ಯೆಹೋವನ ಪರಮಾಧಿಕಾರ ಮತ್ತು ದೇವರ ರಾಜ್ಯ
“ಯೆಹೋವಾ, ಮಹಿಮಪ್ರತಾಪ ವೈಭವಪರಾಕ್ರಮಪ್ರಭಾವಗಳು ನಿನ್ನವು . . . ಯೆಹೋವನೇ, ರಾಜ್ಯವು ನಿನ್ನದು.”—1 ಪೂರ್ವಕಾಲವೃತ್ತಾಂತ 29:11.
“ಯೆಹೋವನು ಮೇಲಣ ಲೋಕದಲ್ಲಿ ತನ್ನ ಸಿಂಹಾಸನವನ್ನು ಸ್ಥಾಪಿಸಿದ್ದಾನೆ; ಆತನು ಸಮಸ್ತವನ್ನೂ ಆಳುತ್ತಾನೆ.” (ಕೀರ್ತನೆ 103:19) ಈ ಮಾತುಗಳೊಂದಿಗೆ ಕೀರ್ತನೆಗಾರನು ಆಳ್ವಿಕೆಯ ಕುರಿತ ಮೂಲಭೂತ ಸತ್ಯಕ್ಕೆ ಸೂಚಿಸಿದನು. ಯೆಹೋವ ದೇವರು ಸೃಷ್ಟಿಕರ್ತನಾಗಿರುವ ಕಾರಣ ವಿಶ್ವದ ಪರಮಾಧಿಕಾರಿ ಅರಸನಾಗಿರುವ ನ್ಯಾಯವಾದ ಹಕ್ಕು ಆತನಿಗಿದೆ.
2 ಒಬ್ಬ ಅರಸನು ತನ್ನ ಪರಮಾಧಿಕಾರವನ್ನು ನಡೆಸಬೇಕಾದರೆ ಅವನಿಗೆ ಪ್ರಜೆಗಳಿರಬೇಕು ನಿಶ್ಚಯ. ಆರಂಭದಲ್ಲಿ ಯೆಹೋವನು ತಾನು ಸೃಷ್ಟಿಸಿದಂಥ ಆತ್ಮಜೀವಿಗಳ ಮೇಲೆ ಅಂದರೆ ಮೊದಲಾಗಿ ತನ್ನ ಏಕಜಾತ ಪುತ್ರ ಮತ್ತು ದೇವದೂತ ಗಣಗಳ ಮೇಲೆ ದೊರೆತನ ನಡೆಸಿದನು. (ಕೊಲೊಸ್ಸೆ 1:15-17) ತರುವಾಯ ಬಹಳಷ್ಟು ಸಮಯ ದಾಟಿದ ಮೇಲೆ ಪ್ರವಾದಿಯಾದ ದಾನಿಯೇಲನಿಗೆ ಯೆಹೋವನ ಆಳ್ವಿಕೆಯ ಆ ಸ್ವರ್ಗೀಯ ದೃಶ್ಯದ ನಸುನೋಟವನ್ನು ಕೊಡಲಾಯಿತು. ಅವನು ವರದಿಸಿದ್ದು: “ನಾನು ನೋಡುತ್ತಿದ್ದ ಹಾಗೆ ನ್ಯಾಯಾಸನಗಳು ಹಾಕಲ್ಪಟ್ಟವು, ಮಹಾವೃದ್ಧನೊಬ್ಬನು ಆಸೀನನಾದನು; . . . ಲಕ್ಷೋಪಲಕ್ಷ ದೂತರು ಆತನನ್ನು ಸೇವಿಸುತ್ತಿದ್ದರು, ಕೋಟ್ಯನುಕೋಟಿ ಕಿಂಕರರು ಆತನ ಮುಂದೆ ನಿಂತುಕೊಂಡಿದ್ದರು.” (ದಾನಿಯೇಲ 7:9, 10) ‘ಮಹಾವೃದ್ಧನಾದ’ ಯೆಹೋವನು ಅನಾದಿಕಾಲದಿಂದ ತನ್ನ ಆತ್ಮಜೀವಿ ಪುತ್ರರ ಆ ಬಹುದೊಡ್ಡ ಹಾಗೂ ವ್ಯವಸ್ಥಿತ ಕುಟುಂಬದ ಮೇಲೆ ಪರಮಾಧಿಕಾರಿಯಾಗಿ ಆಡಳಿತ ನಡೆಸಿದನು ಮತ್ತು ಅವರು ಆತನ ‘ಸೇವಕರಾಗಿ’ ಆತನ ಚಿತ್ತವನ್ನು ನಡೆಸುತ್ತಿದ್ದರು.—ಕೀರ್ತನೆ 103:20, 21.
3 ಕಟ್ಟಕಡೆಗೆ ಯೆಹೋವನು, ನಮ್ಮ ಭೂಮಿಯೂ ಸೇರಿರುವ ಒಂದು ಅಗಾಧವಾದ ಹಾಗೂ ಸಂಕೀರ್ಣ ಭೌತಿಕ ವಿಶ್ವವನ್ನು ಅಸ್ತಿತ್ವಕ್ಕೆ ತರುವ ಮೂಲಕ ತನ್ನ ಆಧಿಪತ್ಯವನ್ನು ವಿಸ್ತರಿಸಿದನು. (ಯೋಬ 38:4, 7) ಆ ಆಕಾಶಕಾಯಗಳು ಎಷ್ಟು ವ್ಯವಸ್ಥಿತವಾಗಿ ಹಾಗೂ ನಿಖರವಾಗಿ ಕಾರ್ಯನಡಿಸುತ್ತಿವೆ ಎಂದರೆ ಅವುಗಳನ್ನು ನಿರ್ದೇಶಿಸಲು ಮತ್ತು ನಿಯಂತ್ರಿಸಲು ಯಾರೊಬ್ಬನ ಅಗತ್ಯ ಇಲ್ಲವೋ ಎಂಬಂತೆ ಭೂಮಿಯಲ್ಲಿರುವ ವೀಕ್ಷಕರಿಗೆ ತೋರಿಬರುತ್ತದೆ. ಆದರೂ ಕೀರ್ತನೆಗಾರನು ಘೋಷಿಸಿದ್ದು: “ಆತನು [ಯೆಹೋವನು] ಅಪ್ಪಣೆಕೊಡಲು ಅವು ಉಂಟಾದವು. ಅವನ್ನು ಯುಗಯುಗಾಂತರಕ್ಕೂ ಸ್ಥಾಪಿಸಿದ್ದಾನೆ; ಆತನು ಎಂದಿಗೂ ಮೀರಲಾಗದಂಥ ಕಟ್ಟಳೆಯನ್ನು ವಿಧಿಸಿದ್ದಾನೆ.” (ಕೀರ್ತನೆ 148:5, 6) ಆತ್ಮ-ಜೀವಿಗಳ ಲೋಕ ಹಾಗೂ ಭೌತಿಕ ವಿಶ್ವದ ಕಾರ್ಯಕಲಾಪಗಳನ್ನು ನಿರ್ದೇಶಿಸುವುದು, ನಿಯಂತ್ರಿಸುವುದು ಮತ್ತು ಮೇಲ್ವಿಚಾರ ನಡೆಸುವುದು ಯಾವಾಗಲೂ ಯೆಹೋವನ ಪರಮಾಧಿಕಾರದ ಕೆಳಗಿತ್ತು.—ನೆಹೆಮೀಯ 9:6.
4 ಮೊದಲನೇ ಮಾನವ ಜೊತೆಯನ್ನು ಸೃಷ್ಟಿಸಿದಾಗ ದೇವರು ತನ್ನ ಪರಮಾಧಿಕಾರವನ್ನು ಇನ್ನೂ ಒಂದು ರೀತಿಯಲ್ಲಿ ತೋರಿಸಿದನು. ಒಂದು ಉದ್ದೇಶಭರಿತ ಹಾಗೂ ಸಂತೃಪ್ತಿಯ ಜೀವನ ನಡಿಸಲು ಬೇಕಾದ ಸಕಲ ವಸ್ತುಗಳನ್ನು ಅವರಿಗೆ ಒದಗಿಸಿದ್ದಲ್ಲದೆ ಒಂದು ಅಧಿಕಾರವನ್ನೂ ಯೆಹೋವನು ಅವರಿಗೆ ವಹಿಸಿಕೊಟ್ಟನು. ಅದಾವುದೆಂದರೆ ಭೂಮಿಯ ಪ್ರಾಣಿಜೀವಿಗಳ ಮೇಲೆ ದೊರೆತನ ಮಾಡುವುದೇ. (ಆದಿಕಾಂಡ 1:26-28; 2:8, 9) ಹೀಗೆ ದೇವರ ಆಳ್ವಿಕೆಯು ಪ್ರಯೋಜನಕಾರಿ ಮತ್ತು ದಯಾಪರ ಮಾತ್ರವಲ್ಲ ಅದರ ಪ್ರಜೆಗಳಿಗೆ ಗೌರವ ಮತ್ತು ಘನತೆಯನ್ನೂ ಪ್ರದಾನಿಸುತ್ತದೆ ಎಂಬುದು ಸ್ಫುಟ. ಎಷ್ಟರ ತನಕ ಆದಾಮಹವ್ವರು ಯೆಹೋವನ ಪರಮಾಧಿಕಾರಕ್ಕೆ ಅಧೀನರಾಗಿರುತ್ತಾರೋ ಅಷ್ಟರ ತನಕ ಭೂಪರದೈಸದ ಮನೆಯಲ್ಲಿ ಸದಾಕಾಲ ಜೀವಿಸುವ ಪ್ರತೀಕ್ಷೆ ಅವರಿಗಿತ್ತು.—ಆದಿಕಾಂಡ 2:15-17.
5 ಈ ಎಲ್ಲ ಮಾಹಿತಿಗಳಿಂದ ನಾವು ಯಾವ ತೀರ್ಮಾನಕ್ಕೆ ಬರಬಲ್ಲೆವು? ಒಂದನೇದಾಗಿ, ಯೆಹೋವನು ತನ್ನೆಲ್ಲಾ ಸೃಷ್ಟಿಯ ಮೇಲೆ ತನ್ನ ಪರಮಾಧಿಕಾರವನ್ನು ಯಾವಾಗಲೂ ನಡಿಸುತ್ತಾ ಇದ್ದಾನೆ. ಎರಡನೇದಾಗಿ, ದೇವರ ಆಳ್ವಿಕೆಯು ಪ್ರಯೋಜನಕಾರಿ ಮತ್ತು ಪ್ರಜೆಗಳಿಗೆ ಘನತೆಯನ್ನು ಪ್ರದಾನಿಸುತ್ತದೆ. ಕೊನೆಯದಾಗಿ, ದೇವರ ಆಳ್ವಿಕೆಗೆ ನಮ್ಮ ವಿಧೇಯತೆ ಮತ್ತು ಬೆಂಬಲವು ನಮಗೆ ನಿತ್ಯ ಆಶೀರ್ವಾದಗಳನ್ನು ತರುವುದು. ಪ್ರಾಚೀನ ಇಸ್ರಾಯೇಲಿನ ರಾಜ ದಾವೀದನು ಹೀಗನ್ನಲು ಪ್ರೇರಿತನಾದುದರಲ್ಲಿ ಆಶ್ಚರ್ಯವೇನಿಲ್ಲ: “ಯೆಹೋವಾ, ಮಹಿಮಪ್ರತಾಪ ವೈಭವಪರಾಕ್ರಮಪ್ರಭಾವಗಳು ನಿನ್ನವು; ಭೂಮ್ಯಾಕಾಶಗಳಲ್ಲಿರುವದೆಲ್ಲಾ ನಿನ್ನದೇ. ಯೆಹೋವನೇ, ರಾಜ್ಯವು ನಿನ್ನದು; ನೀನು ಮಹೋನ್ನತನಾಗಿ ಸರ್ವವನ್ನೂ ಆಳುವವನಾಗಿರುತ್ತೀ.”—1 ಪೂರ್ವಕಾಲವೃತ್ತಾಂತ 29:11.
ದೇವರ ರಾಜ್ಯವು ಏಕೆ ಬೇಕು?
6 ವಿಶ್ವದ ಪರಮಾಧಿಕಾರಿಯಾದ ಯೆಹೋವನು ತನ್ನ ಪರಾಕ್ರಮಪ್ರಭಾವಗಳನ್ನು ಯಾವಾಗಲೂ ನಡೆಸುತ್ತಾ ಇರಲಾಗಿ, ದೇವರ ರಾಜ್ಯದ ಅವಶ್ಯಕತೆಯಾದರೂ ಏಕಿದೆ? ಸಾಮಾನ್ಯವಾಗಿ ಪರಮಾಧಿಕಾರಿಯೊಬ್ಬನು ಒಂದು ಮಾಧ್ಯಮದ ಮೂಲಕ ತನ್ನ ಪ್ರಜೆಗಳ ಮೇಲೆ ಅಧಿಕಾರ ನಡೆಸುತ್ತಾನೆ. ಹೀಗೆಯೇ ದೇವರ ರಾಜ್ಯವು, ತನ್ನ ಸೃಷ್ಟಿಜೀವಿಗಳ ಮೇಲೆ ವಿಶ್ವ ಪರಮಾಧಿಕಾರಿಯಾಗಿ ಆಳಲು ಆತನು ಬಳಸುವ ಒಂದು ಮಾಧ್ಯಮ ಆಗಿದೆ.
7 ಯೆಹೋವನು ತನ್ನ ಪರಮಾಧಿಕಾರವನ್ನು ಬೇರೆ ಬೇರೆ ಸಮಯಗಳಲ್ಲಿ ವಿಭಿನ್ನ ರೀತಿಗಳಲ್ಲಿ ವ್ಯಕ್ತಪಡಿಸಿದ್ದಾನೆ. ಒಂದು ಹೊಸ ಬೆಳವಣಿಗೆಗೆ ಪ್ರತಿಕ್ರಿಯೆಯಲ್ಲಿ ಆತನು ತನ್ನ ಪರಮಾಧಿಕಾರವನ್ನು ನಡೆಸಲು ಒಂದು ಹೊಸ ಮಾಧ್ಯಮವನ್ನು ನಿಯೋಜಿಸಿದನು. ಇದು ನಡೆದದ್ದು ಒಬ್ಬ ದಂಗೆಕೋರ ಆತ್ಮ ಜೀವಿಯಾದ ಸೈತಾನನು ಯೆಹೋವನ ಆಳ್ವಿಕೆಯ ವಿರುದ್ಧವಾಗಿ ದಂಗೆಯೇಳಲು ಆದಾಮಹವ್ವರನ್ನು ಪ್ರೇರಿಸುವುದರಲ್ಲಿ ಸಫಲನಾದಾಗಲೇ. ಆ ದಂಗೆಯು ದೇವರ ಪರಮಾಧಿಕಾರಕ್ಕೆ ವಿರುದ್ಧ ನಡಿಸಿದ ಒಂದು ಆಕ್ರಮಣವಾಗಿತ್ತು. ಯಾವ ರೀತಿಯಲ್ಲಿ? ನಿಷೇಧಿತ ಹಣ್ಣನ್ನು ತಿಂದಲ್ಲಿ ಹವ್ವಳು “ನಿಶ್ಚಯವಾಗಿಯೂ ಸಾಯುವುದಿಲ್ಲ” ಎಂದು ಹೇಳುತ್ತಾ ಸೈತಾನನು ಅವಳನ್ನು ಪುಸಲಾಯಿಸಿ ಯೆಹೋವನು ಸುಳ್ಳಾಡಿದನೆಂದೂ ಹೀಗೆ ಭರವಸಾರ್ಹನಲ್ಲವೆಂದೂ ಆರೋಪಿಸಿದನು. ಸೈತಾನನು ಹವ್ವಳಿಗೆ ಮತ್ತೂ ಹೇಳಿದ್ದು: “ನೀವು ಇದರ ಹಣ್ಣನ್ನು ತಿಂದಾಗಲೇ ನಿಮ್ಮ ಕಣ್ಣುಗಳು ತೆರೆಯುವವು; ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ; ಇದು ದೇವರಿಗೆ ಚೆನ್ನಾಗಿ ಗೊತ್ತುಂಟು.” ಆದಾಮಹವ್ವರು ದೇವರ ಆಜ್ಞೆಯನ್ನು ದುರ್ಲಕ್ಷಿಸಿ ತಮ್ಮ ಸ್ವಂತ ಮಾರ್ಗದಲ್ಲಿ ಹೋಗುವುದಾದರೆ ಅವರಿಗೆ ಒಳ್ಳೇದಾಗುವುದೆಂದು ಸೈತಾನನು ಸೂಚಿಸುತ್ತಿದ್ದನು. (ಆದಿಕಾಂಡ 3:1-6) ಇದು ದೇವರ ಆಳ್ವಿಕೆಯ ನ್ಯಾಯವಾದ ಹಕ್ಕಿಗೆ ವಿರುದ್ಧವಾದ ನೇರ ಆಕ್ರಮಣವಾಗಿತ್ತು. ಯೆಹೋವನು ಆಗ ಏನು ಮಾಡಲಿದ್ದನು?
8 ಒಬ್ಬ ಅರಸನು ತನ್ನ ಆಳ್ವಿಕೆಗೆ ವಿರುದ್ಧವಾಗಿ ಏಳುವ ನೇರವಾದ ದಂಗೆಯನ್ನು ಹೇಗೆ ನಿಭಾಯಿಸುವನೆಂದು ನಾವು ನಿರೀಕ್ಷಿಸುತ್ತೇವೆ? ಅಂಥ ಕೆಲವು ಸಂದರ್ಭಗಳನ್ನು ಇತಿಹಾಸದ ಪರಿಚಯವಿದ್ದವರು ನೆನಪಿಗೆ ತರಬಲ್ಲರು. ಸಾಮಾನ್ಯವಾಗಿ ಒಬ್ಬ ಪರಮಾಧಿಕಾರಿ—ಉಪಕಾರಶೀಲ ಅಧಿಪತಿಯು ಸಹ ದಂಗೆಯನ್ನು ದುರ್ಲಕ್ಷಿಸುವುದಿಲ್ಲ. ಬದಲಾಗಿ ದಂಗೆಕೋರರನ್ನು ದೇಶದ್ರೋಹಿಗಳೆಂದು ಘೋಷಿಸಿ ಅವರ ವಿರುದ್ಧ ತೀರ್ಪನ್ನು ವಿಧಿಸುವನು. ಆನಂತರ ಆ ದಂಗೆಕೋರ ಸೈನ್ಯಗಳನ್ನು ಅಣಗಿಸಿ ಶಾಂತಿಯನ್ನು ಪುನಃಸ್ಥಾಪಿಸಲಿಕ್ಕಾಗಿ ಅರಸನು ಬೇರೆ ಯಾರನ್ನಾದರೂ ನೇಮಿಸಬಹುದು. ತದ್ರೀತಿಯಲ್ಲಿ, ಯೆಹೋವನು ಆ ಕೂಡಲೇ ಕ್ರಮ ಕೈಕೊಂಡು ಆ ದಂಗೆಕೋರರ ಮೇಲೆ ತೀರ್ಪನ್ನು ವಿಧಿಸುವ ಮೂಲಕ ಸನ್ನಿವೇಶವು ತನ್ನ ಪೂರ್ಣ ಹತೋಟಿಯಲ್ಲಿದೆ ಎಂದು ತೋರಿಸಿದನು. ನಿತ್ಯಜೀವದ ಉಡುಗೊರೆಗೆ ಆದಾಮಹವ್ವರು ಅರ್ಹರಲ್ಲವೆಂದು ಅವನು ಘೋಷಿಸಿ ಅವರನ್ನು ಏದೆನ್ ತೋಟದಿಂದ ಹೊರಗಟ್ಟಿದನು.—ಆದಿಕಾಂಡ 3:16-19, 22-24.
9 ಸೈತಾನನ ವಿರುದ್ಧವಾಗಿ ತೀರ್ಪನ್ನು ವಿಧಿಸಿದಾಗ ಯೆಹೋವನು ತನ್ನ ಭೂಕ್ಷೇತ್ರದಲ್ಲಿ ಶಾಂತಿ ಮತ್ತು ವ್ಯವಸ್ಥೆಯನ್ನು ಪುನಃಸ್ಥಾಪಿಸಲಿಕ್ಕಾಗಿ ತನ್ನ ಪರಮಾಧಿಕಾರದ ಒಂದು ಹೊಸ ಮಾಧ್ಯಮವನ್ನು ಪ್ರಕಟಪಡಿಸಿದನು. ಸೈತಾನನಿಗೆ ಆತನಂದದ್ದು: “ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ.” (ಆದಿಕಾಂಡ 3:15) ಹೀಗೆ ತನ್ನ ಪರಮಾಧಿಕಾರದ ನ್ಯಾಯವಾದ ಹಕ್ಕನ್ನು ರುಜುಪಡಿಸಲು ಮತ್ತು ಸೈತಾನನನ್ನೂ ಅವನ ಸೇನೆಯನ್ನೂ ಜಜ್ಜಲಿಕ್ಕಾಗಿ ಒಂದು “ಸಂತಾನ”ವನ್ನು ನೇಮಿಸುವುದೇ ತನ್ನ ಉದ್ದೇಶವಾಗಿತ್ತೆಂದು ಯೆಹೋವನು ಪ್ರಕಟಪಡಿಸಿದನು.—ಕೀರ್ತನೆ 2:7-9; 110:1, 2.
10 ಆ ‘ಸಂತಾನವು’ ಯೇಸು ಕ್ರಿಸ್ತನು ಮತ್ತು ಅವನ ಜೊತೆ ಅರಸರ ವಿಶಿಷ್ಟ ಗುಂಪಾಗಿ ಪರಿಣಮಿಸಿತು. ಇವರೇ ದೇವರ ಮೆಸ್ಸೀಯ ರಾಜ್ಯ. (ದಾನಿಯೇಲ 7:13, 14, 27; ಮತ್ತಾಯ 19:28; ಲೂಕ 12:32; 22:28-30) ಆದರೂ ಇವೆಲ್ಲವು ಆ ಕೂಡಲೇ ಪ್ರಕಟವಾಗಿರಲಿಲ್ಲ. ವಾಸ್ತವದಲ್ಲಿ ಆ ಮೊದಲನೇ ಪ್ರವಾದನೆಯ ನೆರವೇರಿಕೆಯು “ಅನಾದಿಯಾಗಿ ಗುಪ್ತವಾಗಿದ್ದ ಮರ್ಮ [“ಪವಿತ್ರ ರಹಸ್ಯ,” NW]” ಆಗಿತ್ತು. (ರೋಮಾಪುರ 16:25) ಶತಮಾನಗಳಿಂದಲೂ ವಿಶ್ವಾಸಿಗಳಾದ ಜನರು, ಯೆಹೋವನ ಪರಮಾಧಿಕಾರದ ನಿರ್ದೋಷೀಕರಣಕ್ಕಾಗಿ ಆ ‘ಪವಿತ್ರ ರಹಸ್ಯವು’ ಪ್ರಕಟವಾಗುವ ಮತ್ತು ಆ ಪ್ರಥಮ ಪ್ರವಾದನೆಯು ನೆರವೇರುವ ಸಮಯವನ್ನು ಹಂಬಲದಿಂದ ಮುನ್ನೋಡಿದರು.—ರೋಮಾಪುರ 8:19-21.
‘ಪವಿತ್ರ ರಹಸ್ಯ’ ಪ್ರಗತಿಪರವಾಗಿ ಪ್ರಕಟವಾಯಿತು
11 ಸಮಯವು ದಾಟಿದಷ್ಟಕ್ಕೆ ಯೆಹೋವನು ‘ದೇವರ ರಾಜ್ಯದ ಪವಿತ್ರ ರಹಸ್ಯದ’ ಅಂಶಗಳನ್ನು ಪ್ರಗತಿಪರವಾಗಿ ಪ್ರಕಟಪಡಿಸಿದನು. (ಮಾರ್ಕ 4:11, NW) ಯೆಹೋವನು ಅದನ್ನು ಪ್ರಕಟಪಡಿಸಿದ ಜನರಲ್ಲಿ ‘ಯೆಹೋವನ ಸ್ನೇಹಿತ’ ಎಂದು ಕರೆಯಲ್ಪಟ್ಟ ಅಬ್ರಹಾಮನು ಒಬ್ಬನಾಗಿದ್ದನು. (ಯಾಕೋಬ 2: 23) ಅಬ್ರಹಾಮನನ್ನು ಒಂದು ‘ದೊಡ್ಡ ಜನಾಂಗವಾಗಿ’ ಮಾಡುವೆನೆಂದು ಯೆಹೋವನು ಅವನಿಗೆ ವಚನವಿತ್ತನು. ತರುವಾಯ ದೇವರು ಅಬ್ರಹಾಮನಿಗೆ ಮತ್ತೂ ತಿಳಿಸಿದ್ದು: ‘ನಿನ್ನಿಂದ ಅರಸರು ಹುಟ್ಟುವರು’ ಮತ್ತು “ಎಲ್ಲಾ ಜನಾಂಗಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವದು.”—ಆದಿಕಾಂಡ 12:2, 3; 17:6; 22:17, 18.
12 ಅಬ್ರಹಾಮನ ಸಮಯದಷ್ಟಕ್ಕೆ, ಮನುಷ್ಯರು ಇತರರ ಮೇಲೆ ದಬ್ಬಾಳಿಕೆ ನಡೆಸುತ್ತಾ ಆಳುವಂಥ ಪ್ರಯತ್ನವನ್ನು ಆಗಲೇ ಮಾಡಿದ್ದರು. ಉದಾಹರಣೆಗೆ, ನೋಹನ ಮರಿಮಗನಾದ ನಿಮ್ರೋದನ ಕುರಿತು ಬೈಬಲ್ ಹೇಳುವುದು: “ಅವನು ಪರಾಕ್ರಮದಿಂದ ಮೊದಲನೆಯ ಭೂರಾಜನಾದನು. ಅವನು [“ಯೆಹೋವನ ವಿರುದ್ಧ,” NW] ಅತಿಸಾಹಸಿಯಾದ ಬೇಟೆಗಾರನು.” (ಆದಿಕಾಂಡ 10:8, 9) ನಿಮ್ರೋದ ಮತ್ತು ಅವನಂಥ ಇತರ ಸ್ವ-ನೇಮಿತ ಭೂರಾಜರುಗಳು ಸೈತಾನನ ಕೈಗೊಂಬೆಗಳಾಗಿದ್ದರೆಂಬದು ಸ್ಪಷ್ಟ. ಹೀಗೆ ಅವರೂ ಅವರ ಬೆಂಬಲಿಗರೂ ಸೈತಾನನ ಸಂತತಿಯ ಭಾಗವಾಗಿ ಪರಿಣಮಿಸಿದರು.—1 ಯೋಹಾನ 5:19.
13 ಮಾನವ ಅರಸರನ್ನು ಹೊರತರುವ ಸೈತಾನನ ಪ್ರಯತ್ನಗಳ ಮಧ್ಯೆಯೂ ಯೆಹೋವನ ಉದ್ದೇಶವು ಮುಂದುವರಿಯುತ್ತದೆ. ಅಬ್ರಹಾಮನ ಮೊಮ್ಮಗನಾದ ಯಾಕೋಬನ ಮೂಲಕ ಯೆಹೋವನು ಪ್ರಕಟಿಸಿದ್ದು: “ರಾಜದಂಡವನ್ನು ಹಿಡಿಯತಕ್ಕವನು [“ಶಿಲೋವನೆಂಬವನು,” Bsi ಪಾದಟಿಪ್ಪಣಿ] ಬರುವ ತನಕ ಆ ದಂಡವು ಯೆಹೂದನ ಕೈಯಿಂದ ತಪ್ಪುವದಿಲ್ಲ, ಮುದ್ರೆಕೋಲು ಅವನ ಪಾದಗಳ ಬಳಿಯಿಂದ ಕದಲುವದಿಲ್ಲ; ಅವನಿಗೆ ಅನ್ಯಜನಗಳೂ ವಿಧೇಯರಾಗಿರುವರು.” (ಆದಿಕಾಂಡ 49:10) “ಶಿಲೋ” ಎಂಬ ಪದದ ಅರ್ಥವು “ಅದು ಯಾರದ್ದೋ ಅವನು; ಅದು ಯಾರಿಗೆ ಸೇರಿದ್ದೋ ಅವನು.” ಹೀಗೆ “ಅನ್ಯಜನಗಳ” ಮೇಲೆ ಅಥವಾ ಮಾನವಕುಲದ ಎಲ್ಲರ ಮೇಲೆ “ರಾಜದಂಡವನ್ನು” ಅಥವಾ ಪರಮಾಧಿಕಾರವನ್ನು ಹಾಗೂ “ಮುದ್ರೆಕೋಲು” ಅಥವಾ ಆಡಳಿತವನ್ನು ಪಡೆದುಕೊಳ್ಳಲು ನ್ಯಾಯವಾದ ಹಕ್ಕುಳ್ಳ ಒಬ್ಬಾತನು ಬರಲಿದ್ದನೆಂದು ಈ ಪ್ರವಾದನಾ ಮಾತುಗಳು ಸೂಚಿಸಿದವು. ಅವನು ಯಾರಾಗಲಿದ್ದನು?
‘ಶಿಲೋವನು ಬರುವ ತನಕ’
14 ಯೆಹೂದ ವಂಶದವರೊಳಗಿಂದ, ತನ್ನ ಜನರ ಮೇಲೆ ಅರಸನಾಗುವಂತೆ ಯೆಹೋವನು ಆರಿಸಿಕೊಂಡ ಮೊದಲನೆಯ ವ್ಯಕ್ತಿ ಇಷಯನ ಮಗನಾದ ಕುರುಬ ದಾವೀದನಾಗಿದ್ದನು.a (1 ಸಮುವೇಲ 16:1-13) ದಾವೀದನು ಪಾಪ-ತಪ್ಪುಗಳನ್ನು ಮಾಡಿದ್ದನಾದರೂ ಯೆಹೋವನ ಪರಮಾಧಿಕಾರಕ್ಕೆ ನಿಷ್ಠನಾಗಿದ್ದ ಕಾರಣದಿಂದಾಗಿ ದೇವರ ಅನುಗ್ರಹವನ್ನು ಪಡೆದುಕೊಂಡನು. ಏದೆನಿನ ಮೊದಲನೇ ಪ್ರವಾದನೆಯ ಮೇಲೆ ಹೆಚ್ಚು ಬೆಳಕನ್ನು ಚೆಲ್ಲುತ್ತಾ, ಯೆಹೋವನು ದಾವೀದನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿ ಅಂದದ್ದು: “ನಿನ್ನ ಆಯುಷ್ಕಾಲವು ಮುಗಿದು ನೀನು ಪಿತೃಗಳ ಬಳಿಗೆ ಸೇರಿದ ಮೇಲೆ ನಿನ್ನಿಂದ ಹುಟ್ಟುವವನನ್ನು ನೆಲೆಗೊಳಿಸಿ ಅವನ ರಾಜ್ಯವನ್ನು ಸ್ಥಿರಪಡಿಸುವೆನು.” ಇದರಲ್ಲಿ ದಾವೀದನ ಪುತ್ರನೂ ಉತ್ತರಾಧಿಕಾರಿಯೂ ಆಗಿದ್ದ ಸೊಲೋಮೋನನಿಗಿಂತ ಹೆಚ್ಚಿನವರು ಸೇರಿರಲಿದ್ದರು ಯಾಕಂದರೆ ಆ ಒಡಂಬಡಿಕೆಯು ಅಂದದ್ದು: “ಅವನ ರಾಜ್ಯಸಿಂಹಾಸನವನ್ನು ನಿರಂತರವಾಗಿ ಸ್ಥಿರಪಡಿಸುವೆನು.” ಹೀಗೆ ದಾವೀದನೊಂದಿಗೆ ಮಾಡಲಾದ ಈ ಒಡಂಬಡಿಕೆಯು, ಆ ವಾಗ್ದತ್ತ ರಾಜ್ಯದ “ಸಂತಾನ” ದಾವೀದನ ವಂಶದ ಮೂಲಕವಾಗಿ ಕ್ಲುಪ್ತ ಕಾಲದಲ್ಲಿ ಬರಲಿದೆ ಎಂಬುದನ್ನು ಸ್ಪಷ್ಟಪಡಿಸಿತು.—2 ಸಮುವೇಲ 7:12, 13.
15 ದಾವೀದನಿಂದ ಹಿಡಿದು ಅರಸರುಗಳ ಒಂದು ವಂಶವು ಆರಂಭಗೊಂಡಿತು ಮತ್ತು ಇವರನ್ನು ಮಹಾಯಾಜಕನು ಪವಿತ್ರ ಎಣ್ಣೆಯಿಂದ ರಾಜರಾಗಿ ಅಭಿಷೇಕಿಸಿದ್ದನು. ಆದಕಾರಣ ಆ ಅರಸರನ್ನು ಅಭಿಷಿಕ್ತರು ಅಥವಾ ಮೆಸ್ಸೀಯರೆಂದು ಕರೆಯಬಹುದಿತ್ತು. (1 ಸಮುವೇಲ 16:13; 2 ಸಮುವೇಲ 2:4; 5:3; 1 ಅರಸುಗಳು 1:39) ಅವರು ಯೆಹೋವನ ಸಿಂಹಾಸನದ ಮೇಲೆ ಕೂತುಕೊಂಡು ಯೆರೂಸಲೇಮಿನಲ್ಲಿ ಯೆಹೋವನಿಗಾಗಿ ರಾಜ್ಯವಾಳಿದರೆಂದು ಹೇಳಲಾಗಿದೆ. (2 ಪೂರ್ವಕಾಲವೃತ್ತಾಂತ 9:8) ಈ ಅರ್ಥದಲ್ಲೇ, ಯೆಹೂದ ರಾಜ್ಯವು ಯೆಹೋವನ ಪರಮಾಧಿಕಾರದ ಒಂದು ಮಾಧ್ಯಮವಾಗಿ ದೇವರ ರಾಜ್ಯವನ್ನು ಪ್ರತಿನಿಧೀಕರಿಸಿತು.
16 ಅರಸನು ಮತ್ತು ಪ್ರಜೆಗಳು ಯೆಹೋವನ ಪರಮಾಧಿಕಾರಕ್ಕೆ ಅಧೀನರಾಗಿದ್ದಾಗ ಆತನ ಸಂರಕ್ಷಣೆ ಮತ್ತು ಆಶೀರ್ವಾದವನ್ನು ಅವರು ಆನಂದಿಸಿದರು. ವಿಶೇಷವಾಗಿ ಸೊಲೊಮೋನನ ಆಳ್ವಿಕೆಯು ಅತುಲ್ಯವಾದ ಶಾಂತಿ ಮತ್ತು ಸಮೃದ್ಧಿಯ ಸಮಯವಾಗಿತ್ತು. ಅದು, ಸೈತಾನನ ಪ್ರಭಾವವು ಪೂರ್ತಿಯಾಗಿ ತೆಗೆದುಹಾಕಲ್ಪಡುವಾಗ ಮತ್ತು ಯೆಹೋವನ ಪರಮಾಧಿಕಾರವು ನಿರ್ದೋಷೀಕರಿಸಲ್ಪಡುವಾಗ, ದೇವರ ರಾಜ್ಯದ ಆಳ್ವಿಕೆಯು ಹೇಗಿರುವುದೆಂಬುದರ ಪ್ರವಾದನಾ ನಸುನೋಟವನ್ನು ಒದಗಿಸಿತು. (1 ಅರಸುಗಳು 4:20, 25) ದುಃಖಕರವಾಗಿ ದಾವೀದನ ವಂಶದ ಹೆಚ್ಚಿನ ಅರಸರು ಯೆಹೋವನ ಅವಶ್ಯಕತೆಗಳಿಗೆ ಹೊಂದಿಕೆಯಾಗಿ ನಡೆಯಲು ತಪ್ಪಿಹೋದರು ಮತ್ತು ಅವರ ಪ್ರಜೆಗಳು ವಿಗ್ರಹಾರಾಧನೆ ಹಾಗೂ ಅನೈತಿಕತೆಗೆ ಬಲಿಬಿದ್ದರು. ಕಟ್ಟಕಡೆಗೆ ಸಾ.ಶ.ಪೂ. 607ರಲ್ಲಿ ಆ ರಾಜ್ಯವು ಬಾಬೆಲಿನವರಿಂದ ನಾಶಗೊಳಿಸಲ್ಪಡುವಂತೆ ಯೆಹೋವನು ಅನುಮತಿಸಿದನು. ಆಗ ಯೆಹೋವನ ಪರಮಾಧಿಕಾರಕ್ಕೆ ಕಳಂಕ ತರುವ ತನ್ನ ಪ್ರಯತ್ನದಲ್ಲಿ ಸೈತಾನನು ಮೇಲುಗೈ ಪಡೆದಂತೆ ತೋರಿಬಂತು.
17 ದಾವೀದನ ರಾಜ್ಯದ ದೊಬ್ಬಿಹಾಕುವಿಕೆ ಮತ್ತು ಅದಕ್ಕೆ ಮುಂಚೆ ಉತ್ತರದ ಇಸ್ರಾಯೇಲ್ ರಾಜ್ಯದ ನಾಶನ, ಯೆಹೋವನ ಪರಮಾಧಿಕಾರದಲ್ಲಿ ಏನೋ ಕುಂದಿತ್ತು ಅಥವಾ ಅದು ವಿಫಲವಾಗಿತ್ತು ಎಂಬುದಕ್ಕೆ ರುಜುವಾತನ್ನೀಯಲಿಲ್ಲ. ಬದಲಾಗಿ ಸೈತಾನನ ಪ್ರಭಾವದ ಹಾಗೂ ದೇವರನ್ನು ತೊರೆದ ಮನುಷ್ಯನ ಸ್ವಾವಲಂಬನೆಯ ಶೋಚನೀಯ ಫಲಿತಾಂಶಗಳಿಗೆ ರುಜುವಾತನ್ನು ಕೊಟ್ಟಿತು. (ಜ್ಞಾನೋಕ್ತಿ 16:25; ಯೆರೆಮೀಯ 10:23) ತಾನು ಇನ್ನೂ ತನ್ನ ಪರಮಾಧಿಕಾರವನ್ನು ನಡೆಸುತ್ತಿದ್ದೇನೆಂದು ತೋರಿಸಲು ಯೆಹೋವನು ತನ್ನ ಪ್ರವಾದಿ ಯೆಹೆಜ್ಕೇಲನ ಮೂಲಕ ಹೇಳಿದ್ದು: “ಮುಂಡಾಸವನ್ನು ಕಿತ್ತುಬಿಡು! ಕಿರೀಟವನ್ನು ಎತ್ತಿ ಹಾಕು. . . . ನಾನು ದೊಬ್ಬಿಬಿಡುವೆನು, ದೊಬ್ಬಿಬಿಡುವೆನು, ದೊಬ್ಬಿಬಿಡುವೆನು; [ರಾಜ್ಯಕ್ಕೆ] ಬಾಧ್ಯನು ಬರುವದರೊಳಗೆ ಒಂದೂ ಇದ್ದಂತಿರದು. ಅವನಿಗೇ ರಾಜ್ಯವನ್ನು ವಹಿಸುವೆನು.” (ಯೆಹೆಜ್ಕೇಲ 21:26, 27) “ಬಾಧ್ಯನು” ಆಗಿದ್ದ ವಾಗ್ದತ್ತ “ಸಂತಾನವು” ಮುಂದೆ ಬರಲಿದ್ದನೆಂಬುದನ್ನು ಆ ಮಾತುಗಳು ಸೂಚಿಸುತ್ತವೆ.
18 ಈಗ ನಾವು ಸುಮಾರು ಸಾ.ಶ.ಪೂ. 2ನೆಯ ವರ್ಷದ ಸಮಯದಷ್ಟಕ್ಕೆ ಮುಂದೆಸಾಗೋಣ. ಉತ್ತರ ಪಲೆಸ್ತೀನದಲ್ಲಿನ ಗಲಿಲಾಯ ಪ್ರದೇಶದ ನಜರೇತ್ ಎಂಬ ಊರಿನಲ್ಲಿದ್ದ ಕನ್ಯೆ ಮರಿಯಳ ಬಳಿಗೆ ದೇವದೂತ ಗಬ್ರಿಯೇಲನನ್ನು ಕಳುಹಿಸಲಾಯಿತು. ಅವನು ಘೋಷಿಸಿದ್ದು: “ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ; ಆತನಿಗೆ ಯೇಸುವೆಂದು ಹೆಸರಿಡಬೇಕು. ಆತನು ಮಹಾಪುರುಷನಾಗಿ ಪರಾತ್ಪರನ ಕುಮಾರನೆನಿಸಿಕೊಳ್ಳುವನು; ಇದಲ್ಲದೆ ದೇವರಾಗಿರುವ [ಯೆಹೋವನು] ಮೂಲಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು. ಆತನು ಯಾಕೋಬನ ವಂಶವನ್ನು ಸದಾಕಾಲ ಆಳುವನು; ಆತನ ರಾಜ್ಯಕ್ಕೆ ಅಂತ್ಯವೇ ಇಲ್ಲ.”—ಲೂಕ 1:31-33.
19 ಕಟ್ಟಕಡೆಗೆ ಆ ‘ಪವಿತ್ರ ರಹಸ್ಯವನ್ನು’ ಪ್ರಕಟಪಡಿಸುವ ಸಮಯವು ಹತ್ತಿರಬಂತು. ವಾಗ್ದತ್ತ ‘ಸಂತಾನದ’ ಪ್ರಧಾನ ಭಾಗವಾದಾತನು ಬೇಗನೆ ತೋರಿಬರಲಿದ್ದನು. (ಗಲಾತ್ಯ 4:4; 1 ತಿಮೊಥೆಯ 3:16) ಅವನ ಹಿಮ್ಮಡಿಯನ್ನು ಸೈತಾನನು ಕಚ್ಚಲಿದ್ದನು. ಅದಕ್ಕೆ ಪ್ರತಿಯಾಗಿ ಆ “ಸಂತಾನ” ಸೈತಾನನ ತಲೆಯನ್ನು ಜಜ್ಜಿ ಅವನನ್ನೂ ದೆವ್ವಗಣವನ್ನೂ ಕ್ರಿಯಾಹೀನರನ್ನಾಗಿ ಮಾಡುವನು. ದೇವರ ರಾಜ್ಯದ ಮೂಲಕವಾಗಿ ಸೈತಾನನಿಂದ ಮಾಡಲಾದ ಸಕಲ ಹಾನಿಯು ಲಯಗೊಳಿಸಲ್ಪಟ್ಟು ಯೆಹೋವನ ಪರಮಾಧಿಕಾರವು ನಿರ್ದೋಷೀಕರಿಸಲ್ಪಡುವುದು ಎಂಬುದಕ್ಕೆ ಅವನು ಸಾಕ್ಷ್ಯವನ್ನೂ ಒದಗಿಸುವನು. (ಇಬ್ರಿಯ 2:14; 1 ಯೋಹಾನ 3:8) ಯೇಸು ಇದನ್ನು ಹೇಗೆ ಪೂರೈಸಲಿದ್ದಾನೆ? ನಾವು ಅನುಕರಿಸುವಂತೆ ಯಾವ ಮಾದರಿಯನ್ನು ಅವನಿಟ್ಟಿದ್ದಾನೆ? ಇದಕ್ಕೆ ಉತ್ತರಗಳನ್ನು ಮುಂದಿನ ಲೇಖನದಲ್ಲಿ ನಾವು ಕಂಡುಹಿಡಿಯುವೆವು.
[ಪಾದಟಿಪ್ಪಣಿ]
a ಇಸ್ರಾಯೇಲ್ಯರನ್ನು ಆಳಲು ದೇವರಿಂದ ಆರಿಸಲ್ಪಟ್ಟ ಮೊದಲನೇ ವ್ಯಕ್ತಿಯಾದ ಸೌಲನು ಬೆನ್ಯಾಮೀನನ ವಂಶದವನಾಗಿದ್ದನು.—1 ಸಮುವೇಲ 9:15, 16; 10:1.
ವಿವರಿಸಬಲ್ಲಿರೋ?
• ಯೆಹೋವನು ವಿಶ್ವದ ನ್ಯಾಯವಾದ ಪರಮಾಧಿಕಾರಿಯಾಗಿರುವುದು ಏಕೆ?
• ಯೆಹೋವನು ತನ್ನ ರಾಜ್ಯವನ್ನು ನಿಯೋಜಿಸಲು ಉದ್ದೇಶಿಸಿದ್ದು ಏಕೆ?
• ಯೆಹೋವನು “ಪವಿತ್ರ ರಹಸ್ಯ”ವನ್ನು ಪ್ರಗತಿಪರವಾಗಿ ಪ್ರಕಟಪಡಿಸಿದ್ದು ಹೇಗೆ?
• ದಾವೀದನ ರಾಜ್ಯವು ದೊಬ್ಬಲ್ಪಟ್ಟಾಗ್ಯೂ ಯೆಹೋವನು ಪೂರ್ಣಾಧಿಕಾರದಲ್ಲಿದ್ದನೆಂದು ಯಾವುದು ತೋರಿಸುತ್ತದೆ?
[ಅಧ್ಯಯನ ಪ್ರಶ್ನೆಗಳು]
1. ಯೆಹೋವನು ವಿಶ್ವದ ನ್ಯಾಯವಾದ ಹಕ್ಕುಳ್ಳ ಪರಮಾಧಿಕಾರಿ ಏಕೆ?
2. ಯೆಹೋವನ ಆತ್ಮ-ಜೀವಿ ಲೋಕವನ್ನು ದಾನಿಯೇಲನು ಹೇಗೆ ವರ್ಣಿಸಿದನು?
3. ಯೆಹೋವನ ಪರಮಾಧಿಕಾರವು ಭೌತಿಕ ವಿಶ್ವದ ಮೇಲೆ ವಿಸ್ತರಿಸಿದ್ದು ಹೇಗೆ?
4. ಯೆಹೋವನು ಮಾನವರ ಮೇಲೆ ತನ್ನ ಪರಮಾಧಿಕಾರವನ್ನು ಹೇಗೆ ನಡಿಸುತ್ತಾನೆ?
5. ಯೆಹೋವನು ತನ್ನ ಪರಮಾಧಿಕಾರವನ್ನು ನಿರ್ವಹಿಸುವ ರೀತಿಯ ಕುರಿತು ನಾವೇನು ಹೇಳಬಲ್ಲೆವು?
6. ದೇವರ ಪರಮಾಧಿಕಾರ ಮತ್ತು ಆತನ ರಾಜ್ಯದ ನಡುವೆ ಇರುವ ಸಂಬಂಧವೇನು?
7. ಯೆಹೋವನು ತನ್ನ ಪರಮಾಧಿಕಾರದ ಒಂದು ಹೊಸ ಮಾಧ್ಯಮವನ್ನು ನಿಯೋಜಿಸಿದ್ದು ಏಕೆ?
8, 9. (ಎ) ಮಾನವ ಪರಮಾಧಿಕಾರಿಯೊಬ್ಬನು ತನ್ನ ಆಳ್ವಿಕೆಗೆ ವಿರುದ್ಧ ಏಳುವ ದಂಗೆಯನ್ನು ಹೇಗೆ ನಿಭಾಯಿಸುವನು? (ಬಿ) ಏದೆನಿನ ದಂಗೆಗೆ ಪ್ರತಿಕ್ರಿಯೆಯಲ್ಲಿ ಯೆಹೋವನು ಮಾಡಿದ್ದೇನು?
10. (ಎ) ‘ಸಂತಾನವು’ ಯಾರಾಗಿ ಪರಿಣಮಿಸಿತು? (ಬಿ) ಮೊದಲನೇ ಪ್ರವಾದನೆಯ ನೆರವೇರಿಕೆಯ ಕುರಿತು ಪೌಲನು ಅಂದದ್ದೇನು?
11. ಯೆಹೋವನು ಅಬ್ರಹಾಮನಿಗೆ ಏನನ್ನು ಪ್ರಕಟಪಡಿಸಿದನು?
12. ಜಲಪ್ರಳಯದ ನಂತರ ಸೈತಾನನ ಸಂತತಿಯು ತೋರಿಬಂದದ್ದು ಹೇಗೆ?
13. ಯಾಕೋಬನ ಮೂಲಕವಾಗಿ ಯೆಹೋವನು ಏನನ್ನು ಮುನ್ಸೂಚಿಸಿದನು?
14. ಯೆಹೋವನು ದಾವೀದನೊಂದಿಗೆ ಯಾವ ಒಡಂಬಡಿಕೆಯನ್ನು ಮಾಡಿದನು?
15. ಯೆಹೂದ ರಾಜ್ಯವನ್ನು ದೇವರ ರಾಜ್ಯದ ಸೂಚಕರೂಪವಾಗಿ ವೀಕ್ಷಿಸಲು ಸಾಧ್ಯವಿತ್ತೇಕೆ?
16. ಯೆಹೂದದ ಅರಸರ ಆಳ್ವಿಕೆಯ ಫಲಿತಾಂಶಗಳೇನಾಗಿದ್ದವು?
17. ದಾವೀದನ ರಾಜ್ಯವು ದೊಬ್ಬಲ್ಪಟ್ಟಾಗ್ಯೂ ಯೆಹೋವನು ಇನ್ನೂ ಪೂರ್ಣಾಧಿಕಾರದಲ್ಲಿದ್ದನೆಂದು ಯಾವುದು ತೋರಿಸುತ್ತದೆ?
18. ದೇವದೂತ ಗಬ್ರಿಯೇಲನು ಮರಿಯಳಿಗೆ ಯಾವ ಘೋಷಣೆಯನ್ನು ಮಾಡಿದನು?
19. ಯಾವ ರೋಮಾಂಚಕ ಘಟನಾವಳಿಗಾಗಿ ಸಮಯವು ಹತ್ತಿರವಾಗಿತ್ತು?
[Picture on page 5]
ಅಬ್ರಹಾಮನ ಮೂಲಕ ಯೆಹೋವನು ಏನನ್ನು ಮುನ್ಸೂಚಿಸಿದನು?
[Picture on page 7]
ದಾವೀದನ ರಾಜ್ಯದ ದೊಬ್ಬಿಹಾಕುವಿಕೆಯು ಯೆಹೋವನ ಪರಮಾಧಿಕಾರದ ವೈಫಲ್ಯಕ್ಕೆ ರುಜುವಾತಲ್ಲ ಏಕೆ?