ಯೆಹೋವನು ತನ್ನನ್ನು ಶ್ರದ್ಧಾಪೂರ್ವಕವಾಗಿ “ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ”
“ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ.”—ಇಬ್ರಿಯ 11:6.
1, 2. ಯೆಹೋವನ ಸೇವಕರಲ್ಲಿ ಕೆಲವರು ನಕಾರಾತ್ಮಕ ಅನಿಸಿಕೆಗಳೊಂದಿಗೆ ಹೋರಾಟ ನಡೆಸಬಹುದೇಕೆ?
“ಸುಮಾರು 30 ವರ್ಷಗಳಿಂದ ನಾನು ಯೆಹೋವನ ಸಾಕ್ಷಿಯಾಗಿದ್ದೇನೆ, ಆದರೆ ನಾನು ಹೀಗೆ ಕರೆಯಲ್ಪಡಲು ಅರ್ಹಳು ಎಂದು ನನಗೆಂದೂ ಅನಿಸಿಲ್ಲ. ನಾನು ಪಯನೀಯರ್ ಸೇವೆಯನ್ನು ಮಾಡಿದ್ದೇನೆ ಮತ್ತು ಅನೇಕ ವಿಶೇಷ ನೇಮಕಗಳನ್ನು ಪಡೆದಿದ್ದೆನಾದರೂ, ಇದ್ಯಾವುದೂ ನನ್ನನ್ನು ಒಬ್ಬ ಸಾಕ್ಷಿಯಾಗಿ ಕರೆಸಿಕೊಳ್ಳಲು ನಾನು ಅರ್ಹಳಾಗಿದ್ದೇನೆ ಎಂದು ನಿಜವಾಗಿಯೂ ನಂಬುವಂತೆ ಮಾಡಲು ಶಕ್ತವಾಗಿಲ್ಲ” ಎಂದು ಬಾರ್ಬ್ರ ಹೇಳುತ್ತಾರೆ.a ಕೀಥ್ ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾನೆ. ಅವನು ಹೇಳುವುದು: “ಕೆಲವೊಮ್ಮೆ ನನಗೆ ಅನರ್ಹ ಅನಿಸಿಕೆಯಾಗಿದೆ, ಏಕೆಂದರೆ ಯೆಹೋವನ ಸೇವಕರಿಗೆ ಸಂತೋಷಿಸಲು ಅನೇಕ ಕಾರಣಗಳಿವೆಯಾದರೂ ನಾನು ಮಾತ್ರ ಸಂತೋಷದಿಂದಿರಲಿಲ್ಲ. ಇದು ದೋಷಿ ಭಾವನೆಗಳಿಗೆ ನಡಿಸಿತು ಮತ್ತು ಇದರಿಂದಾಗಿ ಸನ್ನಿವೇಶವು ಇನ್ನಷ್ಟು ಹದಗೆಟ್ಟಿತು.”
2 ಗತಕಾಲದ ಮತ್ತು ಇಂದಿರುವ ಯೆಹೋವನ ನಂಬಿಗಸ್ತ ಸೇವಕರಲ್ಲಿ ಅನೇಕರು ತದ್ರೀತಿಯ ಅನಿಸಿಕೆಗಳೊಂದಿಗೆ ಹೋರಾಟ ನಡೆಸಿದ್ದಾರೆ. ನಿಮಗೆ ಕೆಲವೊಮ್ಮೆ ಈ ರೀತಿ ಅನಿಸಿದೆಯೊ? ನಿಮ್ಮ ಜೊತೆ ವಿಶ್ವಾಸಿಗಳು ಜೀವನದಲ್ಲಿ ಆನಂದಿಸುತ್ತಾ ನಿಶ್ಚಿಂತರಾಗಿ ಮತ್ತು ಸಂತೋಷದಿಂದ ಬದುಕುತ್ತಿರುವಾಗ, ನೀವು ಅನೇಕ ಸಮಸ್ಯೆಗಳ ದಾಳಿಗೆ ತುತ್ತಾಗಿರಬಹುದು. ಇದರ ಫಲಿತಾಂಶವಾಗಿ, ‘ನನಗೆ ಯೆಹೋವನ ಅಂಗೀಕಾರವಿಲ್ಲ ಮತ್ತು ನಾನು ಆತನ ಗಮನಕ್ಕೆ ಪಾತ್ರನಲ್ಲ’ ಎಂಬ ಅನಿಸಿಕೆ ನಿಮಗಾಗಬಹುದು. ಆದರೆ ಇದು ನಿಜ ಎಂದು ನೀವು ಅವಸರದಿಂದ ತೀರ್ಮಾನಿಸದಿರಿ. ಬೈಬಲ್ ನಮಗೆ ಹೀಗೆ ಆಶ್ವಾಸನೆ ಕೊಡುತ್ತದೆ: “[ಯೆಹೋವನು] ಕುಗ್ಗಿಹೋದವನ ದುರವಸ್ಥೆಯನ್ನು ತಿರಸ್ಕರಿಸಲಿಲ್ಲ, ಅದಕ್ಕೆ ಅಸಹ್ಯಪಡಲಿಲ್ಲ; ತನ್ನ ಮುಖವನ್ನು ಅವನಿಗೆ ಮರೆಮಾಡದೆ ಅವನ ಪ್ರಾರ್ಥನೆಗೆ ಕಿವಿಗೊಟ್ಟನು.” (ಕೀರ್ತನೆ 22:24) ಮೆಸ್ಸೀಯನ ಕುರಿತಾದ ಈ ಪ್ರವಾದನಾ ಮಾತುಗಳು, ಯೆಹೋವನು ತನ್ನ ನಂಬಿಗಸ್ತ ಜನರಿಗೆ ಕಿವಿಗೊಡುತ್ತಾನೆ ಮಾತ್ರವಲ್ಲ ಅವರಿಗೆ ಪ್ರತಿಫಲವನ್ನೂ ಕೊಡುತ್ತಾನೆ ಎಂಬುದನ್ನು ತೋರಿಸುತ್ತವೆ.
3. ಈ ವಿಷಯಗಳ ವ್ಯವಸ್ಥೆಯ ಒತ್ತಡಗಳಿಂದ ನಾವು ವಿಮುಕ್ತರಲ್ಲವೇಕೆ?
3 ಈ ವಿಷಯಗಳ ವ್ಯವಸ್ಥೆಯ ಒತ್ತಡಗಳಿಂದ ಯಾರೊಬ್ಬರೂ—ಯೆಹೋವನ ಜನರು ಸಹ—ವಿಮುಕ್ತರಲ್ಲ. ಯೆಹೋವನ ಪ್ರಮುಖ ವಿರೋಧಿಯಾಗಿರುವ ಪಿಶಾಚನಾದ ಸೈತಾನನಿಂದ ಆಳಲ್ಪಡುತ್ತಿರುವಂಥ ಒಂದು ಲೋಕದಲ್ಲಿ ನಾವು ಜೀವಿಸುತ್ತಿದ್ದೇವೆ. (2 ಕೊರಿಂಥ 4:4; 1 ಯೋಹಾನ 5:19) ವಾಸ್ತವದಲ್ಲಿ, ಯೆಹೋವನ ಸೇವಕರು ಅದ್ಭುತಕರವಾದ ರೀತಿಯಲ್ಲಿ ಸಂರಕ್ಷಿಸಲ್ಪಡುವುದಕ್ಕೆ ಬದಲಾಗಿ ಸೈತಾನನ ಪ್ರಮುಖ ಗುರಿಹಲಗೆಯಾಗಿದ್ದಾರೆ. (ಯೋಬ 1:7-12; ಪ್ರಕಟನೆ 2:10) ಆದುದರಿಂದ, ದೇವರ ನೇಮಿತ ಸಮಯದ ವರೆಗೆ ನಾವು, ಯೆಹೋವನು ನಮ್ಮ ಬಗ್ಗೆ ಕಾಳಜಿ ವಹಿಸುತ್ತಾನೆ ಎಂಬ ಭರವಸೆಯಿಂದ “ಉಪದ್ರವದಲ್ಲಿ ಸೈರಣೆಯುಳ್ಳವರಾಗಿ” ಮತ್ತು “ಬೇಸರಗೊಳ್ಳದೆ ಪ್ರಾರ್ಥನೆ” ಮಾಡುವವರಾಗಿ ಇರುವ ಅಗತ್ಯವಿದೆ. (ರೋಮಾಪುರ 12:12) ನಮ್ಮ ದೇವರಾದ ಯೆಹೋವನು ನಮ್ಮನ್ನು ಪ್ರೀತಿಸುವುದಿಲ್ಲ ಎಂದು ನಾವು ಆಲೋಚಿಸುವಂತೆ ಮಾಡಲು ಈ ಲೋಕವು ತರುವ ಒತ್ತಡಗಳಿಗೆ ಮಣಿಯಬಾರದು!
ತಾಳ್ಮೆಯ ಕುರಿತಾದ ಪುರಾತನ ಉದಾಹರಣೆಗಳು
4. ಸಂಕಟಕರ ಸನ್ನಿವೇಶಗಳನ್ನು ತಾಳಿಕೊಂಡ ಯೆಹೋವನ ನಂಬಿಗಸ್ತ ಸೇವಕರಲ್ಲಿ ಕೆಲವರ ಉದಾಹರಣೆಗಳನ್ನು ಕೊಡಿ.
4 ಯೆಹೋವನ ಅನೇಕ ಪುರಾತನ ಸೇವಕರು ಸಂಕಟಕರ ಸನ್ನಿವೇಶಗಳನ್ನು ತಾಳಿಕೊಳ್ಳಬೇಕಾಗಿತ್ತು. ಉದಾಹರಣೆಗೆ, ಹನ್ನಳಿಗೆ ಮಕ್ಕಳಿರದಿದ್ದ ಕಾರಣ ಅವಳು “ಬಹುದುಃಖದಿಂದ” ಇದ್ದಳು; ಅವಳು ಮಕ್ಕಳಿಲ್ಲದ ಸ್ಥಿತಿಯನ್ನು ದೇವರಿಂದ ಮರೆಯಲ್ಪಡುವುದಕ್ಕೆ ಸಮಾನವಾದದ್ದಾಗಿ ನೆನಸಿದಳು. (1 ಸಮುವೇಲ 1:9-11) ಕೊಲೆಗಡುಕಿಯಾಗಿದ್ದ ರಾಣಿ ಈಜೆಬೆಲಳಿಂದ ಎಲೀಯನು ಬೆನ್ನಟ್ಟಲ್ಪಡುತ್ತಿದ್ದಾಗ, ಅವನು ತುಂಬ ಭಯಗೊಂಡನು ಮತ್ತು ಯೆಹೋವನಿಗೆ ಹೀಗೆ ಪ್ರಾರ್ಥಿಸಿದನು: “ಯೆಹೋವನೇ, . . . ನನ್ನ ಪ್ರಾಣವನ್ನು ತೆಗೆದುಬಿಡು; ನಾನು ನನ್ನ ಪಿತೃಗಳಿಗಿಂತ ಉತ್ತಮನಲ್ಲ.” (1 ಅರಸುಗಳು 19:4) ಮತ್ತು ಅಪೊಸ್ತಲ ಪೌಲನು “ಒಳ್ಳೇದನ್ನು ಮಾಡಬೇಕೆಂದಿರುವ ನನಗೆ ಕೆಟ್ಟದ್ದೇ ಸಿದ್ಧವಾಗಿದೆ” ಎಂದು ಒಪ್ಪಿಕೊಂಡಾಗ, ತನ್ನ ಅಪರಿಪೂರ್ಣತೆಯ ವಿಷಯದಲ್ಲಿ ಅವನು ತುಂಬ ಸಂಕಟಪಟ್ಟಿದ್ದಿರಬೇಕು. ಅವನು ಕೂಡಿಸಿ ಹೇಳಿದ್ದು: “ಅಯ್ಯೋ, ನಾನು ಎಂಥ ದುರವಸ್ಥೆಯಲ್ಲಿ ಬಿದ್ದ ಮನುಷ್ಯನು!”—ರೋಮಾಪುರ 7:21-24.
5. (ಎ) ಹನ್ನ, ಎಲೀಯ ಮತ್ತು ಪೌಲರು ಹೇಗೆ ಪ್ರತಿಫಲವನ್ನು ಪಡೆದುಕೊಂಡರು? (ಬಿ) ನಾವು ನಕಾರಾತ್ಮಕ ಭಾವನೆಗಳೊಂದಿಗೆ ಹೋರಾಟ ನಡೆಸುವಲ್ಲಿ ದೇವರ ವಾಕ್ಯದಿಂದ ಯಾವ ಸಾಂತ್ವನವನ್ನು ಪಡೆದುಕೊಳ್ಳಸಾಧ್ಯವಿದೆ?
5 ಹನ್ನ, ಎಲೀಯ ಮತ್ತು ಪೌಲರು ಯೆಹೋವನ ಸೇವೆಯಲ್ಲಿ ತಾಳ್ಮೆಯಿಂದ ಮುಂದುವರಿದರು ಹಾಗೂ ಆತನು ಅವರಿಗೆ ಹೇರಳವಾದ ಪ್ರತಿಫಲವನ್ನು ಕೊಟ್ಟನು ಎಂಬುದು ನಮಗೆ ಗೊತ್ತು. (1 ಸಮುವೇಲ 1:20; 2:21; 1 ಅರಸುಗಳು 19:5-18; 2 ತಿಮೊಥೆಯ 4:8) ಇದಲ್ಲದೆ, ಅವರು ದುಃಖ, ಹತಾಶೆ ಮತ್ತು ಭಯವನ್ನೂ ಸೇರಿಸಿ ಎಲ್ಲ ರೀತಿಯ ಮಾನವ ಭಾವನೆಗಳೊಂದಿಗೆ ಹೋರಾಟ ನಡೆಸಿದರು. ಆದುದರಿಂದ, ಕೆಲವೊಮ್ಮೆ ನಮ್ಮಲ್ಲಿ ನಕಾರಾತ್ಮಕ ಅನಿಸಿಕೆಗಳು ಉಂಟಾಗುವಲ್ಲಿ ಅದು ನಮ್ಮನ್ನು ಆಶ್ಚರ್ಯಗೊಳಿಸಬಾರದು. ಆದರೂ, ಜೀವನದ ಚಿಂತೆಗಳು ಯೆಹೋವನು ನಿಮ್ಮನ್ನು ನಿಜವಾಗಿಯೂ ಪ್ರೀತಿಸುತ್ತಿದ್ದಾನೋ ಎಂದು ಆಲೋಚಿಸುವಂತೆ ಮಾಡುವಲ್ಲಿ ನೀವೇನು ಮಾಡಸಾಧ್ಯವಿದೆ? ನೀವು ದೇವರ ವಾಕ್ಯದಿಂದ ಸಾಂತ್ವನವನ್ನು ಪಡೆದುಕೊಳ್ಳಸಾಧ್ಯವಿದೆ. ಉದಾಹರಣೆಗೆ, ಹಿಂದಿನ ಲೇಖನದಲ್ಲಿ ನಾವು, ಯೆಹೋವನು ‘ನಿಮ್ಮ ತಲೇಕೂದಲುಗಳನ್ನು ಸಹ’ ಎಣಿಸಿದ್ದಾನೆ ಎಂಬ ಯೇಸುವಿನ ಹೇಳಿಕೆಯ ಕುರಿತು ಚರ್ಚಿಸಿದೆವು. (ಮತ್ತಾಯ 10:30) ಆ ಉತ್ತೇಜನದಾಯಕ ಮಾತುಗಳು, ಯೆಹೋವನು ತನ್ನ ಪ್ರತಿಯೊಬ್ಬ ಸೇವಕರ ವಿಷಯದಲ್ಲಿ ಆಳವಾಗಿ ಆಸಕ್ತನಾಗಿದ್ದಾನೆ ಎಂಬುದನ್ನು ಸೂಚಿಸುತ್ತವೆ. ಗುಬ್ಬಿಗಳ ಕುರಿತಾದ ಯೇಸುವಿನ ದೃಷ್ಟಾಂತವನ್ನೂ ಜ್ಞಾಪಿಸಿಕೊಳ್ಳಿರಿ. ನೆಲಕ್ಕೆ ಬೀಳುವ ಆ ಚಿಕ್ಕ ಪಕ್ಷಿಗಳಲ್ಲಿ ಒಂದನ್ನು ಸಹ ಯೆಹೋವನು ಗಮನಿಸುತ್ತಾನಾದಲ್ಲಿ, ನಿಮ್ಮ ಸಂಕಟಕರ ಸ್ಥಿತಿಯನ್ನೂ ಆತನು ನಿಶ್ಚಯವಾಗಿಯೂ ಗಮನಿಸುತ್ತಾನಲ್ಲವೆ?
6. ನಕಾರಾತ್ಮಕ ಅನಿಸಿಕೆಗಳೊಂದಿಗೆ ಹೋರಾಡುವವರಿಗೆ ಬೈಬಲು ಹೇಗೆ ಸಾಂತ್ವನದ ಮೂಲವಾಗಿರಸಾಧ್ಯವಿದೆ?
6 ಅಪರಿಪೂರ್ಣ ಮಾನವರಾದ ನಾವು, ಸರ್ವಶಕ್ತ ಸೃಷ್ಟಿಕರ್ತನಾಗಿರುವ ಯೆಹೋವ ದೇವರ ದೃಷ್ಟಿಯಲ್ಲಿ ನಿಜವಾಗಿಯೂ ಅಮೂಲ್ಯರಾಗಿರುವ ಸಾಧ್ಯತೆ ಇದೆಯೊ? ಹೌದು! ವಾಸ್ತವದಲ್ಲಿ, ಬೈಬಲಿನಲ್ಲಿರುವ ಅನೇಕ ಭಾಗಗಳು ಈ ಆಶ್ವಾಸನೆಯನ್ನು ನೀಡುತ್ತವೆ. ಈ ಬೈಬಲ್ ಭಾಗಗಳ ಕುರಿತು ಆಳವಾಗಿ ಚಿಂತಿಸುವಾಗ, ಕೀರ್ತನೆಗಾರನ ಮಾತುಗಳನ್ನು ನಾವು ಪ್ರತಿಧ್ವನಿಸಸಾಧ್ಯವಿದೆ. ಅವನಂದದ್ದು: “ನನ್ನಲ್ಲಿ ಅನೇಕ ಚಿಂತೆಗಳಿರುವಾಗ ನಿನ್ನ ಸಂತೈಸುವಿಕೆಯಿಂದಲೇ ನನ್ನ ಪ್ರಾಣಕ್ಕೆ ಸಂತೋಷವುಂಟಾಗುತ್ತದೆ.” (ಕೀರ್ತನೆ 94:19) ದೇವರ ವಾಕ್ಯದಲ್ಲಿರುವ ಸಂತೈಸುವ ಹೇಳಿಕೆಗಳಲ್ಲಿ ಕೆಲವನ್ನು ನಾವು ಪರಿಗಣಿಸೋಣ. ಇವು ದೇವರು ನಮ್ಮನ್ನು ಅಮೂಲ್ಯರನ್ನಾಗಿ ಕಾಣುತ್ತಾನೆ ಮತ್ತು ನಾವು ಆತನ ಚಿತ್ತವನ್ನು ಮಾಡುತ್ತಾ ಮುಂದುವರಿಯುವಾಗ ಆತನು ನಮಗೆ ಪ್ರತಿಫಲವನ್ನು ಕೊಡುವನು ಎಂಬುದನ್ನು ಹೆಚ್ಚಿನ ಮಟ್ಟಿಗೆ ಅರ್ಥಮಾಡಿಕೊಳ್ಳಲು ನಮಗೆ ಸಹಾಯಮಾಡುತ್ತವೆ.
ಯೆಹೋವನ “ವಿಶೇಷ ಸೊತ್ತು”
7. ಭ್ರಷ್ಟಗೊಂಡಿದ್ದ ಜನಾಂಗಕ್ಕೆ ಮಲಾಕಿಯನ ಮೂಲಕ ಯೆಹೋವನು ಯಾವ ಉತ್ತೇಜನದಾಯಕ ಪ್ರವಾದನೆಯನ್ನು ಕೊಟ್ಟನು?
7 ಸಾ.ಶ.ಪೂ. ಐದನೆಯ ಶತಮಾನದಲ್ಲಿ ಯೆಹೂದ್ಯರ ನಡುವೆ ಶೋಚನೀಯ ಸ್ಥಿತಿಯು ಅಸ್ತಿತ್ವದಲ್ಲಿತ್ತು. ಯಾಜಕರು ಅನರ್ಹವಾದ ಪ್ರಾಣಿಗಳನ್ನು ಸ್ವೀಕರಿಸಿ, ಯೆಹೋವನ ಯಜ್ಞವೇದಿಯ ಮೇಲೆ ಯಜ್ಞಗಳಾಗಿ ಅರ್ಪಿಸುತ್ತಿದ್ದರು. ನ್ಯಾಯಸ್ಥಾಪಕರು ಪಕ್ಷಪಾತವನ್ನು ತೋರಿಸುತ್ತಿದ್ದರು. ಮಾಟ, ಸುಳ್ಳು, ಮೋಸ ಮತ್ತು ವ್ಯಭಿಚಾರವು ವ್ಯಾಪಕವಾಗಿ ಹಬ್ಬಿತ್ತು. (ಮಲಾಕಿಯ 1:8; 2:9; 3:5) ಭಂಡತನದಿಂದ ಭ್ರಷ್ಟಗೊಂಡಿದ್ದ ಈ ಜನಾಂಗಕ್ಕೆ ಮಲಾಕಿಯನು ವಿಸ್ಮಯಕರ ಪ್ರವಾದನೆಯನ್ನು ತಿಳಿಯಪಡಿಸಿದನು. ಸಕಾಲದಲ್ಲಿ, ಯೆಹೋವನು ತನ್ನ ಜನರನ್ನು ಅಂಗೀಕೃತ ಸ್ಥಿತಿಗೆ ತರಲಿದ್ದನು. ನಾವು ಹೀಗೆ ಓದುತ್ತೇವೆ: “ನಾನು ಕಾರ್ಯಸಾಧಿಸುವ ದಿನದಲ್ಲಿ ಅವರು ನನಗೆ ಸ್ವಕೀಯ ಜನರಾಗಿರುವರು [“ಒಂದು ವಿಶೇಷ ಸೊತ್ತು ಆಗಿರುವರು,” NW]; ಒಬ್ಬನು ತನ್ನನ್ನು ಸೇವಿಸುವ ಸ್ವಂತ ಮಗನನ್ನು ಕರುಣಿಸುವಂತೆ ನಾನು ಅವರನ್ನು ಕರುಣಿಸುವೆನು.”—ಮಲಾಕಿಯ 3:17.
8. ಮಲಾಕಿಯ 3:17ನ್ನು ಮಹಾ ಸಮೂಹಕ್ಕೆ ತಾತ್ತ್ವಿಕವಾಗಿ ಅನ್ವಯಿಸಸಾಧ್ಯವಿದೆ ಏಕೆ?
8 ಮಲಾಕಿಯನ ಪ್ರವಾದನೆಯು, 1,44,000 ಮಂದಿಯಿಂದ ರಚಿತವಾಗಿರುವ ಆತ್ಮಿಕ ಜನಾಂಗವಾದ ಆತ್ಮಾಭಿಷಿಕ್ತ ಕ್ರೈಸ್ತರ ಸಂಬಂಧದಲ್ಲಿ ಆಧುನಿಕ ದಿನದ ನೆರವೇರಿಕೆಯನ್ನು ಹೊಂದಿದೆ. ವಾಸ್ತವದಲ್ಲಿ ಆ ಜನಾಂಗವು ಯೆಹೋವನಿಗೆ “ಒಂದು ವಿಶೇಷ ಸೊತ್ತು” ಅಥವಾ “ಸ್ವಕೀಯ ಪ್ರಜೆ” ಆಗಿದೆ. (1 ಪೇತ್ರ 2:9) ‘ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡು ಸಿಂಹಾಸನದ ಮುಂದೆಯೂ ಯಜ್ಞದ ಕುರಿಯಾದಾತನ ಮುಂದೆಯೂ ನಿಂತಿರುವ’ “ಮಹಾ ಸಮೂಹ”ದವರಿಗೆ ಸಹ ಮಲಾಕಿಯನ ಪ್ರವಾದನೆಯು ಉತ್ತೇಜನದಾಯಕವಾಗಿ ಇರಸಾಧ್ಯವಿದೆ. (ಪ್ರಕಟನೆ 7:4, 9) ಇವರು ಅಭಿಷಿಕ್ತರೊಂದಿಗೆ ಒಬ್ಬನೇ ಕುರುಬನಾಗಿರುವ ಯೇಸು ಕ್ರಿಸ್ತನ ಕೆಳಗೆ ಒಂದೇ ಹಿಂಡಾಗುವರು.—ಯೋಹಾನ 10:16.
9. ಯೆಹೋವನ ಜನರು ಆತನಿಗೆ “ಒಂದು ವಿಶೇಷ ಸೊತ್ತು” ಆಗಿದ್ದಾರೆ ಏಕೆ?
9 ತನ್ನ ಸೇವೆಮಾಡುವ ಆಯ್ಕೆಮಾಡುವವರನ್ನು ಯೆಹೋವನು ಹೇಗೆ ಪರಿಗಣಿಸುತ್ತಾನೆ? ಮಲಾಕಿಯ 3:17ರಲ್ಲಿ ಗಮನಿಸಿದಂತೆ, ಒಬ್ಬ ಪ್ರೀತಿಯ ತಂದೆಯು ತನ್ನ ಮಗನನ್ನು ಹೇಗೆ ಪರಿಗಣಿಸುತ್ತಾನೋ ಹಾಗೆಯೇ ಆತನು ಅವರನ್ನು ಪರಿಗಣಿಸುತ್ತಾನೆ. ಮತ್ತು ಆತನು ತನ್ನ ಜನರನ್ನು “ಒಂದು ವಿಶೇಷ ಸೊತ್ತು” ಎಂದು ವರ್ಣಿಸುವ ಹೃತ್ಪೂರ್ವಕ ಶ್ಲಾಘನೆಯನ್ನು ಗಮನಿಸಿರಿ. ಬೇರೆ ಭಾಷಾಂತರಗಳು ಆ ವಾಕ್ಸರಣಿಯನ್ನು “ನನ್ನ ಸ್ವಂತದ್ದು,” “ನನ್ನ ಅತ್ಯಮೂಲ್ಯ ಆಸ್ತಿ” ಮತ್ತು “ನನ್ನ ಅಮೂಲ್ಯ ರತ್ನ” ಎಂದು ತರ್ಜುಮೆಮಾಡುತ್ತವೆ. ತನ್ನ ಸೇವೆಮಾಡುವವರನ್ನು ಯೆಹೋವನು ಅಷ್ಟು ವಿಶೇಷವಾಗಿ ಏಕೆ ಪರಿಗಣಿಸುತ್ತಾನೆ? ಒಂದು ಕಾರಣವೇನೆಂದರೆ, ಆತನು ಗಣ್ಯತಾ ಮನೋಭಾವವುಳ್ಳ ದೇವರಾಗಿದ್ದಾನೆ. (ಇಬ್ರಿಯ 6:10) ಹೃದಯದಾಳದಿಂದ ತನ್ನ ಸೇವೆಮಾಡುವವರಿಗೆ ಆತನು ಸಮೀಪವಾಗುತ್ತಾನೆ ಮತ್ತು ಅವರನ್ನು ವಿಶೇಷವಾಗಿ ಪರಿಗಣಿಸುತ್ತಾನೆ.
10. ಯೆಹೋವನು ತನ್ನ ಜನರಿಗೆ ಹೇಗೆ ಸಂರಕ್ಷಣೆಯನ್ನು ನೀಡುತ್ತಾನೆ?
10 ನೀವು ವಿಶೇಷ ಸೊತ್ತಾಗಿ ಪರಿಗಣಿಸುವಂಥ ಯಾವುದೇ ಅಮೂಲ್ಯ ವಸ್ತುವನ್ನು ಮನಸ್ಸಿಗೆ ತಂದುಕೊಳ್ಳಬಲ್ಲಿರೋ? ಅದನ್ನು ಸಂರಕ್ಷಿಸಲಿಕ್ಕಾಗಿ ನೀವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೀರಲ್ಲವೆ? ಯೆಹೋವನು ಸಹ ತನ್ನ ‘ವಿಶೇಷ ಸೊತ್ತನ್ನು’ ಹಾಗೆಯೇ ನೋಡಿಕೊಳ್ಳುತ್ತಾನೆ. ಜೀವನದ ಎಲ್ಲ ಕಷ್ಟಗಳು ಮತ್ತು ದುರಂತಗಳಿಂದ ಆತನು ತನ್ನ ಜನರನ್ನು ಪಾರುಗೊಳಿಸುವುದಿಲ್ಲ ಎಂಬುದು ನಿಜ. (ಪ್ರಸಂಗಿ 9:11) ಆದರೆ ಯೆಹೋವನು ತನ್ನ ನಂಬಿಗಸ್ತ ಸೇವಕರನ್ನು ಆಧ್ಯಾತ್ಮಿಕವಾಗಿ ಸಂರಕ್ಷಿಸುತ್ತಾನೆ. ಯಾವುದೇ ಕಷ್ಟವನ್ನು ತಾಳಿಕೊಳ್ಳಲು ಬೇಕಾಗಿರುವ ಬಲವನ್ನು ಆತನು ಅವರಿಗೆ ಒದಗಿಸುತ್ತಾನೆ. (1 ಕೊರಿಂಥ 10:13) ಆದುದರಿಂದ, ದೇವರ ಪುರಾತನ ಜನರಾಗಿದ್ದ ಇಸ್ರಾಯೇಲ್ಯರಿಗೆ ಮೋಶೆಯು ಹೇಳಿದ್ದು: “ನೀವು ಶೂರರಾಗಿ ಧೈರ್ಯದಿಂದಿರ್ರಿ; . . . ನಿಮ್ಮ ದೇವರಾದ ಯೆಹೋವನೇ ನಿಮ್ಮ ಸಂಗಡ ಇರುತ್ತಾನಲ್ಲಾ; ಆತನು ನಿಮ್ಮನ್ನು ಕೈಬಿಡುವದಿಲ್ಲ, ಅಪಜಯಕ್ಕೆ ಗುರಿಪಡಿಸುವದೇ ಇಲ್ಲ.” (ಧರ್ಮೋಪದೇಶಕಾಂಡ 31:6) ಯೆಹೋವನು ತನ್ನ ಜನರೊಂದಿಗೆ ಪ್ರತಿಫಲದಾಯಕವಾಗಿ ವ್ಯವಹರಿಸುತ್ತಾನೆ. ಆತನಿಗೆ ಅವರು “ಒಂದು ವಿಶೇಷ ಸೊತ್ತು” ಆಗಿದ್ದಾರೆ.
‘ಪ್ರತಿಫಲವನ್ನು ಕೊಡುವಾತನಾದ’ ಯೆಹೋವನು
11, 12. ನಮಗೆ ಪ್ರತಿಫಲವನ್ನು ಕೊಡುವ ಯೆಹೋವನ ಪಾತ್ರವನ್ನು ಗಣ್ಯಮಾಡುವುದು, ಸಂಶಯದ ಅನಿಸಿಕೆಗಳನ್ನು ಹೊಡೆದೋಡಿಸಲು ನಮಗೆ ಹೇಗೆ ಸಹಾಯಮಾಡಸಾಧ್ಯವಿದೆ?
11 ಯೆಹೋವನು ತನ್ನ ಸೇವಕರನ್ನು ಅಮೂಲ್ಯವಾಗಿ ಪರಿಗಣಿಸುತ್ತಾನೆ ಎಂಬುದಕ್ಕಿರುವ ಇನ್ನೊಂದು ಪುರಾವೆಯು, ಆತನು ಅವರಿಗೆ ಪ್ರತಿಫಲವನ್ನು ಕೊಡುವುದೇ ಆಗಿದೆ. ಆತನು ಇಸ್ರಾಯೇಲ್ಯರಿಗಂದದ್ದು: “ನಾನು ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳಹಿಡಿಯಲಾಗದಷ್ಟು ಸುವರವನ್ನು ಸುರಿಯುವೆನೋ ಇಲ್ಲವೋ ನನ್ನನ್ನು ಹೀಗೆ ಪರೀಕ್ಷಿಸಿರಿ; ಇದು ಸೇನಾಧೀಶ್ವರ ಯೆಹೋವನ ನುಡಿ.” (ಮಲಾಕಿಯ 3:10) ಅಂತಿಮವಾಗಿ, ಯೆಹೋವನು ತನ್ನ ಸೇವಕರಿಗೆ ನಿತ್ಯಜೀವದ ಪ್ರತಿಫಲವನ್ನು ಕೊಡುವನು ಎಂಬುದಂತೂ ನಿಶ್ಚಯ. (ಯೋಹಾನ 5:24; ಪ್ರಕಟನೆ 21:4) ಈ ಅತ್ಯಮೂಲ್ಯ ಪ್ರತಿಫಲವು, ಯೆಹೋವನ ಪ್ರೀತಿ ಮತ್ತು ಉದಾರಭಾವದ ವೈಶಾಲ್ಯವನ್ನು ನಮಗೆ ತಿಳಿಯಪಡಿಸುತ್ತದೆ. ಇದು, ತನ್ನ ಸೇವೆಮಾಡುವ ಆಯ್ಕೆಮಾಡುವವರನ್ನು ಆತನು ನಿಜವಾಗಿಯೂ ಅಮೂಲ್ಯವಾಗಿ ಪರಿಗಣಿಸುತ್ತಾನೆ ಎಂಬುದನ್ನು ಸಹ ತೋರಿಸುತ್ತದೆ. ಯೆಹೋವನನ್ನು ಉದಾರವಾಗಿ ಪ್ರತಿಫಲ ಕೊಡುವವನಾಗಿ ಪರಿಗಣಿಸಲು ಕಲಿಯುವುದು, ದೇವರೊಂದಿಗಿನ ನಮ್ಮ ನಿಲುವಿನ ಕುರಿತಾದ ಯಾವುದೇ ಸಂಶಯಗಳನ್ನು ಹೊಡೆದೋಡಿಸಲು ನಮಗೆ ಸಹಾಯಮಾಡುವುದು. ವಾಸ್ತವದಲ್ಲಿ, ಪ್ರತಿಫಲ ಕೊಡುವಾತನಾಗಿ ತನ್ನನ್ನು ಪರಿಗಣಿಸುವಂತೆ ಯೆಹೋವನೇ ನಮ್ಮನ್ನು ಹುರಿದುಂಬಿಸುತ್ತಾನೆ! ಪೌಲನು ಬರೆದುದು: “ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ.”—ಇಬ್ರಿಯ 11:6.
12 ನಾವು ಯೆಹೋವನನ್ನು ಪ್ರೀತಿಸುವುದರಿಂದ ಆತನ ಸೇವೆಮಾಡುತ್ತೇವೇ ಹೊರತು ಆತನು ನಮಗೆ ಪ್ರತಿಫಲವನ್ನು ಕೊಡುವ ವಾಗ್ದಾನವನ್ನು ಮಾಡಿರುವ ಕಾರಣಕ್ಕಾಗಿ ಅಲ್ಲ. ಆದರೂ, ಒಂದು ಪ್ರತಿಫಲದ ನಿರೀಕ್ಷೆಯನ್ನು ನಮ್ಮ ಹೃದಯಗಳಲ್ಲಿ ಕಾಪಾಡಿಕೊಳ್ಳುವುದು ತಪ್ಪಲ್ಲ ಅಥವಾ ಸ್ವಾರ್ಥವಲ್ಲ. (ಕೊಲೊಸ್ಸೆ 3:23, 24) ಯಾರು ಆತನನ್ನು ಶ್ರದ್ಧಾಪೂರ್ವಕವಾಗಿ ಹುಡುಕುತ್ತಾರೋ ಅವರನ್ನು ಯೆಹೋವನು ಪ್ರೀತಿಸುತ್ತಾನಾದ್ದರಿಂದ ಮತ್ತು ಅವರನ್ನು ಬಹಳ ಅಮೂಲ್ಯವಾಗಿ ಪರಿಗಣಿಸುತ್ತಾನಾದ್ದರಿಂದ, ಆತನೇ ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳುತ್ತಾನೆ ಮತ್ತು ಅವರಿಗೆ ಪ್ರತಿಫಲವನ್ನು ಕೊಡುತ್ತಾನೆ.
13. ವಿಮೋಚನಾ ಮೌಲ್ಯದ ಒದಗಿಸುವಿಕೆಯು, ನಮಗಾಗಿರುವ ಯೆಹೋವನ ಪ್ರೀತಿಯ ಮಹಾನ್ ಪುರಾವೆಯಾಗಿದೆ ಏಕೆ?
13 ಯೆಹೋವನು ಮಾನವಕುಲವನ್ನು ಎಷ್ಟು ಅಮೂಲ್ಯವಾಗಿ ಪರಿಗಣಿಸುತ್ತಾನೆ ಎಂಬುದರ ಮಹಾನ್ ಸೂಚನೆಯು, ವಿಮೋಚನಾ ಮೌಲ್ಯದ ಒದಗಿಸುವಿಕೆಯಲ್ಲಿ ವ್ಯಕ್ತವಾಗುತ್ತದೆ. ಅಪೊಸ್ತಲ ಯೋಹಾನನು ಬರೆದುದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ಯೇಸು ಕ್ರಿಸ್ತನ ವಿಮೋಚನಾ ಮೌಲ್ಯದ ಯಜ್ಞದ ಒದಗಿಸುವಿಕೆಯು, ನಾವು ಯೆಹೋವನ ದೃಷ್ಟಿಯಲ್ಲಿ ಅಯೋಗ್ಯರಾಗಿದ್ದೇವೆ ಅಥವಾ ಆತನ ಪ್ರೀತಿಗೆ ಅನರ್ಹರಾಗಿದ್ದೇವೆ ಎಂಬ ವಿಚಾರಕ್ಕೆ ತದ್ವಿರುದ್ಧವಾದದ್ದಾಗಿದೆ. ವಾಸ್ತವದಲ್ಲಿ, ನಮಗೋಸ್ಕರ ಯೆಹೋವನು ಅಷ್ಟು ದೊಡ್ಡ ಬೆಲೆಯನ್ನು ಅಂದರೆ ತನ್ನ ಏಕಜಾತ ಪುತ್ರನ ಜೀವವನ್ನು ತೆತ್ತಿರಬೇಕಾದರೆ, ಖಂಡಿತವಾಗಿಯೂ ಆತನು ನಮ್ಮನ್ನು ಬಹಳವಾಗಿ ಪ್ರೀತಿಸುತ್ತಿರಲೇಬೇಕು.
14. ಪೌಲನು ವಿಮೋಚನಾ ಮೌಲ್ಯವನ್ನು ಹೇಗೆ ಪರಿಗಣಿಸಿದನು ಎಂಬುದನ್ನು ಯಾವುದು ತೋರಿಸುತ್ತದೆ?
14 ಆದುದರಿಂದ, ನಕಾರಾತ್ಮಕ ಅನಿಸಿಕೆಗಳು ನಿಮ್ಮಲ್ಲಿ ಉಂಟಾಗುವಲ್ಲಿ ವಿಮೋಚನಾ ಮೌಲ್ಯದ ಕುರಿತು ಧ್ಯಾನಿಸಿರಿ. ಹೌದು, ಈ ಉಡುಗೊರೆಯನ್ನು ಯೆಹೋವನಿಂದ ಕೊಡಲ್ಪಟ್ಟ ವೈಯಕ್ತಿಕ ಒದಗಿಸುವಿಕೆಯಾಗಿ ಪರಿಗಣಿಸಿರಿ. ಅಪೊಸ್ತಲ ಪೌಲನು ಇದನ್ನೇ ಮಾಡಿದನು. “ಅಯ್ಯೋ, ನಾನು ಎಂಥ ದುರವಸ್ಥೆಯಲ್ಲಿ ಬಿದ್ದ ಮನುಷ್ಯನು!” ಎಂದು ಅವನು ಹೇಳಿದನೆಂಬುದನ್ನು ಜ್ಞಾಪಿಸಿಕೊಳ್ಳಿರಿ. ಆದರೆ ಬಳಿಕ ಪೌಲನು ಹೀಗೆ ಮುಂದುವರಿಸಿದನು: “ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ,” ಅವನು “ನನ್ನನ್ನು ಪ್ರೀತಿಸಿ ನನಗೋಸ್ಕರ ತನ್ನನ್ನು ಒಪ್ಪಿಸಿಬಿಟ್ಟನು.” (ರೋಮಾಪುರ 7:24, 25; ಗಲಾತ್ಯ 2:20) ಪೌಲನು ಅಹಂಕಾರಿಯಾಗಿದ್ದುದರಿಂದ ಹೀಗೆ ಹೇಳಲಿಲ್ಲ. ಬದಲಾಗಿ ವ್ಯಕ್ತಿಗತವಾಗಿ ಯೆಹೋವನು ತನ್ನನ್ನು ಅಮೂಲ್ಯವಾಗಿ ಪರಿಗಣಿಸಿದನು ಎಂಬ ದೃಢಭರವಸೆ ಅವನಿಗಿತ್ತಷ್ಟೆ. ಪೌಲನಂತೆ, ನೀವು ಸಹ ವಿಮೋಚನಾ ಮೌಲ್ಯದ ಯಜ್ಞವು ದೇವರಿಂದ ಕೊಡಲ್ಪಟ್ಟ ವೈಯಕ್ತಿಕ ಉಡುಗೊರೆಯಾಗಿ ಪರಿಗಣಿಸಲು ಕಲಿಯಬೇಕು. ಯೆಹೋವನು ಕೇವಲ ಒಬ್ಬ ಪ್ರಬಲ ರಕ್ಷಕನು ಮಾತ್ರವಲ್ಲ ಪ್ರೀತಿಯಿಂದ ಪ್ರತಿಫಲವನ್ನು ಕೊಡುವಾತನೂ ಆಗಿದ್ದಾನೆ.
ಸೈತಾನನ ಕುಟಿಲ ಕೃತ್ಯಗಳ ವಿಷಯದಲ್ಲಿ ಎಚ್ಚರವಾಗಿರಿ
15-17. (ಎ) ಪಿಶಾಚನು ನಕಾರಾತ್ಮಕ ಅನಿಸಿಕೆಗಳನ್ನು ಹೇಗೆ ದುರುಪಯೋಗಿಸಿಕೊಳ್ಳುತ್ತಾನೆ? (ಬಿ) ಯೋಬನ ಅನುಭವದಿಂದ ನಾವು ಯಾವ ಉತ್ತೇಜನವನ್ನು ಪಡೆದುಕೊಳ್ಳಸಾಧ್ಯವಿದೆ?
15 ಆದರೂ, ದೇವರ ವಾಕ್ಯದಲ್ಲಿ ಕಂಡುಬರುವ ಪ್ರೇರಿತ ಸಂತೈಸುವಿಕೆಗಳು ನಿಮಗೆ ನಿಜವಾಗಿಯೂ ಅನ್ವಯವಾಗುತ್ತವೆ ಎಂದು ನಂಬುವುದನ್ನು ನೀವು ಕಷ್ಟಕರವಾಗಿ ಕಂಡುಕೊಳ್ಳಬಹುದು. ದೇವರ ಹೊಸ ಲೋಕದಲ್ಲಿ ಸದಾಕಾಲ ಜೀವಿಸುವ ಪ್ರತಿಫಲವನ್ನು ಇತರರು ಪಡೆದುಕೊಳ್ಳಸಾಧ್ಯವಿದೆ, ಆದರೆ ನೀವು ಖಂಡಿತವಾಗಿಯೂ ಅದಕ್ಕೆ ಅರ್ಹರಲ್ಲ ಎಂದು ನಿಮಗನಿಸಬಹುದು. ನಿಮಗೆ ಹೀಗೆ ಅನಿಸುವುದಾದರೆ ನೀವೇನು ಮಾಡಸಾಧ್ಯವಿದೆ?
16 ಎಫೆಸದವರಿಗೆ ಪೌಲನು ನೀಡಿದ ಈ ಬುದ್ಧಿವಾದವು ನಿಮಗೆ ಪರಿಚಿತವಾಗಿದೆ ಎಂಬುದರಲ್ಲಿ ಸಂಶಯವಿಲ್ಲ: “ಸೈತಾನನ ತಂತ್ರೋಪಾಯಗಳನ್ನು ನೀವು ಎದುರಿಸಿ ನಿಲ್ಲುವದಕ್ಕೆ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ.” (ಎಫೆಸ 6:11) ಸೈತಾನನು ಜನರನ್ನು ಪಾಶದಲ್ಲಿ ಸಿಕ್ಕಿಸುವ ವಿಧಗಳ ಕುರಿತು ನಾವು ಆಲೋಚಿಸುವಾಗ, ಪ್ರಾಪಂಚಿಕತೆ ಮತ್ತು ಅನೈತಿಕತೆಗಳಂಥ ವಿಷಯಗಳು ತಕ್ಷಣವೇ ನಮ್ಮ ಮನಸ್ಸಿಗೆ ಬರಬಹುದು ಮತ್ತು ಇದು ಸೂಕ್ತವಾದದ್ದೇ. ಈ ಪ್ರಲೋಭನೆಗಳು, ಪುರಾತನ ಕಾಲಗಳಲ್ಲಿ ಮತ್ತು ನಮ್ಮ ದಿನಗಳಲ್ಲಿಯೂ ದೇವಜನರಲ್ಲಿ ಅನೇಕರನ್ನು ಪಾಶದಲ್ಲಿ ಸಿಕ್ಕಿಸಿವೆ. ಆದರೂ, ನಾವು ಸೈತಾನನ ಇನ್ನೊಂದು ತಂತ್ರೋಪಾಯವನ್ನು ಅಥವಾ ಕುಟಿಲ ಕೃತ್ಯವನ್ನು ಅಲಕ್ಷ್ಯಮಾಡಬಾರದಾಗಿದೆ. ಅದು, ಯೆಹೋವ ದೇವರು ತಮ್ಮನ್ನು ಪ್ರೀತಿಸುವುದಿಲ್ಲ ಎಂದು ಜನರಿಗೆ ಮನದಟ್ಟುಮಾಡಿಸಲು ಅವನು ಮಾಡುವ ಪ್ರಯತ್ನವೇ ಆಗಿದೆ.
17 ಜನರು ದೇವರಿಗೆ ಬೆನ್ನುಹಾಕುವಂತೆ ಮಾಡುವ ತನ್ನ ಪ್ರಯತ್ನದಲ್ಲಿ ಇಂಥ ಅನಿಸಿಕೆಗಳನ್ನು ದುರುಪಯೋಗಿಸಿಕೊಳ್ಳುವುದರಲ್ಲಿ ಪಿಶಾಚನು ತುಂಬ ಚತುರನಾಗಿದ್ದಾನೆ. ಬಿಲ್ದದನು ಯೋಬನಿಗೆ ನುಡಿದ ಮಾತುಗಳನ್ನು ಜ್ಞಾಪಿಸಿಕೊಳ್ಳಿರಿ: “ಮನುಷ್ಯನು ದೇವರ ಎಣಿಕೆಯಲ್ಲಿ ನೀತಿವಂತನಾಗಿರುವದು ಹೇಗೆ? ಸ್ತ್ರೀಯಲ್ಲಿ ಹುಟ್ಟಿದವನು ಪರಿಶುದ್ಧನಾಗಿರುವದು ಸಾಧ್ಯವೋ? ನೋಡಿರಿ, ಆತನ ದೃಷ್ಟಿಯಲ್ಲಿ ಚಂದ್ರನಿಗಾದರೂ ಕಳೆಯಿಲ್ಲ, ನಕ್ಷತ್ರಗಳೂ ಶುದ್ಧವಲ್ಲ. ಹೀಗಿರುವಲ್ಲಿ ನರಹುಳವು ಎಷ್ಟೋ ಅಶುದ್ಧವು! ನರಕ್ರಿಮಿಯು ಎಷ್ಟೋ ಅಪವಿತ್ರವು!” (ಯೋಬ 25:4-6; ಯೋಹಾನ 8:44) ಈ ಮಾತುಗಳು ಎಷ್ಟು ಸ್ಥೈರ್ಯಗೆಡಿಸುವಂಥವುಗಳಾಗಿದ್ದವು ಎಂಬುದನ್ನು ನೀವು ಊಹಿಸಿಕೊಳ್ಳಬಲ್ಲಿರೊ? ಆದುದರಿಂದಲೇ ಸೈತಾನನು ನಿಮ್ಮನ್ನು ಎದೆಗುಂದಿಸುವಂತೆ ಬಿಡಬೇಡಿ. ಅದಕ್ಕೆ ಬದಲಾಗಿ, ಯಾವುದು ಸರಿಯಾಗಿದೆಯೋ ಅದನ್ನು ಮಾಡಲು ಇನ್ನಷ್ಟು ಹೋರಾಟ ನಡೆಸಲಿಕ್ಕಾಗಿ ಅಗತ್ಯವಿರುವ ಧೈರ್ಯ ಮತ್ತು ಶಕ್ತಿಯನ್ನು ಹೊಂದಿರಸಾಧ್ಯವಾಗುವಂತೆ ಸೈತಾನನ ತಂತ್ರೋಪಾಯಗಳ ಅರಿವುಳ್ಳವರಾಗಿರಿ. (2 ಕೊರಿಂಥ 2:11) ಯೋಬನ ವಿಷಯದಲ್ಲಿ ಹೇಳುವುದಾದರೆ, ಯೆಹೋವನು ಅವನಿಗೆ ತಿದ್ದುಪಾಟನ್ನು ನೀಡಬೇಕಾಯಿತಾದರೂ, ಅವನು ಏನನ್ನು ಕಳೆದುಕೊಂಡಿದ್ದನೋ ಅದನ್ನೆಲ್ಲ ಎರಡರಷ್ಟು ಹಿಂದಿರುಗಿಸುವ ಮೂಲಕ ಯೆಹೋವನು ಅವನ ತಾಳ್ಮೆಗೆ ಪ್ರತಿಫಲವನ್ನು ಕೊಟ್ಟನು.—ಯೋಬ 42:10.
ಯೆಹೋವನು ‘ನಮ್ಮ ಹೃದಯಕ್ಕಿಂತ ದೊಡ್ಡವನು’
18, 19. ದೇವರು ‘ನಮ್ಮ ಹೃದಯಕ್ಕಿಂತ ದೊಡ್ಡವನಾಗಿರುವುದು’ ಯಾವ ಅರ್ಥದಲ್ಲಿ, ಮತ್ತು ಯಾವ ವಿಧದಲ್ಲಿ ಆತನು ‘ಎಲ್ಲವನ್ನೂ ಬಲ್ಲವನಾಗಿದ್ದಾನೆ?’
18 ನಿರುತ್ತೇಜನದ ಅನಿಸಿಕೆಗಳು ಆಳವಾಗಿ ಬೇರೂರಿರುವಲ್ಲಿ, ಅವುಗಳನ್ನು ನಿಗ್ರಹಿಸುವುದು ಕಷ್ಟಕರವಾಗಿರಸಾಧ್ಯವಿದೆ ಎಂಬುದೇನೊ ನಿಜ. ಆದರೂ, “ದೇವಜ್ಞಾನವನ್ನು ವಿರೋಧಿಸುವದಕ್ಕೆ ಏರಿಸಲ್ಪಟ್ಟಿರುವ ಉನ್ನತವಾದ ಎಲ್ಲಾ ಕೊತ್ತಲಗಳನ್ನೂ” ಕೆಡವಿಹಾಕಲು ಯೆಹೋವನ ಆತ್ಮವು ನಮಗೆ ಪ್ರಗತಿಪರವಾಗಿ ಸಹಾಯಮಾಡಬಲ್ಲದು. (2 ಕೊರಿಂಥ 10:4, 5) ನಕಾರಾತ್ಮಕ ಆಲೋಚನೆಗಳು ನಿಮ್ಮ ಮೇಲೆ ಒತ್ತಡವನ್ನು ಹೇರುವಾಗ, ಅಪೊಸ್ತಲ ಯೋಹಾನನ ಮಾತುಗಳ ಕುರಿತು ಮನನಮಾಡಿರಿ: “ನಾವು ಸತ್ಯಕ್ಕೆ ಸೇರಿದವರೆಂಬದು ಇದರಿಂದಲೇ ನಮಗೆ ತಿಳಿಯುತ್ತದೆ. ಮತ್ತು ನಮ್ಮ ಹೃದಯವು ಯಾವ ವಿಷಯದಲ್ಲಿಯಾದರೂ ನಮ್ಮನ್ನು ದೋಷಿಗಳೆಂದು ನಿರ್ಣಯಿಸಿದರೂ ದೇವರು ನಮ್ಮ ಹೃದಯಕ್ಕಿಂತ ದೊಡ್ಡವನಾಗಿದ್ದು ಎಲ್ಲವನ್ನೂ ಬಲ್ಲವನಾಗಿದ್ದಾನೆಂದು ನಾವು ತಿಳಿದು ದೇವರ ಸಮಕ್ಷಮದಲ್ಲಿ ನಮ್ಮ ಹೃದಯವನ್ನು ಸಮಾಧಾನಪಡಿಸುವೆವು.”—1 ಯೋಹಾನ 3:19, 20.
19 ‘ದೇವರು ನಮ್ಮ ಹೃದಯಕ್ಕಿಂತ ದೊಡ್ಡವನು’ ಎಂಬ ವಾಕ್ಸರಣಿಯ ಅರ್ಥವೇನು? ಕೆಲವೊಮ್ಮೆ ನಮ್ಮ ಹೃದಯವು ನಮ್ಮನ್ನು ಖಂಡಿಸಬಹುದು, ಅದರಲ್ಲೂ ವಿಶೇಷವಾಗಿ ನಮ್ಮ ಅಪರಿಪೂರ್ಣತೆಗಳು ಮತ್ತು ಕುಂದುಕೊರತೆಗಳ ಬಗ್ಗೆ ನಮಗೆ ಹೆಚ್ಚೆಚ್ಚು ಮನವರಿಕೆಯಾದಾಗ ನಾವು ಅಯೋಗ್ಯರು ಎಂಬ ಅನಿಸಿಕೆಯಾಗಬಹುದು. ಅಥವಾ ನಮ್ಮ ಹಿನ್ನೆಲೆಯ ಕಾರಣದಿಂದಾಗಿ ಸ್ವತಃ ನಮ್ಮ ವಿಷಯದಲ್ಲಿ ತುಂಬ ನಕಾರಾತ್ಮಕವಾಗಿ ಆಲೋಚಿಸುವ ಪ್ರವೃತ್ತಿ ನಮಗಿರಬಹುದು. ನಾವು ಏನೇ ಮಾಡಿದರೂ ಅದು ಯೆಹೋವನಿಗೆ ಸ್ವೀಕಾರಾರ್ಹವಾಗಿಲ್ಲ ಎಂದು ಅನಿಸಬಹುದು. ಅಪೊಸ್ತಲ ಯೋಹಾನನ ಮಾತುಗಳು, ಯೆಹೋವನು ಅದಕ್ಕಿಂತಲೂ ದೊಡ್ಡವನಾಗಿದ್ದಾನೆ ಎಂಬ ಆಶ್ವಾಸನೆಯನ್ನು ನಮಗೆ ನೀಡುತ್ತವೆ! ಆತನು ನಮ್ಮ ತಪ್ಪುಗಳಿಗಿಂತಲೂ ಹೆಚ್ಚಿನದ್ದನ್ನು ಗಮನಿಸುತ್ತಾನೆ ಮತ್ತು ನಮ್ಮ ನಿಜ ಸಾಮರ್ಥ್ಯವನ್ನು ಗ್ರಹಿಸುತ್ತಾನೆ. ನಮ್ಮ ಹೇತುಗಳು ಮತ್ತು ಇಂಗಿತಗಳು ಸಹ ಆತನಿಗೆ ತಿಳಿದಿವೆ. ದಾವೀದನು ಬರೆದುದು: “ಆತನು ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.” (ಕೀರ್ತನೆ 103:14) ಹೌದು, ನಮ್ಮ ಬಗ್ಗೆ ನಮಗೆ ಗೊತ್ತಿರುವುದಕ್ಕಿಂತಲೂ ಹೆಚ್ಚನ್ನು ಯೆಹೋವನು ಬಲ್ಲಾತನಾಗಿದ್ದಾನೆ!
“ಸುಂದರಕಿರೀಟ” ಮತ್ತು “ರಾಜಶಿರೋವೇಷ್ಟನ”
20. ಯೆಹೋವನು ತನ್ನ ಸೇವಕರನ್ನು ಹೇಗೆ ಪರಿಗಣಿಸುತ್ತಾನೆ ಎಂಬ ವಿಷಯದಲ್ಲಿ ಯೆಶಾಯನ ಪುನಸ್ಸ್ಥಾಪನಾ ಪ್ರವಾದನೆಯು ಏನನ್ನು ತಿಳಿಯಪಡಿಸುತ್ತದೆ?
20 ಪ್ರವಾದಿಯಾದ ಯೆಶಾಯನ ಮೂಲಕ ಯೆಹೋವನು ತನ್ನ ಪುರಾತನ ಜನರಿಗೆ ಪುನಸ್ಸ್ಥಾಪನೆಯ ನಿರೀಕ್ಷೆಯನ್ನು ಕೊಟ್ಟನು. ಬಾಬೆಲಿನಲ್ಲಿ ದೇಶಭ್ರಷ್ಟರಾಗಿದ್ದಾಗ ಎದೆಗುಂದಿದ್ದ ಅವರಿಗೆ ಬೇಕಾಗಿದ್ದದ್ದು ಈ ಸಾಂತ್ವನ ಮತ್ತು ಪುನರಾಶ್ವಾಸನೆಯೇ! ಅವರು ತಮ್ಮ ಸ್ವದೇಶಕ್ಕೆ ಹಿಂದಿರುಗುವಂಥ ಸಮಯಕ್ಕೆ ಮುನ್ನೋಡುತ್ತಾ ಯೆಹೋವನು ಹೇಳಿದ್ದು: “ನೀನು ಯೆಹೋವನ ಕೈಯಲ್ಲಿ ಸುಂದರಕಿರೀಟವಾಗಿಯೂ ನಿನ್ನ ದೇವರ ಹಸ್ತದಲ್ಲಿ ರಾಜಶಿರೋವೇಷ್ಟನವಾಗಿಯೂ ಇರುವಿ.” (ಯೆಶಾಯ 62:3) ಈ ಮಾತುಗಳಿಂದ ಯೆಹೋವನು ತನ್ನ ಜನರನ್ನು ಘನತೆ ಹಾಗೂ ವೈಭವದಿಂದ ಅಲಂಕರಿಸಿದನು. ಇಂದು ತನ್ನ ಆತ್ಮಿಕ ಇಸ್ರಾಯೇಲ್ಯರ ಜನಾಂಗಕ್ಕೂ ಆತನು ಇದನ್ನೇ ಮಾಡಿದ್ದಾನೆ. ಅದು ಎಲ್ಲರೂ ಪ್ರಶಂಸಿಸುವಂತೆ ಅವನು ಅವರನ್ನು ಉನ್ನತಿಗೇರಿಸಿದ್ದಾನೋ ಎಂಬಂತಿದೆ.
21. ಯೆಹೋವನು ನಿಮ್ಮ ನಂಬಿಗಸ್ತ ತಾಳ್ಮೆಗೆ ಪ್ರತಿಫಲವನ್ನು ಕೊಡುವನು ಎಂಬ ದೃಢವಿಶ್ವಾಸವನ್ನು ನೀವು ಹೇಗೆ ಪಡೆದುಕೊಳ್ಳಬಲ್ಲಿರಿ?
21 ಈ ಪ್ರವಾದನೆಯು ಪ್ರಥಮವಾಗಿ ಅಭಿಷಿಕ್ತರಲ್ಲಿ ನೆರವೇರಿಕೆಯನ್ನು ಪಡೆಯುತ್ತದಾದರೂ, ತನ್ನ ಸೇವೆಮಾಡುವವರೆಲ್ಲರಿಗೆ ಯೆಹೋವನು ನೀಡುವ ಘನತೆಯನ್ನು ಇದು ದೃಷ್ಟಾಂತಿಸುತ್ತದೆ. ಆದುದರಿಂದ, ಸಂದೇಹದ ಅನಿಸಿಕೆಗಳಿಂದ ಕ್ಷೋಭೆಗೊಂಡಿರುವಾಗ, ಅಪರಿಪೂರ್ಣರಾಗಿ ಇರುವುದಾದರು ಸಹ ನೀವು ಯೆಹೋವನ ದೃಷ್ಟಿಯಲ್ಲಿ “ಸುಂದರಕಿರೀಟ” ಮತ್ತು “ರಾಜಶಿರೋವೇಷ್ಟನ”ದಷ್ಟು ಅಮೂಲ್ಯರಾಗಿರಸಾಧ್ಯವಿದೆ ಎಂಬುದನ್ನು ಜ್ಞಾಪಿಸಿಕೊಳ್ಳಿರಿ. ಶ್ರದ್ಧಾಪೂರ್ವಕವಾಗಿ ಯೆಹೋವನ ಚಿತ್ತವನ್ನು ಮಾಡಲು ಪ್ರಯತ್ನಿಸುವ ಮೂಲಕ ಆತನ ಹೃದಯವನ್ನು ಸಂತೋಷಪಡಿಸುತ್ತಾ ಇರಿ. (ಜ್ಞಾನೋಕ್ತಿ 27:11) ಹೀಗೆ ಮಾಡುವ ಮೂಲಕ, ಯೆಹೋವನು ನಿಮ್ಮ ನಂಬಿಗಸ್ತ ತಾಳ್ಮೆಗೆ ಪ್ರತಿಫಲವನ್ನು ಕೊಡುವನು ಎಂಬ ದೃಢವಿಶ್ವಾಸದಿಂದ ಇರಬಲ್ಲಿರಿ!
[ಪಾದಟಿಪ್ಪಣಿ]
a ಕೆಲವು ಹೆಸರುಗಳು ಬದಲಾಯಿಸಲ್ಪಟ್ಟಿವೆ.
ನಿಮಗೆ ನೆನಪಿದೆಯೆ?
• ನಾವು ಯೆಹೋವನಿಗೆ “ಒಂದು ವಿಶೇಷ ಸೊತ್ತು” ಆಗಿದ್ದೇವೆ ಹೇಗೆ?
• ಯೆಹೋವನನ್ನು ಪ್ರತಿಫಲ ಕೊಡುವವನಾಗಿ ಪರಿಗಣಿಸುವುದು ಏಕೆ ಪ್ರಾಮುಖ್ಯವಾಗಿದೆ?
• ಸೈತಾನನ ಯಾವ ಕುಟಿಲ ಕೃತ್ಯಗಳ ವಿಷಯದಲ್ಲಿ ನಾವು ಎಚ್ಚರಿಕೆಯಿಂದಿರಬೇಕು?
• ಯಾವ ವಿಧದಲ್ಲಿ ದೇವರು ‘ನಮ್ಮ ಹೃದಯಕ್ಕಿಂತ ದೊಡ್ಡವನಾಗಿದ್ದಾನೆ?’
[ಪುಟ 26ರಲ್ಲಿರುವ ಚಿತ್ರ]
ಪೌಲ
[ಪುಟ 26ರಲ್ಲಿರುವ ಚಿತ್ರ]
ಎಲೀಯ
[ಪುಟ 26ರಲ್ಲಿರುವ ಚಿತ್ರ]
ಹನ್ನ
[ಪುಟ 28ರಲ್ಲಿರುವ ಚಿತ್ರ]
ಸಂತೈಸಲು ಅಗತ್ಯವಿರುವ ವಿಷಯಗಳು ದೇವರ ವಾಕ್ಯದಲ್ಲಿ ಬೇಕಾದಷ್ಟಿವೆ