ನಿಮ್ಮ ಸಮಯವನ್ನು ಪರಿಣಾಮಕಾರಿಯಾಗಿ ಬಳಸಿರಿ
1 ಪ್ರತಿಯೊಬ್ಬರಿಗೂ ಒಂದು ದಿನದಲ್ಲಿ 24 ಘಂಟೆಗಳು ಮಾತ್ರ ಇರುತ್ತವೆ. ಸುವಾರ್ತೆಯನ್ನು ಸಾರುವುದರಲ್ಲಿ ನಾವು ಮುಡಿಪಾಗಿಡುವ ಸಮಯವು ಬಹಳ ಅಮೂಲ್ಯವಾಗಿದೆ. ಏಕೆಂದರೆ, ಅದು ಜೀವರಕ್ಷಕ ಕೆಲಸದಲ್ಲಿ ವ್ಯಯಿಸಿದ ಸಮಯವಾಗಿದೆ. (ರೋಮಾ. 1:16) ಯೋಜಿಸಲ್ಪಟ್ಟ ಕ್ಷೇತ್ರ ಸೇವೆಗಾಗಿ ಚೆನ್ನಾಗಿ ತಯಾರಿಸುವುದು, ಸೇವೆಗಾಗಿರುವ ಕೂಟಗಳಿಗೆ ಸರಿಯಾದ ಸಮಯಕ್ಕೆ ಬರುವುದು ಮತ್ತು ಟೆರಿಟೊರಿಗೆ ತಡಮಾಡದೆ ಹೊರಡುವುದರ ಮೂಲಕ ನಾವು ಗಣ್ಯತೆಯನ್ನು ತೋರಿಸುತ್ತೇವೆ. ಕ್ಷೇತ್ರ ಸೇವೆಗಾಗಿರುವ ಕೂಟದಲ್ಲಿ ತಡಮಾಡುವುದಕ್ಕೆ ಬದಲು, ನಾವು ಸಾರುತ್ತಾ ಇರುವುದು ಒಳ್ಳೆಯದು. “ಪ್ರತಿಯೊಂದು ಕಾರ್ಯಕ್ಕೂ ಕಾಲವು ಕ್ಲುಪ್ತವಾಗಿದೆ” ಎಂಬುದನ್ನು ಯೆಹೋವನು ನಮಗೆ ಕಲಿಸಿಕೊಟ್ಟಿರುವುದರಿಂದ, ನಾವು ಶುಶ್ರೂಷೆಗಾಗಿ ಬದಿಗಿಟ್ಟಿರುವ ಸಮಯವನ್ನು ನಿಜವಾಗಿಯೂ ಪರಿಣಾಮಕಾರಿಯಾಗಿ ಬಳಸುವ ಅಗತ್ಯವಿದೆ.—ಪ್ರಸಂ. 3:1.
2 ನಿಮ್ಮ ಸಮಯವನ್ನು ವಿವೇಕದಿಂದ ನಿರ್ವಹಿಸಿರಿ: ಕ್ಷೇತ್ರ ಸೇವೆಯಲ್ಲಿ ಕ್ರಮವಾಗಿ ಭಾಗವಹಿಸುವುದಕ್ಕಾಗಿ ಅನುಮತಿ ನೀಡುವ ಒಂದು ಶೆಡ್ಯೂಲಿಗೆ ದೃಢವಾಗಿ ಅಂಟಿಕೊಳ್ಳುವುದರಿಂದ ನಮಗೆ ಅನೇಕ ಆಶೀರ್ವಾದಗಳು ಸಿಗುತ್ತವೆ. ಶುಶ್ರೂಷೆಯಲ್ಲಿ ನಾವು ಪಡೆದುಕೊಳ್ಳುವ ಒಳ್ಳೆಯ ಫಲಿತಾಂಶಗಳು ನಾವು ಸೇವೆಯಲ್ಲಿ ಕಳೆಯುವ ಸಮಯಕ್ಕೆ ಸರಿಸಮವಾಗಿರಬೇಕು. ನಮ್ಮ ನಿಯತಕ್ರಮದಲ್ಲಿ ಸ್ವಲ್ಪ ಅಳವಡಿಸುವಿಕೆಗಳನ್ನು ಮಾಡುತ್ತಾ, ನಾವು ಕ್ಷೇತ್ರ ಸೇವೆಗೆ ಹೆಚ್ಚಿನ ಸಮಯವನ್ನು ಮುಡಿಪಾಗಿಡಸಾಧ್ಯವೋ? ಉದಾಹರಣೆಗಾಗಿ, ಶನಿವಾರದಂದು ಪತ್ರಿಕಾ ಚಟುವಟಿಕೆಯ ಅನಂತರ, ಕೆಲವೊಂದು ಪುನರ್ಭೇಟಿಗಳನ್ನು ಮಾಡುವುದರಲ್ಲಿ ನಾವು ಸ್ವಲ್ಪ ಹೆಚ್ಚು ಸಮಯವನ್ನು ಕಳೆಯಸಾಧ್ಯವೊ? ಭಾನುವಾರದಂದು ಕ್ಷೇತ್ರ ಸೇವೆಯಲ್ಲಿ ನಾವು ಸ್ವಲ್ಪ ಸಮಯವನ್ನು ಕಳೆದಿರುವಲ್ಲಿ, ಅನಂತರ ಪುನರ್ಭೇಟಿಗಳನ್ನು ಮಾಡಲು ಅಥವಾ ಬೈಬಲ್ ಅಭ್ಯಾಸವನ್ನು ನಡೆಸಲು ಸಹ ಸಮಯವನ್ನು ವ್ಯಯಿಸಸಾಧ್ಯವೋ? ನಮ್ಮ ಮನೆಮನೆಯ ಚಟುವಟಿಕೆಯೊಂದಿಗೆ ಬೀದಿ ಸಾಕ್ಷಿಕಾರ್ಯವನ್ನು ಮಾಡಲು ಸಾಧ್ಯವೋ? ಈ ರೀತಿಯಲ್ಲಿ ಮತ್ತು ಇನ್ನಿತರ ವಿಧಗಳಲ್ಲಿ ನಾವು ನಮ್ಮ ಸೇವೆಯನ್ನು ಅಭಿವೃದ್ಧಿಗೊಳಿಸಸಾಧ್ಯವಿದೆ.
3 ನಾವು ಶುಶ್ರೂಷೆಯಲ್ಲಿರುವಾಗ ಜಾಗರೂಕರಾಗಿರದಿದ್ದಲ್ಲಿ, ಅಮೂಲ್ಯವಾದ ಸಮಯವನ್ನು ಕಳೆದುಕೊಳ್ಳಸಾಧ್ಯವಿದೆ. ಹವಾಮಾನವು ಚೆನ್ನಾಗಿಲ್ಲದಿರುವಲ್ಲಿ, ಮಧ್ಯೆ ಸ್ವಲ್ಪ ಸಮಯಕ್ಕಾಗಿ ವಿರಾಮವನ್ನು ತೆಗೆದುಕೊಳ್ಳುವುದು ನಮ್ಮನ್ನು ಚೈತನ್ಯಗೊಳಿಸಿ ಕಾರ್ಯವನ್ನು ಮುಂದುವರಿಸಿಕೊಂಡು ಹೋಗಲು ಸಹಾಯಮಾಡುವುದು. ಆದರೆ ಸಮತೂಕವನ್ನು ಕಾಪಾಡಿಕೊಳ್ಳಿರಿ, ಏಕೆಂದರೆ ಅಂತಹ ವಿರಾಮಗಳು ಯಾವಾಗಲೂ ಅಗತ್ಯವಾಗಿರುವುದಿಲ್ಲ.
4 ಈಗಿನ ಸಮಯಗಳಲ್ಲಿ ಜನರನ್ನು ಮನೆಯಲ್ಲಿ ಕಂಡುಕೊಳ್ಳುವುದು ಬಹಳ ಕಷ್ಟ. ಆದುದರಿಂದ, ಅನೇಕ ಪ್ರಚಾರಕರು ದಿನದ ಬೇರೆ ಬೇರೆ ಸಮಯಗಳಲ್ಲಿ ಮನೆಮನೆಯ ಸಾಕ್ಷಿಕಾರ್ಯವನ್ನು ಮಾಡುತ್ತಿದ್ದಾರೆ. ಮಧ್ಯಾಹ್ನ ಮೂರು ಗಂಟೆಯ ಅನಂತರ ಅಥವಾ ಸಾಯಂಕಾಲದಂದು ಸಾಕ್ಷಿಕಾರ್ಯವನ್ನು ಏಕೆ ಪ್ರಯತ್ನಿಸಿ ನೋಡಬಾರದು?
5 ಬೀದಿ ಸಾಕ್ಷಿಕಾರ್ಯಗಳನ್ನು ಮಾಡುತ್ತಿರುವಾಗ ಪ್ರಚಾರಕರು ಒಬ್ಬರು ಇನ್ನೊಬ್ಬರೊಂದಿಗೆ ಮಾತಾಡುತ್ತಾ ಸಮಯವನ್ನು ಕಳೆಯದಿರುವುದು ಉತ್ತಮವಾಗಿರುವುದು. ಅದಕ್ಕೆ ಬದಲಾಗಿ ದೂರ ದೂರದಲ್ಲಿ ನಿಂತುಕೊಂಡು, ಜನರೊಂದಿಗೆ ಸಂಭಾಷಣೆಗಳನ್ನು ಆರಂಭಿಸಲು ಅವರನ್ನು ಸಮೀಪಿಸಿರಿ. ಹೀಗೆ ಸಮಯವನ್ನು ಪರಿಣಾಮಕಾರಿಯಾಗಿ ಉಪಯೋಗಿಸಲು ಸಾಧ್ಯವಾಗುವುದು. ಅಷ್ಟುಮಾತ್ರವಲ್ಲದೆ, ಸಾಕ್ಷಿಕಾರ್ಯದಿಂದ ಮಹದಾನಂದವು ಸಿಗುವುದು.
6 ಸಾಕ್ಷಿಯನ್ನು ನೀಡಲು ಅವಕಾಶಗಳನ್ನು ಹುಡುಕಿರಿ: ಮನೆಯಾಕೆಯು ಒಬ್ಬ ಸಾಕ್ಷಿಗೆ ತನಗೆ ಆಸಕ್ತಿಯಿಲ್ಲವೆಂದು ಹೇಳಿದಳು. ಆದರೆ ಮನೆಯಲ್ಲಿರುವ ಬೇರೆ ಯಾರೊಂದಿಗಾದರೂ ತಾನು ಮಾತಾಡಬಹುದೋ ಎಂದು ಆ ಸಾಕ್ಷಿಯು ಕೇಳಿದಳು. ಈ ರೀತಿಯಲ್ಲಿ ಅವಳು ಮನೆಯ ಯಜಮಾನನೊಟ್ಟಿಗೆ ಸಂಭಾಷಿಸಲು ಶಕ್ತಳಾದಳು. ಅವನು ಅನೇಕ ವರ್ಷಗಳಿಂದ ಅಸ್ವಸ್ಥನಾಗಿದ್ದು, ಹಾಸಿಗೆ ಹಿಡಿದಿದ್ದನು. ದೇವರ ವಾಕ್ಯದಲ್ಲಿರುವ ನಿರೀಕ್ಷೆಯು ಅವನಿಗೆ ಜೀವಿತದಲ್ಲಿ ಆಸಕ್ತಿಯನ್ನು ನವೀಕರಿಸಿತು. ಅವನು ಬಹಳ ಬೇಗನೆ ಸ್ವಸ್ಥನಾಗಿ, ರಾಜ್ಯ ಸಭಾಗೃಹದಲ್ಲಿ ಕೂಟಗಳಿಗೆ ಹಾಜರಾಗುತ್ತಾ, ತಾನು ಹೊಸದಾಗಿ ಕಂಡುಕೊಂಡ ನಿರೀಕ್ಷೆಯನ್ನು ಇತರರಿಗೂ ಹಂಚುತ್ತಾ ಇದ್ದನು!
7 ಸಭಾ ಪುಸ್ತಕ ಅಭ್ಯಾಸಕ್ಕೆ ಒಂದು ತಾಸಿನ ಮುಂಚೆ ಕ್ಷೇತ್ರ ಸೇವೆಯಲ್ಲಿ ಒಳಗೂಡುವ ಸಲಹೆಯನ್ನು ಒಬ್ಬ ಹದಿವಯಸ್ಕ ಸಹೋದರಿಯು ಅನ್ವಯಿಸಿದಳು. ಮೊದಲನೇ ಮನೆಯಲ್ಲಿ, ತೀರ ಶ್ರದ್ಧೆಯಿಂದ ಕಿವಿಗೊಟ್ಟು, ಸಾಹಿತ್ಯವನ್ನು ತೆಗೆದುಕೊಂಡ ಒಬ್ಬ 13 ವರ್ಷ ಪ್ರಾಯದ ಹುಡುಗಿಯನ್ನು ಅವಳು ಭೇಟಿಯಾದಳು. ಮರುದಿನ ಶಾಲೆಯಲ್ಲಿ, ಆ ಯುವ ಸಹೋದರಿಯು ಅದೇ ಹುಡುಗಿಯನ್ನು ಕಂಡಳು. ಸ್ವಲ್ಪ ಸಮಯದ ನಂತರ, ಬೈಬಲ್ ಅಭ್ಯಾಸವನ್ನು ಮಾಡಲು ಇಷ್ಟವಿದೆಯೋ ಎಂದು ಸಹೋದರಿಯು ಆ ಹುಡುಗಿಗೆ ಕೇಳಿದಾಗ, ಅದಕ್ಕೆ ಅವಳು ಒಪ್ಪಿಕೊಂಡಳು.
8 ಸಮಯವನ್ನು ಉತ್ತಮ ಗುಣಮಟ್ಟದ್ದನ್ನಾಗಿ ಮಾಡಿರಿ: ಕ್ಷೇತ್ರ ಸೇವೆಯಲ್ಲಿ ಕ್ರಮವಾಗಿ ಪಾಲ್ಗೊಳ್ಳುವುದರಿಂದ, ಸುವಾರ್ತೆಯನ್ನು ಪ್ರಸ್ತುತಪಡಿಸುವುದರಲ್ಲಿರುವ ನಮ್ಮ ಕೌಶಲಗಳನ್ನು ವಿಕಸಿಸಲು ನಮಗೆ ಸಹಾಯ ಮಾಡುವುದು. ಹೆಚ್ಚು ಪರಿಣಾಮಕಾರಿಯಾದ ಪೀಠಿಕೆಯನ್ನು ಉಪಯೋಗಿಸುತ್ತಾ, ಮನೆಬಾಗಿಲಿನಲ್ಲಿ ಸಂಭಾಷಣೆಯನ್ನು ಪ್ರಾರಂಭಿಸುವ ನಿಮ್ಮ ಸಾಮರ್ಥ್ಯವನ್ನು ನೀವು ಹೆಚ್ಚು ಉತ್ತಮಗೊಳಿಸಸಾಧ್ಯವೋ? ಮನೆ ಬೈಬಲ್ ಅಭ್ಯಾಸವನ್ನು ನಡೆಸುವಾಗ ನೀವು ಹೆಚ್ಚು ನುರಿತ ಶಿಕ್ಷಕರಾಗಸಾಧ್ಯವೋ? ಹೀಗೆ ಮಾಡುವ ಮೂಲಕ, ನೀವು ಸೇವೆಯಲ್ಲಿ ಕಳೆಯುವ ಸಮಯವನ್ನು ನಿಜವಾಗಿಯೂ ಪರಿಣಾಮಕಾರಿಯನ್ನಾಗಿಯೂ ನಿಮ್ಮ ಶುಶ್ರೂಷೆಯನ್ನು ಹೆಚ್ಚು ಫಲದಾಯಕವನ್ನಾಗಿಯೂ ಮಾಡಸಾಧ್ಯವಿದೆ.—1 ತಿಮೊ. 4:16.
9 “ಉಳಿದಿರುವ ಸಮಯವು ತೀರ ಕಡಿಮೆಯಾಗಿ”ರುವುದರಿಂದ ನಮ್ಮ ಜೀವಿತಗಳು ಕ್ರೈಸ್ತ ಕ್ರಿಯೆಗಳಿಂದ ತುಂಬಿರಬೇಕು. (1 ಕೊರಿಂ. 7:29, NW) ಸಾಕ್ಷಿಕಾರ್ಯಕ್ಕೆ ಸಮಯವನ್ನು ಬದಿಗಿಡುವುದು ನಮ್ಮ ಆದ್ಯತೆಗಳಲ್ಲಿ ಪ್ರಥಮವಾಗಿರಬೇಕು. ನಾವು ಶುಶ್ರೂಷೆಯಲ್ಲಿ ಉತ್ತಮವಾಗಿ ಮತ್ತು ಹುರುಪಿನಿಂದ ಪಾಲ್ಗೊಳ್ಳೋಣ. ಸಮಯವು ಯೆಹೋವನು ನಮಗೆ ಕೊಟ್ಟಿರುವ ಒಂದು ಅದ್ಭುತಕರ ಆಸ್ತಿಯಾಗಿದೆ. ಅದನ್ನು ಯಾವಾಗಲೂ ವಿವೇಕಯುಕ್ತವಾಗಿ ಉಪಯೋಗಿಸಿ, ಪರಿಣಾಮಕಾರಿಯಾದದ್ದಾಗಿ ಮಾಡಿರಿ.
[ಪುಟ 4ರಲ್ಲಿರುವಚೌಕ]
ಈ ಸಲಹೆಗಳನ್ನು ಪರಿಗಣಿಸಿರಿ:
◼ ಸೇವೆಗಾಗಿರುವ ಕೂಟಗಳಿಗೆ ಸರಿಯಾದ ಸಮಯಕ್ಕೆ ಬನ್ನಿರಿ.
◼ ತಕ್ಕ ಮಟ್ಟಿಗೆ, ಸಾಕ್ಷಿಕಾರ್ಯದ ಗುಂಪುಗಳನ್ನು ಚಿಕ್ಕದಾಗಿಡಿರಿ.
◼ ಟೆರಿಟೊರಿಗೆ ಹೋಗಲು ತಡಮಾಡಬೇಡಿರಿ.
◼ ಹೆಚ್ಚಿನ ಜನರು ಮನೆಯಲ್ಲಿರುವಾಗ ಟೆರಿಟೊರಿಯಲ್ಲಿ ಕಾರ್ಯಮಾಡಿರಿ.
◼ ಒಂಟಿಯಾಗಿ ಕಾರ್ಯಮಾಡುವುದು ಸುರಕ್ಷಿತವಾಗಿರುವಲ್ಲಿ ಕೆಲವೊಮ್ಮೆ ಹಾಗೆ ಮಾಡಿರಿ.
◼ ನೀವು ಮನೆಮನೆಯ ಸೇವೆಯನ್ನು ಮಾಡುತ್ತಿರುವ ಟೆರಿಟೊರಿಗೆ ಹತ್ತಿರದಲ್ಲಿರುವ ಪುನರ್ಭೇಟಿಗಳನ್ನು ಮಾಡಿರಿ.
◼ ಗುಂಪಿನಲ್ಲಿರುವ ಇತರರು ಮನೆಯೊಂದರಲ್ಲಿ ಸಾಕ್ಷಿನೀಡುತ್ತಾ ತಡಮಾಡುವಲ್ಲಿ, ನೀವು ಸೇವೆಯಲ್ಲಿ ಕಾರ್ಯಮಗ್ನರಾಗಿರಿ.
◼ ಸಾಧ್ಯವಿರುವಾಗಲೆಲ್ಲ, ಪರಿಸ್ಥಿತಿಗಳಿಗನುಸಾರ, ಸಾಕ್ಷಿಕಾರ್ಯದಲ್ಲಿ ಒಂದು ತಾಸಿಗಿಂತಲೂ ಹೆಚ್ಚಿನ ಸಮಯವನ್ನು ಕಳೆಯಿರಿ.