ಜ್ಞಾನ ಪುಸ್ತಕದೊಂದಿಗೆ ಶಿಷ್ಯರನ್ನಾಗಿ ಮಾಡುವ ವಿಧ
1 ಎಲ್ಲ ಕ್ರೈಸ್ತರಿಗಾಗಿರುವ ಒಂದು ಅಪೇಕ್ಷಣೀಯವಾದ ಗುರಿಯು, ಇತರರಿಗೆ ಸತ್ಯವನ್ನು ಕಲಿಸುವುದು ಮತ್ತು “ನಿತ್ಯ ಜೀವಕ್ಕಾಗಿ ಯುಕ್ತವಾದ ಮನಃಪ್ರವೃತ್ತಿ”ಯಿರುವವರನ್ನು ಶಿಷ್ಯರನ್ನಾಗಿ ಮಾಡುವುದೇ ಆಗಿದೆ. (ಅ. ಕೃ. 13:48, NW; ಮತ್ತಾ. 28:19, 20) ಇದನ್ನು ಪೂರೈಸಲಿಕ್ಕಾಗಿ ಯೆಹೋವನ ಸಂಸ್ಥೆಯು ನಮ್ಮ ಕೈಗಳಲ್ಲಿ ಅದ್ಭುತವಾದೊಂದು ಸಾಧನವನ್ನು ಹಾಕಿದೆ—ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕ. ನಿತ್ಯ ಜೀವವು, ಒಬ್ಬನೇ ಸತ್ಯ ದೇವರಾದ ಯೆಹೋವನ ಮತ್ತು ಆತನ ಪುತ್ರನಾದ ಯೇಸು ಕ್ರಿಸ್ತನ ಜ್ಞಾನವನ್ನು ತೆಗೆದುಕೊಳ್ಳುವುದರ ಮೇಲೆ ಆಧರಿಸುವುದರಿಂದ, ಅದರ ಶೀರ್ಷಿಕೆಯು ಮನೆ ಬೈಬಲ್ ಅಭ್ಯಾಸಗಳ ಮಹತ್ತರ ಪ್ರಮುಖತೆಯನ್ನು ಒತ್ತಿಹೇಳುತ್ತದೆ.—ಯೋಹಾ. 17:3.
2 ಮನೆ ಬೈಬಲ್ ಅಭ್ಯಾಸಗಳನ್ನು ನಿರ್ವಹಿಸುವುದರಲ್ಲಿ ಉಪಯೋಗಿಸುವುದಕ್ಕಾಗಿ ಈಗ ಸೊಸೈಟಿಯ ಮುಖ್ಯ ಪ್ರಕಾಶನವು ಜ್ಞಾನ ಪುಸ್ತಕವಾಗಿದೆ. ಅದನ್ನು ಉಪಯೋಗಿಸುವ ಮೂಲಕ, ನಾವು ಸತ್ಯವನ್ನು ಸರಳತೆ, ಸ್ಪಷ್ಟತೆ, ಮತ್ತು ಸಂಕ್ಷಿಪ್ತತೆಯೊಂದಿಗೆ ಕಲಿಸಬಲ್ಲೆವು. ಇದು ಕಲಿಯುತ್ತಿರುವವರ ಹೃದಯಕ್ಕೆ ತಲಪುವಂತೆ ಸಹಾಯಮಾಡುವುದು. (ಲೂಕ 24:32) ನಿಶ್ಚಯವಾಗಿಯೂ, ನಿರ್ವಾಹಕನು ಒಳ್ಳೆಯ ಕಲಿಸುವ ವಿಧಾನಗಳನ್ನು ಉಪಯೋಗಿಸುವ ಅಗತ್ಯವಿದೆ. ಆ ಉದ್ದೇಶಕ್ಕಾಗಿ, ಕಲಿಸುವ ವಿಧಾನಗಳ ಸಂಬಂಧವಾದ ಸಲಹೆಗಳನ್ನು ಮತ್ತು ಮರುಜ್ಞಾಪನಗಳನ್ನು ಒದಗಿಸಲಿಕ್ಕಾಗಿ ಈ ಪುರವಣಿಯು ತಯಾರಿಸಲ್ಪಟ್ಟಿದೆ. ವಿವೇಚನೆಯೊಂದಿಗೆ, ಮತ್ತು ವ್ಯಕ್ತಿಗತವಾದ ಸಂದರ್ಭಗಳಿಗನುಸಾರವಾಗಿ, ಇಲ್ಲಿ ಕೊಡಲ್ಪಟ್ಟಿರುವ ಕೆಲವನ್ನು ಅಥವಾ ಎಲ್ಲ ಸಲಹೆಗಳನ್ನು ನೀವು ಪ್ರಗತಿಪರವಾಗಿ ಅನ್ವಯಿಸಿಕೊಳ್ಳಶಕ್ತರಾಗಬಹುದು. ಈ ಪುರವಣಿಯನ್ನು ಜೋಪಾನವಾಗಿ ಇಟ್ಟು, ಆಗಿಂದಾಗ್ಗೆ ಅದನ್ನು ನೋಡಿರಿ. ಇದರಲ್ಲಿರುವ ಹಲವಾರು ಅಂಶಗಳು, ಶಿಷ್ಯರನ್ನಾಗಿ ಮಾಡಲಿಕ್ಕಾಗಿ ಜ್ಞಾನ ಪುಸ್ತಕವನ್ನು ಉಪಯೋಗಿಸುವುದರಲ್ಲಿ ನೀವು ಹೆಚ್ಚು ಪರಿಣಾಮಕಾರಿಯಾಗಲು ನಿಮಗೆ ಸಹಾಯಮಾಡಬಹುದು.
3 ಪ್ರಗತಿಪರವಾದೊಂದು ಮನೆ ಬೈಬಲ್ ಅಭ್ಯಾಸವನ್ನು ಮಾಡಿರಿ: ಒಬ್ಬ ಭಾವಿ ಕ್ರೈಸ್ತ ಶಿಷ್ಯನೋಪಾದಿ ಮತ್ತು ಆತ್ಮಿಕ ಸಹೋದರ ಅಥವಾ ಸಹೋದರಿಯೋಪಾದಿ, ವಿದ್ಯಾರ್ಥಿಯಲ್ಲಿ ಯಥಾರ್ಥವಾದೊಂದು ವೈಯಕ್ತಿಕ ಆಸಕ್ತಿಯನ್ನು ತೆಗೆದುಕೊಳ್ಳಿರಿ. ಅನುರಾಗವುಳ್ಳವರೂ, ಸ್ನೇಹಪರರೂ, ಮತ್ತು ಉತ್ಸಾಹಭರಿತರೂ ಆಗಿರ್ರಿ. ಒಬ್ಬ ಒಳ್ಳೆಯ ಕೇಳುಗರಾಗಿರುವ ಮೂಲಕ, ನೀವು ಇತರ ವ್ಯಕ್ತಿಯನ್ನು ಅರಿತುಕೊಳ್ಳಬಲ್ಲಿರಿ—ಅವನ ಹಿನ್ನೆಲೆ ಮತ್ತು ಜೀವನದಲ್ಲಿನ ಪರಿಸ್ಥಿತಿ—ಇದು ಅವನಿಗೆ ಆತ್ಮಿಕವಾಗಿ ಎಷ್ಟು ಉತ್ತಮವಾಗಿ ನೆರವನ್ನೀಡುವುದೆಂಬುದನ್ನು ವಿವೇಚಿಸಲು ನಿಮಗೆ ಸಹಾಯಮಾಡುವುದು. ವಿದ್ಯಾರ್ಥಿಗೋಸ್ಕರ ನಿಮ್ಮನ್ನು ನೀಡಿಕೊಳ್ಳಲು ಸಿದ್ಧರಾಗಿರ್ರಿ.—1 ಥೆಸ. 2:8.
4 ಒಮ್ಮೆ ಅಭ್ಯಾಸವೊಂದು ಸ್ಥಾಪಿಸಲ್ಪಟ್ಟಲ್ಲಿ, ಜ್ಞಾನ ಪುಸ್ತಕದಲ್ಲಿನ ಅಧ್ಯಾಯಗಳು ಸಂಖ್ಯಾ ಕ್ರಮದಲ್ಲಿ ಅಭ್ಯಸಿಸಲ್ಪಡುವುದು ಹೆಚ್ಚು ಇಷ್ಟಕರ. ಪುಸ್ತಕವು ಬೈಬಲ್ ವಿಷಯಗಳನ್ನು ಅತ್ಯಂತ ತರ್ಕಬದ್ಧವಾದ ಕ್ರಮಾನುಗತಿಯಲ್ಲಿ ವಿಕಸಿಸುವುದರಿಂದ, ಇದು ಸತ್ಯದ ಒಂದು ಪ್ರಗತಿಪರವಾದ ಗ್ರಹಿಸುವಿಕೆಯನ್ನು ಪಡೆದುಕೊಳ್ಳುವಂತೆ ವಿದ್ಯಾರ್ಥಿಯನ್ನು ಅನುಮತಿಸುವುದು. ಅಭ್ಯಾಸವು ಸ್ವಾರಸ್ಯಕರವೂ ಮುಂದುವರಿಯುತ್ತಿರುವುದೂ ಆಗಿರಲಿಕ್ಕಾಗಿ, ಅದನ್ನು ಸರಳವೂ ಆಸಕ್ತಿಭರಿತವೂ ಆದದ್ದಾಗಿ ಮಾಡಿರಿ. (ರೋಮಾ. 12:11) ವಿದ್ಯಾರ್ಥಿಯ ಸಂದರ್ಭಗಳ ಮತ್ತು ಸ್ವಾಭಾವಿಕ ಕೌಶಲದ ಮೇಲೆ ಆಧರಿಸುತ್ತಾ, ಅಭ್ಯಾಸವನ್ನು ತ್ವರಿತಗತಿಯಲ್ಲಿ ಮಾಡದೆ, ಒಂದು ಗಂಟೆ ಅಥವಾ ಹೆಚ್ಚಿನ ಒಂದು ಅಭ್ಯಾಸ ಅವಧಿಯಲ್ಲಿ ಹೆಚ್ಚಿನ ಅಧ್ಯಾಯಗಳನ್ನು ನೀವು ಆವರಿಸಲು ನಿಮಗೆ ಸಾಧ್ಯವಾಗಬಹುದು. ಪ್ರತಿ ವಾರ ಅಭ್ಯಾಸಕ್ಕಾಗಿ ಶಿಕ್ಷಕನು ಮತ್ತು ವಿದ್ಯಾರ್ಥಿಯು—ಇಬ್ಬರೂ—ತಮ್ಮ ಭೇಟಿ ನಿಶ್ಚಯವನ್ನು ಇಡುವಾಗ, ವಿದ್ಯಾರ್ಥಿಗಳು ಉತ್ತಮವಾದ ಪ್ರಗತಿಯನ್ನು ಮಾಡುವರು. ಹೀಗೆ, ಹೆಚ್ಚಿನ ವ್ಯಕ್ತಿಗಳೊಂದಿಗೆ, ಸುಮಾರು ಆರು ಅಥವಾ ಹೆಚ್ಚಿನ ತಿಂಗಳುಗಳಲ್ಲೇ ಪುಸ್ತಕದ 19 ಅಧ್ಯಾಯಗಳನ್ನು ಪೂರ್ಣಗೊಳಿಸುವ ಸಾಧ್ಯತೆಯಿರಬಹುದು.
5 ಪ್ರತಿಯೊಂದು ಅಭ್ಯಾಸ ಅವಧಿಯನ್ನು ವಿಷಯದಲ್ಲಿ ಆಸಕ್ತಿಯನ್ನು ಹುರಿದುಂಬಿಸುವ ಸಂಕ್ಷಿಪ್ತ ಹೇಳಿಕೆಗಳೊಂದಿಗೆ ಪ್ರಾರಂಭಿಸಿರಿ. ಪ್ರತಿಯೊಂದು ಅಧ್ಯಾಯದ ಶೀರ್ಷಿಕೆಯು ಅದರ ಮುಖ್ಯವಿಷಯವಾಗಿದೆ ಎಂಬುದನ್ನು ನೀವು ಅವಲೋಕಿಸುವಿರಿ; ಇದನ್ನು ಒತ್ತಿಹೇಳುವುದು ಅಗತ್ಯ. ಅಧ್ಯಾಯದ ಮುಖ್ಯವಿಷಯದ ಮೇಲೆ ಕೇಂದ್ರೀಕರಿಸಲು ನಿಮಗೆ ಸಹಾಯಮಾಡುತ್ತಾ, ಪ್ರತಿಯೊಂದು ಉಪಶೀರ್ಷಿಕೆಯು ಮುಖ್ಯ ಅಂಶವೊಂದನ್ನು ಪ್ರತ್ಯೇಕಿಸುತ್ತದೆ. ವಿಪರೀತವಾಗಿ ಮಾತಾಡುವುದರ ಕುರಿತು ಜಾಗರೂಕತೆಯಿಂದಿರ್ರಿ. ಅದಕ್ಕೆ ಬದಲಾಗಿ, ವಿದ್ಯಾರ್ಥಿಯ ಅಭಿವ್ಯಕ್ತಿಗಳನ್ನು ಹೊರಸೆಳೆಯಲು ಪ್ರಯತ್ನಿಸಿರಿ. ವಿದ್ಯಾರ್ಥಿಯು ಈಗಾಗಲೇ ತಿಳಿದಿರುವ ವಿಷಯದ ಮೇಲೆ ಆಧರಿಸುತ್ತಾ, ಅವನೊಂದಿಗೆ ನಿರ್ದಿಷ್ಟ ಮಾರ್ಗದರ್ಶಕ ಪ್ರಶ್ನೆಗಳನ್ನು ಕೇಳುವುದು, ಅವನಿಗೆ ವಿಮರ್ಶಿಸಲು ಮತ್ತು ಸರಿಯಾದ ತೀರ್ಮಾನಗಳಿಗೆ ಬರಲು ಸಹಾಯಮಾಡುವುದು. (ಮತ್ತಾ. 17:24-26; ಲೂಕ 10:25-37; ಸ್ಕೂಲ್ ಗೈಡ್ಬುಕ್, ಪುಟ 51, ಪ್ಯಾರಗ್ರಾಫ್ 10ನ್ನು ನೋಡಿರಿ.) ಜ್ಞಾನ ಪುಸ್ತಕದಲ್ಲಿನ ಮುದ್ರಿತ ಮಾಹಿತಿಗೆ ನಿಕಟವಾಗಿ ಅಂಟಿಕೊಳ್ಳಿರಿ. ಹೆಚ್ಚಿನ ವಿವರಗಳನ್ನು ಪರಿಚಯಿಸುವುದು, ಮುಖ್ಯ ಅಂಶಗಳಿಂದ ಅಪಕರ್ಷಿಸಸಾಧ್ಯವಿದೆ ಅಥವಾ ಅಸ್ಪಷ್ಟಮಾಡಸಾಧ್ಯವಿದೆ ಮತ್ತು ಅಭ್ಯಾಸವನ್ನು ಲಂಬಿಸಸಾಧ್ಯವಿದೆ. (ಯೋಹಾ. 16:12) ಅಭ್ಯಾಸಿಸಲ್ಪಡುತ್ತಿರುವ ವಿಷಯಕ್ಕೆ ಸಂಬಂಧಿಸದ ಒಂದು ಪ್ರಶ್ನೆಯು ಏಳುವಲ್ಲಿ, ಹೆಚ್ಚಿನ ವಿದ್ಯಮಾನಗಳಲ್ಲಿ ನೀವು ಅಭ್ಯಾಸ ಅವಧಿಯ ಅಂತ್ಯದಲ್ಲಿ ಆ ಪ್ರಶ್ನೆಯನ್ನು ಉತ್ತರಿಸಸಾಧ್ಯವಿದೆ. ಇದು ವಿಪಥಗೊಳ್ಳದೆ ವಾರದ ಪಾಠವನ್ನು ಆವರಿಸಲು ನಿಮ್ಮನ್ನು ಅನುಮತಿಸುವುದು. ಅಭ್ಯಾಸದ ಪಾಠಕ್ರಮದ ಮುಖಾಂತರ ಕಟ್ಟಕಡೆಗೆ ವಿದ್ಯಾರ್ಥಿಯ ವೈಯಕ್ತಿಕ ಪ್ರಶ್ನೆಗಳಲ್ಲಿ ಹೆಚ್ಚಿನವು ಉತ್ತರಿಸಲ್ಪಡುವವು ಎಂಬುದನ್ನು ಅವನಿಗೆ ವಿವರಿಸಿರಿ.—ಸ್ಕೂಲ್ ಗೈಡ್ಬುಕ್, ಪುಟ 94, ಪ್ಯಾರಗ್ರಾಫ್ 14ನ್ನು ನೋಡಿರಿ.
6 ವಿದ್ಯಾರ್ಥಿಯು ತ್ರಯೈಕ್ಯ, ಪ್ರಾಣದ ಅಮರತ್ವ, ನರಕಾಗ್ನಿ, ಅಥವಾ ಇಂಥ ಇತರ ಸುಳ್ಳು ಸಿದ್ಧಾಂತಗಳಲ್ಲಿ ಬಲವಾಗಿ ನಂಬಿಕೆಯಿಡುವುದಾದರೆ, ಮತ್ತು ಜ್ಞಾನ ಪುಸ್ತಕದಲ್ಲಿ ಏನು ನೀಡಲ್ಪಟ್ಟಿದೆಯೋ ಅದು ಅವನಿಗೆ ತೃಪ್ತಿಕರವಾಗಿಲ್ಲದಿರುವುದಾದರೆ, ರೀಸನಿಂಗ್ ಪುಸ್ತಕವನ್ನು ಅಥವಾ ಇದರ ವಿಷಯವಾಗಿ ಚರ್ಚಿಸುವ ಮತ್ತೊಂದು ಪ್ರಕಾಶನವನ್ನು ಅವನಿಗೆ ನೀವು ನೀಡಸಾಧ್ಯವಿದೆ. ತಾನು ಏನನ್ನು ಓದುತ್ತಾನೋ ಅದರ ಕುರಿತು ಅವನು ಆಲೋಚಿಸಿದ ಬಳಿಕ ನೀವು ಅವನೊಂದಿಗೆ ವಿಷಯವನ್ನು ಚರ್ಚಿಸುವಿರೆಂದು ಅವನಿಗೆ ಹೇಳಿರಿ.
7 ಯೆಹೋವನ ಮಾರ್ಗದರ್ಶನ ಮತ್ತು ಆಶೀರ್ವಾದಕ್ಕಾಗಿ ಅಭ್ಯಾಸವನ್ನು ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ, ಮುಗಿಸುವುದು ಸಂದರ್ಭವನ್ನು ಘನತೆಗೇರಿಸುವುದು, ಒಬ್ಬನನ್ನು ಗೌರವಭರಿತವಾದೊಂದು ಮನಸ್ಥಿತಿಯಲ್ಲಿಡುವುದು ಮತ್ತು ಒಬ್ಬ ಸತ್ಯ ಶಿಕ್ಷಕನೋಪಾದಿ ಯೆಹೋವನೆಡೆಗೆ ಗಮನವನ್ನು ಸೆಳೆಯುವುದು. (ಯೋಹಾ. 6:45) ವಿದ್ಯಾರ್ಥಿಯು ಇನ್ನೂ ಹೊಗೆಸೊಪ್ಪನ್ನು ಉಪಯೋಗಿಸುವವನಾಗಿರುವಲ್ಲಿ, ಅಭ್ಯಾಸದ ಅವಧಿಯಲ್ಲಿ ಅದರಿಂದ ದೂರವಿರುವಂತೆ ನೀವು ಕಟ್ಟಕಡೆಗೆ ಅವನಿಗೆ ಕೇಳಿಕೊಳ್ಳುವ ಅಗತ್ಯವಿರಬಹುದು.—ಅ. ಕೃ. 24:16; ಯಾಕೋ. 4:3.
8 ಶಾಸ್ತ್ರವಚನಗಳು, ದೃಷ್ಟಾಂತಗಳು, ಮತ್ತು ಪುನರ್ವಿಮರ್ಶಾ ಪ್ರಶ್ನೆಗಳೊಂದಿಗೆ ಪರಿಣಾಮಕಾರಿಯಾಗಿ ಬೋಧಿಸಿರಿ: ಅವನು ಮುಂಚೆ ವಿಷಯವನ್ನು ಎಷ್ಟೇ ಬಾರಿ ಓದಿರಲಿ, ಒಬ್ಬ ಕೌಶಲಭರಿತ ಶಿಕ್ಷಕನು ನಿರ್ದಿಷ್ಟ ವಿದ್ಯಾರ್ಥಿಯನ್ನು ಮನಸ್ಸಿನಲ್ಲಿಡುತ್ತಾ ಪ್ರತಿ ಪಾಠವನ್ನು ಪುನರ್ವಿಮರ್ಶಿಸುವನು. ಇದು ವಿದ್ಯಾರ್ಥಿಯ ಕೆಲವೊಂದು ಪ್ರಶ್ನೆಗಳನ್ನು ನಿರೀಕ್ಷಿಸಲು ಸಹಾಯಮಾಡುತ್ತದೆ. ಪರಿಣಾಮಕಾರಿಯಾಗಿ ಬೋಧಿಸಲು, ಅಧ್ಯಾಯದಲ್ಲಿನ ಮುಖ್ಯ ಅಂಶಗಳ ಸ್ಪಷ್ಟವಾದೊಂದು ಗ್ರಹಿಕೆಯನ್ನು ಪಡೆದುಕೊಳ್ಳಿರಿ. ವಿಷಯಕ್ಕೆ ಅವು ಹೇಗೆ ಅನ್ವಯಿಸುತ್ತವೆಂಬುದನ್ನು ನೋಡಲು, ಶಾಸ್ತ್ರವಚನಗಳನ್ನು ಪರೀಕ್ಷಿಸಿರಿ ಮತ್ತು ಅಭ್ಯಾಸದ ಅವಧಿಯಲ್ಲಿ ಯಾವುದನ್ನು ಓದಬೇಕೆಂಬುದನ್ನು ನಿರ್ಣಯಿಸಿರಿ. ಅಧ್ಯಾಯದ ಅಂತ್ಯದಲ್ಲಿ ದೃಷ್ಟಾಂತಗಳನ್ನು ಮತ್ತು ಪುನರ್ವಿಮರ್ಶಾ ಪ್ರಶ್ನೆಗಳನ್ನು ಉಪಯೋಗಿಸುತ್ತಾ ನೀವು ಹೇಗೆ ಬೋಧಿಸಬಲ್ಲಿರೆಂಬುದನ್ನು ಪರ್ಯಾಲೋಚಿಸಿರಿ.
9 ಶಾಸ್ತ್ರವಚನಗಳ ಪರಿಣಾಮಕಾರಿ ಉಪಯೋಗವನ್ನು ಮಾಡುವ ಮೂಲಕ, ತಾನು ನಿಜವಾಗಿಯೂ ಬೈಬಲನ್ನು ಅಧ್ಯಯನ ಮಾಡುತ್ತಿದ್ದೇನೆಂಬುದನ್ನು ಗಣ್ಯಮಾಡಲು ವಿದ್ಯಾರ್ಥಿಗೆ ನೀವು ಸಹಾಯಮಾಡುವಿರಿ. (ಅ. ಕೃ. 17:11) ಜ್ಞಾನ ಪುಸ್ತಕದ ಪುಟ 14ರಲ್ಲಿರುವ “ನಿಮ್ಮ ಬೈಬಲನ್ನು ಸದುಪಯೋಗಿಸಿರಿ” ಎಂಬ ರೇಖಾಚೌಕವನ್ನು ಉಪಯೋಗಿಸುತ್ತಾ, ಶಾಸ್ತ್ರವಚನಗಳನ್ನು ಕಂಡುಹಿಡಿಯುವ ವಿಧವನ್ನು ಅವನಿಗೆ ಕಲಿಸಿರಿ. ಪಾಠದಲ್ಲಿ ಉದ್ಧರಣ ಚಿಹ್ನೆಯಲ್ಲಿರುವ ವಚನಗಳನ್ನು ಹೇಗೆ ಗುರುತಿಸಬೇಕೆಂಬುದನ್ನು ಅವನಿಗೆ ತೋರಿಸಿರಿ. ಸಮಯವು ಅನುಮತಿಸಿದಂತೆ, ಉದ್ಧರಣ ಚಿಹ್ನೆಯಿಲ್ಲದೆ ಉಲ್ಲೇಖಿಸಲ್ಪಟ್ಟ ಶಾಸ್ತ್ರವಚನಗಳನ್ನು ತೆರೆದು, ಓದಿರಿ. ಪ್ಯಾರಗ್ರಾಫ್ನಲ್ಲಿ ಏನು ಹೇಳಲ್ಪಟ್ಟಿದೆಯೋ ಅದನ್ನು ಅವು ಹೇಗೆ ಸಮರ್ಥಿಸಿ, ಸ್ಪಷ್ಟೀಕರಿಸುತ್ತವೆಂಬುದರ ಕುರಿತಾದ ವಿದ್ಯಾರ್ಥಿಯ ಹೇಳಿಕೆಯಿರಲಿ. ವಚನಗಳ ಮುಖ್ಯ ಭಾಗಗಳನ್ನು ಒತ್ತಿಹೇಳಿರಿ; ಹೀಗೆ ಪಾಠದ ಮುಖ್ಯ ಅಂಶಗಳಿಗಾಗಿರುವ ಕಾರಣಗಳನ್ನು ಅವನು ಗಣ್ಯಮಾಡುವಂತಾಗುತ್ತದೆ. (ನೆಹೆ. 8:8) ಸಾಮಾನ್ಯವಾಗಿ, ಶಿಕ್ಷಕನು, ಪುಸ್ತಕವು ಒದಗಿಸುವ ವಚನಗಳಿಗಿಂತಲೂ ಹೆಚ್ಚಿನದ್ದನ್ನು ಚರ್ಚೆಯೊಳಗೆ ಸೇರಿಸುವ ಅಗತ್ಯವಿಲ್ಲ. ಬೈಬಲ್ ಪುಸ್ತಕಗಳ ಹೆಸರುಗಳನ್ನು ಮತ್ತು ಕ್ರಮವನ್ನು ತಿಳಿದುಕೊಳ್ಳುವ ಮೌಲ್ಯದ ಮೇಲೆ ಹೇಳಿಕೆಯನ್ನೀಯಿರಿ. ವಾಚ್ಟವರ್, ಜೂನ್ 15, 1991, ಪುಟಗಳು 27-30ನ್ನು ಓದುವುದು ವಿದ್ಯಾರ್ಥಿಗೆ ಸಹಾಯಕಾರಿಯಾಗಿರಬಹುದು. ಸೂಕ್ತವಾಗಿರುವಾಗ, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಉಪಯೋಗವನ್ನು ಪ್ರೋತ್ಸಾಹಿಸಿರಿ. ಪಕ್ಕ ಟಿಪ್ಪಣಿಗಳುಳ್ಳ ಉಲ್ಲೇಖಗಳ ಮತ್ತು ಬೈಬಲ್ ವಾಕ್ಯಗಳ ಸೂಚಿಯಂಥ, ಅದರ ವಿವಿಧ ವೈಶಿಷ್ಟ್ಯಗಳನ್ನು ಉಪಯೋಗಿಸುವ ವಿಧವನ್ನು ನೀವು ಪ್ರಗತಿಪರವಾಗಿ ಪ್ರತ್ಯಕ್ಷಾಭಿನಯಿಸಸಾಧ್ಯವಿದೆ.
10 ತೀಯೊಕ್ರ್ಯಾಟಿಕ್ ಮಿನಿಸ್ಟ್ರಿ ಸ್ಕೂಲ್ ಗೈಡ್ಬುಕ್ನಲ್ಲಿರುವ 34ನೇ ಪಾಠವು, ದೃಷ್ಟಾಂತಗಳು ಒಬ್ಬನ ಆಲೋಚನಾ ಪ್ರಕ್ರಿಯೆಗಳನ್ನು ಪ್ರೇರಿಸಿ, ಹೊಸ ಚಿಂತನೆಗಳನ್ನು ಗ್ರಹಿಸಲು ಸುಲಭವನ್ನಾಗಿ ಮಾಡುತ್ತವೆಂದು ವಿವರಿಸುತ್ತದೆ. ಅವು ಬೌದ್ಧಿಕಾಕರ್ಷಣೆಯನ್ನು ಭಾವನಾತ್ಮಕ ಸಂಘಟ್ಟನೆಯೊಂದಿಗೆ ಸಂಯೋಜಿಸುತ್ತವೆ; ಹೀಗೆ, ಸಂದೇಶವು, ವಾಸ್ತವಾಂಶದ ಸರಳ ಹೇಳಿಕೆಗಳೊಂದಿಗೆ ಅನೇಕ ವೇಳೆ ಅಸಾಧ್ಯವಾದ ಒಂದು ಬಲದೊಂದಿಗೆ ರವಾನಿಸಲ್ಪಡುತ್ತದೆ. (ಮತ್ತಾ. 13:34) ಜ್ಞಾನ ಪುಸ್ತಕದಲ್ಲಿ ಸರಳವಾಗಿರುವ ಆದರೆ ಶಕ್ತಿಯುತವಾಗಿರುವ ಹಲವಾರು ಬೋಧನಾ ದೃಷ್ಟಾಂತಗಳಿವೆ. ಉದಾಹರಣೆಗಾಗಿ, ಅಧ್ಯಾಯ 17ರಲ್ಲಿ ಉಪಯೋಗಿಸಲ್ಪಟ್ಟಿರುವ ಒಂದು ದೃಷ್ಟಾಂತವು, ಹೇಗೆ ಒಂದು ಆತ್ಮಿಕ ಅರ್ಥದಲ್ಲಿ ಕ್ರೈಸ್ತ ಸಭೆಯ ಮುಖಾಂತರ ಆಹಾರ, ಉಡುಗೆ ತೊಡಿಗೆ, ಮತ್ತು ಆಶ್ರಯವನ್ನು ಯೆಹೋವನು ಅಣಿಮಾಡುತ್ತಾನೆಂಬುದಕ್ಕಾಗಿ ಗಣ್ಯತೆಯನ್ನು ವೃದ್ಧಿಸುತ್ತದೆ. ಭಾವನೆಗಳನ್ನು ಪರಿಣಾಮಕಾರಿಯಾಗಿ ಪ್ರಚೋದಿಸಲು, ಜ್ಞಾನ ಪುಸ್ತಕದ ಸುಂದರವಾದ ಸಚಿತ್ರ ದೃಷ್ಟಾಂತಗಳನ್ನು ಉಪಯೋಗಿಸಸಾಧ್ಯವಿದೆ. 185ನೇ ಪುಟದಲ್ಲಿರುವ, “ಹರ್ಷಕರವಾದ ಪುನರುತ್ಥಾನ” ಎಂಬ ಉಪಶೀರ್ಷಿಕೆಯ ಕೆಳಗೆ, ಪುಟ 86ರಲ್ಲಿರುವ ಚಿತ್ರದತ್ತ ವಿದ್ಯಾರ್ಥಿಯು ನೋಡುವಂತೆ ಮಾಡುವ ಮೂಲಕ, ಪ್ಯಾರಗ್ರಾಫ್ 18ರ ಸಂಘಟ್ಟನೆಯು ಬಲಪಡಿಸಲ್ಪಡುವುದು. ಇದು ದೇವರ ರಾಜ್ಯದ ಕೆಳಗೆ ಪುನರುತ್ಥಾನವನ್ನು ಒಂದು ನೈಜ ವಿಷಯದೋಪಾದಿ ಆಲೋಚಿಸಲು ಅವನನ್ನು ಪ್ರೇರಿಸಬಹುದು.
11 ಬೈಬಲ್ ವಿದ್ಯಾರ್ಥಿಗಳು ಪ್ರತಿಯೊಂದು ಪಾಠದೊಂದಿಗೆ ಆತ್ಮಿಕ ಪ್ರಗತಿಯನ್ನು ಮಾಡುವ ಅಗತ್ಯವಿದೆ. ಈ ಕಾರಣಕ್ಕಾಗಿ, ಪ್ರತಿಯೊಂದು ಅಧ್ಯಾಯದ ಅಂತ್ಯದಲ್ಲಿ ಕಂಡುಬರುವ “ನಿಮ್ಮ ಜ್ಞಾನವನ್ನು ಪರೀಕ್ಷಿಸಿರಿ” ಎಂಬ ರೇಖಾಚೌಕದಲ್ಲಿನ ಪುನರ್ವಿಮರ್ಶಾ ಪ್ರಶ್ನೆಗಳನ್ನು ಕೇಳಲು ತಪ್ಪದಿರಿ. ಅಭ್ಯಸಿಸಲ್ಪಟ್ಟ ವಿಷಯದ ಬೌದ್ಧಿಕ ವಿವರಣೆಗಿಂತಲೂ ಹೆಚ್ಚಿನ ವಿಷಯಕ್ಕಾಗಿ ಕಿವಿಗೊಡಿರಿ. ಈ ಪ್ರಶ್ನೆಗಳಲ್ಲಿ ಹಲವಾರು ಪ್ರಶ್ನೆಗಳು ಹೃದಯದಿಂದ ಒಂದು ವೈಯಕ್ತಿಕ ಪ್ರತಿಕ್ರಿಯೆಯನ್ನು ಹೊರಸೆಳೆಯಲು ವಿನ್ಯಾಸಿಸಲ್ಪಟ್ಟಿವೆ. ಉದಾಹರಣೆಗಾಗಿ, “ಯೆಹೋವ ದೇವರ ಯಾವ ಗುಣಗಳು ನಿಮಗೆ ವಿಶೇಷವಾಗಿ ಹಿಡಿಸುತ್ತವೆ?” ಎಂಬುದಾಗಿ ವಿದ್ಯಾರ್ಥಿಗೆ ಕೇಳಲ್ಪಟ್ಟಿರುವ ಪುಟ 31ನ್ನು ನೋಡಿರಿ.—2 ಕೊರಿಂ. 13:5.
12 ಅಭ್ಯಾಸಕ್ಕಾಗಿ ತಯಾರಿಸಲು ವಿದ್ಯಾರ್ಥಿಗಳನ್ನು ತರಬೇತುಗೊಳಿಸಿರಿ: ಮುಂಚೆಯೇ ಪಾಠವನ್ನು ಓದಿ, ಉತ್ತರಗಳನ್ನು ಗುರುತು ಹಾಕಿ, ಅವುಗಳನ್ನು ತನ್ನ ಸ್ವಂತ ಮಾತುಗಳಲ್ಲಿ ವ್ಯಕ್ತಪಡಿಸುವ ವಿಧವನ್ನು ಆಲೋಚಿಸುವ ವಿದ್ಯಾರ್ಥಿಯು, ಶೀಘ್ರಗತಿಯಲ್ಲಿ ಆತ್ಮಿಕ ಪ್ರಗತಿಯನ್ನು ಮಾಡುವನು. ನಿಮ್ಮ ಮಾದರಿ ಮತ್ತು ಉತ್ತೇಜನದ ಮೂಲಕ, ನೀವು ಅವನನ್ನು ಅಭ್ಯಾಸಕ್ಕಾಗಿ ತಯಾರಿಸಲು ತರಬೇತುಗೊಳಿಸಬಲ್ಲಿರಿ. ಮುಖ್ಯ ಪದಗಳನ್ನು ಮತ್ತು ವಾಕ್ಸರಣಿಗಳನ್ನು ಗುರುತು ಹಾಕುವ ಲೇಖನಿಯಿಂದ ಅತ್ಯುಜ್ವಲಪಡಿಸಿರುವ ಅಥವಾ ಅಡಿಗೆರೆ ಹಾಕಿರುವ ನಿಮ್ಮ ಪುಸ್ತಕವನ್ನು ಅವನಿಗೆ ತೋರಿಸಿರಿ. ಮುದ್ರಿತ ಪ್ರಶ್ನೆಗಳಿಗೆ ನೇರವಾದ ಉತ್ತರಗಳನ್ನು ಕಂಡುಕೊಳ್ಳುವ ವಿಧವನ್ನು ವಿವರಿಸಿರಿ. ಅಧ್ಯಾಯವೊಂದನ್ನು ಒಟ್ಟಿಗೆ ತಯಾರಿಸುವುದು ವಿದ್ಯಾರ್ಥಿಗೆ ಸಹಾಯಕಾರಿಯಾಗಿರಬಹುದು. ತನ್ನ ಸ್ವಂತ ಮಾತುಗಳಲ್ಲಿ ವ್ಯಕ್ತಪಡಿಸಿಕೊಳ್ಳಲು ಅವನನ್ನು ಪ್ರೋತ್ಸಾಹಿಸಿರಿ. ಆಗ ಮಾತ್ರವೇ ಅವನು ವಿಷಯವನ್ನು ಅರ್ಥಮಾಡಿಕೊಳ್ಳುತ್ತಾನೋ ಇಲ್ಲವೋ ಎಂಬುದು ಸ್ಪಷ್ಟವಾಗುವುದು. ಅವನು ತನ್ನ ಉತ್ತರವನ್ನು ಪುಸ್ತಕದಿಂದ ಓದುವುದಾದರೆ, ಯಾರೋ ಒಬ್ಬರಿಗೆ ಈ ಅಂಶವನ್ನು ತನ್ನ ಸ್ವಂತ ಮಾತುಗಳಲ್ಲಿ ಹೇಗೆ ವಿವರಿಸುವನೆಂಬುದನ್ನು ಅವನಿಗೆ ಕೇಳುವ ಮೂಲಕ ಅವನ ಆಲೋಚನೆಯನ್ನು ನೀವು ಪ್ರೇರಿಸಬಲ್ಲಿರಿ.
13 ತನ್ನ ಸಾಪ್ತಾಹಿಕ ತಯಾರಿಯ ಭಾಗವಾಗಿ ಉದ್ಧರಣ ಚಿಹ್ನೆಯಿರದ ಶಾಸ್ತ್ರವಚನಗಳನ್ನು ತೆರೆದು ನೋಡುವಂತೆ—ಅವೆಲ್ಲವನ್ನು ಅಭ್ಯಾಸದ ಅವಧಿಯಲ್ಲಿ ಓದಲು ಸಮಯವಿಲ್ಲದಿರಬಹುದಾದ್ದರಿಂದ—ವಿದ್ಯಾರ್ಥಿಗೆ ಉತ್ತೇಜಿಸಿರಿ. ತನ್ನ ಪಾಠಗಳಲ್ಲಿ ಅವನು ಮಾಡುತ್ತಿರುವ ಪರಿಶ್ರಮಕ್ಕಾಗಿ ಅವನನ್ನು ಪ್ರಶಂಸಿಸಿರಿ. (2 ಪೇತ್ರ 1:5; ಬೈಬಲ್ ಅಭ್ಯಾಸವೊಂದರಲ್ಲಿ ಕಲಿಯುವಿಕೆಯನ್ನು ವೃದ್ಧಿಸಲು ಶಿಕ್ಷಕನೂ ವಿದ್ಯಾರ್ಥಿಯೂ—ಇಬ್ಬರೂ—ಏನು ಮಾಡಸಾಧ್ಯವಿದೆ ಎಂಬುದರ ಕುರಿತಾದ ಹೆಚ್ಚಿನ ಸಲಹೆಗಳಿಗಾಗಿ, ಆಗಸ್ಟ್ 15, 1993, ಕಾವಲಿನಬುರುಜು, 13-14ನೇ ಪುಟಗಳನ್ನು ನೋಡಿರಿ.) ಈ ರೀತಿಯಲ್ಲಿ, ವಿದ್ಯಾರ್ಥಿಯು ಸಭಾ ಕೂಟಗಳಿಗಾಗಿ ತಯಾರಿಸಲು ಮತ್ತು ಅರ್ಥಗರ್ಭಿತವಾದ ಹೇಳಿಕೆಗಳನ್ನು ಮಾಡಲು ತರಬೇತುಗೊಳಿಸಲ್ಪಡುತ್ತಾನೆ. ಜ್ಞಾನ ಪುಸ್ತಕದಲ್ಲಿನ ತನ್ನ ವೈಯಕ್ತಿಕ ಬೈಬಲ್ ಅಭ್ಯಾಸವು ಪೂರ್ಣಗೊಳಿಸಲ್ಪಟ್ಟ ಅನಂತರ, ತಾನು ಸತ್ಯದಲ್ಲಿ ಏಳಿಗೆಯನ್ನು ಮಾಡುತ್ತಾ ಮುಂದುವರಿಯಲು ಸಜ್ಜುಗೊಳಿಸುವ ಒಳ್ಳೆಯ ವೈಯಕ್ತಿಕ ಅಭ್ಯಾಸದ ರೂಢಿಗಳನ್ನು ಹೇಗೆ ವಿಕಸಿಸಬೇಕೆಂಬುದನ್ನು ಅವನು ಕಲಿಯುತ್ತಿರುವನು.—1 ತಿಮೊ. 4:15; 1 ಪೇತ್ರ 2:2.
14 ವಿದ್ಯಾರ್ಥಿಗಳನ್ನು ಯೆಹೋವನ ಸಂಸ್ಥೆಯ ಕಡೆಗೆ ಮಾರ್ಗದರ್ಶಿಸಿರಿ: ವಿದ್ಯಾರ್ಥಿಯ ಆಸಕ್ತಿಯನ್ನು ಯೆಹೋವನ ಸಂಸ್ಥೆಗೆ ಮಾರ್ಗದರ್ಶಿಸುವುದು ಶಿಷ್ಯನನ್ನಾಗಿ ಮಾಡುವವನೊಬ್ಬನ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಯು ಸಂಸ್ಥೆಯನ್ನು ಗುರುತಿಸಿ, ಗಣ್ಯಮಾಡುವುದಾದರೆ ಮತ್ತು ಅದರ ಭಾಗವಾಗಿ ಪರಿಣಮಿಸುವ ಅಗತ್ಯವನ್ನು ಗ್ರಹಿಸುವುದಾದರೆ, ಅವನು ಆತ್ಮಿಕ ಪ್ರೌಢತೆಗೆ ಹೆಚ್ಚು ತ್ವರಿತವಾಗಿ ಮುಂದುವರಿಯುವನು. ದೇವರ ಜನರೊಂದಿಗಿನ ಸಾಹಚರ್ಯದಲ್ಲಿ ಮತ್ತು, ಅವನು ಎಲ್ಲಿ ಕ್ರೈಸ್ತ ಸಭೆಯು ನೀಡುವ ಆತ್ಮಿಕ ಮತ್ತು ಭಾವನಾತ್ಮಕ ಬೆಂಬಲವನ್ನು ಪಡೆದುಕೊಳ್ಳಬಲ್ಲನೋ, ಆ ರಾಜ್ಯ ಸಭಾಗೃಹದಲ್ಲಿ ನಮ್ಮೊಂದಿಗಿರಲು ಮುನ್ನೋಡುವುದರಲ್ಲಿ ಅವನು ಆಹ್ಲಾದವನ್ನು ಕಂಡುಕೊಳ್ಳುವಂತೆ ನಾವು ಬಯಸುತ್ತೇವೆ.—1 ತಿಮೊ. 3:15.
15 ಯೆಹೋವನು ತನ್ನ ಚಿತ್ತವನ್ನು ಪೂರೈಸಲು ಇಂದು ಉಪಯೋಗಿಸುತ್ತಿರುವ ಏಕೈಕ ದೃಶ್ಯ ಸಂಸ್ಥೆಯೊಂದಿಗೆ ವ್ಯಕ್ತಿಗಳನ್ನು ಪರಿಚಯಿಸಲು, ಜೆಹೋವಾಸ್ ವಿಟ್ನೆಸಸ್—ಯುನೈಟೆಡ್ಲಿ ಡೂಯಿಂಗ್ ಗಾಡ್ಸ್ ವಿಲ್ ವರ್ಲ್ಡ್ವೈಡ್ ಎಂಬ ಬ್ರೋಷರ್ ಉತ್ಪಾದಿಸಲ್ಪಟ್ಟಿದೆ. ಒಮ್ಮೆ ಅಭ್ಯಾಸವು ಸ್ಥಾಪಿಸಲ್ಪಟ್ಟಲ್ಲಿ, ವಿದ್ಯಾರ್ಥಿಗೆ ಒಂದು ಪ್ರತಿಯನ್ನು ಏಕೆ ನೀಡಬಾರದು? ಅತ್ಯಾರಂಭದಲ್ಲಿಯೇ, ಕೂಟಗಳಿಗೆ ಹಾಜರಾಗುವಂತೆ ವಿದ್ಯಾರ್ಥಿಯನ್ನು ಆಮಂತ್ರಿಸುತ್ತಿರಿ. ಅವು ಹೇಗೆ ನಡೆಸಲ್ಪಡುತ್ತವೆಂಬುದನ್ನು ವಿವರಿಸಿರಿ. ಮುಂಬರುತ್ತಿರುವ ಬಹಿರಂಗ ಭಾಷಣದ ಶೀರ್ಷಿಕೆಯನ್ನು ನೀವು ಅವನಿಗೆ ಹೇಳಸಾಧ್ಯವಿದೆ ಅಥವಾ ಕಾವಲಿನಬುರುಜು ಅಭ್ಯಾಸದಲ್ಲಿ ಚರ್ಚಿಸಲ್ಪಡುವ ಲೇಖನವನ್ನು ಅವನಿಗೆ ತೋರಿಸಸಾಧ್ಯವಿದೆ. ಮೊದಲ ಬಾರಿಗೆ ಒಂದು ಹೊಸ ಸ್ಥಳಕ್ಕೆ ಹೋಗುವ ಕುರಿತು ಅವನಿಗಿರಬಹುದಾದ ಯಾವುದೇ ಆತಂಕವನ್ನು ಹಗುರಗೊಳಿಸಲು, ಪ್ರಾಯಶಃ ಕೂಟವು ನಡೆಯದಿರುವಾಗ ಅವನು ರಾಜ್ಯ ಸಭಾಗೃಹವನ್ನು ನೋಡುವಂತೆ ಅವನನ್ನು ನೀವು ಕರೆದುಕೊಂಡುಹೋಗಸಾಧ್ಯವಿದೆ. ಕೂಟಗಳಿಗೆ ಹೋಗಲು ವಾಹನ ಸೌಕರ್ಯವನ್ನು ನೀವು ನೀಡಶಕ್ತರಾಗಿರಬಹುದು. ಅವನು ಹಾಜರಾಗುವಾಗ, ಅವನಿಗೆ ಸ್ವಾಗತಾರ್ಹವಾದ ಮತ್ತು ಹಾಯಾದ ಅನಿಸಿಕೆಯಾಗುವಂತೆ ಮಾಡಿರಿ. (ಮತ್ತಾ. 7:12) ಹಿರಿಯರನ್ನೂ ಒಳಗೊಂಡು, ಇತರ ಸಾಕ್ಷಿಗಳಿಗೆ ಅವನನ್ನು ಪರಿಚಯಿಸಿರಿ. ಆಶಾಪೂರ್ವಕವಾಗಿ, ಅವನು ಸಭೆಯನ್ನು ತನ್ನ ಆತ್ಮಿಕ ಕುಟುಂಬದೋಪಾದಿ ವೀಕ್ಷಿಸಲು ಪ್ರಾರಂಭಿಸುವನು. (ಮತ್ತಾ. 12:49, 50; ಮಾರ್ಕ 10:29, 30) ಪ್ರತಿ ವಾರ ಒಂದು ಕೂಟವನ್ನು ಹಾಜರಾಗುವಂಥ ಗುರಿಯೊಂದನ್ನು ನೀವು ಅವನಿಗಾಗಿ ಇಡಬಹುದು ಮತ್ತು ಪ್ರಗತಿಪರವಾಗಿ ಗುರಿಯನ್ನು ಹೆಚ್ಚಿಸಿರಿ.—ಇಬ್ರಿ. 10:24, 25.
16 ಮನೆ ಬೈಬಲ್ ಅಭ್ಯಾಸವು ಜ್ಞಾನ ಪುಸ್ತಕದಲ್ಲಿ ಮುಂದುವರಿದಂತೆ, ಕೂಟಗಳಲ್ಲಿ ಸಭೆಯೊಂದಿಗೆ ಕ್ರಮವಾದ ಸಾಹಚರ್ಯಕ್ಕಾಗಿ ಅಗತ್ಯವನ್ನು ಎತ್ತಿತೋರಿಸುವ ಭಾಗಗಳನ್ನು ಒತ್ತಿಹೇಳಿರಿ. ವಿಶೇಷವಾಗಿ 52, 115, 137-9, 159ನೇ ಪುಟಗಳನ್ನು, ಹಾಗೂ 17ನೇ ಅಧ್ಯಾಯವನ್ನು ಗಮನಿಸಿರಿ. ಯೆಹೋವನ ಸಂಸ್ಥೆಗಾಗಿರುವ ನಿಮ್ಮ ಸ್ವಂತ ಆಳವಾದ ಗಣ್ಯತಾ ಭಾವನೆಗಳನ್ನು ವ್ಯಕ್ತಪಡಿಸಿರಿ. (ಮತ್ತಾ. 24:45-47) ಸ್ಥಳಿಕ ಸಭೆಯ ಮತ್ತು ಕೂಟಗಳಲ್ಲಿ ನೀವು ಕಲಿಯುವ ವಿಷಯಗಳ ಕುರಿತು ಸಕಾರಾತ್ಮಕವಾಗಿ ಮಾತಾಡಿರಿ. (ಕೀರ್ತ. 84:10; 133:1-3) ಜೆಹೋವಾಸ್ ವಿಟ್ನೆಸಸ್—ದಿ ಆರ್ಗನೈಸೇಶನ್ ಬಿಹೈಂಡ್ ದ ನೇಮ್ ಎಂಬ ವಿಡಿಯೋದೊಂದಿಗೆ ಪ್ರಾರಂಭಿಸಿ, ಸಂಸ್ಥೆಯ ಪ್ರತಿಯೊಂದು ವಿಡಿಯೋಗಳನ್ನು ವಿದ್ಯಾರ್ಥಿಯು ವೀಕ್ಷಿಸುವುದಾದರೆ ಒಳ್ಳೆಯದಾಗಿರುವುದು. ಸಂಸ್ಥೆಗೆ ಆಸಕ್ತಿಯನ್ನು ನಿರ್ದೇಶಿಸುವ ವಿಧದ ಕುರಿತು ಹೆಚ್ಚಿನ ಅಭಿಪ್ರಾಯಗಳಿಗಾಗಿ, ನವೆಂಬರ್ 1, 1984ರ ವಾಚ್ಟವರ್, 14-18ನೇ ಪುಟಗಳನ್ನು ಮತ್ತು ಎಪ್ರಿಲ್ 1993ರ ನಮ್ಮ ರಾಜ್ಯದ ಸೇವೆ ಪುರವಣಿಯನ್ನು ನೋಡಿರಿ.
17 ಇತರರಿಗೆ ಸಾಕ್ಷಿನೀಡಲು ವಿದ್ಯಾರ್ಥಿಗಳನ್ನು ಉತ್ತೇಜಿಸಿರಿ: ಜನರೊಂದಿಗೆ ಅಭ್ಯಸಿಸುವ ನಮ್ಮ ಗುರಿಯು, ಯೆಹೋವನಿಗಾಗಿ ಸಾಕ್ಷಿನೀಡಲಿಕ್ಕಿರುವವರನ್ನು ಶಿಷ್ಯರನ್ನಾಗಿ ಮಾಡಲಿಕ್ಕಾಗಿದೆ. (ಯೆಶಾ. 43:10-12) ಅದರ ಅರ್ಥ, ಬೈಬಲಿನಿಂದ ವಿದ್ಯಾರ್ಥಿಯು ಏನನ್ನು ಕಲಿಯುತ್ತಿದ್ದಾನೋ ಅದರ ಕುರಿತು ಇತರರೊಂದಿಗೆ ಮಾತಾಡಲು ಅವನನ್ನು ಶಿಕ್ಷಕರು ಉತ್ತೇಜಿಸಬೇಕು. “ಈ ಸತ್ಯವನ್ನು ನಿಮ್ಮ ಕುಟುಂಬಕ್ಕೆ ನೀವು ಹೇಗೆ ವಿವರಿಸುವಿರಿ?” ಅಥವಾ “ಒಬ್ಬ ಮಿತ್ರನಿಗೆ ಇದನ್ನು ರುಜುಪಡಿಸಲು ನೀವು ಯಾವ ಶಾಸ್ತ್ರವಚನವನ್ನು ಉಪಯೋಗಿಸುವಿರಿ?” ಎಂದು ಸರಳವಾಗಿ ಕೇಳುವ ಮೂಲಕ ಇದನ್ನು ಮಾಡಸಾಧ್ಯವಿದೆ. ಜ್ಞಾನ ಪುಸ್ತಕದಲ್ಲಿನ 22, 93-5, 105-6ನೇ ಪುಟಗಳು ಹಾಗೂ 18ನೇ ಅಧ್ಯಾಯದಂಥ, ಸಾಕ್ಷಿನೀಡುವಿಕೆಯು ಉತ್ತೇಜಿಸಲ್ಪಟ್ಟಿರುವ ಮುಖ್ಯ ಸ್ಥಳಗಳನ್ನು ಒತ್ತಿಹೇಳಿರಿ. ಸೂಕ್ತವಾಗಿರುವಲ್ಲಿ, ಇತರರಿಗೆ ಅನೌಪಚಾರಿಕವಾಗಿ ಸಾಕ್ಷಿನೀಡುವುದರಲ್ಲಿ ಉಪಯೋಗಿಸಲು ಕೆಲವು ಕಿರುಹೊತ್ತಗೆಗಳು ವಿದ್ಯಾರ್ಥಿಗೆ ನೀಡಲ್ಪಡಬಹುದು. ಅವನು ತನ್ನ ಅಭ್ಯಾಸದಲ್ಲಿ ತನ್ನ ಕುಟುಂಬ ಸದಸ್ಯರು ಕುಳಿತುಕೊಳ್ಳುವಂತೆ ಆಮಂತ್ರಿಸುವ ಸಲಹೆ ನೀಡಿರಿ. ಅಭ್ಯಾಸ ಮಾಡಲು ಇಷ್ಟಪಡುವ ಮಿತ್ರರು ಅವನಿಗಿದ್ದಾರೋ? ಆಸಕ್ತಿಯುಳ್ಳವರನ್ನು ನಿಮಗೆ ಸೂಚಿಸುವಂತೆ ಅವನನ್ನು ಕೇಳಿಕೊಳ್ಳಿರಿ.
18 ದೇವಪ್ರಭುತ್ವ ಶುಶ್ರೂಷಾ ಶಾಲೆ ಮತ್ತು ಸೇವಾ ಕೂಟವನ್ನು ಹಾಜರಾಗುವ ಮೂಲಕ, ಭಾವಿ ಶಿಷ್ಯನು ಸುವಾರ್ತೆಯ ಒಬ್ಬ ಪ್ರಚಾರಕನಾಗಲು ಅವನಿಗೆ ಸಹಾಯಮಾಡುವ ಹೆಚ್ಚಿನ ತರಬೇತನ್ನು ಮತ್ತು ಪ್ರಚೋದನೆಯನ್ನು ಪಡೆದುಕೊಳ್ಳಬಲ್ಲನು. ಶಾಲೆಯಲ್ಲಿ ನಮೂದಿಸಿಕೊಳ್ಳಲು ಅಥವಾ ಒಬ್ಬ ಅಸ್ನಾತ ಪ್ರಚಾರಕನಾಗಲು ಅವನು ಆಸಕ್ತಿಯನ್ನು ವ್ಯಕ್ತಪಡಿಸುವಾಗ, ನಮ್ಮ ಶುಶ್ರೂಷೆ ಪುಸ್ತಕದ 98 ಮತ್ತು 99ನೇ ಪುಟಗಳಲ್ಲಿ ಇಡಲ್ಪಟ್ಟಿರುವ ಮೂಲತತ್ತ್ವಗಳು ಅನ್ವಯಿಸುವುವು. ಅವನ ಜೀವನದ ಒಂದು ಅಂಶವು ಅರ್ಹನಾಗುವುದರಿಂದ ಅವನನ್ನು ತಡೆಯುವುದಾದರೆ, ಆ ವಿಷಯಕ್ಕೆ ಸಂಬಂಧಿಸುವ ಸಹಾಯಕಾರಿ ವಿಷಯಕ್ಕಾಗಿ ಸಂಸ್ಥೆಯ ಪ್ರಕಾಶನಗಳಲ್ಲಿ ನೀವು ಅನ್ವೇಷಿಸಿ, ಅದನ್ನು ಅವನೊಂದಿಗೆ ಹಂಚಿಕೊಳ್ಳಬಲ್ಲಿರಿ. ಉದಾಹರಣೆಗಾಗಿ, ಒಬ್ಬ ವಿದ್ಯಾರ್ಥಿಗೆ ಹೊಗೆಸೊಪ್ಪು ಅಥವಾ ಇತರ ಅಮಲೌಷಧಗಳ ವ್ಯಸನಿಯಾಗಿರುವುದನ್ನು ಜಯಿಸಲು ಕಷ್ಟವಾಗುತ್ತಿರಬಹುದು. ಅಂಥ ಹಾನಿಕರವಾದ ಹವ್ಯಾಸಗಳನ್ನು ಕ್ರೈಸ್ತರು ಏಕೆ ತೊರೆಯಬೇಕೆಂಬುದಕ್ಕೆ ಬಲವಾದ ಶಾಸ್ತ್ರೀಯ ಕಾರಣಗಳನ್ನು ರೀಸನಿಂಗ್ ಪುಸ್ತಕವು ತಿಳಿಸುತ್ತದೆ ಮತ್ತು 112ನೇ ಪುಟದಲ್ಲಿ ಇತರರು ಅದನ್ನು ಬಿಟ್ಟುಬಿಡಲು ಸಹಾಯಮಾಡುವುದರಲ್ಲಿ ಯಶಸ್ವಿಕರವಾಗಿ ಪರಿಣಮಿಸಿರುವ ಒಂದು ವಿಧವನ್ನು ಅದು ರೇಖಿಸುತ್ತದೆ. ಸಹಾಯಕ್ಕಾಗಿ ತನ್ನ ಅವಲಂಬನೆಯನ್ನು ಯೆಹೋವನ ಮೇಲೆ ಇಡಲು ಅವನಿಗೆ ಕಲಿಸುತ್ತಾ, ವಿಷಯದ ಕುರಿತಾಗಿ ಅವನೊಂದಿಗೆ ಪ್ರಾರ್ಥಿಸಿರಿ.—ಯಾಕೋ. 4:8.
19 ಒಬ್ಬನು ಸಾರ್ವಜನಿಕ ಶುಶ್ರೂಷೆಯಲ್ಲಿ ಪಾಲಿಗನಾಗಲು ಅರ್ಹನಾಗಿದ್ದಾನೋ ಇಲ್ಲವೋ ಎಂಬುದನ್ನು ನಿರ್ಧರಿಸಲಿಕ್ಕಾಗಿ, ಅನುಸರಿಸುವ ಕಾರ್ಯವಿಧಾನವು ಜನವರಿ 15, 1996ರ, ಕಾವಲಿನಬುರುಜು, ಪುಟ 16, ಪ್ಯಾರಗ್ರಾಫ್ 6ರಲ್ಲಿ ರೇಖಿಸಲ್ಪಟ್ಟಿದೆ. ವಿದ್ಯಾರ್ಥಿಯು ಅರ್ಹನಾಗುವಾಗ, ಕ್ಷೇತ್ರ ಸೇವೆಯಲ್ಲಿನ ಅವನ ಪ್ರಥಮ ದಿನಕ್ಕಾಗಿ ಅವನನ್ನು ತಯಾರಿಸಲು ಒಂದು ಪ್ರ್ಯಾಕ್ಟಿಸ್ ಸೆಶನ್ ಅನ್ನು ಮಾಡುವುದು ಸಹಾಯಕಾರಿಯಾಗಿರುವುದು. ಒಂದು ಸಕಾರಾತ್ಮಕ ವಿಧದಲ್ಲಿ, ನಿಮ್ಮ ಟೆರಿಟೊರಿಯಲ್ಲಿರುವ ಜನರ ಪ್ರತಿಕ್ರಿಯೆಗಳನ್ನು ಮತ್ತು ಸಾಮಾನ್ಯ ಆಕ್ಷೇಪಣೆಗಳನ್ನು ಚರ್ಚಿಸಿರಿ. ಸಾಧ್ಯವಿರುವುದಾದರೆ, ಮನೆಯಿಂದ ಮನೆಯ ಕೆಲಸದಲ್ಲಿ ಅವನನ್ನು ಪ್ರಾರಂಭಿಸಿರಿ, ಮತ್ತು ಪ್ರಗತಿಪರವಾಗಿ ಅವನನ್ನು ಶುಶ್ರೂಷೆಯ ಇತರ ವೈಶಿಷ್ಟ್ಯಗಳಲ್ಲಿ ತರಬೇತುಗೊಳಿಸಿರಿ. ನಿಮ್ಮ ನಿರೂಪಣೆಯನ್ನು ನೀವು ಚುಟುಕೂ ಸರಳವೂ ಆದದ್ದಾಗಿ ಇಡುವಲ್ಲಿ, ಅನುಕರಿಸಲು ಅವನಿಗೆ ಸುಲಭವಾಗಿರುವುದು. ಕೆಲಸದಲ್ಲಿ ಹರ್ಷವನ್ನು ಹೊರಸೂಸುತ್ತಾ, ಆತ್ಮೋನ್ನತಿಯನ್ನೂ ಉತ್ತೇಜನವನ್ನೂ ನೀಡುವವರಾಗಿರಿ, ಹೀಗೆ, ನಿಮ್ಮ ಹರ್ಷಭರಿತ ಮಾನಸಿಕ ಭಾವನೆಯ ಅರಿವುಳ್ಳವನಾಗಿ, ಅದನ್ನು ಪ್ರತಿಬಿಂಬಿಸುವನು. (ಅ. ಕೃ. 18:25) ಒಬ್ಬ ಹೊಸ ಶಿಷ್ಯನ ಗುರಿಯು, ಸುವಾರ್ತೆಯ ಒಬ್ಬ ಕ್ರಮವಾದ, ಹುರುಪಿನ ಪ್ರಚಾರಕನಾಗಿ ಪರಿಣಮಿಸುವುದಾಗಿರಬೇಕು. ಪ್ರಾಯಶಃ ಸೇವೆಗಾಗಿ ಒಂದು ಪ್ರಾಯೋಗಿಕ ಕಾಲತಃಖ್ತೆಯನ್ನು ಮಾಡಲು ನೀವು ಅವನಿಗೆ ಸಹಾಯಮಾಡಬಲ್ಲಿರಿ. ಇತರರಿಗೆ ಸಾಕ್ಷಿನೀಡುವುದಕ್ಕಿರುವ ತನ್ನ ಸಾಮರ್ಥ್ಯದಲ್ಲಿ ಅವನು ಪ್ರಗತಿಮಾಡುವುದಕ್ಕಾಗಿ, ಅವನು ಆಗಸ್ಟ್ 15, 1984, 15-25ನೇ ಪುಟಗಳು; ಜುಲೈ 15, 1988, 9-20ನೇ ಪುಟಗಳು; ಜನವರಿ 15, 1991, 15-20ನೇ ಪುಟಗಳು; ಮತ್ತು ಜನವರಿ 1, 1994, 20-5ನೇ ಪುಟಗಳ ವಾಚ್ಟವರ್ ಸಂಚಿಕೆಯನ್ನು ಓದುವಂತೆ ನೀವು ಸಲಹೆ ನೀಡಬಹುದು.
20 ವಿದ್ಯಾರ್ಥಿಗಳನ್ನು ಸಮರ್ಪಣೆ ಮತ್ತು ದೀಕ್ಷಾಸ್ನಾನದ ಕಡೆಗೆ ಪ್ರೇರಿಸಿರಿ: ಒಬ್ಬ ಪ್ರಾಮಾಣಿಕ ಹೃದಯಿ ವಿದ್ಯಾರ್ಥಿಯು, ಜ್ಞಾನ ಪುಸ್ತಕದ ಅಭ್ಯಾಸದ ಮುಖಾಂತರ ದೇವರಿಗೆ ಸಮರ್ಪಣೆಯನ್ನು ಮಾಡಿ, ದೀಕ್ಷಾಸ್ನಾನಕ್ಕಾಗಿ ಅರ್ಹನಾಗಲು ಬೇಕಾದ ವಿಷಯವನ್ನು ಕಲಿಯುವುದು ಸಾಧ್ಯವಾಗಬೇಕು. (ಅ. ಕೃ. 8:27-39; 16:25-34 ನ್ನು ಹೋಲಿಸಿರಿ.) ಹಾಗಿದ್ದರೂ, ಸಮರ್ಪಣೆಯೊಂದನ್ನು ಮಾಡಲು ಒಬ್ಬ ವ್ಯಕ್ತಿಯು ಪ್ರೇರಿಸಲ್ಪಡುವ ಮುನ್ನ, ಯೆಹೋವನಿಗೆ ಅವನು ಭಕ್ತಿಯನ್ನು ವಿಕಸಿಸಿಕೊಳ್ಳುವ ಅಗತ್ಯವಿದೆ. (ಕೀರ್ತ. 73:25-28) ಅಭ್ಯಾಸದ ಅವಧಿಯಾದ್ಯಂತ ಯೆಹೋವನ ಗುಣಗಳಿಗಾಗಿ ಗಣ್ಯತೆಯನ್ನು ಕಟ್ಟಲಿಕ್ಕಾಗಿರುವ ಅವಕಾಶಗಳಿಗಾಗಿ ಹುಡುಕಿರಿ. ದೇವರಿಗಾಗಿರುವ ನಿಮ್ಮ ಸ್ವಂತ ಆಳವಾದ ಭಾವನೆಗಳನ್ನು ವ್ಯಕ್ತಪಡಿಸಿರಿ. ಯೆಹೋವನೊಂದಿಗೆ ಒಂದು ಹೃತ್ಪೂರ್ವಕ, ವೈಯಕ್ತಿಕ ಸಂಬಂಧವನ್ನು ವಿಕಸಿಸಿಕೊಳ್ಳುವ ವಿಧಗಳಲ್ಲಿ ಆಲೋಚಿಸುವಂತೆ ವಿದ್ಯಾರ್ಥಿಗೆ ಸಹಾಯಮಾಡಿರಿ. ಅವನು ನಿಜವಾಗಿಯೂ ದೇವರನ್ನು ಅರಿತುಕೊಂಡು, ಪ್ರೀತಿಸುವುದಾದರೆ, ಆಗ ಅವನು ಆತನನ್ನು ನಂಬಿಗಸ್ತಿಕೆಯಿಂದ ಸೇವಿಸುವನು, ಏಕೆಂದರೆ ಒಬ್ಬ ವ್ಯಕ್ತಿಯೋಪಾದಿ ಯೆಹೋವನ ಕುರಿತಾಗಿ ನಮಗೆ ಹೇಗೆ ಅನಿಸುತ್ತದೋ ಅದಕ್ಕೆ ದೇವಭಕ್ತಿಯು ಸಂಬಂಧಿಸಿರುತ್ತದೆ.—1 ತಿಮೊ. 4:7, 8; ನೋಡಿರಿ ಸ್ಕೂಲ್ ಗೈಡ್ಬುಕ್, ಪುಟ 76, ಪ್ಯಾರಗ್ರಾಫ್ 11.
21 ವಿದ್ಯಾರ್ಥಿಯ ಹೃದಯವನ್ನು ತಲಪಲು ಪ್ರಯತ್ನಿಸಿರಿ. (ಕೀರ್ತ. 119:11; ಅ. ಕೃ. 16:14; ರೋಮಾ. 10:10) ಸತ್ಯವು ತನ್ನನ್ನು ವೈಯಕ್ತಿಕವಾಗಿ ಹೇಗೆ ಪ್ರಭಾವಿಸುತ್ತದೆಂಬುದನ್ನು ಮತ್ತು ತಾನು ಏನು ಕಲಿತಿದ್ದೇನೋ ಅದರೊಂದಿಗೆ ತಾನು ಏನು ಮಾಡಬೇಕೆಂಬುದನ್ನು ನೋಡುವ ಅಗತ್ಯವು ಅವನಿಗಿದೆ. (ರೋಮಾ. 12:2) ವಾರವಾರವೂ ಅವನಿಗೆ ನೀಡಲ್ಪಡುವ ಸತ್ಯವನ್ನು ಅವನು ನಿಜವಾಗಿಯೂ ನಂಬುತ್ತಾನೋ? (1 ಥೆಸ. 2:13) ಆ ಉದ್ದೇಶವನ್ನು ಪೂರೈಸಲು, ಇದರ ಕುರಿತು ನಿನಗೆ ಹೇಗೆ ಅನಿಸುತ್ತದೆ? ಇದನ್ನು ನೀನು ನಿನ್ನ ಜೀವನದಲ್ಲಿ ಹೇಗೆ ಅನ್ವಯಿಸಿಕೊಳ್ಳಬಲ್ಲೆ? ಎಂಬಂಥ ವಿವೇಚನಾತ್ಮಕ ದೃಷ್ಟಿಕೋನ ಪ್ರಶ್ನೆಗಳನ್ನು ಕೇಳುವ ಮೂಲಕ, ನೀವು ವಿದ್ಯಾರ್ಥಿಯ ಅಭಿಪ್ರಾಯವನ್ನು ಹೊರಸೆಳೆಯಬಲ್ಲಿರಿ. ಅವನ ಹೇಳಿಕೆಗಳಿಂದ ಅವನ ಹೃದಯವನ್ನು ತಲಪಲು ಎಲ್ಲಿ ಹೆಚ್ಚಿನ ಸಹಾಯದ ಅಗತ್ಯವಿದೆ ಎಂಬುದನ್ನು ನೀವು ವಿವೇಚಿಸಬಹುದು. (ಲೂಕ 8:15; ನೋಡಿರಿ ಸ್ಕೂಲ್ ಗೈಡ್ಬುಕ್, ಪುಟ 52, ಪ್ಯಾರಗ್ರಾಫ್ 11.) ಜ್ಞಾನ ಪುಸ್ತಕದ 172 ಮತ್ತು 174ನೇ ಪುಟಗಳಲ್ಲಿನ ಚಿತ್ರಗಳಿಗಾಗಿರುವ ವಿವರಣೆಯ ಬರಹಗಳು ಕೇಳುವುದು: “ನೀವು ಪ್ರಾರ್ಥನೆಯಲ್ಲಿ ದೇವರಿಗೆ ಒಂದು ಸಮರ್ಪಣೆಯನ್ನು ಮಾಡಿದ್ದೀರೊ?” ಮತ್ತು “ದೀಕ್ಷಾಸ್ನಾನ ಮಾಡಿಸಿಕೊಳ್ಳುವುದರಿಂದ ನಿಮ್ಮನ್ನು ಯಾವುದು ತಡೆಯುತ್ತದೆ?” ಇವು ವಿದ್ಯಾರ್ಥಿಯು ಕ್ರಿಯೆಗೈಯುವಂತೆ ಪರಿಣಾಮಕಾರಿಯಾಗಿ ಪ್ರೇರಿಸಬಹುದು.
22 ಒಬ್ಬ ಅಸ್ನಾತ ಪ್ರಚಾರಕನು ದೀಕ್ಷಾಸ್ನಾನವಾಗಲು ಬಯಸುವಾಗ ಅನುಸರಿಸಬೇಕಾಗಿರುವ ಕಾರ್ಯವಿಧಾನವನ್ನು ಜನವರಿ 15, 1996ರ, ಕಾವಲಿನಬುರುಜು, 17ನೇ ಪುಟದಲ್ಲಿನ 9ನೇ ಪ್ಯಾರಗ್ರಾಫ್ನಲ್ಲಿ ರೇಖಿಸುತ್ತದೆ. ಆ ವ್ಯಕ್ತಿಯೊಂದಿಗೆ ಹಿರಿಯರು ಪುನರ್ವಿಮರ್ಶಿಸುವ, ನಮ್ಮ ಶುಶ್ರೂಷೆ ಪುಸ್ತಕದ ಪರಿಶಿಷ್ಟದಲ್ಲಿ ಕಂಡುಬರುವ “ದೀಕ್ಷಾಸ್ನಾನವಾಗಲು ಬಯಸುವವರಿಗೆ ಪ್ರಶ್ನೆಗಳು” ಅನ್ನು ಉತ್ತರಿಸಲು ಅವನನ್ನು ಸಜ್ಜುಗೊಳಿಸುವ ಉದ್ದೇಶದೊಂದಿಗೆ ಜ್ಞಾನ ಪುಸ್ತಕವು ಬರೆಯಲ್ಪಟ್ಟಿತು. ಜ್ಞಾನ ಪುಸ್ತಕದಲ್ಲಿನ ಮುದ್ರಿತ ಪ್ರಶ್ನೆಗಳಿಗೆ ಉತ್ತರಗಳನ್ನು ನೀವು ಒತ್ತಿಹೇಳಿರುವಲ್ಲಿ, ವಿದ್ಯಾರ್ಥಿಯ ದೀಕ್ಷಾಸ್ನಾನಕ್ಕಾಗಿ ತಯಾರಿಯಲ್ಲಿ ಹಿರಿಯರಿಂದ ನಡೆಸಲ್ಪಡುವ ಪ್ರಶ್ನಾ ಸೆಷನ್ಗಳಿಗಾಗಿ ಅವನು ಸುಸಜ್ಜಿತನಾಗಿರಬೇಕು.
23 ಮನೆ ಬೈಬಲ್ ಅಭ್ಯಾಸವನ್ನು ಪೂರ್ಣಗೊಳಿಸುವವರಿಗೆ ಸಹಾಯಮಾಡಿರಿ: ವ್ಯಕ್ತಿಯೊಬ್ಬನು ಜ್ಞಾನ ಪುಸ್ತಕದ ಅಭ್ಯಾಸವೊಂದನ್ನು ಪೂರ್ಣಗೊಳಿಸುವಷ್ಟಕ್ಕೆ, ದೇವರ ಸೇವೆಯನ್ನು ಸಲ್ಲಿಸುವುದರಲ್ಲಿನ ಅವನ ಪ್ರಾಮಾಣಿಕತೆ ಮತ್ತು ಆಸಕ್ತಿಯ ಗಹನತೆಯು ಸುವ್ಯಕ್ತವಾಗಿರುವಂತೆ ನಿರೀಕ್ಷಿಸಲ್ಪಡಬೇಕು. (ಮತ್ತಾ. 13:23) ಆದುದರಿಂದಲೇ, ಪುಸ್ತಕದ ಕೊನೆಯ ಉಪಶೀರ್ಷಿಕೆಯು ಕೇಳುವುದು, “ನೀವೇನು ಮಾಡುವಿರಿ?” ಮುಕ್ತಾಯದ ಪ್ಯಾರಗ್ರಾಫ್ಗಳು ದೇವರೊಂದಿಗೆ ಅವನು ವಿಕಸಿಸಿಕೊಂಡಿರಬೇಕಾದ ಸಂಬಂಧ, ಅವನು ಕಲಿತುಕೊಂಡಿರುವ ಜ್ಞಾನವನ್ನು ಅನ್ವಯಿಸಿಕೊಳ್ಳುವ ಅಗತ್ಯ, ಮತ್ತು ಯೆಹೋವನಿಗಾಗಿ ತನ್ನ ಪ್ರೀತಿಯನ್ನು ಪ್ರದರ್ಶಿಸಲು ತೀವ್ರಗತಿಯಲ್ಲಿ ಕ್ರಿಯೆಗೈಯುವ ಅಗತ್ಯದ ಮೇಲೆ ಕೇಂದ್ರೀಕರಿಸಲು ವಿದ್ಯಾರ್ಥಿಯನ್ನು ವಿನಂತಿಸಿಕೊಳ್ಳುತ್ತವೆ. ಜ್ಞಾನ ಪುಸ್ತಕವನ್ನು ಪೂರ್ಣಗೊಳಿಸುವವರೊಂದಿಗೆ ಹೆಚ್ಚಿನ ಪ್ರಕಾಶನಗಳನ್ನು ಅಭ್ಯಸಿಸುವುದಕ್ಕಾಗಿ ಯಾವುದೇ ಒದಗಿಸುವಿಕೆಯಿರುವುದಿಲ್ಲ. ದೇವರ ಜ್ಞಾನಕ್ಕೆ ಪ್ರತಿಕ್ರಿಯೆಯನ್ನು ತೋರಿಸಲು ತಪ್ಪಿಹೋಗುವ ಒಬ್ಬ ವಿದ್ಯಾರ್ಥಿಗೆ ಆತ್ಮಿಕವಾಗಿ ಪ್ರಗತಿಮಾಡಲು ಅವನು ಏನು ಮಾಡಬೇಕೆಂಬುದನ್ನು ಹಿತಕರವೂ ಸ್ಪಷ್ಟವೂ ಆದ ರೀತಿಯಲ್ಲಿ ವಿವರಿಸಿರಿ. ನಿತ್ಯಜೀವಕ್ಕೆ ನಡೆಸುವ ಹೆಜ್ಜೆಗಳನ್ನು ಅವನು ತೆಗೆದುಕೊಳ್ಳುವುದಕ್ಕಾಗಿರುವ ಮಾರ್ಗವನ್ನು ತೆರೆದಿಡುತ್ತಾ, ನೀವು ನಿಯತಕಾಲಿಕವಾಗಿ ಸಂಪರ್ಕವನ್ನಿಟ್ಟುಕೊಳ್ಳಬಹುದು.—ಪ್ರಸಂ. 12:13.
24 ಸತ್ಯವನ್ನು ಸ್ವೀಕರಿಸಿ, ದೀಕ್ಷಾಸ್ನಾನ ಪಡೆದುಕೊಳ್ಳುವ ಒಬ್ಬ ಹೊಸ ಶಿಷ್ಯನು ನಂಬಿಕೆಯಲ್ಲಿ ಸಂಪೂರ್ಣವಾಗಿ ಸ್ಥಿರವಾಗಿರುವ ಸಲುವಾಗಿ, ತನ್ನ ಜ್ಞಾನ ಮತ್ತು ಗ್ರಹಿಸುವಿಕೆಯಲ್ಲಿ, ಬೆಳವಣಿಗೆಯನ್ನು ಮಾಡಲು ಬಹಳ ಹೆಚ್ಚಿನ ವಿಷಯವನ್ನು ಮಾಡಬೇಕಾಗಿರುವುದು. (ಕೊಲೊ. 2:6, 7) ನೀವು ಜ್ಞಾನ ಪುಸ್ತಕವನ್ನು ಪೂರ್ಣಗೊಳಿಸಿದ ಅನಂತರ ಅವನ ಮನೆ ಬೈಬಲ್ ಅಭ್ಯಾಸವನ್ನು ಮುಂದುವರಿಸುವ ಬದಲಾಗಿ, ಆತ್ಮಿಕವಾಗಿ ಪ್ರೌಢನಾಗುವ ಸಲುವಾಗಿ ಅವನಿಗೆ ಅಗತ್ಯವಿರಬಹುದಾದ ಯಾವುದೇ ವೈಯಕ್ತಿಕ ನೆರವನ್ನು ಒದಗಿಸಲು ನೀವು ನಿಮ್ಮನ್ನು ದೊರಕಿಸಿಕೊಳ್ಳುವಂತೆ ಮಾಡಿಕೊಳ್ಳಬಲ್ಲಿರಿ. (ಗಲಾ. 6:10; ಇಬ್ರಿ. 6:1) ಅವನ ವತಿಯಿಂದಾದರೋ, ಅವನು ತನ್ನ ಗ್ರಹಿಸುವಿಕೆಯನ್ನು, ದಿನನಿತ್ಯ ಬೈಬಲನ್ನು ಓದುವುದರಿಂದ, ‘ನಂಬಿಗಸ್ತ ಆಳಿ’ನ ಕಾವಲಿನಬುರುಜು ಮತ್ತು ಇತರ ಪ್ರಕಾಶನಗಳನ್ನು ವೈಯಕ್ತಿಕವಾಗಿ ಅಧ್ಯಯನ ಮಾಡುವುದರಿಂದ, ಕೂಟಗಳಿಗೆ ತಯಾರಿಸುವುದು ಮತ್ತು ಹಾಜರಾಗುವುದರಿಂದ, ಮತ್ತು ಜೊತೆ ವಿಶ್ವಾಸಿಗಳೊಂದಿಗೆ ಸತ್ಯವನ್ನು ಚರ್ಚಿಸುವುದರಿಂದ ಪೂರ್ಣಗೊಳಿಸಬಲ್ಲನು. (ಮತ್ತಾ. 24:45-47; ಕೀರ್ತ. 1:2; ಅ. ಕೃ. 2:41, 42; ಕೊಲೊ. 1:9, 10) ನಮ್ಮ ಶುಶ್ರೂಷೆ ಪುಸ್ತಕವನ್ನು ಅವನು ಓದಿ, ಅದರಲ್ಲಿರುವ ವಿಷಯವನ್ನು ಅನ್ವಯಿಸಿಕೊಳ್ಳುವುದು, ಅವನು ತನ್ನ ಶುಶ್ರೂಷೆಯನ್ನು ಸಂಪೂರ್ಣವಾಗಿ ಪೂರೈಸಲಿಕ್ಕಾಗಿ ದೇವಪ್ರಭುತ್ವಾತ್ಮಕವಾಗಿ ಸಂಘಟಿತನಾಗಿ ಪರಿಣಮಿಸುವುದರಲ್ಲಿ ಒಂದು ಮಹತ್ವದ ಪಾತ್ರವನ್ನು ವಹಿಸುವುದು.—2 ತಿಮೊ. 2:2; 4:5.
25 ಕಲಿಸುವ ಕಲೆಯನ್ನು ವಿಕಸಿಸಿಕೊಳ್ಳಿರಿ: “ಜನರಿಗೆ ಉಪದೇಶಿಸುತ್ತಾ, ಅವರನ್ನು ಶಿಷ್ಯರನ್ನಾಗಿ ಮಾಡುವ” ನಿಯೋಗವು ನಮಗೆ ನೀಡಲ್ಪಟ್ಟಿದೆ. (ಮತ್ತಾ. 28:19, 20, NW) ಕಲಿಸುವ ಕಲೆಗೂ, ಶಿಷ್ಯರನ್ನಾಗಿ ಮಾಡುವ ಕೆಲಸಕ್ಕೂ ಅಗಲಿಸಲಾಗದ ಸಂಬಂಧವಿರುವ ಕಾರಣ, ಶಿಕ್ಷಕರಾಗಿ ಅಭಿವೃದ್ಧಿಹೊಂದಲು ನಾವು ಪ್ರಯತ್ನಿಸಲು ಬಯಸುತ್ತೇವೆ. (1 ತಿಮೊ. 4:16; 2 ತಿಮೊ. 4:2) ಕಲಿಸುವ ಕಲೆಯನ್ನು ಹೇಗೆ ವಿಕಸಿಸಿಕೊಳ್ಳಬೇಕೆಂಬುದರ ಹೆಚ್ಚಿನ ಸಲಹೆಗಳಿಗಾಗಿ, ನೀವು ಇದನ್ನು ಓದಲು ಇಚ್ಛಿಸಬಹುದು: ಸ್ಕೂಲ್ ಗೈಡ್ಬುಕ್, 10 ಮತ್ತು 15ನೇ ಪಾಠಗಳಲ್ಲಿರುವ “ಕಲಿಸುವ ಕಲೆಯನ್ನು ವಿಕಸಿಸುವುದು” ಮತ್ತು “ನಿಮ್ಮ ಕೇಳುಗರ ಹೃದಯವನ್ನು ತಲಪುವುದು”; ಇನ್ಸೈಟ್ ಸಂಪುಟ 2ರಲ್ಲಿರುವ “ಶಿಕ್ಷಕ, ಕಲಿಸುವುದು”; ಮತ್ತು ವಾಚ್ಟವರ್ ಲೇಖನಗಳಾದ, ಆಗಸ್ಟ್ 1, 1984ರ “ಅಗ್ನಿ ನಿರೋಧಕ ಘಟಕಾಂಶಗಳಿಂದ ಕಟ್ಟುವುದು” ಮತ್ತು “ನೀವು ಕಲಿಸುವಾಗ, ಹೃದಯವನ್ನು ತಲಪಿರಿ”; ಮಾರ್ಚ್ 1, 1986ರ “ಶಾಸ್ತ್ರವಚನಗಳಿಂದ ನೀವು ಪರಿಣಾಮಕಾರಿಯಾಗಿ ವಿವೇಚಿಸುತ್ತೀರೋ?”; ಮತ್ತು ಫೆಬ್ರವರಿ 15, 1996, “ಶಿಷ್ಯರನ್ನಾಗಿ ಮಾಡುವುದರಲ್ಲಿ ಆನಂದವನ್ನು ಕಂಡುಕೊಳ್ಳುವ ವಿಧ.”
26 ಜ್ಞಾನ ಪುಸ್ತಕವನ್ನು ಉಪಯೋಗಿಸುತ್ತಾ ಶಿಷ್ಯರನ್ನಾಗಿ ಮಾಡುವ ಕಾರ್ಯದಲ್ಲಿ ನೀವು ಪ್ರಯತ್ನಪಟ್ಟ ಹಾಗೆ, ರಾಜ್ಯ ಸುವಾರ್ತೆಯೊಂದಿಗೆ ಮಾನವ ಹೃದಯಗಳನ್ನು ತಲಪುವುದರಲ್ಲಿರುವ ನಿಮ್ಮ ಪ್ರಯತ್ನಗಳನ್ನು “ಬೆಳೆಯುವಂತೆ ಮಾಡುವ”ವನಾದ ಯೆಹೋವನು ಆಶೀರ್ವದಿಸಲೆಂದು ಯಾವಾಗಲೂ ಪ್ರಾರ್ಥಿಸಿರಿ. (1 ಕೊರಿಂ. 3:5-7, NW) ನಿತ್ಯ ಜೀವಕ್ಕೆ ನಡೆಸುವ ಜ್ಞಾನವನ್ನು ಗ್ರಹಿಸಿ, ಗಣ್ಯಮಾಡಿ, ಅದರ ಕುರಿತಾಗಿ ಕ್ರಿಯೆಗೈಯುವಂತೆ ಇತರರಿಗೆ ಕಲಿಸುವುದರಲ್ಲಿನ ಹರ್ಷವನ್ನು ನೀವು ಅನುಭವಿಸುವಂತಾಗಲಿ!