ಕ್ರಿಸ್ತನ ಸಾನ್ನಿಧ್ಯ—ನೀವು ಹೇಗೆ ಅರ್ಥಮಾಡಿಕೊಂಡಿದ್ದೀರಿ?
“ನಿನ್ನ ಸಾನ್ನಿಧ್ಯಕ್ಕೂ ವಿಷಯಗಳ ವ್ಯವಸ್ಥೆಯ ಸಮಾಪ್ತಿಗೂ ಸೂಚನೆಯೇನು?”—ಮತ್ತಾ. 24:3, NW.
1. ಯೇಸುವಿನ ಅಪೊಸ್ತಲರು ಅವನಿಗೆ ಯಾವ ಆಸಕ್ತಿಕರ ಪ್ರಶ್ನೆಯನ್ನು ಕೇಳಿದರು?
ಸುಮಾರು ಎರಡು ಸಾವಿರ ವರುಷಗಳ ಹಿಂದೆ, ಯೇಸುವಿನ ನಾಲ್ಕು ಮಂದಿ ಅಪೊಸ್ತಲರು ಎಣ್ಣೆಯ ಮರಗಳ ಗುಡ್ಡದ ಮೇಲೆ ತಮ್ಮ ಯಜಮಾನನೊಂದಿಗೆ ಪ್ರತ್ಯೇಕವಾಗಿ ಮಾತಾಡುತ್ತಿದ್ದಾಗ ಒಂದು ಪ್ರಶ್ನೆಯನ್ನು ಕೇಳಿದರು. ಅವರು ಕೇಳಿದ್ದು: “ಅದು ಯಾವಾಗ ಆಗುವದು? ನೀನು ಪ್ರತ್ಯಕ್ಷನಾಗುವದಕ್ಕೂ [“ನಿನ್ನ ಸಾನ್ನಿಧ್ಯಕ್ಕೂ,” NW] ಯುಗದ ಸಮಾಪ್ತಿಗೂ [“ವಿಷಯಗಳ ವ್ಯವಸ್ಥೆಯ ಸಮಾಪ್ತಿಗೂ,” NW] ಸೂಚನೆಯೇನು?” (ಮತ್ತಾ. 24:3) ಅಪೊಸ್ತಲರು ಆ ಪ್ರಶ್ನೆಯಲ್ಲಿ ಆಸಕ್ತಿಭರಿತವಾದ ಎರಡು ಅಭಿವ್ಯಕ್ತಿಗಳನ್ನು ಉಪಯೋಗಿಸಿದರು. ಅವು ಯಾವುವೆಂದರೆ, “ನಿನ್ನ ಸಾನ್ನಿಧ್ಯ” ಮತ್ತು “ವಿಷಯಗಳ ವ್ಯವಸ್ಥೆಯ ಸಮಾಪ್ತಿ.” ಆ ಅಭಿವ್ಯಕ್ತಿಗಳು ಏನನ್ನು ಸೂಚಿಸುತ್ತವೆ?
2. “ಸಮಾಪ್ತಿ” ಎಂಬ ಪದವು ಏನನ್ನು ಸೂಚಿಸುತ್ತದೆ?
2 “ಸಮಾಪ್ತಿ” ಎಂಬ ಎರಡನೇ ಅಭಿವ್ಯಕ್ತಿಯನ್ನು ನಾವು ಮೊದಲು ಪರಿಗಣಿಸೋಣ. ಇದು, ಸಿಂಟೀಲೀಅ ಎಂಬ ಗ್ರೀಕ್ ಪದದ ಭಾಷಾಂತರವಾಗಿದೆ. ಈ ಪದವನ್ನು ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ನಲ್ಲಿ ಎಲ್ಲ ಕಡೆಗಳಲ್ಲೂ “ಸಮಾಪ್ತಿ” ಎಂದೇ ಭಾಷಾಂತರಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಗ್ರೀಕ್ ಪದವಾದ ಟೀಲಾಸ್ ಎಂಬುದನ್ನು “ಅಂತ್ಯ” ಎಂದು ಭಾಷಾಂತರಿಸಲಾಗಿದೆ. ಈ ಎರಡು ಪದಗಳ ನಡುವಿರುವ ವ್ಯತ್ಯಾಸವನ್ನು, ರಾಜ್ಯ ಸಭಾಗೃಹದಲ್ಲಿ ಕೊಡಲಾಗುವ ಭಾಷಣವೊಂದನ್ನು ಪರಿಗಣಿಸುವ ಮೂಲಕ ದೃಷ್ಟಾಂತಿಸಸಾಧ್ಯವಿದೆ. ಭಾಷಣದ ಸಮಾಪ್ತಿಯು ಅದರ ಕೊನೆಯ ಭಾಗವಾಗಿದೆ. ಈ ಭಾಗದಲ್ಲಿ ಭಾಷಣಕರ್ತನು ತಾನು ಈಗಾಗಲೇ ಚರ್ಚಿಸಿರುವ ವಿಷಯಗಳನ್ನು ಸಭಿಕರಿಗೆ ಮರುಜ್ಞಾಪಿಸಲು ತುಸು ಸಮಯವನ್ನು ತೆಗೆದುಕೊಳ್ಳುತ್ತಾನೆ ಮತ್ತು ಆ ಮಾಹಿತಿ ಅವರಿಗೆ ಹೇಗೆ ಅನ್ವಯಿಸುತ್ತದೆಂದು ತೋರಿಸುತ್ತಾನೆ. ಭಾಷಣಕರ್ತನು ವೇದಿಕೆಯಿಂದ ಹೊರಟುಹೋಗುವಾಗ ಅದು ಭಾಷಣದ ಅಂತ್ಯವಾಗುತ್ತದೆ. ತದ್ರೀತಿಯಲ್ಲಿ, ಬೈಬಲಿಗನುಸಾರ “ವಿಷಯಗಳ ವ್ಯವಸ್ಥೆಯ ಸಮಾಪ್ತಿ” ಎಂಬ ಅಭಿವ್ಯಕ್ತಿಯು ಅಂತ್ಯದ ವರೆಗೆ ನಡೆಸುವ ಹಾಗೂ ಅಂತ್ಯವನ್ನೂ ಒಳಗೊಂಡ ಸಮಯಾವಧಿಯನ್ನು ಸೂಚಿಸುತ್ತದೆ.
3. ಯೇಸುವಿನ ಸಾನ್ನಿಧ್ಯದ ಸಮಯದಲ್ಲಿ ಸಂಭವಿಸುವ ಕೆಲವು ವಿಷಯಗಳಾವುವು?
3 ಅಪೊಸ್ತಲರ ಪ್ರಶ್ನೆಯಲ್ಲಿದ್ದ “ಸಾನ್ನಿಧ್ಯ” ಎಂಬ ಅಭಿವ್ಯಕ್ತಿಯು ಏನನ್ನು ಸೂಚಿಸುತ್ತದೆ? ಅದು ಪರೂಸೀಅ ಎಂಬ ಗ್ರೀಕ್ ಪದದ ಭಾಷಾಂತರವಾಗಿದೆ.a ಕ್ರಿಸ್ತನ ಪರೂಸೀಅ ಅಥವಾ ಸಾನ್ನಿಧ್ಯವು ಯೇಸು 1914ರಲ್ಲಿ ಸ್ವರ್ಗದಲ್ಲಿ ಅರಸನಾದಾಗ ಆರಂಭವಾಗಿ, ಅವನು ದುಷ್ಟಜನರನ್ನು ನಾಶಗೊಳಿಸಲು ಬರುವ ‘ಮಹಾಸಂಕಟದ’ ವರೆಗೂ ಮುಂದುವರಿಯುತ್ತದೆ. (ಮತ್ತಾ. 24:21) ಯೇಸುವಿನ ಈ ಸಾನ್ನಿಧ್ಯದ ಸಮಯದಲ್ಲಿ ಅನೇಕ ವಿಭಿನ್ನ ಸಂಗತಿಗಳು ನಡೆಯುತ್ತವೆ. ಇದರಲ್ಲಿ ಈ ದುಷ್ಟ ವ್ಯವಸ್ಥೆಯ ‘ಕಡೇ ದಿವಸಗಳು,’ ಆದುಕೊಂಡವರ ಒಟ್ಟುಗೂಡಿಸುವಿಕೆ, ಸ್ವರ್ಗೀಯ ಜೀವನಕ್ಕೆ ಅವರ ಪುನರುತ್ಥಾನವು ಸೇರಿವೆ. (2 ತಿಮೊ. 3:1; 1 ಕೊರಿಂ. 15:23; 1 ಥೆಸ. 4:15-17; 2 ಥೆಸ. 2:1) ಹಾಗಾದರೆ, “ವಿಷಯಗಳ ವ್ಯವಸ್ಥೆಯ ಸಮಾಪ್ತಿ”ಯ (ಸಿಂಟೀಲೀಅ) ಸಮಯಾವಧಿಯು ಕ್ರಿಸ್ತನ ಸಾನ್ನಿಧ್ಯದ (ಪರೂಸೀಅ) ಸಮಯಾವಧಿಗೆ ಅನುರೂಪವಾಗಿದೆ ಅಥವಾ ಸಮಾಂತರವಾಗಿದೆ ಎಂದು ಹೇಳಸಾಧ್ಯವಿದೆ.
ಒಂದು ವಿಸ್ತಾರ ಸಮಯಾವಧಿ
4. ಯೇಸುವಿನ ಸಾನ್ನಿಧ್ಯವು ನೋಹನ ದಿನಗಳ ಘಟನೆಗಳಿಗೆ ಸಮಾಂತರವಾಗಿರುವುದು ಹೇಗೆ?
4 ಪರೂಸೀಅ ಎಂಬ ಪದ ಒಂದು ವಿಸ್ತಾರವಾದ ಸಮಯಾವಧಿಯನ್ನು ಸೂಚಿಸುತ್ತದೆಂಬ ನಿಜತ್ವವು, ಯೇಸು ತನ್ನ ಸಾನ್ನಿಧ್ಯದ ಕುರಿತು ಏನು ಹೇಳಿದನೋ ಅದರೊಂದಿಗೆ ಹೊಂದಿಕೆಯಲ್ಲಿದೆ. (ಮತ್ತಾಯ 24:37-39ನ್ನು ಓದಿ.) ಯೇಸು ತನ್ನ ಸಾನ್ನಿಧ್ಯವನ್ನು ನೋಹನ ಕಾಲದಲ್ಲಿ ಬಂದ ಜಲಪ್ರಳಯದ ಕೇವಲ ಅಲ್ಪ ಸಮಯಕಷ್ಟೇ ಹೋಲಿಸಲಿಲ್ಲ ಎಂಬುದನ್ನು ಗಮನಿಸಿ. ಬದಲಾಗಿ, ಆ ಜಲಪ್ರಳಯಕ್ಕೆ ನಡಿಸಿದ ಹೆಚ್ಚು ದೀರ್ಘ ಸಮಯಾವಧಿಗೆ ಅವನು ತನ್ನ ಸಾನ್ನಿಧ್ಯವನ್ನು ಹೋಲಿಸಿದನು. ಆ ಸಮಯಾವಧಿಯಲ್ಲಿ, ನೋಹನ ನಾವೆಯ ನಿರ್ಮಾಣ, ಅವನ ಸಾರುವ ಕೆಲಸ ಮತ್ತು ಜಲಪ್ರಳಯವು ಉಂಟಾದ ಸಮಯದ ವರೆಗಿನ ಎಲ್ಲ ಸಂಗತಿಗಳು ಸೇರಿದ್ದವು. ಈ ಸಂಗತಿಗಳೆಲ್ಲಾ ಸಂಭವಿಸಲು ಅನೇಕ ದಶಕಗಳು ತಗಲಿದವು. ಅದೇ ರೀತಿಯಲ್ಲಿ, ಕ್ರಿಸ್ತನ ಸಾನ್ನಿಧ್ಯದಲ್ಲಿ, ಮಹಾಸಂಕಟದ ತನಕ ನಡೆಯುವ ಘಟನೆಗಳು ಮತ್ತು ಮಹಾಸಂಕಟವೂ ಸೇರಿರುತ್ತದೆ.—2 ಥೆಸ. 1:6-9.
5. ಪ್ರಕಟನೆ 6ನೆಯ ಅಧ್ಯಾಯದಲ್ಲಿರುವ ಮಾತುಗಳು ಯೇಸುವಿನ ಸಾನ್ನಿಧ್ಯವು ಒಂದು ವಿಸ್ತಾರವಾದ ಸಮಯಾವಧಿಯಾಗಿದೆ ಎಂಬುದನ್ನು ಹೇಗೆ ಸೂಚಿಸುತ್ತವೆ?
5 ಕ್ರಿಸ್ತನ ಸಾನ್ನಿಧ್ಯವು, ಕೇವಲ ದುಷ್ಟರ ನಾಶನಕ್ಕಾಗಿ ಅವನ ಬರೋಣವನ್ನು ಮಾತ್ರ ಸೂಚಿಸುವುದಿಲ್ಲ, ಒಂದು ವಿಸ್ತಾರವಾದ ಸಮಯಾವಧಿಯನ್ನೂ ಸೂಚಿಸುತ್ತದೆಂಬುದನ್ನು ಬೈಬಲಿನ ಇತರ ಪ್ರವಾದನೆಗಳು ಸ್ಪಷ್ಟವಾಗಿ ತೋರಿಸುತ್ತವೆ. ಪ್ರಕಟನೆ ಪುಸ್ತಕವು ಯೇಸು ಒಂದು ಬಿಳಿ ಕುದುರೆಯ ಮೇಲೆ ಸವಾರಿ ಮಾಡುವುದನ್ನು ಮತ್ತು ಅವನಿಗೆ ಒಂದು ಜಯಮಾಲೆ ಅಥವಾ ಕಿರೀಟ ಕೊಡಲಾಗುವುದನ್ನು ಚಿತ್ರಿಸುತ್ತದೆ. (ಪ್ರಕಟನೆ 6:1-8ನ್ನು ಓದಿ.) 1914ರಲ್ಲಿ ಅರಸನಾಗಿ ಕಿರೀಟಧಾರಿಯಾದ ಬಳಿಕ ಅವನನ್ನು “ಜಯಿಸುತ್ತಿರುವವನಾಗಿ ಜಯಿಸುವದಕ್ಕೋಸ್ಕರ” ಹೋಗುವವನಾಗಿ ಚಿತ್ರಿಸಲಾಗಿದೆ. ಅನಂತರ ವಿಭಿನ್ನ ಬಣ್ಣಗಳ ಕುದುರೆಗಳ ರಾಹುತರು ಅವನನ್ನು ಹಿಂಬಾಲಿಸುವುದನ್ನು ಆ ವೃತ್ತಾಂತವು ತೋರಿಸುತ್ತದೆ. ಇವರು ಪ್ರವಾದನಾತ್ಮಕವಾಗಿ ಯುದ್ಧ, ಆಹಾರದ ಕೊರತೆಗಳು ಮತ್ತು ವ್ಯಾಧಿಯನ್ನು ಪ್ರತಿನಿಧೀಕರಿಸುತ್ತಾರೆ ಮತ್ತು ಇವೆಲ್ಲವೂ, “ಕಡೇ ದಿವಸಗಳು” ಎಂದು ಸೂಚಿಸಲ್ಪಟ್ಟಿರುವ ಒಂದು ವಿಸ್ತಾರವಾದ ಸಮಯಾವಧಿಯಲ್ಲಿ ಸಂಭವಿಸಿವೆ. ನಾವು ಈ ಪ್ರವಾದನೆಯ ನೆರವೇರಿಕೆಯನ್ನು ನಮ್ಮ ಜೀವಮಾನದಲ್ಲಿ ನೋಡುತ್ತಿದ್ದೇವೆ.
6. ಪ್ರಕಟನೆ 12ನೇ ಅಧ್ಯಾಯವು ಕ್ರಿಸ್ತನ ಸಾನ್ನಿಧ್ಯದ ವಿಷಯದಲ್ಲಿ ಏನನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯಮಾಡುತ್ತದೆ?
6 ಪ್ರಕಟನೆ 12ನೇ ಅಧ್ಯಾಯವು, ದೇವರ ರಾಜ್ಯ ಸ್ವರ್ಗದಲ್ಲಿ ಸ್ಥಾಪನೆಗೊಳ್ಳುವ ಬಗ್ಗೆ ಇನ್ನೂ ಹೆಚ್ಚು ವಿವರಗಳನ್ನು ಕೊಡುತ್ತದೆ. ಅದೃಶ್ಯ ಕ್ಷೇತ್ರದಲ್ಲಿ ನಡೆಯುವ ಒಂದು ಯುದ್ಧದ ಕುರಿತು ನಾವು ಅಲ್ಲಿ ಓದುತ್ತೇವೆ. ತನ್ನ ಸ್ವರ್ಗೀಯ ಸ್ಥಾನದಲ್ಲಿರುವ ಮೀಕಾಯೇಲನಾದ ಯೇಸು ಕ್ರಿಸ್ತನೂ ಅವನ ದೂತರೂ ಪಿಶಾಚನ ಮತ್ತು ಅವನ ದೆವ್ವಗಳ ವಿರುದ್ಧವಾಗಿ ಹೋರಾಡುತ್ತಾರೆ. ಫಲಿತಾಂಶವಾಗಿ, ಪಿಶಾಚನಾದ ಸೈತಾನನೂ ಅವನ ಸೈನ್ಯಗಳೂ ಭೂಮಿಗೆ ದೊಬ್ಬಲ್ಪಡುತ್ತಾರೆ. ಆಗ ಪಿಶಾಚನು “ತನಗಿರುವ ಕಾಲವು ಸ್ವಲ್ಪವೆಂದು ತಿಳಿದು” ಮಹಾ ರೌದ್ರವುಳ್ಳವನಾಗುತ್ತಾನೆ ಎಂದು ಆ ವೃತ್ತಾಂತ ನಮಗೆ ತಿಳಿಸುತ್ತದೆ. (ಪ್ರಕಟನೆ 12:7-12ನ್ನು ಓದಿ.) ಹೀಗೆ, ಸ್ವರ್ಗದಲ್ಲಿ ಕ್ರಿಸ್ತನ ರಾಜ್ಯದ ಸ್ಥಾಪನೆಯ ಬಳಿಕ ಭೂಮಿಗೂ ಅದರ ನಿವಾಸಿಗಳಿಗೂ ಹೆಚ್ಚು ‘ದುರ್ಗತಿಯ’ ಸಮಯಾವಧಿಯು ಬರುತ್ತದೆಂಬುದು ಸ್ಪಷ್ಟ.
7. ಎರಡನೆಯ ಕೀರ್ತನೆ ಯಾವುದರ ಕುರಿತು ತಿಳಿಸುತ್ತದೆ ಮತ್ತು ಯಾವ ಅವಕಾಶದ ಕುರಿತು ಅಲ್ಲಿ ವರ್ಣಿಸಲಾಗಿದೆ?
7 ಇದೇ ರೀತಿಯಲ್ಲಿ, ಎರಡನೆಯ ಕೀರ್ತನೆಯು ಸ್ವರ್ಗೀಯ ಚೀಯೋನ್ ಪರ್ವತದಲ್ಲಿ ಯೇಸುವು ರಾಜನಾಗಿ ಪಟ್ಟಾಭಿಷೇಕಿಸಲ್ಪಡುವ ಕುರಿತು ಪ್ರವಾದನಾತ್ಮಕವಾಗಿ ಹೇಳುತ್ತದೆ. (ಕೀರ್ತನೆ 2:5-9; 110:1, 2ನ್ನು ಓದಿ.) ಅಲ್ಲದೆ, ಈ ಕೀರ್ತನೆಯು ಭೂರಾಜರಿಗೂ ಅವರ ಪ್ರಜೆಗಳಿಗೂ ಕ್ರಿಸ್ತನ ಆಳ್ವಿಕೆಗೆ ಅಧೀನರಾಗಲು ಅವಕಾಶ ಕೊಡಲಾಗುವ ಒಂದು ಸಮಯಾವಧಿ ಇದೆಯೆಂದು ಸಹ ಸೂಚಿಸುತ್ತದೆ. ‘ವಿವೇಕಿಗಳಾಗಿ’ ‘ಬುದ್ಧಿಮಾತುಗಳಿಗೆ ಕಿವಿಕೊಡುವಂತೆ [‘ತಿದ್ದಿಕೊಳ್ಳುವಂತೆ,’ NW]’ ಅವರಿಗೆ ಹೇಳಲಾಗುತ್ತದೆ. ಹೌದು, ಆ ಸಮಯದಲ್ಲಿ ಯೆಹೋವನನ್ನೂ ಆತನ ನೇಮಿತ ಅರಸನನ್ನೂ ಸೇವಿಸುವ ಮೂಲಕ “[ದೇವರ] ಮರೆಹೊಕ್ಕವರೆಲ್ಲರು ಧನ್ಯರು” ಎಣಿಸಿಕೊಳ್ಳುವರು. ಹಾಗಾದರೆ ರಾಜ್ಯಾಧಿಕಾರ ಪಡೆದ ಯೇಸುವಿನ ಸಾನ್ನಿಧ್ಯದಲ್ಲಿ ಭೂ ಅರಸರಿಗೆ ಮತ್ತು ಅವರ ಪ್ರಜೆಗಳಿಗೆ ತಮ್ಮನ್ನು ತಿದ್ದಿಕೊಳ್ಳಲು ಒಂದು ಸಮಯಾವಕಾಶ ಇರುವುದು.—ಕೀರ್ತ. 2:10-12.
ಸೂಚನೆಯನ್ನು ಗುರುತಿಸುವುದು
8, 9. ಕ್ರಿಸ್ತನ ಸಾನ್ನಿಧ್ಯದ ಸೂಚನೆಯನ್ನು ಗುರುತಿಸಿ ಅದರ ಅರ್ಥವನ್ನು ಗ್ರಹಿಸುವವರು ಯಾರು?
8 ದೇವರ ರಾಜ್ಯ ಬರುವ ಸಮಯದ ಬಗ್ಗೆ ಫರಿಸಾಯರು ಪ್ರಶ್ನಿಸಿದಾಗ, ಅವರು ಅಂದುಕೊಂಡಿದ್ದಂತೆ ಅದು “ಪ್ರತ್ಯಕ್ಷವಾಗಿ ಬರುವಂಥದಲ್ಲ” ಎಂದು ಯೇಸು ಉತ್ತರಕೊಟ್ಟನು. (ಲೂಕ 17:20, 21) ಇದು ಅವಿಶ್ವಾಸಿಗಳಿಗೆ ಅರ್ಥವಾಗಲಿಲ್ಲ. ಹೇಗೆ ಅರ್ಥವಾದೀತು? ಅವರು ಯೇಸುವನ್ನು ತಮ್ಮ ಭಾವೀ ಅರಸನಾಗಿ ಗುರುತಿಸಲೂ ಇಲ್ಲವಲ್ಲಾ. ಹಾಗಾದರೆ, ಕ್ರಿಸ್ತನ ಸಾನ್ನಿಧ್ಯದ ಸೂಚನೆಯನ್ನು ಗುರುತಿಸುವವರೂ ಅದರ ಮಹತ್ವವನ್ನು ಅರ್ಥಮಾಡಿಕೊಳ್ಳುವವರೂ ಯಾರು?
9 ತನ್ನ ಶಿಷ್ಯರಾದರೊ ಈ ಸೂಚನೆಯನ್ನು, “ಮಿಂಚು ಮಿಂಚುತ್ತಾ ಆಕಾಶದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಯ ವರೆಗೂ ಹೇಗೆ ಹೊಳೆಯುವದೋ” ಹಾಗೆಯೇ ಸ್ಪಷ್ಟವಾಗಿ ನೋಡುವರೆಂದು ಯೇಸು ಹೇಳಿದನು. (ಲೂಕ 17:24-29ನ್ನು ಓದಿ.) ಮತ್ತಾಯ 24:23-27 ಸಹ ಯೇಸು ಕ್ರಿಸ್ತನು ತನ್ನ ಸಾನ್ನಿಧ್ಯದ ಸೂಚನೆಯ ಕುರಿತು ಮಾತಾಡುತ್ತಿದ್ದನೆಂದು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಗಮನಿಸುವುದು ಆಸಕ್ತಿಕರವಾಗಿದೆ.
ಆ ಸೂಚನೆಯನ್ನು ನೋಡುವ ಸಂತತಿ
10, 11. (ಎ) ಮತ್ತಾಯ 24:34ರಲ್ಲಿರುವ “ಸಂತತಿ”ಯ ಕುರಿತು ಈ ಹಿಂದೆ ಯಾವ ವಿವರಣೆಯನ್ನು ಕೊಡಲಾಗಿತ್ತು? (ಬಿ) ಆ “ಸಂತತಿ”ಯಲ್ಲಿ ಯಾರು ಒಳಗೂಡಿದ್ದರೆಂದು ಯೇಸುವಿನ ಶಿಷ್ಯರು ನಿಸ್ಸಂದೇಹವಾಗಿ ಅರ್ಥಮಾಡಿಕೊಂಡಿದ್ದರು?
10 ಹಿಂದೆ ಈ ಪತ್ರಿಕೆಯು, ಮತ್ತಾಯ 24:34ರಲ್ಲಿ ಹೇಳಿರುವ “ಈ ಸಂತತಿ,” ಒಂದನೆಯ ಶತಮಾನದಲ್ಲಿ ‘ನಂಬಿಕೆಯಿಲ್ಲದ ಯೆಹೂದ್ಯರ ಸಮಕಾಲೀನ ಸಂತತಿಯನ್ನು’ ಸೂಚಿಸುತ್ತದೆ ಎಂದು ವಿವರಿಸಿತ್ತು.b ಆ ವಿವರಣೆ ಆಗ ನ್ಯಾಯಸಮ್ಮತವಾಗಿ ತೋರಿತು, ಏಕೆಂದರೆ ಯೇಸು ಇತರ ಎಲ್ಲ ಕಡೆಗಳಲ್ಲಿ ಉಪಯೋಗಿಸಿದ “ಸಂತತಿ” ಎಂಬ ಪದವು ನಕಾರಾತ್ಮಕ ಅರ್ಥವನ್ನೇ ಕೊಟ್ಟಿತು. ಮಾತ್ರವಲ್ಲ, ಅನೇಕ ಸಲ ಆ ಸಂತತಿಯನ್ನು ವರ್ಣಿಸಲು “ಕೆಟ್ಟ” ಎಂಬಂಥ ನಕಾರಾತ್ಮಕ ಗುಣವಾಚಕವನ್ನು ಅವನು ಉಪಯೋಗಿಸಿದನು. (ಮತ್ತಾ. 12:39; 17:17; ಮಾರ್ಕ 8:38) ಆದಕಾರಣ, ಆಧುನಿಕ ದಿನದ ನೆರವೇರಿಕೆಯಲ್ಲಿ, ಈ ‘ವಿಷಯಗಳ ವ್ಯವಸ್ಥೆಯ ಸಮಾಪ್ತಿಯ’ (ಸಿಂಟೀಲೀಅ) ವೈಶಿಷ್ಟ್ಯ ಮತ್ತು ಈ ವ್ಯವಸ್ಥೆಯ ಅಂತ್ಯ (ಟೀಲಾಸ್) ಇವೆರಡನ್ನೂ ನೋಡುವ ಅವಿಶ್ವಾಸಿಗಳ “ಸಂತತಿ”ಯನ್ನು ಯೇಸು ಸೂಚಿಸುತ್ತಿದ್ದನೆಂದು ನೆನಸಲಾಗಿತ್ತು.
11 ಯೇಸು “ಸಂತತಿ” ಎಂಬ ಪದವನ್ನು ನಕಾರಾತ್ಮಕವಾಗಿ ಬಳಸಿದಾಗ, ಅವನು ತನ್ನ ದಿನಗಳಲ್ಲಿದ್ದ ದುಷ್ಟರೊಂದಿಗೆ ಅಥವಾ ಅವರ ವಿಷಯವಾಗಿ ಮಾತಾಡುತ್ತಿದ್ದನೆಂಬುದು ನಿಜ. ಆದರೆ ಮತ್ತಾಯ 24:34ರಲ್ಲಿರುವ “ಸಂತತಿ” ಅವನ ದಿನಗಳಲ್ಲಿದ್ದ ದುಷ್ಟರನ್ನೇ ಸೂಚಿಸಬೇಕೋ? ಯೇಸುವಿನ ನಾಲ್ಕು ಮಂದಿ ಶಿಷ್ಯರು ಅವನನ್ನು “ಪ್ರತ್ಯೇಕವಾಗಿ” ಸಮೀಪಿಸಿದ್ದರೆಂಬುದನ್ನು ಜ್ಞಾಪಿಸಿಕೊಳ್ಳಿ. (ಮತ್ತಾ. 24:3) ಯೇಸು “ಈ ಸಂತತಿ”ಯ ಕುರಿತು ಅವರೊಂದಿಗೆ ಮಾತಾಡಿದಾಗ ನಕಾರಾತ್ಮಕ ಗುಣವಾಚಕಗಳನ್ನು ಬಳಸಲಿಲ್ಲ. ಆದುದರಿಂದ, ಆ ಅಪೊಸ್ತಲರು ಮತ್ತು ಜೊತೆಶಿಷ್ಯರು “ಇದೆಲ್ಲಾ ಆಗುವ ತನಕ” ಅಳಿದು ಹೋಗದ “ಸಂತತಿ”ಯ ಭಾಗವಾಗಿದ್ದರೆಂದು ಅವರು ಅರ್ಥಮಾಡಿಕೊಂಡರು ಎಂಬುದರಲ್ಲಿ ಸಂದೇಹವಿಲ್ಲ.
12. ಯೇಸು “ಸಂತತಿ” ಎಂದು ಉಪಯೋಗಿಸಿದಾಗ ಯಾರಿಗೆ ಸೂಚಿಸುತ್ತಿದ್ದನೆಂಬುದರ ಕುರಿತು ಪೂರ್ವಾಪರ ಏನನ್ನು ತಿಳಿಯಪಡಿಸುತ್ತದೆ?
12 ನಾವು ಯಾವ ಆಧಾರದ ಮೇಲೆ ಆ ತೀರ್ಮಾನಕ್ಕೆ ಬರಬಲ್ಲೆವು? ಜಾಗರೂಕತೆಯಿಂದ ಪೂರ್ವಾಪರಗಳನ್ನು ಪರಿಗಣಿಸುವ ಮೂಲಕವೇ. ಮತ್ತಾಯ 24:32, 33ರಲ್ಲಿ ದಾಖಲಿಸಿರುವಂತೆ ಯೇಸು ಹೇಳಿದ್ದು: “ಅಂಜೂರದ ಮರದ ದೃಷ್ಟಾಂತದಿಂದ ಬುದ್ಧಿಕಲಿಯಿರಿ. ಅದರ ಕೊಂಬೆ ಇನ್ನೂ ಎಳೆಯದಾಗಿದ್ದು ಎಲೆ ಬಿಡುವಾಗ ಬೇಸಿಗೆಯು ಹತ್ತರವಾಯಿತೆಂದು ತಿಳುಕೊಳ್ಳುತ್ತೀರಲ್ಲಾ. ಹಾಗೆಯೇ ನೀವು ಸಹ ಇದನ್ನೆಲ್ಲಾ ನೋಡುವಾಗ ಆ ದಿನವು ಹತ್ತರವದೆ, ಬಾಗಲಲ್ಲೇ ಅದೆ [“ಅವನು ಹತ್ತಿರದಲ್ಲಿ, ಬಾಗಲಲ್ಲೇ ಇದ್ದಾನೆ,” NW] ಎಂದು ತಿಳುಕೊಳ್ಳಿರಿ.” (ಮಾರ್ಕ 13:28-30ನ್ನು ಹೋಲಿಸಿ; ಲೂಕ 21:30-32.) ಬಳಿಕ ಮತ್ತಾಯ 24:34ರಲ್ಲಿ ನಾವು ಓದುವುದು: “ಇದೆಲ್ಲಾ ಆಗುವ ತನಕ ಈ ಸಂತತಿಯು ಅಳಿದುಹೋಗುವದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.”
13, 14. ಯೇಸು ಸೂಚಿಸಿದ “ಸಂತತಿ”ಯು ಅವನ ಶಿಷ್ಯರೇ ಆಗಿದ್ದಿರಬೇಕೆಂದು ನಾವು ಏಕೆ ಹೇಳಸಾಧ್ಯವಿದೆ?
13 ಸ್ವಲ್ಪದರಲ್ಲಿ ಪವಿತ್ರಾತ್ಮದಿಂದ ಅಭಿಷಿಕ್ತರಾಗಲಿದ್ದ ತನ್ನ ಶಿಷ್ಯರೇ, “ಇದೆಲ್ಲಾ” ಆಗುವುದನ್ನು ನೋಡಿದಾಗ ಅವುಗಳ ಅರ್ಥವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಶಕ್ತರೆಂದು ಯೇಸು ಹೇಳಿದನು. ಆದುದರಿಂದ, “ಇದೆಲ್ಲಾ ಆಗುವ ತನಕ ಈ ಸಂತತಿಯು ಅಳಿದುಹೋಗುವದೇ ಇಲ್ಲ” ಎಂದು ಯೇಸು ಹೇಳಿದಾಗ ಅವನು ತನ್ನ ಶಿಷ್ಯರನ್ನೇ ಸೂಚಿಸುತ್ತಿದ್ದಿರಬೇಕು.
14 ಅವಿಶ್ವಾಸಿಗಳಿಗೆ ಅಸದೃಶವಾಗಿ, ಯೇಸುವಿನ ಶಿಷ್ಯರು ಆ ಸೂಚನೆಯನ್ನು ನೋಡಲಿದ್ದರು ಮಾತ್ರವಲ್ಲ, ಅದರ ಮಹತ್ವಾರ್ಥವನ್ನೂ ಗ್ರಹಿಸಲಿದ್ದರು. ಅವರು ಆ ಸೂಚನೆಯ ಲಕ್ಷಣಗಳಿಂದ ‘ಕಲಿತು’ ಅವುಗಳ ನಿಜಾರ್ಥವನ್ನು ‘ತಿಳುಕೊಳ್ಳಲಿದ್ದರು.’ “ಅವನು ಹತ್ತಿರದಲ್ಲಿ, ಬಾಗಲಲ್ಲೇ ಇದ್ದಾನೆ” ಎಂದು ಅವರು ಪೂರ್ಣವಾಗಿ ಅರಿತುಕೊಳ್ಳಲಿದ್ದರು. ಪ್ರಥಮ ಶತಮಾನದಲ್ಲಿ ಯೇಸುವಿನ ಮಾತುಗಳ ಸೀಮಿತ ನೆರವೇರಿಕೆಯನ್ನು ಅವಿಶ್ವಾಸಿಗಳಾದ ಯೆಹೂದ್ಯರು ಮತ್ತು ನಂಬಿಗಸ್ತ ಅಭಿಷಿಕ್ತ ಕ್ರೈಸ್ತರು ನೋಡಿದ್ದು ನಿಜವಾದರೂ, ಆಗ ಇದ್ದ ಅವನ ಅಭಿಷಿಕ್ತ ಹಿಂಬಾಲಕರು ಮಾತ್ರವೇ ಆ ಘಟನೆಗಳಿಂದ ಕಲಿತುಕೊಳ್ಳಲು ಅಂದರೆ ತಾವು ನೋಡಿದ್ದರ ನಿಜಾರ್ಥವನ್ನು ಗ್ರಹಿಸಿಕೊಳ್ಳಲು ಶಕ್ತರಾದರು.
15. (ಎ) ಆಧುನಿಕ ದಿನದಲ್ಲಿ, ಯೇಸು ಸೂಚಿಸಿದ “ಸಂತತಿ” ಯಾರಾಗಿದ್ದಾರೆ? (ಬಿ) ಈ “ಸಂತತಿ”ಯ ಕಾಲಾವಧಿಯನ್ನು ನಾವು ಏಕೆ ನಿಖರವಾಗಿ ಲೆಕ್ಕಹಾಕಶಕ್ತರಲ್ಲ? (ಪುಟ 25ರಲ್ಲಿರುವ ಚೌಕವನ್ನು ನೋಡಿ.)
15 ಇಂದು ಆಧ್ಯಾತ್ಮಿಕ ತಿಳಿವಳಿಕೆ ಇಲ್ಲದಿರುವವರು, ಯೇಸುವಿನ ಸಾನ್ನಿಧ್ಯದ ಸಂಬಂಧದಲ್ಲಿ “ಪ್ರತ್ಯಕ್ಷವಾಗಿ ಬರುವಂಥ” ಯಾವುದೇ ಸೂಚನೆ ಕಂಡುಬಂದಿರುವುದಿಲ್ಲವೆಂದು ನೆನಸಿದ್ದಾರೆ. ಎಲ್ಲವೂ ಗತಕಾಲದಲ್ಲಿದ್ದಂತೆಯೇ ಮುಂದೆ ಸಾಗುತ್ತಿದೆಯೆಂದು ಅವರು ತರ್ಕಿಸುತ್ತಾರೆ. (2 ಪೇತ್ರ 3:4) ಆದರೆ ಕ್ರಿಸ್ತನ ನಂಬಿಗಸ್ತ ಅಭಿಷಿಕ್ತ ಸಹೋದರರಾದ ಆಧುನಿಕ ದಿನದ ಯೋಹಾನ ವರ್ಗದವರು ಈ ಸೂಚನೆಯನ್ನು ಅದು ಮಿಂಚಿನ ಹೊಳಪೊ ಎಂಬಂತೆ ಗುರುತಿಸಿ ಅದರ ನಿಜಾರ್ಥವನ್ನು ತಿಳಿದುಕೊಂಡಿದ್ದಾರೆ. ಈ ಅಭಿಷಿಕ್ತರು ಒಂದು ವರ್ಗವಾಗಿ, “ಇದೆಲ್ಲಾ ಆಗುವ ತನಕ ಅಳಿದು” ಹೋಗದಿರುವ ಆಧುನಿಕ ದಿನದ “ಸಂತತಿ”ಯಾಗಿದ್ದಾರೆ.c ಇದು ಸೂಚಿಸುವುದೇನಂದರೆ, ಮುಂತಿಳಿಸಲ್ಪಟ್ಟಿರುವ ಮಹಾ ಸಂಕಟವು ಪ್ರಾರಂಭಗೊಳ್ಳುವಾಗ ಕ್ರಿಸ್ತನ ಅಭಿಷಿಕ್ತ ಸಹೋದರರಲ್ಲಿ ಕೆಲವರು ಇನ್ನೂ ಭೂಮಿಯ ಮೇಲೆ ಜೀವಿಸುತ್ತಿರುವರು.
“ಎಚ್ಚರವಾಗಿರಿ”
16. ಕ್ರಿಸ್ತನ ಶಿಷ್ಯರೆಲ್ಲರೂ ಏನು ಮಾಡತಕ್ಕದ್ದು?
16 ಹಾಗಿದ್ದರೂ ಸೂಚನೆಯನ್ನು ಗುರುತಿಸುವುದಕ್ಕಿಂತ ಹೆಚ್ಚಿನದ್ದು ಆವಶ್ಯಕ. ಯೇಸು ಮುಂದುವರಿಸಿದ್ದು: “ನಾನು ನಿಮಗೆ ಹೇಳಿದ್ದನ್ನು ಎಲ್ಲರಿಗೂ ಹೇಳುತ್ತೇನೆ, ಎಚ್ಚರವಾಗಿರಿ.” (ಮಾರ್ಕ 13:37) ನಾವು ಅಭಿಷಿಕ್ತರಾಗಿರಲಿ ಮಹಾ ಸಮೂಹದವರಾಗಿರಲಿ ಎಲ್ಲರೂ ಎಚ್ಚರವಾಗಿರುವುದು ಇಂದು ಅತಿ ಪ್ರಾಮುಖ್ಯ. 1914ರಲ್ಲಿ ಯೇಸು ಸ್ವರ್ಗದಲ್ಲಿ ಅರಸನಾದಂದಿನಿಂದ ಈಗಾಗಲೇ ತೊಂಭತ್ತಕ್ಕಿಂತಲೂ ಹೆಚ್ಚು ವರುಷಗಳು ದಾಟಿವೆ. ನಮಗೆ ಕಷ್ಟಕರವಾಗಿರಬಹುದಾದರೂ ನಾವು ಸಿದ್ಧರಾಗಿದ್ದು ಎಚ್ಚರವಾಗಿ ಇರಬೇಕು. ಕ್ರಿಸ್ತನು ಈಗ ಅದೃಶ್ಯವಾಗಿ ರಾಜ್ಯಾಧಿಕಾರ ನಡೆಸುತ್ತಿದ್ದಾನೆ ಎಂಬ ತಿಳಿವಳಿಕೆಯು ನಮಗೆ ಎಚ್ಚರವಾಗಿರಲು ಸಹಾಯಮಾಡುತ್ತದೆ. ಮಾತ್ರವಲ್ಲ ಇದು, ಅವನು ಬೇಗನೆ ತನ್ನ ವೈರಿಗಳನ್ನು ನಾಶಮಾಡಲು “[ನಾವು] ನೆನಸದ ಗಳಿಗೆಯಲ್ಲಿ” ಬರುವನೆಂಬ ನಿಜತ್ವದ ಕುರಿತೂ ನಾವು ಜಾಗೃತವಾಗಿರುವಂತೆ ಮಾಡುತ್ತದೆ.—ಲೂಕ 12:40.
17. ಕ್ರಿಸ್ತನ ಸಾನ್ನಿಧ್ಯದ ಕುರಿತಾದ ತಿಳಿವಳಿಕೆಯು ನಮಲ್ಲಿ ಯಾವ ಭಾವನೆಯನ್ನು ಮೂಡಿಸಬೇಕು ಮತ್ತು ನಾವು ಏನು ಮಾಡಲು ದೃಢಚಿತ್ತರಾಗಿರಬೇಕು?
17 ಕ್ರಿಸ್ತನ ಸಾನ್ನಿಧ್ಯದ ವಿಷಯದಲ್ಲಿ ನಮಗಿರುವ ತಿಳಿವಳಿಕೆಯು ನಮ್ಮ ತುರ್ತಿನ ಭಾವನೆಯನ್ನು ಇನ್ನಷ್ಟು ತೀಕ್ಷ್ಣಗೊಳಿಸಲು ಸಹಾಯಮಾಡುತ್ತದೆ. ಯೇಸುವಿನ ಸಾನ್ನಿಧ್ಯ ಈಗಾಗಲೇ ಆರಂಭವಾಗಿದೆಯೆಂದು ಮತ್ತು ಅವನು 1914ರಿಂದ ಸ್ವರ್ಗದಲ್ಲಿ ಅದೃಶ್ಯವಾಗಿ ಆಳುತ್ತಿದ್ದಾನೆಂದು ನಮಗೆ ತಿಳಿದದೆ. ಅವನು ಬೇಗನೆ ದುಷ್ಟರನ್ನು ನಾಶಮಾಡಲು ಬರುವನು ಮತ್ತು ಇಡೀ ಭೂಮಿಯಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡುವನು. ಆದುದರಿಂದ, ಯೇಸು ಮುಂತಿಳಿಸಿದ ಸಾರುವ ಕೆಲಸದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ನಿರತರಾಗಿರಲು ದೃಢಚಿತ್ತರಾಗಿರಬೇಕು. ಅವನು ಹೇಳಿದ್ದು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು [ಟೀಲಾಸ್] ಬರುವದು.”—ಮತ್ತಾ. 24:14.
[ಪಾದಟಿಪ್ಪಣಿಗಳು]
a ಸವಿವರ ಚರ್ಚೆಗಾಗಿ ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್, ಸಂಪುಟ 2, ಪುಟ 676-9ನ್ನು ನೋಡಿ.
b 1995, ನವೆಂಬರ್ 1ರ ಕಾವಲಿನಬುರುಜು, ಪುಟ 11-15, 19, 30, 31ನ್ನು ನೋಡಿ.
c “ಈ ಸಂತತಿ” ಜೀವಿಸುವ ಸಮಯಾವಧಿಯು ಪ್ರಕಟನೆ ಪುಸ್ತಕದ ಒಂದನೆಯ ದರ್ಶನವು ಆವರಿಸುವ ಸಮಯಾವಧಿಗೆ ಸಮಾಂತರವಾಗಿರುವಂತೆ ತೋರಿಬರುತ್ತದೆ. (ಪ್ರಕ. 1:10–3:22) ಕರ್ತನ ದಿನದ ಈ ಅಂಶವು 1914ರಿಂದ ಹಿಡಿದು ನಂಬಿಗಸ್ತ ಅಭಿಷಿಕ್ತರಲ್ಲಿ ಕೊನೆಯವನು ಸತ್ತು ಪುನರುತ್ಥಾನ ಹೊಂದುವ ವರೆಗೆ ವಿಸ್ತರಿಸುತ್ತದೆ.—ಪ್ರಕಟನೆ—ಅದರ ಮಹಾ ಪರಮಾವಧಿ ಹತ್ತಿರ! ಪುಟ 24, ಪ್ಯಾರ 4ನ್ನು ನೋಡಿ.
ನೀವು ಹೇಗೆ ಉತ್ತರಿಸುವಿರಿ?
• ಯೇಸುವಿನ ಸಾನ್ನಿಧ್ಯವು ಒಂದು ವಿಸ್ತಾರ ಸಮಯಾವಧಿಯಾಗಿದೆ ಎಂದು ನಮಗೆ ಹೇಗೆ ಗೊತ್ತು?
• ಯೇಸುವಿನ ಸಾನ್ನಿಧ್ಯದ ಸೂಚನೆಯನ್ನು ಗುರುತಿಸಿ ಅದರ ಅರ್ಥವನ್ನು ತಿಳಿಯುವವರು ಯಾರು?
• ಆಧುನಿಕ ದಿನದಲ್ಲಿ, ಮತ್ತಾಯ 24:34ರಲ್ಲಿರುವ ಸಂತತಿ ಯಾರಾಗಿದ್ದಾರೆ?
• “ಈ ಸಂತತಿ”ಯ ನಿರ್ದಿಷ್ಟ ಕಾಲಾವಧಿಯನ್ನು ಲೆಕ್ಕಿಸಲು ನಾವು ಏಕೆ ಅಶಕ್ತರು?
[ಪುಟ 25ರಲ್ಲಿರುವ ಚೌಕ]
‘ಈ ಸಂತತಿಯ’ ಕಾಲಾವಧಿಯನ್ನು ನಾವು ಲೆಕ್ಕಹಾಕಬಲ್ಲೆವೋ?
“ಸಂತತಿ” ಎಂಬ ಪದವು ಸಾಮಾನ್ಯವಾಗಿ ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಅಥವಾ ಘಟನೆಯ ಸಮಯದಲ್ಲಿ ಜೀವಿಸುತ್ತಿರುವ ವಿವಿಧ ವಯಸ್ಸಿನ ಜನರಿಗೆ ಸೂಚಿಸುತ್ತದೆ. ದೃಷ್ಟಾಂತಕ್ಕೆ, ವಿಮೋಚನಕಾಂಡ 1:6 ಹೇಳುವದು: “ಬಳಿಕ ಯೋಸೇಫನೂ ಅವನ ಅಣ್ಣತಮ್ಮಂದಿರೂ ಆ ಕಾಲದಲ್ಲಿದ್ದವರೆಲ್ಲರೂ [“ಆ ಸಂತತಿಯವರೆಲ್ಲರೂ,” NIBV] ಗತಿಸಿಹೋದರು.” ಯೋಸೇಫನು ಮತ್ತು ಅವನ ಸಹೋದರರು ವಿವಿಧ ವಯಸ್ಸಿನವರಾಗಿದ್ದರು. ಆದರೂ ಅವರು ಒಂದೇ ಕಾಲಾವಧಿಯಲ್ಲಿ ಒಂದು ಸಾಮಾನ್ಯ ಅನುಭವದಲ್ಲಿ ಪಾಲಿಗರಾದರು. ‘ಆ ಸಂತತಿಯಲ್ಲಿ’ ಯೋಸೇಫನಿಗಿಂತ ಮುಂಚೆ ಹುಟ್ಟಿದ್ದ ಅವನ ಸಹೋದರರಿದ್ದರು. ಇವರಲ್ಲಿ ಕೆಲವರು ಯೋಸೇಫನ ಮರಣಾನಂತರವೂ ಬದುಕಿದ್ದರು. (ಆದಿ. 50:24) ‘ಆ ಸಂತತಿಯಲ್ಲಿದ್ದ’ ಬೆನ್ಯಾಮೀನನಂಥ ಇತರರು ಯೋಸೇಫನ ಅನಂತರ ಹುಟ್ಟಿ, ಅವನು ಸತ್ತ ಬಳಿಕವೂ ಜೀವಿಸಿದ್ದಿರಬಹುದು.
ಹೀಗೆ ಒಂದು ನಿರ್ದಿಷ್ಟ ಸಮಯದಲ್ಲಿ ಜೀವಿಸುತ್ತಿದ್ದ ಜನರನ್ನು ಸೂಚಿಸುತ್ತ, “ಸಂತತಿ” ಎಂಬ ಪದವು ಉಪಯೋಗಿಸಲ್ಪಡುವಾಗ, ಅದರ ನಿರ್ದಿಷ್ಟ ಕಾಲಾವಧಿಯನ್ನು ಹೇಳಲು ಸಾಧ್ಯವಾಗುವುದಿಲ್ಲ; ಅದರ ಅವಧಿಯು ತುಂಬಾ ಉದ್ದವಾಗಿರುವುದಿಲ್ಲ ಮತ್ತು ಅದು ಅಂತ್ಯಗೊಳ್ಳುತ್ತದೆ ಎಂದಷ್ಟೇ ಹೇಳಬಹುದು. ಆದಕಾರಣ, ಮತ್ತಾಯ 24:34ರಲ್ಲಿರುವ “ಈ ಸಂತತಿ” ಎಂಬ ಪದವನ್ನು ಬಳಸುವ ಮೂಲಕ ಯೇಸು, “ಕಡೇ ದಿವಸಗಳು” ಯಾವಾಗ ಅಂತ್ಯಗೊಳ್ಳುವುವು ಎಂದು ನಿರ್ಣಯಿಸಶಕ್ತರಾಗುವಂತೆ ತನ್ನ ಶಿಷ್ಯರಿಗೆ ಒಂದು ಸೂತ್ರವನ್ನು ಕೊಡಲಿಲ್ಲ. ಅದರ ಬದಲಿಗೆ, “ಆ ದಿನದ ವಿಷಯವೂ ಆ ಗಳಿಗೆಯ ವಿಷಯವೂ” ಅವರಿಗೆ ತಿಳಿಯದೆಂಬುದನ್ನು ಯೇಸು ಒತ್ತಿಹೇಳಿದನು.—2 ತಿಮೊ. 3:1; ಮತ್ತಾ. 24:36.
[ಪುಟ 22, 23ರಲ್ಲಿರುವ ಚಿತ್ರ]
ಯೇಸು 1914ರಲ್ಲಿ ಅರಸನಾಗಿ ಕಿರೀಟಧಾರಿಯಾದ ಬಳಿಕ, ಅವನನ್ನು “ಜಯಿಸುತ್ತಿರುವವನಾಗಿ” ಚಿತ್ರಿಸಲಾಗಿದೆ
[ಪುಟ 24ರಲ್ಲಿರುವ ಚಿತ್ರ]
“ಇದೆಲ್ಲಾ ಆಗುವ ತನಕ ಈ ಸಂತತಿಯು ಅಳಿದು ಹೋಗುವದೇ ಇಲ್ಲ”