ಒಳ್ಳೇತನ ಅದನ್ನು ಬೆಳೆಸಿಕೊಳ್ಳುವ ವಿಧಾನ
ಬೇರೆಯವರು ನಮ್ಮನ್ನು ನೋಡಿ ಒಳ್ಳೇ ವ್ಯಕ್ತಿ ಅಂದುಕೊಳ್ಳಬೇಕೆಂದು ನಾವೆಲ್ಲರೂ ಬಯಸುತ್ತೇವೆ. ಆದರೆ ಇಂದಿನ ಲೋಕದಲ್ಲಿ ಒಳ್ಳೆಯವರಾಗಿರುವುದು ಅಷ್ಟು ಸುಲಭ ಅಲ್ಲ. ತುಂಬ ಜನರು ‘ಒಳ್ಳೇತನವನ್ನು ಪ್ರೀತಿಸದವರಾಗಿದ್ದಾರೆ.’ (2 ತಿಮೊ. 3:3) ಒಬ್ಬೊಬ್ಬರೂ ತಮಗೆ ಯಾವುದು ಸರಿ ಕಾಣುತ್ತೋ ಅದನ್ನು ಮಾಡಿಕೊಂಡು ಹೋಗುತ್ತಾರೆ. ಇದರಿಂದ ‘ಕೆಟ್ಟದ್ದು ಒಳ್ಳೇದಾಗಿಬಿಟ್ಟಿದೆ ಒಳ್ಳೇದು ಕೆಟ್ಟದಾಗಿಬಿಟ್ಟಿದೆ.’ (ಯೆಶಾ. 5:20) ನಾವು ಬೆಳೆದು ಬಂದಿರುವ ವಾತಾವರಣ ಮತ್ತು ನಮ್ಮ ಅಪರಿಪೂರ್ಣತೆ ಸಹ ನಮ್ಮ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಅನೇಕ ವರ್ಷಗಳಿಂದ ಯೆಹೋವನ ಸೇವೆ ಮಾಡುತ್ತಿರುವ ಒಬ್ಬ ಸಹೋದರಿ ಹೇಳಿದ ತರ ನಮಗೂ ಅನಿಸಬಹುದು: “ನಾನು ಒಬ್ಬ ಒಳ್ಳೇ ವ್ಯಕ್ತಿಯೆಂದು ನಂಬಲು ನನಗೇ ಕಷ್ಟ ಆಗುತ್ತದೆ.”
ಆದರೆ ಸಂತೋಷದ ವಿಷಯ ಏನೆಂದರೆ, ನಾವೆಲ್ಲರೂ ಒಳ್ಳೇತನ ಬೆಳೆಸಿಕೊಳ್ಳಬಹುದು. ಇದು ದೇವರು ಕೊಡುವ ಪವಿತ್ರಾತ್ಮದ ಒಂದು ಅಂಶ. ಆದ್ದರಿಂದ ನಮಗೆ ಒತ್ತಡ ಬೇರೆ ಜನರಿಂದ ಬರಲಿ ಅಥವಾ ನಮ್ಮೊಳಗಿಂದ ಬರಲಿ ಒಳ್ಳೇತನ ತೋರಿಸಲು ಸಾಧ್ಯ. ಈಗ ನಾವು ಈ ಒಳ್ಳೇತನ ಏನೆಂದು ಕಲಿಯೋಣ. ಈ ಗುಣವನ್ನು ಹೇಗೆ ಇನ್ನಷ್ಟು ತೋರಿಸಬಹುದು ಎಂದು ನೋಡೋಣ.
ಒಳ್ಳೇತನ ಅಂದರೆ ಏನು?
ಒಳ್ಳೇತನ ಇರುವ ವ್ಯಕ್ತಿಯ ನಡತೆ ಚೆನ್ನಾಗಿರುತ್ತೆ ಮತ್ತು ಯಾವಾಗಲೂ ಸರಿಯಾದ ವಿಷಯವನ್ನೇ ಮಾಡುತ್ತಾನೆ. ಕೆಟ್ಟತನ, ಹೊಲಸುತನ ಇರಲ್ಲ. ಒಳ್ಳೇತನದಿಂದ ಎಲ್ಲರಿಗೂ ಪ್ರಯೋಜನ ಸಿಗುತ್ತದೆ. ಒಬ್ಬ ಒಳ್ಳೇ ವ್ಯಕ್ತಿ ಯಾವಾಗಲೂ ಬೇರೆಯವರಿಗೆ ಸಹಾಯ ಮಾಡಲು ನೋಡುತ್ತಾನೆ, ಒಳ್ಳೇ ವಿಷಯಗಳನ್ನು ಮಾಡುತ್ತಾನೆ.
ಕೆಲವರು ತಮ್ಮ ಬಂಧು-ಮಿತ್ರರಿಗೆ ಏನೇ ಬೇಕಿದ್ದರೂ ತಕ್ಷಣ ಅದನ್ನು ಮಾಡಿಕೊಡುತ್ತಾರೆ. ಆದರೆ ಒಳ್ಳೇತನ ಇಲ್ಲಿಗೇ ನಿಂತುಹೋಗಬೇಕಾ? ಈ ಗುಣ ತೋರಿಸಲು ಕೆಲವೊಮ್ಮೆ ಕಷ್ಟ ಆಗುತ್ತದೆ ನಿಜ. ಬೈಬಲ್ ಕೂಡ ಈ ಮಾತನ್ನು ಒಪ್ಪುತ್ತಾ “ಪಾಪಮಾಡದೆ ಧರ್ಮವನ್ನೇ ಆಚರಿಸುತ್ತಿರುವ ಸತ್ಪುರುಷನು ಲೋಕದಲ್ಲಿ ಇಲ್ಲವೇ ಇಲ್ಲ” ಎಂದು ಹೇಳುತ್ತದೆ. (ಪ್ರಸಂ. 7:20) ಅಪೊಸ್ತಲ ಪೌಲನು ಸಹ “ನನ್ನಲ್ಲಿ ಅಂದರೆ ನನ್ನ ಶರೀರದಲ್ಲಿ ಒಳ್ಳೇದೇನೂ ನೆಲೆಸಿಲ್ಲ” ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡನು. (ರೋಮ. 7:18) ಹಾಗಾದರೆ ಈ ಗುಣವನ್ನು ಹೇಗೆ ಬೆಳೆಸಿಕೊಳ್ಳಬಹುದೆಂದು ಒಳ್ಳೇತನ ಯಾರಿಂದ ಹುಟ್ಟುತ್ತದೋ ಆ ಯೆಹೋವನಿಂದಲೇ ಕಲಿಯುವುದು ಒಳ್ಳೇದಲ್ವಾ?
ಯೆಹೋವನು ಒಳ್ಳೆಯವನು
ಯಾವುದು ಒಳ್ಳೇದು, ಯಾವುದು ಕೆಟ್ಟದ್ದು ಅನ್ನುವ ಮಟ್ಟವನ್ನು ಯೆಹೋವನು ಸ್ಥಾಪಿಸುತ್ತಾನೆ. ಆತನ ಬಗ್ಗೆ ನಾವು ಹೀಗೆ ಓದುತ್ತೇವೆ: “ನೀನು ಒಳ್ಳೆಯವನೂ ಒಳ್ಳೆಯದನ್ನು ಮಾಡುವವನೂ ಆಗಿದ್ದೀ; ನಿನ್ನ ನಿಬಂಧನೆಗಳನ್ನು ನನಗೆ ಬೋಧಿಸು.” (ಕೀರ್ತ. 119:68) ಈ ವಚನದಲ್ಲಿ ಯೆಹೋವನ ಒಳ್ಳೇತನದ ಬಗ್ಗೆ ತಿಳಿಸಲಾಗಿರುವ ಎರಡು ಅಂಶಗಳನ್ನು ಪರಿಶೀಲಿಸೋಣ.
ಯೆಹೋವನು ಒಳ್ಳೆಯವನು. ಯೆಹೋವನಿಲ್ಲದೆ ಒಳ್ಳೇತನ ಇಲ್ಲ, ಒಳ್ಳೇತನ ಇಲ್ಲದೆ ಯೆಹೋವನಿಲ್ಲ ಅಂತ ಹೇಳಬಹುದು. ಯೆಹೋವನು ಮೋಶೆಗೆ ‘ನಾನು ನನ್ನ ಒಳ್ಳೆಯತನವನ್ನೆಲ್ಲಾ ನಿನ್ನೆದುರಿಗೆ ಹಾದುಹೋಗುವಂತೆ ಮಾಡುವೆನು’ (ಪವಿತ್ರ ಗ್ರಂಥ ಭಾಷಾಂತರ) ಎಂದು ಹೇಳಿದಾಗ ಏನಾಯಿತೆಂದು ನೋಡಿ. ಯೆಹೋವನು ಮೋಶೆಗೆ ತನ್ನ ಒಳ್ಳೇತನದ ಜೊತೆಗೆ ತನ್ನ ಮಹಿಮೆಯನ್ನು ತೋರಿಸಿದಾಗ ಈ ಮಾತುಗಳು ಮೋಶೆಯ ಕಿವಿಗೆ ಬಿತ್ತು: “ಯೆಹೋವ, ಯೆಹೋವ ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು; ಸಾವಿರಾರು ತಲೆಗಳ ವರೆಗೂ ದಯೆತೋರಿಸುವವನು; ದೋಷಾಪರಾಧಪಾಪಗಳನ್ನು ಕ್ಷಮಿಸುವವನು; ಆದರೂ [ಅಪರಾಧಗಳನ್ನು] ಶಿಕ್ಷಿಸದೆ ಬಿಡದವನು.” (ವಿಮೋ. 33:19; 34:6, 7) ಹಾಗಾದರೆ ಯೆಹೋವನಲ್ಲಿರುವ ಪ್ರತಿಯೊಂದು ಗುಣದಲ್ಲೂ ಒಳ್ಳೇತನ ಇದೆ ಎಂದು ಇದರಿಂದ ಗೊತ್ತಾಗುತ್ತದೆ. ಮಾನವರಲ್ಲಿ ಯೇಸುವೇ ಒಳ್ಳೇತನದ ಪ್ರತಿರೂಪವಾಗಿದ್ದರೂ “ದೇವರೊಬ್ಬನೇ ಹೊರತು ಬೇರೆ ಯಾವನೂ ಒಳ್ಳೆಯವನಲ್ಲ” ಎಂದು ಆತನೇ ಅಂದನು.—ಲೂಕ 18:19.
ಯೆಹೋವನು ಎಷ್ಟು ಒಳ್ಳೆಯವನೆಂದು ಆತನ ಸೃಷ್ಟಿಯಿಂದ ಗೊತ್ತಾಗುತ್ತದೆ
ಯೆಹೋವನು ಒಳ್ಳೇದನ್ನು ಮಾಡುವವನೂ ಆಗಿದ್ದಾನೆ. ಯೆಹೋವನು ಏನೇ ಮಾಡಿದರೂ ಅದು ಒಳ್ಳೇದಾಗಿರುತ್ತದೆ. ಆದ್ದರಿಂದ “ಯೆಹೋವನು ಸರ್ವೋಪಕಾರಿಯೂ ತಾನು ನಿರ್ಮಿಸಿದವುಗಳನ್ನೆಲ್ಲಾ ಕರುಣಿಸುವಾತನೂ ಆಗಿದ್ದಾನೆ” ಎಂದು ದೇವರ ವಾಕ್ಯ ಹೇಳುತ್ತದೆ. (ಕೀರ್ತ. 145:9) ಯೆಹೋವನು ಒಳ್ಳೇತನವನ್ನು ನಿಷ್ಪಕ್ಷಪಾತದಿಂದ ತೋರಿಸುತ್ತಾನೆ. ಎಲ್ಲಾ ಮಾನವರಿಗೆ ಜೀವ ಕೊಟ್ಟಿದ್ದಾನೆ ಮತ್ತು ಅವರು ಬದುಕಲು ಏನು ಬೇಕೋ ಅದನ್ನೆಲ್ಲಾ ಕೊಟ್ಟಿದ್ದಾನೆ. (ಅ. ಕಾ. 14:17) ಯೆಹೋವನು ನಮ್ಮನ್ನು ಕ್ಷಮಿಸುವಾಗಲೂ ತನ್ನ ಒಳ್ಳೇತನವನ್ನು ತೋರಿಸುತ್ತಾನೆ. “[ಯೆಹೋವನೇ], ನೀನು ಒಳ್ಳೆಯವನೂ ಕ್ಷಮಿಸುವವನೂ . . . ಆಗಿದ್ದೀಯಲ್ಲಾ” ಎಂದು ಕೀರ್ತನೆಗಾರನು ಬರೆದನು. (ಕೀರ್ತ. 86:5) ಯೆಹೋವನು ‘ಸದ್ಭಕ್ತರಿಗೆ ಶುಭವನ್ನು ದಯಪಾಲಿಸದೆ’ ಇರುವುದಿಲ್ಲ ಎಂದು ನಾವು ದೃಢಭರವಸೆಯಿಂದ ಇರಬಹುದು.—ಕೀರ್ತ. 84:11.
ಒಳ್ಳೇದನ್ನು ಮಾಡಲು ಕಲಿಯಿರಿ
ನಮ್ಮನ್ನು ದೇವರ ಸ್ವರೂಪದಲ್ಲಿ ಸೃಷ್ಟಿಮಾಡಲಾಗಿದೆ. ಆದ್ದರಿಂದ ನಮಗೆ ಒಳ್ಳೆಯವರಾಗಿರುವ ಮತ್ತು ಒಳ್ಳೇದನ್ನು ಮಾಡುವ ಸಾಮರ್ಥ್ಯ ಇದೆ. (ಆದಿ. 1:27) ಆದರೂ “ಒಳ್ಳೆಯದನ್ನು ಮಾಡಲು ಕಲಿತುಕೊಳ್ಳಿ” ಎಂದು ದೇವರ ವಾಕ್ಯ ಉತ್ತೇಜಿಸುತ್ತದೆ. (ಯೆಶಾ. 1:17, ಪವಿತ್ರ ಗ್ರಂಥ ಭಾಷಾಂತರ) ನಾವು ಒಳ್ಳೇದನ್ನು ಮಾಡಲು ಹೇಗೆ ಕಲಿಯಬಹುದು? ಮೂರು ವಿಧಾನಗಳನ್ನು ನೋಡಿ.
ಮೊದಲನೇದಾಗಿ, ನಾವು ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸಬೇಕು. ಇದರಿಂದ ನಾವು ನಿಜವಾದ ಒಳ್ಳೇತನವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. (ಗಲಾ. 5:22) ಪವಿತ್ರಾತ್ಮ ನಮಗೆ ಒಳ್ಳೇದನ್ನು ಪ್ರೀತಿಸಲು ಮತ್ತು ಕೆಟ್ಟದ್ದನ್ನು ದ್ವೇಷಿಸಲು ಕಲಿಸುತ್ತದೆ. (ರೋಮ. 12:9) ಯೆಹೋವನು ‘ಪ್ರತಿಯೊಂದು ಸತ್ಕಾರ್ಯದಲ್ಲಿಯೂ ಮಾತಿನಲ್ಲಿಯೂ ನಿಮ್ಮನ್ನು ದೃಢಪಡಿಸುವನು’ ಎಂದು ಬೈಬಲ್ ಭರವಸೆ ಕೊಡುತ್ತದೆ.—2 ಥೆಸ. 2:16, 17.
ಎರಡನೇದಾಗಿ, ನಾವು ಬೈಬಲನ್ನು ಓದಬೇಕು. ಆಗ ಯೆಹೋವನು ನಮಗೆ “ಸಕಲ ಸನ್ಮಾರ್ಗಗಳನ್ನು” ತೋರಿಸಿಕೊಡುವನು ಮತ್ತು ನಮ್ಮನ್ನು ‘ಸಕಲ ಸತ್ಕಾರ್ಯಕ್ಕೆ ಸಂಪೂರ್ಣವಾಗಿ ಸನ್ನದ್ಧಗೊಳಿಸುವನು.’ (ಜ್ಞಾನೋ. 2:9; 2 ತಿಮೊ. 3:17) ನಾವು ಬೈಬಲನ್ನು ಓದಿ ಧ್ಯಾನಿಸಿದಾಗ ನಮ್ಮ ಹೃದಯದಲ್ಲಿ ದೇವರ ಮತ್ತು ಆತನ ಚಿತ್ತಕ್ಕೆ ಸಂಬಂಧಪಟ್ಟ ವಿಷಯಗಳು ತುಂಬಿಕೊಳ್ಳುತ್ತವೆ. ನಮ್ಮ ಹೃದಯವೆಂಬ ಬೊಕ್ಕಸದಲ್ಲಿ ಇಂಥ ವಿಷಯಗಳು ತುಂಬಿರುವಾಗ ಅವು ಬೇಕಾದಾಗ ಉಪಯೋಗಕ್ಕೆ ಬರುತ್ತವೆ.—ಲೂಕ 6:45; ಎಫೆ. 5:9.
ಮೂರನೇದಾಗಿ, ‘ಒಳ್ಳೇದನ್ನು ಅನುಕರಿಸಬೇಕು.’ ಇದಕ್ಕೆ ನಮ್ಮಿಂದಾದ ಎಲ್ಲ ಪ್ರಯತ್ನ ಮಾಡಬೇಕು. (3 ಯೋಹಾ. 11) ಬೈಬಲಿನಲ್ಲಿರುವ ವ್ಯಕ್ತಿಗಳ ಒಳ್ಳೇ ಮಾದರಿಗಳನ್ನು ನಾವು ಅನುಕರಿಸಬಹುದು. ನಮಗೆ ಎಲ್ಲಾ ವಿಧದಲ್ಲೂ ಅತ್ಯುತ್ತಮ ಮಾದರಿ ಆಗಿರುವವರು ಯೆಹೋವ ಮತ್ತು ಯೇಸುನೇ. ಆದರೂ ತಮ್ಮ ಒಳ್ಳೇತನಕ್ಕೆ ಹೆಸರುವಾಸಿಯಾಗಿದ್ದ ಬೇರೆಯವರ ಉದಾಹರಣೆಗಳನ್ನೂ ನಾವು ಪರಿಗಣಿಸಬೇಕು. ಈ ವಿಷಯದಲ್ಲಿ ನಮಗೆ ತಬಿಥಾ ಮತ್ತು ಬಾರ್ನಬನ ಉದಾಹರಣೆ ನೆನಪಾಗುತ್ತದೆ. (ಅ. ಕಾ. 9:36; 11:22-24) ನೀವು ಅವರ ದಾಖಲೆಯನ್ನು ಓದಿದರೆ ಪ್ರಯೋಜನವಾಗುತ್ತದೆ. ಅವರು ಬೇರೆಯವರಿಗೆ ಹೇಗೆ ಸಹಾಯ ಮಾಡಿದರೆಂದು ನೋಡಿ. ನಿಮ್ಮ ಕುಟುಂಬ ಅಥವಾ ಸಭೆಯಲ್ಲಿರುವ ಕೆಲವರಿಗೆ ಸಹಾಯ ಮಾಡಲು ಏನು ಮಾಡಬಹುದೆಂದು ಯೋಚಿಸಿ. ಒಳ್ಳೇ ವ್ಯಕ್ತಿಗಳೆಂಬ ಹೆಸರನ್ನು ಪಡೆದಿದ್ದರಿಂದ ತಬಿಥಾ ಮತ್ತು ಬಾರ್ನಬನಿಗೆ ಹೇಗೆ ಪ್ರಯೋಜನವಾಯಿತು ಎಂದು ಸಹ ಯೋಚಿಸಿ. ನೀವು ಒಳ್ಳೇತನ ತೋರಿಸಿದರೆ ಅವರ ತರಾನೇ ಪ್ರಯೋಜನ ಪಡೆಯಬಹುದು.
ಈಗಿನ ಕಾಲದಲ್ಲೂ ಒಳ್ಳೇದನ್ನು ಮಾಡುವ ವ್ಯಕ್ತಿಗಳ ಬಗ್ಗೆ ಸಹ ನಾವು ಯೋಚಿಸಬೇಕು. ಉದಾಹರಣೆಗೆ, ಸಭೆಯವರಿಗೋಸ್ಕರ ತುಂಬ ಶ್ರಮಪಡುವ ಹಿರಿಯರ ಬಗ್ಗೆ ಯೋಚಿಸಿ. ಅವರು ‘ಒಳ್ಳೇತನವನ್ನು ಪ್ರೀತಿಸುವವರಾಗಿದ್ದಾರೆ.’ ನಮ್ಮ ಮಧ್ಯೆ ಇರುವ ನಂಬಿಗಸ್ತ ಸಹೋದರಿಯರನ್ನೂ ನಾವು ಮರೆಯುವಂತಿಲ್ಲ. ಅವರು ತಮ್ಮ ಮಾತು ಮತ್ತು ಮಾದರಿಯ ಮೂಲಕ ‘ಒಳ್ಳೇದನ್ನು ಬೋಧಿಸುವವರಾಗಿದ್ದಾರೆ.’ (ತೀತ 1:8; 2:3) ರೋಸ್ಲಿನ್ ಎಂಬ ಸಹೋದರಿ ಹೇಳುವುದು: “ನನ್ನ ಸ್ನೇಹಿತೆ ಸಭೆಯಲ್ಲಿರುವ ಸಹೋದರ-ಸಹೋದರಿಯರಿಗೆ ಸಹಾಯ ಮಾಡಲು ಮತ್ತು ಪ್ರೋತ್ಸಾಹಿಸಲು ವಿಶೇಷ ಪ್ರಯತ್ನ ಮಾಡುತ್ತಾಳೆ. ಅವಳು ಸಭೆಯವರ ಸನ್ನಿವೇಶದ ಬಗ್ಗೆ ಯೋಚಿಸುತ್ತಾಳೆ, ಅವರಿಗೆ ಚಿಕ್ಕಪುಟ್ಟ ಉಡುಗೊರೆಗಳನ್ನು ಕೊಡುತ್ತಾಳೆ ಮತ್ತು ಬೇರೆ ರೀತಿಗಳಲ್ಲೂ ಸಹಾಯ ಮಾಡುತ್ತಾಳೆ. ಅವಳು ನಿಜಕ್ಕೂ ತುಂಬ ಒಳ್ಳೆಯವಳು ಎಂದು ನನಗನಿಸುತ್ತದೆ.”
ಯೆಹೋವನು ತನ್ನ ಜನರಿಗೆ “ಒಳ್ಳೆಯದನ್ನು ಅನುಸರಿಸಿರಿ” ಎಂದು ಉತ್ತೇಜಿಸುತ್ತಾನೆ. (ಆಮೋ. 5:14) ನಾವಿದನ್ನು ಮಾಡಿದಾಗ ಯೆಹೋವನ ಮಟ್ಟಗಳನ್ನು ಪ್ರೀತಿಸಲು ಆರಂಭಿಸುತ್ತೇವೆ. ಅಷ್ಟೇ ಅಲ್ಲ ಒಳ್ಳೇದನ್ನು ಮಾಡಲು ನಮಗೆ ಮನಸ್ಸಾಗುತ್ತದೆ.
ನಾವು ಒಳ್ಳೆಯವರಾಗಿ ಇರಲು ಮತ್ತು ಒಳ್ಳೇದನ್ನು ಮಾಡಲು ಪ್ರಯತ್ನಿಸುತ್ತೇವೆ
ಒಳ್ಳೇದನ್ನು ಅನುಸರಿಸಲು ನಾವು ದೊಡ್ಡ ವಿಷಯಗಳನ್ನು ಮಾಡಬೇಕು, ದುಬಾರಿ ಉಡುಗೊರೆಗಳನ್ನು ಕೊಡಬೇಕು ಅಂತಿಲ್ಲ. ಒಂದು ಗಿಡಕ್ಕೆ ಒಂದೇ ಸಾರಿ ತುಂಬ ನೀರು ಸುರಿದರೆ ಅದು ಬೆಳೆಯಲ್ಲ. ದಿನಾ ಸ್ವಲ್ಪ-ಸ್ವಲ್ಪ ನೀರು ಹಾಕುತ್ತಾ ಇದ್ದರೆ ಚೆನ್ನಾಗಿ ಬೆಳೆಯುತ್ತದೆ. ಅದೇ ರೀತಿ ನಾವು ಚಿಕ್ಕ-ಪುಟ್ಟ ಸಹಾಯಗಳನ್ನು ಮಾಡುವ ಮೂಲಕ ನಮ್ಮ ಒಳ್ಳೇತನ ತೋರಿಸಬೇಕು.
ಒಳ್ಳೇದನ್ನು ಮಾಡಲು ನಾವು ‘ಸಿದ್ಧರಾಗಿರಬೇಕೆಂದು’ ದೇವರ ವಾಕ್ಯ ಉತ್ತೇಜಿಸುತ್ತದೆ. (2 ತಿಮೊ. 2:21; ತೀತ 3:1) ಬೇರೆಯವರಿಗೆ ಏನಾಗುತ್ತಿದೆ ಅನ್ನುವುದಕ್ಕೆ ನಾವು ಗಮನ ಕೊಟ್ಟರೆ ಅವರಿಗೆ ‘ಭಕ್ತಿವೃದ್ಧಿಮಾಡಲು, ಒಳ್ಳೇದು ಮಾಡಲು’ ಅವಕಾಶ ಸಿಗುತ್ತದೆ. (ರೋಮ. 15:2) ಅಂದರೆ ನಾವು ನಮ್ಮ ಹತ್ತಿರ ಇರುವುದನ್ನು ಕೊಡಲು ಸಿದ್ಧವಾಗಿರಬೇಕು. (ಜ್ಞಾನೋ. 3:27) ನಾವು ಯಾರನ್ನಾದರೂ ಒಂದು ಸರಳ ಊಟಕ್ಕೆ ಅಥವಾ ಸಹವಾಸಕ್ಕೆ ಕರೆಯಬಹುದು. ಯಾರಿಗಾದರೂ ಹುಷಾರಿಲ್ಲ ಅಂದರೆ ಅವರಿಗೆ ಒಂದು ಕಾರ್ಡ್ ಕಳಿಸಬಹುದು, ಭೇಟಿ ಮಾಡಬಹುದು ಅಥವಾ ಕರೆ ಮಾಡಬಹುದು. ಹೌದು, ‘ಅಗತ್ಯಕ್ಕನುಸಾರ ಭಕ್ತಿವೃದ್ಧಿಮಾಡಲು ಯೋಗ್ಯವಾಗಿರುವ ಮಾತನ್ನು ಆಡಿರಿ; ಇದು ಕೇಳುವವರಿಗೆ ಪ್ರಯೋಜನವನ್ನು ಉಂಟುಮಾಡಬಹುದು.’—ಎಫೆ. 4:29.
ಯೆಹೋವನಂತೆ ನಾವು ಸಹ ಎಲ್ಲ ಜನರಿಗೆ ಒಳ್ಳೇದು ಮಾಡಲು ಬಯಸುತ್ತೇವೆ. ಆದ್ದರಿಂದ ನಾವು ಬೇರೆಯವರ ಜೊತೆ ನಿಷ್ಪಕ್ಷಪಾತದಿಂದ ನಡಕೊಳ್ಳುತ್ತೇವೆ. ಇದನ್ನು ಮಾಡುವ ಅತ್ಯುತ್ತಮ ವಿಧ ಸುವಾರ್ತೆಯನ್ನು ಸಾರುವುದೇ ಆಗಿದೆ. ಯೇಸು ಹೇಳಿದಂತೆ, ನಮ್ಮನ್ನು ದ್ವೇಷಿಸುವವರಿಗೆ ಸಹ ನಾವು ಒಳ್ಳೇದು ಮಾಡಲು ನೋಡುತ್ತೇವೆ. (ಲೂಕ 6:27) ದಯೆ ತೋರಿಸುವುದು ಅಥವಾ ಬೇರೆಯವರಿಗೆ ಒಳ್ಳೇದು ಮಾಡುವುದು ಖಂಡಿತ ತಪ್ಪಲ್ಲ. ಯಾಕೆಂದರೆ “ಇವುಗಳನ್ನು ಯಾವ ಧರ್ಮಶಾಸ್ತ್ರವೂ ವಿರೋಧಿಸುವುದಿಲ್ಲ.” (ಗಲಾ. 5:22, 23) ನಮಗೆ ವಿರೋಧ, ಕಷ್ಟಗಳಿದ್ದಾಗಲೂ ಒಳ್ಳೇದಾಗಿ ನಡಕೊಂಡರೆ ಬೇರೆಯವರು ನಮ್ಮನ್ನು ನೋಡಿ ಸತ್ಯಕ್ಕೆ ಬರಬಹುದು. ನಮ್ಮ ಒಳ್ಳೇ ನಡತೆಯಿಂದ ದೇವರಿಗೆ ಮಹಿಮೆ ಸಿಗುತ್ತದೆ.—1 ಪೇತ್ರ 3:16, 17.
ಒಳ್ಳೇತನದಿಂದ ಸಿಗುವ ಪ್ರಯೋಜನಗಳು
ಬೈಬಲಿನ ಒಂದು ಜ್ಞಾನೋಕ್ತಿ ಹೀಗೆ ಹೇಳುತ್ತದೆ: “ಒಳ್ಳೇ ಮನುಷ್ಯನು ಏನು ಮಾಡುತ್ತಾನೋ ಅದಕ್ಕೆ ಒಳ್ಳೇ ಪ್ರತಿಫಲ ಪಡೆಯುತ್ತಾನೆ.” (ಜ್ಞಾನೋ. 14:14, ನೂತನ ಲೋಕ ಭಾಷಾಂತರ) ಹಾಗಾದರೆ ನಮಗೆ ಸಿಗುವ ಕೆಲವು ಪ್ರಯೋಜನಗಳು ಯಾವುವು? ನಾವು ಬೇರೆಯವರಿಗೆ ಒಳ್ಳೇದು ಮಾಡುವಾಗ ಅವರೂ ನಮಗೆ ಒಳ್ಳೇದು ಮಾಡುತ್ತಾರೆ. (ಜ್ಞಾನೋ. 14:22) ಒಂದುವೇಳೆ ಅವರು ನಮಗೆ ಒಳ್ಳೇದು ಮಾಡದಿದ್ದರೂ ನಾವು ಅವರಿಗೆ ಒಳ್ಳೇದನ್ನೇ ಮಾಡಬೇಕು. ಆಗ ಅವರ ಸ್ವಭಾವ ಬದಲಾಗಿ ನಮ್ಮ ಹತ್ತಿರ ಚೆನ್ನಾಗಿ ನಡಕೊಳ್ಳಬಹುದು.—ರೋಮ. 12:20.
ನಾವು ಕೆಟ್ಟದ್ದನ್ನು ಬಿಟ್ಟು ಒಳ್ಳೇದನ್ನು ಮಾಡುವಾಗ ನಮಗೂ ಪ್ರಯೋಜನ ಸಿಗುತ್ತದೆ ಎಂದು ಅನೇಕ ಸಹೋದರ-ಸಹೋದರಿಯರು ಹೇಳುತ್ತಾರೆ. ಸಹೋದರಿ ನ್ಯಾನ್ಸಿ ಹೀಗೆ ಹೇಳುತ್ತಾರೆ: “ಚಿಕ್ಕ ವಯಸ್ಸಿಂದ ನನ್ನ ಸ್ವಭಾವ ತುಂಬ ಒರಟಾಗಿತ್ತು. ಅನೈತಿಕತೆಯಲ್ಲಿ ತೊಡಗಿದ್ದೆ, ಯಾರಿಗೂ ಗೌರವ ಕೊಡುತ್ತಿರಲಿಲ್ಲ. ಆದರೆ ದೇವರ ಮಟ್ಟಗಳನ್ನು ಕಲಿತು ಅದನ್ನು ಅನ್ವಯಿಸಿಕೊಂಡಾಗ ನನಗೆ ತುಂಬ ಸಂತೋಷ ಆಯಿತು. ಈಗ ನನ್ನ ಮೇಲೆ ನನಗೇ ಗೌರವ ಇದೆ.”
ಒಳ್ಳೇತನವನ್ನು ಬೆಳೆಸಿಕೊಳ್ಳಲು ನಮಗಿರುವ ಪ್ರಾಮುಖ್ಯ ಕಾರಣ ಏನೆಂದರೆ, ನಾವು ಒಳ್ಳೇತನ ತೋರಿಸಿದಾಗ ಯೆಹೋವನಿಗೆ ಸಂತೋಷ ಆಗುತ್ತದೆ. ನಾವು ಏನು ಮಾಡುತ್ತೇವೆ ಅನ್ನುವುದು ಬೇರೆಯವರಿಗೆ ಗೊತ್ತಾಗದಿದ್ದರೂ ಯೆಹೋವನಿಗೆ ಗೊತ್ತಾಗುತ್ತದೆ. ನಾವು ಮಾಡುವ ಪ್ರತಿಯೊಂದು ಒಳ್ಳೇ ಕೆಲಸ ಮತ್ತು ಒಳ್ಳೇ ಯೋಚನೆ ಆತನಿಗೆ ಗೊತ್ತಾಗುತ್ತದೆ. (ಎಫೆ. 6:7, 8) ಇದರಿಂದ ಯಾವ ಫಲಿತಾಂಶ ಸಿಗುತ್ತದೆ? “ಯೆಹೋವನು ಒಳ್ಳೆಯವನಿಗೆ ದಯೆ” ತೋರಿಸುತ್ತಾನೆ. (ಜ್ಞಾನೋ. 12:2) ಹಾಗಾಗಿ ಒಳ್ಳೇತನವನ್ನು ಬೆಳೆಸಿಕೊಳ್ಳುತ್ತಾ ಇರೋಣ. “ಒಳ್ಳೇದನ್ನು ಮಾಡುವ ಪ್ರತಿಯೊಬ್ಬನಿಗೆ ಮಹಿಮೆಯೂ ಗೌರವವೂ ಶಾಂತಿಯೂ ದೊರಕುವುದು” ಎಂದು ಯೆಹೋವನು ಮಾತು ಕೊಟ್ಟಿದ್ದಾನೆ.—ರೋಮ. 2:10.