‘ನಿಮ್ಮ ಬೆಳಕು ಪ್ರಕಾಶಿಸಲಿ’
1 ನಮ್ಮ ಸುತ್ತಲೂ ಇರುವ ಲೋಕವು ನೈತಿಕ ಹಾಗೂ ಆತ್ಮಿಕ ಅಂಧಕಾರದಲ್ಲಿದೆ. ಆದರೆ ಅಂಧಕಾರದ “ಕೃತ್ಯಗಳಿಂದ ಯಾವ ಪ್ರಯೋಜನವೂ ಬರಲಾರದು” ಎಂಬುದನ್ನು ಸತ್ಯದ ಬೆಳಕು ಬಯಲುಪಡಿಸುತ್ತದೆ. ಇದರಿಂದ ಯಾವುದೇ ರೀತಿಯಲ್ಲಿ ಎಡವದಂತಿರಲು ಸಾಧ್ಯವಾಗುತ್ತದೆ. ಆದುದರಿಂದಲೇ, “ಬೆಳಕಿನವರಂತೆ ನಡೆದುಕೊಳ್ಳಿರಿ” ಎಂದು ಅಪೊಸ್ತಲ ಪೌಲನು ಕ್ರೈಸ್ತರನ್ನು ಪ್ರೋತ್ಸಾಹಿಸಿದನು.—ಎಫೆ. 5:8, 11.
2 “ಬೆಳಕಿನ ಫಲವು” ಕತ್ತಲೆ ಕವಿದಿರುವ ಲೋಕದಿಂದ ತೀರ ಭಿನ್ನವಾಗಿದೆ. (ಎಫೆ. 5:9) ಈ ಗುಣವನ್ನು ಉತ್ಪಾದಿಸಬೇಕಾದರೆ, ನಾವು ಕ್ರೈಸ್ತ ಜೀವಿತದಲ್ಲಿ ಅತ್ಯುತ್ತಮ ಮಾದರಿಗಳಾಗಿರಬೇಕು. ಇಂತಹವರನ್ನೇ ಯೇಸು ಅಂಗೀಕರಿಸುತ್ತಾನೆ. ಸತ್ಯಕ್ಕೋಸ್ಕರ ನಾವು ಮನಃಪೂರ್ವಕತೆ, ಪ್ರಾಮಾಣಿಕತೆ ಹಾಗೂ ಉತ್ಸುಕತೆಯಂತಹ ಗುಣಗಳನ್ನು ಸಹ ತೋರಿಸಬೇಕು. ಈ ಫಲವು, ನಮ್ಮ ದೈನಂದಿನ ಜೀವನ ಹಾಗೂ ನಮ್ಮ ಶುಶ್ರೂಷೆಯಲ್ಲಿ ತೋರಿಬರಬೇಕು.
3 ಎಲ್ಲ ಸಮಯಗಳಲ್ಲೂ ಪ್ರಕಾಶಿಸಿರಿ: “ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ” ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು. (ಮತ್ತಾ. 5:16) ಯೇಸುವನ್ನು ಹಿಂಬಾಲಿಸುತ್ತಾ, ದೇವರ ರಾಜ್ಯ ಹಾಗೂ ಆತನ ಉದ್ದೇಶಗಳ ಕುರಿತು ಸಾರುವುದರ ಮೂಲಕ ನಾವು ಯೆಹೋವನ ಬೆಳಕನ್ನು ಪ್ರತಿಬಿಂಬಿಸುತ್ತೇವೆ. ಜನರನ್ನು ಮನೆಗಳಲ್ಲಿ ಭೇಟಿಯಾಗುವಾಗ ಮತ್ತು ಕೆಲಸದ ಸ್ಥಳದಲ್ಲಿ, ಶಾಲೆಯಲ್ಲಿ, ನಮ್ಮ ನೆರೆಯವರೊಂದಿಗೆ, ಅಥವಾ ಸಂದರ್ಭ ಸಿಕ್ಕಿದಾಗಲೆಲ್ಲ ಸತ್ಯದ ಕುರಿತು ಸಾರುವುದರಿಂದ ನಾವು ಜ್ಯೋತಿರ್ಮಂಡಲಗಳಂತೆ ಪ್ರಕಾಶಿಸುತ್ತೇವೆ.—ಫಿಲಿ. 2:15, 16ಎ.
4 ಕೆಲವರು ಬೆಳಕನ್ನು ದ್ವೇಷಿಸುತ್ತಾರೆ ಎಂದು ಯೇಸು ಹೇಳಿದನು. (ಯೋಹಾ. 3:20) ಆದುದರಿಂದ, “ಕ್ರಿಸ್ತನ ಪ್ರಭಾವವನ್ನು ತೋರಿಸುವ ಸುವಾರ್ತೆಯ ಪ್ರಕಾಶವು” ತಮ್ಮ ಮೂಲಕ ಪ್ರಕಾಶಿಸುವಂತೆ ಬಿಡಲು ಅಧಿಕಾಂಶ ಜನರು ನಿರಾಕರಿಸುವಾಗ, ನಾವು ನಿರಾಶೆಗೊಳ್ಳುವುದಿಲ್ಲ. (2 ಕೊರಿಂ. 4:4) ಯೆಹೋವನು ಮಾನವರ ಹೃದಯವನ್ನು ಓದಬಲ್ಲವನಾಗಿರುವುದರಿಂದ, ತನ್ನ ಜನರ ಮಧ್ಯೆ ಅನೀತಿವಂತರು ಇರುವುದನ್ನು ಆತನು ಬಯಸುವುದಿಲ್ಲ.
5 ನಾವು ಯೆಹೋವನ ಮಾರ್ಗವನ್ನು ಅನುಸರಿಸಿ, ಆತ್ಮಿಕ ಬೆಳಕನ್ನು ಸಂತೋಷದಿಂದ ಅನುಭವಿಸಿ, ಇದನ್ನೇ ಬೇರೆಯವರಿಗೂ ಪ್ರತಿಬಿಂಬಿಸಬಹುದು. ನಮ್ಮ ನಡತೆಯ ಮೂಲಕವಾಗಿ, ನಾವು ‘ಜೀವಕೊಡುವ ಬೆಳಕನ್ನು ಹೊಂದಿದ್ದೇವೆಂದು’ ಅವರು ತಿಳಿದುಕೊಳ್ಳುವಲ್ಲಿ, ಬೆಳಕಿನ ವಾಹಕರಾಗಲು ಅವರು ಸಹ ತಮ್ಮ ಜೀವನದಲ್ಲಿ ಬದಲಾವಣೆಗಳನ್ನು ಮಾಡುವಂತೆ ಇದು ಅವರನ್ನು ಪ್ರಚೋದಿಸಬಹುದು.—ಯೋಹಾ. 8:12.
6 ನಮ್ಮ ಬೆಳಕನ್ನು ಪ್ರಕಾಶಿಸುವಂತೆ ಬಿಡುವ ಮೂಲಕ, ಸೃಷ್ಟಿಕರ್ತನಿಗೆ ಸ್ತುತಿಯನ್ನು ತರುತ್ತೇವೆ ಮತ್ತು ಪ್ರಾಮಾಣಿಕ ಜನರು ಆತನನ್ನು ತಿಳಿದುಕೊಂಡು, ನಿತ್ಯಜೀವದ ನಿರೀಕ್ಷೆಯನ್ನು ಪಡೆದುಕೊಳ್ಳುವಂತೆ ನಾವು ಸಹಾಯಮಾಡುತ್ತೇವೆ. (1 ಪೇತ್ರ 2:12) ನಾವು ಬೆಳಕನ್ನು ಹೊಂದಿದವರಾಗಿರುವುದರಿಂದ, ಬೇರೆಯವರು ಸಹ ಆತ್ಮಿಕ ಅಂಧಕಾರದಿಂದ ಹೊರಬರಲಿಕ್ಕಾಗಿ ಹಾಗೂ ಬೆಳಕಿನ ಕೃತ್ಯಗಳನ್ನು ಅಭ್ಯಾಸಿಸಲಿಕ್ಕಾಗಿ ಬೇಕಾದ ಸಹಾಯವನ್ನು ನೀಡೋಣ.