ನಿಜ ಕ್ರೈಸ್ತ ಐಕ್ಯ—ಹೇಗೆ ಸಾಧ್ಯ?
1 ಇನ್ನೂರ ಮೂವತ್ತನಾಲ್ಕು ದೇಶಗಳಿಂದ ಮತ್ತು ಸುಮಾರು 380 ಭಾಷಾ ಗುಂಪುಗಳಿಂದ ಬಂದಿರುವ ಅರುವತ್ತು ಲಕ್ಷಕ್ಕೂ ಹೆಚ್ಚಿನ ಜನರನ್ನು ಯಾವುದು ಐಕ್ಯಗೊಳಿಸಬಲ್ಲದು? ಯೆಹೋವ ದೇವರ ಆರಾಧನೆ ಮಾತ್ರ. (ಮೀಕ 2:12; 4:1-3) ನಿಜ ಕ್ರೈಸ್ತ ಐಕ್ಯವು ಇಂದು ಒಂದು ನಿಜತ್ವವಾಗಿದೆ ಎಂಬುದನ್ನು ಯೆಹೋವನ ಸಾಕ್ಷಿಗಳು ವೈಯಕ್ತಿಕ ಅನುಭವದಿಂದ ತಿಳಿದುಕೊಂಡಿದ್ದಾರೆ. ‘ಒಬ್ಬನೇ ಕುರುಬನ’ ಕೆಳಗೆ ‘ಒಂದೇ ಹಿಂಡಾಗಿ,’ ಈ ಲೋಕದ ವಿಭಾಜಕ ಆತ್ಮವನ್ನು ಪ್ರತಿರೋಧಿಸಲು ನಾವು ದೃಢನಿಶ್ಚಿತರಾಗಿದ್ದೇವೆ.—ಯೋಹಾ. 10:16; ಎಫೆ. 2:2.
2 ಎಲ್ಲಾ ಬುದ್ಧಿಶಕ್ತಿಯುಳ್ಳ ಸೃಷ್ಟಿಯು ಸತ್ಯ ಆರಾಧನೆಯಲ್ಲಿ ಐಕ್ಯವಾಗಿರಬೇಕೆಂಬುದೇ ದೇವರ ನಿಶ್ಚಿತ ಉದ್ದೇಶವಾಗಿದೆ. (ಪ್ರಕ. 5:13) ಇದರ ಪ್ರಮುಖತೆಯನ್ನು ಅರಿತವನಾಗಿ, ಯೇಸು ತನ್ನ ಹಿಂಬಾಲಕರ ಐಕ್ಯಕ್ಕಾಗಿ ಶ್ರದ್ಧೆಯಿಂದ ಪ್ರಾರ್ಥಿಸಿದನು. (ಯೋಹಾ. 17:20, 21) ನಮ್ಮಲ್ಲಿ ಪ್ರತಿಯೊಬ್ಬರು ಕ್ರೈಸ್ತ ಸಭೆಯ ಐಕ್ಯವನ್ನು ಹೇಗೆ ಪ್ರವರ್ಧಿಸಬಲ್ಲೆವು?
3 ಐಕ್ಯವು ಗಳಿಸಲ್ಪಡುವ ವಿಧ: ದೇವರ ವಾಕ್ಯ ಮತ್ತು ಆತ್ಮವಿಲ್ಲದೆಯೇ ಕ್ರೈಸ್ತ ಐಕ್ಯವನ್ನು ಗಳಿಸುವುದು ಅಸಾಧ್ಯ. ನಾವು ಬೈಬಲಿನಿಂದ ಏನನ್ನು ಕಲಿಯುತ್ತೇವೋ ಅದನ್ನು ಅನ್ವಯಿಸಿಕೊಳ್ಳುವಾಗ ದೇವರಾತ್ಮವು ನಮ್ಮ ಜೀವಿತಗಳಲ್ಲಿ ಸರಾಗವಾಗಿ ಹರಿಯುವದು. ಇದು ‘ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮದಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವಂತೆ’ ನಮಗೆ ಸಾಧ್ಯಗೊಳಿಸುವುದು. (ಎಫೆ. 4:3) ಪ್ರೀತಿಯಿಂದ ನಾವು ಒಬ್ಬರೊಂದಿಗೊಬ್ಬರು ಸೈರಿಸಿಕೊಂಡು ಹೋಗುವಂತೆ ಇದು ನಮ್ಮನ್ನು ಪ್ರೇರಿಸುವುದು. (ಕೊಲೊ. 3:13, 14; 1 ಪೇತ್ರ 4:8) ಪ್ರತಿದಿನವೂ ದೇವರ ವಾಕ್ಯವನ್ನು ಮನನ ಮಾಡುವ ಮೂಲಕ ನೀವು ಐಕ್ಯವನ್ನು ಪ್ರವರ್ಧಿಸುತ್ತೀರೋ?
4 ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ನಮ್ಮ ನೇಮಕವು ಸಹ ನಮ್ಮನ್ನು ಐಕ್ಯಗೊಳಿಸುತ್ತದೆ. ನಾವು “ಸುವಾರ್ತೆಯಲ್ಲಿಟ್ಟ ನಂಬಿಕೆಗೋಸ್ಕರ ಐಕಮತ್ಯದಿಂದ ಹೋರಾಡುವವರಾಗಿ,” ಕ್ರೈಸ್ತ ಶುಶ್ರೂಷೆಯಲ್ಲಿ ಇತರರೊಂದಿಗೆ ಕೆಲಸ ಮಾಡುವಾಗ, “ಸತ್ಯಕ್ಕೆ ಸಹಕಾರಿ”ಗಳಾಗುತ್ತೇವೆ. (ಫಿಲಿ. 1:27; 3 ಯೋಹಾ. 8) ನಾವು ಹೀಗೆ ಮಾಡುವಾಗ, ಕ್ರೈಸ್ತ ಸಭೆಯಲ್ಲಿರುವ ಪ್ರೀತಿಯ ಬಂಧಗಳು ಬಲಪಡಿಸಲ್ಪಡುವವು. ಇತ್ತೀಚೆಗೆ ನಿಮ್ಮೊಂದಿಗೆ ಕೆಲಸಮಾಡಿರದ ಒಬ್ಬರನ್ನು ಈ ವಾರದ ಕ್ಷೇತ್ರ ಶುಶ್ರೂಷೆಯಲ್ಲಿ ನಿಮ್ಮೊಂದಿಗೆ ಕೆಲಸಮಾಡುವಂತೆ ಏಕೆ ಆಮಂತ್ರಿಸಬಾರದು?
5 ಇಂದು ಭೂಮಿಯ ಮೇಲಿರುವ ಏಕಮಾತ್ರ ನಿಜ ಅಂತಾರಾಷ್ಟ್ರೀಯ ಸಹೋದರತ್ವದ ಭಾಗವಾಗಿರಲು ನಾವು ಎಷ್ಟು ಆಶೀರ್ವದಿತರಾಗಿದ್ದೇವೆ! (1 ಪೇತ್ರ 5:9) ಇತ್ತೀಚೆಗೆ, “ದೇವರನ್ನು ಘನಪಡಿಸಿರಿ” ಎಂಬ ಅಂತಾರಾಷ್ಟ್ರೀಯ ಅಧಿವೇಶನಗಳಲ್ಲಿ ಸಾವಿರಾರು ಮಂದಿ ಈ ಭೌಗೋಳಿಕ ಐಕ್ಯವನ್ನು ಸ್ವತಃ ಅನುಭವಿಸಿದ್ದಾರೆ. ನಮ್ಮಲ್ಲಿ ಪ್ರತಿಯೊಬ್ಬರೂ ದೇವರ ವಾಕ್ಯವನ್ನು ಪ್ರತಿದಿನ ಓದುವ ಮೂಲಕ, ಭೇದಗಳನ್ನು ಪ್ರೀತಿಯಿಂದ ಇತ್ಯರ್ಥಗೊಳಿಸುವ ಮೂಲಕ, ಮತ್ತು ಸುವಾರ್ತೆಯನ್ನು “ಏಕಮನಸ್ಸಿನಿಂದ” ಸಾರುವ ಮೂಲಕ ಈ ಅಮೂಲ್ಯ ಐಕ್ಯಕ್ಕೆ ಇಂಬು ಕೊಡೋಣ.—ರೋಮಾ. 15:6.