‘ಪ್ರಾರ್ಥನೆಯನ್ನು ಕೇಳುವವನನ್ನು’ ಸಮೀಪಿಸುವ ವಿಧ
“ಪ್ರಾರ್ಥನೆಯನ್ನು ಕೇಳುವವನೇ, ನರರೆಲ್ಲರು ನಿನ್ನ ಬಳಿಗೆ ಬರುವರು.”—ಕೀರ್ತನೆ 65:2.
1. ಮಾನವರನ್ನು ಭೂಮಿಯ ಬೇರೆ ಜೀವಿಗಳಿಂದ ಪ್ರತ್ಯೇಕಿಸುವುದು ಯಾವುದು, ಮತ್ತು ಇದು ನಮಗೆ ಯಾವ ಅವಕಾಶವನ್ನು ಒದಗಿಸುತ್ತದೆ?
ಭೂಮಿಯ ಮೇಲಿರುವ ಸಹಸ್ರಾರು ಜೀವಿಗಳಲ್ಲಿ, ಸೃಷ್ಟಿಕರ್ತನನ್ನು ಆರಾಧಿಸುವ ಸಾಮರ್ಥ್ಯವು ಮಾನವರಿಗೆ ಮಾತ್ರ ಇದೆ. ಆಧ್ಯಾತ್ಮಿಕ ಆವಶ್ಯಕತೆಯ ಪ್ರಜ್ಞೆ ಮತ್ತು ಅದನ್ನು ತೃಪ್ತಿಪಡಿಸುವ ಬಯಕೆ ಇರುವುದು ಮಾನವರಲ್ಲಿ ಮಾತ್ರ. ಇದು, ನಮ್ಮ ಸ್ವರ್ಗೀಯ ತಂದೆಯೊಂದಿಗೆ ನಾವು ಒಂದು ವೈಯಕ್ತಿಕ ಸಂಬಂಧವನ್ನಿಟ್ಟುಕೊಳ್ಳುವ ಅದ್ಭುತಕರವಾದ ಅವಕಾಶವನ್ನು ಒದಗಿಸುತ್ತದೆ.
2. ಮಾನವನಿಗೆ ತನ್ನ ಸೃಷ್ಟಿಕರ್ತನೊಂದಿಗಿದ್ದ ಸಂಬಂಧದ ಮೇಲೆ ಪಾಪವು ಯಾವ ಪ್ರತಿಕೂಲ ಪರಿಣಾಮವನ್ನು ಬೀರಿತು?
2 ಮಾನವನು ತನ್ನ ನಿರ್ಮಾಣಿಕನನ್ನು ಸಮೀಪಿಸುವ ಸಾಮರ್ಥ್ಯವುಳ್ಳವನಾಗಿರುವಂತೆ ದೇವರು ಅವನನ್ನು ಸೃಷ್ಟಿಸಿದನು. ಆದಾಮಹವ್ವರು ಪಾಪರಹಿತರಾಗಿ ನಿರ್ಮಿಸಲ್ಪಟ್ಟಿದ್ದರು. ಈ ಕಾರಣದಿಂದ ಅವರು, ಒಂದು ಮಗು ತನ್ನ ತಂದೆಯನ್ನು ಸಮೀಪಿಸುವಷ್ಟು ಮುಕ್ತವಾಗಿ ದೇವರನ್ನು ಸಮೀಪಿಸಸಾಧ್ಯವಿತ್ತು. ಆದರೆ, ಆ ಮಹಾ ಸದವಕಾಶವನ್ನು ಪಾಪವು ನಷ್ಟಪಡಿಸಿತು. ಆದಾಮಹವ್ವರು ದೇವರಿಗೆ ಅವಿಧೇಯರಾಗಿ, ಆತನೊಂದಿಗಿದ್ದ ಆಪ್ತ ಸಂಬಂಧವನ್ನು ಕಳೆದುಕೊಂಡರು. (ಆದಿಕಾಂಡ 3:8-13, 17-24) ಇದರರ್ಥ, ಆದಾಮನ ಅಪರಿಪೂರ್ಣ ಸಂತತಿಯವರು ಮುಂದೆಂದೂ ದೇವರೊಂದಿಗೆ ಸಂವಾದ ಮಾಡಲಾರರೆಂದಾಗಿದೆಯೋ? ಇಲ್ಲ, ಅವರು ತನ್ನನ್ನು ಸಮೀಪಿಸುವಂತೆ ಯೆಹೋವನು ಇನ್ನೂ ಅನುಮತಿಸುತ್ತಾನೆ, ಆದರೆ ಅವರು ನಿರ್ದಿಷ್ಟ ಷರತ್ತುಗಳನ್ನು ಪೂರೈಸುವಲ್ಲಿ ಮಾತ್ರ. ಆ ಷರತ್ತುಗಳಾವುವು?
ದೇವರನ್ನು ಸಮೀಪಿಸಲು ಆವಶ್ಯಕ ವಿಷಯಗಳು
3. ಪಾಪಿಗಳಾದ ಮಾನವರು ದೇವರನ್ನು ಹೇಗೆ ಸಮೀಪಿಸಬೇಕು ಮತ್ತು ಇದನ್ನು ಯಾವ ಉದಾಹರಣೆಯು ಸ್ಪಷ್ಟಪಡಿಸುತ್ತದೆ?
3 ಆದಾಮನ ಪುತ್ರರಲ್ಲಿ ಇಬ್ಬರನ್ನು ಒಳಗೊಂಡ ಘಟನೆಯು, ತನ್ನನ್ನು ಸಮೀಪಿಸಬಯಸುವ ಅಪರಿಪೂರ್ಣ ಮಾನವನಿಂದ ದೇವರು ಏನನ್ನು ಅವಶ್ಯಪಡಿಸುತ್ತಾನೆಂಬುದನ್ನು ನೋಡುವಂತೆ ನಮಗೆ ಸಹಾಯಮಾಡುತ್ತದೆ. ಕಾಯಿನ ಮತ್ತು ಹೇಬೆಲ—ಇವರಿಬ್ಬರೂ ಯಜ್ಞಗಳನ್ನು ಅರ್ಪಿಸುತ್ತ ದೇವರನ್ನು ಸಮೀಪಿಸಪ್ರಯತ್ನಿಸಿದರು. ಆದರೆ ಹೇಬೆಲನ ಯಜ್ಞವನ್ನು ದೇವರು ಅಂಗೀಕರಿಸಿದನು ಮತ್ತು ಕಾಯಿನನದ್ದನ್ನು ಅಂಗೀಕರಿಸಲಿಲ್ಲ. (ಆದಿಕಾಂಡ 4:3-5) ಅದೇಕೆ? ಇಬ್ರಿಯ 11:4 ಹೇಳುವುದು: “ನಂಬಿಕೆಯಿಂದಲೇ ಹೇಬೆಲನು ಕಾಯಿನನ ಯಜ್ಞಕ್ಕಿಂತ ಶ್ರೇಷ್ಠವಾದ ಯಜ್ಞವನ್ನು ದೇವರಿಗೆ ಸಮರ್ಪಿಸಿದನು. ಅದರ ಮೂಲಕ ತಾನು ನೀತಿವಂತನೆಂದು ಸಾಕ್ಷಿಹೊಂದಿದನು.” ಹಾಗಾದರೆ, ದೇವರನ್ನು ಸ್ವೀಕಾರಾರ್ಹವಾದ ರೀತಿಯಲ್ಲಿ ಸಮೀಪಿಸಬೇಕಾದರೆ ನಂಬಿಕೆಯೇ ಪೂರ್ವಾಪೇಕ್ಷಿತ ಗುಣವಾಗಿದೆ ಎಂಬುದು ಸ್ಪಷ್ಟ. ಇನ್ನೊಂದು ಪೂರ್ವಾಪೇಕ್ಷಿತ ಸಂಗತಿಯನ್ನು ಯೆಹೋವನು ಕಾಯಿನನಿಗೆ ನುಡಿದ ಈ ಮಾತುಗಳಲ್ಲಿ ನಾವು ನೋಡಬಹುದು: “ಒಳ್ಳೇ ಕೆಲಸ ಮಾಡಿದರೆ ನಿನ್ನ ತಲೆ ಎತ್ತಲ್ಪಡುವದಲ್ಲವೇ.” ಹೌದು, ಕಾಯಿನನು ಒಳ್ಳೇದನ್ನು ಮಾಡಿ ದೇವರನ್ನು ಸಮೀಪಿಸುತ್ತಿದ್ದಲ್ಲಿ ಆತನದನ್ನು ಸ್ವೀಕಾರಾರ್ಹವಾಗಿ ಕಾಣುತ್ತಿದ್ದನು. ಆದರೆ, ಕಾಯಿನನು ದೇವರ ಸಲಹೆಯನ್ನು ತಿರಸ್ಕರಿಸಿ, ಹೇಬೇಲನನ್ನು ಕೊಂದು ಬಹಿಷ್ಕೃತನಾದನು. (ಆದಿಕಾಂಡ 4:7-12) ಹೀಗೆ, ಮಾನವ ಇತಿಹಾಸದ ಆರಂಭದಲ್ಲಿಯೇ, ದೇವರನ್ನು ಸಮೀಪಿಸಲು ನಂಬಿಕೆ ಮತ್ತು ಅದರೊಂದಿಗೆ ಸತ್ಕಾರ್ಯಗಳು ಪ್ರಾಮುಖ್ಯವೆಂಬುದನ್ನು ಒತ್ತಿಹೇಳಲಾಯಿತು.
4. ದೇವರನ್ನು ಸಮೀಪಿಸುವ ವಿಷಯದಲ್ಲಿ ನಾವು ಏನನ್ನು ಒಪ್ಪಿಕೊಳ್ಳಬೇಕು?
4 ನಾವು ದೇವರನ್ನು ಸಮೀಪಿಸಬಯಸುವುದಾದರೆ ನಮ್ಮ ಪಾಪಪೂರ್ಣ ಸ್ಥಿತಿಯನ್ನು ಒಪ್ಪಿಕೊಳ್ಳುವುದು ಅತ್ಯಗತ್ಯ. ಎಲ್ಲರೂ ಪಾಪಿಗಳೇ ಮತ್ತು ದೇವರನ್ನು ಸಮೀಪಿಸಲು ಪಾಪವು ಒಂದು ತಡೆಯಾಗಿದೆ. ಪ್ರವಾದಿ ಯೆರೆಮೀಯನು ಇಸ್ರಾಯೇಲ್ನ ಕುರಿತು ಬರೆದುದು: “ನಾವು ಅವಿಧೇಯರಾಗಿ ದ್ರೋಹಮಾಡಿದ್ದೇವೆ; . . . ನಮ್ಮ ಪ್ರಾರ್ಥನೆಯು ನಿನಗೆ ಮುಟ್ಟಬಾರದೆಂದು ಮೋಡವನ್ನು ಮರೆಮಾಡಿಕೊಂಡಿದ್ದೀ.” (ಪ್ರಲಾಪಗಳು 3:42, 44) ಹಾಗಿದ್ದರೂ, ಯಾರು ದೇವರ ಆಜ್ಞೆಗಳನ್ನು ಪಾಲಿಸುತ್ತಾ, ನಂಬಿಕೆಯಿಂದ ಮತ್ತು ಸರಿಯಾದ ಹೃದ್ಭಾವದೊಂದಿಗೆ ಆತನನ್ನು ಸಮೀಪಿಸುತ್ತಾರೊ ಅವರ ಪ್ರಾರ್ಥನೆಯನ್ನು ಕೇಳಲು ಸಿದ್ಧನಿದ್ದೇನೆಂದು ಆತನು ಮಾನವ ಇತಿಹಾಸದುದ್ದಕ್ಕೂ ತೋರಿಸಿದ್ದಾನೆ. (ಕೀರ್ತನೆ 119:145) ಇಂತಹ ವ್ಯಕ್ತಿಗಳಲ್ಲಿ ಕೆಲವರು ಯಾರು ಮತ್ತು ಅವರ ಪ್ರಾರ್ಥನೆಗಳಿಂದ ನಾವೇನನ್ನು ಕಲಿಯಬಲ್ಲೆವು?
5, 6. ಅಬ್ರಹಾಮನು ದೇವರನ್ನು ಸಮೀಪಿಸಿದ ವಿಷಯದಿಂದ ನಾವು ಏನನ್ನು ಕಲಿಯಬಲ್ಲೆವು?
5 ಅಂಥವರಲ್ಲಿ ಒಬ್ಬನು ಅಬ್ರಹಾಮನಾಗಿದ್ದನು. ತನ್ನನ್ನು ಸಮೀಪಿಸಲು ಅಬ್ರಹಾಮನು ಮಾಡಿದ ಪ್ರಯತ್ನವನ್ನು ದೇವರು ಅಂಗೀಕರಿಸಿದನು. ಆದುದರಿಂದಲೇ ದೇವರು ಅವನನ್ನು “ನನ್ನ ಸ್ನೇಹಿತ” ಎಂದು ಕರೆದನು. (ಯೆಶಾಯ 41:8) ಅಬ್ರಹಾಮನು ದೇವರನ್ನು ಸಮೀಪಿಸಿದ ವಿಷಯದಿಂದ ನಾವು ಏನನ್ನು ಕಲಿಯಬಲ್ಲೆವು? ಈ ನಂಬಿಗಸ್ತ ಮೂಲಪಿತೃವು ಒಬ್ಬ ಬಾಧ್ಯಸ್ಥನ ಬಗ್ಗೆ ಮಾತಾಡುತ್ತಾ, ‘ಯೆಹೋವನೇ, ನನಗೆ ಏನು ಕೊಟ್ಟರೇನು? ನಾನು ಸಂತಾನವಿಲ್ಲದವನಾಗಿ ಹೋಗುವೆನಲ್ಲ’ ಎಂದು ಹೇಳಿದನು. (ಆದಿಕಾಂಡ 15:2, 3; 17:18) ಇನ್ನೊಂದು ಸಂದರ್ಭದಲ್ಲಿ, ಸೋದೋಮ್ಗೊಮೋರದಲ್ಲಿದ್ದ ದುಷ್ಟರ ಮೇಲೆ ದೇವರು ನ್ಯಾಯತೀರ್ಪನ್ನು ತರುವಾಗ ಯಾರಾದರೂ ರಕ್ಷಿಸಲ್ಪಡುವರೊ ಎಂಬ ವಿಷಯದಲ್ಲಿ ತನಗಿದ್ದ ಚಿಂತೆಯನ್ನು ಅವನು ವ್ಯಕ್ತಪಡಿಸಿದನು. (ಆದಿಕಾಂಡ 18:23-33) ಮಾತ್ರವಲ್ಲ ಇತರರ ಪರವಾಗಿಯೂ ಅಬ್ರಹಾಮನು ವಿಜ್ಞಾಪನೆಗಳನ್ನು ಮಾಡಿದನು. (ಆದಿಕಾಂಡ 20:7, 17) ಮತ್ತು ಹೇಬೆಲನಂತೆ ಅಬ್ರಹಾಮನು ಸಹ ಯೆಹೋವನನ್ನು ಸಮೀಪಿಸಿದಾಗ ಕೆಲವೊಮ್ಮೆ ಆತನಿಗೆ ಯಜ್ಞಗಳನ್ನೂ ಅರ್ಪಿಸಿದನು.—ಆದಿಕಾಂಡ 22:9-14.
6 ಈ ಎಲ್ಲಾ ಸಂದರ್ಭಗಳಲ್ಲೂ ಅಬ್ರಹಾಮನು ಯೆಹೋವನೊಂದಿಗೆ ನಿಸ್ಸಂಕೋಚತೆಯಿಂದ ಮಾತಾಡಿದನು. ಅವನು ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾತಾಡಿದನಾದರೂ, ಅವನ ಮಾತುಗಳು ತನ್ನ ಸೃಷ್ಟಿಕರ್ತನ ಮುಂದೆ ತಾನೆಷ್ಟು ಅಲ್ಪನೆಂಬುದನ್ನು ಪ್ರತಿಬಿಂಬಿಸಿದವು. ಆದಿಕಾಂಡ 18:27ರಲ್ಲಿರುವ ಅವನ ಗೌರವಪೂರ್ಣ ಮಾತುಗಳನ್ನು ಗಮನಿಸಿ. ಅವನು ಹೇಳಿದ್ದು: “ಇಗೋ, ಮಣ್ಣೂ ಬೂದಿಯೂ ಆಗಿರುವ ನಾನು ಸ್ವಾಮಿಯ ಸಂಗಡ ವಾದಿಸುವದಕ್ಕೆ ಧೈರ್ಯಗೊಂಡಿದ್ದೇನೆ.” ಅನುಕರಿಸಲು ಇದೆಷ್ಟು ಉತ್ತಮವಾದ ಮನೋಭಾವ!
7. ಮೂಲಪಿತೃಗಳು ಯಾವ ವಿಷಯಗಳ ಕುರಿತು ಯೆಹೋವನಿಗೆ ಪ್ರಾರ್ಥಿಸಿದರು?
7 ಮೂಲಪಿತೃಗಳು ವಿವಿಧ ವಿಷಯಗಳ ಬಗ್ಗೆ ಪ್ರಾರ್ಥಿಸಿದರು ಮತ್ತು ಅದನ್ನು ಯೆಹೋವನು ಆಲಿಸಿದನು. ಯಾಕೋಬನು ಹರಕೆಯ ರೂಪದಲ್ಲಿ ಒಂದು ಪ್ರಾರ್ಥನೆಯನ್ನು ಮಾಡಿದನು. ದೇವರಿಂದ ಬೆಂಬಲವನ್ನು ಕೇಳಿದ ಬಳಿಕ, ಅವನು ಗಂಭೀರ ರೀತಿಯಲ್ಲಿ ಮಾತುಕೊಡುತ್ತಾ, “ನಿನ್ನಿಂದ ನನಗೆ ಬರುವ ಎಲ್ಲಾ ಆಸ್ತಿಯಲ್ಲಿ ಹತ್ತರಲ್ಲೊಂದು ಪಾಲನ್ನು ನಿನಗೆ ಸಮರ್ಪಿಸುವೆನೆಂಬದಾಗಿ” ಹೇಳಿದನು. (ಆದಿಕಾಂಡ 28:20-22) ತರುವಾಯ, ಅವನು ತನ್ನ ಅಣ್ಣನನ್ನು ಭೇಟಿಯಾಗಲಿದ್ದಾಗ ಹೀಗೆ ಹೇಳುತ್ತಾ ಯೆಹೋವನ ಸಂರಕ್ಷಣೆಗಾಗಿ ಬೇಡಿಕೊಂಡನು: “ನನ್ನ ಅಣ್ಣನಾದ ಏಸಾವನ [ಮೇಲೆ] . . . ನನಗೆ ಭಯವದೆ. ಅವನ ಕೈಗೆ ಸಿಕ್ಕದಂತೆ ನಮ್ಮನ್ನು ಕಾಪಾಡಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ.” (ಆದಿಕಾಂಡ 32:9-12) ಮೂಲಪಿತ ಯೋಬನು ತನ್ನ ಕುಟುಂಬದ ಪರವಾಗಿ ಯೆಹೋವನನ್ನು ಸಮೀಪಿಸಿ, ಅವರಿಗೋಸ್ಕರ ಯಜ್ಞವನ್ನರ್ಪಿಸಿದನು. ಯೋಬನ ಮೂವರು ಸ್ನೇಹಿತರು ಮಾತಿನಲ್ಲಿ ಪಾಪಮಾಡಿದಾಗ, ಅವನು ಅವರ ಪರವಾಗಿ ಪ್ರಾರ್ಥಿಸಲಾಗಿ “ಯೆಹೋವನು ಯೋಬನ ವಿಜ್ಞಾಪನೆಯನ್ನು ಲಾಲಿಸಿದನು.” (ಯೋಬ 1:5; 42:7-9) ಈ ವೃತ್ತಾಂತಗಳು, ನಾವು ಯೆಹೋವನಿಗೆ ಪ್ರಾರ್ಥಿಸುವಾಗ ಒಳಗೂಡಿಸಬಹುದಾದ ವಿಷಯಗಳನ್ನು ಗುರುತಿಸಲು ನಮಗೆ ಸಹಾಯಮಾಡುತ್ತವೆ. ಮಾತ್ರವಲ್ಲ, ಯೆಹೋವನು ತನ್ನನ್ನು ಯೋಗ್ಯ ರೀತಿಯಲ್ಲಿ ಸಮೀಪಿಸುವವರ ಪ್ರಾರ್ಥನೆಗಳನ್ನು ಅಂಗೀಕರಿಸಲು ಸಿದ್ಧನಾಗಿದ್ದಾನೆಂದು ನಾವು ಇವುಗಳಿಂದ ನೋಡುತ್ತೇವೆ.
ಧರ್ಮಶಾಸ್ತ್ರದ ಕೆಳಗೆ
8. ಧರ್ಮಶಾಸ್ತ್ರದ ಕೆಳಗೆ ಜನರ ಪರವಾಗಿ ಸಂಗತಿಗಳನ್ನು ಹೇಗೆ ಯೆಹೋವನ ಮುಂದಿಡಲಾಗುತ್ತಿತ್ತು?
8 ಯೆಹೋವನು ಇಸ್ರಾಯೇಲ್ಯರನ್ನು ಐಗುಪ್ತದಿಂದ ಬಿಡುಗಡೆಮಾಡಿದ ಬಳಿಕ ಅವರಿಗೆ ಧರ್ಮಶಾಸ್ತ್ರವನ್ನು ಕೊಟ್ಟನು. ಅವರು ದೇವರನ್ನು ಒಂದು ನೇಮಿತ ಯಾಜಕತ್ವದ ಮುಖೇನ ಸಮೀಪಿಸುವ ಏರ್ಪಾಡನ್ನು ಆ ಧರ್ಮಶಾಸ್ತ್ರವು ವಿಧಿಸಿತು. ಕೆಲವು ಮಂದಿ ಲೇವಿಯರು ಜನರ ಪರವಾಗಿ ಯಾಜಕರಾಗಿ ಕಾರ್ಯನಿರ್ವಹಿಸುವಂತೆ ನೇಮಿಸಲ್ಪಟ್ಟರು. ರಾಷ್ಟ್ರೀಯ ಅಭಿರುಚಿಯ ವಿಷಯವು ಎದ್ದುಬಂದಾಗ ಜನರ ಪ್ರತಿನಿಧಿಯೊಬ್ಬನು—ಕೆಲವು ಬಾರಿ ಅರಸನು ಇಲ್ಲವೆ ಪ್ರವಾದಿಯು—ಆ ಸಂಗತಿಯನ್ನು ಪ್ರಾರ್ಥನೆಯ ಮೂಲಕ ಯೆಹೋವನ ಮುಂದಿಡುತ್ತಿದ್ದನು. (1 ಸಮುವೇಲ 8:21, 22; 14:36-41; ಯೆರೆಮೀಯ 42:1-3) ಉದಾಹರಣೆಗೆ, ದೇವಾಲಯದ ಪ್ರತಿಷ್ಠಾಪನೆಯ ಸಮಯದಲ್ಲಿ ರಾಜ ಸೊಲೊಮೋನನು ಹಾರ್ದಿಕ ಪ್ರಾರ್ಥನೆಯ ಮೂಲಕ ಯೆಹೋವನನ್ನು ಸಮೀಪಿಸಿದನು. ಇದಕ್ಕೆ ಪ್ರತಿಯಾಗಿ, ಆ ದೇವಾಲಯವನ್ನು ತನ್ನ ಮಹಿಮೆಯಿಂದ ತುಂಬಿಸಿ, ‘ಈ ಸ್ಥಳದಲ್ಲಿ ಪ್ರಾರ್ಥಿಸುವವರ ವಿಜ್ಞಾಪನೆಗೆ ಕಿವಿಗೊಡುವೆನು’ ಎಂದು ಹೇಳುವ ಮೂಲಕ ಯೆಹೋವನು ಸೊಲೊಮೋನನ ಪ್ರಾರ್ಥನೆಯನ್ನು ಅಂಗೀಕರಿಸಿದ್ದನ್ನು ಸೂಚಿಸಿದನು.—2 ಪೂರ್ವಕಾಲವೃತ್ತಾಂತ 6:12–7:3, 15.
9. ಪವಿತ್ರಾಲಯದಲ್ಲಿ ಯೆಹೋವನನ್ನು ಯೋಗ್ಯ ರೀತಿಯಲ್ಲಿ ಸಮೀಪಿಸಲು ಏನು ಅಗತ್ಯವಿತ್ತು?
9 ಇಸ್ರಾಯೇಲಿಗೆ ಕೊಟ್ಟ ಧರ್ಮಶಾಸ್ತ್ರದಲ್ಲಿ, ಯೆಹೋವನು ತನ್ನನ್ನು ಪವಿತ್ರಾಲಯದಲ್ಲಿ ಸ್ವೀಕಾರಯೋಗ್ಯವಾಗಿ ಸಮೀಪಿಸಲು ಒಂದು ಆವಶ್ಯಕತೆಯನ್ನು ಸೇರಿಸಿದ್ದನು. ಅದೇನಾಗಿತ್ತು? ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಪ್ರಾಣಿಗಳನ್ನು ಯಜ್ಞಾರ್ಪಿಸುವುದಕ್ಕೆ ಸೇರಿಸಿ, ಮಹಾಯಾಜಕನು ಯೆಹೋವನಿಗೆ ಸುಗಂಧಭರಿತ ಧೂಪವನ್ನು ಹಾಕಬೇಕಿತ್ತು. ಆ ಬಳಿಕ, ಉಪಯಾಜಕರು ಸಹ ದೋಷಪರಿಹಾರಕ ದಿನವನ್ನು ಬಿಟ್ಟು ಬೇರೆ ದಿನಗಳಲ್ಲಿ ಈ ಸೇವೆಯನ್ನು ಸಲ್ಲಿಸಿದರು. ಯಾಜಕರು ಇಂಥ ಗೌರವಾರ್ಪಣೆಯನ್ನು ಮಾಡದೆ ಹೋದರೆ, ಯೆಹೋವನು ಅವರ ಸೇವೆಯನ್ನು ಮೆಚ್ಚುತ್ತಿರಲಿಲ್ಲ.—ವಿಮೋಚನಕಾಂಡ 30:7, 8; 2 ಪೂರ್ವಕಾಲವೃತ್ತಾಂತ 13:11.
10, 11. ಯೆಹೋವನು ವ್ಯಕ್ತಿಗತ ಪ್ರಾರ್ಥನೆಗಳನ್ನು ಅಂಗೀಕರಿಸಿದನೆಂಬುದಕ್ಕೆ ಯಾವ ಸಾಕ್ಷ್ಯವಿದೆ?
10 ಪುರಾತನ ಇಸ್ರಾಯೇಲಿನಲ್ಲಿ, ದೇವರನ್ನು ಕೇವಲ ನೇಮಿತ ಪ್ರತಿನಿಧಿಗಳ ಮೂಲಕ ಮಾತ್ರ ಸಮೀಪಿಸಸಾಧ್ಯವಿತ್ತೋ? ಇಲ್ಲ, ಪ್ರತಿಯೊಬ್ಬರ ವೈಯಕ್ತಿಕ ಪ್ರಾರ್ಥನೆಗಳನ್ನೂ ಯೆಹೋವನು ಅಂಗೀಕರಿಸಲು ಸಂತೋಷಿಸಿದನೆಂದು ಶಾಸ್ತ್ರವಚನಗಳು ತೋರಿಸುತ್ತವೆ. ದೇವಾಲಯದ ಪ್ರತಿಷ್ಠಾಪನೆಯ ಸಂಬಂಧದಲ್ಲಿ ಸೊಲೋಮೋನನು ಯೆಹೋವನಿಗೆ ಮಾಡಿದ ಪ್ರಾರ್ಥನೆಯಲ್ಲಿ ಹೀಗೆ ಬೇಡಿಕೊಂಡನು: ‘ಎಲ್ಲಾ ಇಸ್ರಾಯೇಲ್ಯರಾಗಲಿ ಅವರಲ್ಲೊಬ್ಬನಾಗಲಿ ಈ ಆಲಯದ ಕಡೆಗೆ ಕೈಯೆತ್ತಿ ನಿನಗೆ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಮಾಡುವದಾದರೆ ನೀನು ನಿನ್ನ ನಿವಾಸವಾಗಿರುವ ಪರಲೋಕದಿಂದ ಲಾಲಿಸು.’ (2 ಪೂರ್ವಕಾಲವೃತ್ತಾಂತ 6:29, 30) ಸ್ನಾನಿಕ ಯೋಹಾನನ ತಂದೆಯಾಗಿದ್ದ ಜಕರೀಯನು ದೇವರ ಸನ್ನಿಧಿಯಲ್ಲಿ ಧೂಪವನ್ನು ಅರ್ಪಿಸುತ್ತಿದ್ದಾಗ, ಯೆಹೋವನ ಯಾಜಕೇತರ ಆರಾಧಕರ ಗುಂಪು ‘ಹೊರಗೆ ನಿಂತು ಪ್ರಾರ್ಥಿಸುತ್ತಿತ್ತು’ ಎಂದು ಲೂಕನ ವೃತ್ತಾಂತವು ನಮಗೆ ತಿಳಿಸುತ್ತದೆ. ಚಿನ್ನದ ಧೂಪವೇದಿಯ ಮೇಲೆ ಯೆಹೋವನಿಗೆ ಧೂಪವು ಅರ್ಪಿಸಲ್ಪಡುತ್ತಿದ್ದಾಗ ಆಲಯದ ಹೊರಗೆ ಪ್ರಾರ್ಥಿನೆಗಾಗಿ ಸೇರಿಬರುವುದು ಜನರ ವಾಡಿಕೆಯಾಗಿತ್ತೆಂದು ವ್ಯಕ್ತವಾಗುತ್ತದೆ.—ಲೂಕ 1:8-10.
11 ಹೀಗೆ, ಯೆಹೋವನನ್ನು ಯೋಗ್ಯ ರೀತಿಯಲ್ಲಿ ಸಮೀಪಿಸಿದಾಗ, ಆತನು ಇಡೀ ಜನಾಂಗವನ್ನು ಪ್ರತಿನಿಧಿಸಿದವರ ಮತ್ತು ತನ್ನನ್ನು ವೈಯಕ್ತಿಕವಾಗಿ ಸಮೀಪಿಸಲು ಪ್ರಯತ್ನಿಸಿದವರ ಪ್ರಾರ್ಥನೆಗಳನ್ನು ಅಂಗೀಕರಿಸಲು ಸಂತೋಷಿಸಿದನು. ಇಂದು, ನಾವು ಧರ್ಮಶಾಸ್ತ್ರದ ಒಡಂಬಡಿಕೆಯ ಕೆಳಗಿಲ್ಲ. ಆದರೂ, ಪುರಾತನ ಇಸ್ರಾಯೇಲ್ಯರು ದೇವರನ್ನು ಸಮೀಪಿಸಿದ ವಿಧಗಳಿಂದ, ನಾವು ಪ್ರಾರ್ಥನೆಯ ಸಂಬಂಧದಲ್ಲಿ ಕೆಲವು ಮಹತ್ವದ ಪಾಠಗಳನ್ನು ಕಲಿತುಕೊಳ್ಳಬಲ್ಲೆವು.
ಕ್ರೈಸ್ತ ಏರ್ಪಾಡಿನ ಕೆಳಗೆ
12. ಯೆಹೋವನನ್ನು ಸಮೀಪಿಸಲು ಯಾವ ಏರ್ಪಾಡು ಕ್ರೈಸ್ತರಿಗಾಗಿ ಮಾಡಲ್ಪಟ್ಟಿದೆ?
12 ನಾವೀಗ ಕ್ರೈಸ್ತ ಏರ್ಪಾಡಿನ ಕೆಳಗೆ ಜೀವಿಸುತ್ತಿದ್ದೇವೆ. ದೇವಜನರೆಲ್ಲರನ್ನು ಪ್ರತಿನಿಧೀಕರಿಸುವ ಯಾಜಕರಿರುವ ಇಲ್ಲವೆ ನಾವು ದೇವರಿಗೆ ಪ್ರಾರ್ಥಿಸುವಾಗ ತಿರುಗಬಹುದಾದ ಭೌತಿಕ ದೇವಾಲಯವು ಈಗ ಇಲ್ಲ. ಆದರೂ, ನಾವು ಯೆಹೋವನನ್ನು ಸಮೀಪಿಸಲು ಸಾಧ್ಯವಾಗುವಂತೆ ಆತನು ಒಂದು ಏರ್ಪಾಡನ್ನು ಮಾಡಿದ್ದಾನೆ. ಅದಾವುದು? ಸಾ.ಶ. 29ರಲ್ಲಿ ಕ್ರಿಸ್ತನು ಅಭಿಷೇಕಿಸಲ್ಪಟ್ಟು, ಮಹಾಯಾಜಕನಾಗಿ ನೇಮಿಸಲ್ಪಟ್ಟಾಗ ಆಧ್ಯಾತ್ಮಿಕ ಆಲಯವೊಂದು ಕಾರ್ಯನಡೆಸತೊಡಗಿತು.a ಈ ಆಧ್ಯಾತ್ಮಿಕ ಆಲಯವು, ಕ್ರಿಸ್ತ ಯೇಸುವಿನ ಪಾಪನಿವಾರಕ ಯಜ್ಞದ ಆಧಾರದ ಮೇರೆಗೆ ಯೆಹೋವನನ್ನು ಆರಾಧನೆಯಲ್ಲಿ ಸಮೀಪಿಸುವ ಹೊಸ ಏರ್ಪಾಡಾಗಿದೆ.—ಇಬ್ರಿಯ 9:11, 12.
13. ಪ್ರಾರ್ಥನೆಯ ಸಂಬಂಧದಲ್ಲಿ, ಯೆರೂಸಲೇಮಿನಲ್ಲಿದ್ದ ದೇವಾಲಯ ಮತ್ತು ಆಧ್ಯಾತ್ಮಿಕಾಲಯದ ನಡುವಿನ ಒಂದು ಹೋಲಿಕೆ ಯಾವುದು?
13 ಯೆರೂಸಲೇಮಿನ ದೇವಾಲಯದ ಅನೇಕ ವೈಶಿಷ್ಟ್ಯಗಳು ಆಧ್ಯಾತ್ಮಿಕಾಲಯದ ವಿವಿಧ ವೈಶಿಷ್ಟ್ಯಗಳನ್ನು ಸೂಕ್ತವಾಗಿ ಚಿತ್ರಿಸುತ್ತವೆ. ಇದರಲ್ಲಿ ಪ್ರಾರ್ಥನೆಗೆ ಸಂಬಂಧಪಟ್ಟ ವಿಷಯಗಳೂ ಸೇರಿವೆ. (ಇಬ್ರಿಯ 9:1-10) ಉದಾಹರಣೆಗೆ, ದೇವಾಲಯದ ಪವಿತ್ರಸ್ಥಳದಲ್ಲಿದ್ದ ಧೂಪವೇದಿಯ ಮೇಲೆ, ಬೆಳಿಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಅರ್ಪಿಸಲ್ಪಡುತ್ತಿದ್ದ ಧೂಪದಿಂದ ಯಾವುದು ಚಿತ್ರಿಸಲ್ಪಟ್ಟಿತು? ಪ್ರಕಟನೆ ಪುಸ್ತಕಕ್ಕನುಸಾರ, “ದೇವಜನರ ಪ್ರಾರ್ಥನೆಗಳೆಂಬ ಧೂಪ” ಅದಾಗಿದೆ. (ಪ್ರಕಟನೆ 5:8; 8:3, 4) “ನನ್ನ ಪ್ರಾರ್ಥನೆಯು ಧೂಪದಂತೆ . . . ನಿನಗೆ ಸಮರ್ಪಕವಾಗಲಿ” ಎಂದು ಬರೆಯುವಂತೆ ದಾವೀದನು ಪ್ರೇರಿಸಲ್ಪಟ್ಟನು. (ಕೀರ್ತನೆ 141:2) ಹೀಗೆ, ಕ್ರೈಸ್ತ ಏರ್ಪಾಡಿನಲ್ಲಿ ಸುಗಂಧಭರಿತ ಸುವಾಸನೆಯ ಧೂಪವು, ಯೆಹೋವನಿಗೆ ಅಂಗೀಕಾರಾರ್ಹವಾದ ಪ್ರಾರ್ಥನೆಗಳನ್ನೂ ಸ್ತುತಿಯನ್ನೂ ಸೂಕ್ತವಾಗಿಯೇ ಚಿತ್ರಿಸುತ್ತದೆ.—1 ಥೆಸಲೊನೀಕ 3:10.
14, 15. (ಎ) ಅಭಿಷಿಕ್ತ ಕ್ರೈಸ್ತರು ಮತ್ತು (ಬಿ) “ಬೇರೆ ಕುರಿಗಳು” ಯೆಹೋವನನ್ನು ಸಮೀಪಿಸುವ ವಿಷಯದಲ್ಲಿ ಏನು ಹೇಳಸಾಧ್ಯವಿದೆ?
14 ಈ ಆಧ್ಯಾತ್ಮಿಕಾಲಯದಲ್ಲಿ ಯಾರು ದೇವರನ್ನು ಸಮೀಪಿಸಬಹುದು? ಭೌತಿಕ ದೇವಾಲಯದಲ್ಲಿ ಯಾಜಕರಿಗೂ ಲೇವಿಯರಿಗೂ ಒಳಗಣ ಪ್ರಾಕಾರದಲ್ಲಿ ಸೇವೆಮಾಡುವ ಸದವಕಾಶವಿತ್ತು, ಆದರೆ ಪವಿತ್ರಸ್ಥಳವನ್ನು ಯಾಜಕರು ಮಾತ್ರ ಪ್ರವೇಶಿಸಬಹುದಾಗಿತ್ತು. ಸ್ವರ್ಗೀಯ ನಿರೀಕ್ಷೆಯುಳ್ಳ ಅಭಿಷಿಕ್ತ ಕ್ರೈಸ್ತರು, ಈ ಒಳಗಣ ಪ್ರಾಕಾರ ಮತ್ತು ಪವಿತ್ರಸ್ಥಳದಿಂದ ಮುನ್ಚಿತ್ರಿಸಲ್ಪಟ್ಟ ಅದ್ವಿತೀಯ ಆಧ್ಯಾತ್ಮಿಕ ಸುಸ್ಥಿತಿಯಲ್ಲಿದ್ದಾರೆ. ಇದು ಅವರು ದೇವರಿಗೆ ಪ್ರಾರ್ಥನೆಗಳನ್ನೂ ಸ್ತುತಿಯನ್ನೂ ಅರ್ಪಿಸುವಂತೆ ಸಾಧ್ಯಮಾಡುತ್ತದೆ.
15 ಹಾಗಾದರೆ, ಭೂನಿರೀಕ್ಷೆಯಿರುವ “ಬೇರೆಕುರಿಗಳ” ವಿಷಯದಲ್ಲೇನು? (ಯೋಹಾನ 10:16) “ಅಂತ್ಯಕಾಲದಲ್ಲಿ” ಅನೇಕ ಜನಾಂಗಗಳ ಜನರು ಯೆಹೋವನನ್ನು ಆರಾಧಿಸಲು ಬರುವರೆಂದು ಪ್ರವಾದಿ ಯೆಶಾಯನು ಸೂಚಿಸಿದನು. (ಯೆಶಾಯ 2:2, 3) ‘ಅನ್ಯದೇಶೀಯರು’ ತಾವಾಗಿಯೇ ಯೆಹೋವನನ್ನು ಕೂಡಿಕೊಳ್ಳುವರೆಂದು ಸಹ ಅವನು ಬರೆದನು. ಅವರು ತನ್ನ ಬಳಿಸಾರುವುದನ್ನು ಅಂಗೀಕರಿಸಲು ತನಗಿರುವ ಸಿದ್ಧಮನಸ್ಸನ್ನು ಸೂಚಿಸುತ್ತ ದೇವರು ಹೇಳಿದ್ದು: “ಅವರೆಲ್ಲರನ್ನೂ . . . ನನ್ನ ಪ್ರಾರ್ಥನಾಲಯದಲ್ಲಿ ಉಲ್ಲಾಸಗೊಳಿಸುವೆನು.” (ಯೆಶಾಯ 56:6, 7) ಪ್ರಕಟನೆ 7:9-15, ಹೆಚ್ಚಿನ ವಿವರಗಳನ್ನು ಕೊಡುತ್ತದೆ. ಇಲ್ಲಿ, ‘ಸಕಲ ಜನಾಂಗದಿಂದ’ ಬಂದ “ಮಹಾ ಸಮೂಹವು” ಆಧ್ಯಾತ್ಮಿಕಾಲಯದ ಹೊರಗಣ ಪ್ರಾಕಾರದಲ್ಲಿ ನಿಂತು ದೇವರನ್ನು “ಹಗಲಿರುಳು” ಆರಾಧಿಸುತ್ತಿರುವುದನ್ನು ಮತ್ತು ಪ್ರಾರ್ಥಿಸುತ್ತಿರುವುದನ್ನು ವರ್ಣಿಸಲಾಗಿದೆ. ದೇವರ ಇಂದಿನ ಸೇವಕರೆಲ್ಲರೂ ಆತನು ತಮಗೆ ಕಿವಿಗೊಡುತ್ತಾನೆಂಬ ಪೂರ್ಣ ಭರವಸೆಯಿಂದ ಆತನನ್ನು ಮುಕ್ತವಾಗಿ ಸಮೀಪಿಸಸಾಧ್ಯವಿದೆ ಎಂದು ತಿಳಿಯುವುದು ಅದೆಷ್ಟು ಸಾಂತ್ವನದಾಯಕ!
ಯಾವ ಪ್ರಾರ್ಥನೆಗಳು ಅಂಗೀಕರಿಸಲ್ಪಡುತ್ತವೆ?
16. ಪ್ರಾರ್ಥನೆಯ ವಿಷಯದಲ್ಲಿ ಆದಿಕ್ರೈಸ್ತರಿಂದ ನಾವೇನು ಕಲಿಯಬಲ್ಲೆವು?
16 ಆದಿಕ್ರೈಸ್ತರು ಪ್ರಾರ್ಥನಾ ಮನಸ್ಸಿನವರಾಗಿದ್ದರು. ಅವರು ಯಾವ ವಿಷಯಗಳಿಗಾಗಿ ಪ್ರಾರ್ಥಿಸಿದರು? ಸಂಘಟನಾ ಜವಾಬ್ದಾರಿಗಳಿಗೆ ಪುರುಷರನ್ನು ಆಯ್ಕೆಮಾಡುವಾಗ ಕ್ರೈಸ್ತ ಹಿರಿಯರು ಮಾರ್ಗದರ್ಶನಕ್ಕಾಗಿ ಕೇಳಿಕೊಂಡರು. (ಅ. ಕೃತ್ಯಗಳು 1:24, 25; 6:5, 6) ಎಪಫ್ರನು ಜೊತೆ ವಿಶ್ವಾಸಿಗಳ ಪರವಾಗಿ ಪ್ರಾರ್ಥಿಸಿದನು. (ಕೊಲೊಸ್ಸೆ 4:12) ಪೇತ್ರನು ಸೆರೆವಾಸಿಯಾದಾಗ ಯೆರೂಸಲೇಮ್ ಸಭಾಸದಸ್ಯರು ಅವನಿಗಾಗಿ ಪ್ರಾರ್ಥಿಸಿದರು. (ಅ. ಕೃತ್ಯಗಳು 12:5) ವಿರೋಧದ ಮಧ್ಯೆ ತಮಗೆ ಧೈರ್ಯವನ್ನು ಕೊಡುವಂತೆ ಕೇಳಿಕೊಳ್ಳುತ್ತಾ ಆದಿಕ್ರೈಸ್ತರು, “[ಯೆಹೋವನೇ,] ಈಗ ನೀನು ಅವರ ಬೆದರಿಸುವಿಕೆಗಳನ್ನು ನೋಡಿ . . . ನಿನ್ನ ದಾಸರು ನಿನ್ನ ವಾಕ್ಯವನ್ನು ಧೈರ್ಯದಿಂದ ಹೇಳುವ ಹಾಗೆ ಅನುಗ್ರಹಿಸು” ಎಂದು ಪ್ರಾರ್ಥಿಸಿದರು. (ಅ. ಕೃತ್ಯಗಳು 4:23-30) ಪರೀಕ್ಷೆಗೊಳಗಾಗುವಾಗ ವಿವೇಕಕ್ಕಾಗಿ ದೇವರಿಗೆ ಪ್ರಾರ್ಥಿಸಬೇಕೆಂದು ಶಿಷ್ಯ ಯಾಕೋಬನು ಕ್ರೈಸ್ತರನ್ನು ಪ್ರೋತ್ಸಾಹಿಸಿದನು. (ಯಾಕೋಬ 1:5) ಯೆಹೋವನಿಗೆ ಮಾಡುವ ಬಿನ್ನಹಗಳಲ್ಲಿ ನೀವು ಇಂಥ ವಿಷಯಗಳನ್ನು ಸೇರಿಸುತ್ತೀರೋ?
17. ಯೆಹೋವನು ಯಾರ ಪ್ರಾರ್ಥನೆಗಳನ್ನು ಸ್ವೀಕರಿಸುತ್ತಾನೆ?
17 ದೇವರು ಎಲ್ಲ ಪ್ರಾರ್ಥನೆಗಳನ್ನು ಸ್ವೀಕರಿಸುವುದಿಲ್ಲ. ಹೀಗಿರುವುದರಿಂದ, ನಮ್ಮ ಪ್ರಾರ್ಥನೆಗಳು ಸ್ವೀಕರಿಸಲ್ಪಡುತ್ತವೆಂಬ ಭರವಸೆಯಿಂದ ನಾವು ಹೇಗೆ ಪ್ರಾರ್ಥಿಸಬಲ್ಲೆವು? ದೇವರು ಹಿಂದಿನ ಕಾಲದಲ್ಲಿ ಯಾರ ಪ್ರಾರ್ಥನೆಗಳನ್ನು ಕೇಳಿದನೊ ಆ ನಂಬಿಗಸ್ತರು ಆತನನ್ನು ಯಥಾರ್ಥತೆಯಿಂದ ಮತ್ತು ಸರಿಯಾದ ಹೃದ್ಭಾವದಿಂದ ಸಮೀಪಿಸಿದರು. ಅವರು ನಂಬಿಕೆಯನ್ನು ತೋರಿಸಿದರು ಮತ್ತು ಸತ್ಕಾರ್ಯಗಳನ್ನು ಮಾಡುವ ಮೂಲಕ ಅದನ್ನು ವ್ಯಕ್ತಪಡಿಸಿದರು. ಯೆಹೋವನನ್ನು ಇಂದು ತದ್ರೀತಿಯಲ್ಲಿ ಸಮೀಪಿಸುವವರಿಗೆ ಆತನು ಕಿವಿಗೊಡುತ್ತಾನೆಂಬ ಆಶ್ವಾಸನೆ ನಮಗಿರಬಲ್ಲದು.
18. ಕ್ರೈಸ್ತರ ಪ್ರಾರ್ಥನೆ ಆಲಿಸಲ್ಪಡಬೇಕಾದರೆ ಅವರು ಯಾವ ಆವಶ್ಯಕತೆಯನ್ನು ಪೂರೈಸಬೇಕು?
18 ಇವುಗಳೊಂದಿಗೆ ಮತ್ತೊಂದು ಆವಶ್ಯಕತೆಯೂ ಇದೆ. ಅಪೊಸ್ತಲ ಪೌಲನು ಇದನ್ನು, “ಆತನ ಮೂಲಕ ನಾವೂ ನೀವೂ ಒಬ್ಬ ಆತ್ಮನನ್ನೇ ಹೊಂದಿದವರಾಗಿ ತಂದೆಯ ಬಳಿಗೆ ಪ್ರವೇಶಿಸುವದಕ್ಕೆ ಮಾರ್ಗವಾಯಿತು” ಎಂದು ಹೇಳಿ ವಿವರಿಸುತ್ತಾನೆ. “ಆತನ ಮೂಲಕ” ಎಂದು ಬರೆದಾಗ ಪೌಲನು ಯಾರಿಗೆ ಸೂಚಿಸಿದನು? ಯೇಸು ಕ್ರಿಸ್ತನಿಗೆ. (ಎಫೆಸ 2:13, 18) ಹೌದು, ನಮಗೆ ಯೇಸುವಿನ ಮೂಲಕ ಮಾತ್ರ ತಂದೆಯನ್ನು ಮುಕ್ತವಾಗಿ ಸಮೀಪಿಸಲು ಸಾಧ್ಯವಿದೆ.—ಯೋಹಾನ 14:6, 15:16; 16:23, 24.
19. (ಎ) ಇಸ್ರಾಯೇಲಿನಲ್ಲಿ ಮಾಡಲ್ಪಡುತ್ತಿದ್ದ ಧೂಪಾರ್ಪಣೆಯು ಯೆಹೋವನಿಗೆ ಯಾವಾಗ ಅಸಹ್ಯಕರವಾಗಿ ಪರಿಣಮಿಸಿತು? (ಬಿ) ನಾವು ನಮ್ಮ ಪ್ರಾರ್ಥನೆಗಳನ್ನು ಯೆಹೋವನಿಗೆ ಸುಗಂಧಭರಿತ ಧೂಪದಂತಿರುವಂತೆ ಹೇಗೆ ಮಾಡಬಲ್ಲೆವು?
19 ಈಗಾಗಲೇ ಹೇಳಲ್ಪಟ್ಟಿರುವಂತೆ, ಇಸ್ರಾಯೇಲ್ಯರ ಯಾಜಕರು ಅರ್ಪಿಸುತ್ತಿದ್ದ ಧೂಪವು ದೇವರ ನಂಬಿಗಸ್ತ ಸೇವಕರ ಸ್ವೀಕಾರಾರ್ಹ ಪ್ರಾರ್ಥನೆಗಳನ್ನು ಪ್ರತಿನಿಧೀಕರಿಸುತ್ತದೆ. ಆದರೂ, ಕೆಲವೊಮ್ಮೆ, ಇಸ್ರಾಯೇಲ್ಯರ ಧೂಪಾರ್ಪಣೆಯು ಯೆಹೋವನಿಗೆ ಅಸಹ್ಯವಾಗಿ ಕಂಡುಬಂತು. ಇದಕ್ಕೆ ಕಾರಣವು, ಇಸ್ರಾಯೇಲ್ಯರು ಆಲಯದಲ್ಲಿ ಧೂಪ ಅರ್ಪಿಸುತ್ತಿದ್ದರೂ, ಅದೇ ಸಮಯದಲ್ಲಿ ವಿಗ್ರಹಗಳಿಗೂ ಅಡ್ಡಬೀಳುತ್ತಿದ್ದುದ್ದೇ. (ಯೆಹೆಜ್ಕೇಲ 8:10, 11) ತದ್ರೀತಿ ಇಂದು, ಯೆಹೋವನನ್ನು ಸೇವಿಸುತ್ತೇವೆಂದು ಹೇಳಿಕೊಂಡು, ಅದೇ ಸಮಯದಲ್ಲಿ ಆತನ ನಿಯಮಗಳಿಗೆ ವ್ಯತಿರಿಕ್ತವಾದವುಗಳನ್ನು ಮಾಡುವವರ ಪ್ರಾರ್ಥನೆಗಳು ಆತನಿಗೆ ದುರ್ವಾಸನೆಯವುಗಳಾಗಿ ಪರಿಣಮಿಸುತ್ತವೆ. (ಜ್ಞಾನೋಕ್ತಿ 15:8) ಆದುದರಿಂದ, ದೇವರಿಗೆ ನಮ್ಮ ಪ್ರಾರ್ಥನೆಗಳು ಸುಗಂಧಭರಿತ ಧೂಪದಂತಾಗುವಂತೆ ನಾವು ನಮ್ಮ ಜೀವನದ ಎಲ್ಲಾ ಕ್ಷೇತ್ರಗಳನ್ನು ನಿರ್ಮಲವಾಗಿಡೋಣ. ತನ್ನ ನೀತಿಪಥದಲ್ಲಿ ನಡೆಯುವವರ ಪ್ರಾರ್ಥನೆಗಳಲ್ಲಿ ಯೆಹೋವನು ಹರ್ಷಿಸುತ್ತಾನೆ. (ಯೋಹಾನ 9:31) ಆದರೂ, ಕೆಲವು ಪ್ರಶ್ನೆಗಳು ಇನ್ನೂ ಉಳಿದಿವೆ. ನಾವು ಹೇಗೆ ಪ್ರಾರ್ಥಿಸಬೇಕು? ಯಾವುದಕ್ಕಾಗಿ ಪ್ರಾರ್ಥಿಸಬೇಕು? ದೇವರು ನಮ್ಮ ಪ್ರಾರ್ಥನೆಗಳಿಗೆ ಹೇಗೆ ಉತ್ತರ ಕೊಡುತ್ತಾನೆ? ಇವುಗಳನ್ನು ಮತ್ತು ಇತರ ಪ್ರಶ್ನೆಗಳನ್ನು ಮುಂದಿನ ಲೇಖನವು ಚರ್ಚಿಸುವುದು. (w06 9/1)
[ಪಾದಟಿಪ್ಪಣಿ]
ವಿವರಿಸಬಲ್ಲಿರಾ?
• ಅಪರಿಪೂರ್ಣ ಮಾನವರು ದೇವರನ್ನು ಸ್ವೀಕಾರಾರ್ಹವಾಗಿ ಹೇಗೆ ಸಮೀಪಿಸಬಲ್ಲರು?
• ನಮ್ಮ ಪ್ರಾರ್ಥನೆಗಳಲ್ಲಿ, ಮೂಲಪಿತೃಗಳನ್ನು ನಾವು ಹೇಗೆ ಅನುಕರಿಸಬಲ್ಲೆವು?
• ಆದಿಕ್ರೈಸ್ತರ ಪ್ರಾರ್ಥನೆಗಳಿಂದ ನಾವೇನನ್ನು ಕಲಿಯುತ್ತೇವೆ?
• ನಮ್ಮ ಪ್ರಾರ್ಥನೆಗಳು ಯಾವಾಗ ದೇವರಿಗೆ ಸುಗಂಧಭರಿತ ಧೂಪದಂತಿರುವವು?
[ಪುಟ 23ರಲ್ಲಿರುವ ಚಿತ್ರ]
ದೇವರು ಹೇಬೆಲನ ಯಜ್ಞವನ್ನು ಅಂಗೀಕರಿಸಿದನಾದರೂ, ಕಾಯಿನನದ್ದನ್ನು ಅಂಗೀಕರಿಸಲಿಲ್ಲವೇಕೆ?
[ಪುಟ 24ರಲ್ಲಿರುವ ಚಿತ್ರ]
‘ನಾನು ಮಣ್ಣೂ ಬೂದಿಯೂ ಆಗಿದ್ದೇನೆ’
[ಪುಟ 25ರಲ್ಲಿರುವ ಚಿತ್ರ]
‘ಎಲ್ಲಾ ಆಸ್ತಿಯಲ್ಲಿ ಹತ್ತರಲ್ಲೊಂದು ಪಾಲನ್ನು ನಿನಗೆ ಸಮರ್ಪಿಸುವೆನು’
[ಪುಟ 26ರಲ್ಲಿರುವ ಚಿತ್ರ]
ನಿಮ್ಮ ಪ್ರಾರ್ಥನೆಗಳು ಯೆಹೋವನಿಗೆ ಸುಗಂಧಭರಿತ ಧೂಪದಂತಿವೆಯೇ?