ಯೋಬ—ತಾಳ್ಮೆ ಹಾಗೂ ಸಮಗ್ರತೆಯ ಪುರುಷ
“ನನ್ನ ದಾಸನಾದ ಯೋಬನ ಮೇಲೆ ಗಮನವಿಟ್ಟಿಯಾ? ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ ಯಥಾರ್ಥಚಿತ್ತನೂ ಆಗಿದ್ದಾನೆ. ಅವನಿಗೆ ಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವದಿಲ್ಲ.”—ಯೋಬ 1:8.
1, 2. (ಎ) ಯೋಬನು ಯಾವ ಅನಿರೀಕ್ಷಿತ ದುರಂತಗಳನ್ನು ಅನುಭವಿಸಿದನು? (ಬಿ) ಆ ದುರಂತಗಳು ಬಂದೆರಗುವ ಮುಂಚೆ ಯೋಬನ ಜೀವನ ಹೇಗಿತ್ತೆಂಬುದನ್ನು ವರ್ಣಿಸಿರಿ.
ಹಣ, ಅಂತಸ್ತು, ಉತ್ತಮ ಆರೋಗ್ಯ ಮತ್ತು ಸುಖೀ ಕುಟುಂಬ ಜೀವನ—ಹೀಗೆ ಎಲ್ಲವನ್ನೂ ಹೊಂದಿದ್ದ ಒಬ್ಬ ಪುರುಷನಿದ್ದನು. ಹಾಗಿದ್ದರೂ, ಮೂರು ಬಾರಿ ದುರಂತಗಳು ಒಂದರಮೇಲೊಂದು ತಟ್ಟನೆ ಅವನ ಮೇಲೆ ಬಂದೆರಗಿದವು. ದಿನಬೆಳಗಾಗುವುದರೊಳಗೆ ಎಂಬಂತೆ, ಅವನು ತನ್ನ ಐಶ್ವರ್ಯವನ್ನು ಕಳೆದುಕೊಂಡನು. ಬಳಿಕ, ಅವನ ಮಕ್ಕಳೆಲ್ಲರೂ ಒಂದು ಅಸಾಮಾನ್ಯ ಬಿರುಗಾಳಿಗೆ ಆಹುತಿಯಾದರು. ಇದಾಗಿ ಸ್ವಲ್ಪದ್ದರಲ್ಲಿಯೇ ಒಂದು ಭೀಕರ ರೋಗವು ಅವನಿಗಂಟಿಕೊಂಡು ಇಡೀ ದೇಹದಲ್ಲಿ ತುಂಬ ನೋವುಭರಿತ ಕುರುಗಳನ್ನು ಉಂಟುಮಾಡಿತು. ಈತನು ಯೋಬನೆಂದು ನಿಮಗೆ ಈಗಾಗಲೇ ಗುರುತು ಸಿಕ್ಕಿರಬಹುದು. ಅವನ ಹೆಸರಿರುವ ಬೈಬಲ್ ಪುಸ್ತಕದಲ್ಲಿ ಅವನ ಪಾತ್ರ ಮುಖ್ಯವಾದದ್ದು.—ಯೋಬ ಅಧ್ಯಾಯ 1 ಮತ್ತು 2.
2 “ಅಯ್ಯೋ ನಾನು ಹಿಂದಿನ ತಿಂಗಳುಗಳಲ್ಲಿ ಇದ್ದಂತೆ ಈಗಲೂ ಇದ್ದರೆ ಎಷ್ಟೋ ಸಂತೋಷವಾಗಿತ್ತು!” ಎಂದು ಯೋಬನು ಹಲುಬಿದನು. (ಯೋಬ 3:3; 29:2) ವಿಪತ್ತುಗಳು ಬಂದೆರಗುವಾಗ, ಯಾರು ತಾನೇ ಹಿಂದಿನ ಉತ್ತಮ ದಿನಗಳಿಗಾಗಿ ಹಾತೊರೆಯುವುದಿಲ್ಲ? ಯೋಬನ ವಿಷಯದಲ್ಲಂತೂ, ಅವನೊಬ್ಬ ಒಳ್ಳೇ ವ್ಯಕ್ತಿಯಾಗಿ ಜೀವಿಸಿದ್ದನು ಮತ್ತು ಅವನ ಮೇಲೆ ಯಾವುದೇ ರೀತಿಯ ಆಪತ್ತುಗಳು ಬಂದಿರಲಿಲ್ಲ ಎಂಬಂತೆ ತೋರುತ್ತಿತ್ತು. ಗಣ್ಯರು ಅವನನ್ನು ಗೌರವಿಸುತ್ತಾ ಸಲಹೆಸೂಚನೆಗಾಗಿ ಅವನ ಬಳಿ ಬರುತ್ತಿದ್ದರು. (ಯೋಬ 29:5-11) ಅವನು ಐಶ್ವರ್ಯವಂತನಾಗಿದ್ದನು, ಆದರೆ ಹಣವನ್ನು ಅದರ ತಕ್ಕಸ್ಥಾನದಲ್ಲಿಟ್ಟಿದ್ದನು. (ಯೋಬ 31:24, 25, 28) ಕಷ್ಟದಲ್ಲಿರುವ ವಿಧವೆಯರಿಗೆ ಇಲ್ಲವೆ ಅನಾಥರಿಗೆ ಅವನು ಸಹಾಯಮಾಡುತ್ತಿದ್ದನು. (ಯೋಬ 29:12-16) ಅಲ್ಲದೆ, ಅವನು ತನ್ನ ಹೆಂಡತಿಗೆ ನಂಬಿಗಸ್ತನಾಗಿ ಉಳಿದನು.—ಯೋಬ 31:1, 9, 11.
3. ಯೋಬನ ಬಗ್ಗೆ ಯೆಹೋವನ ಅಭಿಪ್ರಾಯವೇನಾಗಿತ್ತು?
3 ಯೋಬನು ದೇವರನ್ನು ಆರಾಧಿಸುತ್ತಿದ್ದ ಕಾರಣ, ನಿರ್ದೋಷಿಯಾಗಿ ಜೀವಿಸಿದನು. ಯೆಹೋವನು ಅವನ ಬಗ್ಗೆ ಹೇಳಿದ್ದು: “ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ ಯಥಾರ್ಥಚಿತ್ತನೂ [“ಸಮಗ್ರತೆಯುಳ್ಳವನೂ,” NW] ಆಗಿದ್ದಾನೆ. ಅವನಿಗೆ ಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವದಿಲ್ಲ.” (ಯೋಬ 1:1, 8) ನೈತಿಕ ಸಮಗ್ರತೆಯುಳ್ಳವನಾಗಿದ್ದರೂ, ದುರಂತಗಳು ಅವನ ನೆಮ್ಮದಿಯ ಜೀವನವನ್ನು ನುಚ್ಚುನೂರುಗೊಳಿಸಿದವು. ಅವನ ಶ್ರಮವೆಲ್ಲವೂ ನೀರುಪಾಲಾಯಿತು. ನೋವು, ಬೇಗುದಿ, ಹತಾಶೆಯು ಅವನು ನಿಜವಾಗಿ ಏನಾಗಿದ್ದಾನೆಂಬುದನ್ನು ಪರೀಕ್ಷೆಗೊಡ್ಡಿತು.
4. ಯೋಬನ ಸಂಕಷ್ಟಮಯ ಅನುಭವವನ್ನು ಪರಿಗಣಿಸುವುದು ಹೇಗೆ ಸಹಾಯಕಾರಿಯಾಗಿರುವುದು?
4 ದೇವರ ಸೇವಕರಲ್ಲಿ, ವೈಯಕ್ತಿಕ ವಿಪತ್ತಿಗೊಳಗಾದವನು ಯೋಬನೊಬ್ಬನೇ ಅಲ್ಲ ನಿಜ. ಇಂದು ಸಹ ಅನೇಕ ಕ್ರೈಸ್ತರು ಯೋಬನು ಅನುಭವಿಸಿದಂಥ ರೀತಿಯ ಕಷ್ಟಗಳನ್ನು ಅನುಭವಿಸಿದ್ದಾರೆ. ಆದಕಾರಣ, ಈ ಎರಡು ಪ್ರಶ್ನೆಗಳನ್ನು ಚರ್ಚಿಸುವುದು ಸೂಕ್ತ: ಯೋಬನ ಸಂಕಷ್ಟವನ್ನು ನೆನಪಿನಲ್ಲಿಟ್ಟುಕೊಳ್ಳುವುದು, ನಾವು ದುರಂತಗಳನ್ನು ಎದುರಿಸುವಾಗ ನಮಗೆ ಹೇಗೆ ಸಹಾಯಮಾಡುವುದು? ಮತ್ತು ಯೋಬನ ಸಂಕಷ್ಟದಿಂದ, ನಾವು ಕಷ್ಟದಲ್ಲಿರುವ ಇತರರಿಗೆ ಹೆಚ್ಚು ಸಹಾನುಭೂತಿ ತೋರಿಸುವಂತೆ ಹೇಗೆ ಕಲಿಯಬಹುದು?
ನಿಷ್ಠೆಯ ವಿವಾದಾಂಶ ಮತ್ತು ಸಮಗ್ರತೆಯ ಪರೀಕ್ಷೆ
5. ಸೈತಾನನಿಗನುಸಾರ ಯೋಬನು ದೇವರನ್ನು ಏಕೆ ಸೇವಿಸುತ್ತಿದ್ದನು?
5 ಯೋಬನ ಅನುಭವವು ಅಸಾಧಾರಣವಾದದ್ದಾಗಿತ್ತು. ಯಾಕೆಂದರೆ, ಅವನು ದೇವರ ಸೇವೆಯನ್ನು ಮಾಡುತ್ತಿರುವ ನಿಜ ಕಾರಣಗಳ ಬಗ್ಗೆ ಪಿಶಾಚನು ಸಂದೇಹ ವ್ಯಕ್ತಪಡಿಸಿದ್ದು ಯೋಬನಿಗೆ ತಿಳಿದಿರಲಿಲ್ಲ. ಸ್ವರ್ಗದಲ್ಲಿ ಆತ್ಮಜೀವಿಗಳೆಲ್ಲರೂ ಕೂಡಿಬಂದ ಒಂದು ಸಂದರ್ಭದಲ್ಲಿ ಯೋಬನ ಒಳ್ಳೇ ಗುಣಗಳ ಕಡೆಗೆ ಯೆಹೋವನು ಗಮನ ಸೆಳೆದಾಗ ಸೈತಾನನು, “ನೀನು ಅವನಿಗೂ ಅವನ ಮನೆಗೂ ಅವನ ಎಲ್ಲಾ ಸ್ವಾಸ್ತ್ಯಕ್ಕೂ ಸುತ್ತುಮುತ್ತಲು ಬೇಲಿಯನ್ನು ಹಾಕಿದ್ದೀಯಲ್ಲಾ” ಎಂದು ಪ್ರತ್ಯುತ್ತರಕೊಟ್ಟನು. ಈ ರೀತಿಯಲ್ಲಿ, ಯೋಬನು ಮತ್ತು ಹೀಗೆ ದೇವರ ಎಲ್ಲಾ ಸೇವಕರು ಆತನ ಸೇವೆಯನ್ನು ಸ್ವಾರ್ಥದಿಂದ ಮಾಡುತ್ತಿದ್ದಾರೆಂದು ಸೈತಾನನು ವಾದಿಸಿದನು. “ನಿನ್ನ ಕೈನೀಡಿ ಅವನ ಸೊತ್ತನ್ನೆಲ್ಲಾ ಅಳಿಸಿಬಿಡು. ಆಗ ಅವನು ನಿನ್ನ ಎದುರಿಗೆ ನಿನ್ನನ್ನು ದೂಷಿಸಲೇ ದೂಷಿಸುವನು” ಎಂದು ಸೈತಾನನು ಯೆಹೋವನಿಗೆ ಹೇಳಿದನು.—ಯೋಬ 1:8-11.
6. ಸೈತಾನನು ಯಾವ ಪ್ರಮುಖ ವಿವಾದಾಂಶವನ್ನು ಎಬ್ಬಿಸಿದನು?
6 ಎಬ್ಬಿಸಲ್ಪಟ್ಟ ವಿವಾದಾಂಶವು ಮಹತ್ವದ್ದಾಗಿತ್ತು. ಯೆಹೋವನು ತನ್ನ ಪರಮಾಧಿಕಾರವನ್ನು ಚಲಾಯಿಸುವ ವಿಧದ ಬಗ್ಗೆ ಸೈತಾನನು ಸವಾಲೊಡ್ಡಿದನು. ವಿಶ್ವವನ್ನು ಪ್ರೀತಿಯಿಂದ ಆಳುವುದು ದೇವರಿಗೆ ನಿಜವಾಗಿ ಸಾಧ್ಯವೊ? ಇಲ್ಲವೆ, ಸೈತಾನನು ಸೂಚಿಸಿದಂತೆ ಮಾನವನು ದೇವರ ಸೇವೆಮಾಡುವುದು ಕಟ್ಟಕಡೆಗೆ ಕೇವಲ ಸ್ವಾರ್ಥಕ್ಕಾಗಿಯೊ? ಯೆಹೋವನಿಗೆ ತನ್ನ ಸೇವಕನಾದ ಯೋಬನ ಸಮಗ್ರತೆ ಮತ್ತು ನಿಷ್ಠೆಯಲ್ಲಿ ಪೂರ್ಣ ಭರವಸೆಯಿದ್ದದರಿಂದ, ಮುಂದಿನ ಸಮಯಗಳಿಗಾಗಿ ಒಂದು ಮಾದರಿಯಾಗಲಿದ್ದ ಈ ಪ್ರಕರಣದಲ್ಲಿ ಯೋಬನನ್ನು ಒಳಗೂಡಿಸುವಂತೆ ಆತನು ಪಿಶಾಚನನ್ನು ಅನುಮತಿಸಿದನು. ಹಾಗಾಗಿ, ಯೋಬನ ಮೇಲೆ ಒಂದರನಂತರ ಒಂದಾಗಿ ಬಂದ ವಿಪತ್ತುಗಳಿಗೆ ಸೈತಾನನೇ ಕಾರಣನಾಗಿದ್ದನು. ಸೈತಾನನ ಆರಂಭದ ಆಕ್ರಮಣಗಳೆಲ್ಲವೂ ವಿಫಲವಾದಾಗ, ಕೊನೆ ಅಸ್ತ್ರವಾಗಿ ಅವನು ಯೋಬನಿಗೆ ತುಂಬ ನೋವುಭರಿತ ರೋಗವನ್ನು ಬರಮಾಡಿದನು. “ಚರ್ಮಕ್ಕೆ ಚರ್ಮ ಎಂಬಂತೆ ಒಬ್ಬ ಮನುಷ್ಯನು ಪ್ರಾಣವನ್ನು ಉಳಿಸಿಕೊಳ್ಳುವದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊಡುವನು” ಎಂಬುದು ಸೈತಾನನ ವಾದವಾಗಿತ್ತು.—ಯೋಬ 2:4.
7. ಇಂದು ದೇವರ ಸೇವಕರು ಯಾವ ವಿಧಗಳಲ್ಲಿ ಯೋಬನಿಗಿದ್ದಂಥ ರೀತಿಯ ಕಷ್ಟಗಳಿಗೆ ತುತ್ತಾಗುತ್ತಾರೆ?
7 ಇಂದಿನ ಕ್ರೈಸ್ತರಲ್ಲಿ ಹೆಚ್ಚಿನವರು ಯೋಬನಿಗಾದಷ್ಟು ಮಟ್ಟಿಗಿನ ಕಷ್ಟಗಳನ್ನು ಅನುಭವಿಸುವುದಿಲ್ಲವಾದರೂ, ವಿವಿಧ ಸಂಕಷ್ಟಗಳು ಅವರನ್ನು ನಿಶ್ಚಯವಾಗಿಯೂ ಬಾಧಿಸುತ್ತವೆ. ಅನೇಕರು ಹಿಂಸೆ ಇಲ್ಲವೆ ಕೌಟುಂಬಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಣಕಾಸಿನ ತೊಂದರೆ ಇಲ್ಲವೆ ಕಾಯಿಲೆಯಿಂದಾಗಿ ಕೆಲವರು ಜರ್ಜರಿತರಾಗುತ್ತಾರೆ. ಕೆಲವರು ನಂಬಿಕೆಗಾಗಿ ತಮ್ಮ ಜೀವಗಳನ್ನೇ ತ್ಯಾಗಮಾಡಿದ್ದಾರೆ. ಆದರೆ ನಾವು ಅನುಭವಿಸುವ ಪ್ರತಿಯೊಂದು ದುರಂತಕ್ಕೆ ಸೈತಾನನೇ ವ್ಯಕ್ತಿಗತವಾಗಿ ಕಾರಣನೆಂದು ನಾವು ಭಾವಿಸಬಾರದು ನಿಜ. ಏಕೆಂದರೆ ಕೆಲವೊಂದು ಸಮಸ್ಯೆಗಳು, ನಮ್ಮ ಸ್ವಂತ ತಪ್ಪುಗಳಿಂದಲೂ ಉಂಟಾಗಿರಬಹುದು ಇಲ್ಲವೆ ನಮಗೆ ವಂಶಾನುಗತವಾಗಿ ಬಂದಿರುವ ಯಾವುದೊ ಶಾರೀರಿಕ ಸ್ಥಿತಿಯಿಂದಲೂ ಆಗಿರಬಹುದು. (ಗಲಾತ್ಯ 6:7) ಅಲ್ಲದೆ, ನಾವೆಲ್ಲರೂ ವೃದ್ಧಾಪ್ಯದ ಹಾಗೂ ನೈಸರ್ಗಿಕ ವಿಪತ್ತುಗಳ ಹಾನಿಕಾರಕ ಪರಿಣಾಮಗಳಿಗೆ ತುತ್ತಾಗುತ್ತೇವೆ. ಸದ್ಯದ ಸಮಯದಲ್ಲಿ, ಯೆಹೋವನು ಚಮತ್ಕಾರದಿಂದ ತನ್ನ ಸೇವಕರನ್ನು ಈ ಬಾಧೆಗಳಿಂದ ಸಂರಕ್ಷಿಸುವುದಿಲ್ಲವೆಂದು ಬೈಬಲ್ ಸ್ಪಷ್ಟವಾಗಿ ತಿಳಿಸುತ್ತದೆ.—ಪ್ರಸಂಗಿ 9:11.
8. ನಾವು ಅನುಭವಿಸುವ ಸಂಕಷ್ಟಗಳನ್ನು ಸೈತಾನನು ತನ್ನ ಲಾಭಕ್ಕಾಗಿ ಹೇಗೆ ಉಪಯೋಗಿಸಬಲ್ಲನು?
8 ಸೈತಾನನಾದರೊ ನಮ್ಮ ನಂಬಿಕೆಯನ್ನು ಶಿಥಿಲಗೊಳಿಸಲಿಕ್ಕಾಗಿ ನಾವು ಅನುಭವಿಸುವ ಸಂಕಷ್ಟಗಳನ್ನೇ ಬಳಸಬಹುದು. “ಒಂದು ಶೂಲ ನನ್ನ ಶರೀರದಲ್ಲಿ ನಾಟಿದೆಯೋ ಎಂಬಂತೆ ನನ್ನನ್ನು ಗುದ್ದುವದಕ್ಕೆ ಸೈತಾನನ ದೂತರಲ್ಲಿ ಒಬ್ಬನು ನನ್ನ ಬಳಿಗೆ ಕಳುಹಿಸಲ್ಪಟ್ಟನು” ಎಂದು ಅಪೊಸ್ತಲ ಪೌಲನು ಹೇಳಿದನು. (2 ಕೊರಿಂಥ 12:7) ಇದು, ದೃಷ್ಟಿದೋಷದಂಥ ಯಾವುದೊ ಶಾರೀರಿಕ ಸಮಸ್ಯೆಯಾಗಿತ್ತೊ ಬೇರೇನೊ ಅಗಿತ್ತೊ ಎಂಬುದು ನಮಗೆ ನಿಶ್ಚಿತವಾಗಿ ತಿಳಿದಿಲ್ಲ. ಆದರೆ ಸೈತಾನನು ಈ ಸಮಸ್ಯೆಯನ್ನು ಮತ್ತು ಅದರಿಂದ ಉಂಟಾಗುವ ಹತಾಶೆಯನ್ನು ಬಳಸಿ, ಪೌಲನಲ್ಲಿದ್ದ ಆನಂದ ಹಾಗೂ ಸಮಗ್ರತೆಯು ಬತ್ತಿಹೋಗುವಂತೆ ಮಾಡಬಲ್ಲನೆಂದು ಅವನಿಗೆ ತಿಳಿದಿತ್ತು. (ಜ್ಞಾನೋಕ್ತಿ 24:10) ಸೈತಾನನು ಇಂದು ದೇವರ ಸೇವಕರನ್ನು ಯಾವುದಾದರೊಂದು ವಿಧದಲ್ಲಿ ಹಿಂಸಿಸಲಿಕ್ಕಾಗಿ ಕುಟುಂಬ ಸದಸ್ಯರು, ಶಾಲಾ ಸಹಪಾಠಿಗಳು, ಇಲ್ಲವೆ ಸರ್ವಾಧಿಕಾರಿ ಸರಕಾರಗಳನ್ನು ಸಹ ಚಿತಾಯಿಸಬಹುದು.
9. ಕಷ್ಟಹಿಂಸೆಗಳು ಬಂದಾಗ ನಾವು ಅನಾವಶ್ಯಕವಾಗಿ ಚಕಿತರಾಗಬಾರದೇಕೆ?
9 ಈ ಸಮಸ್ಯೆಗಳನ್ನು ನಾವು ಹೇಗೆ ಯಶಸ್ವಿಯಾಗಿ ಎದುರಿಸಬಲ್ಲೆವು? ಯೆಹೋವನ ಮೇಲೆ ನಮಗಿರುವ ಪ್ರೀತಿ ಮತ್ತು ಆತನ ಪರಮಾಧಿಕಾರಕ್ಕೆ ನಮ್ಮ ಅಧೀನತೆಯು ಚಂಚಲವಾಗಿಲ್ಲವೆಂದು ತೋರಿಸಲು ಸಮಸ್ಯೆಗಳು ಒಂದು ಅವಕಾಶಕೊಡುತ್ತವೆ ಎಂಬ ನೋಟವನ್ನಿಡುವ ಮೂಲಕವೇ. (ಯಾಕೋಬ 1:2-4) ನಮ್ಮ ಸಂಕಟದ ಮೂಲ ಏನೇ ಆಗಿರಲಿ, ದೇವರಿಗೆ ನಿಷ್ಠರಾಗಿರುವುದರ ಮಹತ್ವವನ್ನು ಅರ್ಥಮಾಡಿಕೊಳ್ಳುವುದು ನಮ್ಮ ಆಧ್ಯಾತ್ಮಿಕ ಸಮತೋಲನವನ್ನು ಕಾಪಾಡಿಕೊಳ್ಳುವಂತೆ ಸಹಾಯಮಾಡುತ್ತದೆ. ಅಪೊಸ್ತಲ ಪೇತ್ರನು ಕ್ರೈಸ್ತರಿಗೆ ಹೀಗೆ ಬರೆದನು: “ಪ್ರಿಯರೇ, ನೀವು ಪರಿಶೋಧನೆಗಾಗಿ ಪುಟಕ್ಕೆ ಹಾಕಲ್ಪಟ್ಟದ್ದಕ್ಕೆ ಆಶ್ಚರ್ಯಪಡಬೇಡಿರಿ; ವಿಪರೀತವಾದ ಸಂಗತಿ ಸಂಭವಿಸಿತೆಂದು ಯೋಚಿಸಬೇಡಿರಿ.” (1 ಪೇತ್ರ 4:12) ಮತ್ತು ಪೌಲನು ವಿವರಿಸಿದ್ದು: “ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು.” (2 ತಿಮೊಥೆಯ 3:12) ಸೈತಾನನು ಯೋಬನ ವಿಷಯದಲ್ಲಿ ಮಾಡಿದಂತೆ ಈಗಲೂ ಯೆಹೋವನ ಸಾಕ್ಷಿಗಳ ಸಮಗ್ರತೆಯ ಬಗ್ಗೆ ಸವಾಲೆಸೆಯುತ್ತಿದ್ದಾನೆ. ವಾಸ್ತವವಾಗಿ, ಸೈತಾನನು ಈ ಕಡೇ ದಿವಸಗಳಲ್ಲಿ ದೇವಜನರ ಮೇಲಿನ ಆಕ್ರಮಣಗಳನ್ನು ಹೆಚ್ಚಿಸಿದ್ದಾನೆಂದು ಬೈಬಲ್ ಸೂಚಿಸುತ್ತದೆ.—ಪ್ರಕಟನೆ 12:9, 17.
ತಪ್ಪಾಭಿಪ್ರಾಯ ಮತ್ತು ಒಂದಿಷ್ಟು ತಪ್ಪು ಸಲಹೆ
10. ಯೋಬನಿಗಿದ್ದ ಅಡಚಣೆ ಯಾವುದಾಗಿತ್ತು?
10 ಯೋಬನಿಗೆ ಒಂದು ಅಡಚಣೆ ಇತ್ತು. ಇದು ನಮಗಿರಬೇಕಂತಿಲ್ಲ. ಅದೇನೆಂದರೆ, ತನ್ನ ಮೇಲೆ ಈ ಎಲ್ಲಾ ವಿಪತ್ತುಗಳೇಕೆ ಬಂದಿದ್ದವೆಂದು ಅವನಿಗೆ ಗೊತ್ತಿರಲಿಲ್ಲ. ಹೇಗೊ “ಯೆಹೋವನೇ ಕೊಟ್ಟನು, ಯೆಹೋವನೇ ತೆಗೆದುಕೊಂಡನು” ಎಂಬ ತಪ್ಪಾದ ತೀರ್ಮಾನಕ್ಕೆ ಯೋಬನು ಬಂದನು. (ಯೋಬ 1:21) ಯೋಬನ ಕಷ್ಟಕ್ಕೆ ದೇವರೇ ಮೂಲನೆಂಬ ಅಭಿಪ್ರಾಯವನ್ನು ಅವನಲ್ಲಿ ಮೂಡಿಸಲು ಪ್ರಾಯಶಃ ಸೈತಾನನು ಬೇಕುಬೇಕೆಂದು ಪ್ರಯತ್ನಿಸಿದನು.
11. ವಿಪತ್ತುಗಳು ಬಂದಾಗ ಯೋಬನು ಪ್ರತಿಕ್ರಿಯಿಸಿದ ರೀತಿಯನ್ನು ವಿವರಿಸಿರಿ.
11 ಯೋಬನು ದೇವರನ್ನು ದೂಷಿಸುವಂತೆ ಅವನ ಹೆಂಡತಿ ಪ್ರೇರಿಸಿದಾಗ ಅವನು ಹಾಗೆ ಮಾಡಲು ನಿರಾಕರಿಸಿದನು. ಆದರೂ ಕಷ್ಟಗಳಿಂದಾಗಿ ಅವನು ಬಹಳಷ್ಟು ನಿರುತ್ತೇಜಿತನಾದನು. (ಯೋಬ 2:9, 10) ‘ದುಷ್ಟರು ನನಗಿಂತಲೂ ಒಳ್ಳೇ ಸ್ಥಿತಿಯಲ್ಲಿರುವಂತೆ ತೋರುತ್ತದೆ’ ಎಂದವನು ಹೇಳಿದನು. (ಯೋಬ 21:7-9) ‘ದೇವರು ನನ್ನನ್ನು ಏಕೆ ಶಿಕ್ಷಿಸುತ್ತಿದ್ದಾನೆ?’ ಎಂದು ಅವನು ಸೋಜಿಗಪಟ್ಟಿರಬೇಕು. ಅವನು ಸಾಯಲು ಇಚ್ಛಿಸಿದಂಥ ಸಂದರ್ಭಗಳೂ ಇದ್ದವು. “ನೀನು ನನ್ನನ್ನು ಪಾತಾಳದಲ್ಲಿ ಬಚ್ಚಿಟ್ಟು ನಿನ್ನ ಕೋಪವು ಇಳಿಯುವ ಪರ್ಯಂತ ನನ್ನನ್ನು ಮರೆಮಾಡಿ ನನಗೆ ಅವಧಿಯನ್ನು ಗೊತ್ತುಮಾಡಿ [ಕಡೆಯಲ್ಲಿ] ನನ್ನನ್ನು ಜ್ಞಾಪಿಸಿಕೊಂಡರೆ ಎಷ್ಟೋ ಒಳ್ಳೇದು!” ಎಂದವನು ಉದ್ಗರಿಸಿದನು.—ಯೋಬ 14:13.
12, 13. ಯೋಬನ ಮೂವರು ಸಂಗಡಿಗರ ಮಾತುಗಳು ಅವನ ಮೇಲೆ ಯಾವ ಪರಿಣಾಮಬೀರಿದವು?
12 ಯೋಬನ ಮೂವರು ಸಂಗಡಿಗರು ‘ಸಂತಾಪವನ್ನು ತೋರ್ಪಡಿಸಿ ಅವನನ್ನು ಸಂತೈಸಲಿಕ್ಕಾಗಿ’ ಭೇಟಿಮಾಡಿದಂತೆ ತೋರುತ್ತಿತ್ತು. (ಯೋಬ 2:11) ಆದರೆ ವಾಸ್ತವದಲ್ಲಿ ಅವರು “ಬೇಸರಿಕೆಯನ್ನು ಹುಟ್ಟಿಸುವ ಆದರಣೆಯವರಾಗಿ” ಪರಿಣಮಿಸಿದರು. (ಯೋಬ 16:2) ಒಂದುವೇಳೆ ಇವರು, ಯೋಬನು ತನ್ನ ಸಮಸ್ಯೆಗಳನ್ನು ಹೇಳಿಕೊಂಡು ಮನಸ್ಸಿನ ಭಾರವನ್ನು ಇಳಿಸಸಾಧ್ಯವಿದ್ದ ನಿಜವಾದ ಸ್ನೇಹಿತರಾಗಿರುತ್ತಿದ್ದಲ್ಲಿ ಅವನಿಗೆ ಪ್ರಯೋಜನವಾಗುತ್ತಿತ್ತು. ಆದರೆ ಈ ಮೂವರು ಸಂಗಡಿಗರು, ಯೋಬನ ಗಲಿಬಿಲಿ ಮತ್ತು ಅವನಲ್ಲಿದ್ದ ಹತಾಶೆಯ ಭಾವನೆಗಳನ್ನು ಇನ್ನಷ್ಟು ಹೆಚ್ಚಿಸಿದರು.—ಯೋಬ 19:2; 26:2.
13 ಸಮಂಜಸವಾಗಿಯೇ ಯೋಬನು ತನ್ನನ್ನೇ ಹೀಗೆ ಕೇಳಿದ್ದಿರಬಹುದು: ‘ನನಗೇ ಏಕೆ? ನಾನೇನು ತಪ್ಪುಮಾಡಿದ್ದೇನೆಂದು ನನಗೆ ಹೀಗಾಗಬೇಕು?’ ಅವನ ಸಂಗಡಿಗರು ಕೊಟ್ಟ ವಿವರಣೆಗಳು ಸಂಪೂರ್ಣವಾಗಿ ತಪ್ಪಾಗಿದ್ದವು! ಯೋಬನು ಯಾವುದೊ ಗಂಭೀರ ಪಾಪಮಾಡಿದ್ದರಿಂದ ಅವನಿಗೆ ಈ ಕಷ್ಟಗಳು ಬಂದಿವೆಯೆಂದು ಅವರೆಲ್ಲರು ಎಣಿಸಿದರು. ಎಲೀಫಜನು ಕೇಳಿದ್ದು: “ನಿರಪರಾಧಿಯು ಎಂದಾದರೂ ನಾಶವಾದದ್ದುಂಟೇ . . . ನಾನು ನೋಡಿರುವ ಮಟ್ಟಿಗೆ ಅಧರ್ಮವನ್ನು ಉತ್ತು ಕೇಡನ್ನು ಬಿತ್ತುವವರು ಕೇಡನ್ನೇ ಕೊಯ್ಯುವರು.”—ಯೋಬ 4:7, 8.
14. ಕಷ್ಟಗಳಿಗೆ ಅಯೋಗ್ಯ ನಡತೆಯೇ ಕಾರಣವೆಂದು ನಾವು ದುಡುಕಿ ತೀರ್ಮಾನಿಸಬಾರದೇಕೆ?
14 ನಾವು ಆತ್ಮದ ಕುರಿತು ಬಿತ್ತದೆ, ಶರೀರಭಾವದ ಕುರಿತು ಬಿತ್ತಿದರೆ ಸಮಸ್ಯೆಗಳೇಳಬಹುದು, ನಿಜ. (ಗಲಾತ್ಯ 6:7, 8) ಆದರೆ ಸದ್ಯದ ಈ ವ್ಯವಸ್ಥೆಯಲ್ಲಿ ನಮ್ಮ ನಡತೆ ಒಳ್ಳೇದಾಗಿದ್ದರೂ ತೊಂದರೆಗಳೇಳಬಹುದು. ಆದುದರಿಂದ ನಿದೋರ್ಷಿಗಳು ಎಲ್ಲ ವಿಪತ್ತುಗಳಿಂದ ಮುಕ್ತರಾಗಿದ್ದಾರೆಂದು ಹೇಳಲು ಸಾಧ್ಯವಿಲ್ಲ. ಯೇಸು ಕ್ರಿಸ್ತನು ‘ನಿಷ್ಕಳಂಕನೂ ಪಾಪಿಗಳಲ್ಲಿ ಸೇರದೆ ಪ್ರತ್ಯೇಕವಾಗಿದ್ದರೂ’ ಅವನು ಸಹ ಯಾತನಾ ಕಂಭದ ಮೇಲೆ ನೋವುಭರಿತ ಮರಣವನ್ನಪ್ಪಿದನು ಮತ್ತು ಅಪೊಸ್ತಲ ಯಾಕೋಬನು ಒಬ್ಬ ಹುತಾತ್ಮನಾಗಿ ಸತ್ತನು. (ಇಬ್ರಿಯ 7:26; ಅ. ಕೃತ್ಯಗಳು 12:1, 2) ಎಲೀಫಜ ಮತ್ತವನ ಇಬ್ಬರು ಸಂಗಡಿಗರ ತಪ್ಪಾದ ತರ್ಕವು, ಯೋಬನು ತನ್ನ ಒಳ್ಳೇ ಹೆಸರನ್ನು ಸಮರ್ಥಿಸಲು ಮತ್ತು ತಾನು ನಿರ್ದೋಷಿಯೆಂದು ಸಾಧಿಸುವಂತೆ ಅವನನ್ನು ಪ್ರಚೋದಿಸಿತು. ಹಾಗೆ ಮಾಡಿದರೂ, ಆ ಸಂಗಡಿಗರು ಹಠಹಿಡಿಯುತ್ತಾ ಯೋಬನಿಗೆ ಬಂದ ಕಷ್ಟಗಳು ಅವನ ಪಾಪದ ಫಲವಾಗಿತ್ತೆಂಬ ಆರೋಪವನ್ನು ಮುಂದುವರಿಸಿದರು. ಇದು, ದೇವರ ನ್ಯಾಯದ ಕುರಿತಾದ ಅವನ ನೋಟವನ್ನು ಪ್ರಭಾವಿಸಿರಬೇಕು.—ಯೋಬ 34:5; 35:2.
ಸಂಕಷ್ಟದಲ್ಲಿರುವಾಗ ಸಹಾಯ ಕಂಡುಕೊಳ್ಳುವುದು
15. ನಾವು ಕಷ್ಟದಲ್ಲಿರುವಾಗ ಯಾವ ಯೋಚನಾರೀತಿಯು ನಮಗೆ ಸಹಾಯಮಾಡುವುದು?
15 ಯೋಬನಿಂದ ನಾವೇನಾದರೂ ಪಾಠ ಕಲಿಯಬಹುದೊ? ದುರಂತಗಳು, ಅಸ್ವಸ್ಥತೆ ಇಲ್ಲವೆ ಹಿಂಸೆಯು ತುಂಬ ಅನ್ಯಾಯದ ವಿಷಯಗಳಾಗಿ ತೋರಬಹುದು. ಎಷ್ಟೋ ಜನರಿಗೆ ಇಂಥ ಸಮಸ್ಯೆಗಳು ತಟ್ಟುವುದೇ ಇಲ್ಲ ಎಂಬಂತೆ ತೋರುತ್ತದೆ. (ಕೀರ್ತನೆ 73:3-12) ಆದುದರಿಂದ ಕೆಲವೊಮ್ಮೆ ನಮ್ಮನ್ನೇ ಈ ಮೂಲಭೂತ ಪ್ರಶ್ನೆಗಳನ್ನು ಕೇಳಬೇಕಾಗಬಹುದು: ‘ಏನೇ ಆಗಲಿ, ದೇವರ ಮೇಲೆ ನನಗಿರುವ ಪ್ರೀತಿಯು ನಾನು ಆತನನ್ನು ಸೇವಿಸುತ್ತಾ ಇರುವಂತೆ ಮಾಡುತ್ತದೊ? ಯೆಹೋವನು, ತನ್ನನ್ನು “ದೂರುವವನಿಗೆ ಉತ್ತರಕೊಡಲಾಗುವಂತೆ” ನಾನು ಹಾತೊರೆಯುತ್ತೇನೊ?’ (ಜ್ಞಾನೋಕ್ತಿ 27:11; ಮತ್ತಾಯ 22:37) ಬೇರೆಯವರ ವಿಚಾರಹೀನ ಮಾತುಗಳು, ನಮ್ಮ ಸ್ವರ್ಗೀಯ ತಂದೆಯ ಬಗ್ಗೆ ನಾವು ಸಂದೇಹಪಡುವಂತೆ ಎಂದಿಗೂ ಮಾಡಬಾರದು. ಹಲವಾರು ವರ್ಷಗಳ ವರೆಗೆ ಒಂದು ಕಾಯಿಲೆಯಿಂದ ನರಳಿದ ಒಬ್ಬ ನಂಬಿಗಸ್ತ ಕ್ರೈಸ್ತಳು ಒಮ್ಮೆ ಹೇಳಿದ್ದು: “ಯೆಹೋವನು ಏನನ್ನೇ ಅನುಮತಿಸಲಿ, ಅದನ್ನು ತಾಳಿಕೊಳ್ಳಲು ಶಕ್ತಳಾಗಿರುವೆನೆಂದು ನನಗೆ ತಿಳಿದಿದೆ. ಇದಕ್ಕೆ ಬೇಕಾದ ಬಲವನ್ನು ಆತನು ಕೊಡುವನೆಂದು ನನಗೆ ಖಂಡಿತವಾಗಿ ಗೊತ್ತು ಮತ್ತು ಆತನು ಯಾವಾಗಲೂ ಹಾಗೆ ಮಾಡಿದ್ದಾನೆ.”
16. ಕಷ್ಟಗಳನ್ನು ಎದುರಿಸುವವರಿಗೆ ದೇವರ ವಾಕ್ಯವು ಹೇಗೆ ಸಹಾಯ ಒದಗಿಸುತ್ತದೆ?
16 ಸೈತಾನನ ತಂತ್ರಗಳ ವಿಷಯದಲ್ಲಿ ಯೋಬನಿಗಿಲ್ಲದಿದ್ದ ತಿಳಿವಳಿಕೆ ನಮಗಿದೆ. ‘ಅವನ ಯೋಚನೆಗಳನ್ನು’ ಅಂದರೆ ಕುತಂತ್ರಗಳನ್ನು ‘ನಾವು ಅರಿಯದವರಲ್ಲ.’ (2 ಕೊರಿಂಥ 2:11) ಅಷ್ಟುಮಾತ್ರವಲ್ಲದೆ, ಪ್ರಾಯೋಗಿಕ ವಿವೇಕದ ಭಂಡಾರವೇ ನಮಗೆ ಲಭ್ಯವಿದೆ. ಎಲ್ಲ ವಿಧದ ಕಷ್ಟಗಳನ್ನು ತಾಳಿಕೊಂಡಿರುವ ನಂಬಿಗಸ್ತ ಸ್ತ್ರೀಪುರುಷರ ವೃತ್ತಾಂತಗಳು ಬೈಬಲಿನಲ್ಲಿವೆ. ಅಧಿಕಾಂಶ ಕ್ರೈಸ್ತರಿಗಿಂತ ಹೆಚ್ಚಿನ ಕಷ್ಟಗಳನ್ನು ಅನುಭವಿಸಿದ ಅಪೊಸ್ತಲ ಪೌಲನು ಬರೆದುದು: “ಪೂರ್ವದಲ್ಲಿ ಬರೆದದ್ದೆಲ್ಲಾ ನಮ್ಮನ್ನು ಉಪದೇಶಿಸುವದಕ್ಕಾಗಿ ಬರೆಯಲ್ಪಟ್ಟಿತು. ನಾವು ಓದಿ ಸ್ಥಿರಚಿತ್ತವನ್ನೂ ಆದರಣೆಯನ್ನೂ ಹೊಂದಿ ರಕ್ಷಣೆಯ ನಿರೀಕ್ಷೆಯುಳ್ಳವರಾಗಿರುವಂತೆ ಆ ಗ್ರಂಥಗಳು ಬರೆಯಲ್ಪಟ್ಟವು.” (ರೋಮಾಪುರ 15:4) ಎರಡನೇ ಲೋಕ ಯುದ್ಧದ ಸಮಯದಲ್ಲಿ ತನ್ನ ನಂಬಿಕೆಗಾಗಿ ಸೆರೆಮನೆಯಲ್ಲಿದ್ದ ಯುರೋಪಿನ ಸಾಕ್ಷಿಯೊಬ್ಬನು ಒಂದು ಬೈಬಲನ್ನು ಪಡೆಯಲಿಕ್ಕಾಗಿ ಮೂರು ದಿನಗಳ ತನ್ನ ಆಹಾರದ ಭತ್ಯವನ್ನು ವಿನಿಮಯ ಮಾಡಿದನು. ಅವನು ಹೇಳುವುದು: “ಆ ವಿನಿಮಯ ಎಷ್ಟು ಪ್ರತಿಫಲದಾಯಕವಾಗಿತ್ತು! ನನಗೆ ಹೊಟ್ಟೆಗಿಲ್ಲದಿದ್ದರೂ, ಆ ತೊಂದರೆಗ್ರಸ್ತ ಸಮಯಗಳಲ್ಲಿ ಪರೀಕ್ಷೆಗಳನ್ನು ಸಹಿಸಿಕೊಳ್ಳುವಂತೆ ನನಗೂ ಇತರರಿಗೂ ಸಹಾಯಮಾಡಿದ ಆ ಆಧ್ಯಾತ್ಮಿಕ ಆಹಾರವು ನನಗೆ ಸಿಕ್ಕಿತ್ತು. ಈ ದಿನದ ವರೆಗೂ ಆ ಬೈಬಲನ್ನು ಜೋಪಾನವಾಗಿಟ್ಟಿದ್ದೇನೆ.”
17. ಯಾವ ದೈವಿಕ ಒದಗಿಸುವಿಕೆಗಳು ತಾಳಿಕೊಳ್ಳುವಂತೆ ನಮಗೆ ಸಹಾಯಮಾಡಬಲ್ಲವು?
17 ಬೈಬಲಿನಿಂದ ಸಿಗುವ ಸಾಂತ್ವನವಲ್ಲದೆ, ಸಮಸ್ಯೆಗಳನ್ನು ನಿಭಾಯಿಸಲು ಉಪಯುಕ್ತ ಮಾರ್ಗದರ್ಶನವನ್ನು ಕೊಡುವ ಅನೇಕ ಬೈಬಲ್ ಅಧ್ಯಯನ ಸಹಾಯಕಗಳೂ ನಮಗಿವೆ. ನೀವು ವಾಚ್ಟವರ್ ಪಬ್ಲಿಕೇಷನ್ಸ್ ಇಂಡೆಕ್ಸ್ ಅನ್ನು ನೋಡುವುದಾದರೆ, ನಿಮಗಿರುವಂಥದ್ದೇ ಪರೀಕ್ಷೆಗೊಳಗಾಗಿರುವ ಜೊತೆ ಕ್ರೈಸ್ತನೊಬ್ಬನ ಅನುಭವವನ್ನು ಬಹುಶಃ ಕಂಡುಕೊಳ್ಳುವಿರಿ. (1 ಪೇತ್ರ 5:9) ಸಹಾನುಭೂತಿಯುಳ್ಳ ಹಿರಿಯರು ಇಲ್ಲವೆ ಇತರ ಪ್ರೌಢ ಕ್ರೈಸ್ತರೊಂದಿಗೆ ನಿಮ್ಮ ಪರಿಸ್ಥಿತಿಗಳ ಬಗ್ಗೆ ಚರ್ಚಿಸುವುದೂ ನಿಮಗೆ ಸಹಾಯಕರವಾಗಿರಬಲ್ಲದು. ಎಲ್ಲದಕ್ಕಿಂತಲೂ ಮಿಗಿಲಾಗಿ, ನೀವು ಪ್ರಾರ್ಥನೆಯ ಮೂಲಕ ಯೆಹೋವನ ಮತ್ತು ಆತನ ಪವಿತ್ರಾತ್ಮದ ಸಹಾಯದ ಮೇಲೆ ಅವಲಂಬಿಸಬಹುದು. ಪೌಲನು ಸೈತಾನನ ‘ಗುದ್ದುಗಳನ್ನು’ ಹೇಗೆ ಪ್ರತಿರೋಧಿಸಿದನು? ದೇವರ ಶಕ್ತಿಯ ಮೇಲೆ ಅವಲಂಬಿಸಲು ಕಲಿಯುವ ಮೂಲಕವೇ. (2 ಕೊರಿಂಥ 12:9, 10) “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ” ಎಂದು ಅವನು ಬರೆದನು.—ಫಿಲಿಪ್ಪಿ 4:13.
18. ಜೊತೆ ಕ್ರೈಸ್ತರು ಅಮೂಲ್ಯ ಉತ್ತೇಜನವನ್ನು ಹೇಗೆ ನೀಡಬಲ್ಲರು?
18 ಹಾಗಾದರೆ ಸಹಾಯವು ಲಭ್ಯವಿದೆ, ಮತ್ತು ಅದನ್ನು ಪಡೆಯಲು ನೀವೆಂದಿಗೂ ಹಿಂಜರಿಯಬಾರದು. “ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ [“ನಿರುತ್ತೇಜಿತನಾದರೆ,” NW] ನಿನ್ನ ಬಲವೂ ಇಕ್ಕಟ್ಟೇ” ಎಂದು ಜ್ಞಾನೋಕ್ತಿಯು ಹೇಳುತ್ತದೆ. (ಜ್ಞಾನೋಕ್ತಿ 24:10) ಒಂದು ಮರದ ಮನೆಯನ್ನು ಗೆದ್ದಲು ಹೇಗೆ ಕುಸಿಯುವಂತೆ ಮಾಡಬಲ್ಲದೊ ಹಾಗೆಯೇ, ನಿರುತ್ತೇಜನವು ಒಬ್ಬ ಕ್ರೈಸ್ತನ ಸಮಗ್ರತೆಯನ್ನು ಶಿಥಿಲಗೊಳಿಸಬಲ್ಲದು. ಈ ಅಪಾಯವನ್ನು ತಡೆಗಟ್ಟಲು, ನಮ್ಮ ಜೊತೆ ಸೇವಕರ ಮೂಲಕ ಯೆಹೋವನು ನಮಗೆ ಬೆಂಬಲವನ್ನು ಕೊಡುತ್ತಾನೆ. ಯೇಸುವನ್ನು ದಸ್ತಗಿರಿಮಾಡಲಾದ ರಾತ್ರಿಯಂದು ಒಬ್ಬ ದೇವದೂತನು ಬಂದು ಅವನನ್ನು ಬಲಪಡಿಸಿದನು. (ಲೂಕ 22:43) ಪೌಲನು ಒಬ್ಬ ಸೆರೆಯಾಳಾಗಿ ರೋಮ್ನತ್ತ ಪ್ರಯಾಣಿಸುತ್ತಿದ್ದಾಗ ಅಪ್ಪಿಯಪೇಟೆ ಮತ್ತು ತ್ರಿಛತ್ರವೆಂಬ ಸ್ಥಳದಲ್ಲಾದ ಸಹೋದರರ ಭೇಟಿಗಾಗಿ ‘ದೇವರ ಸ್ತೋತ್ರಮಾಡಿ ಧೈರ್ಯಗೊಂಡನು.’ (ಅ. ಕೃತ್ಯಗಳು 28:15) ಒಬ್ಬಳು ಜರ್ಮನ್ ಸಾಕ್ಷಿಯು, ರಾವೆನ್ಸ್ಬ್ರುಕ್ ಸೆರೆಶಿಬಿರಕ್ಕೆ ಹಾಕಲ್ಪಟ್ಟಾಗ ಅವಳು ಹದಿವಯಸ್ಕಳಾಗಿದ್ದಳು ಮತ್ತು ಹೆದರಿಹೋಗಿದ್ದಳು. ಆಗ ಅವಳಿಗೆ ಸಿಕ್ಕಿದ ಸಹಾಯವನ್ನು ಅವಳು ಇನ್ನೂ ನೆನಪಿಸಿಕೊಳ್ಳುತ್ತಾಳೆ. “ಜೊತೆ ಕ್ರೈಸ್ತಳೊಬ್ಬಳು ನನ್ನನ್ನು ಕೂಡಲೇ ಗುರುತಿಸಿ, ಹಾರ್ದಿಕವಾಗಿ ಸ್ವಾಗತಿಸಿದಳು. ಇನ್ನೊಬ್ಬ ನಂಬಿಗಸ್ತ ಸಹೋದರಿಯು ನನ್ನನ್ನು ಪರಾಂಬರಿಸಿ, ನನ್ನ ಆಧ್ಯಾತ್ಮಿಕ ತಾಯಿಯಂತಾದಳು” ಎಂದು ಅವಳು ಜ್ಞಾಪಿಸಿಕೊಳ್ಳುತ್ತಾಳೆ.
“ನಂಬಿಗಸ್ತನಾಗಿರು”
19. ಸೈತಾನನ ಪ್ರಯತ್ನಗಳನ್ನು ಪ್ರತಿರೋಧಿಸಲು ಯೋಬನಿಗೆ ಯಾವುದು ಸಹಾಯಮಾಡಿತು?
19 ಯೋಬನು “ತನ್ನ ಯಥಾರ್ಥತ್ವವನ್ನು [ಸಮಗ್ರತೆಯನ್ನು] ಬಿಡದೆ ಇದ್ದಾನೆ” ಎಂದು ಯೆಹೋವನು ಅವನ ಬಗ್ಗೆ ವರ್ಣಿಸಿದನು. (ಯೋಬ 2:3) ತನಗೆ ಕಷ್ಟಗಳೇಕೆ ಬರುತ್ತಿವೆಯೆಂದು ಯೋಬನಿಗೆ ಅರ್ಥವಾಗದಿದ್ದರೂ ಮತ್ತು ನಿರುತ್ತೇಜನವಾಗಿದ್ದರೂ, ನಿಷ್ಠೆಯ ಕುರಿತಾದ ಮುಖ್ಯ ವಿವಾದಾಂಶದಲ್ಲಿ ಅವನೆಂದೂ ಅಲುಗಾಡಲಿಲ್ಲ. ತಾನು ಈ ವರೆಗೂ ಯಾವುದಕ್ಕಾಗಿ ಬದುಕಿದ್ದನೊ ಅದೆಲ್ಲವನ್ನು ಗಾಳಿಗೆ ತೂರಲು ಯೋಬನು ನಿರಾಕರಿಸಿದನು. “ಸಾಯುವ ತನಕ ನನ್ನ ಯಥಾರ್ಥತ್ವದ ಹೆಸರನ್ನು ಕಳಕೊಳ್ಳೆನು” ಎಂದವನು ಪಟ್ಟುಹಿಡಿದನು.—ಯೋಬ 27:5.
20. ತಾಳಿಕೊಳ್ಳುವುದು ಸಾರ್ಥಕವೇಕೆ?
20 ನಮಗೂ ಅದೇ ರೀತಿಯ ದೃಢಸಂಕಲ್ಪವಿದ್ದರೆ ಯಾವುದೇ ಪರಿಸ್ಥಿತಿಗಳಲ್ಲಿ, ಅಂದರೆ ಪ್ರಲೋಭನೆಗಳು, ವಿರೋಧ ಇಲ್ಲವೆ ಕಷ್ಟಗಳ ಮಧ್ಯೆಯೂ ನಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಇದು ಸಹಾಯಮಾಡುವುದು. ಸ್ಮುರ್ನದ ಸಭೆಗೆ ಯೇಸು ಹೇಳಿದ್ದು: “ನಿನಗೆ ಸಂಭವಿಸುವದಕ್ಕಿರುವ ಬಾಧೆಗಳಿಗೆ ಹೆದರಬೇಡ. ಇಗೋ ನೀವು ದುಷ್ಪ್ರೇರಣೆಗೆ ಒಳಗಾಗುವಂತೆ ಸೈತಾನನು ನಿಮ್ಮಲ್ಲಿ ಕೆಲವರನ್ನು ಸೆರೆಮನೆಯೊಳಗೆ ಹಾಕುವದಕ್ಕಿದ್ದಾನೆ; ಮತ್ತು ಹತ್ತು ದಿವಸಗಳ ತನಕ ನಿಮಗೆ ಸಂಕಟ [ತೊಂದರೆ, ಸಂಕಷ್ಟ ಇಲ್ಲವೆ ದಬ್ಬಾಳಿಕೆ]ವಿರುವದು. ನೀನು ಸಾಯಬೇಕಾದರೂ ನಂಬಿಗಸ್ತನಾಗಿರು; ನಾನು ನಿನಗೆ ಜೀವವೆಂಬ ಜಯಮಾಲೆಯನ್ನು ಕೊಡುವೆನು.”—ಪ್ರಕಟನೆ 2:10.
21, 22. ಸಂಕಟವನ್ನು ತಾಳಿಕೊಳ್ಳುತ್ತಿರುವಾಗ ಯಾವ ಜ್ಞಾನ ನಮಗೆ ಸಾಂತ್ವನಕೊಡಬಲ್ಲದು?
21 ಸೈತಾನನಿಂದ ಆಳಲ್ಪಡುವ ಈ ವ್ಯವಸ್ಥೆಯಲ್ಲಿ ನಮ್ಮ ತಾಳ್ಮೆ ಹಾಗೂ ಸಮಗ್ರತೆಯು ಪರೀಕ್ಷೆಗೊಡ್ಡಲ್ಪಡುವುದು. ಹಾಗಿದ್ದರೂ, ನಾವು ಭವಿಷ್ಯವನ್ನು ಎದುರುನೋಡುತ್ತಿರುವಾಗ ಭಯಪಡಲು ಯಾವುದೇ ಕಾರಣವಿಲ್ಲವೆಂದು ಯೇಸು ನಮಗೆ ಆಶ್ವಾಸನೆಕೊಟ್ಟಿದ್ದಾನೆ. ಪ್ರಾಮುಖ್ಯ ಸಂಗತಿಯೇನೆಂದರೆ, ನಾವು ನಂಬಿಗಸ್ತರಾಗಿರಬೇಕು. ‘ಸಂಕಟವು ಕ್ಷಣಮಾತ್ರದ್ದು’ ಆದರೆ ಯೆಹೋವನು ನಮಗೆ ವಾಗ್ದಾನಮಾಡಿರುವ ‘ಪ್ರತಿಫಲವು,’ “ನಿರಂತರವಾಗಿರುವ ಗೌರವವಾದ ಪ್ರಭಾವ”ದ್ದಾಗಿರುತ್ತದೆ ಎಂದು ಪೌಲನು ಹೇಳುತ್ತಾನೆ. (2 ಕೊರಿಂಥ 4:17, 18) ಯೋಬನು ಅನುಭವಿಸಿದ ಸಂಕಟವು ಸಹ, ಅವನಿಗೆ ಪರೀಕ್ಷೆಗಳು ಬರುವ ಮುಂಚೆ ಮತ್ತು ತದನಂತರ ಅವನು ಆನಂದಿಸಿದ ಹರ್ಷಮಯ ವರ್ಷಗಳಿಗೆ ಹೋಲಿಸುವಾಗ ಕ್ಷಣಮಾತ್ರದ್ದಾಗಿತ್ತು.—ಯೋಬ 42:16.
22 ಆದರೂ, ನಮ್ಮ ಪರೀಕ್ಷೆಗಳಿಗೆ ಕೊನೆಯೇ ಇಲ್ಲವೆಂಬಂತೆ ತೋರುವ ಮತ್ತು ನಮ್ಮ ಕಷ್ಟಗಳನ್ನು ಸಹಿಸಲು ಸಾಧ್ಯವೇ ಇಲ್ಲವೆಂದು ತೋರುವ ಕ್ಷಣಗಳಿರಬಹುದು. ಯೋಬನ ಅನುಭವವು ನಮಗೆ ತಾಳ್ಮೆಯ ವಿಷಯದಲ್ಲಿ ಹೆಚ್ಚಿನ ಪಾಠಗಳನ್ನು ಹೇಗೆ ಕಲಿಸಬಲ್ಲದೆಂಬುದನ್ನು ಮುಂದಿನ ಲೇಖನದಲ್ಲಿ ಪರಿಗಣಿಸುವೆವು. ಕಷ್ಟಗಳನ್ನು ಎದುರಿಸುತ್ತಿರುವ ಇತರರನ್ನು ನಾವು ಬಲಪಡಿಸಸಾಧ್ಯವಿರುವ ವಿಧಗಳನ್ನು ಸಹ ನಾವು ನೋಡಲಿರುವೆವು. (w06 8/15)
ನೀವು ಹೇಗೆ ಉತ್ತರಕೊಡುವಿರಿ?
• ಯೋಬನ ಸಮಗ್ರತೆಯ ಬಗ್ಗೆ ಸೈತಾನನು ಯಾವ ಪ್ರಮುಖ ವಿವಾದಾಂಶವನ್ನು ಎಬ್ಬಿಸಿದನು?
• ಕಷ್ಟಗಳು ಬಂದಾಗ ನಾವು ಅನಾವಶ್ಯಕವಾಗಿ ಚಕಿತರಾಗಬಾರದೇಕೆ?
• ನಾವು ತಾಳಿಕೊಳ್ಳುವಂತೆ ಯೆಹೋವನು ಹೇಗೆ ಸಹಾಯಮಾಡುತ್ತಾನೆ?
[ಪುಟ 11ರಲ್ಲಿರುವ ಚಿತ್ರಗಳು]
ಸಂಶೋಧನೆಮಾಡುವುದು, ಪ್ರೌಢ ಕ್ರೈಸ್ತರೊಂದಿಗೆ ಮಾತಾಡುವುದು ಮತ್ತು ಪ್ರಾರ್ಥನೆಯಲ್ಲಿ ನಮ್ಮ ಅಂತರಂಗ ತೋಡಿಕೊಳ್ಳುವುದು ನಮಗೆ ತಾಳಿಕೊಳ್ಳುವಂತೆ ಸಹಾಯಮಾಡಬಲ್ಲದು