ನಂಬಿಗಸ್ತ ಮತ್ತು ವಿವೇಕಿ—ಇವೆರಡೂ ಆಗಿರುವ “ಆಳು”
“ಯಜಮಾನನು ತನ್ನ ಮನೆಯವರಿಗೆ ಹೊತ್ತು ಹೊತ್ತಿಗೆ ಆಹಾರ ಕೊಡಲಿಕ್ಕೆ ಅವರ ಮೇಲಿಟ್ಟ ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ಯಾರು?”—ಮತ್ತಾಯ 24:45.
1, 2. ಇಂದು ಆಧ್ಯಾತ್ಮಿಕ ಆಹಾರದ ಕ್ರಮವಾದ ಸರಬರಾಯಿಯನ್ನು ನಾವು ಪಡೆಯುವುದು ಮಹತ್ವವುಳ್ಳದ್ದೇಕೆ?
ಸಾ.ಶ. 33ರ ನೈಸಾನ್ 11, ಮಂಗಳವಾರ ಅಪರಾಹ್ನದಂದು ಯೇಸುವಿನ ಶಿಷ್ಯರು, ಇಂದು ನಮಗೆ ಗಾಢವಾದ ಅರ್ಥವನ್ನು ಹೊಂದಿರುವ ಒಂದು ಪ್ರಶ್ನೆಯನ್ನು ಕೇಳಿದರು. ಅವರು ಅವನಿಗೆ ಕೇಳಿದ್ದು: “ನಿನ್ನ ಸಾನ್ನಿಧ್ಯಕ್ಕೂ ವಿಷಯಗಳ ವ್ಯವಸ್ಥೆಯ ಸಮಾಪ್ತಿಗೂ ಸೂಚನೆ ಏನಾಗಿರುವುದು?” ಇದಕ್ಕೆ ಪ್ರತ್ಯುತ್ತರವಾಗಿ ಯೇಸು ಒಂದು ಗಮನಾರ್ಹವಾದ ಪ್ರವಾದನೆಯನ್ನು ನುಡಿದನು. ಯುದ್ಧಗಳು, ಕ್ಷಾಮಗಳು, ಭೂಕಂಪಗಳು ಹಾಗೂ ರೋಗಗಳ ಒಂದು ಗೊಂದಲಭರಿತ ಅವಧಿಯ ಕುರಿತಾಗಿ ಅವನು ಮಾತಾಡಿದನು. ಮತ್ತು ಇದು “[ನೂತನಕಾಲ ಹುಟ್ಟುವ] ಪ್ರಸವವೇದನೆಯ ಪ್ರಾರಂಭ”ವಾಗಿರಲಿತ್ತು ಅಷ್ಟೇ. ಆದರೆ ಇದಕ್ಕಿಂತಲೂ ಕೆಟ್ಟದ್ದಾದ ಸನ್ನಿವೇಶವು ಬರಲಿತ್ತು. ಇದೆಂಥ ದಿಗಿಲು ಹುಟ್ಟಿಸುವ ಪ್ರತೀಕ್ಷೆ!—ಮತ್ತಾಯ 24:3, 7, 8, 15-22, NW; ಲೂಕ 21:10, 11.
2 ಇಸವಿ 1914ರಿಂದೀಚೆಗೆ ಯೇಸುವಿನ ಪ್ರವಾದನೆಯಲ್ಲಿ ಹೆಚ್ಚಿನಾಂಶಗಳು ನೆರವೇರಿವೆ. ಮಾನವಕುಲದ ಮೇಲೆ ಈ “ಪ್ರಸವವೇದನೆ” ಭಾರೀ ಪ್ರಮಾಣದಲ್ಲಿ ಬಂದೆರಗಿದೆ. ಆದರೂ, ಸತ್ಯ ಕ್ರೈಸ್ತರು ಭಯಪಡಬೇಕಾಗಿಲ್ಲ. ಏಕೆಂದರೆ ಪೌಷ್ಟಿಕವಾದ ಆಧ್ಯಾತ್ಮಿಕ ಆಹಾರವನ್ನು ಕೊಟ್ಟು ಅವರನ್ನು ಪೋಷಿಸುವೆನೆಂದು ಯೇಸು ವಾಗ್ದಾನಿಸಿದನು. ಆದರೆ ಈಗ ಯೇಸು ಸ್ವರ್ಗದಲ್ಲಿರುವುದರಿಂದ, ಭೂಮಿಯ ಮೇಲಿರುವ ನಾವು ಆಧ್ಯಾತ್ಮಿಕ ಆಹಾರದ ಸರಬರಾಯಿಯನ್ನು ಪಡೆಯುವಂತೆ ಅವನು ಹೇಗೆ ಏರ್ಪಡಿಸಿದ್ದಾನೆ?
3. ನಾವು “ಹೊತ್ತು ಹೊತ್ತಿಗೆ ಆಹಾರ”ವನ್ನು ಪಡೆಯಲು ಯೇಸು ಯಾವ ಏರ್ಪಾಡುಗಳನ್ನು ಮಾಡಿದ್ದಾನೆ?
3 ಆ ಪ್ರಶ್ನೆಗೆ ಉತ್ತರವನ್ನು ಯೇಸು ತಾನೇ ಸೂಚಿಸಿದನು. ಆ ಮಹಾ ಪ್ರವಾದನೆಯನ್ನು ಕೊಡುತ್ತಿದ್ದಾಗ ಅವನು, “ಯಜಮಾನನು ತನ್ನ ಮನೆಯವರಿಗೆ ಹೊತ್ತು ಹೊತ್ತಿಗೆ ಆಹಾರ ಕೊಡಲಿಕ್ಕೆ ಅವರ ಮೇಲಿಟ್ಟ ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ಯಾರು?” ಎಂದು ಕೇಳಿ ಆ ಬಳಿಕ ಹೇಳಿದ್ದು: “ಯಜಮಾನನು ಬಂದು ಯಾವ ಆಳು ಹೀಗೆ ಮಾಡುವದನ್ನು ಕಾಣುವನೋ ಆ ಆಳು ಧನ್ಯನು. ಅಂಥವನನ್ನು ಅವನು ತನ್ನ ಎಲ್ಲಾ ಆಸ್ತಿಯ ಮೇಲೆ ನೇಮಿಸುವನು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ.” (ಮತ್ತಾಯ 24:45-47) ಹೌದು, ಆಧ್ಯಾತ್ಮಿಕ ಆಹಾರವನ್ನು ಒದಗಿಸಲು ನೇಮಿಸಲ್ಪಟ್ಟ, ನಂಬಿಗಸ್ತ ಮತ್ತು ವಿವೇಕಿ—ಇವೆರಡೂ ಆಗಿರುವ ಒಬ್ಬ “ಆಳು” ಇರಲಿದ್ದನು. ಆ ಆಳು ಒಬ್ಬನೇ ಒಬ್ಬ ವ್ಯಕ್ತಿಯಾಗಿದ್ದನೊ, ಅನುಕ್ರಮವಾಗಿ ಬರುವ ಒಬ್ಬೊಬ್ಬ ವ್ಯಕ್ತಿಗಳಾಗಿದ್ದರೊ ಇಲ್ಲವೆ ಇನ್ನೇನಾದರೂ ಆಗಿತ್ತೊ? ಆ ನಂಬಿಗಸ್ತ ಆಳು ಅತ್ಯಾವಶ್ಯಕವಾಗಿರುವ ಆಧ್ಯಾತ್ಮಿಕ ಆಹಾರವನ್ನು ಒದಗಿಸುವುದರಿಂದ, ಈ ಪ್ರಶ್ನೆಗೆ ಉತ್ತರವನ್ನು ಕಂಡುಹಿಡಿಯುವುದು ನಮ್ಮ ಪ್ರಯೋಜನಾರ್ಥವಾಗಿದೆ.
ಒಬ್ಬ ವ್ಯಕ್ತಿಯೊ, ಒಂದು ವರ್ಗವೊ?
4. ಆ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಒಬ್ಬನೇ ವ್ಯಕ್ತಿಯಾಗಿರಲು ಸಾಧ್ಯವಿಲ್ಲವೆಂಬುದು ನಮಗೆ ಹೇಗೆ ಗೊತ್ತು?
4 ಈ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಕೇವಲ ಒಬ್ಬ ವ್ಯಕ್ತಿಯಾಗಿರಸಾಧ್ಯವಿಲ್ಲ. ಅದೇಕೆ? ಏಕೆಂದರೆ ಆ ಆಳು ಒಂದನೆಯ ಶತಮಾನದಿಂದ ಆಧ್ಯಾತ್ಮಿಕ ಆಹಾರವನ್ನು ಬಡಿಸಲಾರಂಭಿಸಿದನು, ಮತ್ತು ಯೇಸುವಿಗನುಸಾರ, 1914ರಲ್ಲಿ ಯಜಮಾನನು ಬಂದಾಗಲೂ ಅವನು ಹಾಗೆಯೇ ಮಾಡುತ್ತಿರುವನು. ಇದು, ಒಬ್ಬ ವ್ಯಕ್ತಿಗೆ ಸುಮಾರು 1,900 ವರ್ಷಕಾಲದ ನಂಬಿಗಸ್ತ ಸೇವೆಯನ್ನು ಪ್ರತಿನಿಧೀಕರಿಸುತ್ತದೆ. ಆದರೆ ಅಷ್ಟು ದೀರ್ಘಸಮಯದ ವರೆಗೆ ಮೆತೂಷೆಲಹನೂ ಬದುಕಿರಲಿಲ್ಲ!—ಆದಿಕಾಂಡ 5:27.
5. “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಎಂಬ ಪದಗಳು ಪ್ರತಿಯೊಬ್ಬ ಕ್ರೈಸ್ತನಿಗೆ ವ್ಯಕ್ತಿಪರವಾಗಿ ಏಕೆ ಅನ್ವಯಿಸುವುದಿಲ್ಲವೆಂಬುದನ್ನು ವಿವರಿಸಿರಿ.
5 ಒಳ್ಳೆಯದು, ಹಾಗಾದರೆ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಎಂಬ ಪದಗಳು ಸಾಮಾನ್ಯ ಅರ್ಥದಲ್ಲಿ ಪ್ರತಿಯೊಬ್ಬ ಕ್ರೈಸ್ತನಿಗೆ ವ್ಯಕ್ತಿಗತವಾಗಿ ಅನ್ವಯಿಸೀತೆ? ಕ್ರೈಸ್ತರೆಲ್ಲರೂ ನಂಬಿಗಸ್ತರೂ ವಿವೇಕಿಗಳೂ ಆಗಿರಬೇಕೆಂಬುದು ನಿಜವೇ. ಆದರೂ ಯೇಸು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಕುರಿತು ಮಾತಾಡಿದಾಗ ಅವನ ಮನಸ್ಸಿನಲ್ಲಿ ಇನ್ನೂ ಅಧಿಕವಾದ ಯಾವುದೊ ವಿಷಯವಿತ್ತೆಂಬುದು ವ್ಯಕ್ತ. ಅದು ಹಾಗೆಂದು ನಮಗೆ ಹೇಗೆ ಗೊತ್ತು? ಹೇಗೆಂದರೆ, ‘ಯಜಮಾನನು ಬಂದಾಗ’ ಆ ಆಳನ್ನು “ತನ್ನ ಎಲ್ಲಾ ಆಸ್ತಿಯ ಮೇಲೆ” ನೇಮಿಸಲಿದ್ದನೆಂದು ಅವನು ಹೇಳಿದನು. ಪ್ರತಿಯೊಬ್ಬ ಕ್ರೈಸ್ತನು ಎಲ್ಲದ್ದರ ಮೇಲೆ, ಅಂದರೆ ಕರ್ತನ “ಎಲ್ಲಾ” ಆಸ್ತಿಯ ಮೇಲೆ ನೇಮಿಸಲ್ಪಡುವುದಾದರೂ ಹೇಗೆ ಸಾಧ್ಯ? ಇದು ಅಸಾಧ್ಯವೇ ಸರಿ!
6. ಇಸ್ರಾಯೇಲ್ ಜನಾಂಗವು ಹೇಗೆ ದೇವರ “ಸೇವಕನು” ಅಥವಾ “ಆಳು” ಆಗಿ ಕಾರ್ಯನಿರ್ವಹಿಸುವಂತೆ ಉದ್ದೇಶಿಸಲಾಗಿತ್ತು?
6 ಹಾಗಾದರೆ, ನ್ಯಾಯಸಮ್ಮತವಾದ ಒಂದೇ ತೀರ್ಮಾನವು ಏನೆಂದರೆ, ಯೇಸು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಎಂದು ಹೇಳಿದಾಗ ಕ್ರೈಸ್ತರ ಒಂದು ಗುಂಪಿಗೆ ಸೂಚಿಸಿದನು. ಆದರೆ ಒಂದು ಸಂಘಟಿತ ಆಳು ಇರಲು ಸಾಧ್ಯವೇ? ಹೌದು. ಕ್ರಿಸ್ತನು ಬರುವುದಕ್ಕೆ ಏಳ್ನೂರು ವರುಷಗಳಿಗೆ ಹಿಂದೆ, ಯೆಹೋವನು ಇಡೀ ಇಸ್ರಾಯೇಲ್ ಜನಾಂಗವನ್ನು “ನಾನು ಆರಿಸಿಕೊಂಡಿರುವ ಸೇವಕನು” ಎಂದು ಹೇಳಿ ಸೂಚಿಸಿದನು. (ಓರೆ ಅಕ್ಷರಗಳು ನಮ್ಮವು.) (ಯೆಶಾಯ 43:10) ಸಾ.ಶ.ಪೂ. 1513ರಲ್ಲಿ ಮೋಶೆಯ ಧರ್ಮಶಾಸ್ತ್ರವು ಕೊಡಲ್ಪಟ್ಟಂದಿನಿಂದ ಹಿಡಿದು ಸಾ.ಶ. 33ರ ಪಂಚಾಶತ್ತಮದ ತನಕ ಇಸ್ರಾಯೇಲ್ ಜನಾಂಗದ ಪ್ರತಿಯೊಬ್ಬ ಸದಸ್ಯನು ಈ ಸೇವಕ ವರ್ಗದ ಸದಸ್ಯನಾಗಿದ್ದನು. ಆ ಜನಾಂಗದ ವ್ಯವಹಾರಗಳನ್ನು ನೋಡಿಕೊಳ್ಳುವುದರಲ್ಲಿ ಅಥವಾ ಅದರ ಆಧ್ಯಾತ್ಮಿಕ ಪೋಷಣಾ ಕಾರ್ಯಕ್ರಮವನ್ನು ಸಂಘಟಿಸುವುದರಲ್ಲಿ ಇಸ್ರಾಯೇಲ್ಯರಲ್ಲಿ ಹೆಚ್ಚಿನವರಿಗೆ ನೇರವಾದ ಭಾಗವಿರಲಿಲ್ಲ. ಆ ಕೆಲಸಗಳ ನಿರ್ವಹಣೆಗಾಗಿ ಯೆಹೋವನು ಅರಸರು, ನ್ಯಾಯಾಧಿಪತಿಗಳು, ಪ್ರವಾದಿಗಳು, ಯಾಜಕರು ಮತ್ತು ಲೇವ್ಯರನ್ನು ಉಪಯೋಗಿಸಿದನು. ಆದರೂ ಇಸ್ರಾಯೇಲ್ ಒಂದು ಜನಾಂಗವಾಗಿ, ಯೆಹೋವನ ಪರಮಾಧಿಕಾರವನ್ನು ಪ್ರತಿನಿಧೀಕರಿಸಿ, ಜನಾಂಗಗಳ ಮಧ್ಯೆ ಯೆಹೋವನನ್ನು ಸ್ತುತಿಸಬೇಕಾಗಿತ್ತು. ಪ್ರತಿಯೊಬ್ಬ ಇಸ್ರಾಯೇಲ್ಯನು ಯೆಹೋವನ ಒಬ್ಬ ಸಾಕ್ಷಿಯಾಗಿರಬೇಕಿತ್ತು.—ಧರ್ಮೋಪದೇಶಕಾಂಡ 26:19; ಯೆಶಾಯ 43:20; ಮಲಾಕಿಯ 2:7; ರೋಮಾಪುರ 3:1, 2.
ಒಬ್ಬ “ಸೇವಕ”ನನ್ನು ಕೆಲಸದಿಂದ ತೆಗೆದುಹಾಕಲಾಗುತ್ತದೆ
7. ಪುರಾತನ ಕಾಲದ ಇಸ್ರಾಯೇಲ್ ಜನಾಂಗವು ದೇವರ “ಸೇವಕ”ನಾಗಿರುವುದಕ್ಕೆ ಅನರ್ಹವಾದದ್ದೇಕೆ?
7 ಶತಮಾನಗಳ ಹಿಂದೆ ಇಸ್ರಾಯೇಲ್ ಜನಾಂಗವು ದೇವರ “ಸೇವಕ”ನಾಗಿದ್ದ ಕಾರಣ, ಆ ಜನಾಂಗವು ಸಹ ಯೇಸು ಹೇಳಿದ ಆಳು ಆಗಿತ್ತೊ? ಇಲ್ಲ, ಏಕೆಂದರೆ ಪುರಾತನ ಇಸ್ರಾಯೇಲ್ ವಿಷಾದಕರವಾಗಿ, ನಂಬಿಗಸ್ತನಾಗಿಯೂ ಪರಿಣಮಿಸಲಿಲ್ಲ, ವಿವೇಕಿಯಾಗಿಯೂ ಪರಿಣಮಿಸಲಿಲ್ಲ. ಆ ಜನಾಂಗಕ್ಕೆ ಹೇಳಲ್ಪಟ್ಟ ಯೆಹೋವನ ಮಾತುಗಳನ್ನು ಉಲ್ಲೇಖಿಸುತ್ತಾ ಪೌಲನು ಆ ಸನ್ನಿವೇಶವನ್ನು ಸಾರಾಂಶಿಸುತ್ತಾನೆ: “ನಿಮ್ಮ ದೆಸೆಯಿಂದ ಅನ್ಯಜನರಲ್ಲಿ ದೇವರ ನಾಮವು ದೂಷಣೆಗೆ ಗುರಿಯಾಗುತ್ತದೆ.” (ರೋಮಾಪುರ 2:24) ಹೌದು, ಇಸ್ರಾಯೇಲ್ ಯೇಸುವನ್ನು ತಳ್ಳಿಹಾಕಿದಾಗ ತನ್ನ ದಂಗೆಯ ಉದ್ದ ಚರಿತ್ರೆಯ ಪರಮಾವಧಿಯನ್ನು ಮುಟ್ಟಿತು ಮತ್ತು ಆಗ ಯೆಹೋವನು ಅವರನ್ನು ತಳ್ಳಿಹಾಕಿದನು.—ಮತ್ತಾಯ 21:42, 43.
8. ಇಸ್ರಾಯೇಲಿನ ಸ್ಥಾನದಲ್ಲಿ ಒಬ್ಬ “ಸೇವಕ”ನನ್ನು ಯಾವಾಗ ನೇಮಿಸಲಾಯಿತು, ಮತ್ತು ಯಾವ ಪರಿಸ್ಥಿತಿಗಳಲ್ಲಿ?
8 ಈ “ಸೇವಕ”ನಾದ ಇಸ್ರಾಯೇಲಿನ ಅಪನಂಬಿಗಸ್ತಿಕೆಯು, ನಂಬಿಗಸ್ತ ಆರಾಧಕರು ಆಧ್ಯಾತ್ಮಿಕ ಆಹಾರದ ಸರಬರಾಯಿಯನ್ನು ಇನ್ನೆಂದಿಗೂ ಪಡೆಯರು ಎಂಬುದನ್ನು ಅರ್ಥೈಸಲಿಲ್ಲ. ಯೇಸುವಿನ ಪುನರುತ್ಥಾನವಾಗಿ 50 ದಿನಗಳ ಬಳಿಕ ಅಂದರೆ ಸಾ.ಶ. 33ರ ಪಂಚಾಶತ್ತಮದಲ್ಲಿ, ಯೆರೂಸಲೇಮಿನ ಒಂದು ಮೇಲಂತಸ್ತಿನ ಕೋಣೆಯಲ್ಲಿ ಕೂಡಿಬಂದಿದ್ದ ಅವನ 120 ಮಂದಿ ಶಿಷ್ಯರ ಮೇಲೆ ಪವಿತ್ರಾತ್ಮವು ಸುರಿಸಲ್ಪಟ್ಟಿತು. ಆ ಗಳಿಗೆಯಲ್ಲಿ, ಒಂದು ಹೊಸ ಜನಾಂಗವು ಹುಟ್ಟಿತು. ಯೋಗ್ಯವಾಗಿಯೇ, ಅದರ ಸದಸ್ಯರು “ದೇವರ ಮಹತ್ತುಗಳ” ವಿಷಯವಾಗಿ ಯೆರೂಸಲೇಮಿನ ನಿವಾಸಿಗಳಿಗೆ ಧೈರ್ಯದಿಂದ ಹೇಳಲಾರಂಭಿಸಿದಾಗ ಅದರ ಜನನವು ಪ್ರಕಟಿಸಲ್ಪಟ್ಟಿತು. (ಅ. ಕೃತ್ಯಗಳು 2:11) ಹೀಗೆ ಆ ಹೊಸ ಜನಾಂಗವಾದ ಆಧ್ಯಾತ್ಮಿಕ ಜನಾಂಗವು ಯೆಹೋವನ ಮಹಿಮೆಯನ್ನು ಜನಾಂಗಗಳಿಗೆ ಪ್ರಸಿದ್ಧಿಪಡಿಸುವ ಮತ್ತು ಹೊತ್ತು ಹೊತ್ತಿಗೆ ಆಹಾರದ ಸರಬರಾಯಿ ಮಾಡುವ “ಸೇವಕ”ನಾಗಿ ಪರಿಣಮಿಸಿತು. (1 ಪೇತ್ರ 2:9) ಯೋಗ್ಯವಾಗಿಯೇ, ಅದು ಬಳಿಕ ‘ದೇವರ ಇಸ್ರಾಯೇಲ್ಯರು’ ಎಂಬ ಹೆಸರಿನಿಂದ ಕರೆಯಲ್ಪಟ್ಟಿತು.—ಗಲಾತ್ಯ 6:16.
9. (ಎ) “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಯಾರಿಂದ ರಚಿತವಾಗಿದೆ? (ಬಿ) “ಮನೆಯವರು” ಯಾರು?
9 ‘ದೇವರ ಇಸ್ರಾಯೇಲ್ಯರಲ್ಲಿ’ ಪ್ರತಿಯೊಬ್ಬ ಸದಸ್ಯನೂ ಒಬ್ಬ ಸಮರ್ಪಿತ ಹಾಗೂ ದೀಕ್ಷಾಸ್ನಾನ ಪಡೆದಿರುವ ಕ್ರೈಸ್ತನಾಗಿದ್ದು, ಪವಿತ್ರಾತ್ಮಾಭಿಷಿಕ್ತನೂ ಸ್ವರ್ಗೀಯ ನಿರೀಕ್ಷೆಯುಳ್ಳವನೂ ಆಗಿದ್ದಾನೆ. ಹೀಗಿರುವುದರಿಂದ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಎಂಬ ಅಭಿವ್ಯಕ್ತಿಯು ಸಾ.ಶ. 33ರಿಂದ ಇಂದಿನ ತನಕ ಭೂಮಿಯ ಮೇಲೆ ಯಾವುದೇ ಸಮಯದಲ್ಲಿ ಜೀವಿಸಿರುವ ಅಭಿಷಿಕ್ತ ಆಧ್ಯಾತ್ಮಿಕ ಜನಾಂಗದ ಎಲ್ಲ ಸದಸ್ಯರಿಗೆ ಒಂದು ಗುಂಪಿನೋಪಾದಿ ಸೂಚಿಸುತ್ತದೆ. ಇದು, ಸಾ.ಶ.ಪೂ. 1513ರಿಂದ ಹಿಡಿದು ಸಾ.ಶ. 33ರ ವರೆಗೆ ಯಾವುದೇ ಸಮಯದಲ್ಲಿ ಜೀವಿಸುತ್ತಿದ್ದ ಪ್ರತಿಯೊಬ್ಬ ಇಸ್ರಾಯೇಲ್ಯನೂ ಹೇಗೆ ಕ್ರೈಸ್ತಪೂರ್ವ ಸೇವಕ ವರ್ಗದ ಭಾಗವಾಗಿದ್ದನೊ ಹಾಗೆಯೆ ಇದೆ. ಆದರೆ ಈ ಆಳಿನಿಂದ ಆಧ್ಯಾತ್ಮಿಕ ಪೋಷಣೆಯನ್ನು ಪಡೆಯುವ “ಮನೆಯವರು” ಯಾರು? ಸಾ.ಶ. ಒಂದನೆಯ ಶತಮಾನದಲ್ಲಿ ಪ್ರತಿಯೊಬ್ಬ ಕ್ರೈಸ್ತನಿಗೂ ಸ್ವರ್ಗೀಯ ನಿರೀಕ್ಷೆಯಿತ್ತು. ಆದಕಾರಣ, ಈ ಮನೆಯವರೂ ಅಭಿಷಿಕ್ತ ಕ್ರೈಸ್ತರೇ ಆಗಿದ್ದರು. ಆದರೆ ಅವರನ್ನು ಒಂದು ಗುಂಪಾಗಿ ಅಲ್ಲ, ಬದಲಾಗಿ ಒಬ್ಬೊಬ್ಬರಾಗಿ ಪರಿಗಣಿಸಲಾಗುತ್ತಿತ್ತು. ಸಭೆಯಲ್ಲಿ ಜವಾಬ್ದಾರಿಯ ಸ್ಥಾನದಲ್ಲಿದ್ದವರನ್ನು ಸೇರಿಸಿ ಎಲ್ಲರಿಗೂ ಆಳಿನಿಂದ ಬರುವ ಆಧ್ಯಾತ್ಮಿಕ ಆಹಾರದ ಅಗತ್ಯವಿತ್ತು. —1 ಕೊರಿಂಥ 12:12, 19-27; ಇಬ್ರಿಯ 5:11-13; 2 ಪೇತ್ರ 3:15, 16.
“ಒಬ್ಬೊಬ್ಬನಿಗೆ ಅವನವನ ಕೆಲಸ”
10, 11. ಆಳು ವರ್ಗದ ಎಲ್ಲ ಸದಸ್ಯರಿಗೆ ಏಕಪ್ರಕಾರದ ಕೆಲಸದ ನೇಮಕವಿಲ್ಲವೆಂದು ನಮಗೆ ಹೇಗೆ ತಿಳಿಯುತ್ತದೆ?
10 ‘ದೇವರ ಇಸ್ರಾಯೇಲ್ಯರು’ ಕೆಲಸದ ನೇಮಕವಿರುವ ನಂಬಿಗಸ್ತನೂ ವಿವೇಕಿಯೂ ಆದ ಆಳು ವರ್ಗವಾಗಿರುವಾಗ, ಅದರಲ್ಲಿರುವ ಪ್ರತಿಯೊಬ್ಬ ಸದಸ್ಯನಿಗೆ ವೈಯಕ್ತಿಕ ಜವಾಬ್ದಾರಿಗಳೂ ಇವೆ. ಮಾರ್ಕ 13:34ರಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಮಾತುಗಳು ಇದನ್ನು ಸ್ಪಷ್ಟಗೊಳಿಸುತ್ತವೆ. ಅವನಂದದ್ದು: “ಒಬ್ಬ ಮನುಷ್ಯನು ತನ್ನ ಮನೆಯನ್ನು ಬಿಟ್ಟು ಬೇರೊಂದು ದೇಶಕ್ಕೆ ಹೋಗುವಾಗ ತನ್ನ ಆಳುಗಳಿಗೆ ಮನೇ ಆಡಳಿತವನ್ನು ಒಪ್ಪಿಸಿಕೊಟ್ಟು ಒಬ್ಬೊಬ್ಬನಿಗೆ ಅವನವನ ಕೆಲಸವನ್ನು ನೇಮಿಸಿ ಬಾಗಿಲು ಕಾಯುವವನನ್ನು ಕರೆದು—ನೀನು ಎಚ್ಚರವಾಗಿರಬೇಕೆಂದು ಅಪ್ಪಣೆ” ಕೊಟ್ಟನು. (ಓರೆ ಅಕ್ಷರಗಳು ನಮ್ಮವು.) ಹೀಗೆ ಆ ಆಳು ವರ್ಗದ ಪ್ರತಿಯೊಬ್ಬ ಸದಸ್ಯನು ಒಂದೊಂದು ನೇಮಕವನ್ನು ಅಂದರೆ ಕ್ರಿಸ್ತನ ಭೂಸ್ವತ್ತುಗಳನ್ನು ಹೆಚ್ಚಿಸುವ ನೇಮಕವನ್ನು ಪಡೆದಿರುತ್ತಾನೆ. ಪ್ರತಿಯೊಬ್ಬ ಸದಸ್ಯನು ಈ ಕೆಲಸವನ್ನು ಅವನವನ ಸಾಮರ್ಥ್ಯ ಮತ್ತು ಸಂದರ್ಭಗಳಿಗನುಸಾರ ಪೂರೈಸುತ್ತಾನೆ.—ಮತ್ತಾಯ 25:14, 15.
11 ಅದಲ್ಲದೆ, ಅಪೊಸ್ತಲ ಪೇತ್ರನು ತನ್ನ ದಿನಗಳ ಅಭಿಷಿಕ್ತ ಕ್ರೈಸ್ತರಿಗೆ ತಿಳಿಸಿದ್ದು: “ನೀವೆಲ್ಲರು ದೇವರ ವಿವಿಧ ಕೃಪೆಯ ವಿಷಯದಲ್ಲಿ ಒಳ್ಳೇ ಮನೆವಾರ್ತೆಯವರಾಗಿದ್ದು ಪ್ರತಿಯೊಬ್ಬನು ತಾನು ಹೊಂದಿದ ಕೃಪಾವರವನ್ನು ಎಲ್ಲರ ಸೇವೆಯಲ್ಲಿ ಉಪಯೋಗಿಸಲಿ.” (ಓರೆ ಅಕ್ಷರಗಳು ನಮ್ಮವು.) (1 ಪೇತ್ರ 4:10) ಆದಕಾರಣ, ದೇವರು ತಮಗೆ ಕೊಟ್ಟ ಕೃಪಾವರಗಳನ್ನು ಉಪಯೋಗಿಸುತ್ತಾ ಒಬ್ಬರು ಇನ್ನೊಬ್ಬರಿಗೆ ಸೇವೆ ಮಾಡುವ ಜವಾಬ್ದಾರಿ ಈ ಅಭಿಷಿಕ್ತರಿಗಿದೆ. ಅಲ್ಲದೆ, ಕ್ರೈಸ್ತರೆಲ್ಲರಿಗೂ ಒಂದೇ ವಿಧದ ಸಾಮರ್ಥ್ಯಗಳು, ಜವಾಬ್ದಾರಿಗಳು ಮತ್ತು ಸೇವಾ ಸದವಕಾಶಗಳು ಇರುವುದಿಲ್ಲವೆಂದು ಪೇತ್ರನ ಮಾತುಗಳು ತೋರಿಸುತ್ತವೆ. ಆದರೂ, ಈ ಆಳು ವರ್ಗದಲ್ಲಿರುವ ಪ್ರತಿಯೊಬ್ಬನು ಆ ಆಧ್ಯಾತ್ಮಿಕ ಜನಾಂಗದ ಬೆಳವಣಿಗೆಗೆ ಒಂದಲ್ಲ ಒಂದು ವಿಧದಲ್ಲಿ ಸಹಾಯಮಾಡಸಾಧ್ಯವಿತ್ತು. ಅದು ಹೇಗೆ?
12. ಆಳು ವರ್ಗದ ಪ್ರತಿಯೊಬ್ಬ ಸದಸ್ಯನು—ಸ್ತ್ರೀಯಾಗಲಿ ಪುರುಷನಾಗಲಿ—ಆಳಿನ ಬೆಳವಣಿಗೆಗೆ ಹೇಗೆ ಸಹಾಯ ಮಾಡಿದರು?
12 ಪ್ರಥಮವಾಗಿ, ಯೆಹೋವನ ಸಾಕ್ಷಿಯಾಗಿ ರಾಜ್ಯದ ಸುವಾರ್ತೆಯನ್ನು ಸಾರುವ ಹೊಣೆಗಾರಿಕೆ ಪ್ರತಿಯೊಬ್ಬನಿಗಿತ್ತು. (ಯೆಶಾಯ 43:10-12; ಮತ್ತಾಯ 24:14) ದಿವಾರೋಹಣಕ್ಕೆ ತುಸು ಮೊದಲು, ಯೇಸು ತನ್ನ ನಂಬಿಗಸ್ತ ಶಿಷ್ಯರಾಗಿದ್ದ ಸ್ತ್ರೀಪುರುಷರೆಲ್ಲರಿಗೆ ಅವರು ಬೋಧಕರಾಗಿರಬೇಕೆಂದು ಆಜ್ಞೆಯಿತ್ತನು. ಅವನಂದದ್ದು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ [“ಪವಿತ್ರಾತ್ಮದ,” NW] ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ. ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ.” (ಓರೆ ಅಕ್ಷರಗಳು ನಮ್ಮವು.)—ಮತ್ತಾಯ 28:19, 20.
13. ಅಭಿಷಿಕ್ತರೆಲ್ಲರೂ ಯಾವ ಸುಯೋಗದಲ್ಲಿ ಆನಂದಿಸಿದರು?
13 ಹೊಸ ಶಿಷ್ಯರನ್ನು ಹುಡುಕಿ ಕಂಡುಹಿಡಿದಾಗ, ಕ್ರಿಸ್ತನು ತನ್ನ ಶಿಷ್ಯರಿಗೆ ಆಜ್ಞಾಪಿಸಿದ ಎಲ್ಲ ವಿಷಯಗಳನ್ನು ಪಾಲಿಸುವಂತೆ ಅವರಿಗೆ ಜಾಗರೂಕತೆಯಿಂದ ಕಲಿಸಬೇಕಾಗಿತ್ತು. ಕ್ರಮೇಣ, ಪ್ರತಿವರ್ತನೆ ತೋರಿಸಿದವರು ಇತರರಿಗೆ ಬೋಧಿಸುವ ಅರ್ಹತೆಯನ್ನು ಪಡೆದರು. ಅನೇಕ ದೇಶಗಳಲ್ಲಿದ್ದ ಆಳು ವರ್ಗದ ಭಾವೀ ಸದಸ್ಯರಿಗೆ ಪೌಷ್ಟಿಕವಾದ ಆಧ್ಯಾತ್ಮಿಕ ಆಹಾರವು ಲಭ್ಯಗೊಳಿಸಲ್ಪಟ್ಟಿತು. ಶಿಷ್ಯರನ್ನಾಗಿ ಮಾಡುವ ನೇಮಕವನ್ನು ಪೂರೈಸುವುದರಲ್ಲಿ ಎಲ್ಲ ಅಭಿಷಿಕ್ತ ಕ್ರೈಸ್ತರು—ಸ್ತ್ರೀಪುರುಷರೆಲ್ಲರೂ—ಪಾಲ್ಗೊಂಡರು. (ಅ. ಕೃತ್ಯಗಳು 2:17, 18) ಈ ಕೆಲಸವು, ಆಳು ತನ್ನ ಕೆಲಸವನ್ನು ಪ್ರಥಮವಾಗಿ ಆರಂಭಿಸಿದಂದಿನಿಂದ ಹಿಡಿದು ಈ ವಿಷಯಗಳ ವ್ಯವಸ್ಥೆಯ ಅಂತ್ಯದ ವರೆಗೂ ಮುಂದುವರಿಯಲಿತ್ತು.
14. ಸಭೆಯಲ್ಲಿ ಬೋಧಿಸುವ ನೇಮಕಗಳು ಯಾರಿಗೆ ಸೀಮಿತವಾಗಿದ್ದವು, ಮತ್ತು ನಂಬಿಗಸ್ತ ಅಭಿಷಿಕ್ತ ಸ್ತ್ರೀಯರಿಗೆ ಅದರ ಬಗ್ಗೆ ಹೇಗನಿಸಿತು?
14 ಹೊಸದಾಗಿ ಸ್ನಾತರಾದ ಅಭಿಷಿಕ್ತರು ಆ ಆಳಿನ ಭಾಗವಾಗಿ ಪರಿಣಮಿಸಿದರು ಮತ್ತು ಆರಂಭದಲ್ಲಿ ಅವರಿಗೆ ಯಾರೇ ಕಲಿಸಿರಲಿ, ಈಗ ಅವರು ಸಭೆಯ ಹಿರಿಯರಾಗಿ ಸೇವೆಮಾಡಲು ಶಾಸ್ತ್ರೀಯವಾಗಿ ಅರ್ಹತೆಗಳನ್ನು ಪಡೆದಿದ್ದ ಸಭಾಸದಸ್ಯರಿಂದಲೂ ಶಿಕ್ಷಣವನ್ನು ಪಡೆದರು. (1 ತಿಮೊಥೆಯ 3:1-7; ತೀತ 1:6-9) ಹೀಗೆ ಈ ನೇಮಿತ ಪುರುಷರು ಆ ಜನಾಂಗದ ಬೆಳವಣಿಗೆಗೆ ಒಂದು ವಿಶೇಷವಾದ ರೀತಿಯಲ್ಲಿ ಸಹಾಯಮಾಡುವ ಸುಯೋಗವನ್ನು ಪಡೆದರು. ಮತ್ತು ಸಭೆಯಲ್ಲಿ ಬೋಧಿಸುವ ಕೆಲಸವು ಕ್ರೈಸ್ತ ಪುರುಷರಿಗೆ ಮಾತ್ರ ನೇಮಿಸಲ್ಪಟ್ಟಿರುವ ವಿಷಯದಲ್ಲಿ ನಂಬಿಗಸ್ತ ಅಭಿಷಿಕ್ತ ಸ್ತ್ರೀಯರು ಅಸಮಾಧಾನವನ್ನು ವ್ಯಕ್ತಪಡಿಸಲಿಲ್ಲ. (1 ಕೊರಿಂಥ 14:34, 35) ಬದಲಿಗೆ, ಅವರು ಸಭೆಯ ಪುರುಷ ಸದಸ್ಯರ ಶ್ರದ್ಧಾಪೂರ್ವಕವಾದ ಕೆಲಸದಿಂದ ಪ್ರಯೋಜನವನ್ನು ಪಡೆದುಕೊಳ್ಳಲು ಸಂತೋಷಿಸಿದರು ಮತ್ತು ಇತರರಿಗೆ ಸುವಾರ್ತೆಯನ್ನು ಸಾರುವುದನ್ನು ಒಳಗೊಂಡು ಸ್ತ್ರೀಯರಿಗೆ ಲಭ್ಯವಿದ್ದ ಸುಯೋಗಗಳಿಗಾಗಿ ಅವರು ಕೃತಜ್ಞರಾಗಿದ್ದರು. ಇಂದು ಸಹ, ಹುರುಪಿನ ಅಭಿಷಿಕ್ತ ಸಹೋದರಿಯರು ನೇಮಿತ ಹಿರಿಯರು ಅಭಿಷಿಕ್ತರಾಗಿರಲಿ, ಇಲ್ಲದಿರಲಿ, ಅದೇ ರೀತಿಯ ದೀನ ಮನೋಭಾವವನ್ನು ತೋರಿಸುತ್ತಾರೆ.
15. ಪ್ರಥಮ ಶತಮಾನದಲ್ಲಿ, ಆಧ್ಯಾತ್ಮಿಕ ಆಹಾರದ ಮುಖ್ಯ ಮೂಲಗಳಲ್ಲಿ ಒಂದು ಯಾವುದಾಗಿತ್ತು, ಮತ್ತು ಅದನ್ನು ಒದಗಿಸುವುದರಲ್ಲಿ ಯಾರು ನಾಯಕತ್ವ ವಹಿಸಿದರು?
15 ಒಂದನೆಯ ಶತಮಾನದಲ್ಲಿ ಕೊಡಲ್ಪಡುತ್ತಿದ್ದ ಮೂಲಭೂತ ಆಧ್ಯಾತ್ಮಿಕ ಆಹಾರವು, ಅಪೊಸ್ತಲರು ಮತ್ತು ನಾಯಕತ್ವ ವಹಿಸುತ್ತಿದ್ದ ಇತರ ಶಿಷ್ಯರ ಬರವಣಿಗೆಯ ಮೂಲಕ ನೇರವಾಗಿ ಬರುತ್ತಿತ್ತು. ಅವರು ಬರೆದಂಥ ಈ ಪತ್ರಗಳನ್ನು—ವಿಶೇಷವಾಗಿ, ಈಗ ಕ್ರೈಸ್ತ ಗ್ರೀಕ್ ಶಾಸ್ತ್ರದಲ್ಲಿರುವ 27 ಪ್ರೇರಿತ ಪುಸ್ತಕಗಳ ಮಧ್ಯೆ ಇರುವ ಪತ್ರಗಳನ್ನು—ಸಭೆಗಳಲ್ಲಿ ಚಲಾವಣೆ ಮಾಡಲಾಗುತ್ತಿದ್ದು, ಸ್ಥಳಿಕ ಹಿರಿಯರ ಬೋಧನೆಗೆ ಅವು ಆಧಾರವಾಗಿದ್ದವು ಎಂಬುದರಲ್ಲಿ ಸಂದೇಹವಿಲ್ಲ. ಈ ವಿಧದಲ್ಲಿ, ಆ ಆಳಿನ ಪ್ರತಿನಿಧಿಗಳು ಯಥಾರ್ಥವಂತ ಕ್ರೈಸ್ತರಿಗೆ ಪೌಷ್ಟಿಕವಾದ ಆಧ್ಯಾತ್ಮಿಕ ಆಹಾರವನ್ನು ಹಂಚಿದರು. ಹೀಗೆ ಪ್ರಥಮ ಶತಮಾನದ ಆಳು ವರ್ಗವು ತನ್ನ ನೇಮಕವನ್ನು ನಂಬಿಗಸ್ತಿಕೆಯಿಂದ ಪೂರೈಸಿತು.
ಆ “ಆಳು”—19 ಶತಕಗಳ ಅನಂತರ
16, 17. ಇಸವಿ 1914ರ ವರೆಗಿನ ವರ್ಷಗಳಲ್ಲಿ ತನ್ನ ನೇಮಕವನ್ನು ಪೂರೈಸುವುದರಲ್ಲಿ ಆಳು ವರ್ಗವು ಹೇಗೆ ನಂಬಿಗಸ್ತಿಕೆಯನ್ನು ತೋರಿಸಿಕೊಟ್ಟಿತು?
16 ಇಂದಿನ ಕುರಿತಾಗಿ ಏನು? ಯೇಸುವಿನ ಸಾನ್ನಿಧ್ಯವು 1914ರಲ್ಲಿ ಆರಂಭಗೊಂಡಾಗ, ಅವನು ಹೊತ್ತು ಹೊತ್ತಿಗೆ ನಂಬಿಗಸ್ತಿಕೆಯಿಂದ ಆಹಾರವನ್ನು ಬಡಿಸುವ ಅಭಿಷಿಕ್ತ ಕ್ರೈಸ್ತರ ಗುಂಪೊಂದನ್ನು ಕಂಡುಕೊಂಡನೊ? ನಿಶ್ಚಯವಾಗಿಯೂ ಕಂಡುಕೊಂಡನು. ಈ ಗುಂಪು ಒಳ್ಳೆಯ ಫಲವನ್ನು ಫಲಿಸುತ್ತಿದ್ದ ಕಾರಣ ಅದನ್ನು ಸ್ಪಷ್ಟವಾಗಿ ಗುರುತಿಸಸಾಧ್ಯವಿತ್ತು. (ಮತ್ತಾಯ 7:20) ಈ ಗುರುತಿಸುವಿಕೆಯು ಸರಿಯೆಂಬುದನ್ನು ಇತಿಹಾಸವು ಸಾಬೀತುಪಡಿಸುತ್ತದೆ.
17 ಯೇಸುವಿನ ಬರೋಣದ ಸಮಯದಲ್ಲಿ, ಸುಮಾರು 5,000 ಮಂದಿ ಮನೆಯವರು ಬೈಬಲ್ ಸತ್ಯವನ್ನು ಹಬ್ಬಿಸುವುದರಲ್ಲಿ ಕಾರ್ಯಮಗ್ನರಾಗಿದ್ದರು. ಆಗ ಇದ್ದ ಕೆಲಸಗಾರರು ಕೊಂಚ ಮಂದಿಯಾಗಿದ್ದರೂ, ಈ ಆಳು ಸುವಾರ್ತೆಯನ್ನು ಹಬ್ಬಿಸಲು ಚಾತುರ್ಯಭರಿತವಾದ ಅನೇಕ ವಿಧಾನಗಳನ್ನು ಉಪಯೋಗಿಸಿದನು. (ಮತ್ತಾಯ 9:38) ದೃಷ್ಟಾಂತಕ್ಕೆ, ಬೈಬಲ್ ವಿಷಯಗಳ ಮೇಲೆ ಬರೆಯಲ್ಪಟ್ಟ ಪ್ರಸಂಗಗಳನ್ನು ಸುಮಾರು 2,000 ವಾರ್ತಾಪತ್ರಗಳಲ್ಲಿ ಪ್ರಕಟಿಸುವಂತೆ ಏರ್ಪಡಿಸಲಾಯಿತು. ಹೀಗೆ ಒಂದೇ ಸಮಯದಲ್ಲಿ ದೇವರ ವಾಕ್ಯದ ಸತ್ಯವು ಹತ್ತಾರು ಸಾವಿರ ಓದುಗರಿಗೆ ತಲುಪಿತು. ಇದಕ್ಕೆ ಕೂಡಿಸಿ, ವರ್ಣಫಲಕ ಮತ್ತು ಚಲನಚಿತ್ರಗಳನ್ನು ಜೋಡಿಸಿರುವ ಎಂಟು ತಾಸುಗಳ ಕಾರ್ಯಕ್ರಮವನ್ನು ತಯಾರಿಸಲಾಯಿತು. ಈ ಕೌಶಲಭರಿತ ಪ್ರದರ್ಶನದ ಫಲಿತಾಂಶವಾಗಿ, ಸೃಷ್ಟಿಯ ಆರಂಭದಿಂದ ಹಿಡಿದು ಕ್ರಿಸ್ತನ ಸಹಸ್ರ ವರುಷಗಳ ಆಳಿಕೆಯ ವರೆಗಿನ ಬೈಬಲಿನ ಸಂದೇಶವು ಮೂರು ಭೂಖಂಡಗಳಲ್ಲಿ 90 ಲಕ್ಷಕ್ಕಿಂತಲೂ ಹೆಚ್ಚು ಜನರಿಗೆ ಪ್ರಕಟಪಡಿಸಲ್ಪಟ್ಟಿತು. ಉಪಯೋಗಿಸಲ್ಪಟ್ಟ ಇನ್ನೊಂದು ಮಾರ್ಗವು ಮುದ್ರಿತ ಸಾಹಿತ್ಯವಾಗಿತ್ತು. ಉದಾಹರಣೆಗೆ 1914ರಲ್ಲಿ, ಈ ಪತ್ರಿಕೆಯ 50,000 ಪ್ರತಿಗಳು ಪ್ರಕಾಶಿಸಲ್ಪಟ್ಟವು.
18. ಯೇಸು ಆ ಆಳನ್ನು ತನ್ನ ಎಲ್ಲ ಆಸ್ತಿಯ ಮೇಲೆ ಯಾವಾಗ ನೇಮಿಸಿದನು, ಮತ್ತು ಏಕೆ?
18 ಹೌದು, ಯಜಮಾನನು ಬಂದಾಗ, ತನ್ನ ನಂಬಿಗಸ್ತ ಆಳು ಮನೆಯವರಿಗೆ ಶ್ರದ್ಧಾಪೂರ್ವಕವಾಗಿ ಆಹಾರವನ್ನು ಕೊಡುತ್ತಿದ್ದಾನೆಂಬುದನ್ನೂ ಸುವಾರ್ತೆಯನ್ನು ಸಾರುತ್ತಿದ್ದಾನೆಂಬುದನ್ನೂ ಕಂಡುಕೊಂಡನು. ಈಗ ಇನ್ನೂ ಹೆಚ್ಚಿನ ಜವಾಬ್ದಾರಿಗಳು ಈ ಆಳಿಗಾಗಿ ಕಾದಿದ್ದವು. ಯೇಸು ಹೇಳಿದ್ದು: “ಅಂಥವನನ್ನು ಅವನು ತನ್ನ ಎಲ್ಲಾ ಆಸ್ತಿಯ ಮೇಲೆ ನೇಮಿಸುವನು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ.” (ಮತ್ತಾಯ 24:47) ಯೇಸು ಇದನ್ನು 1919ರಲ್ಲಿ, ಆ ಆಳು ಪರೀಕ್ಷೆಯ ಒಂದು ಅವಧಿಯನ್ನು ದಾಟಿದ ಬಳಿಕ ಮಾಡಿದನು. ಆದರೆ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಇನ್ನೂ ಹೆಚ್ಚಿನ ಜವಾಬ್ದಾರಿಗಳನ್ನು ಪಡೆದದ್ದೇಕೆ? ಏಕೆಂದರೆ ಯಜಮಾನನಿಗೆ ಇನ್ನೂ ಹೆಚ್ಚಿನ ಆಸ್ತಿ ದೊರೆತಿತ್ತು. ಯೇಸುವಿಗೆ 1914ರಲ್ಲಿ ರಾಜತ್ವವು ಕೊಡಲ್ಪಟ್ಟಿತು.
19. ‘ಮಹಾಸಮೂಹದ’ ಆಧ್ಯಾತ್ಮಿಕ ಆವಶ್ಯಕತೆಗಳನ್ನು ಹೇಗೆ ನೋಡಿಕೊಳ್ಳಲಾಗಿದೆ ಎಂಬುದನ್ನು ವಿವರಿಸಿರಿ.
19 ಹೊಸದಾಗಿ ಕಿರೀಟಧಾರಿಯಾದ ಈ ಯಜಮಾನನು ತನ್ನ ನಂಬಿಗಸ್ತ ಆಳನ್ನು ಯಾವುದರ ಮೇಲೆ ನೇಮಿಸಿದನೊ ಆ ಆಸ್ತಿ ಯಾವುದಾಗಿತ್ತು? ಭೂಮಿಯ ಮೇಲೆ ಅವನಿಗೆ ಸೇರಿರುವ ಎಲ್ಲ ಆಧ್ಯಾತ್ಮಿಕ ವಿಷಯಗಳೇ ಅವು. ಉದಾಹರಣೆಗೆ, 1914ರಲ್ಲಿ ಕ್ರಿಸ್ತನು ಸಿಂಹಾಸನಾರೂಢನಾಗಿ ಎರಡು ದಶಕಗಳು ಕಳೆದ ನಂತರ, “ಬೇರೆ ಕುರಿ”ಗಳ ಒಂದು “ಮಹಾಸಮೂಹ”ವನ್ನು ಗುರುತಿಸಲಾಯಿತು. (ಪ್ರಕಟನೆ 7:9; ಯೋಹಾನ 10:16) ಇವರು ‘ದೇವರ ಇಸ್ರಾಯೇಲ್ಯರ’ ಅಭಿಷಿಕ್ತ ಸದಸ್ಯರಾಗಿರದೆ, ಯೆಹೋವನನ್ನು ಪ್ರೀತಿಸಿದ ಮತ್ತು ಅಭಿಷಿಕ್ತರಂತೆಯೇ ಸೇವೆ ಮಾಡಲು ಇಚ್ಛಿಸಿದ, ಭೂನಿರೀಕ್ಷೆಯುಳ್ಳ ಯಥಾರ್ಥವಂತ ಸ್ತ್ರೀಪುರುಷರಾಗಿದ್ದರು. ಅವರು ಈ ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿಗೆ’ ಕಾರ್ಯತಃ, “ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ” ಎಂದು ಹೇಳಿದರು. (ಜೆಕರ್ಯ 8:23) ಈ ಹೊಸದಾಗಿ ಸ್ನಾತರಾಗಿದ್ದ ಕ್ರೈಸ್ತರು, ಅಭಿಷಿಕ್ತ ಮನೆಯವರು ಭಾಗಿಗಳಾಗುತ್ತಿದ್ದ ಅದೇ ಪೌಷ್ಟಿಕವಾದ ಆಧ್ಯಾತ್ಮಿಕ ಆಹಾರವನ್ನು ತೆಗೆದುಕೊಳ್ಳುತ್ತಿದ್ದರು ಮತ್ತು ಈ ಎರಡೂ ವರ್ಗಗಳು ಅಂದಿನಿಂದ ಒಂದೇ ಆಧ್ಯಾತ್ಮಿಕ ಮೇಜಿನಲ್ಲಿ ಊಟಮಾಡುತ್ತಿವೆ. ಇದು ‘ಮಹಾಸಮೂಹದ’ ಸದಸ್ಯರಿಗೆ ಎಂತಹ ಒಂದು ಆಶೀರ್ವಾದವಾಗಿರುತ್ತದೆ!
20. ಕರ್ತನ ಆಸ್ತಿಯನ್ನು ಹೆಚ್ಚಿಸುವುದರಲ್ಲಿ “ಮಹಾಸಮೂಹವು” ಯಾವ ಪಾತ್ರ ವಹಿಸಿದೆ?
20 ‘ಮಹಾಸಮೂಹದ’ ಸದಸ್ಯರು ಸುವಾರ್ತೆ ಸಾರುವವರಾಗಿ ಅಭಿಷಿಕ್ತ ಆಳು ವರ್ಗದೊಂದಿಗೆ ಸಂತೋಷದಿಂದ ಜೊತೆಗೂಡಿದರು. ಅವರು ಸಾರುತ್ತಾ ಹೋದಂತೆ, ಯಜಮಾನನ ಭೂಆಸ್ತಿಯು ವೃದ್ಧಿಯಾಯಿತು, ಮತ್ತು ಇದು ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಜವಾಬ್ದಾರಿಗಳನ್ನು ಹೆಚ್ಚಿಸಿತು. ಸತ್ಯಾನ್ವೇಷಕರ ಸಂಖ್ಯೆ ಅಧಿಕವಾದಂತೆ, ಬೈಬಲ್ ಸಾಹಿತ್ಯಕ್ಕಾಗಿದ್ದ ಬೇಡಿಕೆಯನ್ನು ಪೂರೈಸಲು ಮುದ್ರಣ ಸೌಕರ್ಯಗಳನ್ನು ವಿಕಸಿಸುವುದು ಆವಶ್ಯಕವಾಯಿತು. ಅನೇಕ ದೇಶಗಳಲ್ಲಿ, ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸುಗಳು ಸ್ಥಾಪಿಸಲ್ಪಟ್ಟವು. ಮಿಷನೆರಿಗಳನ್ನು “ಭೂಲೋಕದ ಕಟ್ಟಕಡೆಯ ವರೆಗೂ” ಕಳುಹಿಸಲಾಯಿತು. (ಅ. ಕೃತ್ಯಗಳು 1:8) ಇಸವಿ 1914ರಲ್ಲಿದ್ದ ಸುಮಾರು ಐದು ಸಾವಿರ ಮಂದಿ ಅಭಿಷಿಕ್ತರಿಂದ, ಇಂದು ಯೆಹೋವನ ಸ್ತುತಿಗಾರರ ಸಂಖ್ಯೆ 60 ಲಕ್ಷಗಳನ್ನೂ ಮಿಕ್ಕಿದೆ. ಇವರಲ್ಲಿ ಹೆಚ್ಚಿನವರು “ಮಹಾಸಮೂಹ”ದವರು. ಹೌದು, 1914ರಲ್ಲಿ ಅರಸನ ಪಟ್ಟಾಭಿಷೇಕವಾದ ಬಳಿಕ, ಅವನ ಆಸ್ತಿಯು ಅನೇಕ ಪಟ್ಟು ವೃದ್ಧಿಯಾಗಿದೆ!
21. ನಮ್ಮ ಮುಂದಿನ ಅಧ್ಯಯನದಲ್ಲಿ ಯಾವ ಎರಡು ಸಾಮ್ಯಗಳನ್ನು ನಾವು ಪರಿಗಣಿಸುವೆವು?
21 ಈ ಎಲ್ಲ ವಿಷಯಗಳು ಆ ಆಳು “ನಂಬಿಗಸ್ತನೂ ವಿವೇಕಿಯೂ” ಆಗಿದೆಯೆಂದು ತೋರಿಸುತ್ತವೆ. ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಕುರಿತು ಮಾತಾಡಿ ಮುಗಿಸಿದ ಕೂಡಲೆ, ಯೇಸು ಆ ಗುಣಗಳನ್ನು ಎತ್ತಿತೋರಿಸುವ ಎರಡು ಸಾಮ್ಯಗಳನ್ನು ತಿಳಿಸಿದನು. ಅದು, ಬುದ್ಧಿವಂತೆಯರೂ ಬುದ್ಧಿಹೀನರೂ ಆದ ಕನ್ಯೆಯರ ಮತ್ತು ತಲಾಂತುಗಳ ಸಾಮ್ಯಗಳಾಗಿತ್ತು. (ಮತ್ತಾಯ 25:1-30) ನಮ್ಮ ಕುತೂಹಲ ಕೆರಳಿಸಲ್ಪಟ್ಟಿರುತ್ತದೆ! ಈ ಸಾಮ್ಯಗಳು ಇಂದು ನಮಗೆ ಯಾವ ಅರ್ಥದಲ್ಲಿವೆ? ಈ ಪ್ರಶ್ನೆಯನ್ನು ನಾವು ಮುಂದಿನ ಲೇಖನದಲ್ಲಿ ಚರ್ಚಿಸುವೆವು.
ನೀವೇನು ನೆನಸುತ್ತೀರಿ?
• “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಯಾರಿಂದ ರಚಿತವಾಗಿದೆ?
• “ಮನೆಯವರು” ಯಾರು?
• ಕರ್ತನ ಎಲ್ಲ ಆಸ್ತಿಯ ಮೇಲೆ ನಂಬಿಗಸ್ತ ಆಳನ್ನು ನೇಮಿಸಲಾದದ್ದು ಯಾವಾಗ, ಮತ್ತು ಆಗ ಏಕೆ?
• ಇತ್ತೀಚಿನ ದಶಕಗಳಲ್ಲಿ ಕರ್ತನ ಆಸ್ತಿಯನ್ನು ವರ್ಧಿಸಲು ಯಾರು ಸಹಾಯ ಮಾಡಿದ್ದಾರೆ, ಮತ್ತು ಹೇಗೆ?
[ಪುಟ 10ರಲ್ಲಿರುವ ಚಿತ್ರಗಳು]
ಪ್ರಥಮ ಶತಮಾನದ ಆಳು ವರ್ಗವು ತನ್ನ ನೇಮಕವನ್ನು ನಂಬಿಗಸ್ತಿಕೆಯಿಂದ ಪೂರೈಸಿದೆ