ಅನುಕೂಲವಾದ ಸಮಯವನ್ನು ಖರೀದಿಸುವ ವಿಧ
1 ಯೆಹೋವನ ಸೇವೆಯಲ್ಲಿ ಮಾಡಲು ಬೇಕಾದಷ್ಟಿರುವುದು ನಮ್ಮನ್ನು ಕಾರ್ಯಮಗ್ನರನ್ನಾಗಿ ಇಡುತ್ತದೆ! (1 ಕೊರಿಂ. 15:58) ವೈಯಕ್ತಿಕವಾಗಿ ಮತ್ತು ಒಂದು ಕುಟುಂಬದೋಪಾದಿ ಅಭ್ಯಸಿಸುವ, ಬೈಬಲನ್ನು ದಿನನಿತ್ಯ ಓದುವ, ಸಭಾ ಕೂಟಗಳಿಗಾಗಿ ತಯಾರಿಸಿ, ಹಾಜರಾಗುವ, ಹಾಗೂ ಕ್ಷೇತ್ರ ಶುಶ್ರೂಷೆಯಲ್ಲಿ ಕ್ರಮವಾಗಿ ಭಾಗವಹಿಸುವ ಅಗತ್ಯವನ್ನು ನಾವು ಗ್ರಹಿಸುತ್ತೇವೆ. ಮೇಲ್ವಿಚಾರಕರಿಗೆ ಕುರಿಪಾಲನಾ ಜವಾಬ್ದಾರಿಗಳಿವೆ, ಮತ್ತು ಅವರು ಇತರ ಸಭಾ ಕರ್ತವ್ಯಗಳ ಕಾಳಜಿವಹಿಸುತ್ತಾರೆ. ಕೆಲವರಿಗೆ ಗುರುತರವಾದ ಕುಟುಂಬ ಜವಾಬ್ದಾರಿಗಳು ಅಥವಾ ಇತರರ ಕಡೆಗೆ ವಿವಿಧ ಹಂಗುಗಳಿವೆ. ಎಲ್ಲವನ್ನು ಸರಿಯಾಗಿ ಮಾಡಲು, ಪ್ರತಿಯೊಬ್ಬರಿಗೆ ಸಮತೋಲನ ಮತ್ತು ಒಳ್ಳೆಯ ವೈಯಕ್ತಿಕ ವ್ಯವಸ್ಥೆಯ ಅಗತ್ಯವಿದೆ.
2 ಆದ್ಯತೆಗಳನ್ನಿಡಿರಿ: ‘ನಮಗಾಗಿ ಅನುಕೂಲವಾದ ಸಮಯವನ್ನು ಖರೀದಿ’ಸುವುದರಲ್ಲಿನ (NW) ಯಶಸ್ಸು, ನಮ್ಮ ವಿವೇಚನಾಶಕ್ತಿ ಮತ್ತು ಒಳ್ಳೆಯ ವಿಮರ್ಶನಾಶಕ್ತಿಯ ಮೇಲೆ ಅವಲಂಬಿಸಿರುತ್ತದೆ. (ಎಫೆ. 5:15, 16) “ಹೆಚ್ಚು ಪ್ರಾಮುಖ್ಯವಾದ ಸಂಗತಿಗಳು” ಯಾವುವು ಎಂಬುದನ್ನು ನಾವು ನಿರ್ಧರಿಸಿ, ಅವುಗಳನ್ನು ನಮ್ಮ ಆದ್ಯತೆಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿ ಹಾಕಬೇಕು. (ಫಿಲಿ. 1:10, NW) ಒಬ್ಬ ದಂಪತಿಗಳು ತಮ್ಮ ದೇವಪ್ರಭುತ್ವ ಮನೆತನವನ್ನು ಈ ವಿಧದಲ್ಲಿ ವರ್ಣಿಸಿದರು: “ನಾವು ನಮ್ಮ ಜೀವಿತಗಳನ್ನು ಸತ್ಯದಿಂದ ತುಂಬಿಸುತ್ತೇವೆ . . . ಸತ್ಯವು ನಮ್ಮ ಜೀವಿತದ ಭಾಗವಲ್ಲ, ಅದು ನಮ್ಮ ಜೀವಿತ ಆಗಿದೆ. ಬೇರೆಲ್ಲ ವಿಷಯವು ಅದರ ಸುತ್ತು ತಿರುಗುತ್ತದೆ.” ಒಬ್ಬನ ಜೀವಿತದಲ್ಲಿ ಯೆಹೋವನ ಆರಾಧನೆ ಮತ್ತು ಸೇವೆಯನ್ನು ಪ್ರಥಮವಾಗಿಡುವುದು ಆವಶ್ಯಕವಾಗಿದೆ.
3 ಸಮಯವನ್ನು ಹಾಳುಮಾಡುವ ಸಂಗತಿಗಳನ್ನು ಗುರುತಿಸಿರಿ: ಒಂದು ವಾರದಲ್ಲಿ 168 ತಾಸುಗಳಿವೆ, ಮತ್ತು ನಾವು ನಮ್ಮ ಲಭ್ಯ ಸಮಯದ ವಿವೇಕಯುತವಾದ ಉಪಯೋಗವನ್ನು ಮಾಡುವ ಅಗತ್ಯವಿದೆ. ದೇವಪ್ರಭುತ್ವ ಚಟುವಟಿಕೆಗಳಿಗಾಗಿ ಸಾಕಷ್ಟು ಸಮಯವು ಇರುವಂತೆ, ನಾವು ಸಮಯವನ್ನು ಹಾಳುಮಾಡುವ ಸಂಗತಿಗಳನ್ನು ಗುರುತಿಸಿ, ಕಡಿಮೆಗೊಳಿಸುವ ಅಗತ್ಯವಿದೆ. ಅಮೆರಿಕದಲ್ಲಿರುವ ಸಾಮಾನ್ಯ ವಯಸ್ಕನು, ಒಂದು ವಾರದಲ್ಲಿ ಟಿವಿಯನ್ನು ವೀಕ್ಷಿಸುವುದರಲ್ಲಿ 30ಕ್ಕಿಂತಲೂ ಹೆಚ್ಚಿನ ತಾಸುಗಳನ್ನು ಕಳೆಯುತ್ತಾನೆಂದು ಒಂದು ಸಮೀಕ್ಷೆಯು ಪ್ರಕಟಪಡಿಸಿತು! ಇತರರಿಗಾದರೋ, ಲೌಕಿಕ ಸಾಹಿತ್ಯವನ್ನು ಓದುವುದರಲ್ಲಿ ಹೆಚ್ಚಿನ ಸಮಯವು ಅಪವ್ಯಯಗೊಳ್ಳುತ್ತದೆ. ಸಾಮಾಜಿಕ ಚಟುವಟಿಕೆಗಳು, ಹವ್ಯಾಸಗಳು, ಮನೋರಂಜನೆ, ಅಥವಾ ಯಾವುದೇ ವಿಧದ ಕಂಪ್ಯೂಟರ್ ಚಟುವಟಿಕೆಗಾಗಿ ತಾವು ಮಿತಿಮೀರಿದ ಸಮಯವನ್ನು ಕೊಡುತ್ತಿರುವುದಾಗಿ ಕೆಲವರು ಕಂಡುಕೊಳ್ಳಬಹುದು. ನಾವು ನಮ್ಮ ಸಮಯದ ಹೆಚ್ಚು ಉತ್ತಮವಾದ ಉಪಯೋಗವನ್ನು ಹೇಗೆ ಮಾಡಬಹುದೆಂಬುದನ್ನು ನೋಡಲು, ನಾವು ನಮ್ಮ ದೈನಿಕ ನಿಯತಕ್ರಮವನ್ನು ಪರೀಕ್ಷಿಸಿಕೊಳ್ಳುವ ಅಗತ್ಯವಿರಬಹುದು. ಅನಾವಶ್ಯಕವಾದ ಚಟುವಟಿಕೆಗಳಿಗಾಗಿ ನಾವು ಎಷ್ಟು ಸಮಯವನ್ನು ಅನುಮತಿಸುತ್ತೇವೆಂಬುದರ ಮೇಲೆ ನಾವು ಮಿತಿಗಳನ್ನಿಡುವುದನ್ನು ವಿವೇಕವು ಅವಶ್ಯಪಡಿಸುತ್ತದೆ.
4 ಒಂದು ಒಳ್ಳೆಯ ನಿಯತಕ್ರಮವನ್ನು ವಿಕಸಿಸಿಕೊಳ್ಳಿರಿ: ನಮ್ಮ ವೈಯಕ್ತಿಕ ಪರಿಸ್ಥಿತಿಗಳು ಏನೇ ಆಗಿರಲಿ, ನಮ್ಮಲ್ಲಿ ಪ್ರತಿಯೊಬ್ಬರೂ ಆತ್ಮಿಕ ಬೆನ್ನಟ್ಟುವಿಕೆಗಳಿಗಾಗಿ ಸಮಯವನ್ನು ಖರೀದಿಸಬಲ್ಲೆವು. ಪ್ರತಿ ದಿನ ಸ್ವಲ್ಪ ಬೇಗನೆ ಕೆಲಸವನ್ನು ಆರಂಭಿಸುವುದು, ತಮಗೆ ಹೆಚ್ಚನ್ನು ಪೂರೈಸಲು ಸಹಾಯ ಮಾಡುತ್ತದೆಂಬುದನ್ನು ಕೆಲವರು ಕಂಡುಕೊಂಡಿದ್ದಾರೆ. ಕೆಲಸಕ್ಕೆ ಹೋಗಿಬರಲು ಪ್ರಯಾಣಿಸುವುದರಲ್ಲಿ ಅಥವಾ ಇತರರಿಗಾಗಿ ಕಾಯುವುದರಲ್ಲಿ ನಾವು ತುಂಬ ಸಮಯವನ್ನು ಕಳೆಯುತ್ತಿರುವಲ್ಲಿ, ನಾವು ಆ ಸಮಯದಲ್ಲಿ ಸ್ವಲ್ಪ ಭಾಗವನ್ನು ಬೈಬಲ್ ಓದುವಿಕೆಗಾಗಿ, ಕೂಟಗಳಿಗಾಗಿ ತಯಾರಿಸಲು, ಅಥವಾ ಆಡಿಯೊಕ್ಯಾಸೆಟ್ಟುಗಳಲ್ಲಿ ಸೊಸೈಟಿಯಿಂದ ಒದಗಿಸಲ್ಪಟ್ಟಿರುವ ವಿಷಯಕ್ಕೆ ಕಿವಿಗೊಡುವುದರಲ್ಲಿ ಉಪಯೋಗಿಸಬಹುದು. ಒಟ್ಟುಗೂಡಿ ಅಭ್ಯಸಿಸಲು ಒಂದು ಕ್ರಮವಾದ, ನಿರ್ದಿಷ್ಟ ಸಮಯವನ್ನು ಬದಿಗಿರಿಸುವ ಮೂಲಕ ಕುಟುಂಬಗಳು ಮಹತ್ತಾಗಿ ಪ್ರಯೋಜನಪಡೆಯುತ್ತವೆ. ಕುಟುಂಬ ಅಭ್ಯಾಸಕ್ಕೆ ಹಾಜರಾಗುವಾಗ, ಕುಟುಂಬದ ಪ್ರತಿಯೊಬ್ಬ ಸದಸ್ಯನು ಕಾಲನಿಷ್ಠನಾಗಿರುವುದಾದರೆ, ಅದು ಎಲ್ಲರಿಗೆ ಸ್ವಲ್ಪ ಹೆಚ್ಚು ಸಮಯವನ್ನು ಕೊಡುತ್ತದೆ.
5 ದಾಟುತ್ತಿರುವ ಪ್ರತಿಯೊಂದು ದಿನದೊಂದಿಗೆ, “ಸಮಯವು ಸಂಕೋಚ”ಗೊಳ್ಳುತ್ತಿದೆಯೆಂಬುದರ ಕುರಿತಾಗಿ ನಾವು ಹೆಚ್ಚು ತೀವ್ರವಾಗಿ ಅರಿವುಳ್ಳವರಾಗತಕ್ಕದ್ದು. (1 ಕೊರಿಂ. 7:29) ಉಳಿದಿರುವ ಅಮೂಲ್ಯವಾದ ಸಮಯವನ್ನು ನಾವು ಹೇಗೆ ಉಪಯೋಗಿಸುತ್ತೇವೊ ಅದರ ಮೇಲೆ ನಮ್ಮ ಜೀವಗಳು ಅವಲಂಬಿಸಿವೆ. ನಾವು ರಾಜ್ಯಾಭಿರುಚಿಗಳನ್ನು ಪ್ರಥಮ ಸ್ಥಾನದಲ್ಲಿಡಲು ಸಾಧ್ಯವಾಗುವಂತೆ ಅನುಕೂಲವಾದ ಸಮಯವನ್ನು ನಾವು ಖರೀದಿಸುವುದಾದರೆ, ನಾವು ಆಶೀರ್ವದಿಸಲ್ಪಡುವೆವು!—ಮತ್ತಾ. 6:33.