ನಂಬಿಕೆ-ಪಂಥಾಹ್ವಾನಿಸುವ ಒಂದು ವೈದ್ಯಕೀಯ ಪರಿಸ್ಥಿತಿಯನ್ನು ಎದುರಿಸಲು ನೀವು ಸಿದ್ಧರೋ?
1 ಇಂದು ಅಥವಾ ನಾಳೆ ಒಂದು ಆಸ್ಪತ್ರೆಯಲ್ಲಿರುವ ಸಂಭವನೀಯತೆಯ ಕುರಿತು ಯಾರೂ ಹೆಚ್ಚು ಯೋಚಿಸುವುದಿಲ್ಲ. ಆದರೂ, ‘ಕಾಲ ಮತ್ತು ಮುಂಗಾಣದ ಸಂಭವಗಳು ಯಾರಿಗೂ ತಪ್ಪಿದ್ದಲ್ಲ.’ (ಪ್ರಸಂ. 9:11) ವೈದ್ಯಕೀಯ ಉಪಚಾರವನ್ನು ನಿಮ್ಮ ಆರೋಗ್ಯದ ಪರಾಮರಿಕೆಗಾಗಿ ಒಂದುವೇಳೆ ನೀವು ಸ್ವೀಕರಿಸದೇ ಇದ್ದರೂ, ಒಂದು ಅಪಘಾತದಿಂದಾಗಿ ನೀವು ಮತಿಯಿಲ್ಲದೆ ಬಿದ್ದರೆ ಮತ್ತು ಆಸ್ಪತ್ರೆಗೆ ಸೇರಿಸಲ್ಪಟ್ಟರೆ, ನಿಷಿದ್ಧ ರಕ್ತ ಪೂರಣದಿಂದ ನಿಮ್ಮನ್ನು ಕಾಪಾಡಲು ನೀವೇನು ಮಾಡುವಿರಿ? ಹೌದು, ಅವಘಡ ಅಥವಾ ಫಕ್ಕನೇ ಕೆಟ್ಟುಹೋಗುವ ಒಂದು ಆರೋಗ್ಯದ ಪರಿಸ್ಥಿತಿಯು ಹಠಾತ್ತನೇ ನಿಮ್ಮನ್ನು, ನಿಮ್ಮ ನಂಬಿಕೆಯ ಪಂಥಾಹ್ವಾನವನ್ನು ಎದುರಿಸಲು ಮುಖಾಮುಖಿಯಾಗಿ ತರಬಹುದು.
2 ಯಾವುದೇ ಕಾರಣದಿಂದಾಗಿ ನೀವು ಆಸ್ಪತ್ರೆಯಲ್ಲಿ ಬಿದ್ದಿರುವಾಗ, ರಕ್ತ ಪೂರಣದ ಹೊರತು ನೀವು ಸಾಯುವಿರೆಂದು ಅಲ್ಲಿ ಯಾರಾದರೂ ನಿಮಗಂದರೆ ನಿಮ್ಮ ಸಮಗ್ರತೆಯನ್ನು ಕಾಪಾಡಲು ನೀವೇನು ಮಾಡುವಿರಿ? ಆ ವಾದವು ನಿಜವಾಗಿ ನಿಮ್ಮ ಪರಿಸ್ಥಿತಿಯನ್ನು ಪ್ರತಿನಿಧಿಸುತ್ತದೆ ಎಂದು ಅವಸರದಿಂದ ನೀವು ಸ್ವೀಕರಿಸುವಿರೋ? ನಿಮಗೆ ರಕ್ತ ಬೇಡ ಎಂಬದರ ಪೂರ್ಣ ಖಾತ್ರಿ ಇದೆಯೋ? ನಿಮ್ಮ ನಂಬಿಕೆಗೆ ಬರುವ ಈ ಪಂಥಾಹ್ವಾನವನ್ನು ಎದುರಿಸಲು ಮತ್ತು ‘ರಕ್ತದಿಂದ ದೂರವಿರಲು’ ನೀವು ಸಿದ್ಧರೋ?—ಅಪೊ. 15:28, 29.
3 ನಿಷಿದ್ಧವಾದ, ಆತ್ಮಿಕವಾಗಿ ಮಲಿನಗೊಳಿಸುವ, ರಕ್ತ ಪೂರಣವನ್ನು ಸಾಫಲ್ಯದಿಂದ ಎದುರಿಸುವಿಕೆಯು ಒಂದು ದೃಢ ವಿಶ್ವಾಸದಿಂದ ಆರಂಭಿಸುತ್ತದೆ. ಬೈಬಲು ರಕ್ತದ ಕುರಿತು ಏನನ್ನುತ್ತದೋ ಅದರ ಸ್ಪಷ್ಟ ತಿಳುವಳಿಕೆಯ ಮೇಲೆ ಅಂಥ ಭರವಸವು ಆಧರಿಸಿರಬೇಕು. ಇಲ್ಲವಾದರೆ, ಒಂದು ಭಾವೋದ್ರೇಕದ ಗಳಿಗೆಯಲ್ಲಿ, ಪರಿಸ್ಥಿತಿಯ ಕುರಿತು ನಿಮಗಿಂತ ಹೆಚ್ಚು ತಿಳಿದವರೆಂದು ವಾದಿಸುವ ಬೇರೊಬ್ಬರಿಂದ ನೀವು ಸುಲಭವಾಗಿಯೇ ಬೆದರಿಸಲ್ಪಡಬಹುದು. ಪ್ರಾಯಶಃ ಡಾಕ್ಟರುಗಳಿಗೆ ರಕ್ತದ ಕುರಿತು ದೇವರಿಗಿಂತ ಹೆಚ್ಚಾಗಿ ತಿಳಿದಿರಬೇಕು ಎಂದು ಯೋಚಿಸುವ ಮೋಸಕ್ಕೆ ನೀವು ನಡಿಸಲ್ಪಡುವಿರೋ? ಮನುಷ್ಯ ಮಾತ್ರದವರು ಏನೇ ಹೇಳಲಿ, ಈ ಪರಿಸ್ಥಿತಿಗಳಲ್ಲಿ “ಯಾವುದು ಯೋಗ್ಯವೋ” ಅದನ್ನು ಮಾಡಲು ನೀವು “ದೃಢ ನಿಶ್ಚಯ” ಮಾಡಬಯಸುವಿರಿ, ನಿಶ್ಚಯ. (ಧರ್ಮೋ. 12:23-25) ಆದರೆ ಈ ಪಂಥಾಹ್ವಾನವನ್ನು ನೀವು ಒಂಟಿಗರಾಗಿಯೇ ಎದುರಿಸಬೇಕೋ?—ಪ್ರಸಂ. 4:9-12.
ಹಾಸ್ಪಿಟಲ್ ಇನ್ಫರ್ಮೇಶನ್ ಸರ್ವಿಸಸ್ ಮತ್ತು ಹಾಸ್ಪಿಟಲ್ ಲಿಏಝನ್ ಕಮಿಟಿಗಳು
4 ರಕ್ತ ಪೂರಣ ಸಮಸ್ಯೆಯನ್ನು ಎದುರಿಸುವಾಗ ಸಹಾಯ ಬೇಕಾದವರಿಗೆ ನೆರವಾಗಲು ಸೊಸೈಟಿಯು ಹಾಸ್ಪಿಟಲ್ ಇನ್ಫರ್ಮೇಶನ್ ಸರ್ವಿಸಸ್ (ಆಸ್ಪತ್ರೆ ಸಮಾಚಾರ ಸೇವೆಗಳು) ನ್ನು ಬ್ರೂಕ್ಲಿನ್ನಲ್ಲಿ ಏರ್ಪಡಿಸಿದೆ. 100 ಹಾಸ್ಪಿಟಲ್ ಲಿಏಝನ್ ಕಮಿಟಿ (ಆಸ್ಪತ್ರೆ ಸಂಬಂಧಕ ಸಮಿತಿ) ಗಳನ್ನೂ ಅಮೆರಿಕದ ಮುಖ್ಯ ಪಟ್ಟಣಗಳಲ್ಲಿ ಅದು ಸ್ಥಾಪಿಸಿದೆ. ಈ ಕಮಿಟಿಗಳು ಈ ಕಾರ್ಯದಲ್ಲಿ ವಿಶಿಷ್ಟ ತರಬೇತು ಪಡೆದ 600ಕ್ಕೂ ಮಿಕ್ಕಿದ ಹಿರಿಯರಿಂದ ಕೂಡಿದೆ.
5 ಹಾಸ್ಪಿಟಲ್ ಇನ್ಫರ್ಮೇಶನ್ ಸರ್ವಿಸಸ್, ರಕ್ತರಹಿತ ಶಸ್ತ್ರಚಿಕಿತ್ಸೆ ಮತ್ತು ಔಷಧೋಪಚಾರದ ಅನೇಕ ವಿಧಾನಗಳ ದೊರೆಯುವಿಕೆ ಮತ್ತು ಪರಿಣಾಮಕಾರತೆಯ ಮೇಲೆ ಸಮಾಚಾರ ಸಂಗ್ರಹಿಸಲು ಜಗವ್ಯಾಪಕವಾಗಿ 3,600ಕ್ಕೂ ಮಿಕ್ಕಿದ ವೈದ್ಯಕೀಯ ಪತ್ರಿಕೆಗಳಲ್ಲಿ ಸಂಶೋಧನೆಯನ್ನು ಮಾಡಲು ಶಕ್ತವಾಗಿದೆ. ಅನಂತರ ಅದು, ಈ ವೈದ್ಯಕೀಯ ಸುಧಾರಣಾ ಸಮಾಚಾರವನ್ನು ಹಾಸ್ಪಿಟಲ್ ಲಿಏಝನ್ ಕಮಿಟಿಗಳಿಗೆ, ಆರೋಗ್ಯ ಕ್ಷೇಮ ಕೇಂದ್ರಗಳಿಗೆ ಮತ್ತು ಕೆಲವು ಡಾಕ್ಟರುಗಳಿಗೆ ಒದಗಿಸುತ್ತದೆ. (ಕೆಲವು ಸಲ ಹಾಸ್ಪಿಟಲ್ ಇನ್ಫರ್ಮೇಶನ್ ಸರ್ವಿಸಸ್, ರಕ್ತರಹಿತವಾಗಿ ಏನೆಲ್ಲಾ ಮಾಡಸಾಧ್ಯವಿದೆ ಎಂದು ತೋರಿಸುವ ವೈದ್ಯಕೀಯ ಲೇಖನಗಳನ್ನು ಕಳುಹಿಸಿಯದೆ ಮತ್ತು ಒಂದು ಆಸ್ಪತ್ರೆಯಲ್ಲಿ ಆ ವಿಷಯವಾಗಿ ನಡಿಯುತ್ತಿದ್ದ ವಿವಾದವೊಂದನ್ನು ಯಶಸ್ವೀಯಾಗಿ ನಿಭಾಯಿಸಿದೆ.) ನಮ್ಮ ಖಟೆಗ್ಲಳನ್ನು ಅಧಿಕ ಒಳನೋಟದಿಂದ ವೀಕ್ಷಿಸುವುದರಲ್ಲಿ ನ್ಯಾಯಾಧೀಶರಿಗೆ ನೆರವಾಗುವ ಅನುಗ್ರಹಿತ ಕೋರ್ಟ್ ನಿರ್ಣಯಗಳನ್ನು ಅದು ಕಮಿಟಿಗಳಿಗೆ ತಿಳಿಸುತ್ತಾ ಇರುತ್ತದೆ. ರಕ್ತ ಪೂರಣ ಸಮಸ್ಯೆಗಳು ಏಳುವಾಗ ಬಳಸಲು, ಕಮಿಟಿಗಳೊಂದಿಗೆ ಹೊಚ್ಚ ಹೊಸ ಫೈಲುಗಳಿರುವಂತೆ ಅದು ಸುಮಾರು 7,000 ಕ್ಕೂ ಮಿಕ್ಕಿದ ಸಹಕಾರಿ ಡಾಕ್ಟರುಗಳ ರೆಕಾರ್ಡುಗಳನ್ನು ಇಡುತ್ತದೆ.
6 ಹಾಸ್ಪಿಟಲ್ ಇನ್ಫರ್ಮೇಶನ್ ಸರ್ವಿಸ್, ಹಾಸ್ಪಿಟಲ್ ಲಿಏಝನ್ ಕಮಿಟಿಗಳ ತರಬೇತು ಮತ್ತು ಕೆಲಸವನ್ನೂ ಮೇಲ್ವಿಚಾರ ಮಾಡುತ್ತದೆ. ಹಾಸ್ಪಿಟಲ್ ಲಿಏಝನ್ ಕಮಿಟಿಗಳು ತಾವಿರುವ ಪಟ್ಟಣಗಳ ಆಸ್ಪತ್ರೆ ಸಿಬ್ಬಂಧಿಯೊಂದಿಗೆ ಸಂಬಂಧವನ್ನು ಸುಧಾರಿಸಲು ಅವರಿಗೆ ಕ್ರಮವಾಗಿ ಸಮಾಚಾರ ನೀಡಿಕೆಗಳನ್ನು ನೀಡುತ್ತಾ ಇರುತ್ತವೆ. ಅವರು ಈ ಸಿಬ್ಬಂಧಿಗಳನ್ನು ಸಂಪರ್ಕಿಸಿ, ಬೇರೆ ಯಾರಾದರೂ ಅಧಿಕ ಡಾಕ್ಟರುಗಳು ರಕ್ತವಿಲ್ಲದೆ ನಮ್ಮನ್ನು ಉಪಚರಿಸುವರೋ ಎಂಬ ಮಾಹಿತಿಯನ್ನೂ ಪಡೆಯುತ್ತಾರೆ. ಈ ಸಹೋದರರು ನಿಮ್ಮ ಸಹಾಯಕ್ಕಾಗಿ ಸಿದ್ಧರಾಗಿ ನಿಂತಿರುವರು, ಆದರೆ ಅದನ್ನು ಅತಿ ಪರಿಣಾಮಕಾರಿಯಾಗಿ ಮಾಡುವರೇ ತಳಪಾಯ ಹಾಕಲು ನೀವು ತಕ್ಕೊಳ್ಳ ಬೇಕಾದ ಕೆಲವು ಮಹತ್ವದ ಆರಂಭಿಕ ಹೆಜ್ಜೆಗಳು ಅಲ್ಲಿವೆ.
ಮಹತ್ವದ ಆರಂಭಿಕ ಹೆಜ್ಜೆಗಳು—ನೀವವನ್ನು ಈ ವರೆಗೆ ತಕ್ಕೊಂಡಿದ್ದೀರೋ?
7 ಮೊದಲನೇದಾಗಿ, ಕುಟುಂಬದ ಎಲ್ಲರಲ್ಲಿ ಅವರವರ ವೈಯಕ್ತಿಕ ವೈದ್ಯಕೀಯ ಸಂಬಂಧಿತ ದಸ್ತಾವೇಜು ಪೂರ್ಣವಾಗಿ ತುಂಬಿಸಲ್ಪಟ್ಟು—ತಾರೀಕು, ಸಹಿ ಮತ್ತು ಸಾಕ್ಷಿಗಳ ಸಹಿಯಿಂದ ಕೂಡಿವೆಯೋ ಎಂದು ಖಾತ್ರಿ ಮಾಡಿಕೊಳ್ಳಿರಿ. ಕೆಲವು ಸಹೋದರರು ಒಂದು ಆಸ್ಪತ್ರೆಗೆ ತಾರೀಕಿಲ್ಲದ ಮತ್ತು ⁄ ಅಥವಾ ಸಾಕ್ಷ್ಯಗಳಿಲ್ಲದ ದಸ್ತಾವೇಜಿನೊಂದಿಗೆ ಬಂದಾಗ, ಅದರ ಸಪ್ರಮಾಣತೆಯನ್ನು ಆಕ್ಷೇಪಿಸಲಾಯಿತು. ಮತ್ತು ನಮ್ಮ ಅಸ್ನಾನಿತ ಮಕ್ಕಳೆಲ್ಲರಲ್ಲಿ ಅವರವರ ಮಾಹಿತಿ ತುಂಬಿಸಲ್ಪಟ್ಟ ಐಡೆಂಟಿಟಿ ಕಾರ್ಡ್ ಇದೆಯೋ? ಇಲ್ಲವಾದರೆ, ನಿಮ್ಮ ಮಗುವನ್ನು ಒಳಗೂಡುವ ಒಂದು ತುರ್ತು ಪರಿಸ್ಥಿತಿಯಲ್ಲಿ ಅಸ್ಪತ್ರೆಯ ಸಿಬ್ಬಂಧಿಗಳಿಗೆ, ರಕ್ತದ ಕುರಿತಾದ ನಿಮ್ಮ ನಿಲುವು ಮತ್ತು ಯಾರಿಗೆ ಸುದ್ಧಿ ತಿಳಿಸುವದೆಂದು ಗೊತ್ತಾಗುವುದು ಹೇಗೆ?
8 ಈ ದಸ್ತಾವೇಜುಗಳನ್ನು ಎಲ್ಲಾ ಸಮಯಗಳಲ್ಲಿ ತಮ್ಮೊಂದಿಗೆ ಇಡುವಂತೆ ಎಲ್ಲರೂ ನೋಡಿಕೊಳ್ಳತಕ್ಕದ್ದು. ಮಕ್ಕಳು ಪ್ರತಿದಿನ ಶಾಲೆಗೆ ಹೋಗುವ ಮುಂಚೆ ಅದನ್ನು ಚೆಕ್ ಮಾಡಿ ನೋಡಿರಿ, ಹೌದು, ಆಟದ ಬಯಲಿಗೆ ಯಾ ಮನೋರಂಜನೆಯ ಕ್ಷೇತ್ರಕ್ಕೆ ಅವರು ಹೋಗುವ ಮೊದಲು ಕೂಡಾ ನೋಡಿರಿ. ಕೆಲಸದಲ್ಲಿರುವಾಗ, ರಜೆಯಲ್ಲಿರುವಾಗ ಅಥವಾ ಒಂದು ಕ್ರೈಸ್ತ ಅಧಿವೇಶನದಲ್ಲಿರುವಾಗ ಈ ದಸ್ತಾವೇಜುಗಳು ನಮ್ಮಲ್ಲಿರುವಂತೆ ನಾವು ನೋಡಿಕೊಳ್ಳತಕ್ಕದ್ದು. ಎಂದೂ ಅವುಗಳ ಹೊರತು ಇರಬೇಡಿ!
9 ನೀವೊಂದು ವಿಷಮ ಪರಿಸ್ಥಿತಿಯಲ್ಲಿ, ಮತಿಯಿಲ್ಲದ ಮತ್ತು ⁄ ಅಥವಾ ನಿಮಗಾಗಿ ಮಾತಾಡಲಾರದ ಸ್ಥಿತಿಯಲ್ಲಿ ಆಸ್ಪತ್ರೆಯ ಎಮರ್ಜೆನ್ಸಿ ಕೋಣೆಯಲ್ಲಿ ಮಲಗಿರುವಾಗ ನಿಮಗೇನು ಸಂಭವಿಸಬಹುದೆಂದು ಯೋಚಿಸಿರಿ. ನಿಮ್ಮೊಂದಿಗೆ ನಿಮ್ಮ ದಸ್ತಾವೇಜು ಇಲ್ಲದಿದ್ದರೆ ಮತ್ತು ನಿಮ್ಮ ಪರವಾಗಿ ಮಾತನಾಡಲು ಯಾವ ಸಂಬಂಧಿಕನು ಅಥವಾ ಹಿರಿಯನು ಇನ್ನೂ ಆಸ್ಪತ್ರೆಗೆ ಬಂದಿಲ್ಲವಾದರೆ, ಮತ್ತು ನಿಮಗೆ ‘ರಕ್ತದ ಅಗತ್ಯವಿದೆ’ ಎಂದು ತೀರ್ಮಾನಿಸಲ್ಪಟ್ಟರೆ, ರಕ್ತ ಪೂರಣವು ನಿಮಗೆ ನೀಡಲ್ಪಡುವ ಸಂಭವವು ಅಲ್ಲಿರುವುದು. ದೌರ್ಭಾಗ್ಯದಿಂದ ಇದು ಕೆಲವರಿಗೆ ಸಂಭವಿಸಿದೆ. ಆದರೆ ದಸ್ತಾವೇಜು ನಮ್ಮಲ್ಲಿದ್ದರೆ ಅದು ನಮ್ಮ ಪರವಾಗಿ ಮಾತಾಡುತ್ತದೆ, ನಮ್ಮ ಸ್ವ-ಇಷ್ಟವನ್ನು ವ್ಯಕ್ತಪಡಿಸುತ್ತದೆ.
10 ಆದ್ದರಿಂದಲೇ, ವೈದ್ಯಕೀಯ ದಸ್ತಾವೇಜು ಒಂದು ವೈದ್ಯಕೀಯ ಕೈಬಳೆ ಯಾ ಕಂಠಹಾರಕ್ಕಿಂತ ಒಳ್ಳೆಯದು. ಕೊನೆಯದ್ದು ನಮ್ಮ ನಿಲುವಿಗಾಗಿ ಬೈಬಲಾಧರಿತ ಕಾರಣವನ್ನು ವಿವರಿಸುವುದಿಲ್ಲ ಮತ್ತು ಹೇಳಿರುವ ವಿಷಯವನ್ನು ದೃಢೀಕರಿಸುವ ಯಾವ ಸಹಿಗಳೂ ಅದರಲ್ಲಿಲ್ಲ. ಒಬ್ಬ ಸಹೋದರಿಯ ದಸ್ತಾವೇಜಿನ ಕುರಿತು ಕೆನಡಾದ ಒಂದು ಕೋರ್ಟ್ ತೀರ್ಮಾನಿಸಿದ್ದು: “[ರೋಗಿಯು], ಒಂದುವೇಳೆ ತನಗೆ ಬೋಧ ತಪ್ಪಿದ್ದಲ್ಲಿ ಇಲ್ಲವೇ ತನ್ನಿಷ್ಟವನ್ನು ತಿಳಿಸಲು ಅಶಕ್ತಳಾದಲ್ಲಿ, ರಕ್ತ ಪೂರಣಕ್ಕೆ ತನ್ನ ಸಮ್ಮತಿಯಿಲ್ಲ ಎಂದಷ್ಟನ್ನು ಮಾತ್ರವೇ ಡಾಕ್ಟರುಗಳಿಗೆ ಮತ್ತು ಇತರ ಔಷಧೋಪಚಾರಿಗಳಿಗೆ ತಿಳಿಸಲು ಉಳಿದಿರುವ ಒಂದು ಮಾತ್ರ ಮಾರ್ಗವನ್ನು ಆಯ್ದಿದ್ದಳು.” ಆದ್ದರಿಂದ ಎಂದಿಗೂ ಅದರ ಹೊರತು ಇರಬೇಡಿ!
11 ನಮ್ಮ ವೈದ್ಯಕೀಯ ಮಾರ್ಗದರ್ಶಕವು ತುರ್ತು ಪರಿಸ್ಥಿತಿಗಳೊಂದಿಗೆ ನಿರ್ವಹಿಸಲು ಮಾತ್ರವೇ ರಚಿಸಲಾಗಿರುವುದರಿಂದ, ಆಯ್ದ ಶಸ್ತ್ರಕ್ರಿಯೆಯಲ್ಲಿ ನಾವು ನಮ್ಮ ಸ್ವಂತ ವ್ಯಕ್ತಿಪರ, ಪೂರಾ ಮಾಹಿತಿಗಳಿರುವ ಮಾರ್ಗದರ್ಶಕವನ್ನು (ನಮ್ಮ ವೈದ್ಯಕೀಯ ಮಾರ್ಗದರ್ಶಕದ ಆಧಾರದಲ್ಲಿ) ಬರೆದು ಕೊಡುವುದು ವಿವೇಕಪ್ರದ. ಈ ಮೂಲಕ ಶಸ್ತ್ರಕ್ರಿಯೆಯ ವಿಧಾನ ಮತ್ತು ಡಾಕ್ಟರುಗಳ ಮತ್ತು ಆಸ್ಪತ್ರೆಯ ಹೆಸರುಗಳು ಮುಂತಾದ ವಿಶಿಷ್ಟ ವಿವರಣೆಗಳನ್ನು ನೀವು ಸೇರಿಸಬಹುದು. ಇದನ್ನು ಮಾಡುವ ಹಕ್ಕು ನಿಮ್ಮದು ಮತ್ತು ಹೀಗೆ, ನೀವು ಆಯ್ದ ಔಷಧೋಪಚಾರವು ನಿಮಗೆ ನಿಶ್ಚಯ ದೊರೆಯುವುದು. ನೀವು ಅಥವಾ ನಿಮ್ಮ ಡಾಕ್ಟರರು ಗಂಭೀರ ಸಮಸ್ಯೆಯನ್ನು ಅಪೇಕ್ಷಿಸದಿದ್ದರೂ ಯಾವುದೇ ಅನಿರೀಕ್ಷಿತ ವಿಕಸನಗಳಲ್ಲಿ ಈ ಮಾರ್ಗದರ್ಶಕವು ಪಾಲಿಸಲ್ಪಡಬೇಕೆಂದು ತಿಳಿಸಿರಿ.—ಜ್ಞಾನೋ. 22:3.
12 ಮುಂದಿನ ಮಹತ್ವದ ಹೆಜ್ಜೆಯು, ನಿಮ್ಮ ಆಯ್ದ ಯಾ ತುರ್ತು ಔಷಧೋಪಚಾರದಲ್ಲಿ ನೀವು ವ್ಯವಹರಿಸಲಿರುವ ಆವಶ್ಯಕ ವೈದ್ಯಕೀಯ ಸಿಬ್ಬಂಧಿಯೊಂದಿಗೆ ಮಾತಾಡುವುದೇ. ವಿಶೇಷವಾಗಿ, ನೀವು ಯಾರೊಂದಿಗೆ ಮಾತಾಡಬೇಕು?
ವೈದ್ಯಕೀಯ ಸಿಬ್ಬಂಧಿಯೊಂದಿಗೆ ಮಾತಾಡಿರಿ
13 ಮೆಡಿಕಲ್ ಟೀಮ್: ಮನುಷ್ಯನ ಭಯವು ಇರಬಾರದಾದ ಸಮಯ ಇದು. (ಜ್ಞಾನೋ. 29:25) ನಿಮ್ಮಲ್ಲಿ ಅನಿಶ್ಚಿತ ಭಾವವು ಕಂಡರೆ ನೀವು ಪ್ರಾಮಾಣಿಕರಲ್ಲವೆಂದು ಬೇರೆಯವರು ತೀರ್ಮಾನಿಸ್ಯಾರು. ಆಯ್ದ ಅಥವಾ ತುರ್ತಿನ ಶಸ್ತ್ರಕ್ರಿಯೆ ಬೇಕಾದಾಗ, ನೀವು ಅಥವಾ ನಿಮ್ಮ ಹತ್ತಿರದ ಕುಟುಂಬ ಸದಸ್ಯನು ಶಸ್ತ್ರಕ್ರಿಯೆಯ ತಂಡದ ಮುಖ್ಯಸ್ಥನಿಗೆ ಕೆಲವು ಚೂಪಾದ ಪ್ರಶ್ನೆಗಳನ್ನು ದೃಢಸಂಕಲ್ಪದಿಂದ ಕೇಳಬೇಕು. ಒಂದು ಮಹತ್ವದ ಪ್ರಶ್ನೆಯು, ರೋಗಿಯ ಇಚ್ಛೆಯನ್ನು ಆ ತಂಡವು ಗೌರವಿಸುತ್ತದೋ ಮತ್ತು ಎಲ್ಲಾ ಪರಿಸ್ಥಿತಿಗಳಲ್ಲಿ ರಕ್ತರಹಿತ ಉಪಚಾರವನ್ನು ಕೊಡುವುದೋ? ಇದರ ಆಶ್ವಾಸನೆಯ ಹೊರತು ನೀವು ಚೆನ್ನಾಗಿ ರಕ್ಷಿತರಲ್ಲ.
14 ನಿಮ್ಮ ಇಷ್ಟಗಳೇನೆಂದು ಸ್ಪಷ್ಟವಾಗಿ ಮತ್ತು ಗಂಭೀರ ನಿಶ್ಚಯತೆಯಿಂದ ತಿಳಿಯಪಡಿಸಿರಿ. ನಿಮ್ಮ ಸಮಸ್ಯೆಗೆ ರಕ್ತದ ಬದಲಿಯಾಗಿ ನಿರಕ್ತ ವೈದ್ಯಕೀಯ ಉಪಚಾರ ಬೇಕೆಂದು ಸ್ಪಷ್ಟ ಪಡಿಸಿರಿ. ಸರಾಗವಾಗಿ ಮತ್ತು ಆತ್ಮವಿಶ್ವಾಸದಿಂದ ನಿಮ್ಮ ಸ್ವಂತ ಸುಧಾರಿಸಿದ ವೈದ್ಯಕೀಯ ಮಾರ್ಗದರ್ಶಕವನ್ನು ಮತ್ತು ಹೊಣೆಗಾರಿಕೆ ಪತ್ರದಿಂದ ಆಸ್ಪತ್ರೆಯ ಬಿಡುಗಡೆಯನ್ನು ಎರಡನ್ನೂ ಚರ್ಚಿಸಿರಿ. ಸರ್ಜನನು ನಿಮ್ಮಿಷ್ಟದ ಪ್ರಕಾರ ಕೆಲಸ ಮಾಡಲು ಸಿದ್ಧನಿಲ್ಲದಿದ್ದರೆ ನಿಮಗಾಗಿ ಇನ್ನೊಬ್ಬ ಡಾಕ್ಟರನನ್ನು ಹುಡುಕುವಂತೆ ಆಸ್ಪತ್ರೆ ಆಡಳಿತಗಾರನನ್ನು ನೀವು ಕೇಳುವುದಾದರೆ ನಿಮ್ಮ ಸಮಯ ಉಳಿಸುವಿರಿ. ಇದು ಅವನ ಕೆಲಸದ ಒಂದು ಭಾಗ.
15 ಅನೆಸ್ತೀಷಿಯಾಲಜಿಸ್ಟ್ (ಸುಪ್ತಕಾರಕ ತಜ್ಞ): ಶಸ್ತ್ರಕ್ರಿಯೆಯ ಮುಂಚೆ ನೀವು ಮಾತಾಡುವ ಅತ್ಯಗತ್ಯವಿರುವ ವೈದ್ಯಕೀಯ ತಂಡದ ವ್ಯಕ್ತಿಯು ಇವನು. ಈ ಡಾಕ್ಟರನೊಂದಿಗೆ ಮಾತಾಡಲು ನೀವು ತಪ್ಪಬಾರದು. ಶಸ್ತ್ರತಜ್ಞನು ಓಪರೇಶನ್ ಮಾಡುವಾಗ ನಿಮ್ಮನ್ನು ಸಜೀವವಾಗಿಡುವ ಹೊಣೆಯಿರುವ ಈ ಸುಪ್ತಕಾರಕ ತಜ್ಞನು ರಕ್ತದ ಬಳಸುವಿಕೆ ಮುಂತಾದವುಗಳ ಕುರಿತು ನಿರ್ಣಯಗಳನ್ನು ಮಾಡುವವನಾಗಿದ್ದಾನೆ. ಆದಕಾರಣ, ನೀವು ಈ ಸುಪ್ತಕಾರಕ ತಜ್ಞನೊಂದಿಗೆ ಮಾತಾಡಲೇ ಬೇಕು ಮತ್ತು ರಕ್ತದ ಬಗ್ಗೆ ನಿಮ್ಮ ನಿಲುವನ್ನು ಅವನಿಗೆ ಖಾತ್ರಿಪಡಿಸಿ, ಅವನದನ್ನು ಗೌರವಿಸುವನೋ ಇಲ್ಲವೋ ಎಂದು ನಿರ್ಧರಿಸಬೇಕು.—ಲೂಕ 18:3-5 ಹೋಲಿಸಿ.
16 ಸುಪ್ತಕಾರಕ ತಜ್ಞನು ಶಸ್ತ್ರಕ್ರಿಯೆಯ ಮುಂಚಿನ ರಾತ್ರಿ ತಡವಾಗಿ ರೋಗಿಯನ್ನು ಸಂದರ್ಶಿಸುವುದು ಸಾಮಾನ್ಯ ಪದ್ಧತಿಯೆಂದು ಕಾಣುತ್ತದೆ—ರಕ್ತದೆಡೆಗೆ ನಿಮ್ಮ ನಿಲುವನ್ನು ಅವನು ವಿರೋಧಿಸುವುದಾದರೆ ಇನ್ನೂ ತಡವಾಗಿ ಬಂದಾನು. ಆಯ್ದ ಶಸ್ತ್ರಕ್ರಿಯೆಯ ಕುರಿತು ಸಾಕಷ್ಟು ಮುಂಚಿತವಾಗಿ ಮಾತಾಡಲಾಗುವಂತೆ ಒಬ್ಬ ಸಹಕರಿಸುವ ಸುಪ್ತಕಾರಕ ತಜ್ಞನನ್ನು ಸರ್ಜನ್ನು ಮುಂಚಿತವಾಗಿ ಆರಿಸುವಂತೆ ಒತ್ತಾಯಪಡಿಸಿರಿ. ಆಗ, ಮೊದಲನೆಯವನು ನಿಮ್ಮ ಮನವೆಯನ್ನು ಕೇಳಲು ಸಿದ್ಧನಿಲ್ಲದಿದ್ದರೆ ಇನ್ನೊಬ್ಬನನ್ನು ಹುಡುಕಲು ಅಲ್ಲಿ ಸಮಯವಿರುವುದು. ನಿಮ್ಮ ಶಸ್ತ್ರಕ್ರಿಯೆಯ ಸುಪ್ತಕಾರಕ ತಜ್ಞನೊಂದಿಗೆ ನೀವು ತೃಪ್ತರಿರುವ ಈ ಹಕ್ಕಿನ ವಿಷಯದಲ್ಲಿ ನಿಮ್ಮೊಂದಿಗೆ ಬೇರೆ ಯಾರಾದರೂ ಮಾತನಾಡಿ ಒಲಿಸಿಬಿಡಲು ಪ್ರಯತ್ನಿಸುವಂತೆ ಬಿಟ್ಟುಕೊಡಬೇಡಿ.
17 ಇವರೆಲ್ಲರಿಗೆ ನೀವು, ನಿಮ್ಮ ಒಪ್ಪಂದರಹಿತ ಸ್ಥಾನವನ್ನು ಸ್ಪಷ್ಟಪಡಿಸಲೇ ಬೇಕು: ರಕ್ತ ಬೇಡ. ರಕ್ತದ ಬದಲಿಯಾದ ನಿರಕ್ತ ವೈದ್ಯಕೀಯ ಉಪಚಾರವನ್ನು ನಿಮಗೆ ಕೊಡುವಂತೆ ಕೇಳಿಕೊಳ್ಳಿರಿ. ನಿಮ್ಮ ಪರಿಸ್ಥಿತಿಗೆ ತಕ್ಕದಾದ್ದ ಯಾವುದೇ ಜ್ಞಾತ ರಕ್ತದ ಬದಲಿಗಳನ್ನು ಹೆಸರಿಸಿರಿ. ಅವು ನಿಮ್ಮ ಕೇಸ್ಗೆ ಉಪಯುಕ್ತವಲ್ಲವೆಂದು ಡಾಕ್ಟರರು ಹೇಳುವುದಾದರೆ ಇತರ ಸಂಭಾವ್ಯತೆಗಳನ್ನು ವೈದ್ಯಕೀಯ ಸಾಹಿತ್ಯದಲ್ಲಿ ಸಂಶೋಧಿಸಿ ನೋಡುವಂತೆ ಹೇಳಿರಿ. ಅವರಿಗಿಷ್ಟವಿದ್ದಲ್ಲಿ, ನಮ್ಮ ಲೊನಾವ್ಲ ಬ್ರಾಂಚ್ನಲ್ಲಿರುವ ಹಾಸ್ಪಿಟಲ್ ಇನ್ಫರ್ಮೇಶನ್ ಸರ್ವಿಸಸ್ನ್ನು ಸಂಪರ್ಕಿಸುವಂತೆ ನಿಮ್ಮ ಹಿರಿಯರಿಗೆ ಹೇಳುವ ಮೂಲಕ ನೀವು ಆ ಕುರಿತು ಸ್ವಲ್ಪ ಸಮಾಚಾರವನ್ನು ತಿಳಿಸಬಲ್ಲಿರೆಂಬ ಆಶ್ವಾಸನೆ ಕೊಡಿರಿ.
ನಿಮ್ಮ ಹಕ್ಕುಗಳನ್ನು ಉಪಯೋಗಿಸುವುದು
18 ನಿಮ್ಮನ್ನು ಆಸ್ಪತ್ರೆಗೆ ಸೇರಿಸುವಾಗ ನೀವು ಸಹಿಮಾಡುವಂತೆ ಅವರು ಕೇಳುವ-ಹೊಣೆಗಾರಿಕೆಯಿಂದ ಚ್ಯುತಗೊಳಿಸುವ ಫಾರ್ಮನ್ನು ಮತ್ತು ಒಪ್ಪಿಗೆ ಕೊಡುವ ಫಾರ್ಮನ್ನು ಜಾಗ್ರತೆಯಿಂದ ಪರೀಕ್ಷಿಸಿರಿ. ಕೆಲವು ಸಾರಿ, ನಿಮ್ಮಿಷ್ಟವನ್ನು ಗೌರವಿಸುವರೆಂದು ಹೇಳುವ ಪಾರಾದ ಅಡಿಯಲ್ಲೀ ಬೇರೊಂದು ಪಾರಾವು ಸಮಸ್ಯೆಗಳು ಉಂಟಾದಲ್ಲಿ “ಪ್ರಾಣರಕ್ಷಕ” ಉಪಚಾರವನ್ನು ಆಸ್ಪತ್ರೆಯು ನೀಡುವರೇ ಸಹಿಮಾಡಿದವನ ಒಪ್ಪಿಗೆ ಇದೆ ಎಂಬ ಘೋಷಣೆಯೂ ಇರುತ್ತದೆ. ಅದರಲ್ಲಿ ರಕ್ತವೂ ಸೇರಿರ ಸಾಧ್ಯವಿದೆ. ರಕ್ತವು ಸೇರಿರದಂತೆ, ಅಂಥ ಯಾವುದೇ ಹೇಳಿಕೆಯನ್ನು ಬದಲಿಸುವ ಅಥವಾ ಪೂರಾ ರೀತಿಯಲ್ಲಿ ಹೊಡೆದುಹಾಕುವ ಹಕ್ಕು ನಿಮಗಿದೆ. ಹಾಗೆ ಮಾಡಲು ಸಾಧ್ಯವಿಲ್ಲವೆಂದು ನರ್ಸುಗಳು ಹೇಳಾರು ಆದರೆ ನಿಮಗೆ ಸಾಧ್ಯವಿದೆ ! ಅಂಥ ಒಂದು ಫಾರ್ಮು ಅವರೊಂದಿಗೆ ಮಾಡಲ್ಪಟ್ಟ ಕರಾರು ಎಂದು ವಿವರಿಸಿರಿ ಮತ್ತು ನೀವು ಒಪ್ಪದ ಒಂದು ಕರಾರಿಗೆ ಸಹಿ ಹಾಕಲಾರಿರಿ ಎಂದು ಹೇಳಿರಿ. ನಿಮಿಚ್ಛೆಗೆ ವಿರುದ್ಧವಾಗಿ ಸಹಿ ಹಾಕುವಂತೆ ಯಾರಾದರೂ ನಿಮ್ಮನ್ನು ಬಲಾತ್ಕರಿಸಿದರೆ ಆಡಳಿತಗಾರನೊಂದಿಗೆ ಮತ್ತು ⁄ ಅಥವಾ ಆ ಆರೋಗ್ಯಕ್ಷೇಮ ಕೇಂದ್ರದ ರೋಗಿಗಳ ಪ್ರತಿನಿಧಿಯೊಂದಿಗೆ ಮಾತಾಡುವಂತೆ ಕೇಳಿರಿ.
19 ನೀವಿದನ್ನು ಮಾಡಶಕ್ತರೋ? ಹೌದು ಮಾಡಶಕ್ತರು. ಆದುದರಿಂದ ರೋಗಿಯಾದ ನಿಮ್ಮ ಹಕ್ಕುಗಳನ್ನು ಅರಿತುಕೊಳ್ಳಿರಿ. ಒಂದು ಆಸ್ಪತ್ರೆಯನ್ನು ಸೇರಿದ ಮಾತ್ರಕ್ಕೆ ನೀವು ನಿಮ್ಮ ಮಾನವೀಯ ಹಕ್ಕುಗಳನ್ನು ಕಳಕೊಳ್ಳಲಾರಿರಿ. ಔಷಧೋಪಚಾರವನ್ನು ಪಡೆಯುವದಕ್ಕಾಗಿ ನೀವದನ್ನು ಬಿಟ್ಟುಕೊಡಬೇಕಾಗಿಲ್ಲ. ಇದಕ್ಕಿಂತ ಬೇರೆಯಾದದ್ದನ್ನು ಯಾವನೂ ನಿಮಗೆ ತಿಳಿಸುವಂತೆ ಬಿಡಬೇಡಿರಿ.
20 ಅಂಥ ಹಕ್ಕುಗಳಲ್ಲಿ ಒಂದು ಶ್ರುತಪಡಿಸುವ ಒಪ್ಪಿಗೆ ಎಂದು ಕರೆಯಲ್ಪಡುತ್ತದೆ. ಇದರ ಅರ್ಥವೇನಂದರೆ ನಿಮ್ಮ ಒಪ್ಪಿಗೆ ಯಾ ಅನುಮತಿಯ ಹೊರತು ಯಾವುದೇ ರೀತಿಯ ಔಷಧೋಪಚಾರವನ್ನು ನಿಮಗೆ ಕೊಡಬಾರದು. ನೀವು ಬಯಸಿದ್ದಲ್ಲಿ ಎಲ್ಲಾ ರೀತಿಯ ಔಷಧೋಪಚಾರವನ್ನೂ ನೀವು ನಿರಾಕರಿಸಶಕ್ತರು. ಉಪಚಾರಕ್ಕೆ ನಿಮ್ಮ ಒಪ್ಪಿಗೆಯನ್ನು ಹಿಂಬಾಲಿಸಿ ಡಾಕ್ಟರುಗಳು ಏನೆಲ್ಲಾ ಮಾಡಲಿದ್ದಾರೆ, ಯಾವ ಗಂಡಾಂತರದ ಭಯವಿದೆ ಮುಂತಾದವುಗಳ ಸ್ಪಷ್ಟ ವಿವರಣೆಯು ಕೊಡಲ್ಪಡಬೇಕು. ಆ ಮೇಲೆ, ದೊರೆಯುವ ಯಾವುದೇ ಬದಲಿ ಔಷಧೋಪಚಾರಗಳನ್ನೂ ಅವರು ನಿಮಗೆ ತಿಳಿಸಬೇಕು. ಇದೆಲ್ಲಾ ತಿಳಿಸಿಯಾದ ಮೇಲೆ, ನೀವು ಬಯಸುವ ಔಷಧೋಪಚಾರವನ್ನು ನೀವು ಆರಿಸಿಕೊಳ್ಳುತ್ತೀರಿ.
21 ನೀವು ಯಾವುದಕ್ಕೆ ಒಪ್ಪಿಗೆ ಕೊಡುತ್ತೀರಿ ಎಂಬದರ ಖಾತ್ರಿಗಾಗಿ, ನಿಮಗೆ ಅರ್ಥವಾಗದ ಯಾವುದೇ ವಿಷಯದ ಕುರಿತು ಒಳ್ಳೇ ಪ್ರಶ್ನೆಗಳನ್ನು ನೀವು ಕೇಳಲೇ ಬೇಕು, ವಿಶೇಷವಾಗಿ ಆಸ್ಪತ್ರೆ ಸಿಬ್ಬಂಧಿಯಿಂದ ದೊಡ್ಡ ದೊಡ್ಡ ಶಬ್ದಗಳು ಅಥವಾ ವೈದ್ಯಕೀಯ ಪದಗಳು ಪ್ರಯೋಗಿಸಲ್ಪಡುವಾಗ. ಉದಾಹರಣೆಗೆ, “ಪ್ಲಾಜ್ಮ” (ರಕ್ತ ದ್ರವ) ಬಳಸಲು ತಾನು ಬಯಸುತ್ತೇನೆಂದು ಡಾಕ್ಟರ್ ಹೇಳಿದರೆ ನೀವು ನೆನಸಬಹುದೇನಂದರೆ ಅದು ಪ್ಲಾಜ್ಮ ವಾಲ್ಯೂಮ್ ಎಕ್ಸ್ಪಾಂಡರ್ (ರಕ್ತದ ಪರಿಮಾಣವನ್ನು ಹೆಚ್ಚಿಸುವ ದ್ರವ) ಎಂಬದಾಗಿ. ಆದರೆ ವಿಷಯ ಹಾಗಿಲ್ಲ. ಒಪ್ಪಿಗೆ ಕೊಡುವ ಮೊದಲು, ಕೇಳಿರಿ: “ಅದು ರಕ್ತದ ಅಂಗಭಾಗವೋ?” ಅವನು ಉಪಯೋಗಿಸ ಬಯಸುವ ಯಾವುದೇ ವಿಧಾನಗಳ ಕುರಿತು, ಕೇಳಿರಿ: “ಆ ಉಪಚಾರದಲ್ಲಿ ರಕ್ತದಿಂದ ತಯಾರಿಸಿದ ದ್ರವಗಳು ಸೇರಿವೆಯೋ?” ತಾನು ಪ್ರಯೋಗಿಸಲಿರುವ ಕೆಲವು ಸಾಧನಗಳನ್ನು ಅವನು ವಿವರಿಸಿದರೆ, ಕೇಳಿರಿ: “ಈ ಸಾಧನದ ಉಪಯೋಗದ ಯಾವುದೇ ಸಮಯದಲ್ಲಿ ನನ್ನ ರಕ್ತವನ್ನು ಸಂಗ್ರಹಿಸಿಡಲಾಗುವುದೋ?”
22 ಮೇಲಿನ ಎಲ್ಲವನ್ನು ನೀವು ಮಾಡಿದ ಬಳಿಕವೂ ನಿಮ್ಮ ನಿಲುವಿಗೆ ಇನ್ನೂ ಯಾವ ಸಹಕಾರವೂ ಇಲ್ಲದಿದ್ದರೆ ಮತ್ತು ಸ್ವಲ್ಪ ಪ್ರತಿಭಟನೆ ಇನ್ನೂ ಇದ್ದರೆ ನೀವೇನು ಮಾಡಬೇಕು? ಸಹಾಯಕ್ಕಾಗಿ ಕೇಳಲು ಹಿಂಜರಿಯಬೇಡಿ. ಕೆಲವರು ಸಹಾಯ ಪಡೆಯಲು ತೀರಾ ವಿಳಂಬಿಸಿದ್ದಾರೆ ಮತ್ತು ತಮ್ಮ ಪ್ರಾಣವನ್ನೇ ಗಂಡಾಂತರಕ್ಕೆ ಹಾಕಿದ್ದಾರೆ.
ಅಗತ್ಯದ ಸಮಯದಲ್ಲಿ ಬೆಲೆಯುಳ್ಳ ಸಹಾಯ
23 ಬೇಕಾದ ಸಹಾಯ ಪಡೆಯಲು ಕೆಳಗಿನ ವಿಧಾನವನ್ನು ಗಮನಿಸಿರಿ: (1) ಎಲ್ಲಿ ಆಸ್ಪತ್ರೆಯು ರಕ್ತವನ್ನುಪಯೋಗಿಸ ಬಯಸುವ ಕಾರಣ ಹೋರಾಟವು ಜ್ಯಾರಿಯಲ್ಲಿದೆಯೋ ಅಲ್ಲಿ, ನೀವಾಗಲಿ, ನಿಮ್ಮ ಪ್ರಿಯಜನರಾಗಲಿ ಆಯ್ದ ಯಾ ತುರ್ತಿನ ಶಸ್ತ್ರಕ್ರಿಯೆಯನ್ನು ಎದುರಿಸುವಾಗ, ಕೂಡಲೇ; ಅಥವಾ (2) ನಿಮ್ಮ ಅಥವಾ ಪ್ರಿಯಜನರ ವೈದ್ಯಕೀಯ ಸ್ಥಿತಿಯು ಗಂಭೀರವಾಗಿ ಕೆಟ್ಟಾಗ; ಅಥವಾ (3) ಮಗುವಿನ (ಅಥವಾ ಪ್ರೌಢನ) ಕೇಸಿಗಾಗಿ ತಾವು ಕೋರ್ಟ್ ಆರ್ಡರನ್ನು ತೆಗೆಯಲಿದ್ದೇವೆಂದು ಡಾಕ್ಟರ್, ನರ್ಸು ಅಥವಾ ವ್ಯವಸ್ಥಾಪಕರು ಹೇಳುವಾಗ:
24 ನಿಮ್ಮ ಸ್ಥಳೀಕ ಹಿರಿಯರನ್ನು ಕರೆಯಿರಿ, ನೀವು ಈಗಾಗಲೇ ಅದನ್ನು ಮಾಡಿಲ್ಲವಾದರೆ. (ರಕ್ತದ ವಿಷಯದಲ್ಲಿ ನಮ್ಮ ನಿಲುವಿನ ಕಾರಣ ನಾವು ಆರೋಗ್ಯಕ್ಷೇಮ ಸೌಕರ್ಯಕ್ಕೆ ಹೋಗಬೇಕಾದ ಯಾವುದೇ ಸಮಯದಲ್ಲಿ ನಮ್ಮ ಹಿರಿಯರನ್ನು ಎಚ್ಚರಿಸುವುದು ವಿವೇಕಪ್ರದವು.) ಆ ಮೇಲೆ, ಆವಶ್ಯಕವೆಂದು ಕಂಡರೆ ಆ ಹಿರಿಯರು, ಲೊನಾವ್ಲ ಬ್ರಾಂಚ್ ಆಫೀಸಿನ ಹಾಸ್ಪಿಟಲ್ ಇನ್ಫರ್ಮೇಶನ್ ಸರ್ವಿಸಸ್ನ್ನು ಕರೆಯುವರು.—ಯೆಶಾ. 32:1, 2.
25 ಹಾಸ್ಪಿಟಲ್ ಇನ್ಫರ್ಮೇಶನ್ ಸರ್ವಿಸಸ್ ನಿಮ್ಮ ಕ್ಷೇತ್ರದ ಒಬ್ಬ ಸಹಕರಿಸುವ ಡಾಕ್ಟರನನ್ನು ತಿಳಿದಿರಬಹುದು, ಅಥವಾ ನಿಮಗೆ ಅತಿ ಹತ್ತಿರದ ಒಬ್ಬನೊಂದಿಗೆ ನೀವು ಸಂಪರ್ಕಿಸುವಂತೆ ಸಾಧ್ಯಗೊಳಿಸಬಹುದು. ರಕ್ತದ ಬದಲಿಯಾಗಿ ದೊರೆಯುವ ನಿರಕ್ತ ವೈದ್ಯಕೀಯ ಉಪಚಾರವನ್ನು ಶಿಫಾರಸು ಮಾಡಲು ಅವರು ಶಕ್ತರಾಗಬಹುದು. ನಿಶ್ಚಯವಾಗಿ ಈ ಸಹೋದರರು ನಿಮಗಾಗಿ ನಿರ್ಣಯ ಮಾಡಲಾರರು, ಆದರೆ ವಿಷಯದ ಬಗ್ಗೆ ಸೊಸೈಟಿಯ ದೃಷ್ಟಿಕೋನವನ್ನು ವಿವರಿಸಲು ಸಹಾಯ ಮಾಡುವರು ಮತ್ತು ವೈದ್ಯಕೀಯವಾಗಿ ಹಾಗೂ ನ್ಯಾಯಬದ್ಧವಾಗಿ ನಿಮಗಿರುವ ಆಯ್ಕೆಯನ್ನು ತಿಳಿಸುವರು.
26 ವೈದ್ಯಕೀಯ ತಂಡವಿನ್ನೂ ಸಹಕರಿಸಲು ಸಿದ್ಧರಿಲ್ಲದಿದ್ದರೆ ಆಸ್ಪತ್ರೆಯ ಆಡಳಿತಗಾರನೊಂದಿಗೆ, ಅವನು ತನ್ನ ಸಿಬ್ಬಂಧಿಯಲ್ಲಿ ನಿಮ್ಮ ಇಷ್ಟವನ್ನು ಗೌರವಿಸುವ ಬೇರೆ ಡಾಕ್ಟರರನ್ನು ಒದಗಿಸುವುದರ ಕುರಿತು ಮಾತಾಡಿರಿ. ಆಡಳಿತಗಾರನು ಅದನ್ನು ಮಾಡಲು ಅನುಮಾನಿಸಿದರೆ ಮತ್ತು ನಿಮಗೆ ಗೊತ್ತಿರುವ ಬೇರೊಬ್ಬ ಶಸ್ತ್ರತಜ್ಞನು ಬೇರೆಡೆ ನಿಶ್ಚಯವಾಗಿ ಇರುವುದಾದರೆ ಮಾತ್ರವೇ ನೀವು ಬೇರೆ ಸ್ಥಳಕ್ಕೆ ಹೋಗಬಹುದು. ಆಗ, ಅಸಹಕಾರ ತೋರಿಸಿದ ಆ ಡಾಕ್ಟರರನ್ನು ಹೆಸರಿಸಿ, ಅವರನ್ನು ನಿಮ್ಮ ಕೇಸ್ನಿಂದ ನಿವೃತ್ತಿಮಾಡಿದ್ದೇನೆಂದು ತಿಳಿಸಿ ಸಹಿ ಹಾಕಿದ ಒಂದು ಲಿಖಿತ ಹೇಳಿಕೆಯನ್ನು ಕೊಡುವ ಆಯ್ಕೆ ನಿಮಗಿರುವುದು.
27 ನೀವಿದನ್ನು ಮಾಡಬಲ್ಲಿರೋ? ಹೌದು, ಅದನ್ನು ಮಾಡುವ ಹಕ್ಕು ನಿಮಗಿದೆ. ಮತ್ತು ವಿಷಯವು ಅನಂತರ ಒಬ್ಬ ನ್ಯಾಯಾಧೀಶನ ಮುಂದೆ ಬಂದರೆ ನಿಮ್ಮ ಲಿಖಿತ ಹೇಳಿಕೆಯು, ಅವನು ನಿಮ್ಮಿಷ್ಟವನ್ನು ಅಂಗೀಕರಿಸುವ ಕಡೆಗೆ ಅತಿ ಸಹಾಯಕಾರಿಯಾಗಬಹುದು. ಅದು, ನೈತಿಕವಾಗಿ ಬೇರೆ ಸರ್ಜನರನ್ನು ಮುಂದೆ ಬರಿಸಿ ತಮ್ಮ ಸೇವೆಗಳನ್ನು ನೀಡುವಂತೆ ದಾರಿಯನ್ನೂ ತೆರೆಯಬಹುದು. ಮತ್ತು ಅತಿ ಮಹತ್ವವಾಗಿ ಅದು, ನಿಮ್ಮ ಆರೋಗ್ಯವು ಅಪಾಯಕರ ಸ್ಥಿತಿಗೆ ಮುಟ್ಟುವ ಮುಂಚೆ ತಕ್ಕದಾದ್ದ ವೈದ್ಯಕೀಯ ಗಮನವನ್ನು ಒದಗಿಸಬಲ್ಲದು. ತೀರಾ ಹೆಚ್ಚು ಸಮಯದ ತನಕ ಕಾಯಬೇಡಿರಿ!
28 ಆರೋಗ್ಯ ವಿಮೆಯನ್ನು ಪಡಕೊಳ್ಳುವಂತೆ ಯಾರಿಗಾದರೂ ನಾವು ಹೇಳ ಶಕ್ತರಲ್ಲದಿದ್ದರೂ ಸಾಕಷ್ಟು ಅಥವಾ ಏನೂ ವೈದ್ಯಕೀಯ ಆಸರೆಯಿರದವರನ್ನು ಉಪಚರಿಸಲು, ಸಾಮಾನ್ಯವಾಗಿ ಸಹಕರಿಸುವ ಭಾವದ ಡಾಕ್ಟರರು ಸಹಾ, ನಮಗೆ ತುಂಬಾ ಸಮಸ್ಯೆಯನ್ನುಂಟುಮಾಡುತ್ತಾರೆಂದು ನಾವು ನಿಮಗೆ ತಿಳಿಸ ಬಯಸುತ್ತೇವೆ.
ಎಚ್ಚರವಿರಬೇಕಾದ ಸ್ಫೋಟಕ ಪ್ರಶ್ನೆಗಳು
29 ಡಾಕ್ಟರರು ಮತ್ತು ಇತರರು ಯಾವಾಗಲೂ ಒಳ್ಳೇ ಹೇತುವಿನಿಂದ ಕೇಳದ ಕೆಲವು ಪ್ರಶ್ನೆಗಳು ಅಲ್ಲಿವೆಂಬದನ್ನು ನೀವು ತಿಳಿದಿರಬೇಕು. ಡಾಕ್ಟರರುಗಳಿಂದ (ಮತ್ತು ಕೆಲವು ನ್ಯಾಯಾಧೀಶರುಗಳಿಂದ) ಅತ್ಯಂತ ಹೆಚ್ಚಾಗಿ ಕೇಳಲ್ಪಡುವ ಒಂದು ಪ್ರಶ್ನೆ ಹೀಗಿದೆ:
● “ಜೀವರಕ್ಷಕ ರಕ್ತ ಪೂರಣವನ್ನು ತೆಗೆದುಕೊಳ್ಳುವದಕ್ಕಿಂತ ಸಾಯುವದು (ನಿನ್ನ ಮಗುವನ್ನು ಸಾಯಿಸುವುದು) ನಿನಗೆ ಒಳ್ಳೆಯದೋ?”
30 ಹೌದೆಂದು ನೀವು ಹೇಳಿದರೆ, ಧಾರ್ಮಿಕ ಅರ್ಥದಲ್ಲಿ ಅದು ಸರಿಯಾದ ಉತ್ತರ. ಆದರೆ ಆ ಉತ್ತರವನ್ನು ಹೆಚ್ಚಾಗಿ ತಪ್ಪಭಿಪ್ರಯಿಸಲಾಗುತ್ತದೆ ಮತ್ತು ಕೆಲವು ಸಲ ಪ್ರತಿಕೂಲ ಕೋರ್ಟ್ ನಿರ್ಣಯಗಳನ್ನೂ ಉಂಟುಮಾಡುತ್ತದೆ. ಈ ಸನ್ನಿವೇಶದಲ್ಲಿ ನೀವು ಶುಶ್ರೂಷೆಯಲ್ಲಿಲ್ಲವೆಂಬದನ್ನು ನೆನಪಿನಲ್ಲಡಬೇಕು. ಬದಲಿಗೆ, ಬೇಕಾದ ವೈದ್ಯಕೀಯ ಔಷಧೋಪಚಾರದ ಕುರಿತು ನೀವು ಮಾತಾಡುತ್ತಿದ್ದೀರಿ. ಆದ್ದರಿಂದ, ನಿಮ್ಮ ಸಭಿಕರಾದ ವೈದ್ಯಕೀಯ ಅಥವಾ ನ್ಯಾಯಾಂಗ ವಿಭಾಗಕ್ಕೆ ತಕ್ಕಹಾಗೆ ನೀವು ಬದಲಿಸಿಕೊಳ್ಳಬೇಕು.—ಕೀರ್ತ. 39:1; ಕೊಲೊ. 4:5, 6.
31 ಒಬ್ಬ ಡಾಕ್ಟರಿಗೆ, ನ್ಯಾಯಾಧೀಶರಿಗೆ ಮತ್ತು ಆಸ್ಪತ್ರೆ ಆಡಳಿತಗಾರನಿಗೆ ನಿಮ್ಮ “ಹೌದು” ಎಂಬ ಉತ್ತರವು ನೀವೊಬ್ಬ ಹುತಾತ್ಮರಾಗ ಬಯಸುತ್ತೀರಿ ಅಥವಾ ನಿಮ್ಮ ಮಗುವನ್ನು ನಿಮ್ಮ ನಂಬಿಕೆಗಾಗಿ ಬಲಿಕೊಡಲು ಬಯಸುತ್ತೀರಿ ಎಂಬರ್ಥವನ್ನು ಕೊಡಬಲ್ಲದು. ಪುನರುತ್ಥಾನದಲ್ಲಿ ನಿಮ್ಮ ಬಲವಾದ ನಂಬಿಕೆಯನ್ನು ಈ ಪರಿಸ್ಥಿತಿಯಲ್ಲಿ ಅವರಿಗೆ ತಿಳಿಸುವುದರಿಂದ ಸಾಮಾನ್ಯವಾಗಿ ಪ್ರಯೋಜನವಾಗದು. ನಿಮ್ಮನ್ನು ಧರ್ಮಾಂಧರೆಂದೂ ಜೀವವು ಅಪಾಯದಲ್ಲಿ ಇರುವಾಗ ಬುದ್ಧಿಯುಳ್ಳ ನಿರ್ಣಯವನ್ನು ಮಾಡಲು ಅಶಕ್ತರೆಂದೂ ಅವರು ದೂಷಿಸುವರು. ನಿಮ್ಮ ಮಕ್ಕಳ ವಿಷಯದಲ್ಲಿಯಾದರೋ, “ಜೀವರಕ್ಷಕ” ವೆನಿಸಿದ ವೈದ್ಯಕೀಯ ಉಪಚಾರವನ್ನು ನಿರಾಕರಿಸುವ ದುರ್ಲಕ್ಷ್ಯದ ಹೆತ್ತವರೆಂಬ ದೃಷ್ಟಿಯಲ್ಲಿ ಅವರು ನಿಮ್ಮನ್ನು ನೋಡುವರು.
32 ಆದರೆ ನೀವು ವೈದ್ಯಕೀಯ ಉಪಚಾರವನ್ನು ನಿರಾಕರಿಸುವುದು ಅದಕ್ಕಾಗಿ ಅಲ್ಲ. ಡಾಕ್ಟರರೊಂದಿಗೆ ನಿಮ್ಮ ಭಿನ್ನತೆ ಕೇವಲ ಯಾವ ರೀತಿಯ ಉಪಚಾರ ಎಂಬ ಕಾರಣದಿಂದಲೇ. ಈ ನಿಲುವು ಹೆಚ್ಚಾಗಿ ಅವರಿಗೆ ಮತ್ತು ನಿಮಗಾಗಿ ಇಡೀ ಸನ್ನಿವೇಶವನ್ನು ಬದಲಾಯಿಸುವುದು. ಅದಲ್ಲದೆ, ರಕ್ತವು ಸುರಕ್ಷಿತ ಮತ್ತು ಅದು ಒಂದೇ “ಪ್ರಾಣರಕ್ಷಕ” ಔಷಧೋಪಚಾರ ಎಂದು ಕಾಣುವಂತೆ ಮಾಡುವ ಮೂಲಕ ಅವರು ತಪ್ಪುದಾರಿಗೆಳೆಯುತ್ತಾರೆ. (ಹೌ ಕ್ಯಾನ್ ಬ್ಲಡ್ ಸೇವ್ ಯುವರ್ ಲೈಫ್, ಪುಟ 7-22 ನೋಡಿ.) ಈ ವಿಷಯವನ್ನು ನೀವು ಅತಿ ಸ್ಪಷ್ಟ ಮಾಡಬೇಕು. ಅದನ್ನು ಮಾಡುವುದು ಹೇಗೆ? ನೀವು ಹೀಗೆ ಉತ್ತರಿಸಬಹುದು:
● ನಾನು ಸಾಯಲು (ನನ್ನ ಮಗುವು ಸಾಯುವಂತೆ) ಬಯಸುವುದಿಲ್ಲ. ನಾನು ಸಾಯಲು (ಮಗು ಸಾಯುವಂತೆ) ಬಯಸಿದ್ದರೆ ಮನೆಯಲ್ಲೀ ಉಳಿಯುತ್ತಿದ್ದೆ. ನಾನು (ನನ್ನ ಮಗು) ಬದುಕಬೇಕೆಂದೇ ವೈದ್ಯಕೀಯ ಉಪಚಾರ ಪಡೆಯಲು ನಾನಿಲ್ಲಿಗೆ ಬಂದಿದ್ದೇನೆ. ನನಗೆ ಬೇಕಿರುವುದು, ನನ್ನ (ನನ್ನ ಮಗುವಿನ) ಕೇಸನ್ನು ರಕ್ತಕ್ಕೆ ಬದಲಿಯಾದ ನಿರಕ್ತ ವೈದ್ಯಕೀಯ ಉಪಚಾರದಿಂದ ನಡಿಸುವುದೇ. ಆ ಬದಲಿಗಳು ದೊರೆಯುತ್ತವೆ.”
33 ಡಾಕ್ಟರರಿಂದ ಮತ್ತು ನ್ಯಾಯಾದೀಶರಿಂದ ಹೆಚ್ಚಾಗಿ ಕೇಳಲ್ಪಡುವ ಇತರ ಕೆಲವು ಪ್ರಶ್ನೆಗಳು ಹೀಗಿವೆ:
● “ಕೋರ್ಟ್ ಆರ್ಡರಿನ ಮೂಲಕ ರಕ್ತ ಪೂರಣವು ಬಲಾತ್ಕಾರವಾಗಿ ಕೊಡಲ್ಪಟ್ಟರೆ ನಿನಗೇನಾಗುವುದು? ನಿನ್ನನ್ನು ಹೊಣೆಯಾಗಿ ಹಿಡಿಯಲಾಗುವುದೋ?”
● ರಕ್ತ ಪೂರಣ ಸ್ವೀಕರಿಸುವುದು ಅಥವಾ ಬಲಾತ್ಕಾರದಿಂದ ಕೊಡಿಸುವುದು ನಿನ್ನನ್ನು ನಿನ್ನ ಧರ್ಮದಿಂದ ಹೊರಗೆ ಹಾಕುವಂತೆ ಅಥವಾ ನಿನಗೆ ನಿತ್ಯಜೀವವು ಸಿಗದಂತೆ ಮಾಡುತ್ತದೋ? ನಿನ್ನ ಸಭೆಯಿಂದ ನೀವು ಹೇಗೆ ವೀಕ್ಷಿಸಲ್ಪಡುವಿ?
34 ಅಂಥ ಪರಿಸ್ಥಿತಿಯಲ್ಲಿ ಅವನೇನನ್ನು ತೀರ್ಮಾನಿಸುತ್ತಾನೋ ಅದಕ್ಕೆ ತಾನು ಜವಾಬ್ದಾರಳಾಗುವುದಿಲ್ಲವೆಂದು ಒಬ್ಬ ಸಹೋದರಿ ನ್ಯಾಯಾಧೀಶನಿಗೆ ಉತ್ತರಕೊಟ್ಟಳು. ಒಂದು ದೃಷ್ಟಿಕೋನದಿಂದ ಇದು ಸರಿಯಾದರೂ, ಅವಳದಕ್ಕೆ ಜವಾಬ್ದಾರಳಾಗುವುದಿಲ್ಲವಾದರೆ ತಾನು ಅವಳಿಗಾಗಿ ಜವಾಬ್ದಾರಿ ತಕ್ಕೊಳ್ಳುವೆನೆಂದು ನ್ಯಾಯಾಧೀಶನು ಅರ್ಥ ಮಾಡಿದನು. ರಕ್ತ ಪೂರಣ ನೀಡಲು ಅವನು ಅಪ್ಪಣೆ ಕೊಟ್ಟನು.
35 ಈ ಪ್ರಶ್ನೆಗಳನ್ನು ಕೇಳುವಲ್ಲಿ ಕೆಲವರು ಸಾಮಾನ್ಯವಾಗಿ ರಕ್ತ ತಕ್ಕೊಳ್ಳಲು ನಿಮ್ಮ ನಿರಾಕರಣೆಯಿಂದ ನಿಮ್ಮನ್ನು ಜಾರಿಸಿಬಿಡುವ ದಾರಿಯನ್ನು ಹುಡುಕುತ್ತಿರುತ್ತಾರೆ. ಅಜಾಗ್ರತೆಯಿಂದಾಗಿ ಅವರಿಗದನ್ನು ಕೊಟ್ಟು ಬಿಡಬೇಡಿ ! ಆ ತಪ್ಪಭಿಪ್ರಾಯ ಕೊಡದಂತೆ ನಾವು ಹೇಗೆ ದೂರವಿರಬಹುದು? ನೀವು ಹೀಗೆ ಉತ್ತರಿಸಬಲ್ಲಿರಿ:
● “ಯಾವ ರೀತಿಯಲ್ಲಾದರೂ ರಕ್ತವನ್ನು ನನ್ನ ಮೇಲೆ ಬಲಾತ್ಕರಿಸಿದರೆ ಅದು ನನಗೆ ಬಲಾತ್ಕಾರ ಸಂಭೋಗದಂತಿರುವುದು. ನನ್ನ ಮೇಲೆ ಮಾಡಲ್ಪಡುವ ಆ ನಿಷಿದ್ಧ ಅತ್ಯಾಚಾರದ ಮಾನಸಿಕ ಮತ್ತು ಆತ್ಮಿಕ ಫಲಿತಾಂಶಗಳನ್ನು ನಾನು ನನ್ನ ಜೀವಮಾನವಿಡೀ ಅನುಭವಿಸುವೆನು. ನನ್ನ ಸಮ್ಮತಿಯ ಹೊರತು ನನ್ನ ಮೇಲೆ ಮಾಡಲ್ಪಡುವ ಆ ಬಲಾತ್ಕಾರವನ್ನು ನಾನು ನನ್ನೆಲ್ಲಾ ಶಕಿಯ್ತಿಂದ ಎದುರಿಸುವೆನು. ನನ್ನ ಮೇಲೆ ಆಕ್ರಮಣ ಮಾಡಿದವರ ಮೇಲೆ, ಬಲಾತ್ಕಾರ ಸಂಭೋಗದ ಒಂದು ಕೇಸ್ನಲ್ಲಿ ಹೇಗೋ ಹಾಗೆ ಖಟೆಹ್ಲಾಕಲು ಎಲ್ಲಾ ಪ್ರಯತ್ನಗಳನ್ನು ಮಾಡುವೆನು.”
36 ಬಲಾತ್ಕರಿಸಲ್ಪಟ್ಟ ರಕ್ತ ಪೂರಣವು ನಮಗೆ ನಮ್ಮ ದೇಹಗಳ ಒಂದು ಅಸಹ್ಯಕರ ಉಲ್ಲಂಘನೆಯಾಗಿದೆ ಎಂಬ ಬಲವಾದ, ಸ್ಪಷ್ಟ ಅಚ್ಚೊತ್ತುವಿಕೆಯು ಮಾಡಲ್ಪಡಬೇಕು. ಅದು ಎಷ್ಟು ಮಾತ್ರಕ್ಕೂ ಒಂದು ಹಗುರವಾದ ವಿಷಯವಲ್ಲ. ಆದ್ದರಿಂದ ನಿಮ್ಮ ದೃಢತೆಯಲ್ಲಿ ನಿಶ್ಚಲರಾಗಿರಿ. ರಕ್ತಕ್ಕೆ ಬದಲಿಯಾದ ನಿರಕ್ತ ವೈದ್ಯಕೀಯ ಉಪಚಾರವೇ ಬೇಕೆಂದು ಸ್ಪಷ್ಟ ಪಡಿಸಿರಿ.
ಸಿದ್ಧರಾಗಿರುವುದಕ್ಕೆ ನೀವೇನು ಮಾಡುವಿರಿ?
37 ಬೇಡವಾದ ಒಂದು ರಕ್ತ ಪೂರಣದಿಂದ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸುವುದಕ್ಕೆ ನೀವು ಮಾಡಬೇಕಾದ ಕೆಲವು ವಿಷಯಗಳನ್ನು ನಾವು ಪುನರ್ವಿಮರ್ಶಿಸಿದ್ದೇವೆ. (ಇದರ ನಂತರ, ಕೂಸುಗಳು ಮತ್ತು ಮಕ್ಕಳು ರಕ್ತ ಪೂರಣದಿಂದ ಬೆದರಿಸಲ್ಪಟ್ಟಾಗ ಏಳುವ ಸಮಸ್ಯೆಗಳನ್ನು ನಿರ್ವಹಿಸುವ ವಿಷಯದಲ್ಲಿ ಹೆಚ್ಚು ವಿವರಗಳನ್ನು ಒದಗಿಸುವಂತೆ ನಿರೀಕ್ಷಿಸುತ್ತೇವೆ.) ಅಗತ್ಯದ ಸಮಯದಲ್ಲಿ ಸಹಾಯವನ್ನೊದಗಿಸಲು ಸೊಸೈಟಿಯು ಪ್ರೀತಿಪೂರ್ವಕವಾಗಿ ಏನೆಲ್ಲಾ ಮಾಡಿದೆಂಬದನ್ನೂ ನಾವು ನೋಡಿದೆವು. ನಂಬಿಕೆ-ಪಂಥಾಹ್ವಾನಿಸುವ ಒಂದು ವೈದ್ಯಕೀಯ ಪರಿಸ್ಥಿತಿಯನ್ನು ಎದುರಿಸಲು ನೀವು ಸಿದ್ಧರೆಂದು ಖಾತ್ರಿಪಡಿಸಲು ಈ ಸಮಾಚಾರದೊಂದಿಗೆ ನೀವೇನು ಮಾಡಬೇಕು?
ಒಂದನೆಯದು: ಈ ವಿಷಯಗಳನ್ನು ರಿಹರ್ಸ್ ಮಾಡಲು ಮತ್ತು ವಿಶೇಷವಾಗಿ ಒಂದು ತುರ್ತು ಪರಿಸ್ಥಿತಿಯಲ್ಲಿ, ನೀವೇನು ಹೇಳುವಿರಿ ಮತ್ತು ಮಾಡುವಿರಿ ಎಂಬದನ್ನು ನಿಶ್ಚಯಿಸಲು ಒಂದು ಕುಟುಂಬ ಚರ್ಚೆಯನ್ನು ನಡಿಸಿರಿ.
ಆ ಮೇಲೆ: ನಿಮಗೆ ಬೇಕಾದ ಎಲ್ಲಾ ದಸ್ತಾವೇಜುಗಳು ನಿಮ್ಮಲ್ಲಿವೆಯೋ ಎಂದು ನೋಡಿರಿ.
ಅನಂತರ: ಅದನ್ನು ಗಂಭೀರವಾದ ಪ್ರಾರ್ಥನಾ ವಿಷಯವಾಗಿ ಮಾಡಿ ‘ರಕ್ತದಿಂದ ದೂರವಿರುವ’ ನಿಮ್ಮ ದೃಢ ನಿರ್ಧಾರದಲ್ಲಿ ನಿಮಗೆ ಬೆಂಬಲ ಕೊಡುವಂತೆ ಯೆಹೋವನನ್ನು ಬೇಡಿಕೊಳ್ಳಿರಿ. ರಕ್ತದ ವಿಷಯದಲ್ಲಿ ಆತನ ನಿಯಮವನ್ನು ಪಾಲಿಸುವ ಮೂಲಕ ಅನಂತ ಜೀವನದ ಆತನ ಅನುಗ್ರಹಿತ ಆಶ್ವಾಸನೆ ನಮಗಿದೆ.—ಅಪೊ. 15:29; ಜ್ಞಾನೋ. 27:11, 12.
[Box on page 9]
ಯಾವುದೇ ವೈದ್ಯಕೀಯ ಸನ್ನಿವೇಶವು, ರಕ್ತ ಪೂರಣಮಾಡಬೇಕೆಂಬ ಬೆದರಿಕೆಯನ್ನು ಒಡ್ಡುವಷ್ಟು ಕೆಟ್ಟಾಗ, ನೀವೇನು ಮಾಡಬೇಕು ಎನ್ನುವ ಕುರಿತು ಕೆಳಗಿನ ವಿಷಯಗಳನ್ನು ಪರೀಕ್ಷಿಸಿರಿ:
1. ನಿಮಗೆ ಸಹಾಯಮಾಡಲು ನಿಮ್ಮ ಸಭೆಯ ಹಿರಿಯರನ್ನು ಕರೆಕಳುಹಿಸಿರಿ.
2. ಅಗತ್ಯ ಬಿದ್ದಲ್ಲಿ, ಲೊನಾವ್ಲ ಬ್ರಾಂಚಿನ ಹಾಸ್ಪಿಟಲ್ ಇನಫರ್ಮಶೇನ್ ಸರ್ವಿಸಸ್ಗೆ ಹಿರಿಯರು ಸಂಪರ್ಕಿಸಲಿ.
3. ಡಾಕ್ಟರರು ಮತ್ತು ಇನ್ನಿತರರೊಡನೆ ಮಾತಾಡಲು ಹಿರಿಯರು ನಿಮಗೆ ಸಹಾಯಮಾಡಬಲ್ಲರು.
4. ಪ್ರಸ್ತುತ ಸರ್ಜನ್ರೊಂದಿಗೆಮಾತಾಡಿ, ಬೇರೆ ಡಾಕ್ಟರರುಗಳನ್ನು, ಬದಲಿಯಾಗಿ ಸಂಪರ್ಕಿಸಲು ಹಿರಿಯರು ನಿಮಗೆ ಸಹಾಯಮಾಡಬಲ್ಲರು.
5. ಅವಶ್ಯಕ ಉಪಚಾರವನ್ನು, ಹೆಚ್ಚು ಆದರಣೀಯ ಸೌಕರ್ಯಗಳಿರುವ ಕಡೆಗೆ ನಿಮ್ಮನ್ನು ಸ್ಥಳಾಂತರಿಸಲು ಕೂಡಾ ಹಿರಿಯರು ನಿಮಗೆ ನೆರವಾಗಬಲ್ಲರು.
[Blurb on page 7]
ಈ ಸಮಾಚಾರವನ್ನು, ಅಗತ್ಯ ಬಿದ್ದಾಗ ಬಲುಬೇಗನೇ ಸಿಗಬಹುದಾದ ಸ್ಥಳದಲ್ಲಿ ಇಡಿರಿ