‘ಸ್ವಾಮೀ, ನಮಗೂ ಪ್ರಾರ್ಥನೆಮಾಡುವದನ್ನು ಕಲಿಸು’
“ಆತನ ಶಿಷ್ಯರಲ್ಲಿ ಒಬ್ಬನು ಆತನಿಗೆ—ಸ್ವಾಮೀ, . . . ನಮಗೂ ಪ್ರಾರ್ಥನೆಮಾಡುವದನ್ನು ಕಲಿಸು ಎಂದು ಕೇಳಿದನು.”—ಲೂಕ 11:1.
1. ತಮಗೂ ಪ್ರಾರ್ಥನೆಮಾಡುವದನ್ನು ಕಲಿಸುವಂತೆ ಯೇಸುವಿನ ಶಿಷ್ಯರಲ್ಲಿ ಒಬ್ಬನು ಏಕೆ ಕೇಳಿಕೊಂಡನು?
ಸಾ.ಶ. 32ರಲ್ಲಿ, ಒಂದು ಸಂದರ್ಭದಲ್ಲಿ ಯೇಸು ಪ್ರಾರ್ಥಿಸುತ್ತಿರುವುದನ್ನು ಅವನ ಶಿಷ್ಯರಲ್ಲಿ ಒಬ್ಬನು ಗಮನಿಸಿದನು. ಪ್ರಾಯಶಃ ಆ ಪ್ರಾರ್ಥನೆಯು ಮೌನ ಪ್ರಾರ್ಥನೆಯಾಗಿದ್ದ ಕಾರಣ, ಯೇಸು ತನ್ನ ತಂದೆಗೆ ಏನು ಹೇಳುತ್ತಿದ್ದನೆಂಬುದನ್ನು ಆ ಶಿಷ್ಯನು ಕೇಳಿಸಿಕೊಳ್ಳಶಕ್ತನಾಗಿರಲಿಲ್ಲ. ಹಾಗಿದ್ದರೂ, ಯೇಸು ಪ್ರಾರ್ಥನೆಮಾಡಿ ಮುಗಿಸಿದಾಗ ಆ ಶಿಷ್ಯನು ಅವನಿಗೆ: “ಸ್ವಾಮೀ, . . . ನಮಗೂ ಪ್ರಾರ್ಥನೆಮಾಡುವದನ್ನು ಕಲಿಸು” ಎಂದು ಕೇಳಿಕೊಂಡನು. (ಲೂಕ 11:1) ಈ ರೀತಿ ಕೇಳುವಂತೆ ಅವನನ್ನು ಯಾವುದು ಪ್ರಚೋದಿಸಿತು? ಪ್ರಾರ್ಥನೆಯು, ಯೆಹೂದ್ಯರ ಜೀವನ ಮತ್ತು ಆರಾಧನೆಯಲ್ಲಿ ಕ್ರಮವಾದ ಒಂದು ಭಾಗವಾಗಿತ್ತು. ಹೀಬ್ರು ಶಾಸ್ತ್ರಗ್ರಂಥದಲ್ಲಿರುವ ಕೀರ್ತನೆಗಳು ಮತ್ತು ಇತರ ಪುಸ್ತಕಗಳಲ್ಲಿ ಅಸಂಖ್ಯಾತ ಪ್ರಾರ್ಥನೆಗಳು ದಾಖಲಿಸಲ್ಪಟ್ಟಿವೆ. ಆದುದರಿಂದ, ತನಗೆ ಅರಿವಿಲ್ಲದ ಅಥವಾ ತಾನು ಎಂದೂ ಮಾಡಿರದ ಒಂದು ವಿಷಯವನ್ನು ಕಲಿಸುವಂತೆ ಆ ಶಿಷ್ಯನು ಕೇಳಿಕೊಳ್ಳಲಿಲ್ಲ. ನಿಸ್ಸಂದೇಹವಾಗಿ, ಅವನಿಗೆ ಯೆಹೂದಿ ಧಾರ್ಮಿಕ ಮುಖಂಡರ ಸಂಪ್ರದಾಯಬದ್ಧ ಪ್ರಾರ್ಥನೆಗಳ ಪರಿಚಯವಿತ್ತು. ಆದರೆ ಈಗ ಅವನು ಯೇಸು ಪ್ರಾರ್ಥಿಸುವ ರೀತಿಯನ್ನೂ ಗಮನಿಸಿದ್ದಾನೆ, ಮತ್ತು ರಬ್ಬಿಗಳ ಧರ್ಮಾಡಂಬರದ ಪ್ರಾರ್ಥನೆಗಳು ಹಾಗೂ ಯೇಸು ಪ್ರಾರ್ಥಿಸಿದ ವಿಧದ ನಡುವೆ ಇದ್ದ ಅಜಗಜಾಂತರವನ್ನು ಗ್ರಹಿಸಿದನು.—ಮತ್ತಾಯ 6:5-8.
2. (ಎ) ಮಾದರಿ ಪ್ರಾರ್ಥನೆಯ ಅದೇ ಪದಗಳನ್ನು ನಾವು ಪುನರುಚ್ಚರಿಸಬೇಕೆಂದು ಯೇಸು ಅರ್ಥೈಸಲಿಲ್ಲ ಎಂಬುದನ್ನು ಯಾವುದು ಸೂಚಿಸುತ್ತದೆ? (ಬಿ) ಪ್ರಾರ್ಥನೆಮಾಡುವದನ್ನು ಕಲಿಯಲು ನಾವೇಕೆ ಆಸಕ್ತರಾಗಿದ್ದೇವೆ?
2 ಸುಮಾರು 18 ತಿಂಗಳುಗಳ ಮುಂಚೆ ಯೇಸು ತನ್ನ ಪರ್ವತ ಪ್ರಸಂಗದಲ್ಲಿ ತನ್ನ ಶಿಷ್ಯರಿಗೆ, ಅವರ ಪ್ರಾರ್ಥನೆಗಳು ಯಾವುದರ ಮೇಲೆ ಆಧಾರಿತವಾಗಿರಬೇಕೆಂಬುದಕ್ಕೆ ಒಂದು ಮಾದರಿ ಪ್ರಾರ್ಥನೆಯನ್ನು ಒದಗಿಸಿದ್ದನು. (ಮತ್ತಾಯ 6:9-13) ಒಂದುವೇಳೆ ಈ ನಿರ್ದಿಷ್ಟ ಶಿಷ್ಯನು ಆ ಸಮಯದಲ್ಲಿ ಉಪಸ್ಥಿತನಾಗಿರಲಿಲ್ಲ, ಆದುದರಿಂದ ಆ ಮಾದರಿ ಪ್ರಾರ್ಥನೆಯ ಪ್ರಾಮುಖ್ಯ ಅಂಶಗಳನ್ನು ಯೇಸು ದಯೆಯಿಂದ ಪುನಃ ಹೇಳಿದನು. ಗಮನಿಸಬೇಕಾದ ವಾಸ್ತವಾಂಶವೇನೆಂದರೆ, ಜನರು ಕಂಠಪಾಠ ಮಾಡಿಕೊಳ್ಳಬೇಕಾದ ಒಂದು ಆರಾಧನಾ ವಿಧಾನದ ಪ್ರಾರ್ಥನೆಯನ್ನು ತಾನು ಕಲಿಸುತ್ತಿಲ್ಲ ಎಂಬುದನ್ನು ಸೂಚಿಸುತ್ತಾ ಅವನು ಅದೇ ಪದಗಳನ್ನು ಪುನರುಚ್ಚರಿಸಲಿಲ್ಲ. (ಲೂಕ 11:1-4) ಆ ಅನಾಮಿಕ ಶಿಷ್ಯನಂತೆ ನಾವು ಸಹ, ನಮ್ಮ ಪ್ರಾರ್ಥನೆಗಳು ನಮ್ಮನ್ನು ಯೆಹೋವನ ಸಮೀಪಕ್ಕೆ ಕೊಂಡೊಯ್ಯಸಾಧ್ಯವಾಗುವಂತೆ ನಾವು ಹೇಗೆ ಪ್ರಾರ್ಥನೆಮಾಡಬೇಕೆಂಬುದನ್ನು ಕಲಿಯಲು ಬಯಸುತ್ತೇವೆ. ಆದುದರಿಂದ, ಅಪೊಸ್ತಲ ಮತ್ತಾಯನಿಂದ ದಾಖಲಿಸಲ್ಪಟ್ಟಿರುವ ಮಾದರಿ ಪ್ರಾರ್ಥನೆಯನ್ನು ನಾವು ಸಂಪೂರ್ಣವಾಗಿ ಪರೀಕ್ಷಿಸೋಣ. ಅದರಲ್ಲಿ ಒಟ್ಟು ಏಳು ಬೇಡಿಕೆಗಳಿವೆ. ಮೂರು ಬೇಡಿಕೆಗಳು ದೇವರ ಉದ್ದೇಶಗಳಿಗೆ ಸಂಬಂಧಪಟ್ಟಿವೆ ಮತ್ತು ಉಳಿದ ನಾಲ್ಕು ಬೇಡಿಕೆಗಳು ನಮ್ಮ ಭೌತಿಕ ಹಾಗೂ ಆತ್ಮಿಕ ಅಗತ್ಯಗಳಿಗೆ ಸಂಬಂಧಿಸಿವೆ. ಈ ಲೇಖನದಲ್ಲಿ ಮೊದಲ ಮೂರು ಬಿನ್ನಹಗಳನ್ನು ನಾವು ಪರಿಗಣಿಸುವೆವು.
ಒಬ್ಬ ಪ್ರೀತಿಪರ ತಂದೆ
3, 4. ಯೆಹೋವನನ್ನು “ನಮ್ಮ ತಂದೆ” ಎಂದು ಸಂಬೋಧಿಸುವುದು ಯಾವುದನ್ನು ಅರ್ಥೈಸುತ್ತದೆ?
3 ಪ್ರಾರ್ಥನೆಯ ಆರಂಭದ ಮಾತುಗಳಲ್ಲಿಯೇ, ನಮ್ಮ ಪ್ರಾರ್ಥನೆಯು ಯೆಹೋವನೊಂದಿಗಿನ ನಮ್ಮ ಆಪ್ತ, ಆದರೆ ಅದೇ ಸಮಯದಲ್ಲಿ ಒಂದು ಗೌರವಪೂರ್ವಕ ಸಂಬಂಧವನ್ನು ಪ್ರತಿಬಿಂಬಿಸಬೇಕೆಂದು ಯೇಸು ತೋರಿಸಿಕೊಟ್ಟನು. ಪರ್ವತಬದಿಯಲ್ಲಿ ತನ್ನ ಹತ್ತಿರ ಒಟ್ಟುಸೇರಿದ್ದ ತನ್ನ ಶಿಷ್ಯರ ಪ್ರಯೋಜನಾರ್ಥವಾಗಿ ಮಾತನಾಡುತ್ತಾ ಯೇಸು, ಯೆಹೋವನನ್ನು “ಪರಲೋಕದಲ್ಲಿರುವ ನಮ್ಮ ತಂದೆಯೇ” ಎಂದು ಸಂಬೋಧಿಸುವಂತೆ ಅವರಿಗೆ ಹೇಳಿದನು. (ಮತ್ತಾಯ 6:10) ಒಬ್ಬ ವಿದ್ವಾಂಸನಿಗನುಸಾರ, ಯೇಸು ಜನಪ್ರಿಯವಾದ ಇಬ್ರಿಯ ಭಾಷೆಯಲ್ಲಿ ಮಾತನಾಡಿರಲಿ ಅಥವಾ ಆರಮೇಯಿಕ್ ಭಾಷೆಯಲ್ಲಿ ಮಾತನಾಡಿರಲಿ, “ತಂದೆ” ಎಂಬುದಕ್ಕೆ ಅವನು ಉಪಯೋಗಿಸಿದ ಪದವು ಒಂದು ಮಗುವಿನ ಆಪ್ತ ಅಭಿವ್ಯಕ್ತಿಗೆ ಅಂದರೆ “ಒಂದು ಮಗುವಿನ ಮಾತಿಗೆ” ಸಮಾನವಾಗಿದೆ. ಯೆಹೋವನನ್ನು “ನಮ್ಮ ತಂದೆ” ಎಂದು ಸಂಬೋಧಿಸುವುದು ಒಂದು ಆದರದ ಹಾಗೂ ಭರವಸಾರ್ಹ ಸಂಬಂಧವನ್ನು ಸೂಚಿಸುತ್ತದೆ.
4 “ನಮ್ಮ ತಂದೆ” ಎಂಬುದಾಗಿ ಹೇಳುವ ಮೂಲಕ, ಯೆಹೋವನನ್ನು ನಮ್ಮ ಜೀವದಾತನೆಂದು ಗಣ್ಯಮಾಡುವ ಸ್ತ್ರೀಪುರುಷರ ಒಂದು ವಿಸ್ತೃತ ಕುಟುಂಬದ ಭಾಗವಾಗಿದ್ದೇವೆ ಎಂಬುದನ್ನು ಸಹ ನಾವು ಅಂಗೀಕರಿಸುತ್ತೇವೆ. (ಓರೆ ಅಕ್ಷರಗಳು ನಮ್ಮವು.) (ಯೆಶಾಯ 64:8; ಅ. ಕೃತ್ಯಗಳು 17:24, 28) ಆತ್ಮಾಭಿಷಿಕ್ತ ಕ್ರೈಸ್ತರು ‘ದೇವರ ಮಕ್ಕಳಾಗಿ’ ದತ್ತುತೆಗೆದುಕೊಳ್ಳಲ್ಪಟ್ಟಿದ್ದಾರೆ ಮತ್ತು ಈ ಕಾರಣದಿಂದ ಅವರು ಆತನನ್ನು “ಅಪ್ಪಾ, ತಂದೆಯೇ, ಎಂದು ಕೂಗು”ತ್ತಾರೆ. (ರೋಮಾಪುರ 8:14, 15) ಇತರ ಲಕ್ಷಾಂತರ ಮಂದಿ ಅವರ ನಿಷ್ಠಾವಂತ ಸಂಗಡಿಗರಾಗಿದ್ದಾರೆ. ಇವರು ತಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಂಡು, ನೀರಿನ ದೀಕ್ಷಾಸ್ನಾನದ ಮೂಲಕ ಅದನ್ನು ಸಂಕೇತಿಸಿದ್ದಾರೆ. ಈ ಎಲ್ಲಾ “ಬೇರೆ ಕುರಿಗಳು” ಸಹ ಯೇಸುವಿನ ಹೆಸರಿನಲ್ಲಿ ಯೆಹೋವನ ಸಮೀಪಕ್ಕೆ ಬರಬಲ್ಲರು ಮತ್ತು ಆತನನ್ನು “ನಮ್ಮ ತಂದೆ” ಎಂದು ಕರೆಯಬಲ್ಲರು. (ಯೋಹಾನ 10:16; 14:6) ಯೆಹೋವನಿಗೆ ಸ್ತುತಿಸಲ್ಲಿಸಲು, ನಮ್ಮ ಕಡೆಗೆ ಆತನು ತೋರಿಸಿದ ಎಲ್ಲಾ ಒಳ್ಳೇತನಕ್ಕಾಗಿ ಆತನಿಗೆ ಉಪಕಾರಸಲ್ಲಿಸಲು, ಮತ್ತು ಆತನು ನಮ್ಮ ಕುರಿತು ಚಿಂತಿಸುತ್ತಾನೆಂಬ ಭರವಸೆಯಿಂದ ನಮ್ಮ ಚಿಂತೆಗೆ ಕಾರಣವಾಗಿರುವ ವಿಷಯಗಳನ್ನು ಆತನಲ್ಲಿ ಹೇಳಿಕೊಳ್ಳಲು ನಾವು ಕ್ರಮವಾಗಿ ಪ್ರಾರ್ಥನೆಯ ಮೂಲಕ ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನನ್ನು ಸಮೀಪಿಸಬಲ್ಲೆವು.—ಫಿಲಿಪ್ಪಿ 4:6, 7; 1 ಪೇತ್ರ 5:6, 7.
ಯೆಹೋವನ ಹೆಸರಿಗಾಗಿ ಪ್ರೀತಿ
5. ಮಾದರಿ ಪ್ರಾರ್ಥನೆಯ ಆರಂಭದ ಬಿನ್ನಹವು ಏನಾಗಿದೆ, ಮತ್ತು ಇದು ಸೂಕ್ತವಾಗಿದೆ ಏಕೆ?
5 ಆರಂಭದ ಬಿನ್ನಹವು ಕೂಡಲೆ ಪ್ರಥಮ ವಿಷಯವನ್ನು ಪ್ರಥಮಸ್ಥಾನದಲ್ಲಿ ಇಡುತ್ತದೆ. ಅದು ತಿಳಿಸುವುದು: “ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ.” (ಮತ್ತಾಯ 6:10) ಹೌದು, ಯೆಹೋವನ ನಾಮದ ಪವಿತ್ರೀಕರಣವು ನಮ್ಮೆಲ್ಲರ ಪ್ರಾಮುಖ್ಯ ಚಿಂತನೆಯಾಗಿರಬೇಕು, ಏಕೆಂದರೆ ನಾವು ಆತನನ್ನು ಪ್ರೀತಿಸುತ್ತೇವೆ ಹಾಗೂ ಆತನ ನಾಮಕ್ಕೆ ತರಲ್ಪಡುತ್ತಿರುವ ಕಳಂಕವನ್ನು ನೋಡಲು ದುಃಖಿಸುತ್ತೇವೆ. ಸೈತಾನನ ದಂಗೆ ಮತ್ತು ಪ್ರಥಮ ಮಾನವ ದಂಪತಿಗಳು ಯೆಹೋವ ದೇವರಿಗೆ ಅವಿಧೇಯರಾಗುವಂತೆ ಮಾಡಿದ ಅವನ ಪ್ರೇರೇಪಣೆ, ದೇವರು ತನ್ನ ವಿಶ್ವ ಪರಮಾಧಿಕಾರವನ್ನು ನಿರ್ವಹಿಸುವ ವಿಧದ ಕುರಿತು ಸಂಶಯವನ್ನು ಎಬ್ಬಿಸುತ್ತಾ ಆತನ ನಾಮಕ್ಕೆ ನಿಂದೆಯನ್ನು ತಂದಿತು. (ಆದಿಕಾಂಡ 3:1-6) ಅಷ್ಟುಮಾತ್ರವಲ್ಲದೆ, ಪ್ರಥಮ ದಂಗೆಯ ಸಮಯದಿಂದ ಇಂದಿನ ವರೆಗೂ ಯೆಹೋವನ ನಾಮವು, ಆತನನ್ನು ಪ್ರತಿನಿಧಿಸುತ್ತೇವೆ ಎಂದು ಹೇಳಿಕೊಳ್ಳುವ ಜನರ ಅಸಹ್ಯ ಕೃತ್ಯಗಳ ಮತ್ತು ಬೋಧನೆಗಳ ಮೂಲಕ ಕಳಂಕಕ್ಕೆ ಒಳಗಾಗುತ್ತಾ ಇದೆ.
6. ಯೆಹೋವನ ನಾಮದ ಪವಿತ್ರೀಕರಣಕ್ಕಾಗಿ ನಾವು ಪ್ರಾರ್ಥಿಸುವುದಾದರೆ ನಾವೇನನ್ನು ಮಾಡುವುದಿಲ್ಲ?
6 ಯೆಹೋವನ ನಾಮದ ಪವಿತ್ರೀಕರಣಕ್ಕಾಗಿ ನಾವು ಮಾಡುವ ಪ್ರಾರ್ಥನೆಯು, ವಿಶ್ವ ಪರಮಾಧಿಕಾರದ ವಿವಾದಾಂಶದ ಸಂಬಂಧದಲ್ಲಿ ನಾವು ಯಾರ ಪಕ್ಷದಲ್ಲಿದ್ದೇವೆ ಎಂಬುದನ್ನು ತೋರಿಸಿಕೊಡುತ್ತದೆ—ವಿಶ್ವವನ್ನು ಆಳಲು ಯೆಹೋವನಿಗಿರುವ ಅಧಿಕಾರವನ್ನು ಖಂಡಿತವಾಗಿಯೂ ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಅಷ್ಟುಮಾತ್ರವಲ್ಲದೆ ಯೆಹೋವನ ಇಚ್ಛೆಯೇನೆಂದರೆ, ಆತನನ್ನು ಪ್ರೀತಿಸುವ ಮತ್ತು ಆತನ ನಾಮವು ಯಾವುದನ್ನೆಲ್ಲಾ ಪ್ರತಿನಿಧಿಸುತ್ತದೊ ಅದನ್ನು ಪ್ರೀತಿಸುವ ಕಾರಣ, ಇಚ್ಛಾಪೂರ್ವಕವಾಗಿ ಹಾಗೂ ಸಂತೋಷದಿಂದ ಆತನ ನೀತಿಯ ಪರಮಾಧಿಕಾರಕ್ಕೆ ವಿಧೇಯರಾಗುವ ಬುದ್ಧಿವಂತ ಸೃಷ್ಟಿಜೀವಿಗಳಿಂದ ವಿಶ್ವವು ತುಂಬಿಕೊಳ್ಳಬೇಕೆಂಬುದೇ ಆಗಿದೆ. (1 ಪೂರ್ವಕಾಲವೃತ್ತಾಂತ 29:10-13; ಕೀರ್ತನೆ 8:1; 148:13) ಯೆಹೋವನ ನಾಮಕ್ಕಾಗಿರುವ ನಮ್ಮ ಪ್ರೀತಿಯು, ಆ ಪವಿತ್ರವಾದ ನಾಮಕ್ಕೆ ಕಳಂಕವನ್ನು ತರಬಹುದಾದ ಯಾವುದೇ ಕೃತ್ಯವನ್ನು ನಾವು ಮಾಡದಂತೆ ನಮ್ಮನ್ನು ತಡೆಯಲು ಸಹಾಯಮಾಡುತ್ತದೆ. (ಯೆಹೆಜ್ಕೇಲ 36:20, 21; ರೋಮಾಪುರ 2:21-24) ಯೆಹೋವನ ನಾಮದ ಪವಿತ್ರೀಕರಣ ಮತ್ತು ಆತನ ಪರಮಾಧಿಕಾರಕ್ಕೆ ಪ್ರೀತಿಯ ವಿಧೇಯತೆಯ ಮೇಲೆ ವಿಶ್ವದ ಹಾಗೂ ಅದರ ನಿವಾಸಿಗಳ ಶಾಂತಿಯು ಅವಲಂಬಿಸಿರುವುದರಿಂದ “ನಿನ್ನ ನಾಮವು ಪವಿತ್ರವೆಂದು ಎಣಿಸಲ್ಪಡಲಿ” ಎಂಬ ನಮ್ಮ ಪ್ರಾರ್ಥನೆಯು, ಯೆಹೋವನ ಉದ್ದೇಶವು ಆತನ ಸ್ತುತಿಗಾಗಿ ನೆರವೇರುವುದು ಎಂಬ ನಮ್ಮ ಭರವಸೆಯ ಒಂದು ಅಭಿವ್ಯಕ್ತಿಯಾಗಿದೆ.—ಯೆಹೆಜ್ಕೇಲ 38:23.
ನಾವು ಯಾವುದಕ್ಕಾಗಿ ಪ್ರಾರ್ಥಿಸುತ್ತೇವೋ ಆ ರಾಜ್ಯ
7, 8. (ಎ) ನಾವು ಯಾವ ರಾಜ್ಯಕ್ಕಾಗಿ ಪ್ರಾರ್ಥಿಸುವಂತೆ ಯೇಸು ಕಲಿಸಿದನು? (ಬಿ) ದಾನಿಯೇಲ ಮತ್ತು ಪ್ರಕಟನೆ ಪುಸ್ತಕಗಳಲ್ಲಿ ಈ ರಾಜ್ಯದ ಕುರಿತು ನಾವು ಏನನ್ನು ತಿಳಿದುಕೊಳ್ಳುತ್ತೇವೆ?
7 ಮಾದರಿ ಪ್ರಾರ್ಥನೆಯಲ್ಲಿನ ಎರಡನೆಯ ಬಿನ್ನಹವು: “ನಿನ್ನ ರಾಜ್ಯವು ಬರಲಿ.” (ಮತ್ತಾಯ 6:10) ಈ ಬೇಡಿಕೆಯು ಮೊದಲನೆಯ ಬಿನ್ನಹಕ್ಕೆ ನಿಕಟ ಸಂಬಂಧದಲ್ಲಿದೆ. ತನ್ನ ನಾಮವನ್ನು ಪವಿತ್ರೀಕರಿಸಲು ಯೆಹೋವನು ಉಪಯೋಗಿಸುವ ಸಾಧನವು, ತನ್ನ ಮಗನಾದ ಯೇಸು ಕ್ರಿಸ್ತನು ನೇಮಿತ ರಾಜನಾಗಿ ಆಳಲಿರುವ ಸ್ವರ್ಗೀಯ ಸರಕಾರವಾದ ಮೆಸ್ಸೀಯ ರಾಜ್ಯವಾಗಿದೆ. (ಕೀರ್ತನೆ 2:1-9) ದಾನಿಯೇಲ ಪ್ರವಾದನೆಯು ಮೆಸ್ಸೀಯ ರಾಜ್ಯವನ್ನು, “ಬೆಟ್ಟ”ದೊಳಗಿಂದ ಬಂದ ‘ಒಂದು ಬಂಡೆ’ಗೆ ಹೋಲಿಸುತ್ತದೆ. (ದಾನಿಯೇಲ 2:34, 35, 44, 45) ಬೆಟ್ಟವು ಯೆಹೋವನ ವಿಶ್ವ ಪರಮಾಧಿಕಾರವನ್ನು ಸೂಚಿಸುತ್ತದೆ. ರಾಜ್ಯವನ್ನು ಸೂಚಿಸುವ ಬಂಡೆಯು, ಯೆಹೋವನ ವಿಶ್ವ ಪರಮಾಧಿಕಾರದ ಒಂದು ಹೊಸ ಅಭಿವ್ಯಕ್ತಿಯಾಗಿದೆ. ಪ್ರವಾದನೆಯಲ್ಲಿ, ಬಂಡೆಯು ಕ್ರಮೇಣ “ಮಹಾ ಪರ್ವತವಾಗಿ ಲೋಕದಲ್ಲೆಲ್ಲಾ ತುಂಬಿಕೊಂಡಿತು.” ಇದು, ಭೂಮಿಯನ್ನು ಆಳುವ ವಿಷಯದಲ್ಲಿನ ದೈವಿಕ ಪರಮಾಧಿಕಾರವನ್ನು ಮೆಸ್ಸೀಯ ರಾಜ್ಯವು ಪ್ರತಿನಿಧಿಸುತ್ತದೆ ಎಂಬುದನ್ನು ಸೂಚಿಸುತ್ತದೆ.
8 ಈ ರಾಜ್ಯ ಸರಕಾರದಲ್ಲಿ ‘ಮನುಷ್ಯರೊಳಗಿಂದ ಕೊಂಡುಕೊಳ್ಳಲ್ಪಟ್ಟ’ ಇತರ 1,44,000 ಮಂದಿ ಕ್ರಿಸ್ತನೊಂದಿಗೆ ರಾಜರಾಗಿಯೂ ಯಾಜಕರಾಗಿಯೂ ಆಳುವರು. (ಪ್ರಕಟನೆ 5:9, 10; 14:1-4; 20:6) ದಾನಿಯೇಲನು ಇವರನ್ನು, ತಮ್ಮ ಶಿರಸ್ಸಾದ ಕ್ರಿಸ್ತನೊಂದಿಗೆ ‘ರಾಜ್ಯ ಪ್ರಭುತ್ವಗಳನ್ನೂ ಸಮಸ್ತ ಭೂಮಂಡಲದಲ್ಲಿನ ರಾಜ್ಯಗಳ ಮಹಿಮೆಯನ್ನೂ’ ಪಡೆದುಕೊಳ್ಳುವ “ಪರಾತ್ಪರನ ಭಕ್ತರು” ಮತ್ತು ಅವರ “ರಾಜ್ಯವು ಶಾಶ್ವತ ರಾಜ್ಯ; ಸಕಲ ದೇಶಾಧಿಪತಿಗಳು [ಅವರಿಗೆ] ಅಧೀನರಾಗಿ ಸೇವೆ ಮಾಡುವರು” ಎಂದು ಸೂಚಿಸಿದನು. (ದಾನಿಯೇಲ 7:13, 14, 18, 27) ತನ್ನ ಹಿಂಬಾಲಕರು ಪ್ರಾರ್ಥಿಸುವಂತೆ ಕ್ರಿಸ್ತನು ಕಲಿಸಿದ ಸ್ವರ್ಗೀಯ ಸರಕಾರದ ಸೂಕ್ತ ವಿವರಣೆಯು ಇದಾಗಿದೆ.
ರಾಜ್ಯವು ಬರುವಂತೆ ಇನ್ನೂ ಏಕೆ ಪ್ರಾರ್ಥಿಸಬೇಕು
9. ದೇವರ ರಾಜ್ಯವು ಬರಲಿ ಎಂದು ನಾವು ಪ್ರಾರ್ಥಿಸುವುದು ಸೂಕ್ತವಾಗಿದೆ ಏಕೆ?
9 ಮಾದರಿ ಪ್ರಾರ್ಥನೆಯಲ್ಲಿ, ದೇವರ ರಾಜ್ಯವು ಬರುವಂತೆ ಪ್ರಾರ್ಥಿಸಲು ಕ್ರಿಸ್ತನು ಕಲಿಸಿದನು. ಆದರೆ ಬೈಬಲ್ ಪ್ರವಾದನೆಯ ನೆರವೇರಿಕೆಗಳು, ಮೆಸ್ಸೀಯ ರಾಜ್ಯವು 1914ರಲ್ಲಿ ಸ್ವರ್ಗದಲ್ಲಿ ಸ್ಥಾಪಿಸಲ್ಪಟ್ಟಿತು ಎಂಬುದನ್ನು ಸೂಚಿಸುತ್ತವೆ.a ಹಾಗಿರುವುದರಿಂದ, ಈಗಲೂ ಆ ರಾಜ್ಯವು “ಬರಲಿ” ಎಂದು ನಾವು ಪ್ರಾರ್ಥಿಸುವುದು ಸೂಕ್ತವಾಗಿದೆಯೋ? ನಿಶ್ಚಯವಾಗಿಯೂ ಸೂಕ್ತವಾಗಿದೆ. ದಾನಿಯೇಲನ ಪ್ರವಾದನೆಯಲ್ಲಿ, ಒಂದು ಬಂಡೆಯಿಂದ ಸೂಚಿತವಾದ ಮೆಸ್ಸೀಯ ರಾಜ್ಯವು ಒಂದು ಭಾರೀ ಪ್ರತಿಮೆಯಿಂದ ಸೂಚಿತವಾದ ಮಾನವರ ರಾಜಕೀಯ ಸರಕಾರಗಳೊಂದಿಗೆ ನೇರವಾದ ಹೋರಾಟದಲ್ಲಿದೆ. ಭವಿಷ್ಯತ್ತಿನಲ್ಲಿ ಆ ಬಂಡೆಯು ಆ ಪ್ರತಿಮೆಗೆ ಬಡಿದು ಅದನ್ನು ಚೂರುಚೂರು ಮಾಡಲಿಕ್ಕಿದೆ. ದಾನಿಯೇಲನ ಪ್ರವಾದನೆಯು ತಿಳಿಸುವುದು: “ಆ . . . [ರಾಜ್ಯದ] ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.”—ದಾನಿಯೇಲ 2:44.
10. ದೇವರ ರಾಜ್ಯದ ಬರೋಣಕ್ಕಾಗಿ ನಾವೇಕೆ ಕಾತುರದಿಂದ ಕಾಯುತ್ತಿದ್ದೇವೆ?
10 ದೇವರ ರಾಜ್ಯವು ಸೈತಾನನ ದುಷ್ಟ ವಿಷಯಗಳ ವ್ಯವಸ್ಥೆಯ ವಿರುದ್ಧವಾಗಿ ಬರುವುದನ್ನು ನೋಡಲು ನಾವು ಕಾತುರದಿಂದ ಕಾಯುತ್ತಿದ್ದೇವೆ, ಏಕೆಂದರೆ ಇದು, ಯೆಹೋವನ ಪರಿಶುದ್ಧ ನಾಮದ ಪವಿತ್ರೀಕರಣ ಮತ್ತು ದೈವಿಕ ಪರಮಾಧಿಕಾರದ ವಿರೋಧಿಗಳ ನಾಶನದ ಅರ್ಥದಲ್ಲಿದೆ. “ನಿನ್ನ ರಾಜ್ಯವು ಬರಲಿ” ಎಂದು ನಾವು ಎಡೆಬಿಡದೆ ಪ್ರಾರ್ಥಿಸುತ್ತೇವೆ ಮತ್ತು ಅಪೊಸ್ತಲ ಯೋಹಾನನೊಂದಿಗೆ ನಾವು ಹೀಗೆ ಹೇಳುತ್ತೇವೆ: “ಹಾಗೆಯೇ ಆಗಲಿ; ಕರ್ತನಾದ ಯೇಸುವೇ, ಬಾ.” (ಪ್ರಕಟನೆ 22:20) ಹೌದು, ಯೆಹೋವನ ನಾಮವನ್ನು ಪವಿತ್ರೀಕರಿಸಲು ಮತ್ತು ಆತನ ಪರಮಾಧಿಕಾರವನ್ನು ನಿರ್ದೋಷೀಕರಿಸಲು ಯೇಸು ಬರಲಿ ಎಂದು ನಾವು ಎದುರುನೋಡುತ್ತೇವೆ. ಆಗ ಕೀರ್ತನೆಗಾರನ ಈ ಮಾತುಗಳು ಸತ್ಯವಾಗುವವು: “ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು.”—ಕೀರ್ತನೆ 83:18.
“ನಿನ್ನ ಚಿತ್ತವು . . . ನೆರವೇರಲಿ”
11, 12. (ಎ) ದೇವರ ಚಿತ್ತವು “ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ” ಎಂದು ನಾವು ಪ್ರಾರ್ಥಿಸುವಾಗ ನಾವು ಏನನ್ನು ಕೇಳಿಕೊಳ್ಳುತ್ತೇವೆ? (ಬಿ) ಯೆಹೋವನ ಚಿತ್ತವು ನೆರವೇರಲಿ ಎಂಬ ನಮ್ಮ ಪ್ರಾರ್ಥನೆಯು ಇನ್ನೇನನ್ನು ಅರ್ಥೈಸುತ್ತದೆ?
11 ಮುಂದಕ್ಕೆ ಯೇಸು ತನ್ನ ಶಿಷ್ಯರಿಗೆ ಹೀಗೆ ಪ್ರಾರ್ಥಿಸುವಂತೆ ಕಲಿಸಿದನು: “ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” (ಮತ್ತಾಯ 6:10) ಈ ವಿಶ್ವವು ಯೆಹೋವನ ಚಿತ್ತದಿಂದ ಅಸ್ತಿತ್ವಕ್ಕೆ ಬಂತು. ಪರಾಕ್ರಮಿಗಳಾದ ಸ್ವರ್ಗೀಯ ಜೀವಿಗಳು ಹೀಗೆ ಘೋಷಿಸುತ್ತಾರೆ: “ಕರ್ತನೇ, [“ಯೆಹೋವನೇ,” NW] ನಮ್ಮ ದೇವರೇ, ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನು ಸೃಷ್ಟಿಸಿದಾತನು ನೀನೇ; ಎಲ್ಲವು ನಿನ್ನ ಚಿತ್ತದಿಂದಲೇ ನಿರ್ಮಿತವಾದವು.” (ಪ್ರಕಟನೆ 4:11) “ಭೂಪರಲೋಕಗಳಲ್ಲಿ ಇರುವ ಸಮಸ್ತ” ವಿಷಯಗಳ ಕಡೆಗೂ ಯೆಹೋವನಿಗೆ ಒಂದು ಉದ್ದೇಶವಿದೆ. (ಎಫೆಸ 1:8-10) ದೇವರ ಚಿತ್ತವು ನೆರವೇರುವಂತೆ ಪ್ರಾರ್ಥಿಸುವ ಮೂಲಕ, ವಾಸ್ತವದಲ್ಲಿ ಯೆಹೋವನು ತನ್ನ ಉದ್ದೇಶವನ್ನು ನೆರವೇರಿಸುವಂತೆ ನಾವು ಕೇಳಿಕೊಳ್ಳುತ್ತೇವೆ. ಅಷ್ಟುಮಾತ್ರವಲ್ಲದೆ, ದೈವಿಕ ಚಿತ್ತವು ವಿಶ್ವವ್ಯಾಪಕವಾಗಿ ನೆರವೇರುವುದನ್ನು ನೋಡಲು ನಾವು ಕಾತುರದಿಂದ ಕಾಯುತ್ತಿದ್ದೇವೆ ಎಂಬುದನ್ನೂ ತೋರಿಸಿಕೊಡುತ್ತೇವೆ.
12 ಈ ಪ್ರಾರ್ಥನೆಯ ಮೂಲಕ, ಯೆಹೋವನ ಚಿತ್ತಕ್ಕೆ ಹೊಂದಿಕೆಯಲ್ಲಿ ನಮ್ಮ ಜೀವನವನ್ನು ಹೊಂದಿಸಿಕೊಳ್ಳಲು ನಮಗಿರುವ ಇಚ್ಛೆಯನ್ನು ನಾವು ವ್ಯಕ್ತಪಡಿಸುತ್ತೇವೆ. ಯೇಸು ತಿಳಿಸಿದ್ದು: “ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ ಆತನ ಕೆಲಸವನ್ನು ಪೂರೈಸುವದೇ ನನ್ನ ಆಹಾರವು.” (ಯೋಹಾನ 4:34) ಯೇಸುವಿನಂತೆ ಸಮರ್ಪಿತ ಕ್ರೈಸ್ತರಾದ ನಾವು ದೇವರ ಚಿತ್ತವನ್ನು ಮಾಡುವುದರಲ್ಲಿ ಪರಮಾನಂದವನ್ನು ಕಾಣುತ್ತೇವೆ. ಯೆಹೋವನಿಗಾಗಿ ಮತ್ತು ಆತನ ಮಗನಿಗಾಗಿರುವ ನಮ್ಮ ಪ್ರೀತಿಯು, “ಇನ್ನೂ ಮನುಷ್ಯರ ಅಭಿಲಾಷೆಗಳ ಪ್ರಕಾರ ಬದುಕದೆ ದೇವರ ಚಿತ್ತದ ಪ್ರಕಾರ ಬದುಕು”ವಂತೆ ನಮ್ಮನ್ನು ಪ್ರಚೋದಿಸುತ್ತದೆ. (1 ಪೇತ್ರ 4:1, 2; 2 ಕೊರಿಂಥ 5:14, 15) ದೇವರ ಚಿತ್ತಕ್ಕೆ ವಿರುದ್ಧವಾಗಿರುವ ವಿಷಯವನ್ನು ಮಾಡುವುದರಿಂದ ನಾವು ನಮ್ಮನ್ನು ಪ್ರಯತ್ನಪೂರ್ವಕವಾಗಿ ತಡೆಯುತ್ತೇವೆ. (1 ಥೆಸಲೊನೀಕ 4:3-5) ಬೈಬಲ್ ವಾಚನ ಮತ್ತು ಅಧ್ಯಯನಕ್ಕಾಗಿ ಸಮಯವನ್ನು ಖರೀದಿಸಿಕೊಳ್ಳುವ ಮೂಲಕ ನಾವು ‘ಯೆಹೋವನ ಚಿತ್ತವೇನೆಂಬದನ್ನು ವಿಚಾರಿಸಿ ತಿಳಿದವರಾಗುವೆವು.’ ಇದರಲ್ಲಿ, “ಪರಲೋಕ ರಾಜ್ಯದ ಈ ಸುವಾರ್ತೆ”ಯನ್ನು ಸಾರುವ ಕೆಲಸದಲ್ಲಿ ಸಕ್ರಿಯವಾಗಿ ಭಾಗವಹಿಸುವುದೂ ಒಳಗೂಡಿದೆ.—ಎಫೆಸ 5:15-17; ಮತ್ತಾಯ 24:14.
ಪರಲೋಕದಲ್ಲಿ ಯೆಹೋವನ ಚಿತ್ತ
13. ಸೈತಾನನ ದಂಗೆಯ ಬಹಳ ಸಮಯಕ್ಕೆ ಮುಂಚೆಯೇ ದೇವರ ಚಿತ್ತವು ಹೇಗೆ ನೆರವೇರಿಸಲ್ಪಡುತ್ತಿತ್ತು?
13 ಯೆಹೋವನ ಆತ್ಮಪುತ್ರರಲ್ಲಿ ಒಬ್ಬನು ದಂಗೆಯೆದ್ದು, ಸೈತಾನನಾಗುವ ಎಷ್ಟೋ ವರುಷಗಳ ಮುಂಚೆಯೇ ಆತನ ಚಿತ್ತವು ಪರಲೋಕದಲ್ಲಿ ನೆರವೇರುತ್ತಿತ್ತು. ಜ್ಞಾನೋಕ್ತಿ ಪುಸ್ತಕವು ದೇವರ ಜ್ಯೇಷ್ಠಪುತ್ರನನ್ನು ವಿವೇಕದ ಸಾಕಾರರೂಪವಾಗಿ ಚಿತ್ರಿಸುತ್ತದೆ. ಅಗಣಿತ ವರುಷಗಳಿಂದ ದೇವರ ಏಕಜಾತ ಪುತ್ರನು “ಯಾವಾಗಲೂ ಆತನ ಮುಂದೆ ವಿನೋದಿಸುತ್ತಾ,” ತಂದೆಯ ಚಿತ್ತವನ್ನು ಮಾಡಲು ಸಂತೋಷಿಸುತ್ತಾ ಇದ್ದನು ಎಂದು ಅದು ತೋರಿಸುತ್ತದೆ. ಕ್ರಮೇಣ ಅವನು, “ಭೂಪರಲೋಕಗಳಲ್ಲಿರುವ ದೃಶ್ಯಾದೃಶ್ಯವಾದವುಗಳೆಲ್ಲ”ವನ್ನು ಸೃಷ್ಟಿಮಾಡುವಾಗ ಯೆಹೋವನೊಂದಿಗೆ “ಶಿಲ್ಪಿ”ಯಾಗಿದ್ದನು. (ಜ್ಞಾನೋಕ್ತಿ 8:22-31; ಕೊಲೊಸ್ಸೆ 1:15-17) ಯೆಹೋವನು ಯೇಸುವನ್ನು ತನ್ನ ವಾಕ್ಯವಾಗಿ, ಅಥವಾ ವದನಕನಾಗಿ ಉಪಯೋಗಿಸಿದನು.—ಯೋಹಾನ 1:1-3.
14. ದೇವದೂತರು ಯೆಹೋವನ ಚಿತ್ತವನ್ನು ಪರಲೋಕದಲ್ಲಿ ಹೇಗೆ ನೆರವೇರಿಸುತ್ತಿದ್ದಾರೆಂಬುದರ ಕುರಿತು ಕೀರ್ತನೆ 103ರ ಮಾತುಗಳಿಂದ ನಾವೇನನ್ನು ಕಲಿಯಬಲ್ಲೆವು?
14 ಯೆಹೋವನ ಪರಮಾಧಿಕಾರವು ಎಲ್ಲಾ ಸೃಷ್ಟಿಗಳಿಗಿಂತಲೂ ಶ್ರೇಷ್ಠವಾಗಿದೆ ಮತ್ತು ದೇವದೂತ ಸೈನ್ಯಗಳು ಆತನ ಸಲಹೆ ಹಾಗೂ ಆಜ್ಞಾವಿಧಿಗಳಿಗೆ ಕಿವಿಗೊಡುತ್ತವೆ ಎಂದು ಕೀರ್ತನೆಗಾರನು ತಿಳಿಸುತ್ತಾನೆ. ನಾವು ಓದುವುದು: “ಯೆಹೋವನು ಮೇಲಣ ಲೋಕದಲ್ಲಿ ತನ್ನ ಸಿಂಹಾಸನವನ್ನು ಸ್ಥಾಪಿಸಿದ್ದಾನೆ; ಆತನು ಸಮಸ್ತವನ್ನೂ ಆಳುತ್ತಾನೆ. ದೇವದೂತರೇ, ಆತನ ಶಬ್ದಕ್ಕೆ ಕಿವಿಗೊಡುವವರೇ, ಆತನ ಆಜ್ಞೆಯನ್ನು ನೆರವೇರಿಸುವ ಪರಾಕ್ರಮಶಾಲಿಗಳೇ, ಯೆಹೋವನನ್ನು ಕೊಂಡಾಡಿರಿ. ಆತನ ಸೈನ್ಯಗಳೇ, ಆತನ ಮೆಚ್ಚಿಕೆಯನ್ನು ನೆರವೇರಿಸುವ ಸೇವಕರೇ, ಯೆಹೋವನನ್ನು ಕೊಂಡಾಡಿರಿ. ಆತನ ರಾಜ್ಯದ [“ಪರಮಾಧಿಕಾರದ,” NW ಪಾದಟಿಪ್ಪಣಿ] ಸರ್ವಸ್ಥಳಗಳಲ್ಲಿರುವ ಎಲ್ಲಾ ಸೃಷ್ಟಿಗಳೇ, ಯೆಹೋವನನ್ನು ಕೊಂಡಾಡಿರಿ, ನನ್ನ ಮನವೇ, ಯೆಹೋವನನ್ನು ಕೊಂಡಾಡು.”—ಕೀರ್ತನೆ 103:19-22.
15. ಯೇಸು ರಾಜ್ಯಾಧಿಕಾರವನ್ನು ಪಡೆದುಕೊಂಡದ್ದು, ಪರಲೋಕದಲ್ಲಿ ದೇವರ ಚಿತ್ತವು ನೆರವೇರುವುದನ್ನು ಹೇಗೆ ಪ್ರಭಾವಿಸಿತು?
15 ಯೋಬ ಪುಸ್ತಕದಲ್ಲಿ ಸೂಚಿಸಿರುವಂತೆ, ದಂಗೆಯ ನಂತರವೂ ಸೈತಾನನಿಗೆ ಪರಲೋಕಕ್ಕೆ ಪ್ರವೇಶಿಸುವ ಅನುಮತಿಯಿತ್ತು. (ಯೋಬ 1:6-12; 2:1-7) ಹಾಗಿದ್ದರೂ, ಸೈತಾನ ಮತ್ತು ಅವನ ದೆವ್ವಗಳನ್ನು ಪರಲೋಕದಿಂದ ದೊಬ್ಬುವ ಕಾಲವು ಬರುತ್ತದೆಂದು ಪ್ರಕಟನೆ ಪುಸ್ತಕವು ತಿಳಿಸಿತು. ಈ ಸಮಯವು, ಯೇಸು ಕ್ರಿಸ್ತನು 1914ರಲ್ಲಿ ರಾಜ್ಯಾಧಿಕಾರವನ್ನು ಪಡೆದುಕೊಂಡ ಸ್ವಲ್ಪದರಲ್ಲಿಯೇ ಬಂತು. ಅಂದಿನಿಂದ, ಪರಲೋಕದಲ್ಲಿ ಆ ದಂಗೆಕೋರರಿಗೆ ಯಾವ ಸ್ಥಳವೂ ಇರುವುದಿಲ್ಲ. ಅವರನ್ನು ಭೂಮಿಗೆ ದೊಬ್ಬಲಾಯಿತು. (ಪ್ರಕಟನೆ 12:7-12) ಪರಲೋಕದಲ್ಲಿ ಇನ್ನು ಮುಂದೆ ಯಾವ ದೂರೂ ಕೇಳಿಬರುವುದಿಲ್ಲ, “ಕುರಿಯಾದಾತ”ನಿಗೆ ಮತ್ತು ಯೆಹೋವನಿಗೆ ಸ್ತುತಿಗಾನವು ಮಾತ್ರ ಕೇಳಿಬರುತ್ತದೆ. (ಪ್ರಕಟನೆ 4:9-11) ಯೆಹೋವನ ಚಿತ್ತವು ಪರಲೋಕದಲ್ಲಿ ನೆರವೇರುತ್ತಿದೆ.
ಭೂಮಿಗಾಗಿ ಯೆಹೋವನ ಚಿತ್ತ
16. ಮಾದರಿ ಪ್ರಾರ್ಥನೆಯು, ಮಾನವಕುಲದ ನಿರೀಕ್ಷೆಯ ಕುರಿತಾದ ಕ್ರೈಸ್ತಪ್ರಪಂಚದ ಬೋಧನೆಗೆ ಹೇಗೆ ತದ್ವಿರುದ್ಧವಾಗಿದೆ?
16 ಎಲ್ಲಾ ಒಳ್ಳೆಯ ಜನರು ಸ್ವರ್ಗಕ್ಕೆ ಹೋಗುತ್ತಾರೆ ಎಂದು ಹೇಳುವ ಮೂಲಕ ಕ್ರೈಸ್ತ ಪ್ರಪಂಚದ ಚರ್ಚುಗಳು, ಭೂಮಿಯನ್ನು ದೇವರ ಉದ್ದೇಶದಿಂದಲೇ ಹೊರಗಿಡುತ್ತಾರೆ. ಆದರೆ ಯೇಸು ನಮಗೆ ಪ್ರಾರ್ಥಿಸಲು ಕಲಿಸಿದ್ದು: “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” (ಮತ್ತಾಯ 6:10) ಹಿಂಸೆ, ಅನ್ಯಾಯ, ಅಸ್ವಸ್ಥತೆ, ಮತ್ತು ಮರಣದಿಂದ ಬಾಧಿತವಾದ ಲೋಕದಲ್ಲಿ ಇಂದು ದೇವರ ಚಿತ್ತವು ನೆರವೇರುತ್ತಿದೆ ಎಂದು ಹೇಳಸಾಧ್ಯವಿದೆಯೋ? ಖಂಡಿತವಾಗಿಯೂ ಇಲ್ಲ! ಆದುದರಿಂದ, ಅಪೊಸ್ತಲ ಪೇತ್ರನಿಂದ ದಾಖಲಿಸಲ್ಪಟ್ಟಿರುವ ವಾಗ್ದಾನದ ಮೇರೆಗೆ, ನಾವು ಶ್ರದ್ಧಾಪೂರ್ವಕವಾಗಿ ದೇವರ ಚಿತ್ತವು ಭೂಮಿಯಲ್ಲಿ ನೆರವೇರುವಂತೆ ಪ್ರಾರ್ಥಿಸಬೇಕು. ಅವನು ಬರೆದದ್ದು: “ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ [ಕ್ರಿಸ್ತನ ಮೂಲಕವಾದ ಮೆಸ್ಸೀಯ ರಾಜ್ಯ ಸರಕಾರ] ನೂತನಭೂಮಂಡಲವನ್ನೂ [ನೀತಿಯ ಮಾನವ ಸಮಾಜ] ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.”—2 ಪೇತ್ರ 3:13.
17. ಭೂಮಿಗಾಗಿ ಯೆಹೋವನ ಉದ್ದೇಶವೇನಾಗಿದೆ?
17 ಭೂಮಿಯನ್ನು ಸೃಷ್ಟಿಸುವುದರಲ್ಲಿ ಯೆಹೋವನಿಗೆ ಒಂದು ಉದ್ದೇಶವಿತ್ತು. ಪ್ರವಾದಿಯಾದ ಯೆಶಾಯನು ಹೀಗೆ ಬರೆಯುವಂತೆ ಆತನು ಪ್ರೇರೇಪಿಸಿದನು: “ಆಕಾಶಮಂಡಲವನ್ನು ಸೃಷ್ಟಿಸಿದ ಯೆಹೋವನ ಮಾತನ್ನು ಕೇಳಿರಿ; ಆತನೇ ದೇವರು, ಭೂಲೋಕವನ್ನು ನಿರ್ಮಿಸಿ ರೂಪಿಸಿ ಸ್ಥಾಪಿಸಿದನು; ಅದನ್ನು ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು. ಈತನು ಹೀಗನ್ನುತ್ತಾನೆ—ನಾನೇ ಯೆಹೋವನು, ಇನ್ನು ಯಾವನೂ ಅಲ್ಲ.” (ಯೆಶಾಯ 45:18) ದೇವರು ಪ್ರಥಮ ಮಾನವ ದಂಪತಿಯನ್ನು ಪ್ರಮೋದವನದಲ್ಲಿಟ್ಟು, ಅವರಿಗೆ ತಿಳಿಸಿದ್ದು: “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ.” (ಆದಿಕಾಂಡ 1:27, 28; 2:15) ಯೆಹೋವನ ಪರಮಾಧಿಕಾರಕ್ಕೆ ಸಂತೋಷದಿಂದ ವಿಧೇಯರಾಗುವ ಮತ್ತು ಕ್ರಿಸ್ತನಿಂದ ವಾಗ್ದಾನಿಸಲಾದ ಪರದೈಸಿನಲ್ಲಿ ನಿತ್ಯವಾಗಿ ಜೀವಿಸುವ ನೀತಿಯ ಪರಿಪೂರ್ಣ ಮಾನವ ಸಂತತಿಯಿಂದ ಭೂಮಿಯು ತುಂಬಬೇಕೆಂಬುದೇ ಸೃಷ್ಟಿಕರ್ತನ ಉದ್ದೇಶವಾಗಿದೆ.—ಕೀರ್ತ 37:11, 29; ಲೂಕ 23:43.
18, 19. (ಎ) ಭೂಮಿಯಲ್ಲಿ ದೇವರ ಚಿತ್ತವು ಸಂಪೂರ್ಣವಾಗಿ ನೆರವೇರುವ ಮುಂಚೆ ಏನು ಸಂಭವಿಸಬೇಕಾಗಿದೆ? (ಬಿ) ಯೇಸುವಿನ ಮಾದರಿ ಪ್ರಾರ್ಥನೆಯ ಇತರ ಯಾವ ಅಂಶಗಳನ್ನು ಮುಂದಿನ ಲೇಖನದಲ್ಲಿ ಪರಿಗಣಿಸಲಾಗುವುದು?
18 ಯೆಹೋವನ ಪರಮಾಧಿಕಾರವನ್ನು ಉಲ್ಲಂಘಿಸುವ ಸ್ತ್ರೀಪುರುಷರಿಂದ ಭೂಮಿಯು ತುಂಬಿರುವಷ್ಟರ ವರೆಗೆ ಅದಕ್ಕಾಗಿನ ಆತನ ಚಿತ್ತವು ನೆರವೇರಸಾಧ್ಯವಿಲ್ಲ. ಕ್ರಿಸ್ತನ ನಾಯಕತ್ವದ ಕೆಳಗೆ ಬಲಾಢ್ಯವಾದ ಆತ್ಮ ಸೇನೆಗಳನ್ನು ಉಪಯೋಗಿಸುತ್ತಾ, ದೇವರು “ಲೋಕನಾಶಕರನ್ನು ನಾಶಮಾಡು”ವನು. ಸುಳ್ಳುಧರ್ಮ, ಭ್ರಷ್ಟವಾದ ರಾಜಕೀಯ, ಲೋಭದ ಮತ್ತು ಅಪ್ರಾಮಾಣಿಕ ವಾಣಿಜ್ಯ, ಹಾಗೂ ವಿನಾಶಕಾರಿ ಮಿಲಿಟರಿ ಮುಂತಾದವುಗಳನ್ನು ಒಳಗೊಂಡ ಸೈತಾನನ ಸಂಪೂರ್ಣ ದುಷ್ಟ ವಿಷಯಗಳ ವ್ಯವಸ್ಥೆಯು ನಿತ್ಯಕ್ಕಾಗಿ ನಾಶಗೊಳಿಸಲ್ಪಡುವುದು. (ಪ್ರಕಟನೆ 11:18; 18:21; 19:1, 2, 11-18) ಯೆಹೋವನ ಪರಮಾಧಿಕಾರವು ನಿರ್ದೋಷೀಕರಿಸಲ್ಪಡುವುದು ಮತ್ತು ಆತನ ನಾಮವು ಪವಿತ್ರೀಕರಿಸಲ್ಪಡುವುದು. “ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ,” ಎಂದು ನಾವು ಹೇಳುವಾಗ ಈ ಎಲ್ಲಾ ವಿಷಯಗಳು ಸಂಭವಿಸಬೇಕೆಂದು ನಾವು ಪ್ರಾರ್ಥಿಸುತ್ತೇವೆ.—ಮತ್ತಾಯ 6:9, 10.
19 ಆದರೆ, ಯೇಸು ತನ್ನ ಮಾದರಿ ಪ್ರಾರ್ಥನೆಯಲ್ಲಿ ನಾವು ನಮ್ಮ ವೈಯಕ್ತಿಕ ವಿಷಯಗಳಿಗಾಗಿಯೂ ಪ್ರಾರ್ಥಿಸಸಾಧ್ಯವಿದೆಯೆಂದು ತೋರಿಸಿದನು. ಪ್ರಾರ್ಥನೆಯ ಕುರಿತಾದ ಅವನ ಸಲಹೆಯ ಈ ಅಂಶಗಳನ್ನು ಮುಂದಿನ ಲೇಖನದಲ್ಲಿ ಪರಿಗಣಿಸಲಾಗುವುದು.
[ಪಾದಟಿಪ್ಪಣಿ]
a ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲಾದ, ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ! ಎಂಬ ಪುಸ್ತಕದ 6ನೇ ಅಧ್ಯಾಯವನ್ನು ನೋಡಿರಿ.
ಪುನರ್ವಿಮರ್ಶೆ
• ಯೆಹೋವನನ್ನು “ನಮ್ಮ ತಂದೆ” ಎಂದು ನಾವು ಸಂಬೋಧಿಸುವುದು ಏಕೆ ಸೂಕ್ತವಾಗಿದೆ?
• ಯೆಹೋವನ ನಾಮದ ಪವಿತ್ರೀಕರಣಕ್ಕಾಗಿ ಪ್ರಾರ್ಥಿಸುವುದು ನಮಗೆ ಬಹಳ ಪ್ರಾಮುಖ್ಯವಾಗಿದೆ ಏಕೆ?
• ದೇವರ ರಾಜ್ಯವು ಬರಲಿ ಎಂದು ನಾವು ಏಕೆ ಪ್ರಾರ್ಥಿಸುತ್ತೇವೆ?
• ದೇವರ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ ಎಂದು ನಾವು ಪ್ರಾರ್ಥಿಸುವಾಗ, ಅದು ಏನನ್ನು ಅರ್ಥೈಸುತ್ತದೆ?
[ಪುಟ 9ರಲ್ಲಿರುವ ಚಿತ್ರ]
ಯೇಸುವಿನ ಪ್ರಾರ್ಥನೆಯು ಫರಿಸಾಯರ ಧರ್ಮಾಡಂಬರದ ಪ್ರಾರ್ಥನೆಗಳಿಗಿಂತ ತೀರಾ ವ್ಯತಿರಿಕ್ತವಾಗಿತ್ತು
[ಪುಟ 10ರಲ್ಲಿರುವ ಚಿತ್ರ]
ದೇವರ ರಾಜ್ಯವು ಬರಲಿ, ಆತನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ, ಮತ್ತು ಆತನ ಚಿತ್ತವು ನೆರವೇರಲಿ ಎಂದು ಕ್ರೈಸ್ತರು ಪ್ರಾರ್ಥಿಸುತ್ತಾರೆ