ನಿಮ್ಮ ಶುಶ್ರೂಷೆಯನ್ನು ವಿಸ್ತರಿಸುವ ವಿಧಗಳು
1 ಸುಮಾರು 40ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ, “ನೀವು ನಿಮ್ಮ ಕೈಲಾದುದನ್ನು ಮಾಡುತ್ತಿದ್ದೀರೋ?” ಎಂಬ ಲೇಖನವು ಜನವರಿ 15, 1955ರ ವಾಚ್ಟವರ್ ಪತ್ರಿಕೆಯಲ್ಲಿ ಕಂಡುಬಂತು. ಯೆಹೋವನ ಜನರು ತಮ್ಮ ರಾಜ್ಯ ಚಟುವಟಿಕೆಯಲ್ಲಿ ವೃದ್ಧಿಯನ್ನು ಮಾಡಸಾಧ್ಯವಾಗುವಂತೆ, ಶುಶ್ರೂಷೆಯಲ್ಲಿ ತಮ್ಮ ವೈಯಕ್ತಿಕ ಪ್ರಯತ್ನವನ್ನು ಹೇಗೆ ಅಭಿವೃದ್ಧಿಗೊಳಿಸಬಹುದು ಎಂಬುದನ್ನು ಅದು ಪ್ರೀತಿಪೂರ್ವಕವಾಗಿ ತಿಳಿಸಿತು. ನಾವು ಇನ್ನೂ ಹೆಚ್ಚು ಉತ್ತಮವಾಗಿ ಕೈಲಾದುದನ್ನು ಮಾಡುತ್ತಾ ಮುಂದುವರಿಯುವಾಗ, ಆ ಒಳ್ಳೆಯ ಸಲಹೆಯು ಇಂದಿಗೂ ಅನ್ವಯಿಸುತ್ತದೆ.
2 ನಮ್ಮೆಲ್ಲರ ಸೇವೆಯು ಈ ಅತ್ಯಂತ ಮಹಾನ್ ಆಜ್ಞೆಯಿಂದ ಪ್ರೇರಿಸಲ್ಪಡಬೇಕು: “ನಿನ್ನ ದೇವರಾದ ಕರ್ತನನ್ನು [“ಯೆಹೋವ,” NW] ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಬುದ್ಧಿಯಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು.” (ಮಾರ್ಕ 12:30) ಯೆಹೋವನ ರಾಜ್ಯದ ಕೆಲಸವನ್ನು ಅಭಿವೃದ್ಧಿಪಡಿಸಲಿಕ್ಕಾಗಿ ನಮಗೆ ಲಭ್ಯವಿರುವ ಅವಕಾಶಗಳನ್ನು ಸದುಪಯೋಗಿಸುವ ಮೂಲಕ ನಾವು ದೇವರ ಕಡೆಗಿರುವ ನಮ್ಮ ಪೂರ್ಣ ಪ್ರೀತಿಯನ್ನು ಪ್ರದರ್ಶಿಸುತ್ತೇವೆ. ನಿಮ್ಮ ಶುಶ್ರೂಷೆಯನ್ನು ವಿಸ್ತರಿಸಲಿಕ್ಕಾಗಿ ಈ ಮುಂದಿನ ವಿಧಗಳನ್ನು ಪರಿಗಣಿಸಿರಿ.
3 ನಿಮ್ಮ ಜವಾಬ್ದಾರಿಗಳಿಗೆ ಹೆಗಲುಕೊಡಿರಿ: ಸಮರ್ಪಿತ ಸಹೋದರರು ಶುಶ್ರೂಷಾ ಸೇವಕರಾಗಿ ಅರ್ಹರಾಗಲು ಮತ್ತು ಅನಂತರ ಹಿರಿಯರಾಗಿ ಸೇವೆಸಲ್ಲಿಸಲು ಪ್ರಯತ್ನಪಡಸಾಧ್ಯವಿದೆ. ಮೇ 1, 1991ರ ಕಾವಲಿನಬುರುಜು ಪತ್ರಿಕೆಯಲ್ಲಿ ನೀಡಲ್ಪಟ್ಟ “ನೀವು ಸ್ಥಾನಕ್ಕೆ ಪ್ರಯತ್ನಿಸುತ್ತಿದ್ದೀರೊ?” ಮತ್ತು “ನಿಮಗೆ ಸೇವೆ ಮಾಡುವ ಯೋಗ್ಯತೆ ಇದೆಯೇ?” ಎಂಬ ಲೇಖನಗಳು, ಸಭೆಯ ಜವಾಬ್ದಾರಿಗಳಿಗೆ ತಮ್ಮನ್ನು ನೀಡಿಕೊಳ್ಳುವಂತೆ ಅನೇಕ ಸಹೋದರರನ್ನು ಪ್ರಚೋದಿಸಿವೆ. ಆ ಜವಾಬ್ದಾರಿಗಳಿಗಾಗಿ ಪ್ರಯತ್ನಿಸುವುದು ಮತ್ತು ಅರ್ಹರಾಗುವುದು ಹೇಗೆಂಬುದರ ಕುರಿತು ನಿರ್ದಿಷ್ಟ ಸಲಹೆಗಳಿಗಾಗಿ ಸ್ಥಳಿಕ ಹಿರಿಯರೊಂದಿಗೆ ವಿಚಾರಿಸಿರಿ.
4 ಅವಿವಾಹಿತ ಹಿರಿಯರು ಮತ್ತು ಶುಶ್ರೂಷಾ ಸೇವಕರು, ಮಿನಿಸ್ಟೀರಿಯಲ್ ಟ್ರೇನಿಂಗ್ ಸ್ಕೂಲ್ಗೆ ಅರ್ಜಿಹಾಕುವುದರ ಕುರಿತು ಗಂಭೀರವಾಗಿ ಆಲೋಚಿಸುವಂತೆ ಕೇಳಿಕೊಳ್ಳಲ್ಪಟ್ಟಿದ್ದಾರೆ. 1986-1995, 1996, ಮತ್ತು 1997ಕ್ಕಾಗಿರುವ ವಾಚ್ ಟವರ್ ಪಬ್ಲಿಕೇಷನ್ಸ್ ಇಂಡೆಕ್ಸ್ಸ್ನಲ್ಲಿರುವ “ಮಿನಿಸ್ಟೀರಿಯಲ್ ಟ್ರೇನಿಂಗ್ ಸ್ಕೂಲ್” ಕೆಳಗಿರುವ ಉಲ್ಲೇಖಗಳನ್ನು ಓದುವ ಮೂಲಕ ಈ ಶಾಲೆಯ ಬಗ್ಗೆ ನೀವು ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಸಾಧ್ಯವಿದೆ. ‘ಚಟುವಟಿಕೆಗೆ ನಡೆಸುವ ದೊಡ್ಡ ಬಾಗಿಲು’ ನಿಮ್ಮ ಮುಂದೆ ತೆರೆಯುತ್ತಿರುವುದನ್ನು ನೀವು ನೋಡಸಾಧ್ಯವಿದೆಯೋ? (1 ಕೊರಿಂ. 16:9ಎ, NW) ಇದನ್ನು ಪ್ರವೇಶಿಸಿರುವ ಅನೇಕ ಸಹೋದರರು ಪದವಿ ಪಡೆದುಕೊಂಡ ಬಳಿಕ ಸಿಗುವ ಎಲ್ಲ ಸೇವಾ ಸುಯೋಗಗಳ ಕುರಿತು ಎಂದೂ ಆಲೋಚಿಸಿರಲೇ ಇಲ್ಲ. ಇಂದು, ಅವರು ಬೆತೆಲಿನಲ್ಲಿ ಅಥವಾ ಕ್ಷೇತ್ರದಲ್ಲಿ ವಿಶೇಷ ಪಯನೀಯರರಾಗಿ, ಮಿಷನೆರಿಗಳಾಗಿ ಇಲ್ಲವೇ ಸರ್ಕಿಟ್ ಮೇಲ್ವಿಚಾರಕರುಗಳಾಗಿ ಸೇವೆಯನ್ನು ಸಲ್ಲಿಸುವುದರಲ್ಲಿ ಆನಂದಿಸುತ್ತಿದ್ದಾರೆ.
5 ಪೂರ್ಣಸಮಯದ ಸೇವೆಗಾಗಿ ಪ್ರಯತ್ನಿಸುವುದು: ಪ್ರೌಢ ಶಾಲೆಯಿಂದ ಪದವಿ ಪಡೆದುಕೊಂಡ ಯುವಜನರು, ಗೃಹಿಣಿಯರು, ಮತ್ತು ನಿವೃತ್ತರಾಗಿರುವವರು ಪಯನೀಯರ್ ಸೇವೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಜುಲೈ 1998ರ ನಮ್ಮ ರಾಜ್ಯದ ಸೇವೆಯಲ್ಲಿರುವ ಪುರವಣಿಯನ್ನು ಪುನರ್ವಿಮರ್ಶಿಸಿರಿ. ಆಮೇಲೆ, ನಿಮ್ಮ ಸ್ವಂತ ಜೀವಿತದಲ್ಲಿನ ಪರಿಸ್ಥಿತಿಗಳನ್ನೇ ಹೊಂದಿದ್ದ ಪಯನೀಯರರೊಂದಿಗೆ ಮಾತಾಡಿರಿ. ಆಗ ಅವರಂತೆಯೇ, ಪಯನೀಯರ್ ಸೇವೆಯನ್ನು ಮಾಡುವುದರ ಮೂಲಕ ನಿಮ್ಮ ಶುಶ್ರೂಷೆಯನ್ನು ವಿಸ್ತರಿಸಲು ನೀವು ಪ್ರೇರಿಸಲ್ಪಡಬಹುದು. (1 ಕೊರಿಂ. 11:1) ನೀವು ತಿಂಗಳೊಂದರಲ್ಲಿ ನಿಮ್ಮ ಚಟುವಟಿಕೆಯನ್ನು 70 ತಾಸುಗಳಿಗೆ ಹೆಚ್ಚಿಸಿ, ಒಬ್ಬ ರೆಗ್ಯೂಲರ್ ಪಯನೀಯರರಾಗಿ ಸೇವೆ ಸಲ್ಲಿಸಲು ಸಾಧ್ಯವಿದೆಯೋ?
6 ಈಗ ಲೋಕದಾದ್ಯಂತ 17,000ಕ್ಕಿಂತಲೂ ಹೆಚ್ಚಿನ ಸಹೋದರಸಹೋದರಿಯರು ಬ್ರಾಂಚ್ ಆಫೀಸುಗಳಲ್ಲಿ ಮತ್ತು ಬೆತೆಲ್ ಮನೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಅಂತಹ ಸೇವೆಗಾಗಿ ಅರ್ಜಿಹಾಕಲು ಯಾವುದು ಆವಶ್ಯಕವಾಗಿದೆ ಎಂಬುದನ್ನು ನವೆಂಬರ್ 1995ರ ನಮ್ಮ ರಾಜ್ಯದ ಸೇವೆಯು ಚರ್ಚಿಸುತ್ತದೆ. ಆ ಪುರವಣಿಯನ್ನು ಓದಿ, ಬೆತೆಲ್ ಸೇವೆಯ ಅಪೂರ್ವ ಸುಯೋಗಕ್ಕಾಗಿ ನೀವು ಒಬ್ಬ ಅರ್ಹ ವ್ಯಕ್ತಿಯಾಗಿರಬಹುದೋ ಎಂಬುದನ್ನು ಏಕೆ ಪರಿಶೀಲಿಸಿ ನೋಡಬಾರದು?
7 ಅಗತ್ಯವು ಹೆಚ್ಚಾಗಿರುವ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸಿರಿ: ಆಗಾಗ್ಗೆ ಆವರಿಸಲ್ಪಟ್ಟಿರುವ ಅಥವಾ ಸೇವೆಸಲ್ಲಿಸಲು ಅನೇಕ ಸಹೋದರರಿರುವ ಕ್ಷೇತ್ರದಲ್ಲಿ ನೀವು ವಾಸಿಸುತ್ತಿದ್ದೀರೋ? ಅಗತ್ಯವು ಹೆಚ್ಚಿರುವ ಕ್ಷೇತ್ರಕ್ಕೆ ಸ್ಥಳಾಂತರಿಸುವ ಮೂಲಕ ನಿಮ್ಮ ಶುಶ್ರೂಷೆಯನ್ನು ಹೆಚ್ಚಿಸುವ ಕುರಿತಾಗಿ ನೀವು ಯೋಚಿಸಿದ್ದೀರೋ? ಹೆಚ್ಚು ಕೆಲಸಗಾರರ ಅಗತ್ಯವಿರುವ ಹತ್ತಿರದ ಗ್ರಾಮೀಣ ಪ್ರದೇಶಕ್ಕೆ ನೀವು ಹೋಗಸಾಧ್ಯವಿದೆ. (ಮತ್ತಾ. 9:37, 38) ಇದನ್ನು ಯಾವುದೇ ದೂರದೃಷ್ಟಿಯಿಲ್ಲದೇ ಮಾಡಬಾರದು. ಇದನ್ನು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸಬೇಕು. (ಲೂಕ 14:28-30) ನಿಮ್ಮ ಪರಿಸ್ಥಿತಿಯ ಬಗ್ಗೆ ಹಿರಿಯರು ಹಾಗೂ ಸರ್ಕಿಟ್ ಮೇಲ್ವಿಚಾರಕನೊಂದಿಗೆ ಚರ್ಚಿಸಿರಿ. ನೀವು ಈಗ ಸ್ಥಳಾಂತರಿಸುವುದು ಒಳ್ಳೆಯದೋ ಇಲ್ಲವೇ ಭವಿಷ್ಯತ್ತಿನಲ್ಲಿ ಹಾಗೆ ಮಾಡುವುದು ವಿವೇಕಯುಕ್ತವಾಗಿದೆಯೋ ಎಂಬುದನ್ನು ಅವರು ನಿಮ್ಮೊಂದಿಗೆ ಚರ್ಚಿಸುವರು. ನೀವು ಎಲ್ಲಿಗೆ ಸ್ಥಳಾಂತರಿಸಸಾಧ್ಯವಿದೆ ಎಂಬುದನ್ನು ಕೇಳಲು ನೀವು ಸೊಸೈಟಿಗೆ ಪತ್ರವನ್ನು ಬರೆಯಲು ಇಚ್ಛಿಸುವುದಾದರೆ, ಪತ್ರದ ಜೊತೆಗೆ ನಿಮ್ಮ ಸಭೆಯ ಸೇವಾ ಕಮಿಟಿಯಿಂದ ಸಹಿ ಮಾಡಲ್ಪಟ್ಟ ಒಂದು ಪತ್ರವಿರುವ ಅಗತ್ಯವಿದೆ.
8 ನಿಮ್ಮ ಸೇವೆಯ ಗುಣಮಟ್ಟವನ್ನು ಉತ್ತಮಗೊಳಿಸಿರಿ: ನಮ್ಮ ಕ್ಷೇತ್ರ ಸೇವೆಯ ಗುಣಮಟ್ಟವನ್ನು ಉತ್ತಮಗೊಳಿಸುವ ಮೂಲಕ ಶುಶ್ರೂಷೆಯಲ್ಲಿ ನಾವು ಹೆಚ್ಚು ಪೂರ್ಣವಾಗಿ ಪಾಲ್ಗೊಳ್ಳಸಾಧ್ಯವಿದೆ. ಮನೆಮನೆಯ ಮತ್ತು ಅನೌಪಚಾರಿಕ ಸೇವೆ ಹಾಗೂ ಪುನರ್ಭೇಟಿ ಹಾಗೂ ಬೈಬಲ್ ಅಭ್ಯಾಸದ ಕೆಲಸವನ್ನು ಒಳಗೊಂಡು ಎಲ್ಲ ವೈಶಿಷ್ಟ್ಯಗಳಲ್ಲಿ ನೀವು ಒಳಗೊಂಡಿದ್ದೀರೋ? ನೀವು ಒಂದು ಅಭ್ಯಾಸವನ್ನು ಮಾಡುತ್ತಿರುವಲ್ಲಿ, ನಿಮ್ಮ ಕಲಿಸುವ ಕಲೆಯನ್ನು ಉತ್ತಮಗೊಳಿಸಸಾಧ್ಯವಿದೆಯೋ? ನಿಮ್ಮ ವಿದ್ಯಾರ್ಥಿಗಳನ್ನು ಸಮರ್ಪಣೆ ಮತ್ತು ದೀಕ್ಷಾಸ್ನಾನದ ಕಡೆಗೆ ಪ್ರಚೋದಿಸಲಿಕ್ಕಾಗಿ ನೀವು ಉಪಯೋಗಿಸಸಾಧ್ಯವಿರುವ ಸಲಹೆಗಳಿಗಾಗಿ, ಜೂನ್ 1996ರ ನಮ್ಮ ರಾಜ್ಯದ ಸೇವೆಯ ಪುರವಣಿಯನ್ನು ಪುನರ್ವಿಮರ್ಶಿಸುವುದು ಸೂಕ್ತವಾಗಿರುವುದು.
9 ನಮ್ಮ ಶುಶ್ರೂಷೆಯನ್ನು ಹೆಚ್ಚಿಸಲು ಮತ್ತು ಉತ್ತಮಗೊಳಿಸಲು ಇರುವ ಅನೇಕ ವಿಧಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು ಪುಸ್ತಕದ 9ನೆಯ ಅಧ್ಯಾಯದಲ್ಲಿ ಕಂಡುಕೊಳ್ಳಬಹುದು. ದೇವರ ಸೇವೆಯಲ್ಲಿ ನಮ್ಮ ಕೈಲಾದುದನ್ನು ಮಾಡಲು ನಾವೆಲ್ಲರೂ ನಿಶ್ಚಯವಾಗಿಯೂ ಬಯಸಬೇಕು. ನಿಮ್ಮ ಆತ್ಮಿಕ ಗುರಿಗಳನ್ನು ಗಂಭೀರವಾಗಿ ಏಕೆ ಪರಿಗಣಿಸಬಾರದು? 1 ತಿಮೊಥೆಯ 4:15 ಶಿಫಾರಸ್ಸು ಮಾಡುವಂತೆ ಕಾರ್ಯನಡೆಸಿರಿ: “ಈ ಕಾರ್ಯಗಳನ್ನು ಸಾಧಿಸಿಕೊಳ್ಳುವದರಲ್ಲಿ ಆಸಕ್ತನಾಗಿರು. ಇದರಿಂದ ನಿನ್ನ ಅಭಿವೃದ್ಧಿಯು ಎಲ್ಲರಿಗೂ ಪ್ರಸಿದ್ಧವಾಗುವದು.”