“ನಿಮ್ಮ ಬೇಡಿಕೆಯನ್ನು ದೇವರಿಗೆ ತಿಳಿಯಪಡಿಸಿರಿ”
“ಸರ್ವ ವಿಷಯದಲ್ಲಿ ಕೃತಜ್ಞತಾಸ್ತುತಿಯೊಡನೆ ಪ್ರಾರ್ಥನೆ ವಿಜ್ಞಾಪನೆಗಳನ್ನು ಮಾಡುತ್ತಾ ನಿಮ್ಮ ಬೇಡಿಕೆಯನ್ನು ದೇವರಿಗೆ ತಿಳಿಯಪಡಿಸಿರಿ.”—ಫಿಲಿಪ್ಪಿ 4:6, NIBV.
1. ಯಾರೊಂದಿಗೆ ಮಾತಾಡುವ ಗೌರವಾರ್ಹ ಸದವಕಾಶ ನಮಗಿದೆ, ಮತ್ತು ಇದು ಅಷ್ಟೊಂದು ಬೆರಗುಗೊಳಿಸುವ ವಿಷಯವಾಗಿರುವುದೇಕೆ?
ನಿಮ್ಮ ದೇಶದ ಅಧಿಕಾರಿಯನ್ನು ಭೇಟಿಮಾಡುವ ಅವಕಾಶಕ್ಕಾಗಿ ನೀವು ವಿನಂತಿಸುವಲ್ಲಿ ಯಾವ ರೀತಿಯ ಉತ್ತರ ನಿಮಗೆ ದೊರಕೀತು? ಅವರ ಆಫೀಸಿನಿಂದ ವಿನೀತ ಮಾತುಗಳ ಉತ್ತರವೊಂದು ಬಂದೀತಾದರೂ, ಸ್ವತಃ ಆ ಅಧಿಕಾರಿಯೊಂದಿಗೆ ಖುದ್ದಾಗಿ ಮಾತಾಡಲು ಅವಕಾಶ ಸಿಗುವುದು ಅಸಂಭವವೇ ಸರಿ. ಆದರೆ, ಸರ್ವ ಅಧಿಕಾರಿಗಳಲ್ಲಿ ಅತಿ ಶ್ರೇಷ್ಠನೂ ವಿಶ್ವ ಪರಮಾಧಿಕಾರಿಯೂ ಆದ ಯೆಹೋವ ದೇವರ ವಿಷಯದಲ್ಲಿ ಸಂಗತಿ ಭಿನ್ನವಾಗಿದೆ. ನಾವು ಎಲ್ಲಿಯೇ ಇರಲಿ, ಯಾವುದೇ ಸಮಯದಲ್ಲಾಗಲಿ ಪ್ರಾರ್ಥನೆಯ ಮೂಲಕ ಆತನನ್ನು ಸಮೀಪಿಸಸಾಧ್ಯವಿದೆ. ಸ್ವೀಕಾರಾರ್ಹ ಪ್ರಾರ್ಥನೆಗಳು ಆತನನ್ನು ಯಾವಾಗಲೂ ತಲಪಿಯೇ ತಲಪುವವು. (ಜ್ಞಾನೋಕ್ತಿ 15:29) ಇದು ನಿಜವಾಗಿಯೂ ಸೋಜಿಗವೇ ಸರಿ! ಇದಕ್ಕಾಗಿ ನಮಗಿರುವ ಕೃತಜ್ಞತೆಯು, ‘ಪ್ರಾರ್ಥನೆಯನ್ನು ಕೇಳುವವನು’ ಎಂದು ಸೂಕ್ತವಾಗಿಯೇ ಕರೆಯಲ್ಪಡುವವನಿಗೆ ಕ್ರಮವಾಗಿ ಪ್ರಾರ್ಥಿಸುವಂತೆ ನಮ್ಮನ್ನು ಪ್ರಚೋದಿಸಬೇಕೆಲ್ಲವೇ?—ಕೀರ್ತನೆ 65:2.
2. ಪ್ರಾರ್ಥನೆಗಳು ದೇವರಿಗೆ ಸ್ವೀಕಾರಾರ್ಹವಾಗಿರಬೇಕಾದರೆ ಏನು ಆವಶ್ಯಕ?
2 ಆದರೂ, ‘ಯಾವ ರೀತಿಯ ಪ್ರಾರ್ಥನೆಗಳು ದೇವರಿಗೆ ಸ್ವೀಕಾರಾರ್ಹವಾಗಿವೆ?’ ಎಂದು ಯಾರಾದರೂ ಕೇಳಬಹುದು. ನಮ್ಮ ಪ್ರಾರ್ಥನೆಗಳು ಸ್ವೀಕಾರಾರ್ಹವಾಗಿರಬೇಕಾದರೆ ಆವಶ್ಯಕವಾಗಿರುವ ಒಂದು ಸಂಗತಿಯನ್ನು ಬೈಬಲ್ ಹೀಗೆ ಹೇಳುವಾಗ ವಿವರಿಸುತ್ತದೆ: “ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ; ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ.” (ಇಬ್ರಿಯ 11:6) ಹೌದು, ಹಿಂದಿನ ಲೇಖನದಲ್ಲಿ ವಿವರಿಸಲಾದಂತೆ ದೇವರನ್ನು ಸಮೀಪಿಸಲು ಅತ್ಯಾವಶ್ಯಕವಾಗಿರುವ ಅಂಶವು ನಂಬಿಕೆಯೇ. ತನ್ನನ್ನು ಸಮೀಪಿಸುವವರ ಪ್ರಾರ್ಥನೆಗಳನ್ನು ಕೇಳಲು ದೇವರು ಸಿದ್ಧನಿರುವುದಾದರೂ, ಅವರು ನಂಬಿಕೆ ಮತ್ತು ಸತ್ಕಾರ್ಯಗಳೊಂದಿಗೆ, ಯಥಾರ್ಥತೆಯಿಂದಲೂ ಸರಿಯಾದ ಹೃದ್ಭಾವದಿಂದಲೂ ಆತನನ್ನು ಸಮೀಪಿಸತಕ್ಕದ್ದು.
3. (ಎ) ಹಿಂದಿನ ಕಾಲದ ನಂಬಿಗಸ್ತ ಸೇವಕರ ಪ್ರಾರ್ಥನೆಗಳು ತೋರಿಸುವಂತೆ, ಪ್ರಾರ್ಥನೆಗಳಲ್ಲಿ ಯಾವ ರೀತಿಯ ಅಭಿವ್ಯಕ್ತಿಗಳು ಸೇರಿರಬಹುದು? (ಬಿ) ಪ್ರಾರ್ಥನೆಯ ವಿವಿಧ ವಿಧಗಳಾವುವು?
3 ಅಪೊಸ್ತಲ ಪೌಲನು ತನ್ನ ದಿನಗಳಲ್ಲಿನ ಕ್ರೈಸ್ತರನ್ನು ಹೀಗೆ ಪ್ರೋತ್ಸಾಹಿಸಿದನು: “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು [“ನಿಮ್ಮ ಬೇಡಿಕೆಯನ್ನು,” NIBV] ತಿಳಿಯಪಡಿಸಿರಿ.” (ಫಿಲಿಪ್ಪಿ 4:6, 7) ತಮ್ಮ ಚಿಂತೆಗಳ ಕುರಿತು ದೇವರಿಗೆ ಪ್ರಾರ್ಥಿಸಿದ ಅನೇಕರ ಮಾದರಿಗಳು ಬೈಬಲಿನಲ್ಲಿವೆ. ಅಂಥವರಲ್ಲಿ ಹನ್ನ, ಎಲೀಯ, ಹಿಜ್ಕೀಯ ಮತ್ತು ದಾನಿಯೇಲ ಇವರು ಕೆಲವರು. (1 ಸಮುವೇಲ 2:1-10; 1 ಅರಸುಗಳು 18:36, 37; 2 ಅರಸುಗಳು 19:15-19; ದಾನಿಯೇಲ 9:3-21) ನಾವು ಅವರ ಮಾದರಿಯನ್ನು ಅನುಸರಿಸಬೇಕು. ಪೌಲನ ಮಾತುಗಳು ನಮ್ಮ ಪ್ರಾರ್ಥನೆಗಳು ಹಲವು ವಿಧದ್ದಾಗಿರಬಲ್ಲವೆಂದು ತೋರಿಸುತ್ತವೆ ಎಂಬುದನ್ನು ಸಹ ಗಮನಿಸಿ. ಅವನು ಕೃತಜ್ಞತಾಸ್ತುತಿಯ ಕುರಿತು ಮಾತಾಡಿದನು. ಇದು ದೇವರು ನಮಗಾಗಿ ಮಾಡುವ ವಿಷಯಗಳಿಗಾಗಿ ಗಣ್ಯತೆಯನ್ನು ವ್ಯಕ್ತಪಡಿಸುವ ಪ್ರಾರ್ಥನೆಯಾಗಿದೆ. ಇದರೊಂದಿಗೆ ಸ್ತುತಿಯೂ ಸೇರಿರಬಹುದು. ವಿಜ್ಞಾಪನೆಯು ದೀನಭಾವದಿಂದ ಮತ್ತು ಶ್ರದ್ಧೆಯಿಂದ ಮೊರೆಯಿಡುವುದನ್ನು ಸೂಚಿಸುತ್ತದೆ. ಹಾಗೂ ನಾವು ಬೇಡಿಕೆಗಳನ್ನು ಅಥವಾ ನಿರ್ದಿಷ್ಟ ಸಂಗತಿಗಳಿಗಾಗಿ ಕೋರಿಕೆಗಳನ್ನು ಮಾಡಸಾಧ್ಯವಿದೆ. (ಲೂಕ 11:2, 3) ನಮ್ಮ ಸ್ವರ್ಗೀಯ ತಂದೆಯು ನಾವು ಈ ಮೇಲಿನ ಯಾವುದೇ ವಿಧಗಳಲ್ಲಿ ಆತನನ್ನು ಸಮೀಪಿಸುವಾಗ ಅದನ್ನು ಸ್ವೀಕರಿಸಲು ಹರ್ಷಿಸುತ್ತಾನೆ.
4. ಯೆಹೋವನಿಗೆ ನಮಗೇನು ಬೇಕೆಂಬುದು ತಿಳಿದಿರುವುದಾದರೂ ನಾವು ಆತನಿಗೆ ಬೇಡಿಕೆಗಳನ್ನು ಮಾಡುವುದೇಕೆ?
4 ‘ನಮಗೆ ಏನು ಬೇಕೆಂಬುದು ಯೆಹೋವನಿಗೆ ಮೊದಲೇ ತಿಳಿದಿರುತ್ತದಲ್ಲವೇ?’ ಎಂದು ಕೆಲವರು ಕೇಳಬಹುದು. ಹೌದು, ಅದು ನಿಜ. (ಮತ್ತಾಯ 6:8, 32) ಹಾಗಿರುವಲ್ಲಿಯೂ, ನಾವು ನಮ್ಮ ಬೇಡಿಕೆಗಳೊಂದಿಗೆ ಆತನನ್ನು ಸಮೀಪಿಸಬೇಕೆಂದು ಆತನು ಬಯಸುವುದೇಕೆ? ಈ ಉದಾಹರಣೆಯನ್ನು ಪರಿಗಣಿಸಿ: ಅಂಗಡಿಯ ಮಾಲೀಕನೊಬ್ಬನು ತನ್ನ ಕೆಲವು ಮಂದಿ ಗ್ರಾಹಕರಿಗೆ ಒಂದು ಗಿಫ್ಟ್ ನೀಡುತ್ತೇನೆಂದು ಹೇಳಬಹುದು. ಆದರೆ ಆ ಗಿಫ್ಟ್ ಪಡೆಯಲು ಗ್ರಾಹಕರು ಆ ಮಾಲೀಕನ ಬಳಿಗೆ ಹೋಗಿ ಅದನ್ನು ತಮಗಾಗಿ ವಿನಂತಿಸಿಕೊಳ್ಳಬೇಕು. ಅಂತಹ ಪ್ರಯತ್ನವನ್ನು ಮಾಡಲು ಮನಸ್ಸುಮಾಡದವರು, ತಾವು ಆ ನೀಡಿಕೆಯನ್ನು ನಿಜವಾಗಿಯೂ ಗಣ್ಯಮಾಡುವುದಿಲ್ಲ ಎಂದು ತೋರಿಸುವರು. ತದ್ರೀತಿ, ಪ್ರಾರ್ಥನೆಯಲ್ಲಿ ತಮ್ಮ ಬೇಡಿಕೆಗಳನ್ನು ತಿಳಿಯಪಡಿಸಲು ಅಸಡ್ಡೆಮಾಡುವವರು, ಯೆಹೋವನ ಒದಗಿಸುವಿಕೆಗೆ ಗಣ್ಯತೆಯ ಕೊರತೆಯನ್ನು ತೋರಿಸುವರು. “ಬೇಡಿಕೊಳ್ಳಿರಿ, ನಿಮಗೆ ಸಿಕ್ಕುವದು” ಎಂದು ಯೇಸು ಹೇಳಿದನು. (ಯೋಹಾನ 16:24) ಹೀಗೆ ಕೇಳಿಕೊಳ್ಳುವ ಮೂಲಕ ನಾವು ದೇವರ ಮೇಲೆ ಹೊಂದಿಕೊಂಡಿದ್ದೇವೆ ಎಂಬುದನ್ನು ತೋರಿಸುತ್ತೇವೆ.
ನಾವು ದೇವರನ್ನು ಹೇಗೆ ಸಮೀಪಿಸಬೇಕು?
5. ನಾವೇಕೆ ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸುವುದು ಅವಶ್ಯ?
5 ನಾವು ಹೇಗೆ ಪ್ರಾರ್ಥಿಸಬೇಕೆಂಬುದರ ಬಗ್ಗೆ ಯೆಹೋವನು ಕಟ್ಟುನಿಟ್ಟಾದ ಅನೇಕಾನೇಕ ನಿಯಮಗಳನ್ನು ಇಟ್ಟಿಲ್ಲ. ಆದರೂ, ಬೈಬಲಿನಲ್ಲಿ ವಿವರಿಸಲ್ಪಟ್ಟಿರುವಂತೆ ದೇವರನ್ನು ಯೋಗ್ಯ ರೀತಿಯಲ್ಲಿ ಸಮೀಪಿಸುವುದನ್ನು ನಾವು ಕಲಿತುಕೊಳ್ಳಬೇಕು. ಉದಾಹರಣೆಗಾಗಿ, ಯೇಸು ತನ್ನ ಶಿಷ್ಯರಿಗೆ, “ನೀವು ತಂದೆಯನ್ನು ಏನಾದರೂ ಬೇಡಿಕೊಂಡರೆ ಅದನ್ನು ಆತನು ನನ್ನ ಹೆಸರಿನ ಮೇಲೆ ನಿಮಗೆ ಕೊಡುವನು” ಎಂದು ಕಲಿಸಿದನು. (ಯೋಹಾನ 16:23) ಈ ಕಾರಣದಿಂದ, ದೇವಾಶೀರ್ವಾದಗಳು ಸಕಲ ಮಾನವಕುಲಕ್ಕೆ ಬರುವ ಏಕಮಾತ್ರ ಮಾಧ್ಯಮವು ಯೇಸುವೆಂಬುದನ್ನು ಒಪ್ಪಿಕೊಳ್ಳುತ್ತಾ ಅವನ ಹೆಸರಿನಲ್ಲಿ ಪ್ರಾರ್ಥಿಸಬೇಕು.
6. ಪ್ರಾರ್ಥಿಸುವಾಗ ನಮ್ಮ ದೇಹದ ಭಂಗಿ ಹೇಗಿರಬೇಕು?
6 ಪ್ರಾರ್ಥಿಸುವಾಗ ನಮ್ಮ ದೇಹದ ಭಂಗಿ ಹೇಗಿರಬೇಕು? ನಮ್ಮ ಪ್ರಾರ್ಥನೆ ಆಲಿಸಲ್ಪಡಬೇಕಾದರೆ ಒಂದು ನಿರ್ದಿಷ್ಟ ಭಂಗಿಯಲ್ಲಿರಬೇಕೆಂದು ಬೈಬಲು ಹೇಳುವುದಿಲ್ಲ. (1 ಅರಸುಗಳು 8:22; ನೆಹೆಮೀಯ 8:6; ಮಾರ್ಕ 11:25; ಲೂಕ 22:41) ದೇವರಿಗೆ ಯಥಾರ್ಥತೆಯಿಂದ ಮತ್ತು ಸರಿಯಾದ ಹೃದ್ಭಾವದಿಂದ ಪ್ರಾರ್ಥಿಸುವುದೇ ಪ್ರಾಮುಖ್ಯವಾಗಿದೆ.—ಯೋವೇಲ 2:12, 13.
7. (ಎ) “ಆಮೆನ್” ಎಂಬುದರ ಅರ್ಥವೇನು? (ಬಿ) ಅದನ್ನು ಪ್ರಾರ್ಥನೆಗಳಲ್ಲಿ ಸೂಕ್ತವಾಗಿ ಹೇಗೆ ಉಪಯೋಗಿಸಲಾಗುತ್ತದೆ?
7 “ಆಮೆನ್” ಎಂಬ ಪದದ ಉಪಯೋಗದ ಕುರಿತು ಏನು ಹೇಳಬಹುದು? ಇದು ನಮ್ಮ ಪ್ರಾರ್ಥನೆಗಳಿಗೆ, ವಿಶೇಷವಾಗಿ ಬಹಿರಂಗ ಪ್ರಾರ್ಥನೆಗಳಲ್ಲಿ, ಸಾಮಾನ್ಯವಾಗಿ ಹೇಳಲ್ಪಡುವ ಸೂಕ್ತವಾದ ಸಮಾಪ್ತಿ ಎಂದು ಶಾಸ್ತ್ರವಚನಗಳು ಸೂಚಿಸುತ್ತವೆ. (ಕೀರ್ತನೆ 72:19; 89:52) ಹೀಬ್ರು ಪದವಾದ ಆಮೆನ್ ಎಂಬುದಕ್ಕೆ “ಖಂಡಿತವಾಗಿ” ಎಂಬ ಮೂಲಾರ್ಥವಿದೆ. ಪ್ರಾರ್ಥನೆಗಳ ಅಂತ್ಯದಲ್ಲಿ “ಆಮೆನ್” ಎಂದು ಹೇಳುವುದರ ಮಹತ್ತ್ವವು, ಮೆಕ್ಲಿಂಟಕ್ ಆ್ಯಂಡ್ ಸ್ಟ್ರಾಂಗ್ ಸೈಕ್ಲಪೀಡೀಯ ವಿವರಿಸುವಂತೆ, “ಇದಕ್ಕೆ ಮೊದಲು ಹೇಳಲ್ಪಟ್ಟಿರುವ ಮಾತುಗಳನ್ನು ಸ್ಥಿರೀಕರಿಸಿ, ಅವುಗಳ ನೆರವೇರಿಕೆಗಾಗಿ ಬೇಡಿಕೊಳ್ಳುವುದು” ಎಂದಾಗಿದೆ. ಹೀಗೆ, ಪ್ರಾರ್ಥಿಸುತ್ತಿರುವವನು ಯಥಾರ್ಥವಾಗಿ “ಆಮೆನ್” ಎಂದು ಹೇಳಿ ಮುಗಿಸುವ ಮೂಲಕ, ತಾನು ಆಗ ತಾನೇ ಹೇಳಿರುವ ವಿಷಯಗಳ ಕುರಿತು ತನ್ನ ಮನಃಪೂರ್ವಕವಾದ ಅನಿಸಿಕೆಗಳನ್ನು ಸೂಚಿಸುತ್ತಾನೆ. ಸಭೆಯನ್ನು ಪ್ರಾರ್ಥನೆಯಲ್ಲಿ ಪ್ರತಿನಿಧೀಕರಿಸುವ ಕ್ರೈಸ್ತನು ಈ ಅಭಿವ್ಯಕ್ತಿಯಿಂದ ಪ್ರಾರ್ಥನೆಯನ್ನು ಮುಗಿಸಿದಾಗ, ಕೇಳಿಸಿಕೊಳ್ಳುತ್ತಿರುವವರು ಸಹ ತಮ್ಮ ಹೃದಯಗಳಲ್ಲಿ ಮೌನವಾಗಿ ಅಥವಾ ಕೇಳಿಸುವಂತೆ “ಆಮೆನ್” ಎಂದು ಹೇಳಬಹುದು. ಈ ಮೂಲಕ, ಈಗಾಗಲೇ ಹೇಳಲ್ಪಟ್ಟ ವಿಷಯಕ್ಕೆ ತಮ್ಮ ಹಾರ್ದಿಕ ಒಪ್ಪಿಗೆಯನ್ನು ಅವರು ಸೂಚಿಸುತ್ತಾರೆ.—1 ಕೊರಿಂಥ 14:16.
8. ನಮ್ಮ ಪ್ರಾರ್ಥನೆಗಳಲ್ಲಿ ಕೆಲವು, ಯಾಕೋಬ ಅಥವಾ ಅಬ್ರಹಾಮನ ಪ್ರಾರ್ಥನೆಗಳನ್ನು ಹೇಗೆ ಹೋಲಬಹುದು, ಮತ್ತು ಇದು ನಮ್ಮ ವಿಷಯದಲ್ಲಿ ಏನನ್ನು ವ್ಯಕ್ತಪಡಿಸಬಹುದು?
8 ಕೆಲವೊಮ್ಮೆ, ನಾವು ಪ್ರಾರ್ಥಿಸುವ ವಿಷಯಗಳ ಕುರಿತು ನಾವೆಷ್ಟು ಆಸಕ್ತರಾಗಿದ್ದೇವೆ ಎಂಬುದನ್ನು ವ್ಯಕ್ತಪಡಿಸುವಂತೆ ದೇವರು ಅನುಮತಿಸಬಹುದು. ನಾವು ಆಗ, ಆಶೀರ್ವಾದವನ್ನು ಪಡೆಯಲು ರಾತ್ರಿಯಿಡೀ ಒಬ್ಬ ದೇವದೂತನೊಂದಿಗೆ ಹೋರಾಡಿದ ಹಿಂದಿನ ಕಾಲದ ಯಾಕೋಬನಂತೆ ಇರಬೇಕಾಗಬಹುದು. (ಆದಿಕಾಂಡ 32:24-26) ಇಲ್ಲವೆ, ಕೆಲವು ಸಂದರ್ಭಗಳಲ್ಲಿ ನಾವು, ಲೋಟನ ಪರವಾಗಿ ಮತ್ತು ಸೋದೋಮಿನಲ್ಲಿ ಇದ್ದಿರಬಹುದಾದ ಇತರರ ಪರವಾಗಿ ಯೆಹೋವನನ್ನು ಪದೇ ಪದೇ ಬೇಡಿಕೊಂಡ ಅಬ್ರಹಾಮನಂತಿರುವುದು ಅಗತ್ಯವಾಗಿರಬಹುದು. (ಆದಿಕಾಂಡ 18:22-33) ಅದೇ ರೀತಿ, ನಮಗೆ ಅಮೂಲ್ಯವಾಗಿರುವ ವಿಷಯಗಳ ಬಗ್ಗೆ ಯೆಹೋವನೊಂದಿಗೆ ನಾವು ನ್ಯಾಯ, ಪ್ರೀತಿಪೂರ್ವಕ ದಯೆ ಮತ್ತು ಕರುಣೆಯ ಆಧಾರದ ಮೇರೆಗೆ ಬೇಡಿಕೊಳ್ಳಬಹುದು.
ಯಾವೆಲ್ಲಾ ವಿಷಯಗಳಿಗಾಗಿ ಕೇಳಿಕೊಳ್ಳಬಹುದು?
9. ಪ್ರಾರ್ಥಿಸುವಾಗ ನಮ್ಮ ಮುಖ್ಯ ಚಿಂತೆಗಳು ಯಾವುದಾಗಿರಬೇಕು?
9 ಪೌಲನು, “ಸರ್ವ ವಿಷಯದಲ್ಲಿ . . . ನಿಮ್ಮ ಬೇಡಿಕೆಯನ್ನು ದೇವರಿಗೆ ತಿಳಿಯಪಡಿಸಿರಿ” ಎಂದು ಹೇಳಿದ್ದನ್ನು ಜ್ಞಾಪಿಸಿಕೊಳ್ಳಿರಿ. (ಫಿಲಿಪ್ಪಿ 4:6, NIBV) ಆದಕಾರಣ, ವೈಯಕ್ತಿಕ ಪ್ರಾರ್ಥನೆಗಳಲ್ಲಿ ಹೆಚ್ಚುಕಡಿಮೆ ಜೀವನದ ಪ್ರತಿಯೊಂದು ಅಂಶವನ್ನೂ ಒಳಗೂಡಿಸಬಹುದು. ಹಾಗಿದ್ದರೂ, ನಮ್ಮ ಪ್ರಾರ್ಥನೆಗಳಲ್ಲಿ ಪ್ರಥಮ ಚಿಂತೆಯು ಯೆಹೋವನ ಅಭಿರುಚಿಗಳ ಕುರಿತಾಗಿರಬೇಕು. ಈ ವಿಷಯದಲ್ಲಿ, ದಾನಿಯೇಲನು ಒಂದು ಉತ್ತಮ ಮಾದರಿಯನ್ನಿಟ್ಟಿದ್ದಾನೆ. ಇಸ್ರಾಯೇಲ್ಯರು ಅವರ ಪಾಪಗಳ ನಿಮಿತ್ತ ಶಿಕ್ಷೆಯನ್ನು ಅನುಭವಿಸುತ್ತಿದ್ದಾಗ, ಯೆಹೋವನು ಕರುಣೆ ತೋರಿಸುವಂತೆ ದಾನಿಯೇಲನು ಹೀಗೆಂದು ಹೇಳುತ್ತಾ ಬೇಡಿದನು: “ತಡಮಾಡಬೇಡ! ನನ್ನ ದೇವರೇ, ನಿನ್ನ ಜನವೂ ಪಟ್ಟಣವೂ ನಿನ್ನ ಹೆಸರಿನವುಗಳಾದ ಕಾರಣ ನಿನ್ನ ಹೆಸರನ್ನು ಕಾಪಾಡಿಕೋ!” (ದಾನಿಯೇಲ 9:15-19) ನಮ್ಮ ಪ್ರಾರ್ಥನೆಗಳು ಸಹ, ಯೆಹೋವನ ನಾಮದ ಪವಿತ್ರೀಕರಣ ಮತ್ತು ಆತನ ಚಿತ್ತದ ನೆರವೇರಿಕೆಯು ನಮ್ಮ ಮುಖ್ಯ ಚಿಂತೆಗಳಾಗಿವೆಯೆಂದು ತೋರಿಸುತ್ತವೆಯೆ?
10. ವೈಯಕ್ತಿಕ ವಿಷಯಗಳಿಗಾಗಿ ಪ್ರಾರ್ಥಿಸುವುದು ಸೂಕ್ತವೆಂಬುದು ನಮಗೆ ಹೇಗೆ ಗೊತ್ತು?
10 ಆದರೂ, ವೈಯಕ್ತಿಕ ವಿಷಯಗಳನ್ನು ಬೇಡಿಕೊಳ್ಳುವುದೂ ಸಮಂಜಸವಾಗಿದೆ. ಉದಾಹರಣೆಗೆ, ನಾವು ಕೀರ್ತನೆಗಾರನಂತೆ, ಆಳವಾದ ಆಧ್ಯಾತ್ಮಿಕ ಗ್ರಹಿಕೆಗಾಗಿ ಪ್ರಾರ್ಥಿಸಬಹುದು. ಅವನು ಪ್ರಾರ್ಥಿಸಿದ್ದು: “ನನಗೆ ಜ್ಞಾನವನ್ನು ದಯಪಾಲಿಸು; ಆಗ ನಿನ್ನ ಧರ್ಮಶಾಸ್ತ್ರವನ್ನು ಪೂರ್ಣಮನಸ್ಸಿನಿಂದ ಕೈಕೊಂಡು ನಡೆಯುವೆನು.” (ಕೀರ್ತನೆ 119:33, 34; ಕೊಲೊಸ್ಸೆ 1:9, 10) ಯೇಸು, “ಮರಣಕ್ಕೆ ತಪ್ಪಿಸಿ ಕಾಪಾಡ ಶಕ್ತನಾಗಿರುವಾತನಿಗೆ ಬಲವಾಗಿ ಕೂಗುತ್ತಾ ಕಣ್ಣೀರನ್ನು ಸುರಿಸುತ್ತಾ ಪ್ರಾರ್ಥನೆ ವಿಜ್ಞಾಪನೆಗಳನ್ನು” ಮಾಡಿದನು. (ಇಬ್ರಿಯ 5:7) ಹಾಗೆ ಮಾಡುವ ಮೂಲಕ ಅವನು, ಅಪಾಯ ಅಥವಾ ಪರೀಕ್ಷೆಗಳನ್ನು ಎದುರಿಸುವಾಗ ಒಬ್ಬನು ಬಲಕ್ಕಾಗಿ ಕೋರುವದು ಎಷ್ಟು ಸೂಕ್ತ ಎಂಬುದನ್ನು ತೋರಿಸಿದನು. ಯೇಸು ತನ್ನ ಶಿಷ್ಯರಿಗೆ ಮಾದರಿ ಪ್ರಾರ್ಥನೆಯನ್ನು ಹೇಳಿಕೊಡುವಾಗ, ತಪ್ಪುಗಳನ್ನು ಕ್ಷಮಿಸುವಂತಹ ಮತ್ತು ದೈನಂದಿನ ಆಹಾರವನ್ನು ಪಡೆದುಕೊಳ್ಳುವಂತಹ ವೈಯಕ್ತಿಕ ಚಿಂತೆಯ ವಿಷಯಗಳನ್ನು ಸೇರಿಸಿದನು.
11. ಪ್ರಾರ್ಥನೆಯು ನಾವು ಶೋಧನೆಗೆ ಬಲಿಬೀಳದಂತೆ ಹೇಗೆ ಸಹಾಯಮಾಡಬಲ್ಲದು?
11 ಆ ಮಾದರಿ ಪ್ರಾರ್ಥನೆಯಲ್ಲಿ ಯೇಸು, “ನಮ್ಮನ್ನು ಶೋಧನೆಯೊಳಗೆ ಸೇರಿಸದೆ ಕೇಡಿನಿಂದ ನಮ್ಮನ್ನು ತಪ್ಪಿಸು” ಎಂಬ ಬೇಡಿಕೆಯನ್ನು ಸೇರಿಸಿದನು. (ಮತ್ತಾಯ 6:9-13) ಅವನು ತರುವಾಯ, “ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ” ಎಂದು ಬುದ್ಧಿಹೇಳಿದನು. (ಮತ್ತಾಯ 26:41) ನಾವು ಶೋಧನೆಗಳನ್ನು ಎದುರಿಸುವಾಗ ಪ್ರಾರ್ಥನೆ ಅತ್ಯಾವಶ್ಯಕ. ನಾವು ಕೆಲಸದ ಸ್ಥಳದಲ್ಲಿ ಅಥವಾ ಶಾಲೆಯಲ್ಲಿ ಬೈಬಲ್ ಮೂಲತತ್ತ್ವಗಳನ್ನು ಅಲಕ್ಷ್ಯಮಾಡುವಂತೆ ದುಷ್ಪ್ರೇರಣೆಗೆ ಒಳಗಾಗಬಹುದು. ಸಾಕ್ಷ್ಯೇತರರು ನಾವು ಅವರನ್ನು ಸಂದೇಹಾಸ್ಪದ ಚಟುವಟಿಕೆಗಳಲ್ಲಿ ಕೂಡಿಕೊಳ್ಳುವಂತೆ ಆಮಂತ್ರಿಸಬಹುದು. ನೈತಿಕ ಮೂಲತತ್ತ್ವಗಳನ್ನು ಉಲ್ಲಂಘಿಸುವಂತಹ ವಿಷಯಗಳನ್ನು ಮಾಡುವಂತೆ ಅವರು ನಮ್ಮನ್ನು ಕೇಳಿಕೊಳ್ಳಬಹುದು. ಅಂತಹ ಸಮಯದಲ್ಲಿ ಪ್ರಾರ್ಥಿಸುವಂತೆ ಯೇಸು ನೀಡಿದ ಸಲಹೆಯನ್ನು ಅನುಸರಿಸಬೇಕು. ಶೋಧನೆಯನ್ನು ಎದುರಿಸುವ ಮುಂಚೆ ಮತ್ತು ಎದುರಿಸುತ್ತಿರುವ ಗಳಿಗೆಯಲ್ಲೂ ನಾವದಕ್ಕೆ ಬಲಿಬೀಳದಂತೆ ಸಹಾಯಮಾಡಬೇಕೆಂದು ನಾವು ದೇವರನ್ನು ಕೇಳಿಕೊಳ್ಳಬೇಕು.
12. ಚಿಂತೆಗೆ ಕಾರಣವಾದ ಯಾವ ವಿಷಯಗಳು ನಮ್ಮನ್ನು ಪ್ರಾರ್ಥಿಸುವಂತೆ ಪ್ರಚೋದಿಸಬಹುದು ಮತ್ತು ಯೆಹೋವನಿಂದ ನಾವು ಏನನ್ನು ನಿರೀಕ್ಷಿಸಬಹುದು?
12 ಇಂದು ದೇವರ ಸೇವಕರ ಜೀವನಗಳಲ್ಲಿ ಅನೇಕ ವ್ಯಾಕುಲತೆಗಳು ಮತ್ತು ಒತ್ತಡಭರಿತ ಪರಿಸ್ಥಿತಿಗಳು ಏಳುತ್ತವೆ. ಅಸ್ವಸ್ಥತೆ ಮತ್ತು ಭಾವನಾತ್ಮಕ ಒತ್ತಡಗಳು ಅನೇಕ ಚಿಂತೆಗಳಿಗಿರುವ ಪ್ರಮುಖ ಕಾರಣಗಳಾಗಿವೆ. ನಮ್ಮ ಸುತ್ತಮುತ್ತಲಿನ ಹಿಂಸಾತ್ಮಕ ಪರಿಸ್ಥಿತಿಗಳು ಜೀವನದಲ್ಲಿ ಕ್ಷೋಭೆಯನ್ನುಂಟುಮಾಡುತ್ತವೆ. ಹಣಕಾಸಿನ ತೊಂದರೆಗಳು ಜೀವನ ಸಾಗಿಸಲು ಅವಶ್ಯಕವಾದುದನ್ನು ಪಡೆಯುಲು ಕಷ್ಟಕರವನ್ನಾಗಿ ಮಾಡುತ್ತದೆ. ಹೀಗಿರುವುದರಿಂದ, ಇಂತಹ ವಿಷಯಗಳನ್ನು ಯೆಹೋವನ ಸೇವಕರು ಆತನ ಬಳಿಗೆ ಒಯ್ಯುವಾಗ ಆತನು ಕಿವಿಗೊಡುತ್ತಾನೆಂದು ತಿಳಿಯುವುದು ಎಷ್ಟು ಸಾಂತ್ವನದಾಯಕ! ಕೀರ್ತನೆ102:17 (NIBV) ಯೆಹೋವನ ಕುರಿತು ಹೇಳುವುದು: “ಆತನು ದಿಕ್ಕಿಲ್ಲದವರ ಪ್ರಾರ್ಥನೆಗೆ ಕಿವಿಗೊಡುತ್ತಾನೆ. ಆತನು ಅವರ ಪ್ರಾರ್ಥನೆಯನ್ನು ತಿರಸ್ಕರಿಸುವುದಿಲ್ಲ.”
13. (ಎ) ಯಾವ ವೈಯಕ್ತಿಕ ವಿಷಯಗಳು ಪ್ರಾರ್ಥನೆಗೆ ಸೂಕ್ತವಾಗಿವೆ? (ಬಿ) ಇಂಥ ಪ್ರಾರ್ಥನೆಯ ಒಂದು ಉದಾಹರಣೆ ಕೊಡಿ.
13 ವಾಸ್ತವವಾಗಿ, ಯೆಹೋವನಿಗೆ ನಾವು ಮಾಡುವ ಸೇವೆ ಅಥವಾ ಆತನೊಂದಿಗಿರುವ ನಮ್ಮ ಸಂಬಂಧವನ್ನು ಬಾಧಿಸುವ ಯಾವುದೇ ವಿಷಯವೂ ಪ್ರಾರ್ಥನೆಗೆ ಸೂಕ್ತವಾಗಿರಬಲ್ಲದು. (1 ಯೋಹಾನ 5:14) ನಿಮ್ಮ ವಿವಾಹ, ಉದ್ಯೋಗ ಅಥವಾ ನಿಮ್ಮ ಶುಶ್ರೂಷೆಯನ್ನು ವಿಸ್ತರಿಸುವ ವಿಷಯದಲ್ಲಿ ನಿರ್ಣಯ ಮಾಡಬೇಕಾಗಿರುವಲ್ಲಿ, ದೇವರ ಮಾರ್ಗದರ್ಶನೆಗಾಗಿ ಈ ವಿಷಯಗಳನ್ನು ಆತನ ಬಳಿಗೆ ಒಯ್ಯಲು ಸಂಕೋಚಪಡಬೇಡಿರಿ. ಉದಾಹರಣೆಗೆ, ಫಿಲಿಪ್ಪೀನ್ಸ್ನ ಒಬ್ಬ ಯುವತಿಗೆ ಪೂರ್ಣ ಸಮಯದ ಶುಶ್ರೂಷೆಯಲ್ಲಿ ಭಾಗವಹಿಸಲು ಮನಸ್ಸಿತ್ತು. ಆದರೆ ತನ್ನ ಜೀವನೋಪಾಯಕ್ಕಾಗಿ ಆಕೆಗೆ ಯಾವುದೇ ಕೆಲಸ ದೊರೆತಿರಲಿಲ್ಲ. ಆಕೆ ಹೇಳುವುದು: “ಒಂದು ಶನಿವಾರ, ನಾನು ಪಯನೀಯರ್ ಸೇವೆಯ ಕುರಿತಾಗಿ ಯೆಹೋವನಿಗೆ ನಿರ್ದಿಷ್ಟವಾಗಿ ಪ್ರಾರ್ಥಿಸಿದೆ. ತರುವಾಯ, ಅದೇ ದಿನ ನಾನು ಕ್ಷೇತ್ರ ಸೇವೆಯಲ್ಲಿ ಭಾಗವಹಿಸುತ್ತಿದ್ದಾಗ ಒಬ್ಬ ಹದಿವಯಸ್ಕಳಿಗೆ ನಾನೊಂದು ಪುಸ್ತಕವನ್ನು ನೀಡಿದೆ. ಅನಿರೀಕ್ಷಿತವಾಗಿ ಆ ಹುಡುಗಿ, ‘ಸೋಮವಾರ ಬೆಳಿಗ್ಗೆ ಮೊದಲು ನೀವು ನನ್ನ ಶಾಲೆಗೆ ಹೋಗಬೇಕು’ ಎಂದು ಹೇಳಿದಳು. ‘ಏಕೆ?’ ಎಂದು ನಾನು ಕೇಳಿದ್ದಕ್ಕೆ, ಬೇಗನೇ ತುಂಬಿಸಲ್ಪಡಬೇಕಾಗಿದ್ದ ಒಂದು ಉದ್ಯೋಗ ಅಲ್ಲಿ ಖಾಲಿ ಇದೆ ಎಂದು ಆಕೆ ಹೇಳಿದಳು. ನಾನು ಹೋಗಲಾಗಿ ನನ್ನನ್ನು ಒಡನೆ ಕೆಲಸಕ್ಕೆ ತೆಗೆದುಕೊಳ್ಳಲಾಯಿತು. ಇದೆಲ್ಲಾ ಅತಿ ಬೇಗನೆ ಸಂಭವಿಸಿತು.” ಲೋಕವ್ಯಾಪಕವಾಗಿ, ಅನೇಕ ಮಂದಿ ಸಾಕ್ಷಿಗಳಿಗೆ ತದ್ರೀತಿಯ ಅನುಭವವಾಗಿದೆ. ಆದಕಾರಣ, ನಿಮ್ಮ ಹಾರ್ದಿಕ ಬೇಡಿಕೆಗಳ ಕುರಿತಾಗಿ ಯೆಹೋವನಿಗೆ ಪ್ರಾರ್ಥಿಸಲು ಹಿಂಜರಿಯದಿರಿ.
ನಾವು ಪಾಪಮಾಡಿರುವಲ್ಲಿ ಆಗೇನು?
14, 15. (ಎ) ಒಬ್ಬನು ಪಾಪಮಾಡಿದ್ದರೂ ಪ್ರಾರ್ಥನೆಮಾಡಲು ಹಿಂಜರಿಯಬಾರದೇಕೆ? (ಬಿ) ಒಬ್ಬನು ತನ್ನ ಪಾಪದಿಂದ ಚೇತರಿಸಿಕೊಳ್ಳಲು ವೈಯಕ್ತಿಕ ಪ್ರಾರ್ಥನೆಗಳಲ್ಲದೆ ಇನ್ಯಾವುದು ಸಹಾಯಮಾಡುವುದು?
14 ಒಬ್ಬನು ಪಾಪಮಾಡಿರುವಲ್ಲಿ ಪ್ರಾರ್ಥನೆ ಹೇಗೆ ಸಹಾಯಮಾಡಬಲ್ಲದು? ಪಾಪಮಾಡಿದವನು ನಾಚಿಕೆಯ ಕಾರಣ ಪ್ರಾರ್ಥನೆ ಮಾಡಲು ಹಿಂಜರಿಯಬಹುದು. ಆದರೆ ಇದು ವಿವೇಕದ ಮಾರ್ಗವಲ್ಲ. ದೃಷ್ಟಾಂತಕ್ಕಾಗಿ, ವಿಮಾನಚಾಲಕರಿಗೆ, ಅವರು ದಾರಿ ತಪ್ಪುವಲ್ಲಿ ಸಹಾಯಕ್ಕಾಗಿ ವಿಮಾನಗಳ ಓಡಾಟದ ನಿಯಂತ್ರಣ ಕೇಂದ್ರದ ನಿರ್ದೇಶಕರನ್ನು ಸಂಪರ್ಕಿಸಬಹುದೆಂದು ತಿಳಿದಿರುತ್ತದೆ. ಆದರೆ ದಾರಿ ತಪ್ಪಿರುವ ಚಾಲಕನು, ತಾನಿರುವ ಸ್ಥಿತಿಯಿಂದಾಗಿ ನಾಚಿಕೆಪಡುತ್ತ ನಿರ್ದೇಶಕರನ್ನು ಸಂಪರ್ಕಿಸದಿರುವಲ್ಲಿ ಏನಾಗಬಹುದು? ಅದು ವಿಪತ್ತಿಗೆ ನಡೆಸಬಹುದು! ಅದೇ ರೀತಿ, ಪಾಪ ಮಾಡಿರುವವನು ನಾಚಿಕೆಯ ಕಾರಣ ದೇವರಿಗೆ ಪ್ರಾರ್ಥಿಸದಿರುವಲ್ಲಿ, ಇನ್ನೂ ಹೆಚ್ಚು ಹಾನಿಗೊಳಗಾಗಬಹುದು. ಪಾಪಗೈದುದರಿಂದ ಬರುವ ದೋಷಿಭಾವನೆಯು ಯೆಹೋವನೊಂದಿಗೆ ಮಾತಾಡದಿರುವಂತೆ ನಮ್ಮನ್ನು ತಡೆಯಬಾರದು. ವಾಸ್ತವದಲ್ಲಿ, ಗಂಭೀರವಾಗಿ ಪಾಪಮಾಡಿರುವವರು ತನಗೆ ಪ್ರಾರ್ಥಿಸುವಂತೆ ದೇವರು ಕರೆಕೊಡುತ್ತಾನೆ. ಯೆಹೋವನು ‘ಮಹಾಕೃಪೆಯಿಂದ ಕ್ಷಮಿಸುವವನು’ ಆಗಿರುವುದರಿಂದ, ಪ್ರವಾದಿಯಾದ ಯೆಶಾಯನು ತನ್ನ ಕಾಲದ ಪಾಪಿಗಳನ್ನು ಆತನಿಗೆ ಮೊರೆಯಿಡುವಂತೆ ಪ್ರೋತ್ಸಾಹಿಸಿದನು. (ಯೆಶಾಯ 55:6, 7) ಹೌದು, ಒಬ್ಬನು ಮೊದಲು ತನ್ನನ್ನೇ ತಗ್ಗಿಸಿಕೊಂಡು, ಪಾಪಮಾರ್ಗದಿಂದ ಸರಿದು, ಯಥಾರ್ಥವಾಗಿ ಪಶ್ಚಾತ್ತಾಪಪಟ್ಟು, ‘ಯೆಹೋವನ ದಯೆಯನ್ನು ಅಪೇಕ್ಷಿಸಬಹುದು.’—ಕೀರ್ತನೆ 119:58; ದಾನಿಯೇಲ 9:13.
15 ಇನ್ನೊಂದು ಕಾರಣಕ್ಕಾಗಿಯೂ ಪಾಪಮಾಡಿರುವಾಗ ಪ್ರಾರ್ಥನೆಯು ಪ್ರಾಮುಖ್ಯವಾಗಿರುತ್ತದೆ. ಆಧ್ಯಾತ್ಮಿಕ ಸಹಾಯದ ಆವಶ್ಯಕತೆಯಿರುವ ಒಬ್ಬನ ವಿಷಯದಲ್ಲಿ ಶಿಷ್ಯ ಯಾಕೋಬನು ಹೇಳುವುದು: “ಅವನು ಸಭೆಯ ಹಿರಿಯರನ್ನು ಕರೇಕಳುಹಿಸಲಿ; ಅವರು . . . ಅವನಿಗೋಸ್ಕರ ದೇವರನ್ನು ಪ್ರಾರ್ಥಿಸಲಿ . . . [ಯೆಹೋವನು] ಅವನನ್ನು ಎಬ್ಬಿಸುವನು.” (ಯಾಕೋಬ 5:14, 15) ಹೌದು, ಒಬ್ಬನು ತನ್ನ ಪಾಪಗಳನ್ನು ಪ್ರಾರ್ಥನೆಯಲ್ಲಿ ವ್ಯಕ್ತಿಪರವಾಗಿ ಯೆಹೋವನಿಗೆ ನಿವೇದನೆ ಮಾಡಬೇಕು. ಹಾಗೂ ತನ್ನ ಪರವಾಗಿ ಪ್ರಾರ್ಥಿಸುವಂತೆ ಅವನು ಹಿರೀಪುರುಷರನ್ನೂ ಕೇಳಿಕೊಳ್ಳಸಾಧ್ಯವಿದೆ. ಇದು ಅವನು ಆಧ್ಯಾತ್ಮಿಕವಾಗಿ ಚೇತರಿಸಿಕೊಳ್ಳಲು ಸಹಾಯಮಾಡುವುದು.
ಪ್ರಾರ್ಥನೆಗಳಿಗೆ ಉತ್ತರಗಳು
16, 17. (ಎ) ಯೆಹೋವನು ಪ್ರಾರ್ಥನೆಗಳಿಗೆ ಹೇಗೆ ಉತ್ತರ ಕೊಡುತ್ತಾನೆ? (ಬಿ) ಪ್ರಾರ್ಥನೆ ಮತ್ತು ಸಾರುವ ಕಾರ್ಯಗಳ ಮಧ್ಯೆ ನಿಕಟ ಸಂಬಂಧವಿದೆಯೆಂಬುದನ್ನು ಯಾವ ಅನುಭವಗಳು ಚಿತ್ರಿಸುತ್ತವೆ?
16 ನಮ್ಮ ಪ್ರಾರ್ಥನೆಗಳು ಹೇಗೆ ಉತ್ತರಿಸಲ್ಪಡುತ್ತವೆ? ಕೆಲವು ಪ್ರಾರ್ಥನೆಗಳು ಕೂಡಲೇ ಮತ್ತು ವ್ಯಕ್ತವಾಗುವಂತ ರೀತಿಯಲ್ಲಿ ಉತ್ತರಿಸಲ್ಪಡಬಹುದು. (2 ಅರಸುಗಳು 20:1-6) ಇತರ ಪ್ರಾರ್ಥನೆಗಳು ತಡವಾಗಿ ಮತ್ತು ನಮಗೆ ಗ್ರಹಿಸಲು ಕಷ್ಟಕರವಾಗುವಂಥ ರೀತಿಯಲ್ಲಿ ಉತ್ತರಿಸಲ್ಪಡಬಹುದು. ಆಗ, ನ್ಯಾಯಾಧಿಪತಿಯ ಬಳಿ ಪುನಃ ಪುನಃ ಬರುತ್ತಿದ್ದ ವಿಧವೆಯ ಕುರಿತು ಯೇಸು ತಿಳಿಸಿದ ದೃಷ್ಟಾಂತದಲ್ಲಿ ತೋರಿಸಲ್ಪಟ್ಟಿರುವಂತೆ ಪದೇ ಪದೇ ದೇವರನ್ನು ಸಮೀಪಿಸುವ ಅಗತ್ಯವಿರಬಹುದು. (ಲೂಕ 18:1-8) ಆದರೂ, ನಾವು ದೇವರ ಚಿತ್ತಾನುಸಾರ ಪ್ರಾರ್ಥಿಸುವಾಗ ಯೆಹೋವನು ನಮಗೆಂದಿಗೂ “ನನಗೆ ತೊಂದರೆ ಕೊಡಬೇಡ” ಎಂದು ಹೇಳನು ಎಂಬ ಆಶ್ವಾಸನೆ ನಮಗಿರಸಾಧ್ಯವಿದೆ.—ಲೂಕ 11:5-9.
17 ತಮ್ಮ ಪ್ರಾರ್ಥನೆಗಳು ಉತ್ತರಿಸಲ್ಪಟ್ಟಿರುವ ಅನೇಕ ಅನುಭವಗಳು ಯೆಹೋವನ ಸಾಕ್ಷಿಗಳಿಗಿದೆ. ನಮ್ಮ ಸಾರ್ವಜನಿಕ ಶುಶ್ರೂಷೆಯಲ್ಲಿ ಇದು ಅನೇಕವೇಳೆ ವ್ಯಕ್ತವಾಗಿರುತ್ತದೆ. ದೃಷ್ಟಾಂತಕ್ಕಾಗಿ, ಫಿಲಿಪ್ಪೀನ್ಸ್ ದೇಶದ ದೂರ ಪ್ರದೇಶದಲ್ಲಿ ಇಬ್ಬರು ಕ್ರೈಸ್ತ ಸಹೋದರಿಯರು ಬೈಬಲ್ ಸಾಹಿತ್ಯವನ್ನು ಹಂಚುತ್ತಿದ್ದರು. ಅವರು ಒಬ್ಬ ಸ್ತ್ರೀಗೆ ಒಂದು ಟ್ರ್ಯಾಕ್ಟನ್ನು ಕೊಟ್ಟಾಗ ಆಕೆಯ ಕಣ್ಣುಗಳು ತುಂಬಿಬಂದವು. ಅವಳದಂದ್ದು: “ಕಳೆದ ರಾತ್ರಿ, ಬೈಬಲನ್ನು ಕಲಿಸಲಿಕ್ಕಾಗಿ ನನ್ನ ಬಳಿಗೆ ಯಾರನ್ನಾದರೂ ಕಳುಹಿಸುವಂತೆ ನಾನು ದೇವರಿಗೆ ಪ್ರಾರ್ಥಿಸಿದ್ದೆ. ಮತ್ತು ಇದು ನನ್ನ ಪ್ರಾರ್ಥನೆಗೆ ಉತ್ತರವಾಗಿದೆ ಎಂದು ನಾನು ನೆನೆಸುತ್ತೇನೆ.” ಇದಾಗಿ ಸ್ವಲ್ಪದರಲ್ಲಿ, ಆ ಸ್ತ್ರೀ ರಾಜ್ಯ ಸಭಾಗೃಹದಲ್ಲಿ ಕೂಟಗಳಿಗೆ ಹಾಜರಾಗತೊಡಗಿದಳು. ಆಗ್ನೇಯ ಏಷಿಯದ ಇನ್ನೊಂದು ಪ್ರದೇಶದಲ್ಲಿ, ಬಿಗಿಭದ್ರತೆಯಿದ್ದ ಗೃಹಸಂಕೀರ್ಣದಲ್ಲಿ ಸಾರಲು ಕ್ರೈಸ್ತ ಸಹೋದರನೊಬ್ಬನು ಭಯಪಟ್ಟನು. ಆದರೆ ಅವನು ಯೆಹೋವನಿಗೆ ಪ್ರಾರ್ಥಿಸಿ, ಧೈರ್ಯ ತೆಗೆದುಕೊಂಡು ಆ ಕಟ್ಟಡವನ್ನು ಪ್ರವೇಶಿಸಿದನು. ಒಂದು ಮನೆಯ ಬಾಗಿಲನ್ನು ತಟ್ಟಿದಾಗ ಒಬ್ಬಾಕೆ ಯುವ ಸ್ತ್ರೀಯು ಬಾಗಿಲು ತೆರೆದಳು. ಅವನು ತನ್ನ ಭೇಟಿಯ ಉದ್ದೇಶವನ್ನು ತಿಳಿಸಲಾಗಿ, ಆಕೆ ಅಳತೊಡಗಿದಳು. ತಾನು ಯೆಹೋವನ ಸಾಕ್ಷಿಗಳನ್ನು ಹುಡುಕುತ್ತಿದ್ದೆನೆಂದೂ ಅವರನ್ನು ಕಂಡುಹಿಡಿಯಲು ಸಹಾಯಕ್ಕಾಗಿ ಪ್ರಾರ್ಥಿಸಿದ್ದೆನೆಂದು ಆಕೆ ಹೇಳಿದಳು. ಆಗ ಆ ಸಹೋದರನು ಆಕೆ ಸ್ಥಳಿಕ ಯೆಹೋವನ ಸಾಕ್ಷಿಗಳ ಸಭೆಯನ್ನು ಸಂಪರ್ಕಿಸುವಂತೆ ಸಂತೋಷದಿಂದ ಸಹಾಯಮಾಡಿದನು.
18. (ಎ) ನಮ್ಮ ಪ್ರಾರ್ಥನೆಗಳಿಗೆ ಉತ್ತರ ದೊರೆತಾಗ ನಾವು ಹೇಗೆ ಪ್ರತಿಕ್ರಿಯಿಸಬೇಕು? (ಬಿ) ನಾವು ಪ್ರತಿ ಸಂದರ್ಭದಲ್ಲಿ ಪ್ರಾರ್ಥಿಸುವುದಾದರೆ ಯಾವುದರ ಕುರಿತು ಖಾತ್ರಿಯಿಂದಿರಬಲ್ಲೆವು?
18 ಪ್ರಾರ್ಥನೆ ನಿಜವಾಗಿಯೂ ಒಂದು ಅದ್ಭುತಕರವಾದ ಏರ್ಪಾಡಾಗಿದೆ. ಯೆಹೋವನು ಆಲಿಸಿ, ಉತ್ತರ ಕೊಡಲು ಸಿದ್ಧನಾಗಿದ್ದಾನೆ. (ಯೆಶಾಯ 30:18, 19) ಆದರೂ, ಯೆಹೋವನು ನಮ್ಮ ಪ್ರಾರ್ಥನೆಗಳನ್ನು ಹೇಗೆ ಉತ್ತರಿಸುತ್ತಾನೆ ಎಂಬುದನ್ನು ನಾವು ನಿಕಟವಾಗಿ ಗಮನಿಸುತ್ತಾ ಇರಬೇಕು. ಯಾವಾಗಲೂ ನಾವು ನಿರೀಕ್ಷಿಸುವ ವಿಧದಲ್ಲೇ ನಮ್ಮ ಪ್ರಾರ್ಥನೆಗಳು ಉತ್ತರಿಸಲ್ಪಡಲಿಕ್ಕಿಲ್ಲ. ಆದರೂ, ನಾವು ಆತನ ಮಾರ್ಗದರ್ಶನವನ್ನು ಅರಿತುಕೊಳ್ಳುವಾಗ, ನಾವು ಆತನಿಗೆ ಉಪಕಾರ ಮತ್ತು ಸ್ತುತಿಯನ್ನು ಸಲ್ಲಿಸಲು ಎಂದಿಗೂ ಮರೆಯಬಾರದು. (1 ಥೆಸಲೊನೀಕ 5:18) ಮಾತ್ರವಲ್ಲ, “ಸರ್ವ ವಿಷಯದಲ್ಲಿ ಕೃತಜ್ಞತಾಸ್ತುತಿಯೊಡನೆ ಪ್ರಾರ್ಥನೆ ವಿಜ್ಞಾಪನೆಗಳನ್ನು ಮಾಡುತ್ತಾ ನಿಮ್ಮ ಬೇಡಿಕೆಯನ್ನು ದೇವರಿಗೆ ತಿಳಿಯಪಡಿಸಿರಿ” ಎಂಬ ಅಪೊಸ್ತಲ ಪೌಲನ ಸಲಹೆಯನ್ನು ಸದಾ ಜ್ಞಾಪಕದಲ್ಲಿಡಿರಿ. ಹೌದು, ದೇವರೊಂದಿಗೆ ಮಾತಾಡಲು ನಮಗಿರುವ ಪ್ರತಿಯೊಂದು ಸಂದರ್ಭವನ್ನು ಸದುಪಯೋಗಿಸಿಕೊಳ್ಳಿರಿ. ಈ ಮೂಲಕ, ಯಾರ ಪ್ರಾರ್ಥನೆಗಳು ಉತ್ತರಿಸಲ್ಪಡುತ್ತವೆಯೋ ಅಂಥವರ ವಿಷಯದಲ್ಲಿ ಪೌಲನ ಮಾತುಗಳ ಸತ್ಯತೆಯನ್ನು ನೀವು ಅನುಭವಿಸುತ್ತಾ ಇರುವಿರಿ: “ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ . . . ಕಾಯುವದು.”—ಫಿಲಿಪ್ಪಿ 4:6, 7. (w06 9/1)
ಉತ್ತರಿಸಬಲ್ಲಿರಾ?
• ನಮ್ಮ ಪ್ರಾರ್ಥನೆಗಳ ವಿವಿಧ ವಿಧಗಳಾವುವು?
• ನಾವು ಹೇಗೆ ಪ್ರಾರ್ಥಿಸಬೇಕು?
• ನಮ್ಮ ಪ್ರಾರ್ಥನೆಗಳಲ್ಲಿ ನಾವು ಯಾವ ವಿಷಯಗಳನ್ನು ಒಳಗೂಡಿಸಬಹುದು?
• ಒಬ್ಬನು ಪಾಪಮಾಡಿರುವಾಗ ಪ್ರಾರ್ಥನೆಯ ಪಾತ್ರವೇನು?
[ಪುಟ 29ರಲ್ಲಿರುವ ಚಿತ್ರಗಳು]
ಹೃತ್ಪೂರ್ವಕ ಪ್ರಾರ್ಥನೆಯು ನಾವು ಶೋಧನೆಗಳಿಗೆ ಬಲಿಬೀಳದಂತೆ ಸಹಾಯಮಾಡುತ್ತದೆ
[ಪುಟ 31ರಲ್ಲಿರುವ ಚಿತ್ರಗಳು]
ಪ್ರಾರ್ಥನೆಯ ಮೂಲಕ ನಾವು ದೇವರಿಗೆ ನಮ್ಮ ಕೃತಜ್ಞತೆ, ಚಿಂತೆಗಳು ಮತ್ತು ಬೇಡಿಕೆಗಳನ್ನು ವ್ಯಕ್ತಪಡಿಸುತ್ತೇವೆ