ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w14 4/1 ಪು. 6-7
  • ಸಾವೇ ಕೊನೆಯಲ್ಲ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಾವೇ ಕೊನೆಯಲ್ಲ!
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • “ಒಬ್ಬ ಮನುಷ್ಯನು ಸತ್ತು ಪುನಃ ಬದುಕಾನೇ?”
  • ಸತ್ತವರಿಗೆ ಪುನರುತ್ಥಾನ ಆಗುವುದು ಯಾವಾಗ?
  • ಮೃತರಿಗಾಗಿ ಆಶಾಕಿರಣ—ಪುನರುತ್ಥಾನ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ನಿಮ್ಮ ಮೃತ ಪ್ರಿಯ ಜನರಿಗಿರುವ ನಿಜ ನಿರೀಕ್ಷೆ
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ಸತ್ತ ಮೇಲೆ ಏನಾಗುತ್ತದೆ?
    ಮಹಾ ಬೋಧಕನಿಂದ ಕಲಿಯೋಣ
  • ಈಗ ಮೃತರಾಗಿರುವ ದಶಲಕ್ಷಾಂತರ ಜನರು ಪುನಃ ಜೀವಿಸುವರು
    ಕಾವಲಿನಬುರುಜು—1991
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
w14 4/1 ಪು. 6-7
ಯೇಸು ಲಾಜರನನ್ನು ಪುನರುತ್ಥಾನಗೊಳಿಸಿ ಸಮಾಧಿಯಿಂದ ಹೊರಬರುವಂತೆ ಹೇಳಿದನು.

ಮುಖಪುಟ ಲೇಖನ | ಸಾವೇ ಕೊನೆಯೇ?

ಸಾವೇ ಕೊನೆಯಲ್ಲ!

ಬೇಥಾನ್ಯ ಒಂದು ಪುಟ್ಟ ಹಳ್ಳಿ. ಯೆರೂಸಲೇಮಿನಿಂದ 3 ಕಿ.ಮೀ. ದೂರದಲ್ಲಿತ್ತು. (ಯೋಹಾನ 11:18) ಯೇಸು ಮರಣಪಡುವುದಕ್ಕೆ ಕೆಲವು ವಾರಗಳಿದ್ದವು. ಅಷ್ಟರಲ್ಲಿ ಒಂದು ದುರಂತ ಸಂಭವಿಸಿತು. ಆತನ ಆಪ್ತಮಿತ್ರರಲ್ಲಿ ಒಬ್ಬನಾದ ಲಾಜರ ದಿಢೀರನೆ ಕಾಯಿಲೆಬಿದ್ದು ತೀರಿಕೊಂಡ.

ಸುದ್ದಿ ಸಿಕ್ಕಿದ ತಕ್ಷಣ ಯೇಸು ತನ್ನ ಶಿಷ್ಯರಿಗೆ, ಲಾಜರ ನಿದ್ದೆಮಾಡುತ್ತಿದ್ದಾನೆ ಅವನನ್ನು ಎಬ್ಬಿಸಲು ಹೋಗುತ್ತಿದ್ದೇನೆ ಎಂದನು. (ಯೋಹಾನ 11:11) ಶಿಷ್ಯರಿಗೆ ಆತನ ಮಾತು ಅರ್ಥವಾಗಲಿಲ್ಲ. ಆಗ ಯೇಸು “ಲಾಜರನು ಮೃತಪಟ್ಟಿದ್ದಾನೆ” ಎಂದು ಸ್ಪಷ್ಟವಾಗಿ ಹೇಳಿದನು.—ಯೋಹಾನ 11:14.

ಯೇಸು ಬೇಥಾನ್ಯವನ್ನು ತಲಪಿದಾಗ ಲಾಜರನನ್ನು ಸಮಾಧಿಮಾಡಿ ನಾಲ್ಕು ದಿನಗಳಾಗಿದ್ದವು. ಲಾಜರನ ಸಹೋದರಿಯಾದ ಮಾರ್ಥ ಆತನಿಗೆ “ಕರ್ತನೇ, ನೀನು ಇಲ್ಲಿ ಇರುತ್ತಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ” ಎಂದಳು. (ಯೋಹಾನ 11:17, 21) ಆಗ ಯೇಸು ಆಕೆಯನ್ನು ಸಂತೈಸುತ್ತಾ “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ. ನನ್ನಲ್ಲಿ ನಂಬಿಕೆಯಿಡುವವನು ಸತ್ತರೂ ಜೀವಿತನಾಗುವನು” ಎಂದನು.—ಯೋಹಾನ 11:25.

“ಲಾಜರನೇ, ಹೊರಗೆ ಬಾ”

ಈ ಮಾತುಗಳು ಪೊಳ್ಳು ಭರವಸೆಯ ಮಾತುಗಳಲ್ಲ ಎಂದು ತೋರಿಸಲು ಯೇಸು ಲಾಜರನ ಸಮಾಧಿಯ ಹತ್ತಿರ ಹೋಗಿ ಜೋರಾಗಿ “ಲಾಜರನೇ, ಹೊರಗೆ ಬಾ” ಎಂದನು. (ಯೋಹಾನ 11:43) ಅಲ್ಲಿ ನೆರೆದು ಬಂದಿದ್ದ ಜನರಿಗೆ ಆಶ್ಚರ್ಯವೋ ಆಶ್ಚರ್ಯ. ಸತ್ತ ಲಾಜರ ಜೀವಂತನಾಗಿ ಸಮಾಧಿಯಿಂದ ಹೊರಬಂದ!

ಇದಕ್ಕೂ ಮುಂಚೆ ಯೇಸು ಕಡಿಮೆ ಪಕ್ಷ ಎರಡು ಪುನರುತ್ಥಾನಗಳನ್ನು ಮಾಡಿದ್ದನು. ಅಂದರೆ ಸತ್ತು ಹೋದ ಇಬ್ಬರಿಗೆ ಜೀವ ಕೊಟ್ಟಿದ್ದನು. ಅವರಲ್ಲಿ ಒಬ್ಬಳು ಚಿಕ್ಕ ಹುಡುಗಿ. ಯಾಯೀರ ಎಂಬವನ ಮಗಳು. ಸತ್ತುಹೋಗಿದ್ದ ಅವಳ ಬಗ್ಗೆ ಮಾತಾಡುವಾಗ ಅವಳು ‘ನಿದ್ದೆಮಾಡುತ್ತಿದ್ದಾಳೆ’ ಎಂದನು ಯೇಸು. ಇದನ್ನು ಹೇಳಿ ಸ್ವಲ್ಪದರಲ್ಲೇ ಅವಳನ್ನು ಜೀವಂತ ಮಾಡಿದನು.—ಲೂಕ 8:52.

ಲಾಜರ ಮತ್ತು ಯಾಯೀರನ ಮಗಳ ಸಾವನ್ನು ಯೇಸು ನಿದ್ದೆಗೆ ಹೋಲಿಸಿರುವುದನ್ನು ಗಮನಿಸಿ. ಇದು ತಕ್ಕದಾದ ಹೋಲಿಕೆ. ಯಾಕೆಂದರೆ ನಿದ್ದೆ ಒಂದು ರೀತಿಯ ಪ್ರಜ್ಞಾಹೀನ ಸ್ಥಿತಿ. ನಿದ್ದೆ ಮಾಡುತ್ತಿರುವ ವ್ಯಕ್ತಿಗೆ ನೋವು-ನರಳಾಟದ ಅನುಭವ ಆಗುವುದಿಲ್ಲ. (ಪ್ರಸಂಗಿ 9:5; “ಸಾವು ಗಾಢ ನಿದ್ದೆ ಇದ್ದಂತೆ” ಚೌಕ ನೋಡಿ.) ಯೇಸುವಿನ ಮೊತ್ತಮೊದಲ ಶಿಷ್ಯರಿಗೆ ಸತ್ತವರ ಸ್ಥಿತಿಯ ಬಗ್ಗೆ ಚೆನ್ನಾಗಿ ತಿಳಿದಿತ್ತು. “ಸಾವು ಎನ್ನುವುದು ನಿದ್ದೆಗೆ ಸಮ ಮತ್ತು ಸತ್ತ ದೇವಭಕ್ತ ಜನರಿಗೆ ಸಮಾಧಿ ವಿರಮಿಸುವ ಸ್ಥಳದಂತೆ . . . ಎನ್ನುವುದು ಯೇಸುವಿನ ಅನುಯಾಯಿಗಳ ನಂಬಿಕೆಯಾಗಿತ್ತು”a ಎನ್ನುತ್ತದೆ ಎನ್‌ಸೈಕ್ಲಪೀಡಿಯ ಆಫ್‌ ರಿಲಿಜನ್‌ ಆ್ಯಂಡ್‌ ಎಥಿಕ್ಸ್‌.

ಸತ್ತುಹೋಗಿರುವ ಜನರು ಸಮಾಧಿಯಲ್ಲಿ ‘ನಿದ್ದೆಮಾಡುತ್ತಿದ್ದಾರೆ,’ ನರಳುತ್ತಾ ಇಲ್ಲ ಎನ್ನುವ ಸತ್ಯಾಂಶ ನಮಗೆ ನೆಮ್ಮದಿ ತರುತ್ತದೆ. ಹೀಗೆ ಮನುಷ್ಯನಿಗೆ ಸತ್ತ ಮೇಲೆ ಏನಾಗುತ್ತದೆ ಎಂದು ನಾವು ಸ್ಪಷ್ಟವಾಗಿ ತಿಳಿದ ಕಾರಣ ಸಾವಿನ ಬಗ್ಗೆ ಭಯಪಡಬೇಕಾಗಿಲ್ಲ.

“ಒಬ್ಬ ಮನುಷ್ಯನು ಸತ್ತು ಪುನಃ ಬದುಕಾನೇ?”

ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ ಎಂದಮಾತ್ರಕ್ಕೆ ಯಾರೂ ಶಾಶ್ವತವಾಗಿ ನಿದ್ದೆಮಾಡುವುದಿಲ್ಲ ಅಲ್ಲವೇ? ಹಾಗೇ ಸಮಾಧಿಯಲ್ಲಿ ‘ನಿದ್ದೆಮಾಡುತ್ತಿರುವ’ ಸತ್ತವರು ಅಲ್ಲೇ ಉಳಿಯುವುದಿಲ್ಲ. ಲಾಜರ ಮತ್ತು ಯಾಯೀರನ ಮಗಳಂತೆ ಅವರೂ ಪುನಃ ಎದ್ದೇಳುತ್ತಾರೆ ಎಂಬ ಪ್ರತೀಕ್ಷೆ ಇದೆಯೇ?

ದೇವಭಕ್ತ ಯೋಬನಿಗೆ ತನ್ನ ಸಾವು ಹತ್ತಿರ ಬರುತ್ತಿದೆ ಎಂದನಿಸಿದಾಗ ಈ ಪ್ರಶ್ನೆ ಕೇಳಿದನು: “ಒಬ್ಬ ಮನುಷ್ಯನು ಸತ್ತು ಪುನಃ ಬದುಕಾನೇ?”—ಯೋಬ 14:14.

ಈ ಪ್ರಶ್ನೆ ಯೋಬ ಕೇಳಿದ್ದು ಸರ್ವಶಕ್ತ ದೇವರಾದ ಯೆಹೋವನಿಗೆ. ಯೋಬನೇ ಅದಕ್ಕೆ ಉತ್ತರಿಸುತ್ತಾ “ನೀನು ಕರೆದರೆ ಉತ್ತರಕೊಡುವೆನು, ನೀನು ಸೃಷ್ಟಿಸಿದ ನನ್ನ ಮೇಲೆ ನಿನಗೆ ಹಂಬಲಿಕೆ ಹುಟ್ಟೀತು” ಎಂದು ಹೇಳಿದನು. (ಯೋಬ 14:15) ತನ್ನನ್ನು ಪುನರುತ್ಥಾನ ಮಾಡುವ ದಿನಕ್ಕಾಗಿ ಯೆಹೋವನು ಹಂಬಲಿಸುತ್ತಿದ್ದಾನೆ ಎನ್ನುವ ದೃಢನಂಬಿಕೆ ಯೋಬನಿಗಿತ್ತು. ಅಸಾಧ್ಯವಾದ ವಿಷಯದ ಬಗ್ಗೆ ಯೋಬ ಕನಸು ಕಾಣುತ್ತಿದ್ದನಾ? ಖಂಡಿತ ಇಲ್ಲ.

ಸತ್ತವರಿಗೆ ಪುನಃ ಜೀವಕೊಡುವ ಶಕ್ತಿಯನ್ನು ದೇವರು ಯೇಸುವಿಗೆ ಕೊಟ್ಟಿದ್ದಾನೆ ಎನ್ನುವುದಕ್ಕೆ ಆತನು ಮಾಡಿದ ಪುನರುತ್ಥಾನಗಳೇ ಸಾಕ್ಷಿ. ಈಗ ಯೇಸುವಿನ ಬಳಿ ‘ಮರಣದ ಬೀಗದ ಕೈಗಳು’ ಇವೆ ಎನ್ನುತ್ತದೆ ಬೈಬಲ್‌. (ಪ್ರಕಟನೆ 1:18) ಲಾಜರನನ್ನು ಸಮಾಧಿಯಿಂದ ಬಿಡಿಸಿದಂತೆ ಇಂದು ಸಮಾಧಿಗಳಲ್ಲಿ ಸೆರೆಯಾಗಿರುವ ಜನರನ್ನು ಬಿಡಿಸುವ ಅಧಿಕಾರ ಯೇಸುವಿಗಿದೆ.

ಪುನರುತ್ಥಾನದ ಈ ಪ್ರತೀಕ್ಷೆ ಬಗ್ಗೆ ಬೈಬಲಿನಲ್ಲಿ ಅನೇಕ ಬಾರಿ ನೋಡಬಹುದು. ದೇವದೂತನೊಬ್ಬ ಪ್ರವಾದಿ ದಾನಿಯೇಲನಿಗೆ “ನೀನು ದೀರ್ಘನಿದ್ರೆಯನ್ನು ಹೊಂದಿ ಯುಗಸಮಾಪ್ತಿಯಲ್ಲಿ ಎದ್ದು . . . ನಿಲ್ಲುವಿ” ಎಂದು ಆಶ್ವಾಸನೆ ನೀಡಿದನು. (ದಾನಿಯೇಲ 12:13) ಪುನರುತ್ಥಾನವೇ ಇಲ್ಲ ಎಂದು ನಂಬುತ್ತಿದ್ದ ಯೆಹೂದಿ ಮುಖಂಡರಾದ ಸದ್ದುಕಾಯರಿಗೆ ಯೇಸು ಹೀಗಂದನು: “ನೀವು ಶಾಸ್ತ್ರಗ್ರಂಥವನ್ನಾಗಲಿ ದೇವರ ಶಕ್ತಿಯನ್ನಾಗಲಿ ತಿಳಿಯದಿರುವುದರಿಂದಲೇ ತಪ್ಪರ್ಥಮಾಡಿಕೊಂಡಿದ್ದೀರಿ.” (ಮತ್ತಾಯ 22:23, 29) ಯೇಸುವಿನ ಶಿಷ್ಯ ಪೌಲ ಹೇಳಿದ್ದು: “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದೆಂದು . . . ದೇವರಲ್ಲಿ ನಾನೂ ನಿರೀಕ್ಷೆ ಇಟ್ಟಿದ್ದೇನೆ.”—ಅಪೊಸ್ತಲರ ಕಾರ್ಯಗಳು 24:15.

ಸತ್ತವರಿಗೆ ಪುನರುತ್ಥಾನ ಆಗುವುದು ಯಾವಾಗ?

ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದು ಯಾವಾಗ? ನೀತಿವಂತನಾದ ದಾನಿಯೇಲನು “ಯುಗಸಮಾಪ್ತಿಯಲ್ಲಿ” ಜೀವಿತನಾಗುವನೆಂದು ದೇವದೂತ ಹೇಳಿದನು. ಹಾಗೇ ಲಾಜರ ‘ಕಡೇ ದಿನದಲ್ಲಾಗುವ ಪುನರುತ್ಥಾನದಲ್ಲಿ ಎದ್ದುಬರುವನೆಂದು’ ಮಾರ್ಥ ನಂಬಿದ್ದಳು.—ಯೋಹಾನ 11:24.

ಈ “ಕಡೇ ದಿನ” ಬೈಬಲಿನಲ್ಲಿ ಕ್ರಿಸ್ತನ ಆಡಳಿತದ ಸಮಯಕ್ಕೆ ಸೂಚಿಸುತ್ತದೆ. “ದೇವರು ಎಲ್ಲ ವೈರಿಗಳನ್ನು [ಕ್ರಿಸ್ತನ] ಪಾದಗಳ ಕೆಳಗೆ ಹಾಕುವ ತನಕ ಅವನು ಅರಸನಾಗಿ ಆಳುವುದು ಆವಶ್ಯಕ. ಕೊನೆಯ ಶತ್ರುವಾಗಿ ಮರಣವು ನಿರ್ಮೂಲಮಾಡಲ್ಪಡಬೇಕು” ಎಂದು ಪೌಲ ಬೈಬಲಿನಲ್ಲಿ ಬರೆದಿದ್ದಾನೆ. (1 ಕೊರಿಂಥ 15:25, 26) ದೇವರ ರಾಜ್ಯ ಬರಲಿ ಮತ್ತು ಭೂಮಿಯ ಮೇಲೆ ದೇವರ ಚಿತ್ತ ನೆರವೇರಲಿ ಎಂದು ನಾವು ಪ್ರಾರ್ಥಿಸುವುದಕ್ಕೆ ಇದೂ ಒಂದು ಬಹುಮುಖ್ಯ ಕಾರಣ.b

ಯೋಬನಿಗೆ ಚೆನ್ನಾಗಿ ತಿಳಿದಿದ್ದಂತೆ, ಸತ್ತವರನ್ನು ಪುನರುತ್ಥಾನ ಮಾಡುವುದೇ ದೇವರ ಉದ್ದೇಶ. ಸತ್ತವರ ಪುನರುತ್ಥಾನವಾಗುವ ಆ ದಿನ ಬಂದಾಗ ಸಾವು ಸಂಪೂರ್ಣವಾಗಿ ನಿರ್ಮೂಲವಾಗುವುದು. ಆಗ ಯಾರಿಗೂ ‘ಸಾವೇ ಕೊನೆಯಾ?’ ಎಂಬ ಪ್ರಶ್ನೆ ಬರುವುದೇ ಇಲ್ಲ! (w14-E 01/01)

a ಸಮಾಧಿಗೆ ಬಳಸುತ್ತಿದ್ದ ಗ್ರೀಕ್‌ ಪದದ ಅರ್ಥ “ನಿದ್ದೆಮಾಡುವ ಸ್ಥಳ.” ಈ ಪದವನ್ನೇ ಯೇಸುವಿನ ಶಿಷ್ಯರು ಬಳಸುತ್ತಿದ್ದರು.

b ದೇವರ ರಾಜ್ಯದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ 8ನೇ ಅಧ್ಯಾಯ ಓದಿ.

ಸಾವು ಗಾಢ ನಿದ್ದೆ ಇದ್ದಂತೆ

  • “ನನಗೆ ಮರಣನಿದ್ರೆಯು ಉಂಟಾಗದಂತೆ ನನ್ನ ಕಣ್ಣುಗಳನ್ನು ಕಳೆಗೊಳಿಸು.”—ಕೀರ್ತನೆ 13:3.

  • “‘ನಮ್ಮ ಮಿತ್ರನಾದ ಲಾಜರನು ವಿಶ್ರಾಂತಿಮಾಡುತ್ತಿದ್ದಾನೆ; ಅವನನ್ನು ನಿದ್ರೆಯಿಂದ ಎಬ್ಬಿಸಲಿಕ್ಕಾಗಿ ನಾನು ಅಲ್ಲಿಗೆ ಪ್ರಯಾಣಿಸುತ್ತಿದ್ದೇನೆ’ ಎಂದನು. ಅದಕ್ಕೆ ಶಿಷ್ಯರು ಅವನಿಗೆ, ‘ಕರ್ತನೇ, ಅವನು ವಿಶ್ರಾಂತಿ ಪಡೆಯುತ್ತಿರುವಲ್ಲಿ ಸ್ವಸ್ಥನಾಗುವನು’ ಎಂದರು. ಯೇಸು ಅವನ ಮರಣದ ಕುರಿತು ಮಾತಾಡಿದ್ದನು.”—ಯೋಹಾನ 11:11-13.

  • ‘ದಾವೀದನಾದರೋ ತನ್ನ ಸಂತತಿಯವರಲ್ಲಿ ದೇವರ ಸುವ್ಯಕ್ತ ಚಿತ್ತಕ್ಕನುಸಾರ ಸೇವೆಮಾಡಿ ಮರಣದಲ್ಲಿ ನಿದ್ರೆಹೋದನು.’—ಅಪೊಸ್ತಲರ ಕಾರ್ಯಗಳು 13:36.

  • “ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟಿದ್ದಾನೆ; ಮರಣದಲ್ಲಿ ನಿದ್ರೆಹೋದವರಲ್ಲಿ ಪ್ರಥಮಫಲವಾಗಿದ್ದಾನೆ.”—1 ಕೊರಿಂಥ 15:20.

  • “ಮರಣದಲ್ಲಿ ನಿದ್ರೆಹೋಗುತ್ತಿರುವವರ ವಿಷಯದಲ್ಲಿ ನೀವು ಅಜ್ಞಾನಿಗಳಾಗಿರಬಾರದೆಂಬುದು ನಮ್ಮ ಅಪೇಕ್ಷೆ; ನಿರೀಕ್ಷೆಯಿಲ್ಲದವರು ದುಃಖಿಸುವಂಥ ರೀತಿಯಲ್ಲಿ ನೀವು ದುಃಖಿಸಬಾರದು.”—1 ಥೆಸಲೊನೀಕ 4:13.

ಸತ್ತವರು ಜೀವಿತರಾಗುವರು

  • “ಮೃತರಾದ ನಿನ್ನ ಜನರು ಬದುಕುವರು, ನನ್ನವರ ಹೆಣಗಳು ಜೀವದಿಂದೇಳುವವು . . . ಎಚ್ಚತ್ತು ಹರ್ಷಧ್ವನಿ ಗೈಯಿರಿ!”—ಯೆಶಾಯ 26:19.

  • ‘ದೂಳಿನ ನೆಲದೊಳಗೆ ದೀರ್ಘನಿದ್ರೆಮಾಡುವವರಲ್ಲಿ ಅನೇಕರು ಎಚ್ಚತ್ತುಕೊಳ್ಳುವರು.’—ದಾನಿಯೇಲ 12:2.

  • “ಸ್ಮರಣೆಯ ಸಮಾಧಿಗಳಲ್ಲಿ ಇರುವವರೆಲ್ಲರೂ ಅವನ ಸ್ವರವನ್ನು ಕೇಳಿ ಹೊರಗೆ ಬರುವ ಕಾಲ ಬರುತ್ತದೆ.”—ಯೋಹಾನ 5:28, 29.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ