ನೀವು ನಿಮ್ಮನ್ನೇ ನೀಡಿಕೊಳ್ಳಲು ಸಾಧ್ಯವಿದೆಯೋ?
1 ಸಾ.ಶ.ಪೂ. 778ರಲ್ಲಿ ಒಂದು ಅಸಾಧಾರಣವಾದ ಘಟನೆಯು ಸಂಭವಿಸುತ್ತದೆ. ಪ್ರವಾದಿಯಾದ ಯೆಶಾಯನು ದರ್ಶನದಲ್ಲಿ, “ಕರ್ತನು [“ಯೆಹೋವನು,” NW] ಉನ್ನತೋನ್ನತ ಸಿಂಹಾಸನಾರೂಢನಾಗಿರುವದನ್ನು” ಕಾಣುತ್ತಾನೆ. ಆಗ, ಸೆರಾಫಿಯರು ಯೆಹೋವನ ಮಹಿಮೆಯ ಕಡೆಗೆ ಗಮನಸೆಳೆಯುತ್ತಾ “ಸೇನಾಧೀಶ್ವರನಾದ ಯೆಹೋವನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು” ಎಂದು ಕೂಗುತ್ತಿರುವುದನ್ನು ಯೆಶಾಯನು ಕೇಳಿಸಿಕೊಳ್ಳುತ್ತಾನೆ. ಅದೆಷ್ಟು ವಿಸ್ಮಯಗೊಳಿಸುವ ದೃಶ್ಯವಾಗಿದ್ದಿರಬಹುದು! ಆ ಸನ್ನಿವೇಶದಲ್ಲಿ, ಯೆಹೋವನು ಒಂದು ಪಂಥಾಹ್ವಾನದಾಯಕ ಪ್ರಶ್ನೆಯನ್ನು ಮುಂದಿಡುತ್ತಾನೆ: “ಯಾವನನ್ನು ಕಳುಹಿಸಲಿ, ಯಾವನು ನಮಗೋಸ್ಕರ ಹೋಗುವನು”? ನೇಮಕವು ಯಾವ ರೀತಿಯದ್ದಾಗಿರುವುದು ಅಥವಾ ತನ್ನನ್ನೇ ನೀಡಿಕೊಳ್ಳುವ ವ್ಯಕ್ತಿ ಅದರಿಂದ ಲಾಭ ಪಡೆಯುವನೋ ಎಂಬ ವಿಷಯದಲ್ಲಿ ಯಾವುದೇ ವಿವರಣೆಯು ಒದಗಿಸಲ್ಪಡಲಿಲ್ಲ. ಆದರೂ, ಕೊಂಚವೂ ಹಿಂಜರಿಯದೆ ಯೆಶಾಯನು ಪ್ರತಿಕ್ರಿಯಿಸುವುದು: “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು.”—ಯೆಶಾ. 6:1, 3, 8.
2 ಯೆಹೋವನು ಕೇಳುವಂಥ ಯಾವುದೇ ವಿಷಯವನ್ನು ಮಾಡುವ ಈ ಸಿದ್ಧಮನಸ್ಸು ಆತನ ಜನರ ವಿಶೇಷ ಗುಣಲಕ್ಷಣವಾಗಿದೆ. (ಕೀರ್ತ. 110:3) ಮತ್ತು ಈಗ, ತಮ್ಮನ್ನೇ ನೀಡಿಕೊಳ್ಳಲು ಸಾಧ್ಯವಿರುವವರಿಗಾಗಿ ಒಂದು ವಿಶೇಷ ಆಮಂತ್ರಣವು ಕೊಡಲ್ಪಡುತ್ತದೆ. ಯೆಶಾಯನಂತೆ ಸಿದ್ಧಮನಸ್ಸಿನಿಂದ ಪ್ರತಿಕ್ರಿಯಿಸಲು ನೀವು ಸಿದ್ಧವಾಗಿದ್ದೀರೋ?
3 ಬೆತೆಲ್ನಲ್ಲಿ ಸೇವೆಸಲ್ಲಿಸಲಿಕ್ಕಾಗಿ ಸದ್ಯಕ್ಕೆ ಸಹೋದರರ ಅಗತ್ಯವಿದೆ. ಇದು ಅವರಿಂದ, ರಾಜ್ಯದ ಅಭಿರುಚಿಗಳನ್ನು ಪ್ರಥಮವಾಗಿಡುವ ಕಡುಬಯಕೆ ಮತ್ತು ಲೋಕವ್ಯಾಪಕ ಸಾರುವ ಕೆಲಸವನ್ನು ಬೆಂಬಲಿಸಲಿಕ್ಕಾಗಿ ಆವಶ್ಯಪಡಿಸಲ್ಪಡುವ ಯಾವುದೇ ಕೆಲಸವನ್ನು ಮಾಡುವ ಸಿದ್ಧಮನಸ್ಸನ್ನು ಅವಶ್ಯಪಡಿಸುತ್ತದೆ. (ಮತ್ತಾ. 6:33) ವಾಸ್ತವದಲ್ಲಿ, ಬೆತೆಲ್ ಕುಟುಂಬದ ಒಬ್ಬ ಸದಸ್ಯನಾಗಿ ಸೇವೆಸಲ್ಲಿಸುವುದು, ಪೂರ್ಣಪ್ರಾಣದಿಂದ ಯೆಹೋವನಿಗೆ ಸೇವೆಸಲ್ಲಿಸಲು ಒಂದು ಅದ್ವಿತೀಯ ಅವಕಾಶವನ್ನು ಒದಗಿಸಿಕೊಡುತ್ತದೆ. ಅದು ಹೇಗೆ?
4 ಬೆತೆಲ್ನಲ್ಲಿ ನಡೆಸಲ್ಪಡುವ ಕೆಲಸ: ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ ಸ್ಥಾಪಿಸಲ್ಪಟ್ಟಿರುವ ಬೆತೆಲ್ ಸೌಕರ್ಯದಲ್ಲಿ ಕ್ರಮವಾಗಿ ಸಾಧಿಸಲ್ಪಡುವ ಸಕಲ ವಿಷಯಗಳ ಕುರಿತಾಗಿ ಯೋಚಿಸಿರಿ. ಈಗ ಬೆತೆಲ್ ಕುಟುಂಬದ ಸದಸ್ಯರಾಗಿರುವ 220 ಮಂದಿ ಸಹೋದರ ಸಹೋದರಿಯರು, ಲೋಕವ್ಯಾಪಕ ಕ್ಷೇತ್ರದಲ್ಲಿ ಮತ್ತು ವೈಯಕ್ತಿಕ ಅಧ್ಯಯನದಲ್ಲಿ ಉಪಯೋಗಿಸಲ್ಪಡುವ ಬೈಬಲ್ ಸಾಹಿತ್ಯದ ಉತ್ಪಾದನೆಯಲ್ಲಿ ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗವನ್ನು ಮತ್ತು ಅದರ ಆಡಳಿತ ಮಂಡಲಿಯನ್ನು ಬೆಂಬಲಿಸುವುದರಲ್ಲಿ ನೇರವಾಗಿ ಒಳಗೂಡಿರುವ ಸುಯೋಗವುಳ್ಳವರಾಗಿದ್ದಾರೆ. (ಮತ್ತಾ. 24:45) ಉದಾಹರಣೆಗೆ, ಕಳೆದ ಸೇವಾ ವರ್ಷದಲ್ಲಿ ಬೆಂಗಳೂರು ಬೆತೆಲ್ ಕುಟುಂಬದ ಒಟ್ಟುಗೂಡಿಸಲ್ಪಟ್ಟ ಪ್ರಯತ್ನದ ಫಲವಾಗಿ, 75,207 ಪುಸ್ತಕಗಳು, 2,63,784 ಪುಸ್ತಿಕೆಗಳು ಮತ್ತು ಬ್ರೋಷರ್ಗಳು, 15,665 ಕ್ಯಾಲೆಂಡರ್ಗಳು, 20,20,021 ಪತ್ರಿಕೆಗಳು, 33,39,239 ಕಿರುಹೊತ್ತಗೆಗಳು, ಮತ್ತು 1,033 ವಿಡಿಯೋಕ್ಯಾಸೆಟ್ಗಳು ಉತ್ಪಾದಿಸಲ್ಪಟ್ಟು ರವಾನಿಸಲ್ಪಟ್ಟವು. ಈ ಪ್ರಕಾಶನಗಳಿಗಾಗಿ ‘ಸರಿಯಾದ ಪದಗಳನ್ನು ಕಂಡುಹಿಡಿದು, ಸತ್ಯವೂ ಭರವಸೆಗೆ ಯೋಗ್ಯವೂ ಆದ ಉಪದೇಶಗಳನ್ನು’ ಸಂಶೋಧನೆ ಮಾಡಿ ಆರಿಸಿಕೊಳ್ಳುವುದರಲ್ಲಿ ಬಹಳಷ್ಟು ಪ್ರಯಾಸವನ್ನು ಮಾಡಲಾಗುತ್ತದೆ. (ಪ್ರಸಂ. 12:9, 10, ಪರಿಶುದ್ಧ ಬೈಬಲ್) ಮತ್ತು ಸಾಹಿತ್ಯವನ್ನು 25ಕ್ಕಿಂತಲೂ ಹೆಚ್ಚಿನ ಭಾಷೆಗಳಲ್ಲಿ ಉತ್ಪಾದಿಸಲು ಸಹಾಯಮಾಡುವ ಸುಮಾರು 70 ಭಾಷಾಂತರಕಾರರಿಗೆ ನಿರ್ದೇಶನವೂ ಒದಗಿಸಲ್ಪಡುತ್ತದೆ. ಮುದ್ರಣ ಹಾಗೂ ಸಾಹಿತ್ಯದ ರವಾನಿಸುವಿಕೆ, ಶುಚಿಗೊಳಿಸುವಿಕೆ, ದುರಸ್ಥಿಯಲ್ಲಿಡುವಿಕೆ, ಊಟದ ತಯಾರಿ, ಖರೀದಿಮಾಡುವಿಕೆ, ಆರೋಗ್ಯ ಆರೈಕೆ, ಮತ್ತು ಬೆತೆಲ್ನ ಇತರ ಅನೇಕ ಕಾರ್ಯಗಳನ್ನು ನೋಡಿಕೊಳ್ಳುವುದಕ್ಕಾಗಿ ಅನೇಕ ಸ್ವಯಂಸೇವಕರ ಅಗತ್ಯವಿದೆ.
5 ಇದೆಲ್ಲವನ್ನು ಸಾಧಿಸುವುದು ಬೃಹತ್ತಾದ ಆದರೂ ಆತ್ಮಿಕವಾಗಿ ತೃಪ್ತಿನೀಡುವ ಕೆಲಸವನ್ನು ನಮ್ಮ ಮುಂದೆ ಇಡುತ್ತದೆ. ನಮ್ಮ ಎಲ್ಲಾ ಶಕ್ತಿ ಸಾಮರ್ಥ್ಯವು ಸಾರುವ ಮತ್ತು ಕಲಿಸುವ ಚಟುವಟಿಕೆಯನ್ನು ಬೆಂಬಲಿಸಲಿಕ್ಕಾಗಿ ಉಪಯೋಗಿಸಲ್ಪಡುತ್ತದೆ ಎಂಬುದನ್ನು ತಿಳಿದಿರುವುದು ಬಹಳಷ್ಟು ಆನಂದವನ್ನು ತರುತ್ತದೆ. ಬೆತೆಲ್ ಸೇವೆಯು ಯೆಹೋವನ ಸಂಸ್ಥೆಯನ್ನು ಹೆಚ್ಚು ಸೂಕ್ಷ್ಮವಾಗಿ ತಿಳಿದುಕೊಳ್ಳಲು ನಮಗೆ ಸಹಾಯಮಾಡುತ್ತದೆ. ಇಸ್ರಾಯೇಲ್ಯರು ತಮ್ಮ ದಿನದ ದೇವಪ್ರಭುತ್ವಾತ್ಮಕ ಆಡಳಿತದ ಭೂಕೇಂದ್ರವನ್ನು ಹೆಚ್ಚು ಉತ್ತಮವಾಗಿ ಅರಿತುಕೊಳ್ಳುವಂತೆ ಕೀರ್ತನೆಗಾರನು ಪ್ರೋತ್ಸಾಹಿಸಿದ್ದು ನಮ್ಮ ನೆನಪಿಗೆ ಬರುತ್ತದೆ.—ಕೀರ್ತ. 48:12, 13.
6 ಬೆತೆಲ್ ಸೇವೆಯಿಂದ ಬರುವ ಆಶೀರ್ವಾದಗಳು: ಬೆತೆಲ್ನಲ್ಲಿ ಸೇವೆಸಲ್ಲಿಸುತ್ತಿರುವವರಿಗೆ ತಮ್ಮ ಸೇವಾ ಸುಯೋಗಗಳ ಕುರಿತು ಹೇಗನಿಸುತ್ತದೆ? ಮುಂದೆ ಕೊಡಲ್ಪಟ್ಟಿರುವ ಬೆತೆಲ್ ಕುಟುಂಬದ ಎಳೆಯ ಮತ್ತು ವೃದ್ಧ ಸದಸ್ಯರಿಂದ ಮಾಡಲ್ಪಟ್ಟಿರುವ ಹೇಳಿಕೆಗಳನ್ನು ಗಮನಿಸಿರಿ. ಮೂರು ವರ್ಷದ ಬೆತೆಲ್ ಸೇವೆಯಲ್ಲಿ ಆನಂದಿಸಿರುವ ಒಬ್ಬ ಬೆತೆಲ್ ಕುಟುಂಬದ ಸದಸ್ಯಳು ಹೇಳುವುದು: “ಬೆತೆಲ್ನಲ್ಲಿರುವುದು ಯೆಹೋವನೊಂದಿಗಿನ ನನ್ನ ಸಂಬಂಧವನ್ನು ಬಲಪಡಿಸಿದೆ. ನಾನಿಲ್ಲಿ ಎಷ್ಟು ಹೆಚ್ಚು ಕಾಲ ಜೀವಿಸುತ್ತೇನೋ ಮತ್ತು ಬೆತೆಲ್ ಹೇಗೆ ಕಾರ್ಯವೆಸಗುತ್ತದೆ ಎಂಬುದನ್ನು ಎಷ್ಟು ಹೆಚ್ಚಾಗಿ ತಿಳಿದುಕೊಳ್ಳುತ್ತೇನೋ, ಅಷ್ಟೇ ಹೆಚ್ಚಾಗಿ ಅದು ಯೆಹೋವನ ವ್ಯಕ್ತಿತ್ವದ ಕುರಿತು ನನಗೆ ಕಲಿಸುತ್ತದೆ. ಮತ್ತು ಯೆಹೋವನು ಜನರನ್ನು—ಎಲ್ಲಾ ತರಹದ ಜನರನ್ನು ಉಪಯೋಗಿಸುತ್ತಾನೆ ಎಂಬ ವಿಷಯದಲ್ಲಿ ಬೆತೆಲ್ ಸೇವೆಯು ನನ್ನ ಕಣ್ತೆರೆಸಿದೆ. ಮತ್ತು ಆತನ ಮೆಚ್ಚುಗೆಯನ್ನು ಪಡೆಯಲಿಕ್ಕೆ ಒಬ್ಬ ವ್ಯಕ್ತಿಯು ಪರಿಪೂರ್ಣನಾಗಿರಬೇಕಿಲ್ಲ.”
7 ಒಬ್ಬ ಯುವ ಸಹೋದರನು ಜ್ಞಾಪಿಸಿಕೊಳ್ಳುವುದು: “‘ಹೊಸ ಲೋಕವನ್ನು ಪ್ರವೇಶಿಸಿ ನಾನು ಪ್ರಾಚೀನಕಾಲದ ನಂಬಿಗಸ್ತ ಪುರುಷರಿಗೆ, ಐಶ್ವರ್ಯವನ್ನು ಗಳಿಸಲಿಕ್ಕಾಗಿ ಲೋಕದಲ್ಲಿ ದುಡಿಯುವುದಕ್ಕೆ ಬದಲು ನಾನು ಬೆತೆಲ್ನಲ್ಲಿ ಹಲವಾರು ವರ್ಷಗಳ ವರೆಗೆ ಸೇವೆಸಲ್ಲಿಸಿದೆ ಎಂದು ಹೇಳುವುದು ಎಷ್ಟು ಚೆನ್ನಾಗಿರುವುದು’ ಎಂದು ನಾನು ಯೋಚಿಸುತ್ತಿದ್ದದ್ದು ನನಗೆ ನೆನಪಿದೆ.”
8 ಒಬ್ಬ ಯುವ ಸಹೋದರನು ಅವನು ಪಡೆದುಕೊಂಡಿರುವ ತರಬೇತಿಯ ಕುರಿತು ಮೆಲುಕು ಹಾಕುತ್ತಾ ಹೇಳುವುದು: “ನಾನು ನನ್ನ ಕುರಿತೇ ತಿಳಿದುಕೊಳ್ಳುವುದು ಮತ್ತು ನಾನು ಇನ್ನೂ ಪ್ರಗತಿಮಾಡುವ ವಿಷಯಗಳ ಕುರಿತು ತಿಳಿದುಕೊಂಡು, ನಂತರ ಆ ಗುಣಗಳನ್ನು ಬೆಳೆಸಿಕೊಳ್ಳುವುದು ನನಗೆ ಒಂದು ದೊಡ್ಡ ಆಶೀರ್ವಾದವಾಗಿರುತ್ತದೆನನ್ನ ವ್ಯಕ್ತಿತ್ವವೇನು ಮತ್ತು ನನ್ನಲ್ಲಿ ಯಾವ ಕುಂದುಕೊರತೆಗಳಿವೆ ಎಂಬುದರ ಕುರಿತು ತಿಳಿದುಕೊಂಡು, ಆ ಗುಣಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಮಾಡುವುದು ಒಂದು ಆಶೀರ್ವಾದವಾಗಿ ಇದ್ದುಬಂದಿದೆ. ಈಗ ನಾನು ಹೆಚ್ಚು ಉತ್ತಮವಾಗಿ ಯೆಹೋವನನ್ನು ಸೇವಿಸಲು ಶಕ್ತನಾಗಿದ್ದೇನೆ ಎಂದು ನನಗನಿಸುತ್ತದೆ. ನಾನು ಸ್ವಲ್ಪ ಹೆಚ್ಚು ತಾಳ್ಮೆಯುಳ್ಳವನು, ಸ್ವಲ್ಪ ಹೆಚ್ಚು ಸ್ವನಿಯಂತ್ರಣವುಳ್ಳವನು, ಮತ್ತು ಹೆಚ್ಚು ಪ್ರಮಾಣದಲ್ಲಿ ಪ್ರೀತಿಯನ್ನು ತೋರಿಸಲು ಶಕ್ತನಾಗಿದ್ದೇನೆ ಎಂಬುದನ್ನು ಕಂಡುಕೊಂಡಿದ್ದೇನೆ.”
9 ಇಂದಿನ ವರೆಗೆ ತಾನು ಪಡೆದುಕೊಂಡಿರುವ ಆಶೀರ್ವಾದಗಳ ಕುರಿತು ಒಬ್ಬ ಸಹೋದರಿಯು ಹೀಗೆ ನೆನಸುತ್ತಾಳೆ: “ಇಲ್ಲಿನ ಆತ್ಮಿಕ ಕಾರ್ಯಕ್ರಮಗಳು ನನಗೆ ಯೆಹೋವನ ಕುರಿತಾಗಿ ಮತ್ತು ನನ್ನ ಚಿಂತನೆ, ಭಾವನೆ, ಮತ್ತು ಕೃತ್ಯದಲ್ಲಿ ನಾನು ಆತನನ್ನು ಹೆಚ್ಚು ಉತ್ತಮವಾಗಿ ಹೇಗೆ ಅನುಕರಿಸಬಲ್ಲೆ ಎಂಬುದರ ಕುರಿತಾಗಿ ಹೆಚ್ಚನ್ನು ಕಲಿಸಿದೆ. ಮತ್ತು ಇದು ಮುಂದುವರಿಯುವ ತರಬೇತಿಯಾಗಿರುವ ಕಾರಣ, ಇದೊಂದು ಮುಂದುವರಿಯುವ ಆಶೀರ್ವಾದವಾಗಿದೆ.”
10 ನಾಲ್ವತ್ಮೂರು ವರ್ಷಗಳ ಬೆತೆಲ್ ಸೇವೆಯನ್ನು ಸೇರಿಸಿ ಒಟ್ಟು 59 ವರ್ಷಗಳನ್ನು ಪೂರ್ಣ ಸಮಯದ ಶುಶ್ರೂಷೆಗೆ ಅರ್ಪಿಸಿರುವ ಒಬ್ಬ ಸಹೋದರನು ಹೇಳಿದ್ದು: “ಕೆಲವರು ಯೋಚಿಸುವಂತೆ ಬೆತೆಲ್ ಒಂದು ಸಂನ್ಯಾಸಿ ಮಠದಂತಿರುವುದಿಲ್ಲ. ನಮ್ಮ ವೇಳಾಪಟ್ಟಿಗನುಸಾರವಾದ ಜೀವನರೀತಿಯಿಂದಾಗಿ ನಾವು ಬಹಳಷ್ಟನ್ನು ಸಾಧಿಸುತ್ತೇವೆ. . . . ನಾನು ಕೆಲಸಕ್ಕೆಂದು ಬಂದು, ಅದನ್ನು ಆನಂದಿಸದೆ ಹೋದ ದಿನವೇ ಇಲ್ಲ. ಏಕೆ? ಏಕೆಂದರೆ ನಾವು ನಮ್ಮನ್ನೇ ಪೂರ್ಣಪ್ರಾಣದಿಂದ ನೀಡಿಕೊಳ್ಳುವಾಗ, ‘ಮಾಡಬೇಕಾದದ್ದನ್ನೇ ಮಾಡಿದ್ದೇವೆ’ ಎಂಬ ತಿಳಿವಳಿಕೆಯು ನಮಗೆ ತೃಪ್ತಿಯನ್ನು ತರುತ್ತದೆ.”—ಲೂಕ 17:10.
11 ಬೆತೆಲ್ನಲ್ಲಿ 62 ವರ್ಷಗಳಿಂದ ಸೇವೆಸಲ್ಲಿಸುತ್ತಿರುವ ಮತ್ತೊಬ್ಬ ಸಹೋದರನು ಹೇಳಿದ್ದು: “ಬರಲಿರುವ ಭೂಪರದೈಸಿನ ಮುಂಚಿನ ಸಮಯದಲ್ಲಿ ಭೂಮಿಯ ಮೇಲೆ ಇರುವ ಅತ್ಯುತ್ತಮವಾದ ಸ್ಥಳವು ಬೆತೆಲ್ ಆಗಿದೆ ಎಂದು ನಾನು ದೃಢವಾಗಿ ನಂಬುತ್ತೇನೆ. ಪೂರ್ಣ ಸಮಯದ ಸೇವೆಯನ್ನು ನನ್ನ ಜೀವನವೃತ್ತಿಯನ್ನಾಗಿ ಮಾಡಿಕೊಂಡದ್ದರ ಬಗ್ಗೆ ನಾನು ಒಂದು ಕ್ಷಣವೂ ವಿಷಾದಿಸಿರುವುದಿಲ್ಲ. ಯೆಹೋವನ ಭೂಸಂಸ್ಥೆಯ ಬೃಹತ್ ಬೆಳವಣಿಗೆಯನ್ನು ವೀಕ್ಷಿಸುವುದು ಮತ್ತು ಅದರಲ್ಲಿ ಪಾಲ್ಗೊಳ್ಳುವುದು ಎಂತಹ ಆನಂದವನ್ನು ತಂದಿದೆ! ಯೆಹೋವನ ಸಹಾಯದೊಂದಿಗೆ, ಬೆತೆಲನ್ನು ಸದಾ ನನ್ನ ಮನೆಯಾಗಿ ಮಾಡಿಕೊಳ್ಳುತ್ತಾ ರಾಜ್ಯದ ಅಭಿರುಚಿಗಳನ್ನು ವರ್ಧಿಸುವುದರಲ್ಲಿ ನನ್ನನ್ನೇ ಪೂರ್ಣಪ್ರಾಣದಿಂದ ನೀಡಿಕೊಳ್ಳುತ್ತಾ ಇರಬೇಕೆಂಬುದು ನನ್ನ ದೃಢತೀರ್ಮಾನವಾಗಿದೆ.”
12 ಈ ಬೆತೆಲ್ ಕುಟುಂಬದ ಸದಸ್ಯರು, ನೀವು ಬೆತೆಲ್ ಸೇವೆಗಾಗಿ ನಿಮ್ಮನ್ನೇ ನೀಡಿಕೊಳ್ಳುವುದಾದರೆ ಅನುಭವಿಸಬಹುದಾದ ಅನೇಕ ಆಶೀರ್ವಾದಗಳಲ್ಲಿ ಕೆಲವನ್ನು ಮಾತ್ರ ತಿಳಿಸಿದ್ದಾರೆ. ಆದರೆ ಯಾವುದೇ ಸೇವಾ ಸುಯೋಗವನ್ನು ಪಡೆದುಕೊಳ್ಳುವ ವಿಷಯದಲ್ಲಿ ನಿಜವಾಗಿರುವ ಪ್ರಕಾರ, ನೀವು ಮೊದಲು ಅದಕ್ಕಾಗಿ ಅರ್ಹರಾಗಬೇಕು. ಬೆತೆಲ್ ಕುಟುಂಬದ ಒಬ್ಬ ಸದಸ್ಯನಾಗಿ ಸೇವೆಸಲ್ಲಿಸಲು ಅಪೇಕ್ಷಿಸಲ್ಪಡುವ ಕೆಲವು ವಿಷಯಗಳಾವುವು?
13 ಬೆತೆಲ್ ಸೇವೆಗಾಗಿ ಅಪೇಕ್ಷಿಸಲ್ಪಡುವ ವಿಷಯಗಳು: ಬೆತೆಲ್ ಸೇವೆಗಾಗಿ ಅರ್ಜಿಹಾಕುವವರಿಂದ ಅಪೇಕ್ಷಿಸಲ್ಪಡುವ ಮೂಲಭೂತ ವಿಷಯಗಳನ್ನು ಇಲ್ಲಿರುವ ಚೌಕದಲ್ಲಿ ಕೊಡಲಾಗಿದೆ. ಅದರ ಜೊತೆಗೆ, ಅವರು ‘ಭೋಗಗಳನ್ನು ಪ್ರೀತಿಸುವವರು’ ಆಗಿರದೆ, ಶ್ರದ್ಧೆಯಿಂದ ಕೆಲಸಮಾಡಲು ಸಿದ್ಧಮನಸ್ಸುಳ್ಳವರಾಗಿರಬೇಕು. (2 ತಿಮೊ. 3:4; 1 ಕೊರಿಂ. 13:11) ಬೆತೆಲ್ ಕುಟುಂಬದ ಸದಸ್ಯರು ಒಳ್ಳೆಯ ವೈಯಕ್ತಿಕ ಅಧ್ಯಯನ ರೂಢಿಗಳನ್ನು ಬೆಳೆಸಿಕೊಂಡಿರುವ ಹಾಗೂ ‘ಒಳ್ಳೇದು ಮತ್ತು ಕೆಟ್ಟದ್ದರ ಭೇದವನ್ನು ತಿಳಿದುಕೊಳ್ಳಲು’ ತಮ್ಮ ಜ್ಞಾನೇಂದ್ರಿಯಗಳನ್ನು ತರಬೇತುಗೊಳಿಸಿರುವ ಆತ್ಮಿಕ ಸ್ತ್ರೀಪುರುಷರಾಗಿರಬೇಕು. (ಇಬ್ರಿ. 5:14) ಅವರ ಉಡುಪು, ಸಿಂಗಾರ, ಮತ್ತು ಸಂಗೀತ ಹಾಗೂ ಮನೋರಂಜನೆಯ ವಿಷಯದಲ್ಲಿನ ಆಯ್ಕೆಗಳನ್ನು ಸೇರಿಸಿ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಅವರ ಕ್ರೈಸ್ತ ಪ್ರೌಢತೆಯು ಈಗಾಗಲೇ ಪ್ರದರ್ಶಿಸಲ್ಪಟ್ಟಿರಬೇಕು. ಸಿದ್ಧಮನಸ್ಸಿನ ಬೆತೆಲ್ ಕುಟುಂಬ ಸದಸ್ಯರು, ಅವರ ಅಗತ್ಯವು ಎಲ್ಲಿದೆಯೋ ಅಲ್ಲಿ ಕೆಲಸ ಮಾಡುತ್ತಾರೆ. ಎಳೆಯ ಸದಸ್ಯರಿಗೆ ಸಾಮಾನ್ಯವಾಗಿ ದೇಹದುಡಿಮೆಯ ಕೆಲಸವು ನೇಮಿಸಲ್ಪಡುತ್ತದೆ, ಮತ್ತು ಇದರಲ್ಲಿ ಮುದ್ರಣ ಕೆಲಸ, ಸಾಹಿತ್ಯವನ್ನು ತಯಾರಿಸಿ ರವಾನಿಸುವುದು, ದುರಸ್ಥಿಯಲ್ಲಿಡುವಿಕೆ, ಹೌಸ್ಕೀಪಿಂಗ್, ಶುಚಿಗೊಳಿಸುವಿಕೆ, ಲಾಂಡ್ರಿ, ಮತ್ತು ಆಹಾರ ತಯಾರಿಕೆಯು ಒಳಗೂಡಿದೆ. (ಜ್ಞಾನೋ. 20:29) ಆದರೂ, ಐಹಿಕ ಕೆಲಸಕ್ಕೆ ವ್ಯತಿರಿಕ್ತವಾಗಿ, ಪ್ರತಿಯೊಂದು ನೇಮಕವೂ ಮಹಾ ಸಂತೃಪ್ತಿಯನ್ನು ತರುತ್ತದೆ, ಏಕೆಂದರೆ ಇದು ಯೆಹೋವನಿಗೆ ಮಹಿಮೆಯನ್ನು ತರುವ ಪವಿತ್ರ ಸೇವೆಯಾಗಿದೆ.—ಕೊಲೊ. 3:23.
14 ಬೆತೆಲ್ ಸೇವೆಗೆ ಆಮಂತ್ರಿಸಲ್ಪಡುವವರು ಕನಿಷ್ಠ ಒಂದು ವರ್ಷ ಬೆತೆಲ್ನಲ್ಲಿ ಉಳಿಯಬೇಕು. ಇದು, ಅವರು ಉತ್ಪನ್ನದಾಯಕ ಕೆಲಸಗಾರರಾಗುವಂತೆ ಅವರನ್ನು ತರಬೇತುಗೊಳಿಸಲು ಸಾಧ್ಯಗೊಳಿಸುತ್ತದೆ. ಅವರು ಬೆತೆಲನ್ನು ತಮ್ಮ ಮನೆಯಾಗಿ ಮಾಡಿಕೊಳ್ಳಬೇಕೆಂದು ಆಶಿಸಲಾಗುತ್ತದೆ. ಬೆತೆಲ್ ಕುಟುಂಬದ ಸದಸ್ಯರು ತಮ್ಮ ವೈಯಕ್ತಿಕ ಅಭಿರುಚಿಗಳಿಗಿಂತ ರಾಜ್ಯದ ಕೆಲಸವನ್ನು ಪ್ರಥಮವಾಗಿಡುವಂತೆ ಅವರನ್ನು ಪ್ರಚೋದಿಸುವುದು ಯೆಹೋವನಿಗಾಗಿರುವ ಪ್ರೀತಿಯೇ, ಮತ್ತು ಇದು ಯೆಹೋವನಿಗೆ ಮೆಚ್ಚಿಗೆಯಾದದ್ದಾಗಿದೆ.—ಮತ್ತಾ. 16:24.
15 ಪ್ರಸ್ತುತ ಅಗತ್ಯಗಳು: ಬೆತೆಲ್ನಲ್ಲಿ ಮಾಡಲ್ಪಡುವ ರೀತಿಯ ಕೆಲಸದಿಂದಾಗಿ, ಸದ್ಯದಲ್ಲಿ ನಮಗೆ ಮುಖ್ಯವಾಗಿ ಅವಿವಾಹಿತ ಸಹೋದರರ ಅಗತ್ಯವಿದೆ. ಇದೊಂದು ಅತ್ಯಾವಶ್ಯಕ ಅಂಶವಾಗಿರದಿದ್ದರೂ, ಆದ್ಯತೆಯು ರೆಗ್ಯುಲರ್ ಪಯನೀಯರರಿಗೆ ಕೊಡಲ್ಪಡುವುದು, ಏಕೆಂದರೆ ಅವರು ಈಗಾಗಲೇ ಪೂರ್ಣ ಸಮಯದ ಸೇವೆಯಲ್ಲಿದ್ದಾರೆ. ಕೆಲವೊಮ್ಮೆ ಬೆತೆಲ್ನಲ್ಲಿ ಅಗತ್ಯವಿರುವಂಥ ಕೌಶಲಗಳನ್ನು ಹೊಂದಿರುವ 19ರಿಂದ 35ರ ಪ್ರಾಯದ ನಡುವಿನ ಅವಿವಾಹಿತ ಸಹೋದರಿಯರು ಮತ್ತು ವಿವಾಹಿತ ದಂಪತಿಗಳಿಗೆ ಅವಕಾಶವು ಕೊಡಲ್ಪಡಬಹುದು. ಅಷ್ಟುಮಾತ್ರವಲ್ಲದೆ, 35ಕ್ಕಿಂತ ತುಸು ಹೆಚ್ಚು ಪ್ರಾಯದವರಾಗಿರಬಹುದಾದ ಕೆಲವು ಸಹೋದರ ಸಹೋದರಿಯರು, ಬೆತೆಲ್ನಲ್ಲಿ ಉಪಯೋಗಿಸಲ್ಪಡಲು ಸಾಧ್ಯವಿರುವ ವಿಶೇಷವಾದ ಕೌಶಲಗಳನ್ನು ಮತ್ತು ತರಬೇತನ್ನು ಹೊಂದಿರುವುದಾದರೆ ತಮ್ಮ ಅರ್ಜಿಗಳನ್ನು ಹಾಕುವಂತೆ ಪ್ರೋತ್ಸಾಹಿಸಲಾಗುತ್ತದೆ. ಕೆಲವು ಉದಾರಣೆಗಳನ್ನು ಕೊಡುವುದಾದರೆ, ಇದರಲ್ಲಿ ದಂತವೈದ್ಯರು, ವೈದ್ಯರು, ಪ್ರಮಾಣೀಕೃತ ಸಾರ್ವಜನಿಕ ಅಕೌಂಟೆಂಟರು, ಆರ್ಕಿಟೆಕ್ಟ್ಗಳು, ಇಂಜಿನಿಯರ್ಗಳು, ನೋಂದಾಯಿತ ನರ್ಸ್ಗಳು, ವಾಹನ ಮೆಕ್ಯಾನಿಕ್ಗಳು, ಅಥವಾ ಇಲೆಕ್ಟ್ರಾನಿಕ್ ತಂತ್ರಜ್ಞರು ಸೇರಿದ್ದಾರೆ. ಆದರೂ, ವಿಶೇಷ ಶಿಕ್ಷಣ ಅಥವಾ ತರಬೇತನ್ನು ಪಡೆದುಕೊಳ್ಳುವುದಾದರೆ ಇದು ಅವರನ್ನು ಬೆತೆಲ್ಗೆ ಆಮಂತ್ರಿಸಲ್ಪಡುವ ಅವಕಾಶಗಳನ್ನು ಹೆಚ್ಚಿಸುತ್ತದೆ ಎಂಬ ಯೋಚನೆಯೊಂದಿಗೆ ವ್ಯಕ್ತಿಗಳು ಇಂಥ ಶಿಕ್ಷಣ ಇಲ್ಲವೆ ತರಬೇತನ್ನು ಪಡೆದುಕೊಳ್ಳುವಂತೆ ನಾವು ಪ್ರೋತ್ಸಾಹಿಸುವುದಿಲ್ಲ. ಈಗಾಗಲೇ, ಪ್ರಾಯಶಃ ಸತ್ಯಕ್ಕೆ ಬರುವ ಮುಂಚೆಯೇ ವಿಶೇಷ ತರಬೇತಿಯನ್ನು ಪಡೆದಿರುವವರು, ಅದರ ಕುರಿತು ವಿವರವಾಗಿ ಬರೆದು ತಮ್ಮ ಬೆತೆಲ್ ಅರ್ಜಿಯೊಂದಿಗೆ ಕಳುಹಿಸಬಹುದು.
16 ನೀವು ಅರ್ಜಿ ಹಾಕಿದ ನಂತರ ಒಂದುವೇಳೆ ಬೆತೆಲ್ಗೆ ಆಮಂತ್ರಿಸಲ್ಪಡದೆ ಹೋಗುವುದಾದರೆ, ನಿರುತ್ತೇಜಿತರಾಗಬೇಡಿ. ವರ್ಷಕ್ಕೊಮ್ಮೆ ನಿಮ್ಮ ಅರ್ಜಿಯನ್ನು ನವೀಕರಿಸುವುದರ ಕುರಿತು ನೀವು ಯೋಚಿಸಬಹುದು. ಬೆತೆಲ್ನಲ್ಲಿ ಅಗತ್ಯವಿರುವ ವಿಶೇಷ ತರಬೇತು ಮತ್ತು ಕೌಶಲಗಳನ್ನು ಹೊಂದಿರುವ ಕೆಲವು ಸಹೋದರರು ತಾತ್ಕಾಲಿಕ ಸ್ವಯಂಸೇವಕರಾಗಿ ಕೆಲಸಮಾಡಲು ತಮ್ಮನ್ನೇ ನೀಡಿಕೊಂಡಿದ್ದಾರೆ. ಒಂದು, ಎರಡು, ಮೂರು, ಅಥವಾ ನಾಲ್ಕು ವಾರಗಳಿಗೆ ಇಲ್ಲವೆ ಮೂರು ತಿಂಗಳುಗಳ ವರೆಗೆ ಅವರು ಬೆತೆಲ್ನಲ್ಲಿ ತಾತ್ಕಾಲಿಕವಾಗಿ ಸೇವೆ ಮಾಡಲು ಅರ್ಜಿಯನ್ನು ಹಾಕಬಹುದು. ಈ ರೀತಿಯಲ್ಲಿ ಸಹಾಯಮಾಡಲು ಆಸಕ್ತಿಯಿರುವವರು ಕಳುಹಿಸಿಕೊಡಬೇಕಾದ ತಾತ್ಕಾಲಿಕ ಸ್ವಯಂಸೇವಕ ಅರ್ಜಿಗಳು ಸಭೆಯ ಸೆಕ್ರಿಟರಿಯ ಬಳಿ ಇರುತ್ತವೆ. ಹೆಚ್ಚಿನ ತಾತ್ಕಾಲಿಕ ಸ್ವಯಂಸೇವಕ ಅರ್ಜಿಗಳಿಗಾಗಿ ಆರ್ಡರ್ಗಳನ್ನು ಲಿಟರಚರ್ ರಿಕ್ವೆಸ್ಟ್ ಫಾರ್ಮ್ನಲ್ಲಿ ಕಳುಹಿಸಬಹುದು.
17 ಬೆತೆಲ್ನಲ್ಲಿ ಕೆಲಸಮಾಡುವವರಿಗೆ ಕ್ರಿಸ್ತನ ಸಹೋದರರೊಂದಿಗೆ ನಿಕಟ ಸಂಪರ್ಕದಲ್ಲಿ ಯೆಹೋವನನ್ನು ಸೇವಿಸುವುದು ಒಂದು ಅದ್ವಿತೀಯವಾದ ಸುಯೋಗವಾಗಿದೆ. ನಮ್ಮ ಲೋಕವ್ಯಾಪಕ ಸಹೋದರ ಬಳಗದ ಅಗತ್ಯಗಳನ್ನು ಪೂರೈಸುವುದರಲ್ಲಿ ತಮ್ಮನ್ನೇ ನೀಡಿಕೊಳ್ಳುವವರೆಲ್ಲರ ಸ್ವತ್ಯಾಗದ ಆತ್ಮವನ್ನು ಆಡಳಿತ ಮಂಡಲಿಯು ಗಣ್ಯಮಾಡುತ್ತದೆ.—ಫಿಲಿ. 2:20-22; 2 ತಿಮೊ. 4:11.
18 ಎಳೆಯವರೇ, ಬೆತೆಲ್ ಸೇವೆಗಾಗಿ ನಿಮ್ಮನ್ನು ಈಗಲೇ ಸಿದ್ಧಪಡಿಸಿಕೊಳ್ಳಿರಿ: ಬೆತೆಲ್ ಸೇವೆಗಾಗಿರುವ ಸಿದ್ಧತೆಯು, ಅಪೇಕ್ಷಿಸಲ್ಪಡುವ ಕನಿಷ್ಠ ಪ್ರಾಯವಾಗಿರುವ 19ನ್ನು ತಲಪುವದಕ್ಕೆ ಬಹಳಷ್ಟು ಸಮಯದ ಮುಂಚೆಯೇ ಆರಂಭವಾಗುತ್ತದೆ. ಎಳೆಯರು ಬೆತೆಲ್ ಸೇವೆಗಾಗಿ ತಮ್ಮನ್ನೇ ಸಿದ್ಧಪಡಿಸಿಕೊಳ್ಳಲು ಏನು ಮಾಡಬಲ್ಲರು? ಯೇಸು ಹೇಳಿದ್ದು: “ನಿಮ್ಮಲ್ಲಿ ಯಾವನಾದರೂ ಒಂದು ಬುರುಜನ್ನು ಕಟ್ಟಿಸಬೇಕೆಂದು ಯೋಚಿಸಿದರೆ ಅವನು ಮೊದಲು ಕೂತುಕೊಂಡು—ಅದಕ್ಕೆ ಎಷ್ಟು ಖರ್ಚು ಹಿಡಿದೀತು . . . ಎಂದು ಲೆಕ್ಕಮಾಡುವದಿಲ್ಲವೇ?” (ಲೂಕ 14:28) ಯಾವುದೇ ನಿರ್ಮಾಣ ಕೆಲಸದ ಯಶಸ್ಸಿಗೆ ಸಿದ್ಧತೆ ಮತ್ತು ಯೋಜನೆಯು ಪ್ರಾಮುಖ್ಯವಾಗಿರುವ ಹಾಗೆಯೇ, ಎಳೆಯರು ಯೆಹೋವನ ಸೇವೆಯಲ್ಲಿ ತಮ್ಮ ಭವಿಷ್ಯತ್ತನ್ನು ಹೇಗೆ ಕಟ್ಟುತ್ತಿದ್ದಾರೆ ಎಂಬುದರ ಕುರಿತು ಜಾಗರೂಕ ಗಮನವನ್ನು ಕೊಡುವುದು ಎಷ್ಟು ಪ್ರಾಮುಖ್ಯವಾಗಿದೆ! ಅವರು ಆತ್ಮಿಕ ಗುರಿಗಳನ್ನು ಎಟುಕುವಂತಾಗಲು ಜೀವನದ ಪ್ರಥಮ ವರ್ಷಗಳಲ್ಲೇ ಒಂದು ಬಲವಾದ ಅಸ್ತಿವಾರವನ್ನು ಹಾಕಬೇಕು. ಒಬ್ಬ ಯುವ ವ್ಯಕ್ತಿಯಾಗಿ, ನಿಮ್ಮ ಅಸ್ತಿವಾರವನ್ನು ಎಷ್ಟು ಒಳ್ಳೆಯದಾಗಿ ಹಾಕುತ್ತಿದ್ದೀರಿ? ನೀವು ಬೆತೆಲ್ನಲ್ಲಿ ಸೇವೆ ಮಾಡಲು ಬಯಸುವುದಾದರೆ, ಈ ಮುಂದಿನ ವಿಷಯಗಳನ್ನು ಜಾಗರೂಕತೆಯಿಂದ ಪರಿಶೀಲಿಸುವುದರಿಂದ ನೀವು ಪ್ರಯೋಜನ ಪಡೆದುಕೊಳ್ಳುವಿರಿ.
19 ಈ ವಿಶೇಷ ಸೇವಾ ಸುಯೋಗಕ್ಕಾಗಿ ‘ಆಸ್ಪದ ಮಾಡಿಕೊಡಿ’: ಮತ್ತಾಯ 19:12ರಲ್ಲಿ ದಾಖಲಿಸಲ್ಪಟ್ಟಿರುವಂತೆ, ಅವಿವಾಹಿತತನದ ಮಾರ್ಗಕ್ಕೆ ‘ಆಸ್ಪದ ಮಾಡಿಕೊಡಿ’ (NW) ಎಂದು ಯೇಸು ತನ್ನ ಶಿಷ್ಯರನ್ನು ಪ್ರೋತ್ಸಾಹಿಸಿದನು. ಏಕೆ? ವೈಯಕ್ತಿಕ ಕಾರಣಗಳಿಗಾಗಿ ಅಲ್ಲ, ಬದಲಿಗೆ “ಪರಲೋಕ ರಾಜ್ಯದ ನಿಮಿತ್ತವಾಗಿ.” ತದ್ರೀತಿಯಲ್ಲಿ ಪೌಲನು, “ನೀವು ನಿಮ್ಮ ಸಮಯವನ್ನು ಬೇರೆ ಕಾರ್ಯಗಳಿಗೆ ಕೊಡದೆ ನಿಮ್ಮನ್ನು ಸಂಪೂರ್ಣವಾಗಿ ಪ್ರಭುವಿಗೆ ಅರ್ಪಿಸಿ”ಕೊಳ್ಳುವ ಒಂದು ಮಾರ್ಗಕ್ರಮಕ್ಕೆ ಸೂಚಿಸುತ್ತಾ ಪ್ರೋತ್ಸಾಹವನ್ನು ನೀಡಿದನು. (1 ಕೊರಿಂ. 7:32-35, ಪರಿಶುದ್ಧ ಬೈಬಲ್) ದುಃಖದ ಸಂಗತಿಯೇನೆಂದರೆ, ಅನೇಕರು ಚಿಕ್ಕ ಪ್ರಾಯದಲ್ಲೇ ಮದುವೆ ಮಾಡಿಕೊಳ್ಳುವುದರಿಂದ, ಅವಿವಾಹಿತ ಪುರುಷರಾಗಿ ಬೆತೆಲ್ನಲ್ಲಿ ಸೇವೆಸಲ್ಲಿಸುವ ಸುಯೋಗವನ್ನು ಕಳೆದುಕೊಳ್ಳುತ್ತಾರೆ. ನಮ್ಮ ಎಳೆಯ ಸಹೋದರರು ಕುಟುಂಬದ ಜವಾಬ್ದಾರಿಗಳಿಂದ ಮುಕ್ತರಾಗಿರುವಾಗಲೇ ತಮ್ಮ ಶಕ್ತಿಯನ್ನು ಪೂರ್ಣ ಸಮಯದ ಶುಶ್ರೂಷೆಯನ್ನು ಬೆನ್ನಟ್ಟುವುದರಲ್ಲಿ ಉಪಯೋಗಿಸುವಂತೆ ನಾವು ಅವರನ್ನು ಪ್ರೋತ್ಸಾಹಿಸಲು ಬಯಸುತ್ತೇವೆ. ತರುವಾಯ, ಸ್ವಲ್ಪ ಸಮಯದ ನಂತರ ಅವರು ಮದುವೆಮಾಡಿಕೊಳ್ಳಲು ತೀರ್ಮಾನಿಸುವುದಾದರೆ, ಜೀವಿತದಲ್ಲಿ ಮತ್ತು ಕ್ರೈಸ್ತ ಶುಶ್ರೂಷೆಯಲ್ಲಿ ಹೆಚ್ಚು ಅನುಭವವನ್ನು ಪಡೆದುಕೊಂಡಿರುವ ಕಾರಣ ಅವರು ಹೆಚ್ಚು ಉತ್ತಮ ಗಂಡಂದಿರಾಗಿರುವರು. ಕೆಲವರು ಬೆತೆಲ್ನಲ್ಲಿ ಸೇವೆ ಸಲ್ಲಿಸುತ್ತಾ ಹಲವಾರು ವರ್ಷಗಳನ್ನು ಕಳೆದ ಬಳಿಕ ಮದುವೆಮಾಡಿಕೊಂಡಿದ್ದಾರೆ ಮತ್ತು ದಂಪತಿಗಳಾಗಿ ಅಲ್ಲಿ ತಮ್ಮ ಸೇವೆಯಲ್ಲಿ ಮುಂದುವರಿಯಲು ಶಕ್ತರಾಗಿದ್ದಾರೆ. ನಂತರ ಅವರಿಗೆ ಸರ್ಕಿಟ್ ಕೆಲಸ ಅಥವಾ ಡಿಸ್ಟ್ರಿಕ್ಟ್ ಕೆಲಸದಂಥ ಇತರ ಸುಯೋಗಗಳು ಒದಗಿಬರುವುದಾದರೆ, ಅವರು ಬೆತೆಲ್ ಸೇವೆಗೆ ಆಸ್ಪದ ಮಾಡಿಕೊಡಲು ಸಮಯವನ್ನು ಬದಿಗಿರಿಸಿದ್ದರ ಕುರಿತು ಖಂಡಿತವಾಗಿಯೂ ವಿಷಾದಿಸುವುದಿಲ್ಲ.
20 ಪ್ರಾಪಂಚಿಕ ಬೆನ್ನಟ್ಟುವಿಕೆಗಳಿಂದ ಅಪಕರ್ಷಿತರಾಗಬೇಡಿರಿ: ಪ್ರತಿಯೊಬ್ಬ ಯುವ ವ್ಯಕ್ತಿಯು ಹೀಗೆ ಕೇಳಿಕೊಳ್ಳುವುದು ಉತ್ತಮವಾಗಿರುವುದು: ‘ಶಿಕ್ಷಣವನ್ನು ಮುಗಿಸಿದ ನಂತರ ನನ್ನ ಗುರಿಯು ಒಂದು ಪೂರ್ಣ ಸಮಯದ ಐಹಿಕ ವೃತ್ತಿಯನ್ನು ಬೆನ್ನಟ್ಟುವುದಾಗಿದೆಯೋ ಅಥವಾ ಯೆಹೋವನನ್ನು ಪೂರ್ಣ ಸಮಯ ಸೇವಿಸುವುದಾಗಿದೆಯೋ?’ ಈ ಎರಡನೆಯ ಮಾರ್ಗಕ್ರಮವನ್ನು ಬೆನ್ನಟ್ಟುವುದು ಕೆಲವು ತ್ಯಾಗಗಳನ್ನು ಅವಶ್ಯಪಡಿಸುತ್ತದೆ ಎಂಬುದು ಒಪ್ಪಿಕೊಳ್ಳತಕ್ಕ ವಿಷಯವೇ. ಆದರೆ ಒಂದು ಐಹಿಕ ವೃತ್ತಿಯನ್ನು ಬೆನ್ನಟ್ಟುವ ವಿಷಯದಲ್ಲಿಯೂ ಇದು ನಿಜವಾಗಿದೆ! ಆದರೆ ಕೊನೆಯಲ್ಲಿ, ಯಾವ ಮಾರ್ಗಕ್ರಮವು ದೀರ್ಘಕಾಲಿಕ ಪ್ರಯೋಜನದಾಯಕ ಫಲಿತಾಂಶವನ್ನು ತರುವುದು? ಯೇಸು ಸ್ಪಷ್ಟವಾದ ಉತ್ತರವನ್ನು ಕೊಟ್ಟನು. ಮತ್ತಾಯ 6:19-21ರ ಪ್ರಕಾರ, ಅವನು ಹೇಳಿದ್ದು: “ಭೂಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಬೇಡಿರಿ; ಇಲ್ಲಿ ಅಂತೂ ಅದು ನುಸಿಹಿಡಿದು ಕಿಲುಬುಹತ್ತಿ ಕೆಟ್ಟುಹೋಗುವದು; ಇಲ್ಲಿ ಕಳ್ಳರು ಕನ್ನಾಕೊರೆದು ಕದಿಯುವರು. ಆದರೆ ಪರಲೋಕದಲ್ಲಿ ಗಂಟುಮಾಡಿ ಇಟ್ಟುಕೊಳ್ಳಿರಿ; ಅಲ್ಲಿ ಅದು ನುಸಿಹಿಡಿದು ಕಿಲುಬುಹತ್ತಿ ಕೆಟ್ಟುಹೋಗುವದಿಲ್ಲ; ಅಲ್ಲಿ ಕಳ್ಳರು ಕನ್ನಾಕೊರೆಯುವದೂ ಇಲ್ಲ, ಕದಿಯುವದೂ ಇಲ್ಲ. ನಿನ್ನ ಗಂಟು ಇದ್ದಲ್ಲಿಯೇ ನಿನ್ನ ಮನಸ್ಸೂ ಇರುವದಷ್ಟೆ.” ಯೆಹೋವನಿಗೆ ಪೂರ್ಣಪ್ರಾಣದ ಸೇವೆಯನ್ನು ಸಲ್ಲಿಸುವುದಕ್ಕೆ ಬದಲಾಗಿ ಒಂದು ಲೌಕಿಕ ಜೀವನವೃತ್ತಿಯನ್ನು ಅಥವಾ ಪ್ರಾಪಂಚಿಕ ವಿಷಯಗಳನ್ನು ಬೆನ್ನಟ್ಟುವಂತೆ ನಮ್ಮ ಹೃದಯವು ನಮ್ಮನ್ನೆಂದಿಗೂ ನಡೆಸದಿರಲಿ. ಒಬ್ಬನು ಬೆನ್ನಟ್ಟಬಲ್ಲ ಏಕಮಾತ್ರ ಅಮೂಲ್ಯ ಗುರಿಯು, ಯೆಹೋವನ ಮನಸ್ಸನ್ನು ಸಂತೋಷಪಡಿಸಲು ಆತನೊಂದಿಗೆ ಒಳ್ಳೆಯ ಸಂಬಂಧವನ್ನು ಹೊಂದುವುದಾಗಿದೆ ಎಂಬುದನ್ನು ನಾವೆಲ್ಲರೂ ಗ್ರಹಿಸಿಕೊಳ್ಳಬೇಕು. (ಜ್ಞಾನೋ. 27:11) ನಾವು ಎಳೆಯವರಾಗಿರುವಾಗಲೇ ಯೆಹೋವನನ್ನು ನಮ್ಮ ಜೀವನಗಳಲ್ಲಿ ಪ್ರಥಮವಾಗಿಡುವ ಮೂಲಕ, ನಮ್ಮ ಮನಸ್ಸು ಯಾವುದರ ಮೇಲಿದೆ ಮತ್ತು ರಾಜ್ಯವು ನಮಗೆ ಎಷ್ಟು ಪ್ರಾಮುಖ್ಯವಾಗಿದೆ ಎಂಬುದನ್ನು ನಾವು ತೋರಿಸಿಕೊಡುತ್ತೇವೆ. “ಯೆಹೋವನ ಆಶೀರ್ವಾದವು ಭಾಗ್ಯದಾಯಕವು; ಅದು ವ್ಯಸನವನ್ನು ಸೇರಿಸದು” ಎಂಬುದನ್ನು ಜ್ಞಾಪಕಲ್ಲಿಟ್ಟುಕೊಳ್ಳಿರಿ. (ಜ್ಞಾನೋ. 10:22) ಯೆಹೋವನು ತಮಗೆ ಕೊಟ್ಟಿರುವ ಎಲ್ಲದ್ದಕ್ಕಾಗಿ, ಅಮೂಲ್ಯವಾಗಿರುವ ಯಾವುದನ್ನೇ ಆತನಿಗೆ ಹಿಂದೆ ಕೊಡುವ ಮೂಲಕವಾಗಿ ತಮ್ಮ ಮನಸ್ಸು ಯಾವುದರ ಮೇಲಿದೆ ಎಂದು ತೋರಿಸುವ ಅತ್ಯುತ್ತಮವಾದ ಅವಕಾಶವು ಯುವ ಜನರಿಗಿದೆ. ಸೂಚಿಸಲ್ಪಟ್ಟ ಅರ್ಹತೆಗಳುಳ್ಳ ವ್ಯಕ್ತಿಗಳಿಗೆ ಬೆತೆಲ್ ಸೇವೆಯು ಇಂತಹ ಒಂದು ಅದ್ಭುತಕರವಾದ ಅವಕಾಶವನ್ನು ಒದಗಿಸಿಕೊಡುತ್ತದೆ.
21 ಬೆತೆಲ್ನಲ್ಲಿ ಸೇವೆ ಸಲ್ಲಿಸುವವರು ನೈತಿಕವಾಗಿ ಶುದ್ಧರಾಗಿರಬೇಕು: ಕೀರ್ತನೆಗಾರನು ಕೇಳಿದ್ದು: “ಯೌವನಸ್ಥನು ತನ್ನ ನಡತೆಯನ್ನು ಶುದ್ಧಪಡಿಸಿಕೊಳ್ಳುವದು ಯಾವದರಿಂದ?” ಅವನೇ ಉತ್ತರಿಸಿದ್ದು: “[ಯೆಹೋವನ] ವಾಕ್ಯವನ್ನು ಗಮನಿಸಿ ನಡೆಯುವದರಿಂದಲೇ.” (ಕೀರ್ತ. 119:9) ಇದರಲ್ಲಿ ಸೈತಾನನ ವಿಷಯಗಳ ವ್ಯವಸ್ಥೆಯ ನೈತಿಕ ಭ್ರಷ್ಟತೆಗೆ ಸಂಬಂಧಿಸಿರುವ ಯಾವುದೇ ವಿಷಯವನ್ನು ತ್ಯಜಿಸುವುದು ಒಳಗೂಡಿರುತ್ತದೆ. ಇಂಟರ್ನೆಟ್ ಅಶ್ಲೀಲ ಸಾಹಿತ್ಯ, ವಿರುದ್ಧ ಲಿಂಗದವರೊಂದಿಗೆ ಅಸಭ್ಯ ನಡತೆ, ಕೀಳ್ಮಟ್ಟದ ಸಂಗೀತ, ಕೀಳಾದ ಮನೋರಂಜನೆ, ಮತ್ತು ಅಪ್ರಾಪ್ತ ವಯಸ್ಸಿನಲ್ಲಿ ಮದ್ಯಪಾನ, ಇವೆಲ್ಲವೂ ತಮ್ಮ ಆತ್ಮಿಕ ಗುರಿಗಳನ್ನು ಗಿಟ್ಟಿಸಿಕೊಳ್ಳುವುದರಿಂದ ನಮ್ಮ ಎಳೆಯರನ್ನು ತಡೆಗಟ್ಟಲು ಸೈತಾನನು ಉಪಯೋಗಿಸುವ ಪಾಶಗಳಲ್ಲಿ ಕೇವಲ ಕೆಲವಾಗಿವೆ. ಈ ಕುಯುಕ್ತಿಗಳನ್ನು ಎದುರಿಸಲು ಬಲವಾದ ದೃಢಸಂಕಲ್ಪದ ಅಗತ್ಯವಿದೆ. ಒಬ್ಬ ಯುವ ವ್ಯಕ್ತಿಯಾಗಿ, ಇವುಗಳಲ್ಲಿನ ಯಾವುದೇ ಒಂದು ವಿಷಯದಲ್ಲೂ ನೀವು ಒಳಗೂಡುತ್ತಿದ್ದೀರಿ ಎಂದು ಕಂಡುಕೊಳ್ಳುವುದಾದರೆ, ನಿಮ್ಮ ಸಭೆಯಲ್ಲಿರುವ ಹಿರಿಯರೊಂದಿಗೆ ಮಾತಾಡಿರಿ ಮತ್ತು ಬೆತೆಲ್ ಸೇವೆಗೆ ಅರ್ಜಿ ಹಾಕುವ ಮುನ್ನ ಈ ವಿಚಾರಗಳನ್ನು ಸರಿಪಡಿಸಿರಿ. ಯೆಹೋವನನ್ನು ಪೂರ್ಣವಾಗಿ ಸೇವಿಸಲಿಕ್ಕಾಗಿ ಒಂದು ಶುದ್ಧ ಮನಸ್ಸಾಕ್ಷಿಯನ್ನು ಹೊಂದಿರುವುದು ಅತಿ ಪ್ರಾಮುಖ್ಯವಾಗಿದೆ.—1 ತಿಮೊ. 1:5.
22 ಇತರರೊಂದಿಗೆ ಹೊಂದಿಕೊಳ್ಳಲು ಕಲಿಯಿರಿ: ಬೆತೆಲ್ ಸೇವೆಯಲ್ಲಿ ಯಶಸ್ವಿಯಾಗಲು ಒಂದು ಪ್ರಾಮುಖ್ಯ ಆವಶ್ಯಕತೆಯು, ಇತರರೊಂದಿಗೆ ಹೊಂದಿಕೊಳ್ಳುವುದು ಆಗಿದೆ. ಬೆಂಗಳೂರಿನಲ್ಲಿರುವ ಬೆತೆಲ್ ಕುಟುಂಬದಲ್ಲಿ ಎಲ್ಲಾ ಸಾಮಾಜಿಕ ಅಂತಸ್ತಿನ ಸಹೋದರ ಸಹೋದರಿಯರು ಇದ್ದಾರೆ. ಈ ವ್ಯಕ್ತಿತ್ವ ವೈವಿಧ್ಯತೆಯು ಬೆತೆಲ್ ಕುಟುಂಬದ ಆತ್ಮಿಕ ಸೌಂದರ್ಯವನ್ನು ಹೆಚ್ಚಿಸುವುದಾದರೂ, ಕೆಲವೊಮ್ಮೆ ಅದು ಪಂಥಾಹ್ವಾನಗಳಿಗೂ ಎಡೆಮಾಡಿಕೊಡಬಹುದು. ನೀವು ಬೆತೆಲ್ ಸೇವೆಯನ್ನು ಪರಿಗಣಿಸುತ್ತಿರುವುದಾದರೆ, ನಿಮ್ಮನ್ನೇ ಹೀಗೆ ಕೇಳಿಕೊಳ್ಳುವುದು ಉತ್ತಮ: ‘ನನ್ನ ಅಭಿಪ್ರಾಯವನ್ನು ಇತರರು ಸಮ್ಮತಿಸದಿದ್ದರೆ, ಸುಲಭವಾಗಿ ಕೋಪಗೊಳ್ಳುತ್ತೇನೋ? ಇತರರಿಗೆ ನನ್ನೊಂದಿಗೆ ಹೊಂದಿಕೊಳ್ಳುವುದು ಸುಲಭವಾಗಿದೆಯೋ?’ ಈ ಕ್ಷೇತ್ರಗಳಲ್ಲಿ ನೀವು ಪ್ರಗತಿಯನ್ನು ಮಾಡಬೇಕಾಗಿರುವುದಾದರೆ, ಅದರ ವಿಷಯದಲ್ಲಿ ಈಗಲೇ ಕ್ರಿಯೆಗೈಲು ಆರಂಭಿಸಿರಿ. ನೀವು ಹೀಗೆ ಮಾಡುವುದಾದರೆ, ಬೆತೆಲ್ ಕುಟುಂಬದ ಸದಸ್ಯರೊಂದಿಗೆ ವಾಸಿಸಲು ಮತ್ತು ಕೆಲಸ ಮಾಡಲು ಹೆಚ್ಚು ಸುಲಭವಾಗುವುದು.
23 ಯೆಹೋವನೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಳ್ಳುವ ಮೂಲಕ ಒಬ್ಬ ಆತ್ಮಿಕ ವ್ಯಕ್ತಿಯಾಗಿರಲಿಕ್ಕಾಗಿ ತೀವ್ರ ಪ್ರಯಾಸವನ್ನು ಮಾಡಿರಿ. ವೈಯಕ್ತಿಕ ಅಧ್ಯಯನದ ಒಳ್ಳೆಯ ಕಾರ್ಯಕ್ರಮವನ್ನು ಬೆಳೆಸಿಕೊಳ್ಳಿ, ಮತ್ತು ಇದರಲ್ಲಿ ಬೈಬಲನ್ನು ದಿನಾಲೂ ಓದುವುದು ಒಳಗೂಡಿರಲಿ. ಇತರರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುವುದರಲ್ಲಿ ಕ್ರಿಯಾಶೀಲರಾಗಿರಿ. ಈ ವಿಷಯಗಳನ್ನು ಕಾರ್ಯರೂಪಕ್ಕೆ ಹಾಕುವ ಮೂಲಕ, ನೀವು ನಿಮ್ಮ ಆತ್ಮಿಕ ಅಭಿವೃದ್ಧಿಯನ್ನು ಪ್ರಸಿದ್ಧಪಡಿಸುವಿರಿ. (1 ತಿಮೊ. 4:15) ಪೂರ್ಣ ಸಮಯದ ಸೇವೆಯ ಜೀವನವೃತ್ತಿಗಾಗಿ ಈಗ ಸಿದ್ಧತೆಗಳನ್ನು ಮಾಡಿಕೊಳ್ಳುವವರಿಗೆ ಎಂತಹ ಅದ್ಭುತಕರವಾದ ಪ್ರತೀಕ್ಷೆಗಳು ಕಾದಿವೆ!
24 ಹೆತ್ತವರೇ, ನಿಮ್ಮ ಮಕ್ಕಳನ್ನು ತರಬೇತುಗೊಳಿಸಿರಿ: ಯುವ ಜನರು ಪೂರ್ಣ ಸಮಯದ ಶುಶ್ರೂಷೆಯನ್ನು ಬೆನ್ನಟ್ಟುವಂತೆ ಪ್ರೋತ್ಸಾಹಿಸಲಿಕ್ಕಾಗಿ ಹೆತ್ತವರು ಏನು ಮಾಡಬಲ್ಲರು? ಯೇಸು ಹೇಳಿದ್ದು: “ಶಿಷ್ಯನು ಪೂರ್ಣ ಕಲಿತಾಗ ಗುರುವಿನಂತೆ ಆಗುವನು.” (ಲೂಕ 6:40, ಪರಿಶುದ್ಧ ಬೈಬಲ್) ಸಮಗ್ರವಾಗಿ ತರಬೇತುಗೊಳಿಸಲ್ಪಟ್ಟಿರುವ ಒಬ್ಬ ಶಿಷ್ಯನು ತನ್ನ ಸಮರ್ಪಣಾಭಾವದ ಗುರುವಿನ ಉತ್ತಮ ಗುಣಗಳನ್ನು ಸಹಜವಾಗಿಯೇ ಪ್ರತಿಬಿಂಬಿಸುವನು. ‘ದೇವಭಕ್ತಿಯನ್ನು’ ಗುರಿಯಾಗಿಟ್ಟು, ತಮ್ಮ ಮಕ್ಕಳನ್ನು ತರಬೇತುಗೊಳಿಸುವುದರಲ್ಲಿ ಕಠಿನ ಪ್ರಯಾಸವನ್ನು ಮಾಡುವ ಹೆತ್ತವರು ಈ ಮೂಲತತ್ತ್ವವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. (1 ತಿಮೊ. 4:7) ಆತ್ಮಿಕ ವಿಷಯಗಳ ಕಡೆಗೆ ತಮ್ಮ ಹೆತ್ತವರು ತೋರಿಸುವ ಮನೋಭಾವವನ್ನು ಮಕ್ಕಳು ಪ್ರತಿಬಿಂಬಿಸುವ ಪ್ರವೃತ್ತಿಯುಳ್ಳವರಾಗಿರುವುದರಿಂದ, ಹೆತ್ತವರು ಹೀಗೆ ಕೇಳಿಕೊಳ್ಳುವುದು ಉತ್ತಮ: ‘ಯೆಹೋವನ ಸತ್ಯ ಆರಾಧನೆಯ ಅಭಿರುಚಿಗಳನ್ನು ಪ್ರವರ್ಧಿಸಲಿಕ್ಕಾಗಿ ಬೆತೆಲ್ನಲ್ಲಿ ಮಾಡಲ್ಪಡುತ್ತಿರುವ ಕೆಲಸವನ್ನು ನಾವು ವೈಯಕ್ತಿಕವಾಗಿ ಮೌಲ್ಯ ಮಾಡುತ್ತೇವೋ? ಬೆತೆಲ್ ಏರ್ಪಾಡಿನ ಮೇಲೆ ಯೆಹೋವನ ಆಶೀರ್ವಾದವಿರುವುದನ್ನು ನಾವು ಗ್ರಹಿಸಿಕೊಳ್ಳುತ್ತೇವೋ? ನಮ್ಮ ಮಕ್ಕಳು ಆಯ್ದುಕೊಳ್ಳಬಹುದಾದ ಅತ್ಯುತ್ತಮ ಜೀವನವೃತ್ತಿಯು ಯೆಹೋವನ ಸೇವೆಯಲ್ಲಿ ಕಳೆಯುವ ಜೀವನವೇ ಆಗಿದೆ ಎಂದು ನಾವು ನಂಬುತ್ತೇವೋ?’ ಬೆತೆಲ್ ಸೇವೆ ಮತ್ತು ಅಲ್ಲಿ ನಡೆಸಲ್ಪಡುವ ಕೆಲಸಕ್ಕಾಗಿ ನಾವು ತೋರಿಸುವ ಹೃತ್ಪೂರ್ವಕ ಗಣ್ಯತೆಯು ನಮ್ಮ ಮಕ್ಕಳಲ್ಲಿ ಅಂತಹದ್ದೇ ಗಣ್ಯತೆಯನ್ನು ಬೇರೂರಿಸಲು ನಮಗೆ ಸಹಾಯಮಾಡುವುದು.
25 ಎಲ್ಕಾನ ಮತ್ತು ಹನ್ನರಿಗೆ ಸತ್ಯಾರಾಧನೆಯ ವಿಷಯದಲ್ಲಿ ಗಾಢವಾದ ಗಣ್ಯತೆಯಿತ್ತು. ಅವರು ಇಂದಿನ ಕ್ರೈಸ್ತ ಹೆತ್ತವರಿಗಾಗಿ ಒಂದು ಪರಿಗಣನಾರ್ಹ ಮಾದರಿಯನ್ನಿಟ್ಟರು. ಪ್ರಾಚೀನ ಇಸ್ರಾಯೇಲಿನಲ್ಲಿ, ವರ್ಷಕ್ಕೆ ಮೂರಾವರ್ತಿ ದೇವಗುಡಾರಕ್ಕೆ, “ಕರ್ತನಾದ ದೇವರ ಸನ್ನಿಧಿಗೆ ಬರ”ಬೇಕೆಂಬದಾಗಿ ಇಸ್ರಾಯೇಲ್ಯ ಪುರುಷರನ್ನು ಮಾತ್ರ ಅವಶ್ಯಪಡಿಸಲ್ಪಟ್ಟಿತ್ತು. ಆದರೂ, ಪ್ರಾಯಶಃ ಪಾದಯಾತ್ರೆ ಮಾಡುತ್ತಾ, ಎಲ್ಕಾನನು ತನ್ನ ಇಡೀ ಕುಟುಂಬದೊಂದಿಗೆ ಯೆಹೋವನ ಆರಾಧನೆಯ ಈ ಕೇಂದ್ರದಲ್ಲಿ ಯಜ್ಞವನ್ನು ಅರ್ಪಿಸಲಿಕ್ಕಾಗಿ “ಪ್ರತಿವರುಷವೂ” ಸುಮಾರು 30 ಕಿಲೊಮೀಟರುಗಳ ಪ್ರಯಾಣವನ್ನು ಮಾಡಿದನು. (ವಿಮೋ. 23:17; 1 ಸಮು. 1:3, 4, 9, 19; 2:19) ಈ ಕುಟುಂಬದ ತಲೆಯು, ಆತ್ಮಿಕ ವಿಷಯಗಳಲ್ಲಿ ತಾನು ತೋರಿಸುವಂಥ ಆಸಕ್ತಿಯನ್ನು ತನ್ನ ಇಡೀ ಕುಟುಂಬದವರು ಸಹ ತೋರಿಸಬೇಕೆಂದು ಬಯಸಿದನೆಂಬುದು ವ್ಯಕ್ತ.
26 ಹನ್ನಳು ತನ್ನ ಗಂಡನು ಸತ್ಯಾರಾಧನೆಗಾಗಿ ತೋರಿಸಿದ ಅದೇ ಆಸಕ್ತಿಯನ್ನು ತೋರಿಸಿದಳು. ದೇವಗುಡಾರದಲ್ಲಿ ನಡೆಯುತ್ತಿದ್ದ ಸತ್ಯಾರಾಧನೆಯನ್ನು ಬೆಂಬಲಿಸಲು ನೆರವು ನೀಡುವ ಕರ್ತವ್ಯವು ತನಗೂ ಇದೆಯೆಂಬ ಗಾಢವಾದ ಪ್ರಜ್ಞೆ ಅವಳಲ್ಲಿತ್ತು. ತನಗೆ ಯೆಹೋವನು ಒಂದು ಮಗನನ್ನು ದಯಪಾಲಿಸುವುದಾದರೆ, ಅವನನ್ನು ದೇವಗುಡಾರದಲ್ಲಿನ ಸೇವೆಗಾಗಿ ಅರ್ಪಿಸುವೆನೆಂದು ಹನ್ನಳು ಹರಕೆ ಮಾಡಿದಳು. (1 ಸಮು. 1:11) ಮೋಶೆಯ ಧರ್ಮಶಾಸ್ತ್ರಕ್ಕನುಸಾರ ಗಂಡನೊಬ್ಬನಿಗೆ, ತನ್ನ ಹೆಂಡತಿಯು ಮಾಡಿರುವ ಒಂದು ಅಯುಕ್ತ ಹರಕೆಯನ್ನು ರದ್ದುಮಾಡುವ ಹಕ್ಕಿತ್ತು. (ಅರ. 30:6-8) ಹಾಗಿದ್ದರೂ, ಎಲ್ಕಾನ ಹನ್ನಳ ಹರಕೆಯನ್ನು ಸಮ್ಮತಿಸಿದನು ಎಂದು ವ್ಯಕ್ತವಾಗುತ್ತದೆ, ಮತ್ತು ಈ ರೀತಿಯಲ್ಲಿ ಅವನು ಸತ್ಯಾರಾಧನೆಯ ಆ ಅಭಿವ್ಯಕ್ತಿಯನ್ನು ತಾನೂ ಸಮರ್ಥಿಸುತ್ತೇನೆಂದು ತೋರಿಸಿದನು.—1 ಸಮು. 1:22, 23.
27 ತನ್ನ ಹೆತ್ತವರಿಂದ ತೋರಿಸಲ್ಪಟ್ಟ ಗಣ್ಯತೆ ಮತ್ತು ಉತ್ತಮ ಮನೋಭಾವವು ಸಮುವೇಲನನ್ನು ಸಕಾರಾತ್ಮಕವಾಗಿ ಪ್ರಭಾವಿಸಿತೋ? ಖಂಡಿತವಾಗಿಯೂ ಹೌದು. ಒಬ್ಬ ಎಳೆಯ ಬಾಲಕನಾಗಿ, ಸಮುವೇಲನು ತನಗೆ ನೇಮಿತವಾದ ಕೆಲಸಗಳನ್ನು ಸಿದ್ಧಮನಸ್ಸಿನಿಂದಲೂ ನಂಬಿಗಸ್ತಿಕೆಯಿಂದಲೂ ಪೂರೈಸಿದನು, ಮತ್ತು ದೇವರ ಸೇವೆಯಲ್ಲಿ ಮಾನ್ಯತೆಯುಳ್ಳ ಹೆಚ್ಚಿನ ಸುಯೋಗಗಳಿಗಾಗಿ ತರಬೇತುಗೊಳಿಸಲ್ಪಟ್ಟನು. ದೇವಗುಡಾರದಲ್ಲಿ ಸಮುವೇಲನು ತನ್ನ ಕರ್ತವ್ಯಗಳನ್ನು ನಿಭಾಯಿಸಲು ಆರಂಭಿಸಿದೊಡನೆ ಎಲ್ಕಾನ ಮತ್ತು ಹನ್ನರಿಗೆ ಅವನು ಅಲ್ಲಿ ಸಲ್ಲಿಸುವ ಸೇವೆಯ ಕುರಿತಾದ ಆಸಕ್ತಿಯು ಕೊನೆಗೊಳ್ಳಲಿಲ್ಲ. ಅವನು ಪೂರ್ಣ ಸಮಯದ ಸೇವೆಯನ್ನು ಬೆನ್ನಟ್ಟುತ್ತಾ ಮುಂದುವರಿದಾಗ ಅವರು ಅವನನ್ನು ಪ್ರೋತ್ಸಾಹಿಸಲಿಕ್ಕಾಗಿ ಮತ್ತು ಬೆಂಬಲಿಸಲಿಕ್ಕಾಗಿ ಕ್ರಮವಾಗಿ ಭೇಟಿಮಾಡುತ್ತಾ ಇದ್ದರು.—1 ಸಮು. 2:18, 19.
28 ಇಂದಿನ ಕ್ರೈಸ್ತ ಹೆತ್ತವರಿಗೆ ಎಲ್ಕಾನ ಮತ್ತು ಹನ್ನ ಎಂತಹ ಎದ್ದುಕಾಣುವ ಮಾದರಿಯನ್ನು ಇಟ್ಟಿದ್ದಾರೆ! ನಮ್ಮ ಮಕ್ಕಳು, ಬೆತೆಲ್ ಸೇವೆಯ ಸುಯೋಗಕ್ಕಾಗಿರುವ ನಮ್ಮ ಗಣ್ಯತೆಯ ಹೃತ್ಪೂರ್ವಕ ಅಭಿವ್ಯಕ್ತಿಗಳನ್ನು ಕೇಳಿಸಿಕೊಳ್ಳುವಾಗ ಮತ್ತು ರಾಜ್ಯದ ಅಭಿರುಚಿಗಳನ್ನು ಪ್ರವರ್ಧಿಸಲು ನಾವು ತೋರಿಸುವ ಸ್ವತ್ಯಾಗದ ಆತ್ಮವನ್ನು ನೋಡುವಾಗ, ಅವರು ಸಹ ಇತರರನ್ನು ಸೇವಿಸುವಂಥ ಪ್ರವೃತ್ತಿಯುಳ್ಳ ಹೃದಯವನ್ನು ವಿಕಸಿಸಿಕೊಳ್ಳುವರು. ಅನೇಕ ಹೆತ್ತವರು ಈಗಾಗಲೇ ತಮ್ಮ ಮಕ್ಕಳಲ್ಲಿ ಈ ಹಿತಕರವಾದ ಪ್ರವೃತ್ತಿಯನ್ನು ಯಶಸ್ವಿದಾಯಕವಾಗಿ ತುಂಬಿಸುತ್ತಿದ್ದಾರೆ. ಒಬ್ಬ ಏಳು ವರ್ಷ ಪ್ರಾಯದ ಹುಡುಗಿಯು ಬರೆದದ್ದು: “ನಾನು ದೊಡ್ಡವಳಾದ ಮೇಲೆ ಬೆತೆಲಿಗೆ ಸೇರಿಕೊಳ್ಳಲು ಬಯಸುತ್ತೇನೆ. ಮತ್ತು ಅಲ್ಲಿ ನಾನು ಈ ಕೆಲವು ಕೆಲಸಗಳನ್ನು ಮಾಡಲು ಬಯಸುತ್ತೇನೆ. (1) ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಟೈಪ್ ಮಾಡುವುದು, (2) ನಿಮ್ಮ ಕಲಾಕೃತಿ ವಿಭಾಗದಲ್ಲಿ ಕೆಲಸಮಾಡಬೇಕು, (3) ಲಾಂಡ್ರಿಯಲ್ಲಿ ಬಟ್ಟೆ ಮಡಿಚುವುದು. ಇದರಲ್ಲಿ ಯಾವುದೇ ಕೆಲಸವು ಲಭ್ಯವಿರಲಿ, ನಾನು ಅದನ್ನು ಮಾಡುವೆ, ನನಗೇನೂ ತೊಂದರೆಯಿಲ್ಲ.” ನಮ್ಮ ಮಕ್ಕಳ ಹೃದಯಗಳಲ್ಲಿ ಈ ರೀತಿಯ ಸಿದ್ಧಮನಸ್ಸು ಬೆಳೆಯುವುದನ್ನು ನೋಡುವುದು ಎಷ್ಟು ಹೃದಯೊತ್ತೇಜಕವಾಗಿದೆ!
29 ಯುವ ಜನರೇ, “ಲೋಕವೂ ಅದರ ಆಶೆಯೂ ಗತಿಸಿಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು” ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಿ. (1 ಯೋಹಾ. 2:17) ಆತ್ಮಿಕ ಗುರಿಗಳನ್ನು ಬೆನ್ನಟ್ಟುತ್ತಾ ಮುಂದುವರಿಯಿರಿ, ಮತ್ತು ಇದರಲ್ಲಿ ಬೆತೆಲ್ ಸೇವೆಯ ವಿಶೇಷ ಸುಯೋಗವೂ ಒಳಗೂಡಿರಲಿ. ಹೆತ್ತವರೇ, ದೇವಭಕ್ತಿಯನ್ನು ಬೆಳೆಸಿಕೊಳ್ಳುವಂತೆ ತಮ್ಮ ಮಕ್ಕಳಿಗೆ ಪ್ರೋತ್ಸಾಹಿಸಿದ ಪೂರ್ವದ ನಂಬಿಗಸ್ತರ ಮಾದರಿಯನ್ನು ಅನುಕರಿಸಿರಿ. (2 ಪೇತ್ರ 3:11) ಮತ್ತು ನಾವೆಲ್ಲರೂ, ನಮ್ಮ ಯುವ ಸಹೋದರ ಸಹೋದರಿಯರು ನಮ್ಮ ಮಹಾ ಸೃಷ್ಟಿಕರ್ತನಿಗೆ ಸಾಧ್ಯವಿರುವಷ್ಟು ಪೂರ್ಣವಾಗಿ ಸೇವೆಸಲ್ಲಿಸುವಂತೆ ಅವರಿಗೆ ಬೆಂಬಲವನ್ನು ನೀಡುವುದರಲ್ಲಿ ನಮ್ಮ ಪಾಲನ್ನು ಮಾಡೋಣ. ಏಕೆಂದರೆ, ಇದು “ಈಗಿನ ಮತ್ತು ಬರಲಿರುವ ಜೀವನದ ವಾಗ್ದಾನವನ್ನು ಕೊಡುತ್ತದೆ.”—1 ತಿಮೊ. 4:8, NW; ಪ್ರಸಂ. 12:1.
[ಪುಟ 4 ರಲ್ಲಿರುವ ಚೌಕ]
ಬೆತೆಲ್ ಸೇವೆಗಾಗಿ ಮೂಲಭೂತವಾಗಿ ಅಪೇಕ್ಷಿಸಲ್ಪಡುವ ವಿಷಯಗಳು
● ದೀಕ್ಷಾಸ್ನಾನವಾಗಿ ಕಡಿಮೆಪಕ್ಷ ಒಂದು ವರ್ಷ ಆಗಿರಬೇಕು
● ಯೆಹೋವನಿಗಾಗಿ ಮತ್ತು ಆತನ ಸಂಸ್ಥೆಗಾಗಿ ಆಳವಾದ ಪ್ರೀತಿಯನ್ನು ಹೊಂದಿರುವ ಆತ್ಮಿಕ ವ್ಯಕ್ತಿಯಾಗಿರಬೇಕು
● ಒಳ್ಳೆಯ ಆತ್ಮಿಕ, ಮಾನಸಿಕ, ಭಾವನಾತ್ಮಕ, ಮತ್ತು ಶಾರೀರಿಕ ಆರೋಗ್ಯವನ್ನು ಹೊಂದಿದವರಾಗಿರಬೇಕು
● ಭಾರತದ ಪ್ರಜೆ ಅಥವಾ ಕಾನೂನುಬದ್ಧ ಸ್ಥಾಯಿ ನಿವಾಸಿಯಾಗಿರಬೇಕು
● ಇಂಗ್ಲಿಷ್ ಭಾಷೆಯನ್ನು ಚೆನ್ನಾಗಿ ಓದಲು, ಬರೆಯಲು ಮತ್ತು ಮಾತಾಡಲು ತಿಳಿದವರಾಗಿರಬೇಕು
● 19-35ರ ಪ್ರಾಯದವರಾಗಿರಬೇಕು