ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w18 ಫೆಬ್ರವರಿ ಪು. 13-17
  • ಯೆಹೋವನಿಗೆ ಎಲ್ಲವೂ ಸಾಧ್ಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನಿಗೆ ಎಲ್ಲವೂ ಸಾಧ್ಯ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಮುಂಜಾನೆಯಿಂದ ಮುಸ್ಸಂಜೆಯ ವರೆಗೆ ಮೈಮುರಿಯುವ ಕೆಲಸ
  • ಗಡೀಪಾರಾದವರು ಕಿರ್ಗಿಸ್ತಾನಕ್ಕೆ ಸತ್ಯ ತಂದರು
  • ಸತ್ಯ ನನ್ನ ಹುಟ್ಟೂರಿಗೆ ಕಾಲಿಟ್ಟಿತು
  • ಇದೇ ಸತ್ಯ ಎಂದು ನನ್ನ ಹೆಂಡತಿ ತಕ್ಷಣ ಗುರುತಿಸಿದಳು
  • ನಿಷೇಧದ ಮಧ್ಯದಲ್ಲೂ ನಡೆದ ಕೂಟಗಳು ಮತ್ತು ದೀಕ್ಷಾಸ್ನಾನ
  • ಹೆಚ್ಚು ಸೇವೆ ಮಾಡಲು ಸಿಕ್ಕಿದ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಂಡೆವು
  • ಕುಟುಂಬದಲ್ಲಿ ಮತ್ತು ಸೇವೆಯಲ್ಲಿ ಹೆಚ್ಚನ್ನು ಮಾಡಿದೆವು
  • ಗಮನಾರ್ಹವಾದ ಬದಲಾವಣೆಗಳು
  • ಯೌವನದಲ್ಲಿ ಅವರು ಮಾಡಿದ ನಿರ್ಣಯದ ಬಗ್ಗೆ ವಿಷಾದವಿರಲಿಲ್ಲ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಪರಿವಿಡಿ
    ಎಚ್ಚರ!—2016
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
w18 ಫೆಬ್ರವರಿ ಪು. 13-17
ಬ್ಯಾಷನ್‌ಬೈ ಬಡಿಬಾಯೆಫ್‌

ಜೀವನ ಕಥೆ

ಯೆಹೋವನಿಗೆ ಎಲ್ಲವೂ ಸಾಧ್ಯ

ಬ್ಯಾಷನ್‌ಬೈ ಬಡಿಬಾಯೆಫ್‌ ಹೇಳಿದಂತೆ

“ಇನ್ನು ಮರಣ ಇರೋದಿಲ್ಲ. ಸತ್ತವರು ಮತ್ತೆ ಬದುಕಿ ಬರುತ್ತಾರೆ” ಎಂದು ಯಾರೋ ಮಾತಾಡುತ್ತಿರುವುದು ಬಸ್ಸಲ್ಲಿ ಹೋಗುತ್ತಿದ್ದ ನನ್ನ ಹೆಂಡತಿ ಮೈರಾಮ್‌ಬುಬುಗೆ ಕೇಳಿಸಿತು. ವಿಷಯ ಏನಿರಬಹುದು ಎಂದು ಕುತೂಹಲವಾಯಿತು, ಹೆಚ್ಚು ತಿಳುಕೊಳ್ಳಲು ಬಯಸಿದಳು. ಬಸ್‌ ನಿಂತು ಪ್ರಯಾಣಿಕರೆಲ್ಲಾ ಇಳಿದುಹೋದಾಗ ಅವಳು ಆ ವಿಷಯವನ್ನು ಮಾತಾಡುತ್ತಿದ್ದ ಸ್ತ್ರೀಯ ಹಿಂದೆನೇ ಓಡಿ ಹಿಡಿದಳು. ಅವರ ಹೆಸರು ಆಪೂನ್‌ ಮಂಬೇಟ್ಸಾಡಿಕೋವ. ಅವರೊಬ್ಬ ಯೆಹೋವನ ಸಾಕ್ಷಿ. ಆಗೆಲ್ಲಾ ಯೆಹೋವನ ಸಾಕ್ಷಿಗಳ ಹತ್ತಿರ ಮಾತಾಡುವುದು ಸಮಸ್ಯೆಯನ್ನು ಕೈಬೀಸಿ ಕರೆಯುವಂತಿತ್ತು. ಆದರೆ ಆಪೂನ್‌ರವರಿಂದ ಆಮೇಲೆ ನಾವು ಕಲಿತ ವಿಷಯ ನಮ್ಮ ಬದುಕನ್ನೇ ಬದಲಾಯಿಸಿತು.

ಮುಂಜಾನೆಯಿಂದ ಮುಸ್ಸಂಜೆಯ ವರೆಗೆ ಮೈಮುರಿಯುವ ಕೆಲಸ

ನಾನು 1937​ರಲ್ಲಿ ಹುಟ್ಟಿದೆ. ನಮ್ಮೂರು ಕಿರ್ಗಿಸ್ತಾನದ ಟಾಕ್‌ಮಾಕ್‌ ಎಂಬ ಸ್ಥಳದ ಹತ್ತಿರ ಇತ್ತು. ನಾವು ಕಿರ್ಗಿಸ್‌ ಜನಾಂಗಕ್ಕೆ ಸೇರಿದವರು. ಕಿರ್ಗಿಸ್‌ ಭಾಷೆ ಮಾತಾಡುತ್ತೇವೆ. ನನ್ನ ಹೆತ್ತವರು ಗದ್ದೆಕೆಲಸ ಮಾಡುತ್ತಿದ್ದರು. ಅವರು ಕಾಲ್ಖಾಸ್‌ ಎಂದು ಕರೆಯಲಾಗುವ ದೊಡ್ಡ ಜಮೀನುಗಳಲ್ಲಿ ಮುಂಜಾನೆಯಿಂದ ಮುಸ್ಸಂಜೆಯ ವರೆಗೆ ಕೆಲಸ ಮಾಡುತ್ತಿದ್ದರು. ಗದ್ದೆಕೆಲಸ ಮಾಡುವವರಿಗೆ ಊಟಕ್ಕೆ ಬೇಕಾದದ್ದನ್ನು ಕೊಡಲಾಗುತ್ತಿತ್ತು, ಆದರೆ ವರ್ಷಕ್ಕೊಮ್ಮೆ ಮಾತ್ರ ಸಂಬಳ ಕೊಡುತ್ತಿದ್ದರು. ಅಮ್ಮ ನನ್ನನ್ನು ಮತ್ತು ನನ್ನ ತಂಗಿಯನ್ನು ನೋಡಿಕೊಳ್ಳಲು ತುಂಬ ಕಷ್ಟಪಟ್ಟರು. ನಾನು ಬರೀ ಐದು ವರ್ಷ ಶಾಲೆಗೆ ಹೋದೆ. ಆಮೇಲೆ ಕಾಲ್ಖಾಸ್‌ನಲ್ಲಿ ಕೆಲಸ ಮಾಡಲು ಆರಂಭಿಸಿದೆ.

ಕಿರ್ಗಿಸ್ತಾನ್‌ ನಕ್ಷೆ
ಟೆಸ್ಕೀ ಅಲಾ-ಟೂ ಪರ್ವತ ಶ್ರೇಣಿ

ಟೆಸ್ಕೀ ಅಲಾ-ಟೂ ಪರ್ವತ ಶ್ರೇಣಿ

ನಮ್ಮೂರಲ್ಲಿ ಬಡತನ ಎಲ್ಲೆಲ್ಲೂ ಕಾಣುತ್ತಿತ್ತು. ನಾವು ಮೈಮುರಿದು ದುಡಿಯುತ್ತಾ ಇದ್ದರೂ ಹೊಟ್ಟೆ-ಬಟ್ಟೆಗೇ ಸಾಕಾಗುತ್ತಿರಲಿಲ್ಲ. ಯುವಕನಾಗಿದ್ದಾಗ ನಾನು ಜೀವನದ ಉದ್ದೇಶದ ಬಗ್ಗೆ, ಭವಿಷ್ಯದ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಯೆಹೋವ ದೇವರ ಕುರಿತಾದ ಮತ್ತು ಆತನ ಉದ್ದೇಶದ ಕುರಿತಾದ ಅದ್ಭುತ ಸತ್ಯಗಳು ನನ್ನ ಬದುಕನ್ನು ಬದಲಾಯಿಸುತ್ತವೆ ಎಂದು ನಾನು ನೆನಸಿರಲೇ ಇಲ್ಲ. ದೇವರ ವಾಕ್ಯದಲ್ಲಿರುವ ಸಂದೇಶ ಕಿರ್ಗಿಸ್ತಾನಕ್ಕೆ ಹೇಗೆ ಬಂತು, ಹೇಗೆ ಎಲ್ಲಾ ಕಡೆ ಹಬ್ಬಿತು ಅಂತ ಹೇಳಲು ತುಂಬ ಖುಷಿಯಾಗುತ್ತದೆ. ಇದೆಲ್ಲಾ ಆರಂಭವಾದದ್ದು ಕಿರ್ಗಿಸ್ತಾನದ ಉತ್ತರ ಭಾಗದಲ್ಲಿರುವ ನನ್ನ ಹುಟ್ಟೂರಲ್ಲಿ.

ಗಡೀಪಾರಾದವರು ಕಿರ್ಗಿಸ್ತಾನಕ್ಕೆ ಸತ್ಯ ತಂದರು

1956​ರಲ್ಲಿ ಯೆಹೋವನ ಕುರಿತ ಸತ್ಯ ಕಿರ್ಗಿಸ್ತಾನದಲ್ಲಿ ಬೇರುಬಿಟ್ಟಿತು. ಕಮ್ಯೂನಿಸ್ಟ್‌ ಸಿದ್ಧಾಂತವನ್ನು ಬಿಟ್ಟು ಸತ್ಯವನ್ನು ಸ್ವೀಕರಿಸುವುದು ಜನರಿಗೆ ಸುಲಭವಾಗಿರಲಿಲ್ಲ. ಯಾಕೆ? ಈಗಿನ ಕಿರ್ಗಿಸ್ತಾನ ಹಿಂದೆ ಸೋವಿಯತ್‌ ಒಕ್ಕೂಟದ (ಯು.ಎಸ್‌.ಎಸ್‌.ಆರ್‌.) ಭಾಗವಾಗಿತ್ತು. ಈ ಒಕ್ಕೂಟದಲ್ಲೆಲ್ಲಾ ಯೆಹೋವನ ಸಾಕ್ಷಿಗಳು ರಾಜಕೀಯ ವಿಷಯಗಳಲ್ಲಿ ತಲೆಹಾಕಲಿಲ್ಲ. (ಯೋಹಾ. 18:36) ಇದರಿಂದ ಅವರನ್ನು ಕಮ್ಯೂನಿಸ್ಟ್‌ ರಾಜ್ಯದ ಶತ್ರುಗಳೆಂದು ತೀರ್ಮಾನಿಸಿ ಹಿಂಸೆ ಕೊಡಲಾಗುತ್ತಿತ್ತು. ಆದರೆ ದೇವರ ವಾಕ್ಯ ಸಹೃದಯದ ಜನರಿಗೆ ಮುಟ್ಟದಂತೆ ಯಾವುದೇ ಸಿದ್ಧಾಂತ ತಡೆಯಲು ಸಾಧ್ಯವಾಗಲಿಲ್ಲ. ಇದರಿಂದ ನಾನು ಒಂದು ಪ್ರಾಮುಖ್ಯ ವಿಷಯ ಕಲಿತೆ. ಯೆಹೋವನಿಗೆ “ಎಲ್ಲವೂ ಸಾಧ್ಯ.” ಇದನ್ನು ನಾನು ಜೀವನಪೂರ್ತಿ ಮರೆಯಲ್ಲ.—ಮಾರ್ಕ 10:27.

ಎಮೀಲ್‌ ಯಾಂಟ್‌ಸೆನ್‌

ಎಮೀಲ್‌ ಯಾಂಟ್‌ಸೆನ್‌

ಯೆಹೋವನ ಸಾಕ್ಷಿಗಳಿಗೆ ಕೊಟ್ಟ ಹಿಂಸೆಯಿಂದಾಗಿ ಸತ್ಯ ಕಿರ್ಗಿಸ್ತಾನಕ್ಕೆ ಬಂದು ಮುಟ್ಟಿತು. ಅದ್ಹೇಗೆ ಅಂತೀರಾ? ದೇಶದ್ರೋಹಿಗಳೆಂದು ನಿರ್ಣಯಿಸಲಾದ ವ್ಯಕ್ತಿಗಳನ್ನು ಸೋವಿಯತ್‌ ಒಕ್ಕೂಟದ ಭಾಗವಾಗಿದ್ದ ಸೈಬೀರಿಯಕ್ಕೆ ಗಡೀಪಾರು ಮಾಡಲಾಗುತ್ತಿತ್ತು. ಗಡೀಪಾರಾದವರಲ್ಲಿ ಅನೇಕರು ಬಿಡುಗಡೆಯಾಗಿ ಕಿರ್ಗಿಸ್ತಾನಕ್ಕೆ ಬಂದರು. ಹೀಗೆ ಬಂದವರಲ್ಲಿ ಕೆಲವರು ತಮ್ಮೊಂದಿಗೆ ಸತ್ಯವನ್ನೂ ತಂದರು. ಇವರಲ್ಲಿ ಎಮೀಲ್‌ ಯಾಂಟ್‌ಸೆನ್‌ ಕೂಡ ಒಬ್ಬರಾಗಿದ್ದರು. ಇವರು 1919​ರಲ್ಲಿ ಕಿರ್ಗಿಸ್ತಾನದಲ್ಲಿ ಹುಟ್ಟಿದವರು. ಎಮೀಲ್‌ರನ್ನು ಕೆಲಸದ ಶಿಬಿರಕ್ಕೆ ಕಳುಹಿಸಲಾಗಿತ್ತು. ಅಲ್ಲಿ ಅವರಿಗೆ ಯೆಹೋವನ ಸಾಕ್ಷಿಗಳ ಪರಿಚಯವಾಯಿತು. ಅವರು ಸತ್ಯವನ್ನು ಸ್ವೀಕರಿಸಿದರು ಮತ್ತು 1956​ರಲ್ಲಿ ಕಿರ್ಗಿಸ್ತಾನಕ್ಕೆ ವಾಪಸ್‌ ಬಂದರು. ನನ್ನ ಊರ ಹತ್ತಿರವಿದ್ದ ಸೊಕುಲುಕ್‌ಗೆ ಬಂದು ನೆಲೆಸಿದರು. 1958​ರಲ್ಲಿ ಈ ಸೊಕುಲುಕ್‌ನಲ್ಲಿ ಒಂದು ಸಭೆಯನ್ನು ಸ್ಥಾಪಿಸಲಾಯಿತು. ಇದು ಕಿರ್ಗಿಸ್ತಾನದಲ್ಲಿ ಸ್ಥಾಪಿಸಲಾದ ಮೊದಲ ಸಭೆಯಾಗಿತ್ತು.

ವಿಕ್ಟರ್‌ ವಿಂಟರ್‌

ವಿಕ್ಟರ್‌ ವಿಂಟರ್‌

ಸುಮಾರು ಒಂದು ವರ್ಷದ ನಂತರ ವಿಕ್ಟರ್‌ ವಿಂಟರ್‌ ಎಂಬ ಸಹೋದರ ಸೊಕುಲುಕ್‌ಗೆ ಬಂದರು. ಈ ನಂಬಿಗಸ್ತ ಸಹೋದರನಿಗೆ ಒಂದರ ಮೇಲೊಂದು ಕಷ್ಟ ಬಂತು. ತಾಟಸ್ಥ್ಯ ಕಾಪಾಡಿಕೊಂಡದ್ದಕ್ಕಾಗಿ ಎರಡು ಸಲ ಮೂರು ವರ್ಷಗಳ ಜೈಲು ಶಿಕ್ಷೆ ಅನುಭವಿಸಿದರು. ನಂತರ ಇನ್ನೂ ಹತ್ತು ವರ್ಷ ಜೈಲಿನಲ್ಲಿದ್ದರು. ಆಮೇಲೆ ಐದು ವರ್ಷ ಅವರನ್ನು ಗಡೀಪಾರು ಮಾಡಲಾಯಿತು. ಇಷ್ಟೆಲ್ಲಾ ಹಿಂಸೆ ಇದ್ದರೂ ಸತ್ಯಾರಾಧನೆಯನ್ನು ಹೆಚ್ಚಿನ ಜನರು ಸ್ವೀಕರಿಸುವುದು ನಿಲ್ಲಲಿಲ್ಲ.

ಸತ್ಯ ನನ್ನ ಹುಟ್ಟೂರಿಗೆ ಕಾಲಿಟ್ಟಿತು

ಎಡುವಾರ್ಟ್‌ ವಾರ್ಟರ್‌

ಎಡುವಾರ್ಟ್‌ ವಾರ್ಟರ್‌

1963​ರಷ್ಟಕ್ಕೆ ಕಿರ್ಗಿಸ್ತಾನದಲ್ಲಿ 160 ಸಾಕ್ಷಿಗಳು ಇದ್ದರು. ಇವರಲ್ಲಿ ಅನೇಕರು ಜರ್ಮನಿ, ಯುಕ್ರೇನ್‌ ಮತ್ತು ರಷ್ಯ ದೇಶದವರು. ಇವರಲ್ಲಿ ಎಡುವಾರ್ಟ್‌ ವಾರ್ಟರ್‌ ಸಹ ಒಬ್ಬರು. 1924​ರಲ್ಲಿ ಜರ್ಮನಿಯಲ್ಲಿ ದೀಕ್ಷಾಸ್ನಾನ ತೆಗೆದುಕೊಂಡಿದ್ದ ಇವರನ್ನು ಗಡೀಪಾರು ಮಾಡಲಾಗಿತ್ತು. 1940​ರ ಸಮಯದಲ್ಲಿ ನಾಜಿಗಳು ಇವರನ್ನು ಸೆರೆಶಿಬಿರಕ್ಕೆ ಕಳುಹಿಸಿದ್ದರು. ಕೆಲವು ವರ್ಷಗಳ ನಂತರ ಸೋವಿಯತ್‌ ಒಕ್ಕೂಟದ ಕಮ್ಯೂನಿಸ್ಟರು ಎಡುವಾರ್ಟ್‌ ಅವರನ್ನು ಗಡೀಪಾರು ಮಾಡಿದ್ದರು. 1961​ರಲ್ಲಿ ಈ ನಂಬಿಗಸ್ತ ಸಹೋದರ ಕಾಂಟ್‌ ಪಟ್ಟಣಕ್ಕೆ ಬಂದರು. ಈ ಕಾಂಟ್‌ ನಮ್ಮ ಊರಿಗೆ ತುಂಬ ಹತ್ತಿರದಲ್ಲಿತ್ತು.

ಎಲ್ಸಾಬೆಟ್‌ ಫೊಟ್‌; ಆಕ್ಸಾಮೇ ಸುಲ್ತಾನಾಲೀಯೆವಾ

ಎಲ್ಸಾಬೆಟ್‌ ಫೊಟ್‌; ಆಕ್ಸಾಮೇ ಸುಲ್ತಾನಾಲೀಯೆವಾ

ಎಲ್ಸಾಬೆಟ್‌ ಫೊಟ್‌ ಎಂಬ ನಿಷ್ಠಾವಂತ ಸಾಕ್ಷಿ ಸಹ ಕಾಂಟ್‌ನಲ್ಲಿದ್ದರು. ಹೊಟ್ಟೆಪಾಡಿಗೆ ಟೈಲರ್‌ ಕೆಲಸ ಮಾಡುತ್ತಿದ್ದರು. ಅವರು ಒಳ್ಳೇ ಟೈಲರ್‌ ಆಗಿದ್ದರಿಂದ ವೈದ್ಯರು ಮತ್ತು ಶಿಕ್ಷಕರಂಥ ಹುದ್ದೆಯಲ್ಲಿದ್ದವರು ಸಹ ಇವರಿಂದ ಬಟ್ಟೆ ಹೊಲಿಸಿಕೊಳ್ಳುತ್ತಿದ್ದರು. ಇವರ ಹತ್ತಿರ ಆಕ್ಸಾಮೇ ಸುಲ್ತಾನಾಲೀಯೆವಾ ಎಂಬ ಸ್ತ್ರೀ ಸಹ ಬಟ್ಟೆ ಹೊಲಿಯಲು ಕೊಡುತ್ತಿದ್ದರು. ಇವರ ಗಂಡ ಸರ್ಕಾರೀ ವಕೀಲರಾಗಿದ್ದರು. ಎಲ್ಸಾಬೆಟ್‌ ಹತ್ತಿರ ಬಟ್ಟೆ ಹೊಲಿಸಿಕೊಳ್ಳಲು ಬರುತ್ತಿದ್ದ ಆಕ್ಸಾಮೇ, ಜೀವನದ ಅರ್ಥದ ಬಗ್ಗೆ ಮತ್ತು ಸತ್ತವರ ಸ್ಥಿತಿಯ ಬಗ್ಗೆ ತುಂಬ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅವರ ಎಲ್ಲಾ ಪ್ರಶ್ನೆಗಳಿಗೆ ಎಲ್ಸಾಬೆಟ್‌ ಬೈಬಲಿನಿಂದ ಉತ್ತರ ಕೊಡುತ್ತಿದ್ದರು. ಮುಂದೆ ಆಕ್ಸಾಮೇ ಹುರುಪಿನ ಪ್ರಚಾರಕಿಯಾದರು.

ನಿಕಾಲೈ ಟ್ಶೀಂಪೂಶ್‌

ನಿಕಾಲೈ ಟ್ಶೀಂಪೂಶ್‌

ಹೆಚ್ಚುಕಡಿಮೆ ಈ ಸಮಯದಲ್ಲಿ ನಿಕಾಲೈ ಟ್ಶೀಂಪೂಶ್‌ರನ್ನು ಸರ್ಕಿಟ್‌ ಮೇಲ್ವಿಚಾರಕರಾಗಿ ನೇಮಿಸಲಾಯಿತು. ಇವರು ಮಾಲ್ಡೋವದವರು. ಸುಮಾರು 30 ವರ್ಷ ಸರ್ಕಿಟ್‌ ಮೇಲ್ವಿಚಾರಕರಾಗಿ ಸೇವೆ ಮಾಡಿದರು. ನಿಕಾಲೈ ಸಭೆಗಳಿಗೆ ಭೇಟಿಮಾಡಿದ್ದು ಮಾತ್ರವಲ್ಲ, ನಮ್ಮ ಸಾಹಿತ್ಯವನ್ನು ನಕಲುಮಾಡಿ ಹಂಚಲು ಬೇಕಾದ ಏರ್ಪಾಡನ್ನೂ ಮಾಡಿದರು. ಅವರ ಚಟುವಟಿಕೆಗಳು ಅಧಿಕಾರಿಗಳ ಗಮನಕ್ಕೆ ಬಂತು. ಆಗ ಎಡುವಾರ್ಟರವರು ನಿಕಾಲೈಯನ್ನು ಪ್ರೋತ್ಸಾಹಿಸಲು ಈ ಸಲಹೆ ಕೊಟ್ಟರು: “‘ನಿಮಗೆ ಸಾಹಿತ್ಯ ಎಲ್ಲಿಂದ ಬರುತ್ತದೆ?’ ಎಂದು ಅಧಿಕಾರಿಗಳು ಕೇಳಿದರೆ, ‘ಬ್ರೂಕ್ಲಿನ್‌ನಲ್ಲಿರುವ ನಮ್ಮ ಮುಖ್ಯ ಕಾರ್ಯಾಲಯದಿಂದ’ ಎಂದು ಧೈರ್ಯವಾಗಿ ಅವರ ಕಣ್ಣಲ್ಲಿ ಕಣ್ಣಿಟ್ಟು ಹೇಳಿ. ಹೆದರುವ ಆವಶ್ಯಕತೆಯಿಲ್ಲ.”—ಮತ್ತಾ. 10:19.

ಈ ಸಂಭಾಷಣೆ ನಡೆದು ಸ್ವಲ್ಪದರಲ್ಲೇ ನಿಕಾಲೈರನ್ನು ಕಾಂಟ್‌ನಲ್ಲಿರುವ ಗುಪ್ತದಳದ ಮುಖ್ಯ ಕಾರ್ಯಾಲಯಕ್ಕೆ ಕರೆಯಲಾಯಿತು. ಮುಂದೆ ಏನಾಯಿತೆಂದು ನಿಕಾಲೈ ಹೇಳುತ್ತಾರೆ: “ನಿಮ್ಮ ಸಾಹಿತ್ಯ ಎಲ್ಲಿಂದ ಬರುತ್ತದೆ ಎಂದು ಅಧಿಕಾರಿ ಕೇಳಿದರು. ಬ್ರೂಕ್ಲಿನ್‌ನಿಂದ ಎಂದು ನಾನು ಉತ್ತರ ಕೊಟ್ಟೆ. ಮುಂದೆ ಏನು ಹೇಳಬೇಕೆಂದು ಆ ಅಧಿಕಾರಿಗೆ ಗೊತ್ತಾಗಲಿಲ್ಲ. ನನ್ನನ್ನು ಹೋಗಲು ಹೇಳಿದರು, ಪುನಃ ಯಾವತ್ತೂ ಕರೆಯಲಿಲ್ಲ.” ಇಂಥ ಧೀರ ಸಾಕ್ಷಿಗಳು ತುಂಬ ಜಾಗ್ರತೆಯಿಂದ ನಮ್ಮೂರಿದ್ದ ಉತ್ತರ ಕಿರ್ಗಿಸ್ತಾನದಲ್ಲಿ ಸುವಾರ್ತೆಯನ್ನು ಹಬ್ಬಿಸುತ್ತಾ ಬಂದರು. ಕೊನೆಗೆ 1981​ರಲ್ಲಿ ಯೆಹೋವನ ಕುರಿತ ಅಮೂಲ್ಯ ಸತ್ಯ ನನ್ನ ಹೆಂಡತಿ ಮೈರಾಮ್‌ಬುಬು ಕಿವಿಗೆ ಬಿತ್ತು.

ಇದೇ ಸತ್ಯ ಎಂದು ನನ್ನ ಹೆಂಡತಿ ತಕ್ಷಣ ಗುರುತಿಸಿದಳು

ಮೈರಾಮ್‌ಬುಬು ಕಿರ್ಗಿಸ್ತಾನದ ನ್ಯಾರ್ನ್‌ ಕ್ಷೇತ್ರದವಳು. 1974​ರ ಆಗಸ್ಟ್‌ ತಿಂಗಳಲ್ಲಿ ಒಂದಿನ ಅವಳು ನನ್ನ ತಂಗಿಯ ಮನೆಗೆ ಬಂದಿದ್ದಳು. ಆಗಲೇ ನಾವು ಮೊದಲನೇ ಸಾರಿ ಭೇಟಿಮಾಡಿದ್ದು. ಅವಳನ್ನು ನೋಡಿದ ತಕ್ಷಣ ನನಗೆ ಇಷ್ಟವಾಯಿತು. ಅವತ್ತಿನ ದಿನನೇ ನಮ್ಮ ಮದುವೆಯೂ ಆಯಿತು.

ಆಪೂನ್‌ ಮಂಬೇಟ್ಸಾಡಿಕೋವ

ಆಪೂನ್‌ ಮಂಬೇಟ್ಸಾಡಿಕೋವ

1981​ರ ಜನವರಿ ತಿಂಗಳಲ್ಲಿ ಒಂದು ದಿನ ಮೈರಾಮ್‌ಬುಬು ನಮ್ಮೂರಲ್ಲಿದ್ದ ಮಾರುಕಟ್ಟೆಗೆ ಬಸ್ಸಲ್ಲಿ ಹೋಗುತ್ತಿದ್ದಾಗ ನಾನು ಆರಂಭದಲ್ಲಿ ಹೇಳಿದ ಸಂಭಾಷಣೆಯನ್ನು ಕೇಳಿಸಿಕೊಂಡಳು. ನನ್ನ ಹೆಂಡತಿ ಹೆಚ್ಚನ್ನು ತಿಳುಕೊಳ್ಳಲು ಬಯಸಿದಳು. ಆದ್ದರಿಂದ ಆ ಸಹೋದರಿಯ ಹೆಸರು ಮತ್ತು ವಿಳಾಸವನ್ನು ಕೇಳಿದಳು. ಆ ಸಹೋದರಿ ತನ್ನ ಹೆಸರು ಆಪೂನ್‌ ಎಂದು ಹೇಳಿದರು. ಆದರೆ 1980​ರ ದಶಕದಲ್ಲೂ ಯೆಹೋವನ ಸಾಕ್ಷಿಗಳ ಕೆಲಸಕ್ಕೆ ನಿಷೇಧ ಇದ್ದದರಿಂದ ಅವರು ತನ್ನ ವಿಳಾಸ ಕೊಡದೆ ನಮ್ಮ ವಿಳಾಸ ತೆಗೆದುಕೊಂಡರು. ಅವತ್ತು ನನ್ನ ಹೆಂಡತಿ ತುಂಬ ಸಂತೋಷದಿಂದ ಮನೆಗೆ ಬಂದಳು.

ಅವಳು ಹೇಳಿದ್ದು: “ನಾನು ಅದ್ಭುತವಾದ ವಿಷಯಗಳನ್ನು ಕೇಳಿಸಿಕೊಂಡೆ. ಸಾವೇ ಇಲ್ಲದ ಪರಿಸ್ಥಿತಿ ಬೇಗ ಬರುತ್ತದೆ ಎಂದು ಒಬ್ಬ ಸ್ತ್ರೀ ಹೇಳಿದಳು. ಕಾಡು ಪ್ರಾಣಿಗಳು ಸಹ ಸಮಾಧಾನದಿಂದ ಇರುತ್ತವಂತೆ.” ನನಗೆ ಇದನ್ನು ಕೇಳಿಸಿಕೊಂಡಾಗ ಕಟ್ಟುಕಥೆ ಅಂತ ಅನಿಸಿತು. “ಆಯ್ತು ಬರ್ಲಿ, ಬಂದರೆ ಹೆಚ್ಚು ವಿಷಯ ತಿಳುಕೊಳ್ಳೋಣ” ಅಂದೆ.

ಮೂರು ತಿಂಗಳಾದ ಮೇಲೆ ಆಪೂನ್‌ ನಮ್ಮನ್ನು ಭೇಟಿಮಾಡಲು ಬಂದರು. ಮುಂದಿನ ಭೇಟಿಗಳಲ್ಲಿ ಅವರ ಜೊತೆ ಬಂದ ಕಿರ್ಗಿಸ್‌ ಜನಾಂಗಕ್ಕೆ ಸೇರಿದ ಮೊದಲ ಕೆಲವು ಸಾಕ್ಷಿಗಳ ಪರಿಚಯ ನಮಗಾಯಿತು. ಈ ಸಹೋದರಿಯರು ನಮಗೆ ಯೆಹೋವನ ಬಗ್ಗೆ ಮತ್ತು ಮಾನವಕುಲಕ್ಕಾಗಿ ಆತನಿಗಿರುವ ಉದ್ದೇಶದ ಬಗ್ಗೆ ಅದ್ಭುತವಾದ ಸತ್ಯಗಳನ್ನು ತಿಳಿಸಿದರು. ಕಳೆದುಕೊಂಡ ಪ್ರಮೋದವನದಿಂದ ಮತ್ತೆ ಪಡೆದುಕೊಂಡ ಪ್ರಮೋದವನಕ್ಕೆa (ಇಂಗ್ಲಿಷ್‌) ಎಂಬ ಪುಸ್ತಕದಿಂದ ಅವರು ಕಲಿಸುತ್ತಿದ್ದರು. ಈ ಪುಸ್ತಕ ಟಾಕ್‌ಮಾಕ್‌ನಲ್ಲಿ ಒಂದೇ ಒಂದು ಪ್ರತಿ ಇದ್ದದರಿಂದ ನಾವು ನಮ್ಮ ಪ್ರತಿಗಳನ್ನು ಬರೆದುಕೊಂಡೆವು.

ನಾವು ಆರಂಭದಲ್ಲಿ ಆದಿಕಾಂಡ 3:15​ರಲ್ಲಿರುವ ಪ್ರವಾದನೆಯ ಬಗ್ಗೆ ಕಲಿತೆವು. ಕ್ರಿಸ್ತನು ದೇವರ ರಾಜ್ಯದ ರಾಜನಾಗುವಾಗ ಈ ಪ್ರವಾದನೆ ನೆರವೇರುವುದು. ಎಲ್ಲರೂ ಈ ಪ್ರಾಮುಖ್ಯ ಸಂದೇಶ ಕೇಳಿಸಿಕೊಳ್ಳುವುದು ಮುಖ್ಯವಾಗಿತ್ತು. ಇದರಿಂದ ನಾವು ಸಹ ಸಾರುವ ಕೆಲಸದಲ್ಲಿ ಭಾಗವಹಿಸಲು ತೀರ್ಮಾನ ಮಾಡಿದೆವು. (ಮತ್ತಾ. 24:14) ಬೈಬಲ್‌ ಸತ್ಯ ನಮ್ಮ ಬದುಕನ್ನೇ ಬದಲಾಯಿಸಿಬಿಟ್ಟಿತು.

ನಿಷೇಧದ ಮಧ್ಯದಲ್ಲೂ ನಡೆದ ಕೂಟಗಳು ಮತ್ತು ದೀಕ್ಷಾಸ್ನಾನ

ಟಾಕ್‌ಮಾಕ್‌ನಲ್ಲಿದ್ದ ಒಬ್ಬ ಸಹೋದರ ನಮ್ಮನ್ನು ಒಂದು ಮದುವೆಗೆ ಕರೆದರು. ಅಲ್ಲಿಗೆ ಹೋದಾಗ ಸಾಕ್ಷಿಗಳು ನಡಕೊಳ್ಳುವ ರೀತಿ ತುಂಬ ಭಿನ್ನವಾಗಿರುವುದನ್ನು ನಾನು, ನನ್ನ ಹೆಂಡತಿ ನೋಡಿದೆವು. ಅಲ್ಲಿ ಮದ್ಯಸೇವನೆ ಇರಲಿಲ್ಲ ಮತ್ತು ಎಲ್ಲ ತುಂಬ ವ್ಯವಸ್ಥಿತವಾಗಿತ್ತು. ಆದರೆ ಬೇರೆಯವರ ಮದುವೆಗಳಲ್ಲಿ ಹೀಗಿರಲಿಲ್ಲ. ಯಾಕೆಂದರೆ ಈ ಮದುವೆಗಳಿಗೆ ಬಂದವರು ತುಂಬ ಕುಡಿದು ರಂಪ ಎಬ್ಬಿಸಿ ಕೆಟ್ಟ ಮಾತು ಆಡುತ್ತಿದ್ದರು.

ಟಾಕ್‌ಮಾಕ್‌ನಲ್ಲಿದ್ದ ಸಭೆಯ ಕೆಲವು ಕೂಟಗಳಿಗೂ ನಾವು ಹಾಜರಾದೆವು. ವಾತಾವರಣ ಚೆನ್ನಾಗಿದ್ದರೆ ಈ ಕೂಟಗಳನ್ನು ಕಾಡಲ್ಲಿ ನಡೆಸುತ್ತಿದ್ದರು. ಪೊಲೀಸರು ತಮ್ಮ ಮೇಲೆ ಒಂದು ಕಣ್ಣಿಟ್ಟಿದ್ದಾರೆ ಎಂದು ಗೊತ್ತಿದ್ದರಿಂದ, ಒಂದುವೇಳೆ ಪೊಲೀಸರು ಬಂದರೆ ತಿಳಿಸಲು ಒಬ್ಬ ಸಹೋದರನನ್ನು ಕಾವಲು ಕಾಯಲು ನೇಮಿಸಿದ್ದರು. ಚಳಿಗಾಲದಲ್ಲಿ ನಾವು ಒಂದು ಮನೆಯಲ್ಲಿ ಕೂಟ ನಡೆಸುತ್ತಿದ್ದೆವು. ಒಂದೆರಡು ಸಾರಿ ಪೊಲೀಸರು ಆ ಮನೆಗೆ ಬಂದು ‘ಇಲ್ಲೇನ್‌ ಮಾಡ್ತಿದ್ದೀರಾ?’ ಎಂದು ಗದರಿಸುತ್ತಾ ಕೇಳಿದರು. ಈ ಕಾರಣಗಳಿಂದಾಗಿ, ನಾನು ಮತ್ತು ಮೈರಾಮ್‌ಬುಬು 1982​ರ ಜುಲೈ ತಿಂಗಳಲ್ಲಿ ಟ್ಶುಯ್‌ ನದಿಯಲ್ಲಿ ದೀಕ್ಷಾಸ್ನಾನ ಪಡೆದುಕೊಂಡಾಗ ತುಂಬ ಜಾಗ್ರತೆ ವಹಿಸಬೇಕಿತ್ತು. (ಮತ್ತಾ. 10:16) ಸಹೋದರರು ಚಿಕ್ಕಚಿಕ್ಕ ಗುಂಪುಗಳಾಗಿ ಬಂದು ಕಾಡಲ್ಲಿ ಒಟ್ಟುಸೇರಿದರು. ನಾವೊಂದು ರಾಜ್ಯ ಗೀತೆ ಹಾಡಿ, ದೀಕ್ಷಾಸ್ನಾನದ ಭಾಷಣ ಕೇಳಿಸಿಕೊಂಡೆವು.

ಹೆಚ್ಚು ಸೇವೆ ಮಾಡಲು ಸಿಕ್ಕಿದ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಂಡೆವು

1987​ರಲ್ಲಿ ಒಬ್ಬ ಸಹೋದರ ಬಾಲಿಕ್ಟ್‌ಶಿ ಪಟ್ಟಣದಲ್ಲಿದ್ದ ಒಬ್ಬ ಆಸಕ್ತ ವ್ಯಕ್ತಿಯನ್ನು ಭೇಟಿಮಾಡುವಂತೆ ನನಗೆ ಹೇಳಿದರು. ಅಲ್ಲಿಗೆ ಹೋಗಲು ನಾವು ರೈಲಿನಲ್ಲಿ ನಾಲ್ಕು ತಾಸು ಪ್ರಯಾಣ ಮಾಡಬೇಕಿತ್ತು. ಬಾಲಿಕ್ಟ್‌ಶಿಗೆ ಹೋಗಿ ಅನೇಕ ಸಲ ಸಾರಿದ ಮೇಲೆ ಅಲ್ಲಿ ತುಂಬ ಜನರಿಗೆ ಸುವಾರ್ತೆ ತಿಳಿದುಕೊಳ್ಳುವ ಆಸಕ್ತಿಯಿದೆ ಎಂದು ಗೊತ್ತಾಯಿತು. ಸೇವೆ ಹೆಚ್ಚಿಸಲು ಇದೊಂದು ಒಳ್ಳೇ ಅವಕಾಶವಾಗಿತ್ತು.

ನಾನು ಮತ್ತು ಮೈರಾಮ್‌ಬುಬು ಬಾಲಿಕ್ಟ್‌ಶಿಗೆ ತುಂಬ ಸಲ ಹೋಗಿ ಬರುತ್ತಿದ್ದೆವು. ಹೆಚ್ಚಾಗಿ ವಾರಾಂತ್ಯಗಳಲ್ಲಿ ಅಲ್ಲೇ ಇರುತ್ತಿದ್ದೆವು, ಸೇವೆಗೆ ಹೋಗುತ್ತಿದ್ದೆವು, ಕ್ರೈಸ್ತ ಕೂಟಗಳನ್ನೂ ನಡೆಸುತ್ತಿದ್ದೆವು. ನಮ್ಮ ಪ್ರಕಾಶನಗಳಿಗಾಗಿ ಬೇಡಿಕೆ ತುಂಬ ಜಾಸ್ತಿಯಾಯಿತು. ನಾವು ಟಾಕ್‌ಮಾಕ್‌ನಿಂದ ಪ್ರಕಾಶನಗಳನ್ನು ಆಲೂಗೆಡ್ಡೆ ಸಾಗಿಸುವ ಚೀಲಗಳಲ್ಲಿ ತೆಗೆದುಕೊಂಡು ಹೋಗುತ್ತಿದ್ದೆವು. ಪ್ರತಿ ತಿಂಗಳು ಎರಡು ಚೀಲದ ತುಂಬ ಸಾಹಿತ್ಯ ತೆಗೆದುಕೊಂಡು ಹೋದರೂ ಸಾಕಾಗುತ್ತಿರಲಿಲ್ಲ. ರೈಲಿನಲ್ಲಿ ಹೋಗಿ ಬರುತ್ತಿರುವಾಗಲೂ ಬೇರೆ ಪ್ರಯಾಣಿಕರಿಗೆ ಸಾಕ್ಷಿ ಕೊಡುತ್ತಿದ್ದೆವು.

ನಾವು ಹೀಗೆ ಹೋಗಿ ಬರುತ್ತಾ ಎಂಟು ವರ್ಷಗಳಾದ ಮೇಲೆ 1995​ರಲ್ಲಿ ಬಾಲಿಕ್ಟ್‌ಶಿಯಲ್ಲಿ ಒಂದು ಸಭೆಯನ್ನು ಸ್ಥಾಪಿಸಲಾಯಿತು. ಅಲ್ಲಿಗೆ ಹೋಗಿ ಬರಲು ನಮಗೆ ತುಂಬ ಹಣ ಬೇಕಾಗುತ್ತಿತ್ತು. ಆದರೆ ನಮ್ಮ ಹತ್ತಿರ ಹೆಚ್ಚು ಹಣ ಇರಲಿಲ್ಲ. ಒಬ್ಬ ಸಹೋದರನು ನಮ್ಮ ಖರ್ಚಿಗೆ ಕೊಡುತ್ತಿದ್ದ ಹಣದಿಂದ ಈ ಸಮಸ್ಯೆಯನ್ನು ನಿಭಾಯಿಸಲು ಸಾಧ್ಯವಾಯಿತು. ಸೇವೆ ಹೆಚ್ಚು ಮಾಡಲು ನಮಗೆ ಮನಸ್ಸಿದೆ ಅಂತ ಯೆಹೋವನು ನೋಡಿ ನಮಗೋಸ್ಕರ “ಪರಲೋಕದ ದ್ವಾರಗಳನ್ನು ತೆರೆದು” ಬಿಟ್ಟನು. (ಮಲಾ. 3:10) ನಿಜಕ್ಕೂ ಯೆಹೋವನಿಗೆ ಎಲ್ಲವೂ ಸಾಧ್ಯ!

ಕುಟುಂಬದಲ್ಲಿ ಮತ್ತು ಸೇವೆಯಲ್ಲಿ ಹೆಚ್ಚನ್ನು ಮಾಡಿದೆವು

1992​ರಲ್ಲಿ ನನ್ನನ್ನು ಹಿರಿಯನಾಗಿ ನೇಮಿಸಲಾಯಿತು. ಇಡೀ ದೇಶದಲ್ಲಿ ನಾನು ಕಿರ್ಗಿಸ್‌ ಜನಾಂಗಕ್ಕೆ ಸೇರಿದ ಮೊದಲ ಹಿರಿಯನಾದೆ. ಟಾಕ್‌ಮಾಕ್‌ನಲ್ಲಿದ್ದ ನಮ್ಮ ಸ್ವಂತ ಸಭೆಯಲ್ಲಿ ಹೊಸ ವಿಧಾನಗಳಲ್ಲಿ ಸೇವೆ ಮಾಡುವ ಅವಕಾಶಗಳು ಸಿಕ್ಕಿದವು. ತಾಂತ್ರಿಕ ತರಬೇತಿ ಶಾಲೆಗಳಲ್ಲಿ ಓದುತ್ತಿದ್ದ ಅನೇಕ ಯುವ ಕಿರ್ಗಿಸ್‌ ವಿದ್ಯಾರ್ಥಿಗಳೊಂದಿಗೆ ಬೈಬಲ್‌ ಅಧ್ಯಯನ ಮಾಡಿದೆವು. ನಾವು ಹೀಗೆ ಬೈಬಲ್‌ ಅಧ್ಯಯನ ಮಾಡಿದ ಒಬ್ಬ ಯುವಕ ಈಗ ಶಾಖಾ ಸಮಿತಿಯ ಸದಸ್ಯನಾಗಿದ್ದಾನೆ. ಇನ್ನಿಬ್ಬರು ವಿಶೇಷ ಪಯನೀಯರ್‌ ಆಗಿದ್ದಾರೆ. ನಮ್ಮ ಕೂಟಗಳಿಗೆ ಬರುವ ಬೇರೆಯವರಿಗೂ ಸಹಾಯ ಮಾಡಲು ನಾವು ಮುಂದೆ ಬಂದೆವು. 1990​ನೇ ದಶಕದ ಆರಂಭದಲ್ಲಿ ನಮ್ಮ ಪ್ರಕಾಶನಗಳು ರಷ್ಯನ್‌ ಭಾಷೆಯಲ್ಲಿದ್ದವು ಮತ್ತು ಕೂಟಗಳನ್ನು ಸಹ ರಷ್ಯನ್‌ ಭಾಷೆಯಲ್ಲಿ ನಡೆಸುತ್ತಿದ್ದೆವು. ಆದರೆ ಸಭೆಗೆ ಬರುತ್ತಿದ್ದ ಹೆಚ್ಚೆಚ್ಚು ಜನರ ಮಾತೃಭಾಷೆ ಕಿರ್ಗಿಸ್‌ ಆಗಿತ್ತು. ಆದ್ದರಿಂದ ನಾನು ತರ್ಜುಮೆ ಮಾಡುತ್ತಿದ್ದೆ. ಇದರಿಂದ ಅವರು ಸತ್ಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು.

ಬ್ಯಾಷನ್‌ಬೈ ಬಡಿಬಾಯೆಫ್‌ ಮತ್ತು ಅವರ ಪತ್ನಿ ಎಂಟು ಮಂದಿ ಮಕ್ಕಳೊಂದಿಗೆ

1989​ರಲ್ಲಿ ನಾನು, ನನ್ನ ಹೆಂಡತಿ ಮತ್ತು ಎಂಟು ಮಕ್ಕಳು

ನಾನು ಮತ್ತು ಮೈರಾಮ್‌ಬುಬು ಬೆಳೆಯುತ್ತಾ ಇದ್ದ ನಮ್ಮ ಕುಟುಂಬವನ್ನೂ ನೋಡಿಕೊಳ್ಳಬೇಕಿತ್ತು. ನಾವು ನಮ್ಮ ಮಕ್ಕಳನ್ನು ಸೇವೆಗೆ, ಕೂಟಗಳಿಗೆ ಕರೆದುಕೊಂಡು ಹೋಗುತ್ತಿದ್ದೆವು. ಆಗ 12 ವರ್ಷದವಳಾಗಿದ್ದ ನಮ್ಮ ಮಗಳು ಗೂಲ್‌ಸೈರಾ ಬೀದಿಯಲ್ಲಿ ಹೋಗುತ್ತಾ ಬರುತ್ತಾ ಇದ್ದ ಜನರೊಟ್ಟಿಗೆ ಬೈಬಲ್‌ ಬಗ್ಗೆ ಮಾತಾಡುತ್ತಿದ್ದಳು. ನಮ್ಮ ಮಕ್ಕಳಿಗೆ ಬೈಬಲ್‌ ವಚನಗಳನ್ನು ಬಾಯಿಪಾಠ ಮಾಡುವುದೆಂದರೆ ತುಂಬ ಇಷ್ಟ ಇತ್ತು. ಹೀಗೆ ನಮ್ಮ ಮಕ್ಕಳು ಮತ್ತು ನಂತರ ನಮ್ಮ ಮೊಮ್ಮಕ್ಕಳು ಸಭೆಯ ಚಟುವಟಿಕೆಗಳಲ್ಲಿ ತುಂಬ ಒಳಗೂಡಿದ್ದರು. ಈಗಿರುವ ನಮ್ಮ 9 ಮಂದಿ ಮಕ್ಕಳು ಮತ್ತು 11 ಮಂದಿ ಮೊಮ್ಮಕ್ಕಳಲ್ಲಿ 16 ಮಂದಿ ಯೆಹೋವನ ಸೇವೆ ಮಾಡುತ್ತಿದ್ದಾರೆ ಅಥವಾ ತಮ್ಮ ಹೆತ್ತವರೊಂದಿಗೆ ಕೂಟಗಳಿಗೆ ಹೋಗುತ್ತಿದ್ದಾರೆ.

ಗಮನಾರ್ಹವಾದ ಬದಲಾವಣೆಗಳು

1950​ರ ದಶಕದಲ್ಲಿ ನಮ್ಮ ಕ್ಷೇತ್ರದಲ್ಲಿ ಯೆಹೋವನ ಕೆಲಸವನ್ನು ಆರಂಭಿಸಿದ ಪ್ರೀತಿಯ ಸಹೋದರ ಸಹೋದರಿಯರಿಗೆ ಇಲ್ಲಿ ಆಗಿರುವ ಬದಲಾವಣೆಗಳನ್ನು ನೋಡಿ ತುಂಬ ಆಶ್ಚರ್ಯ ಆಗಬಹುದು. ಒಂದು ವಿಷಯ ಏನೆಂದರೆ, 1990​ರ ದಶಕದಿಂದ ಸುವಾರ್ತೆ ಸಾರಲು ಮತ್ತು ದೊಡ್ಡ ಸಂಖ್ಯೆಯಲ್ಲಿ ಕೂಡಿಬರಲು ನಮಗೆ ಹೆಚ್ಚು ಸ್ವಾತಂತ್ರ್ಯ ಸಿಕ್ಕಿದೆ.

ಬ್ಯಾಷನ್‌ಬೈ ಬಡಿಬಾಯೆಫ್‌ ಮತ್ತು ಅವರ ಪತ್ನಿ ಅಂಗಡಿಯವನಿಗೆ ಸಾರುತ್ತಿದ್ದಾರೆ

ಸೇವೆಯಲ್ಲಿ ನನ್ನ ಹೆಂಡತಿಯೊಂದಿಗೆ

1991​ರಲ್ಲಿ ನಾನು ಮತ್ತು ನನ್ನ ಹೆಂಡತಿ ಮೊದಲನೇ ಸಾರಿ ಒಂದು ಅಧಿವೇಶನಕ್ಕೆ ಹಾಜರಾದೆವು. ಇದು ಕಜಕ್‌ಸ್ತಾನದ ಆಲ್ಮಾ ಆಟಾದಲ್ಲಿ (ಈಗ ಆಲ್ಮಾಟಿ) ನಡೆಯಿತು. 1993​ರಲ್ಲಿ ಕಿರ್ಗಿಸ್ತಾನದಲ್ಲಿ ಮೊದಲ ಬಾರಿಗೆ ಅಧಿವೇಶನ ನಡೆಯಿತು. ಇದು ಬಿಶ್ಕೆಕ್‌ನಲ್ಲಿರುವ ಸ್ಪಾರ್ಟಾಕ್‌ ಕ್ರೀಡಾಂಗಣದಲ್ಲಿ ನಡೆಯಿತು. ಪ್ರಚಾರಕರು ಕ್ರೀಡಾಂಗಣವನ್ನು ಏಳು ದಿನ ಶುಚಿಮಾಡಿದರು. ಇದನ್ನು ನೋಡಿ ಕ್ರೀಡಾಂಗಣದ ನಿರ್ವಾಹಕರು ಎಷ್ಟು ಪ್ರಭಾವಿತರಾದರೆಂದರೆ ಕ್ರೀಡಾಂಗಣವನ್ನು ಉಚಿತವಾಗಿ ಉಪಯೋಗಿಸಲು ಅನುಮತಿ ಕೊಟ್ಟರು.

1994​ರಲ್ಲಿ ಇನ್ನೊಂದು ಮೈಲಿಗಲ್ಲನ್ನು ದಾಟಿದೆವು. ಕಿರ್ಗಿಸ್‌ ಭಾಷೆಯಲ್ಲಿ ನಮ್ಮ ಪ್ರಕಾಶನಗಳನ್ನು ಮುದ್ರಿಸಲಾಯಿತು. ಈಗ ಬಿಶ್ಕೆಕ್‌ನಲ್ಲಿರುವ ಶಾಖಾ ಕಚೇರಿಯಲ್ಲಿರುವ ಭಾಷಾಂತರ ತಂಡ ನಮ್ಮ ಪ್ರಕಾಶನಗಳನ್ನು ಕ್ರಮವಾಗಿ ಕಿರ್ಗಿಸ್‌ ಭಾಷೆಗೆ ಭಾಷಾಂತರ ಮಾಡುತ್ತದೆ. 1998​ರಲ್ಲಿ ಯೆಹೋವನ ಸಾಕ್ಷಿಗಳ ಕೆಲಸಕ್ಕೆ ಕಿರ್ಗಿಸ್ತಾನದಲ್ಲಿ ಕಾನೂನಿನ ಒಪ್ಪಿಗೆ ಸಿಕ್ಕಿತು. ಅಂದಿನಿಂದ ಇಲ್ಲಿ ಹೆಚ್ಚು ಪ್ರಗತಿಯಾಗಿದೆ. ಈಗ ಕಿರ್ಗಿಸ್ತಾನದಲ್ಲಿ 5,000ಕ್ಕಿಂತ ಹೆಚ್ಚು ಪ್ರಚಾರಕರಿದ್ದಾರೆ. ಇಂದು ಒಟ್ಟು 83 ಸಭೆಗಳು ಮತ್ತು 25 ಗುಂಪುಗಳಿವೆ. ಕೂಟಗಳು ಇಂಗ್ಲಿಷ್‌, ಉಜ್ಬೇಕ್‌, ಕಿರ್ಗಿಸ್‌, ಚೈನೀಸ್‌, ಟರ್ಕಿಷ್‌, ರಷ್ಯನ್‌, ರಷ್ಯನ್‌ ಸನ್ನೆ ಭಾಷೆ ಮತ್ತು ವೀಗೂರ್‌ ಭಾಷೆಗಳಲ್ಲಿ ನಡೆಯುತ್ತವೆ. ಬೇರೆ ಬೇರೆ ಹಿನ್ನೆಲೆಯಿಂದ ಬಂದಿರುವ ಈ ಪ್ರೀತಿಯ ಸಹೋದರ ಸಹೋದರಿಯರು ಐಕ್ಯದಿಂದ ಯೆಹೋವನ ಸೇವೆ ಮಾಡುತ್ತಾರೆ. ಯೆಹೋವನಿಂದಲೇ ಈ ಎಲ್ಲಾ ಗಮನಾರ್ಹ ಬದಲಾವಣೆಗಳು ಆಗಿವೆ.

ಯೆಹೋವನು ನನ್ನ ಜೀವನವನ್ನೂ ಬದಲಾಯಿಸಿದ್ದಾನೆ. ನಾನು ಬಡ ರೈತನ ಕುಟುಂಬದಲ್ಲಿ ಹುಟ್ಟಿದವನು. ಬರೀ ಐದು ವರ್ಷ ಶಾಲೆಗೆ ಹೋದವನು. ಆದರೂ ಯೆಹೋವನು ನನ್ನನ್ನು ಒಬ್ಬ ಹಿರಿಯನಾಗಿ ಮಾಡಿದ್ದಾನೆ ಮತ್ತು ನನಗಿಂತ ಹೆಚ್ಚು ಓದಿರುವ ಜನರಿಗೆ ಬೈಬಲ್‌ ಸತ್ಯಗಳನ್ನು ಕಲಿಸಲು ಉಪಯೋಗಿಸಿದ್ದಾನೆ. ನಿಜಕ್ಕೂ ಯೆಹೋವನು ಅಸಾಮಾನ್ಯವಾದ ವಿಷಯಗಳನ್ನು ಮಾಡುವ ದೇವರು. ಯೆಹೋವನ ಬಗ್ಗೆ ನಿಷ್ಠೆಯಿಂದ ಸಾಕ್ಷಿ ಕೊಡುತ್ತಾ ಇರಲು ನನ್ನ ಅನುಭವವೇ ನನಗೆ ಸ್ಫೂರ್ತಿ ಕೊಡುತ್ತದೆ. ಆತನಿಗೆ “ಎಲ್ಲವೂ ಸಾಧ್ಯ.”—ಮತ್ತಾ. 19:26.

a ಯೆಹೋವನ ಸಾಕ್ಷಿಗಳ ಪ್ರಕಾಶನ. ಈಗ ಮುದ್ರಣವಾಗುತ್ತಿಲ್ಲ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ