್ಲೆವು? ನಾವು ಯೆಹೋವ ದೇವರ ಸಮೀಪಕ್ಕೆ ಹೋಗಬಲ್ಲ ಮೂರು ಮಾಧ್ಯಮಗಳನ್ನು ಸಂಕ್ಷಿಪ್ತವಾಗಿ ಪರಿಗಣಿಸುವೆವು.

ದೇವರ ‘ಜ್ಞಾನವನ್ನು ತೆಗೆದುಕೊಳ್ಳುತ್ತಾ’ ಇರಿ

5, 6. ಎಳೆಯ ಸಮುವೇಲನ ದೃಷ್ಟಾಂತವು, ದೇವರ “ಜ್ಞಾನವನ್ನು ತೆಗೆದುಕೊಳ್ಳು”ವುದರಲ್ಲಿ ಏನು ಸೇರಿದೆ ಎಂಬ ವಿಷಯವನ್ನು ಹೇಗೆ ಚಿತ್ರಿಸುತ್ತದೆ?

5 ಯೋಹಾನ 17:3ಕ್ಕನುಸಾರ ಯೇಸು ಹೇಳಿದ್ದು: “ಒಬ್ಬನೇ ಸತ್ಯ ದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿ ಕೊಟ್ಟ ಯೇಸು ಕ್ರಿಸ್ತನನ್ನು ತಿಳಿಯುವುದೇ ನಿತ್ಯಜೀವವು.” ನೂತನ ಲೋಕ ಭಾಷಾಂತರ (ಇಂಗ್ಲಿಷ್‌) ಬೈಬಲು, ಇದಕ್ಕಿಂತ ಮತ್ತು ಇನ್ನಿತರ ಅನೇಕ ಭಾಷಾಂತರಗಳಿಗಿಂತ ತುಸು ಭಿನ್ನವಾಗಿದೆ. ದೇವರನ್ನು ‘ತಿಳಿಯುವುದು’ ಎಂದು ಹೇಳುವ ಬದಲು, ದೇವರ ಕುರಿತಾದ “ಜ್ಞಾನವನ್ನು ತೆಗೆದುಕೊಳ್ಳುವುದು” ಎಂಬ ವಾಕ್ಸರಣಿಯನ್ನು ಅದು ಉಪಯೋಗಿಸುತ್ತದೆ. ಅಲ್ಲದೆ, ಅನೇಕ ಪಂಡಿತರು, ಆ ಮೂಲ ಗ್ರೀಕ್‌ನಲ್ಲಿರುವ ಪದದ ಅರ್ಥವು ಅದಕ್ಕಿಂತ ಹೆಚ್ಚಿನದ್ದನ್ನು, ಅಂದರೆ ಮುಂದುವರಿಯುತ್ತಿರುವ ಒಂದು ಕಾರ್ಯಗತಿಯನ್ನು, ಇನ್ನೊಬ್ಬನೊಂದಿಗೆ ಆಪ್ತ ಪರಿಚಯಕ್ಕೂ ನಡೆಸುವ ಕಾರ್ಯಗತಿಯನ್ನು ಅರ್ಥೈಸುತ್ತದೆಂದು ಅಭಿಪ್ರಯಿಸುತ್ತಾರೆ.

6 ದೇವರ ಆತ್ಮೀಯ ಪರಿಚಯವನ್ನು ಮಾಡಿಕೊಳ್ಳುವ ಸಂಗತಿಯು ಯೇಸುವಿನ ದಿನಗಳಲ್ಲಿ ಒಂದು ಹೊಸ ವಿಚಾರವಾಗಿರಲಿಲ್ಲ. ದೃಷ್ಟಾಂತಕ್ಕೆ, ಹೀಬ್ರು ಶಾಸ್ತ್ರಗಳಲ್ಲಿ, ಸಮುವೇಲನು ಹುಡುಗನಾಗಿದ್ದಾಗ ಅವನು “ಯೆಹೋವನನ್ನು ಇನ್ನೂ ತಿಳಿದಿರಲಿಲ್ಲ” ಎಂದು ನಾವು ಓದುತ್ತೇವೆ. (1 ಸಮುವೇಲ 3:7, NW) ಇದರ ಅರ್ಥವು ಸಮುವೇಲನಿಗೆ ತನ್ನ ದೇವರ ಬಗ್ಗೆ ಕೇವಲ ಕೊಂಚವೇ ತಿಳಿದಿತ್ತು ಎಂದಾಗಿದೆಯೊ? ಇಲ್ಲ. ಅವನ ಹೆತ್ತವರು ಮತ್ತು ಯಾಜಕರು ಖಂಡಿತವಾಗಿಯೂ ಅವನಿಗೆ ಬಹಳಷ್ಟನ್ನು ಕಲಿಸಿದ್ದಿರಬಹುದು. ಆದರೆ ಒಬ್ಬ ವಿದ್ವಾಂಸರಿಗನುಸಾರ, ಆ ವಚನದಲ್ಲಿ ಉಪಯೋಗಿಸಲಾಗಿರುವ ಹೀಬ್ರು ಪದವನ್ನು “ಅತಿ ಆತ್ಮೀಯವಾದ ಪರಿಚಯಕ್ಕೆ ಬಳಸ”ಸಾಧ್ಯವಿದೆ. ಸಮುವೇಲನು ಸಮಯಾನಂತರ ಯೆಹೋವನ ವದನಕನಾಗಿ ಸೇವೆಮಾಡಿದಾಗ ದೇವರೊಂದಿಗೆ ಆದಷ್ಟು ಆತ್ಮೀಯ ಪರಿಚಯ ಆ ಸಮಯದಲ್ಲಿ ಅವನಿಗಿನ್ನೂ ಆಗಿರಲಿಲ್ಲ. ಸಮುವೇಲನು ಬೆಳೆಯುತ್ತಾ ಹೋದಂತೆ, ಅವನು ಯೆಹೋವನೊಂದಿಗೆ ಒಂದು ಆಪ್ತವಾದ ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಂಡು, ನಿಜವಾಗಿಯೂ ಆತನನ್ನು ತಿಳಿದುಕೊಂಡನು.​—1 ಸಮುವೇಲ 3:​19, 20.

7, 8. (ಎ) ಬೈಬಲಿನ ಹೆಚ್ಚು ಗಹನವಾದ ಬೋಧನೆಗಳಿಂದ ನಾವೇಕೆ ಧೈರ್ಯಗೆಡಬಾರದು? (ಬಿ) ನಾವು ಅಧ್ಯಯನಮಾಡಬೇಕಾದ ದೇವರ ವಾಕ್ಯದ ಕೆಲವು ಗಹನವಾದ ಸತ್ಯಗಳಾವುವು?

7 ಯೆಹೋವನೊಂದಿಗೆ ಆತ್ಮೀಯ ರೀತಿಯಲ್ಲಿ ಪರಿಚಿತರಾಗುವ ಉದ್ದೇಶದಿಂದ ನೀವು ಆತನ ಜ್ಞಾನವನ್ನು ತೆಗೆದುಕೊಳ್ಳುತ್ತಿದ್ದೀರೊ? ಹಾಗೆ ಮಾಡಲಿಕ್ಕಾಗಿ ನೀವು ದೇವರು ಒದಗಿಸುವ ಆತ್ಮಿಕ ಆಹಾರಕ್ಕಾಗಿ ‘ಹಂಬಲವನ್ನು ಬೆಳೆಸಿಕೊಳ್ಳಬೇಕು.’ (1 ಪೇತ್ರ 2:2, NW) ಬೈಬಲಿನ ಪ್ರಾಥಮಿಕ ಬೋಧನೆಗಳನ್ನು ಮಾತ್ರ ತಿಳಿದುಕೊಳ್ಳುವುದರಲ್ಲಿ ತೃಪ್ತರಾಗಬೇಡಿ. ಬೈಬಲಿನ ಹೆಚ್ಚು ಗಹನವಾದ ಬೋಧನೆಗಳಲ್ಲಿ ಕೆಲವನ್ನು ಕಲಿಯಲು ಪ್ರಯತ್ನಿಸಿರಿ. (ಇಬ್ರಿಯ 5:​12-14) ಅಂತಹ ಬೋಧನೆಗಳು ತುಂಬ ಕಷ್ಟಕರವಾಗಿವೆಯೆಂದು ಭಾವಿಸುತ್ತಾ ಅವುಗಳಿಂದ ನೀವು ಧೈರ್ಯಗೆಡುತ್ತೀರೊ? ಹಾಗಿರುವಲ್ಲಿ, ಯೆಹೋವನು “ಅತ್ಯಂತ ಶ್ರೇಷ್ಠ ಬೋಧಕನು” ಎಂಬುದನ್ನು ಮರೆಯದಿರಿ. (ಯೆಶಾಯ 30:​20, NW) ಅಪರಿಪೂರ್ಣ ಮಾನವ ಮನಸ್ಸುಗಳಿಗೆ ಗಹನವಾದ ಸತ್ಯಗಳನ್ನು ಸಾಗಿಸುವುದು ಹೇಗೆಂಬುದನ್ನು ಆತನು ಬಲ್ಲನು. ಮತ್ತು ಆತನು ನಿಮಗೆ ಏನನ್ನು ಬೋಧಿಸುತ್ತಾನೊ ಅದನ್ನು ಗ್ರಹಿಸಲು ನೀವು ಮಾಡುವ ಯಥಾರ್ಥ ಪ್ರಯತ್ನವನ್ನು ಆತನು ಆಶೀರ್ವದಿಸಬಲ್ಲನು.​—ಕೀರ್ತನೆ 25:4.

8 “ದೇವರ ಅಗಾಧವಾದ ವಿಷಯ”ಗಳಲ್ಲಿ ಕೆಲವೊಂದರ ಸಂಬಂಧದಲ್ಲಿ ನೀವೇಕೆ ನಿಮ್ಮನ್ನು ಪರೀಕ್ಷಿಸಿಕೊಳ್ಳಬಾರದು? (1 ಕೊರಿಂಥ 2:10) ಇವು ದೇವತಾಶಾಸ್ತ್ರಜ್ಞರು ಮತ್ತು ಪಾದ್ರಿಗಳು ವಾದವಿವಾದ ಮಾಡುವಂತಹ ರೀತಿಯ ಅನಾಸಕ್ತಿಕರವಾದ ವಿಷಯಗಳಲ್ಲ. ಅವು ಸಜೀವವಾದ ತಾತ್ತ್ವಿಕ ಬೋಧನೆಗಳಾಗಿದ್ದು, ನಮ್ಮ ಪ್ರಿಯ ಪಿತನ ಹೃದಮನಗಳೊಳಗೆ ಆಕರ್ಷಕವಾದ ಒಳನೋಟವನ್ನು ಒದಗಿಸುತ್ತವೆ. ದೃಷ್ಟಾಂತಕ್ಕೆ, ಪ್ರಾಯಶ್ಚಿತ್ತ, “ಗುಪ್ತವಾಗಿದ್ದ ಸತ್ಯಾರ್ಥ” ಮತ್ತು ತನ್ನ ಜನರನ್ನು ಆಶೀರ್ವದಿಸಿ, ತನ್ನ ಉದ್ದೇಶಗಳನ್ನು ನೆರವೇರಿಸಲು ಯೆಹೋವನು ಉಪಯೋಗಿಸಿರುವ ವಿವಿಧ ಒಡಂಬಡಿಕೆಗಳು​—ಈ ವಿಷಯಗಳೂ ಅವುಗಳಂತಹ ಇತರ ವಿಷಯಗಳೂ ವೈಯಕ್ತಿಕ ಸಂಶೋಧನೆ ಮತ್ತು ಅಧ್ಯಯನಕ್ಕೆ ಆಹ್ಲಾದಕರವೂ ಪ್ರತಿಫಲದಾಯಕವೂ ಆದ ವಿಷಯಗಳಾಗಿವೆ.​—1 ಕೊರಿಂಥ 2:7.

9, 10. (ಎ) ಅಹಂಕಾರವು ಅಪಾಯಕರವೇಕೆ, ಮತ್ತು ಅದರಿಂದ ದೂರವಿರಲು ನಮಗೆ ಯಾವುದು ಸಹಾಯಮಾಡುವುದು? (ಬಿ) ಯೆಹೋವನ ಕುರಿತಾದ ಜ್ಞಾನದ ವಿಷಯದಲ್ಲಿ, ನಾವೇಕೆ ದೈನ್ಯಭಾವದವರಾಗಿರಬೇಕು?

9 ಹೆಚ್ಚು ಗಹನವಾದ ಆತ್ಮಿಕ ಸತ್ಯಗಳ ಕುರಿತಾದ ಜ್ಞಾನವು ನಿಮ್ಮಲ್ಲಿ ಹೆಚ್ಚುತ್ತಾ ಹೋದಂತೆ, ಜ್ಞಾನದ ಜೊತೆಯಲ್ಲಿ ಬರಬಹುದಾದ ಅಪಾಯದ ಕುರಿತು, ಅಂದರೆ ಅಹಂಕಾರದ ಕುರಿತು ಎಚ್ಚರಿಕೆಯಿಂದಿರಿ. (1 ಕೊರಿಂಥ 8:1) ಅಹಂಕಾರವು ಅಪಾಯಕರವಾಗಿದೆ, ಏಕೆಂದರೆ ಅದು ಮನುಷ್ಯರನ್ನು ದೇವರಿಂದ ದೂರ ಸರಿಸುತ್ತದೆ. (ಜ್ಞಾನೋಕ್ತಿ 16:5; ಯಾಕೋಬ 4:6) ಯಾರೊಬ್ಬನೂ ತನಗಿರುವ ಜ್ಞಾನದಿಂದಾಗಿ ಜಂಬಕೊಚ್ಚಿಕೊಳ್ಳಲು ಕಾರಣವಿಲ್ಲವೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ದೃಷ್ಟಾಂತಕ್ಕೆ, ಮಾನವರ ಇತ್ತೀಚಿನ ವೈಜ್ಞಾನಿಕ ಪ್ರಗತಿಯನ್ನು ಪರೀಕ್ಷಿಸಿ ಬೆಲೆಕಟ್ಟುವ ಒಂದು ಪುಸ್ತಕದ ಪೀಠಿಕೆಯಲ್ಲಿರುವ ಈ ಮಾತುಗಳನ್ನು ಪರಿಗಣಿಸಿರಿ: “ನಾವು ಹೆಚ್ಚೆಚ್ಚು ತಿಳಿದುಕೊಳ್ಳುತ್ತಾ ಹೋದಂತೆ, ನಮಗೆ ಎಷ್ಟು ಕಡಿಮೆ ತಿಳಿದಿದೆ ಎಂಬುದು ನಮ್ಮ ಅರಿವಿಗೆ ಬರುತ್ತದೆ . . . ನಮಗೆ ಇನ್ನೂ ಕಲಿಯಲಿಕ್ಕಿರುವ ವಿಷಯಗಳಿಗೆ ಹೋಲಿಸುವಾಗ ನಾವು ಕಲಿತಿರುವುದೆಲ್ಲವೂ ಏನೂ ಅಲ್ಲ.” ಇಂತಹ ದೈನ್ಯಭಾವವು ಚೈತನ್ಯದಾಯಕ. ಈಗ ಅತ್ಯಂತ ಶ್ರೇಷ್ಠವಾದ ಜ್ಞಾನ ಭಂಡಾರದ ಸಂಬಂಧದಲ್ಲಿ, ಅಂದರೆ ಯೆಹೋವ ದೇವರ ಕುರಿತಾದ ಜ್ಞಾನದ ವಿಷಯದಲ್ಲಿ, ನಮಗೆ ದೈನ್ಯಭಾವವನ್ನು ತೋರಿಸಲು ಇನ್ನೂ ದೊಡ್ಡ ಕಾರಣವಿದೆ. ಏಕೆ?

10 ಬೈಬಲಿನಲ್ಲಿ ಯೆಹೋವನ ಕುರಿತಾದ ಕೆಲವು ಹೇಳಿಕೆಗಳನ್ನು ಗಮನಿಸಿ. “ನಿನ್ನ ಆಲೋಚನೆಗಳು ಅಶೋಧ್ಯವಾಗಿವೆ.” (ಕೀರ್ತನೆ 92:5) “ಆತನ [ಯೆಹೋವನ] ಜ್ಞಾನವು ಅಪರಿಮಿತವಾಗಿದೆ.” (ಕೀರ್ತನೆ 147:5) “ಆತನ [ಯೆಹೋವನ] ವಿವೇಕವು ಪರಿಶೋಧನೆಗೆ ಅಗಮ್ಯ.” (ಯೆಶಾಯ 40:28) “ಆಹಾ, ದೇವರ ಐಶ್ವರ್ಯವೂ ಜ್ಞಾನವೂ ವಿವೇಕವೂ ಎಷ್ಟೋ ಅಗಾಧ!” (ರೋಮಾಪುರ 11:33) ಹೌದು, ನಾವು ಯೆಹೋವನ ವಿಷಯದಲ್ಲಿ ಏನೆಲ್ಲಾ ತಿಳಿಯಲಿಕ್ಕಿದೆಯೊ ಅದೆಲ್ಲವನ್ನೂ ಎಂದಿಗೂ ತಿಳಿಯೆವು. (ಪ್ರಸಂಗಿ 3:11) ಆತನು ನಮಗೆ ಆಶ್ಚರ್ಯಕರವಾದ ಅನೇಕ ವಿಷಯಗಳನ್ನು ಕಲಿಸಿಕೊಟ್ಟಿರುವುದಾದರೂ, ನಾವು ಇನ್ನೂ ಹೆಚ್ಚನ್ನು ಕಲಿಯಲು ಯಾವಾಗಲೂ ನಮ್ಮ ಮುಂದೆ ಅಪಾರ ಪ್ರಮಾಣದ ಜ್ಞಾನವು ಇದೆ. ಈ ಪ್ರತೀಕ್ಷೆಯು ನಮ್ಮನ್ನು ರೋಮಾಂಚನಗೊಳಿಸುವಾಗ ಅದೇ ಸಮಯದಲ್ಲಿ ನಮ್ಮನ್ನು ದೈನ್ಯರನ್ನಾಗಿಯೂ ಮಾಡುವುದಿಲ್ಲವೊ? ಆದುದರಿಂದ ನಾವು ಕಲಿಯುತ್ತಾ ಹೋಗುವಾಗ, ನಾವು ನಮ್ಮ ಜ್ಞಾನವನ್ನು ನಮ್ಮನ್ನೇ ಬೇರೆಯವರಿಗಿಂತ ಮೇಲೆತ್ತಿ ಹಿಡಿಯುವ ಸಾಧನವಾಗಿ ಅಲ್ಲ, ಬದಲಾಗಿ ಯೆಹೋವನ ಸಮೀಪಕ್ಕೆ ಹೋಗಲಿಕ್ಕಾಗಿ ಮತ್ತು ಇತರರೂ ಹಾಗೆ ಮಾಡುವಂತೆ ಸಹಾಯಮಾಡಲಿಕ್ಕಾಗಿ ಯಾವಾಗಲೂ ಒಂದು ಆಧಾರದೋಪಾದಿ ಬಳಸೋಣ.​—ಮತ್ತಾಯ 23:12; ಲೂಕ 9:48.

ಯೆಹೋವನಿಗಾಗಿರುವ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿರಿ

11, 12. (ಎ) ನಾವು ಯೆಹೋವನ ಕುರಿತು ತೆಗೆದುಕೊಳ್ಳುವಂಥ ಜ್ಞಾನವು ನಮ್ಮನ್ನು ಹೇಗೆ ಪ್ರಭಾವಿಸಬೇಕು? (ಬಿ) ದೇವರ ಕಡೆಗೆ ಒಬ್ಬನಿಗಿರುವ ಪ್ರೀತಿಯು ನೈಜವೊ ಎಂಬುದನ್ನು ಯಾವುದು ನಿರ್ಧರಿಸುತ್ತದೆ?

11 ತಕ್ಕದ್ದಾಗಿಯೇ, ಅಪೊಸ್ತಲ ಪೌಲನು ಜ್ಞಾನ ಮತ್ತು ಪ್ರೀತಿಯ ಮಧ್ಯೆ ಒಂದು ಸಂಬಂಧವನ್ನು ಕಲ್ಪಿಸಿದನು. ಅವನು ಬರೆದುದು: “ನಾನು ದೇವರನ್ನು ಪ್ರಾರ್ಥಿಸಿ​—ನಿಮ್ಮ ಪ್ರೀತಿಯು ಹೆಚ್ಚುತ್ತಾ ಹೆಚ್ಚುತ್ತಾ ಪೂರ್ಣ ಜ್ಞಾನವಿವೇಕಗಳಿಂದ ಕೂಡಿ”ರಬೇಕೆಂದು ಬೇಡಿಕೊಳ್ಳುತ್ತೇನೆ. (ಫಿಲಿಪ್ಪಿ 1:​9, 10) ಯೆಹೋವನ ಕುರಿತು ಮತ್ತು ಆತನ ಉದ್ದೇಶಗಳ ಕುರಿತು ನಾವು ಕಲಿಯುವ ಪ್ರತಿಯೊಂದು ಅಮೂಲ್ಯ ಸತ್ಯವು ನಮ್ಮನ್ನು ದುರಹಂಕಾರಿಗಳನ್ನಾಗಿ ಮಾಡುವ ಬದಲು, ನಮ್ಮ ಸ್ವರ್ಗೀಯ ತಂದೆಯ ಕಡೆಗೆ ನಮಗಿರುವ ಪ್ರೀತಿಯನ್ನು ಹೆಚ್ಚಿಸಬೇಕು.

12 ದೇವರನ್ನು ಪ್ರೀತಿಸುತ್ತೇವೆಂದು ಹೇಳಿಕೊಳ್ಳುವ ಅನೇಕರು ನಿಜವಾಗಿಯೂ ಆತನನ್ನು ಪ್ರೀತಿಸುವುದಿಲ್ಲವೆಂಬುದು ನಿಶ್ಚಯ. ಅವರ ಹೃದಯಗಳಲ್ಲಿ ಉಕ್ಕಿಬರುವ ಉತ್ಕಟ ಭಾವಗಳಲ್ಲಿ ಅವರು ಯಥಾರ್ಥರಾಗಿರಬಹುದು. ಅಂತಹ ಭಾವಗಳು ನಿಷ್ಕೃಷ್ಟ ಜ್ಞಾನಕ್ಕೆ ಹೊಂದಿಕೆಯಾಗಿರುವಾಗ ಅವು ಉತ್ತಮವಾಗಿವೆ, ಪ್ರಶಂಸನೀಯವೂ ಆಗಿವೆ. ಆದರೆ ಆ ಭಾವಗಳೇ, ದೇವರಿಗಾಗಿರುವ ನಿಜ ಪ್ರೀತಿಗೆ ಸಮಾನವಾಗಿರುವುದಿಲ್ಲ. ಏಕೆ? ಅಂತಹ ನಿಜ ಪ್ರೀತಿಯನ್ನು ದೇವರ ವಾಕ್ಯವು ಹೇಗೆ ನಿರೂಪಿಸುತ್ತದೆಂಬುದನ್ನು ಗಮನಿಸಿರಿ: “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ.” (1 ಯೋಹಾನ 5:3) ಹಾಗಾದರೆ ಯೆಹೋವನಿಗಾಗಿರುವ ಪ್ರೀತಿಯು ವಿಧೇಯ ಕೃತ್ಯಗಳಿಂದ ತೋರಿಸಲ್ಪಡುವಲ್ಲಿ ಮಾತ್ರ ಅದು ನೈಜ ಪ್ರೀತಿಯಾಗಿದೆ.

13. ಯೆಹೋವನ ಕಡೆಗೆ ನಮ್ಮ ಪ್ರೀತಿಯನ್ನು ತೋರಿಸಲು ದೇವಭಯವು ಹೇಗೆ ಸಹಾಯಮಾಡುವುದು?

13 ದೇವಭಯವು ನಾವು ಯೆಹೋವನಿಗೆ ವಿಧೇಯರಾಗುವಂತೆ ಸಹಾಯಮಾಡುವುದು. ಯೆಹೋವನಿಗಾಗಿರುವ ಈ ಗಾಢವಾದ ಭಯಭಕ್ತಿ ಮತ್ತು ಆಳವಾದ ಗೌರವವು, ಆತನ ಕುರಿತಾದ ಜ್ಞಾನವನ್ನು ತೆಗೆದುಕೊಳ್ಳುವುದರಿಂದ, ಆತನ ಅನಂತ ಪಾವಿತ್ರ್ಯ, ಮಹಿಮೆ, ಶಕ್ತಿ, ನ್ಯಾಯ, ವಿವೇಕ ಮತ್ತು ಪ್ರೀತಿಯ ಕುರಿತು ಕಲಿಯುವುದರಿಂದ ಬರುತ್ತದೆ. ಅಂತಹ ಭಯವು ನಾವು ಆತನ ಸಮೀಪಕ್ಕೆ ಬರಲು ನಿರ್ಣಾಯಕ ಅಂಶವಾಗಿದೆ. ವಾಸ್ತವದಲ್ಲಿ, ಕೀರ್ತನೆ 25:14 ಹೇಳುವ ವಿಷಯವನ್ನು ಗಮನಿಸಿ: “ಯೆಹೋವನು ತನ್ನ ಸದ್ಭಕ್ತರಿಗೆ [“ತನಗೆ ಭಯಪಡುವವರಿಗೆ,” NW] ಆಪ್ತಮಿತ್ರನಂತಿರುವನು.” ಹಾಗಾದರೆ ನಮ್ಮ ಪ್ರಿಯ ಸ್ವರ್ಗೀಯ ಪಿತನ ಮನಸ್ಸಿಗೆ ಬೇಸರವನ್ನುಂಟುಮಾಡುವ ವಿಷಯದಲ್ಲಿ ಹಿತಕರವಾದ ಭಯ ನಮಗಿರುವಲ್ಲಿ, ನಾವು ಆತನ ಸಮೀಪಕ್ಕೆ ಹೋಗಬಲ್ಲೆವು. ಜ್ಞಾನೋಕ್ತಿ 3:6ರಲ್ಲಿ ದಾಖಲಿಸಲ್ಪಟ್ಟಿರುವ ವಿವೇಕಭರಿತ ಬುದ್ಧಿವಾದಕ್ಕೆ ಕಿವಿಗೊಡುವಂತೆ ದೇವಭಯವು ನಮಗೆ ಸಹಾಯಮಾಡುವುದು: “ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.” ಇದರರ್ಥವೇನು?

14, 15. (ಎ) ನಾವು ಪ್ರತಿದಿನ ಮಾಡಬೇಕಾಗುವ ಕೆಲವು ನಿರ್ಣಯಗಳಾವುವು? (ಬಿ) ನಮ್ಮ ದೈವಿಕ ಭಯವನ್ನು ಪ್ರತಿಬಿಂಬಿಸುವಂಥ ರೀತಿಯಲ್ಲಿ ನಾವು ನಿರ್ಣಯಗಳನ್ನು ಹೇಗೆ ಮಾಡಬಲ್ಲೆವು?

14 ನಿಮಗೆ ಪ್ರತಿ ದಿನ ಚಿಕ್ಕಪುಟ್ಟ ಮತ್ತು ದೊಡ್ಡದಾದ ನಿರ್ಣಯಗಳನ್ನು ಮಾಡಲಿಕ್ಕಿರುತ್ತದೆ. ಉದಾಹರಣೆಗೆ, ನಿಮ್ಮ ಸಹೋದ್ಯೋಗಿಗಳೊಂದಿಗೆ, ಸಹಪಾಠಿಗಳೊಂದಿಗೆ, ನೆರೆಯವರೊಂದಿಗೆ ನೀವು ಯಾವ ವಿಧದ ಸಂಭಾಷಣೆ ನಡೆಸುವಿರಿ? (ಲೂಕ 6:45) ನಿಮ್ಮ ಮುಂದೆ ಇಡಲ್ಪಟ್ಟಿರುವ ಕೆಲಸಗಳನ್ನು ನೀವು ಶ್ರದ್ಧೆಯಿಂದ ಮಾಡುವಿರೊ ಇಲ್ಲವೆ ಸಾಧ್ಯವಿರುವಷ್ಟು ಕಡಮೆ ಪ್ರಯತ್ನದಿಂದ ಮುಗಿಸಿಬಿಡಲು ನೋಡುವಿರೊ? (ಕೊಲೊಸ್ಸೆ 3:23) ಯೆಹೋವನಿಗಾಗಿ ಕೇವಲ ಕೊಂಚ ಪ್ರೀತಿಯಿರುವ ಇಲ್ಲವೆ ಪ್ರೀತಿಯೇ ಇಲ್ಲದಿರುವವರ ಹೆಚ್ಚು ಸಮೀಪಕ್ಕೆ ಹೋಗುವಿರೊ ಅಥವಾ ಆತ್ಮಿಕ ಮನಸ್ಸಿನ ಜನರೊಂದಿಗಿನ ನಿಮ್ಮ ಸಂಬಂಧಗಳನ್ನು ಬಲಪಡಿಸಿಕೊಳ್ಳಲು ಪ್ರಯತ್ನಿಸುವಿರೊ? (ಜ್ಞಾನೋಕ್ತಿ 13:20) ಚಿಕ್ಕಪುಟ್ಟ ರೀತಿಗಳಲ್ಲಾದರೂ ಸರಿ, ದೇವರ ರಾಜ್ಯಾಭಿರುಚಿಗಳನ್ನು ಪ್ರವರ್ಧಿಸಲು ನೀವೇನು ಮಾಡುವಿರಿ? (ಮತ್ತಾಯ 6:33) ಇಲ್ಲಿ ಉಲ್ಲೇಖಿಸಲ್ಪಟ್ಟಿರುವಂತಹ ರೀತಿಯ ಶಾಸ್ತ್ರೀಯ ಮೂಲತತ್ತ್ವಗಳು ನಿಮ್ಮ ದೈನಂದಿನ ನಿರ್ಣಯಗಳನ್ನು ಮಾರ್ಗದರ್ಶಿಸುವಂತೆ ಬಿಡುವಲ್ಲಿ, ನೀವು ‘ನಿಮ್ಮ ಎಲ್ಲಾ ನಡವಳಿಯಲ್ಲಿ’ ಯೆಹೋವನನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳುತ್ತಿದ್ದೀರಿ ಎಂಬುದು ನಿಶ್ಚಯ.

15 ಕಾರ್ಯತಃ, ನಾವು ಮಾಡುವ ಪ್ರತಿಯೊಂದು ನಿರ್ಣಯದಲ್ಲಿ, ನಾವು ಈ ವಿಚಾರದಿಂದ ಮಾರ್ಗದರ್ಶಿಸಲ್ಪಡಬೇಕು: ‘ನಾನು ಏನು ಮಾಡಬೇಕೆಂಬುದು ಯೆಹೋವನ ಅಪೇಕ್ಷೆಯಾಗಿದ್ದೀತು? ನಾನು ಯಾವ ಮಾರ್ಗಕ್ರಮವನ್ನು ಆರಿಸಿಕೊಳ್ಳುವುದು ಆತನಿಗೆ ಅತ್ಯಂತ ಹೆಚ್ಚಿನ ಸಂತೋಷವನ್ನು ತಂದೀತು?’ (ಜ್ಞಾನೋಕ್ತಿ 27:11) ಈ ವಿಧದಲ್ಲಿ ದೇವಭಯವನ್ನು ತೋರಿಸುವುದು ಯೆಹೋವನ ಕಡೆಗೆ ನಮಗಿರುವ ಪ್ರೀತಿಯನ್ನು ವ್ಯಕ್ತಪಡಿಸುವ ಉತ್ಕೃಷ್ಟ ಮಾರ್ಗವಾಗಿದೆ. ದೇವಭಯವು ನಾವು ಆತ್ಮಿಕವಾಗಿ, ನೈತಿಕವಾಗಿ ಮತ್ತು ಶಾರೀರಿಕವಾಗಿ ಶುದ್ಧವಾಗಿರುವಂತೆಯೂ ನಮ್ಮನ್ನು ಪ್ರೇರೇಪಿಸುವುದು. ಯಾಕೋಬನು ಕ್ರೈಸ್ತರಿಗೆ, “ದೇವರ ಸಮೀಪಕ್ಕೆ ಬನ್ನಿರಿ” ಎಂದು ಹೇಳಿ ಪ್ರೋತ್ಸಾಹಿಸಿದ ಆ ವಚನದಲ್ಲಿಯೇ, “ಪಾಪಿಗಳೇ, ನಿಮ್ಮ ಕೈಗಳನ್ನು ಶುಚಿಮಾಡಿಕೊಳ್ಳಿರಿ; ಎರಡು ಮನಸ್ಸುಳ್ಳವರೇ, ನಿಮ್ಮ ಹೃದಯಗಳನ್ನು ನಿರ್ಮಲಮಾಡಿಕೊಳ್ಳಿರಿ” ಎಂದೂ ಸಲಹೆ ನೀಡುತ್ತಾನೆಂಬುದು ಜ್ಞಾಪಕದಲ್ಲಿರಲಿ.​—ಯಾಕೋಬ 4:8.

16. ಯೆಹೋವನಿಗೆ ಕೊಡುವುದರಿಂದ ನಾವೇನನ್ನು ಎಂದಿಗೂ ಸಾಧಿಸಲಾರೆವು, ಆದರೂ ನಾವು ಏನನ್ನು ಮಾಡುವುದರಲ್ಲಿ ಸದಾ ಯಶಸ್ವಿಯಾಗಬಹುದು?

16 ಯೆಹೋವನಿಗೆ ನಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದರಲ್ಲಿ ಕೆಟ್ಟದ್ದನ್ನು ಮಾಡದೆ ಇರುವುದಕ್ಕಿಂತಲೂ ಎಷ್ಟೋ ಹೆಚ್ಚಿನ ಸಂಗತಿಗಳು ಸೇರಿವೆ ಎಂಬುದು ನಿಜ. ನಾವು ಸರಿಯಾದದ್ದನ್ನು ಮಾಡುವಂತೆಯೂ ಪ್ರೀತಿಯು ನಮ್ಮನ್ನು ಹುರಿದುಂಬಿಸುತ್ತದೆ. ಉದಾಹರಣೆಗೆ, ಯೆಹೋವನ ಭಾವಪರವಶಗೊಳಿಸುವಂಥ ಉದಾರ ಮನೋಭಾವಕ್ಕೆ ನಾವು ಹೇಗೆ ಪ್ರತಿವರ್ತಿಸುತ್ತೇವೆ? ಯಾಕೋಬನು ಬರೆದುದು: “ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳೂ ಮೇಲಣಿಂದ ಸಕಲವಿಧವಾದ ಬೆಳಕಿಗೂ ಮೂಲಕಾರಣನಾದವನಿಂದ ಇಳಿದುಬರುತ್ತವೆ.” (ಯಾಕೋಬ 1:17) ನಾವು ನಮ್ಮ ಸ್ವತ್ತುಗಳನ್ನು ಯೆಹೋವನಿಗೆ ಕೊಡುವಾಗ ಆತನನ್ನು ಧನಿಕನನ್ನಾಗಿ ಮಾಡುವುದಿಲ್ಲ ಎಂಬುದು ಒಪ್ಪತಕ್ಕ ಮಾತು. ಏಕೆಂದರೆ ಎಲ್ಲಾ ವಸ್ತುಗಳೂ ಸಂಪನ್ಮೂಲಗಳೂ ಆತನಿಗೇ ಸೇರಿದ್ದಾಗಿವೆ. (ಕೀರ್ತನೆ 50:12) ಮತ್ತು ನಾವು ನಮ್ಮ ಸಮಯ ಮತ್ತು ಶಕ್ತಿಯನ್ನು ಯೆಹೋವನಿಗೆ ಕೊಡುವಾಗ, ನಾವಿಲ್ಲದಿರುವಲ್ಲಿ ಆತನಿಗೆ ಪೂರೈಸಲು ಸಾಧ್ಯವೇ ಇಲ್ಲದ ಆವಶ್ಯಕತೆಯನ್ನೇನೂ ನಾವು ಪೂರೈಸುತ್ತಿಲ್ಲ. ಒಂದುವೇಳೆ ನಾವು ದೇವರ ರಾಜ್ಯದ ಸುವಾರ್ತೆಯನ್ನು ಸಾರಲು ನಿರಾಕರಿಸುವುದಾದರೂ, ಆತನು ಕಲ್ಲುಗಳು ಎದ್ದು ಕೂಗುವಂತೆ ಮಾಡಬಲ್ಲನು! ಹಾಗಾದರೆ, ನಾವು ನಮ್ಮ ಸಂಪನ್ಮೂಲಗಳು, ಸಮಯ ಮತ್ತು ಶಕ್ತಿಯನ್ನು ಯೆಹೋವನಿಗೆ ಏಕೆ ಕೊಡಬೇಕು? ಪ್ರಧಾನವಾಗಿ, ನಾವು ಈ ವಿಧದಲ್ಲಿ ನಮ್ಮ ಪೂರ್ಣ ಹೃದಯ, ಪ್ರಾಣ, ಮನಸ್ಸು ಮತ್ತು ಶಕ್ತಿಯಿಂದ ಯೆಹೋವನನ್ನು ಪ್ರೀತಿಸುತ್ತೇವೆಂದು ತೋರಿಸಿಕೊಡುವ ಕಾರಣದಿಂದಲೇ.​—ಮಾರ್ಕ 12:​29, 30.

17. ನಾವು ಯೆಹೋವನಿಗೆ ಸಂತೋಷದಿಂದ ಕೊಡುವಂತೆ ನಮ್ಮನ್ನು ಯಾವುದು ಪ್ರಚೋದಿಸಬಲ್ಲದು?

17 ನಾವು ಯೆಹೋವನಿಗೆ ಕೊಡುವಾಗ ಅದನ್ನು ಸಂತೋಷದಿಂದ ಕೊಡಬೇಕು, ಏಕೆಂದರೆ “ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು.” (2 ಕೊರಿಂಥ 9:7) ಧರ್ಮೋಪದೇಶಕಾಂಡ 16:​17ರಲ್ಲಿ ದಾಖಲಿಸಲ್ಪಟ್ಟಿರುವ ಮೂಲತತ್ತ್ವವು, ನಾವು ಸಂತೋಷದಿಂದ ಕೊಡುವಂತೆ ಸಹಾಯಮಾಡಬಲ್ಲದು: “ಪ್ರತಿಯೊಬ್ಬನು ತನಗೆ ಯೆಹೋವನು ಅನುಗ್ರಹಿಸಿದ ಆದಾಯದ ಮೇರೆಗೆ ತನ್ನ ಶಕ್ತ್ಯನುಸಾರ ಕೊಡಬೇಕು.” ಯೆಹೋವನು ನಮಗೆ ಎಷ್ಟು ಉದಾರವಾಗಿ ಕೊಟ್ಟಿದ್ದಾನೆಂಬುದರ ಬಗ್ಗೆ ನಾವು ಚಿಂತಿಸುವಾಗ, ಆತನಿಗೂ ನಾವು ಉದಾರ ಮನೋಭಾವದಿಂದ ನೀಡುವ ಅಪೇಕ್ಷೆ ನಮಗುಂಟಾಗುತ್ತದೆ. ತಮ್ಮ ಪ್ರಿಯ ಮಕ್ಕಳ ಒಂದು ಚಿಕ್ಕ ಕೊಡುಗೆಯು ಹೆತ್ತವರಿಗೆ ಸಂತೋಷವನ್ನು ತರುವಂತೆಯೇ, ಇಂತಹ ಕೊಡುವಿಕೆಯು ಯೆಹೋವನ ಹೃದಯಕ್ಕೆ ಹರ್ಷಾನಂದವನ್ನು ಉಂಟುಮಾಡುತ್ತದೆ. ನಮ್ಮ ಪ್ರೀತಿಯನ್ನು ಈ ರೀತಿಯಲ್ಲಿ ವ್ಯಕ್ತಪಡಿಸುವುದು, ನಾವು ಯೆಹೋವನ ಸಮೀಪಕ್ಕೆ ಹೋಗುವಂತೆ ಸಹಾಯಮಾಡುತ್ತದೆ.

ಪ್ರಾರ್ಥನೆಯ ಮೂಲಕ ಆಪ್ತತೆಯನ್ನು ಬೆಳೆಸಿಕೊಳ್ಳಿರಿ

18. ನಮ್ಮ ಪ್ರಾರ್ಥನೆಗಳ ಗುಣಮಟ್ಟವನ್ನು ಹೇಗೆ ಉತ್ತಮಗೊಳಿಸುವುದು ಎಂಬುದನ್ನು ಪರಿಗಣಿಸುವುದು ಯೋಗ್ಯವೇಕೆ?

18 ನಮ್ಮ ಖಾಸಗಿ ಪ್ರಾರ್ಥನೆಯ ಕ್ಷಣಗಳು ನಮಗೊಂದು ಅಮೂಲ್ಯ ಅವಕಾಶವನ್ನು, ನಮ್ಮ ಸ್ವರ್ಗೀಯ ಪಿತನೊಂದಿಗೆ ಆಪ್ತವಾದ, ಗೋಪ್ಯವಾದ ಮಾತುಗಳನ್ನಾಡುವ ಸಂದರ್ಭಗಳನ್ನು ಒದಗಿಸುತ್ತವೆ. (ಫಿಲಿಪ್ಪಿ 4:6) ಪ್ರಾರ್ಥನೆಯು ದೇವರ ಸಮೀಪಕ್ಕೆ ಹೋಗುವ ಒಂದು ಪ್ರಮುಖ ಮಾಧ್ಯಮವಾಗಿರುವುದರಿಂದ, ತುಸು ನಿಂತು ನಮ್ಮ ಪ್ರಾರ್ಥನೆಗಳ ಗುಣಮಟ್ಟ ಹೇಗಿದೆ ಎಂಬುದನ್ನು ಪರಿಗಣಿಸುವುದು ಯೋಗ್ಯವಾಗಿದೆ. ನಮ್ಮ ಪ್ರಾರ್ಥನೆಗಳು ವಾಗ್ವೈಖರಿಯಿಂದ ಕೂಡಿದ್ದು, ಮಾತುಗಳು ಉತ್ತಮವಾಗಿ ಸಂಘಟಿತವಾಗಿರಬೇಕೆಂಬುದು ಇದರ ಅರ್ಥವಲ್ಲದಿದ್ದರೂ, ಅವು ಹೃದಯದಿಂದ ಉಕ್ಕಿಬರುವ ಯಥಾರ್ಥ ಅಭಿವ್ಯಕ್ತಿಗಳಾಗಿರಬೇಕು. ಹಾಗಾದರೆ ನಮ್ಮ ಪ್ರಾರ್ಥನೆಯ ಗುಣಮಟ್ಟವನ್ನು ನಾವು ಹೇಗೆ ಉತ್ತಮಗೊಳಿಸಬಲ್ಲೆವು?

19, 20. ಪ್ರಾರ್ಥಿಸುವ ಮೊದಲು ನಾವೇಕೆ ಧ್ಯಾನಿಸಬೇಕು ಮತ್ತು ಅಂತಹ ಧ್ಯಾನಕ್ಕೆ ಅರ್ಹವಾದ ಕೆಲವು ವಿಷಯಗಳಾವುವು?

19 ನಾವು ಪ್ರಾರ್ಥಿಸುವ ಮೊದಲು ಧ್ಯಾನಿಸಲು ಪ್ರಯತ್ನಿಸಬಹುದು. ಪ್ರಾರ್ಥನೆಗೆ ಮೊದಲೇ ಧ್ಯಾನಿಸುವಲ್ಲಿ, ನಾವು ನಮ್ಮ ಪ್ರಾರ್ಥನೆಗಳನ್ನು ನಿರ್ದಿಷ್ಟವೂ ಅರ್ಥಗರ್ಭಿತವೂ ಆಗಿ ಮಾಡಬಲ್ಲೆವು. ಹೀಗೆ ಯಾವ ಪದಸರಣಿಗಳು ನಮಗೆ ಚಿರಪರಿಚಿತವಾಗಿವೆಯೊ ಮತ್ತು ಯಾವುವು ತಟ್ಟನೆ ಮನಸ್ಸಿಗೆ ಹೊಳೆಯುತ್ತವೊ ಅವುಗಳನ್ನೇ ಪುನಃ ಪುನಃ ಹೇಳುವ ಅಭ್ಯಾಸದಿಂದ ನಾವು ದೂರವಿರಬಲ್ಲೆವು. (ಜ್ಞಾನೋಕ್ತಿ 15:​28, 29) ಪ್ರಾಯಶಃ ಯೇಸು ತನ್ನ ಮಾದರಿ ಪ್ರಾರ್ಥನೆಯಲ್ಲಿ ತಿಳಿಸಿದ ಮುಖ್ಯ ವಿಷಯಗಳಲ್ಲಿ ಕೆಲವನ್ನು ಪರ್ಯಾಲೋಚಿಸಿ, ಅವು ನಮ್ಮ ಸ್ವಂತ ಪರಿಸ್ಥಿತಿಗಳಿಗೆ ಹೇಗೆ ಸಂಬಂಧಿಸುತ್ತವೆ ಎಂಬುದನ್ನು ಪರಿಗಣಿಸುವುದು ಸಹಾಯಕರವಾಗಿದ್ದೀತು. (ಮತ್ತಾಯ 6:​9-13) ದೃಷ್ಟಾಂತಕ್ಕೆ, ಈ ಭೂಮಿಯಲ್ಲಿ ಯೆಹೋವನ ಚಿತ್ತವನ್ನು ಮಾಡುವುದರಲ್ಲಿ ಯಾವ ಚಿಕ್ಕ ಪಾತ್ರವನ್ನು ವಹಿಸುವ ನಿರೀಕ್ಷೆ ನಮಗಿದೆಯೆಂಬುದನ್ನು ನಾವು ಸ್ವತಃ ಕೇಳಿಕೊಳ್ಳಬಹುದು. ನಾವು ಯೆಹೋವನಿಗೆ ನಮ್ಮಿಂದ ಎಷ್ಟು ಸಾಧ್ಯವೊ ಅಷ್ಟರ ಮಟ್ಟಿಗೆ ಉಪಯುಕ್ತರಾಗಿರಲು ನಮಗಿರುವ ಅಭಿಲಾಷೆಯನ್ನು ವ್ಯಕ್ತಪಡಿಸುತ್ತಾ, ಆತನು ನಮಗೆ ಕೊಟ್ಟಿರುವ ಯಾವುದೇ ನೇಮಕಗಳನ್ನು ಮಾಡಿ ಮುಗಿಸಲು ಆತನ ಸಹಾಯಕ್ಕಾಗಿ ವಿನಂತಿಸಬಹುದೊ? ನಮ್ಮ ಪ್ರಾಪಂಚಿಕ ಅಗತ್ಯಗಳ ಕುರಿತಾದ ಚಿಂತೆಗಳು ನಮ್ಮ ಮೇಲೆ ದೊಡ್ಡ ಹೊರೆಯಂತಿವೆಯೊ? ಯಾವ ಪಾಪಗಳಿಗಾಗಿ ನಮಗೆ ಕ್ಷಮಾಪಣೆಯ ಅಗತ್ಯವಿದೆ, ಮತ್ತು ನಾವು ಯಾರ ಕಡೆಗೆ ಹೆಚ್ಚು ಕ್ಷಮಾಭಾವವನ್ನು ತೋರಿಸುವ ಅಗತ್ಯವಿದೆ? ನಾವು ಯಾವ ಪ್ರಲೋಭನೆಗಳಿಂದ ಪೀಡಿತರಾಗಿದ್ದೇವೆ ಮತ್ತು ಈ ವಿಷಯದಲ್ಲಿ ಯೆಹೋವನ ಸಂರಕ್ಷಣೆ ನಮಗೆ ಎಷ್ಟು ತುರ್ತಾಗಿ ಬೇಕಾಗಿದೆ ಎಂಬುದನ್ನು ನಾವು ಗ್ರಹಿಸಿದ್ದೇವೊ?

20 ಇದಕ್ಕೆ ಕೂಡಿಸಿ, ಯೆಹೋವನ ಸಹಾಯದ ನಿರ್ದಿಷ್ಟ ಆವಶ್ಯಕತೆಯಲ್ಲಿರುವ ಜನರ ಕುರಿತು ನಾವು ಯೋಚಿಸಬಹುದು. (2 ಕೊರಿಂಥ 1:10) ಆದರೆ ಉಪಕಾರಸ್ಮರಣೆಯನ್ನು ಮಾಡುವುದು ನಾವು ಮರೆಯಬಾರದ ವಿಷಯವಾಗಿದೆ. ನಾವು ತುಸು ನಿಂತು ಯೋಚಿಸುವಲ್ಲಿ, ಯೆಹೋವನಿಗೆ ಉಪಕಾರ ಹೇಳಲು ಮತ್ತು ಪ್ರತಿದಿನ ಆತನ ಸಮೃದ್ಧವಾದ ಒಳ್ಳೇತನಕ್ಕಾಗಿ ಆತನನ್ನು ಸ್ತುತಿಸಲಿಕ್ಕಾಗಿರುವ ಅನೇಕ ಕಾರಣಗಳನ್ನು ನಾವು ಖಂಡಿತವಾಗಿಯೂ ನೆನಪಿಸಿಕೊಳ್ಳಬಲ್ಲೆವು. (ಧರ್ಮೋಪದೇಶಕಾಂಡ 8:10; ಲೂಕ 10:21) ಹಾಗೆ ಮಾಡುವುದರಿಂದ ಇನ್ನೊಂದು ಪ್ರಯೋಜನವೂ ಇದೆ. ನಾವು ಜೀವನದ ಕುರಿತು ಹೆಚ್ಚು ಸಕಾರಾತ್ಮಕವಾದ ಮತ್ತು ಕೃತಜ್ಞತಾಭರಿತ ಮನೋಭಾವವನ್ನು ಪಡೆದುಕೊಳ್ಳುವಂತೆ ಅದು ಸಹಾಯಮಾಡಬಲ್ಲದು.

21. ಯಾವ ಶಾಸ್ತ್ರೀಯ ಮಾದರಿಗಳ ಅಧ್ಯಯನವು ನಾವು ಯೆಹೋವನನ್ನು ಪ್ರಾರ್ಥನೆಯಲ್ಲಿ ಸಮೀಪಿಸುವಾಗ ನಮಗೆ ಸಹಾಯಮಾಡಬಹುದು?

21 ಅಧ್ಯಯನವು ಸಹ ನಮ್ಮ ಪ್ರಾರ್ಥನೆಗಳನ್ನು ಉತ್ತಮಗೊಳಿಸಬಲ್ಲದು. ನಂಬಿಗಸ್ತ ಸ್ತ್ರೀಪುರುಷರು ಮಾಡಿದ ಎದ್ದುಕಾಣುವಂಥ ಪ್ರಾರ್ಥನೆಗಳು ದೇವರ ವಾಕ್ಯದಲ್ಲಿ ದಾಖಲೆಯಾಗಿವೆ. ಉದಾಹರಣೆಗೆ, ನಮ್ಮ ಮುಂದೆ ಪಂಥಾಹ್ವಾನದಾಯಕವಾದ ಸಮಸ್ಯೆಯೊಂದು ಉದ್ಭವಿಸಿರುವುದಾದರೆ ಮತ್ತು ಅದು ನಮಗೆ ಕೊಂಚ ಕಳವಳವನ್ನು ಹಾಗೂ ನಮ್ಮ ಇಲ್ಲವೆ ನಮ್ಮ ಪ್ರಿಯರ ಹಿತಕ್ಷೇಮದ ವಿಷಯದಲ್ಲಿ ಭಯವನ್ನೂ ಹುಟ್ಟಿಸುವಲ್ಲಿ, ಸೇಡುತೀರಿಸುವ ಸ್ವಭಾವವಿದ್ದ ತನ್ನ ಸಹೋದರ ಏಸಾವನನ್ನು ಭೇಟಿಯಾಗಲಿದ್ದ ಸಂದರ್ಭದ ಕುರಿತು ಯಾಕೋಬನು ಮಾಡಿದ ಪ್ರಾರ್ಥನೆಯನ್ನು ನಾವು ಓದಬಹುದು. (ಆದಿಕಾಂಡ 32:​9-12) ಅಥವಾ ಸುಮಾರು ಹತ್ತು ಲಕ್ಷ ಮಂದಿ ಕೂಷ್ಯರು ದೇವಜನರನ್ನು ಆಕ್ರಮಿಸುವ ಬೆದರಿಕೆಯನ್ನೊಡ್ಡಿದಾಗ ರಾಜನಾದ ಆಸನು ಮಾಡಿದ ಪ್ರಾರ್ಥನೆಯನ್ನು ನಾವು ಅಧ್ಯಯನಮಾಡಬಹುದು. (2 ಪೂರ್ವಕಾಲವೃತ್ತಾಂತ 14:​11, 12) ಯೆಹೋವನ ಒಳ್ಳೇ ಹೆಸರಿಗೆ ಕಳಂಕವನ್ನು ತರಬಲ್ಲ ಸಮಸ್ಯೆಯಿಂದ ನಾವು ಪೀಡಿತರಾಗಿರುವಲ್ಲಿ, ಕಾರ್ಮೆಲ್‌ ಬೆಟ್ಟದಲ್ಲಿ ಬಾಳನ ಆರಾಧಕರ ಮುಂದೆ ಎಲೀಯನು ಮಾಡಿದ ಪ್ರಾರ್ಥನೆಯನ್ನು ಹಾಗೂ ಯೆರೂಸಲೇಮಿನ ಶೋಚನೀಯ ಸ್ಥಿತಿಯ ವಿಷಯದಲ್ಲಿ ನೆಹೆಮೀಯನು ಮಾಡಿದ ಪ್ರಾರ್ಥನೆಯನ್ನು ಪರಿಗಣಿಸುವುದು ಯೋಗ್ಯವಾಗಿದೆ. (1 ಅರಸುಗಳು 18:36, 37; ನೆಹೆಮೀಯ 1:4-11) ಅಂತಹ ಪ್ರಾರ್ಥನೆಗಳನ್ನು ಓದಿ ಧ್ಯಾನಿಸುವುದು ನಮ್ಮ ನಂಬಿಕೆಯನ್ನು ಬಲಪಡಿಸಿ, ನಮ್ಮ ಮೇಲೆ ಹೊರೆಯಂತಿರುವ ಚಿಂತೆಗಳ ಕುರಿತು ನಾವು ಯೆಹೋವನ ಬಳಿ ಹೇಗೆ ಅತ್ಯುತ್ತಮವಾದ ರೀತಿಯಲ್ಲಿ ಹೇಳಿಕೊಳ್ಳಬಹುದೆಂಬುದನ್ನು ನಮ್ಮ ಮನಸ್ಸಿಗೆ ತರಬಲ್ಲದು.

22. ಯಾವ ವಚನವು 2003ನೆಯ ಇಸವಿಯ ವಾರ್ಷಿಕವಚನವಾಗಿದೆ, ಮತ್ತು ಆ ವರುಷದಾದ್ಯಂತ ನಾವು ಆಗಾಗ ನಮ್ಮನ್ನೇ ಏನು ಕೇಳಿಕೊಳ್ಳಬಹುದು?

22 “ದೇವರ ಸಮೀಪಕ್ಕೆ ಬನ್ನಿರಿ” ಎಂಬ ಯಾಕೋಬನ ಸಲಹೆಗೆ ಕಿವಿಗೊಡುವುದಕ್ಕಿಂತಲೂ ಹೆಚ್ಚಿನ ಗೌರವವು, ಹೆಚ್ಚು ಉತ್ತಮವಾದ ಗುರಿಯು ಬೇರೊಂದಿಲ್ಲವೆಂಬುದು ಸ್ಪಷ್ಟ. (ಯಾಕೋಬ 4:8) ದೇವರ ಜ್ಞಾನದಲ್ಲಿ ಪ್ರಗತಿಹೊಂದುವ ಮೂಲಕ, ಆತನಿಗೆ ನಮ್ಮ ಪ್ರೀತಿಯನ್ನು ಹೆಚ್ಚೆಚ್ಚಾಗಿ ವ್ಯಕ್ತಪಡಿಸುವ ಮೂಲಕ ಮತ್ತು ನಮ್ಮ ಪ್ರಾರ್ಥನೆಗಳಲ್ಲಿ ಆತನೊಂದಿಗೆ ಆಪ್ತತೆಯನ್ನು ಬೆಳೆಸಿಕೊಳ್ಳುವ ಮೂಲಕ ನಾವು ಇದನ್ನು ಮಾಡೋಣ. 2003ನೆಯ ಇಸವಿಯಾದ್ಯಂತ ನಾವು ಯಾಕೋಬ 4:8ನ್ನು ವಾರ್ಷಿಕವಚನವಾಗಿ ಮನಸ್ಸಿನಲ್ಲಿಟ್ಟುಕೊಳ್ಳುವಾಗ, ನಾವು ನಿಜವಾಗಿಯೂ ಯೆಹೋವನ ಸಮೀಪಕ್ಕೆ ಬರುತ್ತಿದ್ದೇವೊ ಇಲ್ಲವೊ ಎಂಬುದನ್ನು ಪರೀಕ್ಷಿಸುತ್ತಾ ಹೋಗೋಣ. ಆದರೆ ಆ ಹೇಳಿಕೆಯ ಕೊನೆಯ ಭಾಗದ ವಿಷಯದಲ್ಲೇನು? ಯೆಹೋವನು ಯಾವ ಅರ್ಥದಲ್ಲಿ, ಯಾವ ಪ್ರಯೋಜನಗಳನ್ನು ತರುತ್ತಾ “ನಿಮ್ಮ ಸಮೀಪಕ್ಕೆ ಬರುವನು”? ಮುಂದಿನ ಲೇಖನವು ಈ ವಿಷಯಗಳನ್ನು ಪರಿಗಣಿಸುವುದು.

ನಿಮಗೆ ಜ್ಞಾಪಕವಿದೆಯೆ?

• ಯೆಹೋವನ ಸಮೀಪಕ್ಕೆ ಬರುವ ವಿಷಯವನ್ನು ಏಕೆ ಗಂಭೀರವಾಗಿ ತೆಗೆದುಕೊಳ್ಳಬೇಕು?

• ಯೆಹೋವನ ಜ್ಞಾನವನ್ನು ತೆಗೆದುಕೊಳ್ಳುವ ವಿಷಯದಲ್ಲಿ ನಾವು ಇಟ್ಟುಕೊಳ್ಳಬಹುದಾದ ಕೆಲವು ಗುರಿಗಳು ಯಾವುವು?

• ಯೆಹೋವನಿಗಾಗಿ ನಮ್ಮಲ್ಲಿರುವ ನೈಜ ಪ್ರೀತಿಯನ್ನು ನಾವು ಹೇಗೆ ಪ್ರದರ್ಶಿಸಬಲ್ಲೆವು?

• ನಾವು ಪ್ರಾರ್ಥನೆಯಲ್ಲಿ ಯೆಹೋವನೊಂದಿಗೆ ಯಾವ ವಿಧಗಳಲ್ಲಿ ಹೆಚ್ಚು ಆಪ್ತತೆಯನ್ನು ಬೆಳೆಸಿಕೊಳ್ಳಬಹುದು?

[ಪುಟ 12ರಲ್ಲಿರುವ ಸಂಕ್ಷಿಪ್ತ ವಿವರಣೆ]

2003ನೆಯ ಇಸವಿಗಾಗಿರುವ ವಾರ್ಷಿಕವಚನ: “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.”​—ಯಾಕೋಬ 4:8.

[ಪುಟ 8, 9ರಲ್ಲಿರುವ ಚಿತ್ರ]

ಸಮುವೇಲನು ಬೆಳೆದು ದೊಡ್ಡವನಾದಂತೆ, ಯೆಹೋವನನ್ನು ಆಪ್ತವಾಗಿ ತಿಳಿದುಕೊಂಡನು

[ಪುಟ 12ರಲ್ಲಿರುವ ಚಿತ್ರ]

ಕಾರ್ಮೆಲ್‌ ಬೆಟ್ಟದಲ್ಲಿ ಎಲೀಯನು ಮಾಡಿದ ಪ್ರಾರ್ಥನೆಯು ನಮಗೆ ಒಂದು ಉತ್ತಮ ಉದಾಹರಣೆಯಾಗಿದೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ