ಬೈಬಲ್ ಕೊಡುವ ಉತ್ತರ
ಸೈತಾನನನ್ನು ಯಾರು ಸೃಷ್ಟಿಮಾಡಿದ್ದು?
ಸೈತಾನ ಒಬ್ಬ ದೇವದೂತ. ಯೇಸು ಹೇಳಿದಂತೆ ಈ ದೇವದೂತ ಒಂದು ಕಾಲದಲ್ಲಿ ಒಳ್ಳೆಯವನಾಗಿದ್ದ, ನಿಷ್ಕಳಂಕನಾಗಿದ್ದ. ಆದರೆ ಇವನು ಸಮಯಸಂದಂತೆ ಕೆಟ್ಟ ದಾರಿ ಹಿಡಿದ. ಆವಾಗಿಂದ ಅವನಿಗೆ ಸೈತಾನ ಅನ್ನೋ ಹೆಸರು ಬಂತು. ಹಾಗಾದರೆ ಸೈತಾನನನ್ನು ದೇವರು ಸೃಷ್ಟಿಮಾಡಲಿಲ್ಲ. ದೇವರು ಸೃಷ್ಟಿಮಾಡಿದ್ದು ಒಬ್ಬ ಒಳ್ಳೇ ದೇವದೂತನನ್ನಷ್ಟೆ.—ಯೋಹಾನ 8:44 ಓದಿ.
ಒಬ್ಬ ಒಳ್ಳೇ ದೇವದೂತ ಅದ್ಹೇಗೆ ಕೆಟ್ಟವನಾಗಲು ಸಾಧ್ಯ?
ಈ ದೇವದೂತ ದೇವರಿಗೆ ತಿರುಗಿಬಿದ್ದ ಮತ್ತು ಮೊದಲ ಮಾನವ ದಂಪತಿಯನ್ನೂ ತನ್ನ ಕಡೆಗೆ ಎಳೆದ. ಅವನು ದೇವರ ವಿರುದ್ಧ ನಿಂತಿದ್ದರಿಂದ ಅವನಿಗೆ ಸೈತಾನ ಅನ್ನೋ ಹೆಸರು ಬಂತು. ಸೈತಾನ ಅನ್ನೋ ಪದದ ಅರ್ಥ “ವಿರೋಧಿ.”—ಆದಿಕಾಂಡ 3:1-5; ಪ್ರಕಟನೆ 12:9 ಓದಿ.
ಬೇರೆಲ್ಲ ಬುದ್ಧಿಜೀವಿಗಳಂತೆ ಈ ದೇವದೂತನಿಗೂ ಸ್ವಾತಂತ್ರ್ಯವಿತ್ತು. ಒಳ್ಳೇ ದಾರಿಯಲ್ಲಿ ಹೋಗ್ಬೇಕಾ ಕೆಟ್ಟ ದಾರಿಯಲ್ಲಿ ಹೋಗ್ಬೇಕಾ ಅಂತ ನಿರ್ಣಯಿಸುವ ಸ್ವಾತಂತ್ರ್ಯವಿತ್ತು. ಆದರೆ ಇವನು ಕೆಟ್ಟ ದಾರಿ ಹಿಡಿದ. ಎಲ್ಲರೂ ತನ್ನನ್ನು ಆರಾಧಿಸಬೇಕಂತ ಆಸೆಪಟ್ಟ. ದೇವರಿಗೆ ಇಷ್ಟವಾಗುವ ರೀತಿಯಲ್ಲಿ ನಡೆಯಬೇಕು ಅನ್ನೋ ಆಸೆಗಿಂತ ಎಲ್ಲರೂ ತನ್ನನ್ನು ಆರಾಧನೆ ಮಾಡಬೇಕು ಅನ್ನೋ ಆಸೆ ಬಲವಾಗಿತ್ತು.—ಮತ್ತಾಯ 4:8, 9; ಯಾಕೋಬ 1:13, 14 ಓದಿ.
ಸೈತಾನ ಇವತ್ತು ಹೇಗೆ ಜನರ ಮೇಲೆ ಕೆಟ್ಟ ಪ್ರಭಾವ ಬೀರುತ್ತಿದ್ದಾನೆ? ಅವನಿಗೆ ನಾವು ಭಯಪಡಬೇಕಾ? ಈ ಎಲ್ಲಾ ಪ್ರಶ್ನೆಗಳಿಗೆ ನಿಮಗೆ ಬೈಬಲ್‌ನಲ್ಲಿ ಉತ್ತರ ಸಿಗುತ್ತೆ. (w13-E 02/01)