ಹುಟ್ಟಿನಿಂದಲೇ ದೇವರು ಆದುಕೊಂಡ ಜನಾಂಗದ ಸದಸ್ಯರು
“[ನಿಮ್ಮ ದೇವರಾದ ಯೆಹೋವನು] ಭೂಲೋಕದಲ್ಲಿರುವ ಸಮಸ್ತ ಜನಾಂಗಗಳಲ್ಲಿ ನಿಮ್ಮನ್ನೇ ಸ್ವಕೀಯಜನವಾಗುವದಕ್ಕೆ ಆದುಕೊಂಡನು.”—ಧರ್ಮೋಪದೇಶಕಾಂಡ 7:6.
1, 2. ಯೆಹೋವನು ತನ್ನ ಜನರಿಗೋಸ್ಕರ ಯಾವ ಶೂರಕೃತ್ಯವನ್ನು ನಡಿಸಿದನು, ಮತ್ತು ಇಸ್ರಾಯೇಲ್ಯರು ಆತನೊಂದಿಗೆ ಯಾವ ಸಂಬಂಧದೊಳಗೆ ಸೇರಿದರು?
ಸಾ.ಶ.ಪೂ. 1513ರಲ್ಲಿ ಯೆಹೋವನು ತನ್ನ ಭೂಸೇವಕರೊಂದಿಗೆ ಒಂದು ಹೊಸ ಸಂಬಂಧವನ್ನು ರಚಿಸಿದನು. ಅದೇ ವರ್ಷ ಅವನು ಒಂದು ಲೋಕ ಶಕ್ತಿಯ ಸೊಕ್ಕನ್ನಡಗಿಸಿ, ಆ ಇಸ್ರಾಯೇಲ್ಯರನ್ನು ದಾಸತ್ವದಿಂದ ಬಿಡಿಸಿದ್ದನು. ಹೀಗೆ ಮಾಡುವ ಮೂಲಕ ಆತನು ಅವರ ರಕ್ಷಕನೂ ಯಜಮಾನನೂ ಆದನು. ಈ ರೀತಿಯಲ್ಲಿ ಕ್ರಿಯೆಗೈಯುವ ಮುಂಚೆ ದೇವರು ಮೋಶೆಗೆ ಹೀಗಂದನು: “ನೀನು ಇಸ್ರಾಯೇಲ್ಯರಿಗೆ [ನನ್ನ ಹೆಸರಿನಲ್ಲಿ] ಹೇಳಬೇಕಾದದ್ದೇನಂದರೆ—ನಾನು ಯೆಹೋವನು; ಐಗುಪ್ತ್ಯರು ನಿಮ್ಮಿಂದ ಮಾಡಿಸುವ ಬಿಟ್ಟಿಕೆಲಸಗಳನ್ನು ನಾನು ತಪ್ಪಿಸಿ ಅವರಲ್ಲಿ ನಿಮಗಿರುವ ದಾಸತ್ವವನ್ನು ತೊಲಗಿಸಿ ನನ್ನ ಕೈ ಚಾಚಿ ಅವರಿಗೆ ಮಹಾಶಿಕ್ಷೆಗಳನ್ನು ವಿಧಿಸಿ ನಿಮ್ಮನ್ನು ರಕ್ಷಿಸುವೆನು. ನಾನು ನಿಮ್ಮನ್ನು ನನ್ನ ಪ್ರಜೆಯೆಂದು ಆರಿಸಿಕೊಂಡು ನಿಮಗೆ ದೇವರಾಗಿರುವೆನು.”—ವಿಮೋಚನಕಾಂಡ 6:6, 7; 15:1-7, 11.
2 ಐಗುಪ್ತದಿಂದ ವಿಮೋಚಿಸಲ್ಪಟ್ಟ ಸ್ವಲ್ಪ ಸಮಯದ ಬಳಿಕ ಇಸ್ರಾಯೇಲ್ಯರು ತಮ್ಮ ದೇವರಾದ ಯೆಹೋವನೊಂದಿಗೆ ಒಂದು ಒಡಂಬಡಿಕೆಯ ಸಂಬಂಧದೊಳಗೆ ಸೇರಿದರು. ಅಂದಿನಿಂದ ಯೆಹೋವನು ಒಬ್ಬೊಬ್ಬ ವ್ಯಕ್ತಿ, ಕುಟುಂಬ ಇಲ್ಲವೆ ಕುಲಗಳೊಂದಿಗೆ ವ್ಯವಹರಿಸುವ ಬದಲಿಗೆ ಭೂಮಿಯ ಮೇಲೆ ಸಂಘಟಿತ ಜನರ ಒಂದು ಜನಾಂಗದೊಂದಿಗೆ ವ್ಯವಹರಿಸಲಿದ್ದನು. (ವಿಮೋಚನಕಾಂಡ 19:5, 6; 24:7) ಅವರ ದೈನಂದಿನ ಜೀವನವನ್ನು ಮತ್ತು ಹೆಚ್ಚು ಪ್ರಾಮುಖ್ಯವಾಗಿ ಅವರ ಆರಾಧನಾ ರೀತಿಯನ್ನು ನಿರ್ದೇಶಿಸುವಂಥ ನಿಯಮಗಳನ್ನು ಆತನು ಅವರಿಗೆ ಕೊಟ್ಟನು. ಮೋಶೆ ಅವರಿಗೆ ಹೇಳಿದ್ದು: “ನಾವು ನಮ್ಮ ದೇವರಾದ ಯೆಹೋವನಿಗೆ ಮೊರೆಯಿಡುವಾಗೆಲ್ಲಾ ಆತನು ಸಮೀಪವಾಗಿಯೇ ಇದ್ದಾನಲ್ಲಾ; ಬೇರೆ ಎಷ್ಟು ದೊಡ್ಡ ಜನಾಂಗಕ್ಕಾದರೂ ಯಾವ ದೇವರು ಹೀಗೆ ಸಮೀಪವಾಗಿರುವನು? ನಾನು ಈ ಹೊತ್ತು ನಿಮ್ಮ ಮುಂದೆ ಇಡುವ ಇಂಥ ನ್ಯಾಯವಾದ ಆಜ್ಞಾವಿಧಿಗಳುಳ್ಳ ಈ ಧರ್ಮಶಾಸ್ತ್ರಕ್ಕೆ ಸಮಾನವಾದದ್ದು ಬೇರೆ ಯಾವ ಜನಾಂಗಕ್ಕೆ ಉಂಟು?”—ಧರ್ಮೋಪದೇಶಕಾಂಡ 4:7, 8.
ಸಾಕ್ಷಿ ಜನಾಂಗದಲ್ಲಿ ಹುಟ್ಟಿದವರು
3, 4. ಇಸ್ರಾಯೇಲ್ಯರು ಒಂದು ಜನಾಂಗವಾಗಿ ಅಸ್ತಿತ್ವದಲ್ಲಿರಲು ಒಂದು ಪ್ರಾಮುಖ್ಯ ಕಾರಣವೇನಾಗಿತ್ತು?
3 ಶತಮಾನಗಳ ಬಳಿಕ ಯೆಹೋವನು ತನ್ನ ಪ್ರವಾದಿಯಾದ ಯೆಶಾಯನ ಮೂಲಕ ಇಸ್ರಾಯೇಲ್ಯರಿಗೆ, ಅವರು ಒಂದು ಜನಾಂಗವಾಗಿ ಅಸ್ತಿತ್ವದಲ್ಲಿರುವುದಕ್ಕೆ ಒಂದು ಪ್ರಾಮುಖ್ಯ ಕಾರಣವನ್ನು ನೆನಪುಹುಟ್ಟಿಸಿದನು. ಯೆಶಾಯನು ಹೇಳಿದ್ದು: “ಯಾಕೋಬವಂಶವೇ, ಇಸ್ರಾಯೇಲ್ ಸಂತಾನವೇ, ನಿನ್ನನ್ನು ಸೃಷ್ಟಿಸಿ ರೂಪಿಸಿದವನಾದ ಯೆಹೋವನು ಹೀಗೆನ್ನುತ್ತಾನೆ—ಭಯಪಡಬೇಡ, ನಾನು ನಿನ್ನನ್ನು ವಿಮೋಚಿಸಿದೆನಲ್ಲಾ, ನಿನ್ನ ಹೆಸರುಹಿಡಿದು ಕರೆದೆನಲ್ಲಾ; ನೀನು ನನ್ನವನೇ. ಯೆಹೋವನೆಂಬ ನಾನು ನಿನ್ನ ದೇವರಾಗಿದ್ದೇನಷ್ಟೆ, ಇಸ್ರಾಯೇಲ್ಯರ ಸದಮಲಸ್ವಾಮಿಯಾದ ನಾನು ನಿನ್ನ ರಕ್ಷಕನು. . . . ದೂರದಲ್ಲಿರುವ ನನ್ನ ಕುಮಾರರನ್ನೂ ದಿಗಂತಗಳಲ್ಲಿರುವ ನನ್ನ ಕುಮಾರಿಯರನ್ನೂ ನನ್ನ ಮಹಿಮೆಗಾಗಿ ನಾನು ಸೃಷ್ಟಿಸಿ ರೂಪಿಸಿ ಉಂಟುಮಾಡಿದ ನನ್ನ ಹೆಸರಿನವರೆಲ್ಲರನ್ನೂ ಬರಮಾಡಬೇಕೆಂದು ಅಪ್ಪಣೆಕೊಡುವೆನು. ಯೆಹೋವನ ಮಾತೇನಂದರೆ—ನೀವು ನನ್ನ ಸಾಕ್ಷಿ, ನಾನು ಆರಿಸಿಕೊಂಡಿರುವ ಸೇವಕನು; . . . ನನ್ನ ಸ್ತೋತ್ರವನ್ನು ಪ್ರಚಾರಪಡಿಸಲಿ ಎಂದು ನಾನು ಸೃಷ್ಟಿಸಿಕೊಂಡ ಆಪ್ತಜನ.”—ಯೆಶಾಯ 43:1, 3, 6, 7, 10, 20.
4 ಇಸ್ರಾಯೇಲ್ಯರು ಯೆಹೋವನ ಹೆಸರಿನ ಜನರಾಗಿ ಆತನ ಪರಮಾಧಿಕಾರಕ್ಕೆ ಎಲ್ಲ ಜನಾಂಗಗಳ ಮುಂದೆ ಸಾಕ್ಷಿಗಳಾಗಿರಬೇಕಾಗಿತ್ತು. ಅವರು ‘ಯೆಹೋವನ ಮಹಿಮೆಗಾಗಿ ಸೃಷ್ಟಿಸಲಾಗಿರುವ’ ಜನರಾಗಿ ತಮ್ಮನ್ನು ತೋರಿಸಿಕೊಡಬೇಕಾಗಿತ್ತು. ಅವರು ‘ಯೆಹೋವನ ಸ್ತೋತ್ರವನ್ನು ಪ್ರಚಾರಪಡಿಸ’ಬೇಕಾಗಿತ್ತು, ಆತನು ನಡಿಸಿದಂಥ ಬಿಡುಗಡೆಯ ಅದ್ಭುತಕರ ಕೃತ್ಯಗಳ ಬಗ್ಗೆ ತಿಳಿಯಪಡಿಸಬೇಕಾಗಿತ್ತು ಮತ್ತು ಹೀಗೆ ಆತನ ಹೆಸರನ್ನು ಮಹಿಮೆಪಡಿಸಬೇಕಾಗಿತ್ತು. ಸರಳಮಾತಿನಲ್ಲಿ ಹೇಳುವುದಾದರೆ, ಅವರು ಯೆಹೋವನಿಗೆ ಸಾಕ್ಷಿಗಳಾಗಿರುವ ಒಂದು ಜನಾಂಗವಾಗಿರಬೇಕಾಗಿತ್ತು.
5. ಇಸ್ರಾಯೇಲ್ ಜನಾಂಗವು ಯಾವ ವಿಧದಲ್ಲಿ ಒಂದು ಸಮರ್ಪಿತ ಜನಾಂಗವಾಗಿತ್ತು?
5 ಯೆಹೋವನು ಇಸ್ರಾಯೇಲನ್ನು ಒಂದು ಪ್ರತ್ಯೇಕ ಜನಾಂಗವಾಗಿ ಮಾಡಿದ್ದನೆಂಬುದನ್ನು ಸಾ.ಶ.ಪೂ. 11ನೇ ಶತಮಾನದಲ್ಲಿ ರಾಜನಾದ ಸೊಲೊಮೋನನು ಸೂಚಿಸಿದನು. ಯೆಹೋವನಿಗೆ ಪ್ರಾರ್ಥಿಸುವಾಗ ಅವನು ಹೀಗಂದನು: “ನೀನು ನಮ್ಮ ಪಿತೃಗಳನ್ನು . . . ಎಲ್ಲಾ ಜನಾಂಗಗಳೊಳಗಿಂದ ಪ್ರತ್ಯೇಕಿಸಿ ಸ್ವಕೀಯಜನರನ್ನಾಗಿ ಮಾಡಿಕೊಂಡಿ.” (1 ಅರಸುಗಳು 8:53) ಆದರೆ ಇಸ್ರಾಯೇಲ್ಯರಲ್ಲಿ ಪ್ರತಿಯೊಬ್ಬರಿಗೂ ವ್ಯಕ್ತಿಗತವಾಗಿ ಯೆಹೋವನೊಂದಿಗೆ ಒಂದು ವಿಶೇಷ ಸಂಬಂಧವಿತ್ತು. ಈ ಹಿಂದೆ ಮೋಶೆಯು ಅವರಿಗೆ ಹೀಗಂದಿದ್ದನು: ‘ನೀವು ನಿಮ್ಮ ದೇವರಾಗಿರುವ ಯೆಹೋವನ ಮಕ್ಕಳಾಗಿದ್ದೀರಿ. ನೀವು ಕೇವಲ ನಿಮ್ಮ ದೇವರಾದ ಯೆಹೋವನ ಜನರೇ.’ (ಧರ್ಮೋಪದೇಶಕಾಂಡ 14:1, 2) ಹೀಗಿದ್ದದರಿಂದ ಇಸ್ರಾಯೇಲ್ಯ ಮಕ್ಕಳು ತಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸುವ ಅಗತ್ಯವಿರಲಿಲ್ಲ. ಅವರು ಹುಟ್ಟುವಾಗಲೇ ದೇವರ ಸಮರ್ಪಿತ ಜನಾಂಗದ ಸದಸ್ಯರಾಗಿದ್ದರು. (ಕೀರ್ತನೆ 79:13; 95:7) ಪ್ರತಿಯೊಂದು ಹೊಸ ತಲೆಮಾರಿಗೆ ಯೆಹೋವನ ಧರ್ಮಶಾಸ್ತ್ರದ ಬಗ್ಗೆ ಉಪದೇಶ ಕೊಡಲಾಗುತ್ತಿತ್ತು. ಮತ್ತು ಅವರಿಗೆ ಆ ಧರ್ಮಶಾಸ್ತ್ರವನ್ನು ಪಾಲಿಸುವ ಹಂಗು ಇತ್ತು, ಏಕೆಂದರೆ ಇಸ್ರಾಯೇಲ್ ಜನಾಂಗವು ಯೆಹೋವನೊಂದಿಗೆ ಒಂದು ಒಡಂಬಡಿಕೆಯಲ್ಲಿತ್ತು.—ಧರ್ಮೋಪದೇಶಕಾಂಡ 11:18, 19.
ಆಯ್ಕೆಮಾಡಲು ಸ್ವತಂತ್ರರು
6. ಇಸ್ರಾಯೇಲ್ಯರು ವ್ಯಕ್ತಿಗತವಾಗಿ ಯಾವ ಆಯ್ಕೆಮಾಡಬೇಕಿತ್ತು?
6 ಇಸ್ರಾಯೇಲ್ಯರು ಸಮರ್ಪಿತ ಜನಾಂಗದಲ್ಲಿ ಹುಟ್ಟಿದವರಾಗಿದ್ದರೂ, ದೇವರನ್ನು ಸೇವಿಸುವುದರ ಬಗ್ಗೆ ಅವರಲ್ಲಿ ಪ್ರತಿಯೊಬ್ಬರು ಸ್ವಂತ ನಿರ್ಣಯ ಮಾಡಬೇಕಿತ್ತು. ವಾಗ್ದತ್ತ ದೇಶವನ್ನು ಪ್ರವೇಶಿಸುವ ಮುಂಚೆ ಮೋಶೆ ಅವರಿಗೆ ಹೀಗಂದನು: “ನಾನು ಜೀವಮರಣಗಳನ್ನೂ ಆಶೀರ್ವಾದಶಾಪಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ; ಇದಕ್ಕೆ ಭೂಮ್ಯಾಕಾಶಗಳು ಸಾಕ್ಷಿಗಳಾಗಿರಲಿ. ಆದದರಿಂದ ನೀವೂ ನಿಮ್ಮ ಸಂತತಿಯವರೂ ಬದುಕಿಕೊಳ್ಳುವಂತೆ ಜೀವವನ್ನೇ ಆದುಕೊಳ್ಳಿರಿ; ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ ಆತನ ಮಾತಿಗೆ ವಿಧೇಯರಾಗಿರ್ರಿ, ಆತನನ್ನು ಹೊಂದಿಕೊಂಡೇ ಇರ್ರಿ. ಯೆಹೋವನು ನಿಮ್ಮ ಪಿತೃಗಳಾದ ಅಬ್ರಹಾಮ್ ಇಸಾಕ್ ಯಾಕೋಬರಿಗೆ ಪ್ರಮಾಣಮಾಡಿಕೊಟ್ಟ ದೇಶದಲ್ಲಿ ನೀವು ಬದುಕಿಕೊಳ್ಳುವದಕ್ಕೂ ಬಹುಕಾಲ ಇರುವದಕ್ಕೂ ಆತನೇ ಆಧಾರ.” (ಧರ್ಮೋಪದೇಶಕಾಂಡ 30:19, 20) ಹೀಗೆ, ಯೆಹೋವನನ್ನು ಪ್ರೀತಿಸಲು, ಆತನ ಮಾತಿಗೆ ವಿಧೇಯರಾಗಲು ಮತ್ತು ಆತನನ್ನು ಹೊಂದಿಕೊಳ್ಳಲು ಇಸ್ರಾಯೇಲ್ಯರು ವ್ಯಕ್ತಿಗತವಾಗಿ ಆಯ್ಕೆಮಾಡಬೇಕಿತ್ತು. ಅವರಿಗೆ ಇಚ್ಛಾಸ್ವಾತಂತ್ರ್ಯವಿದ್ದ ಕಾರಣ ಅವರು ಯಾವುದೇ ಆಯ್ಕೆಮಾಡಿದರೂ, ಅದರ ಫಲಿತಾಂಶಗಳನ್ನು ಅನುಭವಿಸಬೇಕಿತ್ತು.—ಧರ್ಮೋಪದೇಶಕಾಂಡ 30:16-18.
7. ಯೆಹೋಶುವನ ಕಾಲದ ಸಂತಾನದವರು ಗತಿಸಿದ ಬಳಿಕ ಏನಾಯಿತು?
7 ನ್ಯಾಯಸ್ಥಾಪಕರ ಸಮಯಾವಧಿಯು ನಂಬಿಗಸ್ತಿಕೆ ಹಾಗೂ ಅಪನಂಬಿಗಸ್ತಿಕೆಯ ಫಲಿತಾಂಶಗಳನ್ನು ಉತ್ತಮವಾಗಿ ದೃಷ್ಟಾಂತಿಸುತ್ತದೆ. ಆ ಅವಧಿಯು ಆರಂಭವಾಗುವ ಸ್ವಲ್ಪ ಸಮಯದ ಮುಂಚೆ ಇಸ್ರಾಯೇಲ್ಯರು ಯೆಹೋಶುವನ ಒಳ್ಳೇ ಮಾದರಿಯನ್ನು ಅನುಸರಿಸಿ ಆಶೀರ್ವದಿಸಲ್ಪಟ್ಟಿದ್ದರು. “ಯೆಹೋಶುವನ ದಿನಗಳಲ್ಲಿಯೂ ಅವನ ಕಾಲದಿಂದ ಇನ್ನೂ ಜೀವಿಸುತ್ತಾ ಯೆಹೋವನು ಇಸ್ರಾಯೇಲ್ಯರಿಗೋಸ್ಕರ ನಡಿಸಿದ ಮಹತ್ಕಾರ್ಯಗಳಿಗೆ ಸಾಕ್ಷಿಗಳಾಗಿದ್ದ ಹಿರಿಯರ ದಿನಗಳಲ್ಲಿಯೂ ಇಸ್ರಾಯೇಲ್ಯರು ಯೆಹೋವನನ್ನು ಸೇವಿಸುತ್ತಿದ್ದರು.” ಆದರೆ ಯೆಹೋಶುವನ ಮರಣದ ಸ್ವಲ್ಪ ಕಾಲದ ಬಳಿಕ, “ಯೆಹೋವನನ್ನೂ ಆತನು ಇಸ್ರಾಯೇಲ್ಯರಿಗೋಸ್ಕರ ಮಾಡಿದ ಮಹತ್ಕಾರ್ಯಗಳನ್ನೂ ಅರಿಯದಿದ್ದ ಬೇರೊಂದು ಸಂತಾನವು ಹುಟ್ಟಿತು. ಈ ಇಸ್ರಾಯೇಲ್ಯರು . . . ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದರು.” (ನ್ಯಾಯಸ್ಥಾಪಕರು 2:7, 10, 11) ತನ್ನ ಸಮರ್ಪಿತ ಜನಾಂಗಕ್ಕಾಗಿ ಯೆಹೋವನು ಗತಕಾಲದಲ್ಲಿ ಶೂರಕೃತ್ಯಗಳನ್ನು ನಡಿಸಿದ್ದನು. ಆದರೆ ಇದನ್ನು ಕಣ್ಣಾರೆ ನೋಡಿರದಿದ್ದ ಮುಂದಿನ ಸಂತಾನವು, ಈ ಸಮರ್ಪಿತ ಜನಾಂಗದ ಸದಸ್ಯರಾಗಿ ತಮಗಿದ್ದ ಪರಂಪರೆಯನ್ನು ಗಣ್ಯಮಾಡಲಿಲ್ಲವೆಂಬುದು ವ್ಯಕ್ತ.—ಕೀರ್ತನೆ 78:3-7, 10, 11.
ತಮ್ಮ ಸಮರ್ಪಣೆಗನುಸಾರ ಜೀವಿಸುವುದು
8, 9. (ಎ) ಇಸ್ರಾಯೇಲ್ಯರು ಯೆಹೋವನಿಗೆ ಮಾಡಿದ ತಮ್ಮ ಸಮರ್ಪಣೆಯನ್ನು ಯಾವ ಏರ್ಪಾಡಿನ ಮೂಲಕ ತೋರಿಸಸಾಧ್ಯವಿತ್ತು? (ಬಿ) ಸ್ವಇಚ್ಛೆಯ ನೈವೇದ್ಯಗಳನ್ನು ಅರ್ಪಿಸಿದವರು ಏನನ್ನು ಗಳಿಸಿದರು?
8 ಜನಾಂಗವಾಗಿ ಮಾಡಲಾಗಿದ್ದ ಸಮರ್ಪಣೆಗನುಸಾರ ಜೀವಿಸುವಂತೆ ಯೆಹೋವನು ತನ್ನ ಜನರಿಗೆ ಅವಕಾಶಗಳನ್ನು ಕೊಟ್ಟನು. ಉದಾಹರಣೆಗೆ, ಆತನ ಧರ್ಮಶಾಸ್ತ್ರದಲ್ಲಿ ಯಜ್ಞಗಳನ್ನು ಇಲ್ಲವೆ ನೈವೇದ್ಯಗಳನ್ನು ಅರ್ಪಿಸುವ ಏರ್ಪಾಡು ಇತ್ತು. ಇವುಗಳಲ್ಲಿ ಕೆಲವು ಕಡ್ಡಾಯವಾಗಿದ್ದವು, ಇನ್ನೂ ಕೆಲವು ಸ್ವಇಚ್ಛೆಯಿಂದ ಕೊಡುವಂಥದ್ದಾಗಿದ್ದವು. (ಇಬ್ರಿಯ 8:3) ಸ್ವೇಚ್ಛೆಯಿಂದ ಅಂದರೆ ಸ್ವಇಚ್ಛೆಯಿಂದ ಕೊಡಬೇಕಾದ ಯಜ್ಞಗಳಲ್ಲಿ ಸರ್ವಾಂಗಹೋಮಗಳು, ಧಾನ್ಯನೈವೇದ್ಯಗಳು ಮತ್ತು ಸಮಾಧಾನಯಜ್ಞಗಳು ಸೇರಿದ್ದವು. ಇವು ಯೆಹೋವನ ಅನುಗ್ರಹವನ್ನು ಪಡೆಯಲು ಹಾಗೂ ಆತನಿಗೆ ಕೃತಜ್ಞತೆಯನ್ನು ತೋರಿಸಲು ಅರ್ಪಿಸಲಾಗುತ್ತಿದ್ದ ಕಾಣಿಕೆಗಳಾಗಿದ್ದವು.—ಯಾಜಕಕಾಂಡ 7:11-13.
9 ಸ್ವಇಚ್ಛೆಯಿಂದ ಕೊಡಲಾಗುತ್ತಿದ್ದ ಆ ಯಜ್ಞಗಳು ಯೆಹೋವನಿಗೆ ಸಂತೋಷವನ್ನು ತಂದವು. ಸರ್ವಾಂಗಹೋಮಗಳು ಮತ್ತು ಧಾನ್ಯನೈವೇದ್ಯಗಳು “ಯೆಹೋವನಿಗೆ ಸುವಾಸನೆಯನ್ನುಂಟು ಮಾಡುವ” ಹೋಮಗಳಾಗಿದ್ದವೆಂದು ತಿಳಿಸಲಾಗಿದೆ. (ಯಾಜಕಕಾಂಡ 1:9; 2:2) ಸಮಾಧಾನಯಜ್ಞಗಳಲ್ಲಿ ಪ್ರಾಣಿಯ ರಕ್ತ ಹಾಗೂ ಕೊಬ್ಬನ್ನು ಯೆಹೋವನಿಗೆ ಅರ್ಪಿಸಲಾಗುತ್ತಿತ್ತು. ಮಾಂಸದ ಭಾಗಗಳನ್ನು ಯಾಜಕರು ಹಾಗೂ ಯಜ್ಞವನ್ನು ಅರ್ಪಿಸುವವರು ಸೇವಿಸುತ್ತಿದ್ದರು. ಹೀಗೆ, ಇದು ಯೆಹೋವನೊಂದಿಗಿನ ಸಮಾಧಾನಕರ ಸಂಬಂಧವನ್ನು ಸೂಚಿಸುವ ಒಂದು ಸಾಂಕೇತಿಕ ಊಟವಾಗಿತ್ತು. ಧರ್ಮಶಾಸ್ತ್ರವು ಹೀಗೆ ತಿಳಿಸಿತು: “ಸಮಾಧಾನಯಜ್ಞಗಳನ್ನು ಯೆಹೋವನಿಗೆ ಸಮರ್ಪಿಸುವಾಗ ಆತನಿಗೆ ಮೆಚ್ಚಿಕೆಯಾದ ರೀತಿಯಲ್ಲಿ ಸಮರ್ಪಿಸಬೇಕು.” (ಯಾಜಕಕಾಂಡ 19:5) ಎಲ್ಲ ಇಸ್ರಾಯೇಲ್ಯರು ಹುಟ್ಟಿನಿಂದಲೇ ಯೆಹೋವನಿಗೆ ಸಮರ್ಪಿತರಾಗಿದ್ದರೂ, ತಮ್ಮ ಸಮರ್ಪಣೆಗನುಸಾರ ನಿಜವಾಗಿ ಜೀವಿಸಿದವರು ಅದನ್ನು ಸ್ವಇಚ್ಛೆಯ ನೈವೇದ್ಯಗಳನ್ನು ಅರ್ಪಿಸುವ ಮೂಲಕ ತೋರಿಸಿದರು. ಇದರಿಂದ ಅವರು ಯೆಹೋವನ “ಮೆಚ್ಚಿಕೆ”ಯನ್ನು ಗಳಿಸಿದರು ಮತ್ತು ಹೇರಳವಾಗಿ ಆಶೀರ್ವದಿಸಲ್ಪಟ್ಟರು.—ಮಲಾಕಿಯ 3:10.
10. ಯೆಶಾಯನ ಮತ್ತು ಮಲಾಕಿಯನ ದಿನಗಳಲ್ಲಿ ಯೆಹೋವನು ತನ್ನ ಅಸಮ್ಮತಿಯನ್ನು ಹೇಗೆ ವ್ಯಕ್ತಪಡಿಸಿದನು?
10 ಆದರೆ ಪದೇಪದೇ ಈ ಸಮರ್ಪಿತ ಇಸ್ರಾಯೇಲ್ ಜನಾಂಗವು ಯೆಹೋವನಿಗೆ ಅಪನಂಬಿಗಸ್ತಿಕೆಯಿಂದ ನಡೆದುಕೊಂಡಿತು. ತನ್ನ ಪ್ರವಾದಿಯಾದ ಯೆಶಾಯನ ಮೂಲಕ ಯೆಹೋವನು ಅವರಿಗೆ ಹೀಗಂದನು: “ನೀನು ನನಗೆ ಹೋಮಕ್ಕಾಗಿ ಕುರಿಮೇಕೆಗಳನ್ನು ತಂದು ಯಜ್ಞಗಳಿಂದ ನನ್ನನ್ನು ಘನಪಡಿಸಲಿಲ್ಲ; ನೈವೇದ್ಯಕ್ಕಾಗಿ ನಿನ್ನನ್ನು ನಾನು ತೊಂದರೆಪಡಿಸಲಿಲ್ಲ.” (ಯೆಶಾಯ 43:23) ಅಷ್ಟುಮಾತ್ರವಲ್ಲದೆ, ನೈವೇದ್ಯಗಳನ್ನು ಸಿದ್ಧಮನಸ್ಸಿನಿಂದ ಮತ್ತು ಪ್ರೀತಿಯಿಂದ ಕೊಡದಿದ್ದಲ್ಲಿ ಯೆಹೋವನು ಅವುಗಳಿಗೆ ಯಾವುದೇ ಬೆಲೆಕೊಡುತ್ತಿರಲಿಲ್ಲ. ದೃಷ್ಟಾಂತಕ್ಕಾಗಿ, ಯೆಶಾಯನ ನಂತರ ಮೂರು ಶತಮಾನಗಳ ಬಳಿಕ ಪ್ರವಾದಿ ಮಲಾಕಿಯನ ದಿನಗಳಲ್ಲಿ ಇಸ್ರಾಯೇಲ್ಯರು ದೋಷವುಳ್ಳ ಪ್ರಾಣಿಗಳನ್ನು ಅರ್ಪಿಸುತ್ತಿದ್ದರು. ಆದುದರಿಂದ ಮಲಾಕಿಯನು ಅವರಿಗೆ ಹೀಗಂದನು: “ನಾನು ನಿಮಗೆ ಮೆಚ್ಚೆನು, ನಿಮ್ಮ ಕೈಯಿಂದ ನೈವೇದ್ಯವನ್ನು ಸ್ವೀಕರಿಸೆನು; ಇದು ಸೇನಾಧೀಶ್ವರ ಯೆಹೋವನ ನುಡಿ. . . . ಕಳವಿನ ಪಶುವನ್ನೂ ಕುಂಟಾದದ್ದನ್ನೂ ರೋಗಿಯಾದದ್ದನ್ನೂ ತಂದೊಪ್ಪಿಸುತ್ತೀರಿ; ಇಂಥ ನೈವೇದ್ಯವನ್ನು ತಂದೊಪ್ಪಿಸುತ್ತಿರುವಲ್ಲಿ ನಾನು ಅದನ್ನು ನಿಮ್ಮ ಕೈಯಿಂದ ಸ್ವೀಕರಿಸಲೋ; ಇದು ಯೆಹೋವನ ನುಡಿ.”—ಮಲಾಕಿಯ 1:10, 13; ಆಮೋಸ 5:22.
ಸಮರ್ಪಿತ ಜನಾಂಗ ತಿರಸ್ಕೃತ
11. ಇಸ್ರಾಯೇಲ್ ಜನಾಂಗಕ್ಕೆ ಯಾವ ಅವಕಾಶವು ಕೊಡಲ್ಪಟ್ಟಿತ್ತು?
11 ಇಸ್ರಾಯೇಲ್ಯರು ಯೆಹೋವನಿಗೆ ಸಮರ್ಪಿತ ಜನಾಂಗವಾದಾಗ ಆತನು ಅವರಿಗೆ ಹೀಗೆ ವಾಗ್ದಾನಿಸಿದನು: “ನೀವು ನನ್ನ ಮಾತನ್ನು ಶ್ರದ್ಧೆಯಿಂದ ಕೇಳಿ ನಾನು ಮಾಡುವ ನಿಬಂಧನೆಯನ್ನು ಅನುಸರಿಸಿ ನಡೆದರೆ ನೀವು ಎಲ್ಲಾ ಜನಾಂಗಗಳಲ್ಲಿ ನನಗೆ ಸ್ವಕೀಯಜನರಾಗುವಿರಿ; ಸಮಸ್ತ ಭೂಮಿಯೂ ನನ್ನದಷ್ಟೆ. ನೀವು ನನಗೆ ಯಾಜಕರಾಜ್ಯವೂ ಪರಿಶುದ್ಧಜನವೂ ಆಗಿರುವಿರಿ.” (ವಿಮೋಚನಕಾಂಡ 19:5, 6) ಆ ಸ್ವಕೀಯಜನರೊಳಗಿಂದ ವಾಗ್ದತ್ತ ಮೆಸ್ಸೀಯನು ಬರಲಿಕ್ಕಿದ್ದನು ಮತ್ತು ದೇವರ ರಾಜ್ಯ ಸರಕಾರದಲ್ಲಿ ಸದಸ್ಯರಾಗುವ ಮೊದಲ ಅವಕಾಶವನ್ನು ಅವನು ಅವರಿಗೆ ಕೊಡಲಿದ್ದನು. (ಆದಿಕಾಂಡ 22:17, 18; 49:10; 2 ಸಮುವೇಲ 7:12, 16; ಲೂಕ 1:31-33; ರೋಮಾಪುರ 9:4, 5) ಆದರೆ ಇಸ್ರಾಯೇಲ್ ಜನಾಂಗದಲ್ಲಿ ಹೆಚ್ಚಿನವರು ತಮ್ಮ ಸಮರ್ಪಣೆಗನುಸಾರ ಜೀವಿಸಲಿಲ್ಲ. (ಮತ್ತಾಯ 22:14) ಅವರು ಮೆಸ್ಸೀಯನನ್ನು ತಿರಸ್ಕರಿಸಿ, ಕೊನೆಗೆ ಅವನನ್ನು ಕೊಂದುಹಾಕಿದರು ಸಹ.—ಅ. ಕೃತ್ಯಗಳು 7:51-53.
12. ಇಸ್ರಾಯೇಲನ್ನು ಯೆಹೋವನ ಸಮರ್ಪಿತ ಜನಾಂಗವಾಗಿ ತಿರಸ್ಕರಿಸಲಾಗಿತ್ತು ಎಂಬುದನ್ನು ಯೇಸುವಿನ ಯಾವ ಹೇಳಿಕೆಗಳು ತೋರಿಸುತ್ತವೆ?
12 ಯೇಸು ಸಾಯುವ ಕೆಲವು ದಿನಗಳ ಮುಂಚೆ ಅವನು ಯೆಹೂದಿ ಧಾರ್ಮಿಕ ಮುಖಂಡರಿಗೆ ಹೀಗಂದನು: “ಮನೆ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು; ಇದು ಕರ್ತನಿಂದಲೇ [“ಯೆಹೋವನಿಂದಲೇ,” NW] ಆಯಿತು; ನಮಗೆ ಆಶ್ಚರ್ಯವಾಗಿ ತೋರುತ್ತದೆ ಎಂಬುವ ಮಾತನ್ನು ನೀವು ಶಾಸ್ತ್ರದಲ್ಲಿ ಎಂದಾದರೂ ಓದಲಿಲ್ಲವೋ? ಆದದರಿಂದ ದೇವರರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಕ್ಕೆ ಕೊಡಲಾಗುವದು.” (ಮತ್ತಾಯ 21:42, 43) ಯೆಹೋವನು ಅವರನ್ನು, ತನಗೆ ಸಮರ್ಪಿತವಾದ ಒಂದು ಜನಾಂಗವಾಗಿ ತಿರಸ್ಕರಿಸಿದ್ದಾನೆ ಎಂಬುದನ್ನು ತೋರಿಸುತ್ತಾ ಯೇಸು ಹೇಳಿದ್ದು: “ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳ ಪ್ರಾಣ ತೆಗೆಯುವವಳೇ, ದೇವರು ನಿನ್ನ ಬಳಿಗೆ ಕಳುಹಿಸಿಕೊಟ್ಟವರನ್ನು ಕಲ್ಲೆಸೆದು ಕೊಲ್ಲುವವಳೇ, ಕೋಳಿ ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಕೂಡಿಸಿಕೊಳ್ಳುವಂತೆ ನಿನ್ನ ಮಕ್ಕಳನ್ನು ಕೂಡಿಸಿಕೊಳ್ಳುವದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು; ಆದರೆ ನಿಮಗೆ ಮನಸ್ಸಿಲ್ಲದೆ ಹೋಯಿತು. ನೋಡಿರಿ, ನಿಮ್ಮ ಆಲಯವು ನಿಮಗೆ ಬರೀದಾಗಿ ಬಿಟ್ಟದೆ.”—ಮತ್ತಾಯ 23:37, 38.
ಒಂದು ಹೊಸ ಸಮರ್ಪಿತ ಜನಾಂಗ
13. ಯೆರೆಮೀಯನ ದಿನಗಳಲ್ಲಿ ಯೆಹೋವನು ಯಾವ ಪ್ರವಾದನಾತ್ಮಕ ಹೇಳಿಕೆಯನ್ನು ಮಾಡಿದನು?
13 ಪ್ರವಾದಿ ಯೆರೆಮೀಯನ ಸಮಯದಲ್ಲಿ, ಯೆಹೋವನು ತನ್ನ ಜನರ ಸಂಬಂಧದಲ್ಲಿ ಒಂದು ಹೊಸ ವಿಷಯವನ್ನು ಮುಂತಿಳಿಸಿದನು. ಅದರ ಬಗ್ಗೆ ಹೀಗೆ ತಿಳಿಸಲ್ಪಟ್ಟಿದೆ: “ಯೆಹೋವನು ಇಂತೆನ್ನುತ್ತಾನೆ—ಇಗೋ, ನಾನು ಇಸ್ರಾಯೇಲ್ ವಂಶದವರೊಂದಿಗೂ ಯೆಹೂದ ವಂಶದವರೊಂದಿಗೂ ಹೊಸದಾಗಿರುವ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು; ಈ ಒಡಂಬಡಿಕೆಯು ನಾನು ಇವರ ಪಿತೃಗಳನ್ನು ಕೈಹಿಡಿದು ಐಗುಪ್ತದೇಶದೊಳಗಿಂದ ಕರತಂದಾಗ ಅವರ ಸಂಗಡ ಮಾಡಿಕೊಂಡ ಒಡಂಬಡಿಕೆಯಂಥದಲ್ಲ; ನಾನು ಅವರಿಗೆ ಪತಿಯಾಗಿದ್ದರೂ ಆ ನನ್ನ ಒಡಂಬಡಿಕೆಯನ್ನು ಅವರು ಮೀರಿದರಷ್ಟೆ. ಯೆಹೋವನು ಇಂತೆನ್ನುತ್ತಾನೆ—ಆ ದಿನಗಳು ಬಂದಮೇಲೆ ನಾನು ಇಸ್ರಾಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವದು—ನನ್ನ ಧರ್ಮೋಪದೇಶವನ್ನು ಅವರ ಅಂತರಂಗದಲ್ಲಿ ಇಡುವೆನು, ಅವರ ಹೃದಯದೊಳಗೆ ಅದನ್ನು ಬರೆಯುವೆನು; ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು.”—ಯೆರೆಮೀಯ 31:31-33.
14. ಯೆಹೋವನ ಹೊಸ ಸಮರ್ಪಿತ ಜನಾಂಗವು ಯಾವಾಗ ಮತ್ತು ಯಾವ ಆಧಾರದ ಮೇಲೆ ಅಸ್ತಿತ್ವಕ್ಕೆ ಬಂತು? ಆ ಹೊಸ ಜನಾಂಗದ ಗುರುತನ್ನು ಹೇಳಿರಿ.
14 ಈ ಹೊಸ ಒಡಂಬಡಿಕೆಗೆ ಆಧಾರವು, ಸಾ.ಶ. 33ರಲ್ಲಿ ಯೇಸು ಮರಣಪಟ್ಟು ತದನಂತರ ತನ್ನ ಸುರಿಸಲ್ಪಟ್ಟ ರಕ್ತದ ಮೌಲ್ಯವನ್ನು ತನ್ನ ತಂದೆಗೆ ಒಪ್ಪಿಸಿದಾಗ ಹಾಕಲಾಗಿತ್ತು. (ಲೂಕ 22:20; ಇಬ್ರಿಯ 9:15, 24-26) ಆದರೆ ಆ ಹೊಸ ಒಡಂಬಡಿಕೆಯು ಜಾರಿಗೆಬಂದದ್ದು, ಸಾ.ಶ. 33ರ ಪಂಚಾಶತ್ತಮದ ದಿನದಂದು ಪವಿತ್ರಾತ್ಮವು ಸುರಿಸಲ್ಪಟ್ಟು ಒಂದು ಹೊಸ ಜನಾಂಗ ಅಂದರೆ ‘ದೇವರ ಇಸ್ರಾಯೇಲ್’ ಹುಟ್ಟಿದಾಗಲೇ. (ಗಲಾತ್ಯ 6:16; ರೋಮಾಪುರ 2:28, 29; 9:6; 11:25, 26) ಅಭಿಷಿಕ್ತ ಕ್ರೈಸ್ತರಿಗೆ ಬರೆಯುತ್ತಾ ಅಪೊಸ್ತಲ ಪೇತ್ರನು ತಿಳಿಯಪಡಿಸಿದ್ದು: “ನೀವಾದರೋ ನಿಮ್ಮನ್ನು ಕತ್ತಲೆಯೊಳಗಿಂದ ಕರೆದು ತನ್ನ ಆಶ್ಚರ್ಯಕರವಾದ ಬೆಳಕಿನಲ್ಲಿ ಸೇರಿಸಿದಾತನ ಗುಣಾತಿಶಯಗಳನ್ನು ಪ್ರಚಾರಮಾಡುವವರಾಗುವಂತೆ ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನವೂ ದೇವರ ಸ್ವಕೀಯ ಪ್ರಜೆಯೂ ಆಗಿದ್ದೀರಿ. ಮೊದಲು ನೀವು ಪ್ರಜೆಯಾಗಿರಲಿಲ್ಲ, ಈಗ ದೇವರ ಪ್ರಜೆಯಾಗಿದ್ದೀರಿ.” (1 ಪೇತ್ರ 2:9, 10) ಹೊಸ ಒಡಂಬಡಿಕೆಯು ಜಾರಿಗೆಬಂದಾಗ ಯೆಹೋವನ ಮತ್ತು ಮಾಂಸಿಕ ಇಸ್ರಾಯೇಲಿನ ನಡುವೆ ಇದ್ದಂಥ ವಿಶೇಷ ಸಂಬಂಧವು ಕೊನೆಗೊಂಡಿತು. ಸಾ.ಶ. 33ರಲ್ಲಿ ಯೆಹೋವನ ಅನುಗ್ರಹವನ್ನು ಮಾಂಸಿಕ ಇಸ್ರಾಯೇಲಿನಿಂದ ಆತ್ಮಿಕ ಇಸ್ರಾಯೇಲಿಗೆ ವರ್ಗಾಯಿಸಲಾಯಿತು. ಈ ಆತ್ಮಿಕ ಇಸ್ರಾಯೇಲ್, ಮೆಸ್ಸೀಯನ ರಾಜ್ಯದ “ಫಲಗಳನ್ನು ಕೊಡುವ ಜನ” ಅಂದರೆ ಕ್ರೈಸ್ತ ಸಭೆ ಆಗಿತ್ತು.—ಮತ್ತಾಯ 21:43.
ವ್ಯಕ್ತಿಗತ ಸಮರ್ಪಣೆ
15. ಸಾ.ಶ. 33ರ ಪಂಚಾಶತ್ತಮದ ದಿನದಂದು, ಪೇತ್ರನು ತನ್ನ ಕೇಳುಗರಿಗೆ ಯಾವ ದೀಕ್ಷಾಸ್ನಾನವನ್ನು ಪಡೆದುಕೊಳ್ಳುವಂತೆ ಉತ್ತೇಜಿಸಿದನು?
15 ಸಾ.ಶ. 33ರ ಪಂಚಾಶತ್ತಮದ ನಂತರ, ಯೆಹೂದ್ಯನಾಗಿರಲಿ ಅನ್ಯನಾಗಿರಲಿ ಪ್ರತಿಯೊಬ್ಬನೂ ದೇವರಿಗೆ ವೈಯಕ್ತಿಕವಾಗಿ ಸಮರ್ಪಣೆಮಾಡಿ, “ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ” ಪಡೆದುಕೊಳ್ಳಬೇಕಿತ್ತು.a (ಮತ್ತಾಯ 28:19) ಪಂಚಾಶತ್ತಮದಂದು ಪ್ರತಿಕ್ರಿಯೆತೋರಿಸಿದಂಥ ಯೆಹೂದ್ಯರು ಮತ್ತು ಯೆಹೂದಿ ಮತಾವಲಂಬಿಗಳಿಗೆ ಅಪೊಸ್ತಲ ಪೇತ್ರನು ಹೀಗಂದನು: “ನಿಮ್ಮ ಪಾಪಗಳು ಪರಿಹಾರವಾಗುವದಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬರು ದೇವರ ಕಡೆಗೆ ತಿರುಗಿಕೊಂಡು ಯೇಸು ಕ್ರಿಸ್ತನ ಹೆಸರಿನ ಮೇಲೆ ದೀಕ್ಷಾಸ್ನಾನಮಾಡಿಸಿಕೊಳ್ಳಿರಿ, ಆಗ ನೀವು ಪವಿತ್ರಾತ್ಮದಾನವನ್ನು ಹೊಂದುವಿರಿ.” (ಅ. ಕೃತ್ಯಗಳು 2:38) ಅಂಥ ಯೆಹೂದ್ಯರು ಮತ್ತು ಮತಾವಲಂಬಿಗಳು ಅವರ ದೀಕ್ಷಾಸ್ನಾನದ ಮೂಲಕ ಅವರು ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ ಎಂಬುದನ್ನು ಸೂಚಿಸಬೇಕಿತ್ತು; ಮಾತ್ರವಲ್ಲ, ಯೆಹೋವನು ಯಾರ ಮೂಲಕ ತಮ್ಮ ಪಾಪಗಳನ್ನು ಕ್ಷಮಿಸಲಿದ್ದಾನೊ ಆ ಮಾಧ್ಯಮ ಯೇಸು ಎಂಬುದನ್ನು ತಾವು ಅಂಗೀಕರಿಸಿದ್ದೇವೆಂದು ಸಹ ಅವರ ದೀಕ್ಷಾಸ್ನಾನವು ಸೂಚಿಸಬೇಕಿತ್ತು. ಅವನು ಯೆಹೋವನಿಂದ ನೇಮಿತನಾದ ಮಹಾ ಯಾಜಕನು ಮತ್ತು ತಮ್ಮ ನಾಯಕನು, ಕ್ರೈಸ್ತ ಸಭೆಯ ಶಿರಸ್ಸು ಆಗಿದ್ದಾನೆಂಬುದನ್ನು ಅವರು ಒಪ್ಪಿಕೊಳ್ಳಬೇಕಿತ್ತು.—ಕೊಲೊಸ್ಸೆ 1:13, 14, 18.
16. ಪೌಲನ ದಿನದಲ್ಲಿ ಯೋಗ್ಯ ಮನಸ್ಸಿನ ಯೆಹೂದ್ಯರೂ ಅನ್ಯರೂ ಆತ್ಮಿಕ ಇಸ್ರಾಯೇಲಿನ ಭಾಗವಾದದ್ದು ಹೇಗೆ?
16 ವರ್ಷಗಳಾನಂತರ ಅಪೊಸ್ತಲ ಪೌಲನು ಹೇಳಿದ್ದು: “ಆ ಮೇಲೆ ಯೆರೂಸಲೇಮಿನಲ್ಲಿಯೂ ಯೂದಾಯದ ಎಲ್ಲಾ ಸೀಮೆಯಲ್ಲಿಯೂ ಇರುವವರಿಗೆ ಮತ್ತು ಅನ್ಯ ಜನರಿಗೆ ಸಹ—ನೀವು ದೇವರ ಕಡೆಗೆ ತಿರುಗಿಕೊಳ್ಳಬೇಕೆಂತಲೂ ಮಾನಸಾಂತರಕ್ಕೆ ಯೋಗ್ಯವಾದ ಕೃತ್ಯಗಳನ್ನು ಮಾಡಬೇಕೆಂತಲೂ ಸಾರಿದೆನು.” (ಅ. ಕೃತ್ಯಗಳು 26:20) ಪೌಲನು ಯೆಹೂದ್ಯರೂ ಅನ್ಯರೂ ಸೇರಿದ್ದ ಜನಸಮೂಹಕ್ಕೆ, ಯೇಸುವೇ ಮೆಸ್ಸೀಯನಾಗಿದ್ದಾನೆ ಎಂಬುದನ್ನು ಮನದಟ್ಟುಮಾಡಿದ ನಂತರ ಅವರು ಸಮರ್ಪಣೆಮಾಡಿ ದೀಕ್ಷಾಸ್ನಾನ ಪಡೆದುಕೊಳ್ಳುವಂತೆ ಸಹಾಯಮಾಡಿದನು. (ಅ. ಕೃತ್ಯಗಳು 16:14, 15, 31-33; 17:3, 4; 18:8) ಆ ಹೊಸ ಶಿಷ್ಯರು ದೇವರ ಕಡೆಗೆ ತಿರುಗಿಕೊಳ್ಳುವ ಮೂಲಕ ಆತ್ಮಿಕ ಇಸ್ರಾಯೇಲಿನ ಸದಸ್ಯರಾದರು.
17. ಯಾವ ಮುದ್ರೆಯೊತ್ತುವಿಕೆಯ ಕೆಲಸವು ಕೊನೆಗೊಳ್ಳುತ್ತಾ ಇದೆ, ಮತ್ತು ಬೇರೆ ಯಾವ ಕೆಲಸವು ಶೀಘ್ರಗತಿಯಲ್ಲಿ ನಡೆಯುತ್ತಾ ಇದೆ?
17 ಇಂದು, ಆತ್ಮಿಕ ಇಸ್ರಾಯೇಲ್ಯರಲ್ಲಿ ಉಳಿದವರ ಅಂತಿಮ ಮುದ್ರೆಯೊತ್ತುವಿಕೆಯು ಹತ್ತಿರವಿದೆ. ಅದು ಪೂರ್ಣಗೊಂಡಾಗ, ‘ಮಹಾ ಸಂಕಟದ’ ನಾಶನದ ಗಾಳಿಗಳನ್ನು ಹಿಡಿದಿರುವ “ನಾಲ್ಕು ಮಂದಿ ದೇವದೂತರು” ಆ ಗಾಳಿಗಳನ್ನು ಬಿಡುಗಡೆಮಾಡುವಂತೆ ಅನುಮತಿಸಲಾಗುವುದು. ಈ ಮಧ್ಯೆ, ಭೂಮಿಯ ಮೇಲೆ ಜೀವಿಸಲು ನಿರೀಕ್ಷಿಸುವ ‘ಮಹಾ ಸಮೂಹದವರ’ ಒಟ್ಟುಗೂಡಿಸುವಿಕೆಯು ಶೀಘ್ರಗತಿಯಲ್ಲಿ ನಡೆಯುತ್ತಾ ಇದೆ. ಈ ‘ಬೇರೆ ಕುರಿಗಳು’ “ಯಜ್ಞದ ಕುರಿಯಾದಾತನ ರಕ್ತದಲ್ಲಿ” ನಂಬಿಕೆಯನ್ನಿಡಲು ಮತ್ತು ಯೆಹೋವನಿಗೆ ತಾವು ಮಾಡಿರುವ ಸಮರ್ಪಣೆಯ ಸಂಕೇತವಾಗಿ ದೀಕ್ಷಾಸ್ನಾನಪಡೆದುಕೊಳ್ಳಲು ಸ್ವಇಷ್ಟದಿಂದ ಆಯ್ಕೆಮಾಡುತ್ತಾರೆ. (ಪ್ರಕಟನೆ 7:1-4, 9-15; 22:17; ಯೋಹಾನ 10:16; ಮತ್ತಾಯ 28:19, 20) ಇವರ ಮಧ್ಯೆ, ಕ್ರೈಸ್ತ ಹೆತ್ತವರಿಂದ ಬೆಳೆಸಲ್ಪಟ್ಟಿರುವ ಅನೇಕ ಯುವ ಜನರಿದ್ದಾರೆ. ನೀವು ಅಂಥ ಯುವ ವ್ಯಕ್ತಿಯಾಗಿರುವಲ್ಲಿ ಮುಂದಿನ ಲೇಖನವು ನಿಮಗೆ ಆಸಕ್ತಿಕರವಾಗಿರುವುದು. (w06 7/1)
[ಪಾದಟಿಪ್ಪಣಿ]
a ಇಸವಿ 2003, ಮೇ 15ರ ಕಾವಲಿನಬುರುಜುವಿನ ಪುಟ 30-1ನ್ನು ನೋಡಿರಿ.
ಪುನರ್ವಿಮರ್ಶೆಗಾಗಿ
• ಇಸ್ರಾಯೇಲ್ಯ ಮಕ್ಕಳು ವೈಯಕ್ತಿಕವಾಗಿ ಯೆಹೋವನಿಗೆ ಸಮರ್ಪಣೆ ಮಾಡಬೇಕಾಗಿರಲಿಲ್ಲ ಏಕೆ?
• ಇಸ್ರಾಯೇಲ್ಯರು ತಮ್ಮ ಸಮರ್ಪಣೆಗನುಸಾರ ಜೀವಿಸುತ್ತಾರೆಂದು ಹೇಗೆ ತೋರಿಸಬಹುದಿತ್ತು?
• ಯೆಹೋವನು ಇಸ್ರಾಯೇಲನ್ನು ತನ್ನ ಸಮರ್ಪಿತ ಜನಾಂಗವಾಗಿ ತಿರಸ್ಕರಿಸಿದ್ದೇಕೆ, ಮತ್ತು ಅದರ ಸ್ಥಾನವನ್ನು ಹೇಗೆ ಭರ್ತಿಮಾಡಲಾಯಿತು?
• ಸಾ.ಶ. 33ರ ಪಂಚಾಶತ್ತಮದಂದಿನಿಂದ ಯೆಹೂದ್ಯರೂ ಅನ್ಯರೂ ಆತ್ಮಿಕ ಇಸ್ರಾಯೇಲಿನ ಭಾಗವಾಗಲಿಕ್ಕಾಗಿ ಏನು ಮಾಡಬೇಕಿತ್ತು?
[ಪುಟ 22ರಲ್ಲಿರುವ ಚಿತ್ರ]
ಇಸ್ರಾಯೇಲ್ಯ ಮಕ್ಕಳು ಹುಟ್ಟಿನಿಂದಲೇ ದೇವರ ಸ್ವಕೀಯ ಜನಾಂಗದ ಸದಸ್ಯರಾಗಿದ್ದರು
[ಪುಟ 25ರಲ್ಲಿರುವ ಚಿತ್ರ]
ದೇವರನ್ನು ಸೇವಿಸುವುದರ ಬಗ್ಗೆ ಪ್ರತಿಯೊಬ್ಬ ಇಸ್ರಾಯೇಲ್ಯನು ಸ್ವಂತ ನಿರ್ಣಯ ಮಾಡಬೇಕಿತ್ತು
[ಪುಟ 25ರಲ್ಲಿರುವ ಚಿತ್ರ]
ಸ್ವಇಚ್ಛೆಯ ನೈವೇದ್ಯಗಳು ಇಸ್ರಾಯೇಲ್ಯರಿಗೆ ಯೆಹೋವನ ಮೇಲಿದ್ದ ಪ್ರೀತಿಯನ್ನು ತೋರಿಸಲು ಅವಕಾಶಕೊಟ್ಟವು
[ಪುಟ 26ರಲ್ಲಿರುವ ಚಿತ್ರ]
ಸಾ.ಶ. 33ರ ಪಂಚಾಶತ್ತಮದ ನಂತರ, ಕ್ರಿಸ್ತನ ಹಿಂಬಾಲಕರು ದೇವರಿಗೆ ವೈಯಕ್ತಿಕವಾಗಿ ಸಮರ್ಪಣೆಮಾಡಿ ಇದನ್ನು ದೀಕ್ಷಾಸ್ನಾನದ ಮೂಲಕ ತೋರಿಸಬೇಕಿತ್ತು