ಯಶಸ್ವಿಕರವಾದ ಟೆಲಿಫೋನ್ ಸಾಕ್ಷಿಕಾರ್ಯ
1 ಯೆಹೋವನ ಸಾಕ್ಷಿಗಳಾಗಿ ನಮ್ಮ ಗುರಿಯು ಕೇವಲ ಸುವಾರ್ತೆಯನ್ನು ಸಾರುವ ಕೆಲಸದಲ್ಲಿ ಭಾಗವಹಿಸುವುದು ಮಾತ್ರವೇ ಅಲ್ಲ ಬದಲಿಗೆ, ಸಾಧ್ಯವಾದಷ್ಟು ಹೆಚ್ಚಾಗಿ ಎಲ್ಲರಿಗೂ ರಾಜ್ಯದ ಸಂದೇಶವನ್ನು ತಲಪಿಸುವುದೂ ಆಗಿದೆ. (ಅ. ಕೃ. 10:42; 20:24, NW) ಜನರನ್ನು ಭೇಟಿಮಾಡುವುದರಲ್ಲಿ, ಮನೆಯಿಂದ ಮನೆಯ ಸಾಕ್ಷಿಕಾರ್ಯವು ಈಗಲೂ ಪ್ರಧಾನ ವಿಧಾನವಾಗಿದೆ. ಆದರೆ, ಈ ಕ್ರಮಬದ್ಧ ವಿಧಾನದ ಮೂಲಕವೂ ನಾವು ಎಲ್ಲರನ್ನೂ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ನಾವು ಗ್ರಹಿಸುತ್ತೇವೆ. ಆದುದರಿಂದ ‘ನಮ್ಮ ಶುಶ್ರೂಷೆಯನ್ನು ಪೂರ್ತಿಯಾಗಿ ನೆರವೇರಿಸಲು’ ನಾವು ಬೇರೆ ವಿಧಾನಗಳನ್ನೂ ಉಪಯೋಗಿಸುತ್ತೇವೆ. ಅದರಲ್ಲಿ ಟೆಲಿಫೋನ್ ಸಾಕ್ಷಿಕಾರ್ಯವು ಸೇರಿದೆ. ಇದರಿಂದ ಕುರಿಗಳಂತಹ ಜನರನ್ನು ಕಂಡುಕೊಳ್ಳಲು ಸಾಧ್ಯವಾಗುವುದು.—2 ತಿಮೊ. 4:5, NW.
2 ಹಲವಾರು ಸ್ಥಳಗಳಲ್ಲಿ ಜನರು ಹೆಚ್ಚು ಭದ್ರತೆಯಿರುವ ಅಪಾರ್ಟ್ಮೆಂಟ್ಗಳಲ್ಲಿ, ಅನೇಕ-ಕುಟುಂಬಗಳು ವಾಸಿಸುವ ಕಾಂಪ್ಲೆಕ್ಸ್ಗಳಲ್ಲಿ, ಇಲ್ಲವೇ ಪ್ರವೇಶದ್ವಾರಗಳಲ್ಲಿ ಭದ್ರತೆಯ ವ್ಯವಸ್ಥೆಯಿರುವ ಸಮುದಾಯಗಳಲ್ಲಿ ವಾಸಿಸುತ್ತಾರೆ. ಇಂಥವರನ್ನು ನಾವು ಯಾವಾಗಲೂ ಮಾಡುವ ಮನೆಯಿಂದ ಮನೆಯ ಸಾಕ್ಷಿಕಾರ್ಯದ ಮೂಲಕ ಭೇಟಿಯಾಗುವುದು ಕಷ್ಟಕರವಾಗಿದೆ. ನಾವು ಮನೆಯಿಂದ ಮನೆಯ ಸಾಕ್ಷಿಕಾರ್ಯ ಮಾಡಬಹುದಾದ ಟೆರಿಟೊರಿಗಳಲ್ಲೂ, ಅಧಿಕಾಂಶ ಜನರು ಮನೆಯಲ್ಲಿ ಸಿಗುವುದಿಲ್ಲ. ಆದರೆ ಟೆಲಿಫೋನ್ ಮೂಲಕ ಇಂಥವರನ್ನು ಸಂಪರ್ಕಿಸುವುದರಲ್ಲಿ ಅನೇಕ ಪ್ರಚಾರಕರು ತುಂಬ ಯಶಸ್ಸನ್ನು ಕಂಡುಕೊಂಡಿದ್ದಾರೆ. ಒಂದು ದಿನ ಬೆಳಗ್ಗೆ, ಮನೆಯಿಂದ ಮನೆಯ ಸಾಕ್ಷಿಕಾರ್ಯದಲ್ಲಿ ಒಳಗೂಡಿದ್ದ ಒಬ್ಬ ವಿವಾಹಿತ ದಂಪತಿಯು, ಒಂಬತ್ತು ಮನೆಗಳಲ್ಲಿ ಯಾರೂ ಇಲ್ಲದಿರುವುದನ್ನು ನೋಡಿ, ಆ ಮನೆಗಳ ವಿಳಾಸಗಳನ್ನು ಪಡೆದುಕೊಂಡರು. ರಾಜ್ಯ ಸಭಾಗೃಹಕ್ಕೆ ಹಿಂದಿರುಗಿದ ನಂತರ, ಟೆಲಿಫೋನ್ ನಂಬರ್ ಹಾಗೂ ವಿಳಾಸಗಳನ್ನು ಪಟ್ಟಿಮಾಡುವ ಒಂದು ಟೆಲಿಫೋನ್ ಡೈರಕ್ಟರಿಯಲ್ಲಿ ಇವುಗಳನ್ನು ಕಂಡುಕೊಂಡರು. ಈ ನಂಬರುಗಳನ್ನು ಡೈಯಲ್ ಮಾಡಿ ಆ ಒಂಬತ್ತು ಮನೆಗಳಲ್ಲಿ ಎಂಟು ಮನೆಯವರೊಂದಿಗೆ ಅವರು ಮಾತನಾಡಲು ಶಕ್ತರಾದರು!
3 ನಿಮ್ಮ ಶುಶ್ರೂಷೆಯಲ್ಲಿ, ಟೆಲಿಫೋನ್ ಸಾಕ್ಷಿಕಾರ್ಯವನ್ನು ಕೂಡಿಸಲು ನೀವು ಹಿಂಜರಿಯುತ್ತೀರೊ? “ಏನನ್ನಾದರೂ ಮಾರುವುದಕ್ಕೋಸ್ಕರ ನನ್ನ ಮನೆಗೆ ಫೋನ್ ಮಾಡುವುದು ನನಗೆ ಇಷ್ಟವಿಲ್ಲ. ಆದುದರಿಂದ, ಈ ರೀತಿಯ ಸಾಕ್ಷಿಕಾರ್ಯದಲ್ಲಿ ಒಳಗೂಡಲು ನನಗೆ ಮನಸ್ಸಿಲ್ಲ” ಎಂದು ಒಬ್ಬ ಸಹೋದರರು ಒಪ್ಪಿಕೊಳ್ಳುತ್ತಾರೆ. ಆದರೆ, ಕೇವಲ ಎರಡು ಫೋನ್ ಕರೆಗಳನ್ನು ಮಾಡಿದ ನಂತರ ಅವರು ಹೇಳಿದ್ದು: “ನಾನು ಅದನ್ನು ತುಂಬ ಇಷ್ಟಪಡುತ್ತೇನೆ! ಅದು ನನ್ನಿಂದ ಆಗುವುದು ಎಂದು ನಾನು ನೆನೆಸಿಯೇ ಇರಲಿಲ್ಲ. ಆದರೆ, ಈಗ ಅದನ್ನು ತುಂಬ ಇಷ್ಟಪಡುತ್ತೇನೆ! ಫೋನಿನಲ್ಲಿ ಜನರು ಆರಾಮವಾಗಿ ಮಾತಾಡುತ್ತಾರೆ ಮತ್ತು ನಿಮಗೆ ಬೇಕಾದದ್ದೆಲ್ಲ ನಿಮ್ಮ ಹತ್ತಿರದಲ್ಲೇ ಇರುತ್ತದೆ. ಇದು ನಿಜವಾಗಿಯೂ ತುಂಬ ಪರಿಣಾಮಕಾರಿಯಾಗಿದೆ!” ಒಬ್ಬ ಸಹೋದರಿಯು ಕೂಡ ಇದೇ ರೀತಿಯಲ್ಲಿ ಹೇಳಿದರು: “ಟೆಲಿಫೋನ್ ಸಾಕ್ಷಿಕಾರ್ಯದಲ್ಲಿ ನನಗೇನೂ ಅಷ್ಟು ಆಸಕ್ತಿಯಿರಲಿಲ್ಲ. ನಿಜ ಹೇಳಬೇಕಾದರೆ, ಅದನ್ನು ಮಾಡಲು ನಾನು ಬಯಸಲಿಲ್ಲ. ಆದರೆ ಅದನ್ನು ಒಮ್ಮೆ ಪ್ರಯೋಗಿಸಿ ನೋಡಿದೆ. ಅದು ತುಂಬ ಫಲದಾಯಕವಾಗಿದೆ ಎಂಬುದನ್ನು ಕಂಡುಕೊಂಡೆ. ಟೆಲಿಫೋನ್ ಸಾಕ್ಷಿಕಾರ್ಯದಿಂದಾಗಿ ನನಗೆ 37 ಪುನರ್ಭೇಟಿಗಳು ಸಿಕ್ಕಿವೆ ಮತ್ತು ನನ್ನಿಂದ ನಡೆಸಲಾಗದಷ್ಟು ಬೈಬಲ್ ಅಭ್ಯಾಸಗಳು ಸಿಕ್ಕಿವೆ!” ಟೆಲಿಫೋನ್ ಸಾಕ್ಷಿಕಾರ್ಯವನ್ನು ಪ್ರಯತ್ನಿಸಿನೋಡಲು ನಿಮಗೆ ಇಷ್ಟವಿರುವುದಾದರೆ ನೀವೂ ಯಶಸ್ವಿಕರವಾಗಬಲ್ಲಿರಿ.
4 ಟೆಲಿಫೋನ್ ಸಾಕ್ಷಿಕಾರ್ಯಕ್ಕೋಸ್ಕರ ಸುಸಂಘಟಿಸುವುದು: ಸಭೆಯ ಸಾಕ್ಷಿಕಾರ್ಯಕ್ಕೆ ಸಂಬಂಧಿಸಲ್ಪಟ್ಟ ಕೆಲಸವನ್ನು ಸೇವಾ ಮೇಲ್ವಿಚಾರಕನು ನೋಡಿಕೊಳ್ಳುತ್ತಾನೆ. ಟೆಲಿಫೋನ್ ಸಾಕ್ಷಿಕಾರ್ಯವನ್ನು ಸುಸಂಘಟಿಸುವುದರಲ್ಲಿ ಅವನೊಂದಿಗೆ ಕೆಲಸಮಾಡಲು, ಹಿರಿಯರ ಮಂಡಲಿಯು ಆವಶ್ಯಕತೆಗನುಸಾರ ಇನ್ನೊಬ್ಬ ಹಿರಿಯನನ್ನೋ ಅಥವಾ ಅರ್ಹತೆಪಡೆದ ಒಬ್ಬ ಶುಶ್ರೂಷಾ ಸೇವಕನನ್ನೋ ನೇಮಿಸಬಹುದು. ಟೆರಿಟೊರಿಯನ್ನು ನೋಡಿಕೊಳ್ಳುವ ಸಹೋದರನೂ ಇದರಲ್ಲಿ ಒಳಗೂಡಿರಬೇಕು. ಏಕೆಂದರೆ, ಅವನೇ ಟೆರಿಟೊರಿಯನ್ನು ನೇಮಿಸಬೇಕಾಗಿದೆ ಹಾಗೂ ಟೆರಿಟೊರಿಯ ಕುರಿತಾದ ಇತ್ತೀಚಿನ ವರೆಗಿನ ದಾಖಲೆಯನ್ನು ಇಟ್ಟುಕೊಳ್ಳಬೇಕಾಗಿದೆ. ಹಾಗೆಯೇ, ಸರ್ಕಿಟ್ ಮೇಲ್ವಿಚಾರಕನು ಕೂಡ ಈ ಸಾಕ್ಷಿಕಾರ್ಯದ ಅಭಿವೃದ್ಧಿಯ ಕುರಿತು ತಿಳಿದುಕೊಳ್ಳಲು ಆಸಕ್ತನಾಗಿರುವನು.
5 ನಿಮ್ಮ ಟೆರಿಟೊರಿಯಲ್ಲಿ ಮನೆಯಿಂದ ಮನೆಗೆ ಸಾಕ್ಷಿನೀಡಲು ಸಾಧ್ಯವಿಲ್ಲದ ಕ್ಷೇತ್ರಗಳಿದ್ದರೆ, ಅಂಥವುಗಳನ್ನು ಟೆಲಿಫೋನ್ ಟೆರಿಟೊರಿಗಳನ್ನಾಗಿ ಮಾರ್ಪಡಿಸಬೇಕು. ನೇಮಿಸಲ್ಪಟ್ಟ ಸಹೋದರನು ಹೀಗೆ ಮಾರ್ಪಡಿಸಲ್ಪಡಬೇಕಾದ ವಿಳಾಸಗಳ ಒಂದು ಪಟ್ಟಿಯನ್ನು ತುಂಬ ಗಮನಕೊಟ್ಟು ತಯಾರಿಸಿ ಇಂಥ ಟೆರಿಟೊರಿಗಳನ್ನು ಸಾಕಷ್ಟು ಸಣ್ಣದಾಗಿಟ್ಟುಕೊಳ್ಳಬೇಕು. ಹೀಗೆ ಮಾಡುವುದರಿಂದ, ಅಲ್ಲಿ ಕ್ರಮವಾಗಿ ಸೇವೆಮಾಡಲು ಸಾಧ್ಯವಾಗುವುದು. ಯಾವ ಟೆರಿಟೊರಿ ಮ್ಯಾಪ್ಗಳಲ್ಲಿ ಆ ಕ್ಷೇತ್ರಗಳಿವೆಯೊ ಅವುಗಳನ್ನು, ಟೆಲಿಫೋನ್ ಸಾಕ್ಷಿಕಾರ್ಯಕ್ಕಾಗಿ ನಿಯಮಿಸಲ್ಪಟ್ಟಿರುವ ಕ್ಷೇತ್ರಗಳೆಂದು ಒಂದು ಚಿಹ್ನೆಯೊಂದಿಗೆ ಗುರುತಿಸಿಡಬೇಕು.
6 ಟೆಲಿಫೋನ್ ನಂಬರುಗಳು ನಿಮಗೆ ಎಲ್ಲಿ ಸಿಗುವವು? ಹೆಸರುಗಳನ್ನು ಅಕ್ಷರಮಾಲೆಯ ಸಾಲಿನಲ್ಲಿ ಪಟ್ಟಿಮಾಡಿರುವ ಹಾಗೂ ಅದರ ಫೋನ್ ನಂಬರ್ ಜೊತೆಗೆ ಸಂಕ್ಷಿಪ್ತವಾದ ವಿಳಾಸವನ್ನು ಸೂಚಿಸುವಂಥ ಟೆಲಿಫೋನ್ ಡೈರಕ್ಟರಿಯಲ್ಲೇ. ಇದು ಟೆಲಿಫೋನ್ ಬೂತುಗಳಲ್ಲಿ ಲಭ್ಯವಿರುತ್ತದೆ. ಹೆಚ್ಚು ಭದ್ರತೆಯಿರುವ ಒಂದು ಕಾಂಪ್ಲೆಕ್ಸ್ಗೆ ತನ್ನದೇ ಆದ ಟೆಲಿಫೋನ್ ನಂಬರುಗಳ ಪಟ್ಟಿಯಿದ್ದರೆ ನೀವು ಅದರಿಂದ ನಂಬರುಗಳನ್ನು ಪಡೆದುಕೊಳ್ಳಬಹುದು. ಇಲ್ಲವಾದರೆ, ಕಟ್ಟಡದ ಪ್ರವೇಶದ್ವಾರದಲ್ಲಿ ಪಟ್ಟಿಮಾಡಲ್ಪಟ್ಟಿರುವ ನಿವಾಸಿಗಳ ಹೆಸರುಗಳನ್ನು ಬರೆದುಕೊಂಡು, ತದನಂತರ ಆ ಹೆಸರನ್ನು ಹೊಂದಿರುವವರ ಟೆಲಿಫೋನ್ ನಂಬರನ್ನು ಒಂದು ಸ್ಟ್ಯಾಂಡರ್ಡ್ ಟೆಲಿಫೋನ್ ಪುಸ್ತಕದಲ್ಲಿ ಹುಡುಕಬಹುದು.
7 ಹಿರಿಯರು ಈ ಸಾಕ್ಷಿಕಾರ್ಯದಲ್ಲಿ ಕ್ರಿಯಾಶೀಲ ಆಸಕ್ತಿಯನ್ನು ತೋರಿಸಬೇಕು. ಟೆಲಿಫೋನ್ ಸಾಕ್ಷಿಕಾರ್ಯದಲ್ಲಿ ಅನುಭವವುಳ್ಳವರು ಬೇರೆಯವರನ್ನು ತರಬೇತುಗೊಳಿಸುವಂತೆ ಏರ್ಪಡಿಸುವುದರ ಮೂಲಕ, ಬಹುಶಃ, ಪಯನೀಯರರು ಇತರರಿಗೆ ನೆರವು ನೀಡುತ್ತಾರೆ ಎಂಬ ಕಾರ್ಯಕ್ರಮದ ಮೂಲಕವೂ ಅವರು ಅದನ್ನು ಮಾಡಬಹುದು. ಆಗಿಂದಾಗ್ಗೆ, ಸೇವಾಕೂಟದ ಸ್ಥಳಿಕ ಅಗತ್ಯಗಳು ಎಂಬ ಭಾಗವನ್ನು ಸಾಕ್ಷಿಕಾರ್ಯದ ಈ ವೈಶಿಷ್ಟ್ಯದ ಯಶಸ್ಸನ್ನು ಹೆಚ್ಚಿಸುವುದಕ್ಕಾಗಿ ಬದಿಗಿಡಬಹುದು.
8 ಹಾಸಿಗೆ ಹಿಡಿದಿರುವವರನ್ನು ಅಥವಾ ಅಸ್ವಸ್ಥರಿಗೆ ಹಿರಿಯರು ಕುರಿಪಾಲನಾ ಭೇಟಿಗಳನ್ನು ಮಾಡುವಾಗ, ಇಂಥವರು ಟೆಲಿಫೋನ್ ಸಾಕ್ಷಿಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಲು ಮರೆಯಬಾರದು. ಪ್ರಾಯಶಃ, ಪ್ರಚಾರಕನು ಗಮನಿಸುತ್ತಿರುವಾಗ ಒಬ್ಬ ಹಿರಿಯನು ಫೋನಿನ ಮೂಲಕ ಕೆಲವು ಕರೆಗಳನ್ನು ಮಾಡಬಹುದು. ತದನಂತರ ಪ್ರಚಾರಕನು ಒಂದು ಕರೆಯನ್ನು ಮಾಡಬಹುದು. ಈ ರೀತಿಯಾಗಿ ಟೆಲಿಫೋನ್ ಸಾಕ್ಷಿಕಾರ್ಯವನ್ನು ಪ್ರಾರಂಭಿಸಿದ ಅನೇಕರು, ಪ್ರತಿದಿನ ಈ ಕಾರ್ಯದಲ್ಲಿ ಸ್ವಲ್ಪ ಸಮಯವನ್ನು ಕಳೆಯುತ್ತಾರೆ ಮತ್ತು ಅದನ್ನು ಅವರು ನಿಜವಾಗಿಯೂ ತುಂಬ ಆನಂದಿಸುತ್ತಾರೆ.
9 ಯಶಸ್ಸಿಗಾಗಿ ಸಲಹೆಗಳು: ಯೇಸು ತನ್ನ ಶಿಷ್ಯರನ್ನು ಸಾರುವುದಕ್ಕಾಗಿ ಕಳುಹಿಸಿದಾಗ ಅವರನ್ನು “ಇಬ್ಬಿಬ್ಬರಾಗಿ” ಕಳುಹಿಸಿದನು. (ಲೂಕ 10:1) ಏಕೆ? ಏಕೆಂದರೆ, ಅವರು ಒಟ್ಟಿಗೆ ಕೆಲಸ ಮಾಡುವಾಗ ಒಬ್ಬರಿಂದ ಒಬ್ಬರು ಕಲಿತುಕೊಳ್ಳಬಹುದು ಮತ್ತು ಒಬ್ಬರನ್ನೊಬ್ಬರು ಪ್ರೋತ್ಸಾಹಿಸಬಹುದು ಎಂಬುದನ್ನು ಯೇಸು ಅರಿತಿದ್ದನು. ಟೆಲಿಫೋನ್ ಸಾಕ್ಷಿಕಾರ್ಯದಲ್ಲೂ ಇದು ಸತ್ಯವಾಗಿದೆ. ಇಬ್ಬಿಬ್ಬರಾಗಿ ಕೆಲಸ ಮಾಡುವುದರಿಂದ ನೀವು ಒಬ್ಬರಿಂದ ಒಬ್ಬರು ಕಲಿಯಬಹುದು, ಫಲಿತಾಂಶಗಳ ಕುರಿತು ಚರ್ಚಿಸಬಹುದು ಮತ್ತು ಮುಂದಿನ ಸಂಭಾಷಣೆಗೆ ಬೇಕಾದ ಸಲಹೆಗಳನ್ನು ನೀಡಬಹುದು. ಟೆಲಿಫೋನಿನಲ್ಲಿ ಸಾಕ್ಷಿನೀಡುತ್ತಿರುವಾಗಲೂ ಬೇಕಾಗುವಂಥ ಮಾಹಿತಿಯನ್ನು ಕಂಡುಹಿಡಿಯಲು ನೀವು ಒಬ್ಬರಿಗೊಬ್ಬರು ಸಹಾಯ ಮಾಡಬಹುದು.
10 ನಿಮ್ಮ ಸಾಕ್ಷಿಕಾರ್ಯದ ಸಾಮಗ್ರಿಗಳಾದ ಬೈಬಲ್, ರೀಸನಿಂಗ್ ಪುಸ್ತಕ, ಅಪೇಕ್ಷಿಸು ಬ್ರೋಷರ್, ಪತ್ರಿಕೆಗಳು ಮುಂತಾದವುಗಳನ್ನು ನಿಮ್ಮ ಮುಂದೆಯೇ ಇಟ್ಟುಕೊಳ್ಳಲು ಸಾಧ್ಯವಾಗುವ ಸ್ಥಳದಲ್ಲಿ ಕೂತುಕೊಳ್ಳಿ. ಇದು ನಿಮಗೆ ಸ್ಪಷ್ಟವಾಗಿ ಆಲೋಚಿಸಲು ಹಾಗೂ ನಿಮ್ಮ ಗಮನವನ್ನು ಕೇಂದ್ರೀಕರಿಸಲು ಸಹಾಯ ಮಾಡುವುದು. ಕೆಲವು ನಿರೂಪಣೆಗಳನ್ನು ಬರೆದಿಡಿ ಮತ್ತು ಅವುಗಳನ್ನು ನೀವು ನೋಡಶಕ್ತವಾಗುವ ಸ್ಥಳದಲ್ಲಿಟ್ಟುಕೊಳ್ಳಿ. ಸರಿಯಾದ ಹಾಗೂ ಸಂಪೂರ್ಣವಾದ ದಾಖಲೆಗಳನ್ನು ಇಟ್ಟುಕೊಳ್ಳಿ. ಅದರಲ್ಲಿ ನೀವು ಸಂಪರ್ಕ ಮಾಡಿದ ದಿನಾಂಕ ಹಾಗೂ ಸಮಯವನ್ನೂ ಒಳಗೂಡಿಸಿ. ಹೀಗೆ ಮಾಡುವುದರಿಂದ, ಕಂಡುಕೊಂಡ ಆಸಕ್ತಿಯನ್ನು ನೀವು ಯಾವಾಗ ಪುನಃ ಮುಂದುವರಿಸಿಕೊಂಡು ಹೋಗಬೇಕೆಂಬುದು ನಿಮಗೆ ತಿಳಿದಿರುವುದು.
11 ಫೋನಿನಲ್ಲಿ ಒಂದು ಅಪರಿಚಿತ ಧ್ವನಿಯನ್ನು ಕೇಳುವಾಗ ಅನೇಕವೇಳೆ ಜನರು ಜಾಗ್ರತೆವಹಿಸುತ್ತಾರೆ. ಆದುದರಿಂದ ಆದರಣೆಯಿಂದ, ಸ್ನೇಹಭಾವದಿಂದ ಹಾಗೂ ಜಾಣ್ಮೆಯಿಂದ ಮಾತಾಡಿ. ಮನೆಯವರಿಗೆ, ನಿಮ್ಮ ಸ್ವಭಾವ ಹಾಗೂ ಪ್ರಾಮಾಣಿಕತೆಯನ್ನು ನಿರ್ಧರಿಸಲು ನಿಮ್ಮ ಧ್ವನಿಯನ್ನು ಬಿಟ್ಟರೆ ಬೇರೆ ಆಧಾರವಿಲ್ಲ. ನಿರಾಳವಾಗಿ ಹಾಗೂ ಹೃತ್ಪೂರ್ವಕವಾಗಿ ಮಾತನಾಡಿ. ನಿಮ್ಮ ಮಾತು ನಿಧಾನವಾಗಿಯೂ ಸ್ಪಷ್ಟವಾಗಿಯೂ ಇದ್ದು, ಕೇಳಿಸುವಂತೆ ಇರಲಿ. ಮನೆಯವರಿಗೆ ಮಾತಾಡಲು ಅವಕಾಶಕೊಡಿ. ನಿಮ್ಮ ಪೂರ್ಣ ಹೆಸರನ್ನು ಮತ್ತು ನೀವು ಅದೇ ಕ್ಷೇತ್ರದಲ್ಲಿ ಜೀವಿಸುತ್ತೀರೆಂಬುದನ್ನು ಹೇಳಿ. ನಾವು ಟೆಲಿ-ಮಾರಾಟಗಾರರಾಗಿದ್ದೇವೆಂದು ಜನರು ನೆನಸಬಾರದು. ಆ ನಿರ್ದಿಷ್ಟ ಕಟ್ಟಡದಲ್ಲಿ ಅಥವಾ ಕಾಂಪ್ಲೆಕ್ಸಿನಲ್ಲಿ ವಾಸಿಸುತ್ತಿರುವವರೆಲ್ಲರನ್ನೂ ಸಂಪರ್ಕಿಸುತ್ತಿದ್ದೇನೆ ಎಂದು ಹೇಳುವ ಬದಲು, ನೀವು ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೀರೆಂದಷ್ಟೇ ಹೇಳಿ.
12 ಟೆಲಿಫೋನ್ ನಿರೂಪಣೆಗಳು: ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಎಂಬ ಪುಸ್ತಿಕೆಯ 2-7ನೆಯ ಪುಟಗಳಲ್ಲಿ ಕೊಡಲ್ಪಟ್ಟಿರುವಂಥ ಪೀಠಿಕೆಗಳನ್ನು ಟೆಲಿಫೋನ್ ಸಾಕ್ಷಿಕಾರ್ಯಕ್ಕಾಗಿ ಬೇಕಾದಂತೆ ಅನ್ವಯಿಸಬಹುದು. ನೀವು ಹೀಗೆ ಹೇಳಬಹುದು: “ನಿಮ್ಮನ್ನು ವ್ಯಕ್ತಿಗತವಾಗಿ ಬಂದು ಭೇಟಿಮಾಡಲು ಸಾಧ್ಯವಾಗದ ಕಾರಣ ಫೋನಿನ ಮೂಲಕ ನಿಮ್ಮನ್ನು ಸಂಪರ್ಕಿಸುತ್ತಿದ್ದೇನೆ. ಒಂದು ಆಸಕ್ತಿಕರವಾದ ಪ್ರಶ್ನೆಯ ಕುರಿತು ನಿಮ್ಮ ಅಭಿಪ್ರಾಯವೇನೆಂಬುದನ್ನು ಕೇಳಲು ನಾನು ನಿಮ್ಮನ್ನು ಸಂಪರ್ಕಿಸಿದೆ.” ತದನಂತರ ಪ್ರಶ್ನೆಯನ್ನು ಕೇಳಿ.
13 “ಪಾತಕ/ಸುರಕ್ಷೆ” ಎಂಬ ಶೀರ್ಷಿಕೆಯ ಕೆಳಗೆ ಕಂಡುಬರುವ ನಿರೂಪಣೆಯನ್ನು ಹೀಗೆ ಉಪಯೋಗಿಸಬಹುದು: “ನಮಸ್ಕಾರ. ನನ್ನ ಹೆಸರು _____. ನಾನು ಇದೇ ಕ್ಷೇತ್ರದಲ್ಲಿ ವಾಸಿಸುತ್ತೇನೆ. ನಾನು ಯಾವುದೇ ವಸ್ತುವಿನ ಮಾರಾಟಮಾಡುತ್ತಿಲ್ಲ ಅಥವಾ ಸರ್ವೆಯನ್ನು ಮಾಡುತ್ತಿಲ್ಲ. ವ್ಯಕ್ತಿಪರ ಸುರಕ್ಷೆಯ ವಿಷಯದ ಕುರಿತು ನಾನು ಚಿಂತಿಸುತ್ತಿರುವುದರಿಂದ ನಿಮ್ಮನ್ನು ಸಂಪರ್ಕಿಸುತ್ತಿದ್ದೇನೆ. ನಮ್ಮ ಸುತ್ತಮುತ್ತ ಬಹಳಷ್ಟು ಪಾತಕವು ಇದೆ, ಮತ್ತು ಅದು ನಮ್ಮ ಜೀವಿತಗಳನ್ನು ಪ್ರಭಾವಿಸುತ್ತದೆ. ನಿಮ್ಮಂಥ ಮತ್ತು ನನ್ನಂಥ ಜನರು ರಾತ್ರಿ ವೇಳೆಯಲ್ಲಿ ದಾರಿನಡಿಯಲು ಮತ್ತು ಸುರಕ್ಷೆಯ ಭಾವದಿಂದಿರಲು ಶಕ್ತರಾಗುವ ಒಂದು ಸಮಯವು ಬರಲಿದೆಯೆಂದು ನೀವೆಣಿಸುತ್ತೀರೋ? [ಅವರು ಉತ್ತರಿಸಲು ಸಮಯ ಕೊಡಿ.] ಇದರ ಕುರಿತು ದೇವರು ಏನನ್ನು ಮಾಡಲು ವಾಗ್ದಾನಿಸಿದ್ದಾನೆಂಬುದನ್ನು ನಾನು ನಿಮಗೆ ಓದಿಹೇಳುತ್ತೇನೆ.”
14 ಫೋನಿನಲ್ಲಿ, ಬೈಬಲ್ ಅಭ್ಯಾಸಗಳ ಕುರಿತಾದ ನೇರವಾದ ಪ್ರಸ್ತಾವವನ್ನು ಮಾಡುವುದು ಕೂಡ ಒಳ್ಳೆಯ ಫಲಿತಾಂಶಗಳನ್ನು ತಂದಿದೆ. ಅಭ್ಯಾಸವನ್ನು ಹೇಗೆ ಮಾಡಲಾಗುತ್ತದೆಂಬುದನ್ನು ಕೆಲವೇ ನಿಮಿಷಗಳಲ್ಲಿ ಪ್ರತ್ಯಕ್ಷಾಭಿನಯಿಸಬಹುದು. ಆ ವ್ಯಕ್ತಿಯನ್ನು ಭೇಟಿಯಾಗಿ ಅಭ್ಯಾಸವನ್ನು ಅವನ ಮನೆಯಲ್ಲಿಯೇ ಮುಂದುವರಿಸಲು ಸಿದ್ಧರಿದ್ದೀರೆಂದು ಹೇಳಿರಿ ಅಥವಾ ಆ ವ್ಯಕ್ತಿ ಸ್ವಲ್ಪ ಹಿಂಜರಿಯುತ್ತಿರುವಲ್ಲಿ, ಅಭ್ಯಾಸವನ್ನು ಬೇರೊಂದು ದಿನ ಫೋನಿನಲ್ಲೇ ನಡೆಸಲು ಸಿದ್ಧರಿದ್ದೀರೆಂದು ಹೇಳಿರಿ.
15 ಒಂದು ಸಂಭಾಷಣೆಯನ್ನು ಕೊನೆಗೊಳಿಸುವಾಗ, ಆ ವ್ಯಕ್ತಿಯನ್ನು ಅವನ ಮನೆಯಲ್ಲಿ ಭೇಟಿಯಾಗುವಂತೆ ಅಥವಾ ಒಂದು ಪ್ರಕಾಶನವನ್ನು ಅಂಚೆಯ ಮೂಲಕವಾಗಿ ಕಳುಹಿಸಿಕೊಡುವಂತೆ ನಡೆಸುವ ಯಾವುದಾದರೊಂದು ವಿಷಯವನ್ನು ತಿಳಿಸಿರಿ. ಒಂದುವೇಳೆ ಆ ವ್ಯಕ್ತಿ ತನ್ನ ವಿಳಾಸವನ್ನು ಕೊಡಲು ಹಿಂಜರಿಯುವುದಾದರೆ, ನೀವು ತಿರುಗಿ ಫೋನ್ ಮೂಲಕವೇ ಮಾತಾಡುವಿರೆಂದು ಹೇಳಿರಿ. ಅವರು ನಿಮ್ಮನ್ನು ತಮ್ಮ ಮನೆಗೆ ನಿರಾತಂಕವಾಗಿ ಆಮಂತ್ರಿಸುವ ಹಂತವನ್ನು ತಲಪಲು, ನೀವು ಹಲವಾರು ಸಾರಿ ಫೋನಿನ ಮೂಲಕ ಅವರನ್ನು ಸಂಪರ್ಕಿಸಬೇಕಾಗಬಹುದು.
16 ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳುವುದು: 15 ವರ್ಷ ಪ್ರಾಯದವಳಾದ ಸಹೋದರಿಯೊಬ್ಬಳು ತನ್ನ ಬೆಳಗ್ಗಿನ ಸೇವೆಯನ್ನು ಒಂದು ಫೋನ್ ಕರೆಯನ್ನು ಮಾಡುವ ಮೂಲಕ ಪ್ರಾರಂಭಿಸಿದಳು. ಒಬ್ಬ ಮಹಿಳೆಯೊಂದಿಗೆ ಮಾತಾಡಿದಾಗ ಆ ಮಹಿಳೆಯು ಜ್ಞಾನ ಪುಸ್ತಕದ ಒಂದು ಪ್ರತಿಯನ್ನು ಸ್ವೀಕರಿಸಲು ಒಪ್ಪಿಕೊಂಡಳು. ಸಹೋದರಿಯು ಪುಸ್ತಕವನ್ನು ಆ ಮಹಿಳೆಯ ಮನೆಗೆ ಹೋಗಿ ಕೊಟ್ಟಾಗ, ತನ್ನ ಫೋನ್ ನಂಬರ್ ಟೆಲಿಫೋನ್ ಡೈರಕ್ಟರಿಯಲ್ಲಿ ಇಲ್ಲದಿರುವುದರಿಂದ ತನ್ನನ್ನು ಸಂಪರ್ಕಿಸಲು ಹೇಗೆ ಸಾಧ್ಯವಾಯಿತು ಎಂದು ಆ ಸಹೋದರಿಗೆ ಕೇಳಿದಳು. ಸಹೋದರಿಯು ಆ ನಂಬರನ್ನು ಗೊತ್ತಿಲ್ಲದೆ ತಪ್ಪಾಗಿ ಡೈಯಲ್ ಮಾಡಿದ್ದಳು! ಆ ಮಹಿಳೆಯು ಅಭ್ಯಾಸವನ್ನು ಮಾಡಲು ಒಪ್ಪಿಕೊಂಡಳು ಮತ್ತು ಈಗ ಅವಳು ಒಬ್ಬ ಅಸ್ನಾನಿತ ಪ್ರಚಾರಕಳಾಗಿದ್ದಾಳೆ.
17 ಒಬ್ಬ ಸಹೋದರಿ ಒಂದು ಟೆಲಿಫೋನ್ ಟೆರಿಟೊರಿಯನ್ನು ಪಡೆದುಕೊಂಡಳು. ಆದರೆ ಭಯದಿಂದಾಗಿ ಅವಳು ಮೂರು ವಾರ ಆ ಕ್ಷೇತ್ರದಲ್ಲಿ ಟೆಲಿಫೋನ್ ಸಾಕ್ಷಿಕಾರ್ಯವನ್ನು ಆರಂಭಿಸಲಿಲ್ಲ. ಅವಳಿಗೆ ಬೇಕಾದ ಧೈರ್ಯ ಹೇಗೆ ಸಿಕ್ಕಿತು? 1997, ಜನವರಿ 22ರ ಎಚ್ಚರ! (ಇಂಗ್ಲಿಷ್) ಪತ್ರಿಕೆಯಲ್ಲಿ “ನಾನು ಯಾವಾಗ ನಿರ್ಬಲನಾಗಿದ್ದೇನೋ, ಆವಾಗಲೇ ಬಲವುಳ್ಳವನಾಗಿದ್ದೇನೆ” ಎಂಬ ಲೇಖನವನ್ನು ಅವಳು ಜ್ಞಾಪಿಸಿಕೊಂಡಳು. ಶಾರೀರಿಕ ದೌರ್ಬಲ್ಯಗಳಿದ್ದರೂ, ಟೆಲಿಫೋನ್ ಮೂಲಕ ಸಾರುತ್ತಿರುವ ಒಬ್ಬ ಸಾಕ್ಷಿಯ ಬಗ್ಗೆ ಅದರಲ್ಲಿ ಕೊಡಲ್ಪಟ್ಟಿತ್ತು. ಆ ಸಹೋದರಿ ಹೇಳಿದ್ದು: “ನಾನು ಯೆಹೋವನ ಬಳಿ ಬಲಕ್ಕಾಗಿ ಪ್ರಾರ್ಥಿಸಿದೆ. ನನ್ನ ನಿರೂಪಣೆಯಲ್ಲಿ ಉಪಯೋಗಿಸಲಿಕ್ಕಾಗಿ ನನಗೆ ಸೂಕ್ತವಾದ ಶಬ್ದಗಳನ್ನು ಕೊಡುವಂತೆ ನಾನು ಆತನಲ್ಲಿ ಬೇಡಿಕೊಂಡೆ.” ಅವಳು ಟೆಲಿಫೋನ್ ಸಾಕ್ಷಿಕಾರ್ಯದಲ್ಲಿ ಒಳಗೂಡಿದ ಮೊದಲ ದಿನದ ಫಲಿತಾಂಶವೇನಾಗಿತ್ತು? ಅವಳು ತಿಳಿಸುವುದು: “ಯೆಹೋವನು ನನ್ನ ಪ್ರಾರ್ಥನೆಗೆ ಉತ್ತರಕೊಟ್ಟನು. ಜನರು ನನಗೆ ಕಿವಿಗೊಟ್ಟರು ಮತ್ತು ಅವರೊಂದಿಗೆ ನಾನು ಒಂದು ಪುನರ್ಭೇಟಿಗಾಗಿ ಏರ್ಪಾಡು ಮಾಡಿದೆ.” ತರುವಾಯ ಅವಳ ಟೆಲಿಫೋನ್ ಸಾಕ್ಷಿಕಾರ್ಯದಿಂದಾಗಿ ಅವಳಿಗೆ ಒಂದು ಬೈಬಲ್ ಅಭ್ಯಾಸವು ಸಿಕ್ಕಿತು. ಅವಳು ಕೊನೆಗೊಳಿಸುವುದು: “ನನ್ನಲ್ಲಿಯೇ ಭರವಸೆಯಿಡುವ ಬದಲು ಅವನಲ್ಲಿ ಭರವಸೆಯಿಡಲು ಯೆಹೋವನು ನನಗೆ ಇನ್ನೊಮ್ಮೆ ಕಲಿಸಿದ್ದಾನೆ.”—ಜ್ಞಾನೋ. 3:5.
18 ಸತ್ಯವನ್ನು ಟೆಲಿಫೋನಿನ ಮೂಲಕ ಪ್ರಸ್ತುತಪಡಿಸುವುದು, ಸುವಾರ್ತೆಯನ್ನು ಸಾರುವ ಯಶಸ್ವಿಕರವಾದ ವಿಧಾನವಾಗಿ ಪರಿಣಮಿಸಿದೆ. ಚೆನ್ನಾಗಿ ತಯಾರಿಸಿ, ಮನಃಪೂರ್ವಕವಾಗಿ ಭಾಗವಹಿಸಿರಿ. ಮೊದಲ ಕೆಲವು ಪ್ರಯತ್ನಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಗದಿದ್ದರೆ ನಿರಾಶರಾಗಬೇಡಿ. ಯೆಹೋವನ ಮಾರ್ಗದರ್ಶನೆಗಾಗಿ ಪ್ರಾರ್ಥಿಸಿರಿ. ಈ ರೀತಿಯ ಸಾಕ್ಷಿಕಾರ್ಯದಲ್ಲಿ ಒಳಗೂಡಿರುವ ಇತರರೊಂದಿಗೆ ನಿಮ್ಮ ಅಭಿಪ್ರಾಯಗಳನ್ನು, ಅನುಭವಗಳನ್ನು ಪರಸ್ಪರ ವಿನಿಮಯಮಾಡಿರಿ. ನಮ್ಮ ಟೆರಿಟೊರಿಯಲ್ಲಿರುವ ಯಾರನ್ನೂ ತಪ್ಪಿಸಿಕೊಳ್ಳಬಾರದೆಂಬ ಇಚ್ಛೆಯೊಂದಿಗೆ ನಮ್ಮ ಶುಶ್ರೂಷೆಯನ್ನು ತುರ್ತುಭಾವದಿಂದ ಸಂಪೂರ್ಣವಾಗಿ ಪೂರೈಸೋಣ.—ರೋಮಾ. 10:13, 14.