ದಾಂಪತ್ಯದಲ್ಲಿ ಆನಂದವನ್ನು ಕಂಡುಕೊಳ್ಳಿರಿ
“ಮನೆಯನ್ನು ಕಟ್ಟುವದಕ್ಕೆ ಜ್ಞಾನವೇ ಸಾಧನ; ಅದನ್ನು ಸ್ಥಿರಪಡಿಸುವದಕ್ಕೆ ವಿವೇಕವೇ [“ವಿವೇಚನೆಯೇ,” NW] ಆಧಾರ.”—ಜ್ಞಾನೋ. 24:3.
1. ಪ್ರಥಮ ಪುರುಷನ ವಿಷಯದಲ್ಲಿ ದೇವರು ವಿವೇಕವನ್ನು ಹೇಗೆ ತೋರಿಸಿದನು?
ವಿವೇಕಿಯಾದ ನಮ್ಮ ಸ್ವರ್ಗೀಯ ತಂದೆಗೆ ನಮಗೇನು ಒಳ್ಳೇದೆಂದು ಚೆನ್ನಾಗಿ ತಿಳಿದಿದೆ. ದೃಷ್ಟಾಂತಕ್ಕೆ, ಏದೆನ್ ತೋಟದಲ್ಲಿ ತನ್ನ ಉದ್ದೇಶ ಪೂರೈಸಲು “ಮನುಷ್ಯನು ಒಂಟಿಗನಾಗಿರುವದು ಒಳ್ಳೇದಲ್ಲ” ಎಂದು ಆತನು ತಿಳಿದುಕೊಂಡನು. ಆ ಉದ್ದೇಶದಲ್ಲಿ ಒಂದು ಪ್ರಧಾನ ಭಾಗವು, ವಿವಾಹಿತರು ಮಕ್ಕಳನ್ನು ಪಡೆದು ‘ಭೂಮಿಯನ್ನು ತುಂಬಿಕೊಳ್ಳುವುದಾಗಿತ್ತು.’—ಆದಿ. 1:28; 2:18.
2. ಮಾನವಕುಲದ ಪ್ರಯೋಜನಾರ್ಥವಾಗಿ ಯೆಹೋವನು ಯಾವ ಏರ್ಪಾಡನ್ನು ಮಾಡಿದನು?
2 “ಅವನಿಗೆ ಸರಿಬೀಳುವ ಸಹಕಾರಿಯನ್ನು ಉಂಟುಮಾಡುವೆನು” ಎಂದು ಯೆಹೋವನು ಹೇಳಿದನು. ಅನಂತರ ಆತನು ಆ ಪ್ರಥಮ ಮಾನವನಿಗೆ ಗಾಢನಿದ್ರೆಯನ್ನು ಬರಮಾಡಿ, ಅವನ ಪರಿಪೂರ್ಣ ದೇಹದಿಂದ ಒಂದು ಪಕ್ಕೆಲುಬನ್ನು ತೆಗೆದನು. ಮತ್ತು ಆ ಪಕ್ಕೆಲುಬನ್ನು ಸ್ತ್ರೀಯಾಗಿ ರೂಪಿಸಿದನು. ಯೆಹೋವನು ಈ ಪರಿಪೂರ್ಣ ಸ್ತ್ರೀಯನ್ನು ಆದಾಮನ ಬಳಿಗೆ ಕರತರಲಾಗಿ ಆ ಮನುಷ್ಯನು ಹೇಳಿದ್ದು: “ಈಗ ಸರಿ; ಈಕೆಯು ನನ್ನ ಎಲುಬುಗಳಿಂದ ಬಂದ ಎಲುಬೂ ನನ್ನ ಮಾಂಸದಿಂದ ಬಂದ ಮಾಂಸವೂ ಆಗಿದ್ದಾಳೆ; ಈಕೆಯು ನರನಿಂದ ಉತ್ಪತ್ತಿಯಾದ ಕಾರಣ ನಾರೀ ಎನ್ನಿಸಿಕೊಳ್ಳುವಳು.” ಹವ್ವಳು ನಿಜವಾಗಿಯೂ ಆದಾಮನಿಗೆ ಸರಿಬೀಳುವ ಸಹಕಾರಿಣಿಯಾಗಿದ್ದಳು. ಅವರಿಬ್ಬರು ತಮ್ಮದೇ ಆದ ಗುಣಲಕ್ಷಣಗಳನ್ನು ಪ್ರದರ್ಶಿಸಿದರೂ, ಅವರು ಪರಿಪೂರ್ಣರು ಹಾಗೂ ದೇವರ ಸ್ವರೂಪದಲ್ಲಿ ಉಂಟುಮಾಡಲ್ಪಟ್ಟವರು ಆಗಿದ್ದರು. ಹೀಗೆ ಯೆಹೋವನು ಪ್ರಥಮ ವಿವಾಹವನ್ನು ಏರ್ಪಡಿಸಿದನು. ಪರಸ್ಪರ ಸಹಾಯ ಮತ್ತು ಬೆಂಬಲವನ್ನು ಒದಗಿಸುವ ಈ ದೈವಿಕ ಏರ್ಪಾಡನ್ನು ಅಂಗೀಕರಿಸುವುದರಲ್ಲಿ ಆದಾಮಹವ್ವರಿಗೆ ಯಾವ ತೊಂದರೆಯೂ ಇರಲಿಲ್ಲ.—ಆದಿ. 1:27; 2:21-23.
3. ವಿವಾಹವೆಂಬ ಕೊಡುಗೆಯ ಬಗ್ಗೆ ಅನೇಕರ ಅಭಿಪ್ರಾಯವೇನು ಮತ್ತು ಇದರಿಂದ ಯಾವ ಪ್ರಶ್ನೆಗಳು ಏಳುತ್ತವೆ?
3 ವಿಷಾದಕರವಾಗಿ, ಇಂದಿನ ಲೋಕದಲ್ಲಿ ದಂಗೆಕೋರ ಮನೋಭಾವವು ಹರಡಿಕೊಂಡಿದೆ. ಇದರಿಂದ ಉಲ್ಭಣಿಸಿರುವ ಸಮಸ್ಯೆಗಳಿಗೆ ದೇವರು ಕಾರಣನಾಗಿರುವುದಿಲ್ಲ. ಅನೇಕರು, ದೇವರ ಕೊಡುಗೆಯಾಗಿರುವ ವಿವಾಹ ನಮ್ಮ ಕಾಲಕ್ಕೆ ಸರಿಹೋಗುವುದಿಲ್ಲವೆಂದು ನೆನಸುತ್ತಾರೆ. ಹತಾಶೆ ಮತ್ತು ಘರ್ಷಣೆಗಳಿಗೆ ಅದೇ ಮೂಲಕಾರಣವೆಂದು ಧಿಕ್ಕರಿಸುತ್ತಾರೆ. ಅನೇಕ ವಿವಾಹಿತರಲ್ಲಿ ವಿಚ್ಛೇದನವು ಮಾಮೂಲಿಯಾಗಿದೆ. ಹೆತ್ತವರು ಮಕ್ಕಳಿಗೆ ಪ್ರೀತಿ ಮಮಕಾರ ತೋರಿಸದೆ ತಮ್ಮ ವೈವಾಹಿಕ ಕಲಹಗಳಲ್ಲಿ ಅವರನ್ನು ಸ್ವಪ್ರಯೋಜನಕ್ಕಾಗಿ ಬಳಸಲೂಬಹುದು. ಇನ್ನೂ ಅನೇಕ ಹೆತ್ತವರು ಕುಟುಂಬದ ಶಾಂತಿ ಮತ್ತು ಐಕ್ಯ ಭಂಗವಾದರೂ ಸರಿ ಮಣಿಯಲು ಮಾತ್ರ ಸಿದ್ಧರಿರುವುದಿಲ್ಲ. (2 ತಿಮೊ. 3:3) ಇಂಥ ಕಠಿನ ಪರಿಸ್ಥಿತಿಗಳ ಮಧ್ಯೆಯೂ ದಾಂಪತ್ಯದಲ್ಲಿ ಆನಂದವನ್ನು ಹೇಗೆ ಕಾಪಾಡಿಕೊಳ್ಳಸಾಧ್ಯವಿದೆ? ವೈವಾಹಿಕ ಜೀವನದಲ್ಲಿ ಒಡಕು ಉಂಟಾಗದಿರಲು ಮಣಿಯುವ ಸ್ವಭಾವವು ಹೇಗೆ ಸಹಾಯಮಾಡುತ್ತದೆ? ದಾಂಪತ್ಯದಲ್ಲಿ ಆನಂದವನ್ನು ಕಾಪಾಡಿಕೊಂಡಿರುವ ಆಧುನಿಕ ದಿನದ ದಂಪತಿಗಳ ಮಾದರಿಗಳಿಂದ ನಾವೇನನ್ನು ಕಲಿತುಕೊಳ್ಳಬಲ್ಲೆವು?
ಯೆಹೋವನ ನಿರ್ದೇಶನಕ್ಕೆ ಮಣಿಯುವುದು
4. (ಎ) ವಿವಾಹದ ಬಗ್ಗೆ ಪೌಲನು ಯಾವ ನಿರ್ದೇಶನವನ್ನು ಕೊಟ್ಟನು? (ಬಿ) ವಿಧೇಯ ಕ್ರೈಸ್ತರು ಪೌಲನ ನಿರ್ದೇಶನವನ್ನು ಹೇಗೆ ಅನುಸರಿಸುತ್ತಾರೆ?
4 ವಿಧವೆಯರು ಪುನರ್ವಿವಾಹ ಮಾಡಿಕೊಳ್ಳಲು ಬಯಸುವಲ್ಲಿ ‘ಕರ್ತನಲ್ಲಿ ವಿಶ್ವಾಸಿಯಾಗಿರುವವನನ್ನು’ ಮಾತ್ರ ಮದುವೆಯಾಗಬೇಕೆಂಬ ಪ್ರೇರಿತ ನಿರ್ದೇಶನವನ್ನು ಕ್ರೈಸ್ತ ಅಪೊಸ್ತಲ ಪೌಲನು ಕೊಟ್ಟನು. (1 ಕೊರಿಂ. 7:39, NIBV) ಯೆಹೂದಿ ಹಿನ್ನೆಲೆಯ ಕ್ರೈಸ್ತರಿಗೆ ಇದೇನೂ ಹೊಸ ವಿಷಯವಾಗಿರಲಿಲ್ಲ. ದೇವರು ಇಸ್ರಾಯೇಲ್ಯರಿಗೆ ಕೊಟ್ಟಿದ್ದ ನಿಯಮದಲ್ಲಿ, ಸುತ್ತಲಿನ ವಿಧರ್ಮಿ ಜನಾಂಗಗಳಲ್ಲಿ ಯಾರೊಂದಿಗೂ “ಬೀಗತನಮಾಡಬಾರದು” ಎಂಬ ಸ್ಪಷ್ಟ ನಿರ್ದೇಶನವಿತ್ತು. ಈ ದೈವಿಕ ಮಟ್ಟವನ್ನು ಅಲಕ್ಷಿಸಿದರೆ ಉಂಟಾಗುವ ಅಪಾಯವನ್ನು ವಿವರಿಸುತ್ತ ಯೆಹೋವನು ಕೂಡಿಸಿದ್ದು: “ಅವರು [ವಿಧರ್ಮಿ ಜನಾಂಗದವರು] ನಿಮ್ಮ ಮಕ್ಕಳನ್ನು ಯೆಹೋವನ ಸೇವೆಯಿಂದ ತಪ್ಪಿಸಿ ಇತರ ದೇವರುಗಳನ್ನು ಪೂಜಿಸುವದಕ್ಕೆ ತಿರುಗಿಸಾರು; ಆಗ ಯೆಹೋವನು ನಿಮ್ಮ ಮೇಲೆ ಕೋಪಗೊಂಡು ಬೇಗನೆ ನಿಮ್ಮನ್ನು ನಾಶಮಾಡುವನು.” (ಧರ್ಮೋ 7:3, 4) ಹಾಗಾದರೆ ವಿವಾಹ ಸಂಗಾತಿಯನ್ನು ಆರಿಸುವ ವಿಷಯದಲ್ಲಿ ಯೆಹೋವನು ತನ್ನ ಆಧುನಿಕ ಸೇವಕರಿಂದ ಏನನ್ನು ಅಪೇಕ್ಷಿಸುತ್ತಾನೆ? ದೇವರ ಸೇವಕರು ‘ಕರ್ತನಲ್ಲಿ ವಿಶ್ವಾಸಿಯಾಗಿರುವವರನ್ನೇ’ ವಿವಾಹ ಸಂಗಾತಿಯಾಗಿ ಆರಿಸಿಕೊಳ್ಳಬೇಕೆಂಬುದು ವ್ಯಕ್ತ. ಅಂದರೆ ಸಮರ್ಪಿತರಾದ ಸ್ನಾತ ವಿಶ್ವಾಸಿಯೊಬ್ಬರನ್ನೇ ಮದುವೆಯಾಗಬೇಕು. ಈ ಆಯ್ಕೆಯ ವಿಷಯದಲ್ಲಿ ಯೆಹೋವನ ನಿರ್ದೇಶನಕ್ಕೆ ಮಣಿಯುವುದು ವಿವೇಕಪ್ರದವಾಗಿದೆ.
5. ಯೆಹೋವನು ಮತ್ತು ವಿವಾಹಿತ ಕ್ರೈಸ್ತರು ವಿವಾಹ ಪ್ರತಿಜ್ಞೆಗಳನ್ನು ಹೇಗೆ ವೀಕ್ಷಿಸುತ್ತಾರೆ?
5 ವಿವಾಹ ಪ್ರತಿಜ್ಞೆಗಳು ದೇವರ ದೃಷ್ಟಿಯಲ್ಲಿ ಪವಿತ್ರವಾಗಿವೆ. ಪ್ರಥಮ ವಿವಾಹವನ್ನು ಸೂಚಿಸುತ್ತ ಸ್ವತಃ ದೇವರ ಮಗನಾದ ಯೇಸು ಹೇಳಿದ್ದು: “ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು.” (ಮತ್ತಾ. 19:6) ಪ್ರತಿಜ್ಞೆ ಅಥವಾ ಹರಕೆಗಳು ಎಷ್ಟು ಗಂಭೀರವಾಗಿವೆ ಎಂಬುದನ್ನು ಕೀರ್ತನೆಗಾರನು ಹೀಗೆ ನೆನಪಿಸುತ್ತಾನೆ: “ಸ್ತುತಿಯಜ್ಞವನ್ನೇ ದೇವರಿಗೆ ಸಮರ್ಪಿಸಿರಿ; ಮಾಡಿದ ಹರಕೆಗಳನ್ನು ಪರಾತ್ಪರನಿಗೆ ಸಲ್ಲಿಸಿರಿ.” (ಕೀರ್ತ. 50:14) ವಿವಾಹವಾಗುವ ದಂಪತಿಯು ಹರ್ಷಾನಂದವನ್ನು ಸವಿಯುತ್ತಾರಾದರೂ, ಅವರು ವಿವಾಹದ ದಿನದಂದು ಪರಸ್ಪರ ವಿನಿಮಯ ಮಾಡುವ ಪ್ರತಿಜ್ಞೆಗಳು ಗಂಭೀರವಾಗಿವೆ. ಜೊತೆಗೆ ಜವಾಬ್ದಾರಿಯನ್ನೂ ತರುತ್ತವೆ.—ಧರ್ಮೋ. 23:21.
6. ಯೆಫ್ತಾಹನ ಮಾದರಿಯಿಂದ ನಾವೇನನ್ನು ಕಲಿಯಬಲ್ಲೆವು?
6 ಸಾ.ಶ.ಪೂ. 12ನೆಯ ಶತಕದಲ್ಲಿ ಇಸ್ರಾಯೇಲಿನಲ್ಲಿ ನ್ಯಾಯಸ್ಥಾಪಕನಾಗಿದ್ದ ಯೆಫ್ತಾಹನ ಕುರಿತು ಯೋಚಿಸಿರಿ. ಅವನು ಯೆಹೋವನಿಗೆ, “ನೀನು ಅಮ್ಮೋನಿಯರನ್ನು ನನ್ನ ಕೈಗೆ ಒಪ್ಪಿಸುವದಾದರೆ ನಾನು ಸುರಕ್ಷಿತನಾಗಿ ಮನೆಗೆ ಮುಟ್ಟಿದಾಗ ನನ್ನನ್ನು ಎದುರುಗೊಳ್ಳುವದಕ್ಕಾಗಿ ನನ್ನ ಮನೆಯ ಬಾಗಲಿನಿಂದ ಮೊದಲು ಬರುವಂಥ ಪ್ರಾಣಿಯು ನಿನ್ನದೇ ಎಂದು ಅದನ್ನು ನಿನಗೋಸ್ಕರ ಹೋಮಮಾಡುವೆನು ಎಂದು ಹರಕೆಮಾಡಿದನು.” ಅವನು ಮಿಚ್ಪೆಯಲ್ಲಿದ್ದ ತನ್ನ ಮನೆಗೆ ಹಿಂದಿರುಗಿದಾಗ ಮೊದಲು ಎದುರುಗೊಳ್ಳಲು ಬಂದದ್ದು ಅವನ ಒಬ್ಬಳೇ ಮಗಳಾಗಿದ್ದಳು. ಅವಳನ್ನು ನೋಡಿದಾಗ ಯೆಫ್ತಾಹನು ತನ್ನ ಪ್ರತಿಜ್ಞೆಯನ್ನು ಮುರಿಯಲು ಯತ್ನಿಸಿದನೋ? ಇಲ್ಲ. ಅವನಂದದ್ದು: “ನಾನು ಬಾಯ್ದೆರೆದು ಯೆಹೋವನಿಗೆ ಹರಕೆಮಾಡಿದ್ದೇನೆ; ಅದಕ್ಕೆ ಹಿಂದೆಗೆಯಲಾರೆನು.” (ನ್ಯಾಯ. 11:30, 31, 35) ಹೀಗೆ ಯೆಫ್ತಾಹನಿಗೆ ತನ್ನ ಸ್ವಾಸ್ತ್ಯವನ್ನು ಮುಂದೆ ನೋಡಿಕೊಳ್ಳಲು ವಂಶದಕುಡಿ ಇರಲಿಕ್ಕಿಲ್ಲದಿದ್ದರೂ ಅವನು ಯೆಹೋವನಿಗೆ ಕೊಟ್ಟ ವಚನವನ್ನು ಪಾಲಿಸಿದನು. ಯೆಫ್ತಾಹನ ಪ್ರತಿಜ್ಞೆಯು ವಿವಾಹ ಪ್ರತಿಜ್ಞೆಗಳಿಗಿಂತ ಭಿನ್ನವಾಗಿದೆ ನಿಜ. ಆದರೆ, ಅವನದನ್ನು ಪಾಲಿಸಿದ್ದು ಕ್ರೈಸ್ತ ಪತಿಪತ್ನಿಯರು ಸಹ ತಮ್ಮ ಪ್ರತಿಜ್ಞೆಗಳಿಗೆ ಬದ್ಧರಾಗಿರಬೇಕು ಎಂಬುದಕ್ಕೆ ಉತ್ತಮ ಮಾದರಿಯಾಗಿದೆ.
ಯಶಸ್ವೀ ವಿವಾಹ—ಯಾವುದರಿಂದ?
7. ನವದಂಪತಿಗಳು ಯಾವ ಹೊಂದಾಣಿಕೆಗಳನ್ನು ಮಾಡುವುದು ಅಗತ್ಯ?
7 ಅನೇಕ ದಂಪತಿಗಳು ಮದುವೆಗೆ ಮುಂಚೆ ತಾವು ಪರಸ್ಪರ ಪ್ರೇಮಿಸುತ್ತಿದ್ದ ಕಾಲವನ್ನು ಒಲುಮೆಯಿಂದ ನೆನಸಿಕೊಳ್ಳುತ್ತಾರೆ. ಆಗ ತಮ್ಮ ಬಾಳಸಂಗಾತಿಯ ಬಗ್ಗೆ ತಿಳಿದುಕೊಳ್ಳುವುದು ಎಂಥ ಮಧುರ ಅನುಭವವಾಗಿತ್ತು! ಹೆಚ್ಚೆಚ್ಚು ಸಮಯ ಜೊತೆಯಾಗಿ ಕಳೆದಂತೆ ಅವರು ಇನ್ನಷ್ಟು ಹತ್ತಿರವಾದರು. ಅವರು ಪ್ರೀತಿಸಿಯೇ ಮದುವೆಯಾಗಿರಲಿ ಅಥವಾ ಕುಟುಂಬ ಏರ್ಪಡಿಸಿಯೇ ಮದುವೆಯಾಗಿರಲಿ, ವಿವಾಹದ ಬಳಿಕ ಅವರಿಬ್ಬರೂ ಹೊಂದಾಣಿಕೆಗಳನ್ನು ಮಾಡುವುದು ಅತ್ಯಗತ್ಯವಾಗಿತ್ತು. ಗಂಡನೊಬ್ಬನು ಹೇಳುವುದು: “ಮದುವೆಯಾದ ಹೊಸದರಲ್ಲಿ ನಮಗಿದ್ದ ದೊಡ್ಡ ಸಮಸ್ಯೆಯೆಂದರೆ, ಮೊದಲಿನ ಹಾಗೆ ನಾವಿನ್ನು ಒಬ್ಬರೇ ಅಲ್ಲ ಇಬ್ಬರಿದ್ದೇವೆಂದು ಅರಿತುಕೊಳ್ಳುವುದಾಗಿತ್ತು. ಸ್ನೇಹಿತರನ್ನು ಮತ್ತು ಸಂಬಂಧಿಕರನ್ನು ತಕ್ಕ ಸ್ಥಳದಲ್ಲಿರಿಸುವುದು ನಮಗೆ ಕಷ್ಟಕರವಾಗಿತ್ತು.” 30 ವರ್ಷ ದಾಂಪತ್ಯ ಜೀವನ ನಡೆಸಿರುವ ಇನ್ನೊಬ್ಬನು, ಸಮತೋಲನವಿರಬೇಕಾದರೆ ತನ್ನೊಬ್ಬನ ಬಗ್ಗೆ ಅಲ್ಲ “ಇಬ್ಬರ ಕುರಿತು ಯೋಚಿಸಬೇಕು” ಎಂಬುದನ್ನು ಮದುವೆಯ ಹೊಸದರಲ್ಲೇ ಗ್ರಹಿಸಿದ್ದನು. ಅವನು ಯಾವುದೇ ಆಮಂತ್ರಣ ಸ್ವೀಕರಿಸುವ ಇಲ್ಲವೆ ಯಾರಿಗಾದರೂ ಮಾತುಕೊಡುವ ಮೊದಲು ತನ್ನ ಹೆಂಡತಿಯೊಂದಿಗೆ ಮಾತಾಡುತ್ತಾನೆ. ಅನಂತರ ತಮ್ಮಿಬ್ಬರಿಗೂ ಒಪ್ಪುವ ನಿರ್ಣಯ ಮಾಡುತ್ತಾನೆ. ಅಂಥ ಸನ್ನಿವೇಶಗಳಲ್ಲಿ ಮಣಿಯುವುದು ಸಹಾಯಕರ.—ಜ್ಞಾನೋ. 13:10.
8, 9. (ಎ) ಒಳ್ಳೆಯ ಸಂವಾದವು ಏಕೆ ಪ್ರಾಮುಖ್ಯ? (ಬಿ) ಯಾವ ಕ್ಷೇತ್ರಗಳಲ್ಲಿ ಹೊಂದಿಸಿಕೊಳ್ಳುವುದು ಸಹಾಯಕರ, ಮತ್ತು ಏಕೆ?
8 ಕೆಲವೊಮ್ಮೆ ವಿವಾಹವಾದವರ ಸಂಸ್ಕೃತಿ, ಹಿನ್ನೆಲೆ ಬೇರೆ ಬೇರೆಯಾಗಿರುತ್ತದೆ. ವಿಶೇಷವಾಗಿ ಇಂಥ ಸಂದರ್ಭದಲ್ಲಿ ಮನಬಿಚ್ಚಿ ಮಾತಾಡುವುದು ಇನ್ನೂ ಹೆಚ್ಚು ಅಗತ್ಯವಾಗಿರುತ್ತದೆ. ಇಬ್ಬರು ಮಾತಾಡುವ ಧಾಟಿಯೂ ವಿಭಿನ್ನವಾಗಿರಬಹುದು. ನಿಮ್ಮ ಬಾಳಸಂಗಾತಿ ತನ್ನ ಸಂಬಂಧಿಗಳೊಂದಿಗೆ ಮಾತಾಡುವ ರೀತಿಯನ್ನು ಅವಲೋಕಿಸುವುದು ನಿಮ್ಮ ಸಂಗಾತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತದೆ. ಹಲವು ಬಾರಿ ನೀವು ಹೇಳುವ ವಿಷಯವಲ್ಲ ಬದಲಿಗೆ ಅದನ್ನು ಹೇಳುವ ರೀತಿಯೇ ನಿಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸುತ್ತದೆ. ಏನನ್ನು ಹೇಳದಿರುವಾಗಲೂ ಹಲವಾರು ವಿಷಯಗಳು ಅರ್ಥವಾಗಬಹುದು. (ಜ್ಞಾನೋ. 16:24; ಕೊಲೊ. 4:6) ಸಂತೋಷಕ್ಕೆ ವಿವೇಚನೆ ಮುಖ್ಯ.—ಜ್ಞಾನೋಕ್ತಿ 24:3 ಓದಿ.
9 ಹವ್ಯಾಸ ಮತ್ತು ವಿನೋದ ವಿಹಾರಗಳನ್ನು ಆರಿಸಿಕೊಳ್ಳುವುದರಲ್ಲಿಯೂ ಹೊಂದಿಸಿಕೊಳ್ಳುವುದು ಪ್ರಾಮುಖ್ಯವೆಂದು ಅನೇಕರು ಕಂಡುಕೊಂಡಿದ್ದಾರೆ. ಮದುವೆಗೆ ಮುಂಚೆ, ನಿಮ್ಮ ಸಂಗಾತಿಯು ಕ್ರೀಡೆ ಇಲ್ಲವೆ ವಿನೋದ ವಿಹಾರಗಳಲ್ಲಿ ಹೆಚ್ಚು ಸಮಯ ಕಳೆದಿರಬಹುದು. ಹಾಗಿರುವಾಗ, ಈಗ ಕೆಲವು ಹೊಂದಾಣಿಕೆಗಳನ್ನು ಮಾಡುವುದು ಯೋಗ್ಯವಲ್ಲವೇ? (1 ತಿಮೊ. 4:8) ಸಂಬಂಧಿಗಳೊಂದಿಗೆ ಸಮಯ ಕಳೆಯುವ ವಿಷಯದಲ್ಲೂ ಅದೇ ಪ್ರಶ್ನೆ ಕೇಳಬಹುದು. ದಂಪತಿಗಳಿಗೆ ಆಧ್ಯಾತ್ಮಿಕ ಹಾಗೂ ಬೇರೆ ಚಟುವಟಿಕೆಗಳನ್ನು ಜೊತೆಯಾಗಿ ಮಾಡಲು ಸಮಯವು ಬೇಕು.—ಮತ್ತಾ. 6:33.
10. ಮಣಿಯುವುದು, ಹೆತ್ತವರ ಮತ್ತು ವಿವಾಹಿತ ಮಕ್ಕಳ ನಡುವಿನ ಒಳ್ಳೆಯ ಸಂಬಂಧಕ್ಕೆ ಹೇಗೆ ಸಹಾಯಮಾಡುತ್ತದೆ?
10 ಕೆಲವು ದೇಶಗಳಲ್ಲಿ, ವಿವಾಹದ ಅನಂತರ ಹೆಣ್ಣೊಬ್ಬಳು ತನ್ನ ತಂದೆತಾಯಿಯನ್ನು ಅಗಲುತ್ತಾಳೆ ಮತ್ತು ಕೆಲವೊಮ್ಮೆ ಪುರುಷರ ವಿಷಯದಲ್ಲೂ ಹೀಗಾಗಬಹುದು. ಹಾಗಿದ್ದರೂ, ತಂದೆತಾಯಿಗಳನ್ನು ಸನ್ಮಾನಿಸುವ ದೈವಿಕ ಮಾರ್ಗದರ್ಶನವು ವಿವಾಹದ ನಂತರವೂ ಅನ್ವಯವಾಗುತ್ತದೆ. ಆದಕಾರಣ, ವಿವಾಹದ ಬಳಿಕವೂ ದಂಪತಿಗಳು ತಮ್ಮ ಹೆತ್ತವರೊಂದಿಗೂ ಅತ್ತೆಮಾವಂದಿರೊಂದಿಗೂ ಸಮಯವನ್ನು ಕಳೆಯಬಹುದು. ಆದರೆ ಈ ವಿಷಯದಲ್ಲೂ ಕೆಲವು ಹೊಂದಾಣಿಕೆಗಳನ್ನು ಮಾಡುವುದು ಯೋಗ್ಯವಲ್ಲವೋ? (ಆದಿಕಾಂಡ 2:24 ಓದಿ.) ವಿವಾಹಿತನಾಗಿ 25 ವರ್ಷ ಕಳೆದಿರುವ ಒಬ್ಬ ಗಂಡನು ಗಮನಿಸುವುದು: “ಕೆಲವೊಮ್ಮೆ, ಸಂಗಾತಿಯ ವಿವಿಧ ಅಪೇಕ್ಷೆ ಹಾಗೂ ಅಗತ್ಯಗಳನ್ನು ಹೆತ್ತವರ, ಸೋದರಸೋದರಿಯರ ಮತ್ತು ಅತ್ತೆಮಾವಂದಿರ ಅಪೇಕ್ಷೆ ಹಾಗೂ ಅಗತ್ಯಗಳೊಂದಿಗೆ ಸರಿದೂಗಿಸುವುದು ಕಷ್ಟಕರ. ಇಂಥಾ ಸನ್ನಿವೇಶಗಳಲ್ಲಿ ಸರಿಯಾದ ನಿರ್ಣಯಮಾಡಲು ಆದಿಕಾಂಡ 2:24 ನನಗೆ ಸಹಾಯ ನೀಡಿದೆ. ಕುಟುಂಬ ಸದಸ್ಯರಿಗೆ ನಿಷ್ಠೆ ತೋರಿಸುವ ಮತ್ತು ಅವರ ಜವಾಬ್ದಾರಿ ವಹಿಸುವ ಹಂಗು ಒಬ್ಬನಿಗೆ ಇದೆಯಾದರೂ, ಈ ವಚನವು, ಮೊದಲು ನಾನು ನನ್ನ ಹೆಂಡತಿಗೆ ನಿಷ್ಠೆ ತೋರಿಸುವ ಅಗತ್ಯತೆಯನ್ನು ತೋರಿಸಿತು.” ಹೀಗಿರುವುದರಿಂದ ಮಣಿಯುವ ಕ್ರೈಸ್ತ ಹೆತ್ತವರು, ತಮ್ಮ ವಿವಾಹಿತ ಮಕ್ಕಳು ಈಗ ಒಂದು ಕುಟುಂಬವಾಗಿದ್ದಾರೆಂಬುದನ್ನೂ ಆ ಕುಟುಂಬವನ್ನು ನಡೆಸುವ ಪ್ರಧಾನ ಜವಾಬ್ದಾರಿ ಗಂಡನದ್ದೆಂಬುದನ್ನೂ ಗಣ್ಯಮಾಡುವರು.
11, 12. ದಂಪತಿಗಳಿಗೆ ಕುಟುಂಬ ಅಧ್ಯಯನ ಮತ್ತು ಪ್ರಾರ್ಥನೆ ಏಕೆ ಪ್ರಾಮುಖ್ಯ?
11 ಕುಟುಂಬ ಅಧ್ಯಯನದ ಒಂದು ಉತ್ತಮ ನಿಯತಕ್ರಮ ಅತ್ಯಗತ್ಯ. ಅನೇಕ ಕ್ರೈಸ್ತ ಕುಟುಂಬಗಳ ಅನುಭವಗಳು ಇದನ್ನು ದೃಢೀಕರಿಸುತ್ತವೆ. ಇಂಥ ಅಧ್ಯಯನವನ್ನು ಕ್ರಮವಾಗಿ ನಡೆಸುವುದು ಅಷ್ಟು ಸುಲಭವಾಗಿರಲಿಕ್ಕಿಲ್ಲ. ಕುಟುಂಬ ಯಜಮಾನನಾಗಿರುವ ಒಬ್ಬನು ಒಪ್ಪಿಕೊಳ್ಳುವುದು: “ನಾವು ಕಾಲಘಟ್ಟದಲ್ಲಿ ಹಿಂದೆ ಹೋಗಿ ಯಾವುದನ್ನಾದರೂ ಬದಲಾಯಿಸಲು ಆಗುವುದಾದರೆ, ನಮ್ಮ ವಿವಾಹದಾರಂಭದಿಂದ ಕುಟುಂಬ ಅಧ್ಯಯನದ ಉತ್ತಮ ಕ್ರಮಕ್ಕೆ ಅಂಟಿಕೊಳ್ಳುತ್ತಿದ್ದೆವು.” ಅವನು ಕೂಡಿಸಿ ಹೇಳುವುದು: “ನಾವಿಬ್ಬರೂ ಒಟ್ಟಾಗಿ ಅಧ್ಯಯನ ಮಾಡುವಾಗ ಸಿಗುವ ಆಸಕ್ತಿಕರ ವಿಷಯದಿಂದ ನನ್ನಾಕೆ ಪುಳಕಿತಳಾಗಿ ಆನಂದಗೊಳ್ಳುವುದನ್ನು ನೋಡುವುದೊಂದು ವರದಾನವಾಗಿದೆ.”
12 ಜೊತೆಯಾಗಿ ಪ್ರಾರ್ಥಿಸುವುದು ಇನ್ನೊಂದು ಸಹಾಯಕ. (ರೋಮಾ. 12:12) ಗಂಡಹೆಂಡತಿ ಯೆಹೋವನ ಆರಾಧನೆಯಲ್ಲಿ ಐಕ್ಯರಾಗಿರುವಾಗ ದೇವರೊಂದಿಗೆ ಅವರಿಗಿರುವ ನಿಕಟ ಸಂಬಂಧವು ವಿವಾಹಬಂಧವನ್ನು ಬಲಪಡಿಸಬಲ್ಲದು. (ಯಾಕೋ. 4:8) ಕ್ರೈಸ್ತ ಪತಿಯೊಬ್ಬನು ಹೇಳುವುದು: “ತಪ್ಪುಗಳಿಗೆ ಕೂಡಲೇ ಕ್ಷಮೆ ಯಾಚಿಸುವುದು ಮತ್ತು ಕೂಡಿ ಪ್ರಾರ್ಥಿಸುವಾಗ ಆ ತಪ್ಪುಗಳನ್ನು ಅರಿಕೆ ಮಾಡುವುದು, ರೇಗಿಸಿದ ವಿಷಯವು ಚಿಕ್ಕದಾಗಿದ್ದರೂ ಅದಕ್ಕಾಗಿ ಯಥಾರ್ಥ ಶೋಕವನ್ನು ವ್ಯಕ್ತಪಡಿಸುವ ಒಂದು ವಿಧವಾಗಿದೆ.”—ಎಫೆ. 6:18.
ದಾಂಪತ್ಯದಲ್ಲಿ ಮಣಿಯಿರಿ
13. ವಿವಾಹದ ಆಪ್ತ ಸಂಬಂಧದ ವಿಷಯದಲ್ಲಿ ಪೌಲನು ಕೊಟ್ಟ ಸಲಹೆಯೇನು?
13 ವಿವಾಹಿತ ಕ್ರೈಸ್ತರು ಇಂದಿನ ಕಾಮೋನ್ಮತ್ತ ಲೋಕದಲ್ಲಿ, ವೈವಾಹಿಕ ಸಂಬಂಧವನ್ನು ಮುರಿಯುವ ಸರ್ವಸಾಮಾನ್ಯ ಆಚಾರಗಳಿಂದ ದೂರವಿರುವುದು ಅಗತ್ಯ. ಈ ವಿಷಯದಲ್ಲಿ ಪೌಲನು ಬುದ್ಧಿಹೇಳಿದ್ದು: “ಗಂಡನು ಹೆಂಡತಿಗೆ ಸಲ್ಲತಕ್ಕದ್ದನ್ನು ಸಲ್ಲಿಸಲಿ, ಹಾಗೆಯೇ ಹೆಂಡತಿಯು ಗಂಡನಿಗೆ ಸಲ್ಲಿಸಲಿ. ಹೆಂಡತಿಗೆ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ; ಅದು ಗಂಡನಿಗುಂಟು. ಹಾಗೆಯೇ ಪುರುಷನಿಗೆ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ; ಅದು ಹೆಂಡತಿಗುಂಟು.” ಬಳಿಕ ಪೌಲನು ಈ ಸ್ಪಷ್ಟವಾದ ನಿರ್ದೇಶನವನ್ನು ಕೊಟ್ಟನು: “ನೀವು ಪರಸ್ಪರ ಸಮ್ಮತಿಯಿಂದ ಸ್ವಲ್ಪಕಾಲ ದಂಪತಿಧರ್ಮವನ್ನು ಬಿಟ್ಟು ಅಗಲಿರಬಹುದೇ ಹೊರತು ಅನ್ಯಥಾ ಹಾಗೆ ಮಾಡಬಾರದು.” ಏಕೆ? ಏಕೆಂದರೆ, “ಪ್ರಾರ್ಥನೆಗೆ ಮನಸ್ಸು ಕೊಡುವದಕ್ಕಾಗಿ.” “ಆ ಮೇಲೆ ಸೈತಾನನು ನಿಮಗೆ ದಮೆಯಿಲ್ಲದಿರುವದನ್ನು ನೋಡಿ ನಿಮಗೆ ದುಷ್ಪ್ರೇರಣೆಮಾಡದಂತೆ ತಿರಿಗಿ ಕೂಡಿಕೊಳ್ಳಿರಿ.” (1 ಕೊರಿಂ. 7:3-5) ಪ್ರಾರ್ಥನೆಯ ಕುರಿತು ಹೇಳುವಾಗ ಪೌಲನು ಕ್ರೈಸ್ತನಿಗಿರುವ ಆದ್ಯತೆಯನ್ನು ತೋರಿಸುತ್ತಾನೆ. ಆದರೆ ಅವನು ಇನ್ನೊಂದು ವಿಷಯವನ್ನೂ ಸ್ಪಷ್ಟ ಮಾಡುತ್ತಾನೆ, ಏನೆಂದರೆ, ಪ್ರತಿಯೊಬ್ಬ ವಿವಾಹಿತ ಕ್ರೈಸ್ತನು ತನ್ನ ಅಥವಾ ತನ್ನ ಸಂಗಾತಿಯ ಶಾರೀರಿಕ ಮತ್ತು ಭಾವಾತ್ಮಕ ಆವಶ್ಯಕತೆಗಳಿಗೆ ಸ್ಪಂದಿಸಬೇಕು.
14. ದಾಂಪತ್ಯದ ಆಪ್ತ ಸಂಬಂಧಗಳಲ್ಲಿ ಶಾಸ್ತ್ರೀಯ ಮೂಲತತ್ತ್ವಗಳು ಹೇಗೆ ಅನ್ವಯಿಸುತ್ತವೆ?
14 ಗಂಡಹೆಂಡತಿ ಪರಸ್ಪರ ಬಿಚ್ಚುಮನಸ್ಸಿನವರಾಗಿರುವುದು ಆವಶ್ಯಕ. ಆಪ್ತಸಂಬಂಧದ ವಿಷಯದಲ್ಲಿ ಸಂಗಾತಿಗೆ ಪರಿಗಣನೆ ತೋರಿಸದಿರುವುದು ಸಮಸ್ಯೆಗಳಿಗೆ ನಡೆಸಬಲ್ಲದು. (ಫಿಲಿಪ್ಪಿ 2:3, 4 ಓದಿ; ಮತ್ತಾಯ 7:12 ಹೋಲಿಸಿ.) ಇಂಥ ಸಮಸ್ಯೆಗಳು ಧಾರ್ಮಿಕವಾಗಿ ವಿಭಜಿತವಾದ ಕುಟುಂಬಗಳಲ್ಲಿ ಕೆಲವೊಮ್ಮೆ ಉದ್ಭವಿಸಿವೆ. ಭಿನ್ನಾಭಿಪ್ರಾಯಗಳು ಇರುವಾಗಲೂ ಕ್ರೈಸ್ತನೊಬ್ಬನು ಒಳ್ಳೆಯ ನಡತೆ, ದಯೆ ಮತ್ತು ಸಹಕಾರವನ್ನು ನೀಡುವ ಮೂಲಕ ಪರಿಸ್ಥಿತಿಗಳನ್ನು ಸುಧಾರಿಸಬಲ್ಲನು. (1 ಪೇತ್ರ 3:1, 2 ಓದಿ.) ಯೆಹೋವನ ಮತ್ತು ತನ್ನ ಸಂಗಾತಿಯ ಮೇಲಣ ಪ್ರೀತಿಯೊಂದಿಗೆ ಮಣಿಯುವ ಮನೋಭಾವವು ದಾಂಪತ್ಯದಲ್ಲಿನ ಆಪ್ತ ಸಂಬಂಧಕ್ಕೆ ಸಹಾಯ ನೀಡುವುದು.
15. ಒಂದು ಸಂತುಷ್ಟ ವಿವಾಹದಲ್ಲಿ ಗೌರವವು ಯಾವ ಪಾತ್ರವನ್ನು ವಹಿಸುತ್ತದೆ?
15 ದಯಾಭಾವದ ಗಂಡನು ಬೇರೆ ವಿಷಯಗಳಲ್ಲೂ ತನ್ನ ಹೆಂಡತಿಯನ್ನು ಗೌರವದಿಂದ ಕಾಣುವನು. ಉದಾಹರಣೆಗೆ, ಚಿಕ್ಕಪುಟ್ಟ ವಿಷಯಗಳಲ್ಲೂ ಅವನು ಆಕೆಯ ಅನಿಸಿಕೆಗಳನ್ನು ಪರಿಗಣಿಸುತ್ತಾನೆ. ಮದುವೆಯಾಗಿ ನಲ್ವತ್ತೇಳು ವರ್ಷವಾಗಿರುವ ಗಂಡನೊಬ್ಬನು ಒಪ್ಪಿಕೊಳ್ಳುವುದು: “ನಾನು ಈ ವಿಷಯದಲ್ಲಿ ಇನ್ನೂ ಕಲಿಯುತ್ತಿದ್ದೇನೆ.” ಕ್ರೈಸ್ತ ಪತ್ನಿಯರು ತಮ್ಮ ಪತಿಗಳಿಗೆ ಆಳವಾದ ಗೌರವವನ್ನು ತೋರಿಸಬೇಕೆಂದು ತಿಳಿಸಲಾಗಿದೆ. (ಎಫೆ. 5:33) ತಮ್ಮ ಗಂಡಂದಿರ ವಿಷಯದಲ್ಲಿ ನಕಾರಾತ್ಮಕವಾಗಿ ಮಾತಾಡುವುದು ಮತ್ತು ಇತರರ ಮುಂದೆ ಅವರ ತಪ್ಪುಗಳನ್ನು ಎತ್ತಿಹೇಳುವುದು ಗೌರವವನ್ನು ತೋರಿಸುವುದಿಲ್ಲ. ಜ್ಞಾನೋಕ್ತಿ 14:1 ನಮಗೆ ಮರುಜ್ಞಾಪಿಸುವುದು: “ಜ್ಞಾನವಂತೆಯು ತನ್ನ ಮನೆಯನ್ನು ಕಟ್ಟಿಕೊಳ್ಳುವಳು; ಜ್ಞಾನಹೀನಳು ಅದನ್ನು ಸ್ವಂತ ಕೈಯಿಂದ ಮುರಿದುಬಿಡುವಳು.”
ಪಿಶಾಚನಿಗೆ ಮಣಿಯಬೇಡಿ
16. ಎಫೆಸ 4:26, 27ನ್ನು ತಮ್ಮ ದಾಂಪತ್ಯ ಜೀವನದಲ್ಲಿ ದಂಪತಿಗಳು ಹೇಗೆ ಅನ್ವಯಿಸಬಲ್ಲರು?
16 “ಕೋಪಮಾಡಬೇಕಾದರೂ ಪಾಪ ಮಾಡಬೇಡಿರಿ; ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ; ಸೈತಾನನಿಗೆ ಅವಕಾಶಕೊಡಬೇಡಿರಿ.” (ಎಫೆ. 4:26, 27) ಈ ಮಾತುಗಳನ್ನು ಅನ್ವಯಿಸಿಕೊಳ್ಳುವುದು ದಾಂಪತ್ಯದಲ್ಲಿ ವೈಮನಸ್ಯ ಹುಟ್ಟದಂತೆ ನೋಡಿಕೊಳ್ಳಲು ಇಲ್ಲವೆ ಅದನ್ನು ಪರಿಹರಿಸಲು ಸಹಾಯ ಮಾಡಬಲ್ಲದು. ಒಬ್ಬ ಸಹೋದರಿ ನೆನಪಿಸಿಕೊಳ್ಳುವದು: “ಮನಸ್ತಾಪವಿದ್ದಾಗಲ್ಲೆಲ್ಲಾ ನನ್ನ ಗಂಡನೊಂದಿಗೆ ಮಾತಾಡಿ ಅದನ್ನು ಇತ್ಯರ್ಥಗೊಳಿಸದೆ ಬಿಟ್ಟ ಒಂದು ಸಂದರ್ಭವೂ ನನಗೆ ನೆನಪಿಲ್ಲ. ಇದಕ್ಕೆ ಕೆಲವೊಮ್ಮೆ ಹಲವಾರು ತಾಸುಗಳೇ ಹಿಡಿಯುತ್ತಿದ್ದವು.” ತಮ್ಮಲ್ಲಿ ಭಿನ್ನಾಭಿಪ್ರಾಯಗಳು ಏಳುವಲ್ಲಿ ಅದೇ ದಿನದೊಳಗೆ ಅವನ್ನು ಇತ್ಯರ್ಥಗೊಳಿಸಬೇಕೆಂದು ಆ ದಂಪತಿ ಮದುವೆಯಾದಾಗಲೇ ನಿರ್ಣಯಿಸಿದ್ದರು. ಅವಳು ಹೇಳುವುದು: “ಸಮಸ್ಯೆ ಯಾವುದೇ ಆಗಿರಲಿ ಅದನ್ನು ಮನ್ನಿಸಿ ಮರೆತುಬಿಟ್ಟು, ಹೊಸ ದಿನವನ್ನು ಆರಂಭಿಸಲು ನಾವು ನಿರ್ಣಯಿಸಿದೆವು.” ಹೀಗೆ ಅವರು ಪಿಶಾಚನಿಗೆ ‘ಅವಕಾಶಕೊಡಲಿಲ್ಲ.’
17. ತಪ್ಪಾದ ವ್ಯಕ್ತಿಯನ್ನು ಮದುವೆಯಾದಂತೆ ತೋರಿದರೂ ಯಾವುದು ಸಹಾಯ ಮಾಡಬಲ್ಲದು?
17 ಆದರೆ ತಪ್ಪಾದ ವ್ಯಕ್ತಿಯನ್ನು ಮದುವೆಯಾಗಿದ್ದೀರೆಂದು ನಿಮಗನಿಸುವಲ್ಲಿ ಆಗೇನು? ನಿಮ್ಮ ವೈವಾಹಿಕ ಸಂಬಂಧವು ಇತರ ದಂಪತಿಗಳ ಮಧುರ ಸಂಬಂಧದಂತೆ ಇಲ್ಲದಿರಬಹುದು. ಹೀಗಿದ್ದರೂ, ವಿವಾಹ ಬಾಂಧವ್ಯದ ಕುರಿತು ಸೃಷ್ಟಿಕರ್ತನ ವೀಕ್ಷಣವನ್ನು ಜ್ಞಾಪಿಸಿಕೊಳ್ಳುವದು ನಿಮಗೆ ಸಹಾಯ ನೀಡುವುದು. ಪೌಲನು ಪ್ರೇರಿತನಾಗಿ ಕ್ರೈಸ್ತರಿಗೆ ಸಲಹೆ ನೀಡಿದ್ದು: “ದಾಂಪತ್ಯವು ಮಾನ್ಯವಾದದ್ದೆಂದು ಎಲ್ಲರೂ ಎಣಿಸಬೇಕು; ಗಂಡಹೆಂಡರ ಸಂಬಂಧವು ನಿಷ್ಕಳಂಕವಾಗಿರಬೇಕು. ಜಾರರಿಗೂ ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನೆಂದು ತಿಳುಕೊಳ್ಳಿರಿ.” (ಇಬ್ರಿ. 13:4) “ಮೂರು ಹುರಿಯ ಹಗ್ಗ ಬೇಗ ಕಿತ್ತುಹೋಗುವದಿಲ್ಲವಷ್ಟೆ” ಎಂಬ ಮಾತುಗಳನ್ನೂ ಅಲಕ್ಷಿಸಬಾರದು. (ಪ್ರಸಂ. 4:12) ಪತಿಪತ್ನಿಯರಿಬ್ಬರೂ ಯೆಹೋವನ ನಾಮದ ಪವಿತ್ರೀಕರಣದ ವಿಷಯಕ್ಕೆ ಹೆಚ್ಚು ಮಹತ್ವಕೊಡುವಾಗ ಪರಸ್ಪರ ಆಪ್ತರಾಗುತ್ತಾರೆ. ಮಾತ್ರವಲ್ಲ ದೇವರೊಂದಿಗೂ ಆಪ್ತರಾಗುತ್ತಾರೆ. ಅವರು ತಮ್ಮ ದಾಂಪತ್ಯ ಜೀವನವನ್ನು ಯಶಸ್ವಿಗೊಳಿಸಲು ಶ್ರಮಿಸತಕ್ಕದ್ದು. ಏಕೆಂದರೆ ಅದು ವಿವಾಹದ ಮೂಲನಾದ ಯೆಹೋವನಿಗೆ ಸಂತೋಷವನ್ನು ತರುತ್ತದೆ.—1 ಪೇತ್ರ 3:11.
18. ದಾಂಪತ್ಯದ ಕುರಿತು ಯಾವ ನಿಶ್ಚಯ ನಿಮಗಿರಬಲ್ಲದು?
18 ದಾಂಪತ್ಯದಲ್ಲಿ ಆನಂದ ಕಂಡುಕೊಳ್ಳುವುದು ಕ್ರೈಸ್ತರಿಗೆ ನಿಶ್ಚಯವಾಗಿಯೂ ಸಾಧ್ಯ. ಇದಕ್ಕೆ ಪ್ರಯತ್ನ ಅಗತ್ಯ ಮತ್ತು ಕ್ರೈಸ್ತ ಗುಣಗಳನ್ನು ತೋರಿಸಬೇಕು. ಈ ಗುಣಗಳಲ್ಲಿ ಒಂದು ಮಣಿಯುವುದಾಗಿದೆ. ಲೋಕವ್ಯಾಪಕವಾಗಿ ಇಂದು ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ ಅಗಣಿತ ದಂಪತಿಗಳು ವೈವಾಹಿಕ ಜೀವನದಲ್ಲಿ ಆನಂದ ಕಂಡುಕೊಳ್ಳುವುದು ಸಾಧ್ಯ ಎಂದು ರುಜುಪಡಿಸುತ್ತಾರೆ.
ನೀವು ಹೇಗೆ ಉತ್ತರಿಸುವಿರಿ?
• ದಾಂಪತ್ಯದಲ್ಲಿ ಆನಂದವನ್ನು ಕಂಡುಕೊಳ್ಳುವುದು ಅವಾಸ್ತವಿಕವಲ್ಲವೇಕೆ?
• ವಿವಾಹದ ಯಶಸ್ವಿಗೆ ಯಾವುದು ಸಹಾಯ ಮಾಡಬಲ್ಲದು?
• ದಂಪತಿಗಳು ಯಾವ ಗುಣಗಳನ್ನು ಬೆಳೆಸಿಕೊಳ್ಳುವುದು ಅಗತ್ಯ?
[ಪುಟ 9ರಲ್ಲಿರುವ ಚಿತ್ರ]
ಯಾವುದೇ ಆಮಂತ್ರಣ ಸ್ವೀಕರಿಸುವ ಇಲ್ಲವೆ ಯಾರಿಗಾದರೂ ಮಾತುಕೊಡುವ ಮೊದಲು ದಂಪತಿಗಳು ತಮ್ಮ ಸಂಗಾತಿಯೊಂದಿಗೆ ಮಾತಾಡುವುದು ಒಳ್ಳೇದು
[ಪುಟ 10ರಲ್ಲಿರುವ ಚಿತ್ರ]
ಮನಸ್ತಾಪಗಳನ್ನು ಅದೇ ದಿನ ಪರಿಹರಿಸುವ ಮೂಲಕ ‘ಪಿಶಾಚನಿಗೆ ಅವಕಾಶಕೊಡಬೇಡಿರಿ’