ಕ್ರೈಸ್ತ ದೀಕ್ಷಾಸ್ನಾನಕ್ಕೆ ಅರ್ಹರಾಗಲು ಅಗತ್ಯವಾಗಿರುವುದನ್ನು ಮಾಡುವುದು
“ನನಗೆ ದೀಕ್ಷಾಸ್ನಾನವಾಗುವದಕ್ಕೆ ಅಡ್ಡಿ ಏನು”?—ಅ. ಕೃತ್ಯಗಳು 8:37.
1, 2. ಫಿಲಿಪ್ಪನು ಐಥಿಯೋಪ್ಯದ ಅಧಿಕಾರಿಯೊಂದಿಗೆ ಸಂಭಾಷಣೆಯನ್ನು ಆರಂಭಿಸಿದ್ದು ಹೇಗೆ, ಮತ್ತು ಈ ಪುರುಷನು ಆಧ್ಯಾತ್ಮಿಕ ಮನಸ್ಸುಳ್ಳವನೆಂದು ಹೇಗೆ ಗೊತ್ತಾಗುತ್ತದೆ?
ಯೇಸು ಮರಣಪಟ್ಟು ಒಂದೆರಡು ವರ್ಷಗಳು ಕಳೆದ ಬಳಿಕ ನಡೆದ ಘಟನೆಯಿದು. ಯೆರೂಸಲೇಮಿನಿಂದ ಗಾಜಕ್ಕೆ ಹೋಗುವ ದಾರಿಯಲ್ಲಿ ಒಬ್ಬ ಸರಕಾರಿ ಅಧಿಕಾರಿಯು ಪಶ್ಚಿಮ ದಿಕ್ಕಿನೆಡೆಗೆ ಪ್ರಯಾಣಿಸುತ್ತಿದ್ದನು. ಅವನು ರಥದಲ್ಲಿ ಬಹುಶಃ ಇನ್ನೂ 1,500 ಕಿಲೊಮೀಟರ್ ದೂರ ಪ್ರಯಾಣಿಸಲಿಕ್ಕಿತ್ತು ಮತ್ತು ಈ ಪ್ರಯಾಣ ತುಂಬ ದಣಿಸುವಂಥದ್ದಾಗಿತ್ತು. ದೇವಭಕ್ತ ಪುರುಷನಾಗಿದ್ದ ಇವನು, ಯೆಹೋವನ ಆರಾಧನೆಗಾಗಿ ದೂರದ ಐಥಿಯೋಪ್ಯದಿಂದ ಯೆರೂಸಲೇಮಿಗೆ ಬಂದಿದ್ದನು. ಈಗ ಐಥಿಯೋಪ್ಯಕ್ಕೆ ಹಿಂದಿರುಗಿಹೋಗುತ್ತಿರುವಾಗ ಅವನು ದೇವರ ವಾಕ್ಯವನ್ನು ಓದುವ ಮೂಲಕ ತನ್ನ ಸಮಯವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸುತ್ತಿದ್ದನು. ಅವನಿಗೆ ಎಷ್ಟೊಂದು ನಂಬಿಕೆಯಿತ್ತು! ಈ ಪ್ರಾಮಾಣಿಕ ಹೃದಯದ ಪುರುಷನನ್ನು ಯೆಹೋವನು ಗಮನಿಸಿದನು. ಆದುದರಿಂದ ಒಬ್ಬ ದೇವದೂತನ ಮೂಲಕ ಶಿಷ್ಯನಾದ ಫಿಲಿಪ್ಪನು ಅವನಿಗೆ ಸಾರುವಂತೆ ಆತನು ನಿರ್ದೇಶಿಸಿದನು.—ಅ. ಕೃತ್ಯಗಳು 8:26-28.
2 ಫಿಲಿಪ್ಪನು ಸುಲಭವಾಗಿ ಸಂಭಾಷಣೆಯನ್ನು ಆರಂಭಿಸಲು ಶಕ್ತನಾದನು. ಏಕೆಂದರೆ ಐಥಿಯೋಪ್ಯದ ಆ ಅಧಿಕಾರಿಯು, ಆ ಕಾಲದ ರೂಢಿಗನುಸಾರ ಒಂದು ಸುರುಳಿಯಿಂದ ಗಟ್ಟಿಯಾದ ಸ್ವರದಲ್ಲಿ ಓದುತ್ತಾ ಇದ್ದನು. ಆದುದರಿಂದ ಅವನು ಯೆಶಾಯನ ಸುರುಳಿಯಿಂದ ಓದುತ್ತಿದ್ದದ್ದು ಫಿಲಿಪ್ಪನಿಗೆ ಕೇಳಿಸಿತು. “ನೀನು ಓದುವದು ನಿನಗೆ ತಿಳಿಯುತ್ತದೋ?” ಎಂದು ಫಿಲಿಪ್ಪನು ಕೇಳಿದ ಒಂದೇ ಸರಳ ಪ್ರಶ್ನೆಯು ಆ ವ್ಯಕ್ತಿಯ ಆಸಕ್ತಿಯನ್ನು ಕೆರಳಿಸಿತು. ಇದು, ಯೆಶಾಯ 53:7, 8ರ ಚರ್ಚೆಗೆ ನಡೆಸಿತು. ಕೊನೆಗೆ, ಫಿಲಿಪ್ಪನು “ಅವನಿಗೆ ಯೇಸುವಿನ ವಿಷಯವಾದ ಸುವಾರ್ತೆಯನ್ನು ತಿಳಿಸಿದನು.”—ಅ. ಕೃತ್ಯಗಳು 8:29-35.
3, 4. (ಎ) ಫಿಲಿಪ್ಪನು ಐಥಿಯೋಪ್ಯದ ಆ ಮನುಷ್ಯನಿಗೆ ತಡಮಾಡದೆ ದೀಕ್ಷಾಸ್ನಾನ ಕೊಟ್ಟದ್ದೇಕೆ? (ಬಿ) ನಾವು ಈಗ ಯಾವ ಪ್ರಶ್ನೆಗಳನ್ನು ಪರಿಗಣಿಸಲಿರುವೆವು?
3 ಸ್ವಲ್ಪ ಸಮಯದೊಳಗೇ ಐಥಿಯೋಪ್ಯದ ಆ ಮನುಷ್ಯನಿಗೆ, ದೇವರ ಉದ್ದೇಶದಲ್ಲಿ ಯೇಸುವಿನ ಪಾತ್ರವೇನು ಮತ್ತು ತಾನು ಕ್ರಿಸ್ತನ ದೀಕ್ಷಾಸ್ನಾನಪಡೆದ ಶಿಷ್ಯನಾಗುವ ಅಗತ್ಯವಿದೆ ಎಂಬುದು ಮನದಟ್ಟಾಯಿತು. ಒಂದು ಜಲಾಶಯವನ್ನು ನೋಡಿದ ಕೂಡಲೆ ಅವನು, ‘ನನಗೆ ದೀಕ್ಷಾಸ್ನಾನವಾಗುವದಕ್ಕೆ ಅಡ್ಡಿ ಏನು?’ ಎಂದು ಫಿಲಿಪ್ಪನಿಗೆ ಕೇಳಿದನು. ಇದೊಂದು ಅಪೂರ್ವ ಸನ್ನಿವೇಶವಾಗಿತ್ತೆಂಬುದು ನಿಜ. ಏಕೆಂದರೆ ಈ ವ್ಯಕ್ತಿಯು ಈಗಾಗಲೇ, ಒಬ್ಬ ಯೆಹೂದಿ ಮತಾವಲಂಬಿಯಾಗಿ ದೇವರನ್ನು ಆರಾಧಿಸುತ್ತಿದ್ದ ನಂಬಿಕೆಯ ವ್ಯಕ್ತಿಯಾಗಿದ್ದನು. ಒಂದುವೇಳೆ ಅವನು ಆ ಸಂದರ್ಭದಲ್ಲಿ ದೀಕ್ಷಾಸ್ನಾನಪಡೆಯದೆ ಇರುತ್ತಿದ್ದರೆ ಇನ್ನೊಂದು ಅವಕಾಶ ಬಹುಶಃ ಬಹು ದೀರ್ಘ ಸಮಯದ ನಂತರವೇ ಸಿಗಲಿಕ್ಕಿತ್ತು. ಇದಕ್ಕಿಂತಲೂ ಮಿಗಿಲಾಗಿ, ಈ ಪುರುಷನಿಗೆ ದೇವರು ತನ್ನಿಂದ ಏನನ್ನು ಅಗತ್ಯಪಡಿಸುತ್ತಾನೆಂಬುದು ಅರ್ಥವಾಯಿತು, ಮತ್ತು ಅವನು ಯಾವುದೇ ಷರತ್ತಿಲ್ಲದೆ ಪ್ರತಿಕ್ರಿಯೆಯನ್ನು ತೋರಿಸಲು ಬಯಸಿದನು. ಆದುದರಿಂದ ದೀಕ್ಷಾಸ್ನಾನಹೊಂದಲು ಅವನು ಮಾಡಿದ ವಿನಂತಿಗೆ ಫಿಲಿಪ್ಪನು ಸಂತೋಷದಿಂದ ಸಮ್ಮತಿಸೂಚಿಸಿದನು. ದೀಕ್ಷಾಸ್ನಾನಹೊಂದಿದ ಬಳಿಕ ಐಥಿಯೋಪ್ಯದ ಆ ವ್ಯಕ್ತಿಯು “ಸಂತೋಷವುಳ್ಳವನಾಗಿ ತನ್ನ ದಾರಿಯನ್ನು ಹಿಡಿದು” ಮುಂದೆಹೋದನು. ಅವನು ತನ್ನ ಸ್ವದೇಶದಲ್ಲಿ ಸುವಾರ್ತೆಯ ಹುರುಪಿನ ಪ್ರಚಾರಕನಾದನು ಎಂಬುದು ನಿಸ್ಸಂದೇಹ.—ಅ. ಕೃತ್ಯಗಳು 8:36-39.
4 ಸಮರ್ಪಣೆ ಮತ್ತು ದೀಕ್ಷಾಸ್ನಾನದ ಹೆಜ್ಜೆಗಳನ್ನು ಹಗುರವಾಗಿ ಇಲ್ಲವೆ ಅವಸರದಿಂದ ತೆಗೆದುಕೊಳ್ಳಬಾರದು ನಿಜ. ಆದರೂ ಜನರು ದೇವರ ವಾಕ್ಯದಿಂದ ಸತ್ಯವನ್ನು ಕಲಿತು ಸ್ವಲ್ಪ ಸಮಯದೊಳಗೇ ದೀಕ್ಷಾಸ್ನಾನ ಪಡೆದುಕೊಂಡ ಕೆಲವು ಸಂದರ್ಭಗಳಿದ್ದವೆಂದು ಐಥಿಯೋಪ್ಯದ ಆ ಅಧಿಕಾರಿಯ ಉದಾಹರಣೆಯು ತೋರಿಸುತ್ತದೆ.a ಈ ಕಾರಣದಿಂದ, ಈ ಮುಂದಿನ ಪ್ರಶ್ನೆಗಳನ್ನು ಪರಿಗಣಿಸುವುದು ಸೂಕ್ತ: ದೀಕ್ಷಾಸ್ನಾನವನ್ನು ಪಡೆದುಕೊಳ್ಳಲಿಕ್ಕಾಗಿ ಯಾವ ತಯಾರಿಯನ್ನು ಮಾಡಬೇಕು? ವಯಸ್ಸನ್ನು ಪರಿಗಣಿಸಬೇಕೊ? ಒಬ್ಬ ವ್ಯಕ್ತಿ ದೀಕ್ಷಾಸ್ನಾನಹೊಂದುವ ಮೊದಲು ಯಾವ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿರಬೇಕು? ಎಲ್ಲಕ್ಕಿಂತಲೂ ಪ್ರಾಮುಖ್ಯವಾಗಿ, ತನ್ನ ಸೇವಕರು ದೀಕ್ಷಾಸ್ನಾನದ ಈ ಹೆಜ್ಜೆಯನ್ನು ತೆಗೆದುಕೊಳ್ಳಬೇಕೆಂದು ಯೆಹೋವನು ಏಕೆ ಅಗತ್ಯಪಡಿಸುತ್ತಾನೆ?
ಒಂದು ಗಂಭೀರವಾದ ಕರಾರು
5, 6. (ಎ) ಹಿಂದಿನ ಕಾಲದಲ್ಲಿ ದೇವಜನರು ಯೆಹೋವನ ಪ್ರೀತಿಗೆ ಹೇಗೆ ಪ್ರತಿಕ್ರಿಯಿಸಿದರು? (ಬಿ) ನಾವು ದೀಕ್ಷಾಸ್ನಾನಹೊಂದಿದ ಬಳಿಕ ದೇವರೊಂದಿಗೆ ಯಾವ ಆಪ್ತ ಸಂಬಂಧದಲ್ಲಿ ಆನಂದಿಸಬಲ್ಲೆವು?
5 ಇಸ್ರಾಯೇಲ್ಯರನ್ನು ಐಗುಪ್ತದಿಂದ ಬಿಡಿಸಿದ ಬಳಿಕ, ಯೆಹೋವನು ಅವರನ್ನು ತನ್ನ ‘ಸ್ವಕೀಯಜನರಾಗಿ’ ಸ್ವೀಕರಿಸಿ ಅವರನ್ನು ಪ್ರೀತಿಸಲು, ಸಂರಕ್ಷಿಸಲು ಮತ್ತು ಅವರನ್ನು ‘ಪರಿಶುದ್ಧಜನಾಂಗವಾಗಿ’ ಅಂಗೀಕರಿಸಲು ಸಿದ್ಧನಿದ್ದನು. ಆದರೆ ಈ ಎಲ್ಲ ಆಶೀರ್ವಾದಗಳನ್ನು ಪಡೆಯಲಿಕ್ಕಾಗಿ ಆ ಜನರು ಸ್ಪಷ್ಟವಾದ ರೀತಿಯಲ್ಲಿ ದೇವರ ಪ್ರೀತಿಗೆ ಪ್ರತಿಕ್ರಿಯೆ ತೋರಿಸಬೇಕಿತ್ತು. ಈ ಪ್ರತಿಕ್ರಿಯೆಯನ್ನು ಅವರು ತೋರಿಸಿದ್ದು, ‘ಯೆಹೋವನು ಹೇಳಿದ್ದನ್ನೆಲ್ಲಾ ಮಾಡಲು’ (NIBV) ಮತ್ತು ಆತನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳಲು ಒಪ್ಪಿಕೊಳ್ಳುವ ಮೂಲಕವೇ. (ವಿಮೋಚನಕಾಂಡ 19:4-9) ಪ್ರಥಮ ಶತಮಾನದಲ್ಲಿ ಯೇಸು ತನ್ನ ಹಿಂಬಾಲಕರಿಗೆ ಅವರು ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಬೇಕೆಂದು ಅಪ್ಪಣೆಕೊಟ್ಟನು. ಯೇಸುವಿನ ಬೋಧನೆಯನ್ನು ಸ್ವೀಕರಿಸಿದವರೆಲ್ಲರೂ ದೀಕ್ಷಾಸ್ನಾನಹೊಂದಿದರು. ದೇವರೊಂದಿಗಿನ ಒಂದು ಉತ್ತಮ ಸಂಬಂಧವು, ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟು ಬಳಿಕ ದೀಕ್ಷಾಸ್ನಾನ ಪಡೆದುಕೊಳ್ಳುವುದರ ಮೇಲೆ ಅವಲಂಬಿಸಿತ್ತು.—ಮತ್ತಾಯ 28:19, 20; ಅ. ಕೃತ್ಯಗಳು 2:38, 41.
6 ಈ ಶಾಸ್ತ್ರಾಧಾರಿತ ವೃತ್ತಾಂತಗಳು, ಯೆಹೋವನನ್ನು ಸೇವಿಸುವೆವೆಂದು ಗಂಭೀರವಾದ ಕರಾರುಮಾಡಿ, ಅದನ್ನು ಪಾಲಿಸುವವರನ್ನು ಯೆಹೋವನು ಆಶೀರ್ವದಿಸುತ್ತಾನೆಂದು ತೋರಿಸುತ್ತವೆ. ಕ್ರೈಸ್ತರಿಗೆ ಸಮರ್ಪಣೆ ಮತ್ತು ದೀಕ್ಷಾಸ್ನಾನಗಳು, ಯೆಹೋವನ ಆಶೀರ್ವಾದಕ್ಕೆ ನಡೆಸುವ ಆವಶ್ಯಕ ಹೆಜ್ಜೆಗಳಾಗಿವೆ. ಆತನ ಮಾರ್ಗಗಳಿಗೆ ತಕ್ಕಂತೆ ನಡೆದು, ಆತನ ಮಾರ್ಗದರ್ಶನವನ್ನು ಪಡೆದುಕೊಳ್ಳಲು ನಾವು ದೃಢಸಂಕಲ್ಪವನ್ನು ಮಾಡಿರುತ್ತೇವೆ. (ಕೀರ್ತನೆ 48:14) ಪ್ರತಿಯಾಗಿ, ಯೆಹೋವನು ನಮ್ಮ ಕೈಹಿಡಿದು ನಾವು ನಡೆಯಬೇಕಾದ ಮಾರ್ಗದಲ್ಲಿ ನಮ್ಮನ್ನು ನಡೆಸುತ್ತಾನೆ.—ಕೀರ್ತನೆ 73:23; ಯೆಶಾಯ 30:21; 41:10, 13.
7. ಸಮರ್ಪಣೆ ಮತ್ತು ದೀಕ್ಷಾಸ್ನಾನವು ಒಂದು ವೈಯಕ್ತಿಕ ನಿರ್ಣಯವಾಗಿರಬೇಕು ಏಕೆ?
7 ಈ ಹೆಜ್ಜೆಗಳನ್ನು ತೆಗೆದುಕೊಳ್ಳಲು ನಮ್ಮನ್ನು ಪ್ರಚೋದಿಸಬೇಕಾದದ್ದು, ಯೆಹೋವನಿಗಾಗಿ ಪ್ರೀತಿ ಮತ್ತು ಆತನನ್ನು ಸೇವಿಸಬೇಕೆಂಬ ಆಸೆಯೇ. ಒಬ್ಬನು ಸಾಕಷ್ಟು ಸಮಯ ಅಧ್ಯಯನಮಾಡಿದ್ದಾನೆಂದು ಬೇರೊಬ್ಬರು ಹೇಳುವುದರಿಂದ ಇಲ್ಲವೆ ಅವನ ಸ್ನೇಹಿತರು ದೀಕ್ಷಾಸ್ನಾನ ಪಡೆದುಕೊಳ್ಳುತ್ತಿದ್ದಾರೆ ಎಂಬ ಕಾರಣಕ್ಕಾಗಿ ದೀಕ್ಷಾಸ್ನಾನ ಹೊಂದಬಾರದು. ಹೆತ್ತವರು ಮತ್ತು ಇತರ ಪ್ರೌಢ ಕ್ರೈಸ್ತರು ಒಬ್ಬನು ಸಮರ್ಪಣೆ ಹಾಗೂ ದೀಕ್ಷಾಸ್ನಾನದ ಕುರಿತಾಗಿ ಯೋಚಿಸುವಂತೆ ಉತ್ತೇಜಿಸುವುದು ಸಹಜ. ಅಪೊಸ್ತಲ ಪೇತ್ರನು ಸಹ, ಪಂಚಾಶತ್ತಮದ ಸಮಯದಲ್ಲಿ ತನಗೆ ಕಿವಿಗೊಡುತ್ತಿದ್ದವರಿಗೆ ‘ದೀಕ್ಷಾಸ್ನಾನಮಾಡಿಸಿಕೊಳ್ಳುವಂತೆ’ ಉತ್ತೇಜಿಸಿದನು. (ಅ. ಕೃತ್ಯಗಳು 2:38) ಹೀಗಿದ್ದರೂ, ನಮ್ಮ ಸಮರ್ಪಣೆಯು ಒಂದು ವೈಯಕ್ತಿಕ ವಿಷಯವಾಗಿದೆ ಮತ್ತು ಯಾರೂ ಇದನ್ನು ನಮಗಾಗಿ ಮಾಡಲಾರರು. ದೇವರ ಚಿತ್ತವನ್ನು ಮಾಡುವ ನಿರ್ಣಯವು ನಾವು ಸ್ವತಃ ಮಾಡಿರುವ ನಿರ್ಣಯವಾಗಿರಬೇಕು.—ಕೀರ್ತನೆ 40:8.
ದೀಕ್ಷಾಸ್ನಾನಕ್ಕಾಗಿ ಸಾಕಷ್ಟು ತಯಾರಿ
8, 9. (ಎ) ಶಿಶುಗಳಿಗೆ ದೀಕ್ಷಾಸ್ನಾನಮಾಡಿಸುವುದು ಬೈಬಲ್ಗೆ ಹೊಂದಿಕೆಯಲ್ಲಿಲ್ಲದ ಸಂಗತಿಯಾಗಿದೆ ಏಕೆ? (ಬಿ) ಎಳೆಯರು ದೀಕ್ಷಾಸ್ನಾನ ಪಡೆದುಕೊಳ್ಳುವ ಮುಂಚೆ ಯಾವ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿರತಕ್ಕದ್ದು?
8 ಮಕ್ಕಳು ತಿಳಿವಳಿಕೆಯಿಂದ ಕೂಡಿರುವ ಸಮರ್ಪಣೆಯನ್ನು ಮಾಡಲು ಶಕ್ತರೊ? ದೀಕ್ಷಾಸ್ನಾನಕ್ಕಾಗಿ ಶಾಸ್ತ್ರಗಳಲ್ಲಿ ಯಾವುದೇ ವಯೋಮಿತಿ ಕೊಡಲ್ಪಟ್ಟಿಲ್ಲ. ಆದರೆ ಶಿಶುಗಳಿಗಂತೂ ವಿಶ್ವಾಸಿಗಳಾಗಲು, ನಂಬಿಕೆಯನ್ನು ತೋರಿಸಲು, ಇಲ್ಲವೆ ದೇವರಿಗೆ ಸಮರ್ಪಣೆಮಾಡಿಕೊಳ್ಳಲು ಸಾಧ್ಯವಿಲ್ಲ. (ಅ. ಕೃತ್ಯಗಳು 8:12) ಪ್ರಥಮ ಶತಮಾನದ ಕ್ರೈಸ್ತರ ಬಗ್ಗೆ ಇತಿಹಾಸಕಾರ ಆಗಸ್ಟಸ್ ನೇಆಂಡರ್, ಕ್ರೈಸ್ತ ಧರ್ಮ ಹಾಗೂ ಚರ್ಚಿನ ಸಾಮಾನ್ಯ ಇತಿಹಾಸ (ಇಂಗ್ಲಿಷ್) ಎಂಬ ಅವರ ಪುಸ್ತಕದಲ್ಲಿ ತಿಳಿಸಿದ್ದು: “ಆರಂಭದಲ್ಲಿ ವಯಸ್ಕರಿಗೆ ಮಾತ್ರ ದೀಕ್ಷಾಸ್ನಾನವನ್ನು ಕೊಡಲಾಗುತ್ತಿತ್ತು, ಏಕೆಂದರೆ ದೀಕ್ಷಾಸ್ನಾನ ಹಾಗೂ ನಂಬಿಕೆಗೆ ಪರಸ್ಪರ ನಿಕಟ ಸಂಬಂಧವಿದೆಯೆಂದು ಜನರು ನಂಬುತ್ತಿದ್ದರು.”
9 ಯುವ ಜನರ ವಿಷಯದಲ್ಲಿ ಹೇಳುವುದಾದರೆ ಕೆಲವರು ಬಹುಮಟ್ಟಿಗೆ ಎಳೆಯ ಪ್ರಾಯದಲ್ಲೇ ಆಧ್ಯಾತ್ಮಿಕತೆಯನ್ನು ಬೆಳೆಸಿಕೊಳ್ಳುತ್ತಾರೆ, ಇತರರಿಗೆ ಸ್ವಲ್ಪ ಹೆಚ್ಚು ಸಮಯ ಹಿಡಿಯುತ್ತದೆ. ಆದರೆ ದೀಕ್ಷಾಸ್ನಾನ ಪಡೆಯುವ ಮೊದಲು, ಒಬ್ಬ ಎಳೆಯನಿಗೆ ಯೆಹೋವನೊಂದಿಗೆ ಒಂದು ವೈಯಕ್ತಿಕ ಸಂಬಂಧವಿರಬೇಕು, ಶಾಸ್ತ್ರಗಳಲ್ಲಿರುವ ಮೂಲಭೂತ ವಿಷಯಗಳ ಸದೃಢ ತಿಳಿವಳಿಕೆಯಿರಬೇಕು, ಮತ್ತು ಸಮರ್ಪಣೆಯಲ್ಲಿ ಏನೆಲ್ಲ ಒಳಗೂಡಿದೆ ಎಂಬುದರ ಬಗ್ಗೆ ಸ್ಪಷ್ಟ ಅರಿವು ಇರಬೇಕು. ಇವೆಲ್ಲವೂ ವಯಸ್ಕರಿಗಿರುವಂಥ ಆವಶ್ಯಕತೆಗಳೇ ಆಗಿವೆ.
10. ಸಮರ್ಪಣೆ ಮತ್ತು ದೀಕ್ಷಾಸ್ನಾನಕ್ಕೆ ಮುಂಚೆ ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕಾಗಿದೆ?
10 ಯೇಸು ತನ್ನ ಶಿಷ್ಯರಿಗೆ, ತಾನು ಆಜ್ಞಾಪಿಸಿರುವುದೆಲ್ಲವನ್ನೂ ಹೊಸಬರಿಗೆ ಕಲಿಸುವಂತೆ ಅಪ್ಪಣೆಕೊಟ್ಟನು. (ಮತ್ತಾಯ 28:20) ಹೀಗಿರುವುದರಿಂದ, ಪ್ರಥಮವಾಗಿ ಹೊಸಬರು ಸತ್ಯದ ಬಗ್ಗೆ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಬೇಕು. ಈ ಜ್ಞಾನವು ಅವರಿಗೆ ಯೆಹೋವನಲ್ಲಿ ಮತ್ತು ಆತನ ವಾಕ್ಯದಲ್ಲಿ ನಂಬಿಕೆಯನ್ನು ಬೆಳೆಸಿಕೊಳ್ಳಲು ಸಹಾಯಮಾಡುವುದು. (ರೋಮಾಪುರ 10:17; 1 ತಿಮೊಥೆಯ 2:4; ಇಬ್ರಿಯ 11:6) ಅನಂತರ, ಅಂದರೆ ಈ ಶಾಸ್ತ್ರೀಯ ಸತ್ಯವು ಆ ವ್ಯಕ್ತಿಯ ಹೃದಯವನ್ನು ಸ್ಪರ್ಶಿಸುವಾಗ, ಅದು ಅವನು ತನ್ನ ಹಿಂದಿನ ಜೀವನರೀತಿಗಾಗಿ ಪಶ್ಚಾತ್ತಾಪಪಟ್ಟು ಅದರಿಂದ ತಿರುಗಿಕೊಳ್ಳುವಂತೆ ಪ್ರಚೋದಿಸುವುದು. (ಅ. ಕೃತ್ಯಗಳು 3:19) ಕೊನೆಗೆ ಈ ವ್ಯಕ್ತಿ, ತನ್ನನ್ನು ಯೆಹೋವನಿಗೆ ಸಮರ್ಪಿಸಿಕೊಂಡು, ಯೇಸು ಅಪ್ಪಣೆಕೊಟ್ಟಂತೆ ದೀಕ್ಷಾಸ್ನಾನಪಡೆಯಲು ಬಯಸುವ ಹಂತವನ್ನು ತಲಪುತ್ತಾನೆ.
11. ದೀಕ್ಷಾಸ್ನಾನಕ್ಕೆ ಮುಂಚೆ ನಾವು ಸಾರುವ ಕೆಲಸದಲ್ಲಿ ಕ್ರಮವಾಗಿ ಪಾಲ್ಗೊಳ್ಳುವುದು ಏಕೆ ಪ್ರಾಮುಖ್ಯ?
11 ದೀಕ್ಷಾಸ್ನಾನ ಪಡೆದುಕೊಳ್ಳುವುದಕ್ಕಾಗಿ ಮಾಡುವ ಪ್ರಗತಿಯಲ್ಲಿ ತೆಗೆದುಕೊಳ್ಳಬೇಕಾದ ಇನ್ನೊಂದು ಪ್ರಾಮುಖ್ಯ ಹೆಜ್ಜೆಯು, ರಾಜ್ಯದ ಸುವಾರ್ತೆಯನ್ನು ಸಾರುವುದೇ ಆಗಿದೆ. ಈ ಕಡೇ ದಿವಸಗಳಲ್ಲಿ ಯೆಹೋವನು ತನ್ನ ಜನರಿಗೆ ನೇಮಿಸಿರುವ ಅತಿ ಪ್ರಮುಖ ಕೆಲಸವು ಇದಾಗಿದೆ. (ಮತ್ತಾಯ 24:14) ಹೀಗಿರುವುದರಿಂದ, ದೀಕ್ಷಾಸ್ನಾನಪಡೆದಿರದ ಪ್ರಚಾರಕರು ಸಹ ಸತ್ಯದ ಬಗ್ಗೆ ಇತರರೊಂದಿಗೆ ಮಾತಾಡುವ ಆನಂದದಲ್ಲಿ ಪಾಲ್ಗೊಳ್ಳಬಹುದು. ಈ ಕೆಲಸದಲ್ಲಿ ಪಾಲ್ಗೊಳ್ಳುವುದು ಅವರನ್ನು, ದೀಕ್ಷಾಸ್ನಾನದ ಬಳಿಕವೂ ಕ್ಷೇತ್ರ ಶುಶ್ರೂಷೆಯಲ್ಲಿ ಕ್ರಮವಾಗಿ ಮತ್ತು ಹುರುಪಿನಿಂದ ಪಾಲ್ಗೊಳ್ಳುವಂತೆ ಸಜ್ಜುಗೊಳಿಸುತ್ತದೆ.—ರೋಮಾಪುರ 10:9, 10, 14, 15.
ದೀಕ್ಷಾಸ್ನಾನ ಪಡೆದುಕೊಳ್ಳಲು ನಿಮಗೆ ಏನಾದರೂ ಅಡ್ಡಿಯುಂಟೊ?
12. ದೀಕ್ಷಾಸ್ನಾನ ಪಡೆದುಕೊಳ್ಳುವುದರಿಂದ ಕೆಲವರನ್ನು ತಡೆದುಹಿಡಿಯಬಹುದಾದ ವಿಷಯಗಳಾವುವು?
12 ಕೆಲವರು ದೀಕ್ಷಾಸ್ನಾನಪಡೆಯದೆ ಇರಲು ಕಾರಣವು, ಅದರಿಂದಾಗಿ ಬರುವ ಜವಾಬ್ದಾರಿಯನ್ನು ಸ್ವೀಕರಿಸಲು ಅವರಿಗಿರುವ ಹಿಂಜರಿಕೆಯಾಗಿರಬಹುದು. ಯೆಹೋವನ ಮಟ್ಟಗಳನ್ನು ತಲಪಲಿಕ್ಕಾಗಿ ಅವರು ತಮ್ಮ ಜೀವನಗಳಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಬೇಕೆಂಬುದನ್ನು ಅವರು ಗ್ರಹಿಸಿರುತ್ತಾರೆ. ಅಥವಾ ದೀಕ್ಷಾಸ್ನಾನದ ಅನಂತರ, ದೇವರ ಆವಶ್ಯಕತೆಗಳಿಗನುಸಾರ ಜೀವಿಸುವುದು ತಮಗೆ ಕಷ್ಟಕರವಾಗಿರಬಹುದೆಂದು ಅವರು ಹೆದರಬಹುದು. “ಯಾರಿಗೆ ಗೊತ್ತು, ಒಂದು ದಿನ ನಾನೇನಾದರೂ ಕೆಟ್ಟ ಕೆಲಸ ಮಾಡಿದರೆ ನನ್ನನ್ನು ಸಭೆಯಿಂದ ಬಹಿಷ್ಕರಿಸಲಾಗುವುದು” ಎಂದು ಕೆಲವರು ತರ್ಕಿಸಬಹುದು.
13. ಯೇಸುವಿನ ದಿನದಲ್ಲಿ ಅವನ ಹಿಂಬಾಲಕರಾಗುವುದರಿಂದ ಕೆಲವರನ್ನು ಯಾವ ವಿಷಯಗಳು ತಡೆದುಹಿಡಿದವು?
13 ಯೇಸುವಿನ ದಿನದಲ್ಲಿ ಕೆಲವರ ವೈಯಕ್ತಿಕ ಅಭಿರುಚಿಗಳು ಮತ್ತು ಕುಟುಂಬ ಸಂಬಂಧಗಳು ಅವನ ಶಿಷ್ಯರಾಗುವುದರಿಂದ ಅವರನ್ನು ತಡೆದುಹಿಡಿದವು. ಒಬ್ಬ ಶಾಸ್ತ್ರಿಯು, ಯೇಸು ಎಲ್ಲಿ ಹೋದರೂ ಅಲ್ಲಿ ಅವನನ್ನು ಹಿಂಬಾಲಿಸುವೆನೆಂದು ಘಂಟಾಘೋಷವಾಗಿ ಹೇಳಿದನು. ಆದರೆ ಯೇಸು ಅವನಿಗೆ, ತನಗೆ ಅನೇಕ ಸಂದರ್ಭಗಳಲ್ಲಿ ರಾತ್ರಿ ಮಲಗಲು ಸಹ ಸ್ಥಳವಿರುವುದಿಲ್ಲವೆಂದು ಹೇಳಿದನು. ಯೇಸು ತನಗೆ ಕಿವಿಗೊಡುತ್ತಿದ್ದ ಇನ್ನೊಬ್ಬನಿಗೆ ತನ್ನ ಹಿಂಬಾಲಕನಾಗುವ ಆಮಂತ್ರಣ ನೀಡಿದಾಗ, ಆ ವ್ಯಕ್ತಿ ತಾನು ಮೊದಲು ತನ್ನ ತಂದೆಯ ‘ಉತ್ತರಕ್ರಿಯೆಗಳನ್ನು ಮಾಡಬೇಕು’ ಎಂದು ಉತ್ತರಿಸಿದನು. ಅವನು, ಯೇಸುವನ್ನು ಹಿಂಬಾಲಿಸಿ ಕುಟುಂಬದ ಜವಾಬ್ದಾರಿಯನ್ನು ಹೊರುವ ಸಮಯ ಬಂದಾಗ ಅದನ್ನು ನಿರ್ವಹಿಸುವ ಬದಲು, ತನ್ನ ತಂದೆ ಸಾಯುವ ವರೆಗೆ ಮನೆಯಲ್ಲಿ ಕಾದುಕೊಂಡಿರುವ ಆಯ್ಕೆಮಾಡಿದನು. ಕೊನೆಯದಾಗಿ ಮೂರನೇ ವ್ಯಕ್ತಿಯೊಬ್ಬನು, ತನ್ನ ಮನೆಯವರಿಗೆ ‘ಹೇಳಿಬರಬೇಕು’ ಎಂದು ಉತ್ತರಿಸಿದನು. ಈ ರೀತಿಯ ಕಾರ್ಯವಿಳಂಬವು ‘ಹಿಂದಕ್ಕೆ ನೋಡುವುದು’ ಆಗಿದೆಯೆಂದು ಯೇಸು ವರ್ಣಿಸಿದನು. ಹೀಗೆ, ಯಾರು ಕಾರ್ಯವಿಳಂಬಮಾಡಲು ಬಯಸುತ್ತಾರೊ ಅವರಿಗೆ, ತಮ್ಮ ಕ್ರೈಸ್ತ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯಾವಾಗಲೂ ಒಂದಲ್ಲ ಒಂದು ನೆವ ಖಂಡಿತ ಸಿಗುತ್ತದೆಂದು ತೋರುತ್ತದೆ.—ಲೂಕ 9:57-62.
14. (ಎ) ಪೇತ್ರ, ಅಂದ್ರೆಯ, ಯಾಕೋಬ ಮತ್ತು ಯೋಹಾನರಿಗೆ ಮನುಷ್ಯರನ್ನು ಹಿಡಿಯುವ ಬೆಸ್ತರಾಗುವಂತೆ ಯೇಸು ಆಮಂತ್ರಿಸಿದಾಗ ಅವರ ಪ್ರತಿಕ್ರಿಯೆ ಹೇಗಿತ್ತು? (ಬಿ) ನಾವು ಯೇಸುವಿನ ನೊಗವನ್ನು ಸ್ವೀಕರಿಸಲು ಏಕೆ ಹಿಂಜರಿಯಬಾರದು?
14 ಪೇತ್ರ, ಅಂದ್ರೆಯ, ಯಾಕೋಬ ಮತ್ತು ಯೋಹಾನರ ಮಾದರಿಯು ಇದಕ್ಕೆ ತದ್ವಿರುದ್ಧವಾಗಿದೆ. ಯೇಸು ಅವರಿಗೆ, ತನ್ನನ್ನು ಹಿಂಬಾಲಿಸಿ ಮನುಷ್ಯರನ್ನು ಹಿಡಿಯುವ ಬೆಸ್ತರಾಗುವಂತೆ ಆಮಂತ್ರಿಸಿದಾಗ, ಕೂಡಲೇ “ಅವರು ತಮ್ಮ ಬಲೆಗಳನ್ನು ಬಿಟ್ಟು ಆತನ ಹಿಂದೆ ಹೋದರು” ಎಂದು ಬೈಬಲ್ ಹೇಳುತ್ತದೆ. (ಮತ್ತಾಯ 4:19-22) ಅವರು ತಡಮಾಡದೆ ಆ ನಿರ್ಣಯವನ್ನು ತೆಗೆದುಕೊಂಡದ್ದರಿಂದ, ಯೇಸು ತದನಂತರ ಅವರಿಗೆ ಹೇಳಿದ ಈ ಮಾತುಗಳನ್ನು ಸ್ವತಃ ಅನುಭವದಿಂದ ತಿಳಿದುಕೊಂಡರು: “ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿಸಿಕ್ಕುವದು. ಯಾಕಂದರೆ ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು.” (ಮತ್ತಾಯ 11:29, 30) ದೀಕ್ಷಾಸ್ನಾನವು ನಮ್ಮ ಮೇಲೆ ಜವಾಬ್ದಾರಿಯ ನೊಗವನ್ನು ಹೊರಿಸುತ್ತದಾದರೂ, ಈ ನೊಗವು ನಮ್ಮನ್ನು ಬಹಳಷ್ಟು ಚೈತನ್ಯಗೊಳಿಸುವ ಮೃದುವಾದ ಮತ್ತು ಸಹಿಸಲಾಗುವಂಥ ಹೊರೆಯಾಗಿದೆ ಎಂದು ಯೇಸು ನಮಗೆ ಆಶ್ವಾಸನೆ ನೀಡುತ್ತಾನೆ.
15. ನಮಗೆ ದೇವರ ಬೆಂಬಲ ಸಿಗುವುದೆಂಬ ಭರವಸೆ ಇರಬಲ್ಲದೆಂದು ಮೋಶೆ ಹಾಗೂ ಯೆರೆಮೀಯರ ಮಾದರಿಗಳು ಹೇಗೆ ತೋರಿಸುತ್ತವೆ?
15 ದೀಕ್ಷಾಸ್ನಾನದ ನಂತರ ಬರುವ ಜವಾಬ್ದಾರಿಯನ್ನು ಹೊರಲಾರೆವು ಎಂಬ ಅನಿಸಿಕೆಗಳಿರುವುದು ಸಹಜವೇ. ಆರಂಭದಲ್ಲಿ ಮೋಶೆ ಹಾಗೂ ಯೆರೆಮೀಯರಿಗೆ ಸಹ ಯೆಹೋವನು ಅವರಿಗೆ ಕೊಟ್ಟ ನೇಮಕಗಳನ್ನು ನಿರ್ವಹಿಸಲು ಸಾಧ್ಯವಿಲ್ಲವೆಂಬ ಭಾವನೆಯಿತ್ತು. (ವಿಮೋಚನಕಾಂಡ 3:11; ಯೆರೆಮೀಯ 1:6) ದೇವರು ಅವರಿಗೆ ಹೇಗೆ ಪುನರಾಶ್ವಾಸನೆ ಕೊಟ್ಟನು? ಆತನು ಮೋಶೆಗೆ, “ನಾನೇ ನಿನ್ನ ಸಂಗಡ ಇರುವೆನು” ಎಂದು ಹೇಳಿದನು. ಮತ್ತು ಯೆರೆಮೀಯನಿಗೆ, “ನಿನ್ನನ್ನುದ್ಧರಿಸಲು ನಾನೇ ನಿನ್ನೊಂದಿಗಿರುವೆನು” ಎಂದು ಮಾತುಕೊಟ್ಟನು. (ವಿಮೋಚನಕಾಂಡ 3:12; ಯೆರೆಮೀಯ 1:8) ನಾವು ಸಹ ದೇವರ ಬೆಂಬಲದಲ್ಲಿ ಭರವಸೆಯಿಡಸಾಧ್ಯವಿದೆ. ನಮ್ಮಲ್ಲಿ ದೇವರಿಗಾಗಿ ಪ್ರೀತಿ ಮತ್ತು ಆತನ ಮೇಲೆ ಭರವಸೆಯಿದ್ದರೆ, ನಮ್ಮ ಸಮರ್ಪಣೆಗೆ ತಕ್ಕಂತೆ ನಾವು ಜೀವಿಸಲು ಶಕ್ತರಾಗಿರುವೆವೊ ಇಲ್ಲವೊ ಎಂಬ ಸಂದೇಹಗಳನ್ನು ಹೊಡೆದೋಡಿಸಲು ಅದು ನಮಗೆ ಸಹಾಯಮಾಡುವುದು. ಅಪೊಸ್ತಲ ಯೋಹಾನನು ಬರೆದುದು: “ಪ್ರೀತಿಯು ಇರುವಲ್ಲಿ ಹೆದರಿಕೆಯಿಲ್ಲ. . . . ಪೂರ್ಣಪ್ರೀತಿಯು ಹೆದರಿಕೆಯನ್ನು ಹೊರಡಿಸಿಬಿಡುತ್ತದೆ.” (1 ಯೋಹಾನ 4:18) ಒಬ್ಬ ಪುಟ್ಟ ಹುಡುಗನಿಗೆ ಒಬ್ಬನೇ ನಡೆಯಬೇಕಾದಾಗ ಹೆದರಿಕೆಯಾಗಬಹುದು, ಆದರೆ ಅವನು ತನ್ನ ತಂದೆಯ ಕೈಹಿಡಿದು ನಡೆಯುವಾಗ ಹೆದರಿಕೆಯಿಲ್ಲದೆ ಭರವಸೆಯಿಂದ ನಡೆಯಬಲ್ಲನು. ಅದೇ ರೀತಿಯಲ್ಲಿ, ನಮ್ಮ ಪೂರ್ಣ ಹೃದಯದಿಂದ ನಾವು ಯೆಹೋವನಲ್ಲಿ ಭರವಸೆಯಿಟ್ಟರೆ, ನಾವು ಆತನ ಜೊತೆಯಲ್ಲೇ ನಡೆಯುತ್ತಿರುವಾಗ ಆತನು ನಮ್ಮ ‘ಮಾರ್ಗಗಳನ್ನು ಸರಾಗಮಾಡುವ’ ಮಾತುಕೊಡುತ್ತಾನೆ.—ಜ್ಞಾನೋಕ್ತಿ 3:5, 6.
ಘನತೆಗೆಯೋಗ್ಯ ಸಂದರ್ಭ
16. ದೀಕ್ಷಾಸ್ನಾನಕ್ಕಾಗಿ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿ ಹೊರಬರುವುದು ಸೇರಿದೆ ಏಕೆ?
16 ಸಾಮಾನ್ಯವಾಗಿ ದೀಕ್ಷಾಸ್ನಾನಕ್ಕೆ ಸ್ವಲ್ಪ ಮುಂಚೆ, ಕ್ರೈಸ್ತ ದೀಕ್ಷಾಸ್ನಾನದ ಮಹತ್ವವನ್ನು ವಿವರಿಸುವಂಥ ಒಂದು ಶಾಸ್ತ್ರಾಧಾರಿತ ಭಾಷಣವಿರುತ್ತದೆ. ಈ ಭಾಷಣದ ಅಂತ್ಯದಲ್ಲಿ ಅಭ್ಯರ್ಥಿಗಳಿಗೆ, ದೀಕ್ಷಾಸ್ನಾನದ ಕುರಿತಾದ ಎರಡು ಪ್ರಶ್ನೆಗಳಿಗೆ ಉತ್ತರಕೊಡುವ ಮೂಲಕ ತಮ್ಮ ನಂಬಿಕೆಯ ಬಗ್ಗೆ ಬಹಿರಂಗ ಅರಿಕೆಯನ್ನು ಮಾಡುವಂತೆ ಕೇಳಿಕೊಳ್ಳಲಾಗುತ್ತದೆ. (ರೋಮಾಪುರ 10:10; ಪುಟ 22ರಲ್ಲಿರುವ ಚೌಕವನ್ನು ನೋಡಿ.) ತದನಂತರ ಅಭ್ಯರ್ಥಿಗಳನ್ನು ನೀರಿನಲ್ಲಿ ಮುಳುಗಿಸಿ ಹೊರತರಲಾಗುತ್ತದೆ. ಈ ವಿಷಯದಲ್ಲಿ ಯೇಸುವಿಟ್ಟ ನಮೂನೆಯನ್ನು ಅನುಸರಿಸಲಾಗುತ್ತದೆ. ಏಕೆಂದರೆ ಬೈಬಲ್ ತೋರಿಸುವಂತೆ, ದೀಕ್ಷಾಸ್ನಾನಪಡೆದ ಬಳಿಕ ಯೇಸು “ನೀರಿನಿಂದ ಮೇಲಕ್ಕೆ ಬಂದನು,” ಇಲ್ಲವೆ ‘ನೀರಿನೊಳಗಿಂದ ಮೇಲಕ್ಕೆ ಬಂದನು.’ (ಮತ್ತಾಯ 3:16; ಮಾರ್ಕ 1:10) ಇದರಿಂದ ಸ್ಪಷ್ಟವಾಗಿ ತೋರಿಬರುವ ಸಂಗತಿಯೇನೆಂದರೆ, ಸ್ನಾನಿಕನಾದ ಯೋಹಾನನು ಯೇಸುವನ್ನು ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿಸಿ ಹೊರತಂದನು.b ಸಂಪೂರ್ಣ ನಿಮಜ್ಜನವು ನಾವು ನಮ್ಮ ಜೀವನದಲ್ಲಿ ಮಾಡಿರುವ ಗಮನಾರ್ಹ ಬದಲಾವಣೆಗಳನ್ನು ಸೂಕ್ತ ರೀತಿಯಲ್ಲಿ ಸಂಕೇತಿಸುತ್ತದೆ. ಅದೇನೆಂದರೆ, ನಮ್ಮ ಹಿಂದಿನ ಜೀವನಕ್ರಮದ ವಿಷಯದಲ್ಲಿ ನಾವು ಸಾಂಕೇತಿಕವಾಗಿ ಸಾಯುತ್ತೇವೆ ಮತ್ತು ದೇವರ ಸೇವೆಯಲ್ಲಿ ಜೀವನವನ್ನು ಹೊಸದಾಗಿ ಆರಂಭಿಸುತ್ತೇವೆ.
17. ದೀಕ್ಷಾಸ್ನಾನದ ಅಭ್ಯರ್ಥಿಗಳು ಮತ್ತು ಪ್ರೇಕ್ಷಕರು ಆ ಸಂದರ್ಭದ ಘನತೆಗೆ ಹೇಗೆ ನೆರವಾಗಬಲ್ಲರು?
17 ದೀಕ್ಷಾಸ್ನಾನವು ಗಂಭೀರವಾದ ಹಾಗೂ ಆನಂದದ ಸಂದರ್ಭವಾಗಿದೆ. ಯೋಹಾನನು ಯೋರ್ದನ್ ಹೊಳೆಯಲ್ಲಿ ಯೇಸುವನ್ನು ಮುಳುಗಿಸುತ್ತಿದ್ದಾಗ ಯೇಸು ಪ್ರಾರ್ಥಿಸುತ್ತಾ ಇದ್ದನೆಂದು ಬೈಬಲ್ ಸೂಚಿಸುತ್ತದೆ. (ಲೂಕ 3:21, 22) ಅವನ ಈ ಮಾದರಿಗನುಸಾರ ಇಂದು ದೀಕ್ಷಾಸ್ನಾನದ ಅಭ್ಯರ್ಥಿಗಳು ಯೋಗ್ಯ ರೀತಿಯ ನಡತೆಯನ್ನು ತೋರಿಸಬೇಕು. ಮತ್ತು ಬೈಬಲ್ ನಮ್ಮ ದಿನನಿತ್ಯದ ಜೀವನದಲ್ಲೇ ಸಭ್ಯ ಉಡುಪನ್ನು ಧರಿಸುವಂತೆ ಹೇಳುವಾಗ, ನಮ್ಮ ದೀಕ್ಷಾಸ್ನಾನದ ದಿನದಂದು ನಾವು ಈ ಸಲಹೆಯನ್ನು ಎಷ್ಟು ಹೆಚ್ಚಾಗಿ ಪಾಲಿಸಬೇಕಲ್ಲವೆ! (1 ತಿಮೊಥೆಯ 2:9) ಈ ಸಂದರ್ಭದಲ್ಲಿ ಹಾಜರಿರುವ ಪ್ರೇಕ್ಷಕರು, ದೀಕ್ಷಾಸ್ನಾನದ ಭಾಷಣಕ್ಕೆ ಜಾಗರೂಕತೆಯಿಂದ ಕಿವಿಗೊಡುವ ಮೂಲಕ ಮತ್ತು ಆ ಘಟನೆಯನ್ನು ವ್ಯವಸ್ಥಿತ ರೀತಿಯಲ್ಲಿ ಗಮನಿಸುವ ಮೂಲಕ ಅವರು ಸಹ ಯೋಗ್ಯ ಗೌರವವನ್ನು ತೋರಿಸಬಹುದು.—1 ಕೊರಿಂಥ 14:40.
ದೀಕ್ಷಾಸ್ನಾನಪಡೆಯುವ ಶಿಷ್ಯರು ಆನಂದಿಸುವ ಆಶೀರ್ವಾದಗಳು
18, 19. ದೀಕ್ಷಾಸ್ನಾನವು ಯಾವ ಸುಯೋಗಗಳನ್ನೂ ಆಶೀರ್ವಾದಗಳನ್ನೂ ತರುತ್ತದೆ?
18 ನಾವು ದೇವರಿಗೆ ನಮ್ಮನ್ನು ಸಮರ್ಪಿಸಿಕೊಂಡು, ದೀಕ್ಷಾಸ್ನಾನಪಡೆದಂದಿನಿಂದ ಒಂದು ಅಪೂರ್ವ ಕುಟುಂಬದ ಭಾಗವಾಗುತ್ತೇವೆ. ಮೊತ್ತಮೊದಲಾಗಿ, ಯೆಹೋವನು ನಮ್ಮ ತಂದೆ ಹಾಗೂ ಸ್ನೇಹಿತನಾಗುತ್ತಾನೆ. ನಮ್ಮ ದೀಕ್ಷಾಸ್ನಾನಕ್ಕೆ ಮುಂಚೆ ನಾವು ಅವನಿಂದ ದೂರವಾಗಿದ್ದೆವು; ಆದರೆ ಈಗ ನಾವು ಆತನೊಂದಿಗೆ ಸಂಧಾನಮಾಡಿಕೊಂಡಿರುತ್ತೇವೆ. (2 ಕೊರಿಂಥ 5:19; ಕೊಲೊಸ್ಸೆ 1:20) ಕ್ರಿಸ್ತನ ಯಜ್ಞದ ಮುಖಾಂತರ ನಾವು ದೇವರ ಸಮೀಪಕ್ಕೆ ಬಂದಿರುತ್ತೇವೆ ಮತ್ತು ಆತನು ನಮ್ಮ ಸಮೀಪಕ್ಕೆ ಬರುತ್ತಾನೆ. (ಯಾಕೋಬ 4:8) ಪ್ರವಾದಿಯಾದ ಮಲಾಕಿಯನು, ಯೆಹೋವನು ತನ್ನ ಹೆಸರನ್ನು ಉಪಯೋಗಿಸುವವರಿಗೆ ಮತ್ತು ತನ್ನ ನಾಮಧಾರಿಗಳಾಗಿರುವವರಿಗೆ ಹೇಗೆ ಗಮನಕೊಟ್ಟು ಆಲಿಸುತ್ತಾನೆ ಹಾಗೂ ಅವರ ಹೆಸರುಗಳನ್ನು ತನ್ನ ಸ್ಮರಣೆಯ ಪುಸ್ತಕದಲ್ಲಿ ಸೇರಿಸುತ್ತಾನೆಂಬುದನ್ನು ವರ್ಣಿಸುತ್ತಾನೆ. ದೇವರು ತಿಳಿಸುವುದು: ‘ಅವರು ನನಗೆ ಸ್ವಕೀಯ ಜನರಾಗಿರುವರು; ಒಬ್ಬನು ತನ್ನ ಸ್ವಂತ ಮಗನನ್ನು ಕರುಣಿಸುವಂತೆ ನಾನು ಅವರನ್ನು ಕರುಣಿಸುವೆನು.’—ಮಲಾಕಿಯ 3:16-18.
19 ದೀಕ್ಷಾಸ್ನಾನವು ನಾವು ಒಂದು ಲೋಕವ್ಯಾಪಕ ಸಹೋದರತ್ವದ ಭಾಗವಾಗುವುದನ್ನೂ ಸಾಧ್ಯಗೊಳಿಸುತ್ತದೆ. ಕ್ರಿಸ್ತನ ಶಿಷ್ಯರು ಮಾಡಿರುವ ತ್ಯಾಗಗಳಿಗಾಗಿ ಅವರಿಗೆ ಯಾವ ಆಶೀರ್ವಾದಗಳು ಸಿಗುವವೆಂದು ಅಪೊಸ್ತಲ ಪೇತ್ರನು ಕೇಳಿದಾಗ ಯೇಸು ವಾಗ್ದಾನಿಸಿದ್ದು: “ನನ್ನ ಹೆಸರಿನ ನಿಮಿತ್ತ ಮನೆಗಳನ್ನಾಗಲಿ ಅಣ್ಣತಮ್ಮಂದಿರನ್ನಾಗಲಿ ಅಕ್ಕತಂಗಿಯರನ್ನಾಗಲಿ ತಂದೆಯನ್ನಾಗಲಿ ತಾಯಿಯನ್ನಾಗಲಿ ಮಕ್ಕಳನ್ನಾಗಲಿ ಭೂಮಿಯನ್ನಾಗಲಿ ಬಿಟ್ಟುಬಿಟ್ಟಿರುವವರೆಲ್ಲರಿಗೆ ಅನೇಕ ಪಾಲು ಹೆಚ್ಚಾಗಿ ಸಿಕ್ಕುವದು; ಮತ್ತು ಅವರು ನಿತ್ಯಜೀವಕ್ಕೆ ಬಾಧ್ಯರಾಗುವರು.” (ಮತ್ತಾಯ 19:29) ವರ್ಷಗಳಾನಂತರ ಪೇತ್ರನು, “ಲೋಕದಲ್ಲಿ” ಬೆಳೆದಿದ್ದಂಥ ‘ಸಹೋದರರ ಇಡೀ ಬಳಗದ’ (NW) ಕುರಿತಾಗಿ ಬರೆದನು. ಈ ಪ್ರೀತಿಭರಿತ ಸಹೋದರತ್ವದ ಬೆಂಬಲ ಹಾಗೂ ಆಶೀರ್ವಾದಗಳನ್ನು ಪೇತ್ರನು ಸ್ವತಃ ಅನುಭವಿಸಿದ್ದನು ಮತ್ತು ನಾವು ಸಹ ಅದನ್ನು ಅನುಭವಿಸಬಲ್ಲೆವು.—1 ಪೇತ್ರ 2:17; 5:9.
20. ದೀಕ್ಷಾಸ್ನಾನವು ಯಾವ ಅದ್ಭುತ ಪ್ರತೀಕ್ಷೆಯನ್ನು ನೀಡುತ್ತದೆ?
20 ಅಷ್ಟುಮಾತ್ರವಲ್ಲದೆ, ತನ್ನನ್ನು ಹಿಂಬಾಲಿಸುವವರು ‘ನಿತ್ಯಜೀವಕ್ಕೆ ಬಾಧ್ಯರಾಗುವರು’ ಎಂದು ಯೇಸು ಸೂಚಿಸಿದನು. ಹೌದು, ಸಮರ್ಪಣೆ ಹಾಗೂ ದೀಕ್ಷಾಸ್ನಾನವು, ದೇವರ ನೂತನ ಲೋಕದಲ್ಲಿನ ‘ವಾಸ್ತವವಾದ ಜೀವವನ್ನು’ ಅಂದರೆ ನಿತ್ಯಜೀವವನ್ನು ಪಡೆದುಕೊಳ್ಳುವ ಪ್ರತೀಕ್ಷೆಯನ್ನು ಮುಂದಿಡುತ್ತದೆ. (1 ತಿಮೊಥೆಯ 6:19) ನಮ್ಮ ಮತ್ತು ನಮ್ಮ ಕುಟುಂಬಗಳ ಭವಿಷ್ಯಕ್ಕಾಗಿ ಇದಕ್ಕಿಂತ ಉತ್ತಮವಾದ ಅಸ್ತಿವಾರವನ್ನು ಕಟ್ಟಲಾದೀತೇ? ಈ ಅದ್ಭುತವಾದ ಪ್ರತೀಕ್ಷೆಯು, ನಾವು ‘ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಯುಗಯುಗಾಂತರಗಳಲ್ಲಿ ನಡೆಯಲು’ ಶಕ್ತರನ್ನಾಗಿ ಮಾಡುವುದು.—ಮೀಕ 4:5.
[ಪಾದಟಿಪ್ಪಣಿಗಳು]
a ಅದೇ ರೀತಿಯಲ್ಲಿ, ಪಂಚಾಶತ್ತಮ ದಿನದಂದು ಪೇತ್ರನ ಭಾಷಣಕ್ಕೆ ಕಿವಿಗೊಟ್ಟ ಮೂರು ಸಾವಿರ ಮಂದಿ ಯೆಹೂದ್ಯರು ಮತ್ತು ಯೆಹೂದಿ ಮತಾವಲಂಬಿಗಳು ತಡಮಾಡದೆ ದೀಕ್ಷಾಸ್ನಾನಹೊಂದಿದರು. ಅವರು ಸಹ ಐಥಿಯೋಪ್ಯದ ಆ ಕಂಚುಕಿಯಂತೆ, ಈಗಾಗಲೇ ದೇವರ ವಾಕ್ಯದ ಮೂಲಭೂತ ಬೋಧನೆಗಳು ಮತ್ತು ಮೂಲತತ್ತ್ವಗಳೊಂದಿಗೆ ಪರಿಚಿತರಾಗಿದ್ದರು.—ಅ. ಕೃತ್ಯಗಳು 2:37-41.
b ವೈನ್ಸ್ ಎಕ್ಸ್ಪೊಸಿಟರಿ ಡಿಕ್ಷನೆರಿ ಆಫ್ ನ್ಯೂ ಟೆಸ್ಟಮೆಂಟ್ ವರ್ಡ್ಸ್ಗನುಸಾರ ಬ್ಯಾಪ್ಟಿಸ್ಮಾ (ದೀಕ್ಷಾಸ್ನಾನ) ಎಂಬ ಗ್ರೀಕ್ ಪದವು, “ನಿಮಜ್ಜನ, ಮುಳುಗಿಸುವಿಕೆ ಮತ್ತು ಹೊರಬರುವಿಕೆಯ ಪ್ರಕ್ರಿಯೆಗಳನ್ನು” ಸೂಚಿಸುತ್ತದೆ.
ನೀವು ವಿವರಿಸಬಲ್ಲಿರೊ?
• ಯೆಹೋವನ ಪ್ರೀತಿಗೆ ನಾವು ಹೇಗೆ ಮತ್ತು ಏಕೆ ಪ್ರತಿಕ್ರಿಯಿಸಬೇಕು?
• ದೀಕ್ಷಾಸ್ನಾನಕ್ಕಿಂತ ಮುಂಚೆ ಯಾವ ಆಧ್ಯಾತ್ಮಿಕ ಪ್ರಗತಿಯನ್ನು ಮಾಡತಕ್ಕದ್ದು?
• ಎಲ್ಲಾದರೂ ತಪ್ಪಿಬೀಳುವೆವು ಎಂಬ ಭಯ ಇಲ್ಲವೆ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಹಿಂಜರಿಯುವುದು, ದೀಕ್ಷಾಸ್ನಾನ ಪಡೆದುಕೊಳ್ಳುವುದರಿಂದ ನಮ್ಮನ್ನು ಏಕೆ ತಡೆದುಹಿಡಿಯಬಾರದು?
• ಯೇಸು ಕ್ರಿಸ್ತನ ದೀಕ್ಷಾಸ್ನಾನಪಡೆದ ಶಿಷ್ಯರು ಯಾವ ಅಪೂರ್ವ ಆಶೀರ್ವಾದಗಳಲ್ಲಿ ಆನಂದಿಸಸಾಧ್ಯವಿದೆ?
[ಪುಟ 26ರಲ್ಲಿರುವ ಚಿತ್ರ]
“ನನಗೆ ದೀಕ್ಷಾಸ್ನಾನವಾಗುವದಕ್ಕೆ ಅಡ್ಡಿ ಏನು”?
[ಪುಟ 29ರಲ್ಲಿರುವ ಚಿತ್ರಗಳು]
ದೀಕ್ಷಾಸ್ನಾನವು ಗಂಭೀರವಾದ ಹಾಗೂ ಆನಂದದ ಸಂದರ್ಭವಾಗಿದೆ