ಸಾರಿರಿ ಮತ್ತು ಸಮಗ್ರವಾಗಿ ಸಾಕ್ಷಿ ನೀಡಿರಿ
1 ‘ನಾಯಕನೂ ಅಧಿಪತಿಯೂ’ ಆಗಿರುವ ಯೇಸು, ತನ್ನ ಶಿಷ್ಯರ ಮುಂದಿದ್ದ ವಿಸ್ತಾರವಾದ ಸಾರುವ ಕೆಲಸಕ್ಕಾಗಿ ಅವರಿಗೆ ತರಬೇತಿ ನೀಡಿದನು. (ಯೆಶಾ. 55:4; ಲೂಕ 10:1-12; ಅ. ಕೃ. 1:8) ಅವರಿಗೆ ಯೇಸು ಕೊಟ್ಟ ನೇಮಕವನ್ನು ಅಪೊಸ್ತಲ ಪೇತ್ರನು ಈ ಮಾತುಗಳಲ್ಲಿ ವರ್ಣಿಸಿದನು: “ಆತನೇ ಜೀವಿತರಿಗೂ ಸತ್ತವರಿಗೂ ನ್ಯಾಯಾಧಿಪತಿಯಾಗಿ ದೇವರಿಂದ ನೇಮಕವಾದವನು ಎಂಬದನ್ನು ಜನರಿಗೆ ಸಾರಿ ಸಾಕ್ಷಿಹೇಳಬೇಕೆಂದು [“ಸಮಗ್ರವಾಗಿ ಸಾಕ್ಷಿ ನೀಡುವಂತೆ,” NW] ದೇವರು ನಮಗೆ ಅಪ್ಪಣೆಕೊಟ್ಟನು.” (ಅ. ಕೃ. 10:42) ಸಮಗ್ರವಾಗಿ ಸಾಕ್ಷಿ ನೀಡುವುದರಲ್ಲಿ ಏನು ಒಳಗೂಡಿದೆ?
2 ಅಪೊಸ್ತಲ ಪೌಲನ ಉದಾಹರಣೆಯನ್ನು ಪರಿಗಣಿಸುವುದರಿಂದ ನಾವು ಹೆಚ್ಚನ್ನು ಕಲಿಯಸಾಧ್ಯವಿದೆ. ಅವನು ಎಫೆಸದಲ್ಲಿದ್ದ ಸಭೆಯ ಹಿರೀ ಪುರುಷರೊಂದಿಗೆ ಕೂಡಿಬಂದಾಗ, ಅವರಿಗೆ ಹೀಗೆ ಜ್ಞಾಪಕ ಹುಟ್ಟಿಸಿದನು: “ನಾನು ನಿಮಗೆ ಹಿತಕರವಾದದ್ದೆಲ್ಲವನ್ನು ಹೇಳುವದಕ್ಕೂ ಸಭೆಯಲ್ಲಿಯೂ ಮನೆಮನೆಯಲ್ಲಿಯೂ ಉಪದೇಶಿಸುವದಕ್ಕೂ ಹಿಂತೆಗಿಯದೆ ಯೆಹೂದ್ಯರಿಗೂ ಗ್ರೀಕರಿಗೂ ದೇವರ ಕಡೆಗೆ ತಿರುಗಬೇಕೆಂತಲೂ ನಮ್ಮ ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡಬೇಕೆಂತಲೂ ಖಂಡಿತವಾಗಿ ಬೋಧಿಸುವವನಾಗಿದ್ದೆನು [“ಸಮಗ್ರವಾಗಿ ಸಾಕ್ಷಿ ನೀಡುವವನಾಗಿದ್ದೆನು,” NW].” ಪೌಲನು ಅನೇಕ ಪರೀಕ್ಷೆಗಳನ್ನು ತಾಳಿಕೊಂಡನಾದರೂ, ಸುವಾರ್ತೆಯೊಂದಿಗೆ ಸಾಧ್ಯವಿರುವಷ್ಟು ಹೆಚ್ಚು ಜನರನ್ನು ತಲಪಲಿಕ್ಕಾಗಿ ಅವನು ಬಹಳಷ್ಟು ಶ್ರಮಿಸಿದನು. ಅವನು ತನ್ನ ಕೇಳುಗರೊಂದಿಗೆ ಕೇವಲ ಮೂಲಭೂತ ಸತ್ಯತೆಗಳನ್ನು ಮಾತ್ರ ಹಂಚಿಕೊಳ್ಳುವುದರಲ್ಲಿ ತೃಪ್ತನಾಗಲಿಲ್ಲ, ಬದಲಾಗಿ “ದೇವರ ಸಂಕಲ್ಪವನ್ನೆಲ್ಲಾ” ಅವರಿಗೆ ತಿಳಿಸಲು ಪ್ರಯತ್ನಿಸಿದನು. ಇದನ್ನು ಪೂರೈಸಲಿಕ್ಕಾಗಿ ಅವನು ಅತ್ಯಧಿಕ ಪ್ರಯತ್ನವನ್ನೂ ತ್ಯಾಗಗಳನ್ನೂ ಮಾಡಲು ಮನಃಪೂರ್ವಕವಾಗಿ ಸಿದ್ಧನಿದ್ದನು. ಅವನು ಇನ್ನೂ ಹೇಳಿದ್ದು: “ಆದರೆ ಪ್ರಾಣವನ್ನು ಉಳಿಸಿಕೊಳ್ಳುವದೇ ವಿಶೇಷವೆಂದು ನಾನು ಎಣಿಸುವದಿಲ್ಲ. ದೇವರ ಕೃಪೆಯ ವಿಷಯವಾದ ಸುವಾರ್ತೆಯನ್ನು ಆಸಕ್ತಿಯಿಂದ ಪ್ರಕಟಿಸಬೇಕೆಂಬದಾಗಿ [“ಸಮಗ್ರವಾಗಿ ಸಾಕ್ಷಿ ನೀಡಬೇಕೆಂಬದಾಗಿ,” NW] ಕರ್ತನಾದ ಯೇಸುವಿನಿಂದ ನಾನು ಹೊಂದಿರುವ ಸೇವೆಯೆಂಬ ಓಟವನ್ನು ಕಡೆಗಾಣಿಸುವದೊಂದೇ ನನ್ನ ಅಪೇಕ್ಷೆ.—ಅ. ಕೃ. 20:20, 21, 24, 27.
3 ಇಂದು ನಾವು ಪೌಲನ ಮಾದರಿಯನ್ನು ಹೇಗೆ ಅನುಸರಿಸಸಾಧ್ಯವಿದೆ? (1 ಕೊರಿಂ. 11:1) ಸ್ವತಃ ನಾವೇ ಕಷ್ಟಕರ ಪರಿಸ್ಥಿತಿಗಳನ್ನು ಎದುರಿಸುತ್ತಿರುವಾಗಲೂ ಅರ್ಹರಾದ ವ್ಯಕ್ತಿಗಳು ಹಾಗೂ ಕುಟುಂಬಗಳಿಗಾಗಿ ಹುಡುಕುವ ಮೂಲಕ, ಎಲ್ಲಾ ಹಿನ್ನೆಲೆಗಳ ಹಾಗೂ ಭಾಷೆಗಳ ಜನರನ್ನು ಸುವಾರ್ತೆಯೊಂದಿಗೆ ತಲಪಲು ಶ್ರಮಿಸುವ ಮೂಲಕ ಹಾಗೂ ನಾವು ಕಂಡುಕೊಳ್ಳುವ ಆಸಕ್ತಭರಿತ ಜನರಿಗೆ ಸಹಾಯಮಾಡುವ ಮೂಲಕವೇ. (ಮತ್ತಾ. 10:12, 13) ಇದಕ್ಕಾಗಿ ಸಮಯ, ಪ್ರಯತ್ನ, ಮತ್ತು ಜನರಿಗಾಗಿರುವ ಪ್ರೀತಿಯ ಅಗತ್ಯವಿದೆ.
4 ನೀವು ಒಬ್ಬ ಆಕ್ಸಿಲಿಯರಿ ಪಯನೀಯರರಾಗಿ ಸೇವೆಮಾಡಬಲ್ಲಿರೋ? ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡುವ ಮೂಲಕ ಸಮಗ್ರವಾಗಿ ಸಾಕ್ಷಿಯನ್ನು ನೀಡಲು ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳು ನಿಮಗೆ ಒಂದು ಅತ್ಯುತ್ತಮ ಸದಾವಕಾಶವಾಗಿರಸಾಧ್ಯವಿದೆ. ಕಳೆದ ವರ್ಷ ಅನೇಕ ಪ್ರಚಾರಕರು ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲಿಕ್ಕಾಗಿ ವಿಶೇಷ ಪ್ರಯತ್ನವನ್ನು ಮಾಡಿದ್ದನ್ನು ನೋಡುವುದು ಎಷ್ಟು ಉತ್ತೇಜನದಾಯಕವಾಗಿತ್ತು!
5 ಅನೇಕ ಆರೋಗ್ಯ ಸಮಸ್ಯೆಗಳಿದ್ದ 80 ವರ್ಷ ಪ್ರಾಯದ ಒಬ್ಬ ಸಹೋದರಿಯು, ಯೆಹೋವನ ಸಂಸ್ಥೆಯಿಂದ ಒದಗಿಸಲ್ಪಟ್ಟ ಉತ್ತೇಜನದಿಂದ ಪ್ರಚೋದಿತಳಾದಳು. ಅವಳು ಬರೆದುದು: “ದೀರ್ಘ ಸಮಯದಿಂದಲೂ ನನ್ನ ಹೃದಯದಲ್ಲಿದ್ದ ಬಯಕೆಯ ಕಿಡಿಯನ್ನು ಅದು ಹೊತ್ತಿಸಿತು, ಮತ್ತು ಕಡಿಮೆಪಕ್ಷ ಇನ್ನೊಂದು ಸಲವಾದರೂ ನಾನು ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲೇಬೇಕು ಎಂದು ನನಗನಿಸುವಂತೆ ಮಾಡಿತು.” ಅವಳು ಮಾರ್ಚ್ ತಿಂಗಳಿಗಾಗಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡುವ ಗುರಿಯನ್ನಿಡಲು ನಿರ್ಧರಿಸಿದಳು. ಅವಳು ಹೇಳಿದ್ದು: “ಮೊದಲಾಗಿ ನಾನು ಮಾಡಿದ ಕೆಲಸವೆಂದರೆ, ಕುಳಿತುಕೊಂಡು ಅದಕ್ಕೆ ತಗಲುವ ವೆಚ್ಚವನ್ನು ಲೆಕ್ಕಿಸುವುದೇ. ನನಗೆ ನನ್ನ ಮಗಳ ಸಹಾಯದ ಅಗತ್ಯವಿದ್ದುದರಿಂದ, ನನ್ನ ಯೋಜನೆಯನ್ನು ಅವಳೊಂದಿಗೆ ಚರ್ಚಿಸಿದೆ. ಅವಳು ಸ್ವತಃ ತನಗಾಗಿಯೇ ಒಂದು ಅರ್ಜಿಯನ್ನು ತರುವ ಮೂಲಕ ನನ್ನನ್ನು ಚಕಿತಗೊಳಿಸಿದಳು.” ಆ ತಿಂಗಳಲ್ಲಿ ಆ ವೃದ್ಧ ಸಹೋದರಿಯು ಶುಶ್ರೂಷೆಯಲ್ಲಿ 52 ತಾಸುಗಳನ್ನು ವ್ಯಯಿಸಿದಳು. “ನನ್ನ ಬಲವು ಕುಂದುತ್ತಾ ಇದೆ ಎಂದು ನನಗನಿಸಿದಾಗ, ನನ್ನ ಬಲವನ್ನು ನವೀಕರಿಸುವಂತೆ ಅನೇಕಬಾರಿ ನಾನು ಯೆಹೋವನಿಗೆ ಪ್ರಾರ್ಥಿಸಿದೆ. ತಿಂಗಳ ಕೊನೆಯಲ್ಲಿ ನಾನು ಬಹಳ ಸಂತೋಷವನ್ನೂ ಸಂತೃಪ್ತಿಯನ್ನೂ ಕಂಡುಕೊಂಡೆ, ಮತ್ತು ನನಗೆ ಸಹಾಯಮಾಡಿದ್ದಕ್ಕಾಗಿ ನಾನು ಯೆಹೋವನಿಗೆ ಅನೇಕಬಾರಿ ಉಪಕಾರ ಹೇಳಿದೆ. ನಾನು ಪುನಃ ಆ ಸೇವೆಯನ್ನು ಮಾಡಲು ಬಯಸುತ್ತೇನೆ.” ಅವಳ ಸಂತೋಷಭರಿತ ಅನುಭವವು, ಗಂಭೀರವಾದ ಆರೋಗ್ಯ ಸಮಸ್ಯೆಗಳ ಮಧ್ಯೆಯೂ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲು ನಿಜವಾಗಿಯೂ ಬಯಸುವಂಥ ಇತರರನ್ನೂ ಉತ್ತೇಜಿಸಬಹುದು.
6 ತನ್ನ ಐಹಿಕ ಉದ್ಯೋಗವನ್ನು ಅನಿರೀಕ್ಷಿತವಾಗಿ ಕಳೆದುಕೊಂಡಿದ್ದ ಸಹೋದರನೊಬ್ಬನು, ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲಿಕ್ಕಾಗಿ ಈ ಸನ್ನಿವೇಶವನ್ನು ಸದುಪಯೋಗಿಸಿದನು. ಅವನು ಪಯನೀಯರ್ ಸೇವೆಯನ್ನು ಮಾಡುತ್ತಿದ್ದ ಆ ತಿಂಗಳಿನಲ್ಲಿ, ಸಾರುವ ಕೆಲಸಕ್ಕಾಗಿ ಅವನು ಇನ್ನೂ ಹುರುಪನ್ನು ಪಡೆದುಕೊಂಡನು, ಮತ್ತು ಆ ತಿಂಗಳ ಕೊನೆಯಲ್ಲಿ ಅವನು ಒಂದು ಹೊಸ ಬೈಬಲ್ ಅಧ್ಯಯನವನ್ನು ಆರಂಭಿಸಿದ್ದನು. ಈ ಅನುಭವದ ಕುರಿತು ಪುನರಾಲೋಚಿಸುತ್ತಾ ಅವನು ಹೇಳಿದ್ದು: “ಅದು ಎಷ್ಟು ಪ್ರತಿಫಲದಾಯಕ ತಿಂಗಳಾಗಿತ್ತು!” ಯೆಹೋವನ ಮಾರ್ಗದರ್ಶನ ಹಾಗೂ ಸಹಾಯವನ್ನು ಪಡೆದುಕೊಂಡದ್ದಕ್ಕಾಗಿ ಅವನೆಷ್ಟು ಸಂಭ್ರಮಪಟ್ಟನು! ಹೌದು, ಶುಶ್ರೂಷೆಯಲ್ಲಿ ಆ ಸಹೋದರನು ಮಾಡಿದ ಹೆಚ್ಚಿನ ಪ್ರಯತ್ನಕ್ಕಾಗಿ ಯೆಹೋವನು ಅವನ ಮೇಲೆ ಸ್ಥಳಹಿಡಿಯಲಾಗದಷ್ಟು ಸುವರವನ್ನು ಸುರಿಸಿದನು, ಮತ್ತು ತದ್ರೀತಿಯಲ್ಲಿ ಆತನು ನಿಮ್ಮನ್ನೂ ಆಶೀರ್ವದಿಸುವನು.—ಮಲಾ. 3:10.
7 ಅನೇಕ ಪ್ರಚಾರಕರಿಗೆ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವುದು ಸುಲಭದ ಕೆಲಸವಾಗಿರುವುದಿಲ್ಲ. ಆದರೂ, ಐಹಿಕ ಮತ್ತು ಕೌಟುಂಬಿಕ ಜವಾಬ್ದಾರಿಗಳು ಹಾಗೂ ವೈಯಕ್ತಿಕ ಸಮಸ್ಯೆಗಳ ಮಧ್ಯೆಯೂ ಅನೇಕ ಸಹೋದರ ಸಹೋದರಿಯರು ಈ ಸೇವೆಯನ್ನು ಮಾಡಲು ಶಕ್ತರಾಗಿದ್ದಾರೆ. ಸಮಗ್ರವಾಗಿ ಸಾಕ್ಷಿ ನೀಡುವುದರಲ್ಲಿ ಅನೇಕವೇಳೆ ನಮ್ಮ ಅಮೂಲ್ಯ ಸಮಯ ಹಾಗೂ ಶಕ್ತಿಯನ್ನು ತ್ಯಾಗಮಾಡುವುದು ಒಳಗೂಡಿರುತ್ತದಾದರೂ, ಇದರಿಂದ ದೊರಕುವ ಆಶೀರ್ವಾದಗಳು ವರ್ಣನಾತೀತ.—ಜ್ಞಾನೋ. 10:22.
8 ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳು ಆಕ್ಸಿಲಿಯರಿ ಪಯನೀಯರ್ ಸೇವೆಗೆ ಸೂಕ್ತವಾದ ಕಾಲಾವಧಿಗಳಾಗಿವೆ. ಮಾರ್ಚ್ ತಿಂಗಳಿನಲ್ಲಿ ಐದು ವಾರಾಂತ್ಯಗಳಿವೆ. ಈ ವಾರಾಂತ್ಯಗಳಲ್ಲಿ ಹಾಗೂ ಸಾಯಂಕಾಲದ ತಾಸುಗಳಲ್ಲಿ ಸಾರುವುದು, ಯಾರು ಪೂರ್ಣ ಸಮಯದ ಐಹಿಕ ಕೆಲಸವನ್ನು ಮಾಡುತ್ತಾರೋ ಅವರು ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡುವುದನ್ನು ಸಾಧ್ಯಗೊಳಿಸಬಹುದು. ಇದಲ್ಲದೆ, ಏಪ್ರಿಲ್ ತಿಂಗಳಲ್ಲಿ ಬರುವ ರಜಾದಿನಗಳನ್ನು ಸಹ ನೀವು ಉಪಯೋಗಿಸಿಕೊಳ್ಳಲು ಶಕ್ತರಾಗಿರಬಹುದು. ಕೆಲವರಿಗೆ ಶಾಲೆಯ ಅಥವಾ ಕೆಲಸದ ರಜೆಯಿರುತ್ತದೆ, ಈ ಸಮಯವನ್ನು ಅವರು 50 ತಾಸುಗಳ ಆವಶ್ಯಕತೆಯನ್ನು ಪೂರೈಸಲಿಕ್ಕಾಗಿ ಉಪಯೋಗಿಸಿಕೊಳ್ಳಸಾಧ್ಯವಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಶುಶ್ರೂಷೆಯಲ್ಲಿ 50 ತಾಸುಗಳನ್ನು ಶೆಡ್ಯೂಲ್ ಮಾಡಲಿಕ್ಕಾಗಿ, ಈ ಲೇಖನದಲ್ಲಿ ಒಳಗೂಡಿಸಲ್ಪಟ್ಟಿರುವ ಆಕ್ಸಿಲಿಯರಿ ಪಯನೀಯರ್ ಶೆಡ್ಯೂಲ್ಗಳಲ್ಲಿ ಒಂದನ್ನು ನೀವು ಉಪಯೋಗಿಸಬಲ್ಲಿರೋ? ನಿಮ್ಮ ಶೆಡ್ಯೂಲಿನ ಕುರಿತು ಇತರರೊಂದಿಗೆ ಚರ್ಚಿಸಿರಿ; ಇದರಿಂದಾಗಿ ಕೆಲವರು ಶುಶ್ರೂಷೆಯಲ್ಲಿ ನಿಮ್ಮೊಂದಿಗೆ ಜೊತೆಗೂಡುವಂತೆ ಪ್ರೋತ್ಸಾಹಿಸಲ್ಪಡುವರು ಎಂಬುದರಲ್ಲಿ ಸಂಶಯವೇ ಇಲ್ಲ. ಒಂದುವೇಳೆ ನೀವು ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲು ಅಶಕ್ತರಾಗಿರುವಲ್ಲಿ, ಈ ತಿಂಗಳಿಗಾಗಿ ಒಂದು ನಿರ್ದಿಷ್ಟ ಗುರಿಯನ್ನು ಇಡಿರಿ, ಮತ್ತು ಯಾರು ಪಯನೀಯರ್ ಸೇವೆಯನ್ನು ಮಾಡಲು ಶಕ್ತರಾಗಿದ್ದಾರೋ ಅವರನ್ನು ಬೆಂಬಲಿಸಿರಿ. ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಹೆಚ್ಚಿನ ಮಟ್ಟಿಗೆ ಸಾರಲಿಕ್ಕಾಗಿ ಈಗಲೇ ಯೋಜನೆಗಳನ್ನು ಮಾಡಿರಿ.
9 ಜ್ಞಾಪಕಾಚರಣೆಗಾಗಿ ಗಣ್ಯತೆಯನ್ನು ತೋರಿಸಿರಿ: ಪ್ರತಿ ವರ್ಷ ಜ್ಞಾಪಕಾಚರಣೆಯ ಸಮಯದಲ್ಲಿ, ಪ್ರಾಯಶ್ಚಿತ್ತ ಯಜ್ಞಕ್ಕಾಗಿರುವ ಕೃತಜ್ಞತೆಯು ಅನೇಕರನ್ನು ಆಕ್ಸಿಲಿಯರಿ ಪಯನೀಯರರಾಗಿ ಸೇವೆಮಾಡಲಿಕ್ಕಾಗಿ ‘ಸಮಯವನ್ನು ಖರೀದಿಸುವಂತೆ’ ಪ್ರಚೋದಿಸುತ್ತದೆ. (ಎಫೆ. 5:15, 16, NW) ಕಳೆದ ವರ್ಷ ಭಾರತದಲ್ಲಿ, ಮಾರ್ಚ್ ತಿಂಗಳಿನಲ್ಲಿ 2,509 ಮತ್ತು ಏಪ್ರಿಲ್ ತಿಂಗಳಿನಲ್ಲಿ 1,349 ಮಂದಿ ಆಕ್ಸಿಲಿಯರಿ ಪಯನೀಯರರಿದ್ದರು. ಅದು, ಈ ಎರಡೂ ತಿಂಗಳುಗಳಲ್ಲಿ ಪ್ರತಿಯೊಂದರಲ್ಲಿ ಸರಾಸರಿ 1,929 ಪಯನೀಯರರು ಇದ್ದರೆಂಬುದನ್ನು ಸೂಚಿಸುತ್ತದೆ. ಈ ಸಂಖ್ಯೆಯನ್ನು, ಸೇವಾ ವರ್ಷದ ಹಿಂದಿನ ತಿಂಗಳುಗಳಲ್ಲಿ ಪ್ರತಿಯೊಂದರಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಿದಂಥ 657ರ ಸರಾಸರಿ ಸಂಖ್ಯೆಯೊಂದಿಗೆ ಹೋಲಿಸಿರಿ. ಈ ವರ್ಷದ ಜ್ಞಾಪಕಾಚರಣೆಯ ಸಮಯಾವಧಿಯು, ಕ್ಷೇತ್ರ ಸೇವೆಯಲ್ಲಿ ನಮ್ಮ ಚಟುವಟಿಕೆಯನ್ನು ಅಧಿಕಗೊಳಿಸುವ ಮೂಲಕ ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞಕ್ಕಾಗಿ ನಮ್ಮ ಗಣ್ಯತೆಯನ್ನು ತೋರಿಸಲು ಇನ್ನೊಂದು ಅತ್ಯುತ್ತಮ ಅವಕಾಶವಾಗಿದೆ.
10 ಏಪ್ರಿಲ್ 16ನೇ ತಾರೀಖು ಸಮೀಪಿಸುತ್ತಿರುವಾಗ, ಜ್ಞಾಪಕಾಚರಣೆಯು ನಿಮಗೆ ಏನನ್ನು ಅರ್ಥೈಸುತ್ತದೆ ಎಂಬುದನ್ನು ಪರಿಗಣಿಸಿರಿ. ಕ್ರಿಸ್ತನ ಮರಣಕ್ಕೆ ನಡೆಸಿದ ಘಟನೆಗಳ ಕುರಿತು ಮತ್ತು ಅವನು ಯಾವುದರ ಕುರಿತು ತೀರ ಚಿಂತಿತನಾಗಿದ್ದನೋ ಆ ವಿಚಾರಗಳ ಕುರಿತು ಆಲೋಚಿಸಿರಿ. ಯೇಸುವಿನ ಮುಂದಿಡಲ್ಪಟ್ಟ ಆನಂದವನ್ನು ಹಾಗೂ ಅದು, ಅಂತಹ ದುರುಪಚಾರವನ್ನು ಸಹಿಸಲು ಅವನಿಗೆ ಹೇಗೆ ಸಹಾಯಮಾಡಿತೆಂಬುದನ್ನು ಮನನ ಮಾಡಿರಿ. ಸಾರುವ ಹಾಗೂ ಶಿಷ್ಯರನ್ನಾಗಿ ಮಾಡುವ ಕೆಲಸದ ಮೇಲ್ವಿಚಾರಣೆ ನಡೆಸುತ್ತಾ, ಸಭೆಯ ತಲೆಯೋಪಾದಿ ಅವನ ಸದ್ಯದ ಸ್ಥಾನದ ಕುರಿತು ಆಲೋಚಿಸಿರಿ. (1 ಕೊರಿಂ. 11:3; ಇಬ್ರಿ. 12:2; ಪ್ರಕ. 14:14-16) ನಿಮ್ಮ ಸನ್ನಿವೇಶಗಳು ಅನುಮತಿಸುವಷ್ಟರ ಮಟ್ಟಿಗೆ ಸಾರುವ ಕೆಲಸದಲ್ಲಿ ಪೂರ್ಣವಾದ ರೀತಿಯಲ್ಲಿ ಭಾಗವಹಿಸುವ ಮೂಲಕ, ಕ್ರಿಸ್ತನು ಮಾಡಿರುವುದೆಲ್ಲದ್ದಕ್ಕಾಗಿ ನಿಮ್ಮ ಗಣ್ಯತೆಯನ್ನು ತೋರಿಸಿರಿ.
11 ಸಮಗ್ರವಾಗಿ ಸಾಕ್ಷಿ ನೀಡುವಂತೆ ಇತರರನ್ನೂ ಉತ್ತೇಜಿಸಿರಿ: ಆಕ್ಸಿಲಿಯರಿ ಪಯನೀಯರ್ ಸೇವೆಯಲ್ಲಿ ಭಾಗವಹಿಸುವ ಮೂಲಕ, ಇತರರನ್ನು ಉತ್ತೇಜಿಸಲು ಹಿರಿಯರಿಗೆ ಮತ್ತು ಶುಶ್ರೂಷಾ ಸೇವಕರಿಗೆ ಒಳ್ಳೇ ಅವಕಾಶವಿರುತ್ತದೆ. ಕ್ಷೇತ್ರ ಸೇವೆಯಲ್ಲಿ ಪ್ರಚಾರಕರೊಂದಿಗೆ ಕೆಲಸಮಾಡುತ್ತಿರುವಾಗ ಮತ್ತು ಕುರಿಪಾಲನಾ ಭೇಟಿಗಳನ್ನು ನೀಡುತ್ತಿರುವಾಗ, ಈ ವಿಶೇಷ ಚಟುವಟಿಕೆಯಲ್ಲಿ ಪೂರ್ಣವಾದ ಪಾಲನ್ನು ಹೊಂದುವಂತೆ ವೈಯಕ್ತಿಕವಾಗಿ ಇತರರಿಗೆ ಸಹಾಯಮಾಡಲು ಅವರಿಗೆ ಅತ್ಯುತ್ತಮ ಅವಕಾಶಗಳಿರುತ್ತವೆ. ನಾವೆಲ್ಲರೂ ಇದರ ಕುರಿತು ಪ್ರಾರ್ಥಿಸೋಣ, ಹೀಗೆ ಸಮಗ್ರವಾಗಿ ಸಾಕ್ಷಿಯನ್ನು ನೀಡುವುದರಲ್ಲಿ ನಮ್ಮ ಐಕ್ಯ ಪ್ರಯತ್ನಗಳನ್ನು ಇನ್ನಷ್ಟು ಬಲಗೊಳಿಸೋಣ.
12 ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಹೆಚ್ಚಿನ ಚಟುವಟಿಕೆಗಾಗಿರುವ ಸಭಾ ಏರ್ಪಾಡುಗಳೊಂದಿಗೆ ಎಲ್ಲಾ ಹಿರಿಯರು ಮತ್ತು ಶುಶ್ರೂಷಾ ಸೇವಕರು ಒಳ್ಳೇ ರೀತಿಯಲ್ಲಿ ಸಹಕರಿಸುವಾಗ, ವಿಶೇಷವಾಗಿ ಸೇವಾ ಮೇಲ್ವಿಚಾರಕರು ಸೌವಾರ್ತಿಕ ಕೆಲಸಕ್ಕಾಗಿ ಸೂಕ್ತವಾದ ಏರ್ಪಾಡುಗಳನ್ನು ಮಾಡಬೇಕಾಗಿದೆ. ಅವರು ಪ್ರಚಾರಕರಲ್ಲಿ ಹೆಚ್ಚಿನವರಿಗೆ ಅನುಕೂಲಕರವಾಗಿರುವ ಕ್ಷೇತ್ರ ಸೇವಾ ಸ್ಥಳಗಳನ್ನು, ದಿನಗಳನ್ನು, ಮತ್ತು ಸಮಯಗಳನ್ನು ಸರಿಯಾಗಿ ಏರ್ಪಡಿಸಬೇಕು ಮತ್ತು ಇವುಗಳನ್ನು ಕ್ರಮವಾಗಿ ಸೇವಾ ಕೂಟಗಳಲ್ಲಿ ಪ್ರಕಟಿಸಬೇಕು. ದಿನದ ಬೇರೆ ಬೇರೆ ಸಮಯಗಳಲ್ಲಿ ಕೂಡಿಬರಲು ಏರ್ಪಾಡುಗಳನ್ನು ಮಾಡಬಹುದು. ಇದು ಸಭೆಯಲ್ಲಿರುವವರೆಲ್ಲರೂ ಬೇರೆ ಬೇರೆ ರೀತಿಯ ಸಾಕ್ಷಿ ಕಾರ್ಯದಲ್ಲಿ ಪಾಲ್ಗೊಳ್ಳಲು ಸದವಕಾಶವನ್ನು ನೀಡುತ್ತದೆ. ವ್ಯಾಪಾರ ಕ್ಷೇತ್ರದಲ್ಲಿ ಕೆಲಸಮಾಡುವುದು, ಬೀದಿಯಲ್ಲಿ ಸಾಕ್ಷಿ ನೀಡುವುದು, ಮನೆಯಿಂದ ಮನೆಗೆ ಭೇಟಿ ನೀಡುವುದು, ಪುನರ್ಭೇಟಿಗಳನ್ನು ಮಾಡುವುದು, ಮತ್ತು ಟೆಲಿಫೋನಿನ ಮೂಲಕ ಸಾಕ್ಷಿ ನೀಡುವುದು ಸಹ ಇದರಲ್ಲಿ ಒಳಗೂಡಿರಬಹುದು. ಇದಲ್ಲದೆ, ಸೇವಾ ಮೇಲ್ವಿಚಾರಕರು ಸಾಕಷ್ಟು ಪ್ರಮಾಣದ ಸಾಹಿತ್ಯಕ್ಕಾಗಿಯೂ ಏರ್ಪಾಡನ್ನು ಮಾಡಬೇಕು, ಮತ್ತು ಈ ತಿಂಗಳುಗಳಲ್ಲಿ ಟೆರಿಟೊರಿಯೂ ಲಭ್ಯವಿರಬೇಕು.
13 ಮಾರ್ಚ್ ತಿಂಗಳಿಗಾಗಿರುವ ನೀಡುವಿಕೆಯು ಜ್ಞಾನ ಪುಸ್ತಕವಾಗಿದ್ದು, ಬೈಬಲ್ ಅಧ್ಯಯನಗಳನ್ನು ಆರಂಭಿಸುವುದೇ ಇದರ ಗುರಿಯಾಗಿದೆ. ಜ್ಞಾನ ಪುಸ್ತಕವನ್ನು ನೀಡಲಿಕ್ಕಾಗಿರುವ ಅತ್ಯುತ್ತಮ ಸಲಹೆಗಳು, ಜನವರಿ 2002ರ ನಮ್ಮ ರಾಜ್ಯದ ಸೇವೆಯ ಪುರವಣಿಯಲ್ಲಿ ಬಂದಿದ್ದವು. ಏಪ್ರಿಲ್ ತಿಂಗಳ ನೀಡುವಿಕೆಯು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಾಗಿವೆ. “ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?” ಎಂಬ ಅಂಕಣದಲ್ಲಿ ಕಂಡುಬರುವ ಸೂಚಿತ ನಿರೂಪಣೆಗಳನ್ನು ಉಪಯೋಗಿಸಲು ಪ್ರಯತ್ನಿಸಿರಿ. ಸಮಗ್ರವಾಗಿ ಸಾಕ್ಷಿಯನ್ನು ಕೊಡಲಿಕ್ಕಾಗಿ ಎಲ್ಲರೂ ಚೆನ್ನಾಗಿ ತಯಾರಿಯನ್ನು ಮಾಡಲು ಸಮಯವನ್ನು ತೆಗೆದುಕೊಳ್ಳತಕ್ಕದ್ದು.
14 ಸಭೆಯ ತಲೆಯಾಗಿರುವ ಯೇಸು ಕ್ರಿಸ್ತನ ಮಾರ್ಗದರ್ಶನದ ಕೆಳಗೆ ಕೆಲಸಮಾಡಲು ಮತ್ತು ಇತರರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುವ ಸುಯೋಗವನ್ನು ಹೊಂದಿರಲು ನಾವೆಷ್ಟು ಆಶೀರ್ವದಿತರು! ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳು ಸಮೀಪಿಸುವಾಗ, ಸಾರುವ ಹಾಗೂ ಸಮಗ್ರ ಸಾಕ್ಷಿಯನ್ನು ನೀಡುವ ಕ್ರಿಸ್ತನ ಆಜ್ಞೆಗೆ ನಾವು ವಿಧೇಯರಾಗುತ್ತಾ, ಇವುಗಳನ್ನು ಅತ್ಯಂತ ಫಲದಾಯಕ ತಿಂಗಳುಗಳಾಗಿ ಮಾಡಲು ನಾವು ಪುನಃ ಒಮ್ಮೆ ಶ್ರಮಿಸೋಣ.
[ಪುಟ 4 ರಲ್ಲಿರುವ ಚೌಕ]
ಇಸವಿ 2003ರ ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲಿಕ್ಕಾಗಿರುವ ಬೇರೆ ಬೇರೆ ಮಾರ್ಗಗಳು
ದಿನ ತಾಸುಗಳು
ಸೋಮವಾರ 1 2 — — 2 —
ಮಂಗಳವಾರ 1 — 3 — — —
ಬುಧವಾರ 1 2 — 5 — —
ಗುರುವಾರ 1 — 3 — — —
ಶುಕ್ರವಾರ 1 2 — — — —
ಶನಿವಾರ 5 4 3 5 6 7
ಭಾನುವಾರ 2 2 3 2 2 3
ಮಾರ್ಚ್ 56 56 54 55 50 50
ಏಪ್ರಿಲ್ 50 50 51 53 — —
ಈ ಶೆಡ್ಯೂಲ್ಗಳಲ್ಲಿ ಒಂದು ನಿಮಗೆ ಸೂಕ್ತವಾಗಿರುವುದೋ?