ನಾವು ನಮ್ಮ ಆರಾಧನಾ ಸ್ಥಳವನ್ನು ಸುಸ್ಥಿತಿಯಲ್ಲಿಡೋಣ
1. ಒಂದು ರಾಜ್ಯ ಸಭಾಗೃಹದ ಉದ್ದೇಶವೇನು?
1 ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳ 94,000ಕ್ಕಿಂತಲೂ ಹೆಚ್ಚಿನ ಸಭೆಗಳಿವೆ. ಇವುಗಳಲ್ಲಿ ಹೆಚ್ಚಿನ ಸಭೆಗಳು ಬೈಬಲ್ ಅಧ್ಯಯನ ಮತ್ತು ಕ್ರೈಸ್ತ ಸಾಹಚರ್ಯಕ್ಕಾಗಿ ರಾಜ್ಯ ಸಭಾಗೃಹಗಳಲ್ಲಿ ಕೂಡಿಬರುತ್ತವೆ. ಇವು ಶುದ್ಧಾರಾಧನೆಯ ಸ್ಥಳಿಕ ಕೇಂದ್ರಗಳಾಗಿ ಉಪಯೋಗಿಸಲ್ಪಡುತ್ತವೆ.
2. ರಾಜ್ಯ ಸಭಾಗೃಹವನ್ನು ಸ್ವಚ್ಛವಾಗಿಯೂ ಅಂದವಾಗಿಯೂ ಇಡುವುದು ಏಕೆ ಪ್ರಾಮುಖ್ಯವಾಗಿದೆ?
2 ಕ್ರಮವಾದ ನೇಮಿತ ಶುಚಿಗೊಳಿಸುವಿಕೆ: ರಾಜ್ಯ ಸಭಾಗೃಹವನ್ನು ದುರಸ್ತಾಗಿಡುವುದರಲ್ಲಿ ಮಾಡಲ್ಪಡುವ ಕೆಲಸವು ನಮ್ಮ ಪವಿತ್ರ ಸೇವೆಯ ಒಂದು ಅತ್ಯಾವಶ್ಯಕ ಭಾಗವಾಗಿದೆ. ನಮ್ಮ ಶುಶ್ರೂಷೆ ಎಂಬ ಪುಸ್ತಕದ ಪುಟ 61-2ರಲ್ಲಿ ಹೀಗೆ ತಿಳಿಸಲಾಗಿದೆ: “ರಾಜ್ಯ ಸಭಾಗೃಹಕ್ಕೆ ಹಣ ಸಹಾಯ ಮಾಡಿ ಬೆಂಬಲ ಕೊಡುವುದು ಮಾತ್ರವಲ್ಲ ಅದು ಶುಚಿಯಾಗಿಯೂ ಅಂದವಾಗಿ ಮತ್ತು ದುರಸ್ತಿಯಲ್ಲಿರುವಂತೆ ಸ್ವಯಂ ಸೇವೆ ಸಲ್ಲಿಸುವುದನ್ನೂ ಸಹೋದರರು ಸುಯೋಗವೆಂದೆಣಿಸಬೇಕು. ಒಳಗೆ ಮತ್ತು ಹೊರಗೆ ರಾಜ್ಯ ಸಭಾಗೃಹವು, ಯೆಹೋವನ ಸಂಸ್ಥೆಯ ಒಂದು ಯೋಗ್ಯ ಪ್ರತಿನಿಧಿತ್ವವಾಗಿ ಇರತಕ್ಕದ್ದು.” ಪ್ರತಿವಾರ ರಾಜ್ಯ ಸಭಾಗೃಹವು ಅನೇಕ ಸಲ ಉಪಯೋಗಿಸಲ್ಪಡುವ ಕಾರಣ, ಕ್ರಮವಾದ ಶುಚಿಗೊಳಿಸುವಿಕೆ ಮತ್ತು ದುರಸ್ತುಗೊಳಿಸುವಿಕೆಯು ಆವಶ್ಯಕವಾಗಿದೆ. ಸಾಮಾನ್ಯವಾಗಿ ಈ ವಿಷಯಗಳು, ರಾಜ್ಯ ಸಭಾಗೃಹದಲ್ಲಿ ಕೂಡಿಬರುವ ಸಭೆಯ(ಗಳ) ಸ್ವಯಂಸೇವಕರಿಂದ ನೋಡಿಕೊಳ್ಳಲ್ಪಡುತ್ತವೆ. ಬೈಬಲ್ ಕಾಲಗಳಲ್ಲಿದ್ದಂತೆ, ಯೆಹೋವನ ಸಾಕ್ಷಿಗಳು ಇಂದು ತಮ್ಮ ಆರಾಧನಾ ಸ್ಥಳದ ‘ಜೀರ್ಣೋದ್ಧಾರ ಕೆಲಸದಲ್ಲಿ ಮತ್ತು ಭದ್ರಪಡಿಸುವಿಕೆ’ಯಲ್ಲಿ ಶ್ರಮಶೀಲರಾಗಿರಬೇಕು.—2 ಪೂರ್ವ. 34:11.
3. ರಾಜ್ಯ ಸಭಾಗೃಹದ ಶುಚಿಗೊಳಿಸುವಿಕೆಯನ್ನು ಹೇಗೆ ಸಂಯೋಜಿಸಲಾಗಿದೆ, ಮತ್ತು ಈ ಸುಯೋಗದಲ್ಲಿ ಯಾರು ಭಾಗವಹಿಸಬಹುದು?
3 ರಾಜ್ಯ ಸಭಾಗೃಹದ ಸಾಪ್ತಾಹಿಕ ಶುಚಿಗೊಳಿಸುವಿಕೆಯ ಒಂದು ಶೆಡ್ಯೂಲ್ ಅನ್ನು ಮಾಹಿತಿ ಫಲಕದ ಮೇಲೆ ಹಾಕಬೇಕು. ಎಲ್ಲಾ ಪುಸ್ತಕ ಅಧ್ಯಯನ ಗುಂಪುಗಳು ಪ್ರತಿವಾರ ಸರದಿಯಾಗಿ ಸಭಾಗೃಹವನ್ನು ಶುಚಿಗೊಳಿಸಿ, ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ಅನುಸರಿಸಬೇಕು. ಶಕ್ತರಾಗಿರುವ ಎಲ್ಲರೂ ರಾಜ್ಯ ಸಭಾಗೃಹವನ್ನು ಸ್ವಚ್ಛವಾಗಿಯೂ ಅಂದವಾಗಿಯೂ ಇಡುವ ಸಾಪ್ತಾಹಿಕ ಸುಯೋಗದಲ್ಲಿ ಭಾಗವಹಿಸಬೇಕು. ಹೆತ್ತವರ ನೇತೃತ್ವದ ಕೆಳಗೆ, ಮಕ್ಕಳನ್ನೂ ಒಳಗೂಡಿಸಬಹುದು ಮತ್ತು ಹೀಗೆ ಈ ಸುಯೋಗವನ್ನು ಗಣ್ಯಮಾಡುವಂತೆ ಅವರಿಗೆ ಕಲಿಸಬಹುದು. ವಿಶೇಷವಾಗಿ ಒಂದು ಸಭಾಗೃಹವನ್ನು ಒಂದಕ್ಕಿಂತ ಹೆಚ್ಚಿನ ಸಭೆಗಳು ಉಪಯೋಗಿಸುವಾಗ, ನಮ್ಮ ಆರಾಧನೆಯ ಈ ಪ್ರಾಮುಖ್ಯ ಅಂಶವು ಕೇವಲ ಕೆಲವರ ಮೇಲೆ ಹೊರೆಯಾಗಿರದಂತೆ, ಎಲ್ಲರೂ ಚೆನ್ನಾಗಿ ಸಹಕರಿಸುವ ಅಗತ್ಯವಿದೆ.
4. ರಾಜ್ಯ ಸಭಾಗೃಹವನ್ನು ಶುಚಿಮಾಡುವಾಗ ಏನೆಲ್ಲಾ ಮಾಡಬೇಕೆಂಬುದಾಗಿ ಸಭೆಗೆ ತಿಳಿದಿರುವಂತೆ ಯಾವ ಏರ್ಪಾಡನ್ನು ಮಾಡಬೇಕು?
4 ಮಾಡಲ್ಪಡಬೇಕಾದ ಕೆಲಸಗಳ ಒಂದು ಪಟ್ಟಿಯನ್ನು, ಸಾಧ್ಯವಾಗುವಲ್ಲಿ ಸರಬರಾಯಿಗಳು ಎಲ್ಲಿ ಇಡಲ್ಪಟ್ಟಿವೆಯೋ ಅಲ್ಲಿ ಅಂಟಿಸಬೇಕು. ಈ ಪಟ್ಟಿಯಲ್ಲಿ, ಸಾಪ್ತಾಹಿಕವಾಗಿ ಯಾವ ಕೆಲಸಗಳನ್ನು ಮಾಡಬೇಕೆಂಬುದು ಸೂಚಿಸಲ್ಪಟ್ಟಿರಬೇಕು; ಅಂದರೆ, ಗುಡಿಸುವುದು, ಕಿಟಕಿಗಳನ್ನು ಶುಚಿಮಾಡುವುದು, ಕೌಂಟರ್ಗಳ ಮೇಲಿನ ಧೂಳನ್ನು ಒರೆಸುವುದು, ಕಸದ ಬುಟ್ಟಿಗಳನ್ನು ಖಾಲಿಮಾಡುವುದು, ನೆಲವನ್ನು ಒರೆಸುವುದು, ಕುರ್ಚಿಗಳನ್ನು ಒರೆಸುವುದು ಇತ್ಯಾದಿ. ಮರದ ಸಾಮಗ್ರಿಗಳನ್ನು ಪಾಲಿಷ್ ಮಾಡುವುದು, ಕುರ್ಚಿಗಳನ್ನು, ಪರದೆಗಳನ್ನು ಮತ್ತು ಫ್ಯಾನ್ ಹಾಗೂ ಲೈಟ್ಗಳನ್ನು ಪೂರ್ಣವಾಗಿ ಶುಚಿಗೊಳಿಸುವುದರಂಥ ಕೆಲವೊಂದು ಕೆಲಸಗಳನ್ನು ಪ್ರತಿ ವಾರವಲ್ಲ ಬದಲಾಗಿ ಕೆಲವೊಮ್ಮೆ ಮಾಡಬಹುದು. ಶುಚಿಗೊಳಿಸಲಿಕ್ಕಾಗಿ ಉಪಯೋಗಿಸಲಾಗುವ ಎಲ್ಲಾ ಕೆಮಿಕಲ್ಗಳನ್ನು ಮಕ್ಕಳ ಕೈಗೆ ಸಿಗದಂಥ ರೀತಿಯಲ್ಲಿ ಇಡಬೇಕು ಮತ್ತು ಅದಕ್ಕೆ ಸರಿಯಾಗಿ ಲೇಬಲ್ ಹಚ್ಚಿಡಬೇಕು. ಪ್ರತಿಯೊಂದು ಕೆಮಿಕಲ್ ಅನ್ನು ಹೇಗೆ ಉಪಯೋಗಿಸಬೇಕೆಂಬ ಸಂಕ್ಷಿಪ್ತವಾದ ವಿವರವನ್ನು ಅದರಲ್ಲಿ ಸೇರಿಸಬೇಕು.
5. ಭದ್ರತೆಯು ಎಷ್ಟು ಪ್ರಾಮುಖ್ಯವಾಗಿದೆ, ಮತ್ತು ಆಗಾಗ್ಗೆ ಯಾವ ವಿಷಯಗಳನ್ನು ಪರೀಕ್ಷಿಸಿ ನೋಡಬೇಕಾಗಿದೆ? (ಪುಟ 4ರಲ್ಲಿರುವ ಚೌಕವನ್ನು ನೋಡಿರಿ.)
5 ರಾಜ್ಯ ಸಭಾಗೃಹದಲ್ಲಿ ಸುರಕ್ಷೆಯು ಪರಮಪ್ರಧಾನ ವಿಷಯವಾಗಿದೆ. (ಧರ್ಮೋ. 22:8) ಇದರ ಕುರಿತು ಅಂದರೆ ಅನಾಹುತಗಳನ್ನು ತಡೆಗಟ್ಟಸಾಧ್ಯವಾಗುವಂತೆ ಆಗಾಗ್ಗೆ ಪರೀಕ್ಷಿಸಿ ನೋಡಬೇಕಾದ ಕೆಲವೊಂದು ಆವಶ್ಯಕ ವಿಷಯಗಳನ್ನು ಪುಟ 4ರಲ್ಲಿರುವ ಚೌಕದಲ್ಲಿ ಪಟ್ಟಿಮಾಡಲಾಗಿದೆ.
6. ರಾಜ್ಯ ಸಭಾಗೃಹವನ್ನು ಸುಸ್ಥಿತಿಯಲ್ಲಿಡುವ ಕೆಲಸವನ್ನು ಹೇಗೆ ಸಂಯೋಜಿಸಲಾಗಿದೆ?
6 ರಾಜ್ಯ ಸಭಾಗೃಹವನ್ನು ಸುಸ್ಥಿತಿಯಲ್ಲಿಡುವುದು: ರಾಜ್ಯ ಸಭಾಗೃಹವು ಸುಸ್ಥಿತಿಯಲ್ಲಿದೆಯೋ ಎಂಬುದನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯು ಹಿರಿಯರ ಮಂಡಳಿಯದ್ದಾಗಿದೆ. ಸಾಮಾನ್ಯವಾಗಿ, ಈ ಕೆಲಸವನ್ನು ಸಂಯೋಜಿಸಲು ಒಬ್ಬ ಹಿರಿಯನನ್ನು ಅಥವಾ ಒಬ್ಬ ಶುಶ್ರೂಷಾ ಸೇವಕನನ್ನು ನೇಮಿಸಲಾಗುತ್ತದೆ. ಇವನು, ರಾಜ್ಯ ಸಭಾಗೃಹದ ದಿನನಿತ್ಯದ ಬಳಕೆಯನ್ನು ನೋಡಿಕೊಳ್ಳುವನು ಮತ್ತು ಅದು ಶುದ್ಧವಾಗಿಯೂ ಸುಸ್ಥಿತಿಯಲ್ಲಿಯೂ ಇಡಲ್ಪಟ್ಟಿದೆಯೋ ಹಾಗೂ ಸಾಕಷ್ಟು ಸರಬರಾಯಿಗಳು ಲಭ್ಯವಿವೆಯೋ ಎಂಬುದನ್ನು ಖಚಿತಪಡಿಸಿಕೊಳ್ಳುವನು. ಯಾವುದೇ ಅಪಾಯಕರ ಸ್ಥಿತಿಯು ಸಭಾಗೃಹದೊಳಗೆ ಅಥವಾ ಹೊರಗಿನ ಆವರಣದಲ್ಲಿ ಇಲ್ಲದಂತೆ ನೋಡಿಕೊಳ್ಳುವುದು ಪ್ರಾಮುಖ್ಯವಾಗಿದೆ. ಎರಡು ಅಥವಾ ಮೂರು ಸಭೆಗಳು ಒಂದೇ ಸಭಾಗೃಹವನ್ನು ಉಪಯೋಗಿಸುವಾಗ, ಹಿರಿಯರ ಮಂಡಳಿಗಳು ಕಟ್ಟಡದ ಮತ್ತು ಆಸ್ತಿಯ ಆರೈಕೆಯ ಏರ್ಪಾಡುಗಳನ್ನು ಸಂಘಟಿಸಲು ಒಂದು ಆಪರೇಟಿಂಗ್ ಕಮಿಟಿಯನ್ನು ನೇಮಿಸುತ್ತವೆ. ಈ ಕಮಿಟಿಯು ಹಿರಿಯರ ಮಂಡಳಿಯ ಮಾರ್ಗದರ್ಶನದ ಕೆಳಗೆ ಕೆಲಸಮಾಡುತ್ತದೆ.
7. (ಎ) ರಾಜ್ಯ ಸಭಾಗೃಹವು ಸುಸ್ಥಿತಿಯಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರತಿ ವರುಷ ಏನನ್ನು ಮಾಡಲಾಗುತ್ತದೆ? (ಬಿ) ಯಾವ ವಿಷಯಗಳಿಗೆ ಆಗಿಂದಾಗ್ಗೆ ಗಮನ ಹರಿಸುವ ಅಗತ್ಯವಿದೆ? (ಪುಟ 5ರಲ್ಲಿರುವ ಚೌಕವನ್ನು ನೋಡಿರಿ.)
7 ವಾರ್ಷಿಕವಾಗಿ ರಾಜ್ಯ ಸಭಾಗೃಹವನ್ನು ಸಂಪೂರ್ಣವಾಗಿ ಪರೀಕ್ಷಿಸಲಾಗುತ್ತದೆ. ಗಮನವನ್ನು ಅಗತ್ಯಪಡಿಸುವ ಯಾವುದೇ ಕೆಲಸಗಳನ್ನು ಸಂಪೂರ್ಣವಾಗಿ ಮಾಡಿಮುಗಿಸಲಿಕ್ಕಾಗಿ ಏರ್ಪಾಡುಗಳನ್ನು ಮಾಡುವುದು ಹಿರಿಯರ ಜವಾಬ್ದಾರಿಯಾಗಿದೆ. ಆವಶ್ಯಕ ದುರಸ್ತಿಗಳನ್ನು ಮಾಡುವುದರಲ್ಲಿ ಸಹಾಯಮಾಡಲಿಕ್ಕಾಗಿ ಪ್ರಚಾರಕರನ್ನು ಆಮಂತ್ರಿಸಬಹುದು. ಸಣ್ಣಪುಟ್ಟ ವಿಷಯಗಳನ್ನು ಸರಿಪಡಿಸಲು ಸಹ ಎಲ್ಲರೂ ಎಚ್ಚರದಿಂದಿರಬೇಕು ಮತ್ತು ಗಮನವನ್ನು ಅಗತ್ಯಪಡಿಸುವ ವಿಷಯಗಳನ್ನು ಪೂರೈಸಲು ಎಲ್ಲರೂ ಕ್ಷಿಪ್ರವಾಗಿ ಕ್ರಿಯೆಗೈಯಬೇಕು.
8. ಒಬ್ಬ ಗುತ್ತಿಗೆದಾರನ ಸಹಾಯವು ಬೇಕಾಗಿರುವಲ್ಲಿ ಯಾವ ಕ್ರಮವನ್ನು ಅನುಕರಿಸಬೇಕಾಗಿದೆ?
8 ಸಭೆಯ ಹಣವನ್ನು ವಿವೇಕಯುತವಾಗಿ ಉಪಯೋಗಿಸಿರಿ: ರಾಜ್ಯ ಸಭಾಗೃಹದ ಮತ್ತು ಅದರ ಆವರಣದಲ್ಲಿನ ಕೆಲಸವು ಮುಖ್ಯವಾಗಿ ಸ್ವಯಂಸೇವಕರಿಂದ ಮಾಡಲ್ಪಡುತ್ತದೆ. ಅವರ ಸ್ವತ್ಯಾಗದ ಪ್ರಯಾಸವು, ಪ್ರೀತಿಯ ಅತ್ಯುತ್ತಮ ಅಭಿವ್ಯಕ್ತಿಯಾಗಿದೆ ಮತ್ತು ಖರ್ಚುವೆಚ್ಚವನ್ನು ಬಹಳವಾಗಿ ಕಡಿಮೆಗೊಳಿಸುವುದರಲ್ಲಿ ಸಹಾಯಕವಾಗಿದೆ. ರಾಜ್ಯ ಸಭಾಗೃಹದ ಒಳಗೆ ಅಥವಾ ಹೊರಗೆ ವ್ಯಾಪಕವಾದ ನವೀಕರಣವನ್ನು ಮಾಡಲು ಗುತ್ತಿಗೆದಾರರ ಸಹಾಯವು ಬೇಕಾಗಿರುವುದಾದರೆ, ಹಿರಿಯರ ಮಂಡಳಿಯು ಮಾಡಬೇಕಾದ ಕೆಲಸದ ಮತ್ತು/ಅಥವಾ ಅಗತ್ಯವಿರುವ ಸರಬರಾಯಿಯ ಒಂದು ವಿವರವಾದ ಲಿಖಿತ ಪಟ್ಟಿಯನ್ನು ಮೊದಲು ತಯಾರಿಸುವ ಮೂಲಕ ಇದನ್ನು ಮಾಡುತ್ತದೆ. ಈ ಪಟ್ಟಿಯ ಒಂದೊಂದು ಪ್ರತಿಯನ್ನು ಬೇರೆ ಬೇರೆ ಗುತ್ತಿಗೆದಾರರಿಗೆ ನೀಡಲಾಗುತ್ತದೆ. ಇದರಿಂದಾಗಿ ಆ ಸರಬರಾಯಿಗಾಗಿ ಎಷ್ಟು ಖರ್ಚಾಗುವುದೆಂಬ ತಮ್ಮ ಅಂದಾಜು ಮೊತ್ತವನ್ನು ಪ್ರತಿಯೊಬ್ಬರೂ ತಿಳಿಸಲು ಸಾಧ್ಯವಾಗುತ್ತದೆ. ಈ ರೀತಿಯಲ್ಲಿ ಬೇರೆ ಬೇರೆ ಗುತ್ತಿಗೆದಾರರಿಂದ ಲಿಖಿತ ಅಂದಾಜು ಮೊತ್ತವನ್ನು ಪಡೆದುಕೊಂಡ ಬಳಿಕ, ಹಿರಿಯರು ಅತ್ಯುತ್ತಮವಾದ ಬೆಲೆಯನ್ನು ಆಯ್ಕೆಮಾಡಸಾಧ್ಯವಿದೆ. ಒಬ್ಬ ಸಹೋದರನು, ನಿರ್ದಿಷ್ಟ ಬೆಲೆಗೆ ತಾನು ಆ ಕೆಲಸವನ್ನು ಮಾಡುವುದಾಗಿ ಅಥವಾ ಅಗತ್ಯವಿರುವ ಸಾಮಗ್ರಿಗಳ ಸರಬರಾಯಿಯನ್ನು ಮಾಡುವುದಾಗಿ ಹೇಳಿರುವುದಾದರೂ ಈ ಕ್ರಮವನ್ನು ಅನುಕರಿಸಲೇಬೇಕಾಗಿದೆ.
9. ಸಭೆಯ ಹಣವು ಸರಿಯಾಗಿ ಉಪಯೋಗಿಸಲ್ಪಡುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಏನು ಮಾಡಲಾಗಿದೆ?
9 ರಾಜ್ಯ ಸಭಾಗೃಹವನ್ನು ಒಂದಕ್ಕಿಂತ ಹೆಚ್ಚು ಸಭೆಗಳು ಉಪಯೋಗಿಸುವಲ್ಲಿ, ಆಪರೇಟಿಂಗ್ ಕಮಿಟಿಯು ಒಂದು ಪ್ರತ್ಯೇಕವಾದ ಬ್ಯಾಂಕ್ ಅಕೌಂಟ್ ಅನ್ನು ಇಟ್ಟುಕೊಳ್ಳುತ್ತದೆ ಮತ್ತು ಪ್ರತಿ ತಿಂಗಳು ಹಣಕಾಸಿನ ಲಿಖಿತ ವರದಿಗಳನ್ನು ಪ್ರತಿಯೊಂದು ಹಿರಿಯರ ಮಂಡಳಿಗೆ ನೀಡುತ್ತದೆ. ಈ ಮೂಲಕ, ಹಣವನ್ನು ಯಾವುದಕ್ಕಾಗಿ ಖರ್ಚುಮಾಡಲಾಗುತ್ತಿದೆ ಎಂಬುದು ಹಿರಿಯರಿಗೆ ತಿಳಿದಿರುತ್ತದೆ. ಸಭೆಯ ಹಣದ ಸರಿಯಾದ ಉಪಯೋಗಕ್ಕೆ ಹಿರಿಯರು ಜವಾಬ್ದಾರರಾಗಿದ್ದಾರೆ.
10. ವ್ಯಾಪಕವಾದ ದುರಸ್ತಿ ಅಥವಾ ನವೀಕರಣವು ಆವಶ್ಯಕವಾಗಿರುವಲ್ಲಿ ಏನು ಮಾಡಬೇಕು?
10 ವ್ಯಾಪಕವಾದ ದುರಸ್ತಿ ಮತ್ತು ನವೀಕರಣ: ರಾಜ್ಯ ಸಭಾಗೃಹದ ಬಳಸುವಿಕೆ ಅಥವಾ ದುರಸ್ತಿಯ ವಿಷಯದಲ್ಲಿ ಏನಾದರೂ ದೊಡ್ಡ ಕೆಲಸವನ್ನು ಮಾಡುವ ಅಗತ್ಯವಿದೆ ಎಂಬುದಾಗಿ ಆಪರೇಟಿಂಗ್ ಕಮಿಟಿಯು ಗಮನಿಸುವಾಗ, ಆ ಕಮಿಟಿಯು ಹಿರಿಯರ ಮಂಡಳಿಗೆ ಮಾರ್ಗದರ್ಶನಕ್ಕಾಗಿ ಕೇಳಿಕೊಳ್ಳುತ್ತದೆ. ವ್ಯಾಪಕವಾದ ದುರಸ್ತಿ ಅಥವಾ ನವೀಕರಣವು ಖಂಡಿತವಾಗಿಯೂ ಆವಶ್ಯಕ ಎಂದು ನಿರ್ಧರಿಸಲ್ಪಡುವುದಾದರೆ ಅಥವಾ ಅಲ್ಲಿ ಕೂಡಿಬರುತ್ತಿರುವ ಸಭೆಯ(ಗಳ) ಹೊರಗಿನಿಂದ ಸಹಾಯವು ಅಗತ್ಯವಿರುವುದಾದರೆ, ಸಲಹೆಗಾಗಿ ಹಿರಿಯರು ಬ್ರಾಂಚ್ ಆಫೀಸನ್ನು ಸಂಪರ್ಕಿಸಬೇಕು. ಸಾಧ್ಯವಿದ್ದಲ್ಲಿ, ಒಂದಕ್ಕಿಂತ ಹೆಚ್ಚಿನ ಸಭೆಗಳು ತಮ್ಮ ಹಣವನ್ನು ಕೂಡಿಹಾಕುವುದು ಉತ್ತಮ. ಪ್ರಾಯಶಃ ಸದ್ಯಕ್ಕೆ ಇರುವ ಸಭಾಗೃಹವನ್ನೇ ಅವರು ಒಟ್ಟು ಸೇರಿ ವಿಸ್ತರಿಸಬಹುದು, ಅಥವಾ ಈಗ ಮತ್ತು ಮುಂದಿನ ವರ್ಷಗಳಲ್ಲಿ ಹಲವಾರು ಸಭೆಗಳಿಗೆ ಪ್ರಯೋಜನವಾಗುವಂತೆ ಒಂದು ದೊಡ್ಡ ಸಭಾಗೃಹವನ್ನು ಕಟ್ಟಬಹುದು.
11. ರಾಜ್ಯ ಸಭಾಗೃಹದಲ್ಲಿ ಕೂಟಗಳಿಗಾಗಿ ಕೂಡಿಬರುವ ನಮ್ಮ ಸುಯೋಗವನ್ನು ಗಣ್ಯಮಾಡುತ್ತೇವೆಂಬುದನ್ನು ನಾವು ಹೇಗೆ ತೋರಿಸಸಾಧ್ಯವಿದೆ?
11 ರಾಜ್ಯ ಸಭಾಗೃಹದಲ್ಲಿ ಕೂಡಿಬರುವ ನಮ್ಮ ಸುಯೋಗವನ್ನು ನಾವು ಎಷ್ಟು ಮಹತ್ತರವಾಗಿ ಗಣ್ಯಮಾಡುತ್ತೇವೆ! ನಾವು ಎಂದಿಗೂ ನಮ್ಮ ಕೂಟಗಳನ್ನು ಅಲಕ್ಷಿಸಬಾರದು ಅಥವಾ ಅವುಗಳ ಮೌಲ್ಯವನ್ನು ಕಡಿಮೆ ಅಂದಾಜುಮಾಡಬಾರದು. ನಮ್ಮ ರಾಜ್ಯ ಸಭಾಗೃಹದ ಕಾಳಜಿವಹಿಸುವುದರಲ್ಲಿ ಪೂರ್ಣವಾಗಿ ಭಾಗವಹಿಸುವ ಮೂಲಕ ನಮ್ಮನ್ನು ಉತ್ತೇಜಿಸಲಿಕ್ಕಾಗಿ ಮಾಡಲಾಗಿರುವ ಈ ಒದಗಿಸುವಿಕೆಯ ಯಶಸ್ಸಿಗಾಗಿ ನಾವೆಲ್ಲರೂ ನೆರವಾಗಸಾಧ್ಯವಿದೆ. ಇದು ಯೆಹೋವನ ಶುದ್ಧಾರಾಧನೆಯನ್ನು ಉನ್ನತಕ್ಕೇರಿಸುತ್ತದೆ ಮತ್ತು ಯೆಹೋವನ ಹೆಸರಿಗೆ ಗೌರವವನ್ನು ತರುತ್ತದೆ. ನಮ್ಮ ಆರಾಧನಾ ಸ್ಥಳವನ್ನು ಸುಸ್ಥಿತಿಯಲ್ಲಿಡಲು ನಮ್ಮಿಂದಾದುದೆಲ್ಲವನ್ನೂ ಮಾಡುವ ದೃಢನಿಶ್ಚಯವುಳ್ಳವರಾಗಿರೋಣ.
[ಪುಟ 4 ರಲ್ಲಿರುವ ಚೌಕ]
ಸುರಕ್ಷೆಗಾಗಿ ಆವಶ್ಯಕ ವಿಷಯಗಳು
◻ ಅಗ್ನಿಶಾಮಕ ಸಾಧನಗಳು ಸುಲಭವಾಗಿ ಸಿಗುವಂಥ ಸ್ಥಳದಲ್ಲಿರಬೇಕು ಮತ್ತು ವಾರ್ಷಿಕವಾಗಿ ಅದನ್ನು ಪರೀಕ್ಷಿಸಬೇಕು.
◻ ನಿರ್ಗಮ ಮಾರ್ಗ ಮತ್ತು ಮೆಟ್ಟಲುಗಳು ಸ್ಪಷ್ಟವಾಗಿ ಗುರುತಿಸಲ್ಪಡಬೇಕು, ಸಾಕಷ್ಟು ಪ್ರಮಾಣದಲ್ಲಿ ಬೆಳಕಿರಬೇಕು, ಸುಲಭವಾಗಿ ಅಲ್ಲಿಗೆ ತಲಪುವಂತೆ ಇರಬೇಕು, ಮತ್ತು ಹಿಡಿಕಂಬವು ಗಟ್ಟಿಯಾಗಿರಬೇಕು.
◻ ಸಾಮಗ್ರಿಗಳನ್ನು ಶೇಖರಿಸಿಡುವ ಸ್ಥಳವು ಹಾಗೂ ಶೌಚಾಲಯಗಳು ಶುದ್ಧವೂ ಕ್ರಮಬದ್ಧವೂ ಆಗಿರಬೇಕು ಮತ್ತು ಸುಲಭವಾಗಿ ಬೆಂಕಿಹಿಡಿಯಬಹುದಾದ ಸಾಮಾನುಗಳು, ವೈಯಕ್ತಿಕ ವಸ್ತುಗಳು ಹಾಗೂ ಕಸವು ಅಲ್ಲಿರಬಾರದು.
◻ ಛಾವಣಿ ಹಾಗೂ ಮಳೆಯ ನೀರು ಅಲ್ಲಿಂದ ಹರಿಯಲಿಕ್ಕಾಗಿ ಮಾಡಲ್ಪಟ್ಟಿರುವ ವ್ಯವಸ್ಥೆಯನ್ನು ಕ್ರಮವಾಗಿ ಪರೀಕ್ಷಿಸಬೇಕು ಮತ್ತು ಶುಚಿಮಾಡಬೇಕು.
◻ ಕಾಲುಹಾದಿ ಮತ್ತು ವಾಹನ ನಿಲ್ಲುವ ಸ್ಥಳಗಳಲ್ಲಿ ಬೆಳಕು ಇರಬೇಕು ಮತ್ತು ಯಾರಾದರೂ ಬೀಳುವಂತೆ ಅಥವಾ ಜಾರುವಂತೆ ಮಾಡಬಹುದಾದ ಯಾವುದೇ ಅಡಚಣೆಗಳಿಲ್ಲದಂತೆ ನೋಡಿಕೊಳ್ಳಬೇಕು.
◻ ವಿದ್ಯುತ್ ಮತ್ತು ವಾಯು ಸಂಚಾರ ವ್ಯವಸ್ಥೆಯು ಸರಿಯಾಗಿದೆಯೇ ಎಂಬುದನ್ನು ಆಗಾಗ್ಗೆ ಪರೀಕ್ಷಿಸಿ ಸುಸ್ಥಿತಿಯಲ್ಲಿರಿಸಬೇಕು.
◻ ಛಾವಣಿಯು ಸೋರುತ್ತಿರುವುದಾದರೆ, ಅದು ಹೆಚ್ಚಿನ ಸಮಸ್ಯೆಗೆ ನಡಿಸುವ ಮುನ್ನ ಕೂಡಲೆ ಅದನ್ನು ಸರಿಪಡಿಸಬೇಕು.
◻ ಕಟ್ಟಡದಲ್ಲಿ ಯಾರೂ ಇಲ್ಲದಿರುವಾಗ ಅದಕ್ಕೆ ಬೀಗಹಾಕಿಡಬೇಕು.
[ಪುಟ 4 ರಲ್ಲಿರುವ ಚೌಕ]
ಕಟ್ಟಡದ ಮತ್ತು ಸೌಕರ್ಯದ ಪರಾಮರಿಕೆ
◻ ಹೊರಭಾಗ: ಛಾವಣಿ, ಗೋಡೆಯ ಮೇಲ್ಭಾಗ, ಪೆಯಿಂಟ್, ಕಿಟಕಿಗಳು, ಮತ್ತು ರಾಜ್ಯ ಸಭಾಗೃಹದ ಫಲಕವು ಸುಸ್ಥಿತಿಯಲ್ಲಿದೆಯೋ?
◻ ಆವರಣ: ಆವರಣವು ಸುಸ್ಥಿತಿಯಲ್ಲಿದೆಯೋ? ಕಾಲುಹಾದಿಗಳು, ಬೇಲಿಗಳು, ಮತ್ತು ಕಂಪೌಂಡು ಸುಸ್ಥಿತಿಯಲ್ಲಿದೆಯೋ?
◻ ಒಳಗಿನ ಭಾಗ: ರತ್ನಗಂಬಳಿಗಳು, ಪರದೆಗಳು, ಕುರ್ಚಿಗಳು, ವಿದ್ಯುತ್ ಹಾಗೂ ಕೊಳಾಯಿ ವ್ಯವಸ್ಥೆಯ ವಸ್ತುಗಳು, ಮತ್ತು ಬಳಿಯಲ್ಪಟ್ಟಿರುವ ಬಣ್ಣವು ಅಂದವಾಗಿದೆಯೋ?
◻ ಉಪಕರಣ: ಲೈಟಿನ ವ್ಯವಸ್ಥೆ, ಧ್ವನಿವರ್ಧಕ ಸಲಕರಣೆಗಳು, ಫ್ಯಾನ್ಗಳು, ಮತ್ತು ವಾಯು ಸಂಚಾರ ವ್ಯವಸ್ಥೆ ಸರಿಯಾಗಿ ಕೆಲಸಮಾಡುತ್ತಿದೆಯೋ?
◻ ಶೌಚಾಲಯ ಸೌಕರ್ಯಗಳು: ಶೌಚಾಲಯವು ಶುದ್ಧವಾಗಿಯೂ ವಾಸನೆಯಿಲ್ಲದೆಯೂ ಚೆನ್ನಾಗಿ ಕೆಲಸಮಾಡುವ ಸ್ಥಿತಿಯಲ್ಲಿಯೂ ಇದೆಯೋ?
◻ ಸಭಾ ಪ್ರಮಾಣ ಪತ್ರಗಳು: ನಗರಸಭೆಗೆ ಸಂಬಂಧಿಸಿದ ಪ್ರಮಾಣ ಪತ್ರಗಳು ಸದ್ಯೋಚಿತವಾಗಿಯೂ ನಿಷ್ಕೃಷ್ಟವಾಗಿಯೂ ಇಡಲ್ಪಡಬೇಕು. ಆಸ್ತಿ ಕರಾರು, ಕಂದಾಯ ರಸೀದಿಗಳು, ಮತ್ತು ಇತರ ಪ್ರಾಮುಖ್ಯ ಪ್ರಮಾಣ ಪತ್ರಗಳು ಕ್ರಮಬದ್ಧ ರೀತಿಯಲ್ಲಿ ಫೈಲ್ ಮಾಡಲ್ಪಟ್ಟಿವೆಯೋ?